Tumbe Group of International Journals

Full Text


ಚೈತನ್ಯದ ಚಿಲುಮೆ

ಪೃಥ್ವೀ ಎಂ.ಎಲ್.

ಅತಿಥಿ ಉಪನ್ಯಾಸಕರು, ಸಸ್ಯಶಾಸ್ತ್ರ ವಿಭಾಗ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು

pruthvibabu@gmail.com    Mob:7349440619

                                    ಬಿಟ್ಟೆನೆಂದರೂ ಬಿಡದೀ ಮಾಯೆ!

                                    ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!

                                    ಯೋಗಿಗೆ ಯೋಗಿಣೆಯಾಯಿತ್ತು ಮಾಯೆ!

                                    ಸವಣಂಗೆ ಸವಣೆಯಾಯಿತ್ತು ಮಾಯೆ!

                                    ಯತಿಗೆ ಪರಾಕಿಯಾಯಿತ್ತು ಮಾಯೆ!

                                    ನಿನ್ನ ಮಾಯೆಗೆ ನಾನಂಜುವವಳಲ್ಲ

                                    ಚನ್ನ ಮಲ್ಲಿಕಾರ್ಜುನದೇವ, ನಿಮ್ಮಾಣೆ….......

                        ಎಂಬ ಅಕ್ಕಮಹಾದೇವಿಯವರ ವಚನದಂತೆ ಯಾವ ಲೌಕಿಕ ಮಾಯೆಗೂ ಸಿಲುಕದೆ, ಕೇವಲ ಸಮಾಜದ ಏಳ್ಗೆಗಾಗಿ ಶ್ರಧ್ಧೆಯಿಂದ ದುಡಿಯುತ್ತಿರುವ ಕಾಯಕವೇ ಕೈಲಾಸ ಎಂಬ ಮಾತನ್ನು ಕಾಯಾ, ವಾಚಾ, ಮನಸಾ ಪಾಲಿಸುತ್ತಿರುವ ನಮ್ಮ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶತಾಯುಷಿಗಳು, ಶಿವಸ್ವರೂಪಿಗಳು, ತ್ರಿವಿಧಸೋಹಿಗಳು ನಿರಂಜನ ಪ್ರಣವ ಸ್ವರೂಪ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಬಗ್ಗೆ ಅಂಕಣವನ್ನು ಬರೆಯಲು ಕಣ್ತುಂಬಿ ಬರುತ್ತಿದೆ, ಜೊತೆಗೆ ಯೋಚನೆಯು ಕಾಡುತ್ತಿದೆ, ಊಹಿಸಲೂ ಆಗದ ಔದರ್ಯ, ಬಣ್ಣಿಸಲಾಗದ ವ್ಯಕ್ತಿತ್ವ, ಮಾತಿಗೆ ನಿಲುಕದ ಸಾಧನೆ, ಶಿವನನ್ನೆ ಮೆಚ್ಚಿಸುವಂತಹ ಶ್ರದ್ಧೆ, ಯಂತ್ರದಂತೆ ತೊಡಗಿಸಿಕೊಳ್ಳುವ ಕಾಯಕ ನಿಷ್ಠೆ, ಋಣವಷ್ಟೂ, ಸ್ವಾರ್ಥ ಕಾಣದ ಮುಗ್ದ ಮುಖ, ತೇಜಸ್ಸಿನಿಂದ ಹೊಳೆಯುವ ಕಣ್ಣುಗಳು, ಕೈಯಲ್ಲಿ ಬೆತ್ತ, ನಿರ್ಗಳವಾದ ಮಾತು. ಇಷ್ಠೆ ಅಲ್ಲ ಬರೆಯಲು, ತಿಳಿಯಲು ಇನ್ನು ಎಷ್ಟೋ! ಅದು ಹೇಗೆ ನಮ್ಮ ಬುದ್ಧಿಯೋರ ಬಗ್ಗೆ ಈ ನನ್ನ ಪುಟ್ಟ ಅಂಕಣದಲ್ಲಿ ಬರೆಯಲು ಎಂಬ ಯೋಚನೆ ಕಾಡುತ್ತಿದೆ.

            1908ನೇ ಇಸವಿ ಏಪ್ರಿಲ್ 01, ಬ್ರಾಹ್ಮಿ ಮೂಹೂರ್ತದ ದಿವ್ಯ ಸಮಯ, ಭುವಿಗೆ ಭಾಗ್ಯದ ಸಿರಿಯಂತೆ ಕಾಯಕ ಗುರುಗಳ ಜನನವಾಯಿತು.  ಹರ್ಷೋಚರಿತ ದಿನ. ಬಾಲಕ ಶಿವಣ್ಣ ಬೆಳೆದಂತೆ ಎಲ್ಲರ ಬಾಯಲ್ಲೂ ಬಾಲ ಸಿದ್ಧಯೋಗಿ ಅಂತಿದ್ದಾನೆ ಎಂಬ ಮಾತು ಕೇಳಿ ಬರುತ್ತಿತ್ತು. ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ವೀರಾಪುರ ಶಿವಣ್ಣನ ಹುಟ್ಟೂರು. ತಾಯಿ ಗಂಗಮ್ಮ ಸದ್ಗ್ರುಹಿಣಿ, ತಂದೆ ಹೊನ್ನಪ್ಪ. ಕೃಷಿ ಕಾಯಕದಿಂದ ತುಂಬು ಜೀವನ ನಡೆಸುತ್ತಿದ್ದಂತಹ, ಊರಿನ ಜನರ ಕಷ್ಟದಲ್ಲಿ ಬಹಳಷ್ಟು ನೆರವಾಗುವ ಕುಟುಂಬವದು. ಶಿವಣ್ಣನ ಆಟ, ಪಾಠ, ವಿನಯ, ವೈಚಾರಿಕತೆ ತಾಯಿಗೆ ಬಹಳ ಸಂತಸ ತಂದಿತ್ತು. ಪ್ರೀತಿಯ ಮಗ ಶಿವಣ್ಣನಿಗೆ ಒಂದು ದಿನ ಎಂದಿನಂತೆ ಆಟವಾಡಿ ಮನೆಗೆ ಹಿಂತಿರುಗಿದಾಗ ಆಘಾತದ ಸುದ್ದಿ ಕಾದಿತ್ತು. ತನ್ನ ಮಮತೆಯ ಮಡಿಲು, ವಾತ್ಸಲ್ಯದ ಧಾರೆ ಎರೆದ ತಾಯಿ ಕಾಲವಶವಾಗಿದ್ದರು. ಆ 08 ವರ್ಷ ಬಾಲಕನ ನೋವು ದುಖ:, ಕಣ್ಣೀರು, ಸಂಕಟ ನೋಡಲಾಗುತ್ತಿರಲಿಲ್ಲ. ನಂತರ ಶಿವಣ್ಣನವರ ಅಕ್ಕ ಪುಟ್ಟಹೊನ್ನಮ್ಮ ತಾಯಿಯಂತೆ ಸಲಹಿದ್ದರು, ಭಾವ ಗಂಗೇಗೌಡರು ಮಮತಾಮಯಿಗಳಾಗಿದ್ದರು. ತದಕಾರಣ ಶಿಕ್ಷಣ ನಾಗವಲ್ಲಿಯಲ್ಲಿ ಮುಂದುವರೆಯಿತು.

 

            1919ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ ಮತ್ತು 1922 ರಲ್ಲಿ ಇಂಗ್ಲೀಷ್ ಲೋಯರ್ ಸೆಕೆಂಡರಿ ಪರೀಕ್ಷೆ ತೇರ್ಗಡೆಯಾಗಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಒಮ್ಮೆ 1927ರಲ್ಲಿ ಇಡೀ ನಗರ ಪ್ಲೇಗ್ ರೋಗದಿಂದ ಆವರಿಸಿದ್ದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿ ಶ್ರೀ ಮಠದಲ್ಲಿ ವಸತಿಗಾಗಿ     ಶ್ರೀ ಉದ್ದಾನ ಶಿವಯೋಗಿಗಳಲ್ಲಿ ಆಶ್ರಯ ಕೋರಿ ಮನವಿ ಸಲ್ಲಿಸಿದ್ದರು. ಮೊದಲಿಗೆ ಗುರುಗಳು ಕಟುವಾಗಿಯೇ ಸಾಧ್ಯವಿಲ್ಲ ಎಂದಿದ್ದರು. ಆಗ ಬೇರೆ ವಿಧಿಯಿಲ್ಲದೆ ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ಒಂದು ಪುಟ್ಟ ಕೋಣೆ ಪಡೆದು ಶಿವಣ್ಣ ತನ್ನ ವಿದ್ಯಾಭ್ಯಾಸ ಮುಂದುವರೆಸಬೇಕಾಗಿತ್ತು. ಪರೀಕ್ಷೆಯ ಸಮಯ ಬಹಳ ಕಷ್ಟದ ಪರಿಸ್ಥಿತಿಯಾಗಿತ್ತು. ಇದನ್ನರಿತು ವರ ಕೊಟ್ಟಂತೆ ಶ್ರೀ ಉದ್ದಾನ ಶಿವಯೋಗಿಗಳು ಆಶ್ರಯ ಕೊಟ್ಟರು. ಆಗ ಶ್ರೀ ಮಠದಲ್ಲಿ ಶಿವಣ್ಣನವರ ಆಪ್ತ ಸ್ನೇಹಿತ ಕಾಳಪ್ಪನವರೂ ಸಹ ಇವರೊಂದಿಗೆ ಆಶ್ರಯ ಪಡೆದರು. ಶ್ರೀ ಮಠದ ಆಗಿನ ಉತ್ತರಾಧಿಕಾರಿಯಾಗಿದ್ದ  ಶ್ರೀ ಮರುಳಾರಾಧ್ಯರೊಂದಿಗೂ ಇವರೀರ್ವರಿಗೂ ವಿಶೇಷ ಬಾಂದವ್ಯ, ಪರಸ್ಪರ ಗೌರವ ಬೆಳೆದಿತ್ತು. ತಮ್ಮ ಹೆಚ್ಚಿನ ಶಿಕ್ಷಣಕ್ಕಾಗಿ ಶಿವಣ್ಣನವರು 1930ರ ಜನವರಿಯಲ್ಲಿ ಭೌತವಿಜ್ಞಾನ ಮತ್ತು ಗಣಿತ ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದರು. ಯಾವ ಆಧುನಿಕ ವಿಕ್ಷಗಳಿಗೂ ಓಗೊಡದೆ, ತಮ್ಮ ಸಾತ್ವಿಕ ಸಂಸ್ಕøತಿಯನ್ನು ಕಾಪಾಡಿಕೊಂಡೇ ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಓದುತ್ತಿದ್ದರು. ಅಲ್ಲಿಯೂ ದಿನವೂ ಬೆಳಗಿನ ಜಾವ 04 ಗಂಟೆಯಿಂದ ಶಿವಣ್ಣನವರ ದಿನಚರಿ ಪ್ರಾರಂಭವಾಗುತ್ತಿತ್ತು. ದಿನನಿತ್ಯ ತಣ್ಣೀರಿನ ಸ್ನಾನ, ಶಿವಪೂಜೆ, ಓದು ಯಥಾವತ್ತಾಗಿ ಯಾವ ಅಡೆ-ತಡೆ ಇಲ್ಲದೆ ನಡೆಯುತ್ತಿತ್ತು. ಹೀಗಿರುವಾಗ ಅದೇ ವರ್ಷ ಜನವರಿಯ 16ನೇ ತಾರೀಖು ಶ್ರೀ ಮರುಳಾರಾಧ್ಯರು ಶಿವೈಕ್ಯರಾದ ಸುದ್ದಿ ಶಿವಣ್ಣನವರಿಗೆ ತಿಳಿಯಿತು. ಸುದ್ದಿಕೇಳಿ ದುಃಖಿತರಾದ ಶಿವಣ್ಣನವರು ತಕ್ಷಣವೇ ಶ್ರೀ ಸಿದ್ಧಗಂಗಾ ಮಠಕ್ಕೆ ಧಾವಿಸಿದರು. ಶ್ರೀ ಮರುಳಾರಾಧ್ಯರ ಸಮಾಧಿ ಕಾರ್ಯ ಮುಗಿಸಿ, ಶ್ರೀಗಳ ಪಾದಪೂಝೆಯಲ್ಲಿ ತೊಡಗಿದ್ದ ಶಿವಣ್ಣನನ್ನು ಕಂಡು ಭಕ್ತ ಸಮೂಹ ಶಿವಣ್ಣನವರೇ ಮುಮದಿನ ಉತ್ತರಾಧಿಕಾರಿಯಾಗಲು ಸೂಕ್ತ ಎಂದಿದ್ದರು. ಇತ್ತ ಶ್ರೀ ಉದ್ಧಾನ ಶಿವಯೋಗಿಗಳ ಕಣ್ಣುಗಳು ತನ್ನ ಭಾವ ಸಮಾಧಿಯಲ್ಲಿ ಕಂಡಿದ್ದ ಉತ್ತರಾಧಿಕಾರಿಯಾಗಲು ಯೊಗ್ಯವಾದ ಬಾಲ ಶಿವಯೋಗಿಯನ್ನು ಹುಡುಕುತ್ತಿದ್ದರು. ಶಿವಣ್ಣನನ್ನು ಕಂಡ ಶಿವಯೋಗಿಗಳು “ ಶಿವಣ್ಣ ಶ್ರೀ ಮಠದ ಉತ್ತರಾಧಿಕರವನ್ನು ನೀನು ವಹಿಸಿಕೊಳ್ಳಬೇಕು; ಎಂದೊಡನೆ ಮರುಮಾತಾಡದೆ ಶಿವಣ್ಣನವರು ಗುರು ಆಜ್ಞೆಯನ್ನು ಒಪ್ಪಿ ಅವರ ಪಾದಗಳಿಗೆ ನಮಸ್ಕರಿಸಿದರು. ಶ್ರೀ ಉದ್ಧಾನ ಶಿವಯೋಗಿಗಳ ಶಕ್ತಿ ಅದ್ಭುತವಾದುದಾಗಿತ್ತು, ಆ ಶಕ್ತಿಯ ಮುಂದೆ ಯಾವ ಆಲೋಚನೆಗಳೂ ಇರಲು ಸಾಧ್ಯವಾಗಿರಲಿಲ್ಲ.

            1930ನೇ ಇಸವಿ ಮಾರ್ಚ್ ತಿಂಗಳು 3ನೇ ತಾರೀಖು ಶ್ರೀ ಗೋಸಲ ಸಿದ್ಧೇಶ್ವರರಿಂದ ಸಂಸ್ಥಾಪಿತವಾದ, ಮಹಾ ಪರಂಪರೆಯುಳ್ಳ ಶ್ರೀ ಸಿದ್ಧಗಂಗಾ ಮಠದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು, ಏಕೆಂದರೆ            ಆ ಶುಭದಿನದಂದು ಶ್ರೀ ಉದ್ಧಾನ ಶಿವಯೊಗಿಗಳು ಶಿವಣ್ಣನವರಿಗೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳೆಂದು ನಿರಂಜನ ಜಂಗಮಾಧಿಕಾರವನ್ನು ಆಶೀರ್ವದಿಸಿದ್ದರು. ಅಂದಿನಿಂದ ಇಂದಿನವರೆಗೆ ಶ್ರೀ ಶಿವಕುಮಾರ ಸ್ವಾಮಿಗಳ ಇಚ್ಚೆಯಂತೆ ಜ್ಞಾನ ಮತ್ತು ಅನ್ನದಾಸೋಹ ಜ್ಯೋತಿ ಆರಿಲ್ಲ.

            ಹಿಂದಿನ ದಿನಗಳಲ್ಲಿ ಮಠದ ಆದಾಯ ತುಂಬ ಕಡಿಮೆ ಇತ್ತು. ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿತ್ತು. ಹೀಗಿರುವಾಗ 10 ದಿನದಿಂದ ತಿಂಗಳುಗಳವರೆಗೆ ಸ್ವಾಮಿಗಳು ತಮ್ಮ ಹಿರಿಯರ ಪರಂಪರೆಯಮತೆ ಜೋಳಿಗೆ ಹಿಡಿದು ಬೀದಿ ಬೀದಿ ಸುತ್ತಿ ಮಠದಲ್ಲಿನ ಹಸಿದ ಜೀವಿಗಳಿಗೆ ದಾಸೋಹವನ್ನು ಪೂರೈಸಿದ್ದರು. 1917ರಲ್ಲಿ                    ಶ್ರೀ ಉದ್ದಾನ ಶಿವಯೋಗಿಗಳಿಂದ ವಿದ್ಯಾದಾನ ಆರಂಭಗೊಂಡಿತ್ತು. ಮೊದಲಿಗೆ 53 ಸಂಸ್ಕøತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಕೂಡಿದಾಗಿ, ಆ ವಿದ್ಯಾರ್ಥಿಗಳ ಪೋಷಣೆ, ದಿನ ನಿತ್ಯ ಬರುವ ಭಕ್ತಾದಿಗಳ ಊಟ, ದೇವಾಲಯಗಳ ಪೂಜಾ ನಿಯಮ ನಿಭಾಯಿಸುವುದು ಅಂದು ಶ್ರೀ ಶಿವಕುಮಾರ ಸ್ವಾಮಿಗಳಿಗೆ ಸುಲಭದ ಮಾತಾಗಿರಲಿಲ್ಲ, ಎಷ್ಟೋ ಬಾರಿ ಬುದ್ಧಿಯವರು ಕೆಲಭಕ್ತರು ಪಾದ ಪೂಜೆ, ಶಿವಪೂಜೆಗೆ ಆಹ್ವಾನಿಸಿದಾಗ ಹತ್ತಾರು ಮೈಲಿಗಳ ದೂರ ನಡದೇ ಸಾಗಿದು ಉಂಟು, ಬಂದ ಆದಾಯದಲ್ಲಿ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಅದೊಂದು ಸಂದರ್ಭ, ಶ್ರೀ ಶಿವಕುಮಾರ ಸ್ವಾಮಿಗಳು ಉತ್ತರಾಧಿಕಾರ ಪಡೆದ ಕೆಲವೇ ವಾರಗಳಲ್ಲಿ ಶ್ರೀ ಉದ್ಧಾನ ಶಿವಯೋಗಿಗಳ ಶಿವಗಣಾರಾಧನೆ ಮಾಡಬೇಕಿತ್ತು, ಮಠದಲ್ಲಿದ್ದ 300 ರೂ.ಗಳು ಹಾಗೂ ಭಕ್ತರ ಸಹಕಾರದಿಂದ ಕಾರ್ಯವನ್ನು ಮುಗಿಸಿದ್ದಾಗಿತ್ತು, ಮುಂದೇನು ಎಂದು ಶ್ರೀಗಳು ಯೋಚಿಸುತ್ತಿರುವಾಗ ಮಠದ ಭಕ್ತರಾದ ಚಿಕ್ಕಣ್ಣನವರು ಅಂದು ತಟ್ಟನೆ ಬಂದು ಮಠಕ್ಕೆ ಖರ್ಚು ಬಹಳಷ್ಟಿದೆ ಎಂದು ಹೇಳಿ ರೂ.4000-00ಗಳನ್ನು ಕೊಟ್ಟಿದ್ದರು, ಅದರ ಅರ್ಧದಷ್ಟನ್ನು ದಾನ ಮಾಡಿ ಮಿಕ್ಕಹಣದಲ್ಲಿ ಶ್ರೀಗಳು ವಿದ್ಯಾದಾಸೋಹ, ಅನ್ನದಾಸೋಹವನ್ನು ಮುಂದುವರೆಸಿದರು, ಇದೇ ಶ್ರಿಗಳಿಗೆ ಮೂಲ ಬಂಡವಾಳವಾಯಿತು. ಅಂದಿನಿಂದ ಎಷ್ಟೋ ಭಕ್ತರಿಂದ ಶ್ರೀ ಮಠಕ್ಕೆ ಧವಸ, ಧಾನ್ಯ, ಕಾಳು, ತರಕಾರಿ, ಹಣದ ಮಹಾಪೂರವೇ ಹರಿದು ಬರುವುದು ಸಾಮಾನ್ಯವಾಯಿತು.

            ಕೇವಲ 53 ವಿದ್ಯಾರ್ಥಿಗಳಿಂದ ವಿದ್ಯಾದಾಸೋಹ 2007ರಲ್ಲಿ 10,000 ಮೀರಿತ್ತು. ಇಂದು ಇದರ ಸಂಖ್ಯೆ ಇನ್ನೂ ಹೆಚ್ಚಿದೆ, ಯಾವುದೇ ಜಾತಿ, ಧರ್ಮ, ಜನಾಂಗಗಳನ್ನು ಪರಿಗಣಿಸದೇ ಸದ್ದುದೇಶದಿಂದ ಬಡ ಮಕ್ಕಳ ಶಿಕ್ಷಣ ಕಲಿಕೆಯ ಹಂಬಲಕ್ಕೆ ಶ್ರೀ ಮಠ ಕೈಬೀಸಿ ಕರೆಯುವ, ಬಾಚಿ ತಬ್ಬುವ ವಿದ್ಯಾ ದೇಗುಲವಾಗಿದೆ. ಶ್ರೀ ಮಠದ ಶಾಲಾ-ಕಾಲೇಜುಗಳು ಇಡೀ ರಾಜ್ಯದಲ್ಲೇ ವಿದ್ಯೆಯ ಬೆಳಕನ್ನು ಪಸರಿಸುತ್ತಿವೆ. ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಶ್ರೀ ಮಠದ ಕೀರ್ತಿಯನ್ನು ಬೆಳಗಿದ್ದಾರೆ. ಇನ್ನೂ ಶ್ರೀ ಮಠದ ದಾಸೋಹ ಇಂದು ಬಹಳ ಹಿರಿಯದ್ದು, ದಿನಕ್ಕೆ ಸರಾಸರಿ ಹತ್ತು ಸಾವಿರ ಮಂದಿಗೂ ಹೆಚ್ಚು ಬಿಡುವಿಲ್ಲದೆ ಪ್ರಸಾದ ಬಡಿಸುವ ಔದರ್ಯ ನಮಗೆ ಕಾಣುತ್ತದೆ. ಇಲ್ಲಿ ಯಾವುದೇ ಭೇದವಿಲ್ಲದೆ ಹಸಿದು ಬಂದವರಿಗೆ ಇಲ್ಲ ಎನ್ನದೆ ಪ್ರಸಾದದ ಸಂತೃಪ್ತಿಯನ್ನು ಕೊಡುವ ಪದ್ಧತಿ ವಿಭಿನ್ನ ಎನಿಸುತ್ತದೆ. ತನ್ನೊಡಲಲ್ಲಿ ಇರುವ ಮಕ್ಕಳಿಗೆ ವಿದ್ಯೆಯ ಜೊತೆಗೆ ಪ್ರಾರ್ಥನಾ ಭಾವ, ಸುಸಂಸ್ಕøತ ನಡತೆ, ಸಾತ್ವಿಕತೆ, ವೈಚಾರಿಕತೆಗಳನ್ನೂ ನೀಡುತ್ತಿದೆ. ಇಷ್ಟಾದರೂ ನಮ್ಮ ಬುದ್ಧಿಯವರು ಅದೇ ಮುಗ್ಧತೆಯಲ್ಲಿ, ಕಾಯಕ ನಿಷ್ಟೆಯಲ್ಲಿ ಕಾಣಸಿಗುತ್ತಾರೆ. ಎಷ್ಟು ಹೇಳಿದರೂ ಬರೆದರೂ ಕಡಿಮೆಯೇ ಎಂಬ ಭಾವ ನನಗಿದೆ. ಇದಲ್ಲವೇ ಶ್ರೀ ಸಿದ್ಧಗಂಗೆಯ ವೈಶಿಷ್ಟ್ಯ……..

            ಇದನ್ನೆ ಕಂಡು ಇರಬೇಕು ಜನರು ಪೂಜ್ಯ ಶ್ರೀಗಳನ್ನು “ನಡೆದಾಡುವ ದೇವರು ” ಎಂದಿದ್ದು, ದೇವರಿಗಿಂತ ದೊಡ್ಡಪದ ನಮಗೆ ಎಲ್ಲಿ ಸಿಗಲು ಸಾದ್ಯ. ಹೌದು ದೇವರೆ ಇವರು. ನಿಮ್ಮನ್ನು ಕಾಣುತ್ತಿರುವ, ಆಶೀರ್ವಾದದ ನೆಲದಲ್ಲಿರುವ ನಾವು ನಿಜಕ್ಕೂ ಪುಣ್ಯವಂತರು. ಏಕೆಂದರೆ ನಿಮ್ಮ ದಿವ್ಯದೃಷ್ಟಿಯಿಂದಲೇ ಸಕಲ ಕಷ್ಟಗಳು ದೂರವಾಗುತ್ತವೆ. ನಿಮ್ಮ ಪಾದ ಸ್ಪರ್ಶದಿಂದಲೇ ನವ ಚೈತನ್ಯ ನವಿರೇಳುತ್ತದೆ. ನಿಮ್ಮನ್ನು ನೆನೆದೊಡನೆ ಎಂಥ ಸೋಮಾರಿತನವಿದ್ದರೂ ಮಾಯವಾಗಿ ನಮ್ಮ ಕಾರ್ಯ-ಕಾಯಕಗಳಲ್ಲಿ ಸನ್ನಿದ್ಧರಾಗುವ ಹುರುಪು ಮೂಡುತ್ತದೆ. ಇಂದು ಎಂದೂ ನಮ್ಮ ಶಕ್ತಿ ನೀವಿರುತ್ತೀರಿ, ನಮ್ಮ ಭಕ್ತಿ ನಿಮಗಾಗಿರುತ್ತದೆ, ನಮ್ಮ ಧ್ಯಾನದಲ್ಲಿ ನೀವಿರುತ್ತೀರಿ, ನಮ್ಮೇಲ್ಲರ “ಚೈತನ್ಯದ ಚಿಲುಮೆ” ನೀವು... ಕೊನೆಯದಾಗಿ ಮಾನ್ಯ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪದ್ಯದ ನನ್ನ ಮೆಚ್ಚಿನ ನಾಲ್ಕು ಸಾಲುಗಳು.

            “ಸದ್ದು ಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ!

            ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ.

            ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ.

            ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ!”

            ಧನ್ಯಭಾವದಿಂದ ಭಾವಪೂರ್ವಕ ವಂದನೆಗಳು.

ಮಾಹಿತಿ ಪಡೆದ ಪುಸ್ತಕಗಳು.          

  1. ಶತಮಾನದ ಶಿವಯೋಗಿ-                   ಡಾ. ತುಮಕೂರು ನಾಗಭೂಷಣ.
  2. ಶ್ರೀ ಅಡವೀ ಸ್ವಾಮಿಗಳು.-                   ಡಾ. ಡಿ.ಎನ್. ಯೋಗೀಶ್ವರಪ್ಪ.                     
  3. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಗಳು-     ಡಾ. ಡಿ.ಎನ್. ಯೋಗೀಶ್ವರಪ್ಪ.


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ನನ್ನಜ್ಜಿ & ಪ್ರೀತಿ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture
© 2018. Tumbe International Journals . All Rights Reserved. Website Designed by ubiJournal