Tumbe Group of International Journals

Full Text


ಬೆಳೆಯುವ ಮಕ್ಕಳ ಮೇಲೆ ಸಾಮೂಹಿಕ ಮಾಧ್ಯಮಗಳ ಪ್ರಭಾವ

ಡಾ. ಅಶ್ವತ್ ನಾರಾಯಣ  ಆರ್

(Dr. Ashwathnarayana R)

Guest Faculty- Botany

Govt. First Grade College, Tumkur(INDIA)

jamadagni341@gmail.com

ಎಲೆಕ್ಟ್ರಾನಿಕ್ ಯುಗದಲ್ಲಿ ಯಂತ್ರಗಳು ಮಾನವನನ್ನು ನಿಯಂತ್ರಿಸುತ್ತಿದೆ ಹಾಗೂ ಮಾನವನು ಎಲೆಕ್ಟ್ರಾನಿಕ್ ಮಾಧ್ಯಮದ ದಾಸನಾಗುತ್ತಿದ್ದಾನೆ. ಈ ಯಂತ್ರಗಳು ಎಷ್ಟು ಮಾನವನಿಗೆ ಉಪಕಾರಿಯೋ ಅಷ್ಟೇ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತಿವೆ. ಈಗಿನ ಮಕ್ಕಳು ಮೋಬೈಲ್ ನ ದಾಸರಾಗಿ ಮಾನವ ಸಂಬಂಧಗಳನ್ನು ಮರೆಯುತ್ತಿದ್ದಾರೆ.

ಹಲವು ಪತ್ರಿಕೆಗಳು, ಟಿವಿ ಮಾಧ್ಯಮಗಳು ಹಿಂಸೆಯನ್ನು ವೈಭವೀಕರಿಸುವ ಜಾಯಮಾನವನ್ನು ಬೆಳೆಸಿದ ಜನರ ಮನಸಿನ ಮೇಲೆ ಕ್ರೌರ್ಯಭಾವವನ್ನು ಮೂಡಿಸುತ್ತಿದೆ. ದೂರದರ್ಶನದಲ್ಲಿ ಪ್ರಸರಿಸುವ ಅನೇಕ ಧಾರಾವಾಹಿಗಳಲ್ಲಿ ತೋರಿಸುವ ಹಿಂಸಾಚಾರದ ದೃಶ್ಯ, ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೋಮು ಗಲಭೆ ಇತ್ಯಾದಿಗಳು ನೋಡುವ ಪ್ರೇಕ್ಷಕನ ಮನದಲ್ಲಿ ಖಂಡಿತಾ ದುಷ್ಪರಿಣಾಮ ಮೂಡಿಸುತ್ತದೆ.

ಟಿ.ವಿ.ಯ ಪ್ರಭಾವದಿಂದ ಓದುವ ಹವ್ಯಾಸವಂತೂ ಗಣನೀಯವಾಗಿ ಕಡಿಮೆಯಾಗಿ ಹೋಗಿದೆ. ಮನೆಯಲ್ಲಿ ಕುಳಿತವರೂ ಟಿ.ವಿ. ನೋಡುವುದು, ಬಂದವರೂ ಟಿ.ವಿ. ನೋಡುವುದು. ಇಂತಹ ಪ್ರಕ್ರಿಯೆಗಳಿಂದ ಮಾನವ ಮಾನವ ಸಂಬಂಧದ ಕೊಂಡಿ ಕಳಚಿಕೊಂಡಿದೆ. ಹಲವರಂತೂ ಸಮಾಜಕ್ಕೆ ತೆರೆದುಕೊಳ್ಳದೆ ತಾನಾಯಿತು, ತನ್ನ ಮನೆಯಾಯಿತು ಅನ್ನುವ ರೀತಿಯಲ್ಲಿ ಸ್ವಾರ್ಥಿಗಳಾಗುತ್ತಿರುವುದು ಸಮಾಜದ ಹಿತದೃಷ್ಟಿಯಲ್ಲಿ ಬಹು ಮಾರಕವಾದದ್ದು.

ಈ ರೀತಿಯಾಗಿಯೇ ಮುಂದುವರಿಯುತ್ತಾ ಹೋದಲ್ಲಿ ಒಂದಾನೊಂದು ದಿನ ನಮ್ಮ ಸುತ್ತಮುತ್ತಲ ಪರಿಸರವೇ ನಮಗೆ ಅಪರಿಚಿತವಾಗಿ ಹೋಗಿ ಬದುಕಿದ್ದೂ ಪ್ರಯೋಜನವಿಲ್ಲದ ಜೀವನ ಮಾಡುವ ದೀನ ಪರಿಸ್ಥಿತಿ ಖಂಡಿತಾ ಭವಿಷ್ಯದಲ್ಲಿ ಬಂದೊದಗುತ್ತದೆ. ಜೀವಂತ ಕಲೆಗಳಾದ ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಇವೆಲ್ಲಾ ಅವನತಿಗೆ ಬಂದುಬಿಟ್ಟಿದೆ.

ಅದರಲ್ಲೂ ದೂರದರ್ಶನವನ್ನು ತಮ್ಮ ಅವಿಭಾಜ್ಯ ಅಂಗ ಎಂದು ನಂಬಿರುವ ಗೃಹಿಣಿಯರ ಪಾಡಂತೂ ಹೇಳತೀರದು. ಒಂದು ಬೆಳಿಗ್ಗೆ ಟಿ.ವಿ. ಚಾಲಿತಗೊಂಡರೆ ಸರಿಸುಮಾರು ತಡರಾತ್ರಿವರೆವಿಗೂ ಟಿವಿಯ ಮುಂದೆ ಕುಳಿತುಕೊಳ್ಳುವ ಹಲಮಂದಿ ಗೃಹಿಣಿಯರಿಗೆ ಕಣ್ಣು ಕುರುಡಿನೊಂದಿಗೆ ಮಾನಸಿಕ ಕುರುಡುತನವೂ ಬಂದು ಕಲ್ಪಿತ ಪಾತ್ರಗಳಿಗೆ ಮನನೊಂದು ಮಾನಸಿಕ ಅಸ್ವಸ್ಥರಾಗುತ್ತಿರುವುದು ಇನ್ನೂ ದುರಂತ.

ನಿತ್ಯದೂಟಕ್ಕೂ, ತಿಂಡಿಗೂ ವ್ಯಸನವಾಗಿ ಟಿವಿ ಬೇಕೇಬೇಕಾಗಿದೆ. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಸಹಜ. ಮಕ್ಕಳು ಕೂಡಾ ಓದುವ ಅಮೂಲ್ಯ ಸಮಯವನ್ನು ಟಿ.ವಿ. ವೀಕ್ಷಣೆಗೆ ತೊಡಗಿಸಿ ತಮ್ಮ ಭವಿಷ್ಯದ ಮೇಲೆ ಬರೆ ಎಳೆದುಕೊಂಡಿರುವುದು ಕೂಡ ಹಿತವಲ್ಲ. ಒಟ್ಟಿನಲ್ಲಿ ಮಾಧ್ಯಮಗಳು ಎಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲವೋ ಅಷ್ಟೇ ಪ್ರತಿಕೂಲವಾಗಿಯೂ ವರ್ತಿಸಬಲ್ಲವು. ಅದು ನಾವು ಬಳಸುವ ರೀತಿಯಿಂದ ಅಥವಾ ಸ್ವೀಕರಿಸುವುದಕ್ಕನುಗುಣವಾಗಿ ಇರುತ್ತದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಅಪರಾಧಗಳಲ್ಲಿ ಹೆಚ್ಚಿನವರು ಯುವಕರು ಹಾಗೂ ಬಾಲಾಪರಾಧಿಗಳೂ ಇರುವುದು. ಇದೊಂದು ಪೈಶಾಚಿಕ ಕೃತ್ಯವಾಗಿದ್ದು, ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೊದಲನೆಯದು ಅಪರಾಧಿಗಳೆಲ್ಲರೂ ಅಪರಾಧಿ ಹಿನ್ನೆಲೆಯುಳ್ಳವರಲ್ಲ ಹಾಗೂ ಈ ಅಪರಾಧಿಗಳು ಇಂತಹ ಪೈಶಾಚಿಕ ಕೃತ್ಯವನ್ನು ನಡೆಸಬೇಕಾದರೆ, ಅವರ ಈ ಮನಸ್ಥಿತಿಗೆ ಕಾರಣವನ್ನು ಹುಡುಕ ಹೊರಟರೆ ಅದಕ್ಕೆ ನೇರ ಹೊಣೆ ಪ್ರಸ್ತುತ ನಮ್ಮ ಸಮಾಜ ಹಾಗೂ ಸಾಮೂಹಿಕ ಮಾಧ್ಯಮಗಳೇ ಆಗಿವೆ. ಏಕೆಂದರೆ, ದೆಹಲಿಯಂತಹ ಪಾಶ್ಚಿಮಾತ್ಯ ದೇಶಗಳ ನೇರ ಸಂಪರ್ಕ ಹೊಂದಿರುವ, ಆಧುನಿಕತೆಗೆ ತೆರೆದುಕೊಂಡಿರುವ ಸಾಮಾಜಿಕ ನಗರ ಪರಿಸರದಲ್ಲಿರುವ ಯುವ ಸಮುದಾಯವನ್ನು ಪರಿಗಣಿಸಿದರೆ, ಅಂತಹ ಯುವ ಸಮುದಾಯದಲ್ಲಿ ನಾವು ಎರಡು ವರ್ಗಗಳಾಗಿ ಕಾಣಬಹುದು. ಒಂದು ಶೈಕ್ಷಣಿಕ ಜ್ಙಾನವನ್ನು ನೈತಿಕ ಹಿನ್ನೆಲೆಯಲ್ಲಿ ಹೊಂದುತ್ತಿರುವ (ಆಧುನಿಕತೆಗೆ ತೆರೆದುಕೊಂಡಿರುವವರು) ಮತ್ತೊಂದು ಕೇವಲ ಜೀವನೋಪಾಯಕ್ಕಾಗಿ ನೈತಿಕ ಹಿನ್ನೆಲೆಯಿಲ್ಲದೆ ಶೈಕ್ಷಣಿಕ ಜ್ಙಾನವನ್ನು ಹೊಂದುತ್ತಿರುವ ಯುವಕರು (ನಿರುದ್ಯೋಗಿಗಳು, ಆಧುನಿಕತೆಯೆಡೆಗೆ ತುಡಿಯುತ್ತಿರುವ ಮನಸ್ಸುಗಳು ಆದರೆ, ಬಡತನ, ಶೈಕ್ಷಣಿಕ ಅರ್ಹತೆಯಿಂದಾಗಿ, ಆಧುನಿಕತೆಯ ಬಣ್ಣದಿಂದ ವಂಚಿತವಾದ ಯುವ ಸಮುದಾಯ).

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಆಧುನಿಕ ಸಮೂಹ ಮಾಧ್ಯಮಗಳು ಉದಾಹರಣೆಗೆ ಇಂಟರ್ನೆಟ್, ದೂರದರ್ಶನ ಮುಂತಾದವು ಮೊದಲನೆ ವರ್ಗದವರಿಗೆ ಧನಾತ್ಮಕ ಪ್ರಭಾವ ಬೀರಿದರೆ, ಎರಡನೇ ಯುವ ವರ್ಗಕ್ಕೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಇವು ಅಂದರೆ, ಸಾಮಾಜಿಕ ಸ್ಥಿತ್ಯಂತರದ ಪರಿಕಲ್ಪನೆಯಿಲ್ಲದೆ ಆಧುನಿಕತೆಯ ಹೆಸರಿನಲ್ಲಿ ಅಂಧಾಃನುಕರಣೆ ಅದರಲ್ಲೂ ಭಾರತೀಯ ಸಮಾಜದಲ್ಲಿ ಸ್ತ್ರೀ ಅತ್ಯಾಚಾರಗಳಿಗೆ ಬಹುಮುಖ್ಯ ಕಾರಣ, ಪ್ರಚೋದನೆ. ಪ್ರಸ್ತುತ ನಮ್ಮ ಸಮಾಜದಲ್ಲಿಇಂತಹ ಪ್ರಚೋದನೆಗಳಿಗೆ ಅತ್ಯಂತ ಹೇರಳವಾಗಿ ಅವಕಾಶ ಮಾಡಿಕೊಡಲಾಗಿದೆ. ಅದು, ಇಂಟರ್ನೆಟ್, ಮೊಬೈಲ್ ದುರ್ಬಳಕೆ ಮತ್ತು ಯುವತಿಯರು ತೊಡುತ್ತಿರುವ ತುಂಡುಡುಗೆಗಳು ಮತ್ತು ದೂರದರ್ಶನದಂತಹ ಮಾಧ್ಯಮಗಳಲ್ಲಿ ಬಿತ್ತರಿಸುವ ಪ್ರಚೋದನಾತ್ಮಕ ಜಾಹಿರಾತುಗಳು ಇನ್ನೂ ಮುಂತಾದವುಗಳು. ಆಧುನಿಕ ಸಮಾಜ ಸುಧಾರಣೆಯ ಹಾದಿಯಲ್ಲಿದ್ದರೂ ಪಾರಂಪರಿಕವಾಗಿ ಭಾರತೀಯ ಸಮಾಜದಲ್ಲಿದ್ದ ನೈತಿಕ ಮೌಲ್ಯಗಳು ನಶಿಸುತ್ತಿವೆ ಮತ್ತು ಲೈಂಗಿಕತೆಯಂತಹ ಸೂಕ್ಷ್ಮ ವಿಷಯಗಳಿಗೆ ಬಂದಾಗ ಭಾರತದಲ್ಲಿಗೌಪ್ಯ ಲೈಂಗಿಕತೆ ಮತ್ತು ಲೈಂಗಿಕತೆಗೆ ಪಾವಿತ್ರ‍ತೆಯನ್ನುಒದಗಿಸಲಾಗಿತ್ತು. ಆದರೆ, ಇಂದು ಸಮೂಹ ಮಾಧ್ಯಮಗಳ ಮೇಲೆ ಸರಿಯಾದ ನಿಯಂತ್ರಣವಿಲ್ಲದೇ ಸ್ತ್ರೀ ಸ್ವಾತಂತ್ರ‍ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍ ಎಂಬ ಹೆಸರಲ್ಲಿ ಸ್ವೇಚ್ಛಾಚಾರದ ನಡವಳಿಕೆ, ಯುವಜನತೆಯಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಧ್ವೇಷ, ಅಸೂಯೆಯಂತಹ ಭಾವನೆಗಳನ್ನು ಬೆಳೆಸಿಕೊಂಡು ಮಾನಸಿಕ ಕ್ಷೋಭೆಯನ್ನು ಎದುರಿಸುತ್ತಿವೆ.

ಪ್ರಚೋದನೆ ಮತ್ತು ಸಮೂಹ ಮಾಧ್ಯಮಗಳು ಒಂದಕ್ಕೊಂದು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿವೆ. ಸಮೂಹ ಮಾಧ್ಯಮಗಳು ಮನುಷ್ಯನ ಮನಸ್ಸನ್ನು ಅತಿ ಹೆಚ್ಚಾಗಿ ಪ್ರಚೋದಿಸುತ್ತಿವೆ. ಇದು ಪ್ರಸ್ತುತ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ ನಮ್ಮನ್ನಾಳುವ ಶಾಸಕರು ಪವಿತ್ರವಾದ ವಿಧಾನಸೌಧದೊಳಗೆ ಕುಳಿತು ಅಶ್ಲೀಲ ಚಿತ್ರ ವೀಕ್ಷಣೆಮಾಡಿದ್ದು, ಅನೇಕ ಸ್ವಾಮೀಜಿಗಳು ಲೈಂಗಿಕ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವುದು, ಶಿಕ್ಷಕರ ಲೈಂಗಿಕ ದೌರ್ಜನ್ಯಗಳು, ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರದಂತಹ ಘಟನೆಗಳು ನಮ್ಮ ಸಮಾಜದಲ್ಲಿ ಹೆಚ್ಚಾಗುತ್ತಿವೆ.

ಭಾರತೀಯ ಸಮಾಜ ಆಧುನಿಕತೆ, ಜಾಗತೀಕರಣ ಮತ್ತು ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಕ್ರಮೇಣ ಸಮಾಜದ ಪ್ರಾಥಮಿಕ ಹಂತವಾಗಿರುವ ಕುಟುಂಬ ವಿಘಟನೆಯಾಗುತ್ತಿರುವುದು ದಿನೇ-ದಿನೇ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಪ್ರತಿವರ್ಷ ಏರುತ್ತಿರುವ ವಿವಾಹ ವಿಚ್ಛೇದನಗಳ ಸಂಖ್ಯೆ. ಇದಕ್ಕೆ ಮತ್ತೊಂದು ಪೂರಕ ಅಂಶವೆಂದರೆ, ಈಗ ಭಾರತದಲ್ಲಿ ವಿರಳವಾಗಿರುವ ಅವಿಭಕ್ತ ಕುಟುಂಬ ವ್ಯವಸ್ಥೆ. ಈಗ ಅಣ್ಣ, ಅತ್ತಿಗೆ, ನಾದಿನಿ, ಮೈದುನ, ಬಾವ, ಚಿಕ್ಕಪ್ಪ, ಚಿಕ್ಕಮ್ಮ ಎಂಬಂತಹ ಅನೇಕ ಸಂಬಂಧಗಳು ಕಾಣೆಯಾಗುತ್ತಿರುವುದೂ ಸಹ, ಇಂದಿನ ಯುವ ಪೀಳಿಗೆಯಲ್ಲಿ ಪರಸ್ತ್ರೀಯರ ಬಗ್ಗೆ ಕೇವಲ ಕೆಟ್ಟಭಾವನೆಗಳು ಮೂಡುವಂತೆ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಸಮೂಹ ಮಾಧ್ಯಮಗಳ ದುರ್ಬಳಕೆಯೂ ಸಹ ಪ್ರಮುಖವಾಗಿದೆ.

ಯಾವುದೇ ವ್ಯಕ್ತಿ ಹುಟ್ಟುತ್ತಾ ಅಪರಾಧಿಯಲ್ಲ, ಆದರೆ, ಅವನಿರುವ ಸಮಾಜ ಹಾಗೂ ಅವನು ಬೆಳೆದು ಬಂದ ಪರಿಸರ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಆದರೆ, ಈಗ ಆಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳು ವ್ಯಕ್ತಿಯ ಮೇಲೆ, ಸಮಾಜದ ಮೇಲೆ ಅತ್ಯಂತ ಪ್ರಖರವಾಗಿ ಬೇಗನೇ ಪ್ರಭಾವ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉತ್ತಮ ಸಮಾಜಕ್ಕಾಗಿ ಆಧುನಿಕತೆ ಹಾಗೂ ಜಾಗತೀಕರಣ ಮತ್ತು ಪಾಶ್ಚಾತ್ತೀಕರಣದಲ್ಲಿರುವ ಎಲ್ಲಾ ಧನಾತ್ಮಕ ಅಂಶಗಳನ್ನು ಭಾರತೀಯ ಮೂಲ ಸಾಮಾಜಿಕ ಪರಿಕಲ್ಪನೆಗೆ ಅಳವಡಿಸಿಕೊಂಡು ಉತ್ತಮ ಸಮಾಜದ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

 


Sign In  /  Register

Most Downloaded Articles

ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ

Knowledge and Education- At Conjecture

Acquire employability in Indian Sinario
© 2018. Tumbe International Journals . All Rights Reserved. Website Designed by ubiJournal