Tumbe Group of International Journals

Full Text


ಶಿವಶರಣರ ಮತ್ತು ಮಾನವೀಯ ಮೌಲ್ಯಗಳು

ಕರಿಬಸಣ್ಣ ಟಿ

ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು

            ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳೇನು ಕೊರೆತಯಿಲ್ಲ. ಸಾಹಿತ್ಯವೆನ್ನುವುದೆ ಮಾನವೀಯ ಮೌಲ್ಯಗಳ ಆಗರವೆನ್ನಬಹುದು. ಸಾಹಿತ್ಯವು ಜನಸಮುದಾಯದ ಅನುಭವಗಳನ್ನು ಅರಗಿಸಿಕೊಂಡ ರಸಪಾಕವಾಗಿದೆ. ಮನುಷ್ಯನ ಬದುಕಿನ ಚರಿತ್ರೆಯೊಳಗೆ ನಡೆದ ಅನೇಕ ಸತ್ಯಾಸತ್ಯತೆಗಳ ತಳಹದಿಯ ಮೇಲೆ ಬೆಳಕು ಚೆಲ್ಲುವ ಅಕ್ಷರ ರೂಪಿಯಾದ ಚರಿತ್ರೆಯ ಮಾನವನು ನಡೆದುಕೊಂಡ ಘಟನಾವಳಿಗಳ ಚರಿತ್ರೆಯೇ ಮಾನವೀಯ ಇತಿಹಾಸವಾಗಿದೆ. ಮಾನವೀಯ ಮೌಲ್ಯಗಳು ಜನಸಮುಯದಾಯದಿಂದ ಸೃಷ್ಟಿಯಾಗಿ ಪ್ರಾಚೀನ ಕಾಲದಿಂದಲೂ ಪರಂಪರೆಯಿಂದ ಪರಂಪರೆಗೆ ಹರಿದು ಬಂದುದಾಗಿದೆ. ನಾಗರೀಕತೆ ಬೆಳೆದಂತೆಲ್ಲಾ ಮನುಷ್ಯ ಯಂತ್ರನಾಗರೀಕತೆಯ ಸುಳಿಗೆ ಸಿಲುಕಿ ಮಾನವೀಯ ಮೌಲ್ಯಗಳನ್ನು ಕಾಲಕಾಲಗಳಲ್ಲಿಯೂ ಗಾಳಿಗೆ ತೂರಿದ ಉದಾಹರಣೆಗಳು ತಮ್ಮ ಕಣ್ಮುಂದಿವೆ. ಆಗೆಯೇ ಇಂತಹ ಕಹಿ ಘಟನೆಗಳಿಂದ ಸಾಮಾನ್ಯ ಜನರ ಮೇಲಾಗುವ ಕೆಟ್ಟ ಪರಿಣಾಮಗಳನ್ನ ತಪ್ಪಿಸಲು ಆಗಾಗ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮುಂತಾದ ಮಹಾತ್ಮರು ಜನಿಸಿ ಸುಧಾರಿಸಿರುವುದನ್ನು ನೋಡಿದ್ದೇವೆ. ಬಹಳ ಮುಖ್ಯವಾಗಿ ಮೇಲೆ ಸೂಚಿಸಿರುವ ವಚನಗಳಲ್ಲಿ ಮಾನವೀಯ ಮೌಲ್ಯಗಳು ಎಂಬ ಶೀರ್ಷಿಕೆಯು ಹನ್ನರಡನೆಯ ಶತಮಾನಗಳಲ್ಲಿದ್ದ ಶಿವಶರಣರಿಂದ ರಚಿತವಾದ ವಚನಗಳಿಗೆ ಸಂಬಂದಿಸಿದ ವಿಚಾರವಾಗಿದೆ.

            ಮಧ್ಯಕಾಲಿನ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ನೆಲೆಯಿಂದ ಗುರುತಿಸಬಹುದಾದ ಸಾಹಿತ್ಯಗಳಲ್ಲಿ ವಿಭಿನ್ನವಾಗಿ ರಚಿತವಾಗಿರುವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಹಾಡಿದರೆ ಹಾಡಿನ ರುಚಿ, ಕೇಳಿದರೆ ಗದ್ಯ ಬರಹದಂತೆ ಭಾಸವಾಗುವ ಪದ್ಯ ಮತ್ತು ಗದ್ಯಕ್ಕಿಂತ ವಿನೂತವಾಗಿ ದಿನನಿತ್ಯದ ಜನಸಾಮಾನ್ಯರ ಅನುಭವಗಳನ್ನೆ ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟ ಸಾಹಿತ್ಯವಾಗಿದೆ.

            ವಚನಗಳಲ್ಲಿ ಕಂಡು ಬರುವ ವಿಶಿಷ್ಟ ಮೌಲ್ಯಗಳಲ್ಲಿ ಬಹುತೇಕ ಮನುಷ್ಯ ನಡಾವಳಿಗಳು, ಬದುಕುವ ರೀತಿ, ನೀತಿ ಸಮಾಜದ ಅಂಕು-ಡೊಂಕು ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತ ಮಾನವೀಯ ನೆಲೆಯಲ್ಲಿ ಹೇಗೆ ಬಗೆಹರಿಸಬಹುದನ್ನು ವಚನಗಳ ಉದಾಹರಣೆಯೊಂದಿಗೆ ಹೇಳುತ್ತಾರೆ. ಅನುಭವಗಳ ಮತ್ತು ಅನುಭಾವದ ಅಭಿವ್ಯಕ್ತಿ ಮಾಧ್ಯಮವನ್ನಾಗಿ ವಚನವನ್ನು ಜನಸಂಪರ್ಕ ಮಾಧ್ಯಮವನ್ನಾಗಿ ಮಾನವೀಯ ನೆಲೆಯಲ್ಲಿ ಬಳಸಿದ ಸಾಹಿತ್ಯವೇ ವಚನಸಾಹಿತ್ಯವಾಗಿದೆ.

            ಯಾವ ಮನುಷ್ಯನು ತನ್ನ ಜೀವನದಲ್ಲಿ ಯಾವ ರೀತಿಯಾದ ಮೌಲ್ಯಗಳನ್ನು ಅನುಸರಿಸುತ್ತಾನೋ ಅದೇ ಅವನ ಲಕ್ಷಣವನ್ನು ತಿಳಿಸುತ್ತದೆ. ಈ ಮೌಲ್ಯಗಳು ತ್ರಿವಿಧವಾಗಿದೆ. ಅವುಗಳೆಂದರೆ

1.         ಭೌತಿಕ

2.         ಮಾನವಿಕ

3.         ಸಾಂಸ್ಕತಿಕ ಅಥವಾ ಆಧ್ಯಾತ್ಮಿಕ ಎಂದು ಸಾಮಾನ್ಯವಾಗಿ ವಿವರಿಸಬಹುದು.

            ಸಾಮಾನ್ಯವಾಗಿ ಆಧುನಿಕ ಜಗತ್ತಿನಲ್ಲಿ ಮೌಲ್ಯವೆಂದರೆ ಹಣದ ಮೂಲಕವೇ ನಿರ್ಧರಿಸಲು ಪ್ರಾರಂಭಿಸುತ್ತದೆ. ಎಲ್ಲವನ್ನೂ ನಾವು ಇಂದು ವ್ಯಾಪಾರಿ ಮನೋಭಾವದಿಂದಲೇ ನೋಡುತ್ತಿದ್ದೇವೆ. ಆದರೆ ವಚನಕಾರರ ದೃಷ್ಟಿಯಲ್ಲಿ ಮೌಲ್ಯಗಳನ್ನು ಹುಡುಕುತ್ತಾ ಹೊರಟರೇ ಇಡೀ ವಚನ ಸಾಹಿತ್ಯವೇ ಮಾನವೀಯ ಮೌಲ್ಯಗಳ ನೆಲೆಯಿಂದಲೇ ರಚಿತವಾದುದಾಗಿದೆ.

            ವಚನಕಾರರು ಸಮಾಜದಲ್ಲಿದ್ದಂತಹ ರಾಜಪ್ರಭುತ್ವ, ಅಂಧಾನುಕರಣೆ, ಮೌಢ್ಯಗಳು, ಕಂದಾಚಾರಗಳು, ಲಿಂಗ-ತಾರತಮ್ಯ, ಸ್ತ್ರೀ ಅಸಮಾನತೆ, ವೃತ್ತಿತಾರತಮ್ಯ, ವರ್ಗಬೇದ, ಭಾಷಾ ವೈಷಮ್ಯಗಳು ಹಲವು ದೈವಗಳ ಆರಾಧನೆ ಧರ್ಮ, ಧರ್ಮಗಳಲ್ಲಿದ್ದ ಕಚ್ಚಾಟ ಮುಂತಾದವುಗಳನ್ನು ಸರಿಪಡಿಸಲು ತಮ್ಮದೇ ಆದದಾಟಿಯಲ್ಲಿ ತಮಗನಿಸಿದನ್ನು ಹೇಳುತ್ತಾ ತಾವು ಮೊದಲು ಸುಧಾರಿಸಿಕೊಂಡರು. ಬಸವಣ್ಣನವರು ಈ ವಚನವೇ ನಮಗೆ ಸಾಕ್ಷಿಯಾಗಿ ನಿಲ್ಲುತ್ತದೆ.

            “ಲೋಕದ ಡೊಂಕ ನೀವೇಕೆ ತಿದ್ದಿವಿರಿ?

            ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

            ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

            ನೆರೆಮನೆಯ ದುಃಖಕ್ಕೆ ಅಳುವವರ

            ಮೆಚ್ಚ ಕೂಡಲಸಂಗಮದೇವ”! ನೆಂದು ಸಮಾಜ ಸುಧಾರಿಸುವ ಮೊದಲು ತಮ್ಮನ್ನು ತಾವು

            ಸುಧಾರಿಸಿಕೊಳ್ಳೆಬೇಕೆಂದು ಶಿವಶರಣರ ನಿಲುವನ್ನು ತೋಡಿಕೊಳ್ಳುತ್ತಾನೆ.

            ವಚನಗಳನ್ನು ಸರಿ ಸುಮಾರು 270ಕ್ಕೂ ಹೆಚ್ಚು ವಚನಕಾರರು ವಚನ ರಚನೆಯಲ್ಲಿ ತೊಡಗುತ್ತಾರೆ. ಇದರಲ್ಲಿ ಸ್ತ್ರೀ ವಚನಗಾರ್ತಿಯರು 33ಕ್ಕೂ ಹೆಚ್ಚು ಶಿವಶರಣೆಯರು ವಚನಗಳನ್ನು ರಚಿಸಿದ್ದಾರೆ. ಇದರಲ್ಲಿ ಅಜ್ಞಾನತವಚನಕಾರ್ತಿಯ ಕೊಡುಗೆಯನ್ನು ನಾವುಗಳು ಮರೆಯುವಂತಿಲ್ಲ. ಈ ವಚನಕಾರರಲ್ಲಿ ಜಾತಿ, ಮೇಲು-ಕೀಳು, ಧರ್ಮತಾರತಮ್ಯ, ಕಾಯಕ ತಾರತಮ್ಯ, ಲಿಂಗ ತಾರತಮ್ಯಗಳಿಲ್ಲದ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡರು ಜೀವನವನ್ನು ಶರಣರು ಸಾಗಿಸಿದರು.

            ಅಂದಿನ ಕಾಲಘಟದಲ್ಲಿದ್ದ ರಾಜಪ್ರಭುತ್ವ ಕಿರುಕುಳ, ಸಾಮಾನ್ಯ ಜನರನ್ನು ಮೂರನೆಯ ದರ್ಜೆಯವರಂತೆ ಕಾಣುವ ಪಂಡಿತಶಾಹಿವರ್ಗದವರು, ಸಾಮಾಜದಲ್ಲಿ ತುಂಬಿತುಳುಕುತ್ತಿದ್ದ ಮೂಢನಂಬಿಕೆಗಳು, ಆಚಾರ-ವಿಚಾರಗಳಲ್ಲಿ ಅಂಧಾನುಕರಣೆ ಇನ್ನೂ ಮುಂತಾದ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಹುಟ್ಟಿಕೊಂಡ ಪ್ರಗತಿಪರವಾಗಿ ಆಲೋಚಿಸುವ ಮನುಷ್ಯನ ಜೀವನಕ್ರಮವನ್ನು ಮಾನವೀಯ ನೆಲೆಯಲ್ಲಿ ಸುಧಾರಿಸುವುದು. ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಅವುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅವರ ಕನಸಾಗಿತ್ತು. ಹೀಗೆ ಹೊಸ ಸಮಾಜವನ್ನು ಕಟ್ಟುವಾಗ ಆ ನವ ಸಮಾಜಕ್ಕೆ ಬೇಕಾದ ಪರಿಕರಗಳನ್ನು ತಮ್ಮ ಬದುಕಿನಾಳದ ಅನುಭವದ ನೆಲೆಯಿಂದಲೇ ಕಂಡುಕೊಂಡರು. ಮನುಷ್ಯ ಸುಖ-ಶಾಂತಿಗಾಗಿ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಭಿತ್ತಿ ತೊಡಗಿದರು. ಅದರ ಪರಿಣಾಮವಾಗಿ ಹನ್ನೆರಡನೆಯ ಶತಮಾನದಲ್ಲಿ ಮಾನವೀಯ ಮೌಲ್ಯಗಳ ಕ್ರಾಂತಿಯಾಯಿತು. ಆ ಮಾನವೀಯ ಮೌಲ್ಯಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

1.         ದಯೆ

2.         ಕರುಣೆ

3.         ಅಹಿಂಸೆ

4.         ಧರ್ಮ

5.         ನೈತಿಕತೆ

6.         ಸತ್ಯ

7.         ವೈಯಕ್ತಿಕ ಮಾನವೀಯ ಮೌಲ್ಯ

8.         ಭಕ್ತಿ

9.         ಹಿತ-ಮಿತ-ಮೃದು ಭಾಷೆ

10.       ಸಕಾರಾತ್ಮಕ ಮೌಲ್ಯ

11.       ಸರಳ ಜೀವನ

12.       ಅಂತರಂಗ-ಬಹಿರಂಗ ಶುದ್ಧಿ

13.       ಸಾಂಸರಿಕ ಮೌಲ್ಯ

14.       ಸಂಸ್ಕಾರ ಮೌಲ್ಯ

15.       ಸ್ತ್ರೀಪರವಾದ ಮೌಲ್ಯಗಳು

•           ದಯೆ: ಮನುಷ್ಯರಾಗುವುದು ನಮ್ಮ ನಡೆ-ನುಡಿಯನ್ನು ಹೇಗೆ ಬಳಸುವತ್ತೇವೆಂಬುದರ ಮೇಲೆ ನಿಂತಿರುತ್ತದೆ. ಸಕಲ ಜೀವರಾಶಿಗಳಲ್ಲಿ ದಯೆಯನ್ನು ತೋರುವುದು ಮಾನವೀಯ ಧರ್ಮವಾಗಿದೆ. ಈ ಹೇಳಿಕೆಗೆ ಸಾಕ್ಷಿ ಎಂಬಂತೆ ಬಸವಣ್ಣನವರ ವಚನವನ್ನು ಈ ಕೆಳಕಂಡಂತೆ ಉದಾಹರಿಸಬಹುದು

            “ದಯವಿಲ್ಲದ ಧರ್ಮವಾವುದೇವುದಯ್ಯಾ?

            ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ

            ದಯವೇ ಧರ್ಮ ಮೂಲವಯ್ಯ

            ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ!”

            ಶರಣರ ದೃಷ್ಟಿಯಲ್ಲಿ ಪ್ರಾಪಂಚಿಕ ಜೀವನದಲ್ಲಿ ಬರುವ ಸಕಲ ಪ್ರಾಣಿಗಳಲ್ಲೂ ಸಹ ಮನುಷ್ಯನಾದವನು ದಯೆಯನ್ನು ತೋರಿ             ತಮ್ಮೊಂದಿಗೆ ಸಹಜೀವನ ನಡೆಸಿದಾಗ ಮಾತ್ರ ಮಾನವೀಯ ಬದುಕು ಸಹ್ಯವಾಗುತ್ತದೆನ್ನುತ್ತಾರೆ.

•           ಕರುಣೆ: ಅಂದಿನ ಕಾಲದಲ್ಲಿ ವಚನಕಾರು ಸಮಾಜದಲ್ಲಿ ನಡೆಸುತ್ತಿದ್ದ ಅಹಿತಕರ ಘಟನೆಗಳನ್ನು ಸರಿಪಡಿಸಲು ಹೊಸ ಮಾನ್ಯವನ್ನು ಕಂಡುಕೊಂಡು ಬದುಕಿನ ಪಾಠವನ್ನು ಬಿತ್ತಿದ್ದರು. ಈ ವಚನವು ಇದಕ್ಕೆ ಸಾಕ್ಷಿಯಾಗುತ್ತದೆ.

            “ಎಲ್ಲವೂ ಎಲವೋ ಪಾಪಕರ್ಮದ ಮಾಡಿದವನೇ

            ಎಲವೋ ಎಲೋ ಬ್ರಹ್ಮಹತ್ಯವ ಮಾಡಿದವನೇ

            ಒಮ್ಮೆ ‘ಶರಣೆ’ನ್ನೆಲವೋ!

            ಒಮ್ಮೆ ‘ಶರಣೆ’ ಎಂದರೆ ಪಾಪಕರ್ಮ ಓಡುವುದು

            ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು

            ಒರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ”! ಎನ್ನುವ ವಚನವು ತಾವುಗಳು ತಪ್ಪುದಾರಿಯಲ್ಲಿ ನಡೆಯುತ್ತಿದ್ದರೆ. ತಿದ್ದಿಕೊಂಡು ಸರಿದಾರಿಯಲ್ಲಿ ನಡೆದರೆ ಬದುಕು ಹಸನಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಕರುಣೆಯ ಮಾನವೀಯ ಮೌಲ್ಯವನ್ನು ಕಾಣಬಹುದು.

•           ಅಹಿಂಸೆ: ಶರಣರು ಪ್ರತಿಪಾದಿಸಿದ ಬಹುಮುಖ್ಯವಾದ ಮಾನವೀಯ ಮೌಲ್ಯವೇ ಅಹಿಂಸೆ. ಹಿಂಸೆಯಿಂದ ಎನ್ನನ್ನು ಗೆಲ್ಲಲಾಗದು. ಆದ್ದರಿಂದ ತಮ್ಮ ಜೀವನದಲ್ಲಿ ಈ ಕೆಳಕಂಡ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಬದುಕು ಸುಲಭವಾಗುತ್ತದೆನ್ನುತ್ತಾರೆನ್ನುವುದು ಈ ವಚನವು ತಿಳಿಸುತ್ತದೆ.

            “ ಕಳಬೇಡ ಕೊಲಬೇಡ ಹುಸಿಯ ನುಡಿಯಬೇಡ

            ತನ್ನ ಬಣ್ಣಿಸಬೇಡ, ಇದಿರ ಹಳೆಯಲು ಬೇಡ

            ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ

            ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ” ಎನ್ನುವಲ್ಲಿ ಕೊಲೆ, ಸುಲಿಗೆ, ಸುಳ್ಳು, ಬೇರೆಯವರನ್ನು ಹಳೆಯವುದನ್ನು ತಿರಸ್ಕರಿಸಿ ತಮ್ಮ ಅಂತರಂಗ ಮತ್ತು ಬಹಿರಂಗ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುತ್ತಾರೆ.

•           ಧರ್ಮ ಮತ್ತು ನೈತಿಕತೆ : ಧರ್ಮವು ಅಂಧಕಾರದಲ್ಲಿ ಮುಳುಗಿರುವವರಿಗೆ ಬೆಳಕನ್ನು ಕೊಡುವುದಾಗಿರಬೇಕೆ ಹೊರತು ಕತ್ತಲನ್ನಲ್ಲ ಎಂಬ ಭಾವನೆಯಿಂದ ಜಡ್ಡುಗಟ್ಟಿದ ಧರ್ಮಕ್ಕೆ ಸಮಾಜಮುಖಿಯಾದ ಹೊಸ ರೂಪವನ್ನು ಕೊಟ್ಟರು. ಧಾರ್ಮಿಕ ನೈತಿಕತೆಯನ್ನು ಪ್ರತಿಪಾದಿಸಲು ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಾರೆ.

•           ಸತ್ಯ ಮತ್ತು ವೈಯಕ್ತಿಕ ಮೌಲುಗಳು : ನುಡಿದಂತೆ ನಡೆ-ನುಡಿದಂತೆ ನುಡಿ’ ಎಂಬ ಸಿದ್ಧಾಂತದ ಅಡಿಯಲ್ಲಿ ಬದುಕಿತೋರಿದರು. ಸಿದ್ಧರಾಮನ ವಚನವು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

            “ ನುಡಿದಂತೆ ನಡೆವ, ನಡೆದಂತೆ ನುಡಿವ,

            ಸದ್ಭಕ್ತಿ ಸದಾಚಾರಯುಕ್ತ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ” ಎನ್ನವ ವಚನವು ನಮ್ಮ ಬದುಕಿನಲ್ಲಿ   ಅಳವಡಿಸಿಕೊಳ್ಳುವ ಸತ್ಯವನ್ನು ಪ್ರತಿಪಾದಿಸುತ್ತದೆ.

            ವೈಯಕ್ತಿಕ ಮೌಲ್ಯವು ವ್ಯಕ್ತಿಗಳಲ್ಲಿ ಸಕಾರಾತ್ಮವಾಗಿ ಸುಧಾರಿಸಿಕೊಳ್ಳಬೇಕೆಂದು ವಚನಕಾರರು ಈ ವಚನದಲ್ಲಿ ತಿಳಿಸುತ್ತಾರೆ.

            “ಲೋಕದ ಡೊಂಕ ನೀವೇಕೆ ತಿದ್ದಿವಿರಿ?

            ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

            ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

            ನೆರೆಮನೆಯ ದುಃಖಕ್ಕೆ ಅಳುವವರ

            ಮೆಚ್ಚ ಕೂಡಲಸಂಗಮದೇವ”! ಎನ್ನುತ್ತಾ ವ್ಯಕ್ತಿ ಮೊದಲು ತನ್ನನ್ನು ತಾನು ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿರುತ್ತಾರೆ.

•           ಭಕ್ತಿ ಮತ್ತು ಹಿತ-ಮಿತ ಮೃದು ಭಾಷೆ : ಅಂದಿನ ಕಾಲದಲಿದ್ದ ದೇವರು-ಧರ್ಮಶಾಸ್ತ್ರ, ಪುರಾಣ, ವೇದ, ಉಪನಿಷತ್ತುಗಳ ಬಗ್ಗೆಗಿನ ಡಾಂಬಿಕ ನಿಲುವುಗಳನ್ನು ತಿರಸ್ಕರಿಸಿ ತಾವು ನಂಬದ ವಿಚಾರಗಳನ್ನು ತಿಳಿಸ ಹೊರಟರು. ಆ ಸಂದರ್ಭದಲ್ಲಿ ಅಲ್ಲಮಪ್ರಭುಗಳು “ಭಕ್ತಿ ಎಂಬುದು ತೋರುಂಬಲಾಭ” ಎಂದು ಹೇಳುತ್ತಾ ಹುಸಿಭಕ್ತಿ ಆಗದೆ ನೈಜತೆಯ ಬದುಕಿನ ಕಡೆಗೆ ಗಮನ ಹರಿಸಬೇಕೆನ್ನುತ್ತಾರೆ.

•           ಸಕಾರಾತ್ಮಕ ಮೌಲ್ಯ : ಜೀವನದಲ್ಲಿ ಎನನ್ನಾದರೂ ಸಾಧಿಸಬೇಕೆಂದರೆ ನಕಾರಾತ್ಮಕ ವಿಚಾರಗಳನ್ನು ಬದಿಗಿರಿಸಿ ಸಕಾರಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನಸಾಗಿಸಬೇಕೆಂದು ವಚನಕಾರರು ಬಯಸುತ್ತಾರೆ. ಅದರಂತೆ ಬದುಕನ್ನು ಸಾಗಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬಸವಣ್ಣನವರ ವಚನ ತಿಳುಸುತ್ತದೆ.

            “ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ,

            ನಿಂದಿನಿದವರೆನ್ನ ತಂದೆತಾಯಿಗಳೆಂಬೆ, ಅಳಿಗೊಂಡವರೆನ್ನ ಆಳ್ದರೆಂಬೆ,

            ಜರೆದವರೆನ್ನ ಜನ್ಮಬಂಧುಗಳೆಂಬೆ,

            ಹೊಗಳೆದವರೆನ್ನ ಹೊನ್ನ ಕೂಲದಲಿಕ್ಕಿದರೆಂಬೆ, ಕೂಡಲಸಂಗಮದೇವಾ.”

            ಎನ್ನುತ್ತಾ ಈ ಸಮಾಜದಲ್ಲಿ ಸಕಾರಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತಾರೆ.

•           ಸರಳ ಜೀವನ : ವಚನಕಾರರು ಸರಳ ಜೀವನವನ್ನು ಪ್ರತಿಪಾದಿಸಿ ಅದರಂತೆ ಬದುಕಿ ತೋರಿಸಿದರು. ನಮಗಿರುವ ಸಂಪತ್ತು ತಮ್ಮ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಉಳಿದ ಸಂಪನ್ಮೂಲವನ್ನು ಮಠಕ್ಕೆ, ಸಮಾಜಕ್ಕೆ ಕೊಟ್ಟು ನಿಸ್ವಾರ್ಥವಾದ ಜೀವನ ನಡೆಸಿದ್ದರು. ಇದಕ್ಕೆ ಆಯ್ದಕ್ಕಿ ಲಕ್ಕಮ್ಮನವರ ವಚನಗಳಲ್ಲಿ ಕಂಡು ಬರುವ “ಈಸಕ್ಕಿಯಾಸೆ ನಮಗೇಕಯ್ಯಾ” ಎನ್ನುವಲ್ಲಿ ನಮಗರಿವಾಗುತ್ತದೆ. ‘ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಝ್ಯವನಿತ್ತಡೆ ಒಲ್ಲೆ”“ ನಿಮ್ಮ ಶರಣರ ಸೂಳ್ನುಡಿಯನೊಂದರೆಗಳಿಯುತ್ತದೆ ನಿಮ್ಮನಿತ್ತೆ ಕಾಣಾ ರಾಮನಾಥ”! ಎನ್ನುತ್ತಾ ಸರಳ ಜೀವನ ಮಾಡಲು ಶರಣರ ಹಿತನುಡಿಗಳು ಸಾಕೆಂದು ಹೇಳಿ ಮಾನವೀಯ ಮೌಲ್ಯಗಳನ್ನು ಸುಖಕರ ಬದುಕಿಗೆ ಬಿತ್ತುತ್ತಾರೆ.

ಅಂತರಂಗ-ಬಹಿರಂಗ ಮನಸ್ಸುಗಳು ಶುದ್ಧವಾಗಿದ್ದಾಗ ಮಾತ್ರ ನಮ್ಮ ಬದುಕು ಹಸನಾಗುತ್ತದೆಂಬುದನ್ನು ಹೇಳುತ್ತಾರೆ.  ಸಾಂಸಾರಿಕ ಜೀವನವನ್ನು ಶಿವಶರಣರು ನಿರಾಕರಿಸುವುದಿಲ್ಲ. ಕೌಟುಂಬಿಕ ಜೀವನದಲ್ಲಿದ್ದುಕೊಂಡು ದೇವರಲ್ಲಿ ಭಕ್ತಿ ಸಮಾಜ ಸುಧಾರಣೆ ಕಾಯಕದಲ್ಲಿ ವೃತ್ತಿಪರತೆ ಮುಂತಾದವುಗಳನ್ನು ಸಾಧಿಸುತ್ತಾ ಹೋದರು. ಸತಿಪತಿಗಳೊಂದಾದ ಭಕ್ತಿ ಶಿವನಿಗೆ ಹಿತವಾಗಿರುವುದನ್ನು ಸ್ಮರಿಸಿ ನೈಜವಾದ ದಾಂಪತ್ಯ ಜೀವನ ನಡೆಸುತ್ತಾರೆ.

•           ಸಂಸ್ಕಾರ ಮೌಲ್ಯ :ವಚನಗಳು ನಮ್ಮ ಬದುಕಿನ ಅನುಭವಗಳ ನೇರ ಅಭಿವ್ಯಕ್ತಿ ಕ್ರಮವಾದ್ದರಿಂದ ಬದುಕಿಗೆ ಹತ್ತಿರವಾದ ಜೀವನ ಮೌಲ್ಯವನ್ನು ಹೇಳುತ್ತವೆ. ಸಂಸ್ಕಾರ ಮೌಲ್ಯ ಎಂದರೆ ಹಿರಿಯರಿಗೆ, ಕಿರಿಯರಿಗೆ, ಗುರುಗಳಿಗೆ ತಮಗಿಂತ ಎಲ್ಲರದಲ್ಲಿ ಸಾಧಿಸಿರುವ ಸಾಧಕರಿಗೆ ಮಾನವೀಯ ಮೌಲ್ಯಗಳನ್ನು ಹೇಗೆ ಕೊಡುತ್ತಾರೆಂಬುದನ್ನು ತಿಳಿಸುತ್ತದೆ. ಅತಿಥಿ ಸತ್ಕಾರವನು ಹೇಗೆ ಮಾಡಬೇಕೆಂಬುದನ್ನು ಈ ವಚನ ಹೇಳುತ್ತದೆ.

            “ ಏನ ಬಂದಿರಿ, ಹದುಳವಿದ್ದೀರೆ” ಎಂದರೆ

            ನಿಮ್ಮ ಮೈಸಿರಿ ಹಾರಿ ಹೋಹುದೆ?

            “ಕುಳ್ಳರೆಂ” ದರೆ ನೆಲಕುಳಿ ಹೋಹುದೆ?

            ಒಡನೆ ನುದಿರೆ, ಸಿರ ಹೊಟ್ಟೆ ಯೊಡೆವುದೆ?

            ಕೊಡಲಿಲ್ಲದಿದ್ದರೊಂದ ಗುಣವಿಲ್ಲದಿರ್ದಡೆ?

            ಕೆಡಹಿ ಮೂಗ ಕೊಯ್ಯದೆ ಮಣ್ಬನೆ ಕೂಡಲಸಂಗಮದೇವನು”

            ಮನೆಗೆ ಬರುವ ಅತಿಥಿಗಳನ್ನು ನಾವುಗಳು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಚಿತ್ರಿಸುತ್ತದೆ.

•           ಸ್ತ್ರೀಪರವಾದ ಮಾನವೀಯ ಮೌಲ್ಯ : ಸನಾತನ ಕಾಲದಲ್ಲಿದ್ದ ಮಹಿಳೆಯರ ಶೋಷಣೆಯನ್ನು ಖಂಡಿಸಿದ ವಚನ ಸಾಹಿತ್ಯವು ಮಹಿಳೆಯರ ಬಗೆಗಿನ ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸಿ ಸ್ತ್ರೀಯರಿಗೆ ತನ್ನದೇ ಆದ ಸಮಾಜದಲ್ಲಿ ಸ್ಥಾನ-ಮಾನಗಳನ್ನು ಪಡೆದುಕೊಂಡರು. ಇದಕ್ಕೆ ಪೂರಕವಾಗಿ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ! ಎಂದು ಸಿದ್ಧರಾಮನ ತನ್ನ ವಚನದಲ್ಲಿ ಮಹಿಳೆಯರಿಗೆ ಕೊಡಬೇಕಾದ ಗೌರವವನ್ನು ಈ ರೀತಿ ಸೂಚಿಸಿದ್ದಾನೆ. ಹನ್ನೆರಡನೆಯ ಶತಮಾನದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗಗಳೆನ್ನದೆ ಸರ್ವ ಸಮಾನವಾಗಿ ವಚನಗಳನ್ನು ರಚಿಸಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು.

            ಒಟ್ಟಾರೆ ಮಧ್ಯಕಾಲೀನ ಕನ್ನಡ ಸಾಹಿತ್ಯದ ಬೆಳೆಯಲ್ಲಿ ವಚನ ಸಾಹಿತ್ಯ ವಿಶಿಷ್ಟ ರೂಪವಾಗಿದೆ. ವಚನ ಕಾಲ ಘಟ್ಟವನ್ನು ‘ವೈಚಾರಿಕತೆ’ ವಚನ ಚಳುವಳಿ, ಧರ್ಮ ಸುಧಾರಣಾ ಚಳುವಳಿ, ಕಾಯಕ ಜೀವಿ ಚಳುವಳಿ ಎಂದು ನಾನಾ ಹೆಸರುಗಳಿಂದ ಕರೆದರೂ ನಾನು ಇಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದನಾ ಚಳುವಳಿ ಎಂದೇ ಭಾವಿಸಿದ್ದೇನೆ. ಆದ್ದರಿಂದ ವಚನಕಾರರು ಬದುಕಿದ್ದು ಮಾನವೀಯ ಮೌಲ್ಯಗಳ ನೆಲೆಯಲ್ಲಿಯೇ ಹೊರತು ಬೇರೆ ವಿಷಯಗಳಿಂದಲ್ಲ ಎಂಬುದು ನನ್ನ ಅಭಿಪ್ರಾಯ.

ಆಕರ ಗ್ರಂಥಗಳು

  1. ವಚನ ಧರ್ಮಸಾರ  - ಎಂ. ಚಿದಾನಂದಮೂರ್ತಿ
  2. ಭಕ್ತಿ ಭಂಡಾರಿ ಬಸವಣ್ಣ – ಎಂ.ಆರ್. ಶ್ರೀನಿವಾಸಮೂರ್ತಿ
  3. ಕಲ್ಯಾಣಕ್ರಾಂತಿ ಮತ್ತು ಸಾಂಸ್ಕತಿಕ ಸನ್ನಿವೇಶ – ಡಾ. ವೆಂಕಟೇಶ್ ಎಲ್.ಎಂ.
  4. ಕನ್ನಡ ಸಾಹಿತ್ಯ ಸಮೀಕ್ಷೆ – ಜಿ.ಎಸ್. ಶಿವರುದ್ರಪ್ಪ
  5. ಅಕ್ಕನ ವಚನಗಳು - ಸಂ.ಆರ್.ಸಿ. ಹಿರೇಮಠ
  6. ಇಕ್ಕಟ್ಟು-ಬಿಕ್ಕಟ್ಟು  - ಪ್ರೊ. ಕೆ.ಜಿ. ನಾಗರಾಜಯ್ಯ
  7. ವಚನ ಸಾಹಿತ್ಯ ಸಂಗ್ರಹ  - ಸಂ.ಶಿ. ಭೂಸನೂರ ಮಠ
  8. ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ  - ತ.ಸು. ಶಾಮರಾಯ
  9. ಆದಯ್ಯನ ವಚನಗಳು - ಸಂ. ಫ.ಗು. ಹಳಕಟ್ಟೆ
  10. ಅಲ್ಲಮನ ವಚನಗಳು - ಸಂ. ಎಲ್. ಬಸವರಾಜು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal