Tumbe Group of International Journals

Full Text


ಅನುಭಾವದ ದನಿ ಬದುಕಿಗೆ ಬನಿ

ಮಹದೇವ.ಆರ್

ಸಂಶೋಧನಾ ವಿದ್ಯಾರ್ಥಿ

ರೇವಾ ವಿಶ್ವವಿದ್ಯಾಲಯ

ಕಟ್ಟಿಗೇನಹಳ್ಳಿ, ಯಲಹಂಕ, ಬೆಂಗಳೂರು-64

ಡಾ. ಜಗದೀಶ್ ಬಾಬು.ಬಿ.ವಿ

ಸಂಶೋಧನಾ ಮಾರ್ಗದರ್ಶಕರು

ರೇವಾ ವಿಶ್ವವಿದ್ಯಾಲಯಕಟ್ಟಿಗೇನಹಳ್ಳಿ, ಯಲಹಂಕ, ಬೆಂಗಳೂರು-64

ಮನುಷ್ಯ ಮೂಲತ: ಪ್ರಾಣಿಗಳ ಸ್ವಭಾವದಿಂದ ಸ್ವಲ್ಪ ಭಿನ್ನವಾಗಿ ತನ್ನನ್ನು ಸಮಾಜವೆಂಬ ಪರಿಕಲ್ಪನೆಯಡಿ ಗುರುತಿಸಿಕೊಂಡಿದ್ದಾನೆ. ಪ್ರಾಣಿಗಳ ಅಭಿವ್ಯಕ್ತಿಗೆ, ಮನುಷ್ಯನ ಅಭಿವ್ಯಕ್ತಿಗೆ ದಕ್ಕಿದಷ್ಟು ವಿವಿಧ ಪರಿಕರಗಳಿಲ್ಲ. ಇಲ್ಲಿ ಭಾವನೆಗಳ ಭಿನ್ನ ಆಯಾಮಗಳು ಮನುಷ್ಯನನ್ನು ಭಿನ್ನವಾಗಿ, ವಿಶಿಷ್ಟವಾಗಿ ಬದುಕುವಂತೆ ಲೋಕದಲ್ಲಿ ಉಳಿಸಿವೆ. ಭಾವನೆಗಳ ಚೈತನ್ಯಮಯ ಶಕ್ತಿಯಿಂದಲೇ ಮನುಷ್ಯ ತನ್ನ ಬದುಕನ್ನು ಉತ್ತಮಿಕೆಯಾಗಿಯೂ ರೂಪಿಸಿಕೊಂಡಿದ್ದಾನೆ, ಜೊತೆಗೆ ತಾನೇ ಬದುಕಲಾರದಷ್ಟು ಕಷ್ಟದ ಬದುಕನ್ನೂ ರೂಢಿಸಿಕೊಂಡಿದ್ದಾನೆ. ಅದನ್ನೇ ವಚನಕಾರರು ‘ಆಚಾರವೇ ಸ್ವರ್ಗ ಅನಾಚಾರವೇ ನರಕ’ ಎಂದಿದ್ದಾರೆ. ಉತ್ತಮ ನಡವಳಿಕೆಯ ಆಚಾರ ವಿಚಾರಗಳು ಸಮಾಜವನ್ನು ಉತ್ತಮಗೊಳಿಸಿದರೆ, ಮನುಷ್ಯ ತನ್ನ ಸುತ್ತಲು ಬದುಕುವ ಸ್ವರ್ಗೀಯ ಸಮಾನವಾದ ನೆಮ್ಮದಿಯಬದುಕನ್ನು ಸೃಷ್ಟಿಸಿಕೊಳ್ಳುತ್ತಾನೆ. ಆದರೆ ಅನೈತಿಕ, ವಿಕ್ಷಿಪ್ತಮನಸ್ಥಿತಿಯ ಸ್ವಾರ್ಥದ ಬದುಕು, ಸಂಕೀರ್ಣವಾದ ಸಂಕುಚಿತ ಮನೋಭಾವದಲ್ಲಿ ನರಕವಾಗುತ್ತದೆ. ಇಂತಹ ಸಂಕೀರ್ಣ ಮನಸ್ಥಿತಿಯ ಭಾವನೆಗಳನ್ನು ಹೋಗಲಾಡಿಸಲು ಕನ್ನಡದ ಅನೇಕ ತತ್ವಪದಕಾರರು, ಕವಿಗಳು, ದಾರ್ಶನಿಕರು ತಾವು ಬದುಕಿನಲ್ಲಿ ಕಂಡ ಅನುಭವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಪರಿಪಾಕಗೊಳಿಸಿ, ನುಡಿದಂತೆ ಬದುಕಿ ಅನುಭಾವದ ನಡೆಯನ್ನು ಅನುಭಾವದ ನುಡಿಯನ್ನು ನೀಡುವ ಮೂಲಕ ಅನುಭಾವ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಇಂತಹ ಕನ್ನಡ ಸಾಹಿತ್ಯದ ಅನುಭಾವಿ ಕವಿಗಳಲ್ಲಿ ಬೇಂದ್ರೆ ಮತ್ತು ಮಧುರಚೆನ್ನರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

                                    ಹದಾ ಒಳಗಾ ಇಲ್ದಾ ತಮ್ಮ

                                    ಪದ ಹೊರಗಾ ಬರೋದಿಲ್ಲಾ

                                    ಕದ ತೆರೆಯೋದಿಲ್ಲ ಅಂತ:ಕರಣ

                                                                                    ಬೇಂದ್ರೆ. (1)

            ಕವಿಯೊಬ್ಬನ ಅಂತ:ಕರಣ ಮಾತ್ರವಲ್ಲ ಪ್ರತಿಯೋಬ್ಬ ವ್ಯಕ್ತಿಯೂ ತನ್ನ ಮನಸ್ಸನ್ನು ಶುದ್ಧವಾಗಿಟ್ಟು ಕೊಂಡಲ್ಲಿ, ನೈತಿಕತೆಯನ್ನು ಕಾಪಾಡಿಕೊಂಡಲ್ಲಿ ಭಾವಶುದ್ಧವಾಗುತ್ತದೆ. ತನ್ನ ಸುತ್ತಲವರೊಡನೆ ವ್ಯವಹರಿಸುವ ಆತನ ಮಾತು, ಬದುಕಿನ ಬದ್ಧತೆ, ಭವಿಷ್ಯದ ಕಾಳಜಿ, ನಾಳಿನ ನಂಬಿಕೆಗಳು ಚಿಗುರೊಡೆಯುತ್ತವೆ. ಆಗ ವ್ಯಕ್ತಿ ವಿಕ್ಷಿಪ್ತನಾಗುವುದಿಲ್ಲ, ಹಂತಕನಾಗುವುದಿಲ್ಲ, ಆತ್ಮಹತ್ಯೆಗೂ ಪ್ರಯತ್ನಿಸುವುದಿಲ್ಲ. ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವ ಉತ್ತಮಿಕೆ ಆತನಲ್ಲಿ ನೆಲೆಸುತ್ತದೆ. ಇಂತಹ ಭಾವ ಹದಗೊಂಡಾಗ ಮಾತ್ರ ಅಂತ:ಕರಣದ ಕದ ತೆರೆಯುತ್ತದೆ  ಎಂಬುದು ಬೇಂದ್ರೆಯವರ ನಿಲುವು.

            ಕನ್ನಡದ ನೆಲದಲ್ಲಿ ಬಾಳಿ ಬದುಕಿ ಹೋದ ಮತ್ತೊಬ್ಬ ಅನುಭಾವಿ ಕವಿ ಮಧುರಚೆನ್ನರ ಮೂಲ ಹೆಸರು ‘ಹಲಸಂಗಿ ಚನ್ನಮಲ್ಲಪ್ಪ ಗಲಗಲಿ’. ಬಿಜಾಪುರ ಜಿಲ್ಲೆಯ ಹಲಸಂಗಿಯವರು. ಭಾವ ಶುದ್ಧತೆಯ ಬಗ್ಗೆ ಈ ರೀತಿ ಹೇಳಿದ್ದಾರೆ.

                                    ಬುದ್ಧಿಯೇ ಬಾದಕವು ಬುದ್ಧಿಯೇ ಸಾಧಕವು

                                    ಬುದ್ಧಿಯೇ ಮಾನವನ ಭಿತ್ತಿಯಯ್ಯ

                                    ಬುದ್ಧಿಯಿಂದಲೆ ಭಾವ ಬೀಳುತೇಳುತ ಸಾಗಿ

                                    ನಿಷ್ಠೆ ನಿಬ್ಬೆರಗಾಗಿ ನಿಲುವುದಯ್ಯಾ

-           ಮಧುರಚೆನ್ನ (2)

            ಕವಿ ಬದುಕಿನ ನಿಷ್ಠೆಯ ಬಗ್ಗೆ ಮಾತನಾಡುತ್ತಾ ಭಾವದ ಅಭಿವ್ಯಕ್ತಿ ಮನಸ್ಸಿನ ಅನುಭವದ ಮೇಲೆ ನಿರ್ಧಾರವಾಗುತ್ತದೆ, ಬುದ್ಧಿಯ ಕಾರಣದಿಂದ ಚರ್ಚೆ, ವಿಮರ್ಶೆ, ತರ್ಕಗಳ ಪರಿಣಾಮವಾಗಿ ಬುದ್ಧಿ ಭಾವದ ಭಿತ್ತಿಯಾಗಿರುತ್ತದೆ. ಹೀಗೆ ವಿವೇಚಿಸಿ ಒಪ್ಪಿಕೊಳ್ಳುವ ಭಾವ ತನ್ನ ಏಳು ಬೀಳುಗಳಲ್ಲಿ ಸಾಗಿ ಜೀವನ ನಿಷ್ಠೆಗೆ ಮಾತ್ರ ಅದು ಸೋಲುತ್ತದೆ. ಅಂದರೆ ಮಾನವ ತನ್ನ ಬದುಕಿನಲ್ಲಿ ತಾನು ನಂಬಿದ ತತ್ವ ಸಿದ್ಧಾಂತಗಳನ್ನು, ತರ್ಕಬದ್ಧವಾಗಿ ವಿವೇಚಿಸಿಯೂ, ಅವನ ಭಾವ ಮಾತ್ರ ಜೀವನಿಷ್ಠವಾದ ತಾತ್ವಿಕತೆಗೆ ಮಾತ್ರ ಬೆರಗುಗೊಂಡು ನೆಲೆಸುತ್ತದೆ ಎಂಬುದು ಇಲ್ಲಿ ಕವಿಯ ನಿಲುವು.

            ಹೀಗೆ ಭಾವದ ಕುರಿತ ಚರ್ಚೆಯೇ ಮನಸ್ಸಿನ ನಿಯಂತ್ರಣದ ಕುರಿತ ಪಾರಿಭಾಷಿಕ ತಿಳುವಳಿಕೆಗೆ ಸ್ಪಂದನೆಯನ್ನು ನೀಡುತ್ತದೆ. ಏಕೆಂದರೆ ಈ ಜಗತ್ತು ಬರೀ ಭೌತಿಕ ವಸ್ತುಗಳಿಂದ ಮಾತ್ರ ಅಲಂಕರಿಸಲ್ಪಟ್ಟಿಲ್ಲ, ಮನಸ್ಸಿನಿಂದ ನಿಯಂತ್ರಿಸಲ್ಪಟ್ಟಿದೆ. ಎಲ್ಲಾ ಸಿದ್ಧಾಂತಗಳು, ಧರ್ಮಗಳು, ಬೋಧಿಸುವ ಆಚರಣೆಗಳು ಪಾಲನೆಯಾಗುವುದು ಜಡವಸ್ತುಗಳಿಂದ ಅಲ್ಲ, ಅದು ಚಾಲನೆಗೊಳ್ಳುವುದು ಪಾಲನೆಯಾಗುವುದು ಮನಸ್ಸಿನಿಂದ.  ಇಂತಹ ಮನಸ್ಸಿನ ನಿಯಂತ್ರಣ ಮಾಡಬೇಕು. ಆಗ ಭೌತಿಕವಾಗಿ ವಾಸಿಸುವ ಎಲ್ಲಾ ಜಡ ಹಾಗೂ ಚೇತನಗಳ ನಿರ್ವಹಣೆಗೆ ಕಾರಣವಾಗಿರುವ ಅನಂತಶಕ್ತನನ್ನು ಅರಿಯುವುದು ಮಾನವನಿಗೆ ಸಾಧ್ಯವಾಗುತ್ತದೆ.

 ಧ್ಯಾನ, ಧಾರಣೆಗಳಿಂದ, ಯೋಗ, ತತ್ವ ತಿಳುವಳಿಕೆಗಳಿಂದ ಮನುಷ್ಯನ ಭಾವ ಶುದ್ಧಗೊಳ್ಳುತ್ತದೆ. ಭವದ ಈ ಅನುಭವಗಳಿಂದ ಪ್ರೇರಿತವಾಗಿ ಭಾವಶುದ್ಧತೆಯಿಂದ ಪಡೆದುಕೊಂಡ ನೈತಿಕ ಎತ್ತರ, ವ್ಯಕ್ತಿಯನ್ನು ಅನುಭವದ ಚಿಂತನೆಗೆ ಒಡ್ಡುತ್ತದೆ. ಆತನ ಅನುಭವದ ಸಾತತ್ಯತೆಯ ಫಲವಾಗಿ ಉಂಟಾದ ಭಾವದ ಅನಾವರಣ ಆತನನ್ನು ಅನುಭಾವದ ಹಂತಕ್ಕೆ ಒಯ್ಯುತ್ತದೆ. ಉದಾ: ‘ಮಾ ನಿಷಾದ’ ಬೇಡನೇ ಕೊಲ್ಲಬೇಡ ನಿಲ್ಲು. ಎನ್ನುವ ಮಾತು ವಾಲ್ಮೀಕಿ ಮಹರ್ಷಿಯಲ್ಲಿ ಆ ಕ್ಷಣದಲ್ಲಿ ಉಂಟುಮಾಡಿದ ಭಾವ, ಉದ್ವೇಗದಿಂದ ಶಪಿಸಿದ್ದು, ದು:ಖ ಮತ್ತು ಕರುಣಾ ರಸಗಳ ಸ್ಥಾಯಿಯಾಗಿ ವರ್ತಿಸಿದ್ದು ಮನಸ್ಸು. ಈ ಮನಸ್ಸಿನಲ್ಲಿ ಮೂಡಿದ ಭಾವದಿಂದಾಗಿಯೇ ವಾಲ್ಮೀಕಿಗೆ ಒಂದು ಅದ್ಭುತ ಮಹಾಕಾವ್ಯವನ್ನು ಬರೆಯಲು ಪ್ರೇರಣೆಯಾಯಿತು. ಒಟ್ಟಾರೆಯಾಗಿ ವ್ಯಕ್ತಿಯೊಬ್ಬನಲ್ಲಿ ಉಂಟಾಗುವ ಅನುಭವದ ಸಾತತ್ಯ, ಇದರಿಂದ ವ್ಯಕ್ತಿ ತನ್ನ ಅನುಭದಲ್ಲಿ ಕಂಡುಕೊಂಡ ಪೂರ್ಣದೃಷ್ಟಿ ‘ಅನುಭಾವ’ವನ್ನು ತಂದುಕೊಡಬಲ್ಲದು.

‘ಅನುಭಾವ’ ಎಂಬ ಪದ 12ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ‘ವಚನಕಾರರು’ ತಮ್ಮ ಅನುಭವಾತ್ಮಕ ಚಿಂತನೆಗಳ ಚರ್ಚೆಗಳ ನಿಲುವುಗಳಿಗೆ ಕಂಡುಕೊಂಡ ಒಂದು ಪಾರಿಭಾಷಿಕ ಪದ.

ಅನುಭಾವ ಅನುಭಾವ ಎಂದೆಂಬಿರಿ

                        ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣೀಭೋ !

                        ಅನುಭಾವವೆಂಬುದು ಶಿಶುಕಂಡ ಕನಸು ಕಾಣಿಭೋ !

                        ಅನುಭಾವವೆಂಬುದು ಅಂತರಂಗದ ರತ್ನ ಕಾಣಿಭೋ !

                        ಅನುಭಾವವೆಂಬುದು ರಚ್ಚೆಯ ಮಾತೆ

                        ಅನುಭಾವವೆಂಬುದು ಸಂತೆಯ ಸುದ್ದಿಯೇ

ಅನುಭಾವವೆಂಬುದು ಬೀದಿಯ ಪಸರವೇ

ಏನೆಂಬೆ ಹೇಳಾ ಮಹಾ ಘನವನು

                        ಆನೆಯ ಮಾನದೊಳಿಕ್ಕಿದಡಡಗುವುದೆ ದರ್ಪಣದೊಳಡಗುವುದಲ್ಲದೆ    -ಚನ್ನಬಸವಣ್ಣ (3)

            ಶ್ರಮಸಂಸ್ಕೃತಿ ಹಿನ್ನೆಲೆಯ ಶರಣರ ಆಲೋಚನೆ ಅನುಭವದಿಂದ ಪಡೆದ ಬದುಕಿನ ಸಾತತ್ಯವನ್ನು ಗ್ರಹಿಸಿ ಸತ್ಯದ ಕಡೆ ತಮ್ಮ ತನುಮನವನ್ನು ತರಬೇತುಗೊಳಿಸಿಕೊಳ್ಳುವುದಾಗಿದೆ. ವಚನಕಾರರಾದ ಚನ್ನಬಸವಣ್ಣನವರು ‘ಅನುಭಾವ’ ಎನ್ನುವ ಪದ ನಮ್ಮ ದೃಷ್ಟಿಗೆ, ಕಣ್ಣಿನ ನೋಟಕ್ಕೆ ಕಾಣದೇಯಿರುವ ಭೂಮಿಯ ಚಲನೆಯು ಹೇಗೆ ಸದಾ ಚಲನೆಯ ಸ್ಥಿತಿಯಲ್ಲಿರುತ್ತದೆಯೋ ಹಾಗೆಯೇ ಅನುಭಾವ ಎನ್ನುವ ಪದ ಜನರ ನಡುವೆ ಚಾಲ್ತಿಯಲ್ಲಿದ್ದರೂ ಅದು ಅರಿವಿದ್ದವಗೆ, ಕಂಡುಕೊಂಡವಗೆ ಮಾತ್ರ ಗೋಚರವಾಗುವ ಭಾವಸ್ಥಿತಿ. ಹಾಗೂ ಜನನದ ನಂತರದಲ್ಲಿ ಶಿಶು ಭೌತಿಕಜಗತ್ತಿನ ಯಾವ ಪರಿವೆಯೂ ಇಲ್ಲದೆ, ಮಲಗಿರುವಾಗ ತನ್ನ ತುಟಿಯ ಚಲನೆಯ ಮೂಲಕ ನಗು ಸೂಸುತ್ತದೆ. ಜೊತೆಗೆ ಕಣ್ಣಿನ ಚಲನೆ ಮಗುವಿನ ಕನಸು ಕಾಣುತ್ತಿರುವ ರೀತಿಯನ್ನು ನಮಗೆ ಗೋಚರವಾಗಿಸುತ್ತದೆ. ಆದರೆ ಶಿಶು ಕಂಡ ಕನಸು ಶಿಶುವಿನ ಅನುಭವಕ್ಕೆ ಬರುತ್ತದೆಯೇ ಹೊರತು ಇತರರಿಗೆ ಅಲ್ಲ. ಅದನ್ನೇ ವಚನಕಾರರು ವರ್ಣಿಸಲಾಗದ, ಅಳತೆಗೆ ನಿಲುಕದ ಭಾವದ ಸ್ಥಿತಿಯನ್ನು ‘ಅನುಭಾವ’ ಎಂದು ಕರೆದಿದ್ದಾರೆ.

ಮನುಷ್ಯ ಭೌತಿಕವಾಗಿ ಬಾಹ್ಯ ಪ್ರಪಂಚದೊಟ್ಟಿಗೆ ವ್ಯವಹರಿಸಿದಾಗ್ಯೂ, ತನ್ನೊಳಗಿನ ಭಾವ ಪ್ರಪಂಚದ ಚಿಂತನ, ಧ್ಯಾನಗಳೊಡನೆ ಏಕಕಾಲದಲ್ಲಿ ಮುಖಾಮುಖಿಯಾಗುತ್ತಿರುತ್ತಾನೆ. ಇಂತಹ ಅಂತರಂಗದ ಪಾರಮಾರ್ಥಿಕ ಆಲೋಚನೆಗಳು ಮನುಷ್ಯನನ್ನು ಸರಳ ಜೀವಿಯಾಗಿಯೂ, ಸಂತನಂತೆಯೂ, ಉತ್ತಮ ಗುಣವುಳ್ಳವನಂತೆಯೂ  ಬದುಕಿಸುತ್ತವೆ. ಈ ನೆಲದ ಬದುಕಿಗೆ ಜೀವಸೆಲೆಗಳ ಭಾವಾಭಿವ್ಯಕ್ತಿಯಾಗಿಯೂ ಕೂಡ ಲೋಕದ ಹಿತ ಬಯಸುತ್ತದೆ. ಅದು ಅಂತರಂಗದ ರತ್ನ ಎಂದು ಹೇಳಿದ್ದಾರೆ.

 ಘನವಾದ ಮಹತ್ತಾದ ವಿಚಾರವನ್ನು ಬೀದಿಯಲ್ಲಿ ನಿಂತು ಹರಟುವಂತೆ ಆಡಲು ಬರುವುದಿಲ್ಲ. ಸಂತೆಯಲ್ಲಿ ಆಡಿದ ಯಾವ ಮಾತುಗಳು ಆ ಕ್ಷಣಕ್ಕೆ ಮಾತ್ರ ವ್ಯಾಪಾರದ ಮಾತುಗಳಾಗಿರುತ್ತವೋ ಹಾಗೆ ಆತುರಕ್ಕೆ, ಆಕ್ಷಣಕ್ಕೆ ಆಡಿದ ಮಾತುಗಳಂತೆ ‘ಅನುಭಾವ’ವನ್ನು ಗುರುತಿಸಲಾಗದು. ಅನುಭಾವದ ವಿಚಾರವು ತಾತ್ವಿಕವೂ ಘನವೂ, ಘಹನವೂ ಆದದ್ದು. ಆದುದರಿಂದ ‘ಆನೆಯಮಾನದೊಳಿಕ್ಕಿದೊಡಡಗುವುದೇ’ ಎನ್ನುವ ಮಾತು ಇಲ್ಲಿ ಹೆಚ್ಚು ಪರಿಣಾಮಕಾರಿಯಾದ ರೂಪಕವಾಗಿದೆ. ದೊಡ್ಡ ದೊಡ್ಡ ಮಾತುಗಳಿಂದ ಅನುಭಾವದ ಮಹತ್ತನ್ನು ಅಳೆಯಲು ಸಾಧ್ಯವಿಲ್ಲ. ಹೇಗೆ ದರ್ಪಣದಲ್ಲಿ ರೂಪವನ್ನು ಪ್ರತಿಬಿಂಬಿಸಬಹುದೋ ಹಾಗೆ ನಿರ್ಮಲವಾದ, ಪಾರದರ್ಶಕವಾದ ನೈತಿಕ ಶುದ್ಧಿಯ ಮನಸ್ಸಿನಲ್ಲಿ ‘ಅನುಭಾವ’ವನ್ನು ಪ್ರತಿಬಿಂಬಿಸಲು ಸಾಧ್ಯವಿದೆ ಎನ್ನುವುದು ಚೆನ್ನಬಸವಣ್ಣನವರ ನಿಲುವು. ಇದು ಸತ್ಯವೂ ಕೂಡಾ ಆಗಿದೆ.

            ಅನುಭಾವ ಎಂಬ ಪದವನ್ನು ನಾವು ಗ್ರಹಿಸುವಾಗ ಕೆಲವರು ಮಾತ್ರ ಅನುಭಾವಿಗಳಾಗುತ್ತಾರೆ. ಅನುಭಾವಿಗಳಾಗುವುದಕ್ಕೆ ಸಂಸಾರ ಬಂಧನಗಳಿಂದ ಮುಕ್ತಿಹೊಂದಿ ಸನ್ಯಾಸಿಗಳು ಪಡೆಯುವ ಜ್ಞಾನ ಎಂದು ಹೆಚ್ಚಾಗಿ ಭಾವಿಸುತ್ತೇವೆ. ಅದು ಅಕ್ಷರಶ: ತಪ್ಪು. ಏಕೆಂದರೆ ನಮಗೆ ನಮ್ಮ ನೆಲದ ಶರಣರ ನಿದರ್ಶನಗಳು, ಯಾರು ಬೇಕಾದರೂ ಅನುಭಾವಿಗಳಾಗಬಹುದು, ಅದಕ್ಕೆ ಪರಿಶ್ರಮ ಮುಖ್ಯ ಎನ್ನುವುದನ್ನು ನಿರೂಪಿಸುತ್ತವೆ ಇದಕ್ಕೆ ಪೂರಕವಾಗಿ ಕನ್ನಡದ ಅನುಭಾವಿ ಪರಂಪರೆಯ ಕುರಿತಾಗಿ ತತ್ವಜ್ಞಾನಿ ಡಾ.ಆರ್.ಡಿ.ರಾನಡೆಯವರು ಬರೆದಿರುವ “ಕನ್ನಡ ಸಂತರ ಪರಮಾರ್ಥ ಪಥ” ಎನ್ನುವ ಗ್ರಂಥವು ಅನುಭಾವಿಗಳ ಲಕ್ಷಣದ ಕುರಿತು ಹೆಚ್ಚು ಮಾಹಿತಿಗಳನ್ನು ಒದಗಿಸುತ್ತದೆ.

                        “ಅನುಭಾವವು ಮಾನವತೆಯನ್ನು ಒಂದೂಗೂಡಿಸುವ ಆಧ್ಯಾತ್ಮಿಕ ಜೀವನದ ಒಂದು ಬಗೆ. ಅನಂತಶಕ್ತನನ್ನು ಕಂಡುಕೊಳ್ಳಲು ಸೂಚಿಸುವ ಸಾಧನಗಳನ್ನು ಬರಿ ಅರಿತುಕೊಂಡರೆ ಸಾಲದು, ಈ ದರ್ಶನಗಳ, ಧರ್ಮಗಳ ಹಿನ್ನೆಲೆಯನ್ನು ವಿಭಜಿಸುವುದೂ ಅವಶ್ಯಕ. ಅನುಭಾವ ಎನ್ನುವ ಪದ ಪ್ರತಿಭೆಯನ್ನು ಸೂಚಿಸುವ ಹಾಗೂ ಅದನ್ನು ಒಳಗೊಂಡ ಪಾರಮಾರ್ಥಿಕ ಜ್ಞಾನದ ಸಾಕ್ಷಾತ್ಕಾರದ ದರ್ಶನ. ಇಂತಹ ಪ್ರತಿಭಾಶಕ್ತಿ ಅಂತ:ಪ್ರಜ್ಞೆಯಿಂದ ಬರುತ್ತದೆ. ಇಲ್ಲಿ ಬುದ್ಧಿ, ಭಾವನೆ, ಸಂಕಲ್ಪಶಕ್ತಿಗಳು ಬಹುಮುಖ್ಯವಾದವುಗಳು” ಎಂದು ಹೇಳಿದ್ದಾರೆ. ಈ ಪ್ರತಿಭಾಶಕ್ತಿಯನ್ನು ಅಕ್ಷರಸ್ಥರು, ಅನಕ್ಷರಸ್ಥರು ಎಂದು ವಿಭಜಿಸದೆ ಎಲ್ಲಾ ಮನುಷ್ಯರಲ್ಲೂ ಸಾಮಾನ್ಯವಾಗಿ ಕಾಣಬಹುದು. ಆದರೆ ಪ್ರತಿಭಾಶಕ್ತಿಯಿಂದ ಮುನ್ನಡೆಯುವ ಸಂಕಲ್ಪಶಕ್ತಿ ಮಾತ್ರ ವ್ಯಕ್ತಿ ತನ್ನ ಸ್ವಂತ ಶ್ರಮದಿಂದ ಪಡೆದುಕೊಳ್ಳಬೇಕಾಗುತ್ತದೆ ಎಂಬುದು ಇಲ್ಲಿ ಬಹಳ ಮುಖ್ಯವಾದ ಅಂಶ.

            ಅನುಭಾವಿ ಎಂದರೆ ಯಾರು ?  ಎನ್ನುವ ಪ್ರಶ್ನೆಯನ್ನು ಕೇಳಿಕೊಂಡಾಗ ಮೇಲ್ಕಂಡ ಎಲ್ಲಾ ದಾರ್ಶನಿಕರ ನಿರೂಪಣೆಗಳಿಂದ ನಮಗೆ ವೇದ್ಯವಾದರೂ ಅನುಭಾವಿ ಸರಳ ಜೀವಿಯಾಗಿರುತ್ತಾನೆ, ತಾನು ಪಡೆದ ಎಲ್ಲಾ ಜ್ಞಾನವನ್ನು ಸಮಾಜಕ್ಕೆ ನೀಡಿ ಸಮಾಜವನ್ನು ಸಮಾನತೆಯ ಮನುಷ್ಯತ್ವದ ನೆಲೆಬೀಡಾಗಿ ಮಾಡುವುದು ಆತನ ಉದ್ದೇಶವಾಗಿರುತ್ತದೆ. ಸಾಮಾನ್ಯನೂ ಅನುಭಾವಿಯ ಮಟ್ಟಕ್ಕೆ ತಲುಪಬಹುದು. ಸಾಮಾನ್ಯವ್ಯಕ್ತಿ ತನ್ನ ನಿತ್ಯದ ಬದುಕಿನಲ್ಲಿ ದು:ಖವಿದೆ, ಸುಖ ಬರುವುದೇಯಿಲ್ಲ ಎಂದು ಭಾವಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕವಿ ‘ಮಧುರಚೆನ್ನರು’ ದು:ಖವನ್ನು ಕುರಿತು “ ದು:ಖವಿಲ್ಲದಿದ್ದರೆ ಮಾನವನ ಆತ್ಮೋನ್ನತಿಯೇ ಆಗುತ್ತಿರಲಿಲ್ಲ. ಸ್ವೇಛ್ಛಾಚಾರಿಯಾಗಬೇಕೆಂಬ ಮಾನವನ ಪ್ರಾಣಿತ: ಸ್ವಭಾವನ್ನು ದಮನಮಾಡಲಿಕ್ಕೆ, ದೋಷವನ್ನು ತಡೆಯಲಿಕ್ಕೆ ದು:ಖದ ಅವಶ್ಯಕತೆಯಿದೆ. ಆಯಾಸವಿಲ್ಲದ ಸುಖವನ್ನು ಬಯಸುವ, ಶ್ರಮವಿಲ್ಲದೆ ಅನ್ಯರ ಲಾಭವನ್ನು ಅಪಹರಿಸಿಕೊಂಡು ಬದುಕುವ ತಮೋಮಯ ಬದುಕನ್ನು ಅಡ್ಡಗಟ್ಟಿ, ಬದುಕಿಗೆ ಧೀರತೆಯನ್ನೂ ತೇಜಸ್ಸನ್ನೂ ತಂದುಕೊಡುವುದು ದು:ಖದ ಉದ್ದೇಶವಾಗಿದೆ. ದು:ಖದ ಹೊಡೆತದಿಂದ ಬದುಕು ಜರ್ಜರಿತವಾದಂತೆ ಕಾಣುವುದೇನೋ ನಿಜ, ಆದರೆ ಅದು ಮುಂದಿನ ಬಲದ ಬೀಜವಾಗಿದೆ. ಅಂತೆಯೇ ಮಾನವ ಜೀವನದ ಉನ್ನತಿಗಾಗಿಯೇ ಸೃಷ್ಟಿಯು ದು:ಖವೆಂಬ ಪರಮೋಪಾಯವನ್ನು ಯೋಜಿಸಿದೆ”(4) ಎಂದು ಹೇಳಿದ್ದಾರೆ.

            ಅನುಭಾವಿಗಳ ಆಲೋಚನೆ ಈ ರೀತಿಯಾದದ್ದು. ಅನುಭಾವಿಗಳ ಭಾಷೆ ಕೂಡಾ ಅಂತ್ಯದಿಂದಲೇ ಆರಂಭವಾಗುವ ವಿಶಿಷ್ಟ ರೀತಿಯದು. ಮಧುರಚೆನ್ನರ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ‘ಬೇಂದ್ರೆ’ಯವರು ಹೇಳಿದ್ದು “ಚನ್ನಮಲ್ಲಪ್ಪನನ್ನು ಹೂತಿಲ್ಲ ಬಿತ್ತಿದ್ದೇವೆ”- ಈ ಬಿತ್ತುವಿಕೆಯೇ ಅಧ್ಯಾತ್ಮ ಜೀವನದ ಉದ್ದೇಶ ಹಾಗೂ ಅನುಭಾವಿಗಳ ಧನಾತ್ಮಕ ಅಭಿವ್ಯಕ್ತಿ. ಸಾವು ಎನ್ನುವ ಶಬ್ದವನ್ನು ಅನುಭಾವಿಗಳು ತಮ್ಮ ಪರಿಭಾಷೆಯಲ್ಲಿ ಬಳಸುವ ರೀತಿಯನ್ನು ಗಮನಿಸಿದಾಗ  ‘ಶಿಶುನಾಳ ಶರೀಫರು’ “ಬಿಡತೇನಿ ದೇಹ ಬಿಡತೇನಿ” ಎಂದು ಹೇಳುವ ಈ ಮಾತು ಹಾಗೂ ನಮ್ಮ ಜನಪದರಲ್ಲಿ “ಸಂತೆ ತೀರಿತು, ಕಂತೆ ಒಗೆದ” ಎನ್ನುವ ಮಾತು ಅನುಭಾವಿಗಳ ಭಾವನೆಗಳು ಎಂದೂ ಅಂತ್ಯವನ್ನು ಸೂಚಿಸುವುದೇಯಿಲ್ಲ ಎಂಬುದನ್ನು ಸೂಚಿಸುತ್ತವೆ. ಅನುಭಾವಿಗಳ ದೃಷ್ಟಿಯಲ್ಲಿ ಸಾವು ಎನ್ನುವುದು ಭೌತಿಕ ದೇಹದ ವಿಸರ್ಜನೆಯೇ ಹೊರತು ಆತ್ಮದ ಅಂತ್ಯವಲ್ಲ. ಅದು ಅಂತ್ಯವೆನ್ನುವ ಲೌಖಿಕ ಬದುಕಿನಿಂದಾಚೆಗೆ ವಾಸ್ತವದಲ್ಲಿ ಚಿಗುರಲ್ಪಟ್ಟ ಒಂದು ಭಾವದ ಸ್ಥಿತಿ. ಹೀಗೆ ಅನುಭಾವಿಗಳು ದೇವರು-ಧರ್ಮ ಹುಟ್ಟು-ಸಾವು ಎನ್ನುವ ಪದಗಳಿಗೆ ಹೊಸಹುಟ್ಟನ್ನು ನೀಡಿದವರು. ಕೆಲವೇ ಕೆಲವರ ಸ್ವತ್ತೆಂದು ಭಾವಿಸುವ ಪ್ರಕೃತಿಯ ಅನಂತಶಕ್ತಿಯನ್ನು ಎಲ್ಲರದೂ ಎಂದು ಪ್ರತಿಪಾದಿಸಿದವರು, ಈ ಜಗತ್ತಿನಲ್ಲಿ ನಾನು ಏನು ಅಲ್ಲ ಎಂದು ಬದುಕುವ ವ್ಯಕ್ತಿಗಳ ಕೀಳರಿಮೆಯನ್ನು ಹೋಗಲಾಡಿಸಿ ಆತ್ಮದ ಘನತೆಯನ್ನು ಸಾರಿದವರು ಅನುಭಾವಿಗಳು.

            ಹೀಗೆ ಕನ್ನಡ ಸಾಹಿತ್ಯದಲ್ಲಿ ಅನುಭಾವಿ ಕವಿಗಳೆನಿಸಿಕೊಂಡ ಬೆಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳು ‘ಅನುಭಾವ ಸಾಹಿತ್ಯ’ದ ವಿಪುಲ ಆಗರಗಳಾಗಿವೆ. ಅನುಭಾವ ಎನ್ನುವ ಪದ, ಅನುಭಾವಿ ಎನ್ನುವ ವ್ಯಕ್ತಿತ್ವ, ಇಂದಿನ ಜಾಗತಿಕರಣದ ಬದುಕಿನಲ್ಲಿ ನಿರ್ಜೀವ ಭಾವನೆಗಳಲ್ಲಿ ಬದುಕುತ್ತಿರುವ ಜನರಿಗೆ ಸತ್ವಯುತವಾದ ಧೀರತೆಯ ಬದುಕನ್ನು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮನುಷ್ಯನ ಬದುಕಿನ ನೈತಿಕ ಎತ್ತರವನ್ನು ಗಳಿಸಿಕೊಡುವ ಮಾರ್ಗವಾಗಿವೆ. ಇಂತಹ ವ್ಯಕ್ತಿತ್ವವನ್ನು ಕನ್ನಡದ ಶ್ರೇಷ್ಠ ಸಾಹಿತಿಗಳಾದ ಬೇಂದ್ರೆ ಮತ್ತು ಮಧುರಚನ್ನರ ಕಾವ್ಯದ ಓದು ನಮ್ಮ ಬದುಕಿಗೆ ಬನಿಕೊಡಬಲ್ಲದು ಎಂಬುದು ನನ್ನ ಸಂಶೋಧನೆಯಲ್ಲಿ ನಾನು ಕಂಡುಕೊಂಡ ಕಾಣ್ಕೆ.

ಸಂಖ್ಯಾ ಟಿಪ್ಪಣಿಗಳು

  1. ಮರ್ಯಾದೆ, ದ.ರಾ.ಬೇಂದ್ರೆ : ಪುಟ-58.
  2. ನನ್ನ ನಲ್ಲ , ಮಧುರಚೆನ್ನ : ಪುಟ-21.
  3. ಅಂತರಂಗದ ರತ್ನ, ಗುರುಲಿಂಗ ಕಾಪಸೆ ಅಭಿನಂದನಾ ಗ್ರಂಥ : ಪುಟ-163.
  4. ಆತ್ಮಶೋಧ, ಮಧುರಚೆನ್ನ : ಪುಟ – 216.

ಪರಾಮರ್ಶನ ಗ್ರಂಥಗಳು

  1. ಅಮೃತ ಮತ್ತು ಗರುಡ: ಶ್ರೀ ಡಿ.ಆರ್.ನಾಗರಾಜ್,ಅಕ್ಷರ ಪ್ರಕಾಶನ. ಹೆಗ್ಗೋಡು,ಸಾಗರ,ಕರ್ನಾಟಕ.2009.
  2. ಔದುಂಬರ ಗಾಥೆ : [ಡಾ.ದ.ರಾ. ಬೇಂದ್ರೆಯವರ ಸಮಗ್ರ ಕಾವ್ಯ ಸಂಪುಟಗಳು]
    1. ಶ್ರೀ ವಾಮನ ಬೇಂದ್ರೆ. ಡಾ.ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ, ಹುಬ್ಬಳ್ಳಿ.2003.
  3. ಕೃತಿ ಕಥನ:.ಮಲ್ಲೇಪುರಂ ಜಿ. ವೆಂಕಟೇಶ, ಉದಯ ಪ್ರಕಾಶನ, ರಾಜಾಜಿನಗರ ಬೆಂಗಳೂರು. 2016.
  4. ಬೇಂದ್ರೆ ಕಾವ್ಯ: ಅವಧೂತ ಪ್ರಜ್ಞೆ: ಡಾ.ಗೀತಾವಸಂತ.
    1. ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್,  ಪ್ರಸಾರಾಂಗ, ಧಾರವಾಡ, 2010.
  5. ಮಧುರಚೆನ್ನ [ಜೀವನ ಹಾಗೂ ಕೃತಿಗಳ ಸಮೀಕ್ಷೆ]: ಡಾ.ಜಿ.ಎಸ್.ಕಾಪಸೆ. ಪ್ರಸಾರಾಂಗ,
    1. ಕರ್ನಾಟಕ  ವಿಶ್ವವಿದ್ಯಾಲಯ,  ಧಾರವಾಡ,  1976.
  6. ಅಂತರಂಗದ ರತ್ನ [ಗುರುಲಿಂಗ ಕಾಪಸೆ ಅಭಿನಂದನಾ ಗ್ರಂಥ]: ಸಂ-ಪೆÇ್ರ.ಎನ್.ಜಿ.ಕರೂರ
    1. ಡಾ.ಗುರುಲಿಂಗ ಕಾಪಸೆ ಅಭಿನಂದನಾ ಸಮಿತಿ, ಹಲಸಂಗಿ, ಧಾರವಾಡ, 2001.
  7. ಉತ್ತರ-ದಕ್ಷಿಣ [ಬೇಂದ್ರೆ-ಕುವೆಂಪು ವ್ಯಕ್ತಿತ್ವ ಮತ್ತು ಕವಿತೆಗಳ ತೌಲನಿಕ ಅಧ್ಯಯನ] ಡಾ.ಎನ್.ಜಗದೀಶ್ ಕೊಪ್ಪ. ಡಾ.ದ.ರಾ., ಧಾರವಾಡ, 2014.
  8. ಬೆಳಕಿನ ಹಕ್ಕಿ: [ಬೇಂದ್ರೆ ನಿಸರ್ಗ ಕಾವ್ಯ: ಅನುಭೂತಿ ಹಾಗೂ ಅಭಿವ್ಯಕ್ತಿ]
    1. ಡಾ. ಬಸು ಬೇವಿನಗಿಡದ, ಸುಂದರ ಪ್ರಕಾಶನ, ಧಾರವಾಡ, 2013.
  9. ಸಾಹಿತ್ಯದ ವಿರಾಟ್‍ಸ್ವರೂಪ: ಡಾ.ದ.ರಾ.ಬೇಂದ್ರೆ, ಸಮಾಜ ಪುಸ್ತಕಾಲಯ, ಧಾರವಾಡ, 1974.
  10. ನೂರು ಮರ ನೂರು ಸ್ವರ : ಕೀರ್ತಿನಾಥ ಕುರ್ತಕೋಟಿ. ಕನ್ನಡ ವಿಶ್ವವಿದ್ಯಾಲಯ, ಹಂಪಿ, 1998.
  11. ಯೋಗ ಪರಂಪರೆಗಳು: (ಅನು)-ಲಕ್ಷ್ಮೀಕಾಂತ ಹೆಗಡೆ.
    1. ಶ್ರೀ ಅರಬಿಂದೋ ಕಪಾಲಿಶಾಸ್ತ್ರ ವೇದ ಸಂಸ್ಕೃತಿ ಸಂಸ್ಥೆ, ಬೆಂಗಳೂರು-2012.
  12. ಬರಹದಲ್ಲಿ ಬೇಂದ್ರೆಯವರ ಬದುಕು: ಡಾ.ಜಿ.ಕೃಷ್ಣಪ್ಪ
    1. ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಪ್ರಸಾರಾಂಗ, ಧಾರವಾಡ, 2008.
  13. ಕಂಪಿನ ಕರೆ : ಶ್ರೀ ಗೌರೀಶ್ ಕಾಯ್ಕಿಣಿ
    1. ಡಾ.ದ.ರಾ. ಬೇಂದ್ರೆ ರಾಷ್ಟ್ರಿಯ ಸ್ಮಾರಕ ಟ್ರಸ್ಟ್, ಪ್ರಸಾರಾಂಗ, ಧಾರವಾಡ, 2011.   
  14. ಗಾಳಿ ಹೆಜ್ಜೆ ಹಿಡಿದ ಸುಗಂಧ : ಡಾ.ವಸಂತ ದಿವಾಣಜಿ
    1. ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, 2001.
  15. ಮಧುರಚೆನ್ನರ ಜೀವನ ಅನುಭಾವ ಮತ್ತು ಕೃತಿ ಸಂಪದ  : ಪೆÇ್ರ.ಆರ್.ಜಿ.ಕುಲಕರ್ಣಿ
    • ಡಾ.ದ.ರಾ ಬೇಂದ್ರೆ ಸ್ನೇಹ ಮಂಡಲ, ಬೆಂಗಳೂರು, 1994.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal