Tumbe Group of International Journals

Full Text


ವಚನಗಳ ಕಾವ್ಯಭಾಷೆ

ಕಲ್ಪನ  ಪಿ

ಸಹಾಯಕ ಪ್ರಾಧ್ಯಾಪಕರು

ಕನ್ನಡ ವಿಭಾಗ

ಸ.ಪ್ರ.ದ. ಕಾಲೇಜು, ತಿಪಟೂರು.

            ಕನ್ನಡ ಸಾಹಿತ್ಯದ ಒಂದು ವಿಶಿಷ್ಟವಾದ ಪ್ರಕಾರ ವಚನ ಸಾಹಿತ.್ಯ ವಚನಗಳು ತಮ್ಮ ರೂಪ ಮತ್ತು ಸ್ವರೂಪದಿಂದ ಕನ್ನಡ ಸಾಹಿತ್ಯ ಭಂಡಾರದ ಅಮೂಲ್ಯ ರತ್ನಗಳಾಗಿ ವಿಶ್ವಸಾಹಿತ್ಯದ ದೃಷ್ಟಿಯಿಂದ ಕನ್ನಡದ ಬೆಲೆಯನ್ನು ಹೆಚ್ಚಿಸಿವೆ. ಸಂಸ್ಕøತದ ಹಿರಿಮೆ ಸಡಿಲಿ ಕನ್ನಡದ ಹೆಚ್ಚಳ ಬೆಳೆದುದು ಈ ವಚನ ಸಾಹಿತ್ಯದಿಂದ ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೇರಿಸಿದವರು ಶರಣರು.

      ವಚನಗಳ ಸ್ವರೂಪವೆಂದರೆ ವಚನಕಾರರ ಮನಸ್ಸಿನ ಸ್ವರೂಪ. ದೈವಶಕ್ತಿಯನ್ನೇ ಕುರಿತ ಅವರ ಹಂಬಲ, ಪ್ರಾರ್ಥನೆ, ಭಕ್ತಿಯ ಭಾವಗಳು, ತಾವುಕಂಡ ಸತ್ಯ ಸ್ವರೂಪವನ್ನು ಇತರರಿಗೂ ಪರಿಚಯ ಮಾಡಿಕೊಡುವ ಲೋಕಕಾರುಣ್ಯ ಇವೆಲ್ಲವನ್ನು  ವಚನಗಳ ರೂಪದಲ್ಲಿ ಕಾಣುತ್ತೇವೆ, ಶರಣರ ಜೀವನ ಬಹುಮುಖವಾದದ್ದು, ಒಂದು ಕಡೆ ಧರ್ಮದ ಬೆಳಕನ್ನು ಹೊತ್ತ ದೀವಟಿಗರು, ಕ್ರಾಂತಿಕಾರರು, ಈ ಎಲ್ಲ ಮುಖಗಳಿಂದ ನೂರಾರು ಅನುಭವಗಳನ್ನು ಪಡೆದು ಅದೆಲ್ಲದರ ಪ್ರಭಾವವನ್ನು  ವಚನಗಳ ಮೂಲಕ ತಿಳಿಸುತ್ತಾರೆ, ತಮ್ಮ ಅನುಭವಗಳನ್ನು ಅಭಿವ್ಯಕ್ತಗೊಳಿಸುಲು ಅನಿವಾರ್ಯ ಸಾಧನವಾಗಿ ಅವರು ಅಲಂಕಾರಗಳನ್ನು ಉಪಯೋಗಿಸುತ್ತಾರೆ.ವಚನಗಳು ಉತ್ತಮ ಕಾವ್ಯ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಉತ್ತಮ ಸಾಹಿತ್ಯ ಗ್ರಂಥಗಳಾಗಿವೆ.

      ಆಡಿದ ಮಾತು ಸಾಹಿತ್ಯವಾಗಿ ಪರಿಣಮಿಸುವುದು ಆಳವಾದ ಮತ್ತು ತೀವ್ರವಾದ ಅನುಭವದಿಂದ ಜನ್ಯವಾದಾಗ, ಶರಣರು ಕಾವ್ಯವನ್ನು ಬರೆಯಲು ಹೊರಟ ಕವಿಗಳಲ್ಲ, ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ತೊಡಗಿದವರಲ್ಲ, ಅವರು ಬರೆದ ಕಾವ್ಯ  ಜೀವನಕಾವ್ಯ. ಜೀವನ ಸೌಂದರ್ಯವೇ ಕಾವ್ಯವಾಯಿತು, ಅವರ ನುಡಿಯಲ್ಲಿ ಅವರು ವರ್ಣಿಸಿದುದು ಬಾಹ್ಯ ಪ್ರಪಂಚದ ಪ್ರಕೃತಿ ಸೌಂದರ್ಯವನ್ನಲ್ಲ ಅಂತರಂಗದ ಆತ್ಮ ಸೌಂದರ್ಯವನ್ನು ಸಂಸಾರದ ಅನಿತ್ಯತೆ, ನಿಸ್ವಾರತೆ ಮನಸ್ಸಿನ ಚಂಚಲತೆ, ಕ್ಷುದ್ರತೆ, ಆಡಂಬರದ ಭಕ್ತಿ, ಅಂತರಂಗದ ಶುದ್ಧ ಭಕ್ತಿಯ ಮಹತ್ವ ಈ ಮೊದಲಾದವುಗಳೆಲ್ಲ ಕುರಿತು ವಿಚಾರ ಮಾಡಿದ್ದಾರೆ. ಶರಣರ ಅಪಾರ ಅನುಭವಗಳ ಅಡಕಗಳು ಈ ವಚನಗಳು. ಕಿರಿದರಲ್ಲಿ ಹಿರಿದರ್ಥ ನೀಡುವಂತೆ ಶಕ್ತಿಯುತ ಭಾಷೆಯನ್ನು ಬಳಸಿ ಕನ್ನಡ ಸಾಹಿತ್ಯ ವಾಹಿನಿಯ ಒಂದು ಉಜ್ವಲ ಘಟ್ಟವಾಗಿ ಶರಣಸಾಹಿತ್ಯ ಪರಿಣಮಿಸಿತು. ವಚನಕಾರರಲ್ಲಿ ಹಲವರು ಒಳ್ಳೆಯ ಶಿವಾನುಭವಿಗಳು, ಒಳ್ಳೆಯ ಲೋಕಾನುಭವಿಗಳು, ಅಲ್ಲಮಪ್ರಭು, ಬಸವಣ್ಣ, ಮಹಾದೇವಿಯಕ್ಕ, ಸಿದ್ಧರಾಮ ಮತ್ತು ಚೆನ್ನಬಸವಣ್ಣ ಇವರ ವಚನಗಳಲ್ಲಿ ಒಳಗಿನ ಮತ್ತು ಹೊರಗಿನ ಅನುಭವಗಳು ಚೆನ್ನಾಗಿ ಕಾಣುತ್ತವೆ. ಗಾದೆಗಳಂತೆ ಮಾತುಗಳನ್ನು ಹೊಂದಿಸಿ ಅರ್ಥಗರ್ಭಿತವಾಗಿ ದಾಸಿಮಯ್ಯ ಹೇಳುತ್ತಾನೆ. ‘ಜ್ವರವಿಡಿದ ಬಾಯಿಗೆ ನೊರೆಹಾಲು ಒಲಿವುದೆ’ , ‘ಅನುಭಾವವಿಲ್ಲದವನ ಭಕ್ತಿ ತಲೆಕೆಳಗಪ್ಪುದಯ್ಯ’ ಇಲ್ಲ್ಲಿ ಕಾವ್ಯ ಸೌಂದರ್ಯದ ಜೊತೆಗೆ ಅರ್ಥ ಪರಿಪೂರ್ಣತೆಯನ್ನು ನೋಡಬಹುದು.

 

  ವ್ಯಕ್ತಿಯ ಅಂತರಂಗವನ್ನು ಕುರಿತಂತೆ ಕಾವ್ಯಾತ್ಮಕವಾಗಿ ಈ ವಚನಗಳಲ್ಲಿ ತಿಳಿಸುತ್ತಾರೆ. ‘ಕಪ್ಪೆ ಸರ್ಪನ ನೆರಳಿನಲ್ಲಿರ್ಪಂತೆ’, ಹರಕೆಗೆ ತಂದ ಕುರಿ ತೋರಣಕ್ಕೆ ಕಟ್ಟಿದ ತಳಿರ ಮೇಯಿತ್ತು’, ‘ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆಮಾಡುವಂತೆ’, ಮುಂತಾದ ಉಪಮೆಗಳು ಕಾವ್ಯ ಸೌಂದರ್ಯವನ್ನು ಹೆಚ್ಚೆಸುವುದರ ಜೊತೆಗೆ ಸಂಸಾರದ ಅನಿತ್ಯತೆಯನ್ನು ನಿರೂಪಿಸುತ್ತವೆ.

ತ್ರಿಭುವನವೆಂಬ ಪಂಜರದೊಳಗೆ ಸಂಸಾರ ಚಕ್ರದಲ್ಲಿ

ಹೊನ್ನು ಪ್ರಾಣವೇ ಪ್ರಾಣವಾÀಗಿ

ಹೆಣ್ಣು ಪ್ರಾಣವೇ ಪ್ರಾಣವಾಗಿ

ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿದರೂ ಈ ಭುವನವೆಂಬುದಂದು ಪಂಜರ, ಈ ಸಂಸಾರದ ಸ್ವರೂಪವನ್ನು ವಿವರಿಸಿದ್ದಾರೆ. ಶರಣರ ವಚನಗಳನ್ನು ವೈಚಾರಿಕವಾಗಿ, ಸಾಮಾಜಿಕವಾಗಿ, ಕಾವ್ಯಾತ್ಮಕವಾಗಿ ಹೀಗೆ ಬಹುಮುಖಿನೆಲೆಯಲ್ಲಿ ಅರ್ಥೈಸಬಹುದು. ಬಸವಣ್ಣನವರಿಗಿದ್ದ ಸಾಹಿತ್ಯ ಪರಂಪರೆ, ಜೀವನ ಪ್ರೀತಿ ಮತ್ತು ಸಾಹಿತ್ಯ ಸಂಸಾರಗಳು ಅವರ ಸೋಪಜ್ಞತೆಯ ಕಾರಣವಾಗಿ ವಚನ ಪ್ರಕಾರದ ಪ್ರಕರ್ಷಕ್ಕೆ ಕಾರಣವಾದವು.

ತಾಳ-ಮಾನ ಸರಿಸವನರಿಯೆ

ಓಜೆ ಬಜಾವóಣೆಯ ಲೆಕ್ಕವನರಿಯೆ

ಅಮೃತಗಣ ದೇವಗಣವನರಿಯೆ

ಕೂಡಲ ಸಂಗಮದೇವಾ ನಿಮಗೆ ಕೇಡಿಲ್ಲವಾಗಿ

ಆನು ಒಲಿದಂತೆ ಹಾಡುವೆ.

ಛಂದಸ್ಸು, ಅಲಂಕಾರ, ಕಾವ್ಯ, ಅಭಿವ್ಯಕ್ತಿ ಈ ಎಲ್ಲಾ ಪರಂಪರೆಗಳಿಂದ ಸಂಪನ್ನವಾದ ಪ್ರತಿಭೆ ಬಸವಣ್ಣನವರಾದರೂ ‘ಆನು ಒಲಿದಂತೆ ಹಾಡುವೆ ‘ಎಂದು ಹಿಗ್ಗಿದರು. ಹಾಡುವುದರಿಂದ ಶಿವನಿಗೆ ಲೋಕಕ್ಕೆ ಮಂಗಳಕ್ಕೆ ಕೇಡಾಗ ಬಾರದೆನ್ನುವ ಗುರಿಯಿಂದ ಪ್ರೇರಿತವಾದದ್ದು. ಚಿತ್ತವನ್ನು ಅತ್ತಿಯ ಹಣ್ಣಿಗೆ ಕೊಂಬೆಯ ಮೇಲಿನ ಮರ್ಕಟಕ್ಕೆ ಅಂದಣವನೇರಿದ ಸೊಣಗಕ್ಕೆ ‘ತುಪ್ಪದ ಸವಿಗೆ’‘ಅಲಗ ನೆಕ್ಕುವ ನಾಯಿಗೆ ಹೋಲಿಸುವ ಬಸವಣ್ಣನವರ ಹೋಲಿಕೆಗಳಂತೂ ಎಂದೂ ಮರೆಯಲಾಗದ ಅರ್ಥಪೂರ್ಣ ಮಾತುಗಳು.

ಉಳ್ಳವರು ಶಿವಾಲಯವ ಮಾಡುವರು

ನಾನೇನ ಮಾಡುವೆ ಬಡವನಯ್ಯ

ಎನ್ನ ಕಾಲೆಕಂಬ ದೇಹವೇ ದೇಗುಲ

ಸಿರವೆ ಹೊನ್ನ ಕಳಸವಯ್ಯ

ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಈ ವಚನದಲ್ಲಿ ಮಾತಿನ ಅರ್ಥಕ್ಕೆ ಮೀರಿದ ಪರಿಶುದ್ಧ ಭಾವನೆಯ ಉತ್ತುಂಗ ಶಿಖರವನ್ನು ನೋಡಬಹುದು.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು. ಎಂಬ ಬಸವಣ್ಣನವರ ವಚನ ನುಡಿಗೆ ಬರೆದ ಭಾಷ್ಯದಂತಿದೆ ಇಲ್ಲಿಬಸವಣ್ಣನವರು ಕವಿಯಾಗಿ ವಚನ ರಚಿಸಿ ನುಡಿಸ್ವರೂಪವನ್ನು ವ್ಯಾಖ್ಯಾನಿಸಿದ್ದಾರೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಸವಣ್ಣರೊಬ್ಬ ಯುಗಪ್ರವರ್ತಕ ಕವಿಯಾದುದರಿಂದ ಅವರ ಸಾಧನೆಯು ಬಹಳ ಮೌಲಿಕತೆಯಿಂದ ಕೂಡಿ ಮಹತ್ವದಾಗಿದೆ,

ದಾಸಿಮಯ್ಯನ ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ

ಇರುಳೆಲ್ಲ ನಡೆದನಾ ಸುಂಕಕ್ಕಂಜಿ

ಕಳವೆಯೆಲ್ಲಾ ಹೋಗಿ ಬರಿಯ ಗೋಣಿವುಳಿಯಿತ್ತು

ಅಳಿಮನದವನ ಭಕ್ತಿಯಂತಾಯ್ತು ರಾಮನಾಥ,

ಅಳಿಮನಸ್ಸು ಹರಿದ ಗೋಣಿಯಂತೆ  ಅಲ್ಲಿ ಭಕ್ತಿ ತುಂಬಾಲಾರದು, ವ್ಯರ್ಥವಾದ ಅಹಂಕಾರ ಆಡಂಬರಗಳಿಂದ ಸೋರಿಹೋಗುತ್ತದೆ ಎಂಬುದನ್ನು ಈ ಅಲಂಕಾರದಿಂದ ಸಾಧಿಸಿದ್ದಾನೆ ದಾಸಿಮಯ್ಯ. ಶರಣರು ಕಂಡ ಉಚ್ಛ ಆಧ್ಯಾತ್ಮಿಕ ಆದರ್ಶಗಳು, ಅವರ  ಜೀವನದರ್ಶನ, ನಡೆದ ಮಾರ್ಗ, ಏರಿದ ಎತ್ತರ, ತೋರಿದ ದಾರಿ ಎಲ್ಲವೂ ವಚನಗಳ  ರೂಪದಲ್ಲಿ ಹೊಮ್ಮಿದೆ, ವಚನಗಳಲ್ಲಿ ಬರುವ ಕೆಲವು ಉಕ್ತಿಗಳು, ಜನಜೀವನ ಜಲವನ್ನು ಕೊಡುವ ಬತ್ತದ ಒರತೆಗಳಂತೆ, ಅಗೆದಷ್ಟು ಅರ್ಥವನ್ನು  ಕೊಡುವ ಸೂತ್ರರೂಪವಾದ ಅನೇಕ ಮಾತುಗಳನ್ನು ವಚನಸಾಹಿತ್ಯದಲ್ಲಿ ಕಾಣುತ್ತೇವೆ, ಬಸವಣ್ಣದಿಗಳಲ್ಲೂ  ಕೂಡ ಕಂಡುಬರದ ಅಪೂರ್ವ ಭಾವಗಳು ಅಕ್ಕನ ಪ್ರತಿಭೆಯಲ್ಲಿ ಮಿಂಚುವವು,

ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವಾ ಏರಿಲ್ಲದ

ಗಾಯದಲಿ ನೊಂದೆನವ್ವಾ

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ

ಕರಣಗಳ ಚೇಷ್ಟಗೆ ಮನವೇ ಬೀಜ

ಹೀಗೆ ಸೊಗಸಾದ ಭಾವಗಳು ಮತ್ತು ಕಾವ್ಯಸೌಂದರ್ಯ ಆಕೆಯ ವಚನಗಳಲ್ಲಿ ದೊರೆಯುತ್ತವೆ, ಅಲ್ಲಮಪ್ರಭು ಬಾಹ್ಯ ಪೂಜೆಯ ನಿಷ್ಫಲತೆಯನ್ನು ಈ ಕೆಳಗಿನ ವಚನದಲ್ಲಿ ತಿಳಿಸಿದ್ದಾರೆ,

ಹಿಡಿವ ಕಯ್ಯ ಮೇಲೆ ಕತ್ತಲೆಯಯ್ಯ ನೋಡುವ ಕಂಗಳ

ಮೇಲೆ ಕತ್ತಲೆಯಯ್ಯ ನೆನೆವ ಮನದ ಮೇಲೆ ಕತ್ತಲೆಯಯ್ಯ

ಕತ್ತಲೆ ಎಂಬುದು ಇತ್ತಲೆಯಯ್ಯ ಗುಹೇಶ್ವರನೆಂಬುದು ಅತ್ತಲೆಯಯ್ಯ ಎಂದು ಅರ್ಥಗಾಂಭೀರ್ಯದ ಜೊತೆಗೆ ಶಭ್ದಾಲಂಕಾರದ ಬೆಡಗನ್ನು ತಿಳಿಸುತ್ತಾರೆ ವಚನಗಳಲ್ಲಿ ಸಹಜವಾಗಿ ಛಂದಸ್ಸು, ಅಲಂಕಾರ ಬಳಸಿಕೊಂಡು ಕಣ್ಣಿಗೆ ಕಾಣುವ ದೃಷ್ಟಾಂತಗಳನ್ನು ತಿಳಿಸುತ್ತಾರೆ ‘ಎತ್ತಣಮಾಮರ?  ಎತ್ತಣ ಕೋಗಿಲೆ? ಭಕ್ತಿರಸ ಪ್ರಧಾನವಾದ ಕಾವ್ಯವಾದರೂ ಜೀವಪರವಾದ ಕಾಳಜಿ ಇದೆ, ಕಾವ್ಯ ಲೋಕಾನುಭವದ ಪ್ರತೀಕವಾದಾಗ ಅದಕ್ಕೆ ಸಾರ್ವಕಾಲಿಕ ಜೀವಂತಿಕೆ ಇರುತ್ತದೆ,

ಹೀಗೆ ವಚನಗಳಲ್ಲಿ ರಸಭಾವ  ಅಲÀಂಕಾರಗಳು ಉದಾತ್ತಧ್ಯೇಯವೂ ಇರುವುದರಿಂದ ಅವು ಉತ್ತಮ ಸಾಹಿತ್ಯವಾಗಿವೆ, ಅನುಭಾವದ ಭಾವಾಭಿವ್ಯಕ್ತಿಯನ್ನೇ ವಚನವಾನ್ನಾಗಿಸಿದ ಶಿವಶರಣರು ದೇವಭಾಷೆಯ ಪ್ರಭು ಸಂಹಿತೆಗಿಂತ, ಲೋಕ ಕಲ್ಯಾಣಕರವಾದ ಉದ್ದೇಶಸಾಧನೆಗಾಗಿ ತಿಳಿಗನ್ನಡದಲ್ಲಿ ವಚನಗಳನ್ನು ರಚಿಸಿ,ವಿಚಾರವಾಣಿಯನ್ನು ಜನಜಾಗೃತಿಗಾಗಿ ಹೊರಹೊಮ್ಮಿಸಿ,ಭಾವತೀವ್ರತೆÉ ಏಕಾಗ್ರತೆ,ಆತ್ಮೀಯತೆ ಮುಂತಾದ ಅನಘ್ರ್ಯನ ಗುಣಗಳಿಂದ ಕೂಡಿದ ವಚನಗಳು ಉತ್ತಮ ಭಾವಗೀತೆಗಳು ಎನಿಸಿಕೊಂಡು ಉತ್ತಮ ಕಾವ್ಯಾಂಶದಿಂದ ಶ್ರೀಮಂತವಾಗಿವೆ.

ಆಕರ ಗ್ರಂಥಗಳು

  1. ಶರಣರ ಅನುಭವ ಸಾಹಿತ್ಯ   - ಡಾ|| ಎಚ್.ತಿಪ್ಪೇರುದ್ರಸ್ವಾಮಿ
  2. ಬಸವಣ್ಣನವರ ವಚನಗಳು   - ಸಂಪಾದನೆ, ಎಚ್. ಬಸವರಾಜು
  3. ವಚನಧರ್ಮಸಾರ                 - ಶ್ರೀನಿವಾಸ ಮೂರ್ತಿ
  4. ವಚನ ಸಾಹಿತ್ಯ ಮಿಮಾಂಸೆ   - ಡಾ|| ವೀರಣ್ಣ ದಂಡೆ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal