Tumbe Group of International Journals

Full Text


ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

ಶ್ರೀಮತಿ ಡಿ ,M.SC, NET,M. Phil

ASST PROF OF MATHEMATICS,

GOVT FIRST GRADE COLLEGE, KUNDAPURA

KOTESHWARA,UDUPI TQ,

Email id : adigashreemathi@gmail.com

Ph :  9481179155

  “ಒಂದು ದೇಶದ ಭವಿಷ್ಯ ಆ ದೇಶದ ಶಾಲಾ ಕಾಲೇಜುಗಳ ತರಗತಿ ಕೋಣೆಗಳಲ್ಲಿ ರೂಪುಗೊಳ್ಳುತ್ತದೆ”

ಎಂದು ಬಲವಾಗಿ ನಂಬಿದ್ದವರು,  ನಮ್ಮ ಮಾಜಿ ರಾಷ್ಟ್ರಪತಿ ಮತ್ತು ಈ ದೇಶ ಕಂಡ ಮಹಾ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು. ಆ ಮಹಾನ್ ವ್ಯಕ್ತಿಯ ಮಾತು ಅಕ್ಷರಶಃ ನಿಜ.  “ಬಿತ್ತಿದಂತೆ ಬೆಳೆ”    ಅಥವಾ  “ಯಥಾ ರಾಜ ತಥಾ ಪ್ರಜಾ “ಎನ್ನುವಂತೆ ಯುವಜನಾಂಗದ ನಡವಳಿಕೆ ಮತ್ತು ದೇಶದ ಭವಿಷ್ಯ  ಖಂಡಿತವಾಗಿಯೂ ಅವರು  ಪಡೆಯುವ ಶಿಕ್ಷಣದ ಮೇಲೆ ಅವಲಂಬಿತವಾಗಿದೆ.ಮಾನವನು ಯಾವುದರಿಂದ ವಿಕಾಸ ಹೊಂದುವನೋ ಅದುವೇ ಶಿಕ್ಷಣ ಎಂದು ಜ್ಞಾನಿಗಳು  ಹೇಳುತ್ತಾರೆ.ಶಿಕ್ಷಣದಲ್ಲಿ ಪರಿವರ್ತನೆಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಬಲ್ಲದು. ವಿವೇಕಾನಂದರು ಹೇಳುವಂತೆ,.ಜೀವನವನ್ನು ನಿರ್ಮಾಣ ಮಾಡುವಂತಹ ,ಕೆಚ್ಚೆದೆಯ ವೀರರನ್ನು ತಯಾರಿಸುವ,ಶೀಲ ರೂಪುಗೊಳ್ಳುವ , ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತುಕೊಳ್ಳುವುದನ್ನು ತಿಳಿಸುವ ಶಿಕ್ಷಣ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕು.ಜೊತೆಗೆ ಮಾನವೀಯ  ಮೌಲ್ಯಗಳಿಗೆ  ಒತ್ತು ಕೊಡುವ ಮೌಲ್ಯಾಧಾರಿತ ಶಿಕ್ಷಣದಿಂದ ದೇಶ ಖಂಡಿತವಾಗಿಯೂ  ಅಭಿವೃದ್ಧಿ ಪಥದತ್ತ ಸಾಗಬಲ್ಲದು. ಅಂತಹ ಶಿಕ್ಷಣ ಹೇಗಿರಬೇಕು ಎನ್ನುವುದನ್ನು ಈ ಪ್ರಬಂಧದಲ್ಲಿ ವಿವರಿಸಲಾಗಿದೆ.

 ದೇಶದ ಪ್ರಗತಿಗೆ ಎಂತಹ ಶಿಕ್ಷಣ ಬೇಕು

              “ಉತ್ತರದಲ್ಲಿ ಉತ್ತುಂಗ ಹಿಮವಂತ  

            ದಕ್ಷಿಣದ ತುದಿಯಲ್ಲಿ ಅಗಾಧ ಶರಧಿ

            ತಾಯಿಯ ಶಿರದಲ್ಲಿ ಸದಾ ಹಿಮಸ್ಪರ್ಶ 

            ತಾಯಿಯ ಚರಣದಲ್ಲಿ ನೀಲ ಸಿಂಧುವಿನ ಜಲಸ್ಪರ್ಶ

            ಒಂದೆಡೆ ದಟ್ಟ ಕಾಡು, ಇನೊಂದೆಡೆ ವಿಶಾಲ ನದಿ ಬಯಲು

            ಒಂದು ಕಡೆ ಬಣಗುಡುವ ಮರುಭೂಮಿ

            ಇನ್ನೊಂದೆಡೆ   ಧುಮಿಸಿ ಧುಮ್ಮಿಕ್ಕುವ ನದಿ

            ಎತ್ತ ನೋಡಿದರೂ ಹಚ್ಚ ಹಸುರಿನ ಲೋಕ

            ಬೆಟ್ಟ ಗುಡ್ಡಗಳ ಸಾಲು ಸಾಲು.....”

            ಇದು ನಮ್ಮ  ಭಾರತ..

              ನಿಜ, ಕವಿಯ ಸುಂದರ ವರ್ಣನೆಯ ಈ ದೇಶದಲ್ಲಿ ಜನಿಸಿದ ನಾವು ಪುಣ್ಯವಂತರು.

            ದೇಶದ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸ್ವಾತಂತ್ರ್ಯದ ದಿನ ಬಂದು ಎಪ್ಪತ್ತು ವರ್ಷಗಳು ಕಳೆದವು. ಒಬ್ಬ ವ್ಯಕ್ತಿಗಾದರೆ ಇದು ವೃದ್ದಾಪ್ಯದ ಕಾಲ. ಆದರೆ ಭಾರತಕ್ಕಿದು ಯೌವ್ವನದ ಕಾಲ. ಜಗತ್ತಿನ ಯಾವ ದೇಶದಲ್ಲಿಯೂ  ಇರದಷ್ಟು ಸಂಖ್ಯೆಯ ಯುವ ಜನಾಂಗ ನಮ್ಮಲ್ಲಿದೆ. “ನನಗೆ ನೂರು ಜನ ಇಚ್ಚಾಶಕ್ತಿಯುಳ್ಳ ಯುವಕರನ್ನು ಕೊಡಿ, ನಾನು ದೇಶದ ಇತಿಹಾಸವನ್ನೇ ಬದಲಾಯಿಸುತ್ತೇನೆ” ಎಂದು ಹೇಳಿದ ಸ್ವಾಮಿ ವಿವೇಕಾನಂದರು, ಒಂದು ದೇಶದ ಭವಿಷ್ಯ ಆ ದೇಶದ ಶಾಲಾ ಕಾಲೇಜುಗಳ ತರಗತಿ ಕೋಣೆಗಳಲ್ಲಿ ರೂಪುಗೊಳ್ಳುತ್ತದೆ ಎಂದು ಯುವಜನಾಂಗದ ಮೇಲೆ ಅಪಾರ ನಂಬಿಕೆಯನ್ನಿಟ್ಟ  ಡಾಕ್ಟರ್ ಅಬ್ದುಲ್ ಕಲಾಂರಂಥ ನಾಯಕರ ನಂಬಿಕೆ, ಕನಸು, ಅದೆಷ್ಟರ ಮಟ್ಟಿಗೆ ನನಸಾಗುತ್ತಿದೆ ಎಂದು ನಾವು ಯೋಚಿಸಬೇಕಾಗಿದೆ. ಸ್ವಾತಂತ್ರ್ಯದ ನಂತರ ದಿನಗಳನ್ನು ಅವಲೋಕನ ಮಾಡಿದರೆ ಕಂಡು ಬರುವುದು ನಾವು  ಸ್ವಾತಂತ್ರ್ಯವನ್ನು ಎರಡು ರೀತಿಯಲ್ಲಿ ಬಳಸಿಕೊಂಡಿದ್ದು. ಒಂದು ಸದುಪಯೋಗ ಪಡಿಸಿಕೊಂಡಿದ್ದು, ಇನ್ನುಂದು ದುರುಪಯೋಗ ಪಡಿಸಿಕೊಂಡಿದ್ದು.

    ಒಂದು ಕಡೆ ಜಗತ್ತಿನ ಇತರ ರಾಷ್ಟ್ರಗಳು ಹುಬ್ಬೇರಿಸುವ ರೀತಿಯಲ್ಲಿ ಈ ದೇಶ ಅಭಿವೃದ್ಧಿ ಕಂಡಿತು. ಸಂಪದ್ಬರಿತ ದೇಶದ ಮೇಲೆ ನಡೆದ ಚೀನಾ ಪಾಕಿಸ್ತಾನದ ಆಕ್ರಮಣವನ್ನು ಎದುರಿಸಿ ಕಾರ್ಗಿಲ್ ಯುದ್ದದಲ್ಲಿ ಜಯಿಸಿ, ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳಲ್ಲಿ ಅಭಿವೃದ್ದಿ ಸಾಧಿಸುತ್ತಾ ಅನೇಕ ವಿಷಯಗಳಲ್ಲಿ ನಂಬರ್ 1 ಸ್ಥಾನದಲ್ಲಿ ಭಾರತ ಮಿಂಚ ತೊಡಗಿದೆ. ಚಂದ್ರಯಾನ ಮಾಡಿದ ಪ್ರಪಂಚದ ಮೂರು ರಾಷ್ಟ್ರಗಳಲ್ಲಿ ಒಂದು ರಾಷ್ಟ್ರ ನಮ್ಮ ಭಾರತ ಸೂಪರ್ ಕಂಪ್ಯೂಟರ್‍ಗಳನ್ನು ತಯಾರು ಮಾಡಬಲ್ಲ ಐದು ರಾಷ್ಟ್ರಗಳಲ್ಲಿ ಒಂದು ರಾಷ್ಟ್ರ ನಮ್ಮ ಭಾರತ ಇವೆಲ್ಲವೂ ನಮಗೆ ಹೆಮ್ಮೆ ತರುವಂತ ವಿಷಯಗಳೇ.

            ಇನ್ನೊಂದು ಕಡೆ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರವೆಂಬಂತೆ ಭಾವಿಸಿಕೊಂಡು ಮನಬಂದಂತೆ ವರ್ತಿಸಿದ ಪರಿಣಾಮ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಹಿಂಸೆ, ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇವೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. ರಾಜಕೀಯ ಗಬ್ಬೆದ್ದು ನಾರುತ್ತಾ ಇದೆ. ಮಹಿಳೆಯರು ಧೂಮಪಾನ, ಮದ್ಯಪಾನದಂಥ ಚಟಗಳಿಗೆ ಅಂಟಿಕೊಂಡಿದ್ದಾರೆ. ಬಡತನ, ನಿರುದ್ಯೋಗದ ಸಮಸ್ಯೆಗಳು ಸಾಮಾನ್ಯರನ್ನು ಕಾಡುತ್ತಿವೆ. ಒಬ್ಬರ ಜೀವ ಉಳಿಸಲು ಇರುವ ಸ್ವಾತಂತ್ರ್ಯವನ್ನು ಜೀವ ತೆಗೆಯಲು ಉಪಯೋಗಿಸಲಾಗುತ್ತಿದೆ. ಪರೋಪಕಾರದ ಬದಲು ಪರ ಪೀಡನೆ, ಕೋಮು ಸೌಹಾರ್ದತೆಯ ಬದಲು ಕೋಮು  ಘರ್ಷಣೆಗೆ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ. ಹಿಂದೂ, ಮುಸ್ಲಿಂ, ವೈಷಮ್ಯ ಬೆಳೆಯುತ್ತಾ ಇದೆ. ಇನ್ನೊಬ್ಬರನ್ನು ತಿಳಿದು ಬದುಕಬೇಕಾದವರು ತಿಂದು ಬದುಕುತ್ತಿದ್ದಾರೆ. ಹಲವೆಡೆ ಬಿಗಿ ಪೆÇಲೀಸ್ ಬಂದೋಬಸ್ತಲ್ಲಿ ಸಂಭ್ರಮದ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲಾಗುತ್ತಿದೆ. ಭ್ರಷ್ಟಾಚಾರವೆಂಬ ರಾಕ್ಷಸನ ಅಟ್ಟಹಾಸ ಎಷ್ಟಿದೆ ಎಂಬುದಕ್ಕೆ ನಮ್ಮ ಭಾರತೀಯರ ಸ್ವಿಸ್ ಬ್ಯಾಂಕ್ ನಲ್ಲಿರುವ ಹಣವೇ ಸಾಕ್ಷಿ. ಹಾಗಾದರೆ ಈ ಸಮಸ್ಯೆಗಳಿಗೆಲ್ಲ ಏನು ಪರಿಹಾರ ? ಜನರ ಮನ ಪರಿವರ್ತನೆ ಮಾಡುವ ಮಾರ್ಗ ಯಾವುದು ? ಭಾಷಣಗಳಿಂದಲೇ ? ಲೇಖನಗಳಿಂದಲೇ ? ರಾಜಕಾರಣಿಗಳಿಂದಲೇ? ಮಠಾಧೀಶರುಗಳಿಂದಲೇ ? ಚಿಂತಕರಿಂದಲೇ ? ಬುದ್ದಿಜೀವಿಗಳಿಂದಲೇ ?

            ಖಂಡಿತಾ ಅಲ್ಲ, ಇವೆಲ್ಲವೂ ಸಾಧ್ಯವಾಗುವುದು ಶಿಕ್ಷಣದಿಂದ ಮಾತ.್ರ ಹತ್ತನೇ ತರಗತಿಯ ನಂತರದ ಶಿಕ್ಷಣದಲ್ಲಿ, ಸಿಲಬಸ್ ನಲ್ಲಿ ನಿಗದಿಪಡಿಸಿರುವ ಈಗಿರುವ ಕೇವಲ ಪಠ್ಯಪುಸ್ತಕದ ಆರು ವಿಷಯಗಳ ಬೋಧನೆ ಜೊತೆಗೆ ಕಡ್ಡಾಯವಾಗಿ ಏಳನೇ ವಿಷಯವಾಗಿ ಮಾನವೀಯ ಮೌಲ್ಯಗಳನ್ನು ಬೋಧಿಸುವ  “ಮೌಲ್ಯಾಧಾರಿತ ಶಿಕ್ಷಣ” ವನ್ನು  (Value Based Education) ಸೇರಿಸಿ ಎಲ್ಲ ವಿಷಯಗಳಂತೆ ಈ ವಿಷಯದಲ್ಲಿ ಪರೀಕ್ಷೆಯನ್ನು ನಡೆಸುವುದರ ಮೂಲಕ ಹಂತ ಹಂತವಾಗಿ ದೇಶದ ದ್ವಂದ್ವತೆ, ಸಾಮಾಜಿಕ ಪಿಡುಗು ಹಾಗೂ ವಿವಿಧ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿ ದೇಶವನ್ನು ಅಭಿವೃದ್ದಿ ಪಥದತ್ತ ಸಾಗಿಸಲು ಸಾಧ್ಯ .ಈ ಏಳನೇ ವಿಷಯವನ್ನು ಬೋೀಧಿಸಲು ಸಮಯವನ್ನು ಸರಿದೂಗಿಸಲು ಉಳಿದ ಆರು ವಿಷಯಗಳ ಸಿಲಬಸ್ ಅನ್ನು ಕೊಂಚ ಕಡಿಮೆ ಮಾಡಿ ತಲಾ ಒಂದೊಂದು ಗಂಟೆ  ಕಡಿಮೆ ಬೋಧಿಸಿ ಅಲ್ಲಿ ಉಳಿತಾಯವಾಗುವ ಆರು ಗಂಟೆಯ ಬೋೀಧನೆಯನ್ನು ಈ ವಿಷಯಕ್ಕೆ ಮೀಸಲಿಡಬೇಕು.  ಪಿ.ಯು.ಸಿ. ಯಿಂದ ಪ್ರಾರಂಭಿಸಿ, ಮೆಡಿಕಲ್, ಇಂಜಿನಿಯರಿಂಗ್ ಪದವಿ ಅಥವಾ ಯಾವುದೇ ಕೋರ್ಸುಗಳಲ್ಲಿ ಈ ವಿಷಯವನ್ನು ನಿರಂತರವಾಗಿ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಮಾತೃ ಭಾಷೆಯಲ್ಲೇ ಬೋಧಿಸಬೇಕು. ಹದಿಹರೆಯಕ್ಕೆ ಕಾಲಿಟ್ಟ ನಂತರ ಶಿಕ್ಷಣದ ಮೂಲಕ ನಿರಂತರವಾಗಿ ವಿದ್ಯಾರ್ಥಿಗಳಿಗೆ ನೀತಿ ಬೋಧನೆ ಮಾಡುತ್ತಾ ಅವರ ಮನಸ್ಸನ್ನು ಕೆಟ್ಟು ಹೋಗದಂತೆ, ಕೆಟ್ಟ ಯೋಚನೆ ಮಾಡದಂತೆ ಮೌಲ್ಯಾಧಾರಿತ ಶಿಕ್ಷಣವನ್ನು ಬೋಧಿಸಬೇಕು.

            ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಅನೇಕ ಗಣ್ಯರು, ಲೇಖಕರು, ರಾಜಕಾರಣಿಗಳು, ಶಿಕ್ಷಣ ತಜ್ಞರು ತಮ್ಮ ಭಾಷಣದಲ್ಲಿ  ಬರಹದಲ್ಲಿ ಹೇಳುತ್ತಲೇ ಬಂದಿದ್ದಾರೆ. ಆದರೆ ಅದು ಹೇಗೆ ಎಂದು ಹೇಳುವುದಾಗಲಿ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗಲಿ ಇನ್ನೂ ಆರಂಭವಾಗಿಲ್ಲ.

            ಹಾಗಾದರೆ ಮೌಲ್ಯಾಧಾರಿತ ಶಿಕ್ಷಣವನ್ನೊಳಗೊಂಡ ವಿಷಯದಲ್ಲಿ ಯಾವ ಯಾವ ವಿಷಯಗಳನ್ನು ಬೋಧಿಸಬೇಕು ಮತ್ತು ಏಕೆ ಎಂದು ಪಟ್ಟಿ ಮಾಡಿದರೆ,ಮುಖ್ಯವಾಗಿ ಕಂಡು ಬರುವ ವಿಷಯಗಳು :

            ಪ್ರತಿಯೊಬ್ಬ ಮನ್ಯುಷ್ಯನು ನಾಲ್ಕು ರೀತಿಯ ಋಣ ಬಂಧನಕ್ಕೆ ಒಳಗಾಗಿರುತ್ತಾನೆ ಮಾತ್ರ ಋಣ, ಪಿತೃಋಣ, ಗುರುವಿನ ಋಣ, ಭಗವಂತನ ಋಣ. ಅಂದರೆ ಇಂದಿನ ಹೆಚ್ಚಿನ ಯುವ ಜನಾಂಗಕ್ಕೆ ಮಾತಾ ಪಿತೃ ಋಣವನ್ನು ತೀರಿಸುವ ಬದ್ದತೆ ಇಲ್ಲ. “ನಾವು ಸುಂದರವಾಗಿದ್ದರೆ ಅದು ನಮ್ಮ ತಂದೆ ತಾಯಿ ನಮಗೆ ನೀಡಿದ ಉಡುಗೊರೆ ನಮ್ಮ ಜೀವನ ಸುಂದರವಾಗಿದ್ದರೆ ಅದು ನಮ್ಮ ತಂದೆ ತಾಯಿಗೆ ನಾವು ನೀಡುವ ಉಡುಗೊರೆ” ಎನ್ನುತ್ತಾರೆ ಬಲ್ಲವರು. ನಮ್ಮ ಜೀವನವನ್ನು ಸುಂದರವಾಗಿಸುವಾಗ ನಮ್ಮ ತಂದೆ ತಾಯಿಯ ಮನ ನೋಯಿಸದೆ ಇಳಿ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಭೂಮಿಗಿಂತ ದೊಡ್ಡವಳು ತಾಯಿ, ಅಂತರಿಕ್ಷಕ್ಕಿಂತ ದೊಡ್ಡವನು ತಂದೆ. ಅಂತ ತಂದೆ ತಾಯಿಯ ಕಣ್ಣಲ್ಲಿ ಎರಡೆ ಸಲ ನೀರು ಬರುವುದಂತೆ. ಒಂದು ಮಗಳನ್ನು ಧಾರೆ ಎರೆದು ಕೊಡುವಾಗ, ಇನ್ನೊಂದು ಸ್ವಂತ ಮಗನಿಂದಲೇ ನಿರ್ಲಕ್ಷ್ಯಕ್ಕೊಳಗಾದಾಗ.ಒಂದು ತಾಯಿಯ ಮಡಿಲಲ್ಲಿ ಆರು ಜನ ಮಕ್ಕಳಿಗೆ ಜಾಗ ಇರುತ್ತದಂತೆ. ಆದರೆ ಆರು ಜನ ಮಕ್ಕಳ ಮನೆಯ ಅಂಗಳದಲ್ಲಿ ಒಬ್ಬ ತಾಯಿಗೆ ಜಾಗವಿಲ್ಲ ಎಂಬುದು ಕಲಿಯುಗದ ಕಠೋರ ಸತ್ಯ. ಸಪ್ತ ಸಾಗರದಾಚೆ ಹಾಯಾಗಿ ಕಾಲ ಕಳೆಯುತ್ತಾ ತಂದೆ ತಾಯಿಯನ್ನು ವೃದ್ದಾಶ್ರಮದಲ್ಲಿ, ಆನಾಥಾಶ್ರಮದಲ್ಲಿ ಬಿಡುವ ಯುವಜನಾಂಗದ ಸಂಖ್ಯೆಗೇನೂ ಕಡಿಮೆ ಇಲ್ಲ. ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತದೆ ಈ ಜಗದೊಳಗೆ, ಹಡೆದ ತಾಯಿಯ ಕಳಕೊಂಡ ಮ್ಯಾಲೆ ಮತ್ತೆ ಬರುವಳೇನು, 10 ದೇವರನ್ನು ಪೂಜಿಸುವ ಬದಲು ಹೆತ್ತ ತಂದೆ ತಾಯಿಯನ್ನು ಪೂಜಿಸು ಎಂದು ತಿಳಿಸಿ ಹೇಳುವ “ಮೊದಲ ಪಾಠ” ಈ ಮೌಲ್ಯಾಧಾರಿತ ಶಿಕ್ಷಣ ಎನ್ನುವ ವಿಷಯದಲ್ಲಿರಬೇಕು ಮಾತ್ರವಲ್ಲ ತಂದೆ ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳು ಮುಂದೊಂದು ದಿನ ತಮ್ಮ ಸ್ವಂತ ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ಕತೆಗಳನ್ನು ಉದಾಹರಣೆ ಸಮೇತ ಮನಮುಟ್ಟುವ  ರೀತಿಯಲ್ಲಿ ವಿದ್ಯಾರ್ಥಿಗಳಗೆ ವಿವರಿಸಿ ತಾವೆಂದೂ ನಮ್ಮ ತಂದೆ ತಾಯಿಯರನ್ನು ನಿರ್ಲಕ್ಷ್ಯಮಾಡೆವು ಎನ್ನುವ ಪ್ರತಿಜ್ಞೆ ಮಾಡುವ ರೀತಿಯಲ್ಲಿ ಆ ವಿಷಯವನ್ನು ಶಿಕ್ಷಕರು ಬೋಧಿಸಬೇಕು.

            ಇತ್ತೀಚಿನ ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ನಮ್ಮ ಜನಾಂಗವನ್ನು ಆವರಿಸಿಕೊಂಡಿದೆ. ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಾತ್ಯ ಸಂಗೀತದ ಅಬ್ಬರದ ನಡುವೆ ಹಿತಮಿತವಾದ ಭಾರತೀಯ ಸಂಗೀತವನ್ನು, ಭಾರತೀಯ ಸಂಸ್ಕೃತಿಯನ್ನು ,ಇಂದಿನ ಯುವ ಜನಾಂಗ ಮರೆಯುತ್ತಿದೆ. ಅಸಭ್ಯವಾದ ಉಡುಪುಗಳನ್ನು ಧರಿಸುವುದು, ಹರಿದ ಜೀನ್ಸ್ ಪ್ಯಾಂಟ್, ಚಿತ್ರವಿಚಿತ್ರವಾದ ತಲೆಕೂದಲ ಸ್ಟೈಲ್ಗ್‍ಳು, ತಲೆ ಬಿಚ್ಚಿ ಹಾಕಿಕೊಂಡು ಹಾಡುವ ಮಹಿಳಾ ಗಾಯಕರು, ಪಾಶ್ಚಾತ್ಯರನ್ನು ಅನುಸರಿಸುತ್ತಾ ಅವರದೇ ಮಾದರಿಯಲ್ಲಿ ಕೆಲವೊಂದು ದುಶ್ಚಟಗಳ ದಾಸರಾಗುವುದನ್ನು ನೋಡಿದಾಗ ನಿಜಕ್ಕೂ ಆತಂಕವಾಗುತ್ತದೆ. ಪರದೇಶಗಳು ನಮ್ಮ ದೇಶದ ಆತ್ಮವಾದ ಸಂಸ್ಕೃತಿಯನ್ನೇ ನಾಶ ಮಾಡಲು ಹೊರಟಿವೆ ಏನೋ ಎಂದು ಭಾಸವಾಗುತ್ತಿದೆ. ಒಂದು ದೇಶದ ಉನ್ನತಿ ಅಥವಾ ಅವನತಿ ಆ ದೇಶದ ಸಂಸ್ಕೃತಿಯನ್ನು ಅವಲಂಬಿಸಿದೆ ಎನ್ನುವ ವಿವೇಕಾನಂದರ ಮಾತನ್ನು, ಅನ್ಯ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎನ್ನುವ ಗಾಂಧೀಜಿಯ ಮಾತನ್ನು ಇಂದಿನ ವಿದ್ಯಾರ್ಥಿಗಳಿಗೆ ನೆನಪಿಸಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕೆಲಸ ನಮ್ಮ ಯುವಜನಾಂಗದಿಂದ ಆಗಬೇಕಾಗಿದೆ ಎಂದು ಮನದಟ್ಟು ಮಾಡಿಕೊಡುವ “ಎರಡನೇ ಪಾಠ” ಈ ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            ಹುಟ್ಟಿನಿಂದ ಸಾವಿನವರೆಗೆ ನಿರಂತರವಾಗಿ ಅನುಭವಗಳನ್ನು ಪಡೆಯುತ್ತಾ ಸಾಗುವುದೇ ಶಿಕ್ಷಣ ಮಾನವನು  ಯಾವುದರಿಂದ ವಿಕಾಸಗೊಳ್ಳುª ನೋ, ಅದುವೇ ಶಿಕ್ಷಣ. ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ  ಆ ಓದು ನಮಗೆ ಎಷ್ಟು ಸಂಸ್ಕಾರ ಕಲಿಸಿದೆ ಎನ್ನುವುದು ಮುಖ್ಯ. ಇವತ್ತು ಬದುಕಲು ಆಹಾರ ಎಷ್ಟು ಮುಖ್ಯವೋ, ಆಹಾರಕ್ಕಾಗಿ ಮತ್ತು ಇನ್ನಿತರ ಮೂಲಭೂತ ಅವಶ್ಯಕತೆಗಳಿಗಾಗಿ ಒಂದಿಷ್ಟು ಸಂಪಾದನೆ ಮಾಡುವುದು ಅಷ್ಟೇ ಮುಖ್ಯ. ಮೊಬೈಲ್ ಕರೆನ್ಸಿಗಾಗಿ ಆದರೂ ದುಡಿಯಲು ಚಿಕ್ಕ ಉದ್ಯೋಗಕ್ಕೆ ಸೇರುವ ಅನಿವಾರ್ಯತೆ ಇದೆ. ಇನ್ನೊಬ್ಬರಿಗೆ ಮೋಸ ವಂಚನೆ ಮಾಡಿಯಾದರೂ ಒಂದಿಷ್ಟು ಹಣ ಸಂಪಾದನೆ ಮಾಡಬೇಕು ಎಂದು ಯೋಚಿಸುವ ವ್ಯಕ್ತಿಗಳಿಗೇನು ಕಡಿಮೆ ಇಲ್ಲ. ಆದರೆ ಕೇವಲ ಹಣ ಸಂಪಾದನೆ ಮಾರ್ಗವನ್ನು ತಿಳಿಸಿಕೊಡುವ ಶಿಕ್ಷಣ ನಮಗೆ ಬೇಕಾಗಿಲ್ಲ. ಹಣವನ್ನು ಹೇಗೆ ಮತ್ತು ಎಷ್ಟು ಸಂಪಾದನೆ ಮಾಡಬೇಕು ಎನ್ನುವ ನ್ಯಾಯ ಮಾರ್ಗವನ್ನು ತಿಳಿಸುವ ಶಿಕ್ಷಣ ನಮಗೆ ಬೇಕು. ಅದಕ್ಕೆ ಪುರಂದರದಾಸರು “ಗೆಜ್ಜೆ ಕಾಲ್ಗಳ ದನಿಯ ಮಾಡುತ ಬಾರಮ್ಮ” ಎಂದು ಲಕ್ಷ್ಮಿಯನ್ನು ಕರೆದಿದ್ದಾರೆ. ಅಂದರೆ ಹಣ ಯಾವ ಮೂಲದಿಂದ ಬಂದಿದ್ದು ಎಂದು ಎಲ್ಲರಿಗೂ ಗೊತ್ತಾಗಬೇಕು.

“ಭೂಮಿಯೇ ಹಾಸಿಗೆ, ಗಗನವೆ ಹೊದಿಕೆ, ಕಣ್ತುಂಬ ನಿದ್ದೆ ಬಡವನಿಗೆ 1

    ಮೆತ್ತನೆ ಹಾಸಿಗೆ, ಸುಖದ ಸುಪ್ಪತ್ತಿಗೆ, ಬಾರದು ನಿದ್ದೆ ಧನಿಕನಿಗೆ” !

       ಎನ್ನುವ ಪರಿಸ್ಥಿತಿಗೆ  ಉದಾಹರಣೆಯಾಗಿರುವ ವ್ಯಕ್ತಿಗಳ ಕತೆಯನ್ನು ವಿವರಿಸಿ, ಕಷ್ಟಪಟ್ಟರೆ ಮೊದಲು          ಬೆವರು ಸುರಿತದೆ, ನಂತರ ಹಣ ಸುರಿತದೆ, ವಂಚನೆ ಮಾಡಿದರೆ ಮೊದಲು ಹಣ ಸುರಿತz,É ನಂತರ ಬೆವರು ಸುರಿತದೆ,

 ವಂಚನೆಯಿಂದ ಗಳಿಸಿದ್ದು ಸಂಚಯಕ್ಕೆ ಬಾರದು ಎನ್ನುವಂತೆ ನ್ಯಾಯ ಮಾರ್ಗದಿಂದ ಗಳಿಸಿದ ಹಣ ಶಾಶ್ವತ, ಅನ್ಯಾಯದಿಂದ ಗಳಿಸಿದ ಹಣ ನಿದ್ದೆ ಕೆಡಿಸುವುದು ಖಂಡಿತ  ಎನ್ನುವುದನ್ನು ಮನಮುಟ್ಟುವಂತೆ ವಿವರಿಸುವ, ಸುಲಭದಲ್ಲಿ ಹಣ ಮಾಡಬಹುದಾದ ಮಾರ್ಗಗಳ ಬಗ್ಗೆ ತಿಳಿಸುತ್ತೇವೆ ಎನ್ನುವ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಮರುಳಾಗದಂತೆ ಎಚ್ಚರಿಸುವ,  ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವ  “ಮೂರನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            “ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಗೆ” ಎಂದಿದ್ದಾರೆ ಪುರಂದರದಾಸರು.

 ಸಂವಿಧಾನದಲ್ಲಿ ನೀಡಿದ ವಾಕ್ ಸ್ವಾತಂತ್ರ್ಯವನ್ನು ಜನ ಒಳ್ಳೆಯ ಮಾತುಗಳನ್ನಾಡುವ ಬದಲು ಪರನಿಂದನೆ, ಟೀಕೆಗೆ ಬಳಸಿಕೊಳ್ಳುತ್ತಿದ್ದಾರೆ. ಕಾಮ, ಕ್ರೋಧ, ಮೋಹ, ಲೋಭ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಇಟ್ಟುಕೊಂಡು, ಸಮಾಜದ ಸ್ವಾಸ್ತ್ಯವನ್ನು ಕೆಡಿಸುತ್ತಾ ಅಹಂಕಾರದಿಂದ ಮೆರೆಯುವ ಜನ ಒಂದೆಡೆಯಾದರೆ, ಇನ್ನೊಬ್ಬರನ್ನು ತಿಳಿದು ಬದುಕುವ ಬದಲು ತಿಂದು ಬದುಕುವ, ತುಳಿದು ನಿಂದಿಸುವ ಇನ್ನೊಂದು ವರ್ಗ. ಸುಳ್ಳು, ಮೋಸ ವಂಚನೆಯಿಂದಲೆ ಜೀವನ ನಡೆಸುವ ಮತ್ತೊಂದು ವರ್ಗವನ್ನು ಕಾಣುತ್ತಿದ್ದೇವೆ ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ ಅನ್ನ ತಿನ್ನಲು ತಲೆಬಾಗಲೇ ಬೇಕು ಎನ್ನುವ ಸತ್ಯವನ್ನು ಬೋಧಿಸಬೇಕಾಗಿದೆ. ಸತ್ಯ, ಅಹಿಂಸೆ, ಪರೋಪಕಾರ ಮುಂತಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಹೋಗುವಂತೆ ತಿಳಿಸುವ, ಸತ್ಯವಂತರಿಗೆ ಜಯ ಎಂದು ಸಾರುವ, ಪ್ರಾಥಮಿಕ ಶಿಕ್ಷಣದಲ್ಲಿ ಕಲಿತು ಮರೆತು ಬಿಟ್ಟ ಪುಣ್ಯಕೋಟಿಯ ಕಥೆಯನ್ನು ಮತ್ತೆ ಮತ್ತೆ ನೆನಪಿಸಿ ಅಂತಹ ಸಾವಿರ ಕತೆಗಳ ಉದಾಹರಣೆಯನ್ನು ನೀತಿ ಸಮೇತ ಬೋಧಿಸುವ “ನಾಲ್ಕನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಕೊಲೆ, ಅತ್ಯಾಚಾರ, ಭ್ರಷ್ಟಾಚಾರಗಳು ಎದ್ದು ಕಾಣುತ್ತವೆ. ಅಪರಾಧಿಗಳು ರಾಜಾರೋಷವಾಗಿ ಓಡಾಡಿಕೊಂಡು ಅಟ್ಟಹಾಸದಿಂದ ಮೆರೆದರೆ ನಿರಪರಾಧಿಗಳ ಮೇಲೆ ಆರೋಪ ಹೊರಿಸಲಾಗುತ್ತದೆ. ಭ್ರಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷೆ ಯಾಗುವ ಬದಲು ಭ್ರಷ್ಟರಿಗೆ ರಕ್ಷೆ ಶಿಷ್ಟರಿಗೆ ಶಿಕ್ಷೆಯಾಗುತ್ತಿದೆ. ಅಂತಹ ಅನ್ಯಾಯಗಳನ್ನು ಕಣ್ಣಾರೆ ಕಂಡ ವಿದ್ಯಾರ್ಥಿ ಏನು ಮಾಡಬೇಕು ? ಆಕ್ಸಿಡೆಂಟ್ ಮಾಡಿ ಪರಾರಿಯಾದ ವಾಹನ ಚಾಲಕನ ಬಗ್ಗೆ, ಕದ್ದು ಓಡಿಹೋದ ಕಳ್ಳನ ಬಗ್ಗೆ,  ದೇಶದ್ರೋಹದ ಕೆಲಸ ಮಾಡುತ್ತಿರುವ ವ್ಯಕ್ತಿ ಬಗ್ಗೆಯಾಗಲಿ ಮಾಹಿತಿ ನೀಡಿ ಪೆÇಲೀಸರಿಗೆ ಹೇಗೆ ಸಹಕರಿಸಬೇಕು, ಲಂಚ ಸ್ವೀಕರಿಸುವ ಅಧಿಕಾರಿಯೊಬ್ಬನನ್ನು ಹೇಗೆ ಉಪಾಯವಾಗಿ ಲೋಕಾಯುಕ್ತರ ಬಲೆಗೆ ಸಿಲುಕಿಸಬಹುದು ಎನ್ನುವುದನ್ನು ತಿಳಿಸುವ “ಐದನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            ಜಾಗತೀಕರಣದ ಪ್ರಭಾವದಿಂದ ಇಂದಿನ ಯುವಜನಾಂಗ ವಿದೇಶೀ ವಸ್ತುಗಳ ವ್ಯಾಮೋಹಕ್ಕೆ ಬಿದ್ದು ಸ್ವದೇಶೀ ವಸ್ತುಗಳನ್ನು ತಿರಸ್ಕರಿಸುತ್ತಿದ್ದಾರೆ. ಝಣ ಝಣ ಝಣ ಕಾಂಚಣದಲ್ಲಿ ಅಮೇರಿಕಾದ ಲಾಂಛÀನದಲ್ಲಿ ಎನ್ನುವ ಜಾಗತೀಕರಣದ ಕುರಿತ ಹಾಡಿನಲ್ಲಿ ಅಶ್ವಥ್ ಅವರು ಹೇಳಿವಂತೆ ಅರಶಿನದ ಜಾಗವನ್ನು ಅಕ್ರಮಿಸಿದ್ದು ಫೇರ್ ಅಂಡ್ ಲವ್ಲೀ. ಹಾಗೆಯೇ ಅಮ್ಮ, ಅಜ್ಜಿ ಮಾಡುತ್ತಿದ್ದ ಚಕ್ಕುಲಿ, ಹಪ್ಪಳ, ಕೋಡುಬಳೆ ಇತ್ಯಾದಿಗಳ ಜಾಗವನ್ನು ಆಕ್ರಮಿಸಿದ್ದು ಲೇಸ್,ಕುರ್ ಕುರೆ, ಮ್ಯಾಗಿ, ಪಿಜ್ಜಾ, ಬರ್ಗರ್‍ಗಳು’. ತಂಪು ಪಾನೀಯಗಳಾದ ಮಜ್ಜಿಗೆ ಎಳೆನೀರು, ಲಿಂಬೆ ಪಾನಕದ ಬದಲಿಗೆ ಯುವ ಸಮುದಾಯ ಅಪ್ಪಿಕೊಂಡದ್ದು ಪೆಪ್ಸಿ, ಕೋಕೊ ಕೋಲಾದಂತ ವಿಷಕಾರಿ ಪಾನೀಯಗಳನ್ನು. ಇಂತಹ ಆಹಾರ ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿರುವ ಯುವಜನಾಂಗಕ್ಕೆ ಶಿಕ್ಷಣದ ಮೂಲಕ ಒಬ್ಬ ಗುರು, ಉದಾಹರಣೆಗಳ ಸಮೇತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ,  ಮನ ಮುಟ್ಟುವ ರೀತಿ ತಿಳಿಸಿ ಎಚ್ಚರಿಸುವ “ಆರನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            ಸಂಪದ್ಭರಿತವಾದ ನಮ್ಮ ದೇಶ  ಒಂದೆಡೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ, ಇನ್ನೊಂದೆಡೆ ಯುವ ಶಕ್ತಿ ಪೆÇೀಲಾಗುತ್ತಿದ್ದು ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ ಎನ್ನುವ ಕೂಗು ಕೇಳಿಸುತ್ತಿದೆ. ಇಂದು ಜಗತ್ತಿನ ಬಹುತೇಕ ಜನರು ಒಂದಲ್ಲ ಒಂದು ರೀತಿಯ ಒತ್ತಡದಿಂದ ಬದುಕುತ್ತಿದ್ದಾರೆ. ನಮಗೆ ಬರುವ ನೋವುಗಳು ದೇಹದ ಮೇಲೆ ಆಕ್ರಮಣ ಮಾಡಬಹುದು ಅಥವಾ ಮನಸ್ಸಿನ ಮೇಲೆ ಆಘಾತ ಮಾಡಬಹುದು. ಇದಕ್ಕೆಲ್ಲ ಪರಿಹಾರ ಇರುವುದು ಯೋಗದಲ್ಲಿ. ಮಾನವನಲ್ಲಿ ದೈವದತ್ತವಾಗಿ ಬಂದ ದೇಹದ ಒಳಗೆ ಇರುವ ಜ್ಞಾನ ಶಕ್ತಿ, ಇಚ್ಚಾಶಕ್ತಿ, ಕ್ರಿಯಾಶಕ್ತಿಗಳು ಸರಿಯಾಗಿ ಕೆಲಸ ನಿರ್ವಹಿಸುವಂತಾಗಲು ಯೋಗಾಸನ, ಪ್ರಾಣಾಯಾಮ, ಧ್ಯಾನದ ಅಗತ್ಯವಿದೆ ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಯೋಗದ ವಿವಿಧ ಮಾರ್ಗಗಳ ಸಾಮರಸ್ಯವನ್ನು ಒತ್ತಿ ಹೇಳುತ್ತಾರೆ. ಕಬ್ಬಿಣದ ಮಾಂಸ ಖಂಡ, ಉಕ್ಕಿನ ನರಮಂಡಲ ಅಗಾಧ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಅಗೋ ನೋಡು ಗುಡ್ಡ ಎಂದರೆ ಗುಡ್ಡವನ್ನು ಪುಡಿಮಾಡುವ ಸಾಮಥ್ರ್ಯವಿರಬೇಕು ,ಇವೆಲ್ಲವೂ ಯೋಗದಿಂದ ಸಾಧ್ಯ ಎಂದು ಅವರು ಯುವಕರಿಗೆ ಕರೆ ಕೊಟ್ಟರು. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಳ್ಮೆ, ಸಹನೆ, ವಿನಯದಿಂದ ವರ್ತಿಸಲು ನೆರವಾಗುವ ಯೋಗಾಭ್ಯಾಸವನ್ನು ಮಾಡುವಂತೆ ಬೋಧಿಸುವ ಯೋಗ ಶಿಕ್ಷಣದ “ಏಳನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು.

            ಹಸಿರು ಭೂಮಿಗೆ ಬರುವಾಗ ಉಸಿರು ಮಾತ್ರ ಇದ್ದು ಹೆಸರಿಲ್ಲದ ನಾವು ಉಸಿರು ನಿಂತ ಮೇಲೆ ಹೆಸರಿರುವ ಹಾಗೆ ಬದುಕಬೇಕಾದರೆ ಉಸಿರಿರುವಾಗ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅಂತಹ ಸಾಧನೆ ಮಾಡಿದವರ ಪಟ್ಟಿಯಲ್ಲಿ ನಾವು ನೆನಪಿಡಬೇಕಾದದ್ದು ಕೊರೆವ ಚಳಿ ಮಳೆಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ತಮ್ಮ ಕುಟುಂಬದಿಂದ ದೂರವಿದ್ದು ನಾವು ನೆಮ್ಮದಿಯಿಂದ ನಿದ್ದೆ ಮಾಡಲು ಕಾರಣರಾಗಿರುವ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರನ್ನು. ಉಸಿರು ಬಿಗಿ ಹಿಡಿದು ಉಸಿರು ಚೆಲ್ಲಿ ದೇಶ ಸೇವೆ ಮಾಡಿ ಹೊರಟು ಹೋದ ಅದೆಷ್ಟೋ ವೀರ ಯೋಧರಿಗೆ ನಮ್ಮ ಎರಡು ಹನಿ ಕಂಬನಿಯನ್ನು ಚೆಲ್ಲುವುದನ್ನು ಬಿಟ್ಟು ನಾವೇನೂ ಮಾಡುತ್ತಿಲ್ಲ. ಸಾವಿನ  ಮುನ್ಸೂಚನೆ ಸಿಕ್ಕ ವೀರ ಯೋಧನೊಬ್ಬ ತನ್ನ ಮಡದಿಗೆ ಬರೆದ “ನನ್ನ ನಿನ್ನೆಗಳೂ ನೀನೇ, ನನ್ನ ನಾಳೆಗಳೂ ನೀನೇ, ಎಂದೆಂದು ನೀನೇ ಸಖಿ” ಎನ್ನುವ ಪತ್ರದ ಸಾಲುಗಳನ್ನು ಓದುವಾಗ, ಒಬ್ಬ ಸೈನಿಕನಿಗೆ ಉಗ್ರಗಾಮಿಯೊಬ್ಬ ಮೈಬಣ್ಣ ನೀಲಿ ಕಟ್ಟುವವರಿಗೆ ಹೊಡೆದ ದೃಶ್ಯವನ್ನು ವಾಟ್ಸಪ್ ನಲ್ಲಿ ನೋಡಿದಾಗ, ಕರುಳು ಹಿಂಡಿದಂತಾಗಿ ಕಣ್ಣಿಂದ ನಾಲ್ಕು ಹನಿ ಜಾರುತ್ತದೆ.

ನಮ್ಮ ವಿದ್ಯಾರ್ಥಿಗಳು ಕೂಡ ಸಮಾಜಿಕ ಜಾಲತಾಣಗಳಲ್ಲಿ ಕಾಲೇಜು ಸ್ಪರ್ಧೆಗಳಲ್ಲಿ, ಸೈನಿಕರ ದೇಶ ಪ್ರೇಮದ, ತ್ಯಾಗದ ಕುರಿತಾದ ಪ್ರಹಸನಗಳನ್ನು ಪ್ರಸ್ತುತಪಡಿಸಿ, ಸೈನಿಕನಿಗೊಂದು ನಮನ ಸಲ್ಲಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅದು ಆ ವೇದಿಕೆಗಷ್ಟೇ ಸೀಮಿತವಾಗುತ್ತದೆ. ಇವತ್ತು ಸೆಲೆಬ್ರಿಟಿಗಳನ್ನು ದೇವರಂತೆ ಆರಾಧಿಸುವ, ದೇವಾಲಯ ಕಟ್ಟುವ ಜನರು ಅವರನ್ನು ಸಭೆ ಸಮಾರಂಭಗಳಿಗೆ ಆಹ್ವಾನಿಸಿ ಸಂಭ್ರಮಿಸುವ ಯುವಕರು ಆ ಪ್ರಾಮುಖ್ಯತೆಯನ್ನು ಒಬ್ಬ ಹಾಲಿ ಸೈನಿಕನಿಗಾಗಲಿ, ಮಾಜಿ ಯೋಧನಿಗಾಗಲಿ ನೀಡುತ್ತಿಲ್ಲ ನಿಜವಾಗಿಯೂ ನಮಗೆ ಸೈನಿಕರ ಬಗ್ಗೆ ಪ್ರೀತಿ ಗೌರವವಿದ್ದರೆ ಹಾಲಿ, ಮಾಜಿ ಸೈನಿಕರನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕಾಲೇಜು ವಾರ್ಷಿಕೋತ್ಸವ ಅಥವಾ ಇನ್ನಿತರ ಸಭೆ ಸಮಾರಂಭಗಳಿಗೆ ಆಹ್ವಾನಿಸಿ ಅವರಿಂದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಸನ್ಮಾನಿಸಬೇಕು. ತಮ್ಮ ಸುತ್ತಮುತ್ತಲೂ ವಯಸ್ಸಾದ ಮಾಜಿ ಸೈನಿಕರಿದ್ದರೆ, ಅವರ ಮನೆಗೆ ಹೋಗಿ ಅವರನ್ನು ಸನ್ಮಾನಿಸಿ ಗೌರವಿಸುವ ಕೆಲಸವಾಗಬೇಕು ಎಂದು ಮಾರ್ಗದರ್ಶನ ಮಾಡುವ.“ಎಂಟನೇ ಪಾಠ” ಮೌಲ್ಯಾಧಾರಿತ ಶಿಕ್ಷಣದಲ್ಲಿರಬೇಕು. ಹಾಗೆಯೇ ಇನ್ನಿತರ ಮಾನವೀಯ ಮೌಲ್ಯಗಳ ಬೋಧನೆ ಮುಂದಿನ ಪಾಠಗಳಲ್ಲಿರಬೇಕು....

      ಒಟ್ಟಿನಲ್ಲಿ ಹೇಳುವುದಾದರೆ ಗುರು ಎನಿಸಿಕೊಂಡ ಜ್ಞಾನಿ, ಕೇವಲ ಪಠ್ಯಪುಸ್ತಕದಲ್ಲಿ ನಿಗದಿಪಡಿಸಿದ ವಿಷಯಗಳನ್ನು ಬೋಧಿಸುವ ಮೂಲಕ ಮಾತ್ರ ಒಬ್ಬ ವಿದ್ಯಾರ್ಥಿಯನ್ನು ಸತ್ಪ್ರಜೆಯನ್ನಾಗಿ ಮಾಡಲು ಸಾಧ್ಯವಿಲ್ಲ. ಎಲ್ಲ ಧರ್ಮದವರು ಅನ್ಯೋನ್ಯತೆಯಿಂದ, ಸೋದರತೆಯ ಮನೋಭಾವದಿಂದ, ಜಾತಿ, ಭಾಷೆ, ಧರ್ಮ ಎನ್ನುವ ಭೇದ ಭಾವವಿಲ್ಲದೇ ಅರಿಷಡ್ವರ್ಗಗಳನ್ನು ದೂರವಿರಿಸಿ, ದುಶ್ಚಟಗಳಿಗೆ ಬಲಿಯಾಗದೆ, ಶಿಸ್ತು ಪ್ರಾಮಾಣಿಕತೆ,ಪರೋಪಕಾರದಂತ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ನಾವೆಲ್ಲರೂ ಭಾರತೀಯರು ಎನ್ನುವ ಸದ್ಭಾವನೆಯಿಂದ ಮುನ್ನುಗ್ಗಿ ,ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳವ ಬಗೆಯನ್ನು ವಿವರಿಸುವ, ದೇಶದ ಪ್ರಗತಿಗೆ ಶ್ರಮಿಸಲು ಪೂರಕವಾಗುವ ಮೌಲ್ಯಾಧಾರಿತ ಶಿಕ್ಷಣ ದೇಶದ ಎಲ್ಲ ವಿ.ವಿ. ಗಳಲ್ಲಿ ಶೀಘ್ರವಾಗಿ ಜಾರಿಗೆ ಬರಬೇಕು.

ಶಿಕ್ಷೆ ಇಲ್ಲದ ಶಿಕ್ಷಣ ಸಿಹಿ ಇಲ್ಲದ ಕಬ್ಬಿನಂತೆ.

ಪುಕ್ಕಟೆ ಶಿಕ್ಷಣ ಅಕ್ಕರೆ ಇಲ್ಲದ ಸಕ್ಕರೆಯಂತೆ.

ಅನುಭವವಿಲ್ಲದ ಶಿಕ್ಷಣ ಪುಸ್ತಕ ಓದಿ ಈಜಲು ಕಲಿತಂತೆ.

ಖರೀದಿ ಮಾಡಿದ ಶಿಕ್ಷಣ ಕನ್ನಡಿಯೊಳಗಿನ ಗಂಟಿನಂತೆ.

ಕಾಪಿ ಹೊಡೆಸುವ ಶಿಕ್ಷಣ ಬೇಲಿಯೆ ಎದ್ದು ಹೊಲ ಮೆಂದಂತೆ.

ಗುರುವಿನ ಗುಲಾಮನಾಗಿ ಪಡೆದ ಮೌಲ್ಯಾಧಾರಿತ ಶಿಕ್ಷಣ

ಮನುಕುಲಕ್ಕೆ, ದೇಶದ ಪ್ರಗತಿಗೆ ಎಂದೆಂದು ಭೂಷಣ ..


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal