Tumbe Group of International Journals

Full Text


ಜಾನಪದ ಸಾಹಿತ್ಯದಲ್ಲಿ ಭಕ್ತಿ ಮತ್ತು ದೈವಾರಾಧನೆ

ಎಸ್.ಪಿ. ಅರುಣ,

ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು, ತುಮಕೂರು(ಜಿ).

ಭಾರತ ಮೂಲತಃ ಅಸಂಖ್ಯಾತವಾದ ಹಳ್ಳಿಗಳಿಂದ ಕೂಡಿದ ದೇಶ. ಇಂತಿಪ್ಪ ದೇಶದಲ್ಲಿ ಗ್ರಾಮೀಣರು ಕೃಷಿ ಅವಲಂಭಿತರು. ರೈತ ಕುಟುಂಬದ ಆಗು-ಹೋಗುಗಳ ವೃದ್ಧಿಗೆ ಯಾರೂ ಚಿಂತನೆ ಮಾಡದಿರುವ ಸನ್ನಿವೇಶಗಳಲ್ಲಿ ಉಸಿರು ಹಿಡಿದು ಬದುಕುತ್ತಿರುವ ಬಡರೈತ ಅಸಹಾಯಕನಾಗಿ ಮನದ ದುಃಖ, ಆಸೆ-ಆಕಾಂಕ್ಷೆಗಳ ಪೂರೈಕೆಗೆ ದೇವರಲ್ಲಿ ಮೊರೆಹೊಕ್ಕಿರುವುದು ಸಹಜವೇ ಸರಿ. ಹೀಗೆ ದೇವರಲ್ಲಿ ಇಟ್ಟ ಭಕ್ತಿ, ನಂಬಿಕೆಯಿಂದ ಅವರ ಬದುಕಿನಲ್ಲಿ ಒಂದಷ್ಟು ಖುಷಿ ಮನಸ್ಸಿಗೆ ತುಸು ನೆಮ್ಮದಿ. ಅಂದರೆ ಅಂಬಲಿ ಉಂಡು, ಕಂಬಳಿ ಹೊದೆದು, ಅಂಬುಜಾಕ್ಷನ ನಂಬಿ ಸಂಸಾರ ಮಾಡಿದ ಈ ಜನ ತಮ್ಮ ಪ್ರತಿನಿತ್ಯ ತಮ್ಮ ಆರಾಧ್ಯದೇವರನ್ನು ಸ್ಮರಿಸುತ ಬಾಳಿನ ಕಹಿಮರೆತವರು.

ಜನಪದ ಸಾಹಿತ್ಯಕ್ಕೆ ಒಬ್ಬ ಕರ್ತೃಇಲ್ಲ.  ಇದು ಸಾಮೂಹಿಕ ಸೃಷ್ಟಿ. ಸಮಷ್ಠಿ ಪ್ರಜ್ಞೆಯ ಅಭಿವ್ಯಕ್ತಿ. ಅನಕ್ಷರಸ್ಥ ಜನ ಸಮೂಹದ ನಡುವೆ ವಾಕ್ ಸಂಪ್ರದಾಯದ ಮೂಲಕ ಅರಿದು ಬಂದಿರುವ ಒಂದು ಸಾಹಿತ್ಯ ಪ್ರಕಾರ.

ಮೂಲತಃ ಹಳ್ಳಿಗಾಡಿನ ಜನರು ಕೃಷಿ ಅವಲಂಭಿತರು. ರೈತಬಾಂದವರು ಆಚಾರವಂತರು, ವ್ಯವಹಾರವಂತರು, ಸಂಪ್ರದಾಯಪ್ರಿಯರು. ತಮ್ಮ ಪೂರ್ವಿಕರು ತೋರಿದ ಹೆದ್ದಾರಿಯಲ್ಲಿ ಚಾಚುತಪ್ಪದೇ ನಡೆದು ಬಂದ ನಿಷ್ಠಾವಂತರು. ಇವರ ಬದುಕಿನಲ್ಲಿ ಅನಾದಿ-ಕಾಲದ ಕಂದಾಚಾರ, ಆಚಾರ-ವಿಚಾರ, ಹಬ್ಬ-ಹರಿದಿನ, ಹುಣ್ಣಿಮೆ-ಜಾತ್ರೆ, ಸುಗ್ಗಿ ಸೇರಿದಂತೆ ವಿವಿಧ ಸಂಪ್ರದಾಯಗಳನ್ನ ಅನುಸರಿಸುತ್ತ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬಂದಿದ್ದಾರೆ.

ಗ್ರಾಮೀಣರು ಪೂಜಿಸುವ ದೇವರುಗಳ ಸಂಖ್ಯೆ ದೊಡ್ಡದು. ಕನ್ನಡ ನಾಡಿನಲ್ಲಂತೂ ಇಂತಹ ದೇವರುಗಳ ಹೆಸರು ಬಹುಸಂಖ್ಯೆಯಲ್ಲಿ ದೊರೆಯುತ್ತವೆ. ಒಂದೊಂದು ಸಂಸಾರಕ್ಕೆ, ಮನೆತನಕ್ಕೆ, ಗ್ರಾಮಕ್ಕೆ, ಬುಡಕಟ್ಟಿಗೆ-ಮನೆದೇವರು, ಕುಲದೇವರು ಗ್ರಾಮದೇವರು ಅಥವಾ ಒಕ್ಕಲು ಎಂದು ವರ್ಗಗಳಾಗಿ ವಿಂಗಡಿಸುವವರು. ಈ ದೇವರುಗಳಿಗೆ ಹಬ್ಬ-ಹುಣ್ಣಿಮೆ, ಜಾತ್ರೆ-ಉತ್ಸವಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ವೈಭವದಿಂದ ಸಲ್ಲಿಸುತ್ತಾರೆ. ದೆವ್ವ, ಭೂತ, ಪಿಶಾಚಿ ಹಿಡಿದಾಗ ರೋಗಪೀಡಿತರಾದಾಗ ಬಾಲಗ್ರಹ  ಇತ್ಯಾದಿ ಅನಿಷ್ಟಗಳು ಜೀವನದಲ್ಲಿ ಎದುರಾದಗಲೂ ಅವುಗಳ ಪರಿಹಾರಕ್ಕೆ ದೇವರಿಗೆ ಮುಡಿಪು ಕಟ್ಟುವುದು, ಪೂಜೆಸಲ್ಲಿಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಇಂದಿಗೂ ಇದರ ಪ್ರಭಾವ ಪ್ರತಿಯೊಂದು ಹಳ್ಳಿಹಳ್ಳಿಯ ಮೂಲೆಮೂಲೆಗಳಲ್ಲಿ ಎದ್ದು ಕಾಣುತ್ತವೆ. ಮದುವೆ,  ಮನೆಕಟ್ಟುವಾಗ, ಭೂಮಿಕೊಳ್ಳುವಾಗ ಸೇರಿದಂತೆ ಕೆಲ ಮಹತ್ತರ ಕಾರ್ಯನಿರ್ವಹಣೆಗೆ ದೇವರ ಅಪ್ಪಣೆಯಿಲ್ಲದೇ ಒಂದು ಹೆಜ್ಜೆ ಕೂಡ ಮುಂದೆ ಇಡುವುದಿಲ್ಲ. ಮಳೆ ಬರದಾಗ, ಗ್ರಾಮಕ್ಕೆ ಫ್ಲೇಗ್, ಕಾಲರಾ ಇತ್ಯಾದಿ ಅಪಾಯ ಎದುರಾದಗಲೂ ಸಾಮೂಹಿಕವಾಗಿ ಗ್ರಾಮದೇವರಿಗೆ ವಿಶೇಷ ಪೂಜೆ, ಅರ್ಚನೆ ಮಾಡಿಸುವ ವಾಡಿಕೆಯುಂಟು. ಹೀಗೆ ತಮ್ಮ ಇಷ್ಟದೇವರನ್ನು  ಆರಾಧಿಸುವುದು  ವಾಡಿಕೆ. ಅವರ ದೈವಭಕ್ತಿಗೆ ಅವರು ಹಾಡಿರುವ ಮತ್ತು ಕಟ್ಟಿರುವÀ ಪದಗಳೇ ಸಾಕ್ಷಿ.

ಬೆಳಗಾಗ ನಾನೆದ್ದು, ಯಾರ್ಯಾರ ನೆನೆಯಲಿ

ಎಳ್ಳುಜೀರಿಗೆ ಬೆಳೆಯೋಳೆ ಭೂತಾಯಿ

ಎದ್ದೊಂದುಗಳಿಗೆ ನೆನೆದೇನು

ಮೊದಲಲ್ಲಿ ನೆನೆದೇನು ಮದನ ಗೋವಿಂದನ

ಹದಿನೆಂಟು ನಾಮದೊಡೆಯನ ನೆನೆದರೆ

ಹೊತ್ತಿದ್ದ ಪಾಪ ಪರಿಹಾರ

ಮಾನವ ಕೋಟಿಯನ್ನು ಹೊತ್ತು ಸಾಕಿ, ಸಲಹಿ, ದೊಡ್ಡವರನ್ನಾಗಿ ಮಾಡಿ ತಮ್ಮ ಶ್ರೇಯಸ್ಸಿಗೆ ಕಾರಣವಾದ ಭೂತಾಯಿಯನ್ನು ಎಷ್ಟು ಬಗೆಯಲ್ಲಿ ಪ್ರಾರ್ಥಿಸಿದರೂ ಅವರ ಮನಸ್ಸಿಗೆ ತೃಪ್ತಿಯಿಲ್ಲ. ಹಳ್ಳಿಗರು ಭೂಮಿಗೆ ಕೊಟ್ಟ ಗೌರವ ಅಪಾರವಾದದ್ದು. ಇದರಿಂದ ವ್ಯಕ್ತವಾಗುವ ಅಂಶ ಒಂದು ಭೂತಾಯಿಯ ಕುರಿತು ಧ್ಯಾನಿಸಿದಾಗಲೇ ಅವರ ಕರ್ತವ್ಯದ ಜವಾಬ್ದಾರಿಯುತ ಹೊಣೆಯ ಅರಿವು ಕಾಣುತ್ತದೆ. ಬಾಳಿನ ಸರ್ವತೋಮುಖ ಉದ್ಧಾರಕ್ಕೆ, ಏಳ್ಗೆಗೆ ಕಾರಣರದ ಹಲವು ದೇವರು, ತಂದೆ, ತಾಯಿ ಗುರು ಹಿರಿಯರನ್ನು ಸ್ಮರಿಸುವುದು ಜನಪದರಿಗೆ ಜೀವನದ ಒಂದು ಭಾಗವಾಗಿ ಬೆಳೆದುಬಂದಿದೆ.

ಭಗವಂತನಲ್ಲಿ ಜಾನಪದರು ಇಟ್ಟಿರುವ ಮುಗ್ದ ನಂಬಿಕೆ, ತೋರುವ ಆಸಕ್ತಿ, ಶ್ರದ್ಧೆ, ಭಕ್ತಿ ನಿಷ್ಠೆಗಳಲ್ಲಿ ಕಿಂಚಿತ್ತು ಲೋಪವಿಲ್ಲ. ಏಕೆಂದರೆ ಅದು ಅವರ ಹೃದಯಾಂತರಾಳದಿಂದ ಒಡಮೂಡಿ ಬಂದಿರುವ ಅಮೂಲ್ಯ ರತ್ನಗಳಾಗಿವೆ. ಸಂಸಾರನೌಕೆಯಲ್ಲಿ ಅವರು ಪಡುವ ಪಾಡು ಕೊರಗುವ ಸಂಕಟ ಕೂಗು, ದಿನನತ್ಯದ ದುಡಿತ, ದೈಹಿಕಶ್ರಮ ಅಪಾರವಾದದ್ದು. ಹಾಗೆಯೇ ತಮ್ಮ ಹೃದಯದಲ್ಲಿ ಆಳವಾಗಿ ಬೇರುಬಿಟ್ಟ ಮಾನಸಿಕವೇದನೆ, ದೌರ್ಬಲ್ಯ, ಚಂಚಲತೆ ಕಳೆದುಕೊಳ್ಳುವುದಕ್ಕೆ ದೇವರ ಆಶ್ರಯ ಪಡೆಯುವುದು ಅವರಿಗೆ ಸರ್ವೇ ಸಾಮಾನ್ಯವಾಗಿದೆ. ತಮ್ಮ ಪ್ರಗತಿಗೆ ಪರಮಾತ್ಮನ ಕೃಪೆ ಸಂಪಾದಿಸಿದರೆ ಎಲ್ಲವೂ ಸುಗಮ ಎಂದು ನಂಬಿದ ಮುಗ್ದ ಜನರಿವರು.

ದೇವರ ನೆನೆದರೆ ಸಾವ್ಹುಟ್ಟ ನಮಗಿಲ್ಲ

ಹಾವು ಕಚ್ಚಿದರೂ ವಿಷವಿಲ್ಲ! ಸರ್ಪನ

ಹೆಡೆಯ ದಾಟಿದರೂ ಭಯವಿಲ್ಲ!!

ಮೂರು ಲೋಕಕ್ಕೂ ಒಡೆಯನಾದ ದೈವವನ್ನು ಸತತವಾಗಿ ಧ್ಯಾನಿಸುತ್ತಿದ್ದರೆ ಅವನು ಕೈಬಿಡುವುದಿಲ್ಲ. ಆಘಾತದಿಂದ ಕ್ಷಣಮಾತ್ರದಲ್ಲಿ ಪಾರಾಗಬಲ್ಲೆವೆಂಬ ಮುಗ್ದತನ ಇವರದು. ನಂಬಿದ ದೇವರು ಭಕ್ತರ ಕೈ ಬಿಡುವುದಿಲ್ಲ ಎಂಬ ಭಾವ. ಮನಃಪೂರ್ವಕ ಸೇವೆಸಲ್ಲಿಸಿದ ಭಕ್ತನಿಗೆ ಹಾವು ಕಚ್ಚಿದರೂ ವಿಷವೇರುವುದಿಲ್ಲ, ಹೆಡೆದಾಟಿದರೂ ಭಯವಿಲ್ಲ ಎಂಬ ನಂಬಿಕೆ ಜನಪದರದು.

ಹೊತ್ತು ಮುಳುಗಿದರೇನು ಕತ್ತಲಾದರೇನು!

ಅಪ್ಪ ನಿನ್ನ ಗುಡಿಗೆ ಬರುವೇನು! ಮಾದಯ್ಯ

ಮುತ್ತಿನ  ಬಾಗಿಲು ತೆರೆದಿರೂ!!

ಹೊತ್ತು ಅವರು ಸಾಧಿಸಿದ ಭಕ್ತಿ ನಿಷ್ಠೆಯಿಂದ ಕೂಡಿದ್ದು ತಮ್ಮ ಆಸೆ, ಆಕಾಂಕ್ಷೆಗಳ ಈಡೇರಿಕೆಗಳಿಗೆ ಕಷ್ಟ-ನಷ್ಟ, ನೋವು-ದುಃಖಗಳ ಪರಿಹಾರಕ್ಕೆ ಮಾದಯ್ಯನನ್ನು ಕಾಣಲು ಯಾವುದೇ ಸಮಯವಿಲ್ಲ. ಅನಿವಾರ್ಯವೆನಿಸಿದರೆ ಹಗಲೆಲ್ಲ ದುಡಿದು, ದಣಿದು ರಾತ್ರಿ ಮಬ್ಬುಗತ್ತಲಲ್ಲಿ ದೇವಸ್ಥಾನಕೆ ಬಂದು ಪೂಜೆ ಸಲ್ಲಿಸುತ್ತೇವೆ ಎಂಬ ಆಪ್ತತತೆ ಜನಪದರ ಗೀತೆಗಳಲ್ಲಿ ಅಭಿವ್ಯಕ್ತವಾಗುತ್ತದೆ.

ಹುಟ್ಟುವಾಗ ತರಲಿಲ್ಲ, ಹೋಗುವಾಗ ಒಯ್ಯಲಾರೆ

ಸುಟ್ಟ ಸುಟ್ಟ ಸುಣ್ಣದರಳಾದೆ! ದೇಹವು

ಕಷ್ಟವನು ಬಿಡಿಸೋ ಸೃಷ್ಟಿಗೊಡೆಯ!!

ಈ ಗೀತೆ ಜಾನಪದರ ಪ್ರಾಮಾಣಿಕತೆಗಿಡಿದ ಕನ್ನಡಿ. ಬರುವಾಗ ಬರಿ ಕೈಯಿಂದ ಬಂದೆ, ಹೋಗುವಾಗಲು ಅದೇ ರೀತಿ ನಿರ್ಗಮಿಸುವೆ. ಆದರೆ ಮಧ್ಯಂತರದಲ್ಲಿ ನನ್ನ ದೇಹ ಕಷ್ಟಕ್ಕೆ ಒಳಗಾಗಿ ಸುಟ್ಟ ಸುಣ್ಣ ಅರಳಿದಂತೆ ಹೈದಯ ದುಃಖದಿಂದ ಒಡೆದು, ಛಿದ್ರಛಿದ್ರವಾಗಿರುವುದನ್ನು ಪಡೆಯಲಾರೆ. ಈ ಯಾತನೆಯಿಂದ ಕಾಪಾಡು ಗುರುವೇ ಎಂದು ಅಂಗಲಾಚಿದ್ದಾರೆ. ಅಂದಿನ ಜನತೆ ತಮ್ಮ ವಾಸ್ತವಜಗತ್ತಿನಲ್ಲಿ ಕಂಡುಂಡು ಅನುಭವಿಸಿದ ಚಿತ್ರ ಕೊಡುವಲ್ಲಿ ಅವರ ಪ್ರಾಮಾಣಿಕತನ ಎದ್ದು ಕಾಣುವುದು.

ಆರೆಲೆ ಮಾವಿನ ಬೇರಾಗಿ ಇರುವೋಳೆ

ವಾಲಗದ ಸದ್ದಿಗೆ ಒದಗೋಳೆ! ಸರಸತಿಯೆ!

ನಾಲಿಗೆ ತೊಡರ ಬಿಡಿಸಮ್ಮ.

ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದೊ!

ಮಾಳದಲಿ ಗರಿಕೆ ಚಿಗುರ್ಯಾವ! ಮಾದೇವ!

ಮೂಡ್ಲಲ್ಲಿ ಮಳೆಯು ಸುರಿದಾವೊ!!

ಭಕ್ತಿಯ ಸುಧೆಯೊಂದಿದ ಇಂತಹ ಸಾವಿರ-ಸಾವಿರ ಜನಪದ ಗೀತೆಗಳು ಪಠ್ಯ ಪುಸ್ತಕಗಳಲ್ಲಿ, ಸಿನೇಮಾ, ಧ್ವನಿಸುರುಳಿಗಳಲ್ಲಿ ಮಾತ್ರವಲ್ಲದೇ ಜನರ ಮನಃ ಪಠಲದಲ್ಲಿ ಶಾಶ್ವತ ಸ್ಥಾನಗಳಿಸಿವೆ.

ಉಪ ಸಂಹಾರ

ಜಾನಪದ ಗೀತೆಗಳ ಅಧ್ಯಯನದಿಂದ ಹಳ್ಳಿಗರ ಜೀವನದ ವಿವಿಧ ಏರಿಳಿತಗಳ ಮುಖಗಳ ಅನುಭವ ಸ್ಪಷ್ಟವಾಗಿ ತಿಳಿಯುತ್ತದೆ. ಮಾನವನ ಮೂಲಭೂತ ಆದರ್ಶ ಬಯಕೆಗಳು, ರಸಜೀವನದ ಅನುಭವಗಳು, ಕಷ್ಟ-ಕಾರ್ಪಣ್ಯಗಳು, ದುಃಖ-ದುಮ್ಮಾನ ಈ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿದೆ. ಜೀವನದ ಪ್ರಾರಂಭದಿಂದ ಅಂತ್ಯದವರೆಗೆ ಸಂಸಾರದ ಸುಂಟರಗಾಳಿಗೆ ಸಿಕ್ಕು ಬಡಿದಾಡುತ್ತಿದ್ದ ಜನಪದ ಜನಾಂಗ ಕೊನೆಯಲ್ಲಿ ಬಯಸುವುದು ನೀತಿಬೋಧೆ ಮತ್ತು ಹೃದಯ ವಿಕಾಸ. ಪ್ರತಿ ವ್ಯಕ್ತಿಯ ಮನಸ್ಸು, ಹೃದಯ ಹದಗೊಂಡು ಸಂಸ್ಕಾರಹೊಂದಿದರೆ,  ಆತ್ಮ ದೇವನಲ್ಲಿ ಐಕ್ಯವಾದರೆ ಸಾಕೆಂಬ ಭಾವನೆ ಅವರಲ್ಲಿ ನೆಲೆಸಿರುವುದು ತಿಳಿಯುತ್ತದೆ. ದೇವರನ್ನು ತಮ್ಮ ನಿತ್ಯಜೀವನದ ಸಾಂಸಾರಿಕ ವ್ಯವಹಾರದಲ್ಲಿ ಬೆರೆತು ಒಂದುಗೂಡಿದ ಗೆಳೆಯರಂತೆ ಆಧರಿಸುತ್ತಾರೆ. ಇದು ಜನಪದರು ದೇವರೊಟ್ಟಿಗೆ ಹೊಂದಿದ್ದ ಸಂಬಂಧ, ಸಲುಗೆ ಎಷ್ಟು ನಿಕಟ ಮತ್ತು ಆತ್ಮೀಯವಾದದ್ದು ಎಂಬುದನ್ನು ತೋರಿಸಿಕೊಡುತ್ತದೆ.

ಆಧಾರ ಗ್ರಂಥಗಳು

  1. ಮಲ್ಲಿಗೆ ಮೊಗ್ಗು ಸುರಿದಾವೆ ಚೈತ್ರಶ್ರೀ-93, ಚಿಕ್ಕಮಗಳೂರು ಜಿಲ್ಲೆಯ ಜನಪದ ಉತ್ಸವದ ಸ್ಮರಣ ಸಂಪುಟ, ಲಕ್ಕಪ್ಪ ಗೌಡ, ಬಸವರಾಜ ನೆಲ್ಲಿಸರ.
  2. ಸಂವಹನ ಮಾಧ್ಯಮಗಳು, ಬಿ.ಎಸ್. ಚಂದ್ರಶೇಖರ್, ಪ್ರಸಾರಾಂಗ, ಕನ್ನಡ ವಿವಿ, ಹಂಪಿ
  3. ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ಆಯ್ದ ಲೇಖನಗಳು


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal