Tumbe Group of International Journals

Full Text


ಕನ್ನಡ ಗಾದೆಗಳುಮನುಷ್ಯ ಸ್ವಭಾವದ ವಿಭಿನ್ನ ನೆಲೆಗಳು

ಡಾ.ಎಸ್. ಶಶಿರೇಖಾ

ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು

            ಜನಪದ ಸಾಹಿತ್ಯದಲ್ಲಿ ಗಾದೆಗಳನ್ನು ವೇದಗಳಿಗೆ ಸಮವೆಂದೇ ಹೇಳುತ್ತಾರೆ. ಗಾದೆ ಪ್ರಚಲಿತವಿಲ್ಲದ ದೇಶವಿಲ್ಲ, ಗಾದೆಗಳಿಲ್ಲದ ಭಾಷೆಯಿಲ್ಲ, ಹಾಗೂ ಗಾದೆ ಬಳಸದ ಭಾಷಿಗನಿಲ್ಲವೆಂದೇ ಹೇಳಬಹುದು. ಗಾದೆ ಅನೇಕ ಶತಮಾನಗಳ ಜನರ ಬದುಕಿನ ಅನುಭವಗಳ ಪೂರ್ಣಫಲ. ಕಾಲಕಾಲಕ್ಕೆ ತಕ್ಕಂತೆ ಗಾದೆಗಳು ಮುಂದುವರೆಯುತ್ತವೆ, ಕೆಲವು ಹಾಗೇ ಸ್ವೀಕೃತವಾಗಿ ಬಳಸಲ್ಪಡುತ್ತವೆ, ಮತ್ತೆ ಕೆಲವು ಆಂಶಿಕ ಬದಲಾವಣೆಗೆ ಒಳಗಾಗಿ ಪ್ರಚಲಿತಗೊಳ್ಳತ್ತವೆ. ದೇಶ, ಕಾಲ, ಭಾಷಿಕ ಸಂದರ್ಭಕ್ಕೆ ತಕ್ಕಂತೆ ಗಾದೆಗಳು ಹೊರಬರುತ್ತವೆ. “ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು’’ ಎನ್ನುವ ಗಾದೆಯಂತೆ ತಿಳಿಸಬೇಕಾದ ವಿಚಾರದಲ್ಲಿ ಮುತ್ತಿನಂತೆ ಒಂದೊಂದು ಗಾದೆಗಳು ಬಳಕೆಯಾಗಿ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿಸುತ್ತವೆ. ಭಾಷಾ ಸಂವಹನದಲ್ಲಿ ಅಭಿಪ್ರಾಯ ವಿನಿಮಯದ ತುರ್ತಿನಲ್ಲಿ ಅನೇಕ ಗಾದೆಗಳು ಹೊರಬರುತ್ತವೆ. ಆದ್ದರಿಂದ ಗಾದೆಗಳನ್ನು ಜನಪದ ಅನುಭವಗಳ ಸಾರ ತುಂಬಿದ ಸಮುದ್ರದ ಒಂದೊಂದು ಪರಿಪೂರ್ಣ ಮುತ್ತೆಂದು ಪರಿಭಾವಿಸಬಹುದು.

                        ಗಾದೆಗಳು ಹುಟ್ಟಿದ ಮತ್ತು ಬಳಕೆಯಾಗುವ ಪರಿಸರ, ದೇಶ, ಮತ್ತು ಜನರ ಸಂಸ್ಕøತಿಯ ದ್ಯೋತಕವಾದ ದಾಖಲೆಗಳೆಂದು ಗುರುತಿಸಬಹುದು. `` ಆಕಾರದಲ್ಲಿ ವಾಮನನಂತಿದ್ದರೂ ಅರ್ಥದಲ್ಲಿ ತ್ರವಿಕ್ರಮನಂತಿರುವ ಗಾದೆ ಜನಪದ ಜೀವನದ ಸಾರಸರ್ವಸ್ವವನ್ನೆಲ್ಲ ಭಟ್ಟಿ ರೂಪದಲ್ಲಿ ಒಳಗೊಂಡಿರುವ ರಸಘಟ್ಟಿ.’’1 ಎಂಬ ಪ್ರೊ. ಸುಧಾಕರ ಅವರ ಅಭಿಪ್ರಾಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜನರ ಮನಸ್ಸನ್ನು ಉತ್ತಮತೆಯ ಕಡೆಗೆ ಚಲಿಸುವಂತೆ ಮಾಡವ ಶಕ್ತಿ ಗಾದೆಗಳಿಗಿದೆ. ಸಮಾಜದಲ್ಲಿ ನೀತಿಯುತ ಸೌಹಾರ್ದ ಬದುಕಿಗೆ ಗಾದೆಗಳು ಮಾರ್ಗದರ್ಶಿ ಸೂತ್ರಗಳೆನಿಸಿವೆ. ಸಂಸ್ಕøತದ ಗಾಥಾ, ಪ್ರಾಕೃತದ ಗಾಹೆ ಶಬ್ದಗಳ ತದ್ಭವ ರೂಪವಾಗಿ ಕನ್ನಡದಲ್ಲಿ `ಗಾದೆ` ಶಬ್ದ ರೂಪಗೊಂಡಿದೆ.

            ``ಸಂಸ್ಕøತದ ಲೋಕೋಕ್ತಿ ಹಾಗೂ ಕನ್ನಡದ ನಾಣ್ಣುಡಿ ಗಾದೆಯ ಪ್ರಮುಖ ಲಕ್ಷಣವನ್ನು ಧ್ವನಿಸುವ ಸಮಂಜಸ ಶಬ್ದಗಳಾಗಿವೆ. ಏಕೆಂದರೆ ಲೋಕದಲ್ಲಿ ಪ್ರಚಲಿತವಾಗಿರುವ ಉಕ್ತಿ ನಾಡಿನಲ್ಲಿ ಬಳಕೆಯಲ್ಲಿರುವ ನುಡಿ ಎಂಬುವುಗಳಿಂದ ಸಾರ್ವಜನಿಕ ಅಂಗೀಕಾರದ ಮುದ್ರೆಬಿದ್ದು  ಚಲಾವಣೆಯುಳ್ಳ ನಾಣ್ಯವೇ ಗಾದೆ.’’2 ಸಂಕ್ಷಿಪ್ತವಾದ ಗಂಭೀರ ಪ್ರಜ್ಞೆಯಿಂದ ರೂಪುಗೊಂಡಿರುವ ಗಾದೆಗಳು ಗ್ರಹಿಸಲು ಮತ್ತು ನೆನಪಿಟ್ಟುಕೊಂಡು ಬಳಸಲು ಅನುಕೂಲವೆನಿಸುವ ಚೌಕಟ್ಟು ಹೊಂದಿದ್ದು ಚುರುಕಾದ ಚಲನೆಯನ್ನು ಹೊಂದಿರುತ್ತವೆ. ಆದ್ದರಿಂದಲೇ ಲಾರ್ಡ್ ರಸೆಲ್ `ಹಲವರ ಜ್ಞಾನ ಮತ್ತು ಒಬ್ಬನ ವಿವೇಕವೇ ಗಾದೆ’ ಎಂದಿದ್ದಾನೆ. ಒಂದು ಸಮುದಾಯದ ಬುದ್ಧಿವಂತಿಕೆ ಅವರ ಜೀವನ ಅನುಭವಗಳು ಗಾದೆಗಳಲ್ಲಿ ಸ್ಪಷ್ಟವಾಗಿ ಮೂರ್ತಗೊಂಡಿವೆ. ಸಮುದಾಯದ ಸಂಸ್ಕøತಿ ಮತ್ತು ಸಮಷ್ಟಿಪ್ರಜ್ಞೆಯ ಸಾಕ್ಷಿಯಾಗಿ ಗಾದೆಗಳು ಜನ ಸಮುದಾಯದ ಬದುಕನ್ನು ಬಿಂಬಿಸುತ್ತವೆ. ಗಾದೆಗಳ ರಚನಾ ವಿಧಾನ ವಿಶಿಷ್ಟವಾಗಿರುತ್ತದೆ. ಪ್ರಾಸಬದ್ಧವಾಗಿದ್ದು ನೆನಪಿಡಲು ಸುಲಭವಾಗಿರುತ್ತವೆ. ಆದ್ದರಿಂದಲೇ ಇವು ತಲೆಮಾರಿನಿಂದ ತಲೆಮಾರಿಗೆ, ಬಾಯಿಂದ ಬಾಯಿಗೆ ಹರಿದು ಬರುತ್ತವೆ. ಹೀಗೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಬಾಯಿಂದ ಬಾಯಿಗೆ ಬರುವಾಗ ಅನೇಕ ಮಾರ್ಪಾಡುಗಳನ್ನು ಹೊಂದುತ್ತಾ ಅರ್ಥಸ್ಪಷ್ಟತೆಯ ಕಡೆಗೆ ಬಂದು ನಿಲ್ಲುತ್ತವೆ.

            ಗಾದೆಗಳು ಕಾಲಕ್ಕೆ ತಕ್ಕಂತೆ ಆಂಶಿಕ ಬದಲಾವಣೆಗೊಳ್ಳುತ್ತಾ ಹೊಸದನ್ನು ಸೇರ್ಪಡಿಸಿಕೊಂಡು ಬದಲಾದ ಪರಿಸರಕ್ಕೆ ತಕ್ಕಂತೆ ಕೆಲವನ್ನು ಬಿಟ್ಟುಕೊಂಡು ಮುಂದುವರೆಯುತ್ತವೆ. ಗಾದೆಗಳ ಸೃಷ್ಟಿ ನಿರಂತರ ಹಾಗೂ ಪ್ರಸ್ತುತವಾಗಿ ಸಾಗುತ್ತದೆ. ಆಧುನಿಕ ಸಂದರ್ಭದಲ್ಲಿ `` ಹೆಂಡ್ತಿ ಕರಕೊಂಡು ಬಟ್ಟೆ ಅಂಗಡಿಗೆ ಹೋಗ್ಬೇಡ’’, ``ಮಕ್ಕಳನ್ನು ಕರಕೊಂಡು ಮದುವೆಗೆ ಹೋಗ್ಬೇಡ’’, ``ಗಂಡನ್ನ ಕರಕೊಂಡು ಜಾತ್ರೆಗೆ ಹೋಗ್ಬೇಡ’’  ಎಂಬ ಹೊಸ ಗಾದೆಗಳು ಸೃಷ್ಟಿಯಾಗಿವೆ. ಆಧುನಿಕ ಜಗತ್ತಿನಲ್ಲಿ ಹೊಂದಾಣಿಕೆ ಎಂಬುದು ಬಹಳ ಕಷ್ಟವಾದುದು. ಮನುಷ್ಯರ ಮನಸ್ಥಿತಿಗಳು ಬದಲಾಗಿವೆ. ಆದ ಕಾರಣ ಎಲ್ಲರೂ ಎಲ್ಲ ಕಡೆ ಬರಲು ಇಚ್ಚಿಸುವುದಿಲ್ಲ. ಗಂಡ, ಹೆಂಡತಿ, ಮಕ್ಕಳು ಈ ಮೂವರ ಅಭಿರುಚಿಗಳು ಬೇರೆ ಬೇರೆಯಾಗಿರುತ್ತವೆ. ಒಂದು ಮನಸ್ಥಿತಿಗೆ ತಂದು, ಒಂದು ಸೂತ್ರದಲ್ಲಿ ಎಲ್ಲರನ್ನೂ ಸೇರಿಸುವುದು ಕಷ್ಟ. ಅವರವರ ಅಭಿರುಚಿಯನ್ನು ತಿಳಿದುಕೊಂಡೇ ನಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಧುನಿಕ ಜನರ ಅಭಿರುಚಿ, ವರ್ತನೆಗಳಿಗೆ ತಕ್ಕಂತೆ ಹೊಸ ಗಾದೆಗಳು ಸೃಷ್ಟಿಯಾಗಿವೆ. ಗಾದೆಗಳು ಮನುಷ್ಯ ಸ್ವಭಾವದ ವಿಭಿನ್ನ ನೆಲೆಗಳನ್ನು ತೋರಿಸುತ್ತದೆ. ಗಂಡು, ಹೆಣ್ಣು, ಯುವಕ, ಯುವತಿ, ಗಂಡ, ಹಂಡತಿ, ಮುದುಕ, ಮುದುಕಿ, ತಾಯಿ, ತಂದೆ, ಮಕ್ಕಳು, ಸೋದರ, ಸೋದರಿ, ಅಜ್ಜಿ, ಅಜ್ಜ, ಮೊಮ್ಮಕ್ಕಳು ಅತ್ತೆ, ಸೊಸೆ, ಮಾವ, ಅಳಿಯ, ಎಲ್ಲರ ಸ್ವಭಾವ ಮತ್ತು ವರ್ತನೆಗಳನ್ನು ಹಿನ್ನಲೆಯಾಗಿಟ್ಟುಕೊಂಡು ಗಾದೆಗಳು ರೂಪುಗೊಂಡಿವೆ.

ಹತ್ತು ಮಕ್ಕಳ ತಾಯಾದರೂ

ಸತ್ತ ಮಗನ ಮರೆಯುವುದಿಲ್ಲ

 ತಾಯ್ತನದ ಮಹತ್ವ ತಿಳಿಸುವ ಈ ಗಾದೆ ಎಷ್ಟು ಜನಮಕ್ಕಳಿದ್ದರೂ ತಾಯಿಯ ಪ್ರೇಮ ಮಮಕಾರದಲ್ಲಿ ವ್ಯತ್ಯಾಸವು ಕಾಣುವುದಿಲ್ಲ. ಹೆತ್ತ ಮಗ ಸತ್ತರೂ ಉಳಿದಿರುವ ಮಕ್ಕಳಷ್ಟೇ ಪ್ರೀತಿ ಮನದಲ್ಲಿರುತ್ತದೆ ಎಂದು ತಿಳಿಸುತ್ತದೆ.

ಒಂದು ತಾಯಿಗೋಳಿ ಹತ್ತುಮರಿ ಸಾಕಬಲ್ಲದು

ಹತ್ತು ಮರಿ ಒಂದು ತಾಯಿಗೋಳಿ ಸಾಕಲಾರವು

ಈ ಗಾದೆಯಲ್ಲಿ ಕೋಳಿಯ ನಿದರ್ಶನವನ್ನು ಇಟ್ಟುಕೊಂಡು ಮನುಷ್ಯ ಮಾಡುವ ತಪ್ಪನ್ನು ತಿಳಿಸಲಾಗಿದೆ. ತಾಯಿ ಹೆತ್ತ ಎಲ್ಲ ಮಕ್ಕಳನ್ನು ಸಾಕುತ್ತಾಳೆ. ಅದೇ ಮಕ್ಕಳು ಒಬ್ಬ ತಾಯಿಯನ್ನು ಸಾಕಲು ನಿರಾಕರಿಸುವ ಪರಿಯನ್ನು ಇಲ್ಲಿ ವಿಡಂಬಿಸಿದೆ. 

ಅಕ್ಕನ ಮಕ್ಕಳು ಅಂದ್ಲ ಏರೋ ಹೊತ್ತಿಗೆ

ಮತ್ತೊಟು ಹೆಚ್ತು ಗೌಡ್ ಚಾಕರಿ

ಈ ಗಾದೆಯಲ್ಲಿ ಹೆಣ್ಣನ್ನು ದುಡಿಸಿಕೊಳ್ಳುವ ಬಗೆ ಕಾಣಬಹುದು. ತಂಗಿಯ ಫಲವಿಲ್ಲದ ನಿರಂತರ ಚಾಕರಿಯ ಬಗ್ಗೆ ತಿಳಿಸಲಾಗಿದೆ. ದುಡಿವ ಹೆಂಗಸರ ನಿರರ್ಥಕ ಶ್ರಮವನ್ನು ಧ್ವನಿಸಲಾಗಿದೆ.

ಅಜ್ಜಿಗೆ ಅರಿವೆ ಚಿಂತೆ

ಮೊಮ್ಮಗಳಿಗೆ ಮದುವೆ ಚಿಂತೆ

ಅಜ್ಜಿ ಮತ್ತು ಮೊಮ್ಮಗಳನ್ನು ಇಟ್ಟಕೊಂಡು ಮನುಷ್ಯನ ಆಸೆಗಳು, ಅದಕ್ಕಾಗಿ ಆತ ಪರಿತಪಿಸುವ ಪರಿ ತಿಳಿಸಲಾಗಿದೆ.

ಅಜ್ಜಿಗೆ ಮೊಮ್ಮಗಳು ಕೆಮ್ಮಲು ಕಲಿಸಿದ್ಹಂಗೆ

ಇಲ್ಲಿ ಅಜ್ಜಿ ಅನುಭವಿ, ಮೊಮ್ಮಗಳು ಕಲಿಸಿದಳು ಎಂಬುದರಲ್ಲಿ ಸಮಾಜದಲ್ಲಿ ಎಲ್ಲವೂ ಬಲ್ಲೆವೆಂದು ಬೀಗುವ ಮಂದಿಯ ಸ್ವಭಾವವನ್ನು ವಿಡಂಬಿಸಿದೆ. 

ಇಟ್ಕೊಂಡೋಳು ಇರೋತನಕ

ಕಟ್ಕೋಂಡೋಳು ಕಡೆತನಕ

ಇಲ್ಲಿ ಸಮಾಜದಲ್ಲಿ ನಡೆವ ಅನೀತಿಯನ್ನು ತಡೆಯಲು ಹಾಗೂ ಹೆಂಡತಿಯನ್ನು ಬಿಟ್ಟು ಬೇರೊಂದು ಬಯಸುವ ವ್ಯಕ್ತಿಗೆ ವಾಸ್ತವದ ಅರಿವು ಮೂಡಿಸುವ ಪ್ರಯತ್ನವಿದೆ.

ಸಂತೆ ಸೂಳೆ ನೆಚ್ಚಿ

ಮನೆ ಹೆಂಡ್ರು ಬಿಟ್ಟ

ಇಲ್ಲಿ ನೀತಿಗೆಟ್ಟ ಸಂಸಾರಿಯ ನಿದರ್ಶನವಿಟ್ಟುಕೊಂಡು ಸಮಾಜವನ್ನು ತಿದ್ದುವ ಪ್ರಯತ್ನವಿದೆ.

ಕುಟುಕೊ ಮಳೆ ಬೇಡ

ಲೊಟಕೊ ಹೆಂಡ್ರು ಬೇಡ

ಮನೆಯಲ್ಲಿ ಹೆಣ್ಣು ಹೇಗಿರಬೇಕೆಂಬ ಸೂಚನೆ ಇದೆ. ಕುಟುಕುವ ಮಳೆಯಿಂದ ಆಗುವ ಪ್ರಯೋಜನಕ್ಕಿಂತ ಅನಾನುಕೂಲವೇ ಹೆಚ್ಚು. ಪ್ರೀತಿ ಇಲ್ಲದ ಲೊಟಕೊ ಹೆಂಡತಿ ಕೂಡ ಆಗೆಯೇ.. ಎಂಬ ಧ್ವನಿ ಇದೆ.

ಪಗಡೆ ಆಡಿ ಪಾಂಡವರು ಕೆಟ್ಟರು

ಕವಡೆ ಆಡಿ ಹೆಣ್ಮಕ್ಕಳು ಕೆಟ್ಟರು

ಇಸ್ಪೀಟಾಡಿ ಇದ್ದಬದ್ದೋರು ಕೆಟ್ಟರು

ಇದೊಂದು ಆಧುನಿಕ ಕಾಲಕ್ಕೆ ಬದಲಾಗಿರುವ ಗಾದೆ. ಚಟಗಳು ಮನುಷ್ಯನನ್ನು ಹಾಳು ಮಡುವ ಪರಿ ತಿಳಿಸಲಾಗಿದೆ.

ಅತ್ತೆ ಒಡೆದದ್ದು ಹಳೆ ಮಡಿಕೆ

ಸೊಸೆ ಒಡೆದದ್ದು ಹೊಸ ಮಡಿಕೆ

ಈ ಗಾದೆಯಲ್ಲಿ ಅತ್ತೆ ಮತ್ತು ಸೊಸೆಯ ಸ್ವಭಾವದ ಚಿತ್ರಣವಿದೆ. ಈ ಎರಡೂ ಮೇಲುನೋಟಕ್ಕೆ ವಿರುದ್ಧ ಸ್ವಭಾವಗಳೆನಿಸಿದರೂ ಇಬ್ಬರ ಗುಣ ಮತ್ತು ಕೆಲಸ ಒಂದೇ. ಇಬ್ಬರೂ ಒಡೆಯುವ ಪ್ರಕ್ರಿಯೆಯಲ್ಲಿರುತ್ತಾರೆ.

ಅಳಿಯನ ಅರಮನೇಲಿರೋದ್ಕಿಂತ

ಮಗನ ಕಿರುಮನೇಲಿರದು ಲೇಸು

ಈ ಗಾದೆಯಲ್ಲಿ ಅಳಿಯ – ಮಗ, ಅರಮನೆ-ಕಿರುಮನೆ ಬಳಸಿ ಜೀವನಕ್ಕೆ ಬೇಕಾಗಿರುವ ನೆಮ್ಮದಿ, ಇರುವುದರಲ್ಲಿ ತೃಪ್ತಿ ಪಡಬೇಕೆಂಬುದನ್ನು ಹಾಗೂ ಸ್ವಾಭಿಮಾನವನ್ನು ತಿಳಿಸಲಾಗಿದೆ.

ಅಂಗಿ ಮೇಲಂಗಿ ತರವ?

ಹೆಂಡ್ರು ಮೇಲೆ ಸೂಳೆ ತರವ

ಈ ಗಾದೆಯಲ್ಲಿ ಸರಳ ಮಾತಿನಲ್ಲಿ ಪುರುಷನನ್ನು ತಿದ್ದುವ ಪ್ರಯತ್ನವಿದೆ. ಹೆಣ್ಣು ಸಹನಾಮಯಿ ಮಾತ್ರವಲ್ಲ, ಬುಧ್ದಿವಂತೆ ಎಂಬುದು ಸ್ಪಷ್ಟವಾಗುತ್ತದೆ.

ಮಾಡೋನಿಗೆ ಮಡಕೆ ಚಿಂತೆ

ಮಾಡದೋನಿಗೆ ಕುಡಿಕೆ ಚಿಂತೆ

ಕಷ್ಟಪಟ್ಟು ದುಡಿವವನಿಗೆ ಹಸಿವಾದಾಗ ಅನ್ನದ ನೆನಪಾಗುತ್ತದೆ. ಆತನ ಜೀವನ ಅಷ್ಟೇ ಸರಳ ಕೂಡ. ಆದರೆ ಶ್ರಮದ ಬೆಲೆ ತಿಳಿಯದವನು ಅನ್ಯ ಮೂಲಗಳ ಸಂಪತ್ತಿಗೆ ಆಸೆ ಮಾಡಿಕೊಂಡು ಬದುಕುತ್ತಾನೆ. ಇಲ್ಲಿ ಮನುಷ್ಯನ ಲೋಭ ಧ್ವನಿತವಾಗಿದೆ. 

ಹೊರೆ ಕದ್ದೋನು ಜಾರ್ಕೊಂಡ

ಹಿಡಿ ಕದ್ದೋನು ಸಿಕ್ಕೊಂಡ

ಕದಿಯುವ ಆಲೋಚನೆ ಅಪಾಯಕಾರಿ, ಎಷ್ಟೇ ಚಿಕ್ಕದಾದರೂ ಕಳ್ಳತನ ಮಾಡಬಾರದೆಂದು ಎಚ್ಚರಿಸುವ ಈ ಗಾದೆ ಕಳ್ಳನ ಮೇಲಿರುವ ತೂಗು ಕತ್ತಿಯ ಬಗ್ಗೆ ತಿಳಿಸುತ್ತದೆ.

ಆಕರ ಗ್ರಂಥಗಳು

  1. ಪ್ರೊ.ಸುಧಾಕರ, ಕನ್ನಡ ಒಗಟುಗಳು, ಹೊನ್ನುಬಿತ್ತೇವು ಹೊಲಕೆಲ್ಲ ಪುಟ- 242.
  2. ಪ್ರೊ.ಸುಧಾಕರ, ಪ್ರಸ್ತಾವನೆ, ನಮ್ಮ ಸುತ್ತಿನ ಗಾದೆಗಳು, ಕಾವ್ಯಶ್ರೀ ಪ್ರಕಾಶನ ಮೈಸೂರು, ಮುದ್ರಣ-2011.
  3. ಗಾದೆಗಳ ಆಕರ : ಪ್ರೊ.ಸುಧಾಕರ, ನಮ್ಮ ಸುತ್ತಿನ ಗಾದೆಗಳು, ಕಾವ್ಯಶ್ರೀ ಪ್ರಕಾಶನ ಮೈಸೂರು, ಮುದ್ರಣ-2011.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal