Tumbe Group of International Journals

Full Text


ತೇಜಸ್ವಿಯವರಮಿಸ್ಸಿಂಗ್ ಲಿಂಕ್ : ಮಾನವಶಾಸ್ತ್ರೀಯ ಅಧ್ಯಯನ.

ಅಖ್ತರ್  ಎಸ್.

ಸಂಶೋಧನಾ ವಿದ್ಯಾರ್ಥಿನಿ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಡಾ. ರಾಜಪ್ಪದಳವಾಯಿ,

 ಸಹಾಯಕ ಪ್ರಾಧ್ಯಾಪಕರು, (ಸಂಶೋಧನಾ ಮಾರ್ಗದರ್ಶಕರು)

ಸ್ನಾತಕೋತ್ತರ ಕೇಂದ್ರ, ಕನ್ನಡ ವಿಭಾಗ, ಮಂಗಸಂದ್ರ, ಕೋಲಾರ.

              ಕನ್ನಡ ಸಾಹಿತ್ಯವು ಹಲವಾರು ಜ್ಞಾನಶಿಸ್ತುಗಳನ್ನು ಹೊಂದಿದ್ದು ಅತ್ಯಂತ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆ.  ಇಂತಹ ಜ್ಞಾನಶಿಸ್ತುಗಳಲ್ಲಿ ಮಾನವಶಾಸ್ತ್ರೀಯ ಅಧ್ಯಯನವೂ ಸಹ ಒಂದು.  ಈ ಕುರಿತು ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಮಿಸ್ಸಿಂಗ್ ಲಿಂಕ್’ ಎಂಬ ಕೃತಿಯಲ್ಲಿ ಕುತೂಹಲಕಾರಿಯಾದ ಅಂಶಗಳನ್ನು ಚರ್ಚಿಸಿದ್ದಾರೆ. ಮಾನವಶಾಸ್ತ್ರಕ್ಕೆ ಸಂಬಂಧಿಸಿದಂತೆ, ನಾಲ್ಕುಕಾಲಿನ ಪ್ರಾಣಿಯಾಗಿದ್ದ ಮಾನವ ಹೇಗೆ ? ಏಕೆ ? ಯಾವಾಗ ? ಮನುಷ್ಯ (ದ್ವಿಪಾದಿ) ನಾಗುತ್ತಾ ಬಂದ ಎಂಬುದನ್ನು ಕಳೆದ ಹಲವಾರು ವರ್ಷಗಳಿಂದ ವಿಜ್ಞಾನಿಗಳು ನಡೆಸುತ್ತಾ ಬಂದಿರುವ ಪತ್ತೇದಾರಿ ಕೆಲಸವನ್ನೇ ಪತ್ತೇದಾರಿ ಕತೆಯಾಗಿ ಹೇಳುವ ಮೂಲಕ ತೇಜಸ್ವಿಯವರು ಓದುಗರ ಗಮನ ಸೆಳೆದಿದ್ದಾರೆ.  ಮಾನವನ ‘ಪಳೆಯುಳಿಕೆ’ಯ ಕೊಂಡಿ ಎಲ್ಲಿ ಕಳಚಿಕೊಂಡಿದೆ ಎಂಬ ಮಾಹಿತಿಯನ್ನು ಇದು ಒಳಗೊಂಡಿದೆ.  ಚಾಲ್ರ್ಸ್‍ಡಾರ್ವಿನ್ ತನ್ನ ಸತ್ಯಾನ್ವೇಷಣೆಯ ಪಥದಲ್ಲಿ ‘ವಿಕಾಸವಾದ’ ವನ್ನು ಮಂಡಿಸಿದ ವಿಷಯ ನಮಗೆ ತಿಳಿದಿದೆ.  ಈತ ಪಳೆಯುಳಿಕೆಗಳ ಸಾಕ್ಷಾಧಾರಗಳನ್ನೆಲ್ಲಾ ಸಂಗ್ರಹಿಸುತ್ತಾ ‘ಆರಿಜನ್ ಆಫ್ ಸ್ಪೀಷಿಸ್’ ಅಥವಾ ‘ಜೀವ ಸಂಕುಲದ ಉಗಮ’ ಎನ್ನುವ ಗ್ರಂಥವನ್ನು ಪ್ರಕಟಿಸಿದ.  ಇದರಲ್ಲಿ ‘ಮನುಷ್ಯ ಮಂಗನಿಂದ ಉದ್ಭವಿಸಿದ, ಎಂಬ ಮಾತು ಸುಳ್ಳು (ಪುಟ-5, ಮಿಸ್ಸಿಂಗ್ ಲಿಂಕ್) ಎಂದು ವಾದ ಮಾಡಿದ.  ಜೀವ ಸಮುಚ್ಛಯ ಹೇಗೆ ಕಾಲದಿಂದ ಕಾಲಕ್ಕೆ ತಮ್ಮ ಪ್ರಾಚೀನ ಸ್ವರೂಪದಿಂದ ಬದಲಾವಣೆ ಹೊಂದುತ್ತಾ ರೂಪಾಂತರಗೊಂಡು ಈಗಿನ ಕಾಲದಲ್ಲಿ ನಮ್ಮೆದುರಿಗಿದ್ದಾವೆ ಎಂಬುದನ್ನು ಪಳೆಯುಳಿಕೆಗಳ ಆಧಾರಗಳನ್ನು ಮುಂದಿಟ್ಟು ಈ ಕೃತಿಯಲ್ಲಿ ತನ್ನ ಸಿದ್ಧಾಂತವನ್ನು ಮಂಡಿಸಿದ್ದಾನೆ ಎನ್ನುತ್ತಾರೆ ತೇಜಸ್ವಿಯವರು.  ಡಾರ್ವಿನ್ನನ ಕೃತಿಯ ಕೊನೆಯ ಭಾಗದಲ್ಲಿ “ಇದೇ ಪ್ರಕಾರವಾಗಿ ಮನುಷ್ಯನ ಉಗಮದ ಮೇಲೂ ಹೆಚ್ಚು ಬೆಲೆ ಚೆಲ್ಲಲು ಸಾಧ್ಯವಾಗಬಹುದು”(ಪುಟ-5, ಮಿಸ್ಸಿಂಗ್ ಲಿಂಕ್) ಎಂಬ ಆತನ ಊಹನಾ ಸಿದ್ಧಾಂತವನ್ನು ‘ಮಿಸ್ಸಿಂಗ್ ಲಿಂಕ್’ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.  ಡಾರ್ವಿನ್ನನ  ಈ ಊಹನೆಯು ಮಾನವನ ವಿಕಾಸದ ಕುರಿತು ಹೊಸ ಆಲೋಚನೆಗಳ ಮೂಲಕ ಸಂಶೋಧನೆ ನಡೆಸಲು ಪ್ರೇರಣೆ ನೀಡುತ್ತದೆ.

     ಮನುಷ್ಯನ ಉಗಮದ ಮೇಲೆ ಡಾರ್ವಿನ್ನನಿಗೂ ಅವನ ಸಂಶೋಧನೆಗಳಿಂದ ಸೂಕ್ತ ಉತ್ತರಗಳು ಲಭಿಸದ ಕಾರಣ ಈ ರೀತಿಯಾದ ಊಹನೆಯನ್ನು ನಮ್ಮ ಮುಂದಿಟ್ಟಿದ್ದಾನೆ.  ಮಾನವ ಮಂಗನಿಂದ ಬಂದನೋ ಇಲ್ಲ ಬೇರೆ ಎಲ್ಲಿಂದಲಾದರೂ ಬಂದನೋ! ದೇವರೇನೇದಾದರೂ ಇವನನ್ನು ಸೃಷ್ಟಿಸಿದ್ದರೆ ಆ ದೇವರನ್ನು ಸೃಷ್ಟಿ ಮಾಡಿದವರ್ಯಾರು?  ದೇವರುಗಳ ಸೃಷ್ಟಿಕರ್ತರು ಮತ್ಯಾರಾದರೂ ಇರಬಹುದಲ್ಲವೇ?  ಎಂಬ ವಿಚಾರ ಡಾರ್ವಿನ್ನನ ಮನಸ್ಸಿನಲ್ಲಿ ‘ವಿಕಾಸವಾದ’ ರೂಪುಗೊಳ್ಳಲು ಕಾರಣವಾದ ಅನುಭವಗಳು ಈ ಪುಸ್ತಕದಲ್ಲಿ ಕಂಡು ಬರುತ್ತವೆ.

     ಕನ್ನಡದಲ್ಲಿ ‘ ಹಳೆಯ ಉಳಿಕೆ’ ಸಮಾಸವಾಗಿ ‘ಪಳೆಯುಳಿಕೆ’ ಗಳು ಎನ್ನುವ ಪಾರಿಭಾಷಿಕ ಪದ ರೂಪುಗೊಂಡಿದೆ.  ಪ್ರಕೃತಿಯ ವಿಕೋಪದಿಂದ ಅಥವಾ ಸಾವಿನ ನಂತರ ಮನುಷ್ಯ, ಪ್ರಾಣಿಗಳು, ಸಸ್ಯಗಳು ಭೂಮಿಯಲ್ಲಿ ಹೂಳಲ್ಪಟ್ಟಾಗ ಇವುಗಳ ಅವಶೇಷಗಳು ಭೂ ಗರ್ಭದಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗಿ ಶಿಲಾಸದೃಶವಾಗುವ ಅಸ್ಥಿಪಂಜರಗಳನ್ನು ನಾವು ಇಂದು ‘ಪಳೆಯುಳಿಕೆ’ಗಳೆಂದು ಕರೆಯುತ್ತಿದ್ದೇವೆ.  ಈ ರೀತಿಯಾಗಿ ದೊರೆತಂತಹ ಪಳೆಯುಳಿಕೆಗಳನ್ನು ಕಲೆಹಾಕಿ ಅಧ್ಯಯನಕ್ಕೊಳಪಡಿಸಿ ಸಿಕ್ಕ ಆ ಮೂಳೆ ಅಥವಾ ತಲೆಬುರುಡೆಯ ವಯಸ್ಸೆಷ್ಟು, ಯಾವ ಕಾಲದಲ್ಲಿ ಅದು ಇದ್ದಿರಬಹುದೆಂದು ಸಂಶೋಧನೆ ಮಾಡಿ ದಾಖಲು ಮಾಡುವುದೇ ಭೌತಮಾನವಶಾಸ್ತ್ರ.

ಮಾನವಶಾಸ್ತ್ರದಲ್ಲಿ ಎರಡು ಪ್ರಬೇಧಗಳಿವೆ. 1. ಭೌತ ಮಾನವಶಾಸ್ತ್ರ 2. ಸಾಂಸ್ಕøತಿಕ ಮಾನವಶಾಸ್ತ್ರ. ‘ಮಿಸ್ಸಿಂಗ್ ಲಿಂಕ್’ ಎಂಬ ಈ ಕೃತಿಯು ಭೌತ ಮಾನವಶಾಸ್ತ್ರದ ವಿಷಯಗಳನ್ನು ಒಳಗೊಂಡಿದೆ. ಭೌತ ಮಾನವಶಾಸ್ತ್ರವು ಮನುಷ್ಯನ ಪಳೆಯುಳಿಕೆಗಳನ್ನು ಕುರಿತು ಅಧ್ಯಯನ ಮಾಡಿದಂತೆ, ಸಾಂಸ್ಕøತಿಕ ಮಾನವಶಾಸ್ತ್ರ ಮಾನವನ ಸಂಸ್ಕøತಿಯ ವಿಧಿ ವಿಧಾನಗಳನ್ನು ಅಧ್ಯಯನ ಮಾಡುತ್ತದೆ. ಮನುಷ್ಯ ವಿಕಾಸಹೊಂದುತ್ತಾ ಯಾವ ರೀತಿಯಾಗಿ ಸಂಘ ಜೀವಿಯಾಗತೊಡಗಿದ, ಕುಟುಂಬ ವ್ಯವಸ್ಥೆ ಎಂಬುದು ಹೇಗೆ ಪ್ರಾರಂಭವಾಯಿತು, ಅದರ ಆಚರಣೆಗಳೇನು? ಇದರ ಕಟ್ಟಳೆಗಳೇನು? ಈ ಎಲ್ಲವುಗಳನ್ನು ಕುರಿತು ಅಧ್ಯಯನ ಮಾಡುವಂಥದ್ದು ಸಾಂಸ್ಕøತಿಕ ಮಾನವಶಾಸ್ತ್ರ.  ಈ ಕುರಿತ ಹೆಚ್ಚಿನ ಅಧ್ಯಯನಗಳು ಭಾರತಕ್ಕಿಂತ ಪಾಶ್ಚಿಮಾತ್ಯ ದೇಶಗಳಲ್ಲೇ ನಡೆಯುತ್ತಿವೆ.

     ಮನುಷ್ಯ ಮೂಲತಃ ಒಂದು ಪ್ರಾಣಿ ಎಂಬುದನ್ನು ಮಾನವಶಾಸ್ತ್ರ ಮತ್ತೆ ಮತ್ತೆ ಸೂಚನೆ ನೀಡುತ್ತಿರುತ್ತದೆ.  ಮಂಗಗಳು ಮಾನವನಾಗುವ ಎಲ್ಲಾ ಸಾಧ್ಯತೆಗಳಿದ್ದಾಗಿಯೂ ಮಾನವನಾಗದೇ ಉಳಿದುಕೊಳ್ಳುವಾಗ ಆ ಕೊಂಡಿ ಎಲ್ಲಿ ಕಳಚಿಕೊಂಡಿದೆ ಎಂಬುದೇ ‘ಮಿಸ್ಸಿಂಗ್ ಲಿಂಕ್’ ಎಂಬುದರ ಅರ್ಥ.  ಸಮಕಾಲೀನ ಮಾನವರು, ವಾನರರೂ ಭೂ ಮಂಡಲದ ಮೇಲೆ ಒಟ್ಟಿಗೇ ವಿಕಾಸಗೊಳ್ಳುತ್ತಾ ಬಂದಿರುವುದರಿಂದ ಈ ಎರಡು ಕವಲುಗಳಿಗೂ ಮೂಲವಾದ ಪ್ರಾಣಿಯೊಂದು ಕಾಲಗರ್ಭದ ಯಾವುದೋ ಹಂತದಲ್ಲಿ ಇದ್ದಿರಬೇಕೆನ್ನುವುದೇ ಡಾರ್ವಿನ್ನನ ಕಲ್ಪನೆಯಾಗಿತ್ತೆಂಬುದನ್ನು ತೇಜಸ್ವಿಯವರು ಈ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

     ಮಾನವನ ವಿಕಾಸದ ಏಳು ಹಂತಗಳಲ್ಲಿ “ಕ್ರೋಮ್ಯಾಗ್ನಾನ್ ಮಾನವ ಕ್ರಿಸ್ತಪೂರ್ವ ಐವತ್ತು ಸಾವಿರ ವರ್ಷದಿಂದೀಚೆಗೆ ಬದುಕಿದ್ದವ, ವiತ್ತು ಆಧುನಿಕ ಮಾನವನ ಮೂಲ ಪುರುಷ” (ಪುಟ-14, ಮಿಸ್ಸಿಂಗ್ ಲಿಂಕ್) ಎಂದು ಹೇಳಲಾಗಿದೆ.  ಈ ಅಧ್ಯಯನ ಮುಂದುವರೆದು “ನೆಂದರ್ಥಾಲ್ ಮಾನವ ಕ್ರಿ.ಪೂ. ಎರಡು ಲಕ್ಷ ವರ್ಷದಿಂದ ಐವತ್ತು ಸಾವಿರ ವರ್ಷದವರೆಗೂ ಬದುಕಿದ್ದ.  ಹೋಮೋ ಎರೆಕ್ಟಸ್ ಮಾನವನು ಕೊನೆಯ ಆವೃತ್ತಿಯವ.  ‘ಹೋಮೋ ಎರೆಕ್ಟಸ್’ ಎಂದರೆ ನೆಟ್ಟಗೆ ನಡೆಯುವ “ದ್ವಿಪಾದಿ ಮನುಷ್ಯ” (ಪುಟ-14-15 ಮಿಸ್ಸಿಂಗ್ ಲಿಂಕ್) ಎಂದು ಉಲ್ಲೇಖಿಸಲಾಗಿದೆ.  ಚಿಂಪಾಂಜಿಗಳು ಹೆಚ್ಚೂ ಕಡಿಮೆ ಮಾನವನಂತೆಯೇ ಕಂಡು ಬಂದರೂ ಅವುಗಳ ಮೈಮೇಲೆ ಕೂದಲು ಹೆಚ್ಚು ಮತ್ತು ಇವುಗಳ ಕೈಗಳೂ ಮನುಷ್ಯನಂಥದೇ ಆದರೂ ಅಷ್ಟು ಸಮರ್ಪಕವಾಗಿಲ್ಲ.  ಮಾನವನಂತೆ ಚಿಂಪಾಂಜಿಗಳು ದ್ವಿಪಾದಿಯಾಗಿ ನಡೆಯಬಲ್ಲವಾದರೂ ಅವುಗಳನ್ನು ಮಾನವನೊಂದಿಗೆ ಸಮೀಕರಿಸಲಾಗುವುದಿಲ್ಲ.

              ಆಧುನಿಕ ಮಾನವನ ಮೂಲಪುರುಷ ಎನ್ನುವ “ಕ್ರೋಮಾಗ್ನಾನ್ ಮಾನವನ ಬಳಿಗೆ ಬರುವ ವೇಳಗಾಗಲೇ ಇವನನ್ನು ನಾಗರೀಕನೆಂದು ಕರೆಯಲಾಗದಿದ್ದರೂ ನಾಗರೀಕತೆ ಸಂಸ್ಕøತಿಗಳ ಮುನ್ಸೂಚನೆಗಳು ಇವನಲ್ಲಿ ಪ್ರಾರಂಭವಾಗಿರುವುದನ್ನು ನೋಡಬಹುದು.  ಇವನ ಹೃದಯದಲ್ಲಿ ಸೂಕ್ಷ್ಮಭಾವನೆಗಳು, ಆಲೋಚನೆಗಳು ಉದಿಸತೊಡಗಿದ್ದವು.  ಚಿತ್ರಕಲೆ ಮತ್ತು ಕೆತ್ತನೆಯ ಕೆಲಸ ಕಲಿತಿದ್ದನು.” (ಪುಟ-16-17 ಮಿಸ್ಸಿಂಗ್ ಲಿಂಕ್) ಎನ್ನಲಾಗಿದೆ. ಕ್ರೋಮ್ಯಾಗ್ನಾನ್ ಮತ್ತು ನೆಂದರ್ಥಾಲ್ ಮಾನವರಿಬ್ಬರಿಗೂ ಬೆಂಕಿಯ ಉಪಯೋಗ ಗೊತ್ತಿದ್ದ ಸ್ಪಷ್ಟ ಸಾಕ್ಷಿಗಳಿವೆ ಎಂಬ ಉಲ್ಲೇಖಗಳು ಈ ಕೃತಿಯಲ್ಲಿವೆ.  ವಿಕಾಸ ಪಥದಲ್ಲಿ ಹಿಂದೆ ಹಿಂದೆ ಹೋದಂತೆ ಮಾನವನ ರೂಪದಲ್ಲಿ ಮನುಷ್ಯ ಗುಣಗಳನ್ನು ಕಾಣುವುದು ಕಡಿಮೆಯಾಗುತ್ತಾ ಹೋಗುವುದನ್ನೂ ನಾವು ಗಮನಿಸಬಹುದು.  ಮಾನವನಿಗೆ ಮುಂದಿನ ಕೋರೆಹಲ್ಲುಗಳು ನಶಿಸಿದ್ದು ಒಂದು ಮುಖ್ಯವಾದ ವಿಕಾಸದ ಹಂತ. ಕೋರೆಹಲ್ಲು ನಶಿಸಿದ್ದರಿಂದಲೇ ಆತ ತನ್ನ ಕೈಗಳನ್ನು ಬಳಸಿ, ಶ್ರಮವಹಿಸಿ ಆಯುಧಗಳನ್ನು ಸೃಷ್ಟಿಸಲು ಹೊರಟ.  ಮಂಗಗಳ ಮುಂದುವರೆದ ಭಾಗ ಚಿಂಪಾಂಜಿ, ಗೋರಿಲ್ಲಾ, ಓರಾಂಗೋಟಾಂಗ್, ಗಿಬನ್ ಇವು ಮಂಗಗಳಿಂತ ಹೆಚ್ಚು ಬುದ್ಧಿವಂತ ಪ್ರಾಣಿಗಳು.  “ಮರದಿಂದ ಇಳಿದು ನೆಲದ ಬದುಕಿಗೆ ಒಗ್ಗಲು ತಡಮಾಡಿದ್ದರಿಂದ ಗಿಬನ್‍ಗಳ ಕಾಲು ಬೆರಳುಗಳೂ ಉದ್ದವಾಗಿ ಕಾಲುಗಳೂ ಕೈಗಳ ಕೆಲಸ ಮಾಡತೊಡಗಿದವು.  ಇಲ್ಲೇ ಇವು ಮಾನವನಾಗುವ ಅವಕಾಶ ಕಳಕೊಂಡವು.  ನಾಲ್ಕು ಕಾಲಿನ ಪ್ರಾಣಿಗಳು ಹೇಗೆ ಮಾನವನಾಗಲು ಸಾಧ್ಯವಿಲ್ಲವೋ ಹಾಗೆ ನಾಲ್ಕು ಕೈಗಳ ಪ್ರಾಣಿಕೂಡಾ.”(ಪುಟ-130 ಮಿಸ್ಸಿಂಗ್ ಲಿಂಕ್) ಕೈಗಳಿಗೆ ಶ್ರಮಕೊಟ್ಟು ಪ್ರಯತ್ನ ಪಟ್ಟಿದ್ದರೆ ಇವೂ ಇಂದು ಆಧುನಿಕ ಮಾನವನಂತೆ ಜೀವಿಸುತ್ತಿದ್ದವೇನೋ? “ಜನರಲ್ ಪರ್ಪಸ್ ಎಂಬ ವಾನರರಿಗೆ ಮಾನವನಾಗುವ ಅವಕಾಶ ಹೆಚ್ಚಿದೆ” (ಪುಟ-130, ಮಿಸ್ಸಿಂಗ್ ಲಿಂಕ್) ಎಂಬ ಸೂಚನೆಯನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.  ಈ ಕುರಿತ ಸಂಶೋಧನೆಗಳನ್ನು ಕೈಗೊಳ್ಳಲು ಅನೇಕ ಸಾಧ್ಯತೆಗಳಿವೆ.

     ಭೌತಮಾನವಶಾಸ್ತ್ರಕ್ಕೆ ಸಂಬಂಧಿಸಿದ ‘ಮಿಸ್ಸಿಂಗ್ ಲಿಂಕ್’ ಕೃತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಸಾಂಸ್ಕøತಿಕ ಮಾನವಶಾಸ್ತ್ರವನ್ನು ಅರ್ಥೈಸಿಕೊಳ್ಳಬಹುದು.  ಮನುಷ್ಯನ ಮೂಲವನ್ನು ತಿಳಿಯುವುದರ ಉದ್ದೇಶ ಆತ ಮೊದಲು ಹೇಗಿದ್ದ ಮತ್ತು ಹೇಗೆ ಬದುಕುತ್ತಿದ್ದಾನೆ ಎಂಬುದು ಪೂರ್ಣಚಂದ್ರತೇಜಸ್ವಿಯವರು ಈ ಕೃತಿಯ ಮೂಲಕ ಮಾನವಶಾಸ್ತ್ರದ ಒಳನೋಟಗಳನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.  ಇಂತಹ ಒಳನೋಟಗಳಲ್ಲಿ ಇಣುಕಿ ನೋಡುವ ಕೆಲಸ ನಮ್ಮ ಸಂಶೋಧಕರಿಂದಾದರೆ ಮಾನವಶಾಸ್ತ್ರದ ಕುರಿತು ಮತ್ತಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಯುವಂತಾಗುತ್ತದೆ.

     ಸದ್ಯ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ವ್ಯಾಪಕವಾಗಿರುವ ಇಂತಹ ಅಧ್ಯಯನ ಶಾಖೆಗಳು ನಮ್ಮ ದೇಶದಲ್ಲೂ ಪ್ರಚಾರಕ್ಕೆ ಬರುವುದರಿಂದ ಈ ಕುರಿತು ಸಮಾಜದಲ್ಲಿ ಅರಿವು ಮೂಡಿಸಿದಂತಾಗುತ್ತದೆ.  ಶಾಲಾ-ಕಾಲೇಜುಗಳಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪಠ್ಯಗಳ ಜೊತೆಗೆ ಮಾನವಶಾಸ್ತ್ರ ಕುರಿತ ಪಠ್ಯಗಳು ಸೇರ್ಪಡೆಯಾದರೆ ವಿದ್ಯಾರ್ಥಿಗಳಲ್ಲಿ ಈ ಅಧ್ಯಯನ ಕುರಿತು ಹೆಚ್ಚಿನ ಆಸಕ್ತಿ ಮೂಡಿಸಿದಂತಾಗುತ್ತದೆ.  ಇಂತಹ ಪಠ್ಯಗಳು ಹೆಚ್ಚಾಗಿ ಪ್ರಚಾರಕ್ಕೆ ಬಂದಂತೆ ಕನ್ನಡದ ಜ್ಞಾನ ವಲಯ ವಿಸ್ತರಿಸುತ್ತದೆ.

ಆಕರ ಗ್ರಂಥ:

  1. ಮಿಸ್ಸಿಂಗ್ ಲಿಂಕ್, ಪೂರ್ಣಚಂದ್ರತೇಜಸ್ವಿ, ಪುಸ್ತಕ ಪ್ರಕಾಶನ-1997.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal