ಭಾರತೀಯ ಸಮಾಜ, ಸಂಸ್ಕೃತಿ ಮತ್ತು ಮಹಿಳೆ
ಬಿ. ರೇವಣ್ಣ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಎಸ್.ಜೆ.ಎಂ.ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
ಚಂದ್ರವಳ್ಳಿ, ಚಿತ್ರದುರ್ಗ- 577
Email : revannab12@gmail.com
ಭಾರತೀಯ ಸಮಾಜ ಮತ್ತು ಮಹಿಳೆ ಎನ್ನುವಾಗ ಎಲ್ಲಾ ಜನ ಸಮುದಾಯಗಳಲ್ಲಿ ಭಿನ್ನ ವಿಭಿನ್ನ ಸಂಸ್ಕೃತಿಗಳಿವೆ. ಈ ಎಲ್ಲಾ ಜನ ಸಮುದಾಯಗಳಲ್ಲಿ ಮಹಿಳೆ ಸ್ಥಿತಿಗತಿ ಮೇಲೆ ಸಮಾನವಾಗಿ ಬೆಳಕು ಚೆಲ್ಲುವ ಕಾರ್ಯ ಜೀವರ್ಪನಾಗಿ ನಡೆದಿದೆಯೇ ಎಂದು ಯೋಚಿಸಿದಾಗ ತೀರಾ ನಿರ್ಣಾದಾಯಕವಾದ ಉತ್ತರವೇ ನಮಗೆ ದೊರೆತೀತು. ಕಾರಣ ಇವತ್ತಿಗೂ ಹೆಣ್ಣು ಹುಟ್ಟಿನಿಂದ ಹಂತ ಹಂತವಾಗಿ ಬೆಳೆದಂತೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿರುವ ಚಿತ್ರಣಗಳು ಇಂದಿನ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ನಿದರ್ಶನಗಳೇ ನಮಗೆ ಕೈಗನ್ನಡಿಯಾಗಿದೆ.
ಭಾರತೀಯ ಸಮಾಜ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ದುರ್ಗಾ, ಕಾಳಿ, ಚಂಡಿ ಮುಂತಾದ ಹೆಸರುಗಳಿಂದ ಕರೆದು ಗೌರವಿಸುವಂತಹದು ಕಾಣುತ್ತೇವೆ. ಆದರೆ ಅದೇ ಹೆಣ್ಣು ಜೀವಿತಾವಧಿಯಲ್ಲಿ ನಮ್ಮ ಜೊತೆಗೆ ಇರುವಾಗ ಹೆಣ್ಣನ್ನು ಸಮಾನ ಮನಸ್ಥಿತಿಯಿಂದ ಗೌರವಿಸದೇ ಇರುವುದು ವಿಪರ್ಯಾಸ. ನಮ್ಮಲ್ಲಿ ಗಂಡು ದೇವರುಗಳು ಹೆಚ್ಚು ಜನಮನ್ನಣೆ ಪಡೆಯುತ್ತಿದ್ದರೆ ಅದಕ್ಕೆ ಕಾರಣ ಹೆಣ್ಣು ದೇವರುಗಳಿಂದ. ಆದರೆ ಅದೇ ಹೆಣ್ಣು ದೇವರುಗಳು ಯಾವ ಪುರುಷ ದೇವರುಗಳು ಪಕ್ಕದಲ್ಲಿ ಇರದೆಯೇ ಜನ ಮನ್ನಣೆ ಪಡೆದಿರುವುದು ಗಮನಾರ್ಹವಾಗಿದೆ. ಮಾನವ ಪರಂಪರೆಯ ಉದ್ದಕ್ಕೂ ಮಹಿಳೆ ಯಾತನೆಗಳನ್ನು ಅನುಭವಿಸುತ್ತಿರುವುದು ಸಂಕಟಕಾರಿಯಾಗಿದೆ. ಜನಪದ ಮಹಿಳೆಯೊಬ್ಬಳು ತನ್ನ ಅಸ್ಥಿತ್ವಗಳನ್ನು ಜನಪದ ಕಾವ್ಯದಲ್ಲಿ ಹೀಗೆ ಅಭಿವ್ಯಕ್ತಿಸಿದ್ದಾರೆ. “ಹೆಣ್ಣಿನ ಗೋಳಟ್ಟಿ ಬನ್ನಿಯ ಮರಬೆಂದೊ ಅಲ್ಲಿ ಸನ್ಯಾಸಿ ಮಠ ಬೆಂದೊ ಹಾರುವರ ಪರಚಾಂಗಕತ್ತಿ ಉರಿದಾವೊ” ಅಂದರೆ ಬನ್ನಿಯ ಮರಕ್ಕೆ ಪೂಜೆ ಸಲ್ಲಿಸಲು ಹೋದಾಗ ಹೆಣ್ಣಿನ ಕಷ್ಟಗಳ ವೇದನೆಯಿಂದ ಬನ್ನಿ ಮರ ಬೆಂದೋಯಿತು ಮತ್ತು ಹಾರುವರ ಪಂಚಾಂಗಗಳು ಕೂಡ ಹೆಣ್ಣಿನ ಅಸ್ಮಿತೆಗಳಿಂದ ಸುಟ್ಟು ಹೋದವು ಎಂದು ಹೇಳುವ ಹೆಣ್ಣಿನ ಸಂಕಟಕಾರಿ ವಿಷಮಗಳು ಎಷ್ಟು ತೀವ್ರತೆಯಿಂದ ಇದ್ದವು ಎಂದು ಗೊತ್ತಾಗುತ್ತೆ. ತಾನೇ ಸೃಷ್ಟಿಸಿದ ಮರ ನೆರಳು ಕೊಡುತ್ತದೆ ಎಂದರೆ ಇಲ್ಲಿ ಯಾರಿಂದಲೂ ಸಾಂತ್ವಾನದ ಮಾತುಗಳು ಕೂಡ ಸಿಗದೆ ಹೆಣ್ಣು ‘ಅಬಲೆ’ಯಾಗಿ ಸಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಸ್ವತಂತ್ರ ಭಾರತದ ಪರಿಕಲ್ಪನೆ, ಅಂಬೇಡ್ಕರವರ ಸಂವಿಧಾನ ಆಶಯದಂತೆ ಆದರ್ಶ ಸಮಾಜದ ಪರಿಕಲ್ಪನೆಯಿಂದ ನಿರ್ಮಾಣವಾಗಬೇಕಾದ ಸಮಾಜ ಲಿಂಗತಾರತಮ್ಯವನ್ನು ಇಟ್ಟುಕೊಂಡು ರೋಗಗ್ರಸ್ಥ ಸಮಾಜ ನಿರ್ಮಾಣವಾಗುತ್ತಿರುವುದು ವಿಷಾದನೀಯ. ವೇದಗಳ ಕಾಲದಿಂದ ಹಿಡಿದು ಇಂದಿಗೂ ಕೂಡ ಹೆಣ್ಣಿಗೆ ಶೀಲ ಮತ್ತು ಪಾವಿತ್ರ್ಯತೆ ಎಂಬುದು ಪ್ರಾಣಕ್ಕಿಂತ ಮಿಗಿಲಾದದು. ಯಾವುದೋ ಕಾರಣದಿಂದ ಅಚಾನಕ್ಕಾಗಿ ಬಲತ್ಕಾರಕ್ಕಾಗಿ ಒಳಗಾಗಿ ಈ ಸುದ್ದಿ ಬಹಿರಂಗಗೊಂಡರೆ ಅವಳ ಜೀವನವೇ ಮುಗಿದೇ ಹೋಯಿತು. ನಾಯಿ ಮುಟ್ಟಿದ ಮಡಿಕೆಯಂತೆ ಇರಬೇಕಾಗುತ್ತದೆ. ಪುರುಷರಿಗೆ ಮಾತ್ರ ಈ ರೀತಿಯಾದ ನಿಯಮಗಳು ಅನ್ವಯ ಆಗದಿರುವುದು ವಿಪರ್ಯಾಸ.
ಈ ರೀತಿ ಅನ್ಯಾಯಕ್ಕೆ ಒಳಗಾದ ಹೆಣ್ಣು ನ್ಯಾಯಾಲಯಕ್ಕೆ ಮತ್ತು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಕೇಳುವ ಅಶ್ಲೀಲವಾದ ಪ್ರಶ್ನೆಗಳಿಗೆ ಉತ್ತರ ಕೊಡಲಾರದೆ ತಲೆ ತಗ್ಗಿಸಿ ನಿಂತಾಗ ಅಪರಾಧಿಗೆ ಜಯ ಸಿಗುತ್ತದೆ. ಇಂತಹ ಪ್ರಕರಣಗಳನ್ನು ಪರಿಶೀಲಿಸುವಾಗ ಕಾನೂನು ಚೌಕಟ್ಟುಗಳನ್ನು ಪರಮಾರ್ಶಿಸುವುದು ಅಗತ್ಯವೆನಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಸ್ವತಂತ್ರಳಲ್ಲ, ಈ ದಿನಕ್ಕೂ ತಂದೆಯೇ ಮನೆಯ ಯಜಮಾನ ( ಬುಡಕಟ್ಟು ಸಮುದಾಯಗಳಲ್ಲಿ ತಾಯಿಯೇ ಕುಟುಂಬದ ಯಜಮಾನಿಯಾಗಿರುವ ನಿದರ್ಶನಗಳು ಇವೆ. ಆದರೆ ಆರ್ಯ ಸಂಸ್ಕೃತಿಯ ಪ್ರಭಾವದಿಂದ ಇವರಲ್ಲಿಯೂ ಕೂಡ ಈಗ ತಂದೆಯೇ ಮನೆಯ ಯಜಮಾನನಾಗಿರುವುದು ಕಂಡುಬರುತ್ತದೆ). ಹೆಣ್ಣು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕೂಡ ತನ್ನ ಪಾಂಡಿತ್ಯವನ್ನು ಅಡುಗೆ ಮನೆಯಲ್ಲಿ ಪ್ರದರ್ಶಿಸಬೇಕಾಗುತ್ತದೆ. ಹೆಣ್ಣು ಮಗಳೂ ಎಂದಿದ್ದರೂ ಪರರ ಮನೆಗೆ ಹೋಗುವವಳು, ಪರರ ಸೊತ್ತು ಎನ್ನುತ್ತಾ ಹುಟ್ಟಿದಂದಿನಿಂದಲೂ ಗಂಡನ ಮನೆಯಲ್ಲಿ ಹೇಗೆ ಬದುಕಿ ಬಾಳಬೇಕೆಂಬ ನೀತಿ ಪಾಠ ಮತ್ತು ಕೊಟ್ಟ ಮನೆಯಲ್ಲಿ ಹುಟ್ಟಿದ ಮನೆಯ ಕೀರ್ತಿ ಪತಾಕೆ ಹಾರಿಸು, ತವರು ಮನೆಗೆ ಕೆಟ್ಟ ಹೆಸರು ತರಬೇಡ ಎಂದು ಹೇಳಿಕೊಟ್ಟು ಗಂಡನ ಮನೆಗೆ ಕಳಿಸಿಕೊಡಲಾಗುತ್ತದೆ.
ಹಿಂದಿನ ಕಾಲದಲ್ಲಿ ಮದುವೆಗಳು ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಂತಿದ್ದವು. ಆದರೆ ಈಗ ವಿದ್ಯಾಭ್ಯಾಸ, ಸೌಂದರ್ಯ ಇವೆಲ್ಲವೂ ಗೌಣವಾಗಿ ಆಕೆ ತರಬಹುದಾದ ಆರ್ಥಿಕ ಮೊತ್ತವಷ್ಟೇ ‘ಮದುವೆ’ ಮಾರುಕಟ್ಟೆಯಲ್ಲಿ ಚಲಿಸುವ ನಾಣ್ಯವಾಗಿದೆ. ವರದಕ್ಷಿಣೆಯ ಮೊತ್ತ ಕಮ್ಮಿಯಾಗಿ ಆಕೆಯ ಮೇಲೆ ಹಲವು ವಿಧದ ದೌರ್ಜನ್ಯಗಳು ನಡೆದು ಸತ್ತು ಹೋಗಿರುವ ನಿದರ್ಶನಗಳು ಸಾಕಷ್ಟು ಇವೆ. ಆದರೆ ಸುಮಾರು ತಂದೆ ತಾಯಂದಿರು ಪೊಲೀಸ್ ಠಾಣೆಗೆ ದೂರು ಕೊಡುವುದಕ್ಕೆ ಇಷ್ಟಪಡುವುದಿಲ್ಲ, ಕಾರಣ ಮಗಳಂತೂ ಹೋದಳು, ಇನ್ನೂ ಕೋರ್ಟ್ ಕಛೇರಿ ತಿರುಗುವುದರಿಂದ ಏನು ಪ್ರಯೋಜನ? ಎಂದು ಉದಾಸೀನ ತಾಳುವ ತಂದೆ ತಾಯಿಗಳು ಇದ್ದಾರೆ. ಹಾಗಾಗಿ ಎಷ್ಟೋ ಹೆಣ್ಣು ಮಕ್ಕಳು ಎಷ್ಟೋ ಕಷ್ಟಗಳು ಬಂದರೂ ಕೂಡ ಗಂಡನ ಮನೆಯಲ್ಲಿಯೇ ಕಷ್ಟ ನಷ್ಟಗಳನ್ನು ಅನುಭವಿಸುತ್ತಾ ಸಾಯುತ್ತಾರೆಯೇ ಹೊರತು, ತವರು ಮನೆಗೆ ಹಿಂತಿರುಗುವುದಿಲ್ಲ. ಯಾವ ತಂದೆ ತಾಯಿ ಕೂಡ “ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲವಾದರೆ ತವರಿಗೆ ಹಿಂತಿರುಗಿ ಬಾ” ಎಂದು ಹೇಳುವುದಿಲ್ಲ. “ಪತಿಯೇ ಪರದೈವ” ವೆಂದು ಗಂಡನ ಪಾದಗಳಡಿಯಲ್ಲಿ ಹೆಂಡತಿ ಸ್ವರ್ಗ ಕಾಣಬೇಕಾಗುತ್ತದೆ. ಅವಳಿಗೆ ಆ ಸ್ವರ್ಗ ನರಕವಾಗಿದ್ದರೂ ಕೂಡ ಅನುಭವಿಸಿ ಸಾಯಬೇಕಾಗುತ್ತದೆ. ಹೀಗೆ ಪರಂಪರೆಯ ಉದ್ದಕ್ಕೂ ಹೆಣ್ಣಿನ ಮೇಲೆ ನಡೆಯುತ್ತಿರುವ ಅಸಂಖ್ಯಾತ ಅತ್ಯಾಚಾರದ ಪ್ರಕರಣಗಳಿಂದಾಗಿ ಭಾರತೀಯರಾದ ನಾವು ತಲೆತಗ್ಗಿಸಬೇಕಾಗುತ್ತದೆ. ನಮ್ಮ ಪರಂಪರೆಯಲ್ಲಿ ಹೆಣ್ಣನ್ನು ಭಾವನಾತ್ಮಕವಾಗಿ ನದಿ, ಭೂಮಾತೆಗೆ ಹೋಲಿಸಿ ಫಲವಂತಿಕೆ ಸಂಕೇತಗಳೆಂದು ಭಾವಿಸಿ ಪೂಜಿಸುತ್ತೇವೆ. ಆದರೆ ಇದೇ ಹೆಣ್ಣಿನ ಮೇಲೆ ನಿರಂತರ ಅತ್ಯಾಚಾರ, ಕೊಲೆ, ಸುಲಿಗೆಯಂತಹ ದೌರ್ಜನ್ಯದ ಪ್ರಕರಣಗಳನ್ನು ಗಮನಿಸಿದರೆ, ಪುರುಷ ಪ್ರಧಾನ ಸಮಾಜದ ಕರಾಳತೆಯ ಮುಖಗಳು ಅನಾವರಣಗೊಳ್ಳುತ್ತವೆ. ಅದರಲ್ಲಿಯೂ ಮೂರು ನಾಲ್ಕು ವರ್ಷದ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಆಶ್ರಯ ಕೊಡುವ ತಂದೆಯೇ ಮಗಳ ಮೇಲೆ ಅತ್ಯಾಚಾರ, ಬುದ್ಧಿಮಾಂಧ್ಯ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಗಮನಿಸಿದರೆ ಪುರುಷನ ಆಳದಲ್ಲಿರುವ ಕಾಮುಕತೆ, ಕ್ರೌರ್ಯ ಹಾಗೂ ಅವರ ಅಮಾನವೀಯತೆಯ ಭಯಾನಕ ಸ್ವರೂಪ ಅರ್ಥವಾಗುತ್ತದೆ.
ಪ್ರಸ್ತುತ ಜಗತ್ತು ಎಷ್ಟೆಲ್ಲಾ ಆಧುನಿಕತೆ, ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿಯ ಉತ್ತುಂಗ ಸ್ಥಿತಿಯನ್ನು ಮುಟ್ಟಿದರೂ ಸಹ ಮನುಷ್ಯ ಮಾತ್ರ ದಿನೇದಿನೇ ಅಂತಃಕರಣವನ್ನು ಕಳೆದುಕೊಂಡು ವಿಕೃತ ಅನಾಗರೀಕತೆಯ ಕಡೆಗೆ ಮುಖಮಾಡಿದ್ದಾನೆ ಎಂದೆನಿಸುತ್ತದೆ. ಆದ್ದರಿಂದ ಮನುಷ್ಯ ಮಾನಸಿಕ ರೋಗಿಯಾಗಿ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಮ್ಮ ಪರಂಪರೆಯಲ್ಲಿ ಮಹಿಳಾ ದೌರ್ಜನ್ಯದ ಬಹುದೊಡ್ಡ ಚರಿತ್ರೆ ಇದೆ. ಸತಿ ಸಹಗಮನ ಪದ್ಧತಿ, ವಿಧವಾ ವಿವಾಹ, ಬಸವಿ ಬಿಡುವುದು, ಬೆತ್ತಲೆಸೇವೆ, ಕೆರೆಗೆ ಹಾರದಂತಹ ಜನಪದ ಕಥನಗಳು ಸಾಕ್ಷಿಯಾಗಿ ನುಡಿಯುತ್ತವೆ. ಪುರಾಣದ ಸ್ತ್ರೀ ಪಾತ್ರಗಳಾದ ಸೀತೆ, ಅಹಲ್ಯೆ, ಶೂರ್ಪನಖಿ, ದ್ರೌಪದಿ, ಮುಂತಾದವರ ಶೋಷಿತ ಸ್ತ್ರೀ ಸಮುದಾಯದ ಪ್ರತಿನಿಧಿಗಳೆ ಸರಿ. ದ್ರಾವಿಡ ಪೋಷಿತ ಮಾತೃ ಸಂಸ್ಕೃತಿಪ್ರಧಾನ ವ್ಯವಸ್ಥೆಯನ್ನು ಹತ್ತಿಕ್ಕುವ ಮೂಲಕ ಅಸ್ತಿತ್ವಕ್ಕೆ ಬಂದ ಆರ್ಯ ಪ್ರತೀತ ಪಿತೃಪ್ರಧಾನ ಸಮಾಜದ ಅರ್ಥದಲ್ಲಿಯೇ ಸ್ತ್ರೀ ವಿರೋಧಿ ಧೋರಣೆ ಇದೆ. ಮಹಿಳಾ ಶೋಷಣೆಯ ಆಚರಣೆಗಳಾದ ಧರ್ಮ, ಸಂಸ್ಕೃತಿ, ಶಾಸ್ತ್ರ, ಸಂಪ್ರದಾಯಗಳ ಮೂಲಕ ಮೌಢ್ಯ ಕಂದಾಚಾರದ ಕಂದಕಕ್ಕೆ ದೂಡಲಾಗಿದೆ. ಮಹಿಳೆಯರು ಎಲ್ಲಿ ಗೌರವಿಸಲ್ಪಡುತ್ತಾರೋ, ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳುವ ಮನುಧರ್ಮಶಾಸ್ತ್ರವೇ “ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ ಎಂದು ಹೇಳುವ ಮೂಲಕ ಮಹಿಳೆ ಕೇವಲ ಪುರುಷನ ಉಪಭೋಗದ ವಸ್ತುವಾಗಿ ಅಧಿಕೃತಗೊಳಿಸುತ್ತದೆ. ಈ ಕಾರಣದಿಂದಲೇ ವೇದ ಶಾಸ್ತ್ರ, ಪುರಾಣ, ಆಗಮಾದಿಗಳೆಲ್ಲಾ ನಂಬಿಕೆ ಕಳೆದುಕೊಂಡು ಪ್ರಶ್ನೆಗೆ ಗುರಿಯಾಗಿವೆ. ಪುರಷನೇ ಜಾಣನೇನಲ್ಲ, ಎಲ್ಲಾ ಕಾಲದೊಳಗೆ ಹೆಣ್ಣು ಜಾಣೆಯಾಗಿರುತ್ತಾಳೆ ‘ತುಸು’ ವೇಗದೊಳಗೆ, ಗಂಡೇ ವಿವೇಕನೇನಲ್ಲ, ಎಲ್ಲಾ ಕಾಲಗಳಲ್ಲಿ ಹೆಣ್ಣು ಹಾಗನಿಸುವಳು ಕ್ಷಣ ಕಾಲ ಚಿಂತಿಸಿದಲ್ಲಿ. (ಢೆರಿಗಾಥಾ- ಡಾ ಮಧು ವೆಂಕಾರೆಡ್ಡಿ) ಹೆಣ್ಣಿನ ಬುದ್ಧಿ, ವಿಕಾಸ, ದೈಹಿಕ ಬಲವರ್ಧನೆಯನ್ನು ಈ ಸಮಾಜ ಎಂದಿಗೂ ಬಯಸಿಲ್ಲ. ಬುದ್ಧಿ ಬಲಿತರೆ ಪ್ರಶ್ನಿಸಬಲ್ಲಳೆಂದು ಅಕ್ಷರ ಕಲಿಕೆಯಿಂದಲೂ ದೂರವಿಟ್ಟಿತು. ದೇಹ ಬಲಿತರೆ ಪ್ರತಿಭಟಿಸಬಲ್ಲಳೆಂದು ಭಯದಿಂದ ವ್ರತಾಚಾರಗಳನ್ನು ಹೇಳಿ ಉಪವಾಸಕ್ಕೆ ತೊಡಗಿಸಿತು. ಈ ಹಿನ್ನೆಲೆಯಲ್ಲಿ ಮಹಿಳೆ ಶೋಷಣೆಗೆ ಈಡಾಗಿರುವುದನ್ನು ಗಮನಿಸಿದ ಜ್ಯೋತಿ ಬಾಪುಲೆ ಮಾತೆ ಸಾವಿತ್ರಿಬಾಯಿ ಪುಲೆ ದಂಪತಿಗಳು ಸ್ವತಂತ್ರ ಪೂರ್ವದಲ್ಲಿಯೇ ಮಹಿಳೆಗೆ ಅಕ್ಷರ ಕಲಿಸುವುದರ ಮೂಲಕ ಸಂಸ್ಕೃತಿ, ಶಾಸ್ತ್ರ, ಸಂಪ್ರದಾಯಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ವೈಚಾರಿಕ ಪ್ರಜ್ಞೆಗೆ ಕಹಳೆಯನ್ನು ಊದಿದರು.
ಈ ಎಲ್ಲಾ ಐತಿಹಾಸಿಕ ಬೆಳವಣಿಗೆಗಳ ಅರಿವಿದ್ದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ಒಂದು ಕರೆಯನ್ನು ಕೊಟ್ಟರು. “ಮಹಿಳೆಯರು ದೇವಾಲಯಗಳ ಮುಂದೆ ನಿಲ್ಲುವ ಸಾಲು, ಗ್ರಂಥಾಲಯಗಳ ಮುಂದೆ ನಿಲ್ಲುವಂತಾದರೆ” ಸಮಾಜದಲ್ಲಿ ಮಹಿಳೆಯರಿಗೆ ಪ್ರಶ್ನಿಸುವ ಧೈರ್ಯ ಬರುತ್ತದೆ. ಆಗ ಸ್ವಾತಂತ್ರ್ಯ, ಸಮಾನತೆ, ಹಕ್ಕು ಬಾಧ್ಯತೆಗಳ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇಂದು ಮಹಿಳೆ ದಿನನಿತ್ಯ ಅಭದ್ರತೆಯಲ್ಲಿ ಆತಂಕದಿಂದ ಬದುಕುವ ವಾತಾವರಣ ನಿರ್ಮಾಣವಾಗಿರುವುದಕ್ಕೆ ಯಾರು ಹೊಣೆಗಾರರು? ಮಾಧ್ಯಮಗಳು ಭಿತ್ತರಿಸುತ್ತಿರುವ ಕಾಮ ಪ್ರಚೋದಿತ ದೃಶ್ಯಾವಳಿಗಳೇ? ತಂತ್ರಜ್ಞಾನ ಆಧುನಿಕತೆ ಅಂತರ್ಜಾಲದಲ್ಲಿರುವ ಮುಕ್ತ ಮಾಹಿತಿ ದುರ್ಬಳಕೆಯೇ? ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಕಾನೂನುಗಳು ದುರ್ಬಲವಾಗಿದ್ದಾವೆಯೇ? ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಜಾತಿ, ಧರ್ಮ, ಪಕ್ಷಪಾತವೇ? ಈ ಜಾಹೀರಾತು ಜಗತ್ತಿನಲ್ಲಿ ತಾಯಿತನದ ಸ್ವರೂಪದ ಹೆಣ್ಣು, ಸಂವೇದನೆಗಳನ್ನು ಕಳೆದುಕೊಂಡಿರುವ ಕೇವಲ ಸರಕೇ? ಈ ಎಲ್ಲಾ ಅನಾರೋಗ್ಯಕರ ಸ್ಥಿತಿಗೆ ಚಿಕಿತ್ಸೆಯ ಮೂಲ ಎಲ್ಲಿ? ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಸಂವಿಧಾನಬದ್ಧವಾದ ಗಂಭೀರ ಶಿಕ್ಷೆಗೆ ಗುರಿಪಡಿಸುವುದರ ಮೂಲಕ ಅತಿ ಹೆಚ್ಚು ಮಹಿಳಾ ಠಾಣೆಗಳನ್ನು ತೆರೆಯುವುದರ ಮೂಲಕ ಮತ್ತು ಪುರುಷನಿಗೆ ಕಾನೂನಿನ ತೀಕ್ಷ್ಣತೆಯ ಬಗೆಗೆ ಎಚ್ಚರಿಕೆಯ ಅರಿವನ್ನು ಮೂಡಿಸುವುದರ ಮೂಲಕ ಸಮಾನತೆಯ ಹೂದೋಟವನ್ನು ನಿರ್ಮಿಸಬೇಕಾಗುತ್ತದೆ. ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ನಿರ್ಭೀತಿಯಿಂದ ಹೇಳಿಕೊಳ್ಳುವ ಹಾಗೂ ಸ್ವತಃ ಮಹಿಳೆಯರೇ ತಮ್ಮ ಮೇಲಾಗುವ ಎಲ್ಲಾ ಬಗೆಯ ದೌರ್ಜನ್ಯಗಳನ್ನು ಸ್ವತಃ ಮಹಿಳೆಯರೇ ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯವನ್ನು ಕಡ್ಡಾಯಗೊಳಿಸುವ ಶಾಲಾಕಾಲೇಜುಗಳಲ್ಲಿ ಓದುವ ಮಕ್ಕಳ ಪೋಷಕರು ಹಾಗೂ ಅಲ್ಲಿನ ಆಡಳಿತ ಮಂಡಳಿ ಸಿಬ್ಬಂದಿಯ ಜೊತೆಗೆ ಕಾಲಕಾಲಕ್ಕೆ ಸಮಾಲೋಚನಾ ಸಭೆಯನ್ನು ಕಾನೂನುಬದ್ಧವಾಗಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಇದು ಸಾಧ್ಯವಾದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಪ್ರಮಾಣವನ್ನು ತಡೆಗಟ್ಟಬಹುದೆನ್ನಿಸುತ್ತದೆ.
ಕಾನೂನಾತ್ಮಕ ಸಂಗತಿಗಳ ಪ್ರಾಮಾಣಿಕ ಅನುಷ್ಠಾನದ ಜೊತೆಗೆ ಈ ಬಗೆಯ ದೌರ್ಜನ್ಯಗಳ ವಿರುದ್ಧ ಪ್ರಬಲವಾದ ಹೋರಾಟಗಳು ಸಾಮಾಜಿಕ ಹೋರಾಟಗಳು ಜಾಗೃತಿಗೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಅನ್ಯಾಯಗಳ ವಿರುದ್ಧ ಸಂಘಟನಾತ್ಮಕ ಪ್ರತಿಭಟನಾ ಧ್ವನಿಗಳು ಇಲ್ಲದಂತಾಗಿವೆ. ನಿರಂತರ ಶೋಷಣೆ, ಅತ್ಯಾಚಾರ, ಕೊಲೆ, ದೌರ್ಜನ್ಯಗಳು ವರದಿಯಾಗುತ್ತಿದ್ದರೂ ಸಹ ಇದು ‘ತಮಗೆ ಸಂಬಂಧಿಸಿದ್ದಲ್ಲ’ ಎನ್ನುವಂತಹ ವಿಕಾರ ಮನೋಧರ್ಮ ಪ್ರಬಲವಾಗಿ ಬೆಳೆಯುತ್ತದೆ. ಯಾವುದೇ ಜಾತಿ ಧರ್ಮ, ಲಿಂಗ ತಾರತಮ್ಯಗಳ ಮೇಲೆ ಅನ್ಯಾಯಗಳು ನಡೆದಾಗ ಪ್ರಾಮಾಣಿಕವಾದ ಜಾತ್ಯಾತೀತ ಹೋರಾಟದ ಮನೋಭಾವ ವ್ಯಾಪಕವಾಗಿ ಎಲ್ಲರಲ್ಲೂ ಜಾಗೃತಗೊಳಿಸಬೇಕಿದೆ. ಆಗ ಮಾತ್ರ ಮನುಷ್ಯ ಸಮಾಜ ಶೂನ್ಯತೆ ಕಣ್ಣಳತೆಯಿಂದ ಹೊರಬಂದು ಸ್ವಸ್ಥ ಮಾನವೀಯ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ.
ಪರಾಮರ್ಶನ ಗ್ರಂಥಗಳು