Tumbe Group of International Journals

Full Text


ಅಗ್ರಹಾರಕಾದಂಬರಿ : ಸ್ತ್ರೀವಾದಿ ಹಾಗೂ ಸಮಕಾಲೀನ ಚಿಂತನೆ

ಲಕ್ಷ್ಮೀಕಾಂತ

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಜಾನಪದ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-583276.

ಮೊ.ಸಂ-9900389923.

E-mail : llakshmikantha960@gmail.com

‘ಅರಳವ್ವ’ ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಲೋಕಕ್ಕೆ ಮಹಿಳಾ ಪರವಾದ ಹೊಸತೊಂದು ಬೆಳಕಿನ ಹಣತೆಯನ್ನು ಹಚ್ಚಿದ್ದ ಪ್ರೊ.ಹೆಬ್ಬಾಲೆ ಕೆ. ನಾಗೇಶ್ ಅವರ ಮತ್ತೊಂದು ಗಮನಾರ್ಹವಾದ ಕಾದಂಬರಿ ‘ಅಗ್ರಹಾರ’. ದಲಿತ ಬರಹಗಾರರಾಗಿ ಆ ಲೋಕದ ಜನರ ನೋವು-ನಲಿವುಗಳ ಅರಿವಿರುವ ಇವರಲ್ಲಿ ತಮ್ಮ ಬರಹಗಳ ಮೂಲಕ ಅವರ ನೋವಿಗೆ ಮಿಡಿಯುವ ಗುಣವನ್ನು ಕಾಣಬಹುದು. ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಪರವಾದ ಧ್ವನಿ ಹಾಗೂ ಶಿಕ್ಷಣದ ಆಶಯವನ್ನು ವ್ಯಕ್ತಪಡಿಸುವ ಇವರ ‘ಅಗ್ರಹಾರ’ ಕಾದಂಬರಿ ಸಮಕಾಲೀನ ಸಂದರ್ಭದಲ್ಲಿ ಗಂಭೀರ ಅಧ್ಯಯನಕ್ಕೆ ಹಾಗೂ ಓದಿಗೆ ನಮ್ಮನ್ನು ತೊಡಗಿಸುತ್ತದೆ.

            ಕಾದಂಬರಿಯು ಪ್ರಧಾನವಾಗಿ ಅಂಬೇಡ್ಕರರ ಶಿಕ್ಷಣದ ಆಶಯ ಮತ್ತು ಸ್ತ್ರೀ ಸ್ವಾತಂತ್ರ್ಯದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ರಚಿತವಾಗಿದೆ. ಕಾದಂಬರಿಯ ಪ್ರಾರಂಭದಲ್ಲಿಯೆ ಕಂಡುಬರುವ ಬುದ್ಧ, ಬಸವ ಹಾಗೂ ಅಂಬೇಡ್ಕರರ ಮಾತುಗಳು ಈ ಕಾದಂಬರಿಯ ಒಟ್ಟಾರೆ ಆಶಯವನ್ನು ನಮ್ಮ ಮುಂದಿಡುತ್ತವೆ.

            ಕಾದಂಬರಿಯು ‘ಅಗ್ರಹಾರ’ ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಬ್ರಾಹ್ಮಣ  ಸಮುದಾಯವನ್ನು   ಕೇಂದ್ರೀಕರಿಸಿಕೊಂಡಿದ್ದರೂ ಸಹ, ಬ್ರಾಹ್ಮಣ ಜಾತಿಯಲ್ಲಿಯೆ ಅಡಗಿರಬಹುದಾಗಿರುವ ಮತ್ತು ಇನ್ನೂ ಉಳಿದಿರುವ ಜಾತಿ ಪರಿಕಲ್ಪನೆ, ಅಸ್ಪøಶ್ಯತೆ ಹಾಗೂ ದಲಿತತ್ವದ ಹುಡುಕಾಟವು ಅನಾವರಣಗೊಂಡಿರುವುದನ್ನು ಕಾಣಬಹುದು. ಬಾಹ್ಮಣ ಸಮಾಜದಲ್ಲಿಯೆ ಇರುವಂತಹ ಹಲವು ಜ್ವಲಂತ ಶೋಷಣೆಗಳನ್ನು ಈ ಕಾದಂಬರಿ ಹೊರಹಾಕಿದೆ. ಈ ಹಿನ್ನೆಲೆಯಲ್ಲಿ ಇದು ಬ್ರಾಹ್ಮಣ ಸಮಾಜವನ್ನು ಬೇರೆಯದೇ ಆದ ದೃಷ್ಟಿಕೋನದಲ್ಲಿ ಚರ್ಚೆಗೆ ಒಳಗು ಮಾಡುತ್ತದೆ.

            ದಲಿತ ಸಂವೇದನೆಗಳನ್ನು ಹೊರಹಾಕುತ್ತಲೇ, ಅವರ ನೋವು-ನಲಿವುಗಳಿಗೆ ಸ್ಪಂದಿಸುವ ಜೊತಯೆಯಲ್ಲಿಯೆ ಅವರಲ್ಲಿ ಒಡಮೂಡಿರುವ ಶಿಕ್ಷಣದ ಬಗೆಗಿನ ಜಾಗ್ರತೆಯನ್ನು ತಿಳಿಸಿಕೊಟ್ಟಿರುವುದು ಈ ಕಾದಂಬರಿಯ ಮಹತ್ವದ ಅಂಶ. ಇದರ ಜೊತೆಗೆ ಇಲ್ಲಿನವರೆಗೆ ದಲಿತ ಚಿಂತಕ ಜಗತ್ತು ಪರಿಭಾವಿಸಿದ್ದ ಬ್ರಾಹ್ಮಣ ಸಮುದಾಯದ ಬಗೆಗಿನ ಏಕಮುಖ ಧೋರಣೆಯನ್ನು ಈ ಕಾದಂಬರಿ ಒಡೆದು ಹಾಕುತ್ತದೆ. ಅಲ್ಲದೆ ಬ್ರಾಹ್ಮಣ ಸಮುದಾಯದಲ್ಲಿ ಉಂಟಾಗಿರುವ ಮಾನಸಿಕ ಪರಿವರ್ತನೆ ಹಾಗೂ ಬದಲಾವಣೆಗಳನ್ನು ತಿಳಿಸುತ್ತದೆ. ಇಂತಹ ಪ್ರಗತಿಪರ ಮನಸ್ಸುಗಳ ಮೇಲೆ ನಡೆಯುವ ಸನಾತನವಾದಿಗಳ ಕ್ರೌರ್ಯ, ದಬ್ಬಾಳಿಕೆಯ ಚಿತ್ರಣಗಳೂ ಕಾದಂಬರಿಯಲ್ಲಿವೆ. ಇವೆಲ್ಲವುಗಳನ್ನೂ ಮೀರಿ ನಿಂತು ಹೊಸ ಆಶಯವನ್ನು ವ್ಯಕ್ತಪಡಿಸಿ, ಅದನ್ನು ಕಾರ್ಯಗತಗೊಳಿಸಲು ಕ್ರಿಯಾಶೀಲಳಾಗುವವಳು ‘ಸುಬ್ಬವ್ವ’ ಎಂಬುದು ಈ ಕಾದಂಬರಿಯ ಹೆಗ್ಗಳಿಕೆ. ಬ್ರಾಹ್ಮಣ ಸಮುದಾಯದ ಒಬ್ಬ ಹೆಣ್ಣು ಮಗಳಾಗಿ, ಚೆಸುವಸಾಸ್ತ್ರಿಯಂತಹ ಪುರೋಹಿತಶಾಹಿ ಮನಸುಳ್ಳ ಗಂಡನನ್ನು ಕೈ ಹಿಡಿದಿದ್ದರೂ, ಆ ಎಲ್ಲಾ ದಬ್ಬಾಳಿಕೆಗಳನ್ನು ಮೆಟ್ಟಿ ನಿಂತು ಶಿಕ್ಷಣದ ಬೀಜವನ್ನು ಬಿತ್ತುವ ಕಾಯಕದಲ್ಲಿ ತೊಡಗುವ ಕ್ರಿಯೆ ಇಲ್ಲಿ ಮಹತ್ವವಾದದ್ದು. ಈ ಅಂಶಗಳನ್ನು ಕಾದಂಬರಿಕಾರರು ಸೂಕ್ಷ್ಮವಾಗಿ ಗ್ರಹಿಸಿ ಅವಲೋಕಿಸಿದ್ದಾರೆ. ‘ಸುಬ್ಬವ್ವ’ ಬ್ರಾಹ್ಮಣ ಸ್ತ್ರೀಯಾಗಿದ್ದರೂ ಸಹ ದಲಿತ ಹಾಗೂ ತಳವರ್ಗದ ಸಮುದಾಯದ ಮಕ್ಕಳಿಗೆ ಶಿಕ್ಷಣ ನಿಡಲು ಮನಸ್ಸು ಮಾಡುವುದು ಮತ್ತು ಅದನ್ನು ಎಂತದೇ ಕಷ್ಟ ಬಂದರೂ ನಿಲ್ಲಿಸದೆ ಮುಂದುವರೆಸುವುದು ಈ ಕಾದಂಬರಿಯ ಮೂಲಕ ಲೇಖಕರು ಬಯಸುತ್ತಿರುವ ಹೊಸ ಸಮಾಜದ ಉದಯವೂ ಆಗಿದೆ.

            ಪ್ರಸ್ತುತ ಕಾದಂಬರಿಯು ಪ್ರಾರಂಭವಾಗುವುದು ಅರಳಿ ಮತ್ತು ಬೇವಿನ ಮರಗಳ ಸಂಭಾಷಣೆಯ ಮೂಲಕ. ಜೊತೆಗೆ ಕಾದಂಬರಿಯಲ್ಲಿನ ಪ್ರಮುಖ ಸಂಗತಿಗಳು, ಘಟನಾವಳಿಗಳು ಓದುಗ ಲೋಕಕ್ಕೆ ಪರಿಚಿತವಾಗುವುದು ಈ ಮರಗಳ ಹಾಗೂ ನಾಗರಕಲ್ಲಿನ ಮಾತುಗಳ ಮೂಲಕ. ಇಲ್ಲಿನ ಅರಳಿ ಮತ್ತು ಬೇವಿನ ಮರಗಳು ತಮ್ಮ ಬದುಕಿನ ದಾಂಪತ್ಯದ ರಸ ಕ್ಷಣಗಳನ್ನು ಮೆಲುಕು ಹಾಕುತ್ತಲೇ ‘ದೊಣ್ಣೆಹಳ್ಳಿ’ ಗ್ರಾಮದ ಜನರ ಜೀವನ ಕ್ರಮ, ಅಲ್ಲಿ ನಡೆಯುವ ಘಟನೆಗಳನ್ನು ಪರಿಚಯಿಸುತ್ತವೆ. ಈ ಸಂಭಾಷಣೆಯು ಕನ್ನಡ ಸಾಹಿತ್ಯದ ಅಭಿವ್ಯಕ್ತಿ ಕ್ರಮದಲ್ಲಿ ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಅಲ್ಲದೆ ಅರಳಿಮರ, ಬೇವಿನಮರ, ನಾಗರಕಲ್ಲು, ಮಾಸ್ತಿಕಲ್ಲು, ಕಣಗಿಲೆ ಹೂವು ಮತ್ತು ಮಠದ ಗ್ವಾಡೆಗಳು ಮಾತನಾಡುತ್ತ ತಮ್ಮ ಸ್ವವಿವರಗಳನ್ನು ಹೇಳಿಕೊಳ್ಳುವ ಜೊತೆಗೆ ಆ ಹಳ್ಳಿಯ ಜನರ ದುರಾಚಾರಗಳನ್ನೂ ಸಹ ವಿಶ್ಲೇಷಿಸುವ ಕ್ರಮದಲ್ಲಿ ಜನಪದ ಕತೆಯ ತಂತ್ರಗಾರಿಕೆ ಮತ್ತು ಮಿಥ್‍ನ ಬಳಕೆಯಾಗಿರುವುದು ಕಂಡುಬರುತ್ತದೆ. ಇದು ಕಾದಂಬರಿಗೆ ಮತ್ತಷ್ಟು ಗಟ್ಟಿತನವನ್ನೂ ಒದಗಿಸಿದೆ.

            ಕಾದಂಬರಿಯು ‘ಸುಬ್ಬವ್ವ’ಳನ್ನೆ ಕೇಂದ್ರವಾಗಿಟ್ಟುಕೊಂಡಿದ್ದರೂ ಸಹ “ಮನುಷ್ಯರಿಗೆ ಬುದ್ಧಿ ಬೆಳ್ದಂಗೇ ಇಡೀ ಕಾಡನ್ನು ಮೇಲು ಕೀಳು ಮಾಡಿಬುಟ್ರು” ಎಂದು ಕೊರಗುವ ವನದವ್ವನ ಹಪಹಪಿಸುವಿಕೆಯಲ್ಲಿ ಪ್ರಕೃತಿಯ ಮೇಲಿನ ಮನುಷ್ಯನ ಹಸ್ತಕ್ಷೇಪದ ವಿವರಗಳಿವೆ. ಜೊತೆಗೆ ನಿಸರ್ಗದಲ್ಲಿನ ಮರಗಿಡ, ಹೂವು ಹಣ್ಣುಗಳಲ್ಲಿಯೂ ಜಾತೀಯತೆಯನ್ನು ಸೃಷ್ಟಿಸಿರುವ ಅಂಶಗಳೂ ನಮಗೆ ಇಲ್ಲಿ ಗೋಚರವಾಗುತ್ತವೆ. ಅಂದರೆ ಒಂದು ಮರ ಶ್ರೇಷ್ಠ, ಇನ್ನೊಂದು ಕನಿಷ್ಠ. ಹೀಗೆ ಕಣಗಲ ಹೂವು ಕೂಡ ಕಾದಂಬರಿಯಲ್ಲಿ ಸಾರ್ವತ್ರಿಕವಾದ ಬಳಕೆಯಿಂದ ನಿಷೇಧಿತವಾಗಿದ್ದು, ಮಾರಿ ದೈವಗಳಿಗೆ ಮಾತ್ರ ಮೀಸಲಾಗಿ, ಸ್ಮಶಾನ ಮೊದಲಾದ ಸ್ಥಳಗಳಲ್ಲಿ ಮಾತ್ರ ಬೆಳೆಯುವ ಮೂಲಕ ತನ್ನ ಅಸ್ಥಿತ್ವ ಹಾಗೂ ಆತ್ಮಬಲವನ್ನು ಎತ್ತಿ ಹಿಡಿಯುವಂತಹ ಪ್ರಯತ್ನದ ಕ್ರಮಗಳೂ ತಿಳಿದು ಬರುತ್ತವೆ. ಕಾದಂಬರಿಯ ಪ್ರಧಾನ ಆಶಯ ದಲಿತ ಕೇರಿಯ ಮಕ್ಕಳಿಗೆ ಅಕ್ಷರ ಲೋಕದ ತೇರನ್ನು ಎಳೆದು ತಂದು, ಬೆಳಕಿನ ಸಿಹಿ ಹಂಚುವ  ಹಂಬಲವನ್ನು ಹೊಂದಿರುವುದು. ಜೊತೆಗೇ ಬ್ರಾಹ್ಮಣ ಸಮುದಾಯದೊಳಗೆ ಮನೆ ಮಾಡಿರುವ ಗೊಡ್ಡು ಸಂಪ್ರದಾಯಗಳಿಗೆ ಅದೇ ಸಮುದಾಯದವಳಾದ ಸುಬ್ಬವ್ವಳಿಂದ ಪ್ರಬಲವಾದ ಪ್ರತಿರೋಧಗಳು ವ್ಯಕ್ತವಾಗುವುದು ಈ ಕಾದಂಬರಿ ಗಳಿಸಿದ ಜಯವೂ ಆಗಿದೆ. ಏಕೆಂದರೆ ವಿರೋಧ ಹಾಗೂ ಪ್ರತಿಭಟನೆಗಳು ಹೊರಗಿನಿಂದ ಬಂದಾಗ ಬೀಳುವ ಪೆಟ್ಟಿಗೂ, ಬೀರುವ ಪರಿಣಾಮಕ್ಕೂ, ಒಳಗೇ ಹುಟ್ಟಿಕೊಳ್ಳುವ ಬಂಡಾಯದ ವಿರೋಧಿ ನೆಲೆಯ ಪೆಟ್ಟಿಗೂ ಬಹಳ ವ್ಯತ್ಯಾಸವಿರುತ್ತದೆ. ಇಲ್ಲಿ ನಡೆಯುವುದು ಅದೇ. ಅದು ಸುಬ್ಬವ್ವಳ ಮೂಲಕ.

            ಈ ಕಾದಂಬರಿಯ ನಾಯಕಿ ಸುಬ್ಬಲಕ್ಷ್ಮಿ (ಸುಬ್ಬವ್ವ). ಚೆಸುವ(ಕೇಶವ)ಸಾಸ್ತ್ರಿಯ ಹೆಂಡತಿ. ಗ್ರಾಮದ ಆಂಜನೇಯಸ್ವಾಮಿಯ ಪೂಜಾರಿಯಾದ ಚೆಸುವಸಾಸ್ತ್ರಿ ಸಂಪೂರ್ಣವಾಗಿ ಶಿಕ್ಷಣದ ವಿರೋಧಿ. ಅದರಲ್ಲಿಯೂ ದಲಿತರು ಶಿಕ್ಷಿತರಾಗುವುದು ಈತನಿಗೆ ಸ್ವಲ್ಪವೂ ಇಷ್ಟವಿಲ್ಲ. ಈತ ಸನಾತನವಾದಿ ಸಂಸ್ಕøತಿಯ ಪ್ರತಿರೂಪಿ, ಮನುವಿನ ವಕ್ತಾರ. ಇವನು ದೇಗುಲದ ಸೇವಕಿಯಾದ ಕೆಳವರ್ಗದ ‘ನಾಗಚಂದ್ರಿಕೆ’ಯಲ್ಲಿ ಅನುರಕ್ತನಾಗಿ ಅವಳಲ್ಲಿ ಮೈ ಮರೆತಿದ್ದವ. ಹೆಂಡತಿಯನ್ನು ಕಡೆಗಣ್ಣಿನಿಂದ ನೋಡುತ್ತ, ಅವಳ ಎಲ್ಲ ಆಲೋಚನೆ, ಅಭಿಪ್ರಾಯಗಳಿಗೆ ಅಡ್ಡಗೋಡೆಯಾಗಿದ್ದನು. ಈ ರೀತಿಯ ಹಲವು ನೋವುಗಳನ್ನು ಸುಬ್ಬವ್ವ ಅನುಭವಿಸುತ್ತಾಳೆ. ಇವುಗಳನ್ನೆಲ್ಲಾ ಮೀರಿ ತಾನು ಕಲಿತ ವಿದ್ಯೆಯ ಮೂಲಕ ಸಮಾನತೆಯ ಬೆಳಕಿನ ದಾರಿಯನ್ನು ಆರಿಸಿಕೊಳ್ಳುತ್ತಾಳೆ. ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾಳೆ.

            ಸನಾತನವಾದಿಗಳ ಗೊಡ್ಡು ಕಟ್ಟಳೆಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿರುವ ಹೆಣ್ಣುಗಳ ಚಿತ್ರಣವನ್ನು ಕಟ್ಟಿಕೊಡುತ್ತಲೆ, ಪತಿ ಹಾಗೂ ಇಡೀ ಸನಾತನವಾದಿ ಸಮಾಜವನ್ನು ದಿಕ್ಕರಿಸಿ ನಿಂತ ಸುಬ್ಬವ್ವನ ಶಿಕ್ಷಣ ಹಾಗೂ ಸಮಾನತೆಯ ಆಶಯದ ಮನಸ್ಥಿತಿಯನ್ನು ಕಾದಂಬರಿ ತಿಳಿಸುತ್ತದೆ. ಅಲ್ಲದೆ ಈಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೃಢಮನಸ್ಸಿನಿಂದ ಬ್ರಾಹ್ಮಣ ವಾಡೆಯನ್ನೇ ಬಿಟ್ಟು ಹೊರನಡೆಯುತ್ತಾಳೆ. ತನ್ನ ಆಲೋಚನೆ, ಕನಸನ್ನು ಬಿತ್ತಲು ಒಳ್ಳೆಯ ಸ್ಥಳವಾದ ದಲಿತರ ಕೇರಿಗೆ ಬಂದು ಅಲ್ಲಿ ಗುಡಿಸಲನ್ನು ಕಟ್ಟಿಕೊಂಡು, ಪುರೋಹಿತಶಾಹಿ ಸಮುದಾಯದ ಪುರುಷ ಕೇಂದ್ರಿತ ಸಮಾಜಕ್ಕೆ ಸೆಡ್ಡು ಒಡೆದು ನಿಲ್ಲುತ್ತಾಳೆ. ಈ ವಿಶಿಷ್ಟ ಬೆಳವಣಿಗೆಯಲ್ಲಿ ಕಾದಂಬರಿಯ ಮೇಲೆ ಬುದ್ಧ, ಬಸವ ಹಾಗೂ ಅಂಬೇಡ್ಕರರ ಪ್ರಭಾವ ಸ್ಪಷ್ಟವಾಗಿರುವುದು ನಮಗೆ ತಿಳಿಯುತ್ತದೆ. ಏಕೆಂದರೆ ಸುಬ್ಬವ್ವ ಮೇಲ್ವರ್ಗದ ಸ್ತ್ರೀ ಆಗಿದ್ದರೂ ಮಡಿ-ಮೈಲಿಗೆ, ಮೇಲು-ಕೀಳು, ಶ್ರೇಷ್ಠ-ಕನಿಷ್ಠಗಳೆಂಬ ಭಾವನೆಗಳನ್ನು ತೊಡೆದು ಎಲ್ಲರಲ್ಲಿಯೂ ಒಂದಾಗುವ ಸರ್ವ ಸಮಾನತೆಯ ಭಾವ ನಿಜಕ್ಕೂ ಅನುಕರಣೀಯ. ಜೊತೆಗೆ ಆಕೆ ಎಲ್ಲರಲ್ಲಿಯೂ ಐಕ್ಯತೆಯನ್ನು ತರಲು ಪಡುವ ಶ್ರಮ ಮತ್ತು ಭ್ರಾತೃತ್ವಭಾವವನ್ನು ಮೂಡಿಸುಲ್ಲಿನ ಆಕೆಯ ಹಪಹಪಿಸುವಿಕೆ ಶ್ಲಾಘನೀಯವಾದುದು. ಈ ಎಲ್ಲ ಕಾರಣಗಳಿಗಾಗಿ ಕಾದಂಬರಿ ಮುಖ್ಯವಾಗುತ್ತದೆ.

            ದೊಣ್ಣೆಹಳ್ಳಿಯಲ್ಲಿ ಮಠ(ಶಾಲೆ) ತೆರೆಯುವ ಮೂಲಕ ಶಿಕ್ಷಣ ನೀಡುವ ಕನಸನ್ನು ಹೊತ್ತ ಜನರಿರುವಂತೆಯೇ ಚೆಸುವಸಾಸ್ತ್ರಿಯಂತಹವರು ಇಡೀ ಶಿಕ್ಷಣದ ಆಶಯಕ್ಕೆಯೇ ವಿರೋಧವಾಗಿದ್ದರು. ಆತನ “ಅಲ್ಲಾ.... ಆ....ದೊಣ್ಣೆಅಳ್ಳಿಲಿ ಕಿರಿಮೀನು ಇರಿಮೀನು ತಿಂತಾವೆ ಅಂಗಾಯ್ತದೆ. ಅಮ್ಯಾಗೆ ಆಚಾರ, ಇಚಾರ, ನಮ್ಮ ಸಂಪ್ರದಾಯ, ಸಂದ್ಯಾವಂದನೆ, ಪೂಜೆ, ಸೋಕ(ಶ್ಲೋಕ), ಉಪನಯನ, ಸ್ರಾದ್ಧಾ....! ಪಿಂಡಾರ್ಪಣೆ ಆಗ್ತ ಇಲ್ಲಾ ! ಅಮ್ಯಾಗೆ ಆಂಜನೇಯಸಾಮಿಗೆ ಜನ ಸಕಾಲಕ್ಕೆ ಪೂಜೆ ಮಾಡ್ತಾ ಇಲ್ಲ. ಬೆಣ್ಣೆ, ತುಪ್ಪಾ, ಮೊಸ್ರು, ಅಬ್ಬೆಂಜನ ನಿಲ್ಸವ್ರೆ, ಅಲ್ಲದೆ ಜಾತ್ರೆ, ಅಬ್ಬ, ಉತ್ಸವ, ತೇರು, ತ್ಯಪ್ಪಾ....! ವೊತ್ತೊತ್ಗೆ ಆಗ್ತ ಇಲ್ಲ, ಎಂದು ಹೇಳಿ ಊರಿಗೆ ಸಿಡುಬು, ತೊಡಬಾಳು, ಕಜ್ಜಿ, ಕುರ, ವಾಂತಿ ಬ್ಯಾದಿ ಬಂದದೆ ಆದ್ದರಿಂದ ಆಂಜನೇಯ ಮುನ್ಸಕೊಂಡವನೆ ಮೊದ್ಲು ಜಾತ್ರೆ ಮಾಡನಾ....”ಎಂದು ಹೇಳುವ ಆತನ ಮಾತುಗಳು ಶಿಕ್ಷಣ ವ್ಯವಸ್ಥೆಯನ್ನೆ ವಿರೋಧಿಸುವ ಮನಸ್ಥಿತಿಯ ಅಭಿವ್ಯಕ್ತಿಯ ಕ್ರಮವಾಗಿ ಕಂಡುಬರುತ್ತವೆ.

            ಈ ರೀತಿಯ ವಿರೋಧಗಳು, ಅಸಮಾಧಾನಗಳ ನಡುವೆಯೆ ಮಠ ಪ್ರಾರಂಭವಾದರೂ ಅದನ್ನು ಮೂಲೆಗೊತ್ತುವ ಚೆಸುವಸಾಸ್ತ್ರಿಯ ಪ್ರಯತ್ನ ಮುಂದುವರಿದೇ ಇರುತ್ತದೆ. ಆತ “ತಾನೆಯಾ ಗುಯ್ ಗುಡ್ತಾ ಊರು ಆಳಾಗ್ವಾಯ್ತು, ಯಾರು ಊರ್ಗೆ ಪಾಠ ಯಾಳಾಕೆ ಬತ್ತರೆ ನ್ವಾಡ್ತಿನಿ. ಈ ಊರ್ನೋರು ಅಕ್ಸರ ಕಲ್ತ್ರೇ ಬುದ್ಧಿ ಬತ್ತದೆ. ತನ್ನ ಆದಾಯ ಕಮ್ಮಿಯ್ತದೆ. ನನ್ನ ಅಲ್ಕಾ ಚಲ್ಸ ಯಲ್ರ್ಗೆ ತಿಳಿತದೆ. ಇದ್ಕೆ ಯಾನಾರ ಉಳಿ ಇಂಡ್ಬೇಕು” ಎಂಬ ಆತನ ನಿಲುವು ಇಲ್ಲಿ ಗಮನಿಸತಕ್ಕದ್ದು. ಶಿಕ್ಷಣವನ್ನು ಪಡೆದರೆ ಬುದ್ಧಿ ಬರುತ್ತದೆ. ಎಲ್ಲವನ್ನೂ ಪ್ರಶ್ನಿಸುವರು ಎಂಬ ಆತನ ಭಯ ಶಿಕ್ಷಣದ ಮಹತ್ವವನ್ನು ಸಾರುತ್ತದೆ.

            ಸುತ್ಲ ಯಂಟ ಅಳ್ಳಿಗೆ ಏಕೈಕ ಮಠವಾಗಿ ಪ್ರಾರಂಭವಾದ ದೊಣ್ಣೆಅಳ್ಳಿ ‘ಮಠ’ವನ್ನು ನೋಡಲು ಬಂದ ಜನರಲ್ಲಿನ ಕುತೂಹಲ ಹಾಗೂ ಅವರ ಮಾತುಕತೆಗಳು, ಅದರಲ್ಲಿಯೂ “ಚಾರಿಯ ರೂಪಿ....ರುದ್ರಿ....ಕರಿಪುಟ್ಟಿಯ ಮರೆಲಿ ನಿಂತ್ಕೊಂಡು ಈ ‘ಮಠ್ಕೆ’ ನಮ್ಮ ಅಕ್ಲ ವಳಿಕೆ ಕರ್ಕೋತ್ತಾರಾ....!” ಎಂದು ಕೇಳುವ ಮಾತುಗಳು ತಳವರ್ಗದವರಿಗೆ ಶಿಕ್ಷಣ ಪಡೆಯುವುದಕ್ಕೆ ಇದ್ದ ನಿರ್ಬಂಧ ಮತ್ತು ಅದರ ಬಗ್ಗೆ ಅವರಲ್ಲಿ ಮೂಡಿರುವ ಜಾಗೃತಿ, ಹೊಸ ಆಶಾಭಾವನೆಗಳನ್ನು ನಮ್ಮ ಗಮನಕ್ಕೆ ತಂದುಕೊಡುತ್ತದೆ.

            ಈ ಮಠಕ್ಕೆ ‘ಜವನಯ್ಯ’ ಮೇಷ್ಟ್ರಾಗಿ ಬರುತ್ತಾರೆ. ಇಲ್ಲಿ ವಂದೆ ಕಾಳಸಿಂದ ಐದ್ನೇ ಕಳ್ಸಾಗುಂಟ ಇತ್ತು. ಇಲ್ಲಿ ರೂಪಿಯ ಮಗ ಗದ್ಗಯ್ಯ, ಜವನಯ್ಯ ಮೇಷ್ಟ್ರುಗೆ ಹೇಳುವ “ಸಾ....ಉಡ್ಲು ನನ್ನ....ಡುಮ್ಮಕೆ ಕರ್ಗೆ ಅಂತ ಮುಟ್ಟುಸ್ಸಕ್ವಾಳಕಿಲ್ಲ. ನಾವು ಅತ್ರಕೆ ವಾದ್ರೆ ಮಾರು ಉದ್ದ ಸರಿತರೆ. ಅದ್ಕೆ ಇಲ್ಲೆ ಕೂತ್ಕೋತ್ತಿವಿ. ನನ್ನ ಇಂದ್ಕೆ ಕುಂತ್ಕೊ ಆದ್ರೆ ನಾಕಾ ಅಕಸರ ಕಲಿ ಅಂತ ಲಪ್ಪಾ ಗಡ್ಗೆರಂಗ.......ಯಾಳವನೆ ಸಾರ್.....” ಎಂಬ ಮಾತುಗಳು ದೊಣ್ಣೆಅಳ್ಳಿ ಮಠದ ಮಕ್ಕಳಲ್ಲಿನ ಸ್ಪøಶ್ಯ ಮತ್ತು ಅಸ್ಪøಶ್ಯ ಕಲ್ಪನೆಯನ್ನು ಹಾಗೂ ಆ ಸಮಾಜದ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುತ್ತವೆ.

            ಇಂತಹ ಮಠಕ್ಕೆ ‘ಜವನಯ್ಯ’ರ ನಂತರ ಶಿಕ್ಷಕಿಯಾಗಿ ಬರುವ ‘ಸುಬ್ಬವ್ವ’ ಇಡೀ ಶಾಲೆಯ ಚಿತ್ರಣವನ್ನೆ ಬದಲಾಯಿಸುತ್ತಾಳೆ. ಯಂಕೋಬಸಾಸ್ತ್ರಿಗಳ ಮಗಳಾದ ಈಕೆ ವಿದ್ಯಾವಂತೆ, ವಿಚಾರವಂತೆ ಮೇಲಾಗಿ ಪ್ರಗತಿಪರೆ. ಈ ಗುಣಗಳೇ ಈಕೆಯ ಗಂಡ ಇವಳ ನಿಲುವುಗಳನ್ನು ವಿರೋಧಿಸಲು ಕಾರಣವಾಗುತ್ತದೆ. ಸುಬ್ಬವ್ವ ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿ ಮತ್ತು ಒಲವನ್ನು ಉಳ್ಳಂತಹವಳು. ಆದರೂ “ಸುಬ್ಬವ್ವ ವರ್ಗೆ ಊರ್ನ ‘ಮಠ್ಕೆ’ ಮ್ಯಾಟ್ರು ಆದ್ರೆ ಮನೆವಳ್ಗೆ ತುಟಿನಾ ತುಟುಕ್ ಪಿಟಿಕ್ ಅನ್ನಂಗೆ ಇಲ್ಲ” ಎಂಬಂತಹ ಮಾತುಗಳು ಆಕೆಗಿದ್ದ ನಿರ್ಬಂಧ ಹಾಗೂ ಆಕೆಯ ನಿಜಸ್ಥಿತಿಯ ಕೌಟುಂಬಿಕ ಧಾರುಣತೆಯನ್ನು ತಿಳಿಸುತ್ತವೆ. ಹೀಗಿದ್ದರೂ ಯಾವತ್ತೂ ಆಕೆ ತನ್ನ ಕಾರ್ಯಗಳಿಂದ ಹಿಂದೆ ಸರಿದವಳಲ್ಲ. ತನಗೆ ಮಕ್ಕಳಿಲ್ಲದಿದ್ದರೂ ಮಠದ ಮಕ್ಕಳನ್ನೆ ತನ್ನ ಮಕ್ಕಳೆಂದು ತಿಳಿದು ಬದುಕನ್ನು ಮುಂದುವರೆಸಿದವಳು.

            ಸುಬ್ಬವ್ವನ ಮನಸ್ಸಿನಲ್ಲಿ ಮೂಡುವ “ಲೋಚಲೋಚ್ನೆ ಯಾರೆ ಈ ಚಾರಿರು ದಕ್ಷಣ್ಕೆ ಅವ್ರೆ. ಈ ಉನ್ನಾರ  ನನ್ನ ಅಗ್ರರ್ದಾ ಜನವೇ ಮಾಡವ್ರೆ. ನಾವು ಉತ್ತರ್ಕೆ ಅಂದ್ರೆ ತಲೆಯಂಗೆ ತಲೆ ಮ್ಯಾಗೆ ಇರ್ಬೇಕು. ವೊಲೆರು ದಕ್ಷಣ್ಕೆ ಅಂದ್ರೆ ತಿಕ್ಕದ ಕಡೆ ತಳ್ದಲಿರ್ಬೇಕು. ಇನ್ನೂ ಪಶ್ಚಿಮ ಪೂರ್ವಕೆ ಚತ್ರಿಯರು, ಯಾಪಾರ ಮಾಡೋರ್ಬೇಕು, ಅಲ್ಲಾ......! ಈ ಅಗ್ರರ್ದ ತಲೆ ಇಂತ ನೀಚ ಬುದ್ಧಿ ತುಂಬಕ್ವಾಂಡದಲಾ ಇದು ನ್ಯಾಯವಾ.....! ಅಲ್ಲಾ  ದ್ಯಾವ್ರ ಗುಡಿಯಿಂದ ಯದ್ದು ಬಂದು ವೊಲೆರು ತಿಕ್ದತ್ರ ಇರಿ. ಯಾಪಾರ ಮಾಡೋರು ಪಶ್ಚಿಮ್ಕೆ ಇರಿ. ಚತ್ರಿಯರು ಯವಸಾಯ ಮಾಡೋರು ಪೂರ್ವಕ್ಕೆ ಇರಿ; ಅಂತ ಯಾಳಿದ್ನ. ಈ ಊರ್ನಿಂದ ಯತ್ತಿ ವರಿಕೆ ಅಕವ್ರಲ್ಲಾ....ಇದು ಯಾಟು ನ್ಯಾಯ ಅಂತಿನಿ ?” ಎಂಬ ಮಾತುಗಳು ಅವಳ ವಿಚಾರಶೀಲ ಗುಣಕ್ಕೆ ಹಾಗೂ ಪ್ರತಿಭಟನಾ ಸ್ವರೂಪದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

            ಸುಬ್ಬವ್ವ ಅಗ್ರಹಾರದ ಸಭ್ಯಸ್ಥ ಹೆಣ್ಣು ಮಗಳಾಗಿದ್ದರೂ ಅವಳ ಮೇಲೆಯೂ ಶೋಷಣೆಗಳು ತಪ್ಪಿಲ.್ಲ ಅವಳ ವ್ಯಕ್ತಿತ್ವವನ್ನೇ ಹರಣಗೊಳಿಸುವ ಪತಿ, ಶೋಷಣೆಯ ಕೇಂದ್ರ ಪಾತ್ರ. ಅಂದರೆ ಇಲ್ಲಿ ಬ್ರಾಹ್ಮಣರ ಮಹಿಳೆಯನ್ನೂ ಅತ್ಯಂತ ಹೀನಾಯವಾಗಿ ಕಾಣುತ್ತಿದ್ದ ಚಿತ್ರಣ ನಮಗೆ ತಿಳಿಯುತ್ತದೆ. ಇಲ್ಲಿಯೂ ಪುರುಷ ಪ್ರಭುತ್ವ ತಾನೇ ಮೇಲುಗೈಯಾಗಿ ಮೆರೆಯುತ್ತದೆ. ಹೆಣ್ಣು ಮೌನಿಯಾಗಿ ಅಸಹಾಯಕಳಾಗಿ ನಿಲ್ಲಬೇಕಾಗುತ್ತದೆ. ಆದರೆ ಸುಬ್ಬವ್ವ ಈ ಎಲ್ಲವುಗಳಿಗೆ ವಿರೋಧವಾಗಿ ನಿಂತವಳು.

            ಸುಬ್ಬವ್ವ ದಲಿತ ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡಲು ಪ್ರಾರಂಭಿಸಿದ ಮೇಲಂತೂ ಚೆಸುವಸಾಸ್ತ್ರಿಯ ಉಪಟಳಗಳು ಮಿತಿಮೀರುತ್ತವೆ. ತನ್ನ ಮಡಿ, ಮನೆಯ ಮರ್ಯಾದೆಗಳು ಹಾಳಾದವೆಂದು ಆಕೆಯನ್ನು ಬಯ್ಯುತ್ತಾನೆ. ಅಲ್ಲದೆ ಆತ ಹೇಳುವ “ನ್ವಾಡು ಇನ್ನೂ ಮುಂದ್ಕೆ ‘ಮಠ್ದಲಿ’ ವಲಮಾದ್ರ ಅಕ್ಲ ಮುಟ್ಟುಬ್ಯಾಡ. ಅಕ್ಲ ಪುಸ್ತಕ, ಬಾಗು, ಮೈಕೈ ಮುಟ್ಕೋಬ್ಯಾಡ. ಆ ಸೂದ್ರ ಮುಂಡೇವು ಆಪಸಕ್ನ. ಅವು ಸತ್ತ ಯಮ್ಮೆ, ದನ, ಕರ ತಿಂಬತ್ತವೆ. ನಿತ್ಯ ಪೂಜೆ, ಜಪತಪ ಇಲ್ಲ, ಮಿಯಕ್ಕಿಲ್ಲ, ಅವು ದನಗಳಿಗಿಂತ ಕಡೆ. ವಲಸು ಪಲಸ್ಸು ಜಾತಿವು. ಅಮ್ಯಾಕೆ ಅವುಕೆ ನೀ ತಕ್ಕೋ ವಾದ ಉಳಿಅನ್ನ, ಮೊಸ್ರನ್ನ, ತೆಂಗಿನಕಾಯಿ ಚಟ್ನಿ, ಉಪ್ಪಿನಕಾಯಿ, ಸಂಡ್ಗೆ, ತುಪ್ಪ ಕ್ವಾಟ್ರೇ ಅವು ಅದ್ನ ನಾಲ್ಗೆ ರುಚಿ ಇಡ್ಕ್ವಾಂಡು ನಮ್ಮದ್ನ ಚಿತ್ಕ್ವಾಂಡು ನಮ್ಮ್ನ ಕಸ್ದಂಗೆ ಕಾಣ್ತರೆ.. ಅವರ್ನ ಮಠ್ದ ಬಾಗ್ಲ ಅಟ್ ದೂರ್ಕೆ ನಿಂದ್ರಿಸು”. ಎಂದು ಆತ ಸುಬ್ಬವ್ವನಿಗೆ ಹೇಳುವ ಮಾತುಗಳಲ್ಲಿ ಆತನಲ್ಲಿರುವ ಜಾತಿ ಶ್ರೇಷ್ಠತೆಯ ಪ್ರಜ್ಞೆ ಹಾಗೂ ಸನಾತನವಾದಿಯ ಅಂಶಗಳಿರುವುದು ತಿಳಿಯುತ್ತದೆ.

            ಸುಬ್ಬವ್ವ ತನ್ನ ಗಂಡನಿಗೆ ಹೇಳುವ “ನಿವು ಅಗ್ರಾರ್ದ ಗ್ವಾಡ್ಡು ಸಂಪ್ರದಾಯ್ದ ನ್ಯಣ್ದ ಅಗ್ಗವ ಕುತ್ಗೆಗೆ ಬಿಕ್ವಾಂಡಿದ್ದಿರಿ. ನಿವು ತಿಳ್ದೋರು ಅಂದ್ಕ್ವಾಂಡಿದ್ದೆ. ಮಹಾಭಾರರತ, ರಾಮಾಯಣ, ಯಾದ, ಉಪನಿಷತ್ತು, ಪುರಾಣ, ಪರಾಯಣ, ಸಾಸ್ತ್ರ, ಅರ್ಚನೆ, ಪಾರಥನೆ, ಮನುಪಾಠ, ಸೋಕಗಳು ಇನ್ನೂ ಯಾನೇನೋ ಗ್ವಾತ್ತುಂತ ತಿಳ್ಕೊಂಡಿದ್ದೆ. ಆದ್ರೆ ನಿಮ್ಮ ವಳ್ಗೆ ಸತಮಾನ್ದ ನೀತಿಗಳೇ ಇರ್ವಾದು. ಕಾಲ್ದ ವಡೆತಕ್ಕೆ ಸಿಕ್ಕಿ ಬದ್ಲಾದ್ರೂ ನಿವು ಬದ್ಲಾಗಲಿಲ್ಲ. ಇಡೀ ಗಂಡಸರ ಜಾತ್ಗೆ ಅವಮಾನ ಮಾಡ್ತಿರಲ್ಲ. ಆದೇ ಸಿಪಾದಸಾಸ್ತ್ರಿಗಳು ನ್ವಾಡಿ ಆದೇ ವಲಮಾದ್ರ ಅಕ್ಲು ನಾಕಾ ಅಕ್ಕಸರ ಕಲಿಲಿ ಅಂತರೆ”. ಎಂಬ ಮಾತುಗಳು ಹಾಗೂ “ ನಾ ಆಗೋವತ್ಗೆ ಇಟೂ ವರ್ಷ ನನ್ನ ವೊಟ್ಟೆಲಿ ಉಳ ಇಲ್ಲದಿದ್ರೂವೆ ನಿವು ಕ್ವಾಟ್ಟ ಇಂಸೆ ಸೆರ್ಗಲಿ ಇಟ್ಗೊಂಡು ‘ಮಠ್ದ’ಲಿರೋ ಅಕ್ಲ್ನ ನನ್ನ ಅಕ್ಲುಂತ ತಿಳ್ಕೊಂಡು ಜಿವಸ್ಸ ಕಳ್ತಿವಿನಿ. ಯಣ್ಣು ಸಅನೆ ಮೂರ್ತಿ. ಅವಳು ಸ್ವಭಾವದಲ್ಲಿ ಅಂತ್ರಮುಕಿ, ಜಾಣಿ. ತನ್ನ ಅಂದ, ಚಂದ, ಅರಿವು ಅವಳು ಯಾವತ್ತು ಯಚ್ಚರಗಿರ್ತಳೆ” ಎಂಬ ಮಾತುಗಳು ಅವಳ ಆಲೋಚನಾ ಪರವಾದ ಮತ್ತು ವಿಶಾಲ ನೆಲೆಯ ಚಿಂತನೆಗಳಿಗೆ ಹಿಡಿದ ಸಾಕ್ಷಿಯಾಗಿವೆ. ಇಲ್ಲಿ ತನ್ನ ಗಂಡನನ್ನೆ ಪ್ರತಿಭಟಿಸುವ ಅಂಶಗಳೂ ತಿಳಿಯುತ್ತವೆ. ಜೊತೆಗೆ ಇವು ಸುಬ್ಬವ್ವಳಾದಿಯಾಗಿ ಎಲ್ಲ ಹೆಣ್ಣುಗಳ ಎಚ್ಚರದ ದನಿಯನ್ನು ತಿಳಿಸುತ್ತವೆ. ಇದರ ನಡುವೆಯೆ ಸುಬ್ಬವ್ವಳ ತಾಯ್ತನದ ಅಭಿಲಾಷೆಯ ಮತ್ತು ಹೆಣ್ಣಿನ ಸಹಜವಾದ ಬಯಕೆಯ ಭಾವಗಳೂ ಸಹ ನಮಗೆ ತಿಳಿಯುತ್ತವೆ.

            ಸುಬ್ಬವ್ವ ಮುಂದುವರೆದು ಹೇಳುವ “ಅಲ್ಲಾ.....ನಮ ಲ್ವಾಕ್ದ ಬುದ್ಧಿವಂತ್ರು ದ್ಯಾವ್ರ್ನ ಕಡೆಗಣಿಸುತ್ತಿದ್ರು. ಇದ್ನ ಯಾಳೋರು ಆಚಾರ್ಯರು ಬಲ್ಲವರಾಗಿದ್ರು. ಇಂಗಿದ್ರೂ ನಮ್ಮ ಸುತ್ತಮುತ್ಲ ಜನ್ದ ಊರು, ದ್ಯಾಸ ಮಾತ್ರ ದ್ಯಾವ್ರ್ನ ಅಪ್ಪರ ಭಯ, ಬಕ್ತಿ ಇಡ್ತಾ ಬಂದವ್ರೇ ! ಪಂಡಿತ ಪಾಮರ್ರು ತಿಳ್ಕೊಂಡ ಬಲ್ಲವ್ರು ತಮ್ಮಗೆ ತಾವೆ ಚಚ್ಚಾಟ, ಕಚ್ಚಾಟ, ಗುದ್ದಾಡ್ತ ಬಂದ್ರು. ಚಳಜನ ಮಾತ್ರ ವಸಿನೂವೆ ಬ್ಯಾರೆ ಕಡ್ಗೆ ವಾಲೊಂಗೆ ಮಾಡ್ನಿಲ್ಲ. ಅಲ್ಲೊಂದು ಇಚಾರ ನ್ವಾಡಿದ್ರೆ ಬ್ರಾಹ್ಮಾಣ್ರ ಪಂಡಿತ್ರು, ಜ್ಞಾನಿಗಳು ಯಾಟೋಂದ ಚೀರಾಟ ಆರಾಟ ಮಾಡಿದ್ರೂವೇ ಸ್ಮೂತಿ, ಪುರಾಣ, ಯಾದ, ಉಪನಿಷತ್ಗಳು, ವತ್ತು ಕ್ವಾಡದ ಬಿಡ್ನಿಲ್ಲ. ಇವ್ರುತ್ರಿಂದ್ಲೇ ಊರು, ಚಾರಿಗಳಲ್ಲಿ ಜಾತಿ, ಕುಲ, ಬಣ್ಣ ಪಾಲ್ಸ್ಕೊಂಡು ಮುಂದುವರ್ದೋದು ನಮ್ಮ ಧರ್ಮ ಆಗದೆ. ವಟ್ಟನಲಿ ಬಿದ್ದಿವಂತ್ರ್ಗೆ ಈ ಜಗವ ಬದ್ಲು ಮಾಡೋ ಮನ ಇರದಿಲ್ಲಂತ ಕಂಡದೆ. ಜನದಲ್ಲಿರೋ  ಕುಂಡತ್ವ, ಉಸಿ ಬುದ್ದಿ, ಬ್ರಮರ್ಗಳ್ನ ಇಂಗೆ ಯಾಟೋ ಇಸಯವ ಬಗೆ ಅರ್ಸದ್ರೂ ಬ್ಯಾಡಂತ ಕಾಣ್ತದೆ. ಅದ್ರ ಬದ್ಲೂ ಅವ್ರ್ಗೆ ಇಂಬು ಕ್ವಾಡದೆ ಪ್ರಧಾನ ಆಗದೆ ! ಈ ಲ್ವಾಕ್ದ ಮಿಥ್ಯೆ, ಆದ್ರೆ ಲ್ವಾಕ್ದ ಜಾತಿ/ವರ್ಣದ ರಿವಾಜುಗಳ್ನ ಅಪ್ಪ್ಕೋಂಡದೆ. ಆದ್ರೆ ವಾಗ್ಲಾಡ್ಸೋದ ಯಂಗೆ ಅಂತ ಬಾರಿ ಗಟ್ಟಿತನ್ದ ಯಚ್ಚ್ನೆಗೆ ತಲೆಯೊಡ್ಡಿದ್ಲು. ನನ್ನ ಉಸ್ರು ಈ ಲ್ವಾಕ್ದಲಿ ಇರೋಗಂಟ ವಸಿನಾದ್ರೂವೆ ವಲಮಾದ್ರ, ಕುಂಬಾರ, ಸಾಬ್ರ ನೀಚತನ ಚಾರಿಂದ ವರ್ಗೆ ದಬ್ಬಿ ಯಲ್ರೂ ವಂದೇ ರಕ್ತದ್ವಾರು ಅನ್ನೋ ನಂಬಿಕೆ ಬರಬೇಕಂತ ಅವಳ್ಗೆ ಅವಳೆ ಪಣತಟ್ಟಿದ್ಲು”. ಎಂಬ ಮಾತುಗಳು ಇಡೀ ತನ್ನ ಸಮುದಾಯದ ಕುತಂತ್ರಗಳನ್ನು ವಿಮರ್ಶಿಸುತ್ತಲೆ, ಆ ಎಲ್ಲ ನಿಲುವುಗಳ ವಿರುದ್ಧ ಪ್ರತಿಭಟಿಸಿ ನಿಲ್ಲುತ್ತಾಳೆ.

            ಸುಬ್ಬಲಕ್ಷ್ಮಿಯನ್ನು ದಲಿತರ ಮಕ್ಕಳಿಗೆ ಪಾಠ ಹೇಳಿಕೊಡದೆ ಬ್ರಾಹ್ಮಣರ ಮಕ್ಕಳಿಗೆ ಮಾತ್ರ ವಿದ್ಯೆ ಕಲಿಸಬೇಕೆಂದು, ಇಲ್ಲವಾದರೆ ತಾನು ನಿನ್ನ ಬಿಟ್ಟು ಬಿಡುವೆನೆಂದು ಗಂಡನಾದ ಚೆಸುವಸಾಸ್ತ್ರಿ ಹೆದರಿಸುತ್ತಾನೆ. ಅಲ್ಲದೇ ಆತ ಮುಂದುವರೆದು “ಸೂದ್ರಗಿದ್ರರ್ನ ಮಿಂಡ್ನಾಗಿ ಇಟ್ಕೊಂಡಿದಿಯೆನೇ” ಎಂಬಂತಹ ಮಾತುಗಳನ್ನು ಆಡಿದಾಗ ಸುಬ್ಬವ್ವ ಹೇಳುವ “ನನ್ನ ನೌಕ್ರಿಲಿ ನಂಗೆ ನೆಮ್ಮದಿ ಅದೆ. ನಾ.....ಆಗ್ರಾರ ಬಿಟ್ಟೇನೂ, ನಿಮ್ಮನ್ನು ಬುಟ್ಟೇನೂ, ಆದ್ರೆ ಮಠ್ದಲ್ಲಿ ಅಕ್ಸರ ಕಲ್ತಿರೋ ಯಲ್ಲನೂವೆ ನನ್ನ ಕಳ್ಳುಬಳ್ಳಿ ಅಂತ ತಿಳ್ಕೊಂಡಿವಿನಿ, ನ್ವಾಡಿ.....ನನ್ನ ತಿರ್ಮಾನ ಯಾಳ್ತಿನಿ ಚೇಳಿ, ಇನ್ನೂ ಮುಂದ್ಕೆ ‘ಮಠ’ದ ಪಾಠದ ಜತ್ಗೆ; ಅಟ್ಟೀಲಿ ಪಾಠ ಯಳ್ತಿನಿ” ಎಂಬಂತಹ ಆಕೆಯ ಮಾತುಗಳ ದೃಢ ನಿರ್ಧಾರದ ಹಿಂದೆ ಅಂಬೇಡ್ಕರ್ ಆಶಿಸಿದ ಶಿಕ್ಷಣದ ಮಹೋನ್ನತ ಆಶಯವಿದೆ. ಆಕೆಗೆ ತಾನು ಕಲಿತಿರುವ ವಿದ್ಯೆ ತನ್ನನ್ನು ಕೈ ಹಿಡಿದು ನಡೆಸುವುದೆಂಬ ವಿಶ್ವಾಸವಿರುವ ಕಾರಣವಾಗಿ ತನ್ನ ದುಷ್ಟ ಗಂಡನನ್ನೇ ತೊರೆಯುವ ಯೋಚನೆ ಮಾಡುವುದು ಸಕಾರಣವಾಗಿಯೇ ಇದೆ.

            ಕಾದಂಬರಿಯಲ್ಲಿ ಸುಬ್ಬವ್ವನಂತೆ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ್ದರೂ ಅಗ್ರಹಾರದ ಹಲವು ಮಹಿಳೆಯರು ಶೋಷಣೆಗೆ ಒಳಗಾಗಿ ನೋವನ್ನು ಅನುಭವಿಸುವುದು ಕಂಡುಬರುತ್ತದೆ. ಇದರ ಜೊತೆಗೆ ಸಿಪಾದಸಾಸ್ತ್ರಿಗಳು ನರಸಿಂಹಭಟ್ಟನಿಗೆ ಹೇಳುವ “ಕಾಲ ಬದ್ಲಗ್ತಾ ಇದೆ. ನಾವು ವಸಿ ಇಸಾಲವ್ವಾಗಿ ಯೋಚ್ನೆ ಮಾಡನಾ. ಸುಬ್ಬವ್ವ.....ವಾದ್ದೋಳು, ತಿಳಿದೋಳು ಅವಳು ನಾರಾಯಣಗುರು, ಪೆರಿಯಾರ್, ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಬಗ್ಗೆ ವಾದ್ಕೊಂಡವಳೆ. ಅವಳ ಆಲೋಚ್ನೆ ಸರಿ ಇದೆ. ಚಳ್ಗ್ಲ, ನಡ್ಕ್ಲು, ಉಕ್ಕಡ ಚಾರಿಯೋರು ನಮ್ಮಂಗೆ ಮನುಷ್ಯ್ರಲ್ಲವೇ.....! ನಾವು.....ಅವಳ್ಗೆ ವಸಿ ಬೆಂಬಲ ಕ್ವಾಟ್ರೇ ವಳ್ಳೆದುಂತಿನಿ”. ಎಂಬ ಮಾತುಗಳು ಬ್ರಾಹ್ಮಣನದರೂ ಶ್ರೀಪಾದಸಾಸ್ತ್ರಿಗಳ ವಿಶಾಲ ಹಾಗೂ ಬದಲಾದ ಪ್ರಬುದ್ಧ ಮನಸ್ಥಿತಿಯನ್ನು ತೋರಿಸುತ್ತದೆ.

            ಹೀಗೆ ಸುಬ್ಬವ್ವ ಅಗ್ರಹಾರದ ಹಾಗೂ ತನ್ನ ಗಂಡನ ತೀವ್ರ ವಿರೋಧದ ನಡುವೆಯೂ ದಲಿತ ಮಕ್ಕಳಿಗೆ ಪಾಠ ಹೇಳಿಕೊಡುವುದನ್ನು ಮುಂದುವರೆಸುತ್ತಾಳೆ. ಆದರೆ ಚೆಸುವಸಾಸ್ತ್ರಿಯ ಕಿರುಕುಳ ಅತಿರೇಕಕ್ಕೆ ಹೋದಾಗ ಗಂಡ, ಮನೆ ಹಾಗೂ ಅಗ್ರಹಾರವನ್ನೇ ತೊರೆದು ದಲಿತ ಕೇರಿಗೆ ಹೋಗಿ ಅಲ್ಲಿ ಗುಡಿಸಲೊಂದನ್ನು ಕಟ್ಟಿಕೊಂಡು ತನ್ನ ಶಿಕ್ಷಕ ವೃತ್ತಿಯನ್ನು ಮುಂದುವರೆಸುವ ಮೂಲಕ ದಲಿತ ಕೇರಿಯ ಮಕ್ಕಳಿಗೆ ಜ್ಞಾನ ದೇವತೆಯಾಗಿ ಮಿನುಗುತ್ತಾಳೆ. ಹೀಗೆ ಇಡೀ ಕಾದಂಬರಿಯ ಮೇಲೆ ಸುಬ್ಬವ್ವನ ಪ್ರಭಾವವಿದ್ದು ಸ್ತ್ರೀವಾದಿ ದೃಷ್ಟಿಕೋನದ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಒಳಗುಮಾಡಬಹುದಾಗಿದೆ.

ಪರಾಮರ್ಶನ ಗ್ರಂಥಗಳು

1.         ಪ್ರೊ.ಹೆಬ್ಬಾಲೆ ಕೆ. ನಾಗೇಶ್, ಅಗ್ರಹಾರ, 2018, ರುಚಿರ ಪ್ರಕಾಶನ, ಹಾಸನ.

 


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal