‘ಟ್ರೈನ್ ಟು ಪಾಕೀಸ್ತಾನ್’ ಕಾದಂಬರಿ : ಸಮಕಾಲೀನ ಓದು
ಸೈಯದ್ ಬಿ.
ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ
ಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ – 583 276
ಮೊ-9880051998
Email : syducta@gmail.com
ಸಾಹಿತ್ಯಕ್ಕೆ ತನ್ನದೇ ಆದಂತಹ ವಿಶಿಷ್ಟತೆ ಇದೆ. ಸಾಹಿತ್ಯ ತನ್ನ ಸಮಾಜವನ್ನು ಹಲವಾರು ಮಗ್ಗಲುಗಳ ಮೂಲಕ ಗ್ರಹಿಸಿಕೊಂಡು ಅದನ್ನು ತನ್ನಲ್ಲಿ ಅಡಕಮಾಡಿಕೊಳ್ಳುತ್ತದೆ. ಅದ್ದರಿಂದ ಒಂದು ದೇಶದ ನಿಜವಾದ ವಾಸ್ತವ ಚಿತ್ರಣವನ್ನು ಸಾಹಿತ್ಯದಲ್ಲಿ ಕಾಣಲೂ ಸಾಧ್ಯ. ದೇಶದ ವರ್ತಮಾನದ ಸಂದರ್ಭದಲ್ಲಿ ಸೃಷ್ಟಿಯಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು, ಹಾಗೂ ಆ ಸಮಸ್ಯೆಗಳಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಭೀಕರತೆಯನ್ನು, ಸಾಹಿತ್ಯ ಕೃತಿಗಳ ಮೂಲಕ ಭೂತಕಾಲದಲ್ಲಿ ಘಟಿಸಿದ ಘಟನೆಗಳ ಉದಾಹರಣೆಗಳಿಂದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಾಹಿತ್ಯ ನೆರವಾಗುತ್ತದೆ. ಅದ್ದರಿಂದ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಗ್ರಹಿಸುವ, ವಿಮರ್ಶಿಸುವ, ನಿರ್ಮಿಸುವ ಅಗತ್ಯತೆ ಇದೆ. ಆಗಾಗಿ ಇಂದು ನಮ್ಮ ಭಾರತ ಎದುರಿಸುತ್ತಿರುವ ಸಮಕಾಲೀನ, ಸಮಸ್ಯೆ ಸವಾಲುಗಳಿಗೆ ಪರಿಹಾರವನ್ನು ಸಾಹಿತ್ಯದ ಮೂಲಕ ಕಂಡುಕೊಳ್ಳುವುದು ಅಗತ್ಯವಾಗಿದೆ.
ಸಮಕಾಲೀನ ಭಾರತದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆಯೋ ಇಲ್ಲವೋ ಎಂಬುದು ಪ್ರಶ್ನಾರ್ಹ ಆದರೆ ಕೋಮುವಾದದ ಅಭಿವೃದ್ಧಿ ಮಾತ್ರ ಯಶಸ್ವಿಯಾಗಿ ನಡೆಯುತ್ತಿದೆ. ಕೋಮುವಾದದ ಬೆಳವಣಿಗೆ, ಇಂದು ಭಾರತದ ಅಭಿವೃದ್ಧಿಯ ಪಥದ ಜೊತೆ ಸಾಗುತ್ತಿರುವುದು, ದೇಶದ ಅಭಿವೃದ್ಧಿಗೆ ದಕ್ಕೆಯಾಗಬಹುದೇ? ಅಥವಾ ಅಭಿವೃದ್ಧಿಯಲ್ಲಿ ಕೈ ಜೋಡಿಸಿ, ಅಭಿವೃದ್ಧಿಯ ಪಥವನ್ನು ಹಾರಿಸಬಲ್ಲದೇ? ಎಂಬಂತಹವು ಪ್ರಸ್ತುತ ಪ್ರಶ್ನೆಗಳು. ದೇಶವು ಇಂದು ಕೋಮುವಾದದ ಭೀಕರತೆಗೆ ಸಾಕ್ಷಿಯಾಗಿದ್ದು. ಭಾರತ ದೇಶದಲ್ಲಿ ವ್ಯಾಪಿಸಿರುವ ಅನೇಕ ಧರ್ಮ ಜಾತಿಗಳ ಮೂಲಕ ರಾಮ, ಕೃಷ್ಣÀ, ಅಲ್ಲ್ಹಾ, ಬುದ್ಧ ಹಾಗೂ ಯೇಸುವಿನ ಜೊತೆಗೆ ಸಾಮಾಜೀಕ ಹೋರಾಟಗಾರರೂ, ಸಮಾಜ ಸುಧಾರಕರು ಹಾಗೂ ರಾಜರುಗಳು ಧರ್ಮ, ಜಾತಿ ಉಪಜಾತಿಗಳ ಹೆಸರಿನಲ್ಲಿ ಮರುಹುಟ್ಟು ಪಡೆದು ದೇವರುಗಳಾಗಿ ಅವತರಿಸುತ್ತಿದ್ದಾರೆ. ಆದರೇ ಅವರ ತ್ಯಾಗ, ಹೋರಾಟ, ಭೋಧನೆ, ಚಿಂತನೆ, ಸಾಮಾಜೀಕ ಕಳಕಳಿಯಂತಹ ವಿಚಾರಗಳನ್ನು ಗಾಳಿಗೆ ತೂರಿ ಅವರನ್ನು ತಮ್ಮ ಬಂಡವಾಳಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಅವರನ್ನು ಒಂದು ಧರ್ಮಕ್ಕೆ, ಜಾತಿಗೆ ಸೀಮಿತ ಮಾಡುವಲ್ಲಿ ಯಶಸ್ವಿಯಾಗಿ ಕೋಮುಸೌಹಾರ್ದದ ಬದಲು ಕೋಮುವಾದಕ್ಕೆ ಅಣಿಮಾಡುವ ಕೆಲಸದಲ್ಲಿ ಕೆಲವು ಸಮಕಾಲೀನ ರಾಜಕೀಯ ಪಕ್ಷಗಳು ಕಾರ್ಯ ಪ್ರವೃತ್ತವಾಗಿವೆ. ಅದ್ದರಿಂದ ದೇಶದ ಅಭಿವೃದ್ಧಿ ಕೇವಲ ಒಂದು ಧರ್ಮವನ್ನು, ಓಲೈಸುವುದರ ಮೂಲಕ ಆಗುತ್ತದೆಂಬುದು ಇಂದಿನ ರಾಜಕೀಯ ಪಕ್ಷಗಳ ನಿಲುವು ಆಗಿರಬಹುದೇ? ಎಂಬ ಪ್ರಶ್ನೆ ಎದುರಾಗುತ್ತಿದೆ. ರಾಜಕೀಯ ಪಕ್ಷಗಳ ಜೊತೆಗೆ ಮುಖ್ಯವಾಗಿ ಕೋಮುವಾದಕ್ಕೆ ಮೂಲ ಕಾರಣ ಧಾರ್ಮಿಕ ಮೂಲಭೂತವಾದಿಗಳು, ಕೆಲವು ಸಂಘಪರಿವಾರಗಳು, ಆಡಳಿತವರ್ಗಗಳು ಹಾಗೂ ಹೊರಗಿನವರ ಕುಮ್ಮಕ್ಕು ಎಂಬುದು ಸ್ಪಷ್ಟ. ಆದರೆ ಇವುಗಳಿಂದ ಸೃಷ್ಟಿಯಾಗುವ ಕೋಮುವಾದಕ್ಕೆ ಬಲಿಯಾಗುವುದು ಮಾತ್ರ ಸಾಮಾನ್ಯ ಜನತೆಯಾಗಿದ್ದಾರೆ. ಸಾಮಾನ್ಯ ಜನತೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ, ಅವರು ಕೋಮುವಾದದ ಭೀಕರತೆಗೆ ಸಿಲುಕಿ ಹೋಗಿರುತ್ತಾರೆ. ಸಮಕಾಲೀನ ಭಾರತದಲ್ಲಿ ಅದರಲ್ಲು ನಮ್ಮ ಕರ್ನಾಟಕದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆದ ಅನೇಕ ಕೋಮುವಾದದ ಸಾವುಗಳೇ ಇದಕ್ಕೆ ಸಾಕ್ಷಿಯಾಗಿ ಕಾಣುತ್ತವೆ. ಸಮಕಾಲೀನ ಸಂದರ್ಭದಲ್ಲಿ ನಡೆಯುತ್ತಿರುವ ಕೋಮುವಾದದ ಪರಿಸ್ಥಿತಿಯು ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಪರಿಣಾಮವನ್ನು ಊಹಿಸಿದರೆ ಭಯವಾಗುತ್ತದೆ. ಆದ್ದರಿಂದ ಇಂತಹ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರವಾಗಿ ಸಾಹಿತ್ಯವನ್ನು ಸಮಕಾಲೀನ ಓದಿನ ದೃಷ್ಟಿಯಲ್ಲಿ ನೋಡಬೇಕಾಗಿದೆ. ಪ್ರಸ್ತುತ ಭಾರತದಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಖುಷ್‍ವಂತ್ ಸಿಂಗ್ ಅವರ ‘ಟೈನ್ ಟು ಪಾಕಿಸ್ತಾನ್’ ಕಾದಂಬರಿಯ ಸಮಕಾಲೀನ ಓದು ಮುಖ್ಯವಾಗುತ್ತದೆ. ಕಾದಂಬರಿಯಲ್ಲಿ ಸಂಭವಿಸುವಂತೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಇನ್ನಿತರೆ ವಿದ್ಯಮಾನಗಳು ಕರ್ನಾಟಕವನ್ನು ಒಳÀಗೊಂಡಂತೆ, ಭಾರತದಾದ್ಯಂತ ನಡೆಯುತ್ತಿರುವುದರಲ್ಲಿ ಕಾದಂಬರಿಯ ಸಮಕಾಲೀನ ಓದು ಅವಶ್ಯವಾಗುತ್ತದೆ.
1956ರಲ್ಲಿ ಖುಷ್‍ವಂತ್ ಸಿಂಗ್ ಅವರು ಇಂಗ್ಲಿಷ್ ಭಾಷೆಯಲ್ಲಿ ರಚನೆ ಮಾಡಿದ ‘ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿ ಒಂದು ಗಂಭೀರವಾದÀ ಚಾರಿತ್ರಿಕ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ 1947ರ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳೆಲ್ಲವೂ ಇಂದಿನ ಸಮಕಾಲೀನ ಸಂದರ್ಭದಲ್ಲಿ ತುಂಬಾ ಪ್ರಸ್ತುತವಾಗಿ ಕಾಣಿಸುತ್ತವೆ. 1947ರ ಸ್ವತಂತ್ರ ಭಾರತದ ಚರಿತ್ರೆಯಲ್ಲಿ ನಡೆದಂತಹ ಘಟನೆಗಳನ್ನು ಹಂತ ಹಂತವಾಗಿ ತೆರೆದಿಡುತ್ತ ಹೋಗುವ ಕಾದಂಬರಿಯು ಮಾನವೀಯ ಅಂಶಗಳನ್ನು ತೆರೆದಿಡುತ್ತದೆ. ಸಮಾಜದಲ್ಲಿನ ಕೋಮುವಾದದ ಕರಾಳ ಮುಖವನ್ನು ತಿಳಿಸುತ್ತದೆ. ಒಂದು ಪ್ರದೇಶದ ಆಳವಾದ ಸ್ಥಳೀಯ ನೈಜತೆಯನ್ನು ಅಗೆಯುತ್ತ ಸಾಗುವ ಕಾದಂಬರಿ, ಆಗಸ್ಟ್ 1947ರ ಭಾರತದ ಸ್ವಾತಂತ್ರ್ಯದ ವಿಜೃಂಭಣೆಯನ್ನು ವಿವರಿಸುವ ಬದಲಿಗೆ, ಆಗಸ್ಟ್ 1947ರ ಬೇಸಿಗೆ ಕಾಲದಲ್ಲಿ ತೆರೆ ಬಿದ್ದಿದ್ದ ಭಾರತ-ಪಾಕಿಸ್ತಾನವೆಂಬ ದೇಶಗಳ ವಿಭಜನೆಯನ್ನು, ಅದರ ಭೀಕರತೆಯನ್ನು ವಿವರಿಸುತ್ತದೆ. ಸ್ವತಂತ್ರ ಭಾರತದ ಸಾಮಾಜಿಕ ಪರಿಸ್ಥಿತಿಯು ಅಸ್ತವ್ಯಸ್ಥತೆಗೆ ಒಳಗಾಗಿದ್ದನ್ನು ಇಲ್ಲಿ ಹಿಡಿದಿಡಲಾಗಿದ್ದು. ದೇಶಕ್ಕೆ ಸ್ವತಂತ್ರ ಬಂದ ಸಡಗರಕ್ಕಿಂತ ದುಖಃವೇ ಹೆಚ್ಚು ಎಂಬಂತೆ ಇಲ್ಲಿನ ಪಾತ್ರಗಳ ಮೂಲಕ ವ್ಯಕ್ತ ಪಡಿಸಲಾಗಿದೆ. ಆರಂಭದಿಂದ, ಮುಕ್ತಾಯದವರೆಗೂ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿರುವುದೇ ಕಾದಂಬರಿಯು ಸಮಕಾಲೀನ ಸಂದರ್ಭದಲ್ಲಿ ಪ್ರಸ್ತುತವಾಗಲು ಕಾರಣವಾಗಿದೆ. ಕೋಮುವಾದದ ಹುಟ್ಟಿಗೆ ಕಾರಣವಾಗುವ ಅಂಶಗಳೇನು? ಅದರ ಭೀಕರತೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕಾದಂಬರಿ ನೀಡುವಲ್ಲಿ ಯಶಸ್ವಿಯಾಗುತ್ತದೆ.
ಸಮಕಾಲೀನ ಸಂದರ್ಭದಲ್ಲಿ ಕೋಮುವಾದ ಹುಟ್ಟುತ್ತಿರುವುದಕ್ಕೆ ಕಾರಣಗಳನ್ನು ಹುಡುಕುವ ಹಾಗೂ ಅದರ ಭೀಕರ ಪರಿಣಾಮಗಳನ್ನು ತಿಳಿಸುವುದರ ಜೊತೆಗೆ ಅವುಗಳಿಗೆ ಪರಿಹಾರವನ್ನು ಹುಡುಕಿಕೊಡುವಲ್ಲಿ, ಭೂತ ಕಾಲದಲ್ಲಿ ನಿಂತು ವರ್ತಮಾನಕ್ಕೆ ಪರಿಹಾರವನ್ನು ಕಂಡುಕೊಡುವ ಕಾರ್ಯಕ್ಕೆ ಪ್ರಯತ್ನಿಸುತ್ತದೆ. ಗೌರಿ ಲಂಕೇಶ್‍ರವರು ಕೃತಿಯ ಮುನ್ನುಡಿಯಲ್ಲಿ(ಅನು) ಕಾದಂಬರಿಯ ಸಮಕಾಲೀನತೆಯನ್ನು ಕುರಿತು ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. “ಪ್ರಸ್ತುತ ಸಂದರ್ಭದಲ್ಲಿ ಈ ಕಾಲ್ಪನಿಕ ಮನೋ ಮಜ್ರಾಕ್ಕೂ, ನಮ್ಮ ರಾಜ್ಯದ ಹಲವಾರು ನಗರ, ಹಳ್ಳಿಗಳಿಗೂ-ಅದರಲ್ಲೂ ಕರಾವಳಿ ಪ್ರದೇಶದಲ್ಲಿನ ನಗರ, ತಾಲೂಕು ಕೇಂದ್ರ, ಗ್ರಾಮಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಏಕೆಂದರೆ ಹಲವಾರು ದಶಕಗಳಿಂದ ಹೇಗೆ ಮನೋ ಮಜ್ರಾದ ಸಿಖ್ಖರು, ಮುಸಲ್ಮಾನರು, ಹಿಂದೂಗಳು ಸೌಹಾರ್ದದ ಬಾಳ್ವೆ ನಡೆಸುತ್ತಿದ್ದರೋ, ಅದೇ ರೀತಿ ಇಲ್ಲಿಯೂ ತಲತಲಾಂತರದಿಂದ ಹಿಂದೂಗಳು ಮತ್ತು ಅಲ್ಪಸಂಖ್ಯಾತರು ಜೊತೆಜೊತೆಯಾಗಿ ಜೀವಿಸುತ್ತಾ ಬಂದಿದ್ದಾರೆ. ಆದರೆ ಹೇಗೆ ದೇಶದ ವಿಭಜನೆಯ ಸಂದರ್ಭದಲ್ಲಿ ಎಲ್ಲೋ ಪಡೆಯುವ ವಿದ್ಯಮಾನಗಳು ಮನೋ ಮಜ್ರಾದಲ್ಲಿನ ಶಾಂತಿಯನ್ನು ಛಿದ್ರಗೊಳಿಸಿ ರಕ್ತಪಾತಕ್ಕೆ ನಾಂದಿ ಹಾಡುತ್ತೋ ಹಾಗೆಯೇ ಇವತ್ತು ನಮ್ಮ ಸುತ್ತಲೂ ನಡೆಯುತ್ತಿದೆ”. ಇವು ಅರ್ಥಪೂರ್ಣವಾದ ಮಾತುಗಳಾಗಿವೆ. ಅವರ ಅಭಿಪ್ರಾಯದಂತೆ ಇವು ಇಂದು ಕರ್ನಾಟಕವನ್ನೂ ಒಳಗೊಂಡಂತೆ ಇಡೀ ಭಾರತದಲ್ಲಿ ನಡೆಯುತ್ತಿರುವ ಪ್ರಸ್ತುತ ವಿಚಾರಗಳಾಗಿವೆ.
ಸಮಕಾಲೀನ ಸಂದರ್ಭದಲ್ಲಿ ಹಳ್ಳಿಗಳು ಕೋಮುವಾದದ ನೆರಳಿಗೆ ಸಿಲುಕಿ, ಅದರ ಭೀಕರತೆಗೆ ಬಲಿಯಾಗುತ್ತಿವೆ. ಶಾಂತಿ, ಸೌಹಾರ್ದ ವಾತಾವರಣವೂ ಮರೆಯಾಗುವ ಕಡೆಗೆ ಸಾಗುತ್ತಿರುವುದನ್ನು ಕಾಣುತ್ತಿದೆ. ಇಂತಹ ಭೀಕರತೆಗೆ ಕಾರಣವನ್ನು ಖುಷ್‍ವಂತ್‍ಸಿಂಗ್‍ರ ‘ಟೈನ್ ಟು ಪಾಕಿಸ್ತಾನ್’ ಕಾದಂಬರಿಯಲ್ಲಿ ಕಾಣಬಹುದಾಗಿದೆ. 1947ರಲ್ಲಿನ ಘಟನೆಗಳು ಸಮಕಾಲೀನ ಸಂದರ್ಭದಲ್ಲಿ ಘಟಿಸುತ್ತಿರುವುದನ್ನು ಬೆರಳು ಮಾಡಿ ತೋರಿಸುವಲ್ಲಿ ಕೃತಿಯ ಪ್ರಸ್ತುತತೆಯನ್ನು ತಿಳಿಸುತ್ತದೆ. ಕಾದಂಬರಿಯ ಕೇಂದ್ರ ಬಿಂದುವಾದ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಚಿಕ್ಕ ಹಳ್ಳಿಯಾದ ಮನೋಮಜ್ರಾದಂತಹ ಹಳ್ಳಿಗಳು ಕರ್ನಾಟಕದಲ್ಲಿ ತುಂಬಾ ಇವೆ. ಮನೋಮಜ್ರಾದಲ್ಲಿ ಸಂಭವಿಸುವಂತಹ ಘಟನೆಗಳೊಂದಿಗೆ ಅದಕ್ಕೆ ಪೂರಕವೆಂಬಂತೆ ಪ್ರವೇಶಿಸುವ ವ್ಯಕ್ತಿಗಳಿಂದ ಹಳ್ಳಿ ಛಿದ್ರಗೊಂಡಂತೆ, ಇಂದು ಕರ್ನಾಟಕದಲ್ಲಿ ಘಟಿಸುತ್ತಿರುವುದು ವಾಸ್ತವದ ಅಂಶವಾಗಿದೆ. ಹೀಗೆ ಘಟಿಸುವ ಘಟನೆಗಳಿಂದ ಮಾನವೀಯ ಸಂಬಂಧಗಳು ಛಿದ್ರಗೊಳ್ಳುತ್ತಿವೆ. ಇಂತಹ ಘಟನೆಗಳನ್ನು ಕುರಿತು ಕಾದಂಬರಿಯು ಗಂಭೀರವಾಗಿ ಚರ್ಚಿಸುತ್ತದೆ. ಆದ್ದರಿಂದ ಕಾದಂಬರಿಯನ್ನು ಮಾನವೀಯ ಸಂಬಂಧಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕವಾಗಿ ನೋಡುವುದು ಮುಖ್ಯವಾಗುತ್ತದೆ. ಆಗ ಮಾತ್ರ ಕಾದಂಬರಿಯಲ್ಲಿನ ವಸ್ತು ಸಮಕಾಲೀನ ಓದುವಿಗೆ ನೆರವಾಗುತ್ತದೆ. ಜೊತೆಗೆ ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುತ್ತದೆ.
‘ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿ 1947ರ ಬೇಸಿಗೆ ಕಾಲದ ಸಂದರ್ಭದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದ ದೇಶ ವಿಭಜನೆ ಎಂಬ ವಸ್ತುವನ್ನಿಟ್ಟುಕೊಂಡು ಆರಂಭವಾಗುತ್ತದೆ. ಅಖಂಡ ಭಾರತವು ಭಾರತ-ಪಾಕಿಸ್ತಾನವೆಂದು ವಿಭಾಗವಾದ ನಂತರ ಭಾರತದ ಕೋಲ್ಕತ್ತದಂತಹ ನಗರ ಹಾಗೂ ದೇಶದಾದ್ಯಂತ ವಿವಿಧ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಸಿಖ್ ಧರ್ಮಿಯರ ಮಧ್ಯೆ ನಡೆಯುತ್ತಿರುವ ಭೀಕರವಾದ ಕೋಮುಗಲಭೆಗಳ ಪರಿಣಾಮವನ್ನು ವಿವರಿಸುತ,್ತ ಇದರ ಪರಿಣಾಮವಾಗಿ ಎರಡು ದೇಶಗಳಿಂದ ನೂರು ಲಕ್ಷದಷ್ಟು ಮುಸ್ಲಿಂ, ಸಿಖ್, ಹಿಂದೂ ನಿರಾಶ್ರಿತರು ಪಲಾಯನ ಮಾಡಬೇಕಾಗಿತ್ತು. ಭಯೋತ್ಪಾದನೆಯ ಭೀತಿ ದೇಶದಾದ್ಯಂತ ತಾಂಡವಾಡುತ್ತಿದೆ. ಸುಮಾರು 10ದಶಲಕ್ಷದಷ್ಟು ಜನ ಸತ್ತೆ ಹೋಗಿದ್ದರು. ಹೀಗೆ ಅಂಕಿ ಸಂಖ್ಯೆಯನ್ನು ಕೊಡುವುದರ ಮೂಲಕ ಪ್ರಾರಂಭಿಸಿ ಸ್ವತಂತ್ರ ಭಾರತದ ನೈಜ ಚಾರಿತ್ರಿಕ ನಿಜಾಂಶವನ್ನು ಹಾಗೂ ಪರಿಸ್ಥಿತಿಯನ್ನು ವಿವರಿಸುತ್ತಾರೆ. ನಂತರ ಲೇಖಕರು ಕೋಮುವಾದವೆಂಬ ಪರಿಕಲ್ಪನೆಯ ಅರ್ಥವೇ ಗೊತ್ತಿಲ್ಲದಂತಹ, ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬ ಸತ್ಯವನ್ನೆ ತಿಳಿದಿರದ ವಿವಿಧತೆಯಲ್ಲಿ ಏಕತೆಯನ್ನು ಸಾಧಿರುವಂತಹ ಪಂಜಾಬ್‍ನ ಪ್ರಾಂತ್ಯದಿಂದ ದೂರವಿರುವಂತಹ, ಮನೋಮಜ್ರಾ ಎಂಬ ಹಳ್ಳಿಯ ಬಗ್ಗೆ ವಿವರಿಸುತ್ತಾರೆ. ಈ ಹಳ್ಳಿಯನ್ನು ಹೋಲುವಂತಹ ಅನೇಕ ಹಳ್ಳಿಗಳು ನಮ್ಮ ಕರ್ನಾಟಕದಲ್ಲಿ ಇಂದಿಗೂ ತುಂಬಾ ಹೇರಳವಾಗಿರುವುದಂತು ನಿಜ ಸಂಗತಿ. ಮನೋಮಜ್ರಾ ಹಿಂದೂ, ಮುಸ್ಲಿಂ, ಸಿಖ್ ಹಾಗೂ ಜಾಡಮಾಲಿಗಳು ಹೀಗೆ ಅನೇಕ ಧರ್ಮಿಯರನ್ನು ಒಳಗೊಂಡ ಧಾರ್ಮಿಕ ವಿವಿಧತೆಯಲ್ಲಿ ಐಕ್ಯತೆಯನ್ನು ಸಾಧಿಸಿರುವ ಹಳ್ಳಿಯಾಗಿದ್ದು. ಹೊರ ಸಮಾಜಕ್ಕೆ ಮಾತ್ರ ಇಲ್ಲಿಯ ಜನತೆ ಬೇರೆ, ಬೇರೆ ಧರ್ಮಿಯರೆಂದು ಗುರುತಿಸಲು ಸಾಧ್ಯವಾಗುವುದೇ ಹೊರತು ಇಲ್ಲಿನ ಜನತೆಯ ಮನಸ್ಸುಗಳಿಗಾಗಲಿ, ಸಂಬಂಧಗಳಿಗಾಗಲಿ ಧರ್ಮಗಳ ಪರಿಕಲ್ಪನೆ ಇರಲಿಲ್ಲ. ಇವರು ಪ್ರೀತಿ, ಸ್ನೇಹ ಸೌಹಾರ್ದತೆಯಿಂದ ಹಿಂದಿನಿಂದಲೂ ಬಾಳುತ್ತ ಬಂದ ಜನತೆಯಾಗಿದ್ದಾರೆ.
ಕಾದಂಬರಿಯಲ್ಲಿ ಮಾನವೀಯ ಸಂಬಂಧಗಳ ಪ್ರತಿನಿಧಿ ಪಾತ್ರಗಳಾಗಿ ಮಿತ್‍ಸಿಂಗ್(ಸಿಖ್), ಇಮಾನ್‍ಬಾಕ್ಷ್(ಮುಸ್ಲಿಂ) ಮತ್ತು ರಾಂ ಲಾಲ್(ಹಿಂದೂ) ಇವರು ಹಳ್ಳಿಯ ಪ್ರಮುಖ ಮುಖಂಡರಾಗಿದ್ದು ಸೋದರತ್ವ ಕಲ್ಪನೆಯುಳ್ಳವರಾಗಿದ್ದರು. ಮಿತ್‍ಸಿಂಗ್ ಹಾಗೂ ಇಮಾಮ್ ಬಾಕ್ಷನ ಸಂಬಂಧ ಧಾರ್ಮಿಕ ಕಟ್ಟಳೆಯನ್ನು ಮೀರಿ ವಿಶ್ವಮಾನವೀಯತೆಯ ಕೇಂದ್ರ ವ್ಯಕ್ತಿಗಳಾಗಿ ಕಾಣುತ್ತಾರೆ. ಅದೇ ರೀತಿ ಧಾರ್ಮಿಕ ನಿರ್ಬಂಧಗಳನ್ನು ಮೀರುವ ಪಾತ್ರಗಳಾಗಿ ಇಮಾನ್‍ಬಾಕ್ಷ್‍ನ ಮಗಳು ನೂರನ್ ಮತ್ತು ಜಗ್ಗತ್‍ಸಿಂಗ್ ಕಾಣಿಸಿ ಕೊಳ್ಳುತ್ತಾರೆ. ಈ ರೀತಿಯ ವಿವಿಧತೆಯಲ್ಲಿ ಐಕ್ಯತೆ ಸಾಧಿಸಿರುವ ಹಳ್ಳಿ ಹಂತ ಹಂತವಾಗಿ ಕೋಮುವಾದಕ್ಕೆ ಸಿಲುಕಿ ಕೋಮುವಾದದ ತಾಣವಾಗಿ ಬದಲಾಗುತ್ತ ಮಾನವೀಯ ಮೌಲ್ಯಗಳು, ಸಂಬಂಧಗಳು ಛಿದ್ರಗೊಳ್ಳಲು ಪ್ರಾರಂಭಿಸುತ್ತವೆ. ಕೊನೆಗೆ ಇಡೀ ಮನೋ ಮಜ್ರಾವೇ ಛಿದ್ರಗೊಳ್ಳುತ್ತದೆ. ಹಳ್ಳಿಯು ಛಿದ್ರಗೊಳ್ಳುವಲ್ಲಿ ಅಲ್ಲಿನ ಸ್ಥಳೀಯ ಸರ್ಕಾರದ ರಾಜಕೀಯ ನಿರ್ಲಕ್ಷ್ಯ ಹಾಗೂ ಅಧಃಪತನ, ಹಾಗೂ ಅದಕ್ಕೆ ಪೂರಕವೆಂಬಂತೆ ನೆಡೆದುಕೊಳ್ಳುವ ಅಧಿಕಾರಿಯಾದ ಗೊಂದಲದ ಮನಸ್ಥಿತಿಯುಳ್ಳ ಜಿಲ್ಲಾಧಿಕಾರಿ ‘ಹುಕುಮ್ ಚಂದ್’ ಮತ್ತು ಸಬ್ ಇನ್ಸ್‍ಪೆಕ್ಟರ್ ಕಾರಣವಾಗುತ್ತಾರೆ. ಹುಕುಮ್‍ಚಂದ್ ಕೈಯಲ್ಲಿ ಅಧಿಕಾರವಿದ್ದರೂ ಇವನು ಗಲಭೆಗಳನ್ನು ಹತ್ತಿಕ್ಕಿ ಶಾಂತಿಯನ್ನು ನೆಲೆಗೊಳಿಸುವಲ್ಲಿ ವಿಫಲನಾಗುತ್ತಾನೆ. ಕೋಮು ಗಲಭೆಗಳನ್ನು ಹತ್ತಿಕ್ಕಬೇಕು, ಗಲಭೆಗಳನ್ನು ತಡೆಗಟ್ಟಬೇಕೆಂದು ಚಿಂತಿಸುತ್ತಾನೆ.
ಆದರೆ ಕೆಲವೊಮ್ಮೆ ದೇಶದಲ್ಲಿ ನಡೆಯುವ ಕೋಮು ಸಂಘರ್ಷ, ಗಲಭೆಗಳನ್ನು ಕಂಡು ಮರುಗುತ್ತಾನೆ. ಇಂತಹ ಘಟನೆಗಳಿಂದ ಮಾನಸಿಕ ವಿಚಲಿತನಾಗಿ ಅಸಮರ್ಥನ ರೀತಿಯಲ್ಲಿ ವರ್ತಿಸುತ್ತಾನೆ. ಒಮ್ಮೆ ಹುಕುಮ್ ಚಂದ್‍ನು ಸಬ್ ಇನ್ಸ್‍ಪೆಕ್ಟರ್ ಬಳಿ ಹೀಗೆ ನುಡಿಯುತ್ತನೆ “ಎಲ್ಲರೂ ಕೊಲ್ಲಲಿ ಬಿಡಿ ಬೇರೆ ಸ್ಟೇಷನ್‍ಗಳಿಂದ ಸಹಾಯಕ್ಕಾಗಿ ಕೇಳಿ ಅಷ್ಟೇ ಅಲ್ಲದೆ ನೀವು ಕಳಿಸೋ ಸುದ್ದಿಗಳನ್ನು ಬರೆದಿಡಿ, ಅವರನ್ನು ತಡೆಯೋದಕ್ಕೆ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಿದೆವು ಅಂತ ನಾವು ಸಾಬೀತು ಮಾಡುವಂತಿರ ಬೇಕು ನಾನೇನು ಮಾಡೋದಿದೆ ಎಂದು ಅವನು ಹಲುಬಿದ”, ಇಲ್ಲಿ ಅವನ ಮಾನವೀಯ ಅಂಶವನ್ನು ಕಂಡರೆ. ನಂತರ ದೇಶದಲ್ಲಿ ನಡೆಯುವ ವಿಧ್ಯಮಾನಗಳಿಂದ ಬೇಸರಕ್ಕೀಡಾಗಿ “ಇಡೀ ಪ್ರಪಂಚಕ್ಕೆ ಹುಚ್ಚು ಹಿಡಿದಿದೆ ಎಲ್ಲರೂ ಹುಚ್ಚರಾಗಿ ಹೋಗಲಿ ಬಿಡಿ! ಮತ್ತೊಂದು ಸಾವಿರ ಜನಗಳ ಕೊಲೆಯಾದರೆ ಏನು ವ್ಯತ್ಯಾಸ ಆಗ್ತದೆ? ಬೇರೆಯವರಿಗೆ ಮಾಡಿದಂತೆಯೇ ಒಂದು ಬುಲ್ಡೋಜರನ್ನು ತರಿಸಿ ಹೂತು ಹಾಕೋಣ ಈ ಬಾರಿ ಅದು ನದಿಯ ಮೇಲೆ ಆಗೋದಾದರೆ ನಮಗೆ ಬುಲ್ಡೋಜರಿನ ಅವಶ್ಯಕತೆ ಕೂಡ ಬೀಳದಿರಬಹುದು ಆ ಹೆಣಗಳನ್ನು ನೀರಿನಲ್ಲಿ ಎಸೆಯೋದು ಅಷ್ಟೆ ನಾನೂರು ದಶಲಕ್ಷ ಜನಸಂಖೈಯಲ್ಲಿ ಕೆಲವು ನೂರು ಯಾವ ಲೆಕ್ಕ? ಒಂದು ಸಾಂಕ್ರಮಿಕದಲ್ಲಿ ಇದರ ಹತ್ತರಷ್ಟು ಜನ ಸತ್ತು ಹೊಗ್ತಾರೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲ್ಲ” ಇಂತಹ ಕಠೋರ ನಿಲುವನ್ನು ಹೊಂದುತ್ತಾನೆ. ಅದರೇ ಅವನು ಹೇಳುವ ‘ಇಡೀ ಪ್ರಪಂಚಕ್ಕೆ ಹುಚ್ಚು ಹಿಡಿದಿದೆ’ ಎಂಬ ಮಾತು ಸ್ವತಂತ್ರ ಭಾರತದಲ್ಲಿ ತುಂಬಿದ್ದ ಧರ್ಮಾಂಧತೆ, ಸಾಮಾಜಿಕ ಅಭದ್ರತೆಯನ್ನು ಟೀಕಿಸುತ್ತದೆ. ಕೆಲವೊಮ್ಮೆ ಇವನ ಮಾನಸಿಕ ಗೊಂದಲಗಳನ್ನು ಕಂಡರೆ ಇಂತಹ ಗೊಂದಲದ ಮನಸ್ಥಿತಿಯ ವ್ಯಕ್ತಿಯು ಹೇಗೆ ಇಂತಹ ಭೀಕರ ಪರಿಸ್ಥಿಯನ್ನು ತಡೆಗಟ್ಟಬಲ್ಲ ಎಂಬ ಪ್ರಶ್ನೆ ಸೃಷ್ಟಿಯಾಗುತ್ತದೆ. ಇಂತಹ ಅಧಿಕಾರಿಗಳಿಂದ ಅಥವಾ ವ್ಯಕ್ತಿಗಳಿಂದ ಕೋಮುಗಲಭೆಯಿಂದ ಹತ್ತಿ ಉರಿಯುತ್ತಿರುವ ಮನೋಮಜ್ರಾದಂತಹ ಹಳ್ಳಿಯನ್ನು ಶಾಂತ ಪರಿಸ್ಥಿತಿಗೆ ತರಲು ಸಾಧ್ಯವಾಗುತ್ತದೆ. ಇವನ ಗೊಂದಲದ ನಡೆ ನುಡಿ ನಿಲುವುಗಳೇ ಮನೋಮಜ್ರಾವನ್ನು ಛಿದ್ರಗೊಳಿಸುವಲ್ಲಿ ಪ್ರಮುಖ ಕಾರಣವಾಗುತ್ತದೆ. ಹುಕುಮ್‍ಚಂದ್‍ನು ಇಂದಿನ ಸಮಕಾಲೀನ ಪೋಲಿಸ್ ವ್ಯವಸ್ಥೆಯಲ್ಲಿನ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಧ್ವಂದ್ವಾತ್ಮಕ ನಿಲುವುಗಳನ್ನು, ಲೋಪದೋಷಗಳನ್ನು ಪ್ರತಿನಿಧಿಸುತ್ತಾನೆ. ‘ಹುಕುಮ್ ಚಂದ್’ ಕಾದಂಬರಿಯಲ್ಲಿ ಮನೋಮಜ್ರಾದ ನಾಶಕ್ಕೆ ಪಾಯದ ಗುಂಡಿಯನ್ನು ತೆಗೆದರೆ ಅದನ್ನು ಮುಚ್ಚುವ ಕಾರ್ಯದಲ್ಲಿ ನಿರತನಾಗುವ ದುರಂಹಕಾರಿ ವ್ಯಕ್ತಿಯಾಗಿ ಸಬ್ ಇನ್ಸ್‍ಪೆಕ್ಟರ್ ಕಾಣಿಸಿಕೊಳ್ಳುತ್ತಾನೆ. ಗೌರಿ ಲಂಕೇಶ್‍ರವರು ಮುನ್ನುಡಿಯಲ್ಲಿ ಸ್ವಪ್ರತಿಷ್ಟೆಯುಳ್ಳಂತಹ ವ್ಯಕ್ತಿ ಎಂದು ಸಬ್ ಇನ್ಸ್‍ಪೆಕ್ಟರ್ ಬಗ್ಗೆ ಅಭಿಪ್ರಾಯಿಸುತ್ತಾರೆ. ಈತ ನಾಜೂಕಿನ ನಡವಳಿಕೆ ಉಳ್ಳವನಾಗಿದ್ದು, ಸ್ವಪ್ರತಿಷ್ಟೆ ಹೊಂದಿರುವಂತವನು ಇವನು ಮಜ್ರಾದಲ್ಲಿ ಸಿಖ್‍ರೂ ಮುಸ್ಲಿಂರನ್ನು ಉಳಿಸಿಕೊಂಡಿರುವುದಕ್ಕೆ ಕಾರಣ “ಸಿಖ್‍ರು ಮುಸ್ಲಿಂರವರಿಂದ ದುಡ್ಡು ಇಸ್ಕೊಳ್ತಿದ್ದಾರೆ” ಆದ್ದರಿಂದ ಮುಸ್ಲಿಂರನ್ನು ಉಳಿಸಿಕೊಂಡಿದ್ದಾರೆ ಎಂಬ ನಿಲುವನ್ನು ತಾಳುತ್ತಾನೆ. ಆದರೇ ಆ ಹಳ್ಳಿಯಲ್ಲಿನ ಜನರಲ್ಲಿ ಇದ್ದಂತಹ ಸಹೋದರ, ಮಾನವೀಯ ಸಂಬಂಧಗಳ ಬಗ್ಗೆ ತಿಳಿಯಲು ಹೋಗುವುದಿಲ್ಲ. ಇಂತಹ ಇಬ್ಬರೂ ಬೇಜಾವ್ದಾರಿ ಅಧಿಕಾರಿಗಳಿಂದ ಕೂಡಿದ ಆಡಳಿತ ವ್ಯವಸ್ಥೆಯಲ್ಲಿ ಮನೋಮಜ್ರಾ ಸರ್ವನಾಶವಾಗುತ್ತದೆ. ಈ ಹಳ್ಳಿಯಂತೆ 21ನೇ ಶತಮಾನದಲ್ಲಿ ಅನೇಕ ಕೋಮುಸೌಹಾರ್ದತೆಯಿಂದ ಬದುಕುತ್ತ ಬಂದಿರುವ ಹಳ್ಳಿಗಳು ಕೋಮುವಾದದ ತಾಣವಾಗಿ ಬದಲಾಗುವುದರಲ್ಲಿ ಇಂತಹ ಅಧಿಕಾರಿ ವರ್ಗಗಳ ಬೇಜಾವ್ದಾರಿ ತನವೂ ಪ್ರಮುಖ ಕಾರಣವಾಗಿದೆ.
ಇವರ ರೀತಿಯಲ್ಲಿಯೇ ಕಾದಂಬರಿಯಲ್ಲಿ ಕಾಣುವ ಪಾತ್ರ ‘ಇಕ್ಬಾಲ್ ಸಿಂಗ್’ ಈತ ಈ ಸಮಕಾಲೀನ ಸಂದರ್ಭದಲ್ಲಿ ಸೃಷ್ಟಿಯಾಗಿರುವ, ಸೃಷ್ಟಿಯಾಗುತ್ತಿರುವ ಪೊಳ್ಳು ಸಂಘಟನೆಗಳು, ಸಂಘಪರಿವಾರಗಳನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಈತನು ನಾನೊಬ್ಬ ಸಮಾಜ ಸುಧಾರಕ, ನಾನು ‘ದ ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ’ ಎಂಬ ಪಕ್ಷದ ಸದಸ್ಯನೆಂದು. ನನ್ನನ್ನು ನನ್ನ ಪಾರ್ಟಿಯವರು ಈ ಊರಿನಲ್ಲಿ ಹಿಂಸೆಗಳು ನಡೆಯದಂತೆ ಹಾಗೂ ಕೋಮುಗಲಭೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಗಲಭೆಗಳನ್ನು ತಡೆಗಟ್ಟಬೇಕೆಂದು ಕಳಿಸಿದ್ದಾರೆ ಎಂದು ಹೇಳಿಕೊಳ್ಳುವುದರ ಜೊತೆಗೆ. ನಾನು ಯಾವ ಧರ್ಮವನ್ನು ನಂಬುವುದಿಲ್ಲ, ನಾನು ಜನರಲ್ಲಿ ಶಾಂತಿಯ ವಾತಾವರಣ ಸೃಷ್ಠಿ ಮಾಡಲು ಬಂದಿದ್ದೇನೆ, ನಾಗರೀಕರನ್ನು ರಕ್ಷಣೆ ಮಾಡೋ ಬದಲು ಭ್ರಷ್ಟತೆ, ಲಂಚಕೋರತಾನದಲ್ಲಿ ಬದುಕುತ್ತ ಜನರನ್ನು ಕೆಟ್ಟದಾಗಿ ನೆಡೆಸಿಕೊಳ್ಳೋ ಪೋಲಿಸ್ ವ್ಯವಸ್ಥೆಯಿದೆ ಎಂದು ಕಿಡಿಕಾರುತ್ತಿದ್ದನು. ಈತನು ಹೀಗೆ ಹೇಳುತ್ತಿದ್ದ ಎಲ್ಲ ಮಾತುಗಳ ಹಿಂದೆ ಒಂದು ನಿರ್ದಿಷ್ಟವಾದ ದುರುದ್ದೇಶವಿರುತ್ತಿತ್ತು. “ನಾನು ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕು ಜನರಿಗೆ ಪರಿಚಿತನಾಗಬೇಕು, ಜೈಲಿಗೆ ಹೋಗಿಬರಬೇಕು ಆಗ ನಂಗೆ ಜನರು ಹೋರಾಟಗಾರನೆಂದು, ಸಾಮಾಜಿಕ ಚಿಂತಕನೆಂದು ಬೆಲೆ ಕೊಡುತ್ತ್ತಾರೆ” ಎಂಬುಹು ಇಕ್ಬಾಲ್‍ಸಿಂಗ್‍ನ ಉದ್ದೇಶಗಳಾಗಿದ್ದವು. ಇವನು ರಾಂ ಲಾಲ್ ಕೊಲೆಯ ಆಪಾದನೆಯಲ್ಲಿ ಜೈಲಿಗೆ ಹೋಗಿ ಬರುವಷ್ಟರಲ್ಲಿ ಮನೋಮಜ್ರಾ ಸಂಘರ್ಷದ ತವರಾಗಿ ಸೃಷ್ಠಿಯಾಗಿರುತ್ತದೆ. ಇಲ್ಲಿನ ಭೀಕರ ಪರಿಸ್ಥಿತಿಯನ್ನು ಕಂಡು ಭಯಗೊಂಡು ವಿಚಲಿತನಾಗುತ್ತಾನೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸದೇ ತನ್ನ ಪ್ರಾಣಕ್ಕೆ ಅಂಜಿ ಪುಕ್ಕಲತನ ತಾಳುತ್ತಾನೆ. “ಇಲ್ಲಿ ಸಾವನ್ನೇ ಆಹ್ವಾನಿಸಿಕೊಂಡೂ ಅದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿರಲಿ, ಸಮಾಜಕ್ಕೇ ತನ್ನ ತ್ಯಾಗವೂ ಇಲ್ಲ. ತೆರೆ ಮೇಲಾದರೆ ಆನಾಯಕನ ಬಲಿಯ ಪಾಠವನ್ನಾದರೂ ಕಲಿಯಲಿಕ್ಕೆ ಸಾವಿರಾರು ವೀಕ್ಷಕರು ಉದ್ವೇಗಗೊಂಡು ಚಿಂತಾಕ್ರಾಂತರಾಗಿ ಕಾದು ಕೂತಿರುತ್ತಾರೆ. ಅದೇ ಈ ಸಮಸ್ಯೆಯ ತರುಳಾಗಿತ್ತು. ಸ್ವೀಕರಿಸುವವರು ಸಿದ್ದರಾಗಿದ್ದಾಗ ಮಾತ್ರ ತ್ಯಾಗ ಮಾಡಬೇಕು ಇಲ್ಲವಾದರೆ ತನ್ನ ತ್ಯಾಗವೇ ನಿರುಪಯುಕ್ತವಾಗುತ್ತದೆ ಎಂದು ಇಕ್ಬಾಲ್ ತನಗೆ ತಾನೇ ಹೇಳಿಕೊಂಡ” ಹೀಗೆ ಲಾಭದ ದೃಷ್ಟಿವುಳ್ಳಂತಹ ಈತನ ಕಪಟ ವ್ಯಕ್ತಿತ್ವ, ಪೊಳ್ಳು ಪ್ರತಿಷ್ಠೆ ಹಾಗೂ ದುರುದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳಿಂದ ಸಮಾಜ ಇನ್ನೆಲ್ಲಿ ಶಾಂತಿಯ ವಾತಾವರಣವಾಗಿ ಪರಿವರ್ತನೆಯಾಗಲೂ ಸಾಧ್ಯ. ಇಕ್ಬಾಲ್ ಸಿಂಗ್ ಪ್ರಯತ್ನ ಪಟ್ಟಿದ್ದರೆ, ಜನರ ಹತ್ತಿರ ಹೋಗಿ ಅವರಲ್ಲಿ ಕೋಮುವಾದದ ಭೀಕರತೆಯನ್ನು ತಿಳಿಹೇಳಿ ಶಾಂತ ವಾತಾವರಣನ್ನು ಸೃಷ್ಟಿಸಬಹುದಿತ್ತು. ಮನೋಮಜ್ರಾವು ಛಿದ್ರವಾಗುವುದನ್ನು ತಡೆಗಟ್ಟಬಹುದಿತ್ತು. ಆದರೇ ಪ್ರಾಣ ಭಯದಿಂದ ಓಡಿಹೋಗುತ್ತಾನೆ. ಇಂತಹ ಪುಕ್ಕಲತನದ ಕ್ರಾಂತಿಕಾರಿಗಳಿಂದ, ಸಮಾಜ ಸುಧಾರಕರಿಂದ ಯುವಕರಿಂದ ಯಾವುದೇ ತರಹದ ಸಮಾಜದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂಬುದಕ್ಕೆ ಇಕ್ಬಾಲ್ ಕಲ್ಪಿಪಿತ ವಾಸ್ತವವಾಗಿ ಕಾಣಿಸುತ್ತಾನೆ. ಇಕ್ಬಾಲ್‍ಸಿಂಗ್‍ನ ಪಾತ್ರವೂ ಸಮಕಾಲೀನ ಸಂದರ್ಭದಕ್ಕೆ ಹಿಡಿದ ಕೈಗನ್ನಡಿಯಾಗಿ ಕಂಡುಬರುತ್ತದೆ. ದಿನಕ್ಕೆ ಒಂದರಂತೆ ಹುಟ್ಟುತ್ತಿರುವ ಅನೇಕ ಸಂಘಪರಿವಾರ, ಸಂಘಟನೆಗಳು ತಮ್ಮ ಹಿತಾಸಕ್ತಿಗಳಿಗೋಸ್ಕರ ಸಮಾಜವನ್ನು ದುರುಪಯೋಗಕ್ಕೆ ಬಳಸಿಕೊಳ್ಳುವ, ಸಮಕಾಲೀನ ಸತ್ಯಸತ್ಯತೆಯನ್ನು ನಿರೂಪಿಸುತ್ತದೆ.
ಕಾದಂಬರಿಯಲ್ಲಿ ಮನೋಮಜ್ರಾ ಕೋಮುವಾದದ ತಾಣವಾಗಿ ಸೃಷ್ಟಿಯಾಗಲು ಪ್ರಮುಖ ಕಾರಣವಾದವರು ಡಕಾಯಿತ ಮಲ್ಲಿ ಹಾಗೂ ಊರಿಗೆ ಬಂದ ನಿರಾಶ್ರಿತರು. ನಿರಾಶ್ರಿತರು ಹಳ್ಳಿಯಲ್ಲಿ ಬಂದು ನೆಲೆಸಿದ ಮೇಲೆ ಪಿತೂರಿ ಮಾಡಲು ಪ್ರಾರಂಭಿಸುತ್ತಾರೆ. ಇವರ ಪಿತೂರಿಗಳಿಂದ ಮನೋಮಜ್ರಾವೂ ಕೋಮುವಾದದ ತಾಣವಾಗಿ ಪರಿವರ್ತನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಧಪೇದಾರನ ಬೇಟಿನೀಡಿ ಹಳ್ಳಿಯನ್ನು ವಿಭಾಗಿಸುತ್ತಾನೆ ಹಾಗೂ ಮಲ್ಲಿಯನ್ನು ಮನೋ ಮಜ್ರಾದ ಉಸ್ತುವಾರಿಗೆ ನೇಮಿಸಿದ. ಮಲ್ಲಿಗೆ ಊರಿನ ಉಸ್ತುವಾರಿ ಸಿಕ್ಕ ಮೇಲೆ ಊರಿನಲ್ಲಿ ಇದ್ದ ಮುಸ್ಲಿಂರಿಗೂ ಹಾಗೂ ಅವರನ್ನು ಪ್ರೋತ್ಸಾಹಿಸುವ ಸಿಖ್‍ರಿಗೂ ಚಿತ್ರಹಿಂಸೆ ಕೊಡಲು ಶುರು ಮಾಡಿದ, ಕೊನೆಗೆ ಊರನ್ನು ವಿಭಾಗ ಮಾಡಿದ. ಕೆಲವು ಯುವಕರನ್ನು ತನ್ನ ಕಡೆ ಕರೆಸಿಕೊಂಡು ಕೋಮುವಾದಕ್ಕೆ ಬಳಸಿಕೊಂಡನು. ಡಕಾಯಿತ ಮಲ್ಲಿಯಂತಹ ಪಾತ್ರವೂ ಸಮಕಾಲೀನ ಜೀವಂತ ಪಾತ್ರವಾಗಿ ಪ್ರಸ್ತುತ ಸಂದರ್ಭದಲ್ಲಿ ಕಾಣುತ್ತದೆ. ಇಂದು ಭಾರತೀಯ ಸಮಾಜದಲ್ಲಿ ಯುವ ಮನಸ್ಸುಗಳಲ್ಲಿ ಧರ್ಮದ ಅಫೀಮನ್ನು ತುಂಬಿ ಅವರನ್ನು ಧರ್ಮದ ಹೆಸರಿನಲ್ಲಿ ದಾರಿತಪ್ಪಿಸುವ, ಕೆರಳಿಸುವಂತಹ ಕಾರ್ಯವನ್ನು ಡಕಾಯಿತ ಮಲ್ಲಿಯಂತಹ ನಾಯಕರುಗಳು ನಮ್ಮ ಸಮಕಾಲೀನ ಸಂದರ್ಭದಲ್ಲಿ ಮಾಡುತ್ತಿರುವುದು ಗೋಚರಿಸುತ್ತಿದೆ. ಕಾದಂಬರಿಯಲ್ಲಿ ದೇಶದಲ್ಲಿ ಎಷ್ಠೇ ಪಿತೂರಿಗಳು, ಕೋಮುವಾದ ವಾತಾವರಣ ಸೃಷ್ಟಿಯಾದರೂ ಕೂಡ ಅವುಗಳಿಗೆ ತಲೆಕೆಡಿಸಿಕೊಳ್ಳದೆ ಪ್ರೀತಿ, ವಿಶ್ವಾಸ, ಮಾನವೀಯತೆ ಧರ್ಮಕ್ಕಿಂತ ಮುಖ್ಯವೆಂದು ‘ಮಿತ್ ಸಿಂಗ್’ ಪಾತ್ರ ನಿರೂಪಿತವಾಗಿದೆ. ಮಲ್ಲಿಯ ಪಿತೂರಿಯಿಂದ ಹಳ್ಳಿಯಲ್ಲಿ ನಡೆದ ಮುಸ್ಲಿಂರ ವಿರೋಧಿ ಚಟುವಟಿಕೆಗಳನ್ನು ನೇರವಾಗಿ ವಿರೋಧಿಸುತ್ತ ಮುಸ್ಲಿಂ ಕುಟುಂಬಗಳ ಪರ “ಅವರು ಏನು ಮಾಡಿದ್ದಾರೆ ನಿಮಗೆ? ನಿಮ್ಮ ಜಮೀನುಗಳಿಂದ ನಿಮ್ಮನ್ನು ಹೊರ ಹಾಕಿದ್ದಾರಾ? ಅಥವಾ ನಿಮ್ಮ ಮನೆಗಳನ್ನು ಅವರು ಆಕ್ರಮಿಸಿಕೊಂಡಿದ್ದರಾ? ನಿಮ್ಮ ಹೆಣ್ಣು ಮಕ್ಕಳೇನಾದರೂ ಅವರು ಮೋಹಿಸಿದ್ದರಾ? ಹೇಳಿ ಅವರು ಏನು ಮಾಡಿದ್ದಾರೆ ಅಂತ?”126. ಹಾಗೂ “ಈ ಊರಿಗೆ ಬಂದ ನಿರಾಶ್ರಿತರು ಊರಿಗೆ ಕೆಟ್ಟ ಹೆಸರು ತರುವಂಥ ಏನಾದರೊಂದನ್ನು ಮಾಡಬಹುದು”127 ಎಂಬ ಮಾತುಗಳನ್ನು ನುಡಿಯುವುದರ ಮೂಲಕ ಜನತೆಯಲ್ಲಿ ವಾಸ್ತವ ನಿಜಾಂಶವನ್ನು ತಿಳಿಸುತ್ತಾನೆ. ಜೊತೆಗೆ ಊರಿನಲ್ಲಿ ಇದ್ದ ಮುಸ್ಲಿಂ ಕುಟುಂಬಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಧರ್ಮ, ಜಾತಿಗಳಿಗಿಂತ ಮಾನವೀಯತೆ, ಪ್ರೀತಿ, ಅನುಕಂಪ ಮುಖ್ಯವೆಂಬುದನ್ನು ಇವನ ಪಾತ್ರದ ಮೂಲಕ ಕಾಣಬಹುದಾಗಿದೆ. ಇಂತಹ ಪಾತ್ರಗಳು ಸಮಕಾಲೀನ ಓದಿಗೆ, ತಿಳುವಳಿಕೆಗೆ ಅಣಿಮಾಡಿಕೊಡುತ್ತವೆ.
ನಗರ ಪ್ರದೇಶಗಳಲ್ಲಿ ಕಾಣದ, ಹಳ್ಳಿಗಳಲ್ಲಿನ ಕೋಮುಸೌಹಾರ್ದ ವಾತಾವರಣಕ್ಕೆ ಸಾಕ್ಷಿಯಾಗಿ ಕಾದಂಬರಿಯಲ್ಲಿ ಅನೇಕ ಸನ್ನಿವೇಶಗಳು ನಡೆಯುತ್ತವೆ. ಇಮಾನ್‍ಭಕ್ಷ್ ಪಾಕಿಸ್ತಾನಕ್ಕೆ ಹೋಗುವ ಪೂರ್ವದಲ್ಲಿ ತಮ್ಮ ಬಗ್ಗೆ ಏನು ಯೋಚನೆ ಮಾಡಿದ್ದೀರ ಎಂದು ಸೇರಿದ್ದ ಸಭೆಗೆ ಆಗಮಿಸಿ ಕೇಳಿದಾಗ ಅದಕ್ಕೆ ಊರಿನ ಜನರು “ನಮ್ಮಂತೆಯೇ ಇದು ನಿಮ್ಮ ಊರು ಸಹ”,129 “ನಿಮ್ಮನ್ನು ಮುಟ್ಟಲು ಧೈರ್ಯ ತೋರಲ್ಲ. ಮೊದಲು ನಾವು ಪ್ರಾಣ ಕೊಡ್ತೀವಿ; ಅಮೇಲೆ ನೀವು ನಿಮ್ಮನ್ನು ನೋಡಿಕೊಳ್ಳಬಹುದು”129. ಎಂಬ ಮಾತುಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಮಾನವೀಯ ಸಂಬಂಧ, ಕೋಮುಸಾಮರಸ್ಯ ವ್ಯಕ್ತವಾಗುತ್ತದೆ. ಮನೋಮಜ್ರಾದ ಸಿಖ್-ಮುಸ್ಲಿಂ ಜನತೆಗಳು ಒಂದೇ ಕುಟುಂಬದವರು ಎಂಬಂತೆ ಬಾಳಿಕೊಂಡು ಬಂದವರು. ಮಜ್ರಾದಿಂದ ಪಾಕಿಸ್ತಾನಕ್ಕೆ ಹೋಗ ಬೇಕಾದ ಪರಿಸ್ಥಿತಿ ಉಂಟಾದಾಗ ಇಮಾನ್ ಭಕ್ಷ್ ಅಳುತ್ತ “ಪಾಕಿಸ್ತಾಕ್ಕೂ ನಮಗೂ ಯಾವ ಸಂಬಂಧ? ನಾವು ಜನಿಸಿದ್ದು ಇಲ್ಲಿ ಹಾಗೇನೇ ನಮ್ಮ ಪೂರ್ವಜರು ಕೊಡ, ನಿಮ್ಮ ನಡುವೆಯೇ ನಾವು ಸೋದರಂತೆ ಬದುಕಿದ್ದೀವಿ ಎಂದು ಕಣ್ಣೀರಿಡಲಾರಂಭಿಸಿದ ಹಲವಾರು ಜನರು ಮೌನವಾಗಿ ಅಳುತ್ತಾ ತಮ್ಮ ಮೂಗುಗಳನ್ನು ಸೀಟಲಾರಂಭಿಸಿದರು”.129 ಇವನ ಮಾತಿಗೆ ಅಲ್ಲಿನ ಜನಗಳೆಲ್ಲ ಕಣ್ಣೀರಿಡಲಾರಂಭಿಸಿದರು. ಒಬ್ಬ ಮಧ್ಯಸ್ಥ “ಹೌದು, ನೀವು ನಮ್ಮ ಸೋದರರು. ನಮ್ಮ ಪ್ರಕಾರ, ನೀವು, ನಿಮ್ಮ ಮಕ್ಕಳು, ನಿಮ್ಮ ನಿಮಗೆ ಇಷ್ಟವಾಗುವಷ್ಟು ಕಾಲ ಇಲ್ಲಿ ವಾಸ ಮಾಡಬಹುದು”.129 ಆದರೇ ಮನೋಮಜ್ರಾದ ಪರಿಸ್ಥಿತಿಯು ಇನ್ನೂ ಬಿಗಡಾಯಿಸುತ್ತ ಭೀಕರತೆಯತ್ತ ಸಾಗುತ್ತದೆ. ದೇಶದಲ್ಲಿ ಸೃಷ್ಟಿ ಆಗುತ್ತಿದ್ದ ಕೋಮು ಸಂಘರ್ಷದ ಭೀಕರ ಪರಿಸ್ಥಿತಿಯು ಮನೋಮಜ್ರಾದ ಪರಿಸ್ಥಿಯನ್ನು ನಡುಗಿಸುತ್ತದೆ. ಊರಿಗೆ ಬರುತ್ತಿದ್ದ ಬಹುಸಂಖ್ಯಾತ ನಿರಾಶ್ರಿತರ ಪಿತೂರಿ, ಡಕಾಯಿತ ಮಲ್ಲಿ ಮುಂತಾದವರಿಂದ ಉಂಟಾಗಬಹುದಾದ ತೊಂದರೆಗಳನ್ನು ಊಹಿಸಿ ಇಲ್ಲಿನ ಸಿಖ್ ಕುಟುಂಬಗಳು ಮುಸ್ಲಿಂ ಕುಟುಂಬಗಳನ್ನು ಪಾಕಿಸ್ತಾನಕ್ಕೆ ಒಲ್ಲದ ಮನಸ್ಸಿನಿಂದಲೇ ಕಳುಹಿಸಿ ಕೊಡಬೇಕಾಯಿತು. ಆದುದರಿಂದ ಪಾಕಿಸ್ತಾನಕ್ಕೆ ಇಲ್ಲಿನ ಮುಸ್ಲಿಂ ಕುಟುಂಬಗಳು ಹೋಗಲೆ ಬೇಕಾಯ್ತು.
ಡಕಾಯಿತ ಮಲ್ಲಿ ಕಾದಂಬರಿಯಲ್ಲಿ ಘಟಿಸುವ ಎಲ್ಲಾ ಘಟನೆಗಳಿಗೆ ಕಾರಣ ಕರ್ತೃವಾಗಿ ಚಿತ್ರಿಸಲ್ಪಟ್ಟಿದ್ದ್ದಾನೆ. ಇವನ ಪಾತ್ರ ಸಮಕಾಲೀನ ಸಂದರ್ಭದಲ್ಲಿ ಅನೇಕ ಕೋಮುವಾದಿ ಪ್ರವೃತ್ತ ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ. ಮನೋಮಜ್ರಾದಿಂದ ಮುಸ್ಲಿಂ ಕುಟುಂಬಗಳನ್ನು ಪಾಕಿಸ್ತಾನಕ್ಕೆ ಹೋಗುವಂತೆ ಮಾಡಿದ ಅಷ್ಟೆಯಲ್ಲದೆ, ಪಾಕಿಸ್ತಾನಕ್ಕೆ ಹೋಗುತ್ತಿರುವ ನೂರಾರು ಮುಸ್ಲಿಂ ಕುಟುಂಬಗಳನ್ನು ಕೊಲ್ಲಲು ಸಂಚು ರೂಪಿಸಿದ. ಇವನ ಸಂಚುಗಳಿಗೆ ಸರ್ಕಾರವೂ ಬೆಂಬಲವಾಗಿ ನಿಲ್ಲುವಲ್ಲಿ ಇಂದಿನ ರಾಜಕೀಯ ಪಕ್ಷಗಳ ಮುಖವಾಡಗಳ ಹಿಂದಿನ ಸೂಕ್ಷ್ಮತೆಯನ್ನು ತಿಳಿಸುತ್ತದೆ. ಮಲ್ಲಿಯ ವರ್ತನೆ, ಪೋಲಿಸ್ ವ್ಯವಸ್ಥೆಯ ದಬ್ಬಾಳಿಕೆ, ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಅಧಃಪತನದಿಂದ ಮನೋಮಜ್ರಾವು ಹಂತ ಹಂತವಾಗಿ ಛಿದ್ರಗೊಂಡು ಅಶಾಂತಿಯ ವಾತಾವರಣಕ್ಕೆ ತಿರುಗುತ್ತದೆ. ಆದರೆ ಇಂತಹ ವ್ಯವಸ್ಥೆಯನ್ನು ಧಿಕ್ಕರಿಸಿ ನಿಲ್ಲುವ ಜಗ್ಗತ್‍ಸಿಂಗ್ ಕಾದಂಬರಿಯಲ್ಲಿ ನಾಯಕನಾಗುತ್ತಾನೆ. ಜಗ್ಗತ್‍ಸಿಂಗ್ ಮಲ್ಲಿಯೊಂದಿಗೆ ಮೊದಲು ದರೋಡೆಗಳಲ್ಲಿ ಭಾಗಿಯಾಗಿ ಸಮಾಜಗಾತುಕನಾಗಿ ಕಂಡುಬರುತ್ತ್ತಾನೆ. ಆದರೆ ಊರಿನ ಮುಸ್ಲಿಂ ಮುಖಂಡನಾದ ಇಮಾನ್‍ಭಕ್ಷ್‍ನ ಮಗಳಾದ ನೂರಾನ್‍ಳ ಪ್ರೀತಿಗೆ ಬಿದ್ದು ಕೆಟ್ಟ ಕೆಲಸಗಳಿಂದ ದೂರನಾಗಿ ಒಳ್ಳೆಯ ಪ್ರಜೆಯಾಗುತ್ತಾನೆ. ಜಗ್ಗತ್‍ಸಿಂಗ್‍ನ ಮೂಲಕ ಖುಷ್‍ವಂತ್ ಸಿಂಗ್ ಅವರು ಕಾದಂಬರಿಯಲ್ಲಿ ಪ್ರೀತಿಯಿಂದ ಎಲ್ಲವೂ ಸಾಧ್ಯವೆಂದು ನಿರೂಪಿಸಿದ್ದಾರೆ. ಜಗ್ಗನು ಮಾಡದ ತಪ್ಪಿಗೆ ಭ್ರಷ್ಟ ಪೋಲಿಸ್ ಅಧಿಕಾರಿಗಳು ರಾಂ ಲಾಲ್‍ನ ಕೊಲೆ ಆಪಾದನೆಯಲ್ಲಿ ಬಂಧಿಸುತ್ತಾರೆ. ಜಗ್ಗ ಬಂಧನದಿಂದ ಹೊರಗೆ ಬರುವಷ್ಟರಲ್ಲಿ ಇಡೀ ಮನೋಮಜ್ರಾ ಸರ್ವನಾಶವಾಗಿ ಪ್ರೀತಿಸಿದ ಹುಡುಗಿ ಹಾಗೂ ಅವಳ ಪರಿವಾರವೆಲ್ಲ ಊರಿನಿಂದ ಪಾಕಿಸ್ತಾನದ ಕಡೆಗೆ ಪಯಣ ಮಾಡಿರುತ್ತಾರೆ. ಇದರಿಂದ ವಿಚಲಿತನಾಗಿ ದುಖಿಃಸುವಲ್ಲಿ ಅವನ ನಿಷ್ಕಲ್ಮಷ ಪ್ರೀತಿಯು ವ್ಯಕ್ತವಾಗುತ್ತದೆ. ಅವರನ್ನು ಹುಡುಕಲು ಮುಂದಾಗುವಷ್ಟರಲ್ಲಿಯೇ, ಪಾಕಿಸ್ತಾನಕ್ಕೆ ಹೊರಟವರನ್ನು ಕೊಲ್ಲಲು ಮಲ್ಲಿ ಮಾಡಿದ್ದ ಸಂಚನ್ನು ತಿಳಿದ ಜಗ್ಗನು ಅವರನ್ನು ಕಾಪಾಡಲು ಹೋಗುತ್ತಾನೆ. ಮುಸ್ಲಿಂ ಕುಟುಂಬಗಳನ್ನು ಕೊಲ್ಲಲು ಬಿಡ್ಜ್‍ಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗವನ್ನು ಜಗ್ಗತ್‍ಸಿಂಗ್ ಬಿಡ್ಜ್ ಹತ್ತಿ ಕತ್ತರಿಸಲು ಮುಂದಾದಾಗ ಲೇಖಕರು ಜಗ್ಗನ ಪ್ರಾಣ ಪಕ್ಷಿಯು ಗುಂಡುಗಳ ಸುರಿಮಳೆಯಿಂದ ಹೋಗುವುದನ್ನು ಚಿತ್ರಿಸುವಲ್ಲಿ ಸಾವಿನ ಭೀಕರತೆಯನ್ನು ಚಿತ್ರಿಸುತ್ತಾರೆ. ಜೊತೆಗೆ, ಸಾವಿನ ಸಾರ್ಥಕತೆಯನ್ನು ತಿಳಿಸುತ್ತಾರೆ. ಜಗ್ಗತ್‍ಸಿಂಗ್‍ಗೆ ತನ್ನ ಜೀವಕ್ಕಿಂತ ಮುಖ್ಯವಾಗಿ ಟ್ರೈನ್‍ನಲ್ಲಿ ಇರುವ ಅವನ ಪ್ರೇಯಸಿ ಪ್ರಾಣ ಹಾಗೂ ಅವಳ ಪರಿವಾರಗಳ ಪ್ರಾಣವನ್ನು ಕಾಪಾಡುವುದಾಗಿತ್ತು. ತನ್ನ ಒಂದು ಜೀವದ ತ್ಯಾಗದಿಂದ ನೂರಾರು ಜೀವಗಳು ಉಳಿಯುತ್ತವೆ ಎಂಬ ಮಾನವೀಯ ಚಿಂತನೆ ಅವನಲ್ಲಿದೆ. ಆದ್ದರಿಂದ ಅವನು ತನ್ನ ಪ್ರಾಣವನ್ನು ತ್ಯಾಗ ಮಾಡಿ ಪಾಕಿಸ್ತಾನಕ್ಕೆ ಹೋಗುವ ಭಾರತೀಯರ ಪ್ರಾಣಗಳನ್ನು ಉಳಿಸುತ್ತಾನೆ. ಜಗ್ಗನು ಬಿಡ್ಜ್‍ಗೆ ಕಟ್ಟಿದ್ದ ಹಗ್ಗದ ಕೊನೆಯ ತುಂಡನ್ನು ಕತ್ತರಿಸುವಾಗ, ಮಲ್ಲಿಯ ಗುಂಪು ಜಗ್ಗನ ಮೇಲೆ ಗುಂಡಿನ ಸುರಿಮಳೆ ಸುರಿಯುವ ಹಾಗೂ ಪಾಕಿಸ್ತಾನಕ್ಕೆ ಹೋಗುವ ಟ್ರೈನ್ ಅವನ ದೇಹದ ಮೇಲೆ ಹರಿದು ಛಿಧ್ರಗೊಳಿಸುವ ಸನ್ನಿವೇಶಗಳು ವಿಭಜನೆಗೊಂಡ ಎರಡು ದೇಶಗಳಲ್ಲಿನ ಕೋಮುವಾದಿಗಳ ವಿಕೃತ ಮನಸ್ಥಿತಿಯ ಜೊತೆಗೆ ಜಗ್ಗನಂತಹ ಮುಗ್ಧ ಮನಸ್ಸುಗಳ ಪ್ರಾಣಗಳನ್ನು ಬಲಿಪಡೆದುದಾದರ ಬಗ್ಗೆ ತಿಳಿಸುತ್ತದೆ. ಮುಸ್ಲಿಂನಾದರೆ ಪಾಕಿಸ್ತಾನಕ್ಕೆ, ಹಿಂದೂ ಆದರೆ ಭಾರತಕ್ಕೆ ಹೋಗಬೇಕೆಂಬ ಎರಡು ದೇಶಗಳಲ್ಲಿನ ಕೋಮುವಾದಿಗಳ ಧಾರ್ಮಿಕ ಸಂಕೀರ್ಣ ಮನೋಭಾವದಿಂದ ಮನೋಮಜ್ರಾದಂತಹ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ್ದ ಹಳ್ಳಿ ಕೋಮುವಾದದ ಬೀಡಾಗಿ ಛಿಧ್ರಗೊಳ್ಳುವಲ್ಲಿ ಪ್ರಮುಖ ಕಾರಣವಾಯಿತು. ದೇಶ ವಿಭಜನೆ ಸಂದರ್ಭದಲ್ಲಿ ಕೋಮುವಾದಿಗಳು ಸೃಷ್ಟಿಸಿದ್ದ ಸಾಮಾಜಿಕ ವ್ಯವಸ್ಥೆಯ ಮುಖ್ಯ ಗುರಿ ನೂರನ್(ಪಾಕಿಸ್ತಾನ), ಜಗ್ಗತ್‍ಸಿಂಗ್(ಭಾರತ) ಎಂದು ವಿಭಾಗ ಮಾಡಿ ಅವರಿಬ್ಬರನ್ನು ದೂರ ಮಾಡುವುದಾಗಿತ್ತೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇಂತಹ ಸಾಮಾಜಿಕ ವ್ಯವಸ್ಥೆಗೆ ಮಜ್ರಾದ ಜನರಲ್ಲಿ ಇದ್ದಂತಹ ಮಾನವೀಯ ಸಂಬಂಧಗಳು ಕಂಡಿದ್ದರ ಪರಿಣಾಮವಾಗಿ ಅದನ್ನು ಛಿಧ್ರಗೊಳಿಸುವ ಕೆಲಸದಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವು ವಿನಃ ಅದನ್ನು ಉಳಿಸುವ ಕೆಲಸ ಮಾಡಲಿಲ್ಲ. ಈ ರೀತಿಯಲ್ಲಿಯೇ ಇಂದಿನ ಸಮಕಾಲೀನ ಸಾಮಾಜಿಕ ವ್ಯವಸ್ಥೆಯು ಬದಲಾಗುತ್ತಿದೆ, ಕಾದಂಬರಿಯಲ್ಲಿ ನಡೆಯುವ ಧಾರ್ಮಿಕ ವಿಭಾಗ ಕ್ರಮಗಳು ಮರುಹುಟ್ಟು ಪಡೆಯುತ್ತಿವೆ. ಭಾರತೀಯ ಸಾಮಾಜಿಕ ವ್ಯವಸ್ಥೆಯೂ ಕೋಮುವಾದಿಗಳ ಕೈಯಲ್ಲಿ ಸಿಕ್ಕು ಪರಿತಪಿಸುತ್ತಿದೆ. ಯುವ ಮನಸ್ಸುಗಳಲ್ಲಿ ಧಾರ್ಮಿಕ ವಿಷ ಬೀಜಗಳನ್ನು ಬಿತ್ತಿ ದಾರಿ ತಪ್ಪಿಸಲಾಗುತ್ತಿದೆ. ಕಾದಂಬರಿಯಲ್ಲಿ ಕಾಣುವ ಪೊಳ್ಳು ಸಂಘಟನೆಗಳ ಲಾಭದ ದೃಷ್ಟಿಕೋನ, ರಾಜಕೀಯ ಪಕ್ಷಗಳ ಧಾರ್ಮಿಕ ಚಿಂತನೆ, ಮಲ್ಲಿಯಂತಹ ಪುಂಡರ ಕಿಡಿಗೇಡಿತನ ಮುಂತಾದವೂ ಮನೋಮಜ್ರೊ ಗ್ರಾಮದ ಮೇಲೆ ಬೀರಿದ ಪರಿಣಾಮವನ್ನು ಸಮಕಾಲೀನ ದೃಷ್ಟಿಕೋನದಲ್ಲಿ ನೋಡಿದಾಗ ಇಂತಹ ಕೆಲವು ರಾಜಕೀಯ ಪಕ್ಷ, ಕೆಲವು ಸಂಘಟನೆಗಳಿಗೇನು ಕಡಿಮೆ ಇಲ್ಲ, ಅದರಲ್ಲೂ ಕಿಡಿಗೇಡಿಗೇನು ಕಡಿಮೆ ಇಲ್ಲ. ಕೋಮುವಾದದ ಭೀಕರತೆಗೆ ಸಾಕ್ಷಿಯಾಗಿ ಕಾದಂಬರಿಯಲ್ಲಿ ಕಂಡ ಪರಿಣಾಮ ಮುಂದಿನ ದಿನಮಾನಗಳಲ್ಲಿ ವಾಸ್ತವವಾಗಿ ಕಾಣುವ ಭಯ ಸೃಷ್ಠಿಯಾಗುತ್ತಿದೆ. ಇಂದು ಮನೋಮಜ್ರಾದಂತಹ ಹಳ್ಳಿಗಳು ಛಿದ್ರಗೊಂಡು ಕೋಮುವಾದದ ಭೀಕರತೆಗೆ ಸಾಕ್ಷಿಯಾಗುವ ಸಂಭವವಿದೆ. ಆದ ಕಾರಣ ಕೋಮುವಾದದ ಭೀಕರತೆ, ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಎಚ್ಚರ ಮೂಡಿಸಬೇಕಾಗಿದೆ. ಭಾರತೀಯ ಸಮಾಜವನ್ನು ವಿಶಿಷ್ಟ ಚಹರೆಗಳ ಮೂಲಕ ಗ್ರಹಿಸುವಂತಹ ಸಾಹಿತ್ಯದ ಅವಶ್ಯಕತೆ ಇದೆ. ಭಾರತೀಯ ಸಮಾಜವನ್ನು ವಿಶಿಷ್ಠ ಚಹರೆಗಳಲ್ಲಿ ಗ್ರಹಿಸುವ ಖುಷ್‍ವಂತ್ ಸಿಂಗ್ ಆಂತಹ ಬರಹಗಾರರ ಕೃತಿಗಳ ಓದು ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾಗುತ್ತವೆ. ಆದ್ದರಿಂದ ಲೇಖನಕ್ಕೆ ಅವರ ‘ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ಸಮಕಾಲೀನ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ಪರಾಮರ್ಶನ ಗ್ರಂಥ
1. ಖುಷ್‍ವಂತ್‍ಸಿಂಗ್, ಟ್ರೈನ್ ಟು ಪಾಕಿಸ್ತಾನ್, ಡಾ.ಎಂ.ಬಿ.ರಾಮಮೂರ್ತಿ(ಅನು), 2007, ಲಂಕೇಶ್ ಪ್ರಕಾಶನ, ಬಸವನಗುಡಿ, ಬೆಂಗಳೂರು, 560004.