Tumbe Group of International Journals

Full Text


ನಿಟ್ಟೂರು ಹೋಬಳಿಯ ಹೊಯ್ಸಳರ ಕಾಲದ ಜಿನಾಲಯ ಮತ್ತು ಶೈವ ದೇವಾಲಯ

ಶ್ರೀನಿವಾಸ .ಜಿ.

ಅತಿಥಿ ಉಪನ್ಯಾಸಕರು,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ

            ಕರ್ನಾಟಕದಲ್ಲಿ ಕಲ್ಪತರು ನಾಡು, ತುಂಬೆಯ ಊರು, ಎಂದೆಲ್ಲಾ ಪ್ರಸಿದ್ದಿ ಪಡೆದಿರುವ ತುಮಕೂರು ಜಿಲ್ಲೆ ಒಳಗೊಂಡಿರುವ ಹತ್ತು ತಾಲ್ಲೂಕುಗಳಲ್ಲಿ ಗುಬ್ಬಿ ಒಂದಾಗಿದೆ. ಗುಬ್ಬಿಯ ಆರು ಹೋಬಳಿಗಳಲ್ಲಿ ನಿಟ್ಟೂರು ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದ್ದು ಸಂಸ್ಕೃತಿಯ ದೃಷ್ಠಿ ಕೋನದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನಮಾನವನ್ನು ಮೈಗೂಡಿಸಿಕೊಂಡಿರುವ ಐತಿಹಾಸಿಕ ಪ್ರದೇಶವಾಗಿದ್ದು ತಿಪಟೂರು, ತುರುವೇಕೆರೆ, ತುಮಕೂರು, ಶಿರಾ, ಕುಣಿಗಲ್, ಚಿಕ್ಕನಾಯಕನಹಳ್ಳಿಗಳಿಂದ ಸುತ್ತುವರೆದಿದೆ. ಜಿಲ್ಲಾ ಕೇಂದ್ರದಿಂದ 28 ಕಿ.ಮೀ, ತಾಲ್ಲೂಕು ಕೇಂದ್ರದಿಂದ 9 ಕಿ.ಮೀ ದೂರದಲ್ಲಿದೆ.

ಸ್ಥಳ ಪರಿಚಯ :-

ನಿಟ್ಟೂರು ಎಂಬ ಪದವು ನಿಟ್ಟು + ಊರು ಎಂಬ ಎರಡು ಪದಗಳು ಸೇರಿ ನಿಟ್ಟೂರು ಆಗಿದೆ. ನಿಟ್ಟು ಎಂದರೆ ದಿಕ್ಕು, ಅಡಕಿಲು, ಗುರಿ, ಕಟ್ಟಳೆ, ನಿರ್ಬಂಧ, ಚೀಲಗಳನ್ನು ಒಂದರ ಮೇಲೆ ಒಂದನ್ನು ಸೇರಿಸಿ ಇಟ್ಟಿರುವುದು ಎಂದ ಅರ್ಥ. ಊರು ಎಂದರೆ ನೆಲಸು, ನೆಲೆಯಾಗಿ ನಿಲ್ಲು, ಭದ್ರವಾಗಿ ನಿಲ್ಲಿಸು, ನೆಡು, ಹಳ್ಳಿ, ಗ್ರಾಮ, ಎಂಬ ಅರ್ಥವನ್ನು ಕೊಡುತ್ತದೆ. ಶಿರಾ, ಮೈಸೂರು, ಬೆಂಗಳೂರು, ಹೊನ್ನಾವರ ಹೀಗೆ ನಾಲ್ಕು ದಿಕ್ಕುಗಳಿಗೂ ಮುಖ್ಯ ರಸ್ತೆಗಳು ಹಾದು ಹೋಗಿದ್ದು ಆ ಪ್ರದೇಶದಲ್ಲಿ ಜನರು ನೆಲೆಸಿರುವುದರಿಂದ ನಿಟ್ಟೂರು ಎಂಬ ಹೆಸರು ಬಂದಿರಬಹುದೆಂದು ಊಹಿಸಬಹುದು ಆದರೆ ಇದನ್ನು ಒಪ್ಪಲು ಸಾದ್ಯವಾಗುವುದಿಲ್ಲ. ನಿಟ್ಟೂರಿನಿಂದ ಮೈಸೂರು ರಸ್ತೆ ಮಾರ್ಗವಾಗಿ ಒಂದು ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ದ ಕಲ್ಲೇಶ್ವರ ದೇವಾಲಯದ ಕ್ರಿ.ಶ. 1226 ಶಿಲಾಶಾಸನದಲ್ಲಿ (ಎ.ಕ-12, ಗುಬ್ಬಿ) ನಿಟ್ಟೂರನ್ನು “ತೆಂಕಣಯ್ಯಾವಳೆ” ಎನಿಸಿದ ಮಹಾ ಪಟ್ಟಣವಾಗಿತ್ತು ಎಂದು ಉಲ್ಲೇಖಿಸಿದೆ. ಇದು ಪ್ರಾಚೀನ ಪ್ರಸಿದ್ದ ವ್ಯಾಪಾರ ಕೇಂದ್ರವಾಗಿದ್ದು ಇಲ್ಲಿನ ವ್ಯಾಪಾರ ವಹಿವಾಟು ಭಾರತದ ಉದ್ದಗಲಕ್ಕೂ ಹರಡಿತ್ತು. ಇಂತಹ ಕೇಂದ್ರದಲ್ಲಿ ದವಸಧಾನ್ಯಗಳನ್ನು ಕೊಂಡು ಚೀಲಗಳಲ್ಲಿ ತುಂಬಿ ಒಂದರ ಮೇಲೆ ಒಂದನ್ನು ಪೇರಿಸುತ್ತಿದ್ದರಿಂದ ನಿಟ್ಟು ಎಂದು ಆ ಪ್ರದೇಶದಲ್ಲಿ ಜನರು ನೆಲೆಸಿರುವುದರಿಂದ ನಿಟ್ಟೂರು ಎಂದು ಕರೆಯಲಾಗಿದೆ. ಈ ಪ್ರದೇಶವು ಗಂಗರು, ರಾಷ್ಟ್ರಕೂಟರು, ಕಲ್ಯಾಣಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಹಾಗಲವಾಡಿ ಮತ್ತು ಗುಬ್ಬಿ ಹೊಸಹಳ್ಳಿ ಪಾಳೆಗಾರ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು.

ನಿಟ್ಟೂರು ಶಾಂತಿನಾಥ ಜಿನಾಲಯ

ನಿಟ್ಟೂರು ಪರಿಸರದಲ್ಲಿ ಆಳ್ವಿಕೆ ಮಾಡಿರುವ ರಾಜಮನೆತನಗಳಲ್ಲಿ ಹೊಯ್ಸಳರ ಕಾಲವು ದೇವಾಲಯಗಳ ವಿಕಾಸದಲ್ಲಿ ಆಕರ್ಷಕವಾದ ಕಾಲಘಟ್ಟವೆನಬಹುದು. ದೇವಾಲಯಗಳ ವಿಕಾಸದಲ್ಲಿ ಬಳಸಿದ ಮಾಧ್ಯಮ, ಸೂಕ್ಷ್ಮಕೆತ್ತನೆ, ನಿರ್ಮಾಣ ಶೈಲಿಯಿಂದ ಇವರ ಶೈಲಿಯನ್ನು ಹೊಯ್ಸಳ ಶೈಲಿ ಎಂದೇ ಗುರ್ತಿಸಬಹುದು ಇವರು ಕಪ್ಪು ನೀಲಿ ಛಾಯೆವುಳ್ಳ ಬಳಪದ ಕಲ್ಲನ್ನು ಬಳಸಿದ್ದಾರೆ. ಹೊಯ್ಸಳರ ಕಾಲದಲ್ಲಿ ಈ ಪ್ರದೇಶದಲ್ಲಿ ಜೈನಧರ್ಮ ಹೆಚ್ಚು ಪ್ರಭಾವ ಬೀರಿತ್ತು ಎಂಬುದಕ್ಕೆ ನಿಟ್ಟೂರಿನಲ್ಲಿ ನಿರ್ಮಾಣಗೊಂಡಿರುವ ಶಾಂತಿನಾಥ ಜಿನಾಲಯವೇ ಪ್ರಮುಖ ಸಾಕ್ಷಿಯಾಗಿವೆ. ಈ ಶಾಂತಿನಾಥ ಜೀನಾಲಯ ಅತ್ಯಂತ ಪ್ರಸಿದ್ದವಾಗಿದ್ದು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದೆ. ನಿಟ್ಟೂರಿನ ಮಧ್ಯಭಾಗದಲ್ಲಿ ನಕ್ಷತ್ರಕಾರದ ತಳಪಾಯದ ಮೇಲೆ ಪೂರ್ವಾಭಿಮುಖವಾಗಿ ಹೊಯ್ಸಳರ ವಾಸ್ತು ಮತ್ತು ಶಿಲ್ಪಕಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡು ನಿರ್ಮಾಣಗೊಂಡಿದೆ. ವಾಸ್ತುವಿನ್ಯಾಸದಂತೆ ಗರ್ಭಗುಡಿ, ಸುಖನಾಸಿ, ನವರಂಗ ಮತ್ತು ಮಂಟಪಗಳನ್ನು ಒಳಗೊಂಡಿದೆ. ಜೈನರ ಕಲೆಯ ಲಕ್ಷಣ ಕುರಿತು ಮಾನಸಾರ ಕೃತಿ ಮಾಹಿತಿಯನ್ನು ಒದಗಿಸುತ್ತದೆ.

            ಈ ಜಿನಾಲಯದ ಗರ್ಭಗುಡಿಯಲ್ಲಿ ಜೈನ ಧರ್ಮದ ಪ್ರಥಮ ತೀರ್ಥಂಕರರಾದ ವೃಷಭನಾಥ – ಆದಿನಾಥನು ನಿರಾಭರಣವಾಗಿ ಕುಳಿತ ಭಂಗಿಯಲ್ಲಿ ಜಿನನು ಯೋಗಾಸನದಲ್ಲಿರುವಂತೆ ಒಂದರ ಮೇಲೆ ಮತ್ತೊಂದು ಕಾಲನ್ನು ಮಡಿಚಿದ ಕಾಲುಗಳ ಮಧ್ಯದಲ್ಲಿ ಒಂದು ಅಂಗೈಮೇಲೆ ಮತ್ತೊಂದು ಕೈ ಇಟ್ಟು ವಕ್ರಮುಕ್ತವಾಗಿ ಸಟೆದು ಕುಳಿತ ಭಂಗಿಯಲ್ಲಿ ಧ್ಯಾನರೂಡನಾಗಿ ಕುಳಿತಿರುವಂತೆ ಪ್ರತಿಷ್ಠಾಪಿಸಲಾಗಿತ್ತು. ಹೀಗೆ ಧ್ಯಾನರೂಡನಾಗಿ ಕುಳಿತುಕೊಳ್ಳುವುದನ್ನು “ಪಯಣಶಾಸನ” ಎನ್ನಲಾಗುತ್ತದೆ. ಆದರೆ ಈ ಮೂಲ ವಿಗ್ರಹ ಭಗ್ನಗೊಂಡಿರುವುದರಿಂದ ಜಿನಾಲಯದ ಮುಂಭಾಗದಲ್ಲಿ ಇಡಲಾಗಿದೆ. ಪ್ರಸ್ತುವಾಗಿ ಗರ್ಭಗೃಹದಲ್ಲಿ ಜೈನರ 16ನೇ ತೀರ್ಥಂಕರರಾದ ಶಾಂತಿನಾಥನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಮೈಮಣಿಸದೆ ನಿಂತು ಎದರುನೆಟ್ಟು ನೊಡುತ್ತಾ ತನ್ನ ಬಾಹುಗಳನ್ನು ದೇಹದ ಇಕ್ಕೆಲಗಳಲ್ಲಿ ಅಂಗಾಂಗಳಿಗೆ ತಗುಲದಂತೆ ಸರಾಗವಾಗಿ ತೂಗುಬಿಟ್ಟು ನಿಂತಿರುವ ಭಂಗಿಗೆ “ಕಾರ್ಯೋತ್ಸರ್ಗ” ಎನ್ನುತ್ತಾರೆ. ಈ ರೀತಿಯ ಮೂರ್ತಿಯನ್ನು ಎರಡೂವರೆ ಅಡಿ ಪೀಠದ ಮೇಲೆ ಸುಮಾರು ಮೂರು ಅಡಿ ಎತ್ತರದ ಶಾಂತಿನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಂತಿನಾಥನ ಹಿಂದೆ ಪ್ರಭಾವಳಿಯನ್ನು ಇಡಲಾಗಿದೆ. ಪ್ರಭಾವಳಿಯನ್ನು ಹೂಬಳ್ಳಿಗಳಿಂದ ಅಲಂಕರಿಸಲಾಗಿದೆ. ಯಕ್ಷಯಕ್ಷಿಣಿಯರ ಚಿತ್ರ ಬಿಡಿಸಲಾಗಿದೆ. ಗರ್ಭಗುಡಿಗೆ ಸಮಾನಾಂತರವಾಗಿ ಸುಖನಾಸಿ ಕಂಡುಬರುತ್ತದೆ. ಸುಖನಾಸಿಯನ್ನು ದಾಟಿ ಮುಂದೆ ಬಂದರೆ ಕಂಡುಬರುವದೇ ನವರಂಗ.

            ನವರಂಗ ಇಡೀ ಜಿನಾಲಯದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ ಇದರ ಮೇಲ್ಚಾವಣಿಯ ಒಳಭಾಗದಲ್ಲಿ ಒಂಬತ್ತು ಅಂಕಣಗಳಿವೆ. ಪ್ರತಿ ಅಂಕಣದಲ್ಲಿಯೂ ಒಂದೊಂದು ಆಕರ್ಷಕ ಸೂಕ್ಷ್ಮ ಕೆತ್ತನೆಯಿಂದ ಕೂಡಿರುವ ಅಲಂಕಾರಿಕ ಭುವನೇಶ್ವರಿಗಳಿವೆ. ಕಪ್ಪು ಬಳಪದಕಲ್ಲಿನಿಂದ ಮಾಡಿರುವ ನಾಲ್ಕು ಕಂಬಗಳಿದ್ದು ಇಡೀ ನವರಂಗದ ಮೇಲ್ಚಾವಣಿಯನ್ನು ಒತ್ತು ನಿಂತಿವೆ. ಇವು ಸ್ತೂಲವಾದ ನೋಟಕ್ಕೆ ಒಂದರೆಂತೆ ಇನ್ನೊಂದು ಕಂಡರೂ ಅವುಗಳ ಕೆತ್ತನೆ ಕೆಲಸಗಳಲ್ಲಿ ವೈವಿದ್ಯತೆÉ ಇದೆ. ಕಂಬಗಳ ಕೆಳಭಾಗ ಚಚ್ಚೌಕವಾಗಿದ್ದು ಕಾಂಡಭಾಗ ತಲೆಕೆಳಗಾದ ಗಂಟೆಯಾಕಾರದಲ್ಲಿದ್ದು ಅದರ ಮೇಲೆ ವೃತ್ತಾಕಾರವನ್ನೊಳಗೊಂಡ ಭಾಗಗಳು ಅದರ ಮೇಲೆ ಚಚ್ಚೌಕಾರದ ಚಾಚು ಪೀಠಗಳು ಅದರ ಮೇಲೆ ಬೋದಿಗೆಗಳನ್ನು ಒಳಗೊಂಡಿದೆ. ಈ ನಾಲ್ಕು ಕಂಬಗಳನ್ನು ತಿರುಗಣೆ(ಲೇತ್)ಯಂತ್ರದ ಸಹಾಯದಿಂದ ತಯಾರಿಸಲಾಗಿದೆ. ಈ ನಾಲ್ಕು ಕಂಬಗಳ ಮಧ್ಯದ ಮೇಲ್ಚಾವಣಿಯಲ್ಲಿರುವ ಭುವನೇಶ್ವರಿ ಸುಂದರವಾಗಿದ್ದು ಸೂಕ್ಷ್ಮಕೆತ್ತನೆಯಿಂದ ಕೂಡಿದೆ. ಇದು 7 ಅಡಿ ಉದ್ದ, 7 ಅಡಿ ಅಗಲವಾಗಿದ್ದು 4 ಅಡಿ ಆಳವಾಗಿದೆ. ಈ ಭುವನೇಶ್ವರಿಯಲ್ಲಿ ಅಷ್ಠದಿಕ್ಪಾಲಕ ಮೂರ್ತಿಗಳು ಕಂಡುಬರುತ್ತದೆ. ಪೂರ್ವದಲ್ಲಿ – ಇಂದ್ರ, ಆಗ್ನೇಯ – ಅಗ್ನಿಕುಮಾರ, ದಕ್ಷಿಣ-ಯಮ, ನೈರುತ್ಯ - ನಿರುತಿ, ಪಶ್ಚಿಮ – ವರುಣ, ವಾಯುವ್ಯ- ವಾಯುಕುಮಾರ, ಉತ್ತರ-ಕುಬೇರ, ಈಶಾನ್ಯ-ಈಶ್ವರ ಮತ್ತು ಪರಿವಾರದವರು ಕಂಡುಬರುತ್ತಾರೆ. ಇದೇ ಭುವನೇಶ್ವರಿಯಲ್ಲಿ ಯಕ್ಷಿಯರಾದ ಕುಶ್ಮಾಂಡಿನಿ, ಪದ್ಮಾವತಿ, ಸರಸ್ವತಿ, ಜ್ವಾಲಾಮಾಲಿನಿಯರು ಇದ್ದಾರೆ. ಜ್ವಾಲಮಾಲಿನಿ(ಚಂದ್ರನಾಥನ ಯಕ್ಷಿ) ಉತ್ತರಭಾಗದಲ್ಲಿ ದಕ್ಷಿಣಾಭಿಮುಖವಾಗಿದ್ದು ಇಂದಿಗೂ ಕೂಡ ದಿನನಿತ್ಯವೂ ಪೂಜೆ ಪುನಸ್ಕಾರಗಳು ಬಹಳ ವಿಶೇಷತೆಯಿಂದ ನಡೆಯುತ್ತವೆ.

            ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಸಿಂಹನಗದ್ದೆಯಲ್ಲಿ ಜ್ವಾಲಮಾಲಿನಿಯನ್ನು ಸ್ಥಾಪಿಸಿದ ನಂತರ ನಿಟ್ಟೂರು ಮಾರ್ಗವಾಗಿ ಬಂದ ಸಮಂತಭದ್ರಾಚಾರ್ಯ ಮುನಿಗಳು ಜ್ವಾಲಮಾಲಿನಿಯನ್ನು ಪ್ರತಿಷ್ಟಾಪಿಸಿದರೆಂದು ತಿಳಿಯುತ್ತದೆ. ನವರಂಗದಲ್ಲಿರುವ ಒಂಬತ್ತು ಭುವನೇಶ್ವರಿ ಗಳಲ್ಲಿ 72 ಜನ ಭೂತ, ಭವಿಷತ್, ವರ್ತಮಾನ ಕಾಲದ ತೀಥರ್Àಂಕರರ ಮೂರ್ತಿಗಳಿವೆ. ವರ್ತಮಾನ ಕಾಲದ ತೀರ್ಥಂಕರರುಗಳನ್ನು ಗುರ್ತಿಸಲು ಅವರ ಲಾಂಛನಗಳು ಮೂರನೇ ಅಂಕಣದಲ್ಲಿ ಕಂಡುಬರುತ್ತದೆ. ಮಧ್ಯ ಅಂಕಣದ ಬಲಭಾಗದ ಭುವನೇಶ್ವರಿಯಲ್ಲಿ ಜೈನಮುನಿಗಳಿಗೆ ಆಹಾರ ಧಾನ್ಯಗಳನ್ನು ದಾನ ಮಾಡುತ್ತಿರುವ ನವರಸ ವಾದ್ಯಗಳನ್ನು ನುಡಿಸುತ್ತಿರುವ ಅಪೂರ್ವವಾದ ಕೆತ್ತನೆ ಇದೆ. ಇದರ ಮುಂದಿನ ಭುವನೇಶ್ವರಿಯಲ್ಲಿ ವೇಣು, ವೀಣೆ, ಮೃದಂಗ, ಮದ್ದಳೆಯಂತಹ ನವರಸವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರ ಮತ್ತು ನೃತ್ಯಗಳ ಶಿಲ್ಪಗಳಿವೆ ಹೂ-ಬಳ್ಳಿಗಳನ್ನು ಶಿಲ್ಪಿಯು ಸುಂದರವಾಗಿ ಕಂಡರಿಸಿದ್ದಾನೆ. ನವರಂಗದ ಬಾಗಿಲಿನ ಎಡ ಮತ್ತು ಬಲಭಾಗದಲ್ಲಿ ಚಂಡ, ಮಹಾಚಂಡ ದ್ವಾರಪಾಲಕ ವಿಗ್ರಹವಿದ್ದು ಬಾಗಿಲಿನ ಮೇಲ್ಭಾಗದಲ್ಲಿ 2009 ರಲ್ಲಿ ಶಾಂತಿನಾಥ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ನವರಂಗದ ಮುಂದಿನ ಭಾಗವಾದ ಮಂಟಪ ವಿಶಿಷ್ಠತೆಯನ್ನು ಹೊಂದಿದೆ. ಮಂಟಪದ ಬಲಭಾಗದಲ್ಲಿ ಬ್ರಹ್ಮಯಕ್ಷ ಮತ್ತು ಎಡಭಾಗದಲ್ಲಿ ಕಮಲಾಕಾರ ಪೀಟಸ್ಥಿತಳಾಗಿರುವ ಪದ್ಮಾವತಿಯ ಗುಡಿಗಳು ಕಂಡುಬರುತ್ತವೆ. ಮಂಟಪ ಸಾಧಾರಣವಾಗಿದ್ದು ಸಾಧಾರಣ ಭುವನೇಶ್ವರಿಗಳು ಕಂಡುಬರುತ್ತಿದ್ದು ಹೆಚ್ಚು ಕೆತ್ತನೆ ಕಂಡುಬರುತ್ತಿಲ್ಲ. ಇಡೀ ಮಂಟಪದ ಮೇಲ್ಛಾವಣಿಯನ್ನು ಹೊತ್ತು ನಿಂತಿರುವ 9 ಕಂಬಗಳು ಇದ್ದು ಆರುಕೋನ, ಅಷ್ಟಕೋನ, ಹದಿನಾರುಕೋನ, ಮೂವತ್ತೆರಡುಕೋನ, ನಕ್ಷತ್ರಕಮಲಗಳಂತೆ ಒಂದೊಂದು ಕಂಬವು ವಿಭಿನ್ನ ರೀತಿಯಲ್ಲಿ ಅಲಂಕಾರದಿಂದ ಕೂಡಿದ್ದು ಮನೋಮೋಹಕವಾಗಿವೆ. ಕಂಬಗಳ ಪೀಠದ ಚಚ್ಚೌಕಾರದಲ್ಲಿ ಧರ್ಮಸಂಕೇತಗಳಾದ ಸ್ವಸ್ತಿಕ್, ಚಕ್ರ, ಅಭಯಹಸ್ತ ಮುಂತಾದ ಸಂಕೇತಗಳನ್ನು ಚಿತ್ರಿಸಿದ್ದಾರೆ. ಈ ಕಂಬಗಳ ಕೆತ್ತನೆಯಲ್ಲಿ ಶಿಲ್ಪಿಗಳ ಕೈಚಳಕ ಎದ್ದು ಕಾಣುತ್ತದೆ. ಇಷ್ಟೆÉಲ್ಲಾ ಕಂಬಗಳಿದ್ದರು ಜಿನಾಲಯ ಶಿಥಿಲವಾಗಿದ್ದು ಒದೆಗಲ್ಲು ಕಟ್ಟಡ ನಿರ್ಮಿಸಲಾಗಿದೆ. ಇತ್ತೀಚೆಗೆ ಜನರು ಕುಳಿತುಕೊಳ್ಳಲು ಮುಂದಕ್ಕೆ ಚಾಚಿದಂತೆ ಕಟ್ಟಡವನ್ನು ನಿರ್ಮಿಸಿದ್ದಾರೆ. 

            ಜಿನಾಲಯದ ಹೊರಬಂದ ತಕ್ಷಣ ಎದುರಿಗೆ ಗೋಚರಿಸುವುದೇ ಮಾನಸ್ತಂಭ ಇದು ಸುಮಾರು 2 ಅಡಿ ಎತ್ತರದ ಪೀಠದ ಮೇಲಿದ್ದು ಸುಮಾರು 40 ಅಡಿ ಎತ್ತರವಾಗಿದೆ. ಕಂಬದ ಮೇಲ್ತುದಿಯಲ್ಲಿ ಮಂಟಪವಿದ್ದು ಅದರ ಒಳಗೆ ನಾಲ್ಕು ಕಡೆಗೂ ಅಭಿಮುಖವಾಗಿರುವ ಜಿನಮೂರ್ತಿಗಳಿವೆ ಸ್ಥಂಬದ ಕೆಳಭಾಗದಲ್ಲಿ ಬ್ರಹ್ಮದೇವನ ಮೂರ್ತಿ ಇದೆ.

            ಜಿನಾಲಯದ ಹೊರಭಿತ್ತಿಯನ್ನು ಅವಲೋಕಿಸಿದಾಗ ಚಿಕ್ಕದಾದ ಪಂಜರಕೋಷ್ಠಗಳು ಇದ್ದು ಅವುಗಳಲ್ಲಿ ಜೈನ ತೀರ್ಥಂಕರರ ನಿಂತ ಭಂಗಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಜಿನಾಲಯದ ಎಡಭಾಗ ಮತ್ತು ಬಲಭಾಗದ ಹೊರಭಿತ್ತಿಯಲ್ಲಿ ದೊಡ್ಡದಾದ ಕೋಷ್ಠಗಳಿದ್ದು ಪದ್ಮಾಸನ ರೀತಿಯ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕೋಷ್ಟಗಳ ಮೇಲೆ ಸುಂದರವಾದ ಕಿರುಗೋಪುರಗಳು ಕಂಡುಬರುತ್ತವೆ. ಇತರ ಕೋಷ್ಠಗಳಲ್ಲಿನ ಕೆಲವು ಜಿನಮೂರ್ತಿಗಳು ಭಗ್ನಗೊಂಡಿವೆ, ಈ ಜಿನಾಲಯ ಶಾಸನಾಧಾರಿತ್ಯವಾಗಿದ್ದು ಮೂಲಸಂಘದ ಬಸದಿಯಾಗಿದೆ. ಅದೇ ಜಿನಾಲಯದಲ್ಲಿರುವ ಶಾಸನ ತಿಳಿಸುವಂತೆ ಮೂಲಸಂಘದ ಶಾಖೆಯಾದ ದೇಶೀಗಣ, ಗಣದ ಶಾಖೆಯಾದ ಪುಸ್ತಕಗಚ್ಚ ಇದರ ಶಾಖೆಯಾದ ಕೊಂಡ ಕುಂದಾನ್ವಯದ ಪ್ರಕಾರ ದೇವರಗುಡ್ಡಿ, ಮಾಳವಸೆಟ್ಟಿ, ಕಬ್ಬೆಯರ ಮಗನಾದ ಮಲ್ಲಿಸೆಟ್ಟಿ, ಕ್ರಿ.ಶ 1219 ರಲ್ಲಿ ಈ ಜಿನಾಲಯದ ಹೊರಗೋಡೆಯ ಸುತ್ತ ಪ್ರತಿಮೆಗಳನ್ನು ಪ್ರಮಾದಿ ಸಂವತ್ಸರದ ಜೇಷ್ಠ ಶುದ್ದ ಪಂಚಮಿಯೆಂದು ಪ್ರತಿಷ್ಠಾಪನೆ ಮಾಡಿಸಿರುವುದನ್ನು ಉಲ್ಲೇಖಿಸುತ್ತದೆ. ಈ ಪ್ರತಿಮೆಗಳು ಜಿನಾಲಯದ ಹೊರಭಿತ್ತಿಯ ಸೌಂದರ್ಯವನ್ನು ಹೆಚ್ಚಿಸಿದೆ.

            ಜಿನಾಲಯದ ಉತ್ತರದ ಕಡೆಯಲ್ಲಿ ಸಲ್ಲೇಖನ ವ್ರತಕೈಗೊಂಡು ಪ್ರಾಣ ತ್ಯಜಿಸಿರುವುದರ ನೆನಪಿಗಾಗಿ ನಿಷದಿ ಕಲ್ಲುಗಳಿವೆ. ಇಂತಹ ನಿಷದಿಗಳನ್ನು ನಿಸಿದಿಗೆ, ನಿಶೀದಿಗೆ, ನಿಸಿದಿ, ನಿಶೀದಿಕಾ, ನಿಶಿದಿಗೆ, ನಿಷಿದ್ಯಾಲಯ ಎಂದು ಕರೆಯುತ್ತಾರೆ.  ಒಂದೇ ಕಲ್ಲಿನಲ್ಲಿ ಮೂರು ನಿಷದಿಗಳಿವೆ. ಅತ್ತೆ ಮಾಳವ್ವೆ ಮತ್ತು ಸೊಸೆ ಚೌಡಿಯಕ್ಕರ ನಿಷದಿ ಅದೇ ಕಲ್ಲಿನ ಎಡಭಾಗದಲ್ಲಿ ಭೂಚವ್ವೆಯ ನಿಷದಿ. ಅದೇ ಕಲ್ಲಿನ ಬಲಭಾಗದಲ್ಲಿ ಮಲ್ಲಿಸೆಟ್ಟಿ ಮತ್ತು ಆತನ ಪ್ರೀತಿಯ ಮಗನಾದ ಮಾಳಯ್ಯ ಎಂಬ ಇಬ್ಬರ ನಿಷದಿ ವಿಚಾರಗಳನ್ನು ತಿಳಿಸುತ್ತದೆ. ಈ ನಿಷದಿಗಳು ಜೈನರ ಪಾವಿತ್ರ್ಯತೆಯನ್ನು ತೋರಿಸುತ್ತವೆ. ಜೈನ ಮುನಿಗಳ ವ್ರತಾಚರಣೆಯ ಮರಣದ ಸಂಕೇತವಾಗಿ ಗೋಚರಿಸುತ್ತವೆ.

            ಜಿನಾಲಯದ ಹೊರಭಾಗದಲ್ಲಿ ನಿಂತು ತಲೆ ಎತ್ತಿ ನೋಡಿದರೆ ಜಿನಾಲಯದ ಗರ್ಭಗೃಹದ ಮೇಲೆ ಶಿಖರವಿದೆ. ಮುಖಮಂಟಪದ ಮೇಲ್ಛಾವಣಿಯ ಕೊಷ್ಠಕದಲ್ಲಿ ನಿಂತ ಭಂಗಿಯ ಶಾಂತಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಜಿನಾಲಯದ ಸುತ್ತಲು ಪ್ರಕಾರ ಗೋಡೆ ಇದೆ. ಈ ಜಿನಾಲಯದಲ್ಲಿ ಬರಹವುಳ್ಳ ತಾಳೆಗರಿಯ ಒಂದು ಕಟ್ಟು ಇದ್ದು ಅನಂತನೋಂಪ್ಯ ವ್ರತದ ಶ್ಲೋಕವನ್ನು ಒಳಗೊಂಡಿದೆ. ಈ ಪ್ರದೇಶವನ್ನು ಒಳಗೊಂಡಂತೆ ಇತರ ಭಾಗಗಳಲ್ಲಿ ಜೈನ ಧರ್ಮ ಪ್ರಭಲವಾಗಿತ್ತು ಎಂಬುದಕ್ಕೆ ಈ ಜಿನಾಲಯವೇ ಪ್ರಮುಖ ಆಧಾರ ಸ್ಥಂಬವಾಗಿದೆ. ಶಾಂತಿನಾಥ ಜಿನಾಲಯ ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಜೈನ ಸಮಾಜ ಮತ್ತು ಸಂಘದ ನೆರವಿನಿಂದ ಜಿನಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಸಭೆ ಸಮಾರಂಭಗಳು ವಾರ್ಷಿಕೊತ್ಸವದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಪುರದ ಕಲ್ಲೇಶ್ವರ ದೇವಾಲಯ

            ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯಲ್ಲಿ ಹೊಯ್ಸಳರ ಕಾಲಘಟ್ಟಕೆ ಸೇರಿದ ಒಂದು ಪ್ರಮುಖ ಶೈವ ದೇವಾಲಯವಾಗಿದೆ. ನಿಟ್ಟೂರಿನಿಂದ ಶಿರಾ ಮೈಸೂರು ರಸ್ತೆಯಲ್ಲಿ ಒಂದು ಕಿ.ಮೀ ಮುಂದೆ ಸಾಗಿದರೆ ಪುರ ಎಂಬ ಚಿಕ್ಕ ಗ್ರಾಮ ಕಂಡುಬರುತ್ತದೆ. ಈ ಶೈವ ದೇವಾಲಯವನ್ನು ಗಮನಿಸಿದರೆ ಹೊಯ್ಸಳರ ಕಾಲಘಟ್ಟದಲ್ಲಿ ಶೈವಧರ್ಮಕ್ಕೂ ಹೆಚ್ಚು ಆಧ್ಯತೆಕೊಟ್ಟಿದ್ದರೆಂದು ತಿಳಿಯುತ್ತದೆ.

            ಈ ಕಲ್ಲೇಶ್ವರ ದೇವಾಲಯ ಪುರ ಗ್ರಾಮದ ಈಶಾನ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಗರ್ಭಗೃಹ, ಅಂತಾರಳ, ನವರಂಗ ಮತ್ತು ಮಂಟಪವನ್ನು ಹೊಂದಿದ್ದು ಹೊಯ್ಸಳರ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದೆ. ದೇವಾಲಯದ ಗರ್ಭಗುಡಿಯಲ್ಲಿ ಒಂದು ಅಡಿಯಷ್ಟು ಎತ್ತರವುಳ್ಳ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಬಾಗಿಲುವಾಡ ಸರಳವಾದ ರಚನೆಯಿಂದ ಕೂಡಿದೆ. ಗರ್ಭಗೃಹದ ಲಿಂಗುವಿಗೆ ಅಭಿಮುಖವಾಗಿ ಕಪ್ಪು ಶಿಲೆಯಿಂದ ಮಾಡಿರುವ ನಂದಿಯನ್ನು ಅಂತರಾÀಳದಲ್ಲಿ ಪ್ರತಿಷ್ಠಾಪಿಸಲಾಗಿದೆ. ನಂದಿಯನ್ನು ಹಣೆಪಟ್ಟಿ, ರುದ್ರಾಕ್ಷಿಮಾಲೆ, ಗಂಟೆ ಮುಂತಾವುಗಳಿಂದ ಅಲಂಕೃತಗೊಳಿಸಿದ್ದಾರೆ. ಎಡಭಾಗದಲ್ಲಿ ಪುರುಷದೇವತೆಗೆ ಸಂಗಾತಿ ಎಂಬಂತೆ ಪಾರ್ವತಮ್ಮನವರ ಚಿಕ್ಕ ಗರ್ಭಗೃಹವಿದೆ. ಬಲಭಾಗದಲ್ಲಿ 1 1/2  ಅಡಿ ಎತ್ತರದ ಪಿಠದ ಮೇಲೆ ಸುಮಾರು 3 ಅಡಿ ಎತ್ತರದ ಗಣೇಶನು ಸುಖಾಸೀನ ಭಂಗಿಯಲ್ಲಿ ಆಸೀನನಾಗಿರುವನು ಅಂತರಾಳದಿಂದ ಮುಂದೆ ಬಂದರೆ ಮಂಟಪದಲ್ಲಿ ಹೊಯ್ಸಳರ ಕಾಲದ 5 ಅಡಿ ಎತ್ತರದ ಕ್ರಿ.ಶ 1226ರ ಒಂದು ಶಾಸನವಿದೆ. ಈ ಶಾಸನದಿಂದ ಅಂದಿನ ಸಾಮಾಜಿಕ ಜೀವನ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿದೆ. ಈ ಶಾಸನ “ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರಚಾರವೇ ತ್ರೈಲೋಕ್ಯನಗಾರಾರಂಭ ಮೂಲಸ್ತಂಭಾಯ ಶಂಭುವೇ” ಎಂಬ ಮಂಗಳ ಶ್ಲೋಕದೊಂದಿಗೆ ಆರಂಭಗೊಂಡಿದೆ.

            ಹೊಯ್ಸಳರ ಪ್ರಖ್ಯಾತ ದೊರೆಯಾದ ವೀರನಾರಸಿಂಹ ರಾಜಧಾನಿಯಾದ ದ್ವಾರಸಮುದ್ರದ ನೆಲವೀಡಿನಲ್ಲಿ ರಾಜ್ಯವನ್ನಾಳುತ್ತಿದ್ದ ಸಂದರ್ಭದಲ್ಲಿ ಗಂಗವಾಡಿ 96,000 ನಾಡಿನಲ್ಲಿ ತೆಂಕಣಭಾಗಕ್ಕೆ ಬರುವ ನಿಟ್ಟೂರು ಮಹಾಪಟ್ಟಣ ಮತ್ತು ಪ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. (ತೆಂಕಣ ಅಯ್ಯಾವೊಳೆ) ಉಲ್ಲೇಖಿಸಿದೆ. ಈ ಶಾಸನ ವೀರನರಸಿಂಹನನ್ನು ಸಮಸ್ತ ಭುವನಾಶ್ರಯ, ಶ್ರೀಪೃಥ್ವಿವಲ್ಲಭ, ಮಹಾರಾಜಾಧಿರಾಜ, ರಾಜಪರಮೇಶ್ವರ, ರಾಜಾದಿರಾಜ, ಮಲೆಪೆರಳ್‍ಗಂಡ, ಗಂಡಬೇರುಂಡ, ಕದನಪ್ರಚಂಡ, ಶನಿವಾರಸಿದ್ದಿ, ಗಿರಿದುರ್ಗಮಲ್ಲ, ಚಲದಂಕರಾಮ, ಚೋಳರಾಜ್ಯವನ್ನು ನಿರ್ಮೂಲನ ಮಾಡಿದ ಪ್ರತಾಪಚಕ್ರವರ್ತಿ ಎಂದೆಲ್ಲಾ ವರ್ಣಿಸಿದೆ. ಈತನ ಕಾಲದಲ್ಲಿ ಮಹಾಪ್ರಧಾನಿ, ಸರ್ವಾಧ್ಯಕ್ಷÀ, ದೇಶಾದಿಪತಿ, ನಿಯೋಗಾದಿಪತಿಯವರ ಉಪಸ್ಥಿತಿ ಹಾಗೂ ದುಷ್ಟರನ್ನು ಶಿಕ್ಷಿಸುತ್ತಾ ಶಿಷ್ಟರನ್ನು ರಕ್ಷಿಸುತ್ತಾ ಸುಖಾ ಸಂತೋಷದಿಂದ ಕೂಡಿದ್ದ ಮಹಾಪ್ರಧಾನಿ ಎನಿಸಿದ ಕುಮಾರ ನಾರಸಿಂಹನ ಉಪಸ್ಥಿತಿಯಲ್ಲಿ ಮಹಾಪಟ್ಟಣ ನಿಟ್ಟೂರಿನ ತಲಸೆಟ್ಟಿಗಳಾದ ಮಹಾಪ್ರಭು ಮಸಣಗೌಡ, ಕಾಳಗೌಡರು ಶ್ರೀಸ್ವಯಂಭು ಕಲಿದೇವರ ದೇವಾಲಯದ ಅಂಗಭೋಗ, ರಂಗಭೋಗ, ಮತ್ತು ಸಕಲ ಜೀರ್ಣೋದ್ದಾರಕ್ಕೆ ಶಾಲಿವಾಹನ ಶಕವರ್ಷ 1148 ಅಭ್ಯಯ ಸಂವತ್ಸರದ ಪುಷ್ಯಮಾಸ, ಸೂರ್ಯಗ್ರಹಣ ಸಂಕ್ರಾಂತಿಯ ದಿನದಂದು ನಿಟ್ಟೂರಿನ ದೊಡ್ಡಕೆರೆಯ ಹಿಂಬದಿಯ 3 ಎಕರೆ ಬೆದಲು ಕೋಡಿಯ ದಕ್ಷಿಣಭಾಗದ ದಾರಿಯಲ್ಲಿನ ಒಂದು ಅಂಗಡಿ, ಒಂದು ಗಾಣ, ಸಂತೆಯನ್ನು ದಾನಬಿಟ್ಟ ವಿಚಾರವನ್ನು ಈ ಶಾಸನ ಪ್ರಸ್ತಾಪಿಸುತ್ತದೆ. ಇದು ಒಂದು ದಾನಶಾಸನವಾಗಿದ್ದು ಇಂದು ಇದಕ್ಕೆ ಬಿಳಿಬಣ್ಣ ಬಳಿದಿರುವುದರಿಂದ ವಿನಾಶದ ಅಂಚಿನಲಿದೆ. (ಈ ಶಾಸನ ಕುರಿತು ಪ್ರಜವಾಣಿ ಪತ್ರಿಕೆಯಲ್ಲಿ ಅವನತಿ ಅಂಚಿನಲ್ಲಿ ಐತಿಹಾಸಿಕ ಶಿಲಾಶಾಸನ ಎಂಬ ಲೇಖನ ಪ್ರಕಟಿಸಲಾಗಿತ್ತು)

            ನವರಂಗದಲ್ಲಿ ನಾಲ್ಕು ಕಣಶಿಲೆಯ ಸಾಧಾರಣ ಕಂಭಗಳಿವೆ ಮೇಲ್ಚಾವಣಿಯ ಮಧ್ಯಭಾಗದಲ್ಲಿ ಒಳಭಾಗದಲ್ಲಿ ಅರಳಿದ ಕಮಲದ ರೀತಿಯ ಭುವನೇಶ್ವರಿ ಇದೆ. ನವರಂಗದ ಮುಂದಿನ ಭಾಗ ಮುಖಮಂಟಪದಲ್ಲಿ 4 ಚೌಕಕಾರದ ಕಂಬಗಳಿವೆ. ಯಾವುದೇ ಶಿಲ್ಪಾಕೃತಿಗಳ ಕೆತ್ತನೆ ಕಂಡುಬರುವುದಿಲ್ಲ. ದೇವಾಲಯದ ಎದುರಿಗೆ ಸುಮಾರು ನಾಲ್ಕು ಅಡಿ ಎತ್ತರದ ಚಿಕ್ಕ ದ್ವೀ¥ಸ್ತಂಬವಿದೆ. ಸ್ವಲ್ಪ ಮುಂದೆ 5 ಅಡಿ ಅಂತರದಲ್ಲಿ ಒಂದು ಅಡಿ ವೇದಿಕೆ ಮೇಲೆ ಸುಮಾರು 20 ಅಡಿ ಎತ್ತರದ  ದ್ವೀಪಸ್ತಂಬವಿದೆ. ಇದರಲ್ಲಿ ನಾಗ, ಡಮರು, ತ್ರಿಶೂಲಗಳನ್ನು ರಚಿಸಲಾಗಿದೆ. ಗರ್ಭಗುಡಿಯ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುವ ದ್ರಾವಿಡ ಶೈಲಿಯ ಶಿಖರವಿದ್ದು ಅದರ ಮೇಲೆ ಕಳಶವನ್ನು ಪ್ರತಿಷ್ಠಾಪಿಸಿದ್ದಾರೆ. ಯಾವುದೇ ಶಿಲ್ಪಾಕೃತಿಗಳಿಲ್ಲ ಮುಖಮಂಟಪದ ಮೇಲ್ಛಾವಣಿಯ ಮೇಲೆ ದೇವಕೋಷ್ಟಕಗಳಿದ್ದು ಯಾವುದೇ ಶಿಲ್ಪಗಳ ಕೆತ್ತನೆ ಕಂಡುಬರುವುದಿಲ್ಲ. ದೇವಾಲಯದ ಸುತ್ತಲು ಪ್ರಕಾರಗೋಡೆ ಇದ್ದು ದೇವಾಲಯದ ಬಲಭಾಗದಲ್ಲಿ ಶಿಥಿಲಾವಸ್ಥೆಯಲ್ಲಿರುವ ಮುದ್ದುರಾಮೇಶ್ವರ, ಉಣ್ಣೆಬಸವಣ್ಣ, ಬಸವಣ್ಣನ ಗದ್ದಿಗೆಗಳು ಕಂಡುಬರುತ್ತವೆ. ದೇವಾಲಯದ ಎಡಭಾಗದ ಒಂದು ಚಿಕ್ಕಗುಡಿಯಲ್ಲಿ ಮೂರು ಹಂತದ ವೀರಗಲ್ಲಿದ್ದು ಸ್ಪಷ್ಟವಾಗಿ ಗುರ್ತಿಸಲು ಸಾದ್ಯವಾಗುವುದಿಲ್ಲ. ಪ್ರಕಾರಗೋಡೆಯ ಪ್ರವೇಶದ್ವಾರದ ಮೇಲೆ ಅಲಂಕೃತಗೊಂಡಿರುವ ನಂದಿಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಾಲಯದ ಎದುರಿಗೆ ರಸ್ತೆ ದಾಟಿ ಮುಂದಕ್ಕೆ ಸಾಗಿದರೆ ಉಯಾಲೆ ಕಂಬಗಳು ಕಂಡುಬರುತ್ತವೆ.

            ಹೀಗೆ ಹೊಯ್ಸಳರ ಕಾಲದಲ್ಲಿ ನಿಟ್ಟೂರು ಹೋಬಳಿಯಲ್ಲಿ ಶೈವಧರ್ಮ ಮತ್ತು ಜೈನಧರ್ಮ ಹೆಚ್ಚು ಪ್ರಬಲವಾಗಿತ್ತು ಎಂಬುದನ್ನು ದೇವಾಲಯಗಳು ಮತ್ತು ಶಾಸನಗಳು ದೃಡಪಡಿಸುತ್ತವೆ.

ಅಡಿಟಿಪ್ಪಣಿಗಳು :-

  1. ಬಿ.ಎಲ್.ರೈಸ್, ಎಪಿಗ್ರಾಫಿಯ ಕರ್ನಾಟಕ, ಸಂಪುಟ 12.
  2. ಡಾ|| ಕೆ.ಎಲ್.ಎನ್.ಮೂರ್ತಿ, ಕರ್ನಾಟಕದ ಕಲೆ ಮತ್ತು ವಾಸ್ತು ಶಿಲ್ಪ.
  3. ಡಾ|| ಚಿದಾನಂದಮೂರ್ತಿ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ
  4. ಡಿ.ವಿ.ಪರಮಶಿವಮೂರ್ತಿ, ಕನ್ನಡ ಶಾಸನಶಿಲ್ಪ.
  5. ಮಹದೇವಯ್ಯ ಎಂ.ಪಿ, ತುಮಕೂರು ಜಿಲ್ಲೆಯ ಹೊಯ್ಸಳರ ಧಾರ್ಮಿಕ ಶಾಸನಗಳ ಒಂದು ವಿವೇಚನೆ.
  6. ಪರಮಶಿವಮೂರ್ತಿ ಡಿ.ವಿ.(ಲೇ) ತುಮಕೂರು ಜಿಲ್ಲೆಯ ಶಾಸನಗಳು ಒಂದು ಪರಿಚಯ.
  7. ಗುರುರತ್ನಬಾಬು, ಡಿ. ದಕ್ಷಿಣಭಾರತೀಯ ಕಲೆ ಮತ್ತು ವಾಸ್ತುಶಿಲ್ಪ.
  8. ಅಪರ್ಣ ಕೂ.ಸ. ದೇವಾಲಯ ವಾಸ್ತು ಶಿಲ್ಪ ಪರಿಚಯ.
  9. ತುಮಕೂರು ಸುನಂದ, ತುಮಕೂರು ಜಿಲ್ಲೆಯ ಜಿನದೇವಾಲಯ.
  10. ಸಿ.ಎಸ್.ವಾಸುದೇವನ್, ಮುಕ್ಕೋಡೆ ಜೈನಸಂಸ್ಕೃತಿ.    


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal