“ಒಡಲಾಳ”_ ಕಾದಂಬರಿ ಕುರಿತು ಒಂದು ವಿಮರ್ಶೆ
ಕರಿಬಸಣ್ಣ ಟಿ.
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
ಆಧುನಿಕ ಕನ್ನಡ ಸಾಹಿತ್ಯವು ಅನೇಕ ಸಾಹಿತ್ಯ ಪ್ರಕಾರ ಮತ್ತು ಸಾಹಿತ್ಯ ಪಂಥಗಳನ್ನು ಕಂಡಿದೆ. ಕಾದಂಬರಿ ಸಾಹಿತ್ಯ ಪ್ರಕಾರವು ಆಧುನಿಕ ಸಾಹಿತ್ಯದ ವಿಶಿಷ್ಠ ಪ್ರಕಾರದ ಅಭಿವ್ಯಕ್ತಿ ಮಾಧ್ಯಮವಾಗಿ ಹೊರ ಹೊಮ್ಮಿದ್ದು ಈ ಕಾಲದಲ್ಲೆನ್ನಬಹುದು. ಕನ್ನಡ ಸಾಹಿತ್ಯವಲಯದಲ್ಲಿ ಸಂಚಲನ ಮೂಡಿಸಿದ ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟ ದಲಿತ ಜನಾಂಗವು ಅಕ್ಷರಗಳ ಕಲಿತು ಬರವಣಿಗೆಯ ಹೊಸ ಲೋಕಕ್ಕೆ ಚಳುವಳಿಗಳ ಮೂಲಕ ಪಾದಾರ್ಪಣೆ ಮಾಡಿದರು. ಈ ಪರ್ವ ಕಾಲದಲ್ಲಿ ತುಳಿತಕ್ಕೆ ಒಳಪಟ್ಟ ಶ್ರಮ ಮೂಲ ಸಂಸ್ಕೃತಿಯ ಜನರು ಬರವಣಿಗೆಯ ಮೂಲಕ ತಮ್ಮ ಬದುಕನ್ನು ಅನಾವರಣಗೊಳಿಸಿದರು. ಇಂತಹ ಸಂಕ್ರಮಣ ಕಾಲದಲ್ಲಿ ಒಡಮೂಡಿಬಂದ ಸಾಹಿತ್ಯವೇ ದಲಿತ ಕಾದಂಬರಿ ಸಾಹಿತ್ಯ. 1970ರ ದಶಕದ ಸಂದರ್ಭದಲ್ಲಿ ದೇವನೂರ ಮಹಾದೇವರವರು ಕನ್ನಡ ಸಾರಸ್ವತಲೋಕಕ್ಕೆ ದಲಿತರ ಬದುಕಿನ ನೈಜಚಿತ್ರಣವನ್ನು ತನ್ನ ಎರಡು ಕಾದಂಬರಿಗಳಾದ ಒಡಲಾಳ ಮತ್ತು ಕುಸುಮಬಾಲೆಯಲ್ಲಿ ಕಟ್ಟಿಕೊಡುತ್ತಾರೆ.
ಒಡಲಾ ಕಾದಂಬರಿಯು ದಲಿತ ಬದುಕಿನ ಸಾಂಸ್ಕೃತಿಕ ಜೀವನದ ದಾಖಲೆಯನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ. ಗ್ರಾಮಭಾರತದೊಳಗೆ ಶತಮಾನಗಳಿಂದ ಊರಿಂದ ಹೊರಗೆ ನಿಷೇದಕ್ಕೆ ಒಳಪಟ್ಟವರ ಬದುಕಿನ ದೃಶ್ಯಕಾವ್ಯದಂತೆ ಒಡಲಾಳ ಕಾದಂಬರಿಯು ಚಿತ್ರಿತವಾಗಿದೆ. ಒಡಲಾಳದಲ್ಲಿ ಬರುವ ಸಾಕವ್ವ ತನ್ನ ಕುಟುಂಬದ ಹೊಣೆಗಾರಿಕೆಯನ್ನು ಪ್ರಬಲವಾಗಿ ಇಳವಯಸ್ಸಿನಲ್ಲೂ ಪ್ರತಿಪಾದಿಸುತ್ತಾರೆ. ತನ್ನ ಜೀವನಕ್ಕೆ ಆಸರೆಯಾಗಿದ್ದ ಒಂದು ಗುಡಿಸಲು. ಜೀವವೇ ತಾನಾದಂತಿದ್ದ ಹುಂಜವು ಕಾಣೆಯಾಗಿದ್ದರಿಂದ ಒಡಲಾಳದ ಕಥಾಹಂದರ ಆರಂಭವಾಗುತ್ತದೆ. ಹುಂಜ ಕಾಣೆಯಾದ್ದರಿಂದ ತನ್ನ ಬದುಕೆ ಕಳೆದು ಹೊದಂತೆ ವರ್ತಿಸುತ್ತಾಳೆ. ಇದು ದಲಿತ ಮಹಿಳೆಯು ಅನುಭವಿಸುವ ಯಾತನಾಮಯ ಲೋಕವನ್ನೆ ತೆರೆದಿಡುವಲ್ಲಿ ಕಾದಂಬರಿಯು ಯಶಸ್ವಿಯಾಗಿದೆ.
ಸಾಕವ್ವನ ಕುಟುಂಬ ಮಗ, ಸೊಸೆ,ಮೊಮ್ಮಕ್ಕಳು ವಾಸಿಸುವ ಒಂದು ದೊಡ್ಡ ಕುಟುಂಬವೆ ಆಗಿತ್ತು.ತಮ್ಮ ಜೀವನಕ್ಕೆ ಆಸರೆಯಾಗಿದ್ದ ಹಾಗೂ ಇಷ್ಟ ದೇವರಲ್ಲಿ ಮೊರೆಯಿಟ್ಟಿದ್ದಳು. ಹುಂಜ ಕಾಣೆಯಾದ್ದರಿಂದ ಊರೆಲ್ಲಾ ಹುಡುಕಿ ಸಾಕಾಗಿತ್ತು.ಸಾಕವ್ವನ ದೊಡ್ಡ ಮಗ ಕಾಳಣ್ಣ ಸೋಮಾರಿಯಾಗಿದ್ದು ಮನೆಗೆ ಒಂದು ರೀತಿಯ ಶಾಪದ ವ್ಯಕ್ತಿಯಾಗಿದ್ದು ಸಾಕವ್ವನಿಗೆ ಬೇಸರದ ಸಂಗತಿಯಾಗಿದೆ ಸಾಕವ್ವನ ದೊಡ್ಡ ಮಗಳು ಗೌರಮ್ಮ ಅವಳ ಮಗು ರೋಗಿಷ್ಠ ಮಗು ಕೂಡ ಇವಳ ಸಂಸಾರದಲ್ಲಿ ಸೇರಿತ್ತು. ಒಟ್ಟಾರೆಯಾಗಿ ಈ ಹಟ್ಟಿಯೊಳಗಿನ ಕುಟುಂಬಗಳು ಕೂಲಿಗಾಗಿ ಪರದಾಡುವ ಸನ್ನಿವೇಶಗಳು ಎಂತಹವರ ಮನಸ್ಸನ್ನುಅನುಕಂಪದ ಹಾದಿಗೆ ತುಳಿಸುತ್ತವೆ. ಈ ಸನ್ನಿವೇಶಗಳುಂಟಾಗಲು ಕಾರಣವಾದ ಮೇಲ್ವರ್ಗದವರ ದಬ್ಬಾಳಿಕೆ, ಶೋಷಣೆ ಇವರ ಕಡುಬಡತನ ಎಲ್ಲವನ್ನು ನಿಭಾಯಿಸುವ ಎದೆಗಾರಿಕೆಯ ಚಿತ್ರಣ ಒಡಲಾಳ ಕಾದಂಬರಿಯಲ್ಲಿ ಕಂಡು ಬರುತ್ತದೆ.
ಸಾಕವ್ವನ ಕಿರಿಮಗ ಮನೆಬಿಟ್ಟು ಮಾರಿಗುಡಿಯಲ್ಲಿ ವಾಸವಾಗಿದ್ದನು. ಗಾರೆಕೆಲಸ ಮಾಡಿಕೊಂಡು,ಚಿಲ್ಲರೆ ಅಂಗಡಿ ಇಟ್ಟುಕೊಂಡು, ದನದ ದಲ್ಲಾಳಿಯಾಗಿದ್ದನು. ಕೈಯಲ್ಲಿ ಕಾಸಿದ್ದಾಗ ಅವ್ವನ ಎಲೆ ಅಡಿಕೆಗೂ ಕೊಡುತ್ತಿದ್ದನು. ಜಾನಪದ ನಾಟಕಗಳಾದ, ಹಳ್ಳಿ ನಾಟಕಗಳಾದ ಮಹಾಭಾರತದ ಕರ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದನು. ಇವನ ಪಾಡಿಗೆ ಬದುಕು ಕಟ್ಟಿಕೊಂಡು ಸಾಕವ್ವನ ಕುಟುಂಬದಲ್ಲಿ ನೆಂಟನ ರೀತಿಯಲ್ಲಿ ಬಂದು ಹೋಗುವ ಆಸಾಮಿಯಾಗಿದ್ದನು.
ಸಾಕವ್ವನ ದೊಡ್ಡ ಮಗಳ ಕುಟುಂಬವು ಅಷ್ಟು ಚೆನ್ನಾಗಿರಲಿಲ್ಲ. ಆದ್ದರಿಂದ ಅದೂಕೂಡ ಒಂದು ಬಲವಾದ ಚಿಂತೆ ಕಾಡುತ್ತಿತ್ತು. ಪುಟ್ಟಗೌರಿ ಸಾಕವ್ವನ ಕಿರಿಮಗಳು. ಮದುವೆಗೆ ಬಂದು ಅಣಿಯಾಗಿ ನಿಂತಿದ್ದಳು. ಇವಳು ಮಾಡುವ ಕೂಲಿ ಅಷ್ಠೇನೂ ಕುಟುಂಬ ನಡೆಸಲು ಸಾಕಾಗುತ್ತಿರಲಿಲ್ಲ. ಇಷ್ಟೆಲ್ಲಾ ನೋವುಗಳನ್ನು ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಸಾಕವ್ವ ತನ್ನ ಕೋಳಿ ಕದ್ದವರ ಮೇಲೆ ತನ್ನ ಆಕ್ರೋಶವನ್ನು ಹೊರಹಾಕುತ್ತಿದ್ದಳು. ಈ ರೀತಿ ಸಂಗ್ರಹಿಸಿ ಹೇಳಬಹುದು. “ನನ್ನ ಕೋಳಿ ತಿಂದವರ ಮನೆ ಮಣ್ಣಾಗ್ಲೋ...... ನನ್ನ ಮನೆ ದೇವ್ರ ಸತ್ಯ ಇದ್ದುದ್ದೇ ಉಂಟಾದ್ರೆ ನನ್ನ ಕೋಳಿ ಮುರ್ದವರ ಮನೆ ಮುರ್ದೋಗಲೋ...” ಈ ಮಾತುಗಳಿಂದ ಬಡವರ ಪಾಲಿಗೆ ಇದ್ದ ಸ್ವಲ್ಪ ಜೀವದ ಆಸ್ತಿ ಕೈಜಾರಿದಾಗ ಆಗುವ ದುಗುಡ ದುಮ್ಮಾನಗಳನ್ನು ಸಾಕವ್ವನ ಪಾತ್ರ ವಿವರವಾಗಿ ಹೇಳುತ್ತದೆ. ಅವ್ವನ ಸಂಕಟವನ್ನು ನೋಡಲಾಗದ ಸಾಕವ್ವನ ದೊಡ್ಡ ಮಗಳು ಸಾಂತ್ವಾನ ಹೇಳುವುದು. ಸಾಂಪ್ರದಾಯಿಕ ಗ್ರಾಮೀಣ ಬದುಕಿನ ಮಾನವಿಯ ಸಂಬಂzಗಳ ಕರುಳಬಳ್ಳಿಯ ತುಡಿತಗಳನ್ನು ಇಂತಹ ಸನ್ನಿವೇಶಗಳನ್ನು ದೇವನೂರ ಮಹಾದೇವರವರು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನೂರೆಂಟು ಸಂಕಷ್ಠಗಳನ್ನು ಎದುರಿಸುವ ಸಾಕವ್ವ ಕೌಟುಂಬಿಕವಾಗಿ ನಡೆಯುವ ಜಗಳ,ಅತ್ತೆ-ಸೊಸೆಯರ ಹೊಂದಾಣಿಕೆಯಿಲ್ಲದ ಜೀವನ, ಹೆಂಡತಿ ಬಂದ ಮೇಲೆ ಎರಡನೆಯ ಮಗ ಸಣ್ಣಯ್ಯನ ಮನಸ್ಸು ಮೊದಲಿನ ರೀತಿ ಇಲ್ಲದಿರುವುದನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.ಸಣ್ಣಯ್ಯನು ಸಾಕವ್ವನ ಆಸ್ತಿಯ ಲಪಟಾಯಿಸಲು ಯತ್ನಿಸುತ್ತಿದ್ದನು, ಈತ ಮೊದಲಿನಿಂದಲೂ ದುರಾಸೆಯ ಮನುಷ್ಯನಾಗಿದ್ದ ತನ್ನ ಅವ್ವನ ಮೇಲೆ ಆಗಾಗ ರೇಗುತ್ತಿದ್ದನು, ಆಗಾಗ ತನ್ನ ಹೆಂಡತಿಯ ಮಾತನ್ನು ಕೇಳುತ್ತಿದ್ದನು, ಇವನು ಯಾವಾಗಲೂ ಸಾಕವ್ವನಿಗೆ ರಾವಣನಂತೆ ಕಾಣುತ್ತಿದ್ದನು. ತನ್ನ ಕುಟುಂಬ ಛಿದ್ರಗೊಳಿಸುವ ವ್ಯಕ್ತಿಯ ಬಗ್ಗೆ ಆಗಾಗ್ಗೆ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಳು. ಸಣ್ಣಯ್ಯ ಮತ್ತು ಸಾಕವ್ವ ವಾಗ್ವಾದಕ್ಕೆ ಇಳಿದಾಗ ಸಾಕವ್ವನ ತಿಳುವಳಿಕೆ ವಿಶ್ವವಿದ್ಯಾಲಯದಲ್ಲಿ ಓದಿದವರಿಗಿಂತ ಕಡಿಮೆಯಿಲ್ಲವೆಂಬ ಸಣ್ಣಯ್ಯ ಮತ್ತು ಸಾಕವ್ವನ ಈ ಸಂಭಾಷಣೆ ನಿರೂಪಿಸುತ್ತದೆ. ಸಣ್ಣಯ್ಯನು ಆಸ್ತಿಯ ವಿಚಾರ ಬಂದಾಗ “ನಾನು ಅಕ್ಕುದಾರ, ನಿನ್ನ ಆಸ್ತಿಗೆ” ಎಂದು ಹೇಳಿದಾಗ ಸಾಕವ್ವ ಯಾವ ಕಾನೂನು ಪಂಡಿತರಿಗೂ ಕಡಿಮೆಯಿಲ್ಲದಂತೆ “ ಏನಂದೆ ಇನ್ನೊಂದ್ಸಲ ಅನ್ನು ............. ಅಕ್ಕುದಾರನಾ ನೀನು? ಹುಟ್ಟಿದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರ್ಸಿ ಕಚ್ಚ ಕಟ್ಕೊಂಡು ಗೇದು ಸಂಪಾದ್ಸಿವ್ನಿ ಕಣೋ ಭೂಪತಿ, ಆಸ್ತಿ ನನ್ನ ಸ್ವಾರ್ಜಿತ ಸ್ವಾರ್ಜಿತ ..........” ಎನ್ನುವಲ್ಲಿ ಗ್ರಾಮೀಣ ಬದುಕಿನ ಹೆಣ್ಣಿನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೇಗೆ ಬಲಶಾಲಿಯಾಗಿರಬೇಕೆಂಬುದನ್ನು ಈ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.
ಅಧಿಕಾರಿಗಳು ಮತ್ತು ಅಂದಿನ ಸಾಹುಕಾರರುಗಳ ನಡುವೆ ಇರುವ ಸಂಬಂಧಗಳು ಕೆಳವರ್ಗದವರನ್ನು ನಡೆಸಿಕೊಳ್ಳುವ ನಾನಾಬಗೆಗಳನ್ನು ಹೇಳುತ್ತವೆ. ಸಾಹುಕಾರ್ ಎತ್ತಪ್ಪನವರು ತಮ್ಮ ಮಿಲ್ಲಿನ ಕಡಲೆಕಾಯಿ ಲಾಟ್‍ನಲ್ಲಿ ಹಾಗೊಒದು ಹೀಗೊಂದು ಮೂಟೆ ಕಳ್ಳತನವಾಗುತ್ತಿತ್ತು. ಕಳ್ಳತನ ಮಾಡುವ ವ್ಯಕ್ತಿ ಸಿಗದೆ ಪೋಲೀಸ್ ಕಾನ್‍ಸ್ಟೆಬಲ್ ರೇವಣ್ಣನವರಿಗೆ ಕಂಪ್ಲೆಂಟ್ ನೀಡಿದ್ದರು. ಈ ಸಂದರ್ಭದಲ್ಲಿ ಅಂದಿನ ಪೋಲೀಸ್ ಕುಟುಂಬಗಳ ಕಥೆಯನ್ನು ಎಳೆಎಳೆಯಾಗಿ ತೆರೆದಿಡುತ್ತಾರೆ.
ಪೋಲಿಸ್ ದಬ್ಬಾಳಿಕೆಯಿಂದ ಹೈರಾಣಾಗಿದ್ದ ಹಟ್ಟಿಯ ಕುಟುಂಬಗಳು ಹೇಳಲೂ ಆಗದ ಸುಮ್ಮನಿರಲು ಆಗದ ಸ್ಥಿತಿಯಲ್ಲಿದ್ದವು.ಪೋಲೀಸರ ದೌರ್ಜನ್ಯವನ್ನು ಈ ಸನ್ನಿವೇಶ ಬಹಳ ಸೊಗಸಾಗಿ ಕಟ್ಟಿಕೊಡುತ್ತದೆ. ಒಂದು ಕ್ಷಣದಲ್ಲಿಯೇ ಸಾಕವ್ವನ ಮನೆಗೆ ಪೋಲಿಸರು ನುಗ್ಗಿದರು. ಸಾಕವ್ವ ಜೀವ ಕೈಲಿಡಿದುಕೊಂಡು “ಸ್ವಾಮ್ಗುಳೋ.........ದೇವ್ರ ಮನೆ ಬುದ್ಕೋ, ಬೂಟ್ಗಾಲಲ್ಲಿ .........” ಎಂದು ಕೈ ನೀಡಿದಳು. ದಫೇದಾರಿ ಒಂದ್ಸಲ ಬೂಟ್ಗಾಲ ನೆಲಕ್ಕುದ್ದಿ “ಹೇ......ಬಾಯ್ಮುಚ್ಚಿಕೊಂಡು ಬಿದ್ದಿರು..... ದುಸರಾ ಮಾತ್ನಾಡಿದ್ರೂ ಬಾಯ್ಗೆ ಬೂಟು ಎಟ್ತಿನಿ” ಅಂದು ಕೆಕ್ಕರಿಸಿಕೊಂಡು ನಡು ಮನ್ಗೆ ನುಗ್ಗಿದನು....... “ ಇದನ್ನು ನೋಡಿದ ಸಾಕವ್ವ ತುಂಬಾ ನಿಸ್ಸಹಾಯಕಳಾಗಿ ನಿಂತು ನಿಂತು ಬಿಟ್ಟಳು. ಈ ಸನ್ನಿವೇಶವು ಅಂದಿನ ಮಹಿಳೆಯರ ಮೇಲೆ ಅಮಾಯಕರ ಮುಗ್ದತೆಯನ್ನು ನಮ್ಮ ಅಧಿಕಾರಿಗಳು ದರ್ಪ ದೌರ್ಜನ್ಯ ಮಿತಿ ಮೀರಿರುವ ಸಂಗತಿಗಳನ್ನು ಕಾದಂಬರಿಯು ಹೇಳುತ್ತದೆ.
ಸಾಕವ್ವನ ಕಿರಿಯ ಮಗ ಗುರುಸಿದ್ದನ ಮೇಲೆ ಪೋಲಿಸರು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೂ ಧಫೆದಾರಿ ಪೀಸೀಗಳು ಕದ್ದವರ ಹುಡುಕಲಾಗದೆ ಕೈಚೆಲ್ಲಿ ನಿಲ್ಲುತ್ತಾರೆ. “ ಯಾವ ಜಪ್ತಿಗೂ ಸಿಗದೆ ಗೋಡೆ ಮೇಲಿನ ನವುಲುಗಳು ಕುಣಿಯುತ್ತಿದ್ದವು” ಎಂಬ ಪ್ರತಿಮೆಯ ಮೂಲಕ ದಲಿತ ಲೋಕ ಎದುರಿಸುವ ಸಮಸ್ಯೆಗಳನ್ನು ತೆರೆದಿಡುತ್ತಾರೆ.
ಇಷ್ಠೆಲ್ಲಾ ನಡೆದ ಮೇಲೆ ಸಾಕವ್ವ ನನ್ನ ಹುಂಜ ನಿನ್ನೆಯಿಂದ ಕಾಣೆಯಾಗಿದೆ. ಹುಡುಕಿ ಕೊಡಿ. ಎಂದು ಪೋಲಿಸರಿಗೆ ಕೇಳಿಕೊಳ್ಳುತ್ತಾಳೆ. ಪೋಲಿಸ್ ಇನ್ಸ್‍ಪೆಕ್ಟರ್ ರವರು “ಹುಂಜ ಯಶವ ರೀತಿ ಇತ್ತು ಮುದ್ಕಿ” ಅಂದಾಗ ಪಂಜರದಲ್ಲಿದ್ದ ಇನ್ನೊಂದು ಹುಂಜವನ್ನು ತೋರಿಸುತ್ತಾಳೆ. ಆಗ ಪೋಲಿಸ್ ಇನ್ಸ್‍ಪೆಕ್ಟರ್ “ಭೇಷ್ ಚೆನ್ನಾಗಿದೆ. ಮುದ್ಕಿ ಈ ಹುಂಜ ಹಿಡ್ಕೊಡು ........” ಇದನ್ನು ಅದ ಹುಡ್ಕೊಂಡು ಬರಾಕೆ ಕಳ್ಸ್ತೀನಿ.” ಎಂದು ಇದ್ದ ಇನ್ನೊಂದು ಹುಂಜವನ್ನು ಪೋಲಿಸರು ಎತ್ತುಕೊಂಡು ಹೋದರು. ಆ ಹಟ್ಟಿಯ ಜನರಿಗೆ ಮತ್ತು ಸಾಕವ್ವನಿಗೆ ಬರೀ ಜೀಪು ಬಿಟ್ಟೋದ ಧೂಳು ಮಾತ್ರ ಬೀದಿಯ ಒಳಗೆ ಆಡುತ್ತಿತ್ತು ಎಂದು ಒಡಳಾಳದ ಕಥೆಯು ಮುಗಿಯುತ್ತದೆ. ಒಂಬತ್ತು ಅಂಕಗಳಲ್ಲಿ ದಲಿತ ಕುಟುಂಬಗಳ ಕಥೆಯನ್ನು ಯಾವ ಯಾವ ವರ್ಗದವರು ಎಷ್ಠೆಷ್ಠು ಸಾಧ್ಯವೋ ಅಷ್ಠನ್ನೂ ಶೋಷಣೆ ಮಾಡುವ ಮೂಲವನ್ನು ಹೆಕ್ಕಿ ತೆಗೆದು ಮುಂದಾದರು. ಇಂತಹ ಅಹಿತಕರ ಘಟನೆಗಳು ಘಟಿಸುವ ಮುನ್ನವೇ ಅರಿತುಕೊಳ್ಳಬೇಕೆಂಬ ಎಚ್ಚರಿಕೆ ಸಂದೇಶವನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ. ಒಟ್ಟಾರೆ ಒಡಲಾಳ ಕಾದಂಬರಿಯು ಪ್ರಜಾಪ್ರಭುತ್ವದೊಳಗೆ ಹಟ್ಟಿಯ ಶೋಷಿತ ಕುತುಂಬಗಳು ಎದುರಿಸುವ ಸಂಕಷ್ಠಗಳ ಸಂಕಥನವಾಗಿದೆಯೆನ್ನಬಹುದು.
ಆಕರ ಗ್ರಂಥಗಳು