Tumbe Group of International Journals

Full Text


ಅಮ್ಮನಘಟ್ಟ ಸಾಂಸ್ಕೃತಿಕ ಅಧ್ಯಯನ

ಶ್ರೀನಿವಾಸ .ಜಿ

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ

ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ - 583 276

 

ಪ್ರಸ್ತಾವನೆ

ಪ್ರತಿಯೊಂದು ಪ್ರದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುತ್ತದೆ. ಒಂದು ಪ್ರದೇಶದ ವಿಶಿಷ್ಟವಾದ ಸಾಂಸ್ಕೃತಿಕ ಚರಿತ್ರೆಯನ್ನು ಅರಿಯುವಲ್ಲಿ ಸ್ಥಳೀಯ ಅಂಶಗಳು ಒಂದು ನಿರ್ಧಿಷ್ಟ ಚೌಕಟ್ಟನ್ನು ಸೃಷ್ಠಿಸಿಕೊಡುತ್ತದೆ. ಯಾವುದೇ ಒಂದು ಪ್ರದೇಶವನ್ನು ಸಂಸ್ಕೃತಿಯ ದೃಷ್ಠಿಯಿಂದ ನೋಡುವುದು ಅತ್ಯಂತ ಉಪಯುಕ್ತವಾದುದು. ಒಂದು ಪ್ರದೇಶದ ಸಾಂಸ್ಕೃತಿಕ ಇತಿಹಾಸದ ರಚನೆ ಸ್ಥಳೀಯ ಪ್ರದೇಶಗಳಿಂದ ಆರಂಭವಾಗಬೇಕು. ಗ್ರಾಮ ನಿಷ್ಪತ್ತಿ, ಆ ಪ್ರದೇಶದ ಭೌಗೋಳಿಕ ಪರಿಸರ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ವ್ಯವಸ್ಥೆ, ಆಚರಣೆಗಳು, ದೇವಾಲಯ, ಮೂರ್ತಿಶಿಲ್ಪ, ಶಾಸನಗಳು, ವೀರಗಲ್ಲುಗಳು ಮಾಸ್ತಿಗಲ್ಲುಗಳು, ಉಡುಗೆ, ತೊಡುಗೆ, ಆಹಾರಪದ್ಧತಿ, ಇವೆಲ್ಲವುಗಳಿಗಿಂತ ಮುಖ್ಯವಾಗಿ ಆ ಪ್ರದೇಶದಲ್ಲಿ ಮೈಗೂಡಿಕೊಂಡಿರುವ ಜಾನಪದ ಕಲೆಗಳು ಮಾನವನ ಸಾಂಸ್ಕೃತಿಕ ಬದುಕಿನಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ.

ವಿಭಿನ್ನ ಸಂಸ್ಕೃತಿಗೆ ಹೆಸರಾಗಿರುವ ಭಾರತದೇಶದಲ್ಲಿ ಸಂಸ್ಕೃತಿಯನ್ನು ವಸ್ತುನಿಷ್ಟವಾಗಿ ಪುನರಚಿಸಿ ಸ್ಥಳೀಯ ಮಟ್ಟದಲ್ಲಿ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಕಸಬಾ ಹೋಬಳಿಯಲ್ಲಿ ಅಮ್ಮನಘಟ್ಟ ಗ್ರಾಮವು ವಿವಿಧ ಸಂಸ್ಕೃತಿಯುಳ್ಳ ಸಾಂಸ್ಕೃತಿಕ ಪ್ರದೇಶವಾಗಿದೆ. ಆಧುನೀಕರಣ, ಜಾಗತೀಕರಣ, ಖಾಸಗೀಕರಣದ ಹಿನ್ನೆಲೆಯಲ್ಲೂ ಸಮಕಾಲೀನ ಕಾಲಘಟ್ಟದಲ್ಲಿ ಸಂಸ್ಕೃತಿಯ ಪಳೆಯುಳಿಕೆಯುಳ್ಳ ಜೀವಂತಿಕೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ. ಇಲ್ಲಿ ಕಂಡುಬರುವ ಕಲೆಗಳು, ಆಚರಣೆಗಳು, ನಂಬಿಕೆಗಳು, ಹಬ್ಬಗಳು, ದೇವಾಲಯಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಕರವುಗಲ್ಲುಗಳು ಸಂಸ್ಕೃತಿಯ ಪ್ರತಿಬಿಂಬಕ್ಕೆ ಆಕಾರಗಳಾಗಿವೆ.

ಆಧುನಿಕತೆ ಹೆಚ್ಚಾದಂತೆ ಒಂದು ಪ್ರದೇಶದ ಜನಜೀವನವನ್ನು ಚಿತ್ರಿಸುವ ಸಾಂಸ್ಕೃತಿಕ ಅಂಶಗಳು ಮಹತ್ವವನ್ನು ಕಳೆದುಕೊಳ್ಳುತ್ತಿರುವಾಗ ಆ ಪ್ರದೇಶದ ಸಂಸ್ಕೃತಿಯ ಹಿರಿಮೆಯನ್ನು ಗಣನೆಗೆ ತೆಗೆದುಕೊಂಡು ಪುನರಚನೆ ಮಾಡುವುದರಿಂದ ಭವಿಷ್ಯದ ಜನರ ಜೀವನ ಕ್ರಮದಲ್ಲಿ ಸಂಸ್ಕೃತಿಯನ್ನು ರೂಪಿಸಬಹುದು ಎಂಬ ಉದ್ದೇಶದಿಂದ ಪ್ರಸ್ತುತ ಅಮ್ಮನಘಟ್ಟ ಗ್ರಾಮದಲ್ಲಿ ಸಂಸ್ಕೃತಿ ಹೇಗೆ ಮೈಗೂಡಿಕೊಂಡಿದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಪ್ರದೇಶದ ಸಂಸ್ಕೃತಿಯನ್ನು ಅರಿಯಲು ಕ್ಷೇತ್ರ ಕಾರ್ಯಕೈಗೊಳ್ಳುವುದರ ಮೂಲಕ ಮತ್ತು ಹಿರಿಯ ವ್ಯಕ್ತಿಗಳೊಂದಿಗೆ ಚರ್ಚಿಸಿ ವಿಷಯ ಸಂಗ್ರಹಿಸಿ ಸಾಂಸ್ಕೃತಿಕ ಆಕರಗಳನ್ನು ಸಂಗ್ರಹಿಸಿ ವಿಷಯಾನುಸಾರ ವಿಶ್ಲೇಷಿಸಿ ಸಂಯೋಜಿಸುವ ಮೂಲಕ ಈ ಗ್ರಾಮದ ಸಂಸ್ಕೃತಿಯನ್ನು ಕಟ್ಟಿಕೊಡಲಾಗಿದೆ.

ಗ್ರಾಮಪರಿಚಯ

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಾಜಧಾನಿಗೆ ಹೆಬ್ಬಾಗಿಲಿನಂತಿರುವ ಕಲ್ಪತರುನಾಡು, ಶೈಕ್ಷಣಿಕ ತವರೂರಾದ ತುಮಕೂರು ಜಿಲ್ಲೆಯಲ್ಲಿ ಗುಬ್ಬಿ ತಾಲೂಕು ಒಂದಾಗಿದೆ. 1986ರ ನಂತರ ಗುಬ್ಬಿ ತಾಲೂಕು ಕೇಂದ್ರವಾಗಿದ್ದು ಕಸಬಾ, ನಿಟ್ಟೂರು, ಕಡಬ, ಸಿ.ಎಸ್.ಪುರ, ಚೇಳೂರು, ಹಾಗಲವಾಡಿ ಎಂಬ ಆರು ಹೋಬಳಿಗಳನ್ನು ಹೊಂದಿದ್ದು 300ಕ್ಕೂ ಅಧಿಕ ಗ್ರಾಮಗಳನ್ನು ಒಳಗೊಂಡಿದೆ. ಕಸಬಾ ಹೋಬಳಿಯಲ್ಲಿ ಕಂಡುಬರುವ ಗ್ರಾಮಗಳಲ್ಲಿ ಅಮ್ಮನಘಟ್ಟ ಗ್ರಾಮವು ಒಂದಾಗಿದೆ. ಇದು ತನ್ನದೇ ಆದಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ. ಗುಬ್ಬಿಯಿಂದ ತೆಂಕಣ ಭಾಗಕ್ಕೆ 05ಕಿ.ಮೀ ದೂರದಲ್ಲಿ ಅಮ್ಮನಘಟ್ಟ ಗ್ರಾಮವಿದೆ.

ಅಮ್ಮನಘಟ್ಟ ಎಂಬ ಹೆಸರು ಬರಲು ಕಾರಣವೇನು ಎಂಬ ವಿಷಯವನ್ನು ಹಿರಿಯರೊಡನೆ ಚರ್ಚಿಸಿದಾಗ ವೀರಭದ್ರ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಾಗ ತಳಪಾಯವನ್ನು ಹಾಕಲು ಭೂಮಿಯನ್ನು ಅಗೆಯುವಾಗ ಮುಂಡವಿಲ್ಲದ ಒಂದು ಸ್ತ್ರೀ ವಿಗ್ರಹ ದೊರಕಿದ್ದು ಅದರ ಮುಖದಲ್ಲಿ ಕೂದಲುಗಳು (ರೋಮ) ಕಂಡುಬಂದಿದ್ದರಿಂದ ಆ ಗ್ರಾಮಕ್ಕೆ ಅಮ್ಮನಗಡ್ಡ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಅಮ್ಮನಘಟ್ಟವಾಗಿದೆ ಎಂದು ಹೇಳುತ್ತಾರೆ.

ಪ್ರಾಕ್ತಾನಾದಾರದ ಹಿನ್ನೆಲೆಯಲ್ಲಿ ಗಮನಿಸಿದಾಗ ಅಮ್ಮ ಎಂದರೆ ಗ್ರಾಮದ ಅಧಿದೇವತೆ ಘಟ್ಟ ಎಂದರೆ ನೀರಿರುವ ತಾಣ ಅಥವಾ ಎತ್ತರದ ಪ್ರದೇಶ ಎಂದರ್ಥವನ್ನು ಕೊಡುತ್ತದೆ. ಇದನ್ನು ಗಮನಿಸಿದಾಗ ಈ ಗ್ರಾಮದಲ್ಲಿ ಸ್ತ್ರೀ ದೇವತೆಯಾದ ಮಾರಮ್ಮ (ಕೆಂಪಮ್ಮ) ಇದ್ದು ಊರ ಮುಂಭಾಗದಲ್ಲಿ ಕೆರೆ ಇರುವುದರಿಂದ ಅಮ್ಮನಘಟ್ಟ ಎಂದಾಗಿದೆ.

ಮೇಲಿನ ಎರಡು ಅಂಶಗಳ ಜೊತೆಗೆ ಮತ್ತೊಂದು ಮಹತ್ವದ ಅಂಶವಿದೆ. ಅಮ್ಮನಘಟ್ಟ ಎಂಬ ಹೆಸರಿರುವ ಒಂದು ತಾಮ್ರಶಾಸನ ಲಭ್ಯವಾಗಿದೆ. ಕರ್ನಾಟಕವನ್ನು ಆಳ್ವಿಕೆ ಮಾಡಿದ ಹೆಸರಾಂತ ಮನೆತನವಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಗುಬ್ಬಿ ಹೊಸಹಳ್ಳಿ ಒಂದು ಪಾಳೇಯಪಟ್ಟಾಗಿತ್ತು. ಈ ಪಾಳೇಯಪಟ್ಟಿನ ಹಿರೇಮಠದ ವಂಶಸ್ಥರಾದ ಲಿಂ|| ಚನ್ನಬಸವ ಆರಾಧ್ಯರು ಹೊನ್ನುಡಿಕೆಯಲ್ಲಿ ವಾಸವಾಗಿದ್ದು ಅವರ ಮನೆಯಲ್ಲಿ ದೊರಕಿರುವ ಈ ತಾಮ್ರಶಾಸನದಲ್ಲಿ ಅಮ್ಮನಘಟ್ಟದ ಉಲ್ಲೇಖವಿದೆ. ಈ ಶಾಸನ 101/2 ಅಂಗುಲ ಉದ್ದ 81/2 ಅಂಗುಲ ಅಗಲ 800 ಗ್ರಾಂ ತೂಕದ 03 ಮಿಲಿಮೀಟರ್ ದಪ್ಪದ ತಾಮ್ರಶಾಸನದ ಮೇಲೆ ಯಾವ ಮುದ್ರೆಯೂ ಇಲ್ಲ ಇದರ ಹಿಂಬದಿಯಲ್ಲಿ ಸೂರ್ಯ, ಚಂದ್ರ ಮತ್ತು ಲಿಂಗು ಮುದ್ರೆಯ ಚಿಹ್ನೆ ಇದೆ. ಈ ಶಾಸನದಲ್ಲಿ ಅಕ್ಷರ ದೋಷಗಳು ಕಂಡುಬರುತ್ತವೆ. ಈ ಶಾಸನದಲ್ಲಿ ಬಿದರೆ, ಗೌರೀಪುರ, ಅಮ್ಮನಘಟ್ಟ, ಲಕ್ಕೇನಹಳ್ಳಿ ಗ್ರಾಮಗಳ ಹೆಸರುಗಳು ಕಂಡುಬರುತ್ತವೆ. ಅಮ್ಮನಘಟ್ಟ ಗ್ರಾಮದ ಬಗ್ಗೆ ಲಿಖಿತವಾಗಿ ಸಿಕ್ಕಿರುವ ಪ್ರಥಮ ದಾಖಲೆಯಾಗಿದೆ.

ಬಿದಿರೆ ಸೀಮೆ, ಮಧ್ಯದ ಗೋಪುಪುರ ಇಂದು ಗೌರಿಪುರವಾಗಿದೆ. ತೆಂಕಲು ಅಂಮನಕಟಿತು, ಅಮ್ಮನಘಟ್ಟವಾಗಿದೆ. ಪಡುವಲು ಲಖೆನಹಳ್ಳಿ, ಲಕ್ಕೇನಹಳ್ಳಿ ಎಂದಾಗಿದೆ. ಹೀಗೆ ಈ ಶಾಸನದಲ್ಲಿ ಕಂಡುಬರುವ ಎಲ್ಲಾ ಹಳ್ಳಿಗಳನ್ನು ಈಗಲೂ ಗುರುತಿಸಬಹುದಾಗಿದೆ. ಈ ಶಾಸನದ ಅಂತ್ಯದಲ್ಲಿ ವಿಜಯನಗರದ ಅರಸರ ಒಪ್ಪವಾದ ಶ್ರೀ ವಿರೂಪಾಕ್ಷ ಎಂಬುದನ್ನು ಬರೆದಿದೆ. ಈ ಶಾಸನಾಧಾರದ ಹಿನ್ನೆಲೆಯಲ್ಲಿ ಗಮನಿಸಿದಾಗ 14-15ನೇ ಶತಮಾನದಲ್ಲಿ ಈ ಗ್ರಾಮ ಉಗಮಗೊಂಡಿದೆಯೆಂದು ತಿಳಿದುಬರುತ್ತದೆ.

ಭೌಗೋಳಿಕ ಪರಿಸರ ಮತ್ತು ವಿಸ್ತೀರ್ಣ

ಪ್ರತಿಯೊಂದು ಪ್ರದೇಶದ ಭೌಗೋಳಿಕ ಪರಿಸರದಲ್ಲಿ ಸಂಸ್ಕೃತಿಯು ಕೂಡ ತನ್ನ ಹುಟ್ಟು ಮತ್ತು ಅಂತ್ಯವನ್ನು ಕಂಡುಕೊಳ್ಳುತ್ತವೆ. ಒಂದು ಪ್ರದೇಶದ ಸಂಸ್ಕೃತಿಯ ವಿಕಾಸದಲ್ಲಿ ಭೌಗೋಳಿಕ ಅಂಶಗಳು ತುಂಬಾ ಸಹಕಾರಿಯಾಗಿವೆ. ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಮಾನವ ಸಂಸ್ಕೃತಿ ಬೆಳೆಯಬೇಕಾದರೆ ಅಲ್ಲಿನ ಹವಾಗುಣ. ಮಣ್ಣಿನ ರಚನೆ ಮತ್ತು ಫಲವತ್ತತೆ ಸಂಪತ್ತು ನದಿ ಬಯಲಿನಂತಹ ಅಂಶಗಳು ಕಾರಣವಾಗಿವೆ. ಉತ್ತಮ ಭೌಗೋಳಿಕ ಅಂಶಗಳನ್ನು ಒಳಗೊಂಡಿರುವ ಈ ಪ್ರದೇಶದಲ್ಲಿ. ಇಲ್ಲಿನ ಜನ ಸಂಸ್ಕೃತಿಯನ್ನು ತಿಳಿಯಲು ಸಹಕಾರಿಯಾಗಿ ನಿಲ್ಲುತ್ತವೆ. ಸಂಸ್ಕೃತಿಯ ದೃಷ್ಠಿಕೋನದಲ್ಲಿ ತನ್ನದೇ ಆದಂತಹ ವಿಶಿಷ್ಟ ಸ್ಥಾನ ಪಡೆದಿರುವ ಗುಬ್ಬಿ ತಾಲೂಕಿನಲ್ಲಿ ಅಮ್ಮನಘಟ್ಟ ತನ್ನದೇ ಆದಂತಹ ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಮೈಗೂಡಿಸಿಕೊಂಡಿದೆ.

ಅಮ್ಮನಘಟ್ಟ ಗ್ರಾಮವು ಕೋಡಿಹಟ್ಟಿ, ಹೊಸಹಟ್ಟಿ, ಮಜರೆ ಗ್ರಾಮಗಳು ಸೇರಿಕೊಂಡು ಇದೇ ಗ್ರಾಮದ ಭೋವಿ ಕಾಲೋನಿ, ತೋಟದ ಬೈಲು, ಸಿದ್ದನಂಜಪ್ಪನ ತೋಟ ಒಳಗೊಂಡ ಕಂದಾಯ ಗ್ರಾಮವಾಗಿದ್ದು, 880, 631818 ಹೆಕ್ಟೇರ್ಸ್ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ. 930.30 ಎಕರೆ ಖುಷ್ಕಿ ಭೂಮಿ. 96.12 ಎಕರೆ ತರಿ, 270.09ಎಕರೆ ಬಾಗಾಯ್ತು ಪ್ರದೇಶವಿದೆ. 86.16ಎಕರೆ ಗೋಮಾಳವನ್ನು ಹೊಂದಿದೆ. 13-19ರಿಂದ 140 ಉತ್ತರ ಅಕ್ಷಾಂಶ ಮತ್ತು 76-51ರಿಂದ 420 ಪೂರ್ವ ರೇಖಾಂಶಗಳ ನಡುವೆ ಕಂಡುಬರುತ್ತದೆ.

ಗ್ರಾಮದ ಭೂ ಮೇಲ್ಮೈ ಬಯಲು ಪ್ರದೇಶದಿಂದ ಕೂಡಿದ್ದು, ಸಮತಟ್ಟಾದ ಮರಳು ಮಿಶ್ರಿತ ಕೆಂಪು ಮಣ್ಣಿನ, ಕಪ್ಪುಮಣ್ಣಿನ ಕೃಷಿಗೆ ಯೋಗ್ಯವಾದ ಘಲವತ್ತಾದ ಭೂಮಿಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಹೆಚ್ಚು ಮರಳು ಮಿಶ್ರಿತ ಕೆಂಪು ಮಣ್ಣು ಕಂಡುಬರುವುದರಿಂದ ಕಡಿಮೆ ಮಳೆ ಬಿದ್ದರೂ ವಿವಿಧ ಬೆಳೆ ಬೆಳೆಯಲು ಅನುಕೂಲಕರವಾಗಿದೆ. ಯಾವುದೇ ಬೆಟ್ಟಗುಡ್ಡಗಳು ಕಂಡುಬರುವುದಿಲ್ಲ.

ಹವಾಮಾನ

ಗ್ರಾಮ ಪರಿಸರದ ವಾಯುಗುಣ ತಾಲೂಕು ಕೇಂದ್ರಕ್ಕೆ ಹೋಗ್ಗಿಕೊಂಡಂತೆಯೇ ಇದೆ. ಇಲ್ಲಿಯ ವಾಯುಗುಣ ಸಮಶೀತೋಷ್ಣ ಮಾದರಿಯಾಗಿದ್ದು ಮಳೆಗಾಲ, ಬೇಸಿಗೆ ಕಾಲ ಚಳಿಗಾಲ ಎಂದು ಮೂರು ಋತುಗಳು ಕಂಡುಬರುತ್ತವೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಸರಿಯಾದ ಸಮಯಕ್ಕೆ ಮಳೆ ಬೀಳುತ್ತಿಲ್ಲ. ವಾರ್ಷಿಕ ಸರಾಸರಿ 529 ಮಿ.ಮೀಟರ್ ಮಳೆಯಾಗುತ್ತಿದ್ದು ಅದರಲ್ಲೂ ಕ್ಷೀಣತೆವುಂಟಾಗಿದೆ. ಹುಣಸೆ, ಮಾವು, ಹಲಸು, ಹೊಂಗೆ, ಬೇವು, ಜಾಲಿ, ತೇಗ ಮುಂತಾದ ವಿವಿಧ ಜಾತಿಯ ಸಸ್ಯರಾಶಿಗಳು ಮಳೆಯನ್ನೇ ಅವಲಂಬಿಸಿವೆ. ಜೂನ್, ಜುಲೈ ತಿಂಗಳಿನಿಂದ ಸಸ್ಯಗಳು ನಿಧಾನವಾಗಿ ಹಚ್ಚ ಹಸಿರನ್ನು ಪಡೆಯಲು ಸಜ್ಜಾಗಿ ಆಗಸ್ಟ್ ಮಧ್ಯಭಾಗದ ವೇಳೆಗೆ ಅಚ್ಚ ಹಸಿರನ್ನು ಹುಟ್ಟು ಕಂಗೊಳಿಸುತ್ತವೆ. ಶೇ 300ಛಿ ನಿಂದ 400ಛಿ ವರೆಗೆ ಅಧಿಕ ತಾಪಮಾನವಿದ್ದರೆ ಚಳಿಗಾಲದಲ್ಲಿ 110ಛಿ ನಿಂದ 120ಛಿ ವರೆಗೆ ಕನಿಷ್ಟ ತಾಪಮಾನವಿರುತ್ತದೆ.

ಅರಣ್ಯ ಸಂಪತ್ತು ಮತ್ತು ಪ್ರಾಣಿ ಪಕ್ಷಿಗಳು

ಮಾನವ ಮತ್ತು ಅರಣ್ಯದ ನಡುವೆ ನಿಕಟವಾದ ಸಂಬಂಧವಿದೆ. ಶುದ್ದವಾದ ಗಾಳಿ, ನೀರು, ಮಣ್ಣಿನ ಘಲವತ್ತತೆ ಭೂಮಿಯ ತೇವಾಂಶವನ್ನು ಅರಣ್ಯ ಹಿಡಿದಿಡುತ್ತದೆ. ಅಮ್ಮನಘಟ್ಟದ ಪ್ರಾದೇಶಿಕ ವ್ಯಾಪ್ತಿಯಲ್ಲಿ 187.27273 ಹೆಕ್ಟೇರ್ಸ್‍ಗಳಷ್ಟು ಸಾಮಾಜಿಕ ಅರಣ್ಯವನ್ನು ಹೊಂದಿದೆ. ಗ್ರಾಮದ ದಕ್ಷಿಣದಿಂದ ಪಶ್ಚಿಮದವರೆಗೂ ಹರಡಿಕೊಂಡಿದೆ. ಯಾವುದೇ ಬೆಲೆ ಬಾಳುವ ಮರಗಳು ಮತ್ತು ದಟ್ಟವಾದ ಅರಣ್ಯ ಪ್ರದೇಶ ಕಂಡುಬರುವುದಿಲ್ಲ. ಅತ್ಯಧಿಕ ಮಳೆ ಬೀಳದೆ ಇರುವುದರಿಂದ ಎತ್ತರವಾದ ಮತ್ತು ದಪ್ಪವಾದ ಮರಗಳು ಕಂಡುಬರುವುದಿಲ್ಲ. ನೀಲಗಿರಿ, ತಂಗಡಿ, ತುಗ್ಗಲಿ, ಕಗ್ಗಲ, ಬಿದಿರು, ಹೊಂಗೆ, ಬೇವು ಮುಂತಾದ ಜಾತಿಯ ಮರಗಳು ಕಂಡುಬರುತ್ತವೆ. ಗ್ರಾಮದ ದಕ್ಷಿಣ ಭಾಗದಲ್ಲಿದ್ದ ಅರಣ್ಯವನ್ನು ಕಡಿದು ಇತ್ತೀಚೆಗೆ ಅರಣ್ಯ ಇಲಾಖೆ ಹೊಸದಾಗಿ ತೇಗ, ಸರ್ವೆ, ಅರ್ಕಿಲಸ್ ನಂತಹ ಬೆಲೆಬಾಳುವ ಗಿಡಗಳನ್ನು ಬೆಳೆಸುತ್ತಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿ ಸೌದೆಯನ್ನು ಒದಗಿಸಬಲ್ಲಂತಹ ಮರಗಳೇ ಹೆಚ್ಚಾಗಿವೆ. ಬಡವರ್ಗದವರು ವರ್ಷವಿಡೀ ಉರುವಲಿಗೆ ಅರಣ್ಯದ ಮರಗಳನ್ನೇ ಕಡಿದು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆಯವರು ರಕ್ಷಣೆಯ ದೃಷ್ಠಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇಂತಹ ಅರಣ್ಯ ಪ್ರದೇಶದಲ್ಲಿ ನರಿ, ಮುಂಗುಸಿ, ತೋಳ, ಕಾಡುಹಂದಿ, ಮುಳ್ಳಂದಿ ಮೊಲ, ಗೂಬೆ, ಕೋತಿ, ಉಡ ವಿವಿಧ ಜಾತಿಯ ಹಾವುಗಳು ಕಾಡು ಪ್ರಾಣಿಗಳಾಗಿವೆ. ಆಗಾಗ ಚಿರತೆಗಳು ವಲಸೆ ಬರುತ್ತವೆ. ಕಾಡುಪಕ್ಷಿಗಳಾದ ಹದ್ದು, ಕೋಗಿಲೆ, ನವಿಲು, ಗೌಜಲಕ್ಕಿ, ಕಾಡುಕೋಳಿ, ಗಿಳಿ, ಮರಕುಟಕ, ಗುಬ್ಬಚ್ಚಿ ಪಾರಿವಾಳದಂತಹ ಕಾಡು ಪಕ್ಷಿಗಳು ಕಂಡುಬರುತ್ತವೆ.

ಗ್ರಾಮದಲ್ಲಿ 2150 ಸಾಕುಪ್ರಾಣಿಗಳಿವೆ. ದನಗಳು, ಹಸುಗಳು, ಕುರಿಗಳು, ಮೇಕೆಗಳು, ಟಗರು, ಎಮ್ಮೆ, ಕೋಣಗಳಿವೆ, ಸುಮಾರು 794 ಸಾಕುಪಕ್ಷಿಗಳಿವೆ. ನಾಟಿಕೋಳಿ, ಗಿರಿರಾಜ ಕೋಳಿ, ಕಲ್ಲುಕೋಳಿ, ಟರ್ಕಿಕೋಳಿ, ನವಿಲಿನಂತಹ ಸಾಕುಪಕ್ಷಿಗಳಿವೆ. ಕೃಷಿಯ ಜೊತೆಯಲ್ಲೇ ಕೆಲವರು ಹೈನುಗಾರಿಕೆ ಅವಲಂಬಿಸಿರುವುದರಿಂದ ರೇಡಾಯನ್, ಜೆರ್ಸಿ ಹೆಚ್.ಎಫ್ ತಳಿಗಳ ಸೀಮೆಹಸುಗಳನ್ನು ಸಾಕಿದ್ದಾರೆ.

ಜಲಸಂಪತ್ತು

ಈ ಗ್ರಾಮದಲ್ಲಿ ಕೆರೆಗಳು, ಬಾವಿಗಳು, ಕೊಳವೆ ಬಾವಿಗಳು ನೀರಿನ ಸಂಪನ್ಮೂಲಗಳಾಗಿವೆ. ಅಮ್ಮನಘಟ್ಟ ಗ್ರಾಮದಲ್ಲಿ ಎರಡು ಕೆರೆಗಳು ಕಂಡುಬರುತ್ತವೆ. ಸರ್ವೆ ನಂ.151ರಲ್ಲಿ 77.38 ಎಕರೆ ವಿಸ್ತೀರ್ಣದ ದೊಡ್ಡ ಕೆರೆಯಿದೆ. ಸರ್ವೆ ನಂ.74ರಲ್ಲಿ 30.11 ಎಕರೆ ವಿಸ್ತೀರ್ಣವುಳ್ಳ ಊರ ಮುಂದಿನ ಕೆರೆಯಿದೆ. ಈ ಗ್ರಾಮವು ನೀರಾವರಿಗೆ ಈ ಎರಡು ಕೆರೆಯನ್ನು ಆಶ್ರಯಿಸಿದೆ. ಈ ಎರಡೂ ಕೆರೆಗಳಿಗೆ ಮಳೆಯ ನೀರಿನ ಜೊತೆಗೆ ಆಗಸ್ಟ್ ಕೊನೆಯಿಂದ ಅಕ್ಟೋಬರ್ ನವಂಬರ್ ತಿಂಗಳವರೆಗೆ ಮಾನವ ನಿರ್ಮಿತ ಕಾಲುವೆಗಳ ಮೂಲಕ ಹೇಮಾವತಿ ನದಿ ನೀರನ್ನು ಅರಿಸುತ್ತಾರೆ. ಇದರಿಂದ ಅಂತರ್ಜಲ ಸುಧಾರಣೆಗೆ ಅನುಕೂಲವಾಗಿದೆ. ಇತ್ತೀಚೆಗೆ ಬೀಳುವ ಮಳೆಯ ಪ್ರಮಾಣದಲ್ಲಿ ಕುಸಿತ ಉಂಟಾಗಿರುವುದಿಂದ ಮಳೆ ನೀರಿಗೆ ಕೆರೆಗಳು ತುಂಬುತ್ತಿಲ್ಲ. ನೀರಾವರಿಯಲ್ಲಿ ಕೆರೆಗಳನ್ನು ಹೊರತುಪಡಿಸಿದರೆ. ಬಾವಿಗಳು ಪ್ರಮುಖ ಪಾತ್ರವಹಿಸುತ್ತವೆ. ಹಿಂದೆ ಕಪಿಲೆ ಮತ್ತು ಏತದ ಮೂಲಕ ನೀರನ್ನು ಮೇಲಕ್ಕೆ ತೆಗೆಯುತ್ತಿದ್ದರು. ಇತ್ತೀಚೆಗೆ ತೆರೆದ ಬಾವಿಗಳು ನೀರಿಲ್ಲದೆ ಒಣಗಿ ಬಣಗುಡುತ್ತಿವೆ. ಸುಮಾರು 450 ಅಡಿ ಆಳದಿಂದ 1200 ಅಡಿ ಆಳದವರೆಗಿನ ಕೊಳವೆ ಬಾವಿಗಳನ್ನು ಕೊರೆಸಿ ಆ ಮೂಲಕ ನೀರನ್ನು ಹೊರತೆಗೆದು ಕೃಷಿಗೆ ಬಳಸಲಾಗುತ್ತಿದೆ.

ಕುಡಿಯುವ ನೀರಿಗಾಗಿ ಒಂದು ಎತ್ತರದ ಮೇಲ್ಪಾಟು ಇದೆ (ಓವರ್‍ಟ್ಯಾಂಕ್) ಇದಕ್ಕೆ ನೀರನ್ನು ಸಂಗ್ರಹಿಸಿ ಗ್ರಾಮಸ್ಥರಿಗೆ ಸಾರ್ವಜನಿಕ ಮತ್ತು ವಯಕ್ತಿಕ ಕೊಳಾಯಿ ಸಂಪರ್ಕಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಕಿರು ನೀರು ಸರಬರಾಜು ಯೋಜನೆಯಡಿಯಲ್ಲಿ 20ಕ್ಕೂ ಅಧಿಕ ಮಿನಿಟ್ಯಾಂಕ್‍ಗಳನ್ನು ಇಡಲಾಗಿದೆ. ಮತ್ತು ಒತ್ತುವ ಕೈಪಂಪುಗಳಿವೆ.

ಜನಸಂಖ್ಯೆ

ಅಮ್ಮನಘಟ್ಟ ಗ್ರಾಮದಲ್ಲಿ ಒಟ್ಟು 427 ಮನೆಗಳಿದ್ದು 2138 ಜನಸಂಖ್ಯೆಯನ್ನು ಹೊಂದಿದ್ದು 1086 ಪುರುಷರು 1052 ಮಹಿಳೆಯರಿದ್ದಾರೆ. 1000ಕ್ಕೆ 969ರಷ್ಟು ಲಿಂಗಾನುಪಾತವಿದೆ. ಶೇ.67.4%ರಷ್ಟು ಸಾಕ್ಷರತೆಯಿದೆ. ಇಲ್ಲಿ ಕಾಂಕ್ರಿಟ್ ಮನೆಗಳು ಹೆಂಚು ಮತ್ತು ಶೀಟ್‍ಮನೆಗಳಿವೆ. ಸರ್ಕಾರಿ ವಸತಿ ಯೋಜನೆಗಳಾದ ಆಶ್ರಯಮನೆಗಳು ಜನತಾಮನೆಗಳು ಇಂದಿರಾ ಆವಾಸ್ ಯೋಜನೆ, ಬಸವ ಯೋಜನೆಯಲ್ಲಿ ಮನೆ ಪಡೆದಿರುವ ಫಲಾನುಭವಿಗಳಿದ್ದಾರೆ.

 

ಪ್ರಾಗಿತಿಹಾಸ ಮತ್ತು ಚಾರಿತ್ರಿಕ ಹಿನ್ನೆಲೆ

ಒಂದು ನಿರ್ದಿಷ್ಟ ಪ್ರದೇಶದ ಸಾಂಸ್ಕೃತಿಕ ಚರಿತ್ರೆಯ ಮಹತ್ವವನ್ನು ಆ ಪ್ರದೇಶದಲ್ಲಿ ಮಾನವ ಬಳಸಿಬಿಟ್ಟು ಹೋಗಿರುವ ಪಳೆಯುಳಿಕೆಗಳು ಮತ್ತು ಅವರು ನಿರ್ಮಿಸಿರುವ ಹಲವಾರು ಸ್ಮಾರಕಾವಶೇಷಗಳಿಂದ ತಿಳಿಯಬಹುದು.

ಈ ಗ್ರಾಮವು ಪ್ರಾಗಿತಿಹಾಸ ಕಾಲದಿಂದಲೂ ಹೆಚ್ಚು ಮಹತ್ವ ಪಡೆದಿದೆ. ಈ ಗ್ರಾಮದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ, ಕ್ವಾರ್ಟ್‍ಜೈಟ್ ಶಿಲೆಯಿಂದ ಮಾಡಿರುವ ಮತ್ತು ಚಕ್ಕೆಗಳನ್ನು ಎಬ್ಬಿರುವ ಸೂಕ್ಷ್ಮ ಶಿಲಾಯುಗದ ಉಪಕರಣಗಳು ಪತ್ತೆಯಾಗಿವೆ. ಇದೇ ಗ್ರಾಮದ ತಳವಾರಿಕೆ ಕೆಲಸ ನಿರ್ವಹಿಸುವ ಗೋವಿಂದಯ್ಯನವರಿಗೆ ನೀಡಿರುವ ಸರ್ವೇನಂಬರ್ 159ರ ಇನಾಂ ಭೂಮಿಯಲ್ಲಿ ನವಶಿಲಾಯುಗದ ಒಂದು ಕೈಗೊಡಲಿ ಪತ್ತೆಯಾಗಿದೆ. ಡೋಲ್‍ರೈಟ್ ಶಿಲೆಯಿಂದ ತಯಾರಿಸಿದ್ದು ಬೂದು ಬಣ್ಣದಿಂದ ಕೂಡಿದೆ. ಗಡುಸಾದ, ಮತ್ತು ಭಾರವಾದ ತ್ರಿಕೋನಾಕಾರದ ಕೊಡಲಿಯು 21.ಸೆಂಮೀ ಉದ್ದ 7.5 ಸೆಂ.ಮೀ ಅಗಲವಾಗಿದೆ. ಕೊಡಲಿಯ ಒಂದು ಭಾಗ ಚೂಪಾಗಿದ್ದರೆ ಮತ್ತೊಂದು ಬದಿಯನ್ನು ಉಜ್ಜಿ ನಯಗೊಳಿಸಿರುವುದರಿಂದ ಹರಿತವಾಗಿದೆ.

ಈ ಆಯುಧವನ್ನು ಉಜ್ಜಿ ನಯಗೊಳಿಸಲು ಬಳಸಿರುವ ಒಂದು ಸಾಣೆಕಲ್ಲು ಕೂಡ ಪತ್ತೆಯಾಗಿದೆ. ಹಾಗಾಗಿ ಈ ಗ್ರಾಮವು ಪ್ರಾಗಿತಿಹಾಸದ ಜೊತೆ ಸಂಬಂಧ ಹೊಂದಿರುವುದು ತಿಳಿಯುತ್ತದೆ. ಆದರೆ ಇದು ಒಂದು ಪ್ರಾಗಿತಿಹಾಸಕಾಲದ ನೆಲೆಯಾಗಿತ್ತು ಎಂದು ಸ್ಪಷ್ಟವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಈ ಗ್ರಾಮವು ಪರೋಕ್ಷವಾಗಿ ಅನೇಕ ರಾಜಮನೆತಗಳ ಆಳ್ವಿಕೆಗೆ ಒಳಪಟ್ಟಿದೆಯೆಂದಾದರೂ ವಿಜಯನಗರ ಸಾಮ್ರಾಜ್ಯ ಕಾಲಕ್ಕಿಂತ ಪೂರ್ವ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಆಧಾರಗಳು ದೊರೆಯುವುದಿಲ್ಲ. ವಿಜಯನಗರ ಕಾಲಘಟ್ಟ, ವಿಜಯನಗರೋತ್ತರ ಕಾಲಕ್ಕೆ ಸಂಬಂಧ ಪಟ್ಟಂತಹ ವೀರಗಲ್ಲುಗಳು ಮತ್ತು ಧಾರ್ಮಿಕ ಸ್ಮಾರಕಗಳು ಕಂಡುಬರುತ್ತವೆ. ಇಂತಹ ಪುರಾತತ್ವ ಅವಶೇಷಗಳು ಸಂಸ್ಕೃತಿಯ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಭಾಗದಲ್ಲಿ ವಿಜಯನಗೋರತ್ತರ ಕಾಲದಲ್ಲಿ ಸಣ್ಣ ಪಾಳೇಯ ಪಟ್ಟುಗಳಾದ ಗುಬ್ಬಿ ಹೊಸಹಳ್ಳಿ ಪಾಳೇಯಗಾರರು, ಬಿದಿರೆ ಪಾಳೇಯಗಾರರು, ಹಾಗಲವಾಡಿ ಪಾಳೇಯಗಾರರು ವಿಜಯನಗರ ಕಾಲದಿಂದ ಪ್ರಸಿದ್ಧಿ ಪಡೆದ ಈ ಮನೆತನಗಳು ವಿಜಯನಗರದ ಅವನತಿಯ ನಂತರ ತಮ್ಮ ಸಾರ್ವಭೌಮತ್ವವನ್ನು ವಿಸ್ತರಿಸಿಕೊಂಡು ಜನಪ್ರಿಯ ಪ್ರಭುಗಳೆನಿಸಿದರು. ಸ್ಥಳೀಯವಾಗಿ ಪ್ರಬಲರಾಗಿದ್ದ ಪಾಳೇಯಗಾರರು ತಮ್ಮ ತಮ್ಮ ಪಾಳೇಯಪಟ್ಟುಗಳನ್ನು ಸಂಸ್ಥಾನವೆಂದು ಕರೆದುಕೊಂಡು ಕೇಂದ್ರಸ್ಥಾನಗಳನ್ನಾಗಿ ಮಾಡಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ಇಡಿತದಲ್ಲಿಟ್ಟುಕೊಂಡು ಆಳ್ವಿಕೆ ನಡೆಸಿದ್ದಾರೆ. ಆ ಮೂಲಕ ತಮ್ಮನ್ನು ಅರಸರೆಂದು ಹೆಸರಿಸಿಕೊಳ್ಳಲು ಶ್ರಮಿಸಿದ್ದಾರೆ.

ಮೈಸೂರು ಒಡೆಯರ ಕಾಲದಲ್ಲಿ ಘೌಜುದಾರರ ಆಳ್ವಿಕೆ ಪ್ರಾರಂಭಗೊಂಡಿತು. ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿ ಪಾಳೇಯಗಾರರು ಅಧಿಕಾರ ಕಳೆದುಕೊಂಡು ಕುಗ್ಗಿ ಹೋದರು. ಕಾಲಾನಂತರದಲ್ಲಿ ಮೈಸೂರು ಸಂಸ್ಥಾನವನ್ನು ಬ್ರಿಟೀಷರು ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡರು ಶೋಷಣೆಗೆ ಒಳಗಾದ ಜನರು ಬ್ರಿಟೀಷರ ವಿರುದ್ಧವಾಗಿ ಗಾಂಧೀಜಿಯವರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪ್ರಭಾವದಿಂದ ಬ್ರಿಟೀಷರ ವಿರುದ್ದ ಹೋರಾಟಕ್ಕೆ ಇಡೀ ರಾಷ್ಟ್ರವೇ ಆಂದೋಲನದಲ್ಲಿ ಪಾಲ್ಗೊಂಡಿತ್ತು. ಈ ಅಮ್ಮನಘಟ್ಟ ಗ್ರಾಮದ ಜನತೆಯು ಅದರಿಂದ ಹೊರತಾಗಿರಲಿಲ್ಲ. ಸ್ವಾತಂತ್ರ್ಯ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಈ ಗ್ರಾಮದ ಜನರು ಗಾಢವಾದ ಅಭಿಮಾನವುಳ್ಳವರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಗ್ರಾಮದ ನಿವೃತ್ತ ಶಿಕ್ಷಕರಾದ ದಿವಂಗತ ಬಸವಲಿಂಗಯ್ಯ, ದಿವಂಗತ ಸಿದ್ದಲಿಂಗಪ್ಪ, ದಿವಂಗತ ಅಡವೀಶಪ್ಪ, ದಿವಂಗತ ಮೃತ್ಯುಂಜಯಪ್ಪ, ದಿವಂಗತ ಸಿದ್ಧನಂಜಪ್ಪ, ಬ್ರಿಟೀಷರ ವಿರುದ್ಧ ಹೋರಾಡಿದ ಪುಣ್ಯ ಪುರುಷರಾಗಿದ್ದು ಗ್ರಾಮದ ಹೆಮ್ಮೆಯ ಪ್ರತೀಕವಾಗಿದ್ದಾರೆ.

ದೇವಾಲಯಗಳು

ದೇವಾಲಯಗಳು ಈ ಗ್ರಾಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಸಾಂಪ್ರದಾಯಿಕ ಸಂಸ್ಕೃತಿಯುಳ್ಳ ಗ್ರಾಮದಲ್ಲಿ ದೇವತಾರಾದನೆಯು ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿದೆ. ಇಲ್ಲಿನ ಜನತೆ ನೆಮ್ಮದಿಯ ಜೀವನಕ್ಕೆ ಪೂರಕವಾಗಿ ಕಂಡುಕೊಂಡಂತಹ ಮಾರ್ಗವೇ ದೇವತೆಯ ಆರಾಧನೆ. ಇಲ್ಲಿನ ಜನರು ನಂಬಿರುವ ಅಭೂತಪೂರ್ವ ಶಕ್ತಿಗಳಲ್ಲಿ ದೈವಿಕ ಶಕ್ತಿಯು ಪ್ರಮುಖವಾದುದಾಗಿದೆ. ಈ ಗ್ರಾಮದಲ್ಲಿ ನಾಲ್ಕು ದೇವಾಲಯಗಳಿದ್ದು ಎರಡು ಶೈವ, ಒಂದು ವೈಷ್ಣವ ಮತ್ತು ಒಂದು ಶಾಕ್ತ ಪಂಥದ ದೇವಾಲಯಗಳಾಗಿವೆ. ಇಲ್ಲಿನ ಶೈವ ದೇವಾಲಯಗಳು ವಿಜಯನಗರ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದು ಇತ್ತೀಚೆಗೆ ಇವುಗಳನ್ನು ಜೀರ್ಣೋದ್ದಾರಗೊಳಿಸಿದ್ದರೆ ವೈಷ್ಣವ ದೇವಾಲಯ ಪಾಳೇಯಗಾರರ ಕಾಲದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ವೈಷ್ಣವ ದೇವಾಲಯವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗಿದೆ.

ಇಲ್ಲಿನ ಮಹಾಲಿಂಗೇಶ್ವರ ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭಗುಡಿ, ಸುಖನಾಸಿ ಮತ್ತು ಮಂಟಪವನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿ ಲಿಂಗುವಿದೆ. ಇದರಲ್ಲಿ ಬ್ರಹ್ಮಪೀಠ, ವಿಷ್ಣುಪೀಠ ಪಾಣಿಪೀಠವಿದ್ದು, ಪಾಣಿಪೀಠದ ಮೇಲೆ ಲಿಂಗುವನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಹಿಂಭಾಗದಲ್ಲಿ ಲೋಹದಿಂದ ನಿರ್ಮಿಸಿರುವ ಮಹಾಲಿಂಗೇಶ್ವರನ ಮೂರ್ತಿಯಿದೆ. ಮತ್ತು ಪ್ರಭಾವಳಿಯಿದೆ. ಗರ್ಭಗುಡಿಯ ಮುಂದೆ ಸುಖನಾಸಿಯಿದ್ದು ಸುಮಾರು 1/2 ಅಡಿ ವೇದಿಕೆಯ ಮೇಲೆ ಗರ್ಭಗುಡಿಯಲ್ಲಿನ ಲಿಂಗುವಿಗೆ ಅಭಿಮುಖವಾಗಿ ಕಪ್ಪುಶಿಲೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆಕರ್ಷಕ ಡುಬ್ಬ ಅಲಂಕಾರಿಕ ಸರಪಳಿಗಳಿವೆ. ಇದೇ ಭಾಗದಲ್ಲಿ ಉತ್ತರಾಭಿಮುಖವಾಗಿ ಒಂದು ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ಸುಖನಾಸಿಯ ಮುಂದೆ ಮಂಟಪವಿದ್ದು ಅದರಲ್ಲಿ ಎರಡು ವೃತ್ತಾಕಾರದ ಸಾಧಾರಣ ಕಂಭಗಳಿದ್ದು ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ದೇವಾಲಯದ ಮುಂಭಾಗದಲ್ಲಿ ಅಭಿಮುಖವಾಗಿ ನಿರ್ಮಿಸಿರುವ ನಂದಿ ಮಂಟಪವಿದೆ. ದೇವಾಲಯದ ಮೇಲ್ಛಾವಣಿಯ ಮುಂದಿನ ಭಾಗದಲ್ಲಿ ದೇವ ಕೋಷ್ಠಕಗಳಿದ್ದು ಮಧ್ಯದ ಕೋಷ್ಠಕದಲ್ಲಿ ಈಶ್ವರ, ಗಣೇಶ ಮತ್ತು ಪಾರ್ವತಿ ಶಿಲ್ಪಗಳಿವೆ. ಅದರ ಮೇಲೆ ಕಳಶವಿದೆ. ಅದರ 2 ಬದಿಯ ಕೋಷ್ಠಕಗಳಲ್ಲಿ ಒಂದರಲ್ಲಿ ಗಣೇಶ ತಬಲ ಹಿಡಿದು ನಿಂತಿರುವ ಮತ್ತು ಮತ್ತೊಂದು ವೀಣೆ ಹಿಡಿದು ನಿಂತಿರುವ ಶಿಲ್ಪಗಳಿವೆ. ದೇವಾಲಯದ ಮೇಲೆ ನಾಲ್ಕು ಮೂಲೆಗಳಲ್ಲಿ ನಾಲ್ಕು ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಒಂದು ಕಲ್ಲಿನ ಮಂಟಪವಿದೆ ಅಮವಾಸ್ಯೆಯ ವಿಶೇಷ ಪೂಜೆಯಲ್ಲಿ ಮತ್ತು ಇತರ ಧಾರ್ಮಿಕ ಕಾರ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ದೇವಾಲಯದ ಮುಂದಿನ ಆವರಣದಲ್ಲಿ ಒಂದು ಮಜ್ಜನ ಭಾವಿಯಿದ್ದು ನೀರಿಲ್ಲದೆ ಬತ್ತಿಹೋಗಿದೆ. ಈ ದೇವಾಲಯ ಕೆರೆಯ ದಡದಲ್ಲಿದ್ದು ಮುಜರಾಯಿ ಇಲಾಖೆಗೆ ಸೇರಿದೆ.

ವೀರಭದ್ರ ದೇವಾಲಯ

ವೀರಭದ್ರ ದೇವಾಲಯವು ಊರ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿದೆ. ಈ ದೇವಾಲಯದಲ್ಲಿ ಗರ್ಭಗುಡಿ, ಸುಖನಾಸಿ, ಮಂಟಪ, ತೆರೆದ ಮಂಟಪಗಳಿವೆ. ಗರ್ಭಗುಡಿಯಲ್ಲಿ 11/2 ಅಡಿ ಪೀಠದ ಮೇಲೆ ವೀರಭದ್ರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಹಿಂದೆ ಲೋಹದ ಪ್ರಭಾವಳಿಯಿದೆ. ವೀರಭದ್ರ ಮೂರ್ತಿಯ ಮುಖವಾಡ ಮತ್ತು ಕತ್ತಿಯನ್ನು ಬೆಳ್ಳಿಯಿಂದ ಮಾಡಿಸಿ ಇಟ್ಟಿದ್ದಾರೆ. ಗರ್ಭಗುಡಿಯ ಮುಂದೆ ಸುಖನಾಸಿಯಿದ್ದು ಇದರ ಬಾಗಿಲುವಾಡಕ್ಕೆ ಹಿತ್ತಾಳೆಯಿಂದ ಮಾಡಿರುವ ಬಾಗಿಲುವಾಡವನ್ನು ಜೋಡಿಸಿದ್ದಾರೆ. ಅಲಂಕಾರಿಕ ಲತಾ ಸುರುಳಿಗಳು. ಎಡ ಮತ್ತು ಬಲಬದಿಯಲ್ಲಿ ಆಕರ್ಷಕ ದ್ವಾರಪಾಲಕ ವಿಗ್ರಹಗಳಿವೆ. ಲಲ್ಲಾಟ ಬಿಂಬವು ತುಂಬಾ ಆಕರ್ಷಣೀಯವಾಗಿದ್ದು ನಂದಿ ಮತ್ತು ಶಿವಲಿಂಗವನ್ನು ಇಡಲಾಗಿದೆ. ಸುಖನಾಸಿಯ ಒಳಭಾಗದಲ್ಲಿ ಬಲಭಾಗಕ್ಕೆ ಗಣೇಶ ಮೂರ್ತಿಯಿದ್ದರೆ ಎಡಭಾಗದಲ್ಲಿ ಉತ್ಸವ ಮೂರ್ತಿಗಳನ್ನಿಟ್ಟಿದ್ದಾರೆ. ಸುಖನಾಸಿಯ ಮುಂದೆ ಮಂಟಪವಿದ್ದು ಎರಡು ಕಂಭಗಳಿವೆ. ಇವುಗಳು ಮಂಟಪದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ಕಂಭಗಳಲ್ಲಿ ಮೇಲ್ಭಾಗ ಮತ್ತು ಕೆಳಭಾಗ ಚೌಕಾಕಾರವಾಗಿದ್ದು 8 ಪಟ್ಟಿಕೆಗಳಿವೆ. ಸಾಧಾರಣವಾದ ನಾಲ್ಕು ಮುಖದ ಬೋಧಿಗೆಗಳಿವೆ. ದೇವಾಲಯದ ಮೇಲ್ಛಾವಣಿಯ 4 ಮೂಲೆಗಳಲ್ಲಿ ಎರಡು ದೇಹ ಒಂದು ಮುಖವುಳ್ಳ ನಂದಿಗಳಿವೆ. ಮೇಲ್ಛಾವಣಿಯ ಮೇಲ್ಭಾಗದ ಮುಂಭಾಗದಲ್ಲಿ ಅಲಂಕಾರಿಕ ದೇವಕೋಷ್ಠಕವಿದ್ದು ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮೇಲೆ ಕಳಶವಿದೆ. ಗರ್ಭಗುಡಿಯ ಮೇಲೆ ಸ್ಥಳೀಯ ಶೈಲಿಯ ಶಿಖರವಿದ್ದು ಶಿಖರದ ಎರಡು ಮೂಲೆಯಲ್ಲಿ ಹಿಂದಕ್ಕೆ ಮುಖಮಾಡಿರುವ ಎರಡು ನಂದಿಗಳಿದ್ದರೆ ಶಿಖರದ ಕಳಶದ ಕೆಳಭಾಗದಲ್ಲಿ 4 ದಿಕ್ಕುಗಳಿಗೂ 2 ದೇಹದ ಒಂದು ಮುಖವುಳ್ಳ ನಂದಿಗಳಿವೆ. ಶಿಖರದ ಮೇಲೆ ಲೋಹದಿಂದ ಮಾಡಿರುವ ಕಳಶವನ್ನು ಇಡಲಾಗಿದೆ. ಈ ದೇವಾಲಯವು ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿದೆ.

ರಂಗನಾಥಸ್ವಾಮಿ ದೇವಾಲಯ

ಅಮ್ಮನಘಟ್ಟ ಊರ ಮುಂದೆ ಪೂರ್ವಾಭಿಮುಖವಾಗಿ ಈ ದೇವಾಲಯವಿದೆ. ಈ ದೇವಾಲಯದಲ್ಲಿ ಗರ್ಭಗುಡಿ ಮತ್ತು ಮುಖಮಂಟಪವಿದೆ. ಗರ್ಭಗುಡಿಯಲ್ಲಿ ಸುಮಾರು 1 ಅಡಿ ಎತ್ತರದ ವೇದಿಕೆಯ ಮೇಲೆ ರಂಗನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಹಿಂದೆ ಲೋಹದ ಪ್ರಭಾವಳಿಯಿದೆ. ಗರ್ಭಗುಡಿಯ ಮುಂದೆ ಮಂಟಪವಿದ್ದು ಮಂಟಪದ ಎಡಭಾಗದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಬಲಭಾಗದಲ್ಲಿ ರಾಮ, ಲಕ್ಷ್ಮಣ, ಸೀತೆಯನ್ನು ಒಳಗೊಂಡ ಲೋಹದ ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ಎರಡು ಸಾಧಾರಣ ಕಂಭಗಳಿದ್ದು ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ದೇವಾಲಯದ ಮುಂದೆ ಸುಮಾರು ನಾಲ್ಕು ಅಡಿ ಎತ್ತರದ ವೇದಿಕೆಯ ಮೇಲೆ 6 ಅಡಿ ಎತ್ತರದ ದೀಪಸ್ಥಂಭವಿದೆ. ಗರ್ಭಗುಡಿಯ ಮೇಲ್ಛಾಗದಲ್ಲಿ ಶಿಖರವಿದೆ. ಶಿಖರದ ತುದಿಯಲ್ಲಿ ಲೋಹದ ಕಳಶವನ್ನು ಇಡಲಾಗಿದೆ. ಈ ದೇವಾಲಯ ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ.

ಶ್ರೀ ಕೆಂಪಮ್ಮ ದೇವಾಲಯ (ಮಾರಮ್ಮ ದೇವಾಲಯ)

ಊರ ಮುಂಭಾಗದಲ್ಲಿ ರಂಗನಾಥ ಸ್ವಾಮಿ ದೇವಾಲಯದ ಎಡಭಾಗದಲ್ಲಿ ಗ್ರಾಮದ ಶಕ್ತಿ ದೇವತೆಯಾದ ಮಾರಮ್ಮನ ದೇವಾಲಯವಿದೆ. ಈ ದೇವಾಲಯದಲ್ಲಿ ಗರ್ಭಗುಡಿ ಮತ್ತು ಮುಖಮಂಟಪವಿದೆ ಗರ್ಭಗುಡಿಯಲ್ಲಿ ಹಿಂದೆ ಗೂಡಿನಲ್ಲಿ ಮಾರಮ್ಮನನ್ನು ಇಟ್ಟು ಪೂಜೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಶಿಲೆಯಿಂದ ಮಾಡಿರುವ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲಾಗಿದೆ. ಗೂಡಿನಲ್ಲಿದ್ದ ದೇವರನ್ನು ಮೆರವಣಿಗೆ ದೇವರಾಗಿ ಮುಖಮಂಟಪದಲ್ಲಿಟ್ಟಿದ್ದಾರೆ. ಮಂಟಪದಲ್ಲಿ ಎರಡು ಸಾಧಾರಣ ಕಂಭಗಳಿದ್ದು ಇಡೀ ದೇವಾಲಯದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ.

ವೀರಗಲ್ಲುಗಳು ಮತ್ತು ಮಹಾಸತಿಕಲ್ಲು

ಅಮ್ಮನಘಟ್ಟದ ಪಾರಂಪರಿಕ ಸಂಸ್ಕೃತಿಯನ್ನು ಬಿಂಬಿಸುವ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳು ಕಂಡುಬಂದಿವೆ. ಈ ಗ್ರಾಮದ ಜನರು ಧಾರ್ಮಿಕ ನೆಲೆಗಟ್ಟಿನಿಂದ ಹೆಚ್ಚು ಪ್ರಭಾವಿತಗೊಂಡಿದ್ದು ಪ್ರಾಚೀನ ಕಾಲದಿಂದಲೂ ಸದ್ಗತಿ ಮತ್ತು ಮೋಕ್ಷವನ್ನು ಪಡೆಯುವುದನ್ನೇ ತಮ್ಮ ಗುರಿಯಾಗಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನದಲ್ಲಿ ಮರಣ, ಸಮಾಧಿ, ಬಲಿದಾನ, ವೀರಮರಣ ಮುಂತಾದವುಗಳು ಸಮಾಜದಲ್ಲಿ ಪರಂಪರೆಯಿಂದ ಬಂದಿರುವ ಆಚರಣೆಗಳಾಗಿವೆ. ಇಂತಹ ಅಸಾಮಾನ್ಯ ವಿಶಿಷ್ಟ ಮರಣಗಳನ್ನು ಪ್ರಾಚೀನ ಕಾಲದಿಂದಲೂ ಗುರುತಿಸಬಹುದಾಗಿದೆ. ಇದರ ನೆನಪಿಗಾಗಿ ಕಲ್ಲಿನಲ್ಲಿ ವೀರರ ಕೆತ್ತನೆ, ಮಹಾಸತಿಗಲ್ಲು ಪ್ರತಿಷ್ಠಾಪಿಸುವ ಪರಂಪರೆ ಸಮಾಜದ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ.

ಅಮ್ಮನಘಟ್ಟ ಗ್ರಾಮದಲ್ಲಿ ನಾಲ್ಕು ವೀರಗಲ್ಲುಗಳು ಕಂಡುಬರುತ್ತವೆ. ಈ ವೀರಗಲ್ಲುಗಳ ಮೇಲೆ ಯಾವುದೇ ಶಾಸನ ಕಂಡುಬರದೇ ಇರುವುದರಿಂದ ಕಾಲವನ್ನು ನಿರ್ಧರಿಸುವಲ್ಲಿ ಗೊಂದಲ ಉಂಟಾಯಿತು. ಇತಿಹಾಸ ತಜ್ಞರ ಜೊತೆಯಲ್ಲಿ ಚರ್ಚಿಸಿದಾಗ ಈ ವೀರಗಲ್ಲುಗಳು ಸುಮಾರು 15ನೇ ಶತಮಾನಕ್ಕೆ ಸಂಬಂಧಪಟ್ಟವು ಎಂಬ ಒಮ್ಮತಕ್ಕೆ ಬರಲಾಗಿದೆ.

ಒಂದನೇ ವೀರಗಲ್ಲು, ಇದೇ ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಅರ್ಚಕರಾದ ಲೇ||ಚಂದ್ರಯ್ಯನವರ ಜಮೀನಿನ ತೋಟದ ಬದುವಿನಲ್ಲಿ ಇದೆ. ಇದು ಪ್ರಥಮ ನೋಟಕ್ಕೆ ವೀರಗಲ್ಲಂತೆ ಕಂಡರೂ. ಅದರ ಎಡ ಮತ್ತು ಬಲಕ್ಕೆ ಇರುವ ಕಲ್ಲು ಚಪ್ಪಡಿಗಳನ್ನು ಗಮನಿಸಿದಾಗ ವೀರರ ಗುಡಿಯಾಗಿದ್ದಿರಬಹುದು ಎಂದು ಸ್ಪಷ್ಟವಾಗುತ್ತದೆ. ಆ ಕಲ್ಲುಗಳು ಇಂದಿಗೂ ಕೂಡ ಅಲ್ಲೇ ಇವೆ. ಇಲ್ಲಿ ಇರುವ ವೀರಗಲ್ಲು ಪೂರ್ವಾಭಿಮುಖವಾಗಿದ್ದು ಸುಮಾರು ಎರಡು ಅಡಿ ಅಗಲ ಮತ್ತು ಸುಮಾರು ಎರಡೂವರೆ ಅಡಿ ಎತ್ತರವಾಗಿದೆ. ಇದು ಮೊಣಕಾಲಿನವರೆಗೆ ಭೂಮಿಯಲ್ಲಿ ಹೂತಿರುವುದರಿಂದ ನಿರ್ಧಿಷ್ಟವಾಗಿ ಅಳತೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಮತ್ತು ಹೆಚ್ಚಿನ ವಿವರಗಳು ತಿಳಿದುಬರುವುದಿಲ್ಲ. ಈ ವೀರಗಲ್ಲಿನಲ್ಲಿ ವೀರನು ಎಡಗೈಯಲ್ಲಿ ಬಿಲ್ಲನ್ನು, ಬಲಗೈಯಲ್ಲಿ ಬಾಣವನ್ನು ಹಿಡಿದು ಹೋರಾಡುತ್ತಿರುವಂತೆ ಚಿತ್ರಿಸಲಾಗಿದೆ. ವೀರನು ಉದ್ದನೆಯ ಜಡೆಯನ್ನು ಬಿಟ್ಟಿದ್ದು ಸಮರೋಚಿತವಾದ ಉಡುಪನ್ನು ಧರಿಸಿದ್ದಾನೆ. ಕೈಗಳಿಗೆ ಕಡಗವನ್ನು, ಕೊರಳಿಗೆ ಕಂಠಾಭರಣ, ಸೊಂಟದಲ್ಲಿ ಕಟಿಸೂತ್ರವನ್ನು ಧರಿಸಿರುವನು ವೀರನ ಮೇಲ್ಭಾಗದಲ್ಲಿ ಕಲ್ಲಿನ ತುದಿಯ ಎರಡು ಭಾಗದಲ್ಲಿ ಸೂರ್ಯ ಮತ್ತು ಚಂದ್ರನನ್ನು ಚಿತ್ರಿಸಲಾಗಿದೆ. ಸೂರ್ಯನನ್ನು ಚಿತ್ರಿಸಿರುವ ಕಡೆಯಲ್ಲಿ ಅಕ್ಷರಗಳನ್ನು ಕೊರೆಯಲು ಪ್ರಯತ್ನಿಸಿರುವಂತೆ ಗೋಚರಿಸುತ್ತದೆ. ಆದರೆ ಅದರ ಸ್ಪಷ್ಟತೆಯಿಲ್ಲ

ಎರಡನೇ ವೀರಗಲ್ಲು ಇನಾಂ ಭೂಮಿ ಬೋರನಾಯ್ಕನ ಜಮೀನಿನಲ್ಲಿ ಹಲಸಿನ ಗಿಡದ ಕೆಳಗೆ ನೆಲದ ಮೇಲೆ ಬಿದ್ದಿದೆ. ಇದು ವಿನಾಶದ ಅಂಚಿನಲ್ಲಿದ್ದು ಏನನ್ನೂ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ ವೀರಗಲ್ಲಿನಲ್ಲಿ ಕಲ್ಲಿನ ಚಕ್ಕೆಗಳು ಎದ್ದಿವೆ. ಕಪ್ಪು, ನೀಲಿ ಛಾಯೆಯುಳ್ಳ ಬಳಪದ ಕಲ್ಲಿನಲ್ಲಿ ಕೆತ್ತಲಾಗಿದೆ. ಇದರಲ್ಲಿ ಇಬ್ಬರು ವೀರರನ್ನು ಧನುರ್‍ದಾರಿಗಳನ್ನಾಗಿ ಬಿಡಿಸಲಾಗಿದೆ. ವೀರರು ಸಮರೋಚಿತವಾದ ಉಡುಪನ್ನು ಧರಿಸಿ ಕೆಳಗೆ ಕಚ್ಚೆಯನ್ನು ಧರಿಸಿರುವಂತೆ ಕಾಣುವುದನ್ನು ಬಿಟ್ಟರೆ ಬೇರೆ ಯಾವುದೇ ಅಂಶಗಳಲ್ಲಿ ಸ್ಪಷ್ಟತೆಯಿಲ್ಲ. ಇಬ್ಬರು ವೀರರು ಕೂಡ ಬಲಗೈಯಲ್ಲಿ ಕತ್ತಿ ಎಡಗೈಯಲ್ಲಿ ಗುರಾಣಿ ಇಡಿದಿರುವಂತೆ ಚಿತ್ರಿಸಲಾಗಿದೆ. ಇಬ್ಬರು ವೀರರ ತಲೆಯ ತುರುಬನ್ನು ಬಲಭಾಗಕ್ಕೆ ಬಿಡಿಸಲಾಗಿದೆ. ಇದು ಸುಮಾರು 2.5 ಅಡಿ ಉದ್ದ 2 ಅಡಿ ಅಗಲವಾಗಿದೆ.

3ನೇ ವೀರಗಲ್ಲು ರಾಮಪ್ಪನ ಓಣಿಯಲ್ಲಿದೆ ಅಮ್ಮನಘಟ್ಟದಿಂದ ತಿಪ್ಪೂರಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಬದಿಯಲ್ಲಿದೆ. ಈ ವೀರಗಲ್ಲು ಅತ್ಯಂತ ಆಕರ್ಷಣೀಯವಾಗಿದ್ದು ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಸುಮರು 3 ಅಡಿ ಎತ್ತರವಾಗಿದ್ದು 2 ಅಡಿ ಅಗಲವಾಗಿದೆ. ವೀರಗಲ್ಲಿನಲ್ಲಿ ಕುದುರೆಯ ಮೇಲೆ ವೀರ ಆಸೀನ ಭಂಗಿಯಲ್ಲಿ ಕುಳಿತ್ತಿದ್ದು ಎಡಗೈಯಲ್ಲಿ ಕುದುರೆಯ ಲಗಾಮನ್ನು ಇಡಿದು ಬಲಗೈಯಲ್ಲಿ ಕಠಾರಿಯನ್ನು ಹಿಡಿದು ಹಿಂದಕ್ಕೆ ಓರೆಗಣ್ಣಿನಿಂದ ತಿರುಗಿ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ವೀರನು ಕೈ ಮತ್ತು ಕಾಲ್ಗಳಿಗೆ ಕಡಗವನ್ನು ಧರಿಸಿದ್ದು ತಲೆಗೆ ಪೇಟ ಕಟ್ಟಿರುವಂತೆ ಭಾಸವಾಗುತ್ತದೆ. ಕೊರಳಿಗೆ ಕಂಠಿಹಾರ ಧರಿಸಿದ್ದಾನೆ. ಕುದುರೆಗೆ ಹಾಕಿರುವ ಮುಖವಾಡ ಲಗಾಮು ಸ್ಪಷವಾಗಿ ಗೋಚರವಾಗುತ್ತದೆ. ಕುದುರೆ ಕಾಲುಗಳಿಗೂ ಕಾಲ್ಗಳಿಗೆ ಕಡಗವನ್ನು ಹಾಕಲಾಗಿದ್ದು ಕುದುರೆಯು ಮುಂದಿನ ಕಾಲನ್ನು ಎತ್ತಿ ಮುಂದೆ ಹೋಗುತ್ತಿರುವಂತೆ ಕಾಣುತ್ತದೆ. ಮುಂದೆ ಬಲಭಾಗದಲ್ಲಿ ಒಬ್ಬ ಸ್ತ್ರೀಯನ್ನು ನಿಂತ ಭಂಗಿಯಲ್ಲಿ ಕೆತ್ತಲಾಗಿದ್ದು ತನ್ನ ಬಲಗೈ ಮೇಲೆತ್ತಿ ಆಶೀರ್ವದಿಸುತ್ತಿರವಂತೆ ಮತ್ತೊಂದು ಕೈ ದೇಹಕ್ಕೆ ಅಂಟಿಕೊಂಡಂತೆ ಇಳಿ ಬಿಟ್ಟಿರುವಂತೆ ಚಿತ್ರಿಸಲಾಗಿದೆ. ಇದು ವೀರನ ಸತಿ ಇರಬಹುದು. ಈ ವೀರಗಲ್ಲಿನ ಮೇಲ್ಭಾಗದ ಎಡ ಮತ್ತು ಬಲಭಾಗದಲ್ಲಿ ಸೂರ್ಯ, ಚಂದ್ರರನ್ನು ಬಿಡಿಸಲಾಗಿದೆ.

4ನೇ ವೀರಗಲ್ಲು (ಅಡುಗೆಭಟ್ಟ) ಶಿವರುದ್ರಯ್ಯ s/o ಗಂಗಣ್ಣ ಜಮೀನಿನಲ್ಲಿದೆ. ಇದು ಸುಮಾರು 4 ಅಡಿ ಉದ್ದ 2 ಅಡಿ ಅಗಲವಾಗಿದೆ. ಕಪ್ಪು ನೀಲಿಛಾಯೆಯುಳ್ಳ ಕಲ್ಲನ್ನು ಬಳಸಲಾಗಿದೆ. ಈ ವೀರಗಲ್ಲಿನಲ್ಲಿ ವೀರನು ಕುದುರೆಯ ಮೇಲೆ ಆಸೀನ ಭಂಗಿಯಲ್ಲಿ ಕುಳಿತಿದ್ದು ಎಡಗೈಯಲ್ಲಿ ಕುದುರೆಯ ಲಗಾಮನ್ನು ಬಲಗೈಯಲ್ಲಿ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿರುವ ಖಡ್ಗವನ್ನು ಹಿಡಿದು ವೀರ ಹಿಂದಕ್ಕೆ ತಿರುಗಿ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ವೀರನು ಕೈಕಡಗ, ಕಾಲಿನ ಕಡಗಳನ್ನು ಧರಿಸಿದ್ದಾನೆ. ಕೊರಳಿಗೆ ಕಂಠಾಭರಣ, ಶಿರಾಸ್ತ್ರಣ ಧರಿಸಿ ಸಮರೋಚಿತವಾದ ಉಡುಪನ್ನು ಧರಿಸಿದ್ದಾನೆ. ವೀರನು ಕುಳಿತಿರುವ ಕುದುರೆ ತನ್ನ ಮುಂದಿನ ಎರಡು ಕಾಲುಗಳನ್ನು ಮೇಲೆತ್ತಿ ನೆಗೆಯುತ್ತಿರುವಂತೆ ಚಿತ್ರಿಸಲಾಗಿದೆ. ವೀರಗಲ್ಲಿನ ಬಲಭಾಗದಲ್ಲಿ ನಿಂತ ಭಂಗಿಯಲ್ಲಿ ಒಂದು ವೀರನ ಚಿತ್ರವಿದ್ದು ಕೈ ಕಡಗ ತೋಳುಬಂಧಿ, ಶಿರಾಸ್ತ್ರಣ, ಕಂಠಾಭರಣ, ಧರಿಸಿ ಸಮರೋಚಿತವಾದ ಉಡುಪು ಧರಿಸಿ ಬಲಗೈಯಲ್ಲಿ ಕತ್ತಿ ಇಡಿದಿರುವಂತೆ ಚಿತ್ರಿಸಲಾಗಿದೆ. ಇದು ವಿನಾಶದ ಅಂಚಿನಲ್ಲಿದೆ. ಇತ್ತೀಚೆಗೆ ನಿಧಿಗಳ್ಳರು ಈ ವೀರಗಲ್ಲಿನ ಅಡಿಯಲ್ಲಿ ನಿಧಿ ಇದೆ ಎಂದು ಇದನ್ನು ಕಿತ್ತು ಹಾಕಿದ್ದಾರೆ ಮತ್ತೆ ಅದೇ ಜಮೀನಿನವರು ರಕ್ಷಣೆಯನ್ನು ಮಾಡಿದ್ದಾರೆ.

ಮಹಾಸತಿಕಲ್ಲು

ಗ್ರಾಮದಲ್ಲಿ ಕಂಡುಬರುವ ಪ್ರಾಚ್ಯಾವಶೇಷಗಳಲ್ಲಿ ಮಹಾಸತಿಕಲ್ಲು ಒಂದಾಗಿದ್ದು ವೀರಗಲ್ಲಿನಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಆತ್ಮ ಬಲಿದಾನದ ನೆನಪಿಗಾಗಿ ಹಾಕಿಸಿರುವ ಸ್ಮಾರಕ ಶಿಲ್ಪವಾಗಿದೆ. ಅಮ್ಮನಘಟ್ಟದಿಂದ ತಿಪ್ಪೂರಿಗೆ ಹೋಗುವ ಮಾರ್ಗದಲ್ಲಿ ರಾಮಪ್ಪನ ಓಣಿ ಎಂದು ಕರೆಯಲಾಗುವ ಪ್ರದೇಶದಲ್ಲಿ ಈ ಮಹಾಸತಿಕಲ್ಲಿದೆ. ಇದರ ಬಗ್ಗೆ ಜನತೆಯಲ್ಲಿ ಗೌರವ ಯುತ ಭಾವನೆಯಿದೆ. ಇದನ್ನು ಉತ್ತರಕ್ಕೆ ಮುಖಮಾಡಿ ನಿಲ್ಲಿಸಲಾಗಿದೆ. ಭೂಮಿಯ ಮೇಲ್ಭಾಗದಿಂದ ಸುಮಾರು ಎರಡು ಅಡಿ ಎತ್ತರವಾಗಿದ್ದು 11/4 ಅಡಿ ಅಗಲವಾಗಿದೆ. ಆತ್ಮ ಬಲಿಯಾಗಿರುವ ಸ್ತ್ರೀ ರವಿಕೆ ಮತ್ತು ಲಂಗವನ್ನು ವಸ್ತ್ರಗಳಾಗಿ ಧರಿಸಿದ್ದಾಳೆ. ತನ್ನ ಕೈಗಳನ್ನು ಮೇಲೆತ್ತಿ ಎರಡು ಕೈಗಳ ಹಸ್ತಗಳನ್ನು ಜೋಡಿಸಿ ನಮಸ್ಕರಿಸಿರುವ ರೀತಿಯಲ್ಲಿದೆ. ಎರಡು ಕೈಗಳಲ್ಲಿ ಕಡಗಗಳಿವೆ. ತುರುಬನ್ನು ಗುಂಡಾಕಾರವಾಗಿ ಕಟ್ಟಿದ್ದಾಳೆ. ಈ ಗ್ರಾಮದ ಕೋಲ್ಕಾರ ಮನೆತನದಲ್ಲಿ ಯಾವುದೇ ಹೆಣ್ಣುಮಕ್ಕಳ ಮದುವೆಯಾದರೂ ವಿವಾಹಕ್ಕೆ ತಂದ ಬಟ್ಟೆ ಮತ್ತು ಆಭರಣಗಳನ್ನು ಈ ಮಹಾಸತಿಕಲ್ಲಿನ ಬಳಿ ಇಟ್ಟು ಮೊದಲು ಪೂಜೆ ಮಾಡಿದ ನಂತರದಲ್ಲಿ ಬಳಸುತ್ತಾರೆ.

ಈ ಗ್ರಾಮದ ಕೋಲ್ಕಾರ ಮನೆತನಕ್ಕೆ ಸೇರಿದ ಜನರು ಯಾವುದೇ ಊರಿನಲ್ಲಿದ್ದರೂ ಇಲ್ಲಿಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಓಣಿ ತಿಮ್ಮವ್ವ ಎಂಬ ಹೆಸರಿಸಲಾಗಿದೆ. ಆತ್ಮಬಲಿಯಾದ ಹೆಣ್ಣುಮಗಳು ನಿಮ್ಮ ಗಂಡುಗಾಳಿಯಾಗಲೀ, ಹೆಣ್ಣು ಮಣ್ಣಾಗಲೀ ಎಂದು ಶಾಪ ಇಟ್ಟಳೆಂಬ ನಂಬಿಕೆಯಿದೆ.

ಲಿಂಗುಮುದ್ರೆಕಲ್ಲು

ಇದೇ ಗ್ರಾಮದ ಎ.ಎಲ್.ನಟರಾಜು s/o ಲಕ್ಷ್ಮೀನರಸಿಂಹಯ್ಯ ಎಂಬುವರ ಜಮೀನಿನಲ್ಲಿ ಸುಮಾರು 4 ಅಡಿ ಉದ್ದದ ಲಿಂಗುಮುದ್ರೆ ಕಲ್ಲು ದೊರೆತಿದ್ದು, ಅದನ್ನು ಅವರು ಪ್ರತ್ಯೇಕವಾಗಿ ಬೇರೆ ಕಡೆ ಪ್ರತಿಷ್ಠಾಪಿಸಿದ್ದಾರೆ. ಭೂಮಿಯ ಮೇಲೆ ಸುಮಾರು 11/2 ಅಡಿ ಉದ್ದವಾಗಿದ್ದು ಅದರ ಮೇಲೆ ಲಿಂಗುವನ್ನು ಕೆತ್ತಲಾಗಿದೆ. ಪ್ರತಿವರ್ಷ ಮಹಾಶಿವರಾತ್ರಿಯಂದು ವಿಶೇಷ ಪೂಜೆ, ಅಭಿಷೇಕ ನೆರವೇರಿಸುತ್ತಾರೆ.

ಕರವುಗಲ್ಲುಗಳು

ಈ ಗ್ರಾಮದಲ್ಲಿ ಕಂಡುಬರುವ ಪ್ರಾಚ್ಯಾವಶೇಷಗಳಲ್ಲಿ ಕರವುಗಲ್ಲುಗಳು ಕೂಡ ಈ ಊರಿನ ಸಂಸ್ಕೃತಿಯ ಪ್ರತೀಕವಾಗಿವೆ. ಈ ಊರಿನಲ್ಲಿ 7 ಕರವುಗಲ್ಲುಗಳಿದ್ದು ಇವುಗಳಲ್ಲಿ ಮೂರು ಎತ್ತರವಾಗಿದ್ದು ಉಳಿದ ನಾಲ್ಕುಕಲ್ಲುಗಳು ಚಿಕ್ಕದಾಗಿವೆ. ವರ್ಷಕ್ಕೊಮ್ಮೆ ನಡೆಯುವ ಕಾರಬ್ಬದ ದಿನದಂದು ಆ ವರ್ಷದಲ್ಲಿ ಯಾರ ತಳವಾರಿಕೆ ಇರುತ್ತದೆಯೋ ಅವರು ಕೋಲ್ಕಾರನ ಸಹಾಯದೊಂದಿಗೆ ಎಲ್ಲಾ ಕರವುಗಲ್ಲುಗಳಿಗೂ ಕೆಮ್ಮಣ್ಣು ಮತ್ತು ಸುಣ್ಣವನ್ನು ನೀರಿನಲ್ಲಿ ಬೆರೆಸಿ ಅದ ಮಾಡಿಕೊಂಡು ಕೆಮ್ಮಣ್ಣು ಮತ್ತು ಸುಣ್ಣದ ಪಟ್ಟಿಯನ್ನು ಹಾಕುತ್ತಾರೆ. ಕಾರ ಹಬ್ಬದಲ್ಲಿ ಈ ಕರವುಗಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಊರಿನ ಪಟೇಲರ ಮನೆಗೆ ವೀರಭದ್ರಸ್ವಾಮಿ ದೇವಾಲಯದಿಂದ ನಗಾರಿ, ವಾದ್ಯ, ಪತ್ತು, ಕಹಳೆ, ಮುಂತಾದವುಗಳೊಂದಿಗೆ ಊರಿನ ಪ್ರಮುಖರೊಡಗೂಡಿ ಹೋಗಿ ಕರವುಗಲ್ಲುಗಳಿಗೆ ಎಡೆಯನ್ನು ತರುತ್ತಾರೆ. ಹಣ್ಣು, ಕಾಯಿ, ಪೂಜಾ ಸಾಮಗ್ರಿ (ಕಿಚುಡಿ, ಹಲಸಿನಹಣ್ಣು ವಿಶೇಷವಾಗಿರುತ್ತದೆ) ಮುಂದೆ ತಳವಾರ ಕಾಯಿ ಮೊಟ್ಟೆಯಲ್ಲಿ ಕೆಂಡವನ್ನು ತರುತ್ತಾರೆ. ವೀರಭದ್ರ ಸ್ವಾಮಿ ದೇವಾಲಯದ ಬಲಭಾಗದಲ್ಲಿ ಇರುವ ಕರವುಗಲ್ಲಿಗೆ ಪೂಜೆ ಮಾಡಿದ ನಂತರ ಊರ ಮುಂಭಾಗದಲ್ಲಿರುವ ಕರವುಗಲ್ಲಿಗೆ ಎಡೆಯನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಆ ಎಡೆಯನ್ನು ತಳವಾರನಿಗೆ ನೀಡಲಾಗುತ್ತದೆ. ಇತ್ತೀಚೆಗೆ ಊರ ಮುಂಭಾಗದಲ್ಲಿರುವ ಎರಡು ಮತ್ತು ವೀರಭದ್ರಸ್ವಾಮಿ ದೇವಾಲಯದ ಬಳಿ ಇರುವ ಕರವುಗಲ್ಲಿಗೆ ಹಾಳಾಗದಂತೆ ಕಟ್ಟಿಯನ್ನು ಕಟ್ಟಲಾಗಿದೆ. ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಕಟ್ಟಡದ ಒಳಗೆ ಒಂದು ಕರವುಗಲ್ಲಿದ್ದು ಕಛೇರಿ ತೆರೆದಿರುವ ದಿನದಂದು ಪ್ರತಿನಿತ್ಯ ಪೂಜೆ ಮಾಡುತ್ತಾರೆ.

ಕರವುಗಲ್ಲು ಇರುವ ಸ್ಥಳ

1ನೇ ಕರವುಗಲ್ಲು - ವೀರಭದ್ರಸ್ವಾಮಿ ದೇವಾಲಯದ ಬಲಭಾಗ, ಗ್ರಂಥಾಲಯದ ಪಕ್ಕದಲ್ಲಿದೆ.

2ನೇ ಕರವುಗಲ್ಲು - ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಕಟ್ಟಡದ ಒಳಭಾಗ.

3ನೇ ಕರವುಗಲ್ಲು - ಕಲ್ಮನೆ ಶಿವಣ್ಣನವರ ಪ್ರಕಾರ ಗೋಡೆಯ ಬಳಿ.

4 ಮತ್ತು 5ನೇ ಕರವುಗಲ್ಲುಗಳು - ಶಿವಣ್ಣನವರ ಮನೆಯ ಪ್ರಕಾರ ಗೋಡೆ ಮತ್ತು ರಂಗನಾಥಸ್ವಾಮಿ ದೇವಾಲಯದ ಮಧ್ಯೆ ಇರುವ ರಸ್ತೆಯಲ್ಲಿ

6ನೇ ಕರವುಗಲ್ಲು - ರಂಗನಾಥಸ್ವಾಮಿ ದೇವಾಲಯದ ದಕ್ಷಿಣ ಭಾಗದಲ್ಲಿ.

7ನೇ ಕರವುಗಲ್ಲು - ಗುಬ್ಬಿಗೆ ಹೋಗುವ ರಸ್ತೆ ಬದಿಯಲ್ಲಿ ಕೆರೆಯ ಮುಂಭಾಗದಲ್ಲಿ ಕಂಡುಬರುತ್ತವೆ.

ಪ್ರಾಚೀನ ಬಾವಿಗಳು

ಗ್ರಾಮದಲ್ಲಿ 3 ಪ್ರಾಚೀನ ಕಲ್ಲಿನ ಭಾವಿಗಳಿವೆ. ಮಹಾಲಿಂಗೇಶ್ವರ ದೇವಾಲಯದ ಮುಂದೆ ಒಂದು ಮಜ್ಜನ ಭಾವಿಯಿದ್ದು ದೇವಾಲಯದ ಪೂಜಾ ಕೈಂಕರ್ಯಗಳಗೆ ಆ ಭಾವಿಯ ನೀರನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ನೀರಿಲ್ಲದೆ ಒಣಗಿ ಹೋಗಿದೆ. ಊರಿನ ಮುಂದಿನ ಕೆರೆಯ ಮುಂಭಾಗದಲ್ಲಿ ಈಗಿನ ಗ್ರಾಮಪಂಚಾಯ್ತಿಯ ಸಮೀಪದಲ್ಲಿದೆ. ಇದನ್ನು ಹಿಂದೆ ಹರಿಜನರ ಕುಡಿಯುವ ನೀರಿಗಾಗಿ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನೀರಿಲ್ಲದೆ ಒಣಗಿ ಹೋಗಿದೆ. ಅವರಿಗೆ ಸರ್ಕಾರದ ವತಿಯಿಂದ ಕೊಳಾಯಿ ಸಂಪರ್ಕದ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ಸೆಕ್ರಟರಿ ಸಿದ್ಧರಾಮಯ್ಯನವರ ಮನೆ ಬಳಿಯಿದ್ದು ಅದನ್ನು ಇತ್ತೀಚೆಗೆ ಮುಚ್ಚಲಾಗಿದೆ.

ಸಾಮಾಜಿಕ ಸ್ಥಿತಿಗತಿಗಳು

ಸಾಮಾಜಿಕ ವ್ಯವಸ್ಥೆ ಸಾಮಾಜಿಕ ಸಂಸ್ಥೆಗಳೆಂಬ ಚಕ್ರದ ಮೇಲೆ ಬರುತ್ತಿರುವ ಗಾಡಿಯಿದ್ದಂತೆ ಆತ್ಮೀಯ ಒಡನಾಟ, ಸಾಮಾಜಿಕ ಸಂಬಂಧದ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸಿ ಪೋಷಿಸಿ ಸಂಪದ್ಭರಿತ ಸಂಸ್ಕೃತಿಯ ತವರೂರನ್ನಾಗಿಸಿದ ಕೀರ್ತಿ ಈ ಊರಿನ ಜನರಿಗೆ ಸಲ್ಲುತ್ತದೆ. ಈ ಗ್ರಾಮದಲ್ಲಿ ವೀರಶೈವ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ದೊಡ್ಡ ಸಮುದಾಯವಾಗಿದೆ. ಬ್ರಾಹ್ಮಣರು, ನಾಯಕ, ತಿಗಳ, ಉಪ್ಪಾರ, ಶೆಟ್ಟಿ, ವೈಷ್ಣವ, ಭೋವಿ, ಮಾದಿಗ, ಒಲೆಯ, ತಮಿಳಿಯನ್ ಸಮುದಾಯದವರಿದ್ದಾರೆ. ಇದೇ ಅಲ್ಲದೆ ವೃತ್ತಿ ಆಧಾರಿತ ಜಾತಿಗಳಾದ ಮಡಿವಾಳ, ಕ್ಷೌರಿಕ, ಕಮ್ಮಾರರಿದ್ದು ಇವರು ಇಂದಿಗೂ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಸಮಾಜ ಪುರುಷ ಪ್ರಧಾನವಾದ ಸಮಾಜವಾಗಿದ್ದು ಈ ಗ್ರಾಮದಲ್ಲಿ ಬಹುಪಾಲು ವಿಭಕ್ತ ಕುಟುಂಬಗಳೇ ಇವೆ. ಒಂದು ಅವಿಭಕ್ತ ಕುಟುಂಬವಿದ್ದು ಸುಮಾರು 60ಮಂದಿ ವಾಸಮಾಡುತ್ತಿದ್ದಾರೆ. ಇಲ್ಲಿನ ಸಮಾಜದಲ್ಲಿ ಮಕ್ಕಳ ವಿವಾಹಕ್ಕೆ ಸಂಬಂಧಿಸಿದಂತೆ ಕುಟುಂಬದ ಘನತೆ ಗೌರವಗಳಿಗೆ ಅನುಗುಣವಾಗಿ ಜಾತಿ, ಉಪಜಾತಿ, ಕುಲ, ಗೋತ್ರಗಳ ನಡುವೆ ಗಮನ ಹರಿಸಿ ವಿವಾಹ ಕಾರ್ಯ ನೆರವೇರಿಸುತ್ತಾರೆ. ಇತ್ತೀಚೆಗೆ ಜಾತಿಪದ್ಧತಿಯ ಕಠಿಣ ನೀತಿ ನಿಯಮಗಳು ಮತ್ತು ವಿವಾಹದ ಸಂದರ್ಭದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ವಿಧಿ ವಿಧಾನಗಳು ಕಡಿಮೆಯಾಗಿವೆ.

ಈ ಗ್ರಾಮದಲ್ಲಿ ವಿಭಿನ್ನ ಜನ ಸಮುದಾಯಗಳು ಇರುವುದರಿಂದ ಸಸ್ಯಹಾರಿಗಳು ಮತ್ತು ಮಾಂಸಹಾರಿಗಳಿದ್ದಾರೆ. ಉಡುಪುಗಳನ್ನು ಧರಿಸುವುದು ಸಾಮಾನ್ಯ ಸಂಗತಿಯಾದರೂ ಬೇರೆ ಬೇರೆ ಸಂದರ್ಭಗಳಲ್ಲಿ ಧರಿಸುವಂತಹ ಉಡುಪುಗಳು ಕಣ್ಣಿಗೆ ಕಟ್ಟುವಂತಿರುತ್ತವೆ. ಸಂಪತ್ತಿನ ಸ್ವಲ್ಪ ಭಾಗವನ್ನು ಸುಖ ಸಂತೋಷ ಮನರಂಜನೆಗೆ ವಿನಿಯೋಗಿಸುತ್ತಾರೆ. ಈ ಗ್ರಾಮದ ಜನರು ತಮ್ಮ ತಮ್ಮ ವಯಸ್ಸಿಗೆ ಅನುಗುಣವಾಗಿ ಉಡುಪುಗಳನ್ನು ಧರಿಸುತ್ತಾರೆ. ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದು ಇವರು ತೊಡುವ ಆಭರಣಗಳು ಈ ಪ್ರದೇಶದ ಕಲಾತ್ಮಕತೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಸಂಪ್ರದಾಯ ಶ್ರೀಮಂತಿಕೆಗೂ ಕನ್ನಡಿ ಹಿಡಿದಂತಿದೆ. ಎಷ್ಟೇ ಬಡತನವಿದ್ದರೂ ಮದುವೆ ಸಂದರ್ಭಕ್ಕೆ ಕಡ್ಡಾಯವಾಗಿ ಆಭರಣ ಮಾಡಿಸುತ್ತಾರೆ.

ಈ ಸಮಾಜದಲ್ಲಿ ಸ್ತ್ರೀಯರು ಗೌರವಯುತವಾದ ಸ್ಥಾನವನ್ನು ಪಡೆದಿದ್ದು ಪುರುಷರಂತೆಯೇ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನ ಪಡೆದಿದ್ದಾರೆ. ಏಕಪತ್ನಿತ್ವ ವ್ಯವಸ್ಥೆಯಿದ್ದು ಗಂಡ ಸತ್ತ ವಿಧವೆ ಇನ್ನೊಂದು ಮದುವೆಗೆ ಒಪ್ಪದೆ ಏಕಾಂತವಾಗಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರು ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ಎಂ.ಎ, ಇಂಜಿನಿಯರಿಂಗ್, ಸಿ.ಎ., ಮುಂತಾದ ವೃತ್ತಿ ಆಧಾರಿತ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಪಡೆದ ಕೆಲವು ಸ್ತ್ರೀಯರು ಸರ್ಕಾರಿ ಉದ್ಯೋಗದಲ್ಲೂ ಸೇವೆಸಲ್ಲಿಸುತ್ತಿದ್ದಾರೆ. ಶಿವರತ್ನ ಎಂಬುವವರು ತುಮಕೂರು ಜಿಲ್ಲಾ ರೈತ ಸಂಘದ ಮಹಿಳಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಯಗಾರಿಕೆ ವ್ಯವಸ್ಥೆ

ಇದು ಪ್ರಾಚೀನ ಕೃಷಿ ಸಮಾಜದ ಒಂದು ಅವಿಭಾಜ್ಯ ಅಂಗವಾಗಿತ್ತು. ಕೃಷಿಯನ್ನು ಅವಲಂಬಿಸಿರುವ ರೈತ ಕುಟುಂಬಗಳು, ರೈತರನ್ನು ಆಶ್ರಯಿಸಿ ಬದುಕುವ ಕೈ ಕಸುಬಿನವರು ಕೈ ಕಸುಬಿನವರನ್ನು ಆಶ್ರಯಿಸಿ ಬದುಕುವ ರೈತ ಕುಟುಂಬಗಳು ಅವರ ಕರ್ತವ್ಯ ಪ್ರಜ್ಞೆಗೆ ಅನುಗುಣವಾಗಿ ಆಯ ಪದ್ಧತಿ ಪ್ರಚಲಿತದಲ್ಲಿದೆ. ಕೃಷಿ ಕಾರ್ಯಗಳಿಗೆ ಬೇಕಾದ ಸಲಕರಣೆಗಳನ್ನು ಒದಗಿಸುವ ತಮ್ಮ ಗ್ರಾಮಗಳ ರಕ್ಷಣೆಯಂತಹ ಮತ್ತು ದೇವರ ಕಾರ್ಯಗಳಲ್ಲಿ ಪತ್ತು ಹಿಡಿಯುವವರಿಗೆ ಸತ್ತಾಗ ತಮಟೆ ಬಡಿಯುವಂತಹ ಇತರೆ ಕೆಲಸಗಳಿಗೆ ವರ್ಷಕ್ಕೊಮ್ಮೆ ರೈತರು ತಾವು ಬೆಳೆದಿದ್ದರಲ್ಲಿ ಧಾನ್ಯ ರೂಪದಲ್ಲಿ ಕೊಡುವ ಪ್ರತಿಫಲಕ್ಕೆ ಆಯಾ ಎನ್ನಲಾಗುತ್ತದೆ. ಆಯಾ ಪಡೆಯುವವರನ್ನು ಅಡದೆಯವರು ಎಂದು ಕರೆಯುತ್ತಾರೆ. ಈ ಗ್ರಾಮದ ಗೌಡ, ಪಟೇಲ, ಶಾನುಭೋಗ, ಪಣಗಾರ, ತಳವಾರ, ತೋಟಿ, ನೀರಗಂಟಿ, ಅಕ್ಕಸಾಲಿಗ, ಕಮ್ಮಾರ, ಅಗಸ, ಕ್ಷೌರಿಕರು ಇದ್ದಾರೆ. ಗೌಡ, ಪಟೇಲ ಆಡಳಿತ ವ್ಯವಸ್ಥೆ ನಡೆಸುವ ಕರ್ತವ್ಯ ಹೊಂದಿದ್ದಾರೆ. ಶಾನುಭೋಗ ಇವರಿಗೆ ಸಹಾಯಕ ಕೆಲಸವನ್ನು ನಿರ್ವಹಿಸುತ್ತಾರೆ. ಗೌಡನ ಕೆಲಸದಲ್ಲಿ ತಳವಾರ ಮತ್ತು ಕೋಲ್ಕಾರ ನೆರವಿಗೆ ಬರುತ್ತಾರೆ. ತಳವಾರರು ಗ್ರಾಮಗಳ ರಕ್ಷಕರಾಗಿ ಗ್ರಾಮಸೇವೆಯೇ ದೇಶಸೇವೆಯೆಂದು ನಂಬಿ ಪೋಲಿಸರಂತೆ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಆಧುನೀಕರಣದಿಂದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಗ್ರಾಮ ಪಂಚಾಯ್ತಿಗಳು ಆಡಳಿತದ ಜವಬ್ದಾರಿ ಹೊತ್ತಿವೆ. ಆದರೂ ಗೌಡ, ಪಟೇಲರ ಪಾತ್ರ ಪ್ರಮುಖವಾಗಿದೆ.

ಆಯಗಾರರ ಒಂದು ಭಾಗವಾದ ತಳವಾರಿಕೆ ವಿಶಿಷ್ಟ ಸ್ಥಾನಮಾನ ಪಡೆದುಕೊಂಡಿದೆ. ವೀರಶೈವ ಲಿಂಗಾಯಿತರು ಬಹುಸಂಖ್ಯಾತರಾಗಿದ್ದಾರೆ. 5 ತಳವಾರ ಕುಟುಂಬಗಳು ಇವೆ. (ವೆಂಕಟನಾಯ್ಕ, ಗಿರಿನಾಯ್ಕ, ಕೆಂಪಯ್ಯ ಗೋವಿಂದಯ್ಯ, ಭದ್ರನಾಯಕ) ತಳವಾರರಿಗೆ ಗ್ರಾಮದ ಜನತೆ ಆಯವನ್ನು ನೀಡುತ್ತಾರೆ. ಮತ್ತು ಸರ್ಕಾರ ಇವರಿಗೆ ಜಮೀನನ್ನು ಮಂಜೂರು ಮಾಡಿದೆ. ತಳವಾರಿಕೆಯಲ್ಲಿ ಕೋಲನ್ನು ವಂಶಪಾರಂಪರೆಯಿಂದ ಬಳಸಿಕೊಂಡು ಬಂದಿದ್ದಾರೆ. ಆ ಮನೆತನದ ಸರದಿ ಮುಗಿದ ನಂತರ ಮತ್ತೊಂದು ಮನೆತನಕ್ಕೆ ಕೊಡುತ್ತಾರೆ. ಹಬ್ಬ ಜಾತ್ರೆಗಳಲ್ಲಿ ಮನೆಮನೆಗಳಿಗೆ ವಿಷಯ ಮುಟ್ಟಿಸುವುದು, ಜಾತ್ರಾ ಖರ್ಚಿಗೆ ಹಣವನ್ನು ವಸೂಲಿ ಮಾಡುವುದು, ನ್ಯಾಯ ಪಂಚಾಯ್ತಿಗಳಿದ್ದಾಗ ತಿಳಿಸುವುದು, ಉನ್ನತ ವರ್ಗದ ಮನೆಯಲ್ಲಿ ಯಾರಾದರೂ ಮರಣ ಹೊಂದಿದರೆ ಅವರನ್ನು ಭೂಮಿಯಲ್ಲಿ ಊಳಲು ತೆಗೆದುಕೊಂಡು ಹೋಗಲು ಚಟ್ಟಕಟ್ಟುವುದು, ಭೂಮಿಯಲ್ಲಿ ಮುಚ್ಚಿದ ನಂತರ ತಳವಾರನಿಗೆ ಕಂಚು ಅಥವಾ ಹಿತ್ತಾಳೆ ತಟ್ಟಿಯಲ್ಲಿ ಊಟಕ್ಕೆ ಇಟ್ಟು, ಆ ತಟ್ಟೆ ಅಥವಾ ಚಂಬನ್ನು ಆತನಿಗೆ ನೀಡುತ್ತಾರೆ. ಹಿಂದಿನಿಂದಲೂ ಗ್ರಾಮರಕ್ಷಣೆ ಮತ್ತು ಕಾವಲುಗಾರಿಕೆಯನ್ನು ಮಾಡಿಕೊಂಡು ಬಂದವರಾಗಿದ್ದಾರೆ.

ಪಣಗಾರ ಊರಿನ ದೇವತಾ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಊರಿನ ಯಾವುದೇ ಮನೆಗೆ ದೇವರನ್ನು ಕರೆತರುವಾಗ ಗೌಡ, ಪಟೇಲರ ಜೊತೆಗೆ ಪಣಗಾರರ ಅನುಮತಿ ಪಡೆಯಬೇಕಾಗುತ್ತದೆ. ಬಡಿಗ ಮತ್ತು ಕಮ್ಮಾರರು ಕೃಷಿ ಕೆಲಸಗಳಿಗೆ ಮುಖ್ಯವಾದ ಉಪಕರಣ ಮಾಡಿಕೊಡುತ್ತಾರೆ. ಅಕ್ಕಸಾಲಿಗರು ಆಭರಣ ಮಾಡಿಕೊಡುತ್ತಿದ್ದರು ಇತ್ತೀಚೆಗೆ ಅವರ ಕುಟುಂಬದವರು ಯಾರು ಇಲ್ಲ. ಮಡಿವಾಳರು ಜಾತ್ರೆ ಮತ್ತು ದೇವರ ಉತ್ಸವಗಳಲ್ಲಿ ದೇವರನ್ನು ಒತ್ತು ಹೋಗುವವರಿಗೆ ಬಟ್ಟೆಯನ್ನು ಹಾಕುತ್ತಾರೆ. ಪತ್ತುಗಳನ್ನು ಹಿಡಿಯುವ ಕೆಲಸವನ್ನು ಮಾಡುತ್ತಾರೆ. ಇವರಿಗೆ ಸರ್ಕಾರ ಭೂಮಿಯನ್ನು ನೀಡಿದೆ. ನೀರ್ಗಂಟಿ ಊರಿನ ಆಯಗಾರರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರು ಊರಿನ ಕೆರೆಗಳ ನಿರ್ವಹಣೆ ಮತ್ತು ತೂಬುಗಳ ನಿರ್ವಹಣೆ ಮಾಡುತ್ತಾರೆ. ಕೆರೆಗಳು ತುಂಬಿದಾಗ ಬೇಸಿಗೆ ಕಾಲದಲ್ಲಿ ತೂಬನ್ನು ಎತ್ತುವುದರ ಮೂಲಕ ನೀರನ್ನು ಗದ್ದೆಗಳಿಗೆ ಬಿಡುವುದು ಇವರ ಕೆಲಸವಾಗಿದೆ. ಇವರ ಕೆಲಸಕ್ಕೆ ಪ್ರತಿಯಾಗಿ ಕೆರೆಯ ಹಿಂದೆ ಏಳು ಹೆಜ್ಜೆ ಇಡುವಷ್ಟು ಜಾಗದಲ್ಲಿ ಬೆಳೆಯುವ ಬೆಳೆಯನ್ನು ಅವನಿಗೆ ನೀಡುತ್ತಾರೆ. ಕೋಲ್ಕಾರ ಮತ್ತು ತೋಟಿ (ಹೊಲೆಯ ಮತ್ತು ಮಾದಿಗ) ತಳವಾರನಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಈ ಊರಿನ ಕೆಲಸಗಳಲ್ಲಿ ಸ್ವಚ್ಛತೆ ಕಾಪಾಡುತ್ತಾರೆ. ಜಾತ್ರೆ, ಕಾರ್ತೀಕಮಾಸ ಪೂಜೆ, ಅಭಿಷೇಕ, ವಿಶೇಷ ಪೂಜೆ ಮುಂತಾದ ಸಂದರ್ಭದಲ್ಲಿ ವಾದ್ಯ ಮತ್ತು ಕಹಳೆ ಊದುವ ಸೇವೆ ಮಾಡುತ್ತಾರೆ. ಇವರಿಗೂ ಸಹ ಸರ್ಕಾರ ಉಂಬಳಿಯಾಗಿ ಜಮೀನನ್ನು ನೀಡಿದೆ. ಕ್ಷೌರಿಕರು ಉನ್ನತ ವರ್ಗದವರ ಮನೆಯ ಬಳಿ ಹೋಗಿ ಕ್ಷೌರವನ್ನು ಮಾಡುವ ಕೆಲಸವನ್ನು ನಿರ್ವಹಿಸುತ್ತಾರೆ. ಗೌಡ, ಪಟೇಲ, ಶ್ಯಾನುಭೋಗ ಪಣಗಾರರನ್ನು ಹೊರತುಪಡಿಸಿ ಉಳಿದವರಿಗೆ ಅವರ ಕೆಲಸಕ್ಕೆ ಪ್ರತಿಫಲವಾಗಿ ವರ್ಷದ ಕೊನೆಯಲ್ಲಿ ಸುಗ್ಗಿ ಕಾಲದಲ್ಲಿ ತಾವು ಬೆಳೆದ ಬೆಳೆಯಲ್ಲಿ ಕಾಳು ಕಡ್ಡಿ ನೀಡುತ್ತಾರೆ. ಆದರೆ ಇತ್ತೀಚೆಗೆ ಮಳೆ ಬೆಳೆ ಸರಿಯಾದ ಸಮಯಕ್ಕೆ ಆಗದೇ ಇರುವುದರಿಂದ ಕೆಲವರು ಹಣವನ್ನು ನೀಡುತ್ತಾರೆ. ಆಯಗಾರರು ಕ್ರಮ ತಪ್ಪಿದರೆ ಬುದ್ದಿ ಹೇಳುವುದು ಊರ ಪ್ರಮುಖರಿಗೆ ಇರುತ್ತದೆ. ಆಯ ಕೊಡುವಲ್ಲಿ ಯಾರಾದರೂ ಮೀನಾಮೇಷ ಎಣಿಸಿದವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಊರ ಮುಖಂಡರಿಗಿದೆ. ಜಾಗತೀಕರಣ ಮತ್ತು ನಗರೀಕರಣದ ಪ್ರಭಾವದಿಂದ ಆಯಗಾರಿಕೆ ಸಂಸ್ಕೃತಿ ಗ್ರಾಮ ಸಮಾಜದಲ್ಲಿ ಕಣ್ಮರೆಯಾಗುತ್ತಿದ್ದರೂ ಈ ಗ್ರಾಮದಲ್ಲಿ ಇಂದಿಗೂ ಆಯಗಾರಿಕೆ ಪದ್ಧತಿ ಜೀವಂತವಾಗಿದೆ. ಪ್ರಧಾನವಾದ ಸಮಾಜದಲ್ಲಿ ಆಯಗಾರ ಒಬ್ಬ ಕೂಲಿ ಕಾರ್ಮಿಕನಾಗಿ ಕಂಡುಬರುವುದಿಲ್ಲ. ಆಯಗಾರರಿಗೆ ಹೆಚ್ಚು ಧಾನ ನೀಡಿದಷ್ಟು ಭೂಮಿತಾಯಿ ಹೆಚ್ಚು ಬೆಳೆ ನೀಡುತ್ತಾಳೆ ಎಂಬ ನಂಬಿಕೆಯಿದೆ.

 

ಆರ್ಥಿಕ ವ್ಯವಸ್ಥೆ

ಈ ಗ್ರಾಮದ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೆರೆಗಳ ಆಶ್ರಯದಲ್ಲಿ ಗದ್ದೆಗಳಿವೆ. ಮಳೆಯನ್ನೇ ಅವಲಂಬಿಸಿಕೊಂಡು ಕೃಷಿ ಮಾಡುವ ಹೊಲ ಮತ್ತು ಬೆದ್ದಲು ಜಮಿನುಗಳಿವೆ. ಇಲ್ಲಿನ ಭೂ ಪ್ರದೇಶ ಕೆಂಪುಮಣ್ಣು ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣಿನಿಂದ ಕೂಡಿದ್ದು ತೆಂಗು, ಅಡಿಕೆ, ವೀಳೆದೆಲೆ ಬೆಳೆಯುತ್ತಾರೆ. ಈ ಬೆಳೆಗಳು ಭಾವಿಗಳು ಮತ್ತು ಕೊಳವೆ ಭಾವಿಗಳನ್ನು ಆಶ್ರಯಿಸಿವೆ. ರಾಗಿ, ಜೋಳ, ಸಜ್ಜೆ, ತೊಗರಿ, ಅಲಸಂದೆ, ನವಣೆ, ಹುರುಳಿ ಮುಂತಾದ ಬೆಳೆ ಬೆಳೆಯುತ್ತಾರೆ. ಇತ್ತೀಚೆಗೆ ಈ ಗ್ರಾಮದ ರೈತರು ಸಾವಯವ ಕೃಷಿಯ ಕಡೆಗೆ ಗಮನ ಅರಿಸುತ್ತಿದ್ದಾರೆ. ಇದೇ ಊರಿನ ಎ.ಎಸ್.ಶಂಕರಪ್ಪ ಮತ್ತು ಎ.ಎಸ್.ಮಹೇಶ್ ಪ್ರಮುಖ ಸಾವಯವ ಕೃಷಿಕರಾಗಿದ್ದು ಮೆಣಸು, ಏಲಕ್ಕಿ, ವೆನಿಲಾ, ಪಪ್ಪಾಯಿ, ಕೋಕಾ ಮುಂತಾದ ಬೆಳೆ ಬೆಳೆಯುತ್ತಾರೆ. ಮಹೇಶ್‍ರವರಿಗೆ ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿ, ಭೂಮಿ ನೆಟ್‍ವರ್ಕ್ ಬೆಂಗಳೂರು ಇವರಿಂದ ಫೆಲೋಶಿಪ್ ಅವಾರ್ಡ್, ಗುಬ್ಬಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ವೋದಯ ಮಂಡಳಿ ಪ್ರಶಸ್ತಿ, ಗುಬ್ಬಿ ಸಿರಿ, ಸೂಪರ್ ಸ್ಟಾರ್ ರೈತ ಪ್ರಶಸ್ತಿಗಳು ಸಂಧಿವೆ. ಕೃಷಿ ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ್ದಾರೆ ಮತ್ತು ತಮ್ಮ ಜಮೀನಿನಲ್ಲಿ ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ನೈಸರ್ಗಿಕ ಕೃಷಿ ಬಗ್ಗೆ ತರಭೇತಿ ನೀಡುತ್ತಿದ್ದಾರೆ. ಶಂಕರಪ್ಪನವರು ತಾಲೂಕಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದು ನಗರ ಪ್ರದೇಶಗಳ ಕಲ್ಯಾಣ ಮಂಟಪಗಳಲ್ಲಿನ ಊಟದ ಎಲೆಯನ್ನು ತಂದು ಬಾವಿಯಲ್ಲಿ ಕೊಳೆಯಿಸಿ ಅದರ ನೀರನ್ನು ಹನಿ ನೀರಾವರಿ ಮೂಲಕ ತೋಟಗಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಮಳೆ ನೀರು ಕೊಯ್ಲಿಗೂ ಹೆಸರುವಾಸಿಯಾಗಿದ್ದಾರೆ. ಇವರು ಸಾವಯವ ಕೃಷಿಯ ಬಗ್ಗೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ.

ಈ ಗ್ರಾಮದಲ್ಲಿ ನಗರ ಪ್ರದೇಶ ಮತ್ತು ಇತರ ಗ್ರಾಮಗಳಿಗೆ ಸಂಚರಿಸಲು ಉತ್ತಮವಾದ ಸಾರಿಗೆ ಸಂಪರ್ಕವಿದೆ. ಕೃಷಿಯ ಜೊತೆಯಲ್ಲೇ ಕೆಲವರು ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಕುರಿ, ಮೇಕೆ, ಎತ್ತು, ಎಮ್ಮೆ, ಕೋಣ, ಹಸುಗಳು ಮತ್ತು ಸೀಮೆ ಹಸುಗಳನ್ನು ಸಾಕುತ್ತಿದ್ದಾರೆ.

ಸಾಂಪ್ರದಾಯಿಕ ಉದ್ಯೋಗಿಗಳಾದ ಬಡಗಿಗಳು, ಗುಡಿಕಾರರು ಭಜಂತ್ರಿಗಳು, ಮಡಿವಾಳರು ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಆಧುನಿಕವಾಗಿ ಬಹುಪಾಲು ಜನರು ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಬಟ್ಟೆ ಹೊಲಿಯುವುದು. ತೆಂಗು, ಅಡಿಕೆ, ಮಾವು, ಹುಣಸೆ, ಅಡಿಕೆಪಟ್ಟಿ, ಲೋಹದ ಪಾತ್ರೆ ವ್ಯಾಪಾರ ಮಾಡುವುದು, ದಿನಸಿ ಅಂಗಡಿ, ಸೈಕಲ್‍ರಿಪೇರಿ, ಎಲೆಕ್ಟ್ರಿಕ್ ಮೋಟರ್ ವೈಂಡಿಂಗ್ ಮಾಡುವುದು, ಟೀ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಷಾಮಿಯಾನ, ಪ್ಲವರ್ ಡೆಕೋರೇಷನ್, ಕೋಳಿಫಾರಂ ನಡೆಸುವುದು, ಟೆಂಪೋ, ಆಟೋ, ಓಡಿಸುವುದನ್ನು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಗಳಲ್ಲಿ, ಸರ್ಕಾರೇತರ ಸಂಘಸಂಸ್ಥೆಗಳಲ್ಲಿ, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವವರಿದ್ದಾರೆ. ಸ್ವತಂತ್ರವಾಗಿ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯರ್ನಿಹಿಸುವ ವಕೀಲರಿದ್ದಾರೆ. ರಕ್ಷಣಾಇಲಾಖೆ, ಪೋಲೀಸ್‍ಇಲಾಖೆ, ಕಂದಾಯಇಲಾಖೆ, ಭೂಮಪಾನಇಲಾಖೆ, ಶಿಕ್ಷಣಇಲಾಖೆ, ಕಾಲೇಜುಶಿಕ್ಷಣಇಲಾಖೆ, ಮುಂತಾದ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರುಗಳಿದ್ದಾರೆ.

 ಕೈಗಾರಿಕೆಗಳು

ಈ ಗ್ರಾಮದಲ್ಲಿ ಯಾವುದೇ ಬೃಹತ್ ಪ್ರಮಾಣದ ಕೈಗಾರಿಕೆಗಳು ಕಂಡುಬರುವುದಿಲ್ಲ. ಸಣ್ಣ ಕೈಗಾರಿಕೆಗಳು ಕಂಡುಬರುತ್ತವೆ. ಪ್ರಕೃತಿ ರಾಗಿಹಿಟ್ಟಿನ ಗಿರಣಿ ಇದ್ದು ಇಲ್ಲಿ ರಾಜ್ಯ ಮತ್ತು ಅಂತರಾಜ್ಯದಿಂದ ರಾಗಿ ಕೊಂಡು ತಂದು ಹಿಟ್ಟನ್ನು ಮಾಡಿ ನಗರ ಪ್ರದೇಶಗಳಿಗೆ ಸರಬರಾಜು ಮಾಡುತ್ತಾರೆ. ಉಳಿದಂತೆ ಮೂರು ಹಿಟ್ಟಿನ ಗಿರಣಿಗಳಿವೆ. ಒಂದು ಅಡಿಕೆ ತಟ್ಟೆ ತಯಾರಿಕಾ ಕೈಗಾರಿಕೆಯಿದ್ದು ತಟ್ಟೆಗಳನ್ನು ತಯಾರಿಸಿ ನಗರ ಪ್ರದೇಶ ಮತ್ತು ಅಂತರಾಜ್ಯಕ್ಕೆ ಕಳುಹಿಸುತ್ತಾರೆ. ತೆಂಗಿನಕಾಯಿ ಎಣ್ಣೆ ಕೈಗಾರಿಕೆ, ಶುದ್ಧೀಕರಿಸಿದ ಕುಡಿಯುವ ನೀರಿನ ಕೈಗಾರಿಕೆಯಿದ್ದು ನಗರ ಪ್ರದೇಶದ ಅಂಗಡಿಗಳಿಗೆ ನೀರು ಸರಬರಾಜು ಮಾಡುತ್ತಾರೆ. ಪ್ಲೈನಿಂಗ್ ಮಿಲ್‍ಗಳು ಕಂಡುಬರುತ್ತವೆ.

ಹಣಕಾಸು ವ್ಯವಸ್ಥೆ

ರಾಷ್ಟ್ರೀಯ ಬ್ಯಾಂಕ್ ಆದ ಎಸ್.ಬಿ.ಐನವರು ಈ ಗ್ರಾಮದಲ್ಲಿ ಉಚಿತವಾಗಿ ಖಾತೆಗಳನ್ನು ತೆರೆದು ನಿಗಧಿತ ಪ್ರಮಾಣದ ಹಣವನ್ನು ಖಾತೆಗೆ ಸೇರಿಸುವ ಮತ್ತು ಖಾತೆಯಿಂದ ತೆಗೆಯಲು ಅವಕಾಶ ಕಲ್ಪಿಸಿದ್ದಾರೆ. ವ್ಯವಸಾಯ ಸೇವಾ ಸಹಕಾರ ಸಂಘದಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಲ್ಲಿ ರೈತರಿಗೆ ನಿಗಧಿತ ಪ್ರಮಾಣದಲ್ಲಿ ಸಾಲಸೌಲಭ್ಯವನ್ನು ವಿತರಿಸಲಾಗುತ್ತದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಡಿಯಲ್ಲಿ ಸ್ತ್ರೀ ಶಕ್ತಿ ಸಂಘಗಳು ರಚನೆಗೊಂಡಿದ್ದು ಸಂಘದ ಸದಸ್ಯರುಗಳು ನಿಗಧಿತ ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಮತ್ತು ಸಂಘದ ಸದಸ್ಯರುಗಳಿಗೆ ಉಳಿತಾಯದ ಹಣದಲ್ಲಿ ಕಡಿಮೆ ಬಡ್ಡಿಗೆ ನಿಗಧಿತ ಪ್ರಮಾಣದಲ್ಲಿ ಸಾಲವನ್ನು ನೀಡುತ್ತಾರೆ. ಇದೇ ಅಲ್ಲದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು, ಐ.ಡಿ.ಎಫ್, ಗ್ರಾಮೀಣ ಕೂಟಗಳು ಮುಂತಾದ ಸಂಘಗಳಿದ್ದು ಆ ಸಂಘಗಳ ಸದಸ್ಯರು ಕಡಿಮೆ ಬಡ್ಡಿಯಲ್ಲಿ ಹಣವನ್ನು ತೆಗೆದುಕೊಂಡು ಆರ್ಥಿಕವಾಗಿ ಸದೃಢತೆಯತ್ತಾ ಹೆಜ್ಜೆ ಇಡುತ್ತಿದ್ದಾರೆ.

ಸಮುದಾಯ ಸೌಲಭ್ಯಗಳು

ಅಮ್ಮನಘಟ್ಟ ಗ್ರಾಮದಲ್ಲಿ ಗ್ರಾಮಪಂಚಯ್ತಿಯಿದ್ದು ಅದರ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯಿದೆ. ಇದರಲ್ಲಿ ಹಣಕಟ್ಟಲು, ತೆಗೆದುಕೊಳ್ಳಲು, ವ್ಯವಸ್ಥೆಯಿದೆ. ಅಂಚೆ ಜೀವವಿಮೆ, ಆರ್.ಡಿ ಸುಕನ್ಯಾಸಮೃದ್ಧಿ ಯೋಜನೆ ಮುಂತಾದ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ದೂರವಾಣಿ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮ ಸಮುದಾಯದಲ್ಲಿ ಆದ್ಯತಾ ಪಡಿತರ ಚೀಟಿ ಇರುವವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ, ಸೀಮೆಎಣ್ಣೆ, ಇತರೆ ಆಹಾರ ಪದಾರ್ಥ ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ ಗುರುತಿನ ಚೀಟಿ, ವೃದ್ಧಾಪ್ಯವೇತನ ವಿಧಾವ ವೇತನ, ಸಂಧ್ಯಾಸುರಕ್ಷಾ ವೇತನ, ವಿಕಲಚೇತನ ವೇತನ ಪಡೆಯುತ್ತಿರುವ ಫಲಾನುಭವಿಗಳಿದ್ದಾರೆ. ಬಸವಯೋಜನೆ, ಅಂಬೇಡ್ಕರ್ ವಸತಿಯೋಜನೆ, ಇಂದಿರಾಗಾಂಧಿ ಆವಾಸ್ ಯೋಜನೆ ಮುಂತಾದ ಯೋಜನೆಗಳಡಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರತೀ ವಾರಕ್ಕೊಮ್ಮೆ ಆರೋಗ್ಯ ಶುಶ್ರುಷಕಿಯರು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ವ್ಯವಸಾಯ ಸೇವಾ ಸಹಕಾರ ಸಂಘವಿದೆ.

ಪ್ರಾಥಮಿಕ ಪೂರ್ವ ಹಂತದ ಒಂದು ಅಂಗನವಾಡಿ ಕೇಂದ್ರವಿದೆ. 24 ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದರಿಂದ ಏಳನೇ ತರಗತಿವರೆಗಿನ ಸರ್ಕಾರಿ ಹಿರಿಯ ಮಾಧ್ಯಮಿಕ ಪಾಠಶಾಲೆಯಿದ್ದು 118 ಮಕ್ಕಳು ಕನ್ನಡ ಭಾಷಾ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಶೌಚಾಲಯ, ಸಮವಸ್ತ್ರ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಜಾನಪದ ವೈಶಿಷ್ಟ್ಯತೆಗಳು

ಹಳೆಯ ತಲೆಮಾರಿನಿಂದ ಹೊಸ ತಲೆಮಾರಿಗೆ ತಿಳುವಳಿಕೆ, ಅನುಭವ ಕಲೆ, ಹಬ್ಬ, ಜಾತ್ರೆ, ಆಚರಣೆ, ನಂಬಿಕೆ, ಸಂಪ್ರದಾಯ, ನಡೆ, ನುಡಿ ಮುಂತಾದ ಅಂಶಗಳು ಆಧುನಿಕ ಸಮಾಜಕ್ಕೆ ಅನುಗುಣವಾಗಿ ಮುಂದುವರಿದು ಕೊಂಡು ಬರುತ್ತಿವೆ. ಪ್ರಜ್ಞಾ ಪೂರ್ವಕವಾಗಿ ಕಾಪಾಡಿಕೊಂಡು ಬಂದ ಮಾನವ ಜೀವನದ ಸಂಸ್ಕೃತಿಯ ಅವಿಭಾಜ್ಯ ಅಂಶಗಳಾಗಿವೆ. ಈ ಗ್ರಾಮದ ಜನರು ಮಕರ ಸಂಕ್ರಾಂತಿ ಶಿವರಾತ್ರಿ, ಯುಗಾದಿ, ರಾಮನವಮಿ, ಬಸವ ಜಯಂತಿ, ಗೌರಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಹಬ್ಬಗಳನ್ನು ಆಚರಿಸುತ್ತಾರೆ. ಈ ಗ್ರಾಮದಲ್ಲಿ ಜಾನಪದ ಕಲಾವಿದರುಗಳಿದ್ದಾರೆ. ಕೊಂಬುಕಹಳೆ, ತಮಟೆ, ನಗಾರಿ, ತಬಲ, ಹರೇವಾದನ, ನಂದಿಧ್ವಜಕುಣಿತ, ಕಲಾವಿದರುಗಳಿದ್ದಾರೆ. (ಪುಟ್ಟಯ್ಯ, ಚಂದ್ರಯ್ಯ ಬೋಜಯ್ಯ, ಬಸವರಾಜು, ಈರದಾಸಪ್ಪ, ಸಿದ್ದರಾಮಯ್ಯ ಮುಂತಾದವರು) ಬಾಯಿಬಿಟ್ಟರೆ ಗಾದೆ ಮಾತು ಬರುವ ಗಂಗಮ್ಮ ಶ್ರೇಷ್ಠ ಗಾದೆ ಮಾತಿನ ಕಲಾವಿದರಿದ್ದಾರೆ.

ಈ ಗ್ರಾಮದ ಜನರು ಕೃಷಿಯನ್ನೇ ತನ್ನ ಜೀವಂತ ಬದುಕನ್ನಾಗಿಸಿಕೊಂಡಿರುವುದರಿಂದ ಕೃಷಿಗೆ ಸಂಬಂಧಿಸಿದ ಆಚರಣೆಗಳು ರೂಢಿಯಲ್ಲಿವೆ. ಹೊನ್ನಾರು ಹೂಡುವುದು, ಬಿತ್ತನೆ ಪೂಜೆ, ಕೊಯಲು ಪೂಜೆ, ಕಣ ಮಾಡುವುದು. ರಾಶಿಪೂಜೆಯಂತಹ ಆಚರಣೆಗಳಿವೆ. ರಾಶಿ ಪೂಜೆ ಕೃಷಿಯ ಕೊನೆಪೂಜೆಯಾಗಿದ್ದು ಈ ಸಂದರ್ಭದಲ್ಲಿ ದಡ್ಡಿ ಭತ್ತದ ಅಕ್ಕಿಯನ್ನು ನೀರಿನಲ್ಲಿ ನೆನಸಿ ಅದಕ್ಕೆ ಕಾಯಿ ಬೆಲ್ಲ ಹಾಕಿದ ಫಲಹಾರವನ್ನು ಎಡೆಮಾಡುತ್ತಾರೆ. ಕಣದಲ್ಲಿ ಕೆಲಸ ಮಾಡಿದ ಮತ್ತು ಹತ್ತಿರದ ಕಣದವರೆಗೆ ಇತರ ಜನರಿಗೆ ಫಲಹಾರವನ್ನು ಹಂಚುತ್ತಾರೆ. ರಾಶಿ ಪೂಜೆಯ ನಂತರ ಮನೆಗೆ ತರುವ ಮೊದಲು ಕಣದಲ್ಲೇ ದಾಸಪ್ಪ, ತಳವಾರ, ತೋಟಿ, ಭಜಂತ್ರಿ, ಮಡಿವಾಳರಿಗೆ ಧಾನ್ಯವನ್ನು ಕೊಡುತ್ತಾರೆ.

ಈ ಊರಿನ ಜಾತ್ರೆಯು ಕೇವಲ ಧಾರ್ಮಿಕ ಮಹತ್ವವಾಗಷ್ಟೇ ಉಳಿಯದೇ ಸಾಮಾಜಿಕ ಭಾವೈಕ್ಯತೆಯ ಸಂಕೇತವಾಗಿ ರೂಪುಗೊಂಡಿದೆ. ಸಂಸ್ಕೃತಿಯ ಸಂಗಮವಾಗಿ ವಿವಿಧ ಕಲೆಗಳ ವಿಕಾಸಕ್ಕೂ ಕಾರಣವಾಗಿದೆ. ಗ್ರಾಮದ ಎಲ್ಲಾ ಕುಟುಂಬಗಳು ಸೇರಿ ಸ್ವರ್ಣ ಗೌರಮ್ಮನವರ ಜಾತ್ರೆಯನ್ನು ಮಾಡುತ್ತಾರೆ. ಇತ್ತೀಚೆಗೆ ಕೆಂಪಮ್ಮನ ಜಾತ್ರೆಯನ್ನು ಮಾಡುತ್ತಿದ್ದಾರೆ. ಪ್ರತಿವರ್ಷ ರಾಮನವಮಿಯಂದು ರಂಗನಾಥಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪ್ರತೀ ಅಮವಾಸ್ಯೆಯಂದು ವೀರಭದ್ರಸ್ವಾಮಿಯ ಉತ್ಸವ ಮತ್ತು ವಿಶೇಷ ಪೂಜೆ ಮತ್ತು ಅಭಿಷೇಕಗಳು ನಡೆಯುತ್ತವೆ.

ಆಧುನಿಕ ಸಮಾಜದಲ್ಲಿ ನಂಬಿಕೆಗಳು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತಿದ್ದರೂ ಈ ಊರಿನ ಜನಮನದಲ್ಲಿ ಇನ್ನೂ ಬೇರೂರಿವೆ. ಇವು ಮಾನವ ಜನಾಂಗದ ಸಂಸ್ಕೃತಿಯ ಜೀವ ನಾಡಿಗಳಾಗಿವೆ. ವಿದ್ಯಾವಂತ ಸಮಾಜ ಸಂಪ್ರದಾಯಗಳನ್ನು ಕಡೆಗಣಿಸಿದರೂ ಕೆಲವೊಮ್ಮೆ ಇವು ಜೀವನಕ್ಕೆ ಅನಿವಾರ್ಯ ಎಂಬಂತೆ ಅರಿವಿಲ್ಲದಂತೆ ಸಾಮಾಜಿಕ ಬದುಕಿನಲ್ಲಿ ನುಸುಳಿಕೊಳ್ಳುತ್ತವೆ.

  • ಮೋಡ ಕಟ್ಟಿದರೆ ಮಳೆ ಬರುತ್ತೆ.
  • ಪ್ರಯಾಣ ಮಾಡುವಾಗ ನರಿ ಅಡ್ಡ ಬಂದರೆ ಒಳ್ಳೆಯದಾಗುತ್ತೆ.
  • ಹೊನ್ನಾರು ಹೂಡದೆ ಹೊಲ ಉಳುವಂತಿಲ್ಲ.
  • ಒಳ್ಳೆ ಕೆಲಸಕ್ಕೆ ಹೊರಟಾಗ ಬಳೆಮಾರುವವರು, ಮುತ್ತೈದೆ, ತುಂಬಿದ ಕೊಡ ಬಂದರೆ ಒಳ್ಳೆಯದು.
  • ಗುದ್ದಲಿ ಹೆಗಲ ಮೇಲೆ ಒತ್ತವರು, ಸೌದೆ ಹೊರೆ ಹೊತ್ತವರು, ವಿಧವೆ, ಬೆಕ್ಕು, ಎದುರಿಗೆ ಬರಬಾರದು.
  • ರಾತ್ರಿವೇಳೆ ಕ್ಷೌರಿಕರನ್ನು ನೆನೆಸಬಾರದು.
  • ಸಂಜೆವೇಳೆ ಮನೆ ಕಸ ಗುಡಿಸಿ ಹೊರಹಾಕಬಾರದು.
  • ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ ದೇವರ ಪೋಟೋ ನೋಡಿ ಹೇಳಬೇಕು.
  • ಮನೆ ಮುಂದೆ ಕಾಗೆ ಅರಚಿದರೆ ನಂಟರು ಬರುತ್ತಾರೆ.
  • ಹಲ್ಲಿ ಲೊಚಗುಟ್ಟಿದರೆ ಅಂದುಕೊಂಡಿದ್ದು ಹಿಡೇರುತ್ತದೆ.
  • ರಾತ್ರಿವೇಳೆ ಗೂಬೆ ಕೂಗಿದರೆ ಯಾರೋ ಸಾಯುತ್ತಾರೆ.
  • ಕನಸಿನಲ್ಲಿ ಅನ್ನ ಕಂಡರೆ ಸತ್ತ ಸುದ್ದಿ ಬರುತ್ತೆ.
  • ಬ್ರಾಹ್ಮಣರಿಗೆ ಹಸುದಾನ ಕೊಟ್ಟರೆ ಒಳ್ಳೆಯದಾಗುತ್ತೆ.
  • ಒಡೆದ ಕನ್ನಡಿ ಮನೆಯಲ್ಲಿಡಬಾರದು.
  • ಸಂಜೆ ವೇಳೆಯಲ್ಲಿ ಮುತ್ತೈದೆಯರ ಕೈಬಳೆ ಒಡೆಯಬಾರದು.
  • ಸತ್ತ ಶವ ಹೊತ್ತ ವ್ಯಕ್ತಿ ಸ್ನಾನ ಮಾಡಲೇಬೇಕು.
  • ಅಮವಾಸ್ಯೆದಿನ ಮಗು ಜನಿಸಿದರೆ ಶಾಂತಿ ಮಾಡುವುದು.
  • ಮುಟ್ಟಾದ ಹೆಣ್ಣು ಮಕ್ಕಳು ಏಕಾಂತದಲ್ಲಿರಬೇಕು.
  • ಕಾಲು ತೊಳೆಯುವಾಗ ನೀರಿನಿಂದ ಇಮ್ಮಡಿ ನೆನೆಯಬೇಕು.
  • ಬಡಗಣ ದಿಕ್ಕಿಗೆ ತಲೆ ಹಾಕಿ ಮಲಗಬಾರದು.
  • ಕಾಗೆ ತಗುಲಿದರೆ ಸ್ನಾನ ಮಾಡಿ ಪೂಜೆ ಮಾಡಬೇಕು.
  • ತೊನ್ನು ಅತ್ತಿರುವ ವ್ಯಕ್ತಿ ಸತ್ತರೆ ಸುಡಬೇಕು.

ಪ್ರಾದೇಶಿಕ ಗಾದೆಗಳು

  • ಗಂಗಳ ಹೋದುದಕ್ಕೆ ಚೆಂಬು ಕೊಟ್ಟು ಕಣಿ ಕೇಳಿದಂಗೆ
  • ಮನಸ್ಸಿದಂತೆ ಮಾದೇವ
  • ಕಳ್ಳನ ಮನಸ್ಸು ಉಳ್ಳುಳ್ಳಗೆ
  • ದಿನ ಸಾಯುವವರಿಗೆ ಅಳುವವರು ಯಾರು
  • ಕುಣಿಲಾರದವಳಿಗೆ ನೆಲಡೊಂಕು
  • ಕುಂಟನಿಗೆ ಒಂದು ಚೇಷ್ಠೆ ಕುರುಡನಿಗೆ ನಾನಾ ಚೇಷ್ಠೆ
  • ಅಯ್ಯೋ ಎಂದರೆ ಆರು ತಿಂಗಳು ರೋಗ
  • ಊರು ಇದ್ದತಾವ ಹೊಲಗೇರಿ
  • ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
  • ಹಾಸಿಗೆಯಿದ್ದಷ್ಟು ಕಾಲು ಚಾಚು
  • ಭರಣಿ ಮಳೆ ಆದ್ರೆ ಧರಣಿಲ್ಲ ಫಲ
  • ಕಿವಿಕಿತ್ತರೂ ಕಿರಿಮಗ ಪ್ರೀತಿ
  • ಎರಡು ಕಣ ಕಾದು ದಾಸಯ್ಯ ಕೆಟ್ಟ
  • ಮನೆಗೆ ಮಾರಿ ಪರರಿಗೆ ಉಪಕಾರಿ
  • ಓತಿಕ್ಯಾತನಿಗೆ ಬೇಲಿ ಸಾಕ್ಷಿ
  • ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು

ಉಪಸಂಹಾರ

ಪಾರಂಪರಿಕ ಸಂಸ್ಕೃತಿ ಮತ್ತು ಐತಿಹಾಸಿಕತೆಗೆ ಹೆಸರಾಗಿರುವ ಗುಬ್ಬಿ ತಾಲೂಕಿನಲ್ಲಿ ಅಮ್ಮನಘಟ್ಟವೂ ಒಂದಾಗಿದೆ. ಸಮನ್ವಯತೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಪ್ರಾಗೈತಿಹಾಸಿಕ ಆಯುಧಗಳು ದೇವಾಲಯಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ಲಿಂಗು ಮುದ್ರೆಕಲ್ಲುಗಳು, ಕರವುಗಲ್ಲುಗಳು, ಇಂದಿಗೂ ಮೂಲಸಾಕ್ಷಿಗಳಾಗಿ ಪರಂಪರೆಯನ್ನು ಪ್ರತಿ ಬಿಂಬಿಸುತ್ತಿವೆ. ಈ ಪ್ರಬಂಧವು ಸಂಪೂರ್ಣವಾಗಿ ಅಮ್ಮನಘಟ್ಟದ ಸಾಂಸ್ಕೃತಿಕ ಪರಂಪರೆಯನ್ನು ಕುರಿತ ಅಧ್ಯಯನವಾಗಿದೆ. ಇಂತಹ ಒಂದು ಸಣ್ಣ ಪ್ರಯತ್ನದಿಂದ ಅಮ್ಮನಘಟ್ಟದ ಪರಿಚಯ, ಭೌಗೋಳಿಕತೆ, ವಾಯುಗುಣ, ಅರಣ್ಯಸಂಪತ್ತು, ಜಲಸಂಪತ್ತು, ಭೂಮೇಲ್ಮೈ ಸ್ವರೂಪ, ಪ್ರಾಗಿತಿಹಾಸ ಆಯುಧಗಳು, ಚಾರಿತ್ರಿಕ ಹಿನ್ನೆಲೆ, ದೇವಾಲಯಗಳು, ವೀರಗಲ್ಲುಗಳು, ಮಹಾಸತಿಕಲ್ಲು, ಲಿಂಗುಮುದ್ರೆಕಲ್ಲು, ಸಾಮಾಜಿಕ ಆಯಾಮಗಳು, ಜಾನಪದ ವೈಶಿಷ್ಟ್ಯತೆ ಕುರಿತು ಅಧ್ಯಯನ ಮಾಡಲಾಗಿದೆ. ಇಲ್ಲಿ ಗಮನಿಸಲಾದ ಮಹತ್ವದ ಅಂಶವೆಂದರೆ ನಿಧಿಗಳ್ಳರು ಒಂದು ವೀರಗಲ್ಲನ್ನು ಅಗೆದು ಬೀಳಿಸಿದ್ದರು. ಅದನ್ನು ಮತ್ತೆ ನಿಲ್ಲಿಸಿ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ಸಂರಕ್ಷಿಸಲಾಗಿದೆ. ಹೀಗೆ ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ.

ಆಧಾರ ಗ್ರಂಥಗಳು

  1. ತಿಪ್ಪೇರುದ್ರಸ್ವಾಮಿ ಹೆಚ್., ``ಕರ್ನಾಟಕ ಸಂಸ್ಕೃತಿ ಸಮೀಕ್ಷೆ'', ಡಿ.ವಿ.ಕೆ ಪ್ರಕಾಶನ, ಮೈಸೂರು, 2007
  2. ಚಿದಾನಂದ ಮೂರ್ತಿ ಎಂ., ``ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ'', ಸಪ್ನಬುಕ್‍ಹೌಸ್, ಬೆಂಗಳೂರು, 1966
  3. ಅಪರ್ಣ ಕೂ.ಸ., ``ದೇವಾಲಯ ವಾಸ್ತುಶಿಲ್ಪ ಪರಿಚಯ'', ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999
  4. ``ತಿಳಿಯೋಣ ನಮ್ಮೂರ ಇತಿಹಾಸ'', ಸಾರ್ವಜನಿಕ ಶಿಕ್ಷಣ ಇಲಾಖೆ, ಗುಬ್ಬಿ
  5. ಬೆಟಗೇರಿ ಕೃಷ್ಣಶರ್ಮ., ``ಕರ್ನಾಟಕ ಜನಜೀವನ'', ಸಮಾಜ ಪುಸ್ತಕಾಲಯ, ಧಾರವಾಡ, 1971
  6. ಮಹಾದೇವಯ್ಯ ಟಿ.ಆರ್., ``ಗುಬ್ಬಿ ತಾಲ್ಲೂಕು ದರ್ಶನ'', ಐ.ಬಿ.ಹೆಚ್ ಪ್ರಕಾಶನ, ಬೆಂಗಳೂರು, 1984
  7. ಲಕ್ಷ್ಮಣ್ ತೆಲಗಾವಿ (ಸಂ)., ``ಸ್ಥಳೀಯ ಚರಿತ್ರೆ ಅಧ್ಯಯನದ ತಾತ್ವಿಕತೆ ಮತ್ತು ಸ್ವರೂಪ'', ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2003
  8. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2004
  9. ಸಿದ್ದಲಿಂಗಪ್ಪ ಕೆ.ಎಸ್.(ಸಂ)., ``ಚೆನ್ನಡಿ'' ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, 1994
  10. ಶಿವತಾರಕ್, ಕೆ.ಬಿ., ``ಕರ್ನಾಟಕದ ಪುರಾತತ್ವ ನೆಲೆಗಳು'', ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2001
  11. ಸೋಮಶೇಖರ್ ಎಸ್.ವೈ., ``ಜಟಿಂಗ ರಾಮೇಶ್ವರ ಸಾಂಸ್ಕೃತಿಕ ದರ್ಶನ'', ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2004
  12. ಶ್ರೀನಿವಾಸ ಎ.ಜಿ., ``ನವಶಿಲಾಯುಗದ ಶಿಲಾಕೊಡಲಿ ಪತ್ತೆ'', ಪ್ರಜಾವಾಣಿ ದಿನಪತ್ರಿಕೆ, ಅಕ್ಟೋಬರ್ 24.2018


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal