Tumbe Group of International Journals

Full Text


ಮಹಿಳೆಯರಿಗೆ ಶಿಕ್ಷಣ ಮತ್ತು ಸಮಾನತೆ

ಡಾ. ಬಿ.ನಿರ್ಮಲ

ಸಹಾಯಕ ಪ್ರಾಧ್ಯಾಪಕರು

ಕನ್ನಡ ವಿಭಾಗ,

ಸ.ಪ್ರ.ದ. ಕಾಲೇಜು, ತುಮಕೂರು.

nirmalabma@gmail.com     Ph: 9902498873

ಪ್ರಸ್ತಾವನೆ     

ಮನುಷ್ಯನ ಸಾಂಸ್ಕೃತಿಕ ಇತಿಹಾಸವನ್ನು ಕೆದಕುತ್ತಾ ಹೊರಟರೆ ಹೆಣ್ಣಿಗೆ ತನ್ನದೇ ಆದ ಒಂದು ವಿಶಿಷ್ಟ ಸ್ಥಾನವಿದೆ. ಮಾನವ ಶಾಸ್ತ್ರಜ್ಞರು ಗುರುತಿಸುವಂತೆ ಪ್ರಾಚೀನ ಸಮಾಜದಲ್ಲಿ ಕುಟುಂಬ ಪರಿಕಲ್ಪನೆಗಳಾದ ತಾಯಿ-ಮಗು ಇವರ ಸಂಬಂಧ ತಾಯಿಯೊಟ್ಟಿಗೆ ಗುರುತಿಸಲ್ಪಡುತ್ತಿತ್ತೇ ಹೊರತು ತಂದೆಯೊಂಟಿಗಲ್ಲ. ಮಗುವಿನ ಪರಿಪೂರ್ಣ ಹಕ್ಕು ತಾಯಿಯದಾಗಿತ್ತು. ಈ ಹಿನ್ನೆಲೆಯಲ್ಲಿ ತಾಯಿಗೆ ಅಪಾರವಾದ ಗೌರವ ಸ್ಥಾನಮಾನಗಳಿದ್ದವು. ಪ್ರಸ್ತುತದಲ್ಲಿಯೂ ಮೂಲವಾಸಿ ಬುಡಕಟ್ಟುಗಳು, ಕೇರಳ ಹಾಗೂ ಕರಾವಳಿ ಕರ್ನಾಟಕದ ಬ್ರಾಹ್ಮಣೇತರ ಸಮುದಾಯಗಳಲ್ಲಿ ಮಾತೃರೂಪಿ ವ್ಯವಸ್ಥೆ, ಸಂಸ್ಕೃತಿ ಅಸ್ಥಿತ್ವದಲ್ಲಿದೆ.  ಇಲ್ಲಿ ಆಸ್ತಿ ವಂಶಪರಂಪರೆಯ ಹಕ್ಕುಗಳೆಲ್ಲವೂ ತಾಯಿಗೆ ಸೇರಿದ್ದಾಗಿದೆ. ತಲೆಮಾರಿನಿಂದ  ತಲೆಮಾರಿಗೆ, ತಾಯಿಯಿಂದ ಮಗಳಿಗೆ ಅದು ವರ್ಗವಾಗುತ್ತಾ ಸಾಗುತ್ತದೆ.

            ಕೃಷಿ ಸಂಸ್ಕೃತಿಯ ಶೋಧ ಹೆಣ್ಣಿನ ಸಾಧನೆಯಾದರೂ ಅದೂ ದಬಾವಣೆಗೆ ಒಳಗಾದದ್ದು ದುರಂತವೇ ಸರಿ. ಈ ಸಂದರ್ಭದಲ್ಲಿ ಕೃಷಿಯಿಂದ ಪುರುಷ ಸರ್ವಾಧಿಕಾರಿಯಾದ. ಪುರುಷ ಪ್ರಧಾನತೆ ಮತ್ತು ಮಹಿಳಾ ಅಧೀನತೆ ಖಾಸಗಿ ಆಸ್ತಿಯ ಉಗಮದೊಟ್ಟಿಗೆ ಆರಂಭಗೊಂಡಿತು. ಇಡೀ ಉತ್ಪಾದನಾ ವ್ಯವಸ್ಥೆಗೆ ಗಂಡು ಒಡೆಯನಾದ. ಈ ಮೂಲಕ ಹೆಣ್ಣು ಶಿಕ್ಷಣ ಮತ್ತು ಹೊರಜಗತ್ತಿನಿಂದ ದೂರವಾಗಿ ಗೃಹಬಂಧನಕ್ಕೊಳಗಾದಳು.

            ಶಿಕ್ಷಣ ಮತ್ತು ಆರ್ಥಿಕ ಚೈತನ್ಯ ಕಳೆದುಕೊಂಡ ಹೆಣ್ಣು ದೌರ್ಬಲ್ಯಕ್ಕೊಳಗಾದಳು. ಅಲ್ಲಿಂದಲೇ ಹೆಣ್ಣಿನ ಮೇಲೆ ದಬ್ಬಾಳಿಕೆ ಆರಂಭಗೊಂಡಿತು. ಗಂಡು ವ್ಯಾಖ್ಯಾನಿಸಿದ ರೀತಿ, ಆತ ಹೇರಿದ ನಿಯಮ ನಿಬಂಧನೆಯಂತೆ ಬದುಕಲಾರಂಭಿಸಿದಳು. ಗಂಡಿನ ಆಜ್ಞಾಪಾಲಕಳ ರೀತಿ ಪಾತ್ರ ನಿರ್ವಹಿಸಲಾರಂಭಿಸಿದಳು. ಆತ ರೂಪಿಸಿದ ಮೌಲ್ಯಗಳ ಪಾಲಕಳಾದಳು. ಇವೆಲ್ಲವೂ ಅನಂತರದ ಕಾಲಘಟ್ಟದಲ್ಲಿ ರೂಪುಗೊಂಡ ಸಾಮಾಜಿಕ ಸಾಂಸ್ಕೃತಿಕ ಉತ್ಪನ್ನ. ನಾವು ಪೂರ್ವಕ್ಕೆ ಹೊಗಿ ಸಂಸ್ಕೃತಿಯ ಅವಲೋಕನ ಮಾಡಿದರೆ ಹೆಣ್ಣಿನ ಚಿತ್ರಣ ಬೇರೆಯದೇ ಆಗಿತ್ತು ಆಕೆಯ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶಗಳಿದ್ದವು. ಗಾರ್ಗಿ, ಮೈತ್ರೇಯಿ, ಲೋಪಮುದ್ರಾ, ಘೋಷಾ, ಯಮಿ, ಪುಲೋಮಿ, ನೋದಾರಂತಹ ಅನೇಕ ಸ್ತ್ರೀಯರು ಪ್ರವಾದಿ ವಿದ್ವಾಂಸರುಗಳ ಧಾರ್ಮಿಕ ಕಾರ್ಯಗಳಲ್ಲಿ ಪುರುಷ ಪಂಡಿತರಿಗೆ ಸರಿಸಮಾನವಾಗಿ ಭಾಗವಹಿಸಿ ತಾತ್ವಿಕ ಚರ್ಚೆಗಳಲ್ಲಿ ಪಾಲ್ಗೊಂಡು ವಿಚಾರ ಮಂಡನೆ ಮಾಡಿ ತಮ್ಮ ಶಾಸ್ತ್ರ ಪ್ರವೀಣತೆಯನ್ನು ಮೆರೆಯುತ್ತಿದ್ದುದುಂಟು. ಸಾಮಾನ್ಯ ಮಹಿಳೆಯರೂ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನಮಾನಗಳನ್ನು ಪಡೆದುಕೊಂಡು ಮನೆಯಲ್ಲಿ, ಸಮಾಜದಲ್ಲಿ ವಿಶೇಷ ಗೌರವ ಮನ್ನಣೆಗಳಿಗೆ ಭಾಜನರಾಗಿದ್ದರು. ಕುಟುಂಬದಲ್ಲಿ `ಮಾತೃದೇವೋಭವ’ ಎಂಬ ಭಾವನೆಯಿದ್ದು ತಾಯಿಗೆ ಮೊದಲ ನಮನ, ನಂತರದ್ದು ತಂದೆಗೆ ಗೌರವ `ಪಿತ್ರುದೇವೋಭವ’. ಆಸ್ತಿ, ವಂಶಗಳ ಹಕ್ಕು, ಅಧಿಕಾರ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ತಂದೆಯದಾದರೂ ಪರಂಪರೆ ಹಾಗೂ ಸಂಸ್ಕಾರಗಳಿಗೆ ತಾಯಿಯೇ ಗುರುವಾಗಿದ್ದಳು. ತಾಯಿ ಮಗುವಿನ ಬಾಂಧವ್ಯ ಆಪ್ತವಾದುದು ಮತ್ತು ಪವಿತ್ರವಾದುದು. ಮಗು ಭ್ರೂಣದ ಸ್ಥಿತಿಯಿಂದ ಬಾಲ್ಯಾವಸ್ಥೆಯವರೆಗೆ ತಾಯಿಯನ್ನೇ ಆಶ್ರಯಿಸಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಿಂದ `ನೂಲಿನಂತೆ ಸೀರೆ, ತಾಯಿಯಂತೆ ಮಕ್ಕಳು’ ಎಂಬ ಗಾದೆ ಪ್ರಚಲಿತದಲ್ಲಿದೆ. ಗಾಂಧೀಜಿ, ಈಶ್ವರಚಂದ್ರ ವಿದ್ಯಾಸಾಗರ, ವೀರೇಶಲಿಂಗಂನಂತಹ ಶಿಕ್ಷಣತಜ್ಞರು `ಮಹಿಳೆ ಒಬ್ಬ ಪುರುಷನಿಗಿಂತ ಹೆಚ್ಚು ಚೆನ್ನಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಸಬಲ್ಲಳು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಂಸದ ಮುದ್ದೆಯಂತಿರುವ ಮಗುವನ್ನು ಮನುಷ್ಯನನ್ನಾಗಿ ರೂಪಿಸಿ ಕಲಿಸುವವಳು ತಾಯಿ. ಹಾಗಾಗಿಯೇ `ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎಂದು ಕವಿವಾಣಿ ಸಾರಿ ಹೇಳಿದೆ.

            ಹೆಣ್ಣು ಯಾವಾಗ ವಿದ್ಯಾಭ್ಯಾಸದಿಂದ ದೂರವಾದಳೋ ಆ ಕ್ಷಣದಿಂದಲೇ ಹೆಣ್ಣಿನ ಅಧೀನತೆ, ಶೋಷಣೆಯ ಪರ್ವ, ಆರಂಭಗೊಂಡಿತು. ಹೆಣ್ಣನ್ನು ಶಿಕ್ಷಣದಿಂದ ಹೊರಗಿಟ್ಟದ್ದೇ ಅವಳನ್ನು ಪುರುಷಾಧೀನವಾಗಿಸಲು, ವಸಾಹತುಶಾಹಿ ಏನೆಲ್ಲಾ ಎಡವಟ್ಟುಗಳನ್ನು ಮಾಡಿ ನಮ್ಮೆಲ್ಲರನ್ನು ತಲ್ಲಣಗೊಳಿಸಿದರೂ, ಕೆಲವು ಅನಿಷ್ಠ ಪದ್ಧತಿಗಳನ್ನು ನಮ್ಮಿಂದ ದೂರವಾಗಿಸಿತು. ಅದರಲ್ಲೂ ಮಹಿಳಾ ಸಮಸ್ಯೆಗಳಾದ ಬಾಲ್ಯವಿವಾಹ, ಬಹುಪತ್ನಿತ್ವ, ದೇವದಾಸಿ ಪದ್ಧತಿ, ವೇಶ್ಯಾವಾಟಿಕೆಯಂತಹ ಅನೇಕ ದುಷ್ಟ ನಡಾವಳಿಗಳನ್ನು ಬುಡಸಮೇತ ಕಿತ್ತೆಸೆಯಲು ಸ್ತ್ರೀ ಶಿಕ್ಷಣವನ್ನು ಪ್ರಧಾನವಾಗಿ ಕಂಡುಕೊಳ್ಳಲಾಯ್ತು. ದೇಶೀಯ ಶಿಕ್ಷಣ ಕ್ರಮ ನಾಶವಾಗಿ ಇಂಗ್ಲಿಷ್ ಶಿಕ್ಷಣ ಪದ್ಧತಿ ಆರಂಭಗೊಂಡದ್ದು ಮಹಿಳೆಯರ ಪಾಲಿಗೆ ಹೊಸ ಹೊಂಗಿರಣವೇ ಸರಿ. ಅಕ್ಷರದ ಓದು-ಬರೆಹ ಕೇಳಿಸಿಕೊಳ್ಳುವಿಕೆಗೂ ಹೆಣ್ಣಿಗೆ ನಿಷೇಧವಿತ್ತು. ಇಡೀ ಶಿಕ್ಷಣ ವ್ಯವಸ್ಥೆಯಿಂದ ಮಹಿಳೆಯನ್ನು ದೂರ ಇಡಲಾಗಿತ್ತು. ಮುಂದೆ ಸ್ತ್ರೀ ಶಿಕ್ಷಣ ಮತ್ತು ಮಹಿಳಾ ಸಮಾನತೆಗಳು ಹೊಸ ಇತಿಹಾಸ ರೂಪಿಸುವಲ್ಲಿ ಬುನಾದಿಯಾಯ್ತು. ಈ ಸಂದರ್ಭದಲ್ಲಿ ಎರಡು ಅಂಶಗಳು ಪ್ರಮುಖವಾದವು. ಒಂದನೆಯದು ಹೆಣ್ಣು ಶಿಕ್ಷಣವನ್ನು ಪಡೆಯುವಂತಾದುದು, ಮತ್ತೊಂದು ಹೆಣ್ಣಿನ ಕುರಿತ ಹೊಸ ಚಿಂತನಾಕ್ರಮ ಆರಂಭಗೊಂಡುದು. ಇವುಗಳು ಮಹಿಳೆಯ ಬದುಕಿನಲ್ಲಿ ಹೊಸ ಹೊಂಗಿರಣ ಮೂಡಿಸಿದವು.

            ಗಾಂಧೀಜಿಯವರಿಗೆ ಸ್ತ್ರೀ ಶಿಕ್ಷಣದಿಂದ ಸ್ತ್ರೀಶಕ್ತಿ ಹೆಚ್ಚುತ್ತದೆಂಬ ನಂಬಿಕೆ ಅಪಾರವಾಗಿತ್ತು. ಆದ್ದರಿಂದಲೇ ಸ್ತ್ರೀ ಶಿಕ್ಷಣ ಮತ್ತು ಸಮಾನತೆಯ ಕುರಿತು ಒತ್ತಿಹೇಳುತ್ತಾ ಮಹಿಳಾ ಶಕ್ತಿಯನ್ನು ತಮ್ಮ ಹೋರಾಟಕ್ಕೆ ಸಕ್ರಿಯವಾಗಿ ಬಳಸಿಕೊಳ್ಳಲು ಬಯಸಿದರು. ಹಾಗಾಗಿಯೇ ರಾಷ್ಟ್ರೀಯ ಚಳುವಳಿಯ ಅಂಗವನ್ನಾಗಿ ಸ್ತ್ರೀ ಶಿಕ್ಷಣವನ್ನು ಬೆಂಬಲಿಸಲಾಯ್ತು. ಅಂದು ಸ್ತ್ರೀ ಶಿಕ್ಷಣದಿಂದ ಹೆಣ್ಣನ್ನು ಒಳ್ಳೆಯ ತಾಯಿ ಮತ್ತು ಗೃಹಿಣಿಯನ್ನಾಗಿ ರೂಪಿಸುವ ಅಗತ್ಯವಿತ್ತು. ಕುಟುಂಬದಲ್ಲಿ ಹಾಗು ಪರಿಸರದಲ್ಲಿ ನಾಡು, ನುಡಿಯ ಬಗ್ಗೆ ಕಾಳಜಿ, ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಪ್ರೇಮವನ್ನು ಮೂಡಿಸುವಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾದುದೆಂಬ ಸತ್ಯದ ಅರಿವು ಗಾಂಧೀಜಿಯವರಿಗಿತ್ತು. ಈ ಎಲ್ಲಾ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಆಕೆ ಶಿಕ್ಷಿತಳಾಗಬೇಕೆಂಬ ಹಂಬಲ ಅವರದಾಗಿತ್ತು. ಮಹಿಳೆ ಸ್ವಾವಲಂಬಿಯಾಗಬೇಕೆಂಬ ಮಹದಾಸೆ ಗಾಂಧೀಜಿಯವರದ್ದು. ಹೆಣ್ಣಿನ ಸ್ವಾವಲಂಬಿ ಬದುಕಿಗೆ ಶಿಕ್ಷಣ ಅಡಿಪಾಯ ಎಂಬ ಭಾವನೆಯಿಂದ ಕಾರ್ಯಪ್ರವೃತ್ತರಾಗಿ ನಿಂತರು. ಮಹಿಳಾ ಶಿಕ್ಷಣದ ಫಲವಾಗಿ ಮಹಿಳೆಯರು ರಾಷ್ಟ್ರೀಯ ಚಳುವಳಿಯ ಭಾಗವಾಗಿ ಸ್ತ್ರೀಶಕ್ತಿಯ ಬಿಡುಗಡೆಯ ಹಾಡು ಹಾಡಿದರು. ಸಾಂಪ್ರದಾಯಿಕತೆಯನ್ನು ಕಿತ್ತೆಸೆದು, ಮಹಿಳೆಯರು ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಸ್ತ್ರೀಯರು ಶಿಕ್ಷಿತರಾದ್ದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಶೋಷಣೆಯ ವಿರುದ್ಧ ಹೋರಾಡುವ ಮನಸ್ಥಿತಿಗಳು ರೂಪುಗೊಂಡವು. ಇದರ ಫಲವಾಗಿ ಸ್ತ್ರೀ ಮುಕ್ತಿಯ ಕದ ತಟ್ಟಲಾಯ್ತು.

            ಸ್ತ್ರೀ ಶಿಕ್ಷಣದ ಪ್ರಯತ್ನಗಳು ವಸಾಹತು ಕಾಲದಿಂದ ನಡೆಯುತ್ತಾ ಬಂದಿದ್ದರೂ ನಿರೀಕ್ಷಿತ ಫಲ ಸಾಧನೆ ಆಗಿಲ್ಲ. ಸ್ತ್ರೀ ಪುರುಷರ ನಡುವೆ ಶಿಕ್ಷಣದಲ್ಲಿ ಅಸಮಾನತೆ ಇಂದಿಗೂ ಉಳಿದಿರುವುದು ದುಃಖದ ಸಂಗತಿಯಾಗಿದೆ. ಪ್ರತಿಶತ ಸಂಖ್ಯೆಯಲ್ಲಿ ಮಹಿಳಾ ಅಕ್ಷರಸ್ಥರ ಸಂಖ್ಯೆ ಪುರುಷರಿಗಿಂತ ಗಣನೀಯವಾಗಿ ಕಡಿಮೆ ಇದೆ. ಮಹಿಳಾ ಶಿಕ್ಷಣಕ್ಕೆ ತೊಡಕಾಗಿರುವ ಅಂಶಗಳನ್ನು ಗಮನಿಸಿದರೆ ಮುಖ್ಯವಾದುದು ನಮ್ಮಲ್ಲಿರುವ ಲಿಂಗಭೇದ ನೀತಿ ಹಾಗೂ ಮಹಿಳಾ ಬದುಕಿನ ಇಕ್ಕಟ್ಟುಗಳು ಪ್ರಮುಖವಾದವು. ಜನರಲ್ಲಿರುವ ಹೆಣ್ಣಿನ ಬಗೆಗಿನ ತಪ್ಪು ತಿಳುವಳಿಕೆಗಳಾದ `ಹೆಣ್ಣು ಕಲಿತು ಏನಾಗಬೇಕು ?’ `ಹೆಣ್ಣು ಪರರ ವಸ್ತು’, `ಮದುವೆ ಹಾಗೂ ತಾಯ್ತನಗಳೆ ಅವಳಿಗೆ ಪ್ರಧಾನ’ಗಳಂತಹ ಗ್ರಹಿಕೆಗಳು ಸ್ತ್ರೀ ಶಿಕ್ಷಣಕ್ಕೆ ಅಡ್ಡಿ ಉಂಟುಮಾಡುತ್ತಿವೆ. ಮಹಿಳೆಯರ ಬದುಕಿನ ಜೈವಿಕ ಪಲ್ಲಟಗಳು ಶಿಕ್ಷಣಕ್ಕೆ ಅಡ್ಡಿಯಾಗಿವೆ. ಕುಟುಂಬದ ದಿನನಿತ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಆಕೆಗೆ ವಿದ್ಯಾಭ್ಯಾಸಕ್ಕೆ ಬಿಡುವು ಸಿಗುವುದೇ ದುಸ್ತರವಾಗಿದೆ. ಹೆಣ್ಣು ಮದುವೆ, ತಾಯ್ತನ, ಅನಾರೋಗ್ಯಗಳಿಂದ ಬಳಲುತ್ತಾ ಬದುಕನ್ನು ಸವೆಸುತ್ತಿದ್ದಾಳೆ. ಶಿಕ್ಷಣವಿಲ್ಲದೆ ಮಹಿಳೆಯರು ಮೌಢ್ಯತೆಗೆ ಒಳಗಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಬಳಲುತ್ತಿದ್ದಾರೆ. ಹಾಗಾಗಿಯೇ ಸರ್ಕಾರ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಕಾಳಜಿ, ಕಳಕಳಿ ವಹಿಸಿ ಅನೇಕ ರೀತಿಯ ಕಾರ್ಯಕ್ರಮಗಳ ಮೂಲಕ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆದರೂ ಗಣನೀಯ ಪ್ರಮಾಣದಲ್ಲಿ ಅದು ಪರಿಣಾಮ ಬೀರದಿರುವುದು ವಿಶಾದದ ಅಂಶವಾಗಿದೆ. ಮೊದಲು ಜನರಲ್ಲಿ ಅರಿವು ಮೂಡಿ ಅದರ ಮಹತ್ವ ತಿಳಿದು ಮನಸ್ಸುಗಳು ಬದಲಾದಾಗ ಮಾತ್ರ ಸ್ತ್ರೀಗೆ ಶಿಕ್ಷಣ ದೊರೆತು, ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯವಾಗುತ್ತದೆಂಬುದು ನನ್ನ ಆಲೋಚನೆ.

ಗ್ರಂಥ ಋಣ

  1. ಡಾ. ಹೆಮಲತಾ ಹೆಚ್.ಎಂ. - ಮಹಿಳಾ ಅಧ್ಯಯನ : ಡಿ.ವಿ.ಕೆ.ಮೂರ್ತಿ, ಪ್ರಕಾಶನ ಮೈಸೂರು, 2007.
  2. ಡಾ. ಗಾಯಿತ್ರಿ ನಾವಡ - ಮಹಿಳಾ ಸಂಕಥನ : ಕನ್ನಡ ಪುಸ್ತಕ ಪ್ರಾಧಿಕಾರ, 2003.
  3. ಡಾ. ಗೀತಾ ಕೃಷ್ಣಮೂರ್ತಿ - ಮಹಿಳಾ ಹಕ್ಕುಗಳು : ಮಹಿಳಾ ಅಧ್ಯಯನ ಕೇಂದ್ರ, ಹಂಪಿ 2009.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal