Tumbe Group of International Journals

Full Text


ತುಮಕೂರು ಜಿಲ್ಲೆಯ ಕಣ ಸಂಸ್ಕೃತಿ.

ಲಕ್ಷ್ಮೀಕಾಂತ

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಜಾನಪದ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276

ಮೊ.ಸಂ-9900389923,           Email-llakshmikantha960@gmail.com

ಪ್ರಸ್ತಾವನೆ.

ನಮ್ಮ ಸಾಂಸ್ಕೃತಿಕ ಪರಿಸರದಲ್ಲಿ ‘ಕಣ’ ಎಂಬುದು ಮಹತ್ವದ ಪಾತ್ರವನ್ನು ವಹಿಸಿದೆ. ಇದು ದೇವಾಲಯದಷ್ಟೇ ಪೂಜನೀಯವಾದ ಸ್ಥಾನವನ್ನು ಪಡೆದಿದೆ. ‘ಕಣ’ ಎಂಬುದು ಹೊಲ ಅಥವಾ ಗದ್ದೆಗಳಲ್ಲಿ ಧಾನ್ಯಗಳ ಒಕ್ಕಣೆಗಾಗಿ ಚೌಕಾಕಾರವಾಗಿ ಇಲ್ಲವೇ ವೃತ್ತಾಕಾರವಾಗಿ ರಚಿಸುವ ಅಂಗಳವಾಗಿದೆ. ಧಾನ್ಯಗಳ ಕೊಯ್ಲು ಮುಗಿದ ನಂತರ ಉಳಿದ ಪೈರಿನ ಕೂಳೆಗಳನ್ನು ಕೆತ್ತಿ ನೆಲವನ್ನು ಸಮತಟ್ಟಾಗಿಸಿಕೊಂಡು ಕಣವನ್ನು ನಿರ್ಮಿಸಲಾಗುತ್ತದೆ. ನಂತರ ನೀರಿನಿಂದ ನೆನೆಸಿ ದನಗಳಿಂದ ತುಳಿಸಿ ಸಗಣಿ ಬಗ್ಗಡದಿಂದ ಸಾರಿಸಲಾಗುತ್ತದೆ. ಈ ರೀತಿಯಾಗಿ ನಿರ್ಮಿತಗೊಂಡ ಕಣದ ಆವರಣದ ಮಧ್ಯಭಾಗದಲ್ಲಿ ವಿಶೇಷವಾಗಿ ‘ಆಲ’ದ ಅಥವಾ ‘ಕಕ್ಕೆ’ ಮರದ ತೊಡೆ ಗಾತ್ರದ ಗೂಟವೊಂದನ್ನು ನಿಲ್ಲಿಸಲಾಗುತ್ತದೆ. ಇದು ನಾಲ್ಕೈದು ಅಡಿ ಎತ್ತರವಿದ್ದು ಇದನ್ನು ‘ಮೇಟಿ ದೇವರು’ ಎಂದು ಕರೆಯುತ್ತಾರೆ. ಇದಕ್ಕೆ ಪೂಜೆ ಸಲ್ಲಿಸಿದ ತರುವಾಯ ಕಣದ ಚಟುವಟಿಕೆಗಳು ಪ್ರಾರಂಭವಾಗುತ್ತವೆ.

ತುಮಕೂರು ಜಿಲ್ಲೆಯು ಬಯಲು ನಾಡಿನ ಪ್ರದೇಶ. ಈ ಜಿಲ್ಲೆಯ ಜನರು ಕೃಷಿಯನ್ನೆ ಮುಖ್ಯ ಕಸುಬನ್ನಾಗಿ ಅವಲಂಬಿಸಿದ್ದಾರೆ. ಇಂತಹ ಜಿಲ್ಲೆಯು ಕೃಷಿ ಚಟುವಟಿಕೆಯ ಪ್ರತಿಯೊಂದು ಹಂತದಲ್ಲಿಯೂ ತನ್ನದೇ ಆದ ವಿಶಿಷ್ಟ ಆಚರಣೆ, ಪೂಜಾ ವಿಧಿ ವಿಧಾನಗಳನ್ನು ರೂಢಿಸಿಕೊಂಡಿದೆ. ಹಾಗೆಯೇ ಇಂದಿಗೂ ಅವುಗಳನ್ನು ಮುಂದುವರೆಸಿಕೊಂಡು ಬರುತ್ತಿರುವುದನ್ನು ನೋಡಬಹುದು. ಇವು ನಮ್ಮ ಜನಪದರ ಬದುಕಿನ ಭಾಗವೇ ಆಗಿವೆ.

ತುಮಕೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವುದೇ ‘ಹೊನ್ನಾರು’ ಕಟ್ಟುವುದರ ಮೂಲಕ. ಇದು ಮುಂಗಾರಿನ ಮೊಟ್ಟ ಮೊದಲ ಉಳುಮೆಯಾಗಿರುತ್ತದೆ. ಮೊದಲ ಮಳೆ ಬಿದ್ದ ನಂತರ ಊರಿನ ಹಿರಿಯರೆಲ್ಲ ಸೇರಿ ಒಂದು ಜೊತೆ ಎತ್ತು, ನೇಗಿಲು, ನೊಗಗಳೊಡನೆ ಗ್ರಾಮದ ದೇವಾಲಯದಲ್ಲಿ ‘ಪಿಳ್ಳಾರತಿ’ (ಪಿಳ್ಳೇರಾಯ), ನೆಲಗಡಲೆ ಅಕ್ಕಿ, ಹಣ್ಣು ಕಾಯಿಗಳಿಂದ ಪೂಜಿಸಿ ಊರ ಸುತ್ತಲು ಒಂದು ಸುತ್ತು ದನಗಳಿಗೆ ಹೂಡಿದ ನೇಗಿಲು ನೊಗದೊಂದಿಗೆ ಪ್ರದಕ್ಷಿಣೆ ಹಾಕಿಸುತ್ತಾರೆ. ಏಕೆಂದರೆ ಊರಿಗೆ ಒಳ್ಳೆಯದಾಗಲಿ ಮತ್ತು ಫಸಲು ಉತ್ತಮವಾಗಿ ಬರಲಿ ಎಂಬುದು ಇದರ ಹಿಂದಿನ ಆಶಯ. ಈ ಕಾರಣಕ್ಕೆ ಗ್ರಾಮದ ಸುತ್ತು ಬರುತ್ತಾರೆ. ತದನಂತರ ಗ್ರಾಮದ ಮುಖ್ಯಸ್ಥ ಅಥವಾ ಹೊನ್ನಾರು ಕಟ್ಟಿಸಿದ ವ್ಯಕ್ತಿಯ ಹೊಲದಲ್ಲಿ ನಾಲ್ಕೈದು ಸುತ್ತು ಉಳುವ ಮೂಲಕ ಈ ಆಚರಣೆಯು ಮುಕ್ತಾಯವಾಗುತ್ತದೆ. ‘ಹೊನ್ನಾರು’ ರೈತರಿಗರ ಲಕ್ಷ್ಮಿಯ ಸ್ವರೂಪವಾದ ಕಾರಣ ಕೃಷಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ.

ಇದು ಜಿಲ್ಲೆಯ ಒಟ್ಟಾರೆ ‘ಹೊನ್ನಾರು’ ಕಟ್ಟುವ ಆಚರಣೆಯಾದರೆ, ಕುಣಿಗಲ್ಲು ಮೊದಲಾದ ತಾಲ್ಲೂಕುಗಳಲ್ಲಿ ‘ಯುಗಾದಿ’ ಹಬ್ಬದ ‘ವಸ್ತಡಕಿ’ನ ದಿನ ‘ಹೊನ್ನಾರು’ ಕಟ್ಟುವ ರೂಢಿ ಇದೆ. ‘ವಸ್ತಡಕಿ’ನ ದಿನವೇ ಹೊನ್ನಾರು ಕಟ್ಟಿದರೆ ಶಾಸ್ತ್ರ, ದಿನ, ವಾರ, ನಕ್ಷತ್ರಗಳನ್ನು ಕೇಳುವುದಿಲ್ಲ. ಈ ದಿನವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಾದರೆ ದಿನ, ವಾರ, ನಕ್ಷತ್ರ ಹಾಗೂ ಯಾರ ಹೆಸರಿನಲ್ಲಿ ‘ಹೊನ್ನಾರು’ ಕಟ್ಟಬೇಕು ಎಂಬುದನ್ನು ಮೊದಲೆ ನಿರ್ಧರಿಸಿರುತ್ತಾರೆ. ಇದರ ಜೊತೆಗೆ ಯಾವ ಬಣ್ಣದ ಎತ್ತುಗಳನ್ನು ಕಟ್ಟಬೇಕು ಎಂಬ ಅಂಶಗಳನ್ನು ಕೇಳಿ ‘ಹೊನ್ನಾರು’ ಕಟ್ಟುವ ಸಂಪ್ರದಾಯವಿದೆ. ಯಾವುದೇ ಕಾರಣಕ್ಕು ‘ಪರ್ಸುಳಿ’ ಇರುವ ಎತ್ತುಗಳನ್ನು ಹೊನ್ನಾರಿಗೆ ಕಟ್ಟುವುದಿಲ್ಲ. ಈ ಸುಳಿ ಇರುವ ರಾಸುಗಳನ್ನು ಸಾಕಿದರೆ ಆ ಮನೆ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ‘ಕೀಳ್ ಸುಳಿ’ ಮತ್ತು ‘ಧವನ ಸುಳಿ’ ಎಂಬ ಸುಳಿ ನಇರುವ ರಾಸುಗಳು ಉತ್ತಮವಾದವು. ಇವುಗಳನ್ನು ಹೊನ್ನಾರಿಗೆ ಕಟ್ಟುವರು. ಜೊತೆಗೆ ಒಂದೇ ಬಣ್ಣದ ಎತ್ತುಗಳನ್ನು ಕಟ್ಟುವರು. ಇದರ ತರುವಾಯ ‘ಬೆನಕ’ನನ್ನು ಪೂಜಿಸಿ, ಊರ ಸುತ್ತಲು ಒಂದು ಸುತ್ತು ಬಂದ ನಂತರ ಸಮೀಪದ ಹೊಲದಲ್ಲಿ ಮೂರ್ನಾಲ್ಕು ಸುತ್ತು ಉಳುತ್ತಾರೆ.

ವೈಯಕ್ತಿಕವಾಗಿ ಉಳುಮೆಗೆ ತೊಡಗುವ ರೈತರು ತಮ್ಮ ಮನೆಗಳಲ್ಲಿನ ನೇಗಿಲು, ನೊಗಗಳನ್ನು ತೊಳೆದು ಮನೆಯಲ್ಲಿಟ್ಟು ಪೂಜಿಸಿ ನಂತರ ಉಳುಮೆಗೆ ತೊಡಗುವರು. ‘ಬಿತ್ತನೆ’ ಕಾರ್ಯವು ‘ಹೊನ್ನಾರಿ’ನಂತೆಯೆ ಬಹಳ ಪ್ರಮುಕವಾದುದು. ಹೊಲಗಳಲ್ಲಿ ಬಿತ್ತನೆ ಮಾಡುವ ಮೊದಲು ಗರಿಕೆ ಪತ್ರೆ ಮತ್ತು ಸಗಣಿ ಉಂಡೆಯಿಂದ ‘ಪಿಳ್ಳೇರಾಯ’ನನ್ನು ಮಾಡಿ ಸಮೀಪದ ದೇವಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ. ನಂತರ ಬಿತ್ತನೆ ಮಾಡಲು ತಂದಿರುವ ‘ಬೀಜದ ರಾಗಿ’ಯಲ್ಲಿ ಸ್ವಲ್ಪವನ್ನು ದೇವಾಲಯದ ಬಳಿ ಹರಡಿ, ಅದರ ಮೇಲೆ ಪಿಳ್ಳೇರಾಯನನ್ನು ಇಟ್ಟು ಪೂಜಿಸಿದ ಮೇಲೆ ಹೊಲಗಳಲ್ಲಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಇದನ್ನು ಕೆಲವು ಭಾಗಗಳಲ್ಲಿ ‘ಹೊಲ ಚೆಲ್ಲುತ್ತೇವೆ’ ಎಂದರೆ ಮತ್ತೆ ಕೆಲವು ಕಡೆ ‘ಬಿತ್ತುತ್ತೇವೆ’ ಎಂಬ ಪದವನ್ನು ಬಳಸುತ್ತಾರೆ. ಈ ಸಂದರ್ಭದಲ್ಲಿ ನೇಗಿಲು, ನೊಗ, ಹಗ್ಗ, ಮಿಣಿ, ಜಿಗಣಿ, ಮೇಣಿ, ಸಡ್ಡೆ, ಕೂರಿಗೆ, ಹಲುವೆ, ಕುಂಟೆ, ಈಚ, ಹೆಗ್ಗುಂಟೆ, ಮುಳ್ಳಲುವೆ ಮೊದಲಾದ ಪರಿಕರಗಳು ಬಳಕೆಗೊಳ್ಳುತ್ತವೆ. ಬಿತ್ತನೆಯಾದ ಹನ್ನೆರಡನೆಯ ದಿನಕ್ಕೆ ರಾಗಿ ಪೈರಿಗೆ ‘ಕುಂಟೆ’ ಹೊಡೆಯಲಾಗುತ್ತದೆ.

ಇದರ ತರುವಾಯ ‘ಹಸಿರು ಹಾಕುವ’ ಆಚರಣೆ ನಡೆಯುತ್ತದೆ. ರಾಗಿ ಬೆಳೆಯ ‘ಗರಿ’ ಕಾಲದಲ್ಲಿ ಅಂದರೆ ಉತ್ತರೆ ಮಳೆಯ ಸಮಯದಲ್ಲಿ, ಮತ್ತೆ ಕೆಲವು ಕಡೆ ‘ಮಾರ್ನಾಮಿ’ ಹಬ್ಬದ ಮರುದಿನ ಈ ಆಚರಣೆಯನ್ನು ಮಾಡುತ್ತಾರೆ. ಅಂದು ಕುರಿ, ಕೋಳಿ, ಮೇಕೆ ಮೊದಲಾದವುಗಳನ್ನು ಬಲಿ ಕೊಟ್ಟು ಅದರ ರಕ್ತವನ್ನು ಎಡೆ ಅನ್ನದಲ್ಲಿ ಬೆರೆಸಿಕೊಂಡು ಹೊಲದ ಬೆಳೆಯ ಸುತ್ತಲು ಎರಚುತ್ತಾರೆ. ಈ ಸಂದರ್ಭದಲ್ಲಿ ಕೆಲವೆಡೆ ‘ಬೆಚ್ಚಿನ ಕಡ್ಡಿ’ ನಿಲ್ಲಿಸುವ ಸಂಪ್ರದಾಯವಿದೆ. ಯಾವುದೇ ರೋಗಗಳು ಹೊಲದ ಬೆಳೆಗಳಿಗೆ ತಗುಲದೆ ಇರಲಿ ಎಂಬ ಕಾರಣಕ್ಕೆ ರಕ್ತ ಬೆರಸಿದ ಅನ್ನವನ್ನು ಎರಚುತ್ತಾರೆ. ಜೊತೆಗೆ ಈ ರೋಗವನ್ನು ಉಂಟು ಮಾಡುವ ‘ಸೀಡೇ ದೇವರ’ ಶಾಂತಿಗಾಗಿಯೂ ಈ ಕಾರ್ಯ ನಡೆಯುತ್ತದೆ. ಹೊಲಕ್ಕೆ ಸೀಡೇ ಏಳದಿರಲಿ ಎಂದು ಈ ದೈವವನ್ನು ಪೂಜಿಸಿ ನಂತರ ಹೊಲಕ್ಕೆ ‘ಹಾರ’ ಕೊಟ್ಟಂತೆ ಬೆಚ್ಚಿನ ಕಡ್ಡಿ ನಿಲ್ಲಿಸುತ್ತಾರೆ.

ಕುಯ್ಲಿನ ಸಂದರ್ಭದ ಆಚರಣೆಗಳಲ್ಲಿ, ಬೆಳೆಯನ್ನು ಕುಯ್ಯುವ ಮೊದಲು ‘ಹೊಲ ಹೆಚ್ಚು ಮಾಡುವ’ ಆಚರಣೆಯನ್ನು ಮಾಡಲಾಗುತ್ತದೆ. ಕಾರಣ ಹೆಚ್ಚಿಗೆ ರಾಗಿ ಮತ್ತು ಹುಲ್ಲು ಆಗಲಿ ಎಂಬುದು. ಈ ಸಮಯದಲ್ಲಿ ಮೊಸರು ಅನ್ನವನ್ನು ಎಡೆ ಇಟ್ಟು, ಮಣ್ಣು ಗುಡ್ಡೆ ಮಾಡಿ ಅದರ ಮೇಲೆ ಐದು ಅಥವಾ ಒಂಭತ್ತು ಬೆನಕಗಳನ್ನು ಪ್ರತಿಷ್ಠಾಪಿಸುತ್ತಾರೆ. ‘ಅಣ್ಣೆ’ ಹೂ ಮೊದಲಾದ ಹೂವುಗಳನ್ನು ಹಾಕಿ, ‘ಬಳೆ ಬಂಗಾರ’, ಹೊಲ ಕುಯ್ಯುವ ಕುಡ್ಲು (ಕುಡುಗೋಲು) ಗಳನ್ನು ಇಟ್ಟು ಪೂಜಿಸುತ್ತಾರೆ. ಪ್ರಕೃತಿ ಆರಾಧಕರಾಗಿರುವ ಜನಪದರು ತಮ್ಮ ಸುತ್ತಲಿನ ಮರ, ಗಿಡ, ಕಲ್ಲು, ಮಣ್ಣುಗಳಲ್ಲಿಯೆ ದೈವವನ್ನು ಕಾಣುವಂತಹವರು. ಆ ಕಾರಣವಾಗಿ ಅವರ ಬದುಕಿನ ಪ್ರತಿ ಸಂದರ್ಭದಲ್ಲಿಯೂ ಇವು ಪ್ರಮುಖವಾದ ಸ್ಥಾನವನ್ನು ಪಡೆದಿವೆ. ನಂತರ ಮೂರು ಇಡಿಯಷ್ಟು ಬೆಳೆಯನ್ನು ಕುಯ್ದು ಇಟ್ಟು, ನಂತರದಲ್ಲಿ ಕಟಾವನ್ನು ಪ್ರಾರಂಭಿಸುತ್ತಾರೆ. ಕಟಾವಿನ ಕೊನೆಯಲ್ಲಿ ಮೂರು ಪೈರಿನ ದಂಟುಗಳನ್ನು ಬಿಟ್ಟು ಅವುಗಳಿಗೆ ‘ಅಣ್ಣೆ’ ಹೂ, ‘ಉಚ್ಚಳ್ಳು’ ಹೂ ಮೊದಲಾದ ಮೂರು ಬಗೆಯ ಹೂಗಳಿಂದ ಪೂಜಿಸಲಾಗುತ್ತದೆ. ಇದಕ್ಕೆ ‘ಬೆಳು ಮುಂಬು’ ಬಿಡುವುದು ಎನ್ನುತ್ತಾರೆ. ಇದಕ್ಕೆ ಕಾರಣ ಕಣಜ ತುಂಬಲಿ ಎಂಬುದು. ಈ ಸಂದರ್ಭದಲ್ಲಿ ಹೊಲ ಕುಯ್ಯುವ ಕುಡ್ಲಿನ ಮೂತಿಯಿಂದ ಹೊಲದಲ್ಲಿ ನೆಲವನ್ನು ಬಗೆದು ತೆನೆಯನ್ನು ಉಜ್ಜಿ ಬಂದ ರಾಗಿಯನ್ನು ಅದರಲ್ಲಿ ಹಾಕಿ, ಹೂಗಳಿಂದ ಪೂಜಿಸುತ್ತಾರೆ. ನಮ್ಮ ಜನಪದರಲ್ಲಿ ‘ಅಣ್ಣೆ’ ಹೂವು ‘ಕಣಜದ ದೇವರು’ ಎಂಬ ನಂಬಿಕೆ ಇರುವ ಕಾರಣವಾಗಿ ಇದಕ್ಕೆ ಮಹತ್ವದ ಸ್ಥಾನವಿದೆ. ಅಲ್ಲದೆ ಆ ಹೂವಿನ ರಚನೆ ಕೂಡ ಇದಕ್ಕೆ ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ಕೃಷಿಯ ಎಲ್ಲ ಪೂಜೆಯ ಸಂದರ್ಭಗಳಲ್ಲಿಯೂ ಪ್ರಮುಖವಾಗಿ ಬಳಕೆಗೊಳ್ಳಲ್ಪಡುತ್ತದೆ.

ಕಟಾವಿನ ಬೆಳೆ ಒಣಗಿದ ನಂತರ ಸಣ್ಣ ಸಣ್ಣ ಕಂತೆಗಳನ್ನಾಗಿ ಕಟ್ಟಿ ‘ಮೆದೆ’ ಅಥವಾ ‘ಬಣವೆ’ಯನ್ನು ಹಾಕುತ್ತಾರೆ. ಈ ರೀತಿ ಹಾಕುವಾಗ ಕೊನೆಯ ಕಂತೆಗೆ ಐದು ಅಥವಾ ಒಂಭತ್ತು ಬೆನಕಗಳನ್ನು ಇಟ್ಟು, ‘ಅಣ್ಣೆ’ ಹೂ ಮೊದಲಾದ ಹಲವು ಜಾತಿಯ ಹೂಗಳಿಂದ ಹಾಕಿ ಮೆದೆಗೆ ಸೇರಿಸುತ್ತಾರೆ. ಇದರ ಜೊತೆಗೆ ತುಮಕೂರು ಜಿಲ್ಲೆಯ ಕುಣಿಗಲ್ಲು, ತುರುವೇಕೆರೆ ತಾಲ್ಲೂಕಿನ ಪ್ರದೇಶಗಳಲ್ಲಿ ಸಂಕ್ರಾಂತಿ ಹಬ್ಬದ ದಿನ ಈ ಮೆದೆಗಳಿಗೆ ‘ಪತ್ರೆ’ ಹಾಕುವ ಸಂಪ್ರದಾಯವಿದೆ. ಅಂದು ಎಕ್ಕದ ಗಿಡದ ಎಲೆ, ದೊಡ್ಡ ಪತ್ರೆ ಹಾಗೂ ಬಾಡು ಬಕ್ಕ ಇಲ್ಲವೆ ಎಲಚಿ ಗಿಡ ಈ ಮೂರು ರೀತಿಯ ಪತ್ರೆಯನ್ನು ಹಾಕುವ ರೂಢಿ ಇದೆ. ಕೊರಟಗೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ತೆನೆಯನ್ನಷ್ಟೆ ಕುಯ್ಯುತ್ತಾರೆ. ನಂತರದ ದಂಟನ್ನು ಕುಯ್ದು ಮೆದೆಗಳಿಗೆ ಹಾಕಿಕೊಳ್ಳುತ್ತಾರೆ.

ಈ ಎಲ್ಲ ಕೆಲಸಗಳು ಮುಗಿದ ಮೇಲೆ ಪ್ರಾರಂಭವಾಗುವುದೆ ‘ಕಣ’ದ ಕೆಲಸ. ತುಮಕೂರು ಜಿಲ್ಲೆಯ ಕಣ ಸಂಸ್ಕೃತಿಯು ವಿಶಿಷ್ಟವಾದದ್ದು. ಈ ಜಿಲ್ಲೆಯ ಮುಖ್ಯ ಬೆಳೆ ‘ರಾಗಿ’ಯಾದ ಕಾರಣವಾಗಿ, ಅದನ್ನು ‘ಒಕ್ಕಣೆ’ ಮಾಡಲು ‘ಕಣ’ (ಧಾನ್ಯಗಳನ್ನು ಒಕ್ಕುವುದಕ್ಕಾಗಿ ಸಿದ್ಧಪಡಿಸಿದ ಸ್ಥಳ) ಬಹಳ ಪ್ರಮುಖವಾಗಿರುವುದರಿಂದಾಗಿ ಕಣ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಹೊಲ ಕುಯ್ಯುವ ಸಂದರ್ಭದಲ್ಲಿಯೇ ಕಣದ ಜಾಗವನ್ನು ಮೊದಲೆ ನಿರ್ಧರಿಸಿದ್ದು, ಹೊಲ ಕಟ್ಟಿದ ನಂತರ ಆ ಜಾಗದಲ್ಲಿಯೆ ಬಣವೆಯನ್ನು ಹಾಕುತ್ತಾರೆ. ಬಹುತೇಕ ಒಂದೇ ಜಾಗದಲ್ಲಿಯೇ ಪ್ರತಿ ವರ್ಷ ಕಣವನ್ನು ಮಾಡುತ್ತಾರೆ. ಕಾರಣ ಆ ಜಾಗ ಗಟ್ಟಿಯಾಗಿರುತ್ತದೆಂದು. ‘ಕಣ’ಕ್ಕೆ ನಿರ್ಧಾರವಾದ ಈ ಜಾಗದಲ್ಲಿನ ರಾಗಿ, ಜೋಳದ ‘ಕೂಳೆ’ಗಳನ್ನು ಕೆತ್ತಿ ಸ್ವಚ್ಛಗೊಳಿಸುತ್ತಾರೆ. ನಂತರ ನೀರನ್ನು ಹಾಕಿ ದನಗಳಿಂದ ತುಳಿಸಿ, ಹಲಗೆ ಹೊಡೆದು ಸಮ ಮಾಡುತ್ತಾರೆ. ಇದಕ್ಕೆ ‘ಕಣ’ ಎಂಬ ಹೆಸರನ್ನಿಟ್ಟು ಇದರ ಮಧ್ಯಭಾಗದಲ್ಲಿ ‘ಮೇಟಿ’ಯನ್ನು ನೆಡುತ್ತಾರೆ. ಇದು ಕಣದ ‘ಗಂಡ’ನೆಂಬ ನಂಬಿಕೆ ರೈತರಲ್ಲಿದೆ. ಆಲ ಅಥವಾ ಬೇವಿನ ಮರದ ಕಡ್ಡಿ (ಉದ್ದನೆಯ ತುಂಡು) ಗಳನ್ನು ಮೇಟಿಯಾಗಿ ನೆಡುವರು.

‘ಮೇಟಿ’ಯನ್ನು ನೆಟ್ಟ ನಂತರ ಕಣದ ಒಂದು ಮೂಲೆಯಲ್ಲಿ ‘ಬಗ್ಗಡದ ಗುಂಡಿ’ಯನ್ನು ತೋಡಿ ಅದರಲ್ಲಿ ನೀರು ಮತ್ತು ಸಗಣಿಗಳನ್ನು ಮಿಶ್ರಣ ಮಾಡಿ ವಾರಾನುಗಟ್ಟಲೆ ಕೊಳೆಯಲು ಬಿಡುತ್ತಾರೆ. ಹುಲ್ಲು ಬಡಿಯುವ ಎರಡು ದಿನ ಮೊದಲು ಕಣವನ್ನು ಸಾರಿಸಿ ಒಣಗಲು ಬಿಡುತ್ತಾರೆ.

ಕಣ ಒಣಗಿದ ಮೇಲೆ ಹುಲ್ಲು ಬಡಿಯುವ ಕೆಲಸಗಳು ಆರಂಭಗೊಳ್ಳುತ್ತವೆ. ಹುಲ್ಲನ್ನು ಬಡಿಯಲು ಕಲ್ಲಿನ ಗುಂಡುಗಳನ್ನು ಬಳಸುತ್ತಾರೆ. ರಾಗಿ ಹುಲ್ಲನ್ನು ಹರಡಿ ಅದರ ಮೇಲೆ ಗುಂಡನ್ನು ಒಡೆಯುತ್ತಾರೆ. ನಂತರ ‘ನೆರಗೋಲಿ’ನ ಸಹಾಯದಿಂದ ರಾಗಿ ಬೇರ್ಪಟ್ಟ ಹುಲ್ಲನ್ನು ತೆಗೆದು ಕಣದಲ್ಲಿಯೆ ಒಂದು ಕಡೆ ‘ಸಾರ್ವೆ’ ಹಾಕುತ್ತಾರೆ. ಆಮೇಲೆ ಹೊರೆ ಕಟ್ಟಿ ಮೆದೆಗೆ ಹಾಕುತ್ತಾರೆ. ನಂತರ ‘ಪತ್ರೆ’ಯನ್ನು ಹೊಡೆದುಕೊಂಡು ‘ದೊಡ್ಡ ಗಾಬ’ನ್ನು ಪ್ರತ್ಯೇಕಿಸಿ ಗುಡ್ಡೆ ಮಾಡಲಾಗುತ್ತದೆ. ನಂತರ ‘ಉಬ್ಬಲು’ ಮಿಶ್ರಿತ ‘ರಜ’ವನ್ನು (ಸಣ್ಣ ಗಾಬು) ಮಧ್ಯಭಾಗದಲ್ಲಿ ರಾಶಿ ಮಾಡುತ್ತಾರೆ.

ಸಂಜೆಯ ಹೊತ್ತಿನಲ್ಲಿ ಕಣದ ಕೆಲಸ ಮುಗಿಸಿ ಹೊರಬರುವಾಗ ‘ಕಾಲುಗಟ್ಟುವ’ ನಿಯಮವಿದೆ. ‘ಕೊಂಗ’ವನ್ನು ಕೈಯಲ್ಲಿಡಿದು ರಾಗಿಯಿಂದ ಒಂದು ಹಿಡಿ ತೆಗೆದುಕೊಂಡು ‘ಕೊಂಗ’ದಿಂದ ಮೂರು ನಾಮಗಳನ್ನು ಬರೆದು ರಾಶಿಯನ್ನು ಸುತ್ತು ಬರುತ್ತಾರೆ. ನಂತರ ಎಲ್ಲರು ಕಣದಿಂದ ಹೊರ ಹೋಗುತ್ತಾರೆ. ಆದರೆ ರಾತ್ರಿಗೆ ನಾಲ್ಕೈದು ಜನ ಬಂದು ಕಣದಲ್ಲಿಯೇ ಉಳಿದುಕೊಳ್ಳುತ್ತಾರೆ. (ಕಾವಲು ಕಾಯುತ್ತಾರೆ) ಕಣದ ಪಕ್ಕದಲ್ಲಿಯೇ ಹುಲ್ಲಿನಲ್ಲಿ ಗೂಡು ಮಾಡಿಕೊಂಡು ಒಕ್ಕಣೆ ಮುಗಿಯುವವರೆಗೂ ಎಲ್ಲ ರಾತ್ರಿಗಳಲ್ಲೂ ಇಲ್ಲೆ ಇರುತ್ತಾರೆ. ಕೆಲವರು ಅಡುಗೆಯನ್ನು ಸಹ ಇಲ್ಲಿಯೆ ಮಾಡಿಕೊಳ್ಳುತ್ತಾರೆ.

ರಾಶಿಯಾದ ತರುವಾಯ ‘ಕುದುರೆ’ಯ (ರಜ ತೂರಲು ಬಳಸುವ ಒಂದು ಹಲಗೆಗೆ ಎದುರು ಬದುರು ಜೋಡಿಸುವ ಕವಲುಗಳುಳ್ಳ ಎರಡು ಮರಗಳ ಸಾಧನ) ಸಹಾಯದಿಂದ ‘ತೂರ’ಲು ಪ್ರಾರಂಭಿಸುತ್ತಾರೆ. ಈ ರೀತಿ ತೂರಿದ ನಂತರ ರಾಗಿಯಿಂದ ಬೇರ್ಪಡುವ ‘ಹೊಟ್ಟ’ನ್ನು ‘ಉಬ್ಬಲು’ ಎಂತಲು, ನುಣ್ಣನೆಯ ಮಣ್ಣನ್ನು ‘ಗೌರಮ್ಮ’ ಎಂತಲೂ ಕರೆಯುವರು. ‘ಕಡ್ಡಿ ಜರಡಿ’ಯಿಂದ ಬೇರ್ಪಡುವ ರಾಗಿಯ ಸಣ್ಣ ಕಡ್ಡಿಗಳನ್ನು ‘ನಾಮದ ಕಡ್ಡಿ’ ಎನ್ನುವರು. ‘ಗುನಿ’ಯನ್ನು ತೂರಿದ ನಂತರ ‘ಬಂಡಾಡಿ’ (ಜರಡಿಯಾಡಿ) ‘ರಜ’ವನ್ನು ‘ನಿಲುವು’ ಎತ್ತುತ್ತಾರೆ. ನಂತರ ಅದನ್ನು ಕಾಲುಗಟ್ಟಿ, ‘ಸಣ್ಣಕ್ಕಿ’, ‘ಗುನಿ’ ಹಾಗೂ ‘ಮುಂದಂಡೆ’ಗಳನ್ನು ಸ್ವಚ್ಛಗೊಳಿಸಿಕೊಳ್ಳುವರು. ಕಣದ ಸಂದರ್ಭದಲ್ಲಿ ‘ಮೊರ’ವನ್ನು ‘ಕೊಂಗ’ ಎಂದು, ‘ಪೊರಕೆ’ಯನ್ನು ‘ಇಡುಗ್ಲು’ ಎಂದು, ‘ಗಾಳಿ’ಯನ್ನು ‘ವಾಯು ದೇವರು’ ಎಂಬ ಹೆಸರುಗಳಿಂದ ಕರೆಯುವರು. ರಜವನ್ನು ಸ್ವಚ್ಛಗೊಳಿಸುವಾಗ ವಾಯುದೇವರನ್ನು ಈ ರೀತಿಯಾಗಿ ಆಹ್ವಾನಿಸುವರು. ‘ಹೈಲ್ಗ ಸಾಮಿ ಹೆಬ್ಬೈಲ್ಗ, ಗಾಳಿ ದೇವರು ಬಂದು ಧೂಳು ದೇವರನ್ನು ಹೊತ್ಕೊಂಡು ಹೋಗ’.

ಇದಾದ ಮೇಲೆ ನಡೆಯುವುದೇ ರಾಶಿ ಪೂಜೆ. ‘ರಜ’ವನ್ನು ಒಂದು ಕಡೆ ‘ಗುಡ್ಡೆ’ ಮಾಡಿ ‘ಕಾಲುಗಟ್ಟಿ’ ನಂತರ ಉಬ್ಬಲು ಗಡ್ಡೆ, ಗುನಿಗಳನ್ನು ರಾಶಿ ಮಾಡಿ ಅವುಗಳಿಗೆ ಅರಿಶಿಣ, ಕುಂಕುಮ ಇಟ್ಟು, ‘ಕಕ್ಕೆ’ ಸೊಪ್ಪಿನ ‘ಪತ್ರೆ’ಯನ್ನು ಇಡಲಾಗುತ್ತದೆ. ಕಣದಲ್ಲಿ ರಾಶಿ ಪೂಜೆ ಮಾಡುವಾಗ ‘ಕಣದ ಭೂತದ ದೇವರು’ ಮಾಡಿ ಕಕ್ಕೆ ಪತ್ರೆಯಿಂದ ಪೂಜಿಸುತ್ತಾರೆ. ಇದು ಎಲ್ಲ ದೇವರುಗಳಿಗೂ ಬಹಳ ಶ್ರೇಷ್ಠವಾದ ಪತ್ರೆಯಾಗಿರುವ ಕಾರಣವಾಗಿ ಕಕ್ಕೆ (ಇದಕ್ಕೆ ‘ಬ್ಯಾಟೆ ಪತ್ರೆ’ ಎಂಬ ಮತ್ತೊಂದು ಹೆಸರೂ ಇದೆ) ಪತ್ರೆಯನ್ನು ಬಳಸುತ್ತಾರೆ. ‘ಕುದುರೆ’, ‘ಗುಂಡು’ಗಳಿಗೆ ಕಕ್ಕೆ ಪತ್ರೆ, ಅರಿಶಿಣ ಕುಂಕುಮ ಇಟ್ಟು ರಾಶಿಗೆ ಹಲವು ಬಗೆಯ ಹೂವು, ಅರಿಶಿಣ, ಕುಂಕುಮಗಳಿಂದ ಪೂಜಿಸಿ ಅವರವರ ಶಕ್ತ್ಯಾನುಸಾರ ‘ಚರುಪು’ ಮಾಡಿಸುವ ಪರಿಪಾಠಗಳಿವೆ. ಇದು ಕಣದ ಕೆಲಸಗಳ ಅಂತಿಮ ಘಟ್ಟವಾಗಿದ್ದು, ಕೊನೆಯಲ್ಲಿ ರಜವನ್ನು ಚೀಲಗಳಲ್ಲಿ ತುಂಬಿಕೊಂಡು ಮನೆಗಳಿಗೆ ಒಯ್ಯುತ್ತಾರೆ. ಈ ರೀತಿ ತೆಗೆದುಕೊಂಡು ಹೋಗುವಾಗ ‘ರಜ’ದ ತಳವನ್ನು ಸಂಪೂರ್ಣವಾಗಿ ಖಾಲಿ ಮಾಡದೆ, ತಳದಲ್ಲಿ ಸ್ವಲ್ಪ ರಾಗಿಯನ್ನು ಬಿಟ್ಟು ಮಾರನೆಯ ದಿನ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಇದರೊಂದಿಗೆ ಕಣ ಸಂಬಂಧಿ ಆಚರಣೆಗಳು ಮುಕ್ತಾಯಗೊಳ್ಳುತ್ತವೆ.

ಬದಲಾದ ಸಂದರ್ಭದಲ್ಲಿ ಕಣ ಸಂಸ್ಕೃತಿ

               ‘ಆರಂಭಕ್ಕೆ ಆಚಾರವಿಲ್ಲವಂತೆ’ ಎಂಬ ಗಾದೆ ಮಾತಿನಂತೆ ಇಂದು ಆಧುನಿಕತೆಯ ಕಾರಣವಾಗಿ ಹಾಗೂ ಬದಲಾದ ಮಾನವನ ಜೀವನ ಶೈಲಿಯ ಪರಿಣಾಮವಾಗಿ ಕಣ ಸಂಸ್ಕೃತಿ ಬದಲಾವಣೆ ಹಾಗೂ ಅವನತಿಯ ಹಾದಿಯಲ್ಲಿರುವುದನ್ನು ಗಮನಿಸಬಹುದು. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿವೆ. 1)ರಸ್ತೆ ಒಕ್ಕಣೆ   2)ರಾಗಿ ಒಕ್ಕುವ ಯಂತ್ರಗಳ ಬಳಕೆ

ರಸ್ತೆ ಒಕ್ಕಣೆ : ಇದು ಕಳೆದ ಆರು-ಏಳು ವರ್ಷಗಳಿಂದ ರೂಢಿಗೆ ಬಂದಿದೆ. ಒಕ್ಕಣೆಗೆ ಗುಂಡು ಬಳಸುತ್ತಿದ್ದ ರೈತರು ಕಣದಲ್ಲಿಯೇ ಗುಂಡಿನ ಬದಲು, ಟ್ರ್ಯಾಕ್ಟರ್‍ಗಳಿಂದ ಒಕ್ಕಣೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಶೀಘ್ರವಾಗಿ ಒಕ್ಕಣೆ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ. ಮೊದಲು ನಾಲ್ಕೈದು ಕುಟುಂಬಗಳು ಒಂದು ಕಣದಲ್ಲಿ ವಾರಾನುಗಟ್ಟಲೆ ಒಕ್ಕಣೆಯಲ್ಲಿ, ಇಪ್ಪತ್ತು-ಮೂವತ್ತು ಜನ ಕೆಲಸ ಮಾಡುತ್ತಿದ್ದರು.  ಟ್ರ್ಯಾಕ್ಟರ್ ಬಳಕೆಯಿಂದ ಮೂರ್ನಾಲ್ಕು ದಿನಗಳಲ್ಲಿ ಒಕ್ಕಣೆ ಮುಗಿಯುವ ಹಂತಕ್ಕೆ ಬಂದಿತು. ಮತ್ತೆ ಕೆಲವರು ಊರಿನಲ್ಲಿ ಹಾದು ಹೋಗಿರುವ ಡಾಂಬರ್ ರಸ್ತೆಗಳಿಗೆ ಬೆಳಗಿನ ಜಾವವೆ ಹುಲ್ಲನ್ನು ಹರಡಿ ಸಂಜೆಯವರೆಗೂ ಬಿಟ್ಟು, ಅದರ ಮೇಲೆ ವಾಹನಗಳು ಓಡಾಡಿದ ನಂತರ ಹುಲ್ಲನ್ನು ತೆಗೆದು ರಾಗಿ ಸಂಗ್ರಹಿಸಿಕೊಳ್ಳುತ್ತಿದ್ದರು. ಇದರಿಂದ ಹಣ, ಸಮಯ ಹಾಗೂ ಶ್ರಮಗಳು ಉಳಿತಾಯವಾಗುವುದು ಸಾಧ್ಯ ಎಂಬ ವಾದ ರಸ್ತೆ ಒಕ್ಕಣೆಗಾರರದು. ಆದರೆ ಇದರಿಂದಾಗಿ ಅನೇಕ ರಸ್ತೆ ಅಪಘಾತಗಳು ಸಂಭವಿಸಿ ಪ್ರಾಣಹಾನಿಗಳಾಗಿವೆ.

            ರಸ್ತೆ ಒಕ್ಕಣೆಯೂ ಇಂದು ಉಳಿದಿಲ್ಲ. ವೈಜ್ಞಾನಿಕತೆಯ ಅಳವಡಿಕೆ ಕೃಷಿ ಕ್ಷೇತ್ರದಲ್ಲಿ ಆದಂತೆ ಒಕ್ಕಣೆಗೂ ಯಂತ್ರೋಪಕರಣಗಳು ಬಂದವು. ಇದರಿಂದ ಕೆಲವೇ ಗಂಟೆಗಳಲ್ಲಿ ಒಕ್ಕಣೆ ಕೆಲಸ ಮುಗಿದು ಹೋಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಇಂದು ಕಣ ಸಂಸ್ಕೃತಿಯ ಆಚರಣೆಗಳು ನಿಧಾನವಾಗಿ ಜನ ಮಾನಸದಿಂದ ಕಣ್ಮರೆಯಾಗುತ್ತಿವೆ.

ಕೆಲವು ಕೃಷಿ ಸಂಬಂಧಿ ನಂಬಿಕೆಗಳು.

            ಕೃಷಿ ಕಾರ್ಯದಲ್ಲಿ ಹಲವು ಆಚರಣೆಗಳನ್ನು ಮಾಡುವಂತೆ ಕೆಲವೊಂದು ನಂಬಿಕೆಗಳು ರೈತ ಸಮುದಾಯದಲ್ಲಿ ಹಾಸು ಹೊಕ್ಕಾಗಿರುವುದು ಕಂಡುಬರುತ್ತದೆ. ಅವುಗಳೆಂದರೆ

  1. ಸೋಮವಾರದ ದಿನ ಕೃಷಿ ಕಾರ್ಯಗಳನ್ನು ಮಾಡುವುದಿಲ್ಲ. ಅಂದು ಹೊಲ ಗದ್ದೆಗಳನ್ನು ಉಳುವುದಾಗಲಿ, ಕೃಷಿ ಚಟುವಟಿಕೆಗಳಿಗೆ ದನಗಳನ್ನು ಬಳಸುವುದಾಗಲಿ ನಿಷೇಧಿತವಾಗಿರುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಕೋಣಗಳನ್ನು ಬಳಸಿ ಸೋಮವಾರವು ಉಳುಮೆ ಮಾಡುತ್ತಾರೆ.
  2. ದನಗಳ ಹೆಗಲ ಮೇಲೆ ನೊಗವನ್ನು ಹಾಕಿಕೊಂಡು ಊರೊಳಗೆ ಬರುವುದಿಲ್ಲ.
  3. ಚಪ್ಪಲಿಗಲನ್ನು ಹಾಕಿಕೊಂಡು ನೇಗಿಲು, ನೊಗಗಳನ್ನು ಮುಟ್ಟುವುದಾಗಲಿ, ಉಳುಮೆ ಮಾಡುವುದಾಗಲಿ ಮಾಡುವಂತಿಲ್ಲ.
  4. ಬೆಳೆಗಳ ನಡುವೆ ಇರುವ ಕಳೆಯನ್ನು ಕಿತ್ತ ನಂತರ ಅದನ್ನು ಹೊಲದಲ್ಲಿಯೆ ಬಿಡುವಂತಿಲ್ಲ. ಕಾರಣ ರಾತ್ರಿ ವೇಳೆ ಭೂಮಿ ತಾಯಿ ಹೊಲವನ್ನು ಪರೀಕ್ಷಿಸುತ್ತಾಳೆಂದು, ಆಗ ಕಿತ್ತ ಕಳೆ ಆಕೆಯ ಕಣ್ಣಿಗೆ ಬಿದ್ದರೆ ಶಾಪ ನೀಡುವಳು ಎಂದೂ, ಬೆಳೆ ಚೆನ್ನಾಗಿ ಬರುವುದಿಲ್ಲ ಎಂಬ ನಂಬಿಕೆ ರೈತರಲ್ಲಿದೆ.

ಕಣ ಸಂಬಂಧಿ ನಂಬಿಕೆಗಳು

  1. ಚಪ್ಪಲಿ ಹಾಕಿಕೊಂಡು ಕಣಕ್ಕೆ ಬರುವಂತಿಲ್ಲ. ಏಕೆಂದರೆ ಕಣಕ್ಕೆ ಮನೆಯಷ್ಟೆ ಮಹತ್ವದ ಸ್ಥಾನವಿದೆ. ಈ ಕಾರಣವಾಗಿಯೆ ಹಿರಿಯರು ಹೇಳುವುದು ‘ಕಣ ಮನೆ ಅನ್ನೋದು ಯಾತಕ್ಕಾಯ್ತು’ ಎಂಬ ಮಾತುಗಳು ಮುಖ್ಯವಾದವು.
  2. ಮುಟ್ಟಾದ ಸ್ತ್ರೀಯರು ಮೂರ್ನಾಲ್ಕು ದಿನಗಳವರೆಗೆ ಕಣಕ್ಕೆ ಬರುವಂತಿಲ್ಲ.
  3. ದೆವ್ವ, ಗಾಳಿಗಳು ಕಣದ ಕಡೆ ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ.
  4. ಕಣದಲ್ಲಿ ಏಳು ಎಂಬ ಸಂಖ್ಯೆಯನ್ನು ಹೇಳುವುದಿಲ್ಲ. ಬದಲಾಗಿ ‘ಹೆಚ್ಚಲಿ’ ಎನ್ನುತ್ತಾರೆ.
  5. ಕಣದಲ್ಲಿ ಅಶ್ಲೀಲ ವಿಚಾರಗಳನ್ನು ಮಾತನಾಡುವಂತಿಲ್ಲ.
  6. ಕಣದಲ್ಲಿ ‘ಮೇಟಿ’ಯನ್ನು ನಿಲ್ಲಿಸಿದ ನಂತರ ಅಲ್ಲಿ ಯಾವುದೇ ರೀತಿಯ ಮುಟ್ಟು ಚಿಟ್ಟುಗಳು, ಮೈಲಿಗೆಗಳು ಆಗುವಂತಿಲ್ಲ. ಕಣವು ಅಪವಿತ್ರಗೊಳ್ಳುವಂತಿಲ್ಲ.

ಕಣದಲ್ಲಿ ಬಳಸುವ ಶಬ್ದಗಳ ವಿವರ

  1. ಮೇಟಿ : ಕಣದ ಗಂಡನೆಂಬ ನಂಬಿಕೆ ಇದ್ದು, ಧಾನ್ಯವನ್ನು ಒಕ್ಕುವ ಅಂಗಳದ ಅಥವಾ ಕಣದ ಮಧ್ಯ ಭಾಗದಲ್ಲಿ ಎತ್ತುಗಳನ್ನು ಕಟ್ಟಿ ತುಳಿಸಲು ಅನುಕೂಲವಾಗುವಂತೆ ನೆಟ್ಟಿರುವ ಆಲ, ಕಕ್ಕೆ ಅಥವಾ ಬೇವಿನ ಕಂಬ.
  2. ಗೌರಮ್ಮ : ರಾಗಿಯನ್ನು ನಿಲುವು ಎತ್ತಿದ ನಂತರ ಬರುವ ಒಂದು ಬಗೆಯ ನುಣ್ಣನೆ ಮಣ್ಣು.
  3. ಕೊಂಗ : ಧಾನ್ಯವನ್ನು ತೂರಲು ಹಾಗೂ ಕೇರಲು ಬಳಸುವ ಮೊರ.
  4. ವಾಯು ದೇವರು : ಗಾಳಿ
  5. ಇಡುಗ್ಲು : ಪೊರಕೆ ಅಥವಾ ಬರಲು
  6. ನಾಮದ ಕಡ್ಡಿ : ಕಡ್ಡಿ ಜೆಡಿಯಿಂದ ಬೇರ್ಪಟ್ಟ ಸಣ್ಣ ಸಣ್ಣ ರಾಗಿಯ ಕಡ್ಡಿಗಳು.
  7. ರಜ : ರಾಗಿ.
  8. ಬಂಡಿ : ರಾಗಿಯನ್ನು ಹುಲ್ಲು ಪತ್ರೆಗಳಿಂದ ಸ್ವಚ್ಛಗೊಳಿಸಲು ಬಳಸುವ ಜರಡೆ.
  9. ಮುಂದಂಡೆ : ರಾಗಿ ತೂರಿದಾಗ ಬರುವ ಉಬ್ಬಲು ಮತ್ತು ಅದು ಬಿದ್ದ ಪ್ರದೇಶ.
  10. ನೆರಗೋಲು : ತುದಿಯು ಕೊಕ್ಕೆಯಾಕಾರದಲ್ಲಿರುವ ಉದ್ದನೆಯ ಬಿದಿರಿನ ಕೋಲು.
  11. ಪತ್ರೆ : ಗುಂಡಿನಿಂದ ಹೊಡೆದ ಮೇಲೆ ರಾಗಿಯಿಂದ ಬೇರ್ಪಟ್ಟ ಹುಲ್ಲು.
  12. ಹುಲ್ಲು ಬಡಿಯುವ ಕೋಲು : ಹುಲ್ಲು ಬಡಿಯಲು ಬಳಸುವ ಬಿದಿರಿನ ಕೋಲು.
  13. ಗುಂಡು : ಹುಲ್ಲು ಬಡಿಯಲು ದನಗಳಿಗೆ ಕಟ್ಟಿ ಎಳೆಯುವ ಕಲ್ಲಿನ ಗುಂಡನೆಯ ವಸ್ತು.
  14. ಬಗ್ಗಡದ ಗುಂಡಿ : ಕಣ ಸಾರಿಸಲು ನೀರು ಮತ್ತು ಸಗಣಿಗಳನ್ನು ಮಿಶ್ರಣ ಮಾಡುವ ಸ್ಥಳ.
  15. ಉಬ್ಬಲು : ರಾಗಿಯನ್ನು ತೂರಿದ ನಂತರ ಬರುವ ಹೊಟ್ಟು ಅಥವಾ ಸಿಪ್ಪೆ.
  16. ಸಣ್ಣಕ್ಕಿ : ತೂರಿದ ನಂತರ ಉಳಿಯುವ ಸಣ್ಣ ಹೊಟ್ಟು ಮಿಶ್ರಿತ ರಾಗಿ.
  17. ಕಡ್ಡಿ ಜರಡಿ : ಅಗಲ ಕಣ್ಣುಗಳುಳ್ಳ ಬಿದಿರಿನ ಚೌಕಾಕಾರದ ಜರಡಿ. ನಾಮದ ಕಡ್ಡಿಗಳನ್ನು ಬೇರ್ಪಡಿಸಲು ಇದನ್ನು ಬಳಸುವರು.
  18. ಕುದುರೆ : ರಜ ತೂರಲು ಬಳಸುವ ಒಂದು ಹಲಗೆಗೆ ಎದುರು ಬದುರು ಜೋಡಿಸುವ ಕವಲುಗಳುಳ್ಳ ಎರಡು ಮರಗಳ ಸಾಧನ ನೋಡಲು ಕುದುರೆಯ ಆಕಾರದಲ್ಲಿಯೆ ಇರುತ್ತದೆ.

ಉಪಸಂಹಾರ

            ಕಣ ಸಂಸ್ಕೃತಿ ಇಂದು ತನ್ನ ಸಾಂಸ್ಕೃತಿಕ ಅನನ್ಯತೆಯಿಂದ ದೂರ ಸರಿಯುತ್ತಿದೆ. ಇಂದಿನ ಜಾಗತೀಕರಣ ಹಾಗೂ ಆಧುನಿಕ ಉಪಕರಣಗಳ ಬಳಕೆಯ ಕಾರಣವಾಗಿ ತನ್ನ ಮೂಲ ದೇಸಿ ತನವನ್ನು ಕಳೆದುಕೊಂಡಿದೆ. ತಂತ್ರಜ್ಞಾನದ ಪ್ರತಿಫಲವಾಗಿ ಆವಿಷ್ಕರಣೆಗೊಂಡ ಯಂತ್ರಗಳು ಗ್ರಾಮೀಣರ ಕೆಲಸಗಳನ್ನು ಕಸಿದುಕೊಂಡು ಅವರನ್ನು ನಿರುದ್ಯೋಗಿಗಳನ್ನಾಗಿಸಿದೆ. ಈ ಕಾರಣವಾಗಿ ಉಂಟಾದ ಸಾಮಾಜಿಕ ಅಂತರ ಜನಪದರಲ್ಲಿ ಸಾಂಸ್ಕೃತಿಕ ಬಿಕ್ಕಟ್ಟುಗಳಿಗೂ ಎಡೆಮಾಡಿಕೊಟ್ಟಿತು. ಹಿಂದಿನ ಸಹಭಾಗಿತ್ವದ ಮನಸ್ಸುಗಳಾಗಲಿ, ಹಂಚಿ ತಿನ್ನುವ ವಿಶಾಲ ಚಿಂತನೆಗಳಾಗಲಿ ಇಂದು ಕಣ್ಮರೆಯಾಗಿವೆ. ಕಣದಲ್ಲಿ ಹಾಡಲ್ಪಡುತ್ತಿದ್ದ ಗಾದೆ, ಒಗಟುಗಳು ಹಾಗೂ ಹಂತಿ ಪದಗಳು ಜನಪದರ ನಾಲಿಗೆಯಿಂದ ದೂರವಾಗಿವೆ. ಇಂತಹ ಅಮೂಲ್ಯ ಸಂಪತ್ತನ್ನು ಸಂಗ್ರಹಿಸಿ ದಾಖಲಿಸುವ ಜೊತೆಗೆ ಇಂದಿನ ಯುವಪೀಳಿಗೆಗೆ ಅವುಗಳ ಸಾರವತ್ತತೆಯ ಮಹತ್ವವನ್ನು ಅರಿವು ಮಾಡಿಕೊಡಬೇಕಿದೆ. ಹಾಗಯೇ ಕನ್ನಡ ನಾಡಿನಾದ್ಯಂತ ಬಳಕೆಯಲ್ಲಿರುವ ಕಣ ಸಂಬಂಧಿ ನಂಬಿಕೆಗಳು, ಗಾದೆ, ಒಗಟು ಮತ್ತು ಹಾಡುಗಳನ್ನು ಸಂಗ್ರಹಿಸಿ ಅವುಗಳನ್ನು ಕ್ರಮಬದ್ಧವಾದ ಅಧ್ಯಯನಕ್ಕೆ ಒಳಪಡಿಸುವುದು ಇಂದಿನ ಅತೀ ಜರೂರಿನ ಕಾರ್ಯವಾಗಿದೆ.

ವಕ್ತøಗಳ ವಿವರ.     

ಹೆಸರು

ತಂದೆಯ ಹೆಸರು

ಜಾತಿ

ವಯಸ್ಸು

ಗ್ರಾಮ

ಸಿದ್ದಗಂಗಮ್ಮ.

ರಂಗಯ್ಯ

ಒಕ್ಕಲಿಗ

49

ಗೌರೀಪುರ

ವೀರನಾರಾಯಣಗೌಡ.

ನಾರಾಯಣಪ್ಪ

ಒಕ್ಕಲಿಗ

38

ಚೊಟ್ಟನಹಳ್ಳಿ

ಸಿದ್ದರಂಗಮ್ಮ

ರಂಗಯ್ಯ

ಒಕ್ಕಲಿಗ

45

ಮುಗಳೂರು.

ನಂಜಪ್ಪ

ಪಾತಯ್ಯ

ಮಡಿವಾಳ

56

ಗೌರೀಪುರ

ಕೃಷ್ಣಪ್ಪ

ಕೆಂಪಯ್ಯ

ಒಕ್ಕಲಿಗ

59

ಗೌರೀಪುರ

ತಿಮ್ಮಣ್ಣ

ವೆಂಕಟಪ್ಪ

ಬೆಸ್ತ

76

ಕೌತಮಾರನಹಳ್ಳಿ

ಕದರಪ್ಪ

ಮಂಚಗೊಂಡನಹಳ್ಳಿ.

ಮಾದಿಗ

78

ಕೌತಮಾರನಹಳ್ಳಿ

 

ಪರಾಮರ್ಶನ ಗ್ರಂಥಗಳು.

  1. ಅರವಿಂದ ಮಾಲಗತ್ತಿ (ಪ್ರ.ಸಂ), ಕನ್ನಡ ವಿಷಯ ವಿಶ್ವಕೋಶ-ಜಾನಪದ, 2006, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal