Tumbe Group of International Journals

Full Text


ಪ್ರಾಚೀನ ಕನ್ನಡ ಅನುವಾದ ಸಾಹಿತ್ಯದ ಸಮೀಕ್ಷೆ

ಸೈಯದ್ ಬಿ.

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ

ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ - 583276

ಮೊ : 9880051998,  Gmail : syducta@gmail.com

  ಪ್ರಸ್ತಾವನೆ

ಯಾವುದೇ ಭಾಷೆಯ ಸಾಹಿತ್ಯ ಬೆಳೆಯಬೇಕಾದರೆ ಅದರ ಮೇಲೆ ಬೀರುವಂತಹ ಇತರೆ ಭಾಷೆಯ ಸಾಹಿತ್ಯದ ಪ್ರೇರಣೆ ಮತ್ತು ಪ್ರಭಾವಗಳು ಮುಖ್ಯ. ಈ ಪ್ರೇರಣೆ, ಪ್ರಭಾವಗಳು ಅನುಕರಣೆ ಮೂಲಕ ಪ್ರವೇಶಿಸಿ ಅನುವಾದಕ್ಕೆ ಒಳಪಡುತ್ತವೆ. ಇಂತಹ ಅನುವಾದಗಳೇ ಮುಂದುವರೆದು ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಒಂದು ಭಾಷೆಯಲ್ಲಿ ರಚನೆಯಾದ ಉತ್ತಮ ಸಾಹಿತ್ಯ ಕೃತಿಯು ತನ್ನ ಭಾಷೆಯ ಇತರೆ ಸಾಹಿತ್ಯ ಕೃತಿಗಳ ಮೇಲೆ ಹಾಗೂ ಕವಿಗಳ ಮೇಲೆ ಪ್ರಭಾವ ಬೀರುವುದರ ಜೊತೆಗೆ, ಅನ್ಯ ಭಾಷೆಯ ಸಾಹಿತ್ಯದ ಮೇಲೂ ಕೂಡ ಪ್ರಭಾವ ಬೀರುತ್ತದೆ. ಅನ್ಯಭಾಷಾ ಸಾಹಿತ್ಯದಿಂದ ಪ್ರಭಾವ ಹಾಗೂ ಪ್ರೇರಣೆಗೊಂಡ ಕೃತಿಯಲ್ಲಿ ಅನ್ಯ ಸಂಸ್ಕೃತಿಯ ಸಂಪರ್ಕವಾಗುತ್ತದೆ. ಆ ಸಂಸ್ಕೃತಿಯನ್ನು ತನ್ನ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಮಾಡಿಕೊಳ್ಳುತ್ತದೆ. ಕನ್ನಡ ಸಾಹಿತ್ಯದ ಇತಿಹಾಸವನ್ನೇ ನೋಡಿದಾಗ ಇಲ್ಲಿ ರಚನೆಯಾದ ಅನೇಕ ಕೃತಿಗಳ ಮೇಲೆ ತನ್ನ ಭಾಷೆಯ ಸಾಹಿತ್ಯ ಹಾಗೂ ಅನ್ಯಭಾಷೆಯ ಸಾಹಿತ್ಯದ ಪ್ರೇರಣೆ, ಪ್ರಭಾವಗಳು ಅಪಾರವೆಂಬುದು ಸ್ಪಷ್ಟ. ಆದ್ದರಿಂದ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಅನುವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದೇ ರೀತಿ ಆಧುನಿಕ ಸಂದರ್ಭದಲ್ಲೂ ಕೂಡ ಅನುವಾದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ಸಾಹಿತ್ಯ ದೃಷ್ಟಿಯಿಂದ ಮಹತ್ವವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಇಂದು ಹೆಚ್ಚಾಗಿ ಅನುವಾದಕ್ಕೆ ‘ಅನುವಾದ ಸಾಹಿತ್ಯ’ವೆಂದು ಬಳಸುವುದಕ್ಕಿಂತ ‘ಭಾಷಾಂತರ ಸಾಹಿತ್ಯ’ವೆಂದು ಬಳಸಲಾಗುತ್ತ್ತಿದೆ. ಇದು ‘ಭಾಷಾಂತರ’ ಮತ್ತು ‘ಅನುವಾದ’ ಎಂಬುದರ ಮಧ್ಯೆ ಕೆಲವೊಮ್ಮೆ ಗೊಂದಲ ಉಂಟಾಗುವಂತೆ ಮಾಡುವುದು ಸಹಜ. ಆದರೆ ಸಾಹಿತ್ಯ ವಲಯದಲ್ಲಿ ಈ ಎರಡನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ. ನಮ್ಮ ಸಾಂಸ್ಕೃತಿಕ ಪರಿಸರಕ್ಕೆ ಭಾಷಾಂತರವೆಂಬುದು ಹೊಸ ರೀತಿಯ ಪರಿಭಾಷೆ. ವಸಾಹತುಶಾಹಿಗಳ ಕಾಲಘಟ್ಟದಲ್ಲಿ ಇಂಗ್ಲಿಷ್‍ನ ‘Traslation’ ಎಂಬ ಪದಕ್ಕೆ ಸಂವಾದಿಯವಾಗಿ ಕನ್ನಡದಲ್ಲಿ ‘ಭಾಷಾಂತರ’ವೆಂದು ಕರೆದುಕೊಂಡಿರುವುದು ಇದಕ್ಕೆ ಕಾರಣ. ಭಾರತೀಯ ಸಾಹಿತ್ಯದಲ್ಲಿ ‘ಭಾಷಾಂತರ’ವೆಂದು ಕರೆದುಕೊಳ್ಳುವ ಪೂರ್ವದಲ್ಲಿಯೇ ಅದರ ಪರ್ಯಾಯ ಪದವಾಗಿ ಸಂಸ್ಕೃತದ ಪ್ರಭಾವದಿಂದ ದೇಶದ್ಯಾಂತ ‘ಅನುವಾದ’ ಎಂಬ ಪದ ನಮ್ಮಲ್ಲಿ ಚಾಲ್ತಿಯಲ್ಲಿತ್ತು, ಈಗಲೂ ಇದೆ. ಕನ್ನಡ ಸಾಹಿತ್ಯದಲ್ಲಿಯೂ ಕೂಡ ‘ಅನುವಾದ’ದ ಬಗ್ಗೆ ಪಂಪಾದಿಗಳಿಂದಲೂ ಗುರುತಿಸಬಹುದು. ಆದ್ದರಿಂದ ನಾವು ಭಾಷಾಂತರವೆಂದು ಕರೆದುಕೊಳ್ಳುವುದಕ್ಕಿಂತ ಅನುವಾದವೆಂದು ಕರೆದುಕೊಂಡಾಗ ಅನುವಾದ ಸಾಹಿತ್ಯದ ಇತಿಹಾಸವು ಇನ್ನೂ ಪ್ರಾಚೀನತೆ ಪಡೆಯುತ್ತ ಹೋಗುತ್ತದೆ. ಜೊತೆಗೆ ನಮ್ಮ ಆಸ್ಮಿತೆಯನ್ನು ಉಳಿಸಿಕೊಂಡಂತೆ ಆಗುತ್ತದೆ. ಆ ಕಾರಣದಿಂದ ಈ ಲೇಖನದಲ್ಲಿ ಭಾಷಾಂತರವೆಂಬ ಪರಿಭಾಷೆಯನ್ನು ಬಳಸುವ ಬದಲು ನಮ್ಮ ಸಾಂಸ್ಕೃತಿಕ ಪರಿಸರಕ್ಕೆ ಹತ್ತಿರವಿರುವ, ನಮ್ಮದೇ ಪರಿಭಾಷೆಯಾಗಿರುವ ಅನುವಾದ ಎಂಬುದನ್ನು ಬಳಸಲಾಗುತ್ತದೆ.

ಅನುವಾದ ಸಾಹಿತ್ಯ ಕುರಿತ ವಿಮರ್ಶೆ, ಅಧ್ಯಯನ, ಚರ್ಚೆಗಳ ಸಂದರ್ಭದಲ್ಲಿ ಕೇವಲ ಶಿಷ್ಟ ಸಾಹಿತ್ಯಕ್ಕೆ ಮಾತ್ರ ಅನುವಾದ ಸಾಹಿತ್ಯವನ್ನು ಸೀಮಿತಗೊಳಿಸಲಾಗುತ್ತದೆ. ಆದರೆ ಮೌಖಿಕವಾಗಿ ಹರಡಿರುವ ಅನುವಾದ ಸಾಹಿತ್ಯವನ್ನು ಗುರುತಿಸುವುದಿಲ್ಲ, ಮೌಖಿಕವಾಗಿ ‘ರಾಮಾಯಣ’, ‘ಮಹಾಭಾರತ’ ಹಾಗೂ ‘ಕುರಾನ್’ ಅಂತಹ ಅನೇಕ ಧಾರ್ಮಿಕ ಪಠ್ಯಗಳು ಹಾಗೂ ಕುಮಾರವ್ಯಾಸನ ‘ಗದುಗಿನ ಭಾರತ’ದಂತಹ ಕೃತಿಗಳು, ಜನಪದ ವೀರರಿಗೆ ಸಂಬಂಧಿಸಿದ ಲಾವಣಿ ಗೀತೆಗಳು ಹಾಗೂ ಜನಪದ ಮಹಾಕಾವ್ಯಗಳು ಇನ್ನೂ ಅನೇಕ ಮೌಖಿಕ ಕೃತಿಗಳು ಸಾವಿರಾರು ವರ್ಷಗಳಿಂದ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಪಸರಿಸುವಲ್ಲಿ ಮೌಖಿಕ ಅನುವಾದವು ಕೆಲಸ ಮಾಡುತ್ತ ಬಂದಿದೆ. ಇಲ್ಲಿ ಯಾವ ಭಾಷೆಯ ಲಿಪಿಯು ಅನುವಾದದ ಮಧ್ಯೆ ಕೆಲಸ ಮಾಡುವುದಿಲ್ಲ. ಇಲ್ಲಿ ಭಾಷೆ ಮಾತ್ರ ಮುಖ್ಯ ಹೊರತು ಲಿಪಿ ಮುಖ್ಯವಾಗಿರುವುದಿಲ್ಲ. ಇಂತಹ ಮೌಖಿಕ ಅನುವಾದದ ಪರಂಪರೆಗೆ ನಿರ್ದಿಷ್ಟವಾದ ಇಂತಿಷ್ಟೇ ಇತಿಹಾಸ ಗುರುತಿಸುವುದು ಕಷ್ಟ. ಇದರ ಇತಿಹಾಸ ದೀರ್ಘವಾಗಿರುತ್ತದೆ. ಇಂತಹ ಮೌಖಿಕ ಅನುವಾದ ಸಾಹಿತ್ಯವನ್ನು ಕುರಿತ ಹೆಚ್ಚಿನ ಅಧ್ಯಯನಗಳ ಅಗತ್ಯತೆ ಮತ್ತು ಅನಿವಾರ್ಯತೆ ಹೆಚ್ಚಿದೆ.

ಕರ್ನಾಟಕವನ್ನು ಒಳಗೊಂಡಂತೆ ಭಾರತದ ಈಗಿನ ಅನೇಕ ರಾಜ್ಯಗಳು ಅನ್ಯ ಭಾಷೆಯ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದವು, ಜೊತೆಗೆ ತನ್ನ ಗಡಿಯನ್ನು ಇತರೆ ಭಾಷೆಯ ರಾಜ್ಯಗಳೊಂದಿಗೆ ಹಂಚಿಕೊಂಡಿವೆ. ಆದ್ದರಿಂದ ಇಲ್ಲಿ ಬಹುಭಾಷಾ ಪರಿಸರಕ್ಕೆ ದೀರ್ಘವಾದ ಇತಿಹಾಸವಿದೆ. ಇಲ್ಲಿನ ಗಡಿ ಪ್ರದೇಶಗಳ ಸಾಮಾಜಿಕ ವ್ಯವಸ್ಥೆಯಲ್ಲಿ ರಾಜ್ಯ, ರಾಜ್ಯಗಳ ಮಧ್ಯೆ ವ್ಯಾವಹಾರಿಕ ಸಂಬಂಧಗಳ ಜೊತೆಗೆ ವೈವಾಹಿಕ ಸಂಬಂಧಗಳು ನಡೆಯುತ್ತ ಬಂದಿವೆ. ಈ ಸಂಬಂಧಗಳು ಬಹುಭಾಷೆ, ದ್ವಿಭಾಷೆ ವಾತಾವರಣಕ್ಕೆ ಶಾಶ್ವತ ಅಡಿಪಾಯವನ್ನು ಹಾಕಿವೆ. ಹೀಗೆ ಅನೇಕ ಭಾಷೆಗಳೊಂದಿಗೆ ಅನುಸಂಧಾನ ಮಾಡುವ ಇಲ್ಲಿನ ಜನರು ಮೌಖಿಕ ಸ್ವರೂಪದಲ್ಲಿ ಅನುವಾದವನ್ನು ತಮಗೆ ಅರಿವಿಲ್ಲದಂತೆ, ಜೀವನದ ಭಾಗವಾಗಿ ಪ್ರತಿನಿತ್ಯ ಮಾಡುತ್ತಿರುತ್ತಾರೆ. ಇಂತಹ ಸೂಕ್ಷ್ಮಗಳನ್ನು ಗ್ರಹಿಸಿದಾಗ ಅನುವಾದವೆಂಬುದು ಜನಜೀವನದಲ್ಲಿ ಹಾಸುಹೊಕ್ಕಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಪ್ರಾಚೀನ ಭಾರತೀಯ ಸಂದರ್ಭದಲ್ಲಿ ಬಹುಭಾಷಿಕತೆ, ಬಹುಸಂಸ್ಕೃತಿಗಳಲ್ಲಿಯೇ ಕನ್ನಡ ಅನುವಾದ ಮೂಲ ನೆಲೆಯನ್ನು ಗುರುತಿಸಬಹುದಾಗಿದೆ. ಭಾರತದಲ್ಲಿ ಕ್ರಿ.ಪೂರ್ವದ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿದ್ದ ಬೌದ್ಧ, ಜೈನ ಮತ್ತು ವೈದಿಕ ಧಾರ್ಮಿಕ ಪರಂಪರೆಗಳು ಅನುಕ್ರಮವಾಗಿ ತಮ್ಮ ಧಾರ್ಮಿಕ ತತ್ವ ಸಿದ್ಧಾಂತಗಳನ್ನು ಪಾಳಿ, ಪ್ರಾಕೃತ, ಸಂಸ್ಕೃತ ಮುಂತಾದ ಭಾಷೆಗಳಲ್ಲಿ ದಾಖಲಿಸಿದ್ದರು. ಈ ಧರ್ಮಗಳ ಪ್ರಚಾರದ ಸಂದರ್ಭದಲ್ಲಿ ಅನ್ಯಭಾಷಿಕರ ಕಡೆಗೆ ವಿಸ್ತರಿಸುವ ಸಂದರ್ಭಗಳಲ್ಲಿ ಭಾಷೆಗಳ ನಡುವೆ ಕೊಡು ಕೊಳ್ಳುವಿಕೆಗಳ ವಿಚಾರ ವಿನಿಮಯಗಳು ನಡೆಯುವಲ್ಲಿ ಅನುವಾದ ಪ್ರಕ್ರಿಯೆಗಳು ಜೀವಂತವಾಗಿದ್ದವು. ಸಂಸ್ಕೃತ ಭಾಷೆಗೆ ಶೈಕ್ಷಣಿಕ ಮಾನ್ಯತೆ ದೊರೆಯುತ್ತಿದ್ದಂತೆ ಬೌದ್ಧ, ಜೈನ ಮತೀಯ ವಿಚಾರಗಳನ್ನು ಸಂಸ್ಕೃತದಲ್ಲಿ ಬರೆಯುವ ಪ್ರಯತ್ನಗಳು ಆರಂಭವಾದವು. ಲಿಖಿತ ಪರಂಪರೆಯಲ್ಲಿ ಸಂಸ್ಕೃತ ಭಾಷೆಗೆ ಸ್ಥಾನಮಾನಗಳು ದೊರೆಯುತ್ತಿದ್ದಂತೆ ಪಾಳಿ, ಪ್ರಾಕೃತ ಭಾಷೆಗಳಲ್ಲಿದ್ದ ಪಠ್ಯಗಳು ಸಂಸ್ಕೃತಕ್ಕೆ ಅನುವಾದ ಮಾಡಲು ಆರಂಭವಾಯಿತು. “ಈ ಮೂರು ಭಾರತೀಯ ಭಾಷೆಗಳ ನಡುವಿನ ಕೊಡು ಕೊಳ್ಳುವಿಕೆಯು ಇಲ್ಲಿನ ಸ್ಥಳೀಯ ಭಾಷೆಗಳ ಕಡೆಗೆ ತಿರುಗಿತು. ಕ್ರಿ.ಶ 2-3ರ ಸುಮಾರಿಗೆ ದಕ್ಷಿಣ ಭಾರತದಲ್ಲಿ ತಮಿಳು, ಕನ್ನಡಗಳು ತಮ್ಮದೇ ಆದ ಸಾಹಿತ್ಯ ಪರಂಪರೆಯ ನಿರ್ಮಾಣಕ್ಕೆ ಮುಂದಾದಾಗ ಸಹಜವಾಗಿಯೇ ಸಂಸ್ಕೃತ, ಪ್ರಾಕೃತ, ಪಾಳಿಗಳು ಈ ಭಾಷೆಗಳಿಗೆ ಆಕರವನ್ನು ಒದಗಿಸತೊಡಗಿದವು. ಹಾಗೆ ನಿರ್ಮಾಣವಾದ ಒಂದು ಭಾಷಾಂತರ ಪರಂಪರೆ ಕನ್ನಡದ್ದು”.(ಭಾಷಾಂತರ ಪ್ರವೇಶಿಕೆ, ಪು.60). ಈ ರೀತಿಯ ಅನುವಾದ ಪರಂಪರೆ ಕನ್ನಡದಲ್ಲಿ ಶುರುವಾದ ನಂತರ ಕರ್ನಾಟಕದಲ್ಲಿ ಬೌದ್ಧ, ಜೈನ ಇತರೆ ಧರ್ಮಗಳ ಪ್ರಾಬಲ್ಯ ಹೆಚ್ಚಾಗ ತೊಡಗಿತು. ಆ ಧರ್ಮಗಳ ಸಿದ್ಧಾಂತ, ತತ್ವಗಳು ಪ್ರಚಾರದ ದೃಷ್ಟಿಯಿಂದ ಕನ್ನಡಕ್ಕೆ ಸಂಸ್ಕೃತ, ಪ್ರಾಕೃತ, ಪಾಳಿ ಇತರೆ ಭಾಷೆಗಳಿಂದ ಅನುವಾದ ಮಾಡುವ ಪ್ರಕ್ರಿಯೆ ಆರಂಭವಾಯಿತು.

ಕ್ರಿ.ಶ. 450ರ ಕಾಲದ ಹಲ್ಮಿಡಿ ಶಾಸನವು ಕನ್ನಡದ ಮೊಟ್ಟ ಮೊದಲ ಶಾಸನವಾಗಿದೆ. ಈ ಶಾಸನವು ಕನ್ನಡ, ಸಂಸ್ಕೃತ ಎರಡು ಭಾಷೆಗಳ ಸಮ್ಮಿಲನದಿಂದ ರಚಿತವಾಗಿದ್ದು, ಸಂಸ್ಕೃತದ ಪ್ರಾಬಲ್ಯ ಹೆಚ್ಚಾಗಿದೆ. ಶಾಸನದಲ್ಲಿನ ಕನ್ನಡ, ಸಂಸ್ಕೃತ ಭಾಷೆಯಿಂದ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವಿರುವುದು ತಿಳಿಯುತ್ತದೆ. ಕರ್ನಾಟಕದಲ್ಲಿ ಬಹುಭಾಷಿಕತೆ ಎಂಬುದು ಸಾಮಾಜಿಕ ಮತ್ತು ಪ್ರಾದೇಶಿಕ ವಲಯದಲ್ಲಿ ಅಷ್ಠೆಯಲ್ಲದೇ ಶಿಷ್ಟ ವಲಯವನ್ನು ಕೂಡ ಆವರಿಸಿಕೊಂಡಿತ್ತೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಆವರಿಸಿದ್ದ ಬಹುಭಾಷಿಕ ಪರಿಸರವೇ ಮುಂದಿನ ಅನುವಾದಗಳಿಗೆ ದಾರಿಯಾಯಿತು. ಕನ್ನಡ ಸಾಹಿತ್ಯದ ಆದಿ ಕೃತಿಯಾದ ‘ಕವಿರಾಜಮಾರ್ಗ’ದಲ್ಲಿ(ಕ್ರಿ.ಶ 850) ಉಲ್ಲೇಖವಾದ ಗದ್ಯ, ಪದ್ಯ ಕವಿಗಳಿಂದ ಹಾಗೂ ಅವರ ಅನುಪಲಬ್ದ ಕೃತಿಗಳನ್ನು ವಿದ್ವಾಂಸರು ಗುರುತಿಸಿರುವುದರಿಂದ ‘ಕವಿರಾಜಮಾರ್ಗ’ ಪೂರ್ವದಲ್ಲಿಯೇ ಅನುವಾದ ಕೃತಿಗಳು ಕನ್ನಡದಲ್ಲಿ ಇದ್ದವೆಂದು ಅಭಿಪ್ರಾಯಿಸಬಹುದು.

‘ಕವಿರಾಜಮಾರ್ಗ’ದಿಂದ ಆರಂಭಗೊಂಡ ಪ್ರಾಚೀನ ಕನ್ನಡ ಸಾಹಿತ್ಯವು ತನ್ನ ಪರಂಪರೆಯನ್ನು ಸಂಸ್ಕೃತ ಸಾಹಿತ್ಯದ ಪ್ರೇರಣೆ, ಪ್ರಭಾವದಿಂದ ಸ್ವತಂತ್ರವಾಗಿ ಕಟ್ಟಿಕೊಳ್ಳಲು ಶುರು ಮಾಡಿತು. ಅಲಂಕಾರ ಗ್ರಂಥದಿಂದ ಆರಂಭವಾಗಿ ಗದ್ಯ, ಕಾವ್ಯ, ವ್ಯಾಕರಣ, ಕಾವ್ಯಮೀಮಾಂಸೆ ಹೀಗೆ ಅನೇಕ ಕೃತಿಗಳು ರಚನೆಯಾದವು. ಆದರೆ ಈ ಅನುವಾದಗಳು ಯಥಾವತ್ತಾಗದೇ ಭಾವಾನುವಾದ, ರೂಪಾಂತರ, ಸಾರ ಸಂಗ್ರಹಗಳÀ ರೂಪದಲ್ಲಿ ಆಗಿದ್ದು ಲಕ್ಷ್ಯ ಭಾಷೆಯಲ್ಲಿನ ಸಾಂಸ್ಕೃತಿಕ ಬೇಡಿಕೆಗಳೇ ಕಾರಣವಾಗಿದೆ. ಈ ಬೇಡಿಕೆಗಳೇ ಅನುವಾದದ ಸ್ವರೂಪವನ್ನು ಬದಲು ಮಾಡುತ್ತವೆ. ಅನುವಾದ ಎಂಬುದು ಕೇವಲ ನೇರಾನುವಾದವಲ್ಲ ಅದನ್ನು ಅನುವಾದಿಸುವ ಸಂದರ್ಭದಲ್ಲಿ ಸ್ಥಳೀಯ ಭಾಷೆ, ಸಂಸ್ಕೃತಿ, ಸಮಾಜಕ್ಕೆ ಹೊಂದುವಂತೆ ಬದಲಾವಣೆ ಮಾಡುವುದು ಕೂಡ ಅನುವಾದವಾಗುತ್ತದೆ. ಮೂಲ ಭಾಷೆಯಲ್ಲಿದ್ದ ಗದ್ಯ ಕೃತಿಯನ್ನು ಪದ್ಯಕ್ಕೆ, ಪದ್ಯದಿಂದ ಗದ್ಯಕ್ಕೆ ಅನುವಾದಿಸುವುದು ಹಾಗೂ ರಗಳೆ, ಷಟ್ಪದಿ, ಸಾಂಗತ್ಯ ಮುಂತಾದ ದೇಸಿ ಛಂದಸ್ಸಿನ ಪ್ರಕಾರಗಳಲ್ಲಿ ಅನುವಾದಿಸುವುದು. ಮುಂದುವರೆದು ಕೃತಿಕಾರ ತನ್ನ ಅನುಕೂಲ ಹಾಗೂ ತನ್ನ ಪ್ರತಿಭೆ, ಶೈಲಿಯನ್ನು ಅನಾವರಣ ಮಾಡುವ ಸಂದರ್ಭದಲ್ಲಿ ಹೊಸ ಪಾತ್ರಗಳನ್ನು, ಹೊಸ ಸನ್ನಿವೇಶ, ಪ್ರಸಂಗ, ವರ್ಣನೆಗಳನ್ನು ಸೇರಿಸುವುದು, ತನಗೆ ಅನಗತ್ಯ ಹಾಗೂ ತನ್ನ ಸಮಾಜಕ್ಕೆ ಬೇಡವೆಂದು ಅನಿಸುವ ವಿಷಯಗಳನ್ನು ತೆಗೆಯುವುದು. ಹಾಗೂ ಬೇರೊಂದು ಕವಿಯ ಪ್ರಭಾವಕ್ಕೆ ಒಳಪಟ್ಟು ಅವನ ಶೈಲಿಯನ್ನು ಅನುಸರಿಸುವುದು, ತನ್ನ ಕಾವ್ಯದಲ್ಲಿ ಬರುವ ಪಾತ್ರ, ಸನ್ನಿವೇಶ, ವರ್ಣನೆ ಮುಂತಾದವುಗಳನ್ನು ರಚಿಸುವ ಸಂದರ್ಭಗಳಲ್ಲಿ ಬೇರೊಂದು ಕೃತಿಗಳಲ್ಲಿನ ಪಾತ್ರ, ಸನ್ನಿವೇಶ, ವರ್ಣನೆ ಮುಂತಾದವುಗಳನ್ನು ಯಥಾವತ್ತು ಅನುವಾದಿಸುವುದು ಅಥವಾ ಅದರ ಪ್ರಭಾವಕ್ಕೆ ಒಳಗಾಗಿ ತನ್ನದೇ ಭಿನ್ನ ನೆಲೆಯಲ್ಲಿ ಗ್ರಹಿಸಿ ಅದನ್ನು ಮರು ಸೃಷ್ಟಿಸುವುದು. ಇಲ್ಲವೇ ಅದನ್ನು ತನಗೆ ಬೇಕಾದ ರೀತಿಯಲ್ಲಿ ರೂಪಾಂತರಿಸಿಕೊಳ್ಳುವುದು. ಹೀಗೆ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮಾದರಿಗಳು ಅಧುನಿಕ ಪೂರ್ವ ಕನ್ನಡ ಅನುವಾದ ಸಾಹಿತ್ಯದಲ್ಲಿ ಕಾಣುತ್ತದೆ.

ನಮಗೆ ಕನ್ನಡ ಸಾಹಿತ್ಯದ ಮೊಟ್ಟ ಮೊದಲ ಕೃತಿಯಾಗಿ ಸಿಗುವುದು ಕ್ರಿ.ಶ. 850ರಲ್ಲಿ ರಚನೆಯಾದ ‘ಕವಿರಾಜಮಾರ್ಗ’. ಇದು ಸಂಸ್ಕೃತದಿಂದ ಅನುವಾದವಾದ ಒಂದು ಲಾಕ್ಷಣಿಕ ಕೃತಿ. ಈ ಕೃತಿಗೆ ಮೂಲ ಆಕರ ಸಂಸ್ಕೃತದ ದಂಡಿಯ ‘ಕಾವ್ಯಾದರ್ಶ’ ಹಾಗೂ ಭಾಮಹನ ‘ಕಾವ್ಯಾಲಂಕಾರ’. ಆದರೆ ಈ ಎರಡು ಕೃತಿಗಳ ಪೂರ್ಣ ಪ್ರಮಾಣದ ಅನುವಾದವಲ್ಲ, ಅವುಗಳಿಂದ ಪ್ರಭಾವಕ್ಕೆ ಒಳಪಟ್ಟ ಕೃತಿ. ಕವಿರಾಜಮಾರ್ಗದಲ್ಲಿ ಒಟ್ಟು 536 ಪದ್ಯಯಗಳಿದ್ದು ಅದರಲ್ಲಿ ದಂಡಿಯ ‘ಕಾವ್ಯಾದರ್ಶ’ದಿಂದ 230 ಪದ್ಯಗಳನ್ನು, ಭಾಮಹನ ‘ಕಾವ್ಯಲಂಕಾರ’ದಿಂದ 40 ಪದ್ಯಗಳನ್ನು ಒಟ್ಟು 270 ಪದ್ಯಗಳನ್ನು ಅನುವಾದ ಮಾಡಿಕೊಳ್ಳಲಾಗಿದೆ. ಉಳಿದಂತೆ ಇತರೆ ಪದ್ಯಗಳು ಸ್ವತಂತ್ರ ರಚನೆ ಆಗಿವೆ. ಆದರೆ ಈ ಕೃತಿಯು ಕನ್ನಡ ಸಾಹಿತ್ಯದ, ಕನ್ನಡ ದೇಶದ ಪ್ರಾಚೀನತೆ ಮತ್ತು ಮಹತ್ವವನ್ನು ತಿಳಿಸುತ್ತದೆ. ‘ಕಾವೇರಿಯಿಂದಮಾ ಗೋದಾವರಿ ವರ ನಿರ್ಪ ನಾಡದಾ ಕನ್ನಡದೊಳ್’ ಎಂಬಲ್ಲಿ ಕನ್ನಡ ನಾಡಿನ ವಿಸ್ತಾರತೆಯನ್ನು ಹೇಳಲಾಗಿದೆ. ‘ನಿಜದಿಂ ಕುರಿತೋದಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್’ ಎಂಬ ಮಾತು ಕನ್ನಡ ನಾಡಿನ ಜನರಲ್ಲಿ ಇದ್ದಂತಹ ಸಾಹಿತ್ಯ ಪರಿಣತಿಯನ್ನು, ಜನಪದ ಸಾಹಿತ್ಯದ ಮಹತ್ವವನ್ನು ತಿಳಿಸುತ್ತದೆ. ಚತ್ತಾಣ, ಬೆಂದಡೆ ಎಂಬ ಪ್ರಾಚೀನ ಕಾವ್ಯ ಪ್ರಕಾರಗಳ ಬಗ್ಗೆ ತಿಳಿಸುತ್ತ ಪ್ರಾಚೀನ ಕನ್ನಡ ಸಾಹಿತ್ಯದ ಪ್ರಾಚೀನತೆಯ ಮೇಲೆ ಬೆಳಕನ್ನು ಚೆಲ್ಲುತ್ತದೆ. ‘ಓವನಿಗೆ ಒನಕೆವಾಡು’ ಎಂಬ ಜನಪದ ಕಾವ್ಯ ಪ್ರಕಾರಗಳನ್ನು ತಿಳಿಸುವುದರ ಮೂಲಕ ಜನಪದ ಸಾಹಿತ್ಯದ ಜನಪ್ರಿಯತೆಯ ಬಗ್ಗೆ ಅಥ್ರ್ಯೆಸುತ್ತದೆ. ಹೀಗೆ ಪ್ರಾದೇಶಿಕ ಅಂಶಗಳನ್ನು ಒಳಗೊಂಡಿರುವ ‘ಕವಿರಾಜಮಾರ್ಗ’ವು ಹಿಂದಿನ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಮಾರ್ಗವಾಗುವುದರ ಜೊತೆಗೆ, ಮುಂದಿನ ಕವಿಗಳಿಗೂ ಕೂಡ ರಾಜಮಾರ್ಗವಾಗಿ ತನ್ನ ಕಾರ್ಯವನ್ನು ನಿರ್ವಹಿಸಿದ ಕೀರ್ತಿಗೆ ಪಾತ್ರವಾಗಿದೆ. ಕನ್ನಡ ನಾಡು ನುಡಿಗಳ ಸ್ವರೂಪ, ಸಾಹಿತ್ಯದ ಸ್ಥಿತಿ ಹಾಗೂ ಕವಿಗಳಿಗೆ ರಾಜಮಾರ್ಗವನ್ನು ತೋರುವ ವಿಮರ್ಶಾತ್ಮಕ ವಿಚಾರ ಪ್ರಣಾಲಿ ಎಂಬಿವುಗಳಿಂದ ಸ್ವತಂತ್ರವಾದ ಕೃತಿಯಾಗಿದೆ. “ಈ ಕೃತಿಯಿಂದ ಕನ್ನಡ ಸಾಹಿತ್ಯೋದಯದ ಬಗ್ಗೆ ನಮ್ಮ ಅಜ್ಞಾನವು ಕಡಿಮೆಯಾಗಿದೆ, ಕತ್ತಲೆ ಇರುವಲ್ಲಿ ಕೆಲವು ಸ್ಪಷ್ಟವಾದ ಬೆಳಕಿನ ಪಟ್ಟಿಗಳು ಮೂಡಿವೆ. ಕನ್ನಡ ಸಾಹಿತ್ಯ ಅದರ ಕಾಲದಲ್ಲಿ ಮತ್ತು ಅದಕ್ಕಿಂತ ಹಿಂದಿನಿಂದಲೂ ಇದ್ದಿತೆಂಬುದನ್ನು ಅದರಲ್ಲಿಯ ಕೆಳಗಣ ಅವತರಣಗಳು ಸಾರುತ್ತವೆ.” ಎಂದು ರಂ.ಶ್ರೀ.ಮುಗಳಿಯವರು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿ ಅಭಿಪ್ರಾಯ ಪಟ್ಟಿರುವುದು ಸಾಹಿತ್ಯ ದೃಷ್ಟಿಯಿಂದ ಗಮನಾರ್ಹ ಅಂಶವಾಗಿದೆ.

ಕೃತಿಯಲ್ಲಿ “ಕನ್ನಡಗಬ್ಬಂಗಳೊಳ್” ಎಂದು ಗದ್ಯಪದ್ಯಯ ಸಂಮಿಶ್ರಿತವಾದ ಕೃತಿಯನ್ನು ಬರೆಯುತ್ತಿದ್ದ ಕೃತಿಕಾರರು ಇದ್ದರೆಂಬ ಉಲ್ಲೇಖಗಳು ಇವೆ. ‘ಪುರಾಣಕವಿಗಳ್’, ‘ಪೂರ್ವಾಚಾರ್ಯರ್’ ಎಂಬ ಪ್ರಯೋಗಳಿವೆ. ಕನ್ನಡ ನಾಡನ್ನು ಕುರಿತು ಕನ್ನಡ ಜನತೆಯನ್ನು ಕುರಿತು ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡು ಕನ್ನಡನಾಡು ಎಂಬ ಉಲ್ಲೇಖವು ಕನ್ನಡ ನಾಡಿನ ವಿಸ್ತಾರತೆಯನ್ನು ತಿಳಿಸುತ್ತದೆ. ಹಾಗೆ ‘ಕಾವ್ಯ ಪ್ರಯೋಗ ಪರಿಣತಿಮತಗಳ್’ ನಾಟಕ ಪ್ರಯೋಗದಲ್ಲಿ ‘ನಾಡವರ್ಗಳು ಚದುರರಾಗಿದ್ದರು’, ‘ಕುರಿತೋದದೆಯು ಕಾವ್ಯರಚನೆ ಮಾಡಬಲ್ಲವರೆಂದು’ ನಾಡಿನ ಬಗ್ಗೆ, ನಾಡಿನ ಜನತೆಯ ಬಗ್ಗೆ ಹೇಳುವಲ್ಲಿ ಕನ್ನಡ ಸಾಹಿತ್ಯದ ಚರಿತ್ರೆಯ ದೀರ್ಘವಾದ ಇತಿಹಾಸವನ್ನು ಊಹಿಸಲು ಸಹಾಯಕವಾಗುತ್ತವೆ. ಕನ್ನಡ ನಾಡಿನ ಸ್ಥಳೀಯತೆಯ ಮೇಲೆ ಬೆಳಕನ್ನು ಚೆಲ್ಲುವುದರ ಮೂಲಕ, ಕನ್ನಡ ಸಾಹಿತ್ಯ ಚರಿತ್ರೆಯ ಆರಂಭದ ಹೆಜ್ಜೆಗಳನ್ನು ತಿಳಿಸುವುದರಲ್ಲಿ ಕೃತಿಯ ಮಹತ್ವ ತಿಳಿಯುತ್ತದೆ. ‘ಕವಿರಾಜಮಾರ್ಗ’ದ ಕರ್ತೃ ಬಗ್ಗೆ ಆರಂಭದ ಸಂಶೋಧನೆಗಳಲ್ಲಿ ಗೊಂದಲವಿತ್ತು. ಅಮೋಘವರ್ಷನಿಂದ ರಚನೆಯಾಯಿತೋ? ಅಥವಾ ಅವನ ಅಸ್ಥಾನದಲ್ಲಿದ್ದ ಶ್ರೀವಿಜಯನಿಂದ ರಚನೆಯಾಗಿರಬಹುದೋ? ಎಂಬುದು. ಆದರೆ ಮುಂದುವರೆದ ಸಂಶೋಧನೆಗಳಿಂದ ವಿದ್ವಾಂಸರು ಶ್ರೀವಿಜಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಕನ್ನಡ ಸಾಹಿತ್ಯದ ಆರಂಭಕ್ಕೆ ಹೆಬ್ಬಾಗಿಲಾಗಿ ಮುಂದಿನ ಕವಿಗಳಿಗೆ ರಾಜಮಾರ್ಗವಾಗುವುದರ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಅನುವಾದಕ್ಕೂ ಮಾರ್ಗವಾಗಿದೆ.

ಕವಿರಾಜಮಾರ್ಗ ಕೃತಿಯ ನಂತರ ಕನ್ನಡ ಸಾಹಿತ್ಯದಲ್ಲಿ ಸಿಗುವ ಕೃತಿ ‘ವಡ್ಡಾರಾಧನೆ’. ಇದರ ಕಾಲ ಕ್ರಿ.ಶ 920 ಎಂದು ವಿದ್ದಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದೊಂದು ಕನ್ನಡ ಸಾಹಿತ್ಯದಲ್ಲಿ ಸಿಕ್ಕ ಮೊಟ್ಟಮೊದಲ ಗದ್ಯಯ ಕೃತಿ. ಇದು ಸಂಸ್ಕೃತದ ಹರಿಶೇಣನ ‘ಬೃಹತ್ ಕಥಾಕೋಶ’ದ ಅನುವಾದ ಎಂದು ಅಭಿಪ್ರಾಯಪಡಲಾಗಿದೆ. ಆದರೇ ಪೂರ್ಣ ಪ್ರಮಾಣದ ಅನುವಾದವಲ್ಲವೆಂಬುದು ಗಮನಿಸಬೇಕಾದ ಅಂಶ. ‘ವಡ್ಡಾರಾಧನೆ’ಯಲ್ಲಿಯ 19 ಕಥೆಗಳನ್ನು ಕ್ರಮದಲ್ಲಿಯ ಒಂದು ವ್ಯತ್ಯಾಸ ಬಿಟ್ಟರೆ ಹರಿಶೇಣನ ಕಥಾಕೋಶದಲ್ಲಿನ ಸಂಖ್ಯೆ 126-144 ಇವಕ್ಕೆ ಹೋಲುತ್ತದೆ. ಕೆಲವು ಸಂದರ್ಭಗಳಲ್ಲಿ ‘ವಡ್ಡಾರಾಧನೆ’ಗೂ ಹರಿಶೇಷಣನ ಪದ್ಯಯಗಳಿಗೂ ದಟ್ಟವಾದ ಹೋಲಿಕೆ ಬರುತ್ತದೆ. ಕೃತಿಕಾರ ‘ವಡ್ಡಾರಾಧನೆ’ಯನ್ನು ಅನುವಾದಿಸುವ ಸಂದರ್ಭದಲ್ಲಿ ಮೂಲದಲ್ಲಿರುವ ಪದ್ಯಯ ಕೃತಿಯನ್ನು ಕನ್ನಡದಲ್ಲಿ ಗದ್ಯ ಕೃತಿಯಾಗಿ ಬದಲಾಯಿಸಿಕೊಂಡು ತನ್ನ ಅನುವಾದ ಸ್ವರೂಪವನ್ನು ಬದಲಾಯಿಸಿ ಪ್ರಯೋಗಿಸಿದ್ದಾನೆ. ಹರಿಶೇಣನ ಕಥಾಕೋಶವನ್ನು ಕಥಾನಕದ ಸ್ಥೂಲ ಸಾಮಗ್ರಿಯಲ್ಲಿ, ಅಲ್ಲಲ್ಲಿಯ ಭಾವ ಮತ್ತು ವಾಕ್ಯಗಳಲ್ಲಿ ನಿಕಟವಾಗಿ ಹೋಲುತ್ತದೆ. ಕಥಾವಿಸ್ತಾರಣೆಯಲ್ಲಿ, ವ್ಯತ್ಯಾಸದಲ್ಲಿ ಕೆಲವು ವಿವರಗಳಲ್ಲಿ ಬೇರೆತನವನ್ನು ತೋರಿದ ಶಿವಕೊಟ್ಯಾಚಾರ್ಯರು ಕತೆಗಾರಿಕೆಯ ಕಲೆಯಲ್ಲಿ ನುರಿತವನೆಂದೂ, ಮನುಷ್ಯ ಸ್ವಭಾವದ ಹಾಗೂ ನಡತೆಯ ಸೂಕ್ಮ ಪರಿಚಯವುಳ್ಳವನೆಂದೂ ತಿಳಿಯಬಹುದು. ‘ವಡ್ಡಾರಾಧನೆ’ಯ ಮೂಲ ಸಂಸ್ಕೃತದ ‘ವೃದ್ಧಾರಾಧನೆ’ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ‘ವಡ್ಡಾರಾಧನೆ’ ಕೃತಿಯು ಕನ್ನಡ ಸಾಹಿತ್ಯದಲ್ಲಿ ಅತ್ಯಅಮೂಲ್ಯವಾದ ಕೃತಿಯಾಗಿ ಕಂಡುಬರುತ್ತದೆ. ‘ವಡ್ಡಾರಾಧನೆ’ಯ ಅನುವಾದವನ್ನು ನೇರಾನುವಾದ, ರೂಪಾಂತಾರ, ಭಾವಾನುವಾದ ಮುಂತಾದ ಅನುವಾದ ವಿಧಾನಗಳ ಮೂಲಕ ಕರೆದಿರುವುದು ಪ್ರಾಚೀನ ಕನ್ನಡ ಅನುವಾದ ಸ್ವರೂಪಕ್ಕೆ ಪ್ರಮುಖ ಉದಾಹರಣೆಯಾಗಿದೆ. ಉಪಾಧ್ಯೆ ಅವರು ವಡ್ಡಾರಾಧನೆಯನ್ನು ಕುರಿತು ವಡ್ಡಾರಾಧನೆ ಪ್ರಾಕೃತ, ಸಂಸ್ಕೃತ ಮತ್ತು ಕನ್ನಡದಲ್ಲಿಯೂ ಹಲವು ಅವತರಣಿಕೆಗಳಿದ್ದವು. ಅವುಗಳಲ್ಲಿ ಕೆಲವನ್ನು ಮೂಲ ಪ್ರಾಕೃತ ಗ್ರಂಥದಿಂದ ಎತ್ತಿಕೊಂಡಿರಬಹುದು. ಕೆಲವನ್ನು ಗ್ರಂಥಕಾರನು ತಾನಾಗಿ ಸೇರಿಸಿರಬಹುದು. ಈ ಕೃತಿಯಲ್ಲಿ ‘ಪ್ರವಚನಸಾರ’, ‘ಭಗವತ ಆರಾಧನ’, ‘ರತ್ನಕರಂಡಕ’, ‘ಭರ್ತೃಹರಿ ಶತಕ’ಗಳು ಇತ್ಯಾದಿಯಿಂದ ಎತ್ತಿಕೊಂಡವಾಗಿದೆ. 7ನೇ ಶತಮಾನದ ಜಟಾಸಿಂಹನ ‘ವರಾಂಗ ಚರಿತೆ’ ಹಾಗೂ 9ನೇ ಶತಮಾನದ ಗುಣಭಧ್ರನ ‘ಉತ್ತರ ಪುರಾಣ’ ಇವುಗಳಿಂದ ಆಯ್ದ ಅವತರಿಣಿಕೆಗಳು ‘ವಡ್ಡಾರಾಧನೆ’ ಕೃತಿಯಲ್ಲಿ ಸಿಗುತ್ತವೆಂದು ಹೇಳಿದ್ದಾರೆ. ‘ವಡ್ಡಾರಾಧನೆ’ ಕೃತಿಯು ಕನ್ನಡದಲ್ಲಿ ಸಿಗುವ ಮೊದಲ ಗದ್ಯಗ್ರಂಥ ಹಾಗೂ ಸಣ್ಣಕಥೆಗಳ ಸಂಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಸಿಕ್ಕಿರುವ ಪೂರ್ಣ ಪ್ರಮಾಣದ 2ನೇ ಕೃತಿಯಾಗಿದೆ. ಕವಿರಾಜಮಾರ್ಗ ಕೃತಿಯು ಮೊಟ್ಟ ಮೊದಲ ಲಕ್ಷಣ ಗ್ರಂಥವಾದರೆ, ವಡ್ಡಾರಾಧನೆ ಮೊಟ್ಟ ಮೊದಲ ಗದ್ಯಯ ಗ್ರಂಥ. ಕಾವ್ಯದ ಸ್ಥಾನದಲ್ಲಿ ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯಂ ಕೃತಿಗಳು ಮೊದಲಾಗುತ್ತವೆ.

ಪಂಪನ ಆದಿಕೃತಿಯಾದ ‘ಆದಿಪುರಾಣ’ವನ್ನು ಪಂಪನು ಸಂಸ್ಕೃತದ ಜೀನಸೇನಚಾರ್ಯರ ‘ಪೂರ್ವಪುರಾಣ’ವನ್ನು ಆಧರಿಸಿ ಬರೆದಿದ್ದಾನೆ. ಇದು ಮೊದಲ ತೀರ್ಥಂಕರನಾದ ವೃಷಭದೇವನ ಕಥೆಯನ್ನು ಹೇಳುವ ಜೈನ ಧಾರ್ಮಿಕ ಕಾವ್ಯ. ಲೌಕಿಕ, ಆಗಮಿಕ ಕಾವ್ಯ ಪರಂಪರೆಯನ್ನು ಹುಟ್ಟು ಹಾಕಿದ ಪಂಪ ಇದನ್ನು ಆಗಮಿಕ ಕಾವ್ಯವಾಗಿ ಅನುವಾದ ಮಾಡಿದ್ದಾನೆ. ಮತ ನಿಷ್ಠೆಯಿಂದ ತನ್ನ ಕೈಗಳನ್ನು ತಾನೇ ಕಟ್ಟಿಕೊಂಡು ಮೂಲ ಪಠ್ಯವನ್ನು ಯಥಾವತ್ತಾಗಿ ಅನುಕರಿಸಿದ್ದಾನೆ. ಆದರೆ ತನ್ನ ಅನುವಾದ ಸಂದರ್ಭದಲ್ಲಿ ಕಥನಕ್ರಮ, ಭಾವಸಂಪತ್ತಿ, ಮತೀಯ ತತ್ವಭೋಧನೆ ಎಲ್ಲದರಲ್ಲು ಅನುವಾದಿತ ‘ಆದಿಪುರಾಣ’ವು ‘ಪೂರ್ವಪುರಾಣ’ಕ್ಕೆ ಋಣಿಯಾಗಿದೆ. ಇಷ್ಟು ಪರತಂತ್ರವಾದರೂ ಗ್ರಥನ ಕೌಶಲ್ಯ, ನಿರೂಪಣೆ ಶೈಲಿಯಿಂದ ಅದು ಸ್ವತಂತ್ರ ಕಳೆಯನ್ನು ಪಡೆದು ಕನ್ನಡಾನುವಾದಿತ ‘ಅದಿಪುರಾಣ’ ಕೃತಿಯಾಗಿದೆ. ಈ ಎರಡು ಜೈನಪುರಾಣಗಳಲ್ಲಿಯು ಕಾವ್ಯಸತ್ವವಿದೆ. ಆದರೆ ಪೂರ್ವಪುರಾಣದಲ್ಲಿ ಕಾವ್ಯಕ್ಕಿಂತ ಪುರಾಣ ದೃಷ್ಟಿ ಹೆಚ್ಚಾಗಿ ಕಂಡುಬಂದರೆ, ‘ಆದಿಪುರಾಣ’ದಲ್ಲಿ ಪುರಾಣಕ್ಕಿಂತ ಕಾವ್ಯ ದೃಷ್ಟಿ ಹೆಚ್ಚಾಗಿ ಫಲಿಸಿದಂತಿದೆ. ‘ಪೂರ್ವಪುರಾಣ’ ಸರಳವಾದ ಪದ್ಯಯಕಾವ್ಯ, ಆದಿಪುರಾಣ ಪ್ರೌಢವಾದ ಚಂಪೂಕಾವ.್ಯ ಮೂಲದ ಅತಿವಿಸ್ತಾರ ಪಂಪನಲ್ಲ್ಲಿ ಕಾಣುವುದಿಲ್ಲ ಆತ ಅದನ್ನು ಸಂಗ್ರಹ ದೃಷ್ಟಿಯಲ್ಲಿ ಅನುವಾದಿಸಿದ್ದಾನೆ. ಅನುವಾದಿತ ಆದಿಪುರಾಣದಲ್ಲಿ ಅನೇಕ ಭವ ಇಲ್ಲವೆ ಜನ್ಮಗಳ ಮೂಸೆಯಲ್ಲಿ ಅನುಭವ ಕುದಿಗೊಂಡು ಭೋಗದಿಂದ ತ್ಯಾಗಕ್ಕೆ ತೆರಳಿ ಕೊನೆಯ ಜನ್ಮದಲ್ಲಿ ವೈರಾಗ್ಯ ಪರಿಣತಿಯಿಂದ ತಪೋನಿರತನಾಗಿ ಮುಕ್ತಿಯನ್ನು, ಕೇವಲ ಜ್ಞಾನವನ್ನು ಪಡೆದ ಮೊದಲನೆಯ ತೀರ್ಥಂಕರ ಆದಿದೇವನಾದ ಮನುಜ ಜನ್ಮಯಾತ್ರೆಯ ಪರಮ ಸಿದ್ಧಿ ಕಥೆಯಿದೆ. ಇದರ ಭವ್ಯತೆಯನ್ನು ಸಮ್ಯಕ್ತವನ್ನು ಅರಿತು ಆತ್ಮೀಕರಿಸಿಕೊಂಡು ಕಾಲತ್ರಯವನ್ನು ನಿಲುಕುವ ಕಲ್ಪನೆಯ ಕುಂಚದಿಂದ ಪಂಪನು ಇದನ್ನು ಚಿತ್ರಿಸಿದ್ದಾನೆ. ಹೀಗೆ ಸಂಸ್ಕೃತದಿಂದ ಕನ್ನಡಕ್ಕೆ ಬಂದ ‘ಆದಿಪುರಾಣ’ ಕಾವ್ಯವನ್ನು ಪಂಪ ತನ್ನ ಪ್ರತಿಭೆಯಿಂದ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇವನ ಇನ್ನೊಂದು ಕೃತಿಯಾದ ‘ವಿಕ್ರಮಾರ್ಜುನ ವಿಜಯಂ’ ಕಾವ್ಯವೂ ಲೌಕಿಕ ಕಾವ್ಯವಾಗಿ ರಚನೆಯಾಗಿದೆ. ಇದರ ಮೂಲ ಸಂಸ್ಕೃತದ ವ್ಯಾಸನ ‘ಮಹಾಭಾರತ’. ಈತ ಮಹಾಭಾರತವನ್ನು ಕನ್ನಡಿಸುವ ಸಂದರ್ಭದಲ್ಲಿ ತನ್ನ ಪರಿಸರಕ್ಕೆ ಹೊಂದುವ ಪುಲಿಗೆರೆ ತಿರುಳುಗನ್ನಡವನ್ನು ಕಾವ್ಯದ ಭಾಷೆಯನ್ನಾಗಿ ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನ ಆಶ್ರಯದಾತ ಚಾಲುಕ್ಯ 2ನೇ ಆರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಕಾವ್ಯದ ನಾಯಕನನ್ನಾಗಿ ಮಾಡಿಕೊಂಡು ಪುರಾಣ ಇತಿಹಾಸವನ್ನು ಒಳಗೊಂಡ ಸಮಸ್ತ ಭಾರತವನ್ನು ಚಂಪೂ ಶೈಲಿಯಲ್ಲಿ ಅನುವಾದಿಸಿದ್ದಾನೆ. ‘ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾರತಮನಪೂರ್ವಮಾಗೆ ಸಲೆ ಪೇ¿್ದ ಕವೀಶ್ವರರಿಲ್ಲ’ ಎಂಬ ಪಂಪನ ಮಾತು ಅವನೇ ಮೊದಲು ಸಮಸ್ತ ಭಾರತವನ್ನು ಕನ್ನಡದಲ್ಲಿ ಹೇಳಿದ್ದು ಎಂಬ ಅರ್ಥವನ್ನು ಸೂಚಿಸುತ್ತದೆ. “ವರ್ಣಕಂ ಕತೆಯೊಳೊಡಂಬಡಂಪಡೆಯೆ ಪೇ¿õÉ್ವೂಡೆ ಪಂಪನೆ ಪೇ¿್ಗುಂ” ಎಂಬ ಪಂಡಿತರ ಪ್ರಶಂಸೆಯು ಪಂಪನ ಸಾಹಿತ್ಯ ಪ್ರತಿಭೆಯನ್ನು ಸಾರುತ್ತದೆ. “ವ್ಯಾಸಮುನೀಂದ್ರರುಂದ್ರ ವಚನಾಮೃತ ವಾರ್ಧಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ” ಎಂಬಲ್ಲಿ ಮೂಲ ಕರ್ತೃವಿಗೆ ಸಲ್ಲಿಸಬೇಕಾದ ನೈಜ ನಮ್ರತೆಯ ಗೌರವವಿದೆ. ಪಂಪನು ವ್ಯಾಸಭಾರತವನ್ನು ಅನುವಾದಿಸುವಾಗ ಎಷ್ಟೋ ಭಾಗಗಳನ್ನು ಬಿಟ್ಟಿದ್ದಾನೆ, ಕೆಲವನ್ನು ಕಿರಿದುಗೊಳಿಸಿದ್ದಾನೆ, ಕೆಲವು ಮಾರ್ಪಾಡುಗಳನ್ನು ಕೂಡ ಮಾಡಿಕೊಂಡಿದ್ದಾನೆ. ಈ ಮಾರ್ಪಾಡು, ಬದಲಾವಣೆಗಳಲ್ಲಿ ಪಂಪನ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದ ಅನುವಾದ ಸ್ವರೂಪದ ಕಾಣುತ್ತದೆ. ತೀ.ನಂ.ಶ್ರೀ ಪ್ರಕಾರ “ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸಭಾರತದ ನೆರಳಲ್ಲ. ಅಲ್ಲಿನ ಚಿನ್ನವನ್ನು ಶೋಧಿಸಿ ತಂದು ಹೊಸದಾಗಿ ಎರಕಹೊಯ್ದು ಒಪ್ಪವಿಟ್ಟು ನಿಲ್ಲಿಸಿದ ನೂತನ ಪುತ್ಥಳಿ ಅದು.” ಎಂಬ ಮಾತು ಕನ್ನಡ ಸಾಹಿತ್ಯದಲ್ಲಿ ‘ವಿಕ್ರಮಾರ್ಜುನ ವಿಜಯಂ’ ಕೃತಿಯ ಮಹತ್ವವನ್ನು ಪ್ರತಿಪಾದಿಸುತ್ತದೆ.

ರತ್ನತ್ರಯರಲ್ಲಿ ದ್ವಿತೀಯನಾದ ಪೊನ್ನನಿಂದ(ಕ್ರಿ.ಶ.950) ರಚನೆಯಾದ ‘ಶಾಂತಿಪುರಾಣ’ದ ವಸ್ತು ಸಂಸ್ಕೃತದ ಗುಣಭದ್ರಚಾರ್ಯರ ‘ಉತ್ತರಪುರಾಣ’. ‘ಶಾಂತಿಪುರಾಣ’ವು ಹದಿನಾರನೇ ತೀರ್ಥಂಕಾರನಾದ ಶಾಂತಿನಾಥನ ಚರಿತೆಯನ್ನು ಒಳಗೊಂಡ ಜೈನಪುರಾಣವಾಗಿದೆ. ಅಲ್ಲದೇ ಪೊನ್ನನ ಈ ಕಾವ್ಯದಲ್ಲಿ ಕಾಳಿದಾಸನ ಕೃತಿಯ ಪ್ರಭಾವವೂ ದಟ್ಟವಾಗಿ ಕಾಣುತ್ತದೆ. ಕಾಳಿದಾಸನ ‘ರಘುವಂಶ’ದಲ್ಲಿಯ ಇಂದುಮತಿ ಸ್ವಯಂವರ ವರ್ಣನೆಯ ಹಲವು ಪದ್ಯಯಗಳನ್ನು ಮೂಲದಲ್ಲಿರುವಂತೆಯೇ ತನ್ನ ಕಾವ್ಯದಲ್ಲಿ ಬಳಸಿಕೊಂಡಿದ್ದಾನೆ. ಹಾಗೆ ಕೆಲವೊಂದು ಪ್ರಸಂಗಗಳನ್ನು ಭಾವಾನುವಾದ ಮಾಡಿದ್ದಾನೆ. ಆದ್ದರಿಂದ ‘ಶಾಂತಿ ಪುರಾಣ’ದ ಮೇಲೆ ಕಾಳಿದಾಸನ ಕೃತಿಯ ಪ್ರಭಾವ ಇರುವುದು ಸ್ಪಷ್ಟವಾಗುತ್ತದೆ. ಆದರೆ ಈತನ ಕೃತಿಯನ್ನು ಪೂರ್ಣ ಪ್ರಮಾಣದ ಅನುವಾದವೆಂದು ಕರೆಯಲು ಸಾಧ್ಯವಿಲ್ಲ. ‘ಉತ್ತರಪುರಾಣ’ದ ವಸ್ತುವನ್ನು ಅಯ್ಕೆ ಮಾಡಿಕೊಂಡು ಇತರೆ ಕೃತಿಗಳ ಪ್ರಭಾವಕ್ಕೆ, ಪ್ರೇರಣೆಗೆ ಒಳಪಟ್ಟು ರಚಿಸಿದ್ದನೆಂದು ಒಪ್ಪಿಕೊಳ್ಳಬಹುದು.

ಕ್ರಿ.ಶ. 975ರಲ್ಲಿ ಚಾವುಂಡರಾಯನು ‘ಚಾವುಂಡರಾಯ ಪುರಾಣ’ವೆಂಬ ಗದ್ಯಯ ಕೃತಿಯನ್ನು ರಚಿಸಿದನು. ಇದೊಂದು ಜೈನ ಧರ್ಮದ ತತ್ವ, ಆದರ್ಶಗಳನ್ನು ಸಾರುವ ಕೃತಿಯಾಗಿದೆ. ‘ವಡ್ಡಾರಾಧನೆ’ ಕೃತಿ ಸಿಗುವುದಕ್ಕಿಂತ ಮುಂಚೆ ಇದೆ ಕನ್ನಡದ ಮೊದಲ ಗದ್ಯ ಕೃತಿ ಎಂದು ಕರೆಯಲಾಗುತ್ತಿತ್ತು. ‘ಚಾವುಂಡರಾಯ ಪುರಾಣ’ ಕೃತಿಯ ಮೂಲ ಆಕರ ಸಂಸ್ಕೃತದ ಜೀನಸೇನ-ಗುಣಭದ್ರರ ‘ಮಹಾಪುರಾಣ’. ಮೂಲ ಕೃತಿಯನ್ನು ಸಾಧ್ಯವಾದಷ್ಟು ಸುಲಭವಾಗಿ, ಸಂಕ್ಷಿಪ್ತವಾಗಿ ಗದ್ಯಯರೂಪದಲ್ಲಿ ಅನುವಾದಿಸಿದ್ದಾನೆ. ‘ಮಹಾಪುರಾಣ’ವು ಜೈನ ಸಂಪ್ರದಾಯದಲ್ಲಿ ಪವಿತ್ರವಾದ ಧರ್ಮಗ್ರಂಥಗಳಲ್ಲೊಂದು ಇದನ್ನು ಮೂಲದಲ್ಲಿನ ವಿಸ್ತಾರವಾದ ಕಾವ್ಯಮಯವಾದ ವರ್ಣನೆಗಳನ್ನು ಮೆಚ್ಚಿದರು, ಅವುಗಳನ್ನು ದಾಟಿ ಗದ್ಯಯ ರೂಪದಲ್ಲಿ ಕನ್ನಡಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇಂತಹ ಸಂಯಮ, ಸಂಯೋಜನಶೀಲತೆಗಳಿಂದ ಕಾವ್ಯಮಯವಾದ ಸಂಸ್ಕೃತ ಕೃತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಕೀರ್ತಿ ಚಾವುಂಡರಾಯನಿಗೆ ಸಲ್ಲುತ್ತದೆ.

ಕ್ರಿ.ಶ 990ರಲ್ಲಿ ಬರುವ ಒಂದನೇ ನಾಗವರ್ಮನು ಕನ್ನಡದಲ್ಲಿ ಅನುವಾದಕ್ಕೆ ವಿಶೇಷ ಒತ್ತನ್ನು ನೀಡಿದನು. ಈತನ ಕೃತಿಗಳಾದ ‘ಛಂದೋಬುಧಿ’ ಕಮಲ ಮತ್ತು ಪಿಂಗಲರನ್ನು ಅನುಸರಿಸಿ ಬರೆದ ಕೃತಿಯಾಗಿದೆ. ಇದು ಕನ್ನಡದಲ್ಲಿ ಸಿಗುವ ಮೊದಲ ಛಂದಸ್ಸಿನ ಕೃತಿಯಾಗಿದ್ದು, ಕನ್ನಡದ ಮೊದಲುಗಳ ಸಾಲಿನಲ್ಲಿ ನಿಂತಿದೆ. ಈತನ ಇನ್ನೊಂದು ಕೃತಿ ‘ಕರ್ನಾಟಕ ಕಾದಂಬರಿ’ ಇದು ಸಂಸ್ಕೃತದಲ್ಲಿ ಬಾಣನಿಂದ ರಚನೆಗೊಂಡಿದ್ದ ‘ಕಾದಂಬರಿ’ ಎಂಬ ಗದ್ಯ ಕೃತಿಯ ಕನ್ನಡಾನುವಾದವಾಗಿದೆ. ಈ ಕೃತಿಯನ್ನು ಕುರಿತು ರಂ.ಶ್ರೀ.ಮುಗಳಿ ಅವರು ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿ ಅನುಪಲಬ್ಧವಾದ ಅಸಗನ ‘ಕರ್ನಾಟ ಕುಮಾರಸಂಭವ’ ಕಾವ್ಯವನ್ನು ಬಿಟ್ಟರೆ, ಇದೇ ಒಂದು ಪ್ರಾಚೀನ ಸಂಸ್ಕೃತ ಕಾವ್ಯದ ಪ್ರಥಮ ಕನ್ನಡಾನುವಾದ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂಸ್ಕೃತ ಸಾಹಿತ್ಯದಲ್ಲಿನ ಉತ್ತಮ ಸಾಹಿತ್ಯವನ್ನು ಕನ್ನಡಕ್ಕೆ ತರಬೇಕೆಂದರೆ ಅದನ್ನು ಅನುವಾದದ ಮೂಲಕ ಮಾತ್ರ ಸಾಧ್ಯವೆಂಬುದು ನಾಗವರ್ಮನ ನಿಲುವು ಆಗಿರಬಹುದು ಬೇಕು.  ಆದ್ದರಿಂದ ಇಂತಹ ಉತ್ತಮ ಕಾವ್ಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ಸಂಸ್ಕೃತದಲ್ಲಿ ಗದ್ಯದಲ್ಲಿರುವ ‘ಕಾದಂಬರಿ’ ಕೃತಿಯನ್ನು ಕನ್ನಡಕ್ಕೆ ಚಂಪೂ ಶೈಲಿಯಲ್ಲಿ ಕನ್ನಡಿಸುವುದು ನಾಗವರ್ಮನ ಅನುವಾದದ ನೈಪುಣ್ಯತೆಗೆ, ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಕಾವ್ಯದಲ್ಲಿ ನಾಗವರ್ಮ ಅಷ್ಟಾಗಿ ತನ್ನ ಕಾಲದ ಚಾರಿತ್ರಿಕ ಅಂಶಗಳನ್ನು ಪ್ರಸ್ತಾಪ ಮಾಡಲು ಪ್ರಯತ್ನಿಸಿಲ್ಲ, ಹಾಗಾಗಿ ಮೂಲವನ್ನು ಹೆಚ್ಚಾಗಿ ಬದಲಾವಣೆ ಮಾಡಲು ಪ್ರಯತ್ನಿಸಿಲ್ಲ. ಇದ್ದ ಮೂಲ ಕತೆಯನ್ನೇ ಹೇಳುವತ್ತ ಸಾಗಿದ್ದಾನೆ. ಬಾಣನ ಕಾದಂಬರಿ ಸಂಸ್ಕೃತ ಗದ್ಯವಾಙ್ಞಯದಲ್ಲಿ ಬೆರಗುಗೊಳಿಸುವ ಶಿಖರ. ಅದರಲ್ಲಿ ಭಾರತೀಯ ಸಂಸ್ಕೃತ ನಾಗರೀಕತೆಗಳ ಹಿನ್ನೆಲೆಯಲ್ಲಿ ಮಾಡಿದ ಉದಾತ್ತ ಶೃಂಗಾರದ ಉನ್ನತ ಪ್ರೇಮದ ಸ್ವಪ್ನದ ಚಿತ್ರವಿದೆ, ಜನ್ಮಾಂತರಗಳ ಜಟಿಲವಾದ ಕಥಾನಕ, ಶಬ್ಧಾರ್ಥ ಚಮತ್ಕøತಿಗಳಿಂದ ಇಡಿ ಕಿರಿದ ವರ್ಣನೆ, ವಿವಿಧ ವಿಲಾಸದಿಂದ ಮುಗಿಯದೆ ಮುಂಬರಿಯುವ ಗದ್ಯಶೈಲಿ ಇರುವ ಕಾದಂಬರಿಯನ್ನು ಸಹನೆಯಿಂದ ಓದಿ ತಿಳಿಯುವುದೇ ಕಷ್ಠ. ಅದರ ಅನುವಾದಕನಿಗೆ ಇದೊಂದು ಸಾಹಸ. ಇಂತಹ ಸಾಹಸಕ್ಕೆ ವಿಶೇಷ ನೈಪುಣ್ಯತೆ, ಪಾಂಡಿತ್ಯ ಅಗತ್ಯ. ಈ ಎರಡನ್ನು ಬಹುಮಟ್ಟಿಗೆ ನಾಗವರ್ಮ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ಸಂಪೂರ್ಣ ಗದ್ಯದಲ್ಲಿದ್ದ ಕೃತಿಯನ್ನು ತನ್ನ ಕಾಲಘಟ್ಟದಲ್ಲಿ ಪ್ರಚಲಿತವಿದ್ದ ಗದ್ಯಪದ್ಯ ಸಂಮಿಶ್ರಿತವಾದ ಚಂಪು ರೂಪದಲ್ಲಿ ಅನುವಾದಿಸಿದ್ದಾನೆ. ಸಂಸ್ಕೃತದಲ್ಲಿನ ವಸ್ತುವನ್ನು ಸ್ವೀಕರಿಸಿ ಮೂಲದ ಕಥನಕ್ಕೆ, ಪಾತ್ರಗಳಿಗೆ, ವರ್ಣನೆಗಳ ಸ್ವಾರಸ್ಯಕ್ಕೆ ಕುಂದುಬಾರದಂತೆ ಮೂಲವನ್ನು ಮನಸ್ಸಿನಲ್ಲಿ ಜಾಗೃತವಾಗಿಟ್ಟುಕೊಂಡು ತಾನೇ ರಚಿಸಿದ ಸ್ವತಂತ್ರ ಕೃತಿಯಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ನಾಗವರ್ಮ ಒಬ್ಬ ಉತ್ತಮ ಅನುವಾದಕನಾಗಿ ಕನ್ನಡ ಸಾಹಿತ್ಯದಲ್ಲಿ ಕಾಣಿಸಲು ಅವನ ‘ಕರ್ನಾಟಕ ಕಾದಂಬರಿ’ಯೇ ಸ್ಪಷ್ಟ ನಿದರ್ಶನವಾಗಿದೆ.

ರತ್ನತ್ರಯರಲ್ಲಿ ಮೂರನೆಯವನಾದ ರನ್ನನ(ಕ್ರಿ.ಶ. 990) ‘ಗದಾಯುದ್ಧ’ ಕಾವ್ಯದ ಮೇಲೆ ಅನುವಾದದ ಪ್ರಭಾವ ಇರುವುದು ಸ್ಪಷ್ಟ. ಪಂಪಭಾರತದ 11, 12ನೇ ಆಶ್ವಾಸ, ಸಂಸ್ಕೃತದ ಭಟ್ಟನಾರಾಯಣನ ‘ವೇಣಿಸಂಹಾರ’ ಹಾಗೂ ಭಾಸನ ‘ಊರುಭಂಗ’ ಈ ಮೂರು ಕೃತಿಗಳ ಪ್ರಭಾವ ಗದಾಯುದ್ಧ ಕಾವ್ಯದ ಮೇಲೆ ದಟ್ಟವಾಗಿದೆ. ಪಂಪನು ಹಾಕಿಕೊಟ್ಟ ಚಂಪೂ, ಲೌಕಿಕ ಆಗಮಿಕ ಹಾಗೂ ವಸ್ತುಕ, ವರ್ಣಕ ಪರಿಕಲ್ಪನೆಯಲ್ಲಿಯೇ ಮುಂದುವರೆದಿದ್ದಾನೆ. ‘ಗದಾಯುದ್ಧ’ವನ್ನು ಸಿಂಹವಲೋಕನ ಕ್ರಮದಲ್ಲಿ ರಚನೆ ಮಾಡಿರುವುದು ಕನ್ನಡ ಸಾಹಿತ್ಯದಲ್ಲಿ ಒಂದು ಅದ್ಬುತವಾದ ಪ್ರಯೋಗ. ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕಾವ್ಯದಲ್ಲಿ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿದ ರೀತಿಯಲ್ಲಿಯೇ, ರನ್ನನು ತನ್ನ ಗದಾಯುದ್ಧ ಕಾವ್ಯದಲ್ಲಿ ಆಶ್ರಯದಾತನನ್ನು ಭೀಮನಿಗೆ ಸಮೀಕರಿಸಿ ಕಾವ್ಯವನ್ನು ರಚಿಸಿದ್ದಾನೆ. ಹೀಗೆ ರನ್ನನು ತನ್ನ ಕಾವ್ಯಕ್ಕೆ ತನ್ನ ಪೂರ್ವ ಕವಿಗಳ ಸಾಹಿತ್ಯದಿಂದ ಪ್ರಭಾವಿತನಾಗಿದ್ದರು ಕೂಡ ತನ್ನ ಕಾವ್ಯ ನಿರೂಪಣ ಶೈಲಿ, ಪ್ರತಿಭೆಯಿಂದ ಒಂದು ಅದ್ಭುತ ಕಾವ್ಯವನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ.

ದುರ್ಗಸಿಂಹ(ಕ್ರಿ.ಶ. 1030) ಜನಸಾಮಾನ್ಯರಲ್ಲಿ ತುಂಬಾ ಪ್ರಿಯವಾಗಿರುವ ‘ಪಂಚತಂತ್ರ’ ಕೃತಿಯನ್ನು ರಚಿಸಿದ್ದಾನೆ. ಗುಣಾಢ್ಯನು ಪೈಶಾಚೀ ಭಾಷೆಯಲ್ಲಿ ‘ಬೃಹತ್ಕಥೆ’ಗಳನ್ನು ಹೇಳಿದ್ದನು. ಆ ಕಥೆಗಳಲ್ಲಿನ ಪಂಚರತ್ನಗಳಾದ ಐದು ಕಥೆಗಳನ್ನು ಆಯ್ದುಕೊಂಡು ವಸುಭಾಗಭಟ್ಟನು ‘ಪಂಚತಂತ್ರ’ ವೆಂದು ಹೆಸರಿಟ್ಟು ಹೇಳಿದನು. ಈ ವಸುಭಾಗಭಟ್ಟನ ಕೃತಿಯನ್ನು ಕನ್ನಡದಲ್ಲಿ ‘ಪೊಸತಾಗಿರೆ ವಿರಚಿಸುವೆಂ’ ಎಂದು ದುರ್ಗಸಿಂಹ ಹೇಳಿದ್ದಾನೆ. ಸಂಸ್ಕೃತದಲ್ಲಿ ವಿಷ್ಣುಶರ್ಮನ ‘ಪಂಚತಂತ್ರ’ವೊಂದು ಜನಪ್ರಿಯವಾಗಿದೆ. ವಸುಭಾಗಭಟ್ಟ ಪರಂಪರೆಯ ಪಂಚತಂತ್ರಗಳು ಮೂರು ಇದ್ದು ಅವುಗಳಲ್ಲಿ ಎರಡು ಪದ್ಯದಲ್ಲಿಯೂ, ಒಂದು ಗದ್ಯದಲ್ಲಿ ಇದೆ. ದುರ್ಗಸಿಂಹನದು ಮಾತ್ರ ಗದ್ಯಪದ್ಯಯ ಮಿಶ್ರಿತವಾಗಿದ್ದು ಪ್ರೌಢ ಚಂಪುವಿಗೆ ಹತ್ತಿರವಾಗಿದ್ದು, ಗದ್ಯದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಕೃತಿ ಸರಳತೆಗಳಿಂದ ಕೂಡಿದೆ. ವಿಷ್ಣುಶರ್ಮನ ಪಂಚತಂತ್ರವು ಉಪಲಬ್ಧವಿದೆ, ವಸುಭಾಗಭಟ್ಟನದು ಉಪಲಬ್ಧವಿಲ್ಲ. ದುರ್ಗಸಿಂಹನು ವಸುಭಾಗಭಟ್ಟನ ಪಂಚತಂತ್ರವನ್ನು ಅನುವಾದಿಸಿರುವುದಾಗಿ ಹೇಳಿಕೊಂಡಿದ್ದಾನೆ. ವಿಷ್ಣುಶರ್ಮನ ಪಂಚತಂತ್ರದಲ್ಲಿ ಕಾಣದ ಕೆಲವು ಕಥೆಗಳು ದುರ್ಗಸಿಂಹನಲ್ಲಿವೆ. ಇವು ವಸುಭಾಗಭಟ್ಟನ ಕೃತಿಯಿಂದ ಎತ್ತಿಕೊಂಡಿರಬೇಕು. ಎರಡನೆಯ ಮಹತ್ವದ ಸಂಗತಿಯೆಂದರೆ ವಿಷ್ಣುಶರ್ಮನಲ್ಲಿ ಕಾಣದ ಜೈನಮತ ತತ್ವಗಳ ಪರಿಭಾಷಿಕ ಪದಗಳು ದುರ್ಗಸಿಂಹನಲ್ಲಿವೆ. ಅವನ ಅನುವಾದಕ್ಕೆ ವಸುಭಾಗಭಟ್ಟನ ಪಂಚತಂತ್ರವೊಂದೇ ಸಿಕ್ಕಿರಬಹುದು, ಏಕೆಂದರೆ ವಿಷ್ಣುಶರ್ಮನ ಹೆಸರನ್ನು ಅವನು ಉಲ್ಲೇಖ ಮಾಡಿಯೇ ಇಲ್ಲ. ಆದ್ದರಿಂದ ದುರ್ಗಸಿಂಹನ ಕೃತಿಗೆ ವಸುಭಾಗಭಟ್ಟನ ಪಂಚತಂತ್ರವೇ ಮೂಲ ಆಕರ ಎಂದು ಅಭಿಪ್ರಾಯಿಸಬಹುದು.

ದುರ್ಗಸಿಂಹನ ಕಾಲಘಟ್ಟದಲ್ಲಿ ಜೀವಿಸಿದ್ದ ಚಂದ್ರರಾಜ(ಕ್ರಿ.ಶ.1040) ಕನ್ನಡದಲ್ಲಿ ‘ಮದನತಿಲಕ’ವೆಂಬ ಮೊಟ್ಟಮೊದಲ ಕಾಮಶಾಸ್ತ್ರ ಗ್ರಂಥವನ್ನು ಬರೆದನು. ಈ ಕೃತಿಯನ್ನು ಕಾಮಶಾಸ್ತ್ರಕ್ಕೆ ಸಂಬಂಧಿಸಿದ ವಾತ್ಸಾಯನ, ವೈಶಿಕ, ಚಾರರಾಯಣ, ಸ್ಪರ್ಣನಾಭ ಮುಂತಾದವರ ಕೃತಿಗಳನ್ನು ಆಕರವಾಗಿಟ್ಟುಕೊಂಡು ಸಂಕಲನ ರೂಪದಲ್ಲಿ ಅನುವಾದಿಸಿದಂತಿದೆ. ಅದ್ದರಿಂದ “ಇದು ಅನುವಾದವೆನ್ನುವುದಕ್ಕಿಂತ ಸಂಕಲನ ಗ್ರಂಥವೆನ್ನಬಹುದು”(ರಂ.ಶ್ರೀ.ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು.ಸಂ.117) ಎಂಬ ರಂ.ಶ್ರೀ.ಮುಗಳಿ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದಾಗಿದೆ.

ಅನುವಾದ ಕ್ಷೇತ್ರದಲ್ಲಿ ಆಂತರಿಕ ಅನುವಾದವೆಂಬ ಅನುವಾದ ವಿಧಾನವನ್ನು ಗುರುತಿಸಿಕೊಳ್ಳಲಾಗಿದೆ. ಇದು ಒಂದೇ ಭಾಷೆಯ ಸಾಹಿತ್ಯದಲ್ಲಿ ಒಂದು ಕಾಲಘಟ್ಟದಲ್ಲಿ ರಚನೆಯಾದ ಕೃತಿಯನ್ನು ಇನ್ನೊಂದು ಕಾಲಘಟ್ಟದಲ್ಲಿ ಆ ಸಮಾಜಕ್ಕೆ ಅರ್ಥವಾಗುವ, ಸಂದರ್ಭಕ್ಕೆ ಹೊಂದುವ ರೀತಿ ಅನುವಾದಿಸುವುದು ಇದರ ಉದ್ದೇಶವಾಗಿದೆ. ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈ ಆಂತರಿಕ ಅನುವಾದದ ನೆರಳನ್ನು ಗುರುತಿಸಬಹುದು. ಉದಾಹರಣೆಯಾಗಿ ಹನ್ನೊಂದನೆ ಶತಮಾನದಲ್ಲಿ ಕವಿ ಶಾಂತಿನಾಥನ(ಕ್ರಿ.ಶ.1070) ‘ಸುಕುಮಾರಚರಿತೆ’ ಎಂಬ ಕೃತಿ. ಈ ಕೃತಿಯನ್ನು ಜೈನಕಥಾಪರಂಪರೆಯಲ್ಲಿದ್ದ ಸುಕುಮಾರನ ಚರಿತ್ರೆ ಹಾಗೂ ವಡ್ಡಾರಾಧನೆಯ ‘ಸುಕುಮಾರ ಸ್ವಾಮಿಯ ಕಥೆ’ಯನ್ನು ಆಕರವಾಗಿಟ್ಟುಕೊಂಡು ರಚಿಸಿದ್ದು, ಇದರ ಮೇಲೆ ವಡ್ಡಾರಾಧನೆಯ ದಟ್ಟ ಪ್ರಭಾವವಿದೆ.

ನಾಗಚಂದ್ರ ಕ್ರಿ.ಶ.1100ರಲ್ಲಿ ಜೀವಿಸಿದ್ದ ಕವಿ. ಇವನು ಜೈನಮತದಲ್ಲಿ ನಿಷ್ಠೆಯುಳ್ಳವನಾಗಿದ್ದನು. ‘ಮಲ್ಲಿನಾಥಪುರಾಣ’, ‘ರಾಮಚಂದ್ರಚರಿತಪುರಾಣ’ ಅಥವಾ ‘ಪಂಪರಾಮಾಯಣ’ ಎಂಬ ಎರಡು ಕೃತಿಗಳನ್ನು ರಚಿಸಿದನು. ಮಲ್ಲಿನಾಥಪುರಾಣ 19ನೇ ತೀರ್ಥಕರನಾದ ‘ಮಲ್ಲಿನಾಥನ ಚರಿತೆ’ಯನ್ನು ಒಳಗೊಂಡಿದೆ. ಈತನ ಇನ್ನೊಂದು ಕೃತಿಯಾದ ‘ರಾಮಚಂದ್ರಚರಿತ ಪುರಾಣ’ ಅಥವಾ ‘ಪಂಪರಾಮಾಯಣ’ ಕೃತಿಯನ್ನು ಪ್ರಾಕೃತದ ವಿಮಲಸೂರಿಯ ‘ಪಉಮಚರಿಉ’ ಹಾಗೂ ಸಂಸ್ಕೃತದ ರವಿಷೇಣ ‘ಪದ್ಮಪುರಾಣ’ ಕೃತಿಯನ್ನು ಆಕರವಾಗಿಸಿಕೊಂಡು ಕನ್ನಡದಲ್ಲಿ ರಚನೆಯಾಗಿದೆ. ಇದು ಕನ್ನಡದ ಉಪಲಬ್ಧವಾದ ಮೊದಲ ಜೈನ ರಾಮಾಯಣವಾಗಿದೆ.

ಹನ್ನೆರಡನೆ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿ ಸಮಾಜದಲ್ಲಿ ಸಮಾನತೆಯನ್ನು ಸಾರಿದ ವಚನ ಚಳುವಳಿಯು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಕಾಲಘಟ್ಟದಲ್ಲಿ ವಚನಕಾರರು ತಮ್ಮ ವಿಚಾರಗಳನ್ನು ಅಭಿವ್ಯಕ್ತಿಸಲು ಸೃಷ್ಟಿಸಿಕೊಂಡ ವಚನ ಪ್ರಕಾರದಲ್ಲಿ ಕೆಲವು ವಚನಗಳು ವೇದ, ಉಪನಿಷತ್‍ಗಳ ಸಾರವನ್ನು ಹೋಲುವುದನ್ನು ಗುರುತಿಸಬಹುದಾಗಿದೆ. ವಚನ ಚಳುವಳಿ ನಂತರ ಕ್ರಿ.ಶ. 1200ರಲ್ಲಿ ಬರುವ ಹರಿಹರನು(ಕ್ರಿ.ಶ.1200) ದೇಸಿ ಛಂದಸ್ಸುಗಳಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಿ ದೇಸಿಯತೆಗೆ ಬುನಾದಿಯನ್ನು ಹಾಕಿದ. ತನ್ನ ಸಾಹಿತ್ಯದ ಅಭಿವ್ಯಕ್ತಿ ಮಾಧ್ಯಮವಾಗಿ ದೇಸಿ ಛಂದಸ್ಸದ ರಗಳೆಯನ್ನು ಬಳಸಿದ. ಹರಿಹರ ರಗಳೆ ಕವಿಯಾದಂತೆ, ಯಶಸ್ವಿ ಚಂಪು ಕವಿಯು ಕೂಡ ಹೌದು. ಸಂಸ್ಕೃತದ ಕಾಳಿದಾಸನ ‘ಕುಮಾರಸಂಭವ’ ಕಾವ್ಯವನ್ನು ಕನ್ನಡದಲ್ಲಿ ‘ಗಿರಿಜಾಕಲ್ಯಾಣ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದನು. “ಇದೊಂದು ವೈಶಿಷ್ಟ್ಯಯುತವಾದ ಕೃತಿ, ಕನ್ನಡ ಸಾಹಿತ್ಯಕ್ಕೆ ಮೊದಲನೆಯಾದಾದ ಹರಿಹರಮಾರ್ಗದ ಚಂಪೂಗ್ರಂಥ. ಶೈವಪುರಾಣ ಮತ್ತು ಸಂಸ್ಕೃತ ಕಾವ್ಯಗಳಲ್ಲಿ ವರ್ಣಿತವಾದ ಶಿವಪಾರ್ವತಿಯರ ಮದುವೆ ಮತ್ತು ಅದರ ಹಿನ್ನೆಲೆ ಇದು ಇದರ ವಿಷಯ. ಇದರಲ್ಲಿ ಪಾರ್ವತಿಯ ಜನನದಿಂದ ವಿವಾಹದವರೆಗೆ ನಡೆದಿರಬಹುದಾದ ಸಂಗತಿಗಳನ್ನು ನಿರೂಪಿಸುತ್ತ ಅವಳ ಪಾತ್ರವನ್ನು ತಾನು ಕಂಡಂತೆ ಬಿಡಿಬಿಡಿಸಿ ಚಿತ್ರಿಸುವುದರಲ್ಲಿ ಹರಿಹರ ತೊಡಗಿದ್ದಾನೆ. ಕಥಾನಾಯಕೆಯಾದ ಗಿರಿಜೆಯ ಮೇಲೆ ಅವನ ಲಕ್ಷ್ಯವು ನೆಟ್ಟ ಕಾರಣ ‘ಗಿರಿಜಾಕಲ್ಯಾಣ’ವೆಂದು ಹೆಸರು ಇದಕ್ಕೆ ಸಾರ್ಥಕವಾಯಿತು”. (ರಂ.ಶ್ರೀ.ಮುಗಳಿ, ಕನ್ನಡ ಸಾಹಿತ್ಯಚರಿತ್ರೆ, ಪು-97). ಈತನ ಇನ್ನೊಂದು ಪ್ರಮುಖವಾದ ಕೃತಿಗುಚ್ಚ ‘ಶಿವಗಣದ ರಗಳೆಗಳು’. ಇದು ತಮಿಳುನಾಡಿನಲ್ಲಿ ಹೆಸರಾದ 63 ಪುರಾತನರ ಚರಿತ್ರೆಯಿಂದ ಪ್ರಭಾವಿತಗೊಂಡು ರಚನೆಯಾದ ಕೃತಿಯಾಗಿದೆ. ಇದರಲ್ಲಿ 12ನೇ ಶತಮಾನದ ವಚನಕಾರರ ಜೀವನ ಚರಿತ್ರೆ, ಪವಾಡಗಳಿವೆ. ಶೈವ ಧರ್ಮದ ಉನ್ನತೀಕರಣಕ್ಕಾಗಿ ಹರಿಹರ ಜನಸಾಮಾನ್ಯರಿಗೆ ಹತ್ತಿರವಾದ ಅವರಿಗೆ ಸರಳವಾಗಿ ಅರ್ಥವಾಗುವ ರಗಳೆ ಮಾರ್ಗವನ್ನು ಅನುಸರಿಸಿ ಶೈವ ತತ್ವಗಳನ್ನು ತನ್ನ ಕೃತಿಗಳ ಮೂಲಕ ಪ್ರಚುರ ಪಡಿಸಿದ. ಹರಿಹರನ ಶೈವಧರ್ಮದ ಮಾರ್ಗದಲ್ಲಿ ಮುಂದುವರೆದ ಆತನÀ ಅಳಿಯ ರಾಘವಾಂಕ(ಕ್ರಿ.ಶ.1225) ತನ್ನ ಸಾಹಿತ್ಯ ಅಭಿವ್ಯಕ್ತಿಯಾಗಿ ‘ಷಟ್ಪದಿ’ ಮಾರ್ಗವನ್ನು ಅನುಸರಿಸಿ ‘ಷಟ್ಪದಿಯ ಬ್ರಹ್ಮ’ನಾದ. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’(ವಾರ್ಧಕ ಷಟ್ಪದಿ)ದ ಮೂಲಕಥೆ ತೀರ ಹಳೆಯದು; ವೇದ, ಪುರಾಣ, ಕಾವ್ಯಗಳಲ್ಲಿ ಬೇರೆ ಬೇರೆ ರೂಪದಲ್ಲಿ ಬಂದಿದ್ದನ್ನು ಈತ ಒಟ್ಟಾಗಿ ಕಾವ್ಯವಾಗಿ ಚಿತ್ರಿಸಿದ್ದಾನೆ.

            ನೇಮಿಚಂದ್ರ(ಕ್ರಿ.ಶ.1200) ಕವಿ ರಚಿಸಿರುವ ‘ಲೀಲಾವತೀ ಪ್ರಬಂಧ’ ಕಾವ್ಯವು ಶೃಂಗಾರ ರಸಪ್ರಧಾನವಾದ ಕಾವ್ಯ. ಇದರಲ್ಲಿ ಕನಸ್ಸಿನಲ್ಲಿ ಒಬ್ಬರೊಬ್ಬರನ್ನು ಕಂಡು ಒಲಿದ ನಲ್ಲನಲ್ಲೆಯರು ಕೂಡಿ ಅಗಲಿ ಮತ್ತೆ ಕೂಡಿದ್ದೇ ಇಲ್ಲಿಯ ಪ್ರಣಯಕಥೆ. ಸಂಸ್ಕೃತದ ಸುಬಂಧುವಿನ ‘ವಾಸವದತ್ತೆ’ ಎಂಬ ಗದ್ಯ ಕಾವ್ಯದಲ್ಲಿ ಈ ಕಥಾ ಪರಂಪರೆ ರೂಪತಾಳಿತು. ಅದರಿಂದ ಲೀಲಾವತೀ ಪ್ರಬಂಧಕ್ಕೆ ಸ್ಫೂರ್ತಿ ಸಿಕ್ಕಿದೆ. ರುದ್ರಭಟ್ಟನು ಬ್ರಾಹ್ಮಣ ಕವಿಯಾಗಿದ್ದು ಸಂಸ್ಕೃತದ ‘ವಿಷ್ಣುಪುರಾಣ’ದ ಕಥೆಯನ್ನು ಕನ್ನಡಕ್ಕೆ ‘ಜಗನ್ನಾಥ ವಿಜಯ’ ಎಂಬ ಹೆಸರಿನಲ್ಲಿ ಅನುವಾದಿಸಿದನು. ಇದು ಕನ್ನಡದಲ್ಲಿ ರಚನೆಯಾದ ಮೊದಲ ವೈದಿಕ ಪುರಾಣ ಕೃತಿ ಎಂಬ ಹೆಗ್ಗಾಳಿಕೆಗೆ ಪಾತ್ರವಾಗಿರುವುದು ಕೃತಿಯ ಪ್ರಾಮುಖ್ಯತೆ ತಿಳಿಸುತ್ತದೆ.

            ಕವಿಚಕ್ರವರ್ತಿಗಳಲ್ಲಿ ಒಬ್ಬನಾದ ಜನ್ನ(ಕ್ರಿ.ಶ.1225) 13ನೇ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ. ಈತನ ಪ್ರಮುಖ ಕೃತಿಗಳು ‘ಯಶೋಧರಚರಿತೆ’ ಮತ್ತು ‘ಅನಂತನಾಥಪುರಾಣ’. ವಾದಿರಾಜನಿಂದ ಸಂಸ್ಕೃತದಲ್ಲಿ ರಚನೆಯಾಗಿದ್ದ ‘ಯಶೋಧರಚರಿತೆ’ಯನ್ನು ಆಕರವಾಗಿ ಮಾಡಿಕೊಂಡು ಕನ್ನಡದಲ್ಲಿ ‘ಯಶೋಧರಚರಿತೆ’ ಎಂಬ ಹೆಸರಿನಲ್ಲಿಯೇ ರಚಿಸಿದ. ಇದು ಸು-310 ಕಂದ ಪದ್ಯಗಳ ಸಣ್ಣಗಾತ್ರದ ಕಾವ್ಯವಾಗಿದೆ. ಸಮಕಾಲೀನ ಸಂದರ್ಭದಲ್ಲಿಯೂ ಹೆಚ್ಚಿನ ಚರ್ಚೆ, ವಿಮರ್ಶೆಗೆ ಒಳಪಡುತ್ತಿರುವ ಕೃತಿಗಳ ಸಾಲಿನಲ್ಲಿ ‘ಯಶೋಧರ ಚರಿತೆ’ ಮೊದಲ ಸಾಲಿನಲ್ಲಿದೆ ಎಂದರೆ ತಪ್ಪಾಗಲಾರದು. ಇದರ ವಸ್ತು ಸಮಕಾಲೀನತೆಗೆ ತುಂಬ ಹತ್ತಿರವಾಗಿರುವುದು ಇದಕ್ಕೆ ಕಾರಣ. ‘ಅನಂತನಾಥಪುರಾಣ’ವನ್ನು “ಸಂಸ್ಕೃತದ ಉತ್ತರ ಪುರಾಣ ಕನ್ನಡದ ಚಾವುಂಡರಾಯಪುರಾಣದ ತೀರ ಸ್ವಲ್ಪವಾದ ಆಕರಗಳಿಂದ ಸ್ಪೂರ್ತಿಹೊಂದಿ ವಿಸ್ತಾರವಾದ ಪುರಾಣವನ್ನು ಜನ್ನ ರಚಿಸಿದ್ದಾನೆ”(ರಂ.ಶ್ರೀ.ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು.ಸಂ.188). ಇದು ಹದಿನಾಲ್ಕನೇ ತೀರ್ಥಂಕರನಾದ ಅನಂತನಾಥನ ಕತೆಯನ್ನು ಹದಿನಾಲ್ಕು ಆಶ್ವಾಸಗಳಲ್ಲಿ ನಿರೂಪಿಸುವ ಚಂಪೂ ಕಾವ್ಯವಾಗಿದೆ.

            ಚೌಂಡರಸನು(ಕ್ರಿ.ಶ.1300) ಸಂಸ್ಕೃತದಲ್ಲಿ ದಂಡಿಯಿಂದ ಗದ್ಯದಲ್ಲಿ ರಚನೆಗೊಂಡಿದ್ದ ‘ದಶಕುಮಾರಚರಿತೆ’ ಎಂಬ ಕೃತಿಯನ್ನು ಚಂಪುವಿನಲ್ಲಿ ‘ಅಭಿನವದಶಕುಮಾರಚರಿತೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಪ್ರೌಢ ಮಾದರಿಯಲ್ಲಿ ಬರೆದಿದ್ದರು ಇದು ಸರಳಾನುವಾದವಾಗಿದೆ. ಈತನ ಇನ್ನೊಂದು ಕೃತಿ ‘ನಳಚರಿತ್ರೆ’ ಇದು ಸಾಂಪ್ರದಾಯಿಕ ಪ್ರೌಢಸರಣಿಯಲ್ಲಿ ಹೇಳಿದ ನಳದಮಯಂತಿ ಕಥೆಯನ್ನು ಒಳಗೊಂಡಿದೆ.

            ಭೀಮಕವಿ ಹದಿನಾಲ್ಕನೇ ಶತಮಾನದ ಉತ್ತರಾರ್ಧ ಕವಿಯಾಗಿದ್ದಾನೆ. ಈತನ ‘ಬಸವಪುರಾಣ’ ಕೃತಿಯು ತೆಲುಗಿನಲ್ಲಿ ರಚಿತವಾಗಿದ್ದ, ಪಾಲ್ಕುರಿಕೆ ಸೋಮನಾಥನ ‘ಬಸವಪುರಾಣ’ದ ಕನ್ನಡಾನುವಾದವಾಗಿದೆ.

            ಕುಮಾರವ್ಯಾಸನ ಹೆಸರು ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯಾದ ಹೆಸರು. ಈತ ರಚಿಸಿದ ‘ಕರ್ಣಾಟ ಭಾರತ ಕಥಾಮಂಜರಿ’ ಕಾವ್ಯವು ಜನಮನದಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದೆ. ಈತನ ಕಾವ್ಯವು ಕುಮಾರವ್ಯಾಸ ಭಾರತವೆಂದು, ಭಾಷೆಯ ದೃಷ್ಟಿಯಿಂದ ‘ಗದುಗಿನ ಭಾರತ’ವೆಂದು ಜನಪ್ರಿಯವಾಗಿದೆ. ಈ ಕೃತಿಯ ಮೊದಲ ಹತ್ತು ಪರ್ವವನ್ನು ಮಾತ್ರ ಕುಮಾರವ್ಯಾಸನಿಂದ ರಚನೆಯಾಗಿವೆ. ಉಳಿದ ಮುಂದಿನ ಕಾವ್ಯವನ್ನು ತಿಮ್ಮಣ್ಣ ಕವಿಯು ‘ಕೃಷ್ಣರಾಜಭಾರತ’ವೆಂಬ ಹೆಸರಿನಲ್ಲಿ ಪೂರ್ಣಗೊಳಿಸಿದ್ದಾನೆ. ಕುಮಾರವ್ಯಾಸ ಭಾರತಕ್ಕೆ ಮೂಲ ಆಕರ ವ್ಯಾಸನ ಸಂಸ್ಕೃತದ ‘ಮಹಾಭಾರತ’. ಆದರೇ ಕುಮಾರವ್ಯಾಸನು ತನ್ನ ಕಾವ್ಯ ರಚಿಸುವ ಪೂರ್ವದಲ್ಲಿ ಸಂಸ್ಕೃತದ ಮಹಾಭಾರತವನ್ನು ಒಳಗೊಂಡಂತೆ ಅವನ ಕಾಲಘಟ್ಟದವರೆಗೂ ರಚನೆಯಾಗಿದ್ದ ಎಲ್ಲ ಮಹಾಭಾರತಗಳನ್ನು ಓದಿಕೊಂಡಂತೆ ಇದೆ. ಆದ್ದರಿಂದ ಅವನು ತನ್ನ ಭಾರತವನ್ನು ಅಷ್ಟೊಂದು ಅದ್ಬುತವಾಗಿ ಕಟ್ಟಿಕೊಟ್ಟಿದ್ದಾನೆ. ಕುಮಾರವ್ಯಾಸನು ಕನ್ನಡದಲ್ಲಿ ಭಾರತವನ್ನು ಮರುಸೃಷ್ಟಿಸುವಾಗ ಅನೇಕ ಮಾರ್ಪಡುಗಳನ್ನು ಮಾಡಿಕೊಂಡಿದ್ದಾನೆ. ಆತ ಕೃಷ್ಣನ ಆರಾಧ್ಯದೈವ, ಪರಮಭಕ್ತ. ಆದ್ದರಿಂದ ತನ್ನ ಕೃತಿಗೆ ಕೃಷ್ಣನನ್ನು ನಾಯಕನಾಗಿ ಮಾಡಿಕೊಂಡು ಭಾಮಿನೀ ಷಟ್ಪದಿಯಲ್ಲಿ ಕೃತಿ ಮಾಡಿದ್ದಾನೆ.

            ಕನ್ನಡದಲ್ಲಿ ಪಂಪ, ರನ್ನ, ಕುಮಾರವ್ಯಾಸಾದಿಗಳಿಂದ ಇಡಿದು ಅನೇಕರು ಮಹಾಭಾರತದ ವಸ್ತುವನ್ನು ಕೇಂದ್ರವಾಗಿಸಿಕೊಂಡು ಕೃತಿಗಳ ರಚಿಸಿದರು. ಆದರೆ ರಾಮಾಯಾಣದ ವಸ್ತುವನ್ನಿಟ್ಟುಕೊಂಡು ರಚನೆ ಮಾಡಿದ್ದು ವಿರಳ. ಅನುಪಲಬ್ದವಾದ ಪೊನ್ನನ ‘ಭುವನೈಕ ರಾಮಾಭ್ಯುದಯ’ ಕೃತಿಯನ್ನು ಬಿಟ್ಟರೆ ರಾಮಾಯಾಣದ ವಸ್ತುವನ್ನು ಅದರಲ್ಲೂ ಎಲ್ಲಾ ಕಾಂಡಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ತೊರವೆ ನರಹರಿಗೆ ಸಲ್ಲುತ್ತದೆ. ಈತ ಮೊಟ್ಟ ಮೊದಲಬಾರಿಗೆ ವಾಲ್ಮೀಕಿ ರಾಮಾಯಾಣದ ಎಲ್ಲ ಕಾಂಡಗಳನ್ನು ಕನ್ನಡಕ್ಕೆ ‘ತೊರವೆ ರಾಮಾಯಾಣ’ ಎಂಬ ಹೆಸರಿನಲ್ಲಿ ಅನುವಾದಿಸಿದನು. ಮಹಾಭಾರತವನ್ನು ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಹೆಸರಿನಲ್ಲಿ ಅನುವಾದಿಸಿ ಜನಪ್ರಿಯತೆ ಪಡೆದು ನಾರಾಣಾಪ್ಪ ‘ಕುಮಾರವ್ಯಾಸ’ ಆದ ರೀತಿ ರಾಮಾಯಾಣವನ್ನು ಅನುವಾದಿಸಿ ಜನಪ್ರಿಯತೆ ಪಡೆದ ತೊರವೆ ನರಹರಿ ‘ಕುಮಾರವಾಲ್ಮಿಕಿ’ಯಾದನು. ಇವನ ನಂತರ ಸಂಸ್ಕೃತದಲ್ಲಿ ವ್ಯಾಸಮುನಿಯ ಶಿಷ್ಯನಾಗಿದ್ದ ಜೈಮಿನಿ ಮುನಿ ಅಶ್ವಮೇಧ ಪರ್ವವನ್ನು ಕೇಂದ್ರವಾಗಿಸಿಕೊಂಡು ರಚಿಸಿದ್ದ ಆತನ ಕೃತಿಯನ್ನು ಲಕ್ಷ್ಮೀಶ ಕನ್ನಡಕ್ಕೆ ವಾರ್ಧಕ ಷಟ್ಪದಿಯಲ್ಲಿ ‘ಜೈಮಿನಿ ಭಾರತ’ವೆಂದು ಅನುವಾದಿಸಿದನು. ಈ ಕೃತಿ ಭಾಗವತ ದೃಷ್ಟಿ ಅಂದರೇ ಕೃಷ್ಣನ ಮಹಿಮೆಯನ್ನು ಕೇಂದ್ರವಾಗಿಸಿಕೊಂಡು ರಚನೆಯಾಗಿದೆ.

            ಪ್ರಾಚೀನ ಕನ್ನಡ ಸಾಹಿತ್ಯದ ಉದ್ದಕ್ಕೂ ಸಂಸ್ಕೃತ, ಪ್ರಾಕೃತದಂತಹ ದೇಶಿಯ ಭಾಷೆಗಳ ಪ್ರಭಾವ ಹೆಚ್ಚಾಗಿದ್ದು ಇವುಗಳ ನಡುವೆ ಕವಿಗಳು ತಮ್ಮ ಅನುವಾದ ಚಟುವಟಿಕೆಗಳನ್ನಿಟ್ಟು ಕೊಂಡಿದ್ದರು. ಆದರೆ ಕನ್ನಡ ಸಾಹಿತ್ಯಕ್ಕೆ ಪಾಶ್ಚಾತ್ಯ ಸಾಹಿತ್ಯವನ್ನು ಮೊದಲು ಪರಿಚಯಿಸಿದ ಕೀರ್ತಿ ಬಸವಪ್ಪಶಾಸ್ತ್ರಿಗಳಿಗೆ ಸಲ್ಲುತ್ತದೆ. ಇವರು ಸಂಸ್ಕೃತದಿಂದ ಕಾಳಿದಾಸನ ಎಲ್ಲಾ ಕೃತಿಗಳನ್ನು ಅನುವಾದಿಸಿ ‘ಅಭಿನವ ಕಾಳಿದಾಸ’ ಎಂಬ ಬಿರುದನ್ನು ಪಡೆದಿದ್ದಾರೆ. ಇವರ ಪ್ರಮುಖ ಅನುವಾದ ಕೃತಿಗಳೆಂದರೆ ಸಂಸ್ಕೃತದಿಂದ ‘ಶಾಕುಂತಲ’, ‘ಚಂಡಕೌಶಿಕ’, ‘ಉತ್ತರರಾಮ ಚರಿತ’ ಹಾಗೂ ಇಂಗ್ಲಿಷ್‍ನಿಂದ ಶೇಕ್ಸಪಿಯರನ ಅಥೆಲ್ಲೋ ನಾಟಕ ರೂಪಾಂತರವಾದ ‘ಶೂರಸೇನ ಚರಿತ್ರೆ’. ಬಸವಪ್ಪಶಾಸ್ತ್ರಿಗಳ ನಂತರ ಪ್ರಾಚೀನ(ಹಳಗನ್ನಡ) ಕನ್ನಡ ಸಾಹಿತ್ಯಕ್ಕೂ ಹಾಗೂ ಆಧುನಿಕ ಕನ್ನಡ ಸಾಹಿತ್ಯಕ್ಕೂ ಕೊಂಡಿಯಾಗಿ ಕಾಣುವ ಕವಿ ಮುದ್ದಣ್ಣ. ಇವನ ಮೂಲ ಹೆಸರು ನಂದಳಿಕೆ ಲಕ್ಷ್ಮೀ ನಾರಣಪ್ಪ. ಸಂಸ್ಕೃತದಲ್ಲಿ ಶಾಕ್ತಸಂಪ್ರದಾಯದ ರಾಮಾಯಣದ ಕಥೆಯನ್ನು ಹೊಂದಿರುವ ‘ಅದ್ಭುತ ರಾಮಾಯಣ’ ಕೃತಿಯನ್ನು ಕನ್ನಡಕ್ಕೆ ಮೂಲದಲ್ಲಿ ಇರುವಂತೆಯೇ ಗದ್ಯಕ್ಕೆ ಬದಲಾಯಿಸಿ ಅನುವಾದಿಸಿದ. ಹಾಗೇ ಸಂಸ್ಕೃತದ ‘ಪದ್ಮಪುರಾಣ’ದಲ್ಲಿಯ ‘ಶೇಷರಾಮಾಯಣ’ದ ಕಥಾನಕವನ್ನು ತೆಗೆದುಕೊಂಡು ‘ರಾಮಾಶ್ವಮೇಧ’ ಎಂಬ ಗದ್ಯ ಕೃತಿಯನ್ನು ರಚಿಸಿದನು. ಇದು ಆತನ ಕೊನೆಯ ಹಾಗೂ ಹೆಚ್ಚು ಪರಿಪಕ್ವ ಕೃತಿಯಾಗಿದೆ.

  ಉಪಸಂಹಾರ

ಇಷ್ಟೊಂದು ದೀರ್ಘವಾದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅನುವಾದದ ಕೊಡುಗೆ ಅಪಾರವಾದದ್ದೆಂದು ಸ್ಪಷ್ಟವಾಗುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯವು ತನ್ನ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಳ್ಳುವಲ್ಲಿ ಸಂಸ್ಕೃತ ಸಾಹಿತ್ಯದ ನೆರವನ್ನು ಆಧಿಕವಾಗಿ ಬಯಸಿತ್ತು. ಆದ್ದರಿಂದಲೇ ಭಾರತೀಯ ಇತರೆ ಭಾಷೆಯ ಸಾಹಿತ್ಯಗಳಂತೆ ಸಮೃದ್ಧವಾದ ಸಾಹಿತ್ಯವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿ ಕೂಡ ಆಯಿತು. ಅದೇ ರೀತಿ ಆಧುನಿಕ ಸಂದರ್ಭದಲ್ಲಿ ದೇಶ, ವಿದೇಶಗಳ ಸಾಹಿತ್ಯದ ಸಂಪರ್ಕವನ್ನು ಕನ್ನಡ ಸಾಹಿತ್ಯ ಹೊಂದಿದೆ. ಇತ್ತಿಚೀನ ದಿನಗಳಲ್ಲಿ ನ್ಯಾಷ್‍ನಲ್ ಬುಕ್ ಟ್ರಸ್ಟ್, ಕುವೆಂಪು ಭಾಷಾಭಾರತಿ ಪ್ರಾಧಿಕಾರದಂತಹ ಸರ್ಕಾರಿ ಅಕಾಡೆಮಿಗಳು, ಖಾಸಗಿ ಸಂಸ್ಥೆ, ಪ್ರಕಾಶನಗಳು ದೇಶಿಯ, ವಿದೇಶಿಯ ಅನೇಕ ಭಾಷೆಗಳ ಶ್ರೇಷ್ಟವಾದ ಕೃತಿಗಳನ್ನು ಅನುವಾದ ಮಾಡಿ ಸ್ಥಳೀಯ ಭಾಷೆಗೆ ನೀಡುತ್ತಿವೆ. ಅಲ್ಲದೇ ತಮ್ಮ ಸ್ಥಳಿಯ ಭಾಷೆಯ ಶ್ರೇಷ್ಟ ಸಾಹಿತ್ಯವನ್ನು ಸಹ ದೇಶಿಯ, ವಿದೇಶಿಯ ಅನೇಕ ಭಾಷೆಗಳಿಗೆ ಅನುವಾದ ಮಾಡುತ್ತಿದೆ. ಇಂತಹ ಅಕಾಡೆಮಿ, ಪ್ರಾಧಿಕಾರ, ಖಾಸಗಿ ಪ್ರಕಾಶನ ಹಾಗೂ ಸಂಘ ಸಂಸ್ಥೆಗಳಿಂದ ಭಾರತೀಯ ಭಾಷೆಗಳು ಹಾಗೂ ವಿದೇಶಿ ಭಾಷೆಗಳ ಸಂಪರ್ಕವನ್ನು ಕನ್ನಡ ಸಾಹಿತ್ಯ ಹೊಂದಲು ಸಹಾಯಕವಾಗಿದೆ. ಆದ್ದರಿಂದ ಇಂದು ಕನ್ನಡ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಕೊಡುಕೊಳ್ಳುವಿಕೆಯ ಅನುವಾದ ಸಂಬಂಧವನ್ನು ಹೊಂದಿದೆ. ಕನ್ನಡ ಸಾಹಿತ್ಯವನ್ನು ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಾಗಿ ಅಂತರರಾಷ್ಟ್ರಿಯ ನೆಲೆಯಲ್ಲಿ ಗುರುತಿಸುವಂತೆ ಮಾಡುವ ಜವಾಬ್ದಾರಿ ಅನುವಾದ ಸಾಹಿತ್ಯದ ಮೇಲಿದೆ. ಕನ್ನಡ ಸಾಹಿತ್ಯಕ್ಕೆ ಅನೇಕ ದೇಶ, ವಿದೇಶಗಳ ಶ್ರೇಷ್ಟ ಸಾಹಿತ್ಯವನ್ನು ಪರಿಚಯಿಸುವ ಕೆಲಸದಲ್ಲಿ ಆಧುನಿಕೋತ್ತರ ಅನುವಾದ ಸಾಹಿತ್ಯ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಆದ್ದರಿಂದ ಅನುವಾದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಸರ್ಕಾರ, ವಿಶ್ವವಿದ್ಯಾಲಯ, ಸಂಘ ಸಂಸ್ಥೆ, ಪ್ರಾಧಿಕಾರ, ಅಕಾಡೆಮಿ ಹಾಗೂ ಖಾಸಗಿ ಪ್ರಕಾಶನ ಮುಂತಾದವುಗಳು ನೀಡಬೇಕಾಗಿದೆ. ಜೊತೆಗೆ ಅನುವಾದವನ್ನು ಪ್ರೋತ್ಸಾಹಿಸುವಂತೆ ಅನುವಾದ ಸಾಹಿತ್ಯವನ್ನು ಕುರಿತ ಅಧ್ಯಯನಗಳನ್ನು ಸಹ ಪ್ರೋತ್ಸಾಹಿಸುವುದು ಕೂಡ ಮುಖ್ಯವಾಗುತ್ತದೆ.

ಪರಾಮರ್ಶನ ಗ್ರಂಥಗಳು

  1. ಮೋಹನ್ ಕುಂಟಾರ್(ಸಂ), ಅನುವಾದ ಸಾಹಿತ್ಯ, 2015, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – 560018.
  2. ಉಷಾ. ಎಂ, ಭಾಷಾಂತರ ಪ್ರವೇಶಿಕೆ, 2014, ಕನ್ನಡ ವಿಶ್ವವಿದ್ಯಾಲಯ, ಹಂಪಿ -583276.
  3. ರಂ.ಶ್ರೀ.ಮುಗಳಿ ಸಮಗ್ರ ಸಾಹಿತ್ಯ, ಸಂಪುಟ – 2, ಭಾಗ -2, ಎಚ್.ಎಸ್. ರಾಘವೇಂದ್ರ ರಾವ್(ಸಂ), 2013, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು – 560006.
  4. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕನ್ನಡ ಸಾಹಿತ್ಯ ಚರಿತ್ರೆ, 2014, ಅಂಕಿತ ಪುಸ್ತಕ, 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಬಸವನಗುಡಿ, ಬೆಂಗಳೂರು-560004.
  5. ತ.ಸು. ಶಾಮರಾಯ, ಕನ್ನಡ ಸಾಹಿತ್ಯ ಚರಿತ್ರೆ, 2010, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು-2
  6. ರಂ,ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, 2015, ಗೀತಾ ಬುಕ್ ಹೌಸ್, ಮೈಸೂರು-57001.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal