ಸಮಾಜದಲ್ಲಿ ಅಸಮಾನತೆ ಮತ್ತು ಲಿಂಗತಾರತಮ್ಯ
Dr. ASHWAKHAHAMED B A
Assistant Professor
Govt. First Grade College, Tumkur, Karnataka (INDIA)
ashwakhahamed65835@gmail.com
ಪೀಠಿಕೆ:
ನಿಸರ್ಗದಲ್ಲಿ ಮಾನವರನ್ನು ಸಮಾನವಾಗಿಯೇ ಸೃಷ್ಟಿಸಲಾಗಿದೆ, ಆದರೆ ಮಾನವ ಸಮಾಜದಲ್ಲಿ ಮಾನವರೆಲ್ಲರೂ ಸಮಾನರಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅಸಮಾನತೆ ಕಂಡು ಬರುತ್ತದೆ.
ಫ್ರಾನ್ಸ್‍ನ ಕ್ರಾಂತಿಕಾರಿ ಚಿಂತಕ ಜೆ.ಜೆ.ರುಸೋ ಹೇಳುವಂತೆ ಹುಟ್ಟುವಾಗ ಮಾನವರೆಲ್ಲರೂ ಸ್ವತಂತ್ರರು ಮತ್ತು ಸಮಾನರು ಎಂದು ಸಾರಿದ್ದರೂ ಬೆಳೆಯುತ್ತಾ ಹೋದಂತೆ ಅವರು ಭಿನ್ನರಾಗುತ್ತಾರೆ. ಮಾನವರೆಲ್ಲರನ್ನೂ ಸಮಾನವಾಗಿಯೇ ಸೃಷ್ಟಿಸಲಾಗಿದೆ.
ಮಾನವ ಸಮಾಜದಲ್ಲಿ ಮೇಲು ಕೀಳು, ಶ್ರೀಮಂತ-ಬಡವ, ಪ್ರಬಲ-ದುರ್ಬಲ, ಆಳುವ-ಆಳಲ್ಪಡುವ, ಅಕ್ಷರಸ್ಥ-ಅನಕ್ಷರಸ್ಥ, ಒಡೆಯ-ಆಳು, ಭೂಮಾಲಿಕ-ಕೃಷಿಕ ಮುಂತಾದವರು ಕಂಡುಬರುತ್ತಾರೆ. ಇಂತಹ ಅಸಮಾನತೆಯ ಬಗ್ಗೆ ಹಲವರು ಕೂಗನ್ನು ಹಾಕಿದ್ದು ಚಳುವಳಿಗಳು, ಪ್ರತಿಭಟನೆಗಳು, ಹೋರಾಟ, ಸಂಘರ್ಷ, ಯುದ್ಧಗಳು ನೆಡೆದಿರುವುದು ಕಾಣಬಹುದು.
ಹಲವು ಚಿಂತಕರು ಸಮಾಜದ ಎಲ್ಲಾ ಜನರಿಗೂ ಸಮಾನತೆಯನ್ನು ಮತ್ತು ಸಮಾಜ ಜೀವನ ಪರಿಸ್ಥಿತಿಗಳನ್ನು ಕಲ್ಪಿಸಿಕೊಡುವಂತಹ ಸರ್ವ ಸಮತಾ ಸಮಾಜ ರಚನೆಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆಸ್ತಿ, ಅಂತಸ್ತು, ಅಧಿಕಾರ, ಸಂಪತ್ತುಗಳಿಂದ ಉಂಟಾದ ಅಸಮಾನತೆ ಕೊನೆಗೊಳ್ಳಬೇಕೆಂಬುದು ಚಿಂತಕರ ಕನಸಾಗಿದ್ದಿತು.
ಮಾನವ ಸಮಾಜ ಅನೇಕ ರೀತಿಯ ಅಸಮಾನತೆಯನ್ನು ಆರಂಭದಿಂದ ಎದುರಿಸುತ್ತಲೇ ಬಂದಿದೆ. ಮಾನವರಲ್ಲಿ ದೈಹಿಕ ರಚನೆ, ದೈಹಿಕ-ಮಾನಸಿಕ ಅಗತ್ಯತೆಗಳ ಅನುಭವ ಪಡೆಯುವಲ್ಲಿ ಒಂದು ಜನಾಂಗವಾಗಿ ಸಾಕಷ್ಟು ಸಾಮ್ಯತೆಗಳಿವೆ, ಇದರಿಂದಾಗಿಯೇ ಸಮಾಜದಲ್ಲಿ ಅಸಮಾನತೆಯಿದೆ. ಸಮಾಜದಲ್ಲಿರುವ ಅಸಮಾನತೆ, ವೈವಿಧ್ಯತೆ, ಸ್ತರವಿನ್ಯಾಸ ಇವುಗಳನ್ನು ಸಮಾಜಶಾಸ್ತ್ರಜ್ಞರು ವಿಶೇಷವಾಗಿ ಅಧ್ಯಯನ ಕೈಗೊಂಡಿದ್ದಾರೆ.
ಸಾಮಾಜಿಕ ಅಸಮಾನತೆ
ಸಮಾಜಿಕ ಅಸಮಾನತೆಯು ಎಲ್ಲಾ ಸಮಾಜಗಳ ಸಮಾನ ಲಕ್ಷಣವಾಗಿದೆ. ಈ ಅಸಮಾನತೆಯು ಸಮಾಜಿಕ ಸನ್ನಿವೇಶದಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಜೈವಿಕ ಅಸಮಾನತೆಯು ಸಾಮಾಜಿಕ ಅಸಮಾನತೆಯ ಬೆಂಬಲವಾಗಿ ನಿಲ್ಲುತ್ತದೆ. ಶಾರೀರಿಕ ಅಸಮಾನತೆಯು ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಸಾಂಸ್ಕೃತಿಕ ಭಿನ್ನತೆಗಳಿಂದಲೂ ಸಾಮಾಜಿಕ ಅಸಮಾನತೆ ಕಂಡು ಬರುತ್ತದೆ. ಅಸಮಾನತೆಯು ಸಮಾಜ ಒಪ್ಪ್ಪಿತ ಅಥವಾ ಅಂಗೀಕರಿಸಲ್ಪಟ್ಟ ನಮೂನೆಗಳಾಗಿರುತ್ತವೆ. ಇವು ನಂಬಿಕೆ, ಸಂಪ್ರದಾಯ ಆಚರಣೆಗಳಿಂದ ಸಮರ್ಥಿಸಲ್ಪಟ್ಟಿರುತ್ತವೆ.
ಮಾನವಶಾಸ್ತ್ರಜ್ಞರ ಪ್ರಕಾರ ಅಕ್ಷರ ಪೂರ್ವ ಸಮಾಜದಲ್ಲಿಯೂ ಅಸಮಾನತೆ ಕಂಡು ಬರುತ್ತದೆ. ಸೌಂದರ್ಯ, ಧೈರ್ಯ ಮತ್ತು ಧಾರ್ಮಿಕ ಜ್ಞಾನ ಇವುಗಳ ಮೂಲಕ ವ್ಯಕ್ತಿಗಳ ಅಂತಸ್ತು ನಿರ್ಧರಿಸಲಾಗುತ್ತಿತ್ತು.
ಸಮಾಜಿಕ ಸಂಪನ್ಮೂಲಗಳನ್ನು ಪಡೆಯಬಹುದಾದ ಮಾರ್ಗಗಳ ಅಸಮಾನ ಹಂಚಿಕೆಯನ್ನು ಸಮಾಜಿಕ ಅಸಮಾನತೆ ಎನ್ನುತ್ತೇವೆ.
ಸಾಮಾಜಿಕ ಅಸಮಾನತೆಯು ಅಂತರಿಕವಾಗಿ ಅಥವಾ ನೈಸರ್ಗಿಕವಾದ ವ್ಯತ್ಯಾಸಗಳಿಂದ ಉಂಟಾದುದಲ್ಲ ಸಮಾಜ ನಿರ್ಮಿತವಾದುದು.
ಸಾಮಾಜಿಕಸ್ತರ ವಿನ್ಯಾಸ
ಲಿಂಗ ಅಸಮಾನತೆ
ಜೀವ ವಿಕಾಸಕ್ಕೂ ಮುಂಚೆ ಪ್ರತಿಯೊಂದು ಜೀವಿಗೆ ಬಾಳುವುದೇ ದೊಡ್ಡ ಹೋರಾಟವಾಗಿತ್ತು. ಆಹಾರ, ವಸತಿ, ಸಂರಕ್ಷಣೆಗಾಗಿ ಮಾನವ ನಿಸರ್ಗದೊಡನೆ ನಿರಂತರವಾಗಿ ಸೆಣಸಾಡಬೇಕಾಗುತ್ತಿತ್ತು. ಆ ಹಂತ ದಾಟಿದೊಡನೆ ಸಂಗಾತಿಯೊಡನೆ ಸಹಜೀವನಕ್ಕಾಗಿ ನೆಲೆ ನಿಂತೊಡನೆ ಜೀವನೋಪಾಯ ಹಾಗೂ ಆರ್ಥಿಕ ಭದ್ರತೆಯ ನೆಪದಿಂದ ಲಿಂಗಭೇದ ಪ್ರಾರಂಭವಾಯಿತು. ಸ್ತ್ರೀಯರು ಮತ್ತು ಪುರುಷರು ಮಾನವ ಸಮುದಾಯವನ್ನು ಸಮಗ್ರವಾಗಿ ಪ್ರತಿನಿಧಿಸುವ ಎರಡು ಲಿಂಗ ಸಮೂಹಗಳು. ಇವು ಪರಸ್ಪರ ಸಮನಾಗಿಲ್ಲ ಅಂತಸ್ತು, ಸ್ಥಾನಮಾನ, ಪಾತ್ರ, ಹೊಣೆಗಾರಿಕೆ, ಸಾಮಥ್ರ್ಯ, ಸ್ವಭಾವ ಈ ಎಲ್ಲಾ ದೃಷ್ಟಿಯಿಂದಲೂ ವಿಭಿನ್ನವಾಗಿವೆ.
ಲಿಂಗ ಮತ್ತು ಲಿಂಗತ್ವ
ಸಮಾಜಶಾಸ್ತ್ರೀಯ ಸಾಹಿತ್ಯದಲ್ಲಿ ಸಾಮಾಜೀಕರಣ ಎಂಬ ಪರಿಕಲ್ಪನೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ಕಲ್ಪನೆಗಳಿವೆ ಅವುಗಳೆಂದರೆ:
Sex: ಲಿಂಗ, ಜೈವಿಕಲಿಂಗ, ದೈಹಿಕ ಲಿಂಗ
ಲಿಂಗ ಎಂಬುದು Sex ಎಂಬ ಆಂಗ್ಲ ಪದದ ಅನುವಾದವಾಗಿದ್ದು, ಇದು ಸ್ತ್ರೀ-ಪುರಷರ ಜೈವಿಕ ವ್ಯತ್ಯಾಸವ್ನು ಸೂಚಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಹೆಣ್ಣು-ಗಂಡು ಎಂಬ ಎರಡು ಲಿಂಗಗಳಿಗೆ ಸೇರಿದ ಪ್ರಾಣಿಗಳಿರುವಂತೆ, ಮಾನವ ಪ್ರಪಂಚದಲ್ಲಿ ಸ್ತ್ರೀಯರು ಹಾಗೂ ಪುರುಷರು ಇರುವರು. ಜೈವಿಕ ಕಾರಣದಿಂದಾಗಿ ಮಾತ್ರ ಈ ಎರಡು ಲಿಂಗದ ಜನರು ಪರಸ್ಪರ ಭಿನ್ನರಾಗಿದ್ದಾರೆ. ಮಾನವ ಸಮಾಜವು ಒಳಗೊಂಡಿರುವ ಪ್ರಬೇಧದ ತತ್ವ ಕೂಡ ಜೈವಿಕ ನೆಲೆಯಿಂದ ಉಂಟಾದ ಲಿಂಗಬೇಧದ ಅಂಶವನ್ನು ಒಳಗೊಂಡಿದ್ದು ಅದಕ್ಕೆ ತನ್ನದೆ ಮಹತ್ವವಿದೆ. ಸ್ತ್ರೀ ಪುರಷರ ದೇಹದ ಆಕೃತಿ, ರೂಪ, ಪ್ರಜನನದ ಅಂಗಗಳು, ಮುಖದಲ್ಲಿ ಕಾಣುವ ಕೂದಲು, ದೈಹಿಕ ಶಕ್ತಿ ಮುಂತಾದವು ವರ್ಗೀಕರಣಕ್ಕೆ ಸಹಾಯಕವಾಗಿದೆ.
ಲಿಂಗವೆಂಬುದು ಒಂದು ಜೈವಿಕ ಅಂಶವಾಗಿದ್ದರೂ ಅದಕ್ಕೆಂದು ಸಾಮಾಜಿಕ, ಮಾನಸಿಕ ಆಯಾಮವೂ ಇದೆ. ಲಿಂಗದ ಅಂಶವು ಸ್ತ್ರೀ ಪುರುಷರನ್ನು ಪರಸ್ಪರ ಹತ್ತಿರಕ್ಕೆ ಬರುವಂತೆ ಆಕರ್ಷಿಸುವುದು ಮತ್ತು ಅವರನ್ನು ಪ್ರೀತಿ, ಪ್ರೇಮ, ವಿವಾಹ ಹಾಗೂ ಸಂತಾನದ ಬಯಕೆ, ಕುಟುಂಬ ಸ್ಥಾಪನೆಯ ಆಶಯಗಳಿಂದ ಒಂದು ಗೂಡುವಂತೆ ಮಾಡುವುದು. ಮಾನವರ ದೃಷ್ಟಿಯಿಂದ ಹೇಳುವುದಾದರೆ ಲಿಂಗವೆಂಬುದು ಪ್ರಜೋತ್ಪಾದನೆಯ ಅಂಶ ಮಾತ್ರವಾಗಿರದೆ ಅದಕ್ಕೂ ಮಿಗಿಲಾದ ಸಂಬಂದಗಳಿಗೆ ಅನುವು ಮಾಡಿಕೊಡುತ್ತದೆ.
ಲಿಂಗತ್ವ, ಸಾಮಾಜಿಕ ಲಿಂಗ, ಆರೋಪಿತಲಿಂಗ
ಆಯನ್ ಓಕ್ಲೆ ಎಂಬಾಕೆ ಎಂಬ ಪರಿಕಲ್ಪನೆಯನ್ನು ಸಮಾಜಶಾಸ್ತ್ರಕ್ಕೆ ಮೊದಲ ಬಾರಿಗೆ ಪರಿಚಯಿಸಿದಾಕೆ, ಆಕೆ ಹೇಳುವಂತೆ Sex ಎಂಬ ಪದವು ಸ್ತ್ರೀ ಹಾಗೂ ಪುರುಷ ಎಂಬ ಜೈವಿಕ ವಿಂಗಡಣೆಯ ಬಗ್ಗೆ ತಿಳಿಸುತ್ತದೆಯಾದರೆ ಲಿಂಗತ್ವ ಸಾಮಾಜಿಕವಾಗಿ ಅಸಮಾನವಾದ ಸ್ತ್ರೀತನ, ಪುರಷತನ ಎಂಬ ವಿಂಗಡಣೆ ಸೂಚಿಸುತ್ತದೆ.
(ಲಿಂಗತ್ವ)ದ ವ್ಯಾಖ್ಯೆಗಳು
ಲಿಂಗತ್ವ ಸಾಂಸ್ಕೃತಿಕ ನೆಲೆಯುಳ್ಳದ್ದು ಜೈವಿಕವಾಗಿ ನಿರ್ಧಾರವಾದುದಲ್ಲ. ಇದು ಕಾಲ, ದೇಶ, ಸಂಸ್ಕೃತಿಗಳನ್ನು ಹೊಂದಿಕೊಂಡು ಬದಲಾಗುವುದು. ಆಯ ಸಂಸ್ಕೃತಿಯಲ್ಲಿಯ ಅಂಶಗಳಾದ ಪುರುಷರ ಉಡುಪು, ಸ್ತ್ರೀಯರ ಉಡುಪು, ಸ್ತ್ರೀಯರ ಕೆಲಸ, ಪುರುಷರ ಕೆಲಸ, ಪುರುಷರ ಶೈಲಿ, ಮಹಿಳೆಯರ ಶೈಲಿಗಳು, ಲಿಂತಗ್ವ ಆಧಾರದ ಮೇಲೆ ನಿರ್ಧಾರವಾಗುತ್ತವೆ. ಇದಕ್ಕೆ ಜೈವಿಕ ನೆಲೆ ಎಂಬುದಿಲ್ಲ. ಈ ರೀತಿಯ ಅಂಶಗಳು ಸಾಂಸ್ಕೃತಿಕವಾಗಿ ಸೃಷ್ಟಿಸಿ ಅವುಗಳ ಕುರಿತು ಸಾಮಾಜೀಕರಣದ ಮೂಲಕ ಚಿಕ್ಕ ಮಕ್ಕಳಿಗೆ ಅವರ ಬಾಲ್ಯದಿಂದಲೇ ತರಬೇತಿ ನೀಡಲಾಗುತ್ತದೆ. ಭಾರತೀಯ ಸನ್ನಿವೇಶದಲ್ಲಿ ಅಲ್ಲದೆ ಬಹುತೇಕ ಕಡೆ ಸ್ತ್ರೀಯರು ಮಕ್ಕಳ ಸಂಪೋಷಣೆ ಮತ್ತು ಅಡುಗೆಯ ಕೆಲಸವನ್ನು ಹಾಗೂ ಪುರುಷರು ಮನೆಯ ಹೊರಗಡೆ ಉಳುಮೆಯಂತಹ ಕೃಷಿ ಕಾರ್ಯ, ಹಣಕಗಳಿಕೆಯಲ್ಲಿ ತೊಡಗುವುದಕ್ಕೆ ಸಾಮಾಜಿಕ ಸಾಂಸ್ಕೃತಿಕ ಅಂಶಗಳೆ ಕಾರಣ ಹೊರತು, ಜೈವಿಕ ಕಾರಣಗಳಿರಲು ಸಾಧ್ಯವಿಲ್ಲ. ಹುಟ್ಟಿನಿಂದಲೇ ಸ್ತ್ರೀ ಪುರುಷರು ನಿಗದಿತ ರೀತಿಯಲ್ಲಿ ಉಡುಪು ಧರಿಸಬೇಕೆಂಬ, ನಿಗದಿತ ಕೆಲಸ ಮಾಡಬೇಕೆಂಬ ಜೈವಿಕ ನಿಯಮವಿಲ್ಲ. ನಾವು ಇತರರೊಂದಿಗೆ ಹೇಗೆ ಒಡನಾಟ ನೆಡಸುತ್ತೇವೆ ಹಾಗೂ ನಮ್ಮ ಬಗ್ಗೆ ನಾವು ಹೇಗೆ ಆಲೋಚಿಸುತ್ತೇವೆ ಎಂಬುದನ್ನು ರೂಪಿಸುವುದು, ಸರಳವಾಗಿ ಹೇಳುವುದಾದರೆ ಲಿಂಗತ್ವ ಸಾಂಸ್ಕೃತಿಕ ಲಕ್ಷಣ ಅಥವಾ ಗುಣವಾಗಿದೆ.
ಲಿಂಗ ಪಾತ್ರಗಳು
ಪ್ರತಿಯೊಂದು ಲಿಂಗದ ವ್ಯಕ್ತಿಯು ಕೂಡ ಹೇಗೆ ವರ್ತಿಸಬೇಕೆಂಬ ಬಗ್ಗೆ ಪ್ರತಿಯೊಂದು ಸಮಾದಲ್ಲಿಯೇ ಸಹ ಕೆಲವು ಸಾಮಾನ್ಯ ನಂಬಿಕೆಗಳು ಹಾಗೂ ನಿರೀಕ್ಷೆಗಳು ಇರುತ್ತವೆ, ಇಂತಹ ಸಾಮಾಜಿಕ ನಿರೀಕ್ಷೆಗಳಿಗೆ ತಕ್ಕಂತೆ ವ್ಯಕ್ತಿಗಳು ನಡೆದುಕೊಳ್ಳುವುದನ್ನು ಲಿಂಗ ಪಾತ್ರವೆನ್ನಬುಹುದು.
ಲಿಂಗ ಪಾತ್ರಗಳು ಹುಟ್ಟಿನಿಂದ ಬಂದವುಗಳಲ್ಲ ಇವು ಸಾಮಾಜೀಕರಣದಿಂದ ಕಲಿತವುಗಳಾಗಿವೆ. ಇದು ಸ್ತ್ರೀ ಮತ್ತು ಪುರುಷರ ಪಾತ್ರಗಳನ್ನು ನಿಗದಿಪಡಿಸುತ್ತವೆ.
ಲಿಂಗತ್ವ ಸ್ತರ ವಿನ್ಯಾಸ
ಲಿಂಗತ್ವ ಸ್ತ್ರೀಯರನ್ನು ಹಾಗೂ ಪುರರಷರನ್ನು ಅಧಿಕಾರ, ಹಕ್ಕುಗಳು, ಸ್ವಾತಂತ್ಯ, ಸಂಪತ್ತು, ಮತ್ತಿತರ ಮೂಲಗಳ ನೆಲೆಯಲ್ಲಿ ಮೇಲು-ಕೀಳು, ಶ್ರೇಷ್ಟರು-ಕನಿಷ್ಟರು ಎಂದು ಶ್ರೇಣಿಕರಣ ಮಾಡಿರುವುದು ಕಂಡು ಬರುತ್ತವೆ. ಈ ಕಾರಣದಿಂದಲೇ ಸಮಾಜಶಾಸ್ತ್ರಜ್ಞರು ಅವರ ಅಧ್ಯಯನಗಳಲ್ಲಿ ಲಿಂಗತ್ವ ಸ್ತರ ವಿನ್ಯಾಸ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸ್ತ್ರೀ ಪುರುಷರ ಸೌಲಭ್ಯಗಳು ಹೇಗೆ ಅಸಮಾನವಾಗಿ ಹಂಚಿಕೆಯಾಗಿವೆ ಎಂಬುದನ್ನು ಸೂಚಿಸುವ ವ್ಯವಸ್ಥೆಯೇ ಇದಾಗಿದೆ.
ಲಿಂಗತ್ವ ಪೂರ್ವಗ್ರಹಗಳು
ಲಿಂಗತ್ವದ ಬಗ್ಗೆ ಅಂದರೆ ಸ್ತ್ರೀಯರು, ಪುರುಷರು, ಸಮೂಹದ ಬಗ್ಗೆ ಜನರು ಹೊಂದಿರಬಹುದಾದ ಪೂರ್ವ ನಿರ್ಧಾರಿತ ಅಭಿಪ್ರಾಯಗಳನ್ನು ಸಾಮಾಜದಲ್ಲಿ ಲಿಂಗತ್ವ ಪೂರ್ವಗ್ರಹ ಎನ್ನುತ್ತಾರೆ. ಶಿಕ್ಷಣ ಕಲಿಕೆಯ ಹಂತದಲ್ಲಿಯೂ ಲಿಂಗತ್ವ ಪೂರ್ವಗ್ರಹಗಳಿಂದ ಶಾಲಾ ಮಕ್ಕಳು ಪೂರ್ವಗ್ರಹಕ್ಕೆ ಒಳಗಾಗುತ್ತಾರೆ. ಮಕ್ಕಳಿಗೆ ಹೆಚ್ಚಿನ ಸಂದರ್ಭದಲ್ಲಿ ಪುರುಷರ ಸಾಧನೆ, ಶೌರ್ಯದ ಕಥೆಗಳನ್ನು ಹೇಳುವುದು ಸ್ತ್ರೀ ಸಾಹಸಿಗರ ಕಥೆ ಕಡಿಮೆ. ಪಠ್ಯಪುಸ್ತಕಗಳಲ್ಲಿ ಸ್ತ್ರೀಯರನ್ನು ಹೆಚ್ಚಾಗಿ ಅಡುಗೆ ಮಾಡುವವರಂತೆ, ಊಟ ಬಡಿಸುವುದು, ಮನೆ ಶುದ್ಧಿ ಮಾಡುವುದು, ಮಕ್ಕಳನ್ನು ಪೋಷಿಸುವಂತೆ ತೋರಿಸುವುದರಿಂದ ಈ ಕಾರ್ಯ ಸ್ತ್ರೀಯರು ನಿರ್ವಹಿಸುವ ಕಾರ್ಯವೆಂದು ನಿರೀಕ್ಷಿಸಬಹುದು.
ಲಿಂಗ ತಾರತಮ್ಯ
ಲಿಂಗಭೇದವೆಂಬುದು ಸಾರ್ವತ್ರಿಕ ವಿದ್ಯಮಾನವಾಗಿದೆ. ಸ್ತ್ರೀ ಪುರುಷರ ನಡುವಿನ ಭೇದವು ಎಲ್ಲಾ ಸಮಾಜಗಳಲ್ಲೂ ಎಲ್ಲಾ ಕಾಲಮಾನದಲ್ಲೂ ಕಂಡುಬರುತ್ತದೆ. ಇಂದಿಗೂ ಕಂಡುಬುರುತ್ತಿರುವ ಸಾಮಾಜಿಕ ಅಂಶವಾಗಿದೆ. ಸ್ತ್ರೀ ಪುರುಷರಿಗೆ ಸಮಾನವಾದ ಸಾಮಾಜಿಕ ಅಂತಸ್ತು ಹೊಣೆಗಾರಿಕೆ ನೀಡಿ ಸಮಾನತೆ ಮೆರೆದ ಸಮಾಜ ಈವರೆಗೆ ಅಸ್ಥಿತ್ವದಲ್ಲಿದ್ದುದು ಕಂಡುಬಂದಿಲ್ಲ, ಪುರುಷ ಪ್ರಧಾನ್ಯತೆಯ ಸಾರ್ವತ್ರಿಕವಾಗಿದೆ.
ಲಿಂಗಭೇದವು ಲೈಂಗಿಕ ತಾರತಮ್ಯತೆಗೆ ಕಾರಣವಾಗಿರುವುದಲ್ಲದೆ, ಮಾನವನ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದೆ. ಲಿಂಗಭೇದ ಕುರಿತಾದ ಸಾಮಾಜಿಕ ಪ್ರಾಮುಖ್ಯವನ್ನು ಮಗುವಿನ ಜನನದ ಸಂದರ್ಭದಲ್ಲಿಯೇ ಗಮನಿಸಬಹುದು.
ಜಗತ್ತಿನ ಎಲ್ಲಾ ಸಮಾಜಗಳಲ್ಲೂ ಕೂಡ ಕೆಲವೊಂದು ಹಕ್ಕುಗಳನ್ನು ಸ್ತ್ರೀಯರಿಗೆ ನಿರಾಕರಿಸಲಾಗಿದೆ. ಸ್ತ್ರೀ ಮತ್ತು ಪುರುಷರ ನಡುವಿನ ಜೈವಿಕ ವ್ಯತ್ಯಾಸಗಳ ಕಾರಣಗಳಿಂದ ಸ್ತ್ರೀ ಪುರುಷರ ನಡುವೆ ಅಂತರ ಹೆಚ್ಚಾಗಿ ಸ್ತ್ರೀಯರಿಗೆ ದ್ವಿತೀಯ ದರ್ಜೆ ಸ್ಥಾನಗಳನ್ನು ನೀಡಲಾಗಿರುವುದನ್ನು ಕಾಣಬಹುದು.
ಡೇವಿಡ್ ಜೆರಿ, ಜುಲಿಯಾ ಜೆರಿ “ಒಂದು ಲಿಂಗಕ್ಕೆ ಇನ್ನೊಂದು ಲಿಂಗಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವಂತಹ ಆಚರಣೆಯನ್ನು ಲಿಂಗತಾರತಮ್ಯ ಎನ್ನುತ್ತೇವೆ.” ಬಹುತೇಕ ಸಮಾಜಗಳಲ್ಲಿ ಪುರುಷರಿಗೆ ಸ್ತ್ರೀಯರಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದು. ಲಿಂಗ ಅಸಮಾನತೆಯು ಜಾತಿ, ವರ್ಗ, ಪಂಗಡ, ಪಕ್ಷಗಳು ಹುಟ್ಟಿಕೊಳ್ಳುವುದಕ್ಕಿಂತ ಮೊದಲೇ ಅಸ್ತಿತ್ವದಲ್ಲಿದ್ದಿತು. ಲಿಂಗದ ಆಧಾರದ ಮೇಲೆ ಮೇಲು ಕೀಳು, ಶ್ರೇಷ್ಟ ಕನಿಷ್ಟ ಎಂಬ ಬೇಧ ಕಂಡುಬರುತ್ತದೆ. ಸಾಮಾಜಿಕವಾಗಿ ಸ್ತ್ರೀಯರಿಗೆ ಕೆಲವು ಅಧಿಕಾರಗಳಿಂದ ದೂರವಿಡಲಾಗುತ್ತದೆ. ಪಿತೃಪ್ರಧಾನತೆ ಇರುವ ಸಮಾಜಗಳಲ್ಲಿ ದೈನಂದಿನ ಜೀವನದಲ್ಲಿ ಲಿಂಗ ತಾರತಮ್ಯ ಆಚರಣೆ ಇರುತ್ತದೆ. ಖಾಸಗಿ ಮತ್ತು ಸಾರ್ವಜನಿಕ ಚಟುವಟಿಕೆಗಳೆರಡರಲ್ಲೂ ಕಂಡುಬರುತ್ತದೆ. ತಾರತಮ್ಯತೆ ಸಾಂಸ್ಥಿಕರಣಗೊಂಡಿರುತ್ತದೆ. ಉದಾ: ಸತಿ ಆಚರಣೆ, ವಿಧವ ಪುನರ್ ವಿವಾಹ ನಿಷೇಧ ಮುಂತಾದವು.
ಲಿಂಗತಾರತಮ್ಯದ ಆಚರಣೆಯ ವಿವಿದ ಮುಖಗಳು
ಭಾರತೀಯ ಸ್ತ್ರೀ ಸಮುದಾಯದ ಶಕ್ತಿಯನ್ನು ದುರ್ಬಲಗೊಳಿಸಿದ ಅನಪೇಕ್ಷಿತ ಆಚರಣೆಗಳಲ್ಲಿ ಇದು ಒಂದು, ಭಾರತದ ಸ್ತ್ರೀಯರು ಅಂತಹ ತಾರತಮ್ಯತೆಗಳಿಗೆ ಒಳಗಾಗಿರುವಂತಹ ಕೆಲವು ಕ್ಷೇತ್ರಗಳ ಹೀಗಿವೆ:
ಸಮಾನತೆಯತ್ತ ವರದಿ 1974
ಭಾರತೀಯ ಮಹಿಳೆಯರ ಅಂತಸ್ತು ಮತ್ತು ಸಮಸ್ಯೆಗಳ ಪರಿಶೀಲನಗೆ ರಾಷ್ಟ್ರೀಯ ಆಯೋಗ ರಚನೆ ಈ ವರದಿಯನ್ನು ಸಮಾನತೆಯ ವರದಿ ಎನ್ನಲಾಗಿದೆ.
ಉಪಸಂಹಾರ:
ಲಿಂಗತಾರತಮ್ಯವು ಸ್ತ್ರೀ ಸಬಲೀಕರಣಕ್ಕೆ ಸವಾಲನ್ನೊಡ್ಡುತ್ತಿದ್ದು, ಲಿಂಗತಾರತಮ್ಯದ ನಿವಾರಣೆಯೂ ಸ್ತ್ರೀ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯಾಗಬಹುದು. ಲಿಂಗತಾರತಮ್ಯಕ್ಕೆ ಜೈವಿಕ ಅಂಶ ಕಾರಣವಾಗುದರ ಜೊತೆಗೆ, ಮಾನಸಿಕ, ಸಮಾಜಿಕ ಆಯಾಮ ಇರುವುದರಿಂದ ಸಮಾಜದಲ್ಲಿ ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಬೇಕಾದರೆ ಜನರ ಮಾನಸಿಕ, ಸಾಮಾಜಿಕ ಅಂಶಗಳ ಬದಲಾವಣೆಯಾಗಬೇಕು ಇಲ್ಲವಾದರೆ ಲಿಂಗತಾರತಮ್ಯವು ಸ್ತ್ರೀ ಸಬಲೀಕರಣಕ್ಕೆ ಮಾರಕವಾಗಬಹುದು.
ಪರಾಮರ್ಶನ ಗ್ರಂಥಗಳು: