Tumbe Group of International Journals

Full Text


ವರ್ತಮಾನದ ತಲ್ಲಣ ಮತ್ತು ಎಲುರಾಜನ ಮಾನವೀಯತೆ

 ಸಿದ್ಧಲಿಂಗಮ್ಮ ಎಚ್.

ಶಿಕ್ಷಕಿ, ಎಸ್.ಇ.ಎಸ್ ಆಂಗ್ಲ ಮಾಧ್ಯಮ ಶಾಲೆ,

ಸಿರುಗುಪ್ಪ, ಬಳ್ಳಾರಿ ಜಿಲ್ಲೆ- 583121

ssidduhc@gmail.com       8971060351

ಪ್ರಸ್ತಾವನೆ:

ಮನುಷ್ಯರಲ್ಲಿ ಮನುಷ್ಯತ್ವ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯಲುರಾಜನ ಮಡದಿಯಂತಹ ನಾಟಕ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಮತ್ತು ಜೀವ-ಜೀವನದ ಮೌಲ್ಯ, ಅಗಾಧವಾದ ಜೀವನ ಪ್ರೀತಿಯಿಂದ ಬದುಕನ್ನು ರೂಪಿಸಿಕೊಳ್ಳುವತ್ತ ಮುಖಮಾಡಿದೆ. ಹೆಣ್ಣಾಗಲೀ, ಗಂಡಾಗಲೀ ಕಲೆಯನ್ನು ಆಸ್ವಾದಿಸುವ, ಆರಾಧಿಸುವ ಸ್ವಭಾವ ಸಹಜವಾದದ್ದು. ಎಲುರಾಜನ ಮಡದಿಯಂತೆ ‘ಯಶೋಧರ ಚರಿತೆ’ ಯಲ್ಲಿ ಅಮೃತಮತಿಯೂ ಅಪರಿಚಿತನೊಬ್ಬನು ಹಾಡಿದ ಝಪೆಯ ತಾಳದಲ್ಲಿನ ಮಾಳವಸಿರಿ ರಾಗಕ್ಕೆ ಮನಸೋಲುತ್ತಾಳೆ. ಎಲುರಾಜನ ಮಡದಿ ಹಾಡಿನ ಜೊತೆಗೆ ಜೋಗಿಯ ಚಿತ್ರಕಲೆಗೂ ಮನಸೋಲುತ್ತಾಳೆ. ಹಾಡು, ಚಿತ್ರ, ಕುಣಿತ ಯಾವುದೇ ಕಲಾ ಪ್ರಕಾರಕ್ಕೂ ಮನುಷ್ಯನನ್ನು ಸಂಮೋಹನಗೊಳಿಸುವ ಶಕ್ತಿ ಇದೆ. ಹೀಗೆ ಸಂಮೋಹನಗೊಳ್ಳುವವರು ಆ ಕಲೆಯನ್ನು ಅಭಿವ್ಯಕ್ತಪಡಿಸುವ ಕಲಾಕಾರರೊಂದಿಗೆ ಒಂದು ಮಾನಸಿನ ಅಂತರವನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಇದನ್ನು ಭಾರತೀಯ ಕಾವ್ಯಮೀಮಾಂಸೆಯಲ್ಲಿ “ನಿಜ ಸುಖಾದಿ ವಿವಶೀಭಾವ” ವೆಂದು, ಪಾಶ್ಚಾತ್ಯರು “ಸೈಕಿಕಲ್ ಡಿಸ್ಟೆನ್ಸ್” ಎಂದು ವ್ಯಾಖ್ಯಾನಿಸುತ್ತಾರೆ. ಇದು ಕಲೆಯ ಆಸ್ವಾದಕ್ಕೆ ಮತ್ತು ಅಭಿವ್ಯಕ್ತಿಯ ನಿಷ್ಕರ್ಷೆಗೆ ಪೂರಕವಾದದ್ದು. ಯಲುರಾಜನ ಮಡದಿ ಮತ್ತು ಅಮೃತಮತಿ ಈ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರೇ? ಏಕೆಂದರೆ, ಆರಂಭದಲ್ಲಿ ಅವರು ಕಂಡದ್ದು ಜೋಗಿಯನ್ನಾಗಲೀ ; ಬದಗನನ್ನಾಗಲೀ ಅಲ್ಲ, ಬದಲಿಗೆ ಅವರ ಕಲೆಯನ್ನು. ಮುಂದುವರೆದು ಅವರ ಅಪೇಕ್ಷೆ ಕಲತ್ವದಿಂದ ವ್ಯಕ್ತಿಗತ ನೆಲೆಗೆ ಇಳಿದುಬಿಡುತ್ತದೆ. ಅಮೃತಮತಿ ಮತ್ತು ಬದಗ ಸಂಧಿಸಿದ ನಂತರ ಜನ್ನನು ಈ ಪ್ರಣಯಿಗಳ ಹಾಡುಗಾರಿಕೆಯ ಮಹತ್ವವನ್ನು ಮುಂದುವರಿಸಿಲ್ಲ. ಬದಗನ ಒಂದು ಹಾಡು ರಚನಾತಂತ್ರವಾಗಿ ಮಾತ್ರ ಬಳಕೆಗೊಂಡು ಮುಂದೆ ಜನ್ಮಾಂತರಗಳ ಕಥೆಯೇ ಕಾವ್ಯದ ಮುಖ್ಯಭಾಗವಾಗಿದೆ. ಆದರೆ ನಾಟಕದಲ್ಲಿ ಎಲುರಾಜನ ಮಡದಿ ತಾನು ಆಕರ್ಷಿತಳಾದ ಚಿತ್ರ ಮತ್ತು ಹಾಡಿಗೆ ಕೊನೆಯವರೆಗೂ ಸಂತೃಪ್ತಳಾಗಿದ್ದಾಳೆ. ಅಂದರೆ ರಚನಾತಂತ್ರದಲ್ಲಿ, ಹಾಡುಗಾರಿಕೆಯನ್ನು ಬಳಸಿಕೊಳ್ಳುವಲ್ಲಿ, ಯಶೋಧರ ಚರಿತೆಯಂತೆ ‘ಯದುರಾಜನ ಮಡದಿ’ ಕೇವಲ ಯಾಂತ್ರಿಕವಾಗದೆ ಜೀವಸೆಲೆಯಾಗಿದೆ.

 ಕೀ ವರ್ಡ್ಸ್:

ಜೀವನಪ್ರೀತಿ, ಪನಂಬಿಕೆ, ಭರವಸೆ, ಝಂಪೆತಾಳ, ಮಾಳವಸಿರಿ ರಾಗ, ಸೈಕಿಕಲ್ ಡಿಸ್ಟೆನ್ಸ್, ರಚನಾತಂತ್ರ, ಜೀವನೋತ್ಸಾಹ ಮನುಷ್ಯರಲ್ಲಿ ಮನುಷ್ಯತ್ವ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಯಲುರಾಜನ ಮಡದಿಯಂತಹ ನಾಟಕ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಮತ್ತು ಜೀವ-ಜೀವನದ ಮೌಲ್ಯ, ಅಗಾಧವಾದ ಜೀವನ ಪ್ರೀತಿಯಿಂದ ಬದುಕನ್ನು ರೂಪಿಸಿಕೊಳ್ಳುವತ್ತ ಮುಖಮಾಡಿದೆ.

ಜೀವಕ್ಕೆ ಜೀವವಾಗಿ ತನ್ನ ಮಡದಿಯನ್ನು ಪ್ರೀತಿಸುತ್ತಿದ್ದ ಎಲುರಾಜ ತನ್ನ ರಾಜ್ಯಕ್ಕೂ ಅಷ್ಟೇ ಮಹತ್ವ ಕೊಟ್ಟು “ನನ್ನ ರಾಜ್ಯ ಒಂದು ಕೈ. ನಿನ್ನ ಪ್ರೀತಿ ಇನ್ನೊಂದು ಕೈ” ಎನ್ನುತ್ತಾನೆ. ಆದರೆ ರಾಜ್ಯ ರಕ್ಷಣೆಯ ಜವಾಬ್ದಾರಿ ಮತ್ತು ಅಧಿಕಾರ ಉಳಿಸಿಕೊಳ್ಳುವ ಭರದಲ್ಲಿ ಮಡದಿಯ ಪ್ರೀತಿಯ ಮಾತನ್ನು ಕಡೆಗಣಿಸಿ ಪತಿಯಾಗಿ ತನ್ನ ಕರ್ತವ್ಯ  ನಿರ್ವಹಿಸುವಲ್ಲಿ ಎಲುರಾಜ ಎಡುವುತ್ತಾನೆ. ಇನ್ನೂ ರಾಣಿಯು ತನ್ನ ಗಂಡನಿಗೆ ಸೈನಿಕರ ಒಳಿತಿನ ಬಗೆಗೆ” ಬಿಲ್ಲುಗಾರರ ನಡುವೆ ಜಿಂಕೆ ನÀರಳಬಾರದು. ನಿಮ್ಮ ಮೇಲಾಟಕ್ಕೆ ಸೈನ್ಯ ಯಾಕೆ ಬಲಿಯಾಗಬೇಕು?” ಎಂದು ಹೇಳುವಷ್ಟು ವಿವೇಚನೆ ಇದೆ. ಆದರೆ ತನ್ನ ಪತಿಯಾದ ‘ರಾಜನ ರಾಜ್ಯ ರಕ್ಷಣೆಯ ಕರ್ತವ್ಯ’ದ ಬಗ್ಗೆ ವಿವೇಚನೆ ಮೂಡದಿರುವುದೇಕೆ? ಅಂದರೆ ಹೆಣ್ಣು ಅಷ್ಟು ಸ್ವಾರ್ಥಿಯಾಗಿದ್ದಾಳಾ? “ಯುದ್ಧಕ್ಕೆ ಹೋಗಿ ಬಿಲ್ಲಿಗೇ ವಿದಾಯ ಹೇಳಿ ಬರ್ತೇನೆ” ಎಂದು ಹೇಳಿದರೂ, ನಂಬಿಕೆ ಉಳಿಸಿಕೊಳ್ಳಲಾರದಷ್ಟು ಎಲುರಾಜ ಅಪನಂಬಿಕೆಗೆ ಒಳಗಾಗಿದ್ದನೇ? ಪ್ರೀತಿ ಮತ್ತು ಯುದ್ಧ ಎಂಬ ತಾರ್ಕಿಕ ನೆಲೆಗೆ ಬಂದು ನಿಲ್ಲುವುದು ಎಷ್ಟು ಸಮಂಜಸ? ಮೂರು ವರ್ಷಗಳ ದಾಂಪತ್ಯದಲ್ಲಿ ಇಬ್ಬರೂ ಪರಸ್ಪರ ಅರ್ಥೈಸಿಕೊಂಡಿದ್ದಾದರೂ ಏನನ್ನು? ಈ ಪ್ರಶ್ನೆಗಳೆಲ್ಲಾ ಕೇವಲ ಎಲುರಾಜ ಮತ್ತು ಅವನ ಮಡದಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಗಂಡ-ಹೆಂಡತಿಯರ ನಡುವಿನ ನಂಬಿಕೆ ಅಪನಂಬಿಕೆ ಮತ್ತು ಭರವಸೆಯ ಪ್ರಶ್ನೆಗಳಾಗುತ್ತವೆ.

ಹೆಣ್ಣಾಗಲೀ, ಗಂಡಾಗಲೀ ಕಲೆಯನ್ನು ಆಸ್ವಾದಿಸುವ, ಆರಾಧಿಸುವ ಸ್ವಭಾವ ಸಹಜವಾದದ್ದು. ಎಲುರಾಜನ ಮಡದಿಯಂತೆ ‘ಯಶೋಧರ ಚರಿತೆ’ ಯಲ್ಲಿ ಅಮೃತಮತಿಯೂ ಅಪರಿಚಿತನೊಬ್ಬನು ಹಾಡಿದ ಝಪೆಯ ತಾಳದಲ್ಲಿನ ಮಾಳವಸಿರಿ ರಾಗಕ್ಕೆ ಮನಸೋಲುತ್ತಾಳೆ. ಎಲುರಾಜನ ಮಡದಿ ಹಾಡಿನ ಜೊತೆಗೆ ಜೋಗಿಯ ಚಿತ್ರಕಲೆಗೂ ಮನಸೋಲುತ್ತಾಳೆ. ಹಾಡು, ಚಿತ್ರ, ಕುಣಿತ ಯಾವುದೇ ಕಲಾ ಪ್ರಕಾರಕ್ಕೂ ಮನುಷ್ಯನನ್ನು ಸಂಮೋಹನಗೊಳಿಸುವ ಶಕ್ತಿ ಇದೆ. ಹೀಗೆ ಸಂಮೋಹನಗೊಳ್ಳುವವರು ಆ ಕಲೆಯನ್ನು ಅಭಿವ್ಯಕ್ತಪಡಿಸುವ ಕಲಾಕಾರರೊಂದಿಗೆ ಒಂದು ಮಾನಸಿನ ಅಂತರವನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಇದನ್ನು ಭಾರತೀಯ ಕಾವ್ಯಮೀಮಾಂಸೆಯಲ್ಲಿ “ನಿಜ ಸುಖಾದಿ ವಿವಶೀಭಾವ”ವೆಂದು, ಪಾಶ್ಚಾತ್ಯರು “ಸೈಕಿಕಲ್ ಡಿಸ್ಟೆನ್ಸ್” ಎಂದು ವ್ಯಾಖ್ಯಾನಿಸುತ್ತಾರೆ. ಇದು ಕಲೆಯ ಆಸ್ವಾದಕ್ಕೆ ಮತ್ತು ಅಭಿವ್ಯಕ್ತಿಯ ನಿಷ್ಕರ್ಷೆಗೆ ಪೂರಕವಾದದ್ದು. ಯಲುರಾಜನ ಮಡದಿ ಮತ್ತು ಅಮೃತಮತಿ ಈ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರೇ? ಏಕೆಂದರೆ, ಆರಂಭದಲ್ಲಿ ಅವರು ಕಂಡದ್ದು ಜೋಗಿಯನ್ನಾಗಲೀ ; ಬದಗನನ್ನಾಗಲೀ ಅಲ್ಲ, ಬದಲಿಗೆ ಅವರ ಕಲೆಯನ್ನು. ಮುಂದುವರೆದು ಅವರ ಅಪೇಕ್ಷೆ ಕಲತ್ವದಿಂದ ವ್ಯಕ್ತಿಗತ ನೆಲೆಗೆ ಇಳಿದುಬಿಡುತ್ತದೆ. ಅಮೃತಮತಿ ಮತ್ತು ಬದಗ ಸಂಧಿಸಿದ ನಂತರ ಜನ್ನನು ಈ ಪ್ರಣಯಿಗಳ ಹಾಡುಗಾರಿಕೆಯ ಮಹತ್ವವನ್ನು ಮುಂದುವರಿಸಿಲ್ಲ. ಬದಗನ ಒಂದು ಹಾಡು ರಚನಾತಂತ್ರವಾಗಿ ಮಾತ್ರ ಬಳಕೆಗೊಂಡು ಮುಂದೆ ಜನ್ಮಾಂತರಗಳ ಕಥೆಯೇ ಕಾವ್ಯದ ಮುಖ್ಯಭಾಗವಾಗಿದೆ. ಆದರೆ ನಾಟಕದಲ್ಲಿ ಎಲುರಾಜನ ಮಡದಿ ತಾನು ಆಕರ್ಷಿತಳಾದ ಚಿತ್ರ ಮತ್ತು ಹಾಡಿಗೆ ಕೊನೆಯವರೆಗೂ ಸಂತೃಪ್ತಳಾಗಿದ್ದಾಳೆ. ಅಂದರೆ ರಚನಾತಂತ್ರದಲ್ಲಿ, ಹಾಡುಗಾರಿಕೆಯನ್ನು ಬಳಸಿಕೊಳ್ಳುವಲ್ಲಿ, ಯಶೋಧರ ಚರಿತೆಯಂತೆ ‘ಯದುರಾಜನ ಮಡದಿ’ ಕೇವಲ ಯಾಂತ್ರಿಕವಾಗದೆ ಜೀವಸೆಲೆಯಾಗಿದೆ.

ಹೀಗೆ ಕಲೆಯ ಮೂಲಕ ಅರಸಿ ಬಂದ ಎಲುರಾಜನ ಮಡದಿ ಮತ್ತು ಅಮೃತಮತಿಯರ ಕೂಡಿ ಬಾಳುವ ಪ್ರಸ್ತಾಪವನ್ನು ಒಪ್ಪಿಕೊಂಡ ಜೋಗಿ ಮತ್ತು ಬದಗನ ಸ್ವಂತ ನಿಲುವು ಏನಾಗಿತ್ತು? ಪೂರ್ವ ನಿಯೋಜಿತವಲ್ಲದೆ ಬಂದ ಇಂತಹ ಅಪೇಕ್ಷೆಗಳನ್ನು ಒಪ್ಪುವುದು ಗಂಡಸರ ಗುಣವೇ? ಆರ್ಥಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ತಮಗೆ ಸರಿಸಮಾನರಲ್ಲದ ರಾಣಿಯರನ್ನು ಸ್ವೀಕರಿಸುವಾಗ ಅವರಿಗೆ ಈ ತೆರನಾದ ಕನಿಷ್ಟ ಆಲೋಚನೆಗಳು ಮೂಡಿರಲಿಲ್ಲವೇ? ಅಥವಾ ರಚನೆಕಾರರು ಇದನ್ನು ಕೃತಿಯ ಚೌಕಟ್ಟಿನಲ್ಲಿ ನಿರೂಪಿಸದೇ ಇರುವುದಾದರೂ ಏಕೆ? ಬಂದಿದ್ದೆಲ್ಲವನ್ನೂ ಸ್ವೀಕರಿಸುವುದಾದರೆ ಇವರ ಬದುಕಿನಲ್ಲಿ ಆಯ್ಕೆಯ ನಿರ್ಧಾರದಲ್ಲಿ ಸ್ವಂತಿಕೆ ಎಂಬುದು ಇರಲಿಲ್ಲವೇ? ಈ ಎರಡು ಕೃತಿಗಳನ್ನೇ ಕೇಂದ್ರೀಕರಿಸಿ ಹೇಳುವುದಾದರೆ ಬದಗ ಮತ್ತು ಜೋಗಿ ತಳಮೂಲ ಸಮುದಾಯದ ಪ್ರತಿನಿಧಿಗಳಾಗುತ್ತಾರೆ. ಪ್ರಭುತ್ವದ ನೆಲೆಯಿಂದ ಇವರ ಸ್ವಂತಿಕೆಯನ್ನು ಕಡೆಗಣಿಸಲಾಗಿದೆಯೇ? ಹಾಗಾದರೆ ಬದಗನಂತೂ ಅಮೃತಮತಿಯನ್ನು ಸೀಕರಿಸಿದ್ದು ಲೈಂಗಿಕ ಅಭೀಪ್ಸೆಯಿಂದ ಮಾತ್ರ ಎಂಬುದು ಕೃತಿಯಿಂದಲೇ ತಿಳಿದುಬರುವ ಸತ್ಯ. ಏಕೆಂದರೆ ಒಂದು ರಾತ್ರಿ ತಡವಾಗಿ ಬಂದ ಅಮೃತಮತಿಯನ್ನು

ಮುಳಿದಾಕೆ ತಂದ ಮಾಲಾ

ಮಳಯಜ ತಾಂಬೂಲಜಾಮಂ ಕೆದಕುರು

ಳ್ಗಳನೆದು ಬೆನ್ನ ಮಿಳಿಯಂ

ಕಳಹಂಸೆಗೆ ಗಿಡಗನೆಗಿದಂತಿರೆ ಬಡಿದಂ (2-49)

ಹೀಗೆ ಬಡಿಯುವ ಬದಗನು ಅವಳನ್ನು ಸ್ವೀಕರಿಸಿದ್ದು ಹೇಗೆ? ಎಂಬ ಪ್ರಶ್ನೆ ಓದುಗಳಲ್ಲಿ ಮೂಡುತ್ತದೆ. ಆದರೆ ಅಮೃತಮತಿ ತಾನು ಕೇಳಿದ ರಾಗಕ್ಕೆ ಮನಸೋತಷ್ಟೇ ಕಲಾಕಾರನಿಗೂ ಮನಸೋತಿದ್ದಳು. ಬದಗನು ಹೀಗೆ ಬಡಿಯುತ್ತಿರುವಾಗ “ಕೇರೆ ಹೊರಳ್ವಂತೆ ಕಾಲ ಮೇಲೆ ಹೊರಳ್ದು”.

ತಡವಾದುದುಂಟು ನಲ್ಲನೆ

ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ

ತೊಡೆಯೇರಿಸಿ ಕೇಳಿಕೆಯಾ

ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ (2 - 51)

ಎಂದು ಬದಗನಿಗೆ ಅಮೃತಮತಿ ವಿಧೇಯಳಾಗಿದ್ದಳು. ಇತ್ತ ಯಶೋಧರನಿಂದಲೂ ತಿರಸ್ಕೃತಗೊಂಡು, ಬದಗನಿಂದಲೂ ಬಡಿಸಿಕೊಂಡ ಅಮೃತಮತಿಯು ಅಸಹಾಯಕತೆ ಮತ್ತು ತಿರಸ್ಕೃತ ಸ್ತ್ರೀ ಸಮಾಜದ ಪ್ರತಿನಿಧಿಯಾಗಿ ಕಂಡುಬರುತ್ತಾಳೆ.

ಯಲುರಾಜನ ಮಡದಿಯ ಸ್ಥಿತಿ ಅಮೃತಮತಿಯ ಸ್ಥಿತಿಯಷ್ಟು ಗಂಭೀರವಾಗಿಲ್ಲ ಮತ್ತು ತಿರಸ್ಕೃತವಾಗಿಲ್ಲ. ಶಿಷ್ಟ ಸಮಾಜದಲ್ಲಿರುವಷ್ಟು ಜಾತಿ, ಧರ್ಮ, ಅಧಿಕಾರ, ಅಂತಸ್ತಿನ ಪ್ರತಿಷ್ಠೆ ಬುಡಕಟ್ಟು ಸಮುದಾಯಗಳಲಿಲ್ಲ ಬುಡಕಟ್ಟು ಜನ ಇಲ್ಲವೇ ಜನಸಾಮಾನ್ಯರಲ್ಲಿ ಪ್ರತಿಷ್ಠೆಗಿಂತ ಜೀವನಪ್ರೀತಿ ಮುಖ್ಯವಾಗುತ್ತದೆ. ಆದ್ದರಿಂದಲೇ ಯಲುರಾಜನ ಮಡದಿ ಅಮೃತಮತಿಯಷ್ಟು ಅತಂತ್ರಳಾಗಲಿ, ಕ್ರೂರಿಯಾಗಲೀ ಆಗುವುದಿಲ್ಲ. ಅಮೃತಮತಿ ಮತ್ತು ಯಲುರಾಜನ ಮಡದಿ ಇಬ್ಬರಲ್ಲೂ ತಮ್ಮ ಕೃತ್ಯ ಗಂಡನಿಗೆ ತಿಳಿದರೆ ಕೊಂದಾನೆಂಬ ಭೀತಿಯ ಛಾಯೆ ಕಾಣುತ್ತದೆ. ಕವಿ ಜನ್ನ ಅಮೃತಮತಿಗೆ ಆತ್ಮಾವಲೋಕನಕ್ಕೆ ಆಸ್ಪದ ನೀಡಿಲ್ಲ ಬದಗನ ಮೇಲಿನ ಪ್ರೀತಿ, ವ್ಯಾಮೋಹ ತನ್ನ ಗಂಡನನ್ನೇ ಕೊಲ್ಲುವಷ್ಟು ಅವಳನ್ನು ಕ್ರೂರಿಯನ್ನಾಗಿಸುತ್ತದೆ. ಆದರೆ ಯಲುರಾಜನ ಮಡದಿ ಆತ್ಮಾವಲೋಕನದಿಂದ ತನ್ನ ತಪ್ಪಿಗೆ ಪಶ್ಚತ್ತಾಪ ಪಟ್ಟು ಕ್ಷಮೆಯಾಚಿಸುತ್ತಾಳೆ. ಅವಳ ಪ್ರೀತಿ ಕೊಲ್ಲುವಷ್ಟು ಅವನನ್ನು ಕಟುಕನನ್ನಾಗಿಸುವುದಿಲ್ಲ. ಬದಲಿಗೆ ಜೋಗಿ ಮತ್ತು ರಾಣಿಯರ ಸುಂದರವಾದ ಬದುಕಿಗೆ, ಸುಖ ಬಾಳ್ವೆಗೆ ಅನುವು ಮಾಡಿಕೊಡುತ್ತದೆ.

ಮನುಷ್ಯರು ಸಹಜವಾಗಿ ತಮ್ಮಿಂದ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಅಸಹಾಯಕ ಸ್ಥಿತಿ ತಲುಪಿದಾಗಲೇ ಬ್ರಹ್ಮಲಿಖಿತ ಅಥವಾ ಹಣೆಬರಹ ಎಂಬ ಧೋರಣೆ ತಾಳುವುದು. ಯಲುರಾಜ ಮಡದಿಯ ಕೃತ್ಯವನ್ನು ಹಣೆಬರಹದ ನೆಪವೊಡ್ಡಿ ಒಪ್ಪಿಕೊಳ್ಳುತ್ತಾನೆ. ರಾಣಿಯ ಪ್ರೀತಿ ಯಲುರಾಜನನ್ನು ಅಷ್ಟೊಂದು ಅಸಹಾಯಕನನ್ನಾಗಿಸಿತ್ತೇ? ಯುದ್ಧದ ಕಾರಣದಿಂದ ದೂರ ಸರಿದಿದ್ದ ಗಂಡನ ತಾತ್ಕಾಲಿಕ ಅನುಪಸ್ಥಿತಿಯಲ್ಲಿ ಜೋಗಿಯ ಕಲೆಗೆ ಮನಸೋತು ಅವನೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಶಾಶ್ವತವಾಗಿ ಗಂಡನಿಂದ ದೂರ ಬರುವ ರಾಣಿಯ ನಿರ್ಧಾರದಿಂದ ಇಂದಿನ ಸಮಾಜಕ್ಕೆ ನಾಟಕಕಾರರು ಹೇಳಲು ಹೊರಟಿರುವುದಾದರೂ ಏನನ್ನು?

ಪ್ರಸ್ತುತ ನಾಟಕದಲ್ಲಿ ಪ್ರೀತಿಯ ಮೂರು ಆಯಾಮಗಳನ್ನು ಕಾಣಬಹುದು. ಒಂದು ಜೀವಕ್ಕೆ ಜೀವವಾಗಿ ಪ್ರೀತಿಸುತ್ತಿದ್ದ ವ್ಯಕ್ತಿಯಿಂದಲೇ ಜೀವನೋತ್ಸಾಹ ಕುಂದಿ, ಜಿಗುಪ್ಸೆ ಮೂಡಿದಾಗ. ಇನ್ನೊಂದು ಬದುಕನ್ನು ಕಟ್ಟಿಕೊಂಡು ಜೀವನ ಪ್ರೀತಿಯನ್ನು  ಉಳಿಸಿಕೊಂಡ ರಾಣಿಯ ಪ್ರೀತಿ. ಎರಡು ಗಾಢವಾಗಿ ಪ್ರೀತಿಸುತ್ತಿದ್ದ ಮಡದಿ ತನ್ನಿಂದ ದೂರವಾಗಿ ಬೇರೆಯವರೊಂದಿಗೆ ಬದುಕುತ್ತಿದ್ದಾಗಲೂ ಅವರನ್ನು ಶಿಕ್ಷಿಸದೇ ಬದುಕಲು ಬಿಟ್ಟು, ರಾಣಿಯ ನೆನಪಲ್ಲೇ ಜೀವನ ಸವೆಸುವ ರಾಜನ ಪ್ರೀತಿ. ಮೂರು ಇರುವಷ್ಟರಲ್ಲಿಯೇ ನಂಬಿ ಬಂದ ರಾಣಿಯ ನಂಬಿಕೆಯನ್ನು ಸುಳ್ಳಾಗಿಸದೇ ಕೊನೆವರೆಗೂ ನೆಮ್ಮದಿಯಿಂದ ನೋಡಿಕೊಳ್ಳುವ ಜೋಗಿಯ ಪ್ರೀತಿ. ಈ ಮೂರು ಆಯಾಮಗಳಲ್ಲಿ ಜೀವನ ಪ್ರೀತಿಯ ಅನಂತತೆಯನ್ನು ಮತ್ತು ಪ್ರೀತಿ ಬದುಕನ್ನು ಬದಲಾಯಿಸುವ ರೀತಿಯನ್ನು ಕಾಣಬಹುದಾಗಿದೆ.

ಜನಪದ ಮೂಲದಿಂದ ಮೂಡಿ ಬಂದ ಮತ್ತೊಂದು ನಾಟಕ ‘ಸಂಗ್ಯಾಬಾಳ್ಯ’ ಇಲ್ಲಿ ಸಂಗ್ಯಾ ತನ್ನ ಊರಿನ ಸಾಹುಕಾರ ವೀರಣ್ಣ ಶೆಟ್ಟಿಯ ಮಡದಿ ಗಂಗಾಳನ್ನು ಮೋಹಿಸಿ ಅವಳನ್ನು ಪಡೆಯುವಲ್ಲಿ ಸಫಲನಾಗುತ್ತಾನೆ. ಮದುವೆಯಾಗಿ ಆರು ವರ್ಷಗಳಾದರೂ ಮಕ್ಕಳಾಗದಿದ್ದರಿಂದ ತಾಯಿಯಾಗಬೇಕೆಂಬ ಹೆಣ್ಣಿನ ಸಹಜ ಬಯಕೆ ಗಂಗಾ ಸಂಗ್ಯಾನನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಇದನ್ನು ತಿಳಿದ ಅವಳ ಗಂಡ ಮತ್ತು ಮೈದುನರು ಕುಪಿತರಾಗಿ ಗಂಗಾಳನ್ನು ತವರಿಗೆ ಅಟ್ಟಿ, ಕುತಂತ್ರದಿಂದ ಸಂಗ್ಯಾನನ್ನು ಅತೀ ಕ್ರೂರವಾಗಿ ಕೊಚ್ಚಿ ಕೊಲ್ಲುತ್ತಾರೆ. ಇದೊಂದು ಜನಪದ ಮೂಲದ ಮರ್ಯಾದಗೇಡು ಹತ್ಯೆಯಾಗಿದೆ. ದ್ವೇಷ, ಹಿಂಸೆ, ಅಮಾನವೀಯತೆಯಿಂದ ಎಲ್ಲರ ಜೀವನವೂ ನಾಶದೆಡೆ ಸಾಗುತ್ತದೆ. ಇಂದಿನ ಸಮಾಜದಲ್ಲೂ ಇಂತಹ ಅನೇಕ ಪ್ರಕಣಗಳನ್ನು ನಾವು ಕಾಣುತ್ತೇವೆ. ತೆಲಂಗಾಣದ ಪ್ರಣವ್ ಪ್ರಕರಣ ಇಂತಹ ಮರ್ಯಾದಗೇಡು ಹತ್ಯೆಗೆ ತಾಜಾ ಉದಾಹರಣೆಯಾಗಿದೆ. ಆದರೆ ಅದೇ ಜನಪದ ಮೂಲದಿಂದ ಮೂಡಿ ಬಂದ ಪ್ರಸ್ತುತ ನಾಟಕ ಇಂತಹ ಪ್ರಕರಣಗಳಿಗೆ ತದ್ವಿರುದ್ಧವಾಗಿ ಪ್ರೀತಿ, ಅಹಿಂಸೆ, ಮಾನವೀಯ ಮೌಲ್ಯಗಳಿಂದ ಮನುಷ್ಯನನ್ನು ಜೀವನ ಪ್ರೀತಿಯೆಡೆಗೆ ಕೊಂಡೊಯ್ಯುತ್ತದೆ.

ಸಮಾರೋಪ:

ಪ್ರಸ್ತುತ ನಾಟಕದಲ್ಲಿ ನಾಟಕಕಾರರು ಸೈನಿಕರಿಂದ ಈ ರೀತಿಯ ಮರ್ಯಾದಗೇಡು ಹತ್ಯೆಯ ವಿಷಯವನ್ನು ಪ್ರಸ್ತಾಪಿಸಿದರೂ ಅದನ್ನು ವಿರೋಧಿಸುವ ಎಲುರಾಜನ ಮೂಲಕ ಜೀವನ ಪ್ರೀತಿ, ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ್ದಾರೆ. ಜಾತಿ, ಅಂತಸ್ತು, ಪ್ರತಿಷ್ಠೆ, ಮರ್ಯಾದೆಗಳಿಗಿಂತ ಮನುಷ್ಯನ ಜೀವ ಮತ್ತು ಅವನು ತಾನು ಬದುಕಲು ಆಯ್ದುಕೊಂಡ ಮಾರ್ಗವನ್ನು ಒಪ್ಪಿ, ಅವರ ಪಾಡಿಗೆ ಅವರನ್ನು ಬದುಕಲು ಬಿಡುವುದೇ ಮನುಷ್ಯತ್ವ. ಜೀವಕ್ಕಿಂತ ಮಿಗಿಲಾದದ್ದು ಕುಲಜಾತಿಗಳಾಗಲಿ, ಪ್ರತಿಷ್ಠೆ, ಅಂತಸ್ತುಗಳಾಗಲೀ ಮುಖ್ಯವಲ್ಲ ಎಂಬುದನ್ನು ನಾಟಕ ಪ್ರಚುರಪಡಿಸುತ್ತದೆ. ಜೊತೆ ಜೊತೆಯಲ್ಲೇ ವರ್ತಮಾನದ ಮರ್ಯಾದ ಗೇಡು ಹತ್ಯೆಯ ಪ್ರತಿರೋಧದ ನೆಲೆಯಲ್ಲಿ ನಾಟಕವನ್ನು ಅರ್ಥೈಸಿಕೊಳ್ಳಬಹುದು. 

ಆಕರ ಗ್ರಂಥಗಳು:

  1. ಯಶೋಧರ ಚರಿತೆ : ಸಂ:ಕ.ವೆಂ.ರಾಘವಾಚಾರ್. 4ನೇ ಮುದ್ರಣ-1952, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
  2. ಯಲುರಾಜನ ಮಡದಿ- ಉತ್ತರ ಕನ್ನಡ ಜಿಲ್ಲೆಯ ಹೊಲೆಯ ಪದ: ಸಂ: ಎಲ್.ಆರ್.ಹೆಗಡೆ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳಳೂರು.
  3. ಯಲುರಾಜನ ಮಡದಿ- ನಾಟಕ: ರಚನೆ: ಡಾ.ರಾಜಪ್ಪ ದಳವಾಯಿ. 2014 ಅಪ್ರಕಟಿತ.

 


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal