Tumbe Group of International Journals

Full Text


ಧಾರ್ಮಿಕತೆಗಿಂತ ಭಿನ್ನವಾದ ಪ್ರಾದೇಶೀಕ ದೀಪಾವಳಿ

ಬಾಳಕೃಷ್ಣ ನಾಯಿಕ

ಸಂಶೋಧನಾ ವಿದ್ಯಾರ್ಥಿ,

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ,

ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗವಿ.

  •    9844594471

ಪ್ರಸ್ತವನೆ:

ಬಡತನವನ್ನು ಹೊತ್ತುಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಜನ ದೀಪಾವಳಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ನಮ್ಮ ಊರಿನ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಈ ಹಬ್ಬವನ್ನು ಐದಾರು ದಿನ ಆಚರಿಸುತ್ತಾರೆ. ಮೊದಲನೆಯ ದಿನ ಎತ್ತಿನ ಸಗಣಿಯಿಂದ ಐದೈದು ಗುಳ್ಳವಗಳನ್ನು ಮಾಡಿ ಅವಕ್ಕೆ ಚಂಡು ಹುವಿನಿಂದ ಶೃಂಗರಿಸಿ ಬಾಗಿಲ ಮುಂದೆ ಇಟ್ಟು ಅವುಗಳಿಗೆ ಅನ್ನದಲ್ಲಿ ಮೊಸರು ಸೇರಿಸಿ ಎರಡು ಹೊತ್ತು ನೈವೇದ್ಯ ಮಾಡುತ್ತಾರೆ. ಮೊದಲನೆ ದಿನ ಸಂಜೆ ಎಲ್ಲರ ಮನೆಯಲ್ಲಿಯೂ ಹೋಳಿಗೆ ಊಟ ಇರುತ್ತದೆ. ಮೊದಲು ಮಾಡಿದ ಐದು ಹೋಳಿಗೆಗಳು ಗುಳ್ಳವನ ಪೂಜೆಗೆ ಮೀಸಲು ನಂತರ ಮಾಡಿದ ಹೋಳಿಗೆಗಳು ತಮ್ಮ ಹೊಟ್ಟೆಗೆ ಎಷ್ಟು ಬೇಕೊ ಅಷ್ಟು ಮಾಡಿಕೊಳ್ಳುತ್ತಾರೆ. ಮತ್ತೆ ಮೂರು ಹೋಳಿಗೆ, ಏಳು ಹೋಳಿಗೆ ನೈವೇದ್ಯ ಮಾಡುವ ಹಾಗಿಲ್ಲ ಅದು ಅಪಶಕುನ. ಐದು, ಒಂಭತ್ತು, ಹನ್ನೊಂದು ಇವುಗಳು ಮಾತ್ರ ಶುಭ ಸಂಖ್ಯೆ. ಇವರ ಪ್ರಕಾರ ಮೂರು ಮತ್ತು ಏಳನ್ನು ಅಂಕಿಗಳ ಪಟ್ಟಿಯಿಂದ ತೆಗೆದು ಹಾಕಬೇಕಾಗುತ್ತದೆ.

ಕಿ ವರ್ರ್ಡ:

ಗುಳ್ಳವ್ವ, ಮೊಂಡು ದೈರ್ಯ, ಉತ್ರಾನಿ ಗಿಡ, ನೈವೇದ್ಯ ಕಲ್ಲುಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಮೋಟರುಗಾಡಿ.

            ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಅದೇ ತಾಲ್ಲೂಕಿನ ಹಾಲಭಾವಿ ಎಂಬುದು ಪುಟ್ಟ ಹಳ್ಳಿ. ರಾಜಕೀಯವಾಗಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ. ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಇಲ್ಲಿಯವರೆಗೆ ಒಬ್ಬ ಕೇವಲ ಒಂದು ಕಸ ಗುಡಿಸುವ ನೌಕರಿಗೆ ಸೇರಿಕೊಂಡ ಇತಿಹಾಸವಿಲ್ಲ. ಇನ್ನು ಕೆ ಎ ಎಸ್, ಐ ಎ ಎಸ್ ಹಾಗೆಂದರೇನು? ಎಂದು ಕೇಳುವ ಸ್ಥಿತಿಯಲ್ಲಿ ಜನರು ಬದುಕುತ್ತಿದ್ದಾರೆ. ಈ ಹಳ್ಳಿಗಾಡಿನ ಜನರು ಶೈಕ್ಷಣಿಕವಾಗಿ ತುಂಬ ಹಿಂದುಳಿದಿದ್ದಾರೆ. ಯಾರಾದರು ಅಧಿಕಾರಿಗಳು ಊರೊಳಗೆ ಕಾರಿನಲ್ಲಿ ಬಂದರೆ ಅದನ್ನು ನೋಡಿ ಕೆಲವರು ಭಯದಿಂದ ಓಡಿ ಹೋಗುತ್ತಾರೆ. ಕೆಲವು ಪುಟ್ಟ ಮಕ್ಕಳು ಕಾರನ್ನು ನೋಡಿ ನಮ್ಮ ಊರಿಗೆ ಮೋಟುರ ಬಂತೆಂದು ಕುಷಿಯಾಗಿ ಕುಣಿದಾಡಿದರೆ, ಕೆಲವು ಮಕ್ಕಳು ಮುಟ್ಟಿ ಮುದ್ದಾಡುತ್ತವೆ. ಈ ಮಕ್ಕಳ ಸ್ಥಿತಿ ಭಾರತದ ಬಡತನವನ್ನು ಮನವರಿಕೆ ಮಾಡಿಕೊಡುತ್ತದೆ. ಅದೇನೆ ಇರಲಿ ಇಷ್ಟೆಲ್ಲ ಬಡತನವನ್ನು ಹೊತ್ತುಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಇವರು ದೀಪಾವಳಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ನಮ್ಮ ಊರಿನ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಈ ಹಬ್ಬವನ್ನು ಐದಾರು ದಿನ ಆಚರಿಸುತ್ತಾರೆ. ಮೊದಲನೆಯ ದಿನ ಎತ್ತಿನ ಸಗಣಿಯಿಂದ ಐದೈದು ಗುಳ್ಳವಗಳನ್ನು ಮಾಡಿ ಅವಕ್ಕೆ ಚಂಡು ಹುವಿನಿಂದ ಶೃಂಗರಿಸಿ ಬಾಗಿಲ ಮುಂದೆ ಇಟ್ಟು ಅವುಗಳಿಗೆ ಅನ್ನದಲ್ಲಿ ಮೊಸರು ಸೇರಿಸಿ ಎರಡು ಹೊತ್ತು ನೈವೇದ್ಯ ಮಾಡುತ್ತಾರೆ. ಮೊದಲನೆ ದಿನ ಸಂಜೆ ಎಲ್ಲರ ಮನೆಯಲ್ಲಿಯೂ ಹೋಳಿಗೆ ಊಟ ಇರುತ್ತದೆ. ಮೊದಲು ಮಾಡಿದ ಐದು ಹೋಳಿಗೆಗಳು ಗುಳ್ಳವನ ಪೂಜೆಗೆ ಮೀಸಲು ನಂತರ ಮಾಡಿದ ಹೋಳಿಗೆಗಳು ತಮ್ಮ ಹೊಟ್ಟೆಗೆ ಎಷ್ಟು ಬೇಕೊ ಅಷ್ಟು ಮಾಡಿಕೊಳ್ಳುತ್ತಾರೆ. ಮತ್ತೆ ಮೂರು ಹೋಳಿಗೆ, ಏಳು ಹೋಳಿಗೆ ನೈವೇದ್ಯ  ಮಾಡುವ ಹಾಗಿಲ್ಲ ಅದು ಅಪಶಕುನ. ಐದು, ಒಂಭತ್ತು, ಹನ್ನೊಂದು ಇವುಗಳು ಮಾತ್ರ ಶುಭ ಸಂಖ್ಯೆ. ಇವರ ಪ್ರಕಾರ ಮೂರು ಮತ್ತು ಏಳನ್ನು ಅಂಕಿಗಳ ಪಟ್ಟಿಯಿಂದ ತೆಗೆದು ಹಾಕಬೇಕಾಗುತ್ತದೆ. ಇನ್ನೊಂದು ವಿಶೇಷವೆಂದರೆ ಕೆಲವರ ಮನೆಗಳಲ್ಲಿ ಮೂರು ದಿನಗಳವರೆಗೆ ಭೂಮಿಯೊಳಗೆ ಯಾವುದೆ ಕೆಲಸ ಮಾಡುವುದಿಲ್ಲ. ತರಕಾರಿ, ಹೂವು ಹಣ್ಣು ಯಾವುಗಳನ್ನು ಪುಟ್ಟ ಮಕ್ಕಳು ಸಹಿತ ಹರಿಯದ ಹಾಗೆ ಪಾಲಕರು ತಮ್ಮ ಮಕ್ಕಳನ್ನು ಕಾವಲು ಕಾಯುತ್ತಾರೆ. ಮಕ್ಕಳು ಏಕೆಂದು ಪ್ರಶ್ನಿಸಿದರೆ ಅವುಗಳನ್ನು ಹರಿದರೆ ನಿಮಗೆ ಸಾವು ಖಚಿತವೆಂದು ಹೆದರಿಸುತ್ತಾರೆ. ಗುಳ್ಳವ್ವಗಳಿಗೆ ಅಲಂಕರಿಸಲು ಚಂಡು ಹೂವು ಬೇಕಾದರೆ ಅತ್ತೆಯ ಮಕ್ಕಳಿಂದ ಹರಿದು ತರಲು ಹೇಳುತ್ತಾರೆ. ಆದ್ದರಿಂದ ನಾವು ಅವರ ಜೊತೆ ಹೋಗುತ್ತಿದ್ದೆವು. ಮನಸ್ಸು ತಡೆಯಬೇಕಲ್ಲ! ಹೋದ ಬಳಿಕ ಹೂವುಗಳನ್ನು ನೋಡಬಹುದು ಅತ್ತೆಯ ಮಕ್ಕಳು ಹರಿದು ಬುಟ್ಟೆಯೊಳಗೆ ಹಾಕುವವರೆಗೆ ಮುಟ್ಟುವ ಹಾಗಿಲ್ಲ. ಮುಟ್ಟಿದರೆ ಮನೆಯಲ್ಲಿ ಅವ್ವ ಮೊದಲೆ ತಾಕಿತ್ತು ಮಾಡಿ ಕಳಿಸಿದ್ದಾಳೆ ಸಾವು ಕಚಿತವೆಂದು. ಸಾವು ಎಂದರೆ ಯಾರು ತಾನೆ ಹೆದರುವುದಿಲ್ಲ ಹೇಳಿ! ಅದರೂ ಮೊಂಡು ದೈರ್ಯ ಮಾಡಿ ಒಂದೆರಡು ಹೂವು ಹರಿದು ಬುಟ್ಟೆಯೊಳಗೆ ಹಾಕಿಕೊಳ್ಳುತ್ತಿದ್ದೇವು. ಹಬ್ಬ ಮುಗಿದ ನಂತರ ಸಂಜೆ ದೇವರ ಗುಡಿಯ ಅವಾರದೋಳಗೆ ಚಿಕ್ಕವರ ಸಭೆ ಸೇರಿದಾಗ ಸಾಹುಕಾಶವಾಗಿ ಒಬ್ಬೋಬ್ಬರ ಬಾಯಿಂದಲು ಸತ್ಯ ಹೊರ ಬರುತಿತ್ತು. ಮನೆಯಲ್ಲಿ ಹೇಳುವುದೆಲ್ಲ ಸುಳ್ಳು ಚಂಡು ಹೂವು ನಾನು ಹರಿದಿದ್ದೆ ಆದರೆ ನನಗೆ ಏನು ಆಗಿಲ್ಲವಲ್ಲ ಎಂದು ನಗುತ್ತ ಗೆಳೆಯರೆಲ್ಲ ಸೇರಿ ಹರಟೆ ಹೊಡೆಯುತ್ತಿದ್ದೆವು. ಇಷ್ಟಕ್ಕೆ ಸಾಮಾದಾನವಾಗದೆ ನಮ್ಮ ಮನಸ್ಸಿನಲ್ಲಿರುವ ಸಂಸೆಯನ್ನು ನಿವಾರಿಸಿಕೊಳ್ಳಲು ಹಬ್ಬದಲ್ಲಿ ಹೂವೇಕೆ ಹರಿಯಬಾರದೆಂದು ಮನೆಯಲ್ಲಿ ಹಿರಿಯರನ್ನು ಕೇಳಿದರೆ ಅವರು ಅದಕ್ಕೆ ಹಿಂದೆ ನಡೆದು ಹೋದ ಕಥೆ ಹೇಳುತ್ತಾರೆ. ನಮ್ಮ ಮನೆತನದಲ್ಲಿ ಒಬ್ಬ ಒಂದು ಹುಡುಗಿಯನ್ನು ಪ್ರೀತಿಸುತಿದ್ದ. ಈ ಕಾಲದಲ್ಲಿ ಹೇಗೆ ಹುಡುಗಿಯರು ಐಸ್ ಕ್ರಿಮು, ಪಕೋಡ, ಪಾನಿಪುರಿ ಆ ಜೂಸು ಈ ಜೂಸು  ಹೀಗೆ ಹುಡುಗರ ಮನೆಮುರಿಯುವುದಕ್ಕಾಗಿ ಏನೇನು ಬೇಡುತ್ತಾರೋ ಹಾಗೆ ಅವಳು ಕೂಡ ತನ್ನ ಪ್ರೀಯಕರನ ಹತ್ತಿರ ಅವಳಿಗೆ ಇಷ್ಟವಾದ ಕುಂಬಳ ಕಾಯಿ ಕೇಳುತ್ತಾಳೆ. ಅವನು ತನ್ನ ಪ್ರೀಯಸಿಯ ಆಸೆ ಈಡೇರಿಸುವ ಸಲುವಾಗಿ ಮತ್ತೊಬ್ಬರ ಹೊಲದಲ್ಲಿ ಕುಂಬಳ ಕಾಯಿ ಕಳುವು ಮಾಡಿ ತರಬೇಕೆಂದು ಹೋದಾಗ ಆ ಬಳ್ಳಿಯಲ್ಲಿರುವ ವಿಷ ಸರ್ಪವೊಂದು ಅವನ ಕಾಲಿಗೆ ಕಚ್ಚಿ ಅವನು ಅಲ್ಲಿಯೆ ಮರಣ ಹೊಂದಿದನೆಂಬ ಕತೆಯನ್ನು ಹೇಳುತ್ತಾರೆ. ಅದಕ್ಕಾಗಿ ಮೂರು ದಿನಗಳ ಕಾಲ ದೀಪಾವಳಿಯಲ್ಲಿ ಯಾರೂ ಯಾವ ಕೆಲಸವನ್ನು ಮಾಡುವುದಿಲ್ಲ. ಎರಡನೆ ದಿನ ಬಾಗಿಲ ಮುಂದೆ ಒಂದು ಕಡೆ ಐದು ಒಂದು ಕಡೆ ಏಳು ಗುಳ್ಳವಗಳನ್ನು ಇಡುತ್ತಾರೆ. ಮೂರನೆಯ ದಿನ ಒಂದು ಕಡೆ ಏಳು ಒಂದು ಕಡೆ ಒಂಭತ್ತು ಗುಳ್ಳವಗಳನ್ನು ಇಟ್ಟು ಅದೆ ಸಂಜೆ ಅವೆಲ್ಲವುಗಳನ್ನು ಮುರಿದು ಅದೇ ಸಗಣಿಯಲ್ಲಿ ಹೊಸ ಸಗಣಿ ಸೇರಿಸಿ ದೊಡ್ಡ ದೊಡ್ಡ ಗುಳ್ಳವಗಳನ್ನು ಮಾಡುತ್ತಾರೆ. ಅವುಗಳಿಗೆ ಚಂಡು ಹೂವಿನಿಂದ ಶೃಂಗರಿಸಿ; ಅವುಗಳ ತಲೆಯ ಮೇಲೆ ಉತ್ರಾನಿ ಗಿಡದ ತೆನೆ, ಹೊನ್ನೆ ಗಿಡದ ತೆನೆ, ಚೌಳಿ ಕಾಯಿಯಿಂದ ಚುಚ್ಚುತ್ತಾರೆ. ಮನೆಯೊಳಗೆ ದನಕರುಗಳು ಬರುವ ದಾರಿಯಲ್ಲಿ ಕಲಿಸಿದ ಸುಣ್ಣದಲ್ಲಿ ಕೈ ಬೆರಳು ಎದ್ದಿಕೊಂಡು ಆ ಬೆರಳಿನಿಂದ ಕುರಿ ಹೆಜ್ಜೆ ಹಾಗೂ ಎರಡು ಮುಷ್ಟಿಯಿಂದ ದನದ ಹೆಜ್ಜೆಗಳನ್ನು ಮಾಡುತ್ತಾರೆ. ನಂತರ ಎಲ್ಲ ಗುಳ್ಳವ್ವಗಳನ್ನು ಒಂದು ಕಡೆ ಸೇರಿಸಿ ಒಂದು ಗುಳ್ಳವ್ವಿನ ಕೊರಳಗೆ ತಾಳಿ ಹಾಕುತ್ತಾರೆ. ಪಾವಿನ ತುಂಬ ಕಾಳು ತುಂಬಿ ಅದರ ಜೊತೆಗೆ ಮದಿಯಿಂದ ಮಾಡಿದ ಹಿಡಿಯೊಂದನ್ನು ಗುಳ್ಳವ್ವನ ಪಕ್ಕದಲ್ಲಿ ಇಟ್ಟು ಪೂಜೆ ಮಾಡಿ ಐದು ಜನ ಸೇರಿ ಅಕ್ಕಿ ಕಾಳು ಒಗೆದು ಮನೆಯ ಮೇಲೆ ಇಡುತ್ತಾರೆ. ಭವಿಷ್ಯ ಕೆಲಸವಿಲ್ಲದವರು ಇವುಗಳನ್ನು ಮಾಡುತ್ತಾರೆ. ಸುಂದರವಾಗಿರುವ ಮನೆಯ ಮೇಲೆ ಸಗಣಿಯಿಂದ ಮಾಡಿದ ಗುಳ್ಳವ್ವಗಳನ್ನು ಇಟ್ಟರೆ ಮನುಷ್ಯ ಉದ್ದಾರವಾಗುತ್ತಾನೆಯೆ! ಏನು ಹಬ್ಬಗಳೊ. ಗುಳ್ಳವ್ವಗಳನ್ನು ಮನೆ ಮೇಲೆ ಇಟ್ಟ ನಂತರ ಊರವರೆಲ್ಲ ಸೇರಿ ಮಡಿದವರ ಕಲ್ಲು ಪೂಜೆ ಮಾಡುತ್ತಾರೆ. ಅದಕ್ಕೆ ಗುಡ್ಡಿ ಪೂಜೆ ಎಂತಲೂ ಕರೆಯುತ್ತಾರೆ. ಊರಲ್ಲಿ ಎರಡು ಬಣಗಳಿವೆ. ಇವರೆಲ್ಲ ಅಣ್ಣ ತಮ್ಮಂದಿರೆ ಆದರೆ ನಡುವೆ ಯಾವುದೊ ಕಾರಣಕ್ಕೆ ಜಗಳವಾಡಿ ಒಡೆದು ಎರಡು ಬಣಗಳಾಗಿವೆ. ಒಂದು ಬಣದವರಿಗೆ ಕಟ್ಟೀ ಮನೆಯವರೆಂದು ಕರೆಯುತ್ತಾರೆ. ಇನ್ನೊಂದು ಬಣದವರಿಗೆ ಬೂತನವರು ಎನ್ನುತ್ತಾರೆ. ವಿಶೇಷವೆಂದರೆ ಜೀವ ಇರುವವರೆಗೂ ಎರಡು ಬಣದವರು ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಇರುತ್ತಾರೆ. ಅದರೆ ಎರಡು ಬಣದವರಲ್ಲಿ ಯಾರೆ ಮರಣ ಹೊಂದಿದರೂ ಇವತ್ತಿನವರೆಗೂ ಅವರ ಶವವನ್ನು ಇವರು ಮುಟ್ಟುವುದಿಲ್ಲ ಇವರ ಶವವನ್ನು ಅವರು ಮುಟ್ಟುವುದಿಲ್ಲ. ಮಣ್ಣು ಮಾಡಲು ಹೋಗುತ್ತಾರೆ. ಶವದ ಮೇಲೆ ಮಣ್ಣು ಹಾಕುತ್ತಾರೆ. ಅವರ ಜೊತೆ ಇವರು ಅಳುತ್ತಾರೆ. ಆದರೆ ಶವ ಮಾತ್ರ ಮುಟ್ಟುವ ಹಾಗಿಲ್ಲ. ಅವರ ಕಥೆ ಏನೆ ಇರಲಿ ನಾವು ಮತ್ತೆ ಹಬ್ಬದ ಕಡೆಗೆ ಹೋಗೊಣ ದೀಪಾವಳಿ ಹಬ್ಬದಂದು ಸತ್ತವರ ಹೆಸರಿನ ಕಲ್ಲುಗಳಿಗೆ ಪೂಜೆ ಮಾಡಲು ಎಲ್ಲರ ಮನೆಗೆ ಹೋಗಿ ಅಕ್ಕಿಯನ್ನು ಸಂಗ್ರಹ ಮಾಡಿ ಒಂದೇ ಕಡೆಗೆ ಅಡುಗೆ ಮಾಡಿ ಕಂಬಳ ಎಲೆಯಲ್ಲಿ ಆ ಕಲ್ಲುಗಳಿಗೆ ನೈವೇದ್ಯ ಮಾಡಿ ನಂತರ ಪಟಾಕಿ ಹಾರಿಸುವವರು ಪಟಾಕಿ ಹಾರಿಸುತ್ತಾರೆ ಬಂದೂಕಿನಿಂದ ಗುಂಡು ಹಾರಿಸುವವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ನಂತರ ಎಲ್ಲರು ಸೇರಿಕೊಂಡು ಅಲ್ಲಿಯೆ ಊಟ ಮಾಡುತ್ತಾರೆ. ಕಟ್ಟೀ ಮನೆ ಬಣದವರು ಕುಂಬಳ ಕಾಯಿ ನೈವೇದ್ಯ ಮಾಡಿದರೆ, ಬೂತನವರ ಬಣದವರು ಎಮ್ಮೆಯ ಮಾಂಸವನ್ನು ನೈವೇದ್ಯ ಮಾಡುತ್ತಾರೆ. ಕನಕದಾಸರ ‘ರಾಮದಾನ್ಯ ಚರಿತೆ’ಯಲ್ಲಿ ಹೇಗೆ ಅಕ್ಕಿ ಶ್ರೇಷ್ಠ ರಾಗಿ ಶ್ರೇಷ್ಠ ಎಂದು ವಾದನಡೆಯುತ್ತದೆಯೊ ಹಾಗೆ ಇವರಲ್ಲಿಯು ವಾದ ನಡಿಯುತ್ತಿರುತ್ತವೆ. ಅವರು ಮಾಂಸ ಶ್ರೇಷ್ಠ ಎಂದು ಬೀಗಿದರೆ, ಇವರು ಕುಂಬಳಕಾಯಿ ಶ್ರೇಷ್ಠ ಎನ್ನುತ್ತಾರೆ. ಆದರೆ ಕುಂಬಳಕಾಯಿ ಮಾಂಸಹಾರಕಿಂತ ಶಕ್ತಿಯುತ ಆಹಾರ ಎನ್ನುವ ವೈಜ್ಞಾನಿಕ ಸತ್ಯ ಭವಿಷ್ಯ ಅವರಿಗೆ ಗೊತ್ತಿರಲಿಕಿಲ್ಲ. ಇದೆಲ್ಲವನು ಮುಗಿಸಿಕೊಂಡು ಮನೆಗೆ ಹೋಗಿ ಲಕ್ಷ್ಮೀ ಪೂಜೆ ಶುರುವಾಗುತ್ತದೆ. ಕೊಡಕ್ಕೆ ಸೀರೆಯುಡಿಸಿ ಲಕ್ಷ್ಮೀ ಪೋಟೋದ ಪಕ್ಕ ಇಟ್ಟು ಅದರ ಮುಂದೆ ಲೆಕ್ಕವಿಲ್ಲದಷ್ಟು ಹಣ್ಣು ಹಂಪಲಗಳು, ತರತರದ ಕಾಳುಗಳು, ಸಿಹಿ ಪದಾರ್ಥಗಳನ್ನು ಇಟ್ಟು ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ಪೂಜೆ ಮುಗಿದ ನಂತರ ತಮ್ಮ ತಮ್ಮ ಸಹೋದರರಿಗೆ ಸಹೋದರಿಯರು ಹನೆಗೆ ವಿಭೂತಿ ಹಚ್ಚಿ ಕುಂಕುಮವನ್ನು ಉದ್ದಗೆ ಕೊರೆದು ದೀಪ ಹಚ್ಚಿ ಆರತಿಯನ್ನು ಬೆಳಗಿ ಸಹೋದರರ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುತ್ತಾರೆ. ಇದಾದ ನಂತರ ಸಾಕಷ್ಟು ಪಟಾಕಿ ಹೊಡೆದು ಪ್ರಕೃತಿಯಲ್ಲಿ ಸಹಜವಾಗಿರುವ ವಾತಾವರಣ ಹಾಳು ಮಾಡಿ ಪುಟ್ಟ ಹೃದಯದ ಪಕ್ಷಿ ಸಂಕುಲದ ಸಾವಿಗೆ ಕಾರಣವಾಗುತ್ತಾರೆ.

ಸಮಾರೋಪ:

ಇಷ್ಟೆಲ್ಲ ಪೂಜೆ ಮಾಡುವ ಇವರು ಇವತ್ತಿಗೂ ಬಡತನದಿಂದ ಹೊರಬರಲು ಸಾದ್ಯವಾಗದೆ ಇರುವುದು ದುರಂತ!. ಇವೆಲ್ಲವನ್ನು ಮುಗಿಸಿಕೊಂಡು ಐದನೆಯ ದಿನ ಸುತ್ತಮುತ್ತಲಿನ ಹಳ್ಳಿಯವರೆಲ್ಲ ಸೇರಿ ಊರಲ್ಲಿರುವ ದೇವರ ಪಲ್ಲಕ್ಕಿಗಳನ್ನು ಹೊತ್ತುಕೊಂಡು ತಮಗೆ ಅಂಟಿಕೊಂಡಿರುವ ಶಾಪವನ್ನು ಕಳೆದುಕಳ್ಳಲು ಹೊಳಿಗೆ ಹೋಗುತ್ತಾರೆ. ಅಲ್ಲಿ ಮುಂಜಾನೆ ಎಂಟು ಗಂಟೆಯ ಮುನ್ನ ಎಲ್ಲರು ಹೋಗಿ ಸಾಲಾಗಿ ನಿಂತು ಪೂಜಾರಿಯಿಂದ ಹೊಟ್ಟೆ ಹಾಗೂ ಹಣೆಗೆ ಬಂಡಾರ ಬಳಿದುಕೊಂಡು; ಪೂಜಾರಿ ಕೊಡುವ ಕತ್ತಿಯಿಂದ ತಮ್ಮ ತಮ್ಮ ಶಕ್ತಿಗನುಗುಣವಾಗಿ ಮೇಲಕ್ಕೆ ಜಿಗಿಜಿಗಿದು ಜೋರಾಗಿ ಐದು ಬಾರಿ ಹೊಟ್ಟೆಯ ಮೇಲೆ ಕಡಿದುಕೊಳ್ಳುತ್ತಾರೆ. ಆದರೆ ಹೊಟ್ಟೆಯ ಬಾಗಕ್ಕೆ ಯಾವುದೆ ರೀತಿ ಗಾಯವಾಗುವುದಿಲ್ಲ. ಇದಕ್ಕೆ ಏನೊ ಬೇರೆ ವೈಜ್ಞಾನಿಕ ಕಾರಣವಿರಲೆಬೇಕು. ಏಕೆಂದರೆ ಆ ಕತ್ತಿಯನ್ನು ಅಡ್ಡವಾಗಿ ಹಿಡಿದುಕೊಂಡು ಹೊಟ್ಟೆಯ ಮೇಲೆ ಕಡಿದುಕೊಳ್ಳುವ ಬದಲು ಅದರ ತುದಿಯಿಂದ ಇರದುಕೊಂಡರೆ ಭವಿಷ್ಯ ಇವರನ್ನು ಯಾವ ದೆವರು ಬಂದು ಕಾಪಾಡುವುದಿಲ್ಲ ಕಾನುತ್ತದೆ. ಹೋಗಲಿ ಬಿಡಿ ಇವರ ದೇವರುಗಳ ಶಕ್ತಿಯ ಪರೀಕ್ಷೆ ನಮಗೆಕೆ ಬೇಕು. ಕತ್ತಿಯಿಂದ ಕಡಿದುಕೊಂಡ ನಂತರ ಎಲ್ಲರು ಹೊಳೆಗೆ ಹೋಗಿ ಸ್ನಾನ ಮಾಡಿ ಬಂದು ದೇವರಿಗೆ ಕೈ ಮುಗಿದು ಪ್ರಸಾದ ಸೇವನೆ ಮಾಡುತ್ತಾರೆ. ಇದಾದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತವೆ ಹಾಗು ಸಂಜೆ ಒಂದು ಸಾಮಾಜಿಕ ನಾಟಕವಿರುತ್ತದೆ ಅದನ್ನು ರಾತ್ರಿಯಲ್ಲ ನೋಡಿ ಮುಂಜಾನೆ ಎದ್ದು ಮತ್ತೆ ದೇವರಿಗೆ ಕೈ ಮುಗಿದು ಮರಳಿ ಮನೆಯ ಹಾದಿಯನ್ನು ಹಿಡಿಯುತ್ತಾರೆ. ಇದೆಲ್ಲವು ನಮ್ಮೂರಲ್ಲಿ ನಡೆಯುವ ದೀಪಾವಳಿ ಹಬ್ಬದ ವಿಶೇಷತೆಯಾಗಿದೆ.

ಆಕರ ಗ್ರಂಥಗಳು

  1. ಗುಜ್ಜಪ್ಪಾ ಗು. ನಾಯಿಕ, 82ವರ್ಷ, ನಾಯಕಜನಾಂಗ, ಹಾಲಬಾವಿ
  2. ಗುಂಡು ಅಜ್ಜ, 95ವರ್ಷ, ನಾಯಕಜನಾಂಗ, ನ್ಯೂ ವಂಟಮುರಿ
  3. ಹನುಮಂತ ಹಾ. ನಾಯಿಕ, 92ಚರ್ಷ, ನಾಯಕಜನಾಂಗ, ಹಾಲಬಾವಿ
  4. ಹಾಲಪ್ಪಾ ಗು. ನಾಯಿಕ, 94ವರ್ಷ, ನಾಯಕಜನಾಂಗ, ಹಾಲಬಾವಿ
  5. ಯಲ್ಲವ್ವ ಶ. ನಾಯಿಕ, 78ವರ್ಷ, ನಾಯಕಜನಾಂಗ, ಹಾಲಬಾವಿ


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal