ಆದಿಪುರಾಣ ಕೃತಿಯಲ್ಲಿ ಅಧಿಕಾರ ಮತ್ತು ಪ್ರಶ್ನೆಯ ನೆಲೆಗಳು.
ಲಕ್ಷ್ಮೀಕಾಂತ
ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ, ಜಾನಪದ ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276.
ಮೊ.ಸಂ 9900389923. Email-llakshmikantha960@gmail.com
ಪ್ರಸ್ತಾವನೆ.
‘ಅಧಿಕಾರ’ ಮತ್ತು ಅದಕ್ಕೆ ಎದುರಾಗಿ ಹುಟ್ಟುವ ‘ಪ್ರಶ್ನೆ’ಯ ಸಂದರ್ಭಗಳು ಯಾವಾಗಲೂ ಒಂದನ್ನು ಮತ್ತೊಂದು ಹಿಂಬಾಲಿಸುತ್ತವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಸಾಮಾಜಿಕ ಪರಿಸರ ಶ್ರೀಮಂತ-ಬಡವ, ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಉಳ್ಳವ-ಇಲ್ಲದವ ಎಂಬಂತಹ ಶ್ರೇಣೀಕೃತ ವ್ಯವಸ್ಥೆಯಿಂದ ಕೂಡಿರುವಂತಹದ್ದು. ಈ ರೀತಿಯ ಏರುಪೇರುಗಳ ಸಂದರ್ಭದಲ್ಲಿ ಅಧಿಕಾರದ ದರ್ಪ, ದೌರ್ಜನ್ಯ, ತಳವರ್ಗದವರ ಮೇಲಿನ ಶೋಷಣೆ, ಹಿಂಸೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹದ್ದೇ ಆಗಿದೆ. ಈ ಬಗೆಯ ದರ್ಪ, ದೌರ್ಜನ್ಯಗಳನ್ನು ಎದುರಿಸಿ ನಿಂತು ಅದರಲ್ಲಿ ವಿಫಲತೆ ಹಾಗೂ ಸಫಲತೆಗಳನ್ನು ಕಂಡವರೂ ಇಲ್ಲದಿಲ್ಲ. ಹಾಗೆಂದು ಅಧಿಕಾರ ಮತ್ತು ಯಜಮಾನಿಕೆಗಳನ್ನು ಪ್ರಶ್ನಿಸುವುದು ಕಷ್ಟ ಎನ್ನುವಂತೆಯೂ ಇಲ್ಲ. ಆಯಾಯ ಕಾಲಘಟ್ಟಗಳಲ್ಲಿ ವಿವಿಧ ಸ್ವರೂಪಗಳಲ್ಲಿ ಅಧಿಕಾರವನ್ನು ಪ್ರಶ್ನಿಸುವ, ಪ್ರತಿಭಟಿಸುವ ಹಾಗೂ ವಿರೋಧಿಸುವ ಸಂಗತಿಗಳು, ಹೋರಾಟಗಳು ನಡದೇ ಇವೆ. ಇದಕ್ಕೆ ನಮ್ಮ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಮತ್ತು ಚಾರಿತ್ರಿಕ ಘಟನಾವಳಿಗಳೇ ಸಾಕ್ಷಿಯಾಗಿವೆ.
‘ಅಧಿಕಾರ’ ಮತ್ತು ‘ಪ್ರಶ್ನೆ’ ಎಂಬ ಎರಡೂ ಪರಿಕಲ್ಪನೆಗಳು ಗಂಭೀರವಾದ ಅರ್ಥ ಪರಂಪರೆಗಳನ್ನು ಒಳಗೊಂಡಿರುವಂತಹವು. ಕ್ರಮವಾಗಿ ಈ ಎರಡೂ ಪರಿಕಲ್ಪನೆಗಳು ಆಳುವ ಮತ್ತು ಆಳಿಸಿಕೊಳ್ಳುವ, ನಿರ್ದೇಶಿಸುವ ಮತ್ತು ನಿಯಂತ್ರಿಸಿಕೊಳ್ಳುವ, ಕಾಯುವ ಮತ್ತು ಕರುಣಿಸುವಂತೆ ಬೇಡುವ ಪ್ರಕ್ರಿಯೆಗಳಲ್ಲಿ ಅಭಿವ್ಯಕ್ತವಾಗುತ್ತಿರುತ್ತವೆ ಎಂಬುದು ಗಮನಿಸತಕ್ಕ ಸಂಗತಿ.
ನಮಗೆ ತಿಳಿದಿರುವಂತೆ ಯಾರ ಬಳಿ ಅಧಿಕಾರ, ಹಣ, ಯಜಮಾನಿಕೆಗಳು ಇರುವುವೋ ಅಂತಹವರು ನಿಯಮಗಳನ್ನು ರೂಪಿಸುವವರಾಗುತ್ತಾರೆ. ಉಳಿದವರು ಅಂತಹವರ ಮಾತುಗಳನ್ನು ಶಿರಸಾ ವಹಿಸಿ ಕೇಳುತ್ತಾರೆ. ಅವರ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದು ಮನೆಯ ಯಜಮಾನಿಕೆ ಆಗಿರಬಹುದು, ಇಲ್ಲವೇ ರಾಜ್ಯಾಧಿಕಾರವಾಗಿರಬಹುದು. ಬೌದ್ಧಿಕ ಹಾಗೂ ಜ್ಞಾನ ಸಂಪತ್ತು ಮತ್ತು ಜೀವನ ಮೌಲ್ಯಗಳಾಗಿರಬಹುದು. ಈ ರೀತಿಯ ಪ್ರಾಬಲ್ಯಗಳ ಬಲ ಉಳ್ಳವರು ಇತರರ ಮೇಲೆ ತಮ್ಮ ಪ್ರಭಾವವನ್ನು ಬೀರುವ ಮತ್ತು ತಮ್ಮ ಆಲೋಚನೆಗಳನ್ನು ಹೇರುವ ಪ್ರಯತ್ನವನ್ನು ಮಾಡುತ್ತಾರೆ. ಆ ಮೂಲಕ ಅವುಗಳನ್ನು ಒಪ್ಪಿಕೊಳ್ಳುವಂತೆ ಹಾಗೂ ಪಾಲಿಸುವಂತೆ ಮಾಡುವ ಪ್ರಕ್ರಿಯೆಯೇ ಅಧಿಕಾರವಾಗಿರುತ್ತದೆ. ಇಂತಹ ಒತ್ತಾಯ ಪೂರ್ವಕವಾದ ಹೇರಿಕೆಯ ಒತ್ತಡದಿಂದ ಹೊರಬರಲು ಮಾಡುವ ಹೋರಾಟಗಳ ಪ್ರಯತ್ನದ ಭಾಗವಾಗಿ ಪ್ರಶ್ನೆಗಳು ಮೂಡುತ್ತವೆ. ಈ ಪ್ರಶ್ನೆಗಳು ಹದಗೆಟ್ಟ ವ್ಯವಸ್ಥೆಯನ್ನು ಕುರಿತು ಜನ ಸಾಮಾನ್ಯರು ಪ್ರತಿಭಟಿಸುವ ಕ್ರಮದಲ್ಲಿ, ಪ್ರಭುತ್ವವನ್ನು ವಿರೋಧಿಸಿ ಅಲ್ಲಿನ ಜನತೆ, ಮಹಿಳೆಯರು ವ್ಯಕ್ತಪಡಿಸುವ ಅಸಮಾಧಾನಗಳಲ್ಲಿ ಹಾಗೂ ಪುರುಷನ ನಿಲುವನ್ನು ಕುರಿತು ಮಹಿಳೆ ಎತ್ತುವ ತಕರಾರುಗಳಲ್ಲಿಯೂ ಸಹ ಪ್ರಶ್ನೆಯ ಮಾದರಿಗಳನ್ನು ಗುರುತಿಸಬಹುದಾಗಿದೆ.
ಪ್ರಾಚೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ರಚಿತವಾದ ಕೃತಿಗಳು ಸಹ ಈ ಅಂಶಗಳಿಂದ ಹೊರತಾಗಿಲ್ಲ. ಅವುಗಳಲ್ಲಿಯೂ ಅಧಿಕಾರ ಮತ್ತು ಅದರ ವಿರುದ್ಧವಾಗಿ ಒಡಮೂಡಿ ಬಂದಿರುವ ವಿರೋಧದ ಪ್ರಶ್ನೆಗಳನ್ನು ಕಾಣಬಹುದಾಗಿದೆ. ಶಿವಕೋಟ್ಯಾಚಾರ್ಯನ ‘ವಡ್ಡಾರಾಧನೆ’ಯಿಂದ ಹಿಡಿದು ಪಂಪನ ‘ಆದಿಪುರಾಣ’, ‘ವಿಕ್ರಮಾರ್ಜುನ ವಿಜಯ’, ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ್ಯ’, ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಮೊದಲಾದ ಕೃತಿಗಳಲ್ಲಿ ಅಧಿಕಾರವನ್ನು ಚಲಾಯಿಸುವ ಮತ್ತು ಅದನ್ನು ಪ್ರಶ್ನಿಸುವ ಅಂಶಗಳನ್ನು ಓದುಗರಿಗೆ ತಿಳಿಸಿಕೊಡುವ ಕ್ರಮಗಳನ್ನು ಕಾಣಬಹುದಾಗಿದೆ. ಅಧಿಕಾರ ಮತ್ತು ಪ್ರಶ್ನೆಗಳು ಪುರುಷ-ಪುರುಷರ ನಡುವೆ, ಪುರುಷ-ಪ್ರಭುತ್ವದ ನಡುವೆ, ಪುರುಷ-ಸ್ತ್ರೀಯರ ನಡುವೆ, ಪುರುಷ-ಸಮಾಜದ ನಡುವೆ, ಪ್ರಭುತ್ವ-ಸ್ತ್ರೀಯರ ನಡುವೆ ನಡೆಯುವುದು ಕಂಡುಬರುತ್ತದೆ.
ಈ ಅಂಶಗಳ ಮೂಲಕ ಹತ್ತನೇ ಶತಮಾನದ ಪ್ರಮುಖ ಕವಿ ಎನಿಸಿದ ಪಂಪನ ‘ಆದಿಪುರಾಣ’ ಕೃತಿಯಲ್ಲಿ ಕಂಡುಬರುವ ಅಧಿಕಾರ ಮತ್ತು ಪ್ರಶ್ನೆಗೆ ಸಂಬಂಧಿಸಿದ ಚರ್ಚೆಯ ನೆಲೆಗಳಿಗೆ ತೊಡಗಬಹುದಾಗಿದೆ. ನಮಗೆ ತಿಳಿದಿರುವಂತೆ ‘ಆದಿಪುರಾಣ’ವು ಆಗಮಿಕ ಕಾವ್ಯವಾಗಿದ್ದು, ಆದಿದೇವನ ಚರಿತೆಯನ್ನು ನಿರೂಪಿಸುತ್ತದೆ. ಇದರ ಜೊತೆಗೆ ಹಲವು ವ್ಯಕ್ತಿ, ವಸ್ತು ಹಾಗೂ ವಿಚಾರಗಳ ವಿವರಗಳು ಮುಪ್ಪುರಿಗೊಂಡಿವೆ. ಪುರುದೇವನ ಭವಾವಳಿಗಳನ್ನು ತಿಳಿಸುವ ಜೊತೆ ಜೊತೆಗೆ ಕಂಡುಬರುವ ಶ್ರೀಮತಿ-ವಜ್ರಜಂಘ, ಸ್ವಯಂಪ್ರಭೆ-ಲಲಿತಾಂಗ, ನೀಲಾಂಜನೆ, ಭರತ ಹಾಗೂ ಬಾಹುಬಲಿಯರ ವಿವರಗಳೂ ಸಹ ಓದುಗನ ಮನಸ್ಸನ್ನು ಸೆಳೆಯುತ್ತವೆ.
‘ಆದಿಪುರಾಣ’ ಧಾರ್ಮಿಕ ಕೃತಿಯಾಗಿದ್ದರೂ ಕೂಡ ಸಮಕಾಲೀನ ಸಮಾಜದಲ್ಲಿ ಘಟಿಸುತ್ತಿರುವ ಆಳುವ ವರ್ಗದ ಕ್ರೂರತೆ, ಕಪಟತನ, ದರ್ಪ, ದಾಷ್ಟ್ರ್ಯದ ಮನೋಭಾವನೆಗಳನ್ನು ತಿಳಿಸಿಕೊಡುತ್ತದೆ. ಇದರ ಜೊತೆಗೆ ಈ ವರ್ತನೆಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಹೋರಾಟ, ಪ್ರತಿಭಟನೆಗಳು ಹಾಗೂ ಮುಷ್ಕರಗಳಂತಹ ಪ್ರತಿರೋಧಗಳನ್ನು ಸಹ ನಮ್ಮ ಗಮನಕ್ಕೆ ತಂದುಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಅಧಿಕಾರ’ದ ಪರಿಕಲ್ಪನೆಯ ಹಿಡಿತಕ್ಕೆ ಸಿಕ್ಕ ವ್ಯಕ್ತಿಗಳು ತಮ್ಮ ಕಾರ್ಯ ಸಾಧನೆಗಾಗಿ ಎಲ್ಲ ರೀತಿಯ ಸಂಬಂಧಗಳ ಪರಿಧಿಯಿಂದ ಹೊರಬರುವುದು ಕಂಡುಬರುತ್ತದೆ. ಇದಕ್ಕೆ ಭರತ ಮತ್ತು ಬಾಹುಬಲಿಯರ ನಡುವೆ ಪ್ರಭುತ್ವ ಮತ್ತು ಅಧಿಕಾರದ ಒಡೆತನಕ್ಕಾಗಿ ನಡೆಯುವ ಸಂಘರ್ಷ ಹಾಗೂ ಯುದ್ಧಗಳೇ ಸಾಕ್ಷಿಯಾಗಿವೆ. ಜೊತೆಗೆ ಬಾಹುಬಲಿಯ ವರ್ತನೆಗಳಲ್ಲಿ ನಾವು ಅಧಿಕಾರವನ್ನು ಪ್ರಶ್ನಿಸುವ ಮನೋಧೋರಣೆಗಳನ್ನು ಗುರುತಿಸಬಹುದಾಗಿದ್ದು, ಪ್ರಭುತ್ವ ಮತ್ತು ಅದರ ಸಂಬಂಧವಾದ ಅಧಿಕಾರದ ನೆಲೆಗಳನ್ನು ಬಾಹುಬಲಿ ಸ್ಪಷ್ಟವಾಗಿ ವಿರೋಧಿಸುತ್ತಾನೆ.
ಈ ವಿವರಗಳನ್ನು ಮತ್ತಷ್ಟು ಸೂಕ್ಷ್ಮವಾದ ದೀರ್ಘ ವಿವೇಚನೆಗೆ ಒಳಪಡಿಸುವುದಾದರೆ ‘ಆದಿಪುರಾಣ’ ಕೃತಿಯಲ್ಲಿ ಅಧಿಕಾರ ಹಾಗೂ ಪ್ರಭುತ್ವದ ದಬ್ಬಾಳಿಕೆಗೆ ಒಳಗಾಗಿ ನಲುಗುವ ಸ್ಪಷ್ಟ ಉದಾಹರಣೆಯಾಗಿ ಸಿಗುವ ವ್ಯಕ್ತಿಗಳೆಂದರೆ ಅದು ‘ನಿರ್ನಾಮಿಕೆ’ ಎಂಬ ಹೆಣ್ಣು ಮಗಳು, ಆಕೆಯ ತಾಯಿ ಹಾಗೂ ಅಜ್ಜಿಯರು. ಗಂಭೀರ ಚರ್ಚೆ ಹಾಗೂ ಅಧ್ಯಯನಗಳಿಗೆ ಒಳಗಾಗಬೇಕಾಗಿದ್ದ ಈ ನಿರ್ನಾಮಿಕೆ ‘ಆದಿಪುರಾಣ’ದಲ್ಲಿ ಕಂಡುಬರುವ ಲಲಿತಾಂಗ-ಸ್ವಯಂಪ್ರಭೆ, ಶ್ರೀಮತಿ-ವಜ್ರಜಂಘ, ಭರತ-ಬಾಹುಬಲಿ ಹಾಗೂ ನೀಳಾಂಜನೆಯರಂತಹ ವ್ಯಕ್ತಿಗಳ ನಡುವೆ ಗೌಣವಾಗಿ ಕಣ್ಮರೆಯಾಗಿದ್ದಾಳೆ. ಹಾಗೆಯೆ ಅಧ್ಯಯನಗಳಿಂದಲೂ ಸಹ ಮರೆಮಾಚಲ್ಪಟ್ಟಿದ್ದಾಳೆ. ಪ್ರಭುತ್ವದಿಂದ ಈಕೆಯ ಕುಟುಂಬದ ಮೇಲೆ ನಡೆದ ದೌರ್ಜನ್ಯ, ಶೋಷಣೆ, ಅನ್ಯಾಯಗಳನ್ನು ಪ್ರಶ್ನಿಸುವುದಿರಲಿ, ಅವುಗಳನ್ನು ಚರ್ಚಿಸುವ ಅಥವಾ ಉಲ್ಲೇಖಿಸುವ ಗೊಡವೆಗೂ ಸಹ ನಮ್ಮ ಅಧ್ಯನಕಾರರು ಹೋಗದಿರುವುದು ನಮ್ಮ ಅಧ್ಯಯನಗಳ ದುರಂತವೇ ಸರಿ. ಇಂತಹ ನಿರ್ನಾಮಿಕೆಯ ಸ್ಥಿತಿಗತಿಗಳು ನಮಗೆ ಇಲ್ಲಿ ‘ಅಧಿಕಾರ’ದ ನೇರ ಹಿಡಿತಕ್ಕೆ ಸಿಲುಕಿ ನಲುಗಿರುವ ಸ್ಪಷ್ಟ ಉದಾಹರಣೆಯಾಗಿ ಕಂಡುಬರುತ್ತವೆ.
ನಿರ್ನಾಮಿಕೆಯ ವಿವರಗಳು ನಮಗೆ ‘ಆದಿಪುರಾಣ’ದ ತೃತೀಯಾಶ್ವಾಸದಲ್ಲಿ ಕಂಡುಬರುತ್ತವೆ. ತನ್ನ ಹಿಂದಿನ ಜನ್ಮದ ಪ್ರಿಯಕರನಾದ ಲಲಿತಾಂಗದೇವನನ್ನು ನೆನಪಿಸಿಕೊಂಡು ದುಃಖದಿಂದ ಇರುವ ಶ್ರೀಮತಿ ನಿರ್ನಾಮಿಕೆಯ ವಿಚಾರಗಳನ್ನು ತಿಳಿಯಪಡಿಸುತ್ತಾಳೆ. ಈಕೆ ತನ್ನ ಸೇವಕಿಯಾದ ‘ಪಂಡಿತೆ’ ಎಂಬುವವಳಲ್ಲಿ ತನ್ನ ಹಿಂದಿನ ಜನ್ಮದ ವಿವರಗಳನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ನಿರ್ನಾಮಿಕೆಯಾಗಿ ಬದುಕನ್ನು ಸವೆಸಿದ ವಿವರಗಳು ಗೋಚರವಾಗುತ್ತವೆ. ಆ ವಿವರಗಳು ಹೀಗಿವೆ.
ಆಕೆ ಈಗ ಇರುವ ಜನ್ಮಕ್ಕೆ ಮೂರನೆಯದಾದ ಜನ್ಮದಲ್ಲಿ ದಾತಕೀಷಂಡದ ಪೂರ್ವ ದಿಕ್ಕಿನಲ್ಲಿರುವ ಮಂದರ ಪರ್ವತದ ಪಶ್ಚಿಮ ದಿಕ್ಕಿಗೆ ‘ಸೀತಾ’ ಎಂಬ ನದಿ ಇತ್ತು. ಅದರ ಉತ್ತರ ದಡದಲ್ಲಿರುವ ಗಂಧಿಲ ದೇಶದ ‘ಪಾಟಳಿ’ ಎಂಬ ಗ್ರಾಮದಲ್ಲಿ ‘ನಾಗದತ್ತ’ ಎಂಬ ವ್ಯಾಪಾರಿ ಇದ್ದನು. ‘ವಸುದತ್ತೆ’ ಅವನ ಹೆಂಡತಿ. ಅವರಿಗೆ ನಂದ, ನಂದಿಮಿತ್ರ, ನಂದಿಷೇಣ, ವರಸೇನ ಹಾಗೂ ಜಯಸೇನ ಎಂಬ ಐದು ಜನ ಗಂಡು ಮಕ್ಕಳು. ಇವರ ಜೊತೆಗೆ ಮದನಕಾಂತೆ, ಶ್ರೀಕಾಂತೆ ಎಂಬ ಇಬ್ಬರು ಹೆಣ್ಣು ಮಕ್ಕಳು. ಇವರ ನಂತರ ತಾನು ಜನಿಸಿದುದಾಗಿ ಆಕೆ ಹೇಳಿಕೊಳ್ಳುತ್ತಾಳೆ. ಹೀಗಿರಲು ಕಾಯಿಬಿಟ್ಟ ಮಾವಿನ ಮರಕ್ಕೆ ಸಿಡಿಲೆರಗಿತೋ ಎಂಬಂತೆ ನನ್ನ ಒಡಹುಟ್ಟಿದವರೂ, ತಂದೆಯೂ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದರು ಎಂದು ಹೇಳುತ್ತ ತನ್ನ ಈಗಿನ ದುಃಸ್ಥಿತಿಗೆ ಕಾರಣವಾದ ಅಂಶವನ್ನು ಆಕೆ ಈ ರೀತಿಯಾಗಿ ತಿಳಿಸುತ್ತಾಳೆ.
“ವ|| ಅಂತು ಮದೀಯಜನನಿಯುಂ ಜನನಿಯ ಜನನಿಯುಮುಯಲುಮುದರು
ಮೆಲ್ಲಮೊರ್ವರುಯದಂತೆ ಪೋಪುದುಮರಸರ ದೆಸೆಯಿಂ ಮನೆಯುಂ ಕವರ್ತೆವೋಪುದುಂ
ಪೆರ ಕೀಲೊಳೆಮ್ಮಬ್ಬೆಯುಂ ಮುತ್ತಬ್ಬೆಯುಂ ಸಾರ್ದು ಬದಗುಗೆಯ್ದುಣೆ ನವಮಾಸಂ ನೆ¾õÉದಾಂ
ಪುಟ್ಟುವುದುಂ ಎನ್ನ ಮೆಯ್ಯ ದುರ್ಗಂಧಕ್ಕೆ ಪೇಸಿ ಕಂಡವರೆಲ್ಲಮೆದು ಕಳೆಯೆ
ಪರೇತವನಭೂಮಿಯೊಳ್ ಜೀರ್ಣಶೀರ್ಣಚೀರಣಗಳಿಂದಂ ಪುದಿದಿರಿಸಿ ಪೋಗಿ ತಾವಿರ್ಬರುಂ
ತಿರಿದು ತಂದಿಕ್ಕಿದೆಂಜಲೆವುಮಂ ತಿಂದು ಪೆಸರುಮಿಲ್ಲದೆ ನಿರ್ನಾಮಿಕೆಯೆಂದು ಪೆಸರಾಗಿ ಬಳೆಯೆ”1
ಈ ರೀತಿಯಾಗಿ ತನ್ನ ತಾಯಿಯೂ, ಅಜ್ಜಿಯೂ ಉಳಿದು, ಮಿಕ್ಕೆಲ್ಲರೂ ಅಳಿದರು. ಅರಸರ ದೆಸೆಯಿಂದ ನಮ್ಮ ಮನೆಯೂ ಲೂಟಿಯಾಯಿತು. ನಮ್ಮಮ್ಮ ಹಾಗೂ ಅಜ್ಜಿಯು ಪರರ ಸೇವಾಗೃಹದಲ್ಲಿ ಇದ್ದುಕೊಂಡು ಬದುಕಲಾರಂಭಿಸಿದರು. ಒಂಭತ್ತು ತಿಂಗಳಾಗಿ ನಾನು ಹುಟ್ಟಿದೆ. ನನ್ನ ದೇಹದ ದುರ್ಗಂಧದ ಕಾರಣವಾಗಿ ನೋಡಿದವರು ಅಸಹ್ಯಪಟ್ಟುಕೊಂಡು ನನ್ನನ್ನು ದೂರವಿಟ್ಟರು. ನನ್ನ ಅಮ್ಮ, ಅಜ್ಜಿಯರು ಸ್ಮಶಾನದಲ್ಲಿ ನನ್ನನ್ನು ಚಿಂದಿ ಬಟ್ಟೆಯಿಂದ ಮುಚ್ಚಿ ಅವರಿವರಿಂದ ತಿರಿದು ತಂದು ನನ್ನನ್ನು ಸಾಕಿದರು. ಈ ರೀತಿಯಾಗಿ ನಾನು ಹೆಸರಿಲ್ಲದೆ ‘ನಿರ್ನಾಮಿಕೆ’ ಎಂದು ಕರೆಯಲ್ಪಟ್ಟು ಬೆಳೆದನು ಎಂದು ಹೇಳಿಕೊಳ್ಳುತ್ತಾಳೆ.
ಇಲ್ಲಿ ಪ್ರಧಾನವಾಗಿ ಗಮನಿಸಬೇಕಾದ ಸಂಗತಿ ಎಂದರೆ ಕವಿ ನಿರ್ನಾಮಿಕೆಯ ಮೂಲಕ ಉಲ್ಲೇಖಿಸುವ ‘ಅರಸರ ದೆಸೆಯಿಂ ಮನೆಯುಂ ಕವರ್ತೆವೋಪುದುಂ’ ಎಂಬ ಮಾತನ್ನು ಗಂಭೀರವಾಗಿ ಚರ್ಚಿಸುವುದು ಅಗತ್ಯ. ಏಕೆಂದರೆ ಕವಿ ಅರಸನ ಬದಲಿಗೆ ಕಳ್ಳರ ದೆಸೆಯಿಂದ ನಮ್ಮ ಮನೆಯು ಲೂಟಿಯಾಯಿತು ಎಂದು ಹೇಳಿಸಬಹುದಿತ್ತು. ಆ ರೀತಿ ಹೇಳಿಸಿದ್ದರೆ ನಮ್ಮಲ್ಲಿ ಯಾವುದೇ ರೀತಿಯ ಪ್ರಶ್ನೆಗಳು ಮೂಡುತ್ತಿರಲಿಲ್ಲ. ಆದರೆ ಅರಸರ ಕಾರಣವಾಗಿ ನಮ್ಮ ಮನೆ ಲೂಟಿಯಾಯಿತು ಎಂದು ಆಕೆ ಸ್ಪಷ್ಟವಾಗಿ ಹೇಳುತ್ತಾಳೆ. ಇದರಿಂದಾಗಿ ಅಂದಿನ ಕಾಲಘಟ್ಟದ ಅರಸರ ಆಳ್ವಿಕೆ ಹೇಗಿತ್ತು ? ಎಂಬುದು ನಮಗೆ ಮನವರಿಕೆಯಾಗುತ್ತದೆ. ಇಲ್ಲಿ ಕಾಪಾಡಬೇಕಾಗಿದ್ದ ಅರಸನಾದವನೇ ಬಡಬಗ್ಗರ ಆಸ್ತಿಯನ್ನು, ಸಂಪತ್ತುಗಳನ್ನು ದೋಚುವಂತಹ ಕ್ರೂರಿಯಾಗಿದ್ದ ವಿವರಗಳು ರಾಜಾಡಳಿತದ ಕರಾಳತೆಗಳನ್ನು ನಮಗೆ ದರ್ಶಿಸುತ್ತದೆ. ಜೊತೆಗೆ ಗಂಡು ಸಂತಾನಗಳಿಗೆ ಆ ಕಾಲದ ಸಮಾಜ ನೀಡಿದ್ದ ಪ್ರಾಧಾನ್ಯತೆಯನ್ನು ಸಹ ಇದು ತಿಳಿಸುತ್ತದೆ. ಏಕೆಂದರೆ ಇಲ್ಲಿ ರಾಜ ನಿರ್ನಾಮಿಕೆಯ ಮನೆಯನ್ನು ಲೂಟಿ ಮಾಡಲು ಇರಬಹುದಾದ ಎರಡು ಕಾರಣಗಳೆಂದರೆ. ಒಂದು ಆ ಮನೆಯಲ್ಲಿ ಗಂಡು ಮಕ್ಕಳಿಲ್ಲದಿರುವುದು. ಮತ್ತೊಂದು ಹೆಣ್ಣು ಮೋಕ್ಷಕ್ಕೆ ಅರ್ಹಳಲ್ಲ ಎಂದು ಆಕೆಗೆ ಮೋಕ್ಷವನ್ನು ನಿರಾಕರಿಸಿರುವ ಜೈನ ಧರ್ಮ ಹೆಣ್ಣಿಗೆ ಯಾವುದೇ ರೀತಿಯ ಆಸ್ತಿಯ ಹಕ್ಕನ್ನಾಗಲೀ, ಸಂಪತ್ತಿನ ಒಡೆತನಗಳನ್ನಾಗಲಿ ನೀಡದೆ ಇದ್ದಿರಬಹುದಾದ ಸನ್ನಿವೇಶ. ಅದು ಸಂಪೂರ್ಣವಾಗಿ ಪುರುಷನ ಸ್ವತ್ತು ಎಂಬಂತೆ ಇದ್ದ ಕಾರಣವಾಗಿ ಇಲ್ಲಿ ಅರಸ ಗಂಡು ಸಂತಾನವಿಲ್ಲದ ನಿರ್ನಾಮಿಕೆಯ ಮನೆಯನ್ನು ಲೂಟಿ ಮಾಡಿಸುತ್ತಾನೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡಾಗಲಿ, ಹೆಣ್ಣಾಗಲಿ ವಾರಸುದಾರರಿಲ್ಲದಿದ್ದರೆ ಅವರ ಆಸ್ತಿ ಪಾಸ್ತಿಗಳನ್ನು ಸರ್ಕಾರ ಇಲ್ಲವೇ ಮಠ ಮಾನ್ಯಗಳು ವಶಪಡಿಸಿಕೊಳ್ಳುವುದು ನಮಗೆ ಗೊತ್ತಿರುವ ಸಂಗತಿಯೆ. ಆದರೆ ಇಲ್ಲಿ ಹೀಗಾಗಿಲ್ಲ. ನಿರ್ನಾಮಿಕೆ, ಆಕೆಯ ತಾಯಿ ಹಾಗೂ ಅಜ್ಜಿಯರು ಆ ಮನೆಯ ವಾರಸುದಾರರಾಗಿ ಇದ್ದರೂ ಕೂಡ ಆ ಮನೆಯನ್ನು ಲೂಟಿ ಮಾಡುವುದರ ಹಿಂದೆ ಗಂಡು ಸಂತಾನವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕಾರಣವನ್ನೆ ನೆಪವಾಗಿಟ್ಟುಕೊಂಡು ರಾಜ ತನ್ನ ಅಧಿಕಾರದ ಬಲದಿಂದ ಅವರ ಆಸ್ತಿಯನ್ನು ಲೂಟಿ ಮಾಡಿಸುತ್ತಾನೆ. ಇದು ಅಧಿಕಾರದ ದುರುಪಯೋಗದ ಜೊತೆಗೆ ಅದರ ಚಲಾವಣೆಯಾಗಿಯೂ ಕಂಡುಬರುತ್ತದೆ. ಇಲ್ಲಿ ಗಂಡು ಅಧಿಕಾರದ ಕೇಂದ್ರ ಸ್ಥಾನವಾಗಿ ನಿಂತಿರುವುದು ಸ್ಪಷ್ಟವಾಗುತ್ತದೆ. ಇದು ‘ಆದಿಪುರಾಣ’ ಕೃತಿಯಲ್ಲಿ ಅಧಿಕಾರ, ಪ್ರಭುತ್ವ ಹಾಗೂ ಯಜಮಾನಿಕೆಯನ್ನು ಕುರಿತು ತಿಳಿಸುವ ಅಂಶಗಳಾಗಿವೆ. ಈ ರೀತಿಯ ಅಧಿಕಾರದ ಸ್ವರೂಪಕ್ಕೆ ವಿರುದ್ಧವಾಗಿ ಹುಟ್ಟಿಕೊಳ್ಳುವ ಪ್ರಶ್ನೆಯ ಸ್ವರೂಪಗಳನ್ನು ಬಾಹುಬಲಿಯ ಮೂಲಕ ಕವಿ ನಮಗೆ ತಿಳಿಸಿಕೊಡುತ್ತಾನೆ.
ಭರತನು ತನಗೆ ಲಭಿಸಿದ ಚಕ್ರರತ್ನದ ಸಹಾಯದಿಂದ ಪ್ರಾರಂಭಿಸಿದ ದಿಗ್ವಿಜಯ ಯಾತ್ರೆಯು ತನ್ನ ತಮ್ಮನಾದ ಬಾಹುಬಲಿಯ ರಾಜಧಾನಿಯ ಬಳಿ ಬಂದು ನಿಲ್ಲತ್ತದೆ. ತಮ್ಮನ ರಾಜ್ಯ ಅಧೀನಕ್ಕೆ ಬಾರದೆ ಇರುವುದು ಭರತನಲ್ಲಿ ತನ್ನ ಅಭಿಮಾನಕ್ಕೆ ಕುಂದುಂಟಾದಂತೆ ಭಾಸವಾಗುತ್ತದೆ. ತನಗೆ ಅಧೀನರಾಗುವಂತೆ ಹೇಳಿ ಕಳುಹಿಸುತ್ತಾನೆ. ಈ ಸಂದರ್ಭದ ಭರತನ ವರ್ತನೆಗಳಲ್ಲಿ ಬಲವಂತದ ಅಧಿಕಾರದ ಹೇರಿಕೆಯನ್ನು ಕಾಣಬಹುದು. ಇಡೀ ಭೂಮಂಡಲ ತನ್ನ ಅಧೀನಕ್ಕೆ ಬಂದಿದ್ದು, ತನ್ನ ಸಾರ್ವಭೌಮತೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ತಮ್ಮಂದಿರು ತನ್ನ ರಾಜತ್ವವನ್ನು ಒಪ್ಪಿಕೊಳ್ಳದಿದ್ದ ಕಾರಣವಾಗಿ ತನ್ನ ಅಧಿಕಾರದ ನೆಲೆಗಳು ಪೂರ್ಣಗೊಳ್ಳದ ಅಸಮಾಧಾನದಿಂದ ಕುದಿಯುತ್ತಾನೆ. ಮಂತ್ರಿಗಳಿಂದ ತನ್ನ ತಮ್ಮಂದಿರಿಗೆ ವಿಷಯವನ್ನು ಮುಟ್ಟಿಸಲಾಗಿ ಬಾಹುಬಲಿ ಹೊರತಾಗಿ ಉಳಿದವರು ಭರತನ ಅಧಿಕಾರದ ದಾಹಕ್ಕೆ ಅಸಹ್ಯಪಟ್ಟು ತಮ್ಮ ತಂದೆಯ ಬಳಿ ಹೋಗಿ ತಪೋನಿರತರಾಗುತ್ತಾರೆ. ಆದರೆ ಬಾಹುಬಲಿ ಅಣ್ಣನ ಮನದಲ್ಲಿನ ಅಧಿಕಾರದ ದಾಷ್ಟ್ರ್ಯತನವನ್ನು ಪ್ರಶ್ನಿಸುತ್ತಾನೆ.
ಹಿರಿಯಣ್ಣನೇನು, ತಂದೆಯೇನು ಇಬ್ಬರೂ ಕೂಡ ಸಮಾನರು. ಇಂತಹ ಸದ್ಭುದ್ಧಿಯಿಂದ ಅವನಲ್ಲಿ ವಿನಯವನ್ನು ತಳೆಯಿರಿ. ನಾವಿಬ್ಬರೂ ಕೂಡಿ ಬಾಳೋಣ ಎಂಬ ರಾಜನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಭರತನ ಪಾದಗಳಿಗೆ ಎರಗಲು ಬನ್ನಿ ಎಂಬ ದೂತನ ಮಾತುಗಳನ್ನು ಕೇಳಿದ ಬಾಹುಬಲಿಯ ಪ್ರತಿಕ್ರಿಯೆಗಳು ಅಧಿಕಾರ ಹಾಗೂ ಪ್ರಭುತ್ವವನ್ನು ಪ್ರಶ್ನಿಸುವ ಮತ್ತು ವಿರೋಧಿಸುವ ಮನಸ್ಥಿತಿಯವಾಗಿವೆ.
“ಪಿರಿಯಣ್ಣಂ ಗುರು ತಂದೆಯೆಂದೆಗುವಂ ಮುನ್ನೆಲ್ಲಮಿಂತೀಗಳಾ
ಳರಸೆಂಬೊಂದು ವಿಭೇದಮಾದೊಡೆಕಂ ಚಿಃ ಕಷ್ಟಮಲ್ತೇ ವಸುಂ
ಧರೆತಯ್ಯಂ ದಯೆಗೆಯ್ಯೆ ಮುಂ ಪಡೆದುದರ್ಕಿಂತೀತನೊಳ್ ತೊಟ್ಟ ಕಿಂ
ಕರಭಾವಂ ನಮಗಕ್ಕಿಗೊಟ್ಟು ಮಡಗೂಣ್ಬಂದಮಂ ಪೋಲದೇ”2
ಹಿರಿಯಣ್ಣನನ್ನು ಗುರು, ತಂದೆ ಎಂದು ಒಪ್ಪಿಕೊಂಡು ಆತನಿಗೆ ನಮಸ್ಕರಿಸುವುದು ಸರಿ. ಆದರೆ ಈಗ ಆಳು ಮತ್ತು ಅರಸ ಎಂಬ ಭೇದ ಭಾವ ಉಂಟಾಗಿರುವುದರಿಂದ ಸ್ನೇಹ ತೋರುವುದು ಕಷ್ಟ. ಈ ಭೂಮಿಯನ್ನು ನಮ್ಮ ತಂದೆಯು ನಮ್ಮೆಲ್ಲರಿಗೂ ಸಮಾನವಾಗಿ ದಯೆ ಮಾಡಿಕೊಟ್ಟ ಕಾರಣವಾಗಿ ನಾವೆಲ್ಲ ಅದನ್ನು ಪಡೆದಿದ್ದೇವೆ. ಆದರೆ ಈಗ ನಾವು ಭರತನಲ್ಲಿ ಕಿಂಕರ ಭಾವವನ್ನು ತೋರಿಸಿದರೆ ಅದು ಹೇಗಿರುತ್ತದೆಂದರೆ ನಾವೇ ಅಕ್ಕಿಯನ್ನು ಕೊಟ್ಟು, ಅವನು ತಿಂದು ಮಿಕ್ಕ ಎಂಜಲನ್ನು ಉಂಡಂತಾಗುವುದಿಲ್ಲವೆ? ಎಂದು ಪ್ರಶ್ನಿಸುವ ಮಾತುಗಳು ಪ್ರಭುತ್ವ ಹಾಗೂ ಅಧಿಕಾರವನ್ನು ಕಟು ವಿಮರ್ಶೆಗೆ ಒಳಪಡಿಸುವ ಪ್ರಶ್ನಾತ್ಮಕ ಅಂಶಗಳಾಗಿವೆ. ಇಲ್ಲಿ ಬಾಹುಬಲಿಯು ಭರತ ಮತ್ತು ತನ್ನ ನಡುವಿನ ಸಂಬಂಧಗಳ ಅಂಶಗಳನ್ನು ತಿಳಿಸಿಕೊಡುತ್ತಲೇ ಈ ಸಂಬಂಧಗಳನ್ನು ವಿಘಟಿಸುವ ಮತ್ತು ಬಾಂಧವ್ಯಗಳನ್ನು ಮೀರಿ ನಿಲ್ಲುವ ಅಧಿಕಾರವನ್ನು ಪ್ರಶ್ನಿಸುತ್ತಾನೆ.
“ಪಿರಿಯಣ್ಣಂಗೆಗುವುದೇಂ
ಪರಿಭವಮೇ ಕೀ ನೆತ್ತಿಯೊಳ್ ಬಾಳಂ ನಿ
ರ್ನೆರಮೂ ಚಲದಿನೆಗಿಸ
ಲಿರೆ ಭರತಂಗೆಗುವೆ ಕಮಂಜಮೆಯಲ್ತೇ”3
ಹಿರಿಯಣ್ಣನಿಗೆ ಗೌರವದಿಂದ ತಲೆಬಾಗುವುದು ಅವಮಾನವೇನಲ್ಲ. ಆದರೆ ಆತನು ನಮ್ಮ ನೆತ್ತಿಯ ಮೇಲೆ ಅಕಾರಣವಾಗಿ ಕತ್ತಿಯಿಂದ ಗೀರಿ ಛಲದಿಂದ ತಲೆಯನ್ನು ಬಾಗಿಸಲು ಹೊರಟಿರುವನು. ಅಂತಹವನಿಗೆ ತಲೆ ಬಾಗುವುದು ಅಂಜುಬುರುಕತನವಲ್ಲವೆ? ಎಂದು ಬಾಹುಬಲಿ ಕೇಳುವ ಪ್ರಶ್ನೆಗಳು ಸಹ ಅಧಿಕಾರದ ಪೊರೆಯನ್ನು ಒಡೆಯುವ ಮನಸ್ಥಿತಿಯೇ ಆಗಿದೆ. ನಮ್ಮ ತಂದೆಯು ಈ ಧರೆಯನ್ನು ನಮ್ಮೆಲ್ಲರಿಗೂ ಕೊಡುವಾಗ ನನಗೂ ಮತ್ತು ಭರತನಿಗೂ ರಾಜನೆಂದೆ ಹೆಸರನ್ನು ಕೊಟ್ಟನು. ಆದರೆ ಅವನು ತಾನು ‘ರಾಜಾಧಿರಾಜ’ನೆಂಬ ಹೆಸರನ್ನು ಪಡೆಯಲು ಈ ರೀತಿಯ ವರ್ತನೆಗಳನ್ನು ತೋರಿದರೆ ಅದಕ್ಕೆ ನಾವು ತಲೆಬಾಗುವವರಲ್ಲ ಎಂದು ಖಡಾಖಂಡಿವಾಗಿ ಮಾತನಾಡುತ್ತಾನೆ. ಮುಂದುವರೆದು
“ಚಕ್ರಂ ಪುಟ್ಟಿದೊಡೀಗಳ್
ಚಕ್ರೇಶ್ವರನೆಂಬ ಪೆಸರುಮಾಯ್ತಕ್ಕೆಮ ತಾಂ
ಚಕ್ರೇಶನಾದೊಡಂ ತ
ನ್ನಾಕ್ರಮಣಮನೆನ್ನೊಳೇಕೆ ಕೆಮ್ಮನೆ ತೋರ್ಪಂ”4
ಆಯುಧಾಗಾರದಲ್ಲಿ ಚಕ್ರರತ್ನವು ಹುಟ್ಟಿದ ಕಾರಣವಾಗಿ ಅವನಿಗೆ ಚಕ್ರೇಶ್ವರ ಎಂಬ ಹೆಸರು ಬಂದಿರಬಹುದು. ಆಗಲಿ, ಆದರೆ ತಾನು ಚಕ್ರೇಶ್ವರನಾದ ಮಾತ್ರಕ್ಕೆ ನನ್ನ ಮೇಲೇಕೆ ತನ್ನ ವ್ಯರ್ಥ ಆಕ್ರಮಣವನ್ನು ತೋರಬೇಕು? ಎಂಬ ಬಾಹುಬಲಿಯ ಮಾತುಗಳು ಸ್ಪಷ್ಟವಾಗಿ ಪ್ರಭುತ್ವ ಮತ್ತು ರಾಜ್ಯಾಧಿಕಾರದ ನೆಲೆಗಳನ್ನು ವಿರೋಧಿಸುವುದು ಮತ್ತು ಪ್ರಶ್ನಿಸುವುದು ಕಂಡುಬರುತ್ತದೆ. ಇಲ್ಲಿನ ‘ಏಕೆ’ ಎಂಬ ಪದವೇ ಪ್ರಶ್ನೆಯ ಬಹುಮುಖ್ಯ ಶಕ್ತಿಯಾಗಿ ನಮ್ಮ ಗಮನವನ್ನು ಸೆಳೆಯುತ್ತದೆ.
ಈ ರೀತಿಯಾಗಿ ಕನ್ನಡದ ಮೊದಲ ಕಾವ್ಯ ಕೃತಿಯೆನಿಸಿದ ‘ಆದಿಪುರಾಣ’ವು ಅಧಿಕಾರ ಮತ್ತು ಅದರ ಪ್ರಶ್ನೆಯ ವಿಭಿನ್ನ ನೆಲೆಗಳನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿರುವುದು ಕಂಡುಬರುತ್ತದೆ.
ಅಡಿ ಟಿಪ್ಪಣಿಗಳು.
1. ಆದಿಪುರಾಣಂ, 3/34-ವ. 2.ಆದಿಪುರಾಣಂ, 14/32. 3.ಆದಿಪುರಾಣಂ, 14/75. 4.ಆದಿಪುರಾಣಂ, 14/79.
ಪರಾಮರ್ಶನ ಗ್ರಂಥಗಳು.