ಗುಬ್ಬಿ ಪ್ರಾದೇಶಿಕ ಪರಿಸರದ ಗ್ರಾಮ ರಕ್ಷಣಾ ವಾಸ್ತು ಮತ್ತು ರಾಜಕೀಯ ಸ್ಥಿತಿಗತಿ.
(ವಿಜಯ ನಗರೋತ್ತರ ಕಾಲವನ್ನು ಅನುಲಕ್ಷಿಸಿ)
ಶ್ರೀನಿವಾಸ ಎ. ಜಿ
ಪಿಎಚ್.ಡಿ., ಸಂಶೋಧನಾ ವಿದ್ಯಾರ್ಥಿ
ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
sreenivasa2283@gmail.com Mob:- 9986765239
ಪೀಠಿಕೆ.
ಕರ್ನಾಟಕವನ್ನು ಆಳ್ವಿಕೆ ಮಾಡಿದ ವಿಜಯನಗರ ಸಾಮ್ರಾಜ್ಯ ಕ್ರಿ.ಶ.1565ರ ತಾಳೀಕೋಟೆ ಯುದ್ಧದಲ್ಲಿ ಸೋಲನ್ನು ಅನುಭವಿಸಿದ ನಂತರ ಕರ್ನಾಟಕದ ಬಹುಭಾಗ ಬಿಜಾಪುರದ ಆದಿಲ್‍ಷಾಹಿಗಳ ವಶವಾಯಿತು. ಆದರೂ ವಿಜಯನಗರದ ಕೊನೆಯ ಮನೆತನವಾದ ಅರವೀಡು ಮನೆತನದವರು 18ನೇ ಶತಮಾನದ ಪ್ರವರ್ಧಮಾನದವರೆಗೂ ಅನೇಕ ದಾನದತ್ತಿಗಳನ್ನು ನೀಡಿದ್ದಾರೆ. ವಿಜಯನಗರ ಆಳ್ವಿಕೆ ಕಾಲಘಟ್ಟದಲ್ಲಿ ವಿಕೇಂದ್ರೀಕೃತ ವ್ಯವಸ್ಥೆಯಿಂದ ಅನೇಕ ಪಾಳೇಯಪಟ್ಟುಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ತಲೆಎತ್ತಿದವು. ಇದರಿಂದ ಗುಬ್ಬಿ ಪ್ರಾದೇಶಿಕ ಪರಿಸರವು ಹೊರತಾಗಿರಲಿಲ್ಲ. ಈ ಭಾಗದಲ್ಲೂ ಪಾಳೇಯಪಟ್ಟುಗಳು ಸ್ಥಾಪನೆಗೊಂಡು ವಿಜಯನಗರ ಅವನತಿ ಹೊಂದಿದ ನಂತರ ಸ್ವತಂತ್ರವಾಗಿ ಆಳ್ವಿಕೆ ಮಾಡಿದರು. ಈ ಭಾಗದಲ್ಲಿ ಹಾಗಲವಾಡಿ ಮತ್ತು ಗುಬ್ಬಿ ಹೊಸಹಳ್ಳಿ ಪಾಳೇಯಪಟ್ಟುಗಳು ಏಳಿಗೆ ಹೊಂದಿದವು. ವಿಜಯನಗರದ ಅವನತಿ ನಂತರ ಬಿಜಾಪುರದ ಆದಿಲ್‍ಷಾಹಿಗಳು, ಮೊಗಲರು ಮರಾಠರು ದಾಳಿಮಾಡಿದ್ದನ್ನು ಗಮನಿಸಬಹುದು.
ರಾಜಕೀಯ ಸ್ಥಿತಿಗತಿ ಮತ್ತು ರಕ್ಷಣಾ ವಾಸ್ತು.
ಹಾಗಲವಾಡಿ ಸಂಸ್ಥಾನದ ಮೂಲಪುರುಷ ಯೆರಿಮದಿನಾಯಕ ಮರಣ ಹೊಂದಿದ ನಂತರ ಸಾಲಿನಾಯಕ ಯರೆಕಟ್ಟೆಗ್ರಾಮ ಸ್ಥಾಪಿಸಿ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡನು. ಭೈರಪ್ಪ ನಾಯಕನ ಮಗ ಹಿರಿಮುದಿಯಪ್ಪನಾಯಕ ಹಾಗಲವಾಡಿ ಸಂಸ್ಥಾನ ವಿಸ್ತಾರಗೊಳಿಸಲು ಸಾಕಷ್ಟು ಪ್ರಯತ್ನಿಸಿದ ಈತನು ಕ್ರಿ.ಶ.1618ರಲ್ಲಿ ಹಾಗಲದಹಳ್ಳಿಯಲ್ಲಿ ಕೋಟೆಕೊತ್ತಲ ನಿರ್ಮಿಸಿ ಶಸ್ತ್ರಾಸ್ತ್ರ ಸಂಗ್ರಹಿಸಿದನು. ಹಾಗಲದಹಳ್ಳಿ ಹಾಗಲವಾಡಿಯಾಗಿ ಬದಲಾಯಿತು. ಹಿರಿಮುದಿಯಪ್ಪ ನಾಯಕನ ನಂತರ ಇಮ್ಮಡಿ ಭೈರಪ್ಪನಾಯಕ ಅಧಿಕಾರಕ್ಕೆ ಬಂದಾಗ ಬಿಜಾಪುರ ಸುಲ್ತಾನರು, ಮೊಗಲರು, ದಕ್ಷಿಣ ಕಡೆಯ ಗುಬ್ಬಿ ಪ್ರಾದೇಶಿಕ ಪರಿಸರದಮೇಲೂ ದಾಳಿ ಮಾಡಿದರು. ಕ್ರಿ.ಶ.1638ರಲ್ಲಿ ರಣದುಲ್ಲಾಖಾನ್ ಮೈಸೂರು ಒಡೆಯರ ಮೇಲೆ ದಾಳಿಮಾಡಿ (ರಣಧೀರ ಕಂಠೀರವ ನರಸರಾಜ ಒಡೆಯರು) ರಣದುಲ್ಲಾಖಾನ್ ಸೋತು ಹಿಂತಿರುಗುವಾಗ ಅಪಾರ ಸೈನ್ಯದೊಂದಿಗೆ ಇಮ್ಮಡಿ ಭೈರಪ್ಪನಾಯಕನ ಮೇಲೆ ದಾಳಿ ಮಾಡಿ ಭೈರಪ್ಪನಾಯಕನ ಮೇಲೆ ಗೆಲವು ಸಾಧಿಸಿಕೊಂಡು ಚಿಕ್ಕನಾಯ್ಕನಹಳ್ಳಿ ಒಳಗೊಂಡಂತೆ ಬಹುಭಾಗ ವಶಪಡಿಸಿಕೊಂಡನು. ಇಮ್ಮಡಿ ಭೈರಪ್ಪನಾಯಕ ಕ್ರಿ.ಶ.1639ರಲ್ಲಿ ಹಾಗಲವಾಡಿಗೆ ಎಲ್ಲವನ್ನು ಸಾಗಿಸಿಕೊಂಡು ರಾಜಧಾನಿಯನ್ನಾಗಿ ಮಾಡಿಕೊಂಡನು. ಹಾಗಲವಾಡಿ ಸಂಸ್ಥಾನದ ಪ್ರಸಿದ್ದ ವ್ಯಕ್ತಿಯಾಗಿದ್ದ ಮುದ್ದುವೀರಪ್ಪನಾಯಕ 1748ರಿಂದ 1761ರವರೆಗೆ ಆಳ್ವಿಕೆ ಮಾಡುವಾಗ ಮೊಗಲರು ದಾಳಿ ಮಾಡಿದರು. ಸಲಾಬತ್‍ಜಂಗ್‍ನ ಕಾರ್ಯಾಚರಣೆಗೆ ಹಾಗಲವಾಡಿ ತುತ್ತಾಯಿತು. ಸಲಾಬತ್‍ಜಂಗ್ ಸೈನ್ಯ ಸಮೇತ ಹಾಗಲವಾಡಿಯ ಮೇಲೆ ದಾಳಿ ಮಾಡಿ ಕೋಟೆಗೆ ನುಗ್ಗಿ ಖಜಾನೆಯನ್ನು ಕೊಳ್ಳೆಹೊಡೆದು ಹಾಗಲವಾಡಿಯನ್ನು ವಶಪಡಿಸಿಕೊಂಡನು. ಮುದ್ದುವೀರಪ್ಪನಾಯಕ ತಪ್ಪಿಸಿಕೊಂಡು ಮೂಗನಾಯ್ಕನ ಕೋಟೆಗೆ ಓಡಿಹೋದನು. ಸಲಾಬತ್‍ಜಂಗ್ ಗೆದ್ದ ಪ್ರದೇಶಕ್ಕೆ ಶಿರಾದ ಮೊಗಲ್ ಸುಭೇದಾರ್ ದಿಲ್‍ವರ್‍ಖಾನನ ವಶಕ್ಕೆ ಒಪ್ಪಿಸಿ ಹಿಂತಿರುಗಿದನು. ನಂತರ ಮುದ್ದುವೀರಪ್ಪ ಸೈನ್ಯ ಸಮೇತನಾಗಿ ಹೋಗಿ ಹಾಗಲವಾಡಿಯಲ್ಲಿದ್ದ ದಿಲ್‍ವರ್‍ಖಾನ್‍ನ ಮೇಲೆ ಆಕ್ರಮಣ ಮಾಡಿದನು. ಮೊಗಲ್ ಸುಬೇದಾರ್ ದಿಲ್‍ವರ್‍ಖಾನ್ ಸೋತು ಒಪ್ಪಂದ ಮಾಡಿಕೊಂಡು ಹಾಗಲವಾಡಿ ಮತ್ತು ಮಂಚಲದೊರೆ ಆ ಭಾಗಕ್ಕೆ ಸೇರಿದ 12 ಹಳ್ಳಿಗಳನ್ನು ಬಿಟ್ಟುಕೊಟ್ಟು. ``ರಾಜಾಜಂಗ್ ಬಹದ್ದೂರ್'' ಎಂಬ ಬಿರುದು ನೀಡಿದನು. ಅನೇಕ ಏರಿಳಿತ ಅನುಭವಿಸಿದ ಗುಬ್ಬಿ ಪ್ರಾದೇಶಿಕ ಪರಿಸರದ ಹಾಗಲವಾಡಿ ಸಂಸ್ಥಾನ ಹೈದರಾಲಿಯಿಂದ ಸಂಪೂರ್ಣ ಪಥನ ಹೊಂದಿತ್ತು. ಆ ನಂತರ ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಗಾಗಿ ಮೈಸೂರು ಒಡೆಯರಿಗೆ ಅಧೀನರಾಗಿ ಆಳ್ವಿಕೆ ಮಾಡುತ್ತಿದ್ದ ಗುಬ್ಬಿಹೊಸಹಳ್ಳಿ, ಪಾಳೇಗಾರರಿಂದ ಒಡೆಯರಿಂದ ಪಡೆದಿದ್ದ ಉಂಬಳಿಯನ್ನು ರದ್ದುಗೊಳಿಸಿ. ಗುಬ್ಬಿಹೊಸಹಳ್ಳಿ ಸಂಸ್ಥಾನವನ್ನು ತನ್ನ ಅಧೀನಕ್ಕೆ ತೆಗೆದುಕೊಂಡನು. ಅಂತಿಮವಾಗಿ 1800ರ ವೇಳೆಗೆ ಬ್ರಿಟೀಷರ ಆಡಳಿತಕ್ಕೆ ಒಳಗಾಯಿತು.
ಹೀಗೆ ರಾಜಕೀಯ ಅಸ್ಥಿರತೆಯಿಂದ ಕೂಡಿದ ವಿಜಯನಗರೋತ್ತರ ಕಾಲದ ಗುಬ್ಬಿ ಪ್ರಾದೇಶಿಕ ಪರಿಸರದ ಕೆಲವು ಗ್ರಾಮಗಳಲ್ಲಿ ಗ್ರಾಮರಕ್ಷಣೆಗಾಗಿ ರಕ್ಷಣಾಗೋಡೆ ಮತ್ತು ಅದಕ್ಕೆ ಸೇರಿದಂತೆ ಬುರುಜುಗಳು ನಿರ್ಮಾಣಗೊಂಡವು. ಇಂದು ಅವೆಲ್ಲವೂ ಹಾಳಾಗಿವೆ. ಬುರುಜುಗಳನ್ನು ಹುಡೇವು ಕಾವಲುದಿಬ್ಬಗಳು ಎನ್ನಬಹುದು. ಇಂತಹ ಬುರುಜುಗಳು ಸಾಮಾನ್ಯವಾಗಿ ವೃತ್ತಾಕಾರದಲ್ಲಿದ್ದು ತಳದಿಂದ ಮೇಲಕ್ಕೆ ಹೋದಂತೆ ವ್ಯಾಸದ ವಿಸ್ತೀರ್ಣ ಕಿರಿದಾಗುತ್ತಾ ಹೋಗುತ್ತದೆ. ಇಂತಹ ರಕ್ಷಣಾ ಅವಶೇಷಗಳು ಕೆಲವು ಗ್ರಾಮದಲ್ಲಿ ಕಂಡುಬರುತ್ತವೆ. ಅಲ್ಲದೆ ನೆರೆಯ ಚಿಕ್ಕನಾಯಕನಹಳ್ಳಿ, ಶಿರಾ, ತುರುವೇಕೆರೆ, ಕುಣಿಗಲ್ ತಾಲೂಕುಗಳಲ್ಲಿ ಗ್ರಾಮರಕ್ಷಣಾ ಅವಶೇಷಗಳು ಕಂಡುಬರುತ್ತವೆ. ಇಲ್ಲಿನವರೆಗೂ ಬಹುಪಾಲು ವಿವಿಧ ಸಾಮ್ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿನ ರಕ್ಷಣಾ ವಾಸ್ತು ನಿರ್ಮಾಣಗಳ ಕುರಿತು ಅಧ್ಯಯನ ಮಾಡಲಾಗಿದೆ.
ಪ್ರಸ್ತುತ ಲೇಖನದ ಉದ್ದೇಶ ಗುಬ್ಬಿ ತಾಲೂಕು ಪ್ರಾದೇಶಿಕ ಪರಿಸರದಲ್ಲಿ ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣಗೊಂಡ ಗ್ರಾಮರಕ್ಷಣಾ ವಾಸ್ತು ನಿರ್ಮಾಣಗಳನ್ನು ಪರಿಚಯಿಸುವುದಾಗಿದೆ. ಈ ನಿರ್ಮಾಣಗಳಲ್ಲಿ ಈಗ ಉಳಿದಿರುವುದು ಕೋಟೆಯ ಬಾಗಿಲು ಮತ್ತು ಬುರುಜುಗಳು ಅವಶೇಷಗಳು ಮಾತ್ರ. ಈ ರೀತಿಯ ಗ್ರಾಮರಕ್ಷಣಾ ವಾಸ್ತು ಗ್ರಾಮ, ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಗುಬ್ಬಿ ಪ್ರಾದೇಶಿಕ ಪರಿಸರದಲ್ಲಿ ಹಾಗಲವಾಡಿ, ಮೂಗನಾಯ್ಕನಕೋಟೆ, ಚೇಳೂರು, ಪ್ರಭುವನಹಳ್ಳಿ, ಜಿ.ಹೊಸಹಳ್ಳಿ, ಸಾಗಸಂದ್ರ, ಮಾರಶೆಟ್ಟಿಹಳ್ಳಿ, ಬಿದರೆ, ಗುಬ್ಬಿ, ಮಂಚಲದೊರೆ ಮುಂತಾದ ಗ್ರಾಮಗಳಲ್ಲಿ ಗ್ರಾಮರಕ್ಷಣಾ ವಾಸ್ತುವಿನ ಅವಶೇಷಗಳು ಕಂಡುಬರುತ್ತವೆ. ಕೋಟೆಯ ವ್ಯಾಪ್ತಿಯನ್ನು ಮೀರಿ ಗ್ರಾಮಸಮುದಾಯ ಬೆಳೆದಿರುವುದರಿಂದ ಗ್ರಾಮರಕ್ಷಣಾ ವಾಸ್ತು ಸಂಪೂರ್ಣವಾಗಿ ನಾಶಹೊಂದಿವೆ.
ಗ್ರಾಮಗಳು ಹೊಂದಿದ್ದ ಪ್ರತ್ಯೇಕ ರಕ್ಷಣಾ ವ್ಯವಸ್ಥೆಯ ಮೇಲೆ ಬಹುಶಃ ಊರುಗಳಲ್ಲಿದ್ದ ನಾಯಕ ಅಥವಾ ಗೌಡ ಇಡೀ ಗ್ರಾಮದ ಮೇಲೆ ಹತೋಟಿ ಹೊಂದಿದ್ದನೆಂದು ಹೇಳಬಹುದು. ಈ ಸ್ಥಳೀಯ ನಾಯಕ ಅಥವಾ ಗೌಡ ತಮ್ಮ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಪಾಳೇಗಾರನಿಗೆ ವಿಧೇಯರಾಗಿರುತ್ತಿದ್ದರು. ಮತ್ತು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿದ್ದರು. ಸ್ಥಳೀಯವಾಗಿ ಕಂಡುಬರುವ ಗ್ರಾಮರಕ್ಷಣಾ ವ್ಯವಸ್ಥೆಯನ್ನು ಗಮನಿಸಿದಾಗ ಸ್ಥಳೀಯ ನಾಯಕರುಗಳ ನಡುವೆ ಘರ್ಷಣೆಗಳು ನಡೆಯುತ್ತಿದ್ದವೆಂದು ಊಹಿಸಬಹುದು ಮತ್ತು ರಾಜಕೀಯ ಅಸ್ಥಿರತೆ ನೆಲೆಗೊಂಡಿತ್ತು ಎಂಬುದರ ಬಗ್ಗೆ ಸೂಚನೆಗಳು ದೊರೆಯುತ್ತದೆ.
ಹೀಗೆ ಗ್ರಾಮರಕ್ಷಣಾ ವಾಸ್ತು ಅವಶೇಷಗಳು ವಿಜಯನಗರೋತ್ತರ ಗುಬ್ಬಿ ಪ್ರಾದೇಶಿಕ ಪರಿಸರದ ಚರಿತ್ರೆಯನ್ನು ಗ್ರಹಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೆಲವು ಸೂಚನೆಗಳನ್ನು ನೀಡುತ್ತವೆ. ವಿವಿಧ ರಾಜಮನೆಗಳ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕೋಟೆಗಳನ್ನು ವನದುರ್ಗ, ಗಿರಿದುರ್ಗ, ಜಲದುರ್ಗ, ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಗ್ರಾಮ ರಕ್ಷಣಾ ನಿರ್ಮಾಣಗಳು ಬಹುಪಾಲು ಒಂದೇ ತೆರನಾಗಿ ಕಂಡುಬರುತ್ತವೆ. ಅವೆಲ್ಲವೂ ಅವನತಿ ಹೊಂದಿವೆ. ಐತಿಹಾಸಿಕ ದೃಷ್ಠಿಕೋನದಿಂದ ಇಂತಹ ಸ್ಮಾರಕಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಲ್ಪಸ್ವಲ್ಪ ಮಟ್ಟಿಗೆ ಗುಬ್ಬಿ ಪ್ರಾದೇಶಿಕ ಪರಿಸರದಲ್ಲಿ ಜೀವಂತವಾಗಿ ಉಳಿದುಕೊಂಡು ಬಂದಿರುವ ಗ್ರಾಮ ರಕ್ಷಣಾ ವಾಸ್ತುವಿನಲ್ಲಿ ಹಾಗಲವಾಡಿ ರಕ್ಷಣಾ ಕೋಟೆ ಒಂದಾಗಿದೆ. ಗುಬ್ಬಿ ತಾಲೂಕಿನ ಒಂದು ಹೋಬಳಿ ಕೇಂದ್ರವಾಗಿದ್ದು ತಾಲೂಕು ಕೇಂದ್ರದಿಂದ 32 ಕಿ.ಮೀ ದೂರದಲ್ಲಿದೆ. ಪ್ರಾರಂಭದಲ್ಲಿ ಈ ಗ್ರಾಮಕ್ಕೆ ಹಾಗಲದಹಳ್ಳಿ ಎಂಬ ಹೆಸರಿದ್ದು ಈ ಗ್ರಾಮಕ್ಕೆ ರಕ್ಷಣಾ ದೃಷ್ಠಿಯಿಂದ ಕೋಟೆ ನಿರ್ಮಿಸಿದ್ದರಿಂದ ಹಾಗಲವಾಡಿ ಎಂದಾಯಿತು. ಈ ಕೋಟೆಯನ್ನು ಹಿರಿಮುದಿಯಪ್ಪನಾಯಕ ಆನೆಗೊಂದಿ ಮೂಲದ ಕರಿಯನಾಯಕ ಎಂಬುವನಿಂದ ಹಾಗಲದಹಳ್ಳಿಯನ್ನು ಗೆದ್ದು ಕೋಟೆಯನ್ನು ನಿರ್ಮಿಸಿದನು. ಹಾಗಲವಾಡಿ ಕೋಟೆ ನೆಲಕೋಟೆಯಾಗಿದ್ದು ಸಂಪೂರ್ಣವಾಗಿ ಅವಸಾನದ ಹಂತದಲ್ಲಿದೆ. ಅಳಿದುಳಿದಿರುವ ಕೋಟೆಯ ರಚನೆಯನ್ನು ಗಮನಿಸಿದಾಗ ಚೌಕಕಾರವಾಗಿ ನಿರ್ಮಾಣವಾಗಿತ್ತೆಂದು ಹೇಳಬಹುದು ಸಾಮಾನ್ಯವಾಗಿ ಕೋಟೆ ನಿರ್ಮಿಸುವಾಗ ಸ್ಥಳೀಯವಾಗಿ ದೊರೆಯುವ ದಪ್ಪ ದಪ್ಪ ಗುಂಡು ಕಲ್ಲುಗಳನ್ನು ಬಳಸಿ ನಿರ್ಮಿಸುತ್ತಿದ್ದರು ಆದರೆ ಈ ಕೋಟೆಯನ್ನು ಸಣ್ಣದಾದ ಸೈಜು ಕಲ್ಲನ್ನು ಬಳಸಿ ಒಂದರ ಮೇಲೊಂದರಂತೆ ಬೆಲ್ಲದ ಅಚ್ಚಿನಂತೆ ಪೇರಿಸಲಾಗಿದೆ. ಕೋಟೆಯ ಗೋಡೆಗೆ ಗಾರೆ ಗಚ್ಚು ಬಳಸಿರುವುದು ಕಂಡುಬರುವುದಿಲ್ಲ. ಆದರೂ ಸುಭದ್ರವಾದ ಕೋಟೆಯಾಗಿದೆ. ಕೋಟೆಯ ಬಾಗಿಲು ಪೂರ್ವಾಭಿಮುಖವಾಗಿದ್ದು ಬೊಂಬೆ ಊರಬಾಗಿಲೆಂದು ಕರೆಯುತ್ತಾರೆ. ಇಲ್ಲಿ ಅನೇಕ ಉಬ್ಬುಶಿಲ್ಪಗಳಿವೆ. ಆಮೆ, ಮೀನು, ಹಾವು, ಲಜ್ಜಗೌರಿ ಮುಂತಾದವು ಸುಮಾರು 20 ಅಡಿ ಎತ್ತರವಾಗಿದೆ. ಅದರ ಮೇಲೆ ಶಾಲಾ ಕೋಷ್ಠ ಅಲಂಕರಣೆಯಿದ್ದು ಇರುವ ಮೂರು ಕೋಷ್ಠಗಳಲ್ಲೂ ಮೂರ್ತಿಗಳನ್ನು ಇಡಲಾಗಿತ್ತು. ಅವುಗಳು ನಶಿಸಿಹೋಗಿವೆ. ಮುಖ್ಯ ಬಾಗಿಲ ಬಲಭಾಗದಲ್ಲಿ ಏಳು ಅಡಿ ಎತ್ತರದ ದಿಡ್ಡಿಗಳನ್ನು ನಿರ್ಮಿಸಲಾಗಿದ್ದು ಅದರ ಪಕ್ಕದಲ್ಲಿ ಬುರುಜು ನಿರ್ಮಿಸಲಾಗಿದೆ. ಈ ಬುರುಜು ಶತೃ ಸೈನ್ಯವನ್ನು ಗಮನಿಸಲು ಬಳಕೆಯಾಗುತ್ತಿದ್ದವು. ದ್ವಾರದ ಒಳಭಾಗದ ಎರಡು ಭಾಗಗಳಲ್ಲಿ ಒಂದೊಂದು ಕೋಣೆಯಿದ್ದು ಸುಮಾರು 5 ಅಡಿ ಎತ್ತರದ ಜಗಲಿಯಿದ್ದು ಕಂಬಗಳನ್ನಿಡಲಾಗಿದೆ. ಅವುಗಳಲ್ಲಿ ಗಣಪತಿ, ಹನುಮಂತನ ಶಿಲ್ಪಗಳನ್ನು ಕೆತ್ತಲಾಗಿದೆ. ಮುಖ್ಯಬಾಗಿಲು ಮತ್ತು ಎರಡನೇ ಕೋಟೆಬಾಗಿಲು ಮಧ್ಯೆ ಅನೇಕ ಸ್ಮಾರಕಗಳಿವೆ. ನರಸಿಂಹಸ್ವಾಮಿ ದೇವಸ್ಥಾನ. ಮುದ್ದವೀರಸ್ವಾಮಿ ಗದ್ದುಗೆ, ಸೋಮನ ಕಟ್ಟೆ, ಕಲ್ಯಾಣಿ ಮುಂತಾದ ಸ್ಮಾರಕಗಳಿದ್ದು ವಿನಾಶದ ಹಂಚಿನಲ್ಲಿವೆ. ಕೋಟೆಯ ಎರಡನೇ ಬಾಗಿಲು ಶಿಥಿಲವಾಗಿದೆ. ಲಜ್ಜಗೌರಿ, ಆಮೆಯಂತಹ ಉಬ್ಬುಶಿಲ್ಪಗಳಿವೆ. ಈ ಬಾಗಿಲಿನ ಬಲಭಾಗದಲ್ಲಿ ಸುಮಾರು 40 ಅಡಿ ಎತ್ತರದ ವೃತ್ತಾಕಾರದ ಬುರುಜು ನಿರ್ಮಿಸಲಾಗಿದೆ. ಇದರ ಮೇಲೆರಲು ಮೆಟ್ಟಿಲುಗಳಿದ್ದು ಶಿಥಿಲಗೊಂಡಿವೆ. ಈ ಬುರುಜಿನ ಮೇಲೆ ಸೈನಿಕರು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಈ ಬುರುಜು ಇಡೀ ಕೋಟೆಯನ್ನು ರಕ್ಷಣೆ ಮಾಡಿತ್ತು ಎಂದರೆ ತಪ್ಪಾಗಲಾರದು. ಸ್ವಲ್ಪ ಮುಂದೆ ಸಾಗಿದರೆ ವಿಶಾಲ ಭೂ ಪ್ರದೇಶ, ಈಜುಕೊಳ, ಅರಮನೆ ಅವಶೇಷಗಳು ರಾಮೇಶ್ವರ ದೇವಾಲಯ, ಮದ್ದಿನ ಕಣಜ ಇತರ ಕಟ್ಟಡ ಅವಶೇಷಗಳನ್ನು ಕಾಣಬಹುದು. ಇದು ಅಭೇದ್ಯವಾಗಿದ್ದು ಸುತ್ತಲೂ ಕಂದಕವನ್ನು ತೋಡಿ ನೀರನ್ನು ತುಂಬಿಸುತ್ತಿದ್ದರು. ಆದರೆ ಈ ಕಂದಕ ಸಂಪೂರ್ಣ ಮುಚ್ಚಿಹೋಗಿದೆ. ಈ ಕೋಟೆ ಒಳಭಾಗದಲ್ಲಿ ಅನೇಕ ದೇವಾಲಯಗಳು, ಗದ್ದುಗೆಗಳು, ಮಠಗಳು, ಅರಮನೆಗಳು, ಚನ್ನಕೇಶವ, ರಾಮೇಶ್ವರ, ನರಸಿಂಹಸ್ವಾಮಿ ಮೂರ್ತಿಶಿಲ್ಪಗಳು ದೊಣೆಗಳು, ಕಣಜಗಳು ಇನ್ನಿತರ ಸ್ಮಾರಕಗಳಿದ್ದು ಬಹುಪಾಲು ವಿನಾಶದ ಹಂಚಿನಲ್ಲಿವೆ. ಇತ್ತೀಚೆಗೆ ಇದೇ ಗ್ರಾಮದ ಸುಮಾರು 40ರಿಂದ 50 ಯುವಕರು ಸ್ನೇಹಜೀವಿ ಬಳಗ ಎಂಬ ಸಂಘವನ್ನು ಕಟ್ಟಿಕೊಂಡು ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳುವುದಕ್ಕೆ ಅವುಗಳ ಸಂರಕ್ಷಣೆ ಮತ್ತು ಸ್ವಚ್ಛತಾ ಕಾರ್ಯವನ್ನು ಪ್ರತಿಭಾನುವಾರ ಕೈಗೊಳ್ಳುತ್ತಿರುವುದು ಶ್ಲಾಘನೀಯ.
ಗುಬ್ಬಿ ಪ್ರಾದೇಶಿಕ ಪರಿಸರದಲ್ಲಿ ಚೇಳೂರು ಎಂಬ ಗ್ರಾಮವಿದ್ದು ಇದು ಹೋಬಳಿ ಕೇಂದ್ರವಾಗಿದೆ. ತಾಲೂಕು ಕೇಂದ್ರಸ್ಥಾನದಿಂದ 16 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ರಕ್ಷಣಾತ್ಮಕ ವಾಸ್ತು ಇತ್ತು ಎಂಬುದಕ್ಕೆ ಜನಪದ ಕಾವ್ಯ ಸಾಕ್ಷಿಯಾಗಿದೆ.
"ಚೇಳೂರುಂಬೋದು ಏಳು ಸುತ್ತಿನ ಕ್ವಾಟೆ
ಪಕ್ಸಿಹಾರಿದರೆ ಗಳಿರೆಂಬೋ/ಕ್ವಾಟೆಗೆ
ಹೊಕ್ಕನಲ್ಲಮ್ಮ ಬಡಮೈಲ"1
ಈ ಜನಪದ ಕಾವ್ಯ ಚೇಳೂರಿನ ಕೋಟೆ ಕೊತ್ತಲಗಳನ್ನು ಪರಿಚಯಿಸುತ್ತದೆ. ಚೇಳೂರು ಗ್ರಾಮಕ್ಕೆ ಇದ್ದ ರಕ್ಷಣಾತ್ಮಕ ಗೋಡೆ (ಕೋಟೆ) ಸಂಪೂರ್ಣವಾಗಿ ಅವನತಿ ಹೊಂದಿದೆ. ಅವಸಾನದ ಹಂಚಿನಲ್ಲಿರುವ ಕೋಟೆಯ ಬಾಗಿಲು ಇದೆ. ಈ ಬಾಗಿಲಿನ ಲಲ್ಲಾಟ ಭಾಗದಲ್ಲಿ ಕಲ್ಲಿನಲ್ಲಿ ಮಾಡಿರುವ ಒಂದು ಬೊಗಸೆ ವಿಸ್ತೀರ್ಣದಲ್ಲಿ ಕೋಳಿಯ ಚಿತ್ರವನ್ನು ಕೆತ್ತಲಾಗಿದೆ. ಈ ಕಲ್ಲುಕೋಳಿ ಕೂಗಿ, ಚೇಳೂರು ಬಾವಿ ತುಂಬಿ ಹರಿದು, ಮರಳು ಬಸವಣ್ಣ ಗುಟುರು ಹಾಕಿದರೆ ಕಲಿಯುಗ ಮುಳುಗಿ ಪ್ರಳಯವಾಗುತ್ತದೆಂಬ ನಂಬಿಕೆ ಜನಪದರಲ್ಲಿ ಇದೆ. ಚೇಳೂರು ಕೋಟೆಯನ್ನು ಮೀರಿ ನಾಲ್ಕು ಪಟ್ಟು ಬೆಳೆದಿರುವುದರಿಂದ ಕೋಟೆ, ಕೋಟೆಯ ಸುತ್ತ ಇದ್ದ ಕಂದಕ, ಪಾಳಿ ಎಲ್ಲವೂ ಸಂಪೂರ್ಣ ನಾಶವಾಗಿದ್ದು ಅವಸಾನದಲ್ಲಿರುವ ಕೋಟೆಯ ಬಾಗಿಲು ಮಾತ್ರ ಇದೆ.
ತಾಲೂಕು ಕೇಂದ್ರದಿಂದ 19 ಕಿ.ಮೀ ದೂರದಲ್ಲಿ ಮೂಗನಾಯ್ಕನ ಕೋಟೆ ಎಂಬ ಗ್ರಾಮವಿದೆ. ಇಲ್ಲಿ ಹಿಂದೆ ಮೂಗನಾಯಕ ಕೋಟೆ ಕಟ್ಟಿ ವಿಸ್ತಾರ ಪ್ರದೇಶದಲ್ಲಿ ಆಡಳಿತ ನಡೆಸಿದ್ದರಿಂದ ಮೂಗನಾಯಕನ ಕೋಟೆ ಎನ್ನುತ್ತಾರೆ. ಮರಾಠರ ದಾಳಿಗಿಂತ ಮೊದಲು ಭದ್ರವಾದ ಕೋಟೆಯನ್ನು ಈ ಪ್ರದೇಶದ ರಕ್ಷಣೆಗೆ ಕಟ್ಟಲ್ಪಟ್ಟಿತ್ತು. ಕೋಟೆಯ ಒಳಭಾಗಗಳಲ್ಲಿ ವಿಶಾಲವಾದ ಮಾರುಕಟ್ಟೆ ಇದ್ದುದರಿಂದ ಅಂಗಡಿ ಮುಂಗಟ್ಟುಗಳ ಸಾಲುಗಳಿದ್ದವು. 18ನೇ ಶತಮಾನದಲ್ಲಿ ಮರಾಠ ಸರದಾರ ಪರಶುರಾಮ ಭಾವೆ ಶಿರಾದಲ್ಲಿ ತಂಗಿ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಬೃಹತ್ ಸೈನ್ಯವನ್ನು ಬಳಸಿ ಕೋಟೆಯನ್ನು ಮುತ್ತಿಗೆ ಹಾಕಿದನು ಆದರೂ ಕೊನೆಗೆ ಗೆಲ್ಲಲಾರದೆ ಆಕ್ರಮಣವನ್ನು ಹಿಂತೆಗೆದುಕೊಳ್ಳಲಾಯಿತು. ಆದರೂ ಈ ಪ್ರದೇಶದಲ್ಲಿ ಕೋಟೆಯ ಅವಶೇಷಗಳು ಮಾತ್ರ ಕಂಡುಬರುತ್ತವೆ. ಇಂದಿಗೂ ಕೋಟೆ ಬೀದಿ ಎಂಬ ಒಂದು ಬೀದಿಯೇ ಇದೆ. ಇವುಗಳೇ ಅಲ್ಲದೆ ಗುಬ್ಬಿ ಪ್ರಾದೇಶಿಕ ಪರಿಸರದಲ್ಲಿ ಗುಬ್ಬಿ ಗುಬ್ಬಿಹೊಸಹಳ್ಳಿ, ಪ್ರಭುವನಹಳ್ಳಿ, ಮಾರಶೆಟ್ಟಿಹಳ್ಳಿ, ಬಿದರೆ ಮುಂತಾದ ಗ್ರಾಮಗಳಲ್ಲಿ ಗ್ರಾಮರಕ್ಷಣಾತ್ಮಕ ಕೋಟೆಗಳಿದ್ದು ಗ್ರಾಮಗಳು ಕೋಟೆಯನ್ನು ಮೀರಿ ಬೆಳೆದಿದ್ದರಿಂದ ಇಂದು ಕೆಲವು ಗ್ರಾಮಗಳಲ್ಲಿ ಕೋಟೆಯ ಅವಶೇಷಗಳು ಕಂಡುಬಂದರೆ ಕೆಲವು ಗ್ರಾಮಗಳಲ್ಲಿ ಸಂಪೂರ್ಣವಾಗಿ ನಾಶವಾಗಿವೆ.
ಅಡಿ ಟಿಪ್ಪಣಿ.
1. ಚಿಕ್ಕಣ್ಣಯಣ್ಣೆಕಟ್ಟೆ, ತುಮಕೂರು ಜಿಲ್ಲೆ ಜಾನಪದೀಯ ಅಧ್ಯಯನ.
ಆಧಾರ ಗ್ರಂಥಗಳು