ಅಲ್ಲಮನ ವಚನಗಳಲ್ಲಿ ದೇಹ ಮೀಮಾಂಸೆ
-ಡಾ. ಸ್ವಾಮಿ ನ. ಕೋಡಿಹಳ್ಳಿ.
ಉಪನ್ಯಾಸಕರು, ಕನ್ನಡ ವಿಭಾಗ,
ಸ್ಕೂಲ್ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಲಾಂಗ್ವೇಜ್
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ, ತೆಜಸ್ವಿನಿ ಹಿಲ್ಸ್, ಪೆರಿಯಾ ಪೊಸ್ಟ್, ಕಾಸರಗೋಡು. ಕೇರಳ.
swamykn85@gmail.com cell: 9845346098
ಪ್ರಸ್ತಾವನೆ:
ದೇಹ, ಅಸ್ತಿತ್ವದ ಪ್ರತೀಕ ಮತ್ತು ಚಲನಶೀಲತೆಯ ಪ್ರಜ್ಞೆ ಇಂತಹ ದೇಹದ ಬಗ್ಗೆ ಅನೇಕ ವಚನಕಾರರು ಪರ ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ವಚನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಸ್ಥಾವರ ಸಂಸ್ಕೃತಿಯನ್ನು ನಿರಾಕರಿಸುತ್ತ ಬಸವಣ್ಣ “ದೇಹವೇ ದೇಗುಲ” ಎಂದು ದೇಹವನ್ನು ಉನ್ನತೀಕರಿಸಿದ. ಮನುಷ್ಯನ ಅಸ್ತಿತ್ವದಲ್ಲಿ ದೇಹದ ಅವಶ್ಯಕತೆಯನ್ನರಿತೂ ದೇಹಾತೀತವಾದ ಚಿಂತನೆಗಳನ್ನು ವಚನಕಾರರು ಮಾಡಿದ್ದಾರೆ. ಇತರ ವಚನಕಾರರಿಗಿಂತ ಅಲ್ಲಮನು ಮಾಡುವ ‘ಅಂಗ’ದ ಚಿಂತನೆ ವಿಶಿಷ್ಟವಾದದ್ದು, “.....ಅಲ್ಲಮನಲ್ಲಿ ಶರೀರ ಮಾರ್ಗದ ಬಗ್ಗೆ ಸಂದೇಹವಿದೆ. ಶರೀರದ ಬಗ್ಗೆ ಆತ್ಯಂತಿಕವಾದ ಶಂಕೆಯಿದೆ. ಆದರೆ, ಅಲ್ಲಮ ಶ್ರಮಣ ಮಾರ್ಗದ ದೇಹದಂಡನೆಯ ಕಠಿಣ ವ್ರತವನ್ನು ಹಿಡಿದವನೂ ಅಲ್ಲ ‘ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು’ ಎನ್ನುತ್ತಾನೆ. ಇದು ಆತನ ಮೇಲಿದ್ದಿರಬಹುದಾದ ಬೌದ್ಧ ಮಧ್ಯಮಮಾರ್ಗದ ಪ್ರಭಾವದ ಮಾತಿರಲೂಬಹುದು. ಆದರೆ, ಶರೀರವನ್ನೇ ಸಕಲ ರಹಸ್ಯಗಳ ತಾಣ, ಸಕಲ ಸಮೃದ್ಧಿಗಳ ಮಾರ್ಗ.....”1ಎಂದು ಡಿ.ಆರ್. ನಾಗರಾಜ ತಮ್ಮ ‘ಹೊಸ ಕಾವ್ಯ ಮೀಮಾಂಸೆಯ ಕಡೆಗೆ’ ಲೇಖನದಲ್ಲಿ ಚರ್ಚಿಸುತ್ತಿರುವುದನ್ನು ಗಮನಿಸಿದರೆ ದೇಹದ ಬಗ್ಗೆ ಅಲ್ಲಮನ ನಿಲುವು ‘ಅನುಭವ’*ಗೊಳ್ಳುವಂತಹದ್ದು.
ಕೀ ವರ್ಡ್:
ದೇಹ, ಕಾಯ, ಪಂಚೇಂದ್ರೀಯ, ದೇಗುಲ, ಲಿಂಗಪತಿ, ಶರಣ ಸತಿ, ದೇಹಧಾರಣೆ, ಕಾಲಾತೀತ, ಕಾಣ್ಕೆ, ಸೌಂದರ್ಯ ಮೀಮಾಂಸೆ,
ದೇಹ, ಶರೀರ, ಕಾಯ, ತನು, ಅಂಗ ಎಂದೆಲ್ಲಾ ಪರ್ಯಾಯ ಪದಗಳನ್ನು ಬಳಸುವಾಗ ನಮ್ಮ ಪ್ರಜ್ಞೆಯಲ್ಲಿ ಮೂರ್ತೀಕರಿಸಿಕೊಳ್ಳುವುದು ಮುಖ್ಯವಾಗಿ ಮನುಷ್ಯನನ್ನು. ಆನಂತರ ಪ್ರಾಣಿ, ಪಕ್ಷಿ, ಕೀಟ ಇತರೆ ಜೀವಜಗತ್ತು ನಮ್ಮ ಅರಿವನ್ನು ಎದುರುಗೊಳ್ಳುತ್ತದೆ. ಆದರೆ ಹಗಲು-ಇರುಳು, ಭೂಮಿ-ಆಕಾಶ, ಶಬ್ಧ-ನಿಶಬ್ಧ ಅರಿವು-ಮರುವು, ರೂಪ, ರುಚಿ, ಪರಿಮಳ, ಸಿಂಗಾರ ಅಷ್ಟೇ ಅಲ್ಲದೆ ನಿದ್ರೆ, ನದಿ, ಕಿಚ್ಚು, ಗಾಳಿ ಇವುಗಳೆಂದೂ ನಮ್ಮ ಅರಿವಿನಲ್ಲಿ ಶರೀರ ಧಾರಣ ಮಾಡಿಕೊಳ್ಳಲಾರವು. ಆ ಕಾಣ್ಕೆ ನಮ್ಮಲ್ಲೂ ಇಲ್ಲ. ಆದರೆ ಅಲ್ಲಮನ ದೃಷ್ಟಿ ಈ ಎಲ್ಲಾ ಪ್ರಕೃತಿಯ ಚರಾಚರಗಳನ್ನು ಮೂರ್ತೀಕರಿಸಿಕೊಂಡು ಒಳಗೊಳ್ಳುತ್ತಿತ್ತು. ಈ ಭೂಮಿಯ ಚರಾಚರಗಳನ್ನು ಕಾಣುವಲ್ಲಿ ಮುಖ್ಯವಾಗಿ ಎರಡು ದೃಷ್ಟಿಗಳಿವೆ. ಈಗಿರುವ ಶಾರೀರಿಕ ರಚನೆಯಿಂದಲೇ ನೋಡುವ ಮತ್ತು ಗುರುತಿಸುವ ಕ್ರಮ ಒಂದಾದರೆ, ಅಶರೀರವಾದ ಅದರ ಸ್ವರೂಪಕ್ಕೆ ತನ್ನದೇ ರೀತಿಯಲ್ಲಿ ದೇಹಧಾರಣೆ ಮಾಡಿ ನೋಡುವ ದೃಷ್ಟಿ ಎರಡನೆಯದು. ಅಲ್ಲಮ ಈ ಎರಡನೇ ದೃಷ್ಟಿಯನ್ನು ಒಳಗೊಂಡತಹವನು. ಇಂತಹ “ದೇಹ ಮೀಮಾಂಸೆಯು ಏಕ ಕಾಲಕ್ಕೆ ಸಮಾಜ ಮೀಮಾಂಸೆಯೂ ಹೌದು. ಸೌಂದರ್ಯ ಮೀಮಾಂಸೆಯೂ ಹೌದು. ಎಂಬುದನ್ನು ಅಲ್ಲಮನೂ ಒಪ್ಪುತ್ತಾನೆ.”2 ಎನ್ನುವ ಚರ್ಚೆಯಲ್ಲಿನ ಅಲ್ಲಮನ ಒಳನೋಟಗಳು ಬಹಳ ಮುಖ್ಯವಾಗುತ್ತವೆ. ಕಾರಣ ಅವನ ಬೆಡಗಿನ ವಚನಗಳು, ಅವುಗಳ ಅನಾವರಣ ಕಾಲಾತೀತವಾದದ್ದು.
ಹರಿವ ನದಿಗೆ ಮೈಯೆಲ್ಲ ಕಾಲು
ಬೀಸುವ ಗಾಳಿಗೆ ಮೈಯೆಲ್ಲ ಬಾಯಿ
ಉರಿದ ಕಿಚ್ಚಿಗೆ ಮೈಯೆಲ್ಲ ಕೈ
ಇದು ಕಾರಣ, ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯ. [365:ಡಾ.ಎಲ್ ಬಸವರಾಜ]
ಈ ವಚನಗಳಲ್ಲಿ ಸಂಜೀವ ಕುಲಕರ್ಣಿಯರವರು ವ್ಯಾಖ್ಯಾನಿಸಿರುವಂತೆ3 ಮನುಷ್ಯನ ಶರೀರದ ಅವಯವಗಳನ್ನು ಭೌತಿಕವಾದ ನದಿ, ಗಾಳಿ, ಕಿಚ್ಚುಗಳಿಗೆ ದಾನ ಮಾಡುವುದಿಲ್ಲ. ಅವುಗಳದೇ ಆದ ಹೊಸದೊಂದು ದೇಹ ಸಂರಚನೆಯನ್ನು ಕಾಣುತ್ತಾನೆ. ಅವುಗಳ ಚಲನಶೀಲತೆ ಮನುಷ್ಯನಿಗಿಂತ ಮಿಗಿಲಾದದ್ದು. ಒಂದು ವೇಳೆ ನಮ್ಮ ಶರೀರದ ಅವಯವಗಳನ್ನು ಧಾರಣೆ ಮಾಡಿದ್ದೇ ಆದರೆ ಅವುಗಳ ಚಲನಶೀಲತೆ ಅಂಗವೈಕಲ್ಯಕ್ಕೆ ಒಳಗಾಗಿತ್ತದೆ. ಅಲ್ಲದೆ ಅಲ್ಲಮನ ವಿಶಾಲ ದೃಷ್ಠಿಯೂ ಸಂಕುಚಿತಗೊಳ್ಳುತ್ತದೆ. ಸ್ವತಂತ್ರ ರೂಪವಿದ್ದರೂ ದೇಹಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ಸದಾಕಾಲ ದೇಹ ಚೈತನ್ಯಪೂರ್ಣವಾದ ಜೀವವನ್ನು ತನ್ನಲ್ಲಿ ಸಾಕ್ಷೀಕರಿಸಿಕೊಂಡು ತಾನೂ ಚೈತನ್ಯ ಪೂರ್ಣವಾಗುತ್ತಿರುತ್ತದೆ. ಇಂತಹ ಪರಾವಲಂಬಿ ದೇಹಕ್ಕೆ ಅಲ್ಲಮ ವಿಮುಖನಾಗುವುದು ಅಥವಾ ‘ಕಾಯ’ವಳಿದು ನುಡಿವುದು ಪಂಚೇಂದ್ರಿಯಗಳನ್ನೊಳಗೊಂಡು ಅವುಗಳ ಅಭೀಪ್ಸೆಗೆ ಸಿಲುಕುವುದರಿಂದ-
ಐದು ಸರ್ಪಂಗಳಿಗೆ
ತನುವೊಂದು, ದಂತವೆರಡು!
ಸರ್ಪಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ!
ಈ ನಿತ್ಯವನರಿಯದ ಠಾವಿನಲ್ಲಿ
ಭಕ್ತಿಯೆಲ್ಲಿಯದೋ ಗುಹೇಶ್ವರ [52 : ಡಾ .ಎಲ್. ಬಸವರಾಜ]
ದೇಹದ ಅಸ್ಥಿರತೆಗೆ ಮುಖ್ಯಕಾರಣ ಪಂಚೇಂದ್ರಿಯಗಳ ತೋಯ್ದಾಟ. ಇಂತಹ ಪಂಚೇಂದ್ರಿಯಗಳ ಸೆಳೆತಕ್ಕೆ ಪ್ರಾರಂಭದಲ್ಲಿ ಅಲ್ಲಮನು ಒಳಗಾಗಿದ್ದಾನೆಂಬುದನ್ನು ಹರಿಹರನ ರಗಳೆಯಿಂದ ತಿಳಿಯಬಹುದಾಗಿದೆ. ಅಲ್ಲಮನ, ದೇಹ ನಿರಾಕರಣೆಯ ಹಿನ್ನೆಲೆಯಲ್ಲಿ ಸ್ವಾನುಭವವು ಕೆಲಸ ಮಾಡಿದೆ. ಜೊತೆಗೆ ದೇಹ ಸುಖಾಶ್ರಿತವಾದದ್ದು. ಆ ಸುಖ ಯಾವಾಗ ಬೇಕಾದರೂ ಕ್ಷೀಣಿಸಬಹುದು. ವಿಚಾರದ ನೆಲೆಯಲ್ಲಿರುವ ಮನಸ್ಸು ಚಂಚಲಚಿತ್ತವಾದರೂ, ಒಂದಲ್ಲ ಒಂದು ವಿಚಾರದಲ್ಲಿ ಗಸ್ತುತಿರುಗುತ್ತಲೇ ಇರುತ್ತದೆ. ಸುಖದ ಬಗ್ಗೆಯೂ ಅದು ವಿಚಾರ ಮಾಡಬಹುದು. ಆದರೆ ದೇಹಕ್ಕಿಂತ ಭಿನ್ನವಾದ ಸುಖದ ನೆಲೆಗಳನ್ನು ಮನಸ್ಸು ಗ್ರಹಿಸುತ್ತಿರುತ್ತದೆ. ಸತಿ-ಪತಿ ಭಾವ ವಚನ ವಾಙ್ಮಯದಲ್ಲಿ ವಿಶಿಷ್ಟವಾದದ್ದು, ಪೂಜ್ಯವಾದದ್ದು ಮತ್ತು ದೈವತ್ವದ ಕಾಣ್ಕೆ. ಈ ನೆಲೆಯಲ್ಲಿ ಅಕ್ಕ ಮಹಾದೇವಿ ಬದುಕಿನ ಔನತ್ಯ ಕಂಡವಳು. ಅಲ್ಲಮ ಮಾತ್ರ ‘ಶರಣಸತಿ ಲಿಂಗಪತಿ’ ಎಂಬರು ಹುಸಿಯಯ್ಯ! ಎನ್ನುವ ನಿರಾಕರಣೆಯನ್ನು ತಾಳುತ್ತಾನೆ. ಅದಕ್ಕೆ ಮುಖ್ಯ ಕಾರಣ ಶಿವನನ್ನು ನಿರಾಕಾರವಾಗಿ; ‘ಇಷ್ಟಲಿಂಗ’ವನ್ನು ಕಾಣಬಯಸುವ ವಚನಕಾರರೂ ‘ಶರಣಸತಿ ಲಿಂಗಪತಿ’ ಎಂಬುದರ ಮೂಲಕ ಶರೀರ ಧಾರಣೆ ಮಾಡುವುದು. ಹೀಗೆ ಶಿವನಿಗೆ ಶರೀರ ಧಾರಣೆ ಮಾಡುವುದರ ಬದಲಾಗಿ-
‘....ಲಿಂಗವೇ ಪತಿಯಾದ ಬಳಿಕ
ಸತಿಗೆ ಪತಿಯುಂಟೆ ?
ಪತಿಗೆ ಸತಿಯುಂಟೆ ?
ಪಾಲುಂಡು ಮೇಲುಂಬರೇ ಗುಹೇಶ್ವರ?! [89; ಡಾ .ಎಲ್. ಬಸವರಾಜ]
ಈ ರೀತಿ “ಅಲ್ಲಮ ಉದ್ದಕ್ಕೂ ಬೇರೆ ಬೇರೆ ವಚನಗಳಲ್ಲಿ ಲಿಂಗ ಅನ್ನುವುದನ್ನು ಬೇರೆ ಬೇರೆ ರೀತಿಯೊಳಗೆ ಹೇಳುತ್ತಾನೆ. ಆದರೆ ಒಂದೇ ಸತ್ಯವನ್ನು ಹೇಳುತ್ತಾನೆ. ಅಲ್ಲಮನಿಗೆ ಲಿಂಗ ಎಂದರೆ ಗುಹೇಶ್ವರ, ಗುಹೇಶ್ವರ ಎಂದರೆ ಅರಿವು, ಅರಿವು ಎಂದರೆ ಬಯಲು, ಬಯಲು ಅಂದರೆ ಶೂನ್ಯ, ಶೂನ್ಯ ಅಂದರೆ ಲಿಂಗ’4 ಹೀಗೆ ಲಿಂಗವೇ ಶೂನ್ಯವೆಂದ ಮೇಲೆ ಮತ್ತೆ ಅದಕ್ಕೊಂದು ‘ಕಾಯ’ಕಲ್ಪ ಸಲ್ಲದು ಎಂಬ ನಿಲುವು ಅಲ್ಲಮನದು. ‘ದೇಹವೇ ಪಿಂಡಿಗೆ/ ಜೀವವೇ ಲಿಂಗ’ವಾಗಿಸುವಲ್ಲಿ ಅಲ್ಲಮನ ದೇಹ ಮೀಮಾಂಸೆಯ ತತ್ವ ಅಡಗಿದೆ.
ಮಣ್ಣಿಲ್ಲದ ಹಾಳ ಮೇಲೆ
ಕಣ್ಣಿಲ್ಲದಾತ ಮಣಿಯ ಕಂಡ!
ಕೈಯಿಲ್ಲದಾತ ಪವಣಿಸಿದ!
ಕೊರಳಿಲ್ಲದಾತ ಕಟ್ಟಿಕೊಂಡ!
ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೇ ಗುಹೇಶ್ವರ [218: ಡಾ. ಎಲ್. ಬಸವರಾಜ]
ಅಲಂಕಾರದ ಅವಶ್ಯಕತೆ ಇರುವುದು ವಿಕಾರಕ್ಕೆ. ಅಲಂಕಾರ/ಸಿಂಗಾರ, ರೂಪದ ನೈಜತೆಯನ್ನು ಮರೆಮಾಚುವ ತಂತ್ರ. ಅಂಗವನ್ನು ಅಲಂಕರಿಸಿಕೊಳ್ಳುವುದಕ್ಕಿಂತಲೂ; ಅಥವಾ ಸಿಂಗಾರದಿಂದ ನಾವು ರೂಪಾಂತರ ಗೊಳ್ಳುವುದಕ್ಕಿಂತಲೂ ಅದಕ್ಕೊಂದು ಹೊಸ ಧಾರಣಶಕ್ತಿಯನ್ನು ಕಂಡುಕೊಂಡಿದ್ದಾನೆ.
ಅಲ್ಲಮನ ದೇಹದ ನಿರಾಕರಣೆಯ ಜೊತೆಗೆ “ಎನ್ನ ಕಾಯದ ಕರ್ಮದ ತೊಡೆದು.....ನೀನೆನ್ನ ಕಾಯದಲಡಗಿ”ಎಂಬ ದೇಹದ ಭಿನ್ನ ನಿಲುವುಗಳನ್ನು ಕಾಣಬಹುದು. ಈಗಾಗಲೇ ಹೇಳಿರುವಂತೆ ದೇಹ ಅಸ್ತಿತ್ವದ ಪ್ರತೀಕವಾದರೂ ಚಲನಶೀಲವಲ್ಲದ ಅದು ನಿರರ್ಥಕ. ಅದಕ್ಕಾಗಿ “ತಾ ಲಿಂಗ, ತನ್ನ ಮನವೇ ಪುಷ್ಪ!” ಎಂದು ದೇಹವನ್ನು ‘ಇಷ್ಟಲಿಂಗ’ವಾಗಿ ಕಾಣಬಯಸುತ್ತಾನೆ. ಆದರೆ “ಕಾಯದ ದಂದುಗ ಕಳೆಯಿಂದಲ್ಲದೆ/ಅರಿವು ಬರಿದೇ ಬಪ್ಪುದೇ?” ಮತ್ತೊಂದು ವಚನದಲ್ಲಿ “ಕಾಯದ ಸಂಗದ ಜೀವ ಉಳ್ಳನಕ್ಕರ ಎಂದೂ ಭವ ಹಿಂಗದು -ಗುಹೇಶ್ವg” ಎಂದೂ, ನಿರಾಕರಿಸುತ್ತಲೇ “ನೀನೆನ್ನ ಕಾಯದಲಡಗಿ” ಎಂದೂ, ನಿರಾಕರಿಸಿದ ದೇಹಕ್ಕೇ ಸ್ವಾಗತಿಸುತ್ತಾನೆ. ಹೀಗೆ ಸ್ವಾಗತಿಸುವುದು ಗುಹೇಶ್ವರನನ್ನಾದರೂ ಆಗಬಹುದು, ಚಲನಶಿಲತೆಯನ್ನಾದರೂ ಆಗಬಹುದು, ಮೀರಿದರೆ ಸಾವನ್ನಾದರೂ ಆಗಬಹುದು. ಅದೇನಿದ್ದರೂ ಓದುಗನ ಜಿಜ್ಞಾಸೆಗೆ ಬಿಟ್ಟದ್ದು.
ಉದಕ ಮೂರುತಿಯಾಗಿ
ಉದಯವಾಯಿತ್ತು ಪಿಂಡಿಗೆಯಲ್ಲಿ
ಮೂಲ ಸ್ಥಾನ ಸ್ಥಾಪ್ಯವಾಯಿತ್ತು
ಸ್ವದೇಹಶಿವ ಪುರದಲ್ಲಿ!
ವಾಯು ಪೂಜಾರಿಯಾಗಿ
ಪರಿಮಳದಿಂದೆ ದಂಡೆಯ ಕಟ್ಟಿ
ಪೂಜಿಸುತ್ತಿರ್ದುದೋ ನವದ್ವಾರ ಶಿವಾಲಯ ದಾದಿ ಮಧ್ಯಸ್ಥಾನದಲ್ಲಿ
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು. [112 :ಡಾ ಎಲ್. ಬಸವರಾಜ]
ಈ ವಚನದಲ್ಲಿ ವಿಶೇಷವಾಗಿ ಗಮನಿಸಬಹುದಾದದ್ದು “ಸ್ವದೇಹ ಶಿವಪುರದಲ್ಲಿ” ಎನ್ನುವಂತಹದ್ದು ದೇಹವನ್ನು ಶಿವಪುರವೆಂದು ಕರೆಯುವ ಮೂಲಕ ದೇಹದ ಹೊಸ ಅಸ್ತಿತ್ವದ ಕುರುಹನ್ನು ಅಲ್ಲಮ ನೀಡಿದ್ದಾನೆ. ಒಂದು ಊರೆಂದ ಮೇಲೆ ಅಲ್ಲಿ ವಿಭಿನ್ನತೆ ನೆಲೆಗೊಂಡಿರುತ್ತದೆ. ಈ ವಿಭಿನ್ನತೆ ಕೇವಲ ಮನುಷ್ಯ ರೂಪದಲ್ಲಿ ಅಷ್ಟೇ ಅಲ್ಲ ಜೀವ-ನಿರ್ಜೀವದಲ್ಲಿ ಆಕಾರ-ನಿರಾಕಾರದಲ್ಲಿ, ಸಕಲ ಚರಾಚರದಲ್ಲೂ ಇರುವಂತಹದು ಅದಕ್ಕಾಗಿ ಅಲ್ಲಮನ ಚಿಂತನೆ ಮೇಲಿನ ವಚನದಲ್ಲಿ ವಿಶಿಷ್ಟಗೊಂಡಿರುವುದು.
ಇನ್ನು ಭಾವನೆಗಳಿಗೆ, ವಿಚಾರಗಳಿಗೆ ಒಂದು ಹಂತದಲ್ಲಿ ಶರೀರಧಾರಣವೇ ಆಗದ ಅಶರೀರವಾದವುಗಳಿಗೆ ‘ಕಾಯಕಲ್ಪ’ ನೀಡಿ ಜೀವನವನ್ನಷ್ಟೇ ಅಲ್ಲದೆ ಭಾವವನ್ನು ತುಂಬುವ ಪರಿ ವಿಶಿಷ್ಟವಾದದ್ದು
ಇರುಳಿನ ಮುಖ ಹಗಲೆಂದರಿಯರು
ಹಗಲಿನ ಮುಖ ಇರುಳೆಂದರಿಯರು
ಇರುಳಿನ ಮುಖದೊಳಗೊಂದು
ನವರತ್ನದ ಖಂಡಿತಹಾರವಡಗಿತ್ತು
ಹಗಲಿನ ಮುಖದೊಳಗೊಂದು
ನವ ಚಿತ್ರ ಪತ್ರದ ವೃಕ್ಷವಡಗಿತ್ತು
ರತ್ನದ ಹಾರದ ವೃಕ್ಷಕ್ಕಾಹಾರವನಿಕ್ಕಿದಡೆ
ಗುಹೇಶ್ವರ ಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು. [129 : ಡಾ. ಎಲ್. ಬಸವರಾಜ]
ಇಡೀ ವಚನ ಜ್ಞಾನ-ಅಜ್ಞಾನಗಳನ್ನು, ಒಳಿತು-ಕೆಡುಕುಗಳನ್ನು ಹೇಳುತ್ತಿದೆ ಎಂದುಕೊಂಡರೂ ಅವುಗಳ ಅಭಿವ್ಯಕ್ತಿಗೆ ಇರುಳು- ಹಗಲುಗಳಿಗೆ ದೇಹಧಾರಣೆ ಮಾಡಿ ಅದರೊಟ್ಟಿಗೆ ಅನುಸಂಧಾನ ಮಾಡುತ್ತಿರುವುದು ವಿಶೇಷವಾಗಿದೆ. ಹಗಲು-ಇರುಳುಗಳನ್ನು ಈಗಿರುವ ಅಸ್ಥಿತ್ವದ ಚಹರೆಯಲ್ಲಿ ಕಾಣುವುದಕ್ಕೂ, ನಮ್ಮ ಅರಿವಿನಲ್ಲಿ ಮೂರ್ತೀಕರಿಸಿಕೊಂಡು ನೋಡುವುದಕ್ಕೂ ವ್ಯತ್ಯಾಸವಿದೆ. “ಕಾಯ ವಾಯವೋ” ಎಂಬಲ್ಲಿ ದೇಹದ ಆಕಾರವನ್ನು ಒಡೆದು ಕಟ್ಟುತ್ತಾನೆ. ಆ ಮೂಲಕ ಗಾಳಿಯಂತೆ ನಿಕಾರವೂ, ಸರ್ವವ್ಯಾಪಕವೂ ಆಗಬೇಕೆಂಬುದು ಅಲ್ಲಮನ ಅಭಿಮತ”.
ಉದಕದ ಕೈಕಾಲ ಮುರಿದು
ಅಗ್ನಿಯ ಕಿವಿಮೂಗನರಿದು ವಾಯುವ ತಲೆಯ ಹೊಯ್ದು
ಆಕಾಶವ ಶೂಲದಲಿಕ್ಕಿದ ಬಲ್ಲಿದ ತಳವಾರನೀತನು!
ಇದೊಂದು ಬೆಡಗಿನಿಂದ ಕೂಡಿದ ವಚನ, ಜೊತೆಗೆ ಅಲ್ಲಮನ ಕವಿತ್ವವನ್ನೂ ಕಾಣಬಹುದಾಗಿದೆ. ಯಾವ ರೂಪ ಆಕಾರವನ್ನಾದರೂ ಪಡೆಯಬಲ್ಲ ಉದಕ, ಅಗ್ನಿ, ವಾಯು ಇವುಗಳಲ್ಲೂ ಅಲ್ಲಮ ಹೊಸದೊಂದು ‘ಕಾಯ’ಕಲ್ಪ ಕಾಣಬಯಸಿದ್ದಾನೆ. ಆ ಮೂಲಕ ಅವುಗಳ ಅಸ್ತಿತ್ವದ ಅರಿವನ್ನು ನೀಡಿದ್ದಾನೆ.
ಇನ್ನು ಕೊನೆಯದಾಗಿ ಪ್ರಾಣಿ, ಪಕ್ಷಿ ದೇಹಗಳ ಮೂಲಕ ಹೊಸದೊಂದು ಚಿಂತನೆಯನ್ನು ಅಲ್ಲಮನ ವಚನಗಳು ಕಟ್ಟಿಕೊಡುತ್ತವೆ. ಅವೆಲ್ಲವೂ ಬೆಡಗಿನ ವಚನಗಳು. ಎಷ್ಟು ಅರ್ಥೈಸಿದರೂ ದಾಹಗೊಂಡು ಕುಳಿತ ಹಂಸದಂತೆ ಸದಾ ಧ್ಯಾನಾವಸ್ಥೆಯ ತಳಮಳ. ಅದಕ್ಕೆ ಸೂಕ್ತ ಉದಾಹರಣೆ ಎಂದರೆ
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ
ಈ ಎರಡರ ನಡು ಒಂದಾಗಿತ್ತು!
ಹುಲಿಯಲ್ಲ-ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ!
ತಲೆಯಿಲ್ಲದ ಮುಂಡ ತರಗೆಲೆಯ ಮೇದರೆ
ಎಲೆಮರೆಯಾಯಿತ್ತು ಗುಹೇಶ್ವರ.[21: ಡಾ:ಎಲ್, ಬಸವರಾಜ]
ವಿಷಯ ಸುಖದ ಬಗ್ಗೆ ಹೇಳುತ್ತಿದ್ದರೂ ಈ ವಚನದಲ್ಲಿ ಹುಲಿ ಮತ್ತು ಹುಲ್ಲೆ, ಈ ಎರಡೂ ಪ್ರತಿಮೆಗಳು ಸಾವು ಮತ್ತು ಜೀವಗಳ ಬಗೆಗಿನ ಸಂಬಂಧವನ್ನು ಕಟ್ಟಿಕೊಡುತ್ತದೆ. ಮತ್ತು ‘ಹುಲಿ’ಯನ್ನು ದೇಹಕ್ಕೆ ತಳುಕಿಸಿಕೊಂಡು ನೋಡಿದರೆ ಅದರ ವ್ಯಾಘ್ರತೆ ಅರ್ಥವಾಗುತ್ತದೆ.
ಹೀಗೆ ಅಲ್ಲಮನ ಕೆಲವು ವಚನಗಳನ್ನು ಆಧರಿಸಿ ಅಲ್ಲಮನ ದೇಹ ಮೀಮಾಂಸೆಯನ್ನು ಗ್ರಹಿಸಲಾಗಿದೆ. ಈ ಲೇಖನದಲ್ಲಿ ಒಳಗೊಳ್ಳದ ದೇಹ ಕುರಿತಾದ ಅಲ್ಲಮನ ವಚನಗಳ ಪಟ್ಟಿಯನ್ನು ಡಾ: ಎಲ್. ಬಸವರಾಜ ಅವರ ಸಂಗ್ರಹವನ್ನು ಆಧರಿಸಿ ನೀಡಲಾಗಿದೆ. ಕೊನೆಯ ಮಾತು, ಅಲ್ಲಮನು ನಡೆಸುವ ದೇಹದ ಚಿಂತನೆ ನಿರಾಕಾರವಾದದ್ದು.
• ದೇಹ ಕುರಿತಾದ ಅಲ್ಲಮನ ವಚನಗಳ ಪಟ್ಟಿ-7, 8, 22, 28, 35, 37, 46, 48, 52, 56, 70, 81, 83, 85, 89, 110, 112, 113, 114, 125, 129, 131, 135, 146, 155, 164, 191, 196, 206, 218, 244, 249, 255, 261, 262, 263, 269, 271, 275, 285, 305, 334, 365, 494.
ಟಿಪ್ಪಣಿಗಳು
ಗ್ರಂಥ ಋಣ