ವೈವಿಧ್ಯತೆಯ ಧ್ಯೋತಕ ದೀವಿಗೆ ಹಬ್ಬ
ನಿಂಗಪ್ಪ ಮಸ್ತಿ.
ಮೊದಲ ಸೆಮಿಸ್ಟರ್, ಕನ್ನಡ ವಿಭಾಗ,
ಸ್ಕೂಲ್ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಲಾಂಗ್ವೇಜ್
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ,ತೆಜಸ್ವಿನಿ ಹಿಲ್ಸ್,ಪೆರಿಯಾ ಪೊಸ್ಟ್, ಕಾಸರಗೋಡು. ಕೇರಳ.
ningappamasti69@gmail.com cell: 8095746669
ಮಾರ್ಗದರ್ಶನ:
-ಡಾ. ಸ್ವಾಮಿ ನ. ಕೋಡಿಹಳ್ಳಿ.
ಉಪನ್ಯಾಸಕರು, ಕನ್ನಡ ವಿಭಾಗ,
ಸ್ಕೂಲ್ ಆಫ್ ಲಾಂಗ್ವೇಜಸ್ ಅಂಡ್ ಕಂಪೇರಿಟಿವ್ ಲಿಟರೇಚರ್
ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ,ತೆಜಸ್ವಿನಿ ಹಿಲ್ಸ್,ಪೆರಿಯಾ ಪೊಸ್ಟ್, ಕಾಸರಗೋಡು. ಕೇರಳ.
ಪ್ರಸ್ತಾವನೆ:
ಭಾರತ ಸಾಂಸ್ಕೃತಿಕ ಚರಿತ್ರೆ ಹಬ್ಬಗಳ ಹಿನ್ನೆಲೆಯನ್ನು ಒಳಗೊಂಡಿದೆ, ಹಬ್ಬಗಳು ವೈವಿಧ್ಯತೆಯ ಧ್ಯೋತಕಗಳೂ ಆಗಿವೆ. ಒಂದೇ ಹಬ್ಬವನ್ನು ಪ್ರಾದೇಶಿಕವಾಗಿ, ಜನಾಂಗಿಕವಾಗಿ, ಧಾರ್ಮಿಕವಾಗಿ ವಿಭಿನ್ನ ಮಾದರಿಯಲ್ಲಿ ಆಚರಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಕೇರಳದ ಓಣಂ, ಕರ್ನಾಟಕದ ದೀಪಾವಳಿಗಳನ್ನು ನೋಡಬಹುದು. ಈ ಹಬ್ಬಗಳು ಪ್ರಾದೇಶಿಕವಾಗಿ ಮತ್ತೂ ಭಿನ್ನತೆಯನ್ನು ಕಾಯ್ದುಕೊಳ್ಳುತ್ತವೆ. ದೀಪಾವಳಿಯನ್ನು ಬೆಳಕಿನ ಹಬ್ಬ, ಜ್ಷಾನದ ಹಬ್ಬ, ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ದೀವಿಗೆ ಹಬ್ಬವನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಮಣ್ಣಿನಿಂದ ತಯಾರಿಸಿದ ದೀವಿಗೆಯಲ್ಲಿ ಎಣ್ಣೆಯನ್ನು ಹಾಕಿ ಹೊಲದಲ್ಲಿ ಬೆಳೆದ ಹತ್ತಿಯಿಂದ ಬತ್ತಿಹೊಸೆದು ದೀಪವನ್ನು ಹಚ್ಚುವುದರಿಂದ ಇದು ನಮಗೆಲ್ಲ ‘ದೀವಿಗೆಯ ಹಬ್ಬ’ ಎಂದೇ ಚಿರಪರಿಚಿತವಾಗಿದೆ. ಸಾಮಾನ್ಯವಾಗಿ ಎಲ್ಲ ಕಡೆಗೂ ದೀಪಾವಳಿ ಹಬ್ಬ ಎಂದು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಎಲ್ಲೆಲ್ಲಿಯೂ ಜೋಡು ದೀಪಗಳನ್ನೂ ಸಾಲುದೀಪಗಳನ್ನೂ ಕಾಣುತ್ತೇವೆ. ಆದ್ದರಿಂದ ದೀಪಾವಳಿ ಎಂದು ಕರೆಯುತ್ತೇವೆ. ಇದು ಹಿಮಗಾಲಕ್ಕೆ ಮುಂಚಿತವಾಗಿ ಬರುವ ಹಬ್ಬ. ಹಣವಂತರಿಗೆ ಸಂಭ್ರಮದ ಹಬ್ಬವಾದರೆ, ಬಡವರಿಗೆ ನಿರೀಕ್ಷೆಯ ಹಬ್ಬ. ದೀಪ ಬೆಳಗಿದರೆ ಹೊಟ್ಟೆ ತುಂಬುವುದೇ? ಮೃಷ್ಟಾನ್ನವಿರದೆ ದೀಪಾವಳಿ ಎನಿಸುವುದೇ? ದೀಪಾವಳಿ ಬರುವುದೇ ಜೀವನದ ಅಂಧಕಾರವನ್ನು ತೊಲಗಿಸಿ ಬೆಳಕಿನ ಹೊಸ ಚೈತನ್ಯ, ಜ್ಞಾನವನ್ನು ನೀಡುವ ಕಾರಣಕ್ಕಾಗಿ ಎಂಬುದು ಪ್ರತೀತಿ. ಆದರೆ ಅದೆಷ್ಟು ನಿಜ? ಸಾಲ ಮಾಡಿ ಹಬ್ಬ ಮಾಡಿ ಕತ್ತಲಾದವರೆಷ್ಟೋ?
ಕೀ ವರ್ಡ್:
ದೀವಿಗೆ, ಮೃಷ್ಟಾನ್ನ, ಪಾಡ್ಯ, ಪರಿಷೆ, ಬನ್ನಿ(ಮರ), ಬಲಿಚಕ್ರವರ್ತಿ, ಜೋಡುದೀಪ, ವಿಕ್ರಮ ಶಕೆ,
ಪುರಾಣದ ಪ್ರಕಾರ ಭೂದೇವಿಯ ಮಗನಾದ ನರಕಾಸುರನೆಂಬ ರಾಕ್ಷಸನನ್ನು ಶ್ರೀಕೃಷ್ಣ ಸಂಹಾರ ಮಾಡುತ್ತಾನೆ. ಆತನ ರಾಣಿವಾಸದಲ್ಲಿ ನರಳುತ್ತಿದ್ದ ಹದಿನಾರು ಸಾವಿರ ಹೆಂಗಸರು ತಮ್ಮ ನಿರ್ಬಂಧವನ್ನು ಬಿಡಿಸಿದ ಅಂಧಕಾರವನ್ನು ತೊಲಗಿಸಿದ ಎಂಬ ಕಾರಣಕ್ಕಾಗಿ ಸಂತೋಷದಿಂದ ಕೃಷ್ಣನನ್ನೇ ಹಿಂಬಾಲಿಸುತ್ತಾರೆ. ಈ ದಿನ ನರಕಾಸುರನನ್ನು ಸಂಹಾರ ಮಾಡಿ ಅವನಿಗೆ ವರ ನೀಡಿದ ಪುಣ್ಯದ ದಿನವೆಂದು ಆಚರಿಸಲಾಗುತ್ತದೆ.
ಕಾರ್ತಿಕ ಶುದ್ಧ ಪಾಡ್ಯವೇ ಬಲಿಪಾಡ್ಯ ಕೃತಯುಗದಲ್ಲಿ ವಿಷ್ಣವು ವಾಮನಾವತಾರವನ್ನು ಮಾಡಿ ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿಯನ್ನು ತೆಗೆದುಕೊಂಡು ಮತ್ತೆ ಅವನ ಪ್ರಾರ್ಥನೆಗೆ ಮಣಿದು ವರ ನೀಡಿದ ಶುಭ ದಿನದ ಸಂಕೇತಕ್ಕಾಗಿ ಆಚರಿಸುತ್ತಾರೆ. ಈ ಕಾರ್ತಿಕ ಮಾಸದಲ್ಲಿ ಮಳೆ ಬೆಳೆಯಾಗಿ ಕೆರೆ ಕಟ್ಟೆಗಳು ತುಂಬಿ ರಾಜ್ಯ ಸುಭಿಕ್ಷವಾಗಿರುವುದು. ಆದ ಕಾರಣ ಕಾರ್ತಿಕ ಶುದ್ಧ ಪಾಡ್ಯದ ಸಾಯಂಕಾಲದಲ್ಲಿ ಬಲಿಚಕ್ರವರ್ತಿಯು ಈ ಭೂಲೋಕಕ್ಕೆ ಬರುವನೆಂದು ಪುರಾಣದಲ್ಲಿ ಪ್ರಸಿದ್ಧವಾಗಿದೆ. ಇದಕ್ಕಾಗಿಯೇ ನಮ್ಮ ಊರುಗಳಲ್ಲಿ ದಿನ ಸಾಯಂಕಾಲ ಒಂದು ಕಲಶವನ್ನಿಟ್ಟು ಮಹಾಭಕ್ತನಾದ ಬಲಿಚಕ್ರವರ್ತಿಯನ್ನು ಆವಾಹನೆ ಮಾಡಿ ಪೂಜೆ ಮಾಡುವುದುಂಟು ದೊರೆಯ ಜೊತೆಯಲ್ಲಿಯೇ ವಿಷ್ಣವು ಕೂಡ ಬರುತ್ತಾನಾದ ಕಾರಣ ಈ ಪೂಜೆಯು ಬಹುಕ್ರಮವಾಗಿ ನಡೆಯುವುದು. ಆವಾಹನೆ ಮಾಡಿದ ದೇವರ ಮೇಲೆ ಹೂವನ್ನು ಎರಚಿ ದೀಪ ಬೆಳಗಿಸಿ ಊರನ್ನು ಅಲಂಕರಿಸುತ್ತಾರೆ.
ವಿಕ್ರಮಶಕೆಯನ್ನು ಅನುಸರಿಸಿ ನಡೆಯತಕ್ಕ ಜನರಿಗೆ ಇದೇ ಯುಗಾದಿ ರೈತರು ಉಳುಮೆಯ ಕೆಲಸಗಳನ್ನು ಪೂರೈಸಿ, ಪೈರೆಲ್ಲಾ ಕುಯಿಲಿಗೆ ಬಂದಿರುತ್ತದೆ. ವರ್ಷವೆಲ್ಲಾ ತಾವು ಪಟ್ಟ ಕಷ್ಟವು ಇಲ್ಲಿಗೆ ಮುಗಿಯುತ್ತ ಬರುವುದರಿಂದಲೂ ಈ ಶ್ರಮಕ್ಕೆ ತಕ್ಕ ಹಾಗೆ ಮುಂದೆ ಒಳ್ಳೆ ಬೆಳೆಯು ಕೈಗೆ ಬರುವುದೆಂದಲೂ ಸಂತೋಷದಿಂದ ಈ ಹಬ್ಬವನ್ನು ವ್ಯವಸಾಯಗಾರರು ಮಾಡುತ್ತಾರೆ.
ಹೇಮಂತ ಋತು ಕಳೆದು, ವಸಂತ ಕಾಲವು ಪ್ರಾಪ್ತವಾಗುವ ಸಮಯದಲ್ಲಿ ಬರುವ ಯುಗಾದಿ ಹಬ್ಬದ ಹಾಗೆಯೇ ಈ ದೀಪಾವಳಿ ಅಥವಾ ದೀವಿಗೆಯ ಹಬ್ಬವು ಚಳಿಗಾಲಕ್ಕೆ ಮುಂಚೆ ಬರುವ ಮನೋಹರವಾದ ಶರದೃತುವಿನ ಸಂತೋಷವನ್ನು ಬಹು ಚೆನ್ನಾಗಿ ಸೂಚಿಸುವುದು.
ನಮ್ಮ ಊರಿನಲ್ಲಂತೂ ದೀಪಾವಳಿ ಹಬ್ಬವೆಂದರೆ ಅದು ದೇವಿಯ ಹಬ್ಬವೇ ಆಗಿರುತ್ತದೆ.
ಹುಕ್ಕೇರಿ ತಾಲೂಕಿನಲ್ಲಿದ್ದ ವಂಟಮೂರಿ ಊರು ಹಿಡಕಲ್ ಜಲಾಶಯದಲ್ಲಿ ಮುಳುಗಿದಾಗ ಊರು ಕಳೆದುಕೊಂಡ ಜನ ಸರಕಾರದ ಆಜ್ಞೆಯಂತೆ ಹೊಸ ಊರನ್ನು ಕಟ್ಟಿಕೊಂಡರು. ಅದೇ ಈಗೀನ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಬೇಡರ ಸಮುದಾಯವೇ ಹೆಚ್ಚಿರುವ ಈ ಊರಿನಲ್ಲಿ ಮೂಲತಃ ಮಹಾದಾನಿ ವಂಟಮೂರಿ ರಾಜಾ ಲಖಮಗೌಡರು ಕೋಟೆ ಕಟ್ಟಿಕೊಂಡು ಆಳ್ವಿಕೆ ನಡೆಸಿದ್ದರಿಂದ ಅವರನ್ನು ವಂಟಮೂರಿ ರಾಜಾ ಲಖಮಗೌಡರೆಂದೇ ಕರೆಯಲಾಗುತ್ತದೆ. ಅವರು ಆಚರಿಸುತ್ತಿದ್ದ ಸಂಪ್ರದಾಯಗಳನ್ನು ಜನರು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮೊದಲು ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿದ್ದ ಆಚರಣೆಗಳೆಲ್ಲ ಈಗ ಊರಿನ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿವೆ. ಮೂಲತಃ ಮಾಂಸಾಹಾರಿಗಳಾದ ಬೇಡರು ದೀವಿಗೆಯ ಹಬ್ಬದ ಆಚರಣೆಯನ್ನು ಮಹಾನವಮಿಯ ಅಮಾವಾಸ್ಯೆಯಿಂದಲೇ ಮಾಡುವರು. ನಮ್ಮೂರಲ್ಲಿ ಹೆಣ್ಣು ದೇವರಿಗೆ ಮೊದಲು ಆದ್ಯತೆ. ಊರಿನ ಜನರೆಲ್ಲರೂ ಮಾಂಸಾಹಾರವನ್ನು ತ್ಯಜಿಸಿ ಮನೆಯನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಹಾಸಿಗೆ ಬಟ್ಟೆಗಳನ್ನು ತೊಳೆದು ಸ್ವಚ್ಛಗೊಳಿಸುವರು. ಊರಿನವರೆಲ್ಲ ಒಟ್ಟಾಗಿ ಎಲ್ಲಮ್ಮನ ಜಾತ್ರೆಗೆ ಏಳು ದಿನಗಳವರೆಗೆ ಚಕ್ಕಡಿ ಬಂಡಿಯನ್ನು ಹೂಡಿಕೊಂಡು ಹೋಗಿ ಬರುವರು ಇದನ್ನು ಪರಿಶೆ ಹೊರಡುವುದು ಎನ್ನುತ್ತಾರೆ. ಬಂದ ಮೇಲೆ ಬರುವ ವಿಜಯದಶಮಿಯಂದು ಊರಿನ ಜನರೆಲ್ಲರೂ ಸೇರಿ ಗುಡ್ಡಕ್ಕೆ ಹೋಗಿ ಬನ್ನಿ ಗಿಡದ ಟೊಂಗೆಗಳನ್ನು ಕಡಿದುಕೊಂಡು ದೊಡ್ಡ ಕಟ್ಟು ಕಟ್ಟಿ ಗ್ರಾಮದೇವತೆ ಲಗಮವ್ವನ ಅಂಗಳದಲ್ಲಿ ನಿಲ್ಲಿಸುವರು. ಊರಿನ ಗೌಡರು ಬನ್ನಿ ಗಿಡವನ್ನು ಕಡಿದು ಅದನ್ನು ಜನಕ್ಕೆ ನೀಡುವರು. ‘ಬನ್ನಿ’ ಬಂಗಾರವಾಗುತ್ತಾ, ಎಲ್ಲರೊಂದಿಗೆ ಸೌಹಾರ್ದ, ಪ್ರೀತಿಯಿಂದ ಬದುಕುವ ಎಂದು ಹಬ್ಬದ ಶುಭಾಷಯಗಳನ್ನು ಹೇಳುವರು. ಅದನ್ನು ತೆಗೆದುಕೊಂಡ ಊರಿನ ಜನರೆಲ್ಲರೂ ತಮ್ಮ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ, ಓಣಿಯ ಮಕ್ಕಳಾದಿಯಾಗಿ ಎಲ್ಲರಿಗೂ ‘ಬನ್ನಿ ಬಂಗಾರ’ ತಗೊಂಡು ಬಂಗಾರದಂತೆ ಇರೋಣವೆಂದು ಹೇಳಿ ಹಬ್ಬದ ಶುಭಾಷಯಗಳನ್ನು ಹೇಳುವರು. ನಂತರ ಬರುವುದೇ ದೀಪ ಬೆಳಗಿಸುವ ಹಬ್ಬದ ದಿನ ಮೊದಲಿನ ಕಾಲದಲ್ಲಿ ಸರದೇಸಾಯಿಯವರು ಸಂಸ್ಥಾನದ ಎಲ್ಲ ದೇವಸ್ಥಾನಗಳಿಗೆ ಎಣ್ಣೆ ಡಬ್ಬಗಳನ್ನು ಕೊಟ್ಟು ಪ್ರತಿದಿನವೂ ದೀಪ ಹಚ್ಚಲು ಜನ ಸೇವಕರನ್ನು ನೇಮಿಸುತ್ತಿದ್ದರು. ಈ ಹಬ್ಬಕ್ಕೆ ಅಳಿಯನನ್ನು, ಮಗಳನ್ನು ಕರೆಯಿಸಿ ಅಳಿಯನಿಗೆ ಶಕ್ತ್ಯಾನುಸಾರವಾಗಿ ‘ಆಯಾರ’ ಮಾಡುವರು. ಒಡವೆಗಳನ್ನು ಕೊಡಿಸುವರು, ದೇವರಿಗೆ ದೀಪ ಹಚ್ಚಿದಾದ ನಂತರ ಮನೆಯ ತುಂಬ ದೀಪ ಹಚ್ಚುವರು. ಹೆಣ್ಣು ಮಕ್ಕಳು ಹೆಂಗಸರು ಕೂಡಿಕೊಂಡು ತುಪ್ಪದ ಹೋಳಿಗೆ ಮಾಡುವರು. ಮೊದಲು ಲಗಮವ್ವನಿಗೆ ನೈವೇದ್ಯ ಮಾಡಿ, ದೀಪ ಬೆಳಗಿಸುವರು ನಂತರ ಸತ್ತ ಹಿರಿಯರಿಗೆ ದೀಪ ನೈವೇದ್ಯ ಮಾಡುವರು. ಅವರು ಸತ್ತ ನಂತರ ನಿಲ್ಲಿಸಲಾಗಿರುವ ‘ಗುಡ್ಡೆ ಕಲ್ಲು’ಗಳಿಗೆ ಹೋಗಿ ಹೊಸ ಬಟ್ಟೆ ಇಟ್ಟು, ಅವರ ನೆತ್ತಿ ತಣ್ಣಗಿದ್ದರೆ ನಮಗೆ ಒಳ್ಳೆಯದಾಗುತ್ತದೆಂದು ಅವರ ನೆತ್ತಿಗೆ ಎಣ್ಣೆ ಸವರುವರು. ಎರಡನೆ ದಿನ ಬೆಳಿಗ್ಗೆ ಊರಿನ ಎಲ್ಲ ಜನರೂ ದೇವರ ಗುಡಿಯಲ್ಲಿ ಸೇರಿ ಲಕ್ಷ್ಮೀದೇವಿ ಕೊಳದಮ್ಮದೇವಿಯರ ಪಲ್ಲಕ್ಕಿಯನ್ನು ಹೊತ್ತುಕೊಂಡು ಡೊಳ್ಳು, ನಗಾರಿ, ಬಾರಿಸುತ್ತ ಪ್ರತಿ ಓಣಿ ಓಣಿಗೂ ತಿರುಗುವರು. ಜನರು ದೇವಿಯರಿಗೆ ತಾಂಬೂಲ ಸಹಿತ ಉಡಿ ತುಂಬುವ ಸೇವೆ, ನೀರು ಸೇವೆ ಮೊದಲಾದ ಸೇವೆಗಳು ದಿನಪೂರ್ತ ನಡೆಸುವರು. ಊರಿನ ದುಷ್ಟಶಕ್ತಿ ಸಂಹಾರಕ್ಕೆಂದು ಊರಿನ ತುಂಬ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾರ್ಯಕ್ರಮ ನಡೆಯುವುದು. ಊರಿನ ಮುಖಂಡರ ನೇತೃತ್ವದಲ್ಲಿ ಅಗಸೆ ಬಾಗಿಲಿನಿಂದ ಪ್ರಾರಂಭವಾಗುವ ಪಲ್ಲಕ್ಕಿ ಕಾರ್ಯಕ್ರಮವು ಊರೆಲ್ಲ ಸುತ್ತಿಕೊಂಡು ರಾತ್ರಿ ಎಂಟು ಗಂಟೆಯ ಹೊತ್ತಿಗೆ ಗುಡಿಗೆ ಬಂದು ತಲುಪುವುದು. ಆಗ ಜೋರಾಗಿ ಡೊಳ್ಳು ಹೊಡೆಯುತ್ತ ದೇವಿಯ ಆವಾಹನೆ, ಕಾರಣಿಕ ನುಡಿಯುವುದು ನಡೆದು ಮಾಂಸಾಹಾರ ಸೇವನೆಯೊಂದಿಗೆ ಹಬ್ಬ ಮುಕ್ತಾಯವಾಗುವುದು.
ಮರುದಿನದಿಂದ ಎಲ್ಲ ಜನ ಮತ್ತೆ ತಮ್ಮ ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ನಿಯಮಿತವಾಗಿ ತೊಡಗುವರು. ಹಬ್ಬಕ್ಕೆ ಮಾಡಿದ ಸಾಲ ತೀರಿಸಲು ಮತ್ತೆ ವರ್ಷವಿಡೀ ದುಡಿತಕ್ಕೆ ಮೈಯ್ಯೊಗ್ಗುವರು. ಹಬ್ಬಗಳು, ಜಾತ್ರೆಗಳು ಇರುವುದೇ ಜನಗಳ ಜೇಬು ಖಾಲಿ ಮಾಡಲು ಅಲ್ಲವೇ? ಈ ಆಚರಣೆಗಳೇ ಜನ ಹಿಂದುಳಿಯಲು ಕಾರಣ. ಏಕೆಂದರೆ ಎಷ್ಟೋ ಜನ ಜಾತ್ರೆಯನ್ನು ಮಾಡಲಾಗದೆ ಮಾಡುವುದನ್ನು ಬಿಡಲಾಗದೆ ಊರಿನ ಸಾಹುಕಾರರ ಹತ್ತಿರ ಸಾಲ ಪಡೆದು ಜನ ಹಬ್ಬ, ಜಾತ್ರೆ ಮಾಡುತ್ತಾರೆ. ಆದರೆ ವರ್ಷಪೂರ್ತಿ ಸಾಲದ ಬಡ್ಡಿಗಾಗಿ ಅವರ ಮನೆÀಗಳಲ್ಲಿ ಕತ್ತೆಯಂತೆ ದುಡಿಯುತ್ತಾರೆ. ಮತ್ತೆ ಬಡತನಕ್ಕೆ ತಳ್ಳಲ್ಪಡುತ್ತಾರೆ. ಇದಕ್ಕೆ ಸರ್ವಜ್ಞ ಹೇಳುವುದು
“ಸಾಲವ ಕೊಂಬಾಗ ಹಾಲು ಕೊಳುಂಬಂತೆ
ಸಾಲವ ಮರಳಿ ಕೊಡುವಾಗ ಕಿಬ್ಬರಿಯ
ಕೀಲು ಕೊಂಡಂತೆ ಸರ್ವಜ್ಞ”.
ಇದಕ್ಕೆ ಪೂರಕವಾಗಿ ದೀಪಾವಳಿಯನ್ನು ಆಚರಿಸುವಂತೆ ‘ಕವಿ ಅಡಿಗರು’ ಹೀಗೆ ಹೇಳುತ್ತಾರೆ.
“ಬರಿಯ ಬಯಲಾಡಂಬರದ ದೀಪಗಳ ಸಾಲ
ನುರಿಸುವಿರದೇಕೆ ಕನ್ನಡರೇ? ನೀವಿಂದು ಸಿಂ
ಗರಿಸಿರೈ ಕರ್ಣಾಟಕಾಭಿಮಾನಜ್ಯೋತಿಯಿಂದೆ ನಿಮ್ಮೆದೆ ವನೆಯನು.
ಹರಿದು ಹಸಗೆಟ್ಟ ನಾಡಿನನೊಂದುಗುಡಿಸುತೆ
ನೆರೆ ನಾಡಿಗರ ಕೊಡೆ ತಲೆಯೆತ್ತಿನಿಂತು ಬಿ
ತ್ತರಿಸಿ-ರೊಸಗೆಗಳನಂದೇ ಸಾರ್ಥಮಹುದು ದೀವಳಿಗೆ ನಮ್ಮ ನಾಡಿಗೆ”.
ಕವಿ ತಮ್ಮ ಈ ಕವಿತೆಯಲ್ಲಿ ನಾಡು ನುಡಿಯ ಬಗ್ಗೆ ಅಭಿಮಾನ ಶೂನ್ಯರಾದ ಜನ ಕೇವಲ ಹಬ್ಬ-ಹರಿದನಗಳಲ್ಲಿ ಸಂಭ್ರಮದಿಂದ ಇದ್ದರೆ ಸಾಲದು ನುಡಿ ಎಂಬ ಅಭಿಮಾನದಿಂದ ಕನ್ನಡದ ನಾಡನ್ನು ಬೆಳಗಿಸಿ ಅಭಿಮಾನ ತೋರಬೇಕು ಬಹುತ್ವದ ನಾಡಿನಲ್ಲಿರುವ ನಮಗೆ ಭಾರತದಷ್ಟೇ ಕನ್ನಡದ ಅಸ್ಮಿತೆಯೂ ಮುಖ್ಯ. ದೀಪ ಹೇಗೆ ಮನೆಯ ಕತ್ತಲನ್ನು ತೊಳೆಯುತ್ತದೋ ಹಾಗೆಯೇ ನಮ್ಮ ನಾಡು ನುಡಿಯ ಅಭಿಮಾನ ನಮ್ಮನ್ನು ಒಟ್ಟುಗೂಡಿಸಿ ಏಕತೆಯ ಮೂಲಕ ಸಾಂಘಿಕತೆಯನ್ನು ಹೊಂದಿ ಶ್ರೇಯಸ್ಸನ್ನು ಪಡೆಯಬಹುದು ಎನ್ನುತ್ತಾರೆ.
ಸಮಾರೋಪ:
ಇದೆಲ್ಲದರ ನಡುವೆ ದೀಪಾವಳಿ ಒಂದು ಮತೀಯ ಸಂಘರ್ಷದ ಸ್ಕೃತಿಯಾಗಿದೆ. ದೀಪಾವಳಿಗೆ ಸಂಬಂಧಿಸಿದ ಯಾವುದೇ ಪುರಾಣ ಆರ್ಯರು ಭಾರತದ ನೆಲ ಮೂಲದವರಾದ ದ್ರಾವಿಡರನ್ನು ಸಂಹರಿಸಿದ ಕಥಾನಕಗಳನ್ನು ಕಟ್ಟಿಕೊಡುತ್ತದೆ. ನನಗನ್ನಿಸುವ ಮಟ್ಟಿಗೆ ನಾವು ಬೆಳಕಿನ ಹೆಸರಿನಲ್ಲಿ ಕತ್ತಲಿನಿಂದ ಕತ್ತಲಿನತ್ತಲ್ಲೇ ನಡೆಯುತ್ತಿದ್ದೇವೆ.
ಆಕರಗಳು:
I. ವಕ್ತ್ರ:
|
ಹೆಸರು |
ವಯಸ್ಸು |
ಜಾತಿ |
ಊರು |
1) |
ದುಂಡಪ್ಪಾ ಮಸ್ತಿ |
70 ವರ್ಷ |
ಬೇಡರು |
ಹೊಸ ವಂಟಮೂರಿ |
2) |
ಭೀಮಶೆಪ್ಪಾ ಮಸ್ತಿ |
65 ವರ್ಷ |
ಬೇಡರು |
ಹೊಸ ವಂಟಮೂರಿ |
3) |
ಗಂಗವ್ವಾ |
68 ವರ್ಷ |
ಬೇಡರು |
ಹೊಸ ವಂಟಮೂರಿ |
4) |
ನಾಗಪ್ಪಾ ಹರಿಜನ |
35 ವರ್ಷ |
ಹರಿಜನ |
ಹೊಸ ವಂಟಮೂರಿ |
II. ಕೃತಿಗಳು :