ತುಮಕೂರು ಜಿಲ್ಲೆಯ ಪಾಳೆಯಗಾರರ ಕಾಲದ ಶೈವ ದೇವಾಲಯಗಳು
ರಮ್ಯ ಕೆ ಆರ್.,
ಸಂಶೋಧನಾ ವಿದ್ಯಾರ್ಥಿ,
ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
ಮೊ.9964602527 e-mail: ramyasgangapoorva@gmail.com
ಪ್ರೊ. ಎಲ್.ಪಿ.ರಾಜು,
ಮಾರ್ಗದರ್ಶಕರು ಮತ್ತು ಪ್ರಾಧ್ಯಾಪಕರು,
ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
ಪೀಠಿಕೆ:
ಪ್ರಾಚೀನ ಕಾಲದಿಂದಲೂ ಶೈವ ಸಂಸ್ಕೃತಿ ನಮ್ಮ ಭಾರತದಲ್ಲಿ ಬೆಳೆದು ಬಂದಿದೆ. ಸಿಂಧೂ ಸಂಸ್ಕೃತಿಯಲ್ಲಿ ಪಶುಪತಿ ವಿಗ್ರಹ ಸಿಕ್ಕಿರುವುದು ಶೈವದ ಮೂಲವನ್ನು ಸೂಚಿಸುತ್ತದೆ. ಹಾಗಾಗಿ ಸಿಂಧೂ ನಾಗರೀಕತೆಯಿಂದಲೇ ಶೈವ ಧರ್ಮ ಇತ್ತೆಂದು ಹೇಳಬಹುದು. ಶಿವನನ್ನು ಪಶುಪತಿ ಎಂದು ಪೂಜಿಸುತ್ತಿದ್ದರು. ಪಶುಪತಿಯೆನಿಸಿದ ರುದ್ರ ತನ್ನ ಪ್ರತಾಪವನ್ನು ಪ್ರಕೃತಿಯ ಉಗ್ರ ರೂಪಗಳಾದ ಬೆಂಕಿಯಂತೆ ಶಾಖ ಕಾರುವ ಸೂರ್ಯ, ಗುಡುಗು, ಮಿಂಚು, ಸಿಡಿಲು, ಪ್ರವಾಹ, ಬರಗಾಲ ಮುಂತಾದ ಮೃತ್ಯು ಸ್ವರೂಪಗಳಲ್ಲಿ ತೋರಿಸುವನೆಂದು ತಿಳಿದಿದ್ದರು.
ವೇದಗಳ ಕಾಲದಲ್ಲಿ ವೇದೋಕ್ತ ಮಂತ್ರಗಳನ್ನು ಪಠಿಸಬಲ್ಲ ಜನರು ವರುಣ, ಇಂದ್ರ, ಅಗ್ನಿ ಮುಂತಾದ ದೇವರುಗಳಿಂದ ತಮ್ಮ ಸಂಕಷ್ಟಗಳನ್ನು ಪರಹರಿಸಿಕೊಂಡು ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಿದ್ದರು. ಯಜ್ಞಗಳಲ್ಲಿ ಪಾಲ್ಗೊಳ್ಳುತ್ತಿದ್ದ ಜನರು ರುದ್ರನು ಪ್ರಕೃತಿಯಿಂದಾಗುವ ಸಂಕಷ್ಟಗಳಿಗೆ ಕಾರಣನೆಂದು ತಿಳಿದು ಅವನನ್ನು ಒಲಿಸಿಕೊಳ್ಳಲು ಸ್ಥಂಡಿಲ, ಯೂಪಗಳ ಆರಾಧನೆಗೆ ತೊಡಗಿದರು. ಹೀಗೆ ಯೂಪ/ಸ್ಥಂಡಿಲಗಳು ರುದ್ರನ ಸಂಕೇತವಾಗಿ ರೂಪುಗೊಂಡವು. ನಂತರದ ಕಾಲದಲ್ಲಿ ಯೂಪವೇ ರುದ್ರ/ಶಿವನ ಪ್ರತೀಕವಾಗಿ ಲಿಂಗವೆನಿಸಿತು. ನಂತರದಲ್ಲಿ ಲಿಂಗ, ಶಿವ/ರುದ್ರನನ್ನು ಆರಾಧಿಸುವ ಜನರ ನಿರ್ಧಿಷ್ಟವಾದ ಆಚಾರ ವಿಚಾರಗಳು, ತತ್ವ ಸಿದ್ಧಾಂತಗಳು ರಚನೆಗೊಂಡು ಶೈವಧರ್ಮವೆನಿಸಿತು.01
ಶಿವನಿಗೆ ಮಹಾದೇವ, ಧೂರ್ಜಟಿ, ಶಂಕರ, ನೀಲಕಂಠ, ತ್ರ್ಯಂಬಕ, ಜಗದೀಶ್ವರ ಮುಂತಾದ ಹೆಸರುಗಳು ನೆನಪಾಗುತ್ತದೆ. ಕರ್ನಾಟಕದಲ್ಲಿ ಶಾತವಾಹನರ ಕಾಲದಿಂದಲೂ ಶೈವ ಆರಾಧನೆಯು ಪ್ರಚಲಿತವಿತ್ತು. ಶಾತವಾಹನರು ತಾಳಗುಂದದ ಪ್ರಣವೇಶ್ವರನನ್ನು ಪೂಜಿಸುತ್ತಿದ್ದರೆಂದು ಅಲ್ಲಿನ ಶಾಸನ ತಿಳಿಸಿದೆ. ಕದಂಬರ ಕಾಲದಿಂದಲೂ ಶೈವ ಧರ್ಮದ ದೇವಾಲಯಗಳು ನಿರ್ಮಾಣವಾದವು. ಹಲಸಿ, ಶಿವಗಂಗೆ, ಬಾದಾಮಿ ಮುಂತಾದ ಶಿವ ದೇವಾಲಯಗಳಿವೆ. 12 ನೇ ಶತಮಾನದಿಂದೀಚೆಗೆ ಬಸವಣ್ಣನವರಿಂದ ಶೈವ ಧರ್ಮದ ಪ್ರಭಾವವು ಮತ್ತಷ್ಟು ಹೆಚ್ಚಾಯಿತು. ಶೈವ ಧರ್ಮದಲ್ಲಿ ಲಿಂಗವೇ ಸರ್ವಸ್ವವಾಗಿದೆ. ಪರಾತ್ಪರ ವಸ್ತುವನ್ನು ಬಯಲು, ಸ್ಥಲ, ಶೂನ್ಯ, ನಿಷ್ಕಲ, ಲಿಂಗ ಎಂದು ಕರೆಯಲಾಗಿದೆ. ಶೈವರು ಯಾವಾಗಲೂ ಶರೀರದ ಮೇಲೆ ಲಿಂಗ ಧರಿಸಿರುವುದರಿಂದ ದೇಹವು ಶುದ್ಧವಾಗುವುದೆಂದೂ ಶರೀರ ಶುದ್ಧಿಗೆ ಕರ್ಮಾದಿಗಳ ಅಗತ್ಯವಿಲ್ಲವೆಂದು ನಂಬಿದ್ದಾರೆ.
ಕ್ರಿ.ಶ. ಸುಮಾರು 8 ನೇ ಶತಮಾನದಲ್ಲಿ ವಿಜಯಾದಿತ್ಯನ ರಾಣಿಯರಾದ ಲೋಕ ಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ನಿರ್ಮಿಸಿದರು. ಇದೇ ವೇಳೆಗೆ ಇನ್ನೂ ಅನೇಕ ಕಡೆ ಶಿವಾಲಯಗಳು ರಚನೆಗೊಂಡವು. ಶಿವಗಂಗೆಯ ಗಂಗಾಧರೇಶ್ವರ, ನಂಜನಗೂಡಿನ ಶ್ರೀಕಂಠೇಶ್ವರ ಮುಂತಾದವು ರಾಷ್ಟ್ರಕೂಟರ ಕಾಲದಲ್ಲಿ ಬೃಹತ್ತಾದ ಶೈವ ಶಿಲಾ ರಚನೆಗೊಂಡವು. ಕುಕ್ಕನೂರಿನ ನವಲಿಂಗೇಶ್ವರ ದೇವಾಲಯ ಇವರ ಕಾಲದ ರಚನೆಯಾಗಿದೆ.
ಕ್ರಿ.ಶ.10-12 ನೇ ಶತಮಾನದ ಅವಧಿಯಲ್ಲಿ ಕರ್ನಾಟಕದ ಬಹುಭಾಗ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತು. ಕಾಳಾಮುಖ ಯತಿಗಳ ಪ್ರಭಾವದಿಂದ ಕರ್ನಾಟಕದಲ್ಲಿ ಸಾವಿರಾರು ಶಿವಾಲಯಗಳು ನಿರ್ಮಾಣವಾದವು. ಶಿವನನ್ನು ಸೂರ್ಯನಲ್ಲೂ ಕಾಣುವ ಪರಂಪರೆಯಿದೆ. ಸೂರ್ಯನು ಶಿವನ ಪ್ರತಿರೂಪಿಯಾಗಿದ್ದಾನೆ. ಪುರಾಣಗಳು ಶಿವಾಲಯಗಳಿರಬೇಕಾದ ಸ್ಥಾನವನ್ನು ಸೂಚಿಸಿದ್ದು ಕರ್ನಾಟಕದ ಹಲವು ಶಿವಾಲಯಗಳು ನದಿ ತೀರದಲ್ಲಿವೆ. ಶಿವ ಪುರಾಣ, ನದಿ ತೀರದಲ್ಲಿ ಲಿಂಗ ಸ್ಥಾಪಿಸಿ ಪೂಜಿಸುವುದು ಶ್ರೇಷ್ಠತಮವೆಂದು ಸೂಚಿಸಿದೆ. ಉದಾಹರಣೆಗೆ ಕಾವೇರಿ ನದಿ ತೀರದ ತಲಕಾಡು ಪಂಚಲಿಂಗ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಹಂಪಿ ವಿರೂಪಾಕ್ಷ, ಕಪಿಲಾ ನದಿ ತೀರದಲ್ಲಿ ಶ್ರೀಕಂಠೇಶ್ವರ ಮುಂತಾದವುಗಳು. ದೇವಾಲಯ ಸಂಸ್ಕೃತಿ ಬೆಳೆದಂತೆ ಸಮಾಜದಲ್ಲಿ ಶೈವಧರ್ಮದ ಪ್ರಭಾವವು ಗಾಢವಾಯಿತು.02
ಕ್ರಿ.ಶ.11-12 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಪ್ರಭಾವದಿಂದ ನೂರಾರು ಶಿವಾಲಯಗಳು ರಚನೆಗೊಂಡವು. ಕಲ್ಯಾಣ ಚಾಲುಕ್ಯರ ಮಾಂಡಲೀಕರಾಗಿದ್ದ ಹೊಯ್ಸಳರ ಕಾಲದಲ್ಲಿ ದಕ್ಷಿಣ ಕರ್ನಾಟಕದಲ್ಲಿ ನೂರಾರು ಶಿವಾಲಯಗಳು ನಿರ್ಮಾಣವಾಗಿವೆ. ಇಂತಹ ಶಿವಾಲಯಗಳು ಮಠಗಳನ್ನು ಹೊಂದಿತ್ತಲ್ಲದೇ ವಿದ್ಯಾಕೇಂದ್ರಗಳಾಗಿ ಪರಿಣಮಿಸಿದವು. ಉದಾಹರಣೆಗೆ ಬಳ್ಳಿಗಾವೆಯ ಕೋಡಿಮಠ, ಅಣ್ಣಿಗೇರಿ, ತೇರದಾಳ, ಸಾಲೋಟಗಿ ಮುಂತಾದವು.
ಸಾವಿರಾರು ದೇವಾಲಯಗಳು ರಚನೆಯಾದುದರ ಫಲವಾಗಿ ಶಿಲ್ಪಕಲೆಯೂ ವಿಕಸಿತವಾಯಿತಲ್ಲದೆ ಶಿವಾಲಯಗಳಲ್ಲಿ ಶೈವ ಶಿಲ್ಪಗಳ ರಚನೆಗೆ ಸದಾವಕಾಶವಾಯಿತು. ಕರ್ನಾಟಕದಲ್ಲಿ ಶಿವನ ಆರಾಧನೆ ವಿಶೇಷವಾಗಿ ಲಿಂಗ ರೂಪದಲ್ಲಿ, ಹಲವೆಡೆ ಭೈರವನ ರೂಪದಲ್ಲಿ, ಕೆಲವೆಡೆಗಳಲ್ಲಿ ವೀರಭದ್ರನ ರೂಪಗಳಲ್ಲಿ ನಡೆದು ಬಂದಿರುವುದು ಗಮನಾರ್ಹ. 03
ವಿಜಯನಗರ ಕಾಲಘಟ್ಟದಲ್ಲೂ ಯಥಾಪ್ರಕಾರವಾಗಿ ಮುಂದುವರಿಯುತ್ತದೆ. ದೇವಾಲಯ ನಿರ್ಮಾಣವನ್ನು ಕೇವಲ ರಾಜಧಾನಿಗೆ ಸೀಮಿತಗೊಳಿಸದೆ ಇಡೀ ಸಾಮ್ರಾಜ್ಯಕ್ಕೆ ವಿಸ್ತರಿಸಿದ್ದರು. ವಿಜಯನಗರದ ಪತನಾ ನಂತರ ವಿಜಯನಗರ ಪರಂಪರೆಯ ವಾರಸುದಾರರು, ಸಾಮಂತರು ಆಗಿದ್ದ ಪಾಳೆಯಗಾರರು ಇವರ ಸಂಪ್ರದಾಯವನ್ನು ಮುಂದುವರಿಸಿದರು. ತುಮಕೂರು ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದ ಪಾಳೆಯ ಪಟ್ಟುಗಳಾದ ನಿಡುಗಲ್ಲಿನ ಪಾಳೇಯಗಾರರು, ಪಾವಗಡ ಪಾಳೆಯಗಾರರು, ಮಿಡಿಗೇಶಿ ನಾಯಕರು, ಮಧುಗಿರಿ ಮಹಾನಾಡ ಪ್ರಭುಗಳು, ಹಾಗಲವಾಡಿ ಅಮರನಾಯಕರು, ಕುಣಿಗಲ್ ನಾಡಪ್ರಭುಗಳು ಶೈವ ಧರ್ಮವನ್ನು ಹೆಚ್ಚಿನದಾಗಿ ಅವಲಂಬಿಸಿದ್ದರೆಂದು ಅವರು ಹಚ್ಚು ಹಾಕಿಸಿರುವ ಶಾಸನಗಳಿಂದ ಮತ್ತು ನಿರ್ಮಿಸಿರುವ ದೇವಾಲಯಗಳಿಂದ ತಿಳಿದು ಬರುತ್ತದೆ. ಹೀಗೆ ವಿವಿಧ ರಾಜಮನೆತನಗಳ ರಾಜರು ಮತ್ತು ಪಾಳೆಯಗಾರರು ಶೈವ ಧರ್ಮದ ತತ್ವ ಆದರ್ಶಗಳಿಗೆ ಮಾರು ಹೋಗಿ ಕ್ರಿ.ಶ.12 ನೇ ಶತಮಾನದ ನಂತರ ಉತ್ತುಂಗ ಶಿಖರಕ್ಕೇರಿತು. ತದ ನಂತರದ ಕಾಲಘಟ್ಟದಲ್ಲಿ ಹೆಚ್ಚಿನ ದೇವಾಲಯಗಳು ನಿರ್ಮಾಣಗೊಂಡಿವೆ. ತುಮಕೂರು ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದ ಪಾಳೆಯಗಾರರ ಕಾಲದಲ್ಲಿ ನಿರ್ಮಾಣ ಮಾಡಿದ ಪ್ರಮುಖ ಶೈವ ದೇವಾಲಯಗಳೆಂದರೆ,
ಶ್ರೀ ಕಾಳಹಸ್ತೀಶ್ವರ ದೇವಾಲಯ:
ಶಿಖರ ಬಸವೇಶ್ವರ ದೇವಾಲಯದ ಕೆಳಭಾಗದಲ್ಲಿ ಕಾಳಹಸ್ತೀಶ್ವರ ದೇವಾಲಯವಿದೆ. ಈ ದೇವಾಲಯದಲ್ಲಿರುವ ಶಿವಲಿಂಗುವನ್ನು ಶ್ರೀರಾಮ ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ದೇವಾಲಯದ ಹೊರಾಂಗಣದ ಎಡಭಾಗದಲ್ಲಿ ಒಂದು ಶಾಸನವಿದ್ದು ಕ್ರಿ.ಶ.1670 ರಲ್ಲಿ ಹರತಿ ವಂಶದ ತಿಮ್ಮಣ್ಣನಾಯಕನು ದೇವಾಲಯ ಜೀರ್ಣೋದ್ಧಾರ ಮಾಡಿಸಿರುವ ವಿಚಾರವನ್ನು ತಿಳಿಸುತ್ತದೆ. ದೇವಾಲಯದಲ್ಲಿ ಎರಡು ಕಂಬಗಳುಳ್ಳ ಮುಖಮಂಟಪವಿದೆ. ಅದರ ಮುಂದಿನ ಭಾಗವೇ ನವರಂಗ ಇದರಲ್ಲಿ ನಾಲ್ಕು ಕಂಬಗಳಿದ್ದು ದೇವಾಲಯದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ನವರಂಗದ ಮುಂದೆ ಸುಖನಾಸಿಯಿದ್ದು ನಂದಿ ಮತ್ತು ಗಣಪತಿ ವಿಗ್ರಹಗಳನ್ನಿಡಲಾಗಿದೆ. ಸುಖನಾಸಿಗೆ ಹೊಂದಿಕೊಂಡಂತೆ ಗರ್ಭಗುಡಿಯಿದ್ದು, ಇದರಲ್ಲಿ ಶಿವಲಿಂಗುವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಬಾಗಿಲುವಾಡ ಸಾಧಾರಣವಾಗಿದೆ. ನವರಂಗದಲ್ಲಿರುವ ನಾಲ್ಕು ಕಂಬಗಳಲ್ಲಿ ನಂದಿ, ಕುದುರೆ, ಕಿನ್ನರ ನೃತ್ಯಗಾರ್ತಿಯರು, ಕಾಳಿಂಗ ಮರ್ದನ, ಕೃಷ್ಣ, ನಾಗಬಂಧ, ಹನುಮಂತ ಮುಂತಾದ ಶಿಲ್ಪಗಳನ್ನು ಕೆತ್ತಲಾಗಿದ್ದು ನವರಂಗದ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ಆದರೆ ದೇವಾಲಯದ ಆವರಣದಲ್ಲಿರುವ ಶಾಸನದ ಉಲ್ಲೇಖವನ್ನು ಗಮನಿಸಿದಾಗ ಮತ್ತು ದೇವಾಲಯವನ್ನು ನೋಡಿದಾಗ ಶಾಸನದಲ್ಲಿ ಹೇಳಿರುವಷ್ಟು ಸುಂದರವಾಗಿ ಇಲ್ಲದಿರುವುದನ್ನು ಗಮನಿಸಬಹುದು. ಮತ್ತು ದಿನನಿತ್ಯದ ಪೂಜೆ ಮತ್ತು ನೈವೇದ್ಯಕ್ಕೆ ದಾನ ದತ್ತಿ ನೀಡಿರುವ ವಿಚಾರವನ್ನು ತಿಳಿಸುತ್ತದೆ.
ವೀರಭದ್ರ ದೇವಾಲಯ:
ವಜ್ರದೂರು ಬಾಗಿಲ ಬಲಕ್ಕೆ ಸ್ವಲ್ಪ ದೂರದಲ್ಲಿ ಈ ದೇವಾಲಯವಿದೆ. ಇದರ ಸಾಲಿನಲ್ಲೇ ಬಸವನ ಮಂಟಪ, ಈಶ್ವರ ದೇವಾಲಯ, ಪಾಶ್ರ್ವನಾಥ ಬಸದಿಗಳಿವೆ. ವೀರಭದ್ರ ದೇವಾಲಯವನ್ನು ವೀರಭದ್ರ ಮಂಟಪ ಎಂದೂ ಕರೆಯುತ್ತಾರೆ. ಈ ದೇವಾಲಯ ಉತ್ತರಾಭಿಮುಖವಾಗಿದ್ದು ಇದನ್ನು 11 ನೇ ಶತಮಾನದ್ದೆಂದು ಆರ್. ನರಸಿಂಹಚಾರ್ ತಿಳಿಸಿದ್ದಾರೆ.04 ಈ ದೇವಾಲಯವನ್ನು ಕ್ರಿ.ಶ.1653 ರಲ್ಲಿ ಹೊಟ್ಟೆಣ್ಣ ನಾಯಕನು ಕ್ರಿ.ಶ.1670 ರಲ್ಲಿ ತಿಮ್ಮಣ್ಣ ನಾಯಕನು ಜೀರ್ಣೋದ್ಧಾರ ಮಾಡಿರುವ ಅಂಶವನ್ನು ನಿಡುಗಲ್ಲಿನ ಶಾಸನ ಉಲ್ಲೇಖಿಸುತ್ತದೆ.05 ಅದರ ಪೂಜಾ ಕಾರ್ಯಗಳಿಗೆ, ದೇವತಾ ಕಾರ್ಯಗಳಿಗೆ ದಾನ ನೀಡಿದ ವಿಚಾರವನ್ನು ತಿಳಿಸುತ್ತದೆ. ಗರ್ಭಗೃಹದಲ್ಲಿ ಕಪ್ಪುಶಿಲೆಯಿಂದ ಮಾಡಿರುವ 5 ಅಡಿ ಎತ್ತರದ ವೀರಭದ್ರನ ವಿಗ್ರಹವಿದೆ. ಗರುಡ ವಿಗ್ರಹ ಮತ್ತು ನಂದಿ ವಿಗ್ರಹಗಳಿವೆ. 4 ಕಂಬಗಳಿಂದ ಕೂಡಿದ ನವರಂಗವಿದ್ದು ಕಂಬಗಳು ದೇವಾಲಯದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ದೇವಾಲಯವನ್ನು ಪ್ರವೇಶಿಸಲು ದ್ವಾರಮಂಟಪವಿದ್ದು ಇದರಲ್ಲಿ 2 ಪೂರ್ಣ ಕಂಬಗಳು ಮತ್ತು 10 ಅರ್ಧ ಕಂಬಗಳಿವೆ. ತಾಯಿ ಮಗುವನ್ನು ಹಾರೈಸುತ್ತಿರುವ ಸ್ತ್ರೀ ಶಿಲ್ಪವಿದೆ. ದ್ವಾರ ಮಂಟಪವನ್ನು ದಾಟಿ ಮುಂದೆ ಸಾಗಿದರೆ ಮುಖ ಮಂಟಪವಿದೆ. 3 ಅಡಿ ಎತ್ತರದ ವೇದಿಕೆಯಿದ್ದು ಅದರಲ್ಲಿ ಪೂರ್ಣಕಂಬಗಳು ಎರಡು ಅರ್ಧ ಕಂಬಗಳು ಕಂಡುಬರುತ್ತವೆ. ದೇವಾಲಯದ ಎದುರಿಗೆ ನಂದಿ ಮಂಟಪವಿದೆ. ದೇವಾಲಯದ ಬಲಭಾಗದಲ್ಲಿ ದೀಪಸ್ತಂಭವಿದೆ. ಮತ್ತೊಂದು ಲೋಹದ ದೀಪಸ್ತಂಭವಿದ್ದು ಆಕರ್ಷಣೀಯವಾಗಿದೆ. ಅದರ ಮುಂಭಾಗ ನಾಗರಕಲ್ಲುಗಳಿವೆ. ನವರಂಗದ ಬಾಗಿಲ ಬಳಿ ಶೂಲ ಬ್ರಹ್ಮಯ್ಯಗಳ ವಿಗ್ರಹಗಳಿದ್ದು ಶಿಲ್ಪಗಳಿಂದ ನೋಡುಗರನ್ನು ಸೆಳೆಯುತ್ತವೆ. ಈ ದೇವಾಲಯವನ್ನು ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಜೀರ್ಣೋದ್ಧಾರಗೊಳಿಸಿದ್ದಾರೆ.
ಮಳೆ ಮಲ್ಲಿಕಾರ್ಜುನ ದೇವಾಲಯ:
ಪಾವಗಡ ಕೋಟೆ ಬಾಗಿಲಿನಿಂದ ಹೊರ ವಲಯದಲ್ಲಿ ಕಂಡುಬರುವ ಲಕ್ಷ್ಮಾದೇವಿ ಕೆರೆಯನ್ನು ದಾಟಿದರೆ ಕಂಡುಬರುವ ಎತ್ತರವಾದ ಗುಡ್ಡದ ಕೆಳಭಾಗದಲ್ಲಿ ಈ ದೇವಾಲಯವಿದೆ. ಇದು ಸಾಧಾರಣ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಕಟ್ಟಡವಾಗಿದೆ. ಈ ದೇವಾಲಯವು ಗರ್ಭಗುಡಿ, ಸುಕನಾಸಿ ಮತ್ತು ನವರಂಗವನ್ನು ಹೊಂದಿದೆ. ನವರಂಗದಲ್ಲಿ ಒಟ್ಟು 12 ಕಂಬಗಳಿದ್ದು 06 ಕಂಬಗಳು, ಪೂರ್ಣ ಕಂಬಗಳು ಉಳಿದ ಆರು ಕಂಬಗಳು ಗೋಡೆಯೊಳಗೆ ಸೇರಿಕೊಂಡಂತಿರುವ ಅರ್ಧ ಕಂಬಗಳಾಗಿವೆ. ಇತ್ತೀಚೆಗೆ ದೇವಾಲಯದ ಗರ್ಭಗುಡಿ ನಿಧಿಗಳ್ಳರ ಕೃತ್ಯಕ್ಕೆ ತುತ್ತಾಗಿದೆ. ದೇವಾಲಯದ ಸುತ್ತಲೂ ಪ್ರಕಾರಗೋಡೆ ನಿರ್ಮಿಸಲಾಗಿದೆ.
ದೇವಾಲಯದ ಎದುರಿಗೆ ವೀರಗಲ್ಲು ಶಾಸನವಿದ್ದು ಇಬ್ಬರು ವೀರರು ಕುದುರೆಗಳ ಮೇಲೆ ಕುಳಿತು ಹೋರಾಟ ನಡೆಸುತ್ತಿರುವ ದೃಶ್ಯ ಮನೋಜ್ಞವಾಗಿದೆ. ಇದರಲ್ಲಿ ಶಾಸನವಿದ್ದು ಅಕ್ಷರಗಳು ಹಾಳಾಗಿವೆ. ಅಕ್ಷರದ ರಚನೆ ಲಿಪಿಯ ದೃಷ್ಟಿಯಿಂದ 16 ಅಥವಾ 17 ನೇ ಶತಮಾನಕ್ಕೆ ಸೇರಿದ್ದಿರಬಹುದೆಂದು ತಿಳಿಯುತ್ತದೆ.06 ದೇವಾಲಯದ ನವರಂಗದಲ್ಲಿ ಒಂದು ಶಾಸನವಿದೆ. ಇದರ ಕಾಲ ಕ್ರಿ.ಶ.1487. ಇದು ಚಿಕ್ಕತಿಪ್ಪರಾಜೇಂದ್ರನ ಶಾಸನವಾಗಿದೆ. ಈ ಶಾಸನದಲ್ಲಿ ಚಿಕ್ಕತಿಪ್ಪರಾಜೇಂದ್ರನ ರಾಣಿ ಲಕ್ಷ್ಮಾದೇವಿ ಮರಣ ಹೊಂದಿದಾಗ ಆಕೆಯ ಹೆಸರಿನಲ್ಲಿ ಕೆರೆಯನ್ನು ಕಟ್ಟಿಸಿ, ಅಗ್ರಹಾರವನ್ನು ನಿರ್ಮಿಸಿ ಬ್ರಾಹ್ಮಣರಿಗೆ ದಾನ ನೀಡಿದ ಉಲ್ಲೇಖವಿದೆ. ಇದನ್ನು ಗಮನಿಸಿದಾಗ ಅಗ್ರಹಾರವನ್ನು ನಿರ್ಮಿಸುವಾಗಲೇ ದೇವಾಲಯವನ್ನು ನಿರ್ಮಿಸಿರಬೇಕೆಂದು ತಿಳಿಯುತ್ತದೆ.
ಸಾರ್ವಾಡೇಶ್ವರ ದೇವಾಲಯ:
ನಿಡುಗಲ್ಲು ಬೆಟ್ಟದ ಕೆಳ ಊರಿನಿಂದ ಸ್ವಲ್ಪ ದೂರದಲ್ಲಿ ಈ ದೇವಾಲಯವಿದೆ. ಈ ದೇವಾಲಯಕ್ಕೆ ಹೊಟ್ಟೇಶ್ವರ ದೇವಾಲಯವೆಂದೂ ಸಹ ಕರೆಯುತ್ತಾರೆ. ದೇವಾಲಯದ ಒಳಭಾಗದಲ್ಲಿ ಶಾಸನವಿದ್ದು ಈ ದೇವಾಲಯವನ್ನು ಕ್ರಿ.ಶ.1681 ರಲ್ಲಿ ನಿರ್ಮಾಣ ಮಾಡಲಾಗಿದೆಯೆಂದು ತಿಳಿಯುತ್ತದೆ. ಹರತಿ ವಂಶದ ಮೂಲ ಪುರುಷನ ಹುಟ್ಟೂರಾದ ಬಿಜ್ಜಳ ದೇಶದ (ಬಿಜಾಪುರ) ಸಾರವಾಡ ಆಗಿದ್ದರಿಂದ ಈ ದೇವಾಲಯಕ್ಕೆ ಸಾರ್ವಾಡೇಶ್ವರ ದೇವಾಲಯ ಎಂಬ ಹೆಸರು ಬಂದಿದೆ. ಈ ದೇವಾಲಯ ನಿರ್ಮಾಣ ಕಾಲಘಟ್ಟದಲ್ಲಿ ಮುಮ್ಮಡಿ ಹೊಟ್ಟಣ್ಣನಾಯಕ ಆಳ್ವಿಕೆ ನಡೆಸುತ್ತಿದ್ದು ಆತನ ಕಾಲದಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ಸರಳ ರಚನೆಯಿಂದ ಕೂಡಿದ್ದು ಗರ್ಭಗುಡಿ ಮತ್ತು ತೆರೆದ ಮಂಟಪವನ್ನು ಹೊಂದಿದೆ. ಗರ್ಭಗುಡಿಯ ಬಾಗಿಲುವಾಡದ ಎಡ ಮತ್ತು ಬಲ ಬದಿಯಲ್ಲಿ ಜಯ, ವಿಜಯ ದ್ವಾರಪಾಲಕ ವಿಗ್ರಹಗಳಿವೆ. ಒಂದು ಗಣಪತಿ ವಿಗ್ರಹವಿದೆ. ತೆರೆದ ಮಂಟಪದಲ್ಲಿ ನಾಲ್ಕು ಕಂಬಗಳಿದ್ದು ಶಿವಲಿಂಗವಿದ್ದು ಸಮೀಪದಲ್ಲಿ ಭಕ್ತಿಪೂರ್ವಕವಾಗಿರುವ ವ್ಯಕ್ತಿಗಳನ್ನು ಚಿತ್ರಿಸಲಾಗಿದೆ. ಮಂಟಪದ ಗೋಡೆಯ ಎರಡೂ ಬದಿಯಲ್ಲೂ ಸ್ತ್ರೀ ಮತ್ತು ಇಬ್ಬರು ಪುರುಷರ ವಿಗ್ರಹಗಳಿವೆ. ಇವುಗಳು ಹೊಟ್ಟೆ ನೃಪಾಲ ಮತ್ತು ಅವನ ವಂಶಜರ ಶಿಲ್ಪಗಳಿರಬಹುದು. ಈ ದೇವಾಲಯದಲ್ಲಿ ಒಂದು ದಾನ ಶಾಸನವಿದ್ದು ದೇವಾಲಯದ ಪೂಜೆ ಪುನಸ್ಕಾರಕ್ಕೆ ರಂಗಸಮುದ್ರದ ಕೆರೆಯ ಹಿಂಬದಿಯ ಗದ್ದೆಯನ್ನು ದಾನ ಬಿಟ್ಟ ವಿಚಾರವನ್ನು ತಿಳಿಸುತ್ತದೆ.06 ದೇವಾಲಯದ ಮೇಲ್ಭಾಗದಲ್ಲಿ ಇತ್ತೀಚೆಗೆ ಶಿಖರವನ್ನು ನಿರ್ಮಿಸಲಾಗಿದ್ದು ಸರಳವಾಗಿದೆ. ದೇವಾಲಯದ ಮುಂದೆ ಒಂದು ಕಲ್ಯಾಣಿಯಿದೆ. ನಿಡುಗಲ್ಲು ನಾಯಕರ ಮನೆದೇವರು ಇದೇ ಆಗಿದೆ.
ಈಶ್ವರ ದೇವಾಲಯ:
ಪಾವಗಡದ ದಳವಾಯಿ ಬೀದಿಯಲ್ಲಿ ಕಂಡುಬರುವ ಪ್ರಮುಖ ಶೈವ ದೇವಾಲಯವಾಗಿದೆ. ಈ ದೇವಾಲಯವನ್ನು ಪೂರ್ವಾಭಿಮುಖವಾಗಿ ಮತ್ತು ದಕ್ಷಿಣಾಭಿಮುಖವಾಗಿ ಎರಡು ಕಡೆಯಿಂದ ಪ್ರವೇಶಿಸಲು ಅವಕಾಶವಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಶಿವಲಿಂಗುವನ್ನು ಇಡಲಾಗಿದೆ. ಈ ಪಾಣಿಪೀಠದಲ್ಲಿ ಜಲಹರಿಯೂ ಇದೆ. ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಒಳಮುಖವಾಗಿರುವ ಭುವನೇಶ್ವರಿಯಿದೆ. ಶಿವಲಿಂಗುವಿನ ಮೇಲೆ ಲೋಹದ ಪ್ರಭಾವಳಿಯನ್ನು ಪೂಜೆಯ ಸಂದರ್ಭದಲ್ಲಿ ಇಡಲಾಗುತ್ತದೆ. ಇದರಲ್ಲಿ ಲಿಂಗುವಿನ ಮೇಲೆ ನಾಗರ ಹೆಡೆ ಇದೆ. ಶಿವಲಿಂಗುವಿನ ಹಿಂದೆ ಶ್ರೀ ಚಕ್ರವನ್ನು ಇಡಲಾಗಿದೆ. ಗರ್ಭಗುಡಿಗೆ ಹೊಂದಿಕೊಂಡಂತೆ 4 ಗೋಡೆ ಕಂಬಗಳಿಂದ ಕೂಡಿರುವ ಮತ್ತು ಎರಡು ಪೂರ್ಣ ಕಂಬಗಳಿಂದ ಕೂಡಿರುವ ಸುಖನಾಸಿಯಿದೆ. ಗರ್ಭಗುಡಿಗೆ ಅಭಿಮುಖವಾಗಿ ಸುಖನಾಸಿಯಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಖನಾಸಿಯ ಬಲಭಾಗದಲ್ಲಿ ಗಣೇಶನ ಮೂರ್ತಿಯಿದ್ದರೆ ಎಡಭಾಗದಲ್ಲಿ ಸುಬ್ರಮಣ್ಯನನ್ನು ಪ್ರತಿಷ್ಠಾಪಿಸಲಾಗಿದೆ. ಸುಖನಾಸಿಯ ಪ್ರವೇಶದ್ವಾರದಲ್ಲಿ ದ್ವಾರಪಾಲಕ ವಿಗ್ರಹಗಳಿವೆ.
ಸುಖನಾಸಿಯ ಮುಂದೆ ಮಂಟಪವಿದ್ದು ಎರಡು ಗೋಡೆಗೆ ಹೊಂದಿಕೊಂಡಂತಿರುವ ಅರ್ಧ ಕಂಬಗಳಿದ್ದರೆ 4 ಪೂರ್ಣ ಕಂಬಗಳಿವೆ. ಈ ಕಂಬಗಳ ಮೇಲಿನ ಭಾಗ, ಕೆಳ ಭಾಗ ಚೌಕಾಕಾರವಾಗಿದ್ದು ಅದರ ಮಧ್ಯಭಾಗದಲ್ಲಿ ಅಷ್ಟಪಟ್ಟಿಕೆಗಳಿವೆ. ಕಂಬಗಳ ಮೇಲ್ಭಾಗದಲ್ಲಿ ಸಾಧಾರಣ ಬೋಧಿಗೆಗಳಿದ್ದು ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ಮಂಟಪದ ಮುಂದೆ ಅಂಗಳವಿದ್ದು ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಲಾಗಿದೆ. ನವಗ್ರಹ ಶಿಲ್ಪಗಳಿವೆ. ಅಂಗಳದಲ್ಲಿ ಗರ್ಭಗುಡಿ ಎದುರಿಗೆ ದೀಪಸ್ತಂಭವಿದೆ. ದೇವಾಲಯವನ್ನು ಪ್ರವೇಶಿಸಲು ದ್ವಾರ ಮಂಟಪವಿದ್ದು ದ್ವಾರ ಮಂಟಪಕ್ಕೆ ಹೊಂದಿಕೊಂಡಂತೆ ರಕ್ಷಣಾತ್ಮಕ ದೃಷ್ಟಿಯಿಂದ ಪ್ರಾಕಾರ ಗೋಡೆಯನ್ನು ನಿರ್ಮಿಸಲಾಗಿದೆ. ಪ್ರಾಕಾರಗೋಡೆಯ ಹೊರಭಾಗದಲ್ಲಿ ವೀರಗಲ್ಲುಗಳಿವೆ.
ಈಶ್ವರ ದೇವಾಲಯ:
ಚನ್ನರಾಯನದುರ್ಗದಲ್ಲಿ ಕಂಡುಬರುವ ಪ್ರಮುಖವಾದ ದೇವಾಲಯವಾಗಿದೆ. ಈ ದೇವಾಲಯವು ನಾಲ್ಕು ಅಡಿ ಎತ್ತರವಾದ ಜಗತಿಯ ಮೇಲೆ ನಿರ್ಮಾಣಗೊಂಡಿದೆ. ಈ ದೇವಾಲಯದಲ್ಲಿ ಗರ್ಭಗುಡಿ, ಸುಖನಾಸಿ, ತೆರೆದ ಮಂಟಪಗಳಿವೆ. ಗರ್ಭಗುಡಿಯು ಚೌಕಾಕಾರವಾಗಿದ್ದು ಅದರಲ್ಲಿನ ಮೂರ್ತಿಯು ನಾಶವಾಗಿದ್ದು ಆ ಜಾಗದಲ್ಲಿ ಗಣೇಶನನ್ನು ಇಟ್ಟು ಪೂಜಿಸಲಾಗುತ್ತಿದೆ. ದೇವಾಲಯದ ನಿರ್ಮಾಣದಲ್ಲಿ ಇಟ್ಟಿಗೆ ಮತ್ತು ಗಾರೆ ಬಳಸಲಾಗಿದೆ. ಗರ್ಭಗುಡಿಗೆ ಹೊಂದಿಕೊಂಡಂತೆ ಹೆಚ್ಚು ವಿಸ್ತೀರ್ಣದ ಅಂತರಾಳವಿದ್ದು ಸಾಧಾರಣವಾಗಿದೆ. ಸುಖನಾಸಿಯ ಬಾಗಿಲುವಾಡದ ಎರಡು ಬದಿಯಲ್ಲಿ ದ್ವಾರಪಾಲಕ ಮೂರ್ತಿ ನಿರ್ಮಿಸಲಾಗಿದೆ. ಸುಖನಾಸಿಯ ಮುಂದೆ ತೆರೆದ ಮಂಟಪವಿದ್ದು ನಾಲ್ಕು ಕಂಬಗಳಿಂದ ಕೂಡಿದೆ. ಇದರಲ್ಲಿ ಎರಡು ಕಂಬಗಳು ಗೋಡೆಗೆ ಹೊಂದಿಕೊಂಡಂತಿರುವ ಅರ್ಧಕಂಬಗಳಿವೆ.
ತೆರೆದ ಮಂಟಪದ ಮೇಲ್ಛಾವಣಿಯಲ್ಲಿ ಗಾರೆ ಮತ್ತು ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ ಎರಡು ಪಟ್ಟಿಗಳನ್ನು ಒಳಗೊಂಡಿದೆ. ಮೊದಲ ಪಟ್ಟಿಕೆಯಲ್ಲಿ ಪಕ್ಷಿಗಳು ರೆಕ್ಕೆ ಬಿಚ್ಚಿ ಹಾರುವ ರೀತಿಯಲ್ಲಿದ್ದರೆ ಎರಡು ಮತ್ತು ಮೂರನೇ ಸಾಲುಗಳು ಅರಳಿದ ಪುಷ್ಪಗಳ ರೂಪದಲ್ಲಿ ಕೆತ್ತಲಾಗಿದೆ. ಅಲ್ಲದೆ ಮೇಲ್ಛಾವಣಿಯ ಮೂಲೆಯಲ್ಲಿ ಸಿಂಹವನ್ನು ಕೆತ್ತಲಾಗಿದ್ದು ಗರ್ಜಿಸುತ್ತಿರುವ ರೀತಿಯಲ್ಲಿ ನಿರ್ಮಿಸಲಾಗಿದೆ.
ಮಲ್ಲೇಶ್ವರ ಸ್ವಾಮಿ ದೇವಾಲಯ:
ಮಿಡಿಗೇಶಿಯಲ್ಲಿ ಕಂಡುಬರುವ ಶೈವ ದೇವಾಲಯಗಳಲ್ಲಿ ಮಲ್ಲೇಶ್ವರ ಸ್ವಾಮಿ ದೇವಾಲಯ ಒಂದಾಗಿದೆ. ಈ ದೇವಾಲಯ ಪೂರ್ವಾಭಿಮುಖವಾಗಿದ್ದು ದೇವಾಲಯದ ಮುಖ್ಯ ಪ್ರವೇಶದ್ವಾರದ ಮೇಲೆ ನಂದಿ ವಿಗ್ರಹವಿದೆ. ಬೃಹದಾಕಾರದ ಪ್ರವೇಶದ್ವಾರಕ್ಕೆ ಮರದಿಂದ ಮಾಡಿದ ಬಾಗಿಲುಗಳಿವೆ. 06 ಕಂಬಗಳುಳ್ಳ ದ್ವಾರಮಂಟಪವಿದೆ. ದ್ವಾರಮಂಟಪಕ್ಕೆ ಹೊಂದಿಕೊಂಡಂತೆ ದೇವಾಲಯದ ಸುತ್ತ ಪ್ರಾಕಾರ ಗೋಡೆಯಿದೆ. ಎಡಗಡೆಯ ಪ್ರಾಕಾರ ಗೋಡೆಯಲ್ಲಿ ಶಿವಲಿಂಗು, ನಂದಿ, ಬೇಡರ ಕಣ್ಣಪ್ಪ ಉಬ್ಬು ಶಿಲ್ಪಗಳಿವೆ. ಪ್ರವೇಶದ್ವಾರದ ದ್ವಾರಮಂಟಪದ ಮೇಲೆ ಮೂರು ಅಂತಸ್ತಿನ ಗೋಪುರವಿದೆ. ಆ ಗೋಪುರ ಶಿಥಿಲಾವಸ್ಥೆಯಲ್ಲಿದೆ. ಗಣೇಶ, ಮೀನು, ನಾಗರಹಾವಿನ ಉಬ್ಬು ಶಿಲ್ಪಗಳು ಕಂಡುಬರುತ್ತವೆ. ಗರ್ಭಗುಡಿಯ ಹಿಂಭಾಗದಲ್ಲಿ ಚಿಕ್ಕ ಖಾಲಿ ಕೋಷ್ಠಕವಿದೆ. ದೇವಾಲಯದ ಗರ್ಭಗುಡಿಯ ಹೊರಭಾಗದ ಬಲಭಾಗದಲ್ಲಿ ಪ್ರಾಕಾರ ಗೋಡೆಗೆ ಹೊಂದಿಕೊಂಡಂತೆ ಸಾಲುಕಂಬಗಳ ತೆರೆದ ಮಂಟಪವಿದೆ. ಇದರಲ್ಲಿ ಮುಂದಿನ ಭಾಗದಲ್ಲಿ 14 ಕಂಬಗಳು ಮತ್ತು ಹಿಂಬದಿಯಲ್ಲಿ 11 ಕಂಬಗಳಿವೆ. ಅದರ ಪಕ್ಕದಲ್ಲೇ ಚಿಕ್ಕದಾದ ನಾಲ್ಕು ಕಂಬಗಳಿಂದ ಕೂಡಿದ ಒಂದು ಮಂಟಪವಿದೆ. ಈ ಕಂಬಗಳು ಕೆಳಭಾಗ ಚೌಕಾಕಾರ ಅದರ ಮೇಲೆ ಅಷ್ಟಪಟ್ಟಿಕೆಗಳು ನಂತರ ಚೌಕಾಕಾರ ಮತ್ತು ಸಾಧಾರಣ ಬೋಧಿಗೆಗಳನ್ನು ಒಳಗೊಂಡಿವೆ. ಈ ಕಂಬಗಳಲ್ಲಿ ಕಾಲ್ಪನಿಕ ಚಿತ್ರಗಳು, ಆನೆ, ಕುದುರೆ, ನಂದಿ, ಲಿಂಗು, ಪೂರ್ಣಕುಂಭ, ಸ್ತ್ರೀ ವಿಗ್ರಹ, ಕಮಲ, ಬಾತುಕೋಳಿ, ಹೂಬಳ್ಳಿಗಳು, ಚಂದ್ರ, ಸೂರ್ಯ ಶಿಲ್ಪಗಳಿವೆ.
ಈ ದೇವಾಲಯ, ಗರ್ಭಗುಡಿ, ಸುಖನಾಸಿ ಮತ್ತು ನವರಂಗ ಭಾಗಗಳನ್ನು ಒಳಗೊಂಡಿದೆ. ದೇವಾಲಯದ ಕೇಂದ್ರಬಿಂದುವಾದ ಗರ್ಭಗುಡಿಯಲ್ಲಿ ಶಿವಲಿಂಗುವಿದೆ. ಇಲ್ಲಿನ ವಿಶಿಷ್ಟತೆ ಎಂದರೆ ಸಮತಟ್ಟಾದ ಭೂಮಿಗಿಂತ ಅರ್ಧ ಅಡಿ ಕೆಳಗೆ ಶಿವಲಿಂಗುವಿದೆ. ದಿನನಿತ್ಯದ ಪೂಜೆಯ ಸಂದರ್ಭದಲ್ಲಿ ಹಿತ್ತಾಳೆಯ ಮುಖವಾಡವನ್ನು ಇಡಲಾಗುತ್ತದೆ. ಗರ್ಭಗುಡಿಯ ಮೇಲ್ಛಾವಣಿಯಲ್ಲಿ ಒಳಮುಖವಾಗಿ ಭುವನೇಶ್ವರಿಯಿದೆ. ಗರ್ಭಗುಡಿಗೆ ಹೊಂದಿಕೊಂಡಂತೆ ಸುಖನಾಸಿಯಿದೆ. ನಾಲ್ಕು ಮೂಲೆಗಳಲ್ಲಿನ ನಾಲ್ಕು ಗೋಡೆಕಂಬಗಳು ಮೇಲ್ಛಾವಣಿಯನ್ನು ಹೊತ್ತಿವೆ. ಸುಖನಾಸಿಯ ಪ್ರವೇಶದ್ವಾರದಲ್ಲಿ ದ್ವಾರಪಾಲಕ ಮೂರ್ತಿಗಳಿವೆ. ಸುಖನಾಸಿಯ ಬಲಭಾಗದಲ್ಲಿ ಚಿಕ್ಕದಾದ ಪಾರ್ವತಿ ಗುಡಿಯಿದೆ. ಇದರಲ್ಲಿ ಸುಮಾರು ಮೂರು ಅಡಿ ಎತ್ತರದ ಪಾರ್ವತಿ ಶಿಲ್ಪವಿದ್ದು ಶಿಲ್ಪವನ್ನು ಒಳಗೊಂಡಂತೆ ಕಲ್ಲಿನಿಂದಲೇ ಪ್ರಭಾವಳಿ ಮಾಡಲಾಗಿದೆ. ಅದರ ಹಿಂಬದಿಯಲ್ಲಿ ಲೋಹದ ಪ್ರಭಾವಳಿಯೂ ಇದೆ. ಸುಖನಾಸಿಯ ಮುಂದಿನ ಭಾಗವೇ ನವರಂಗ. ನವರಂಗದ ಎಡಭಾಗದಲ್ಲಿ ವೀರಭದ್ರಸ್ವಾಮಿ ಮೂರ್ತಿಯಿದೆ. ಗೋಡೆ ಕಂಬಗಳು ಸೇರಿದಂತೆ ಒಟ್ಟು 12 ಕಂಬಗಳಿದ್ದು ಸಾಧಾರಣವಾಗಿವೆ. ಈ ಕಂಬಗಳಲ್ಲಿ ಗಣೇಶ, ನಾಗಶಿಲ್ಪಗಳು, ಸುಬ್ರಮಣ್ಯ ಮುಂತಾದ ಉಬ್ಬು ಶಿಲ್ಪಗಳಿವೆ. ನವರಂಗದ ಮಧ್ಯಭಾಗದಲ್ಲಿ ಗರ್ಭಗುಡಿಯ ಶಿವಲಿಂಗುವಿಗೆ ಅಭಿಮುಖವಾಗಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಮೇಲ್ಭಾಗದ ಮೇಲ್ಛಾವಣಿಯಲ್ಲಿ ಭುವನೇಶ್ವರಿಯಿದೆ. ನವರಂಗದ ಮುಂದೆ ತೆರೆದ ಅಂಗಳವಿದೆ. ದೇವಾಲಯವನ್ನು ಹೊರತುಪಡಿಸಿ ಪ್ರಾಕಾರಗೋಡೆ, ಗೋಪುರ, ದ್ವಾರಮಂಟಪ, ಸುತ್ತಲೂ ಇರುವ ಕಲ್ಲಿನ ಮಂಟಪ ಅವನತಿಯ ಅಂಚಿನಲ್ಲಿವೆ.
ಕಾಶಿ ವಿಶ್ವನಾಥ ದೇವಾಲಯ:
ಬಿಜವರದಲ್ಲಿರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ಗರ್ಭಗುಡಿ, ಸುಖನಾಸಿ, ಮುಖಮಂಟಪವನ್ನು ಒಳಗೊಂಡಿರುವ ತುಂಬಾ ಸರಳವಾದ ದೇವಾಲಯವಾಗಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಶಿವಲಿಂಗುವನ್ನು ಪ್ರತಿಷ್ಠಾಪಿಸಲಾಗಿದ್ದು ಲೋಹದ ಪ್ರಭಾವಳಿಯನ್ನು ಇಡಲಾಗಿದೆ. ಗರ್ಭಗುಡಿಗೆ ಹೊಂದಿಕೊಂಡಂತೆ ಸುಖನಾಸಿಯಿದ್ದು ಗರ್ಭಗುಡಿಯಲ್ಲಿನ ಶಿವಲಿಂಗುವಿಗೆ ಅಭಿಮುಖವಾಗಿ ನಂದಿಯನ್ನು ಇಡಲಾಗಿದೆ. ಇದೇ ಭಾಗದಲ್ಲಿ ಗಣೇಶ ಮತ್ತು ಸುಬ್ರಮಣ್ಯ ಮೂರ್ತಿಗಳಿವೆ. ಸುಖನಾಸಿ ಬಾಗಿಲಿನ ಎಡ, ಬಲಭಾಗದಲ್ಲಿ ದ್ವಾರಪಾಲಕ ಮೂರ್ತಿಗಳಿವೆ. ಸಾಧಾರಣ ಬಾಗಿಲುವಾಡವಿದ್ದು ಬಾಗಿಲಿನ ಲಲ್ಲಾಟ ಬಿಂಬದಲ್ಲಿ ಗಣೇಶನ ಮೂರ್ತಿಯಿದೆ. ತೆರೆದ ಮಂಟಪದಲ್ಲಿ ಎರಡು ಕಂಬಗಳಿದ್ದು ನಂದಿ, ಗಣೇಶ, ಹಸು, ಲಿಂಗುವಿಗೆ ಹಾಲಿನ ಅಭಿಷೇಕ ಮಾಡುತ್ತಿರುವುದು, ಬೇಡರಕಣ್ಣಪ್ಪ, ವೀರಭದ್ರ ಮೂರ್ತಿಗಳನ್ನು ಕೆತ್ತಲಾಗಿದೆ. ಸುತ್ತಲೂ ಪ್ರಾಕಾರ ಗೋಡೆಯಿದ್ದು ಅದು ಹಾಳುಬಿದ್ದು ಅವಶೇಷಗಳು ಮಾತ್ರ ಉಳಿದಿವೆ. ಮಂಟಪದ ಮುಂದೆ ನಂದಿ, ಗಣೇಶ, ಹಾಳಾಗಿರುವ ಎರಡು ಕಂಬಗಳು ಅವುಗಳ ಮುಂದೆ ನೀರಿಲ್ಲದೆ ಬತ್ತಿ ಹೋಗಿರುವ ಒಂದು ಬಾವಿಯಿದೆ. ದೇವಾಲಯದ ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಶಿಖರದಲ್ಲಿ ಖಾಲಿ ಕೋಷ್ಠಕಗಳಿವೆ.
ಪ್ರಸನ್ನ ರಾಮೇಶ್ವರ ದೇವಾಲಯ:
ಚಿಕ್ಕನಾಯನಹಳ್ಳಿಯಲ್ಲಿರುವ ಪ್ರಸನ್ನರಾಮೇಶ್ವರ ದೇವಾಲಯವನ್ನು ಗಮನಿಸಿದಾಗ ಪಂಕಜನಹಳ್ಳಿಯಲ್ಲಿರುವ ವಿಜಯನಗರ ಕಾಲದ ಮಲ್ಲಿಕಾರ್ಜುನ ದೇವಾಲಯವನ್ನು ಹೋಲುತ್ತದೆ. ಈ ದೇವಾಲಯವನ್ನು ಹಾಗಲವಾಡಿ ನಾಯಕರು ನಿರ್ಮಿಸಿದ್ದಾರೆ.07 ದೇವಾಲಯದ ಸುತ್ತಲೂ ಪ್ರಾಕಾರ ಗೋಡೆಯಿದ್ದು ಆಯತಾಕಾರವಾಗಿದೆ. ಈ ಪ್ರಾಕಾರದ ಒಳಭಾಗದಲ್ಲಿ ಮುಖ್ಯ ದೇವಾಲಯ. ಅಂದರೆ ಪ್ರಸನ್ನ ರಾಮೇಶ್ವರ ದೇವಾಲಯ, ಪಾರ್ವತಿ ಗುಡಿ, ನಂದಿ ಮಂಟಪ ಮತ್ತು ಉಯ್ಯಾಲೆ ಮಂಟಪಗಳಿವೆ. ಇದರಲ್ಲಿ ಪ್ರಸನ್ನ ರಾಮೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು 1.5 ಮೀಟರ್ ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿದೆ. ಈ ದೇವಾಲಯವು ಗರ್ಭಗೃಹ, ಅಂತರಾಳ, ರಂಗಮಂಟಪ, ಪಾಶ್ರ್ವಮಂಟಪ ಮತ್ತು ಮುಖಮಂಟಪಗಳನ್ನು ಒಳಗೊಂಡಿದೆ. ದೇವಾಲಯದ ತೆರೆದ ಮಂಟಪಕ್ಕೆ ಹೊಂದಿಕೊಂಡಂತೆ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿದ್ದು ದ್ವಾರಮಂಟಪಗಳನ್ನು ಹೊಂದಿದೆ. ಈ ದೇವಾಲಯ ಪೂರ್ವಾಭಿಮುಖವಾಗಿರುವುದರಿಂದ ಪೂರ್ವ ದಿಕ್ಕಿನಲ್ಲಿರುವ ಪ್ರವೇಶ ದ್ವಾರದ ಮೂಲಕವೇ ದೇವಾಲಯವನ್ನು ಪ್ರವೇಶಿಸಲಾಗುತ್ತದೆ. ಈ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಪ್ರಾಕಾರ ಗೋಡೆಯಿದ್ದು ಇಂದು ಅವನತಿಯ ಅಂಚಿನಲ್ಲಿದೆ.
ದೇವಾಲಯವನ್ನು ಪ್ರವೇಶಿಸಿ ಅವಲೋಕಿಸಿದಾಗ ಗರ್ಭಗೃಹ, ಅಂತರಾಳ, ರಂಗಮಂಟಪ/ನವರಂಗ, ಮುಖಮಂಟಪ, ಪಾಶ್ರ್ವಮಂಟಪಗಳನ್ನು ಹೊಂದಿದೆ. ದೇವಾಲಯದ ಕೇಂದ್ರಬಿಂದುವಾದ ಗರ್ಭಗುಡಿಯಲ್ಲಿ ಕಪ್ಪುಶಿಲೆಯಿಂದ ತಯಾರಿಸಲಾಗಿರುವ ಶಿವಲಿಂಗುವಿದೆ. ಗರ್ಭಗುಡಿಯ ನಾಲ್ಕು ಮೂಲೆಗಳಲ್ಲಿ ಗೋಡೆಗೆ ಹೊಂದಿಕೊಂಡಂತೆ ನಾಲ್ಕು ಕಂಬಗಳಿದ್ದು ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ಮೇಲ್ಛಾವಣಿಯ ಮಧ್ಯಭಾಗದಲ್ಲಿ ಶಿವಲಿಂಗುವಿಗೆ ಸರಿಸಮನಾಗಿ ಅಷ್ಠಕೋನಾಕಾರದ ಭುವನೇಶ್ವರಿಯಿದ್ದು ಅದರ ಮಧ್ಯದಲ್ಲಿ ಹೂವಿನ ಮೊಗ್ಗಿನಂತಹ ರಚನೆಯಿದೆ. ಗರ್ಭಗುಡಿಯ ಬಾಗಿಲು ಸರಳವಾದ ರಚನೆಯನ್ನು ಹೊಂದಿದ್ದು ಎಡ ಬಲ ಭಾಗದಲ್ಲಿ ದ್ವಾರಪಾಲಕ ವಿಗ್ರಹಗಳಿವೆ. ಈ ದ್ವಾರಪಾಲಕರು ಚತುರ್ಭುಜಗಳನ್ನು ಹೊಂದಿದ್ದು ಡಮರುಗ, ತ್ರಿಶೂಲ, ಅಭಯಹಸ್ತ ಮತ್ತು ಗದೆಯನ್ನು ಹಿಡಿದಿದ್ದು ತಲೆಗೆ ಕಿರೀಟ ಧರಿಸಲಾಗಿದೆ.
ಗರ್ಭಗೃಹದ ಮುಂದಿನ ಭಾಗವೇ ಅಂತರಾಳ. ಇದು ಗರ್ಭಗೃಹಕ್ಕೆ ಸಮಾನಾಂತರವಾಗಿದ್ದು ಅದಕ್ಕೆ ಹೊಂದಿಕೊಂಡಂತೆಯೇ ಇದೆ. ನಾಲ್ಕು ಮೂಲೆಗಳಲ್ಲಿ ಗೋಡೆಗೆ ಹೊಂದಿಕೊಂಡಂತೆ ನಾಲ್ಕು ಕಂಬಗಳಿವೆ. ಅಂತರಾಳದ ಬಾಗಿಲಿನ ಬಾಗಿಲುವಾಡ ಸರಳವಾಗಿದ್ದು ಸ್ವಲ್ಪ ಮುಂಚಾಚಿರುವ ಹೊಸ್ತಿಲನ್ನು ಹೊಂದಿದೆ. ಲಲಾಟ ಬಿಂಬದಲ್ಲಿ ಕಮಲದ ರೇಖಾಚಿತ್ರ ಬಿಡಿಸಲಾಗಿದೆ. ಹೊಸ್ತಿಲಿನಲ್ಲಿಯೂ ಕಮಲದ ಚಿತ್ರವಿದೆ.
ಅಂತರಾಳದ ಮುಂದೆ ಬಂದರೆ ದೇವಾಲಯದ ಮುಖ್ಯಭಾಗ ರಂಗಮಂಟಪವಿದೆ (ನವರಂಗ). ನವರಂಗವನ್ನು ಪೂರ್ವ, ಉತ್ತರ, ದಕ್ಷಿಣ ಮೂರು ಕಡೆಗಳಿಂದಲೂ ಪ್ರವೇಶಿಸಬಹುದು. ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸಬೇಕು. ಪೂರ್ವಾಭಿಮುಖವಾಗಿರುವ ನವರಂಗದ ಬಾಗಿಲು ಮುಖ್ಯವಾಗಿದ್ದು 7 ಅಡಿ ಎತ್ತರವಾಗಿದೆ. ನವರಂಗದ ಬಾಗಿಲುವಾಡ ಸರಳವಾಗಿದ್ದು ಎರಡು ಬದಿಯಲ್ಲಿ ದ್ವಾರಪಾಲಕ ವಿಗ್ರಹಗಳನ್ನು ಕೆತ್ತಲಾಗಿದೆ. ಲಲಾಟ ಬಿಂಬದಲ್ಲಿ ಲಿಂಗದ ಉಬ್ಬುಶಿಲ್ಪವಿದ್ದು ಲಿಂಗುವಿನ ಎಡ ಮತ್ತು ಬಲಬದಿಯಲ್ಲಿ ಲಿಂಗುವಿಗೆ ಅಭಿಮುಖವಾಗಿರುವಂತೆ ನಂದಿಯನ್ನು ಚಿತ್ರಿಸಲಾಗಿದೆ. ರಂಗಮಂಟಪದಲ್ಲಿ 36 ಕಂಬಗಳಿದ್ದು ಇದರಲ್ಲಿ 16 ಪೂರ್ಣ ಕಂಬಗಳು, 20 ಕಂಬಗಳು ಅರ್ಧ ಕಂಬಗಳಿವೆ. ಈ ಕಂಬಗಳ ಅರ್ಧಭಾಗ ಗೋಡೆಯೊಳಗೆ ಸೇರಿದೆ. ಈ ಕಂಬಗಳು ನವರಂಗದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ಈ ಕಂಬಗಳು ಎರಡು ಮೀಟರ್ ಎತ್ತರವಾಗಿವೆ. ಈ ಕಂಬಗಳು ಸಾಧಾರಣವಾಗಿದ್ದು ವೈಶಾಲ್ಯತೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಪೂರ್ಣ ಕಂಬಗಳಲ್ಲಿ 8-16-8 ಪಟ್ಟಿಕೆಗಳಿದ್ದು ಸರಳವಾದ ಬೋಧಿಗೆಯನ್ನು ಹೊಂದಿವೆ. ಕಂಬಗಳ ಘನಾಕೃತಿಯಲ್ಲಿ ಆಕರ್ಷಣೀಯವಾದ ಉಬ್ಬುಶಿಲ್ಪಗಳಿವೆ. ದ್ವಾರದ ಮುಂಭಾಗದಲ್ಲಿರುವ ಬಲಗಡೆಯ ಕಂಬದಲ್ಲಿ ಉತ್ತರಾಭಿಮುಖವಾಗಿ ಕೈಮುಗಿದು ನಿಂತಿರುವ ಪುರುಷ ಶಿಲ್ಪವಿದ್ದು ಜಟಾಧಾರಿ, ಕರ್ಣಕುಂಡಲ, ತೋಳುಬಂದಿ, ಕಡಗ, ಕಂಠಿಹಾರವನ್ನು ಧರಿಸಿ ಆಕರ್ಷಣೀಯವಾಗಿದ್ದು ಇದು ಈ ದೇವಾಲಯ ನಿರ್ಮಿಸಿದ ಹಾಗಲವಾಡಿ ನಾಯಕರ ಮೂರ್ತಿ ಇರಬಹುದೆಂದು ಸಿ. ಹಯವದನರಾವ್ ಅಭಿಪ್ರಾಯಪಟ್ಟಿದ್ದಾರೆ.08
ರಂಗಮಂಟಪದ ಮಧ್ಯಭಾಗದ 4 ಕಂಬಗಳ ಮಧ್ಯದ ಮೇಲ್ಛಾವಣಿಯಲ್ಲಿ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಅಷ್ಟಕೋನಾಕೃತಿಯಲ್ಲಿ ಭುವನೇಶ್ವರಿ ನಿರ್ಮಿಸಲಾಗಿದೆ. ಪ್ರತಿ ಕೋನವೂ ಅರಳಿದ ಕಮಲದ ಚಿತ್ರಗಳನ್ನು ಒಳಗೊಂಡಿದೆ. ರಂಗಮಂಟಪದಲ್ಲಿ ಗರ್ಭಗುಡಿಯಲ್ಲಿರುವ ಶಿವಲಿಂಗುವಿಗೆ ಅಭಿಮುಖವಾಗಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ರಂಗಮಂಟಪವನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿರುವ ಪ್ರವೇಶ ದ್ವಾರಗಳು ದ್ವಾರ ಮಂಟಪವನ್ನು ಹೊಂದಿದ್ದು ನಾಲ್ಕು ಕಂಬಗಳಿವೆ. ಇದರಲ್ಲಿ ಎರಡು ಕಂಬಗಳು ಗೋಡೆಗೆ ಹೊಂದಿಕೊಂಡಂತಿವೆ. ಈ ಕಂಬಗಳ ತಳಭಾಗ ಆಯತಾಕಾರ, ಮಧ್ಯೆ ಚೌಕಾಕಾರ ಮತ್ತು ಮೇಲ್ಭಾಗವನ್ನು ಆಯತಾಕಾರದಲ್ಲಿ ಕೆತ್ತಲಾಗಿದ್ದು 8-16-8 ರ ಪಟ್ಟಿಕೆ ಹೊಂದಿವೆ. ಈ ಕಂಬಗಳಲ್ಲಿ ಲಿಂಗ, ನಂದಿ, ಪದ್ಮ, ಲಿಂಗಕ್ಕೆ ಕ್ಷೀರಾಭಿಷೇಕ ಮಾಡುತ್ತಿರುವ ಉಬ್ಬುಶಿಲ್ಪಗಳಿವೆ.
ನವರಂಗದ ಮುಂದಿನ ಭಾಗವೇ ತೆರೆದ ಮಂಟಪ. ಇದು 1.5 ಮೀಟರ್ ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ತೆರೆದ ಮಂಟಪಕ್ಕೆ ಉತ್ತರ ಮತ್ತು ದಕ್ಷಿಣಕ್ಕೆ ಎರಡು ಕಡೆಯಿಂದಲೂ ಮೆಟ್ಟಿಲುಗಳನ್ನು ಅತ್ತಿ ಪ್ರವೇಶಿಸಬಹುದು. ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಆನೆಗಳನ್ನು ಕೆತ್ತಲಾಗಿದೆ. ಮುಖಮಂಟಪವು 13.5 ಮೀಟರ್ ಉದ್ದ, 2 ಮೀಟರ್ ಅಗಲವಾಗಿದ್ದು ಈ ಮಂಟಪದಲ್ಲಿ 06 ಪೂರ್ಣ ಕಂಬಗಳು 06 ಗೋಡೆಗೆ ಸೇರಿರುವ ಅರ್ಧ ಕಂಬಗಳಿವೆ. ಈ ಕಂಬಗಳಲ್ಲಿ ಉಬ್ಬುಶಿಲ್ಪಗಳಿದ್ದು ಆಕರ್ಷಣೀಯವಾಗಿವೆ. ವ್ಯಾಳ, ಪೂರ್ಣಕುಂಭ, ಪದ್ಮ, ಭಕ್ತ, ಗಣಪತಿ, ಹಾವನ್ನು ಹಿಡಿದಿರುವ ನವಿಲು, ಬೇಡರ ಕಣ್ಣಪ್ಪ ಶಿಲ್ಪಗಳಿವೆ.
ಈ ದೇವಾಲಯದ ಅಧಿಷ್ಠಾನವು 1.5 ಮೀಟರ್ ಎತ್ತರವಾಗಿದ್ದು ಉಪಾನ, ಪದ್ಮ, ಅಗಲವಾದ ಕಂಠ ಮತ್ತು ಪ್ರತಿಗಳನ್ನು ಒಳಗೊಂಡಿದೆ. ಅಧಿಷ್ಠಾನದ ಮೇಲೆ ಕಲ್ಲಿನಿಂದ ನಿರ್ಮಿಸಿರುವ ಭಿತ್ತಿಯಿದ್ದು ಸರಳವಾಗಿದೆ. ಇದರಲ್ಲಿ ಎರಡು ಮೀನು, ಚೇಳು, ಅರ್ಧಚಂದ್ರನನ್ನು ಕೆತ್ತಲಾಗಿದೆ.
ದೇವಾಲಯದ ಗರ್ಭಗುಡಿಯ ಮೇಲೆ ಶಿಖರವಿದ್ದು ಇದನ್ನು ಗಚ್ಚು ಗಾರೆಯಿಂದ ನಿರ್ಮಿಸಲಾಗಿದೆ. ಈ ಶಿಖರ ದ್ರಾವಿಡ ಶೈಲಿಯಲ್ಲಿದ್ದು ಮೂರು ಅಂತಸ್ತುಗಳನ್ನು ಒಳಗೊಂಡಿದೆ. ಶಿಖರದಲ್ಲಿ ದೇವಕೋಷ್ಠಗಳಿದ್ದು ದಕ್ಷಿಣಾಮೂರ್ತಿ, ಅಭಯ, ಶಿವನ ಮೂರ್ತಿಗಳಿವೆ. ಎರಡನೇ ಅಂತಸ್ತಿನ ದೇವಕೋಷ್ಠದಲ್ಲಿ ಬ್ರಹ್ಮ, ಶಿವ ಮತ್ತು ವೆಂಕಟೇಶನ ಮೂರ್ತಿಯನ್ನು ಇಡಲಾಗಿದೆ. ದೇವಕೋಷ್ಠದ ಅಕ್ಕಪಕ್ಕಗಳಲ್ಲಿ ಚಿಕ್ಕ ಕಂಬಗಳಿವೆ. ಶಿಖರದಲ್ಲಿನ ಕಪೋತದ ನಾಲ್ಕು ಮೂಲೆಗಳಲ್ಲೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಮೇಲಿನ ಭಾಗವನ್ನು ಸ್ಥೂಪಿ ಎಂದು ಕರೆಯುವರು. ಸ್ಥೂಪಿಯ ನಾಲ್ಕು ದಿಕ್ಕುಗಳಲ್ಲಿ ಗೂಡುಗಳಿದ್ದು ಅದರ ಒಳಭಾಗದಲ್ಲಿ ಷಣ್ಮುಖ, ಆದಿಶೇಷ, ನವಿಲು, ಗಂಡುಭೇರುಂಡಗಳ ಮೂರ್ತಿಯನ್ನು ನಿರ್ಮಿಸಲಾಗಿದೆ. ಶಿಖರದ ಮೇಲ್ಭಾಗದಲ್ಲಿ ಲೋಹದ ಕಲಶವನ್ನು ಇಡಲಾಗಿದೆ.
ದೇವಾಲಯದ ಮುಂಭಾಗದಲ್ಲಿ ನಂದಿ ಮಂಟಪವಿದ್ದು, ಒಂದು ಮೀಟರ್ ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಇದು ನಾಲ್ಕು ಕಂಬಗಳನ್ನು ಹೊಂದಿದ್ದು ಸಾಧಾರಣ ಬೋಧಿಗೆ ಮತ್ತು ಚಾಚುಪೀಠವನ್ನು ಹೊಂದಿದೆ. ಮಂಟಪದ ಮೇಲ್ಛಾವಣಿಯ ಮೇಲೆ 4 ಮೂಲೆಗಳಲ್ಲೂ ಗಾರೆಗಚ್ಚಿನ ನಂದಿಯ ಮೂರ್ತಿಯನ್ನು ಇಡಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿನ ಶಿವಲಿಂಗುವಿಗೆ ಅಭಿಮುಖವಾಗಿ ಮಂಟಪದಲ್ಲಿ ಬೃಹತ್ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರಸನ್ನರಾಮೇಶ್ವರ ದೇವಾಲಯದ ಪಕ್ಕದಲ್ಲಿ ಪಾರ್ವತಿ ದೇವಾಲಯವಿದ್ದು, ಗರ್ಭಗುಡಿ ಮತ್ತು ಮುಖಮಂಟಪಗಳನ್ನು ಒಳಗೊಂಡಿದೆ. ಮುಖಮಂಟಪದಲ್ಲಿನ ಕಂಬಗಳಲ್ಲಿ ಮಿಥುನ ಶಿಲ್ಪಗಳು, ವೃಷಭಾರೂಡ ಶಿವ ಪಾರ್ವತಿ, ಬೇಟೆಗಾರ ವೇಷದ ಅರ್ಜುನ, ಶಿವನ ಸಮ್ಮುಖದಲ್ಲಿ ಲಿಂಗಕ್ಕೆ ಪೂಜೆ, ಬಾಣ ಹಿಡಿದು ನಿಂತಿರುವ ಸ್ತ್ರೀಯರು, ಕತ್ತಿ ಹೋರಾಟದಲ್ಲಿ ನಿರತರಾಗಿರುವ ವ್ಯಕ್ತಿಗಳು, ಹಂದಿಯನ್ನು ಸಂಹರಿಸುತ್ತಿರುವ ಅರ್ಜುನ, ಶಿವ, ಪಾರ್ವತಿ, ನಟರಾಜ, ನಂದಿ, ಕಿನ್ನರ, ಕುಂಭ, ನಟರಾಜ, ನಂದಿ, ಚಾಮರ ಧಾರಿಣಿ, ಲಿಂಗ, ಬೇಡರ ಕಣ್ಣಪ್ಪನ ಶಿಲ್ಪಗಳಿವೆ. ಈ ದೇವಾಲಯದ ಎದುರಿಗೆ ಒಂದು ಮೀಟರ್ ಎತ್ತರದ ಜಗಲಿಯ ಮೇಲೆ ಉಯ್ಯಾಲೆ ಮಂಟಪವಿದೆ.
ದೇವಾಲಯದ ರಕ್ಷಣೆಗಾಗಿ ಸುತ್ತಲೂ ಪ್ರಾಕಾರಗೋಡೆಯನ್ನು ನಿರ್ಮಿಸಲಾಗಿದ್ದು ಇತ್ತೀಚೆಗೆ ಅದನ್ನು ನವೀಕರಿಸಲಾಗಿದೆ.
ವರಸಿದ್ಧಿ ವಿನಾಯಕ:
ಇದು ಸಿದ್ಧಾಪುರದಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ದೇವಾಲಯವಾಗಿದೆ. ಗರ್ಭಗುಡಿ ಮತ್ತು ಮಂಟಪವನ್ನು ಒಳಗೊಂಡ ಚಿಕ್ಕ ದೇವಾಲಯವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ 3 ಅಡಿ ಎತ್ತರದ ವಿನಾಯಕನನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಮೇಲ್ಛಾವಣಿಯ ಮೇಲೆ ಒಳಮುಖವಾಗಿ ಭುವನೇಶ್ವರಿಯಿದೆ. ಗರ್ಭಗುಡಿಯ ಮುಂದೆ ಎರಡು ಕಂಬಗಳುಳ್ಳ ಚಿಕ್ಕ ಮಂಟಪವಿದೆ. ಕಂಬಗಳಲ್ಲಿ 16 ಪಟ್ಟಿಕೆಗಳು ಮತ್ತು ಚೌಕಾಕಾರದ ಭಾಗಗಳಿದ್ದು ಸಾಮಾನ್ಯ ಬೋಧಿಗೆಗಳನ್ನು ಹೊಂದಿವೆ. ಈ ಕಂಬಗಳಲ್ಲಿ ಸ್ತ್ರೀ ನೃತ್ಯಶಿಲ್ಪಗಳು, ನಂದಿ, ಬಾತುಕೋಳಿ, ಕಮಲದ ಉಬ್ಬು ಕೆತ್ತನೆಗಳಿವೆ. ಮಂಟಪದಲ್ಲಿ ಗೋಡೆಗೆ ಹೊಂದಿಕೊಂಡಂತಿರುವ 8 ಕಂಬಗಳಿವೆ. ಇದು ಒಂದು ಚಿಕ್ಕದಾದ ಸಾಧಾರಣ ದೇವಾಲಯವಾಗಿದೆ.
ಗವಿಗಂಗಾಧರೇಶ್ವರ ದೇವಾಲಯ:
ಹೊಳವನಹಳ್ಳಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ರಣಭೈರೇಗೌಡ ಕೊರಟಗೆರೆ ಬೆಟ್ಟದಲ್ಲಿ ಕೋಟೆ ನಿರ್ಮಿಸಿ ಗವಿಗಂಗಾಧರೇಶ್ವರ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯವು ದೈತ್ಯಾಕಾರದ ಸ್ವಾಭಾವಿಕ ಕಲ್ಲುಬಂಡೆಗೆ ಹೊಂದಿಕೊಂಡಂತೆ ನಿರ್ಮಾಣಗೊಂಡಿದ್ದು, ಗರ್ಭಗುಡಿಯನ್ನು ಅದೇ ಸ್ವಾಭಾವಿಕ ಬಂಡೆಯಲ್ಲೇ ನಿರ್ಮಾಣ ಮಾಡಿ ಅದರಲ್ಲಿ ಶಿವಲಿಂಗುವನ್ನು ಪ್ರತಿಷ್ಠಾಪಿಸಲಾಗಿದೆ. ಸ್ವಾಭಾವಿಕ ಬಂಡೆಯಲ್ಲೇ ಗರ್ಭಗುಡಿ ನಿರ್ಮಾಣಗೊಂಡಿದ್ದರೂ ಚೌಕಾಕಾರವಾಗಿದೆ. ಶಿವಲಿಂಗಕ್ಕೆ ಅಭಿಮುಖವಾಗಿ ಸುಮಾರು 1 1/2 ಅಡಿ ಎತ್ತರದ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ದ್ವಾರದ ಬಾಗಿಲುವಾಡವನ್ನು ಹೂಬಳ್ಳಿಗಳಿಂದ ಅಲಂಕರಿಸಲಾಗಿದೆ. ಎಡ ಮತ್ತು ಬಲ ಬದಿಯಲ್ಲಿ ಶೈವ ದ್ವಾರಪಾಲಕ ವಿಗ್ರಹಗಳಿವೆ. ಡಮರುಗ ಮತ್ತು ತ್ರಿಶೂಲ ಹಿಡಿದಿರುವಂತೆ ಚಿತ್ರಿಸಲಾಗಿದೆ. ಗರ್ಭಗುಡಿಗೆ ಸಮಾನಾಂತರವಾಗಿ ಎಡಭಾಗಕ್ಕೆ ಚಿಕ್ಕದಾದ ಎರಡು ಗರ್ಭಗುಡಿಗಳಿದ್ದು ಇದರಲ್ಲಿ ನಾಗರಶಿಲ್ಪಗಳನ್ನಿಡಲಾಗಿದೆ. ಇದಕ್ಕೆ ನೇರವಾಗಿ ಮಂಟಪದಲ್ಲಿ ನಾಲ್ಕು ಅಡಿ ವೇದಿಕೆಯ ಮೇಲೆ ನವಗ್ರಹ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದೆ.
ಗರ್ಭಗೃಹದ ಮುಂದೆ ಅಂತರಾಳವಿದ್ದು 06 ಕಂಬಗಳನ್ನು ಹೊಂದಿದೆ. ಈ ಕಂಬಗಳು ಚೌಕಾಕಾರದಲ್ಲಿದ್ದು ಮೂರು ಹಂತಗಳಲ್ಲಿ ಉಬ್ಬು ಶಿಲ್ಪಗಳ ಕೆತ್ತನೆಗಳಿವೆ. ನಂದಿ, ಮಂಗ, ಕೂರ್ಮ, ಪುಷ್ಪ, ಸ್ತ್ರೀ ತನ್ನ ಮೊಣಕಾಲೂರಿ ಕುಳಿತ ಶಿಲ್ಪ ಪೂರ್ಣಕುಂಭದ ಶಿಲ್ಪಗಳಿವೆ. ಈ ಕಂಬಗಳು ಸಾಧಾರಣ ಬೋಧಿಗೆಯನ್ನು ಹೊಂದಿದ್ದು ಮೇಲ್ಛಾವಣಿಯನ್ನು ಹೊತ್ತು ನಿಂತಿವೆ.
ಅಂತರಾಳದ ಮುಂದಿನ ಮುಖ ಮಂಟಪ ಭಾಗದಲ್ಲಿ ಸುಮಾರು 5 1/2 ಅಡಿ ಎತ್ತರದ ದೀಪಸ್ತಂಭವಿದೆ. ದೀಪಸ್ತಂಭದ ಮುಂಭಾಗದಲ್ಲಿ ಸುಮಾರು ಮೂರು ಅಡಿ ಎತ್ತರದ ನಂದಿಯನ್ನು ಪ್ರತಿಷ್ಠಾಪಿಸಲಾಗಿದ್ದು ಸಾಧಾರಣ ಅಲಂಕಾರವನ್ನು ಹೊಂದಿದೆ. ಇದರಲ್ಲಿ ನಾಲ್ಕು ಕಂಬಗಳಿದ್ದು ಚೌಕಾಕಾರವಾಗಿವೆ. ಕಂಬ ಸರಳವಾಗಿದ್ದರೂ ಕಂಬಗಳು ಬೋಧಿಗೆ ಮತ್ತು ಚಾಚುಪೀಠ ಒಳಗೊಂಡಿವೆ.
ದೇವಾಲಯದಿಂದ ಸ್ವಲ್ಪ ಮುಂಭಾಗದಲ್ಲಿ ದ್ವಾರಮಂಟಪವಿದ್ದು, ಮಂಟಪದ ದ್ವಾರದಲ್ಲಿ ದ್ವಾರಪಾಲಕ ಶಿಲ್ಪಗಳಿದ್ದರೆ, ದ್ವಾರಮಂಟಪದ ಮೇಲ್ಭಾಗದಲ್ಲಿ ಸುಮಾರು 6 ಅಡಿ ಎತ್ತರವಾದ ಗಾರೆಯಿಂದ ನಿರ್ಮಿಸಿರುವ ನಂದಿಯನ್ನು ನಿರ್ಮಿಸಲಾಗಿದೆ. ದ್ವಾರಮಂಟಪದ ಎರಡು ಬದಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಎತ್ತರವಾದ ಜಗತಿಯನ್ನು ಹೊಂದಿದೆ. ದ್ವಾರಮಂಟಪಕ್ಕೆ ಸಮೀಪದಲ್ಲೇ ಒಂದು ನೀರಿನ ದೊಣೆಯಿದೆ. ದೇವಾಲಯದ ಗರ್ಭಗೃಹದ ಮೇಲ್ಭಾಗದಲ್ಲಿ ಗಾರೆ ಮತ್ತು ಇಟ್ಟಿಗೆಯಿಂದ ಶಿಖರವನ್ನು ನಿರ್ಮಿಸಲಾಗಿದೆ. ನಾಲ್ಕು ಹಂತವನ್ನು ಒಳಗೊಂಡಿದ್ದು ನಾಲ್ಕು ಖಾಲಿ ಕೋಷ್ಠಕಗಳಿವೆ. ಶಿಖರವು ಮೇಲೇರುತ್ತಾ ಹೋದಂತೆ ಕಿರಿದಾಗುತ್ತಾ ಸಾಗಿದೆ. ಈ ಶಿಖರ ಬೆಟ್ಟಕ್ಕೆ ಹೊಂದಿಕೊಂಡಂತೆಯೇ ಗೋಚರಿಸುತ್ತದೆ.
ಬೀರೇಶ್ವರ ದೇವಾಲಯ:
ಈ ದೇವಾಲಯ ಹುಲಿಯೂರುದುರ್ಗದ ಶೃಂಗಾರ ಸಾಗರ ಅಗ್ರಹಾರದ ಪಶ್ಚಿಮಕ್ಕೆ ಇದೆ. ಇದು ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪ ಭಾಗಗಳನ್ನು ಒಳಗೊಂಡಿದೆ. ಗರ್ಭಗೃಹ ಚಚ್ಚೌಕಾರವಾಗಿದ್ದು ಇದರ ಮಧ್ಯಭಾಗದಲ್ಲಿ ಶಿವಲಿಂಗುವನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳದ ಎಡಭಾಗದಲ್ಲಿ ಗಣಪತಿಯನ್ನು, ಬಲಭಾಗದಲ್ಲಿ ಪಾರ್ವತಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗಿದೆ. ಶಿವಲಿಂಗುವಿಗೆ ಎದುರಾಗಿ ಅಂತರಾಳದಲ್ಲಿ ನಂದಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳದ ಮುಂದಿನ ಭಾಗವೇ ನವರಂಗ. ಇದರಲ್ಲಿ ನಾಲ್ಕು ಕಂಬಗಳಿದ್ದು ಕಂಬಗಳ ಮೇಲೆ ಶಿವಲಿಂಗ, ನಂದಿ, ಗಣಪತಿಯ ಉಬ್ಬುಶಿಲ್ಪಗಳಿವೆ. ಮೇಲ್ಛಾವಣಿಯಲ್ಲಿ ಪದ್ಮದ ಕೆತ್ತನೆಯಿದೆ. ನವರಂಗದ ಮುಂದಿನ ಭಾಗ ತೆರೆದ ಮಂಟಪವಾಗಿದ್ದು ಅದರಲ್ಲಿ ಕಂಬಗಳು ಸಾಧಾರಣವಾಗಿವೆ. ಈ ದೇವಾಲಯ ಜೀರ್ಣೋದ್ಧಾರಗೊಂಡಿದೆ.
ದೇವಾಲಯದ ಮುಂದೆ ಸುಮಾರು 30 ಅಡಿ ಎತ್ತರದ ದೀಪಸ್ತಂಭವಿದೆ. ದೀಪಸ್ತಂಭಕ್ಕೆ ಹೊಂದಿಕೊಂಡಂತೆ ಒಕ್ಕೈ ಮಾಸ್ತಿಗಲ್ಲು ಮತ್ತು ವೀರಗಲ್ಲುಗಳಿದ್ದು ಪೂಜೆಗೆ ಒಳಪಟ್ಟಿವೆ. ದೇವಾಲಯದ ಆವರಣದಲ್ಲಿ ಹೆಣ್ಣುಮಕ್ಕಳು, ವೀರಮಾಸ್ತಮ್ಮ ಮತ್ತು ಗಂಗಮ್ಮನ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.09
ವೀರಭದ್ರ ದೇವಾಲಯ:
ಹುತ್ರಿದುರ್ಗ ಕೋಟೆಯ ಎಲೆಯೂರು ಬಾಗಿಲಿನಲ್ಲಿ ಈ ದೇವಾಲಯವಿದ್ದು, ಪೂರ್ವಾಭಿಮುಖವಾಗಿದೆ. ಗ್ರಾಮದ ರಕ್ಷಕನಾಗಿ ಮತ್ತು ಕೋಟೆಯನ್ನು ರಕ್ಷಿಸುವ ದೇವರು ಎಂಬ ನಂಬಿಕೆಯಿದೆ. ಇದು ನಾಡಪ್ರಭುಗಳ ಕಾಲಾವಧಿಯಲ್ಲಿ ನಿರ್ಮಾಣಗೊಂಡಿದ್ದು ತಳ ವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಭಾಗಗಳಿವೆ. ಗರ್ಭಗುಡಿಯಲ್ಲಿ ಸುಮಾರು 5 ಅಡಿ ಎತ್ತರದ ವೀರಭದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈತ ಚತುರ್ಭುಜಧಾರಿಯಾಗಿದ್ದು ಕಡಿಕತ್ತಿ, ಬಿಲ್ಲು, ಬಾಣ ಹಾಗೂ ಕೇಟಕವನ್ನು ಹಿಡಿದಿದ್ದು ಸ್ಥಾನಿಕ ಭಂಗಿಯಲ್ಲಿದೆ. ವೀರಭದ್ರನ ಎಡಭಾಗದಲ್ಲಿ ದಕ್ಷಬ್ರಹ್ಮನ ಚಿಕ್ಕ ಮೂರ್ತಿಯಿದೆ. ಗರ್ಭಗುಡಿಯ ಮುಂಭಾಗದಲ್ಲಿ ಅಂತರಾಳವಿದ್ದು ಅಂತರಾಳದ ಎಡ ಮತ್ತು ಬಲಭಾಗದಲ್ಲಿ ಗಣಪತಿ ಮತ್ತು ಭದ್ರಕಾಳಿ ಶಿಲ್ಪಗಳಿವೆ. ಅಂತರಾಳದ ಮುಂದಿನ ಭಾಗವೇ ನವರಂಗವಾಗಿದೆ. ಇದು ನಾಲ್ಕು ಕಂಬಗಳಿಂದ ಕೂಡಿದ್ದು ಕಂಬಗಳು ಸಾಧಾರಣವಾಗಿವೆ. ಇವುಗಳು ನವರಂಗದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ನವರಂಗದ ಮುಂದಿನ ಭಾಗ ಮುಖಮಂಟಪವಾಗಿದ್ದು ಸಾಧಾರಣವಾಗಿದೆ. ಯಾವುದೇ ಅಲಂಕರಣವಿಲ್ಲ. ದೇವಾಲಯದ ಮುಂಭಾಗ ಸುಮಾರು 30 ಅಡಿ ಎತ್ತರದ ದೀಪಸ್ತಂಭವಿದೆ. ಈ ದೇವಾಲಯ ಸುಸ್ಥಿತಿಯಲ್ಲಿದೆ.
ಶಂಕರೇಶ್ವರ ದೇವಾಲಯ:
ಹುತ್ರಿದುರ್ಗ ಬೆಟ್ಟದ ತುತ್ತತುದಿಯಲ್ಲಿ ಶಂಕರೇಶ್ವರ ದೇವಾಲಯವಿದ್ದು ಪೂರ್ವಾಭಿಮುಖವಾಗಿದೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಪಟಗಳಿಂದ ಕೂಡಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗುವನ್ನು ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದರೆಂಬ ಪ್ರತೀತಿ ಇದೆ.10 ಶಿವಲಿಂಗಕ್ಕೆ ಎದುರಿಗೆ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ನಾಲ್ಕು ಕಂಬಗಳು ಇದ್ದು ಸಾಧಾರಣವಾಗಿವೆ. ಇವು ನವರಂಗದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ನವರಂಗದ ಎಡಭಾಗದಲ್ಲಿ ಮಹಿಷಾಸುರ ಮರ್ಧಿನಿಯ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದ ಮುಂದೆ ಮುಖಮಂಟಪವಿದ್ದು ಸಾಧಾರಣವಾಗಿದೆ. ಸರಳ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯದಲ್ಲಿ ದ್ರಾವಿಡ ಶೈಲಿಯ ಶಿಖರವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ನೀರಿನ ದೊಣೆಯಿದೆ. ಇದು ಪ್ರಾಕೃತಿಕವಾಗಿ ನಿರ್ಮಾಣಗೊಂಡಿದೆ. ಇದನ್ನು ಕಪ್ಪೆದೊಣೆ ಎನ್ನುತ್ತಾರೆ. ದೇವಾಲಯದ ಮುಂಭಾಗದಲ್ಲಿ 30 ಅಡಿ ಎತ್ತರದ ದೀಪಸ್ತಂಭವಿದ್ದು ಅದನ್ನು ಇತ್ತೀಚೆಗೆ ನಾಶಗೊಳಿಸಲಾಗಿದೆ. ಈ ದೇವಾಲಯ ಬೆಟ್ಟದ ತುದಿಯಲ್ಲಿದ್ದರೂ ಇಂದಿಗೂ ಪೂಜೆ ನಡೆಯುತ್ತದೆ.
ಮಲ್ಲೇಶ್ವರ ದೇವಾಲಯ:
ಮಧುಗಿರಿಯ ಊರ ಮಧ್ಯಭಾಗದಲ್ಲಿ ಮಲ್ಲೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಮುಮ್ಮಡಿ ಚಿಕ್ಕಪ್ಪಗೌಡರು ನಿರ್ಮಿಸಿದ್ದಾರೆ. ಈ ದೇವಾಲಯ ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದ ಪ್ರಮುಖವಾಗಿದ್ದು, ಮಹಾನಾಡ ಪ್ರಭುಗಳ ವಾಸ್ತು ಪರಂಪರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ಈ ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಸುಖನಾಸಿ, ಅರ್ಧಮಂಟಪ, ನವರಂಗ, ಮುಖಮಂಟಪ, ನಂದಿ ಮಂಟಪ ಮತ್ತು ಮಹಾದ್ವಾರಗಳನ್ನು ಹೊಂದಿದೆ. ಈ ದೇವಾಲಯವನ್ನು ಸಂಪೂರ್ಣ ಕಣಶಿಲೆಯಿಂದ ನಿರ್ಮಿಸಲಾಗಿದೆ. ದೇವಾಲಯದ ಕೇಂದ್ರಬಿಂದುವಾದ ಗರ್ಭಗೃಹವು ಸರಳವಾಗಿದ್ದು ಗರ್ಭಗೃಹದಲ್ಲಿ ಸುಮಾರು 1 1/2ಅಡಿ ಎತ್ತರದ ಪಾಣಿಪೀಠದ ಮೇಲೆ ಶಿವಲಿಂಗುವಿದೆ.
ಗರ್ಭಗೃಹದ ಮುಂದಿನ ಭಾಗವೇ ಅಂತರಾಳ ಮತ್ತು ಅರ್ಧಮಂಟಪ ಸರಳವಾಗಿವೆ. ಅರ್ಧಮಂಟಪದ ಬಾಗಿಲುವಾಡ ಸಣ್ಣ ಸಣ್ಣ ಹೂ ಬಳ್ಳಿಗಳಿಂದ ಅಲಂಕೃತವಾಗಿದೆ. ದ್ವಾರದ ಎಡ ಬಲ ಬದಿಯಲ್ಲಿ ಶೈವ ದ್ವಾರಪಾಲಕರಿದ್ದಾರೆ. ಮಂಟಪದ ಭಿತ್ತಿಗೆ ಹೊಂದಿಕೊಂಡಂತೆ ಅರ್ಧ ಕಂಬಗಳಿವೆ.
ದೇವಾಲಯದ ಆಕರ್ಷಣೀಯ ಕೇಂದ್ರ ಬಿಂದು ನವರಂಗದ ಭಾಗವಾಗಿದೆ. ನವರಂಗದ ಮಧ್ಯದಲ್ಲಿ ನಾಲ್ಕು ಕಂಬಗಳಿದ್ದು ಇದೇ ನವರಂಗದ ಮೇಲ್ಛಾವಣಿಯನ್ನು ಹೊತ್ತು ನಿಂತಿವೆ. ಈ ಕಂಬಗಳು ಚೌಕಾಕಾರ ಮತ್ತು ಎಂಟು ಪಟ್ಟಿಕೆಗಳ (ಅಷ್ಟ ಮುಖಗಳ) ಕಂಬಗಳಾಗಿದ್ದು, ಚೌಕಾಕಾರ ಮತ್ತು ಪುಷ್ಪ ಬೋಧಿಗೆಗಳಿವೆ. ಚೌಕಾಕಾರದ ಭಾಗದಲ್ಲಿ ಅನೇಕ ಉಬ್ಬು ಶಿಲ್ಪಗಳಿವೆ. ಧ್ಯಾನಾಸಕ್ತರಾಗಿರುವ ಯತಿಗಳ ಶಿಲ್ಪಗಳು, ಗಣೇಶ, ನಟರಾಜನ ಶಿಲ್ಪಗಳಿವೆ. ನವರಂಗದ ನಾಲ್ಕು ಕಂಬಗಳ ಮಧ್ಯಭಾಗದ ಮೇಲ್ಛಾವಣಿಯಲ್ಲಿ ಅಷ್ಟಕೋನಾಕಾರದ ಭುವನೇಶ್ವರಿಯಿದೆ. ಭುವನೇಶ್ವರಿಯ ಮಧ್ಯದಲ್ಲಿ ಕಮಲದ ಅಲಂಕಾರವಿದೆ. ಗರ್ಭಗುಡಿಯಲ್ಲಿನ ಶಿವಲಿಂಗುವಿಗೆ ಅಭಿಮುಖವಾಗಿ ನವರಂಗದಲ್ಲಿ ಅಲಂಕೃತವಾದ ಒಂದು ಚಿಕ್ಕ ನಂದಿ ವಿಗ್ರಹವಿದೆ. ನವರಂಗದ ಪ್ರವೇಶದ್ವಾರದ ಎರಡು ಬದಿಗಳಲ್ಲಿ ದ್ವಾರಪಾಲಕ ಮೂರ್ತಿಗಳಿದ್ದು ತ್ರಿಶೂಲ ಮತ್ತು ಡಮರುಗಗಳನ್ನು ದ್ವಾರಪಾಲಕರು ಹಿಡಿದಿದ್ದಾರೆ. ಈ ಶಿಲ್ಪಗಳು ಸುಂದರವಾಗಿವೆ. ನವರಂಗದ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲೂ ಎರಡು ಪ್ರವೇಶದ್ವಾರಗಳಿವೆ. ಉತ್ತರಕ್ಕಿರುವ ದ್ವಾರವು ಪಕ್ಕದಲ್ಲಿರುವ ಪಾರ್ವತಿ ದೇವಾಲಯಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ದಕ್ಷಿಣದ ದ್ವಾರವು ದೇವಾಲಯದ ಪ್ರದಕ್ಷಿಣಾಪಥಕ್ಕೆ ಸಂಪರ್ಕ ಕಲ್ಪಿಸಿದೆ. ನವರಂಗದ ಹೊರಭಾಗದಲ್ಲಿ ಗೋಡೆಗೆ ಹೊಂದಿಕೊಂಡಂತೆ ಎರಡು ಕಡೆ ಎತ್ತರದ ವೇದಿಕೆಯಿದೆ. ನವರಂಗದ ಹೊರಗೋಡೆಯಲ್ಲಿ ಗಣೇಶ, ನಂದಿ, ಷಣ್ಮುಖ, ಪಾರ್ವತಿಯರ ದೇವಕೋಷ್ಠಗಳಿವೆ.
ನವರಂಗದ ಮುಂದಿನ ಭಾಗವೇ ಮುಖಮಂಟಪ. ಇದರಲ್ಲಿ ಆರು ಕಂಬಗಳು ಸರಳವಾಗಿದ್ದು, ಚೌಕಾಕಾರ, ಅಷ್ಟಕೋನಾಕಾರ (ಅಷ್ಟಪಟ್ಟಿಕೆ), ವೃತ್ತಾಕಾರ ಅದರ ಮೇಲೆ ಸಾಧಾರಣ ಬೋಧಿಗೆಯಿದ್ದು ಮೇಲ್ಛಾವಣಿ ಹೊತ್ತು ನಿಂತಿವೆ. ಎರಡು ಕಂಬಗಳು ವಿಶೇಷವಾಗಿದ್ದು ಹಂಪಿಯ ವಿಜಯ ವಿಠಲ ದೇವಾಲಯ ಸಂಕೀರ್ಣದಲ್ಲಿರುವ ಸಂಗೀತದ ನಾದವನ್ನು ಹೊರಸೂಸುವ ಕಂಬಗಳಂತಿವೆ. ಒಂದೇ ಕಲ್ಲಿನಿಂದ ನಿರ್ಮಾಣಗೊಂಡಿರುವ ಕಂಬದಲ್ಲಿ ಮೂರು ಮೂರು ಚಿಕ್ಕ ಕಂಬಗಳಿಂದ ಅಲಂಕರಿಸಲಾಗಿದೆ. ಆ ಕಂಬಗಳಲ್ಲಿ 16 ಪಟ್ಟಿ ಚಿಕ್ಕ ಪಟ್ಟಿಕೆಗಳು ಕಂಡುಬರುತ್ತವೆ. ಈ ಚಿಕ್ಕ ಮೂರು ಕಂಬಗಳನ್ನು 3 ಸಿಂಹಗಳು ಹೊತ್ತು ನಿಂತಿರುವಂತೆ ನಿರ್ಮಿಸಲಾಗಿದೆ. ಇದೇ ಮಂಟಪದಲ್ಲಿ ಚೌಕಾಕಾರ ಮತ್ತು ಅಷ್ಟಕೋನಾಕಾರ ಹೊಂದಿದ್ದು ಸಾಧಾರಣ ಬೋಧಿಗೆಯುಳ್ಳ ಗ್ರಾನೈಟ್ ಕಲ್ಲಿನಿಂದ ಮಾಡಿರುವ 15 ಕಂಬಗಳಿದ್ದು ಚೌಕಾಕಾರ ಭಾಗದಲ್ಲಿ ಲಿಂಗು, ಚಂದ್ರ, ನಂದಿ ಮುಂತಾದ ಅಲಂಕಾರಿಕ ಶಿಲ್ಪಗಳಿವೆ.
ನಂದಿ ಮಂಟಪಕ್ಕೆ ಹೊಂದಿಕೊಂಡಂತೆ ಮಹಾಮಂಟಪದ ಕೊನೆಯಲ್ಲಿ 10 ಕಂಬಗಳಿದ್ದು ವಿಜಯನಗರ ಕಾಲದ ಕಂಬಗಳನ್ನು ಹೋಲುತ್ತದೆ. ಈ ಕಂಬಗಳು ಸುಮಾರು 1 ಳಿ ಅಡಿ ವೇದಿಕೆಯ ಮೇಲೆ ಇದ್ದು ಸಿಂಹವು ತನ್ನ ಹಿಂದಿನ ಕಾಲುಗಳನ್ನು ಆನೆಯ ಮೇಲೆ ಊರಿ ಆನೆಯು ತನ್ನ ಸೊಂಡಲಿನಿಂದ ಸಿಂಹದ ಮುಂದಿನ ಕಾಲನ್ನು ಮೇಲೆತ್ತಿ ಸಿಂಹವು ತನ್ನ ತಲೆಯ ಮೇಲೆ ಮೇಲ್ಛಾವಣಿಯನ್ನು ಹೊತ್ತು ನಿಂತಿರುವಂತೆ ಕೆತ್ತಲಾಗಿದೆ. ಸಿಂಹದ ಮೇಲೆ ಸವಾರ ಖಡ್ಗವನ್ನು ಹಿಡಿದು ಹೋರಾಡುತ್ತಿರುವಂತೆ ಒಬ್ಬ ಸವಾರ ಮತ್ತೊಬ್ಬ ಸವಾರನಿಗೆ ಅಭಿಮುಖವಾಗಿರುವಂತೆ ಕೆತ್ತಲಾಗಿದೆ. ಈ ಕಂಬಗಳ ಉಳಿದ ಮೂರು ಮುಖಗಳಲ್ಲಿ ಕಾಲ್ಪನಿಕ ಚಿತ್ರಗಳು, ನಂದಿ, ಲಿಂಗ ಅದರ ಮೇಲೆ ನಾಗನ ಎಡೆ, ಗಣೇಶ, ವರಾಹ, ವೀರಭದ್ರ, ಲಿಂಗು, ಶಿವನ ನೃತ್ಯ ತಾಂಡವ, ಮನುಷ್ಯ ಡೋಲು ಬಾರಿಸುವ ಚಿತ್ರ, ಕಮಲ, ಆಂಜನೇಯ, ನಂದಿ, ಧ್ಯಾನಾಸಕ್ತನಾಗಿರುವ ವ್ಯಕ್ತಿ ಚಿತ್ರ, ಶಿಲ್ಪಗಳು, ನವಿಲು, ಸಿಂಹ, ಲಕ್ಷ್ಮೀ, ಗರ್ಭಿಣಿ, ಕೋತಿ ಹಣ್ಣನ್ನು ತಿನ್ನುತ್ತಿರುವ ಉಬ್ಬುಶಿಲ್ಪಗಳಿರುವುದರಿಂದ ನೋಡಲು ತುಂಬಾ ಆಕರ್ಷಣೀಯವಾದ ಕಂಬಗಳಾಗಿವೆ.
ಮುಖಮಂಟಪದ ಮುಂಭಾಗದಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ನಂದಿ ಮಂಟಪವಿದೆ. ಈ ಮಂಟಪದಲ್ಲಿ ಕಪ್ಪು ಶಿಲೆಯಿಂದ ಮಾಡಿರುವ ಬೃಹದಾಕಾರದ ನಂದಿ ಶಿಲ್ಪವಿದೆ. ನುಣುಪಾದ ಮೈಕಟ್ಟನ್ನು ಹೊಂದಿರುವ ನಂದಿ ಶಿಲ್ಪ, ಘಂಟೆಗಳ ಸರ, ಹೂ ಮಾಲೆಯಿಂದ ಅಲಂಕೃತಗೊಂಡಿದೆ. ನಂದಿ ಮಂಟಪದ ಮೇಲ್ಛಾವಣಿಯಲ್ಲಿ ಒಳಮುಖವಾಗಿ ಭುವನೇಶ್ವರಿಯಿದೆ. ನಂದಿ ಮಂಟಪಕ್ಕೆ ಹೊಂದಿಕೊಂಡಂತೆ ಬಲಿಪೀಠ ಮತ್ತು ದೀಪಸ್ತಂಭವಿದೆ. ದೇವಾಲಯದ ಸುತ್ತಲೂ ಮಂಟಪವಿದೆ.
ಮಲ್ಲೇಶ್ವರ ದೇವಾಲಯದ ಎಡಭಾಗದಲ್ಲಿ ಪಾರ್ವತಿ ಗುಡಿಯಿದೆ. ಮಲ್ಲೇಶ್ವರ ದೇವಾಲಯದ ಬಲಭಾಗದಲ್ಲಿಯೂ ಇಂತಹದೇ ಮತ್ತೊಂದು ಗುಡಿಯಿದ್ದು ಇದನ್ನು ಕಾಶಿ ವಿಶ್ವೇಶ್ವರ ಮಂದಿರವೆಂದು ಕರೆಯುತ್ತಾರೆ.24 ಇದು ವಿಶೇಷ ಸಂದರ್ಭಗಳಲ್ಲಿ ಮಾತ್ರ ತೆರೆದಿರುತ್ತದೆ. ವಿಶ್ವೇಶ್ವರ ದೇವಾಲಯದ ಮಂಟಪದ ಸ್ವಲ್ಪ ಮುಂದಿನ ಭಾಗದಲ್ಲಿ ಮೂರು ಪಟ್ಟಿಕೆಗಳ ಎತ್ತರದ ವೇದಿಕೆಯ ಮೇಲೆ ನಾಲ್ಕು ಕಂಬಗಳಿಂದ ಕೂಡಿರುವ ತೂಗು ಮಂಟಪವಿದೆ. ಮಂಟಪದ ಕಂಬಗಳಲ್ಲಿ ನಾರದ - ತಂಬೂರಿ ಮತ್ತು ಕೈಯಲ್ಲಿ ಕಮಂಡಲ ಹಿಡಿದಿರುವ ಗಡ್ಡಧಾರಿ ಋಷಿಗಳಿದ್ದಾರೆ. ತೂಗು ಮಂಟಪದ ಮುಂದೆ ಒಂದು ಕಂಬವಿದ್ದು ಕಂಬದ ಮೇಲ್ಭಾಗದಲ್ಲಿ ಒಂದು ಚಿಕ್ಕ ಮಂಟಪವಿದೆ. ಇದು ನಾಲ್ಕು ದಿಕ್ಕುಗಳಿಗೂ ಅಭಿಮುಖವಾಗಿದ್ದು ಅದರ ಮೇಲೆ ಇಟ್ಟಿಗೆ ಗಾರೆಯಿಂದ ಶಿಖರದಂತೆ ನಿರ್ಮಿಸಿದ್ದಾರೆ. ಶಿಖರದ ತುದಿಯಲ್ಲಿ ಕಲಶವಿದೆ.
ಮಲ್ಲೇಶ್ವರ ದೇವಾಲಯವು ಮೂರು ಪಟ್ಟಿಕೆಗಳಿಂದ ಕೂಡಿದ ಅಧಿಷ್ಠಾನ ಹೊಂದಿದ್ದು ಸರಳವಾಗಿದೆ. ದೇವಾಲಯದ ಹೊರ ಭಿತ್ತಿಯಲ್ಲಿ ಅಲ್ಲಲ್ಲಿ ಪ್ರಾಣಿಗಳ ಉಬ್ಬುಶಿಲ್ಪಗಳಿವೆ. ಭಿತ್ತಿಯ ಮೇಲಿನ ಕಪೋತಭಾಗ ಸ್ವಲ್ಪ ಮುಂಚಾಚಿಕೊಂಡಿದೆ. ಏಕೆಂದರೆ ಮಳೆಯ ನೀರು ದೇವಾಲಯದ ಗೋಡೆಯ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಈ ರೀತಿ ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲ್ಭಾಗದಲ್ಲಿ ದ್ರಾವಿಡ ಶೈಲಿಯ ಶಿಖರವಿದ್ದು ಶಿಖರದ ಮೇಲೆ ಅಮಲಕ ಪುಷ್ಪ ಕಳಸಗಳಿವೆ. ದೇವಾಲಯದ ಪ್ರಾಕಾರದ ಒಳಭಾಗದ ಉತ್ತರಕ್ಕೆ ಮತ್ತೊಂದು ಬಾಗಿಲಿದೆ. ಇದು ಪಕ್ಕದ ವೆಂಕಟರಮಣ ದೇವಾಲಯಕ್ಕೆ ಅವಕಾಶ ಕಲ್ಪಿಸಿದೆ.
ದೇವಾಲಯದ ಸುತ್ತಲೂ ಪ್ರಾಕಾರ ಗೋಡೆಯಿದ್ದು ದೇವಾಲಯ ಪ್ರವೇಶಕ್ಕೆ ದ್ವಾರ ಮಂಟಪವಿದ್ದು ಮಂಟಪದ ಮೇಲೆ ಎತ್ತರವಾದ ಗೋಪುರವಿದ್ದು ಮೂರು ಅಂತಸ್ತುಗಳಿಂದ ಕೂಡಿದೆ. ಇದರಲ್ಲಿ ಗಾರೆ ಶಿಲ್ಪಗಳಿದ್ದು ಭಗ್ನಗೊಂಡಿವೆ. ಕೆಲವು ಅಸ್ಪಷ್ಟವಾಗಿವೆ. ಬೃಹದಾಕಾರದ ಬಾಗಿಲುವಾಡ ಹೊಂದಿದ್ದು ಲಲ್ಲಾಟ ಬಿಂಬದಲ್ಲಿ ಗಣೇಶನ ಶಿಲ್ಪವಿದೆ. ಬಾಗಿಲಿನ ಎಡ ಬಲದಲ್ಲಿ ಶೈವ ದ್ವಾರಪಾಲಕರಿದ್ದಾರೆ. ಬಾಗಿಲುವಾಡದ ದೈತ್ಯಾಕಾರದ ಎರಡು ಕಂಬಗಳಲ್ಲಿ ಆನೆಯ ಮೇಲೆ ನಿಂತಿರುವ ಲತಾಂಗಿ ತೋರಣ ಬಳ್ಳಿಗಳನ್ನು ಹಿಡಿದು ನಿಂತಿರುವಂತೆ ಶಿಲ್ಪಿಯು ಕೆತ್ತಿದ್ದಾನೆ. ಪ್ರವೇಶ ದ್ವಾರದ ಒಳಭಾಗದಲ್ಲಿ ಎಡ ಬಲ ಭಾಗದಲ್ಲಿ ಎತ್ತರವಾದ ಜಗತಿಯಿದ್ದು ಜಗತಿಯ ಮೇಲಿನ ಎರಡು ಪೂರ್ಣ ಕಂಬಗಳು ಮತ್ತು 10 ಅರ್ಧ ಕಂಬಗಳು ದ್ವಾರ ಮಂಟಪದ ಮೇಲ್ಛಾವಣಿ ಮತ್ತು ಅದರ ಮೇಲಿನ ಗೋಪುರವನ್ನು ಹೊತ್ತು ನಿಂತಿವೆ. ಈ ಕಂಬಗಳಲ್ಲಿ ಆನೆ, ಹಾವು, ಮುಂಗಸಿ, ಶಿವಲಿಂಗುವಿಗೆ ಹಾಲೆರೆಯುತ್ತಿರುವ ಮೂರು ಮುಖದ ಹಸು ಆಕರ್ಷಣೀಯವಾಗಿವೆ. ನಂದಿಯ ಮೇಲೆ ಶಿವಲಿಂಗ, ಸ್ತ್ರೀ ಶಿಲ್ಪಗಳು, ಆನೆಯೊಂದು ಗಿಡವನ್ನು ಕೀಳುತ್ತಿರುವ ಶಿಲ್ಪಗಳಿವೆ.
ಉಪಸಂಹಾರ:
ವಿಜಯನಗರ ಸಾಮ್ರಾಜ್ಯದ ಪತನಾನಂತರ ಸ್ವತಂತ್ರ ಮನೆತಗಳಾಗಿ ಬೆಳೆದ ಪಾಳೆಯಗಾರರು ಶಿಷ್ಟ ಸಂಪ್ರದಾಯವನ್ನು ಬಿಡದೆ ತಮ್ಮ ಸಾರ್ವಭೌಮತ್ವದ ದೇವಾಲಯ ವಾಸ್ತುಶಿಲ್ಪವನ್ನು ತಮ್ಮ ಪರಂಪರೆಯಲ್ಲಿ ಮುಂದುವರೆಸಿದರು. ಉತ್ತಮ ಸಾಂಸ್ಕೃತಿಕ ನೆಲೆಗಟ್ಟನ್ನು ಪಡೆದ ಪಾಳೆಯಗಾರರು ಪರಂಪರೆಯಿಂದ ಬೆಳೆದು ಬಂದಿದ್ದ ವಾಸ್ತುಶಿಲ್ಪದ ಪ್ರಕಾರಗಳನ್ನು ಆರ್ಥಿಕ ಇತಿಮಿತಿಯೊಳಗೆ ಬೆಳೆಸಿ ಪೋಷಿಸಿದ್ದಾರೆ. ದೇವಾಲಯಗಳು ಗ್ರಾಮೀಣರ ಬದುಕಿನ ಸಾಂಸ್ಕೃತಿಕ ಜೀವಾಳವಾಗಿದ್ದು ಜನಸಾಮಾನ್ಯರ ತಪ್ಪುಗಳನ್ನು ತಿದ್ದುವ ಅಗಮ್ಯ ಶಕ್ತಿಗಳಾಗಿರಬೇಕೆಂಬ ಉದ್ದೇಶದಿಂದ ವಿವಿಧ ಪಾಳೆಯಗಾರರು ತುಮಕೂರು ಜಿಲ್ಲೆಯಲ್ಲಿ ಅನೇಕ ಶೈವ ದೇವಾಲಯಗಳನ್ನು ನಿರ್ಮಿಸಿರುವುದು ಗಮನಾರ್ಹವಾಗಿದೆ.
ಅಡಿ ಟಿಪ್ಪಣಿಗಳು:
ಆಕರ ಗ್ರಂಥಗಳು: