Tumbe Group of International Journals

Full Text


ಪಿಂಜಾರ ಸಮುದಾಯದ ಧಾರ್ಮಿಕ ಆಚರಣೆಗಳು

ಸೈಯದ್ ಬಿ.

ಪಿಎಚ್.ಡಿ ಸಂಶೋಧಕರು

ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ.

ವಿದ್ಯಾರಣ್ಯ – 583276

ಮೊ : 9880051998 & Gmail : syducta@gmail.com

ಪೀಠಿಕೆ.

ಭಾರತೀಯ ಸಮಾಜ ಅನೇಕ ಧರ್ಮಗಳ ತವರು. ಇಲ್ಲಿ ಬೌದ್ದ, ಜೈನ, ಲಿಂಗಾಯತ, ಸಿಖ್, ಹಿಂದೂ, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಮುಂತಾದ ಅನೇಕ ಧರ್ಮಗಳಿವೆ. ಇಷ್ಟೊಂದು ಧರ್ಮಗಳಲ್ಲಿ ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳನ್ನು ಬಿಟ್ಟರೆ ಉಳಿದೆಲ್ಲ ಧರ್ಮಗಳ ಮೂಲ ಭಾರತ. ಈ ಎಲ್ಲಾ ಧರ್ಮಗಳು ತಮ್ಮದೇ ಆದ ತತ್ವ, ಸಿದ್ಧಾಂತ, ಆಚರಣೆ, ವಿಧಿವಿಧಾನಗಳನ್ನು ಹೊಂದಿದ್ದು, ಅವು ಇತರೆ ಧರ್ಮಗಳಿಗಿಂತ ಭಿನ್ನವಾಗಿವೆ. ಅದರಲ್ಲೂ ಹೊರಗಿನಿಂದ ಬಂದಿರುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ತತ್ವ, ಸಿದ್ಧಾಂತ ಹಾಗೂ ಆಚರಣೆ, ವಿಧಿವಿಧಾನಗಳು ಭಾರತದ ಇತರೆ ಧರ್ಮಗಳಿಗಿಂತ ಇನ್ನೂ ಭಿನ್ನವಾಗಿ ಕಾಣುವುದು ಸಹಜ. ಆದರೆ ಅವು ಭಾರತೀಯ ಸಮಾಜದಲ್ಲಿ ಪಸರಿಸಿದಾಗ ಇಲ್ಲಿನ ಸ್ಥಳೀಯ ಧರ್ಮ, ಸಮುದಾಯಗಳ ತತ್ವ, ಸಿದ್ಧಾಂತ ಹಾಗೂ ಆಚರಣೆ, ವಿಧಿ ವಿಧಾನಗಳ ಪ್ರಭಾವ ಅವುಗಳ ಮೇಲೆ ಬೀರಿದವು. ಈ ರೀತಿಯ ಪ್ರಭಾವಕ್ಕೆ ಒಳಪಟ್ಟು ಸೃಷ್ಟಿಯಾದ ಧರ್ಮ, ಸಮುದಾಯಗಳ ಜನರು ಎರಡು ಧರ್ಮಗಳ ತತ್ವ, ಸಿದ್ದಾಂತಗಳನ್ನು ರೂಢಿಸಿಕೊಂಡರು. ಹೀಗೆ ರೂಢಿಸಿಕೊಂಡು ಬಂದ ಕೆಲವು ಸಮುದಾಯಗಳು ಕಾಲಾಂತರದಲ್ಲಿ ತಾನು ಮತಾಂತರಗೊಂಡ ಧರ್ಮದ ಪ್ರಭಾವಕ್ಕೆ ಒಳಗಾಗಿ ತನ್ನ ಮೂಲ ಸಂಸ್ಕøತಿಯ ಅಸ್ಮಿತೆಯನ್ನು ಮರೆತವು. ಆದರೆ ಇನ್ನೂ ಕೆಲವು ಸಮುದಾಯಗಳು ಮಾತ್ರ ಎರಡೂ ಸಂಸ್ಕøತಿಯನ್ನು ರೂಢಿಸಿಕೊಂಡು ಬಂದವು. ಹೀಗೆ ಬಂದಿರುವ ಸಮುದಾಯಗಳಲ್ಲಿ ಪಿಂಜಾರ ಸಮುದಾಯ ಕೂಡ ಒಂದು. ಈ ಸಮುದಾಯ ಇಸ್ಲಾಂನ ಉಪಜಾತಿಯಾಗಿದೆ. ಭಾರತಕ್ಕೆ ಮುಸ್ಲಿಂ ಸಾಮ್ರಾಟರ ಪ್ರವೇಶದಿಂದ ಇಸ್ಲಾಂ ಧರ್ಮದ ಬೆಳವಣಿಗೆ ಆರಂಭವಾಯಿತು. ಇಲ್ಲಿನ ಅನೇಕ ಸಮುದಾಯಗಳ ಜನರು ಇಸ್ಲಾಂನ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಮತಾಂತರವಾದ ಜನರು ಭಿನ್ನ ಭಾಷೆ, ಸಂಸ್ಕøತಿ, ಪ್ರದೇಶ, ಸ್ಥಳೀಯ ಧರ್ಮಗಳ ಪ್ರಭಾವ ಹಾಗೂ ಇಲ್ಲಿನ ಸಾಮಾಜಿಕ ವ್ಯವಸ್ಥೆ ಮುಂತಾದ ಕಾರಣಗಳಿಂದಾಗಿ ಇಸ್ಲಾಂ ಧರ್ಮದಲ್ಲಿ ಅನೇಕ ಉಪಜಾತಿಗಳು ಕವಲೊಡೆದವು. ಇಸ್ಲಾಂ ಧರ್ಮದಲ್ಲಿ ಇಂದು ಗುರುತಿಸುವಂತೆ ಶಿಯಾ, ಸುನ್ನಿ, ಶೇಕ್, ಪಠಾಣ್, ಸೈಯದ್, ನದಾಫ್, ಪಿಂಜಾರ, ಕಸಾಬ, ನಾಲ್ಬಂದ್, ಚಪ್ಪರ್‍ಬಂದ್, ದರ್ವೇಸು, ಪೂಲಮಾಲಿ, ಕಸಾಯಿ, ಅಟಾರಿ, ಶಿಕ್ಕಾಲಿಗಾರ, ಶಿಕಾಲ್ಲಗರ್, ಸಿಕ್ಕಾಲಿಗರ್, ಸಾಲಬಂದ, ಟಿಕನಕರ, ಬಾಜಿಗರ, ಜೊಹರಿ, ಪಿಂಜಾರಿ, ಲದಾಫ್, ಬ್ಯಾರಿ ಇನ್ನೂ ಮುಂತಾದ ಅನೇಕ ಉಪಜಾತಿಗಳನ್ನು ಗುರುತಿಸಲಾಗಿದೆ.

ಕರ್ನಾಟಕದಲ್ಲಿ ಮೇಲಿನ ಅನೇಕ ಸಮುದಾಯಗಳು ಕಾಣಸಿಗುತ್ತವೆ. ಅವುಗಳಲ್ಲಿ ಪಿಂಜಾರ ಸಮುದಾಯವು ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.(ಈ ಸಮುದಾಯ ಹೆಚ್ಚು ಉತ್ತರ ಕರ್ನಾಟಕದಲ್ಲಿದೆ). ಪಿಂಜಾರ ಸಮುದಾಯವನ್ನು ‘ಪಿಂಜಾರ’, ‘ಪಿಂಜಾರಿ’, ‘ನದಾಫ್’ ಹಾಗೂ ‘ಲದಾಫ್’ ಎಂದು ಗುರುತಿಸುವುದುಂಟು. ಪಿಂಜಾರ ಸಮುದಾಯ ಹೊಂದಿರುವಂತಹ ಧಾರ್ಮಿಕ ಸೌಹಾರ್ದ ಮನಸ್ಥಿತಿ ಸಮಾಜಕ್ಕೆ ಮುಖ್ಯವಾಗುತ್ತದೆ. ಈ ಸಮುದಾಯದ ಆಚರಣೆಗಳು ಇಸ್ಲಾಂ ಧರ್ಮ ಹಾಗೂ ಇವರು ವಾಸಿಸುತ್ತಿರುವ ಸ್ಥಳೀಯ ಧರ್ಮಗಳ ಆಚರಣೆಗಳೆರಡನ್ನು ಹೋಲುವುದು ವಿಶೇಷ. ಇವರು ತಮ್ಮ ಧರ್ಮದ ದೇವರದ `ಅಲ್ಹಾ’(ಅಲ್ಲಾಹ್)ನನ್ನು ನಂಬುವಂತೆ ಆರಾಧಿಸುವಂತೆ, ಸ್ಥಳೀಯ ಧರ್ಮವಾದ ಹಿಂದೂ ದೇವರುಗಳನ್ನು ಸಹ ನಂಬುತ್ತಾರೆ, ಆರಾಧಿಸುತ್ತಾರೆ. ಹಾಗೇ ಅನೇಕ ದೇವಸ್ಥಾನಗಳಿಗೆ ಹೋಗುತ್ತಾರೆ, ಹರಕೆಗಳನ್ನು ಸಹ ಕಟ್ಟಿಕೊಳ್ಳುತ್ತಾರೆ. ಹಿಂದೂ ಹಬ್ಬವೆಂಬ ಭೇದಭಾವವಿಲ್ಲದೆ ‘ದೀಪಾವಳಿ’, ‘ಯುಗಾದಿ’ ಹಾಗೂ ಸ್ಥಳೀಯ ಜಾತ್ರೆಗಳನ್ನು ಊರಿನ ಇತರೆ ಧರ್ಮದ ಜನರೊಂದಿಗೆ ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದ್ದರಿಂದಾಗಿ ಇವರು ಮುಸ್ಲಿಮರೂ ಅಲ್ಲ, ಹಿಂದುಗಳೂ ಅಲ್ಲ ಎಂಬ ನಿಂದನೆಗೆ ಒಳಗಾಗಿದ್ದಾರೆ. ಬಾಲ್ಯದಲ್ಲಿ ನಾನು ಕಂಡಂತೆ ನಮ್ಮೂರಿನ ಪಿಂಜಾರ ಸಮುದಾಯದ ಹಿರಿಯ ತಲೆಮಾರಿನ ಪೀಳಿಗೆಯವರು ಇಸ್ಲಾಂ ಧರ್ಮದ ಆರಾಧ್ಯದೇವನಾದ ‘ಅಲ್ಹಾ’ನನ್ನು ‘ಅಲ್ಹಾಸ್ವಾಮಿ’ಯೆಂದು ಕರೆಯುತ್ತಿದ್ದರು. ಅದರೆ ಇಂದು ಇಸ್ಲಾಂ ಮೂಲಭೂತವಾದದ ಪ್ರಭಾವದಿಂದ ಅದು ಕಣ್ಮರೆಯಾಗಿದೆ. ಆದರೆ ಇಂದಿಗೂ ಸ್ಥಳೀಯ ಇತರೆ ಧರ್ಮದ ಜನರು ‘ಅಲ್ಹಾಸ್ವಾಮಿ’ ಎಂಬ ಉದ್ಗಾರವನ್ನು ಎಳೆಯುವುದನ್ನು ಕಾಣುತ್ತಿರುತ್ತೇನೆ. ಇದಕ್ಕೆ ಕಾರಣ ಹಳ್ಳಿಗಳಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ‘ಮೊಹರಂ ಹಬ್ಬ’ ಹಾಗೂ ಸೂಫಿ ಸಂತರ ಹೆಸರುಗಳಲ್ಲಿ ನಡೆಯುವ ‘ಉರುಸ್’ಗಳು. ಭಾವೈಕ್ಯತೆಗೆ ಪ್ರತೀಕವಾಗಿರುವ ‘ಮೊಹರಂ ಹಬ್ಬ’ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂ ಎಂಬ ಬೇಧವಿಲ್ಲದೇ ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ‘ಹಲೆದಹಬ್ಬ’, ‘ಪೀರ್ಲಾಬ್ಬ’ ಎಂದು ಕರೆಯುವ ವಾಡಿಕೆಯಿದೆ. ‘ಉರುಸ್’ ಎಂದರೆ ‘ಉತ್ಸವ’. ಇದು ಇಸ್ಲಾಂ ಧರ್ಮದಲ್ಲಿ ಆಚರಣೆಯಲ್ಲಿ ಇಲ್ಲದಿದ್ದರು, ಇಲ್ಲಿನ ಸ್ಥಳೀಯ ಧರ್ಮಗಳ ಆಚರಣೆಗಳ ಪ್ರಭಾವದಿಂದ ಆಚರಿಸಲಾಗುತ್ತಿದೆ. ಒಬ್ಬ ಸೂಫಿ ಸಂತನÀ ಹೆಸರಿನಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಹಿಂದೂ-ಮುಸ್ಲಿಂ ಎಲ್ಲರೂ ಸೇರಿ ಉರುಸ್ ಮಾಡುತ್ತಾರೆ. ಅನೇಕರು ಹರಕೆಗಳನ್ನು ಸಹ ಕಟ್ಟಿಕೊಳ್ಳುತ್ತಾರೆ. ಇಂದಿಗೂ ದರ್ಗಾಗಳಲ್ಲಿ ಮಕ್ಕಳಿಗೆ ಯಂತ್ರಗಳನ್ನು ಹಾಕುವ ಪರಿಪಾಠವಿದೆ. ಇಲ್ಲಿ ಯಾವುದೇ ಧರ್ಮವೆಂಬ ತಾರತಮ್ಯತೆ ಇಲ್ಲದೆ ಮುಕ್ತ ಆಚರಣೆಗೆ ಪ್ರವೇಶವಿದೆ. ಅದರಲ್ಲೂ ಪಿಂಜಾರ ಸಮುದಾಯಗಳಿರುವ ಪ್ರದೇಶಗಳಲ್ಲಿ ಇವು ಇಂದಿಗೂ ಚಾಲ್ತಿಯಲ್ಲಿವೆ. ಈ ರೀತಿಯ ಮುಕ್ತ ವಾತಾವರಣ ಇರುವುದರಿಂದ ಇಂದಿಗೂ ನಮ್ಮ ಹಳ್ಳಿಗಳಲ್ಲಿ ಧರ್ಮದ ಕಟ್ಟುಪಾಡುಗಳನ್ನು ಮೀರಿ ಎಲ್ಲರೂ ‘ಅಲ್ಹಾಸ್ವಾಮಿ’ ಎಂದು ಕರೆಯುತ್ತಾರೆ. ‘ಅಲ್ಹಾ’ ಮತ್ತು ‘ಸ್ವಾಮಿ’ ಎಂದು ಕರೆಯುವುದರಲ್ಲಿ ಎರಡು ಧಾರ್ಮಿಕ ಸಂವೇದನೆಗಳ ಮೂಲವನ್ನು ಒಂದರಲ್ಲೇ ಕಾಣುವ ಭಾವೈಕ್ಯತೆಯ ದೃಷ್ಟಿಕೋನವಿದೆ.

ಪಿಂಜಾರ’ ಎಂಬ ಹೆಸರು ಈ ಸಮುದಾಯಕ್ಕೆ ಬರಲು ಕಾರಣ ಆ ಜನರು ಅವಲಂಬಿಸಿರುವ ವೃತ್ತಿ. ಅಂದರೆ ಪಿಂಜಾರರ ಮುಖ್ಯ ವೃತ್ತಿ ಹತ್ತಿಯನ್ನು ಹಿಂಜಿ ಮೃದು ಮಾಡಿ ಸ್ವಚ್ಛಗೊಳಿಸಿ ಹಾಸಿಗೆ, ದಿಂಬುಗಳನ್ನು ಮಾಡುವುದು. ಹಾಸಿಗೆ ತಯಾರು ಮಾಡುವಾಗ ಹತ್ತಿಯನ್ನು ಹಿಂಜುತ್ತ ಮೃದು ಮಾಡುತ್ತಾರೆ. ಹೀಗೆ ಹತ್ತಿಯನ್ನು ಹಿಂಜುವುರಿಂದ ಅದು ‘ಪಿಂಜು’ ಅಥವಾ ‘ಹಿಂಜು’ ಎಂದು ಕರೆಯಲ್ಪಟ್ಟು ನಂತರ ಅದು ‘ಪಿಂಜಾರ’ ಎಂದಾಗಿದೆ. ಮುಂದುವರೆದು ವೃತ್ತಿಯನ್ನು ಮಾಡುವ ಸಮುದಾಯವಾಗಿ ಕರೆಯಲ್ಪಟ್ಟಿದೆ. ಅದೇ ಕಾಲಾಂತರದಲ್ಲಿ ‘ಪಿಂಜಾರ’ರೆಂದು ಹಾಸಿಗೆ ವೃತ್ತಿ ಮಾಡುತ್ತಿದ್ದ ಈ ಸಮುದಾಯವನ್ನು ವೃತಿ ಆಧಾರದ ಮೇಲೆ ಈ ಹೆಸರಿನಿಂದ ಕರೆಯಲ್ಪಟ್ಟಿರಬೇಕು. ಆದ್ದರಿಂದ ಪಿಂಜಾರವೆಂಬ ಪದದ ನಿಷ್ಪತ್ತಿ ‘ಪಿಂಜು’ ಅಥವಾ ‘ಹಿಂಜು’ ಎಂಬ ಪದದಿಂದ ಬಂದಿದೆ. ಪಿಂಜಾರ ಸಮುದಾಯದ ಮೂಲ ಕಸುಬು ‘ಹಾಸಿಗೆ’, ‘ದಿಂಬು’ ಮಾಡುವುದರಿಂದ ಇವರು ಕೆಲಸವನ್ನು ಹುಡುಕುತ್ತಾ ಊರೂರು ಸುತ್ತುತ್ತ ಕರ್ನಾಟಕವನ್ನು ಒಳಗೊಂಡಂತೆ ಭಾರತದಾದ್ಯಂತ ವಲಸೆ ಹೋಗಿದ್ದಾರೆ. ಕೆಲವರು ತಮ್ಮ ಮೂಲ ನೆಲೆಯಲ್ಲಿಯೆ ಉಳಿದು ಕೊಂಡು ಬಂದಿದ್ದಾರೆ.

ಹೀಗೆ ನೂರಾರು ವರ್ಷಗಳಿಂದ ವಾಸಿಸುತ್ತ ಬಂದಿರುವ ಪಿಂಜಾರರು ಹಿಂದೆಯೇ ಹೇಳಿದಂತೆ ಇಸ್ಲಾಂನ ಆಚರಣೆಗಳ ಜೊತೆಜೊತೆಗೆ ತನ್ನ ಪ್ರದೇಶದ ಬೇರೆ ಧರ್ಮದ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಒಳಗಾಗಿ ಎರಡು ಧರ್ಮದ ಆಚರಣೆಗಳನ್ನು ಮಾಡುತ್ತ ಬಂದಿದ್ದಾರೆ. ಆದರೆ ಇವರ ಆಚರಣೆಗಳು ಪ್ರದೇಶಾವಾರು ಭಿನ್ನವಾಗಿವೆ. ಉತ್ತರ ಕರ್ನಾಟಕದ ಪಿಂಜಾರರ ಧಾರ್ಮಿಕ ಆಚರಣೆಗಳಿಗೂ ಮೈಸೂರು ಕರ್ನಾಟಕದ(ಮುಖ್ಯವಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ) ಪಿಂಜಾರರ ಧಾರ್ಮಿಕ ಆಚರಣೆಗಳಿಗೂ ತುಂಬಾ ವ್ಯತ್ಯಾಸಗಳು ಕಂಡುಬರುತ್ತದೆ. ಉತ್ತರ ಕರ್ನಾಟಕದ ಪಿಂಜಾರರಲ್ಲಿ ಇಸ್ಲಾಂ ಮುಲಭೂತವಾದ ಕಡಿಮೆ ಇದೆ. ಆದರೆ ಮೈಸೂರು ಕರ್ನಾಟಕ ಪಿಂಜಾರರ ಮೇಲೆ ಇಸ್ಲಾಂ ಮೂಲಭೂತವಾದದ ಪ್ರಭಾವ ಹೆಚ್ಚಿದೆ. ಕರ್ನಾಟಕದಲ್ಲಿ ಪಿಂಜಾರರ ಮಾತೃಭಾಷೆ ಕನ್ನಡವೇ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಉರ್ದು ಭಾಷೆಯನ್ನು ಧಾರ್ಮಿಕ ಪ್ರಭಾವ ಹಾಗೂ ಸಾಂಸ್ಕøತಿಕ ಒತ್ತಡಗಳಿಂದ ಕಲಿಯುತ್ತಿದ್ದಾರೆ.

ಇಸ್ಲಾಂ ಧರ್ಮದಲ್ಲಿ ಪಿಂಜಾರ ಸಮುದಾಯದ ಸ್ಥಾನಮಾನಗಳು ‘ದಲಿತ’ರಂತೆಯಿದೆ. ಇವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ತುಂಬ ಹಿಂದುಳಿದಿದ್ದಾರೆ. ಇವರಿಗೆ ಇಸ್ಲಾಂನ ಮೇಲು ವರ್ಗಗಳ ಧಾರ್ಮಿಕ ನಿರ್ಬಂಧಗಳಿರುವುದು ಸತ್ಯ. ಆದರೆ ಅಸ್ಪøಶ್ಯತೆ ಆಚರಣೆ ಇಲ್ಲ. ಶೇಕ್, ಪಠಾಣ್, ಸೈಯದ್ ಅಂತಹ ಇತರೆ ಉನ್ನತ ಜಾತಿಯ ಮುಸ್ಲಿಂ ಸಮುದಾಯಗಳು ಪಿಂಜಾರ ಸಮುದಾಯದೊಂದಿಗೆ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಪಿಂಜಾರರು ಹಿಂದೂ, ಮುಸ್ಲಿಂ ಸೇರಿ ಮಾಡುವ ‘ಮೊಹರಂ ಹಬ್ಬ’À, ‘ಉರುಸ್’ ರೀತಿಯ ಆಚರಣೆಗಳನ್ನು ಇತರೆ ಮುಸ್ಲಿಂ ಸಮುದಾಯಗಳಲ್ಲಿ ಕಾಣುವುದಿಲ್ಲ. ಆದರೆ ಕೆಲವು ಮೂಲಭೂತವಾದಿಗಳು ಇವರ ಹಬ್ಬವನ್ನು, ಆಚರಣೆಯನ್ನು ವಿರೋಧಿಸುವುದು ಉಂಟು. ಧರ್ಮಗಳನ್ನು ಮೀರಿ ಬಾಂಧವ್ಯದ ಸೇತುವೆಯಾಗಿ ಕಾಣುವ ಪಿಂಜಾರ ಸಮುದಾಯ ತನ್ನದೇ ಆದಂತಹ ಸಂಸ್ಕøತಿಯನ್ನು, ಜೀವನ ವಿಧಾನವನ್ನು, ಸಾಮಾಜಿಕ ವ್ಯವಸ್ಥೆಯನ್ನು, ಧಾರ್ಮಿಕ ಅಚರಣೆಗಳನ್ನು, ಸಾಹಿತ್ಯವನ್ನು ಹಾಗೂ ಮನೋರಂಜನಾ ಚಟುವಟಿಕೆಗಳನ್ನು ಹೊಂದಿದೆ. ಪಿಂಜಾರ ಸಮುದಾಯಗಳ ಧಾರ್ಮಿಕ ಆಚರಣೆಗಳಲ್ಲಿ ಎರಡು ಧರ್ಮಗಳ ಮಿಶ್ರಣವಿರುತ್ತದೆ. ಇದನ್ನು ‘ಸಂಕರ’ ಸಂಸ್ಕøತಿ ಎನ್ನಬಹುದು. ಪಿಂಜಾರರಲ್ಲಿ ಇತರೆ ಹಿಂದೂ ಕುಟುಂಬಗಳ ರೀತಿ ‘ಮನೆ ದೇವರು’ ಎಂಬ ಪರಿಕಲ್ಪನೆಯಿದೆ. ಈ ದೇವರ ಆರಾಧನೆಯು ಅವರ ವಂಶದ ಮೂಲವನ್ನು ಪ್ರತಿನಿಧಿಸುತ್ತದೆ. ಇವರ ಧಾರ್ಮಿಕ ಆಚರಣೆಗಳು ತಾಯಿಯ ಗರ್ಭದಲ್ಲಿ ಭ್ರೂಣವಾಗಿದ್ದಾಗಿನಿಂದ ಆರಂಭಗೊಂಡು, ಆ ಭ್ರೂಣ ಶಿಶುವಾಗಿ ಹುಟ್ಟಿ. ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆದು, ತನ್ನ ಜೀವನವನ್ನು ಸವೆಸಿ, ಕೊನೆಗೆ ಮೃತಪಟ್ಟ ನಂತರವು ಧಾರ್ಮಿಕ ಆಚರಣೆಗಳು ನಡೆಯುತ್ತಲೇ ಇರುತ್ತದೆ.(ಇಂತಹ ಆಚರಣೆಗಳು ಇಸ್ಲಾಂ, ಹಿಂದೂ ಧರ್ಮಗಳನ್ನು ಒಳಗೊಂಡಂತೆ ಪ್ರಪಂಚದ ಇತರೆ ಎಲ್ಲಾ ಧರ್ಮಗಳಲ್ಲಿಯೂ ಹುಟ್ಟಿನಿಂದ ಸಾಯುವವರೆಗೂ-ಸತ್ತರೂ ಕೂಡ ಮನುಷ್ಯನ ಮೇಲೆ ಅಣೇಕ ಧಾರ್ಮಿಕ ಆಚರಣೆಗಳು ನಡೆಯುವುದನ್ನು ಕಾಣಬಹುದು). ಹೀಗೆ ನಡೆಯುವ ಪಿಂಜಾರ ಸಮುದಾಯದ ಧಾರ್ಮಿಕ ಆಚರಣೆಗಳನ್ನು ಕುರಿತು ಸಂಕ್ಷಿಪ್ತವಾಗಿ ತಿಳಿಸುವುದು ಲೇಖನದ ಪ್ರಮುಖ ಉದ್ದೇಶವಾಗಿದೆ.

ಪಿಂಜಾರ ಸಮುದಾಯದ ಧಾರ್ಮಿಕ ಆಚರಣೆಗಳು:

ಸತ್ವಾಸ (ಸೀಮಂತ)

ಶಿಶು ಜನನ ಪೂರ್ವದಲ್ಲಿ ಅಂದರೆ ಗರ್ಭದಲ್ಲಿ ಭ್ರೂಣವಾಗಿದ್ದಾಗಿನಿಂದ ಧರ್ಮಕ್ಕೆ ಹಾಗೂ ಧರ್ಮದ ಆಚರಣೆಗಳಿಗೆ ಯಾವ ರೀತಿ ಒಳಪಡುತ್ತದೆ ಎಂಬುದಕ್ಕೆ ಇದು ನಿದರ್ಶನ. ಸೀಮಂತ ಶಾಸ್ತ್ರಕ್ಕೆ ಭಾರತೀಯ ಸಂಸ್ಕøತಿಯಲ್ಲಿ ವಿಶೇಷವಾದ ಪ್ರಾಮುಖ್ಯತೆಯಿದೆ. ಅದೇ ರೀತಿ ಪಿಂಜಾರರಲ್ಲಿಯೂ ಸಹ. ಈ ಆಚರಣೆಯನ್ನು ಇಸ್ಲಾಂ ನಲ್ಲಿ ‘ಸತ್‍ವಾಸ’ ಎಂದು ಕರೆದರೆ, ಪಿಂಜಾರರು ಇದನ್ನು ‘ತೌಲತ್’(ಚಿತ್ರದುರ್ಗ ಜಿಲ್ಲೆಯಲ್ಲಿ) ಎಂದು ಕರೆಯುತ್ತಾರೆ. ಸತ್‍ವಾಸ ಎಂದರೆ ಸೀಮಂತ ಎಂದರ್ಥ. ಸೀಮಂತ ಎಂಬುದು ಹೆಣ್ಣಿನ ವ್ಯಕ್ತಿತ್ವಕ್ಕೊಂದು ಹೊಸ ಶೋಭೆ ಮತ್ತು ಸಾಮಾಜಿಕ ಮನ್ನಣೆ ನೀಡುವ ಆಚರಣೆಯಾಗಿದೆ. ಹೆಣ್ಣನ್ನು ಮೊದಲ ಬಾಣಂತನಕ್ಕೆ ತವರಿಗೆ ಕರೆತರುವ ಸಂಪ್ರದಾಯ ಎಲ್ಲಾ ಧರ್ಮೀಯರಲ್ಲೂ ಇದೆ. ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಪಿಂಜಾರರು ಗರ್ಭಿಣಿಯನ್ನು ಗಂಡನ ಮನೆಯಿಂದ ಏಳನೇ ತಿಂಗಳಿಗೆ ಕರೆದುಕೊಂಡು ಬರುತ್ತಾರೆ. ನಂತರ ಅದ್ಧೂರಿಯಾಗಿ ಅಡುಗೆ ಮಾಡಿಸಿ ಸಂಬಂಧಿಕರನ್ನು ಸೀಮಂತ ಕಾರ್ಯಕ್ಕೆ ಆಹ್ವಾನಿಸಿ ಆಚರಣೆ ಮಾಡುತ್ತಾರೆ. ಅಥವಾ ತವರಿನವರು ಅಳಿಯನ ಮನೆಯಲ್ಲಿಯೇ ಅಡುಗೆ ಮಾಡಿಸಿ ಮಗಳಿಗೆ ಸೀಮಂತ ಕಾರ್ಯದ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಗರ್ಭಿಣಿಗೆ ಹಸಿರು ಸೀರೆ ಉಡಿಸಿ, ಹಸಿರು ಬಳೆಯನ್ನು ತೊಡಿಸಿ ಅವಳನ್ನು ಶಾಸ್ತ್ರಕ್ಕೆ ಕೂಡಿಸುತ್ತಾರೆ. ಶಾಸ್ತ್ರಕ್ಕೆ ಬಂದಿರುವÀ ಎಲ್ಲರೂ ಗರ್ಭಿಣಿಯ ಕೆನ್ನೆಗೆ ಹಾಗೂ ಕೈಗೆ ಅರಿಶಿಣವನ್ನು ಹಚ್ಚಿ, ಅವಳ ಕೈಗೆ ಹಣವನ್ನು ಅಥವಾ ಬಟ್ಟೆಯನ್ನು ಕಾಣಿಕೆಯಾಗಿ ಕೊಡುವ ವಾಡಿಕೆಯಿದೆ. ಶಾಸ್ತ್ರ ಮುಗಿದ ಮೇಲೆ ಗರ್ಭಿಣಿಗೆ ದೃಷ್ಟಿಯಾಗಬಾರದೆಂದು ನಿವಾಳಿಸಿ ತೆಗೆಯುತ್ತಾರೆ.

ನಾಮ್ರಕ್ನ ರಸಂ (ನಾಮಕರಣ ಶಾಸ್ತ್ರ)

ಶಿಶುವಿನ ಜನನದ ನಂತರ ಶಿಶುವನ್ನು ಸಮಾಜದಲ್ಲಿ ಗುರುತಿಸುವುದಕ್ಕೆ ಒಂದು ಗುರುತು(ಐಡೆಂಟಿ) ಅಥವಾ ನಾಮಾಂಕಿತ ಬೇಕು. ಆದ್ದರಿಂದ ನಾಮಕರಣ ಎಂಬುದು ಎಲ್ಲಾ ಧರ್ಮಗಳಲ್ಲಿಯೂ ಇದೆ. ಆದರೆ ಅದರ ಆಚರಣೆಯ ಸ್ವರೂಪ ಮಾತ್ರ ಭಿನ್ನವಾಗಿದೆಯಷ್ಟೆ. ನಾಮಕರಣ ಶಾಸ್ತ್ರವನ್ನು ಪಿಂಜಾರರು ಇಸ್ಲಾಂನ ಇತರೆ ಸಮುದಾಯಗಳಿಗಿಂತ ಸಲ್ಪ ಭಿನ್ನವಾಗಿ ಮಾಡುತ್ತಾರೆ. ಇದಕ್ಕೆ ಇಸ್ಲಾಂನಲ್ಲಿ ‘ನಾಮ್‍ರಕ್ನ ರಸಂ’ ಎಂದು ಹೆಸರು. ಇಸ್ಲಾಂನಲ್ಲಿ ನಾಮಕರಣ ಶಾಸ್ತ್ರವನ್ನು ಮಗು ಹುಟ್ಟಿದ ದಿನವೇ ಮಾಡಲಾಗುತ್ತದೆ. ಅದು ಇತ್ತೀಚೆಗೆ ಪಿಂಜಾರರಲ್ಲೂ ಚಾಲ್ತಿಗೆ ಬಂದಿದೆ. ಮಗು ಹುಟ್ಟಿದ ದಿನ ಮಗುವಿಗೆ ಸ್ನಾನ ಮಾಡಿಸಿ ಮುಲ್ಲಾ ಅಥವಾ ಹಜರಾತ್‍ರನ್ನು ಕರೆಸುತ್ತಾರೆ. ಅವನು ಅಜ್ಹಾ ಕೂಗಿ ನಂತರ ಮಗುವಿನ ಕಿವಿಯಲ್ಲಿ ಕಲ್ಮಾವನ್ನು ಹೇಳಿ ಮಗುವಿನ ಮುಖವನ್ನು ಕಾಬಾ ದಿಕ್ಕಿಗೆ ಮಾಡುತ್ತಾನೆ. ಕಾಬಾ ದಿಕ್ಕಿಗೆ ಇರುವ ಮಗುವಿನ ಕಿವಿಯಲ್ಲಿ ಹಿರಿಯರು ಗುರುತಿಸಿದಂತೆ. ಅಥವಾ ಮಗು ಹುಟ್ಟಿದ ಸಮಯದ ಆಧಾರದ ಮೇಲೆ ಜಾತಕದಲ್ಲಿನ ಮಗುವಿನ ಬಾಲತ್ಕಾರದ ಪ್ರಕಾರ ಹೆಸರನ್ನು ಗುರುತಿಸಿ ಮಗುವಿನ ಬಲಕಿವಿಯಲ್ಲಿ ಹೇಳುತ್ತಾನೆ. ನಂತರ ಜೇನುತುಪ್ಪ ಅಥವಾ ಉತ್ತುತ್ತಿಯನ್ನು ಕಲ್ಲಿಗೆ ಉಜ್ಜಿ ಮಗುವಿನ ನಾಲಿಗೆಗೆ ಒರೆಸುತ್ತಾನೆ. ಮಗುವಿಗೆ ಹೆಸರಿಡುವವರೆಗೂ ಮಗುವನ್ನು ಉಪವಾಸವಿಟ್ಟಿರುತ್ತಾರೆ. ಆದರೆ ಚಿತ್ರದುರ್ಗ ಜಿಲ್ಲೆಯ ಕೆಲವು ಪಿಂಜಾರರಲ್ಲಿ ಕೆಲವರು ಛಿಲ್ಲಾನೀರು ಶಾಸ್ತ್ರ ಮಾಡುವಾಗ ಮಗುವಿನ ಸೋದರತ್ತೆಯ ಮೂಲಕ ಹೆಸರಿಡುವ ಪರಿಪಾಠವಿದೆ.

ಛಟ್ಟಿ ರಸಂ

 ‘ಛಟ್ಟಿ ರಸಂ’ ಆಚರಣೆಯನ್ನು ‘ನಾಮ್‍ರಕ್ನ ರಸಂ’ ಮುಗಿದ ನಂತರ ಮಾಡಲಾಗುತ್ತದೆ. ಈ ಆಚರಣೆಯನ್ನು ಪಿಂಜಾರರು ಒಳಗೊಂಡಂತೆ ಇತರೆ ಮುಸ್ಲಿಂ ಸಮುದಾಯಗಳು ಐದು, ಒಂಭತ್ತು ಅಥವಾ ಹನ್ನೊಂದನೆಯ ದಿನ ಮಾಡುತ್ತಾರೆ. ಮೊದಲು ಬಾಣಂತಿ ಮತ್ತು ಮಗುವಿಗೆ ಸ್ನಾನ ಮಾಡಿಸಿ ಸುಟ್ಟ ಬಜೆಯ ಕಪ್ಪನ್ನು ಲವಂಗದಿಂದ ತೇದು ಮಗುವಿನ ಹುಬ್ಬು ತೀಡಿ, ಮಗುವಿನ ಕಾಲು ಹಾಗೂ ಸೊಂಟಕ್ಕೆ  ಕರಿದಾರ ಕಟ್ಟುವವರು. ಬೀಗರ ಮನೆಯಿಂದ ತಂದಿರುವ ಹೊಸಬಟ್ಟೆ, ಉಂಗುರವನ್ನು ಮಗುವಿಗೆ ತೊಡಿಸಿ ಬಾಣಂತಿಯ ಮಡಿಲಿಗೆ ಮಗುವನ್ನು ಹಾಕುತ್ತಾರೆ. ಈ ಆಚರಣೆಯಲ್ಲಿ ಅಕ್ಕಿ, ಬೇಳೆ, ಕೋಳಿಸಾರನ್ನು ಒಂದು ಹರಿವಾಣದಲ್ಲಿಟ್ಟು ಬಡವರಿಗೆ ಅಥವಾ ಸೂಲಗಿತ್ತಿಗೆ ಕೊಡುವ ವಾಡಿಕೆಯಿದೆ. ಈ ಆಚರಣೆ ಮಗುವಿನ ಶ್ರೇಯಸ್ಸಿಗಾಗಿ ಮಾಡಬೇಕೆಂಬ ನಂಬಿಕೆÉ ಪಿಂಜಾರರಲ್ಲಿದೆ.

ಛಿಲ್ಲಾ (ಛಿಲ್ಲಾ ನೀರು)

            ಇಸ್ಲಾಂನಲ್ಲಿ ‘ಛಿಲ್ಲಾ’ ಕಡ್ಡಾಯವಾದ ಆಚರಣೆಯಾಗಿದೆ. ಇದನ್ನು ಪಿಂಜಾರರು ಒಳಗೊಂಡಂತೆ ಎಲ್ಲಾ ಇಸ್ಲಾಂ ಸಮುದಾಯದವರು ಮಾಡುತ್ತಾರೆ. ಹೆರಿಗೆಯಾಗಿ ನಲವತ್ತು ದಿನಕ್ಕೆ ಎರಡು ದಿನ ಬಾಕಿಯಿರುವಾಗ ಮಾಡಲಾಗುತ್ತದೆ. ಆಚರಣೆಗಾಗಿ ತಮ್ಮ ಮನೆಯನ್ನು ಪೂರ್ಣ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ಸಂಬಂಧಿಕರನ್ನು ಆಹ್ವಾನಿಸಲಾಗುತ್ತದೆ. ನಲವತ್ತನೆ ದಿನದ ಬೆಳಿಗ್ಗೆ ಬಿಸಿಮಾಡಿದ ಕೊಬ್ಬರಿ ಎಣ್ಣೆಯನ್ನು ಮಗುವಿನ ಮೈಗೆ ಹಚ್ಚಿ ಸ್ನಾನ ಮಾಡಿಸಲಾಗುವುದು. ನಂತರ ಬಾಣಂತಿಗೆ ಐದು ಮುತ್ತೈದೆಯರು ನಲವತ್ತು ಚೊಂಬು ನೀರು ಸುರಿದು ಸೂತಕದ ಸ್ನಾನ ಮಾಡಿಸುವರು. ಸ್ನಾನ ಮಾಡಿಸಿಕೊಂಡ ಬಾಣಂತಿ ತವರು ಮನೆಯವರು ತಂದ ಉಡುಗೆಯನ್ನು ಉಡುತ್ತಾಳೆ. ನಂತರ ಎರಡು ರಕಾತ್ ಶುಕ್ರಿಯಾ ನಮಾಜ್ ಮಾಡಿ, ಖುರಾನ್ ಗ್ರಂಥವನ್ನು ಓದಿ ಮೊದಲು ಮಗುವಿನ ಮುಖವನ್ನು ನೋಡುವಳು. ಹೀಗೆ ಸ್ನಾನದ ನಂತರ ಮಗುವಿನ ಮುಖ ನೋಡುವವರೆಗೂ ಈಕೆ ಉಪವಾಸದಲ್ಲಿರಬೇಕು. ಇವೆಲ್ಲ ಮುಗಿದ ಮೇಲೆ ಮಗುವಿನ ತಾಯಿ ಮತ್ತು ಇತರೆ ಐವರು ಸುಮಂಗಲಿಯರು ಮಗುವನ್ನು ಮುದ್ದಾಡುತ್ತಾ ತೊಟ್ಟಿಲಿಗೆ ಹಾಕುವÀರು. ಆಗ ನೆರೆದಿರುವ ಅಥವಾ ಬಂದಿರುವ ಹೆಂಗಸರೆಲ್ಲರೂ ‘ಜೂಲೇನಾಮ’ ಹಾಡುತ್ತಾರೆ. ಮಗುವಿಗೆ ಅತ್ತೆಯಾದವಳು ಮಗುವಿನ ಕಿವಿಯಲ್ಲಿ ಮೂರು ಬಾರಿ ಮಗುವಿನ ಹೆಸರನ್ನು ಹೇಳಿ ಹೆಸರನ್ನು ಇಡುವಳು. ಈ ರೀತಿ ಮಾಡುವುದು ಹೆಸರಿಡುವುದು ಪಿಂಜಾರರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇಸ್ಲಾಂ ಧರ್ಮದಲ್ಲಿ ಮಗುವಿಗೆ ಸಂಬಂಧಪಟ್ಟ ಇತರೆ ಆಚರಣೆಗಳೆಂದರೆ ‘ಮಾಮಾಜಿ ಕಾನಖಾಯಿರಸಂ’ ಮತ್ತು ‘ಮಕ್‍ತಬ್’ ಆಚರಣೆಗಳು. ಆದರೆ ಈ ಆಚರಣೆಗಳು ಪಿಂಜಾರರಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲ ಕೆಲವರು ಮಾತ್ರ ಇತ್ತೀಚಿನ ದಿನಗಳಲ್ಲಿ ಮಾಡುತ್ತಿದ್ದಾರೆ.

ಹಖೀಖಾ (ತಲೆಕೂದಲು ತೆಗೆಸುವ ಶಾಸ್ತ್ರ)

ಇಸ್ಲಾಂ ಧರ್ಮದ ಆಚರಣೆಗಳಲ್ಲಿ ಇದು ಕೂಡ ಪ್ರಮುಖವಾದದ್ದು. ಇದನ್ನು ಪಿಂಜಾರ ಸಮುದಾಯ ಕೂಡ ಆಚರಿಸುತ್ತದೆ. ಈ ಆಚರಣೆಯಲ್ಲಿ ಮಗುವಿನ ತಲೆ ಬೋಳಿಸಿ ಕೂದಲಿನ ತೂಕದಷ್ಟು ಬೆಳ್ಳಿಯನ್ನು ಬಡವರಿಗೆ ಕೊಡುವ ಸಂಪ್ರದಾಯವಿದೆ. ಗಂಡು ಮಗುವಿಗೆ ಎರಡು ಕುರಿಯನ್ನು, ಹೆಣ್ಣು ಮಗುವಿಗೆ ಒಂದು ಕುರಿಯನ್ನು ಮಗುವಿನ ತಲೆಗೆ ತಾಕಿಸಿ ಮಹಮ್ಮದ್ ಪೈಗಂಬರÀರ ಹೆಸರಿನಲ್ಲಿ ಕೊಯ್ಯತ್ತಾರೆ. ಅದರ ಮಾಂಸವನ್ನು ಮೂರು ಪಾಲು ಮಾಡಿ ಬಡವರಿಗೆ, ಸಂಬಂಧಿಕರಿಗೆ ಹಂಚಿ ಒಂದು ಪಾಲನ್ನು ತಾವು ಉಪಯೋಗಿಸುತ್ತಾರೆ. ಆದರೆ ಚಿತ್ರದುರ್ಗ, ದಾವಣಗೆರೆ ಭಾಗದ ಪಿಂಜಾರರು ಸ್ವಲ್ಪ ಬದಲಾವಣೆಯ ಮೂಲಕ ‘ಹಖೀಖಾ’ ಮಾಡುತ್ತಾರೆ. ಇವರಲ್ಲಿ ಮಗುವಿನ ತಲೆಕೂದಲನ್ನು ಮಗುವಿನ ಸೋದರ ಮಾವ ಕತ್ತರಿಸುವುದರ ಮೂಲಕ ಶಾಸ್ತ್ರ ಮಾಡಲಾಗುತ್ತದೆ. ಇದಕ್ಕೆ ಅವನಿಗೆ ಮಗುವಿನ ಅಪ್ಪ ಅಮ್ಮ ಹೊಸ ಬಟ್ಟೆಯನ್ನು ಕೊಡಬೇಕಾಗುತ್ತದೆ. ಅಥವಾ ಹೆಗಲ ಮೇಲೆ ಟವಲ್ ಆದರು ಹಾಕುತ್ತಾರೆ.

ಮುಂಜಿ ಶಾಸ್ತ್ರ (ಖತ್ನಾ ಶಾಸ್ತ್ರ)

            ಇಸ್ಲಾಂಧರ್ಮದಲ್ಲಿ ಮುಂಜಿ ಕಡ್ಡಾಯವಾಗಿದೆ. ಮುಂಜಿ ಮಾಡಿಸಿದರೆ ಮಾತ್ರ ಅವನು ಇಸ್ಲಾಂ ಧರ್ಮೀಯನಾಗುತ್ತಾನೆ. ಇಲ್ಲದಿದ್ದರೆ ಅವನು ‘ಕಾಫರ್’(ಹರಾಮ್) ಆಗುತ್ತಾನೆ ಎಂಬ ನಂಬಿಕೆಯಿದೆ. ಇಸ್ಲಾಂ ಧರ್ಮದ ಇತರೆ ಎಲ್ಲಾ ಸಮುದಾಯಗಳು ಇದನ್ನು ಒಪ್ಪಿಕೊಂಡು ಆಚರಣೆ ಮಾಡುತ್ತವೆ. ಇದಕ್ಕೆ ಇಸ್ಲಾಂನಲ್ಲಿ ‘ಖತ್ನಾ’ ಎಂದೂ ಸಹ ಕರೆಯುತ್ತಾರೆ. ಇದು ಗಂಡು ಮಕ್ಕಳಿಗೆ ಮಾತ್ರ ಸೀಮಿತವಾದದ್ದು. ಗಂಡುಮಗು ಹುಟ್ಟಿದ ಹನ್ನೊಂದು ವರ್ಷ ತುಂಬುವುದರೊಳಗೆ ಮುಂಜಿಯನ್ನು ಮಾಡಿಸಲಾಗುತ್ತದೆ. (ಇತ್ತೀಚಿಗೆ ಮುಂಜಿ ಮಾಡಿಸಲು ವಯಸ್ಸನ್ನು ಪರಿಗಣಿಸುವುದಿಲ್ಲ). ಪಿಂಜಾರರಲ್ಲಿ ಮುಂಜಿ ಮಾಡುವ ವ್ಯಕ್ತಿಯನ್ನು ‘ಮುಂಜಿಸಾಬ್’ ಎಂದು ಕರೆಯುತ್ತಾರೆ. ಮುಂಜಿಯನ್ನು ಹುಡುಗನ ಅಮ್ಮನ ತವರು ಮನೆಯವರು ಮಾಡಿಸಬೇಕಾಗಿದೆ. ತವರು ಮನೆಯವರು ಮೊಮ್ಮಗನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಮ್ಮ ಖರ್ಚಿನಲ್ಲಿ ಮುಂಜಿ ಮಾಡಿಸುತ್ತಾರೆ. ಮುಂಜಿ ಮಾಡಿಸಿಕೊಳ್ಳುವ ಹುಡುಗನನ್ನು ಹಿತ್ತಾಳೆಯ ಬಿಂದಿಗೆಯ ಮೇಲೆ ಕೂರಿಸಲಾಗುತ್ತದೆ. ಮುಂಜಿ ಮಾಡುವಾಗ ರಕ್ತ ಕೆಳಗೆ ಬಿಳದಂತೆ ಶಿಶ್ನದ ನೇರಕ್ಕೆ ಸರಿಯಾಗಿ ಹಿತ್ತಾಳೆ ತಟ್ಟೆಯಲ್ಲಿ ಬೂದಿಯನ್ನು ಇಡುವರು. ಹೆದರುತ್ತಿರುವ ಹುಡುಗನನ್ನು ಹಿಡಿದುಕೊಳ್ಳುವರು. ಮುಂಜಿಸಾಬ್ ಹುಡುಗನ ಶಿಶ್ನದ ತುದಿಯ ಚರ್ಮವನ್ನು ಎಳೆದು ಕತ್ತರಿಸಿ ತಕ್ಷಣ ಚರ್ಮ ಹಿಂದಕ್ಕೆ ಸರಿಸಿ ಔಷಧಿ ಹಚ್ಚುವನು. ಇಲ್ಲಿಗೆ ಮುಂಜಿ ಮುಗಿಯುತ್ತದೆ (ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಭಯಂಕಾರವಾಗಿ ಮುಂಜಿ ಮಾಡಿಸುವುದು ಕಡಿಮೆಯಾಗಿದ್ದು. ಹಾಸ್ಪಿಟಲ್‍ಗಳಲ್ಲಿಯೇ ನೋವು ಕಾಣದಂತೆ ಚುಚ್ಚುಮದ್ದನ್ನು ಹಾಕಿಸಿ ಮಾಡಿಸಲಾಗುತ್ತದೆ). ಮುಂಜಿಯಾಗಿ ‘ಇಪ್ಪತ್ತೊಂದನೆ’ ದಿನವಾದ ನಂತರ ಮನೆಯನ್ನು ಶುದ್ಧಗೊಳಿಸಿ, ಮನೆಗೆ ಸುಣ್ಣ ಬಣ್ಣ ಬಳಿದು ಮದುವೆ ಮನೆಯಂತೆ ಸಿಂಗರಿಸುತ್ತಾರೆ. ಇಪ್ಪತ್ತೊಂದನೆ ದಿನದ ಬೆಳಿಗ್ಗೆ ಹುಡುಗನಿಗೆ ಮೈ ತುಂಬ ಅರಿಶಿಣ, ಚಿಕ್ಸಾ ಮಲ್ ವಟ್ ಸುಲ್ಕಾಪಾನಿಯೆಂಬ ಸೂತಕದ ನೀರನ್ನು ಹಾಕುವರು. ನಂತರ ಹೊಸ ಬಟ್ಟೆ ಉಡಿಸಿ, ತಲೆಗೆ ಟೋಪಿ ಅಥವಾ ಪೇಟ ಕಟ್ಟಿ. ಸಹೇರಾ(ಸೇರ್‍ಬನ್ನ) ಕಟ್ಟುತ್ತಾರೆ. ಮದುವೆಯ ಗಂಡಿನಂತೆ ಸಿಂಗರಿಸಿದ ಹುಡುಗನನ್ನು ಕುರ್ಚಿಯ ಮೇಲೆ ಕೂರಿಸುತ್ತಾರೆ. ಪಿಂಜಾರ ಸಮುದಾಯಗಳಲ್ಲಿ ಹುಡುಗನಿಗೆ ಅತ್ತೆಯಾಗುವವರು ತನ್ನನ್ನು ಮದುವೆಯಾಗು ಅಂತೆಲ್ಲ ರೇಗಿಸುವ ರೂಢಿಯಿದೆ. ಬಂದಂತಹ ನೆಂಟರಿಷ್ಟರೆಲ್ಲರು ಹುಡುಗನಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹುಡುಗನನ್ನು ಕೂರಿಸಿ ಹಾಡುಗಳನ್ನು ಹಾಡುವ ವಾಡಿಕೆ ಇತ್ತು, ಆದರೆ ಇಂದು ಕಣ್ಮರೆಯಾಗಿದೆ. ಎಲ್ಲಾ ಶಾಸ್ತ್ರ ಮುಗಿದ ಮೇಲೆ ಮುಂಜಿ ಕಾರ್ಯಕ್ಕೆ ಬಂದಂತಹ ಸಂಬಂಧಿಕರಿಗೆ ಕುರಿಯ ಮಾಂಸದ ಅಡುಗೆಯನ್ನು ಉಣಬಡಿಸಿ ಎಲ್ಲರೂ ಸಾಮೂಹಿಕವಾಗಿ ಊಟ ಮಾಡುವುದರ ಮೂಲಕ ಮುಂಜಿ ಶಾಸ್ತ್ರ ಮುಗಿಯುತ್ತದೆ.

ಋತುಮತಿ

ಹೆಣ್ಣುಮಕ್ಕಳು ಋತುಮತಿಯಾಗುವುದನ್ನು ಪಿಂಜಾರರಲ್ಲಿ ‘ದೊಡ್ಡೊಕೆ’(ದೊಡ್ಡಾಕಿ) ಆದಳೆಂದು ಕರೆಯುತ್ತಾರೆ. ಇಸ್ಲಾಂ ಧರ್ಮದಲ್ಲಿ ಈ ಆಚರಣೆ ಮಾಡಬಾರದೆಂಬ ನಿಷೇಧವಿದೆ. ಇದನ್ನು ಪಿಂಜಾರ ಸಮುದಾಯದವರು ಮಾತ್ರ ತುಂಬ ವಿಜೃಂಭಣೆಯಿಂದ ಮಾಡುತ್ತಾರೆ. ಈ ಆಚರಣೆಗೆ ಕಾರಣ ಸ್ಥಳೀಯ ಧರ್ಮಗಳ ಪ್ರಭಾವ ಹಾಗೂ ಅವರ ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ಆಚರಣೆ ಇರಬಹುದು. ಹುಡುಗಿ ಋತುಮತಿಯಾದ ನಂತರ ಅವಳ ಮೈ ತೊಳೆದು ಬೇರೆ ಬಟ್ಟೆ ತೊಡಿಸುತ್ತಾರೆ. ಋತುಮತಿಯಾದ ಸುದ್ಧಿಯನ್ನು ಆಪ್ತರಿಗೆ ಸಂಬಂಧಿಕರಿಗೆ ಎಲ್ಲರಿಗೂ ತಿಳಿಸಿ ಋತುಮತಿಯಾದ ಎಂಟ್ಹತ್ತು ದಿನದಲ್ಲಿ ಒಂದು ದಿನ ನಿಗದಿ ಮಾಡುತ್ತಾರೆ. ಆ ದಿನ ಹುಡುಗಿಗೆ ಹೊಸ ಸೀರೆಯನ್ನು ಉಡಿಸಿ, ಆಭರಣಗಳ ಮೂಲಕ ಸಿಂಗರಿಸಿ, ಕಾಲಿಗೆ ಬೆಳ್ಳಿಗೆಜ್ಜೆ, ಮೂಗಿಗೆ ಮೂಗುತಿ, ಕಿವಿಗೆ ಬೆಂಡೋಲೆ, ಜುಮುಕಿ, ತಲೆಗೆ ಹೂವು ಮೂಡಿಸಿ ಮದುವಣಗಿತ್ತಿಯಂತೆ ಶೃಂಗರಿಸುತ್ತಾರೆ. ಅನಂತರ ಅವಳನ್ನು ಎಲ್ಲರ ಎದುರಿಗೆ ಕುರ್ಚಿ ಹಾಕಿ ಕೂರಿಸುತ್ತಾರೆ. ಅಲ್ಲಿ ಮಾವ ಆಗುವಂತವನು ಇದ್ದರೆ ಅವರನ್ನು ತೋರಿಸಿ ರೇಗಿಸುತ್ತಾರೆ. ಹಾಡುಗಳನ್ನು ಹೇಳಿ ಚುಡಾಯಿಸುತ್ತ ಶಾಸ್ತ್ರವನ್ನು ಮುಗಿಸುತ್ತಾರೆ.

 ಇವಿಷ್ಟು ಮಗು ಹುಟ್ಟಿ, ಬೆಳೆದು, ವಿವಾಹದ ವಯಸ್ಸಿಗೆ ಬರುವ ತನಕ ಮಾಡುವ ಆಚರಣೆಗಳು. ನಂತರದಲ್ಲಿ ಮಾಡುವ ಆಚರಣೆಗಳು ವಿವಾಹಕ್ಕೆ ಸಂಬಂಧಿಸಿದವು. ಇಸ್ಲಾಂ ಧರ್ಮದಲ್ಲಿ ‘ಮೊಹರಂ’ ಹಾಗೂ ‘ಸಫರ್’(ಅಕ್ಟೋಬರ್-ನವ್ಹೆಂಬರ್)ತಿಂಗಳಲ್ಲಿ ವಿವಾಹ ಹಾಗೂ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಇದೇ ನಿಯಮಕ್ಕೆ ಪಿಂಜಾರರು ಸಹ ಬದ್ಧರಾಗಿದ್ದಾರೆ. ಪಿಂಜಾರರಲ್ಲಿ ಹುಡುಗಿ ಋತುಮತಿಯಾದ ನಂತರ ಮದುವೆ ಮಾಡುವುದು ರೂಢಿಯಲ್ಲಿದೆ(ಇದಕ್ಕೂ ಹಿಂದೆ ಬಾಲ್ಯ ವಿವಾಹ ಇದ್ದಿರಬಹುದು). ಪಿಂಜಾರರಲ್ಲಿ ಹೆಣ್ಣನ್ನು ನೋಡಿ ಒಪ್ಪಿಗೆಯಾದ ಮೇಲೆ ‘ವೀಳ್ಯೆಶಾಸ್ತ್ರ’ ಮಾಡುತ್ತಾರೆ. ಇದನ್ನು ಇಸ್ಲಾಂ ಧರ್ಮದಲ್ಲಿ ‘ನಿಸ್‍ಬತ್’ ಅಥವಾ ‘ಮಂಗ್ನೀ ರಸಂ’ ಎಂದು ಕರೆಯಲಾಗುತ್ತದೆ. ಈ ಶಾಸ್ತ್ರ ಗೊತ್ತುಪಡಿಸಿದ ದಿನ ವರನ ಕಡೆಯವರು ವಧುವಿನ ಮನೆಗೆ ಬರುತ್ತಾರೆ. ವಧುವಿಗೆ ಬಳೆ, ಸೀರೆ, ಉಂಗುರ, ಚೈನು, ಹೂವು, ಸುಗಂಧ ದ್ರವ್ಯ, ಬಾಚಣಿಕೆ, ಮುಂತಾದ ಸಿಂಗಾರದ ವಸ್ತುಗಳನ್ನು ತರುವುದು ರೂಢಿ. ವಧುವಿಗೆ ತಂದಿರುವ ವಸ್ತುಗಳನ್ನು ವರನ ಕಡೆಯ ಹಿರಿಯ ಅನುಭವಸ್ಥ ಮುತ್ತೈದೆ ತೆಗೆದುಕೊಂಡು ಹೋಗುತ್ತಾಳೆ. ಮುತ್ತೈದೆ ಹುಡುಗಿಗೆ ಮೊದಲು ಹೂವು ಮೂಡಿಸಿ, ಹಸಿರು ಬಳೆ ತೊಡಿಸಿ, ಹಾರ ಹಾಕಿ, ಗಜ್ ರೇ, ಚೊಡ ಕಟ್ಟಿ, ಎಲೆ ಅಡಿಕೆ, ಬಾಳೆ ಹಣ್ಣಿನಿಂದ ಆಕೆಯ ಮಡಿಲು ತುಂಬುವಳು. ನಂತರ ಅವಳನ್ನು ಬಂದಿರುವ ಸಂಬಂಧಿಕರ ಎದುರಿಗೆ ಕೂರಿಸಿ ಅಲ್ಲಿ ನೆರೆದ ಸಂಬಂಧಿಕರು ಕನ್ಯೆಯ ಕೆನ್ನೆಗೆ, ಕುತ್ತಿಗೆಗೆ ಗಂಧ ಹಚ್ಚಿ ತಮ್ಮ ಹೆಣ್ಣಿಗೆ ನೀವಾಳಿಸಿ ದೃಷ್ಠಿ ತೆಗೆಯುವರು. ಕನ್ಯೆಯನ್ನು ನೋಡಿ ಎರಡು ಕಡೆಯಿಂದ ಒಪ್ಪಿರುವ ಸಂದರ್ಭ ಕೊಡುಕೊಳ್ಳುವಿಕೆಯ ಬಗ್ಗೆ ಮಾತುಕತೆ ನಡೆಯುತ್ತದೆ.

 ಚಪ್ಪರದ ಶಾಸ್ತ್ರ :

ಪಿಂಜಾರರನ್ನು ಒಳಗೊಂಡಂತೆ ಇಸ್ಲಾಂ ಧರ್ಮದ ಇತರೆ ಸಮುದಾಯಗಳು ಕೂಡ ಚಪ್ಪರದ ಶಾಸ್ತ್ರವನ್ನು ಮಾಡುವುದು ಕಂಡುಬರುತ್ತದೆ. ಆದರೆ ಪಿಂಜಾರರ ಆಚರಣೆಯಲ್ಲಿ ಸ್ವಲ್ಪ ಭಿನ್ನತೆ ಕಂಡುಬರುವುದು ಸಹಜ. ಶಾದಿ ಇನ್ನೂ ಎರಡು, ಮೂರು ದಿನ ಇರುವ ಮೊದಲೇ ವಧು, ವರರ ಎರಡು ಮನೆಯವರು ತಮ್ಮ ಮನೆಯ ದ್ವಾರ ಬಾಗಿಲ ಮುಂದಿನ ಅಂಗಳಕ್ಕೆ ಚಪ್ಪರ ಹಾಕುತ್ತಾರೆ. ಈ ಚಪ್ಪರವನ್ನು ಚೌಕಾಕಾರದಲ್ಲಿ ಐದು ಅಥವಾ ಒಂಭತ್ತು ಕಂಬಗಳ ಸಹಾಯದಿಂದ ನಿರ್ಮಿಸಲಾಗುತ್ತದೆ. ಚಪ್ಪರದ ಮೇಲೆ ಗಳುಗಳನ್ನು(ಮರದ ಸಣ್ಣ ಗಾತ್ರದ ತುಂಡುಗಳು) ಬಿಗಿದು ಹಸಿಯಾದ ತೆಂಗಿನ ಗರಿಗಳನ್ನು ಹಾಕಿ ಆಸ್ಮಾನ್‍ಗಿರಿ ಕಟ್ಟುತ್ತಾರೆ. ಪ್ರತಿ ಕಂಬಕ್ಕೂ ಅರಿಶಿನ ಹಚ್ಚಿದ ಅಕ್ಕಿಯನ್ನು ಕೆಂಪನೆಯ ತುಂಡು ಬಟ್ಟೆಯಲ್ಲಿ ಡುಂಡನೆ ಆಕಾರದಲ್ಲಿ ಮಾಡಿ ಕಂಬಗಳಿಗೆ ಬಿಗಿದು ಕಟ್ಟುತ್ತಾರೆ. ಮಧ್ಯದ ಕಂಬಕ್ಕೆ ಮಾತ್ರ ಒಂದು ಕಾಲು ರೂಪಾಯಿ ಹಾಗೂ ಮುತ್ತು ಸೇರಿಸಿ ಕಟ್ಟುವ ಸಂಪ್ರದಾಯವಿದೆ. ಹೀಗೆ ಕಟ್ಟಿದ ಮೇಲೆ ತೆಂಗಿನ ಕಾಯಿ ಒಡೆದು ಅಲ್ಲ್ಹಾನ ಹೆಸರಿನಲ್ಲಿ ಅಥವಾ ಪೈಗಂಬರರ ಹೆಸರಿನಲ್ಲಿ ಪಾತೇಹ ಓದಿಸಲಾಗುತ್ತದೆ. ಇಸ್ಲಾಂ ಧರ್ಮದ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ ಹನ್ಫಿ, ಷಾಪಿ, ಮಾಲೀಕಿ, ಹಂಬಲಿ ಎಂಬ ನಾಲ್ಕು ಜನ ಇಮಾಮ್‍ರವರು ನಾಲ್ಕು ಕಂಬಗಳಂತೆ ನಾಲ್ಕು ದಿಗ್ಗಜಗಳು ಎಂಬ ನಂಬಿಕೆಯಿದೆ.

ಅರಿಶಿಣದ ಶಾಸ್ತ್ರ :

ಅರಿಶಿಣವನ್ನು ಶುಭದ ಸಂಕೇತವಾಗಿ ಬಳಸುವ ವಾಡಿಕೆಯಿದೆ. ಇಸ್ಲಾಂ ಧರ್ಮದಲ್ಲಿ ಇದಕ್ಕೆ ವಿಶೇಷವಾದ ಪ್ರಾಶಸ್ಥ್ಯವಿದೆ. ಪಿಂಜಾರ ಸಮುದಾಯಗಳು ಒಳಗೊಂಡಂತೆ ಇತರೆ ಉಪಸಮುದಾಯಗಳಲ್ಲಿಯು ಅರಿಶಿಣಶಾಸ್ತ್ರಕ್ಕೆ ಪ್ರಾಮುಖ್ಯತೆಯಿದೆ. ಮೊದಲ ಮಂಗಳ ಕಾರ್ಯವೆಂಬಂತೆ ಅರಿಶಿಣ ಶಾಸ್ತ್ರವನ್ನು ಮಾಡಲಾಗುತ್ತದೆ. ಇದನ್ನು ವಿಶೇಷವಾಗಿ ಸೀಮಂತ, ಛಿಲ್ಲಾನೀರು ಶಾಸ್ತ್ರ, ಮುಂಜಿ ಶಾಸ್ತ್ರ, ಋತುಮತಿ ಶಾಸ್ತ್ರ ಹಾಗೂ ವಿವಾಹಕ್ಕೆ ಸಂಬಂಧಿಸಿದ ಶಾಸ್ತ್ರಗಳನ್ನು ಮಾಡುವ ಸಂದರ್ಭದಲ್ಲಿ ಮಾಡಲಾಗುತ್ತದೆ.

ಅರಿಶಿಣ ಶಾಸ್ತ್ರವು ವಿವಾಹ ಇನ್ನೂ ಮೂರು ಅಥವಾ ಐದು ದಿವಸ ಇರುವ ಮುಂಚೆಯೇ ವಧು-ವರರ ಮನೆಗಳಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ವಧು-ವರರನ್ನು ಅವರ ಮನೆಗಳಲ್ಲಿ ಕೂರಿಸಿ ಅರಿಶಿಣ, ಗಂಧವನ್ನು ಹಚ್ಚಿ ಸ್ನಾನ ಮಾಡಿಸುತ್ತಾರೆ. ಈ ಶಾಸ್ತ್ರ ಮುಗಿಸಿಕೊಂಡ ವಧು-ವರರನ್ನು ‘ಮದ್ಲಿಂಗ’ ಮತ್ತು ‘ಮದ್ಲಿಂಗಿತ್ತಿ’(ಮಧುವಣಗಿತ್ತಿ) ಎಂದು ಕರೆಯುವ ರೂಢಿಯಿದೆ. ಇಸ್ಲಾಂನಲ್ಲಿ ವಿವಾಹವನ್ನು ವಧುವಿನ ಕಡೆಯವರು ಮಾಡುವ ವಾಡಿಕೆಯಿದೆ. ಆದ್ದರಿಂದ ವಿವಾಹದ ಹಿಂದಿನ ದಿನದ ರಾತ್ರಿಯೇ ವರನ ಕಡೆಯವರು ವಧುವಿನ ಮನೆಗೆ ಬರುತ್ತಾರೆ. ಈ ದಿನಕ್ಕೆÉ ‘ಶುಕ್ರಾನ’ ಎಂದು ಕರೆಯಲಾಗುತ್ತದೆ. ಶುಕ್ರಾನದ ದಿನ ವಧುವಿನ ಕಡೆಯವರು, ವರನ ಕಡೆಯವರಿಗೆ ಬಿಡದಿ ಮನೆಯನ್ನು ನೀಡಿ ಅವರಿಗೆ ಊಟದ ವ್ಯವಸ್ಥೆ ಮಾಡಿಕೊಡುತ್ತಾರೆ. ಶುಕ್ರಾನದ ಇಡೀ ರಾತ್ರಿ ಪೂರ್ತಿ ಸುಮಾರು ಏಳು ಬಾರಿ ಅರಿಶಿಣ ಶಾಸ್ತ್ರವನ್ನು ವಧುವಿನ ಕಡೆಯವರು ವರನ ಬಿಡದಿ ಮನೆಗೆ ಹೋಗಿ ಮಾಡುತ್ತಾರೆ. ಅದೇ ರೀತಿ ವರನ ಕಡೆಯವರು ಬಿಡದಿ ಮನೆಯಿಂದ ವಧುವಿನ ಮನೆಗೆ ಹೋಗಿ ಅವಳಿಗೆ ಅರಿಶಿಣಶಾಸ್ತ್ರವನ್ನು ಮಾಡುವುದನ್ನು ಗಮನಿಸಬಹುದಾಗಿದೆ. ವಿವಾಹ ಆದ ಮರು ದಿನ ವರನ ಊರಿನಲ್ಲಿ ನಡೆಯುವ ‘ವಲೀಮಾ’ಕ್ಕೆ ವಧುವಿನ ಕಡೆಯವರು, ಬಂಧುಗಳು ಬರುತ್ತಾರೆ. ‘ವಲೀಮಾ’ಕ್ಕೆ ಪಿಂಜಾರರಲ್ಲಿ ‘ಮಾಮನೇ’ ಎಂದು ಸಹ ಕರೆಯುತ್ತಾರೆ. ವಲೀಮಾಕ್ಕೆ ಅಗಮಿಸಿದ ಬಂಧುಗಳು ವಧು-ವರರ ಕೆನ್ನೆಗೆ, ಕೈಗೆ, ಅರಿಶಿಣ ಹಚ್ಚಿ ಕಾಣಿಕೆಗಳನ್ನು ನೀಡುವುದರ ಮೂಲಕ ಅರಿಶಿಣಶಾಸ್ತ್ರ ಮಾಡುತ್ತಾರೆ. ಅರಿಶಿಣ ಶಾಸ್ತ್ರದ ಜೊತೆಜೊತೆಗೆ ವಿವಾಹದ ಸಂದರ್ಭದಲ್ಲಿ ‘ಮೆಹೇಂದಿ ರಸಂ’ ಕೂಡ ನಡೆಯುತ್ತದೆ. ಈ ಶಾಸ್ತ್ರ ಮದುವೆ ನೆಡೆಯುವ ಮೂರು ಅಥವಾ ಐದು ದಿನಗಳ ಹಿಂದೆ ವಧು ವರರಿಗೆ ಮಾಡಲಾಗುತ್ತದೆ. ವಧು ವರರ ಮನೆಯಲ್ಲಿ ಮೆಹಂದಿ ಹಚ್ಚುವುದಕ್ಕಿಂತ ಮೊದಲು ಐವರು ಸುಮಂಗಲಿಯರನ್ನು ಕರೆದು ಐದು ಬೀಡೆ ತೆಗೆದು ಕೊಡುತ್ತಾರೆ. ಅಲ್ಲದೇ ಈ ಐದು ಜನ ಸುಮಂಗಲಿಯರಿಗೆ ಮೊದಲು ಮೆಹಂದಿ ಹಚ್ಚಿ, ನಂತರದಲ್ಲಿ ವಧು ವರರಿಗೆ ಹಚ್ಚಲಾಗುತ್ತದೆ. ಶುಕ್ರಾನದ ದಿನ ವರನ ದಿಬ್ಬಣ ವಧುವಿನ ಊರಿಗೆ ಬಂದಾಗ ವಧುವಿನ ಸೋದರಿಯಿಂದ ವರನಿಗೆ ಮೆಹಂದಿ ಹಚ್ಚುವ ಶಾಸ್ತ್ರ ನಡೆಯುತ್ತದೆ. ಈ ಶಾಸ್ತ್ರವನ್ನು ನಡೆಸಿಕೊಡುವ ವಧುವಿನ ಸೋದರಿಗೆ ವರನ ಕಡೆಯವರು ಹೊಸ ಬಟ್ಟೆಯನ್ನು ನೀಡಿ ಮಡಿಲು ತುಂಬುವ ಸಂಪ್ರದಾಯವಿದೆ.

ಶುಕ್ರಾನ

            ಈ ಆಚರಣೆ ವಿವಾಹದ ಹಿಂದಿನ ರಾತ್ರಿ ವಧುವಿನ ಊರಿನಲ್ಲಿ ನಡೆÉಯುತ್ತದೆ. ಇಸ್ಲಾಂ ಧರ್ಮದಲ್ಲಿ ವಿವಾಹದ ಜವಾಬ್ದಾರಿಯು ವಧುವಿನ ಕಡೆಯವರದ್ದಾಗಿದೆ. ಈ ಜವಾಬ್ದಾರಿಯು ಪಿಂಜಾರ ಸಮುದಾಯದಲ್ಲಿಯು ಚಾಲ್ತಿಯಿದೆ. ಆದ್ದರಿಂದ ವಿವಾಹದ ಸಂಪೂರ್ಣ ಖರ್ಚು ವೆಚ್ಚವನ್ನು ವಧುವಿನ ಕುಟುಂಬ ಭರಿಸುತ್ತದೆ. ಶುಕ್ರಾನದ ದಿನ ವರನ ಕಡೆಯ ದಿಬ್ಬಣ ವಧುವಿನ ಊರಿಗೆ ಬಂದಾಗ ಅವರಿಗೆ ಪಾನಕ ಕೊಟ್ಟು ಸ್ವಾಗತಿಸಿ, ಅವರಿಗೆ ಉಳಿದುಕೊಳ್ಳಲು ಬಿಡದಿ ಮನೆಯನ್ನು ಕೊಡಲಾಗುತ್ತದೆ. ನಂತರ ಅವರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗುತ್ತದೆ. ಈ ಊಟವನ್ನು ‘ಜನ ಬಾತ್‍ಖಾನಾ’ ಎಂದು ಕರೆಯುತ್ತ್ತಾರೆ. ಶುಕ್ರಾನದಲ್ಲಿ ವರನ ಕಡೆಯವರಿಗೆ ಸ್ವಲ್ಪವೂ ಚ್ಯುತಿ ಬರದಂತೆ ವಧುವಿನ ಕಡೆಯವರು ಬಹಳ ಜವಾಬ್ದಾರಿಯಿಂದ ಎಲ್ಲಾ ಆಚರಣೆಗಳನ್ನು ಮಾಡುತ್ತಾರೆ. ವಧು-ವರರ ಎರಡು ಕುಟುಂಬಗಳ ಕಡೆಯಿಂದಲೂ ರಾತ್ರಿಯಿಡಿ ‘ಅರಿಶಿನ ಶಾಸ್ತ್ರ’, ‘ಮೆಹಂದಿ ಶಾಸ್ತ್ರ’ ಹಾಗೂ ‘ಕಾರ್ಜಿಕಾಯಿಶಾಸ್ತ್ರ’ ನಡೆಯುತ್ತವೆ. ‘ಕಾರ್ಜಿಕಾಯಿ’ ಹಾಗೂ ‘ಮೆಹಂದಿ ಶಾಸ್ತ್ರ’ವನ್ನು ಮಾಡಲು ವಧುವಿನ ಸೋದರಿ ಮತ್ತು ಹೆಂಗಸರ ಗುಂಪು ಬಿಡದಿ ಮನೆಗೆ ಹೋಗುತ್ತಾರೆ. ಬಿಡದಿ ಮನೆಯಲ್ಲಿ ಮಸ್ಕತ್ ಹಾಸಿಗೆ ಮೇಲೆ ವರನು ಬಂದು ಕುಳಿತುಕೊಳ್ಳುವನು. ವಧುವಿನ ಸೋದರಿ ವರನಿಗೆ ಎಲೆ ಅಡಿಕೆ, ಬಾಳೆ ಹಣ್ಣು, ಸಕ್ಕರೆಯೊಂದಿಗೆ ಮಡಿಲು ತುಂಬುತ್ತಾಳೆ. ವರನ ಕೈತೊಳೆದು ಕರ್ಜಿಕಾಯಿಯ ಮೇಲೆ ಹಾಲು ಸುರಿದು ಅದನ್ನು ಮುರಿಯುವಂತೆ ಹೇಳುವಳು. ವರ ಎಲ್ಲರ ಕಣ್ಣು ತಪ್ಪಿಸಿ ತನ್ನ ಬಲಗೈಯಿಂದ ಕರ್ಜಿಕಾಯಿ ಮುರಿಯುವಾಗ ಹೂವು ಸುತ್ತಿರುವ ಕಡ್ಡಿಯಿಂದ ವಧುವಿನ ಸೋದರಿ ಹೊಡೆಯುವಳು. ಈ ಸಂದರ್ಭದಲ್ಲಿ ವರ ಮತ್ತು ವಧುವಿನ ಸೋದರಿಯ ಪರವಾಗಿ ಎರಡು ತಂಡಗಳು ಏರ್ಪಟ್ಟಿರುತ್ತವೆ. ವರನಿಗೆ ವಧುವಿನ ಸೋದರಿ ಹೊಡೆಯುವಾಗ ಕಡ್ಡಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ವರನ ಪರ ಗುಂಪು ಸಲಹೆ ನೀಡುತ್ತಿರುತ್ತದೆ. ಕರ್ಜಿಕಾಯಿಯನ್ನು ಮುರಿದ ಮೇಲೆ ವರನಿಗೆ ವಧುವಿನ ಸೋದರಿ ಆತನ ಕೈ ತೊಳೆದು ಕರ ವಸ್ತ್ರದಿಂದ ವರೆಸುತ್ತಾಳೆ. ನಂತರ ಆತನಿಗೆ ಮುರಿದ ಕರ್ಜಿಖಾಯಿಯನ್ನು ತಿನ್ನಿಸಬೇಕು. ಹೀಗೆ ತಿನ್ನಿಸುವಾಗ ಆಕೆಯ ಬೆರಳನ್ನು ವರ ಕಚ್ಚಲು ಪ್ರಯತ್ನಿಸುತ್ತಾನೆ. ಇಂತಹ ಸಂದರ್ಭದಲ್ಲಿ ಎರಡು ತಂಡದವರು ಒಬ್ಬರಿಗೊಬ್ಬರು ಹಾಸ್ಯ ಮಾಡುತ್ತ ಸಂತೋಷದಿಂದ ಪಾಲ್ಗೊಳ್ಳುವರು. ಕರ್ಜಿಕಾಯಿ ಶಾಸ್ತ್ರ ಮುಗಿದ ಮೇಲೆ ವಧುವಿನ ತಂಗಿಯಿಂದ ಮೆಹಂದಿಶಾಸ್ತ್ರ ಮಾಡಲಾಗುತ್ತದೆ. ಈ ಎಲ್ಲಾ ಶಾಸ್ತ್ರಗಳು ಮುಗಿದ ಮೇಲೆ ವಧುವಿನ ತಂಗಿಗೆ ವರನ ಕಡೆಯವರು ಬಟ್ಟೆ ಮತ್ತು ಇತರೆ ಕಾಣಿಕೆಯನ್ನು ಅವಳ ಮಡಿಲಿಗೆ ತುಂಬುವರು. ವರನಿಗೆ ನಡೆದ ಶಾಸ್ತ್ರಗಳ ರೀತಿ ವಧುವಿಗೂ ಕೂಡ ಶುಕ್ರಾನದ ರಾತ್ರಿ ‘ಮೆಹೆಂದಿಶಾಸ್ತ್ರ’, ‘ಕರ್ಜಿಕಾಯಿಶಾಸ್ತ್ರ’ ಹಾಗೂ  ‘ಅರಿಶಿಣ ಶಾಸ್ತ್ರ’ ಮಾಡುತ್ತಾರೆ. ಬಿಡದಿ ಮನೆಯಿಂದ ವಧುವಿನ ಮನೆಗೆ ಬರುವ ವರನ ಕಡೆಯ ಮಹಿಳೆಯರನ್ನು ಚಪ್ಪರದ ಒಳಗಡೆ ಗಂಧ ಹಚ್ಚಿ ‘ಚೋಬ’ ಕೈಗೆ ಕೊಟ್ಟು ಬರಮಾಡಿಕೊಳ್ಳುತ್ತಾರೆ. ವಧುವಿನ ಮನೆಗೆ ಬರುವ ಮಹಿಳೆಯರು ತಮ್ಮ ಶಾಸ್ತ್ರಗಳನ್ನು ಮಾಡುತ್ತಾರೆ.

ಶಾದಿ (ವಿವಾಹ)

ರಾತ್ರಿಯೆಲ್ಲಾ ಶುಕ್ರಾನದಲ್ಲಿ ವಿವಿಧ ಶಾಸ್ತ್ರಗಳು ನಡೆದ ಮೇಲೆ ಬೆಳಗಿನ ಜಾವ ನಮಾಜ್ ಹೊತ್ತಿಗೆ ಸರಿಯಾಗಿ ವರನ ಸ್ನಾನಕ್ಕಾಗಿ ವಧುವಿನ ಮನೆಯಿಂದ ಹೊಸ ಬಟ್ಟೆ, ಟವೆಲ್, ಪಂಚೆ, ಮಲ್‍ಮಟ್, ಚಿಕ್ಸಾ, ಸುರ್ಮಾ, ಸುಗಂಧ ದ್ರವ್ಯ, ಬಿಸಿ ನೀರು ಇತರೆ ಬಿಡದಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ವಧುವಿನ ಕಡೆಯವರು ವರನಿಗೆ ಸ್ನಾನ ಮಾಡಿಸಿ. ತಂದಂತಹ ವಸ್ತುಗಳನ್ನು ವರನಿಗೆ ಕೊಟ್ಟು ನಮಾಜಿಗೆ ಸಿದ್ಧತೆ ಮಾಡಿಸಿಕೊಂಡು ನಮಾಜ್‍ಗೆ ಮಸೀದಿಗೆ ಕರೆದುಕೊಂಡು ಹೋಗುತ್ತಾರೆ. ವಧುವಿಗೂ ಕೂಡ ವರನಿಗೆ ಮಾಡಿದ ಎಲ್ಲಾ ಶಾಸ್ತ್ರಗಳನ್ನು ವರನ ಕಡೆಯವರು ಮಾಡುತ್ತಾರೆ. ನಿಖಾದ(ಮುಹೂರ್ತ) ಸಮಯ ಹತ್ತಿರ ಇದೆ ಎನ್ನುವ ಮುಂಚಿತವಾಗಿ ವಧುವಿನ ಕಡೆಯವರು ಮುಲ್ಲಾನ ನೇತೃತ್ವದಲ್ಲಿ ವರನ ಬಿಡದಿ ಮನೆಗೆ ಹೋಗಿ ನಿಖಾಕ್ಕೆ ವರನನ್ನು ಸಿದ್ಧಗೊಳಿಸಲು ತೊಡಗುತ್ತಾರೆ. ತಂದಂತಹÀ ವಸ್ತುಗಳಾದ ಉಡುಪುಗಳು, ಸಹೇರಾ, ಗಜ್‍ರೆಗಳನ್ನು ಒಂದೊಂದೆ ವರನಿಗೆ ತೊಡಿಸುತ್ತಾರೆ. ನಂತರ ವಧುವಿನ ತಲೆಗೆ ಪೇಟ ಕಟ್ಟಿ ಸಹೇರಾ, ಗಜ್‍ರೆಗಳನ್ನು ವಿವಾಹಿತ ಪುರುಷರ ತಲೆಗೆ ಮುಟ್ಟಿಸುವರು. ಇದನ್ನು ಹೂವಿನಿಂದ ತಯಾರಿಸಿರುತ್ತಾರೆ. ಅಲ್ಲದೆ ಇಸ್ಲಾಂನ ಚಿಹ್ನೆಗಳನ್ನು ಸಹೇರಾದ ಮೇಲೆ ಹಾಕಿರುತ್ತಾರೆ. ಇದಕ್ಕೆ ಸೇರ್‍ಬನ್ನವೆಂದು ಪಿಂಜಾರರು ಕರೆಯುತ್ತಾರೆ. ಇದು ವರನ ತಲೆಯಿಂದ ಪಾದದವರೆಗೂ ಮುಚ್ಚಿರುತ್ತದೆ. ಇದನ್ನು ಮುಲ್ಲಾ ಇತರೆ ವಿವಾಹಿತರು ಗಂಡಸರು ಸೇರಿ ಕಟ್ಟುತ್ತಾರೆ. ಸಹೇರ ಅಥವಾ ಸೇರ್‍ಬನ್ನ ಕಟ್ಟಿದ ಮೇಲೆ ವರನನ್ನು ನಿಖಾ ಮಾಡುವ ಸ್ಥಳಕ್ಕೆ ಕರದೊಯ್ಯುವರು. ಹೀಗೆ ಕರೆದೊಯ್ಯುವಾಗ ವಧುವಿನ ಸೋದರರು ಹಾಗೂ ಗೆಳೆಯರು ವರನನ್ನು ನಿಖಾದ ಸ್ಥಳಕ್ಕೆ ಹೋಗದಂತೆ ಒನಕೆ ಅಡ್ಡ ಹಿಡಿದು ತಡೆಯುತ್ತಾರೆ. ವರ ಹಾಗೂ ವರನ ಕಡೆಯವರು ಒನಕೆಯನ್ನು ದಬ್ಬಿಕೊಂಡು ಹೋಗಲು ಪ್ರಯತ್ನಿಸಿ ಕೊನೆಗೆ ವಿಫಲರಾಗಿ ವರರು ವಧುವಿನ ಸೋದರರಿಗೆ ಕಾಣಿಕೆ ನೀಡಿ ಬಿಡಿಸಿಕೊಂಡು ಹೋಗುತ್ತಾನೆ(ಪಿಂಜಾರರಲ್ಲಿ ಈ ಆಚರಣೆ ಮುಖ್ಯವಾಗಿ ಕಂಡು ಬರುತ್ತದೆ). ನಂತರ ವಧುವಿನ ಸೋದರಿ ವರನಿಗೆ ಆರತಿ ಎತ್ತುತ್ತಾಳೆ(ಪಿಂಜಾರರಲ್ಲಿ ಈ ಆಚರಣೆ ಕಂಡುಬರುತ್ತದೆ) ಇದಕ್ಕೆ ಕೃತಘ್ಞನಾದ ವರ ಕಾಣಿಕೆ ನೀಡುತ್ತಾನೆ. ನಂತರ ನಿಖಾ ಮಾಡುವ ಜಾಗಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ. ವರನಂತೆ ವಧುವಿಗೂ ಶಾಸ್ತ್ರ ಮಾಡುತ್ತಾರೆ. ವಧುವಿಗೂ ಕೂಡ ಸಹೇರ ಅಥವಾ ಸೇರ್‍ಬನ್ನ ಕಟ್ಟುತ್ತಾರೆ. ಇದು ಪುರುಷನ ಸೇರ್‍ಬನ್ನಕ್ಕಿಂತ ಚಿಕ್ಕದಿರುತ್ತದೆ. ಬೇರೆ ಧರ್ಮಗಳಲ್ಲಿ ವಿವಾಹ ಸಂದರ್ಭದಲ್ಲಿ ವಧು-ವರನನ್ನು ಜೊತೆಗೆ ಕೂರಿಸಿ. ವರನಿಂದ ವಧುವಿಗೆ ತಾಳಿ ಕಟ್ಟಿಸುವ ರೀತಿ ಈ ಧರ್ಮದಲ್ಲಿ(ಪಿಂಜಾರ ಸಮುದಾಯ ಒಳಗೊಂಡತೆ) ವಿವಾಹ ಮಾಡುವುದಿಲ್ಲ. ಹಾಗೂ ಈ ಧರ್ಮದಲ್ಲಿ ವಧು ವರನಿಗೆ ಬೇರೆ ಬೇರೆ ಕಡೆ ನಿಖಾ ನಡೆಯುತ್ತದೆ. ನಿಖಾದ ಸಂದರ್ಭದಲ್ಲಿ ವರನು ವಧುವಿಗೆ ಇಂತಿಷ್ಟು ತೆರ ಕೊಡುವುದಾಗಿ ಹಾಗೂ ಈ ಮದುವೆಗೆ ನನ್ನ ಒಪ್ಪಿಗೆ ಇದೆಯೆಂದು ಅಲ್ಲಿ ನೆರೆದ ಎಲ್ಲರಿಗೂ ಹೇಳಿ ವಧುವಿನ ಕಡೆಯ ಮಸೀದಿಯ ಮುಖ್ಯಸ್ಥನ ಬಳಿಯಿರುವ ದಾಖಲಾತಿ ಪುಸ್ತಕದಲ್ಲಿ ಬರೆಸುತ್ತಾನೆ. ನಂತರ ವರನಿಗೆ ಮುಲ್ಲಾನ ನೇತೃತ್ವದಲ್ಲಿ ಮದುವೆ ಆಗುತ್ತದೆ. ಹಾಗೆ ವಧುವಿಗೂ ಕೂಡ ವರನ ಕಡೆಯವರು ತಂದ ಹಸಿರು ಸೀರೆ ತೊಡಿಸಿ, ಹೂವು ಮುಡಿಸಿ, ಒಡವೆ, ಸಹೇರ ಇತರೆ ವಸ್ತುಗಳನ್ನು ವರನ ಹಿರಿಯ ಮುತ್ತೈದೆಯರು ಹಾಕಿ ಮೆಲ್ಲಗೆ ನಡೆಸಿಕೊಂಡು ಬಂದು ಮಸ್ಕತ್ ಮೇಲೆ ಕೂಡಿಸಿ. ವರನ ತಾಯಿ ಅಥವಾ ತಾಯಿ ಸ್ಥಾನದಲ್ಲಿರುವವರು ವಧುವಿಗೆ ಲಚ್ಛವನ್ನು(ತಾಳಿ) ಕಟ್ಟುವಳು. ಈ ರೀತಿ ತಾಳಿ ಧಾರಣೆಯನ್ನು ಇಸ್ಲಾಂ ಧರ್ಮದಲ್ಲಿ ಮಾತ್ರ ನೋಡಬಹುದು. ಇದು ಈ ಧರ್ಮದ ವಿಶೇಷತೆಯಾಗಿದೆ. ಇದೆ ರೀತಿಯಲ್ಲಿ ಚಿತ್ರದುರ್ಗದ ಪಿಂಜಾರರನ್ನು ಒಳಗೊಂಡಂತೆ. ಪ್ರಪಂಚದ ಎಲ್ಲಾ ಇಸ್ಲಾಂ ಸಮುದಾಯಗಳಲ್ಲೂ ಈ ಮೇಲಿನಂತೆ ವಿವಾಹ ಮಾಡುತ್ತಾರೆ.

ವಲೀಮಾ (ಮಾಮನೆ ಶಾಸ್ತ್ರ)

ವಿವಾಹ ಮುಗಿದ ಮರುದಿನ ವರನ ಊರಿನಲ್ಲಿ ವಲೀಮಾ ಮಾಡಲಾಗುತ್ತದೆ. ಪಿಂಜಾರಲ್ಲಿ ವಲೀಮಾಕ್ಕೆ ‘ಮಾಮನೆ’ಯೆಂದು ಕರೆಯುತ್ತಾರೆ. ವಲೀಮಾಕ್ಕೆ ವಧುವಿನ ಕಡೆಯವರು ಹಾಗೂ ನೆಂಟರಿಷ್ಟರೆಲ್ಲ ಬರುತ್ತಾರೆ. ಈ ಶಾಸ್ತ್ರದಲ್ಲಿ ವಧು-ವರರನ್ನು ಜೊತೆಗೆ ಕೂರಿಸಿ ಬಂದಂತಹ ಅತಿಥಿಗಳು ವಧು-ವರರ ಕೆನ್ನೆಗೆ ಹಾಗೂ ಹಸ್ತಕ್ಕೆ ಅರಿಶಿಣ ಹಚ್ಚಿ ಎಲೆ-ಅಡಿಕೆ ಕೊಟ್ಟು ಉಡುಗರೆಯನ್ನು ಕೊಡುವ ಸಂಪ್ರದಾಯವಿದೆ. ಇದೆ ಶಾಸ್ತ್ರದಲ್ಲಿ ವಧು-ವರರ ನಡುವೆ ಕರ್ಜಿಕಾಯಿ ಮಾಡುವ ಮನರಂಜನಾ ಶಾಸ್ತ್ರವೂ ನಡೆಯುತ್ತದೆ. ಇಲ್ಲಿಯೂ ವಧು ವರನ ಕಡೆಗೆ ಒಂದೊಂದು ಗುಂಪು ಇರುತ್ತದೆ. ಈ ಶಾಸ್ತ್ರ ಮುಗಿದ ಮೇಲೆ ಬಂದಂತಹ ಬಂಧುಬಳಗದವರಿಗೆ ಮಾಂಸದ ಊಟ ಮಾಡಿಸಿರುತ್ತಾರೆ(ಪಿಂಜಾರರು ಗೋವಿನ ಮಾಂಸ ತಿನ್ನುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸೇವಿಸುತ್ತಿದ್ದಾರೆ. ಆದ್ದರಿಂದ ಹೆಚ್ಚು ಕೋಳಿ ಅಥವಾ ಕುರಿ ಮಾಂಸವನ್ನು ಎಲ್ಲಾ ಕಾರ್ಯಗಳಿಗೂ ಉಪಯೋಗಿಸುತ್ತಾರೆ.)

ಇಲ್ಲಿಯವರೆಗೂ ಪಿಂಜಾರ ಸಮುದಾಯದಲ್ಲಿ ಮಾಡುವ ವಿವಾಹ ಆಚರಣೆಗಳ ಬಗ್ಗೆ ನೋಡಿದೆವು. ಮುಂದೆ ಈ ಸಮುದಾಯಗಳಲ್ಲಿ ಮರಣೋತ್ತರ ಮಾಡುವ ಧಾರ್ಮಿಕ ಆಚರಣೆ ಕುರಿತು ನೊಡೋಣ.

ತಸ್ಬೀ

             ಇಸ್ಲಾಂ ಧರ್ಮದಲ್ಲಿ ಮೃತಪಟ್ಟವರ ಶವವನ್ನು ತುಂಬ ಪವಿತ್ರವೆಂದು ಕಾಣುತ್ತಾರೆ. ಮೃತಪಟ್ಟ ವ್ಯಕ್ತಿಯ ಶವದ ಮುಂದೆ ಕುಳಿತು ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಮುಲ್ಲಾ ಜೊತೆಗೆ ಮನೆಯವರು, ಸಂಬಂಧಿಕರು ತಸ್ಬೀ ಪಠಿಸುತ್ತಾರೆ. ಖುರಾನ್ ಓದುತ್ತಾರೆ. ಹೀಗೆ ಮಾಡುವುದರಿಂದ ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆಂಬ ನಂಬಿಕೆಯಿದೆ.

ಜನಾಝದಲ್ಲಿ ಮಾಯ್ಯಾತ್ ಇಡುವ ಶಾಸ್ತ್ರ :

ಮೃತಪಟ್ಟ ಸುದ್ದಿಯನ್ನು ಮಸೀದಿಗೆ ತಿಳಿಸಿ, ಮಸೀದಿಯಿಂದ ‘ಜನಾಝ’ ತರುತ್ತಾರೆ. ‘ಜನಾಝ’ ಎಂದರೆ ಇಸ್ಲಾಂನಲ್ಲ್ಲಿ ಶವವನ್ನು ತೆಗೆದುಕೊಂಡು ಹೋಗಲು ಬಳಸುವ ಸಾಧನ. ಇದನ್ನು ಪಿಂಜಾರರು ‘ಡೊಲಿ’ ಎಂದು ಸಹ ಕರೆಯುತ್ತಾರೆ. ‘ಮಯ್ಯಾತ್’ ಎಂದರೆ ಪವಿತ್ರವಾದ ಮೃತಪಟ್ಟವರ ಶವ ಎಂದರ್ಥ. ಮಯ್ಯಾತ್‍ನ್ನು ತುಂಬ ಪವಿತ್ರವೆಂದು ಕಾಣಲಾಗುತ್ತದೆ. ಮಯ್ಯಾತ್‍ನ್ನು ಹೊಯ್ಯಲು ತಂದಿರುವ ಜನಾಝವನ್ನು ಶುದ್ಧಗೊಳಿಸಿ ಇಡಲಾಗುತ್ತದೆ. ಮುಲ್ಲಾ ಬಂದು ಶವವನ್ನು ಬೇವಿನ ಮತ್ತು ದಾಳಿಂಬೆ ಸೊಪ್ಪು ಹಾಗೂ ಇತರೆ ಸುಗಂಧದ ಸೋಪುಗಳನ್ನು ಕಾಯಿಸಿದ ನೀರಲ್ಲಿ ಬೆರಸಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಶುಚಿಗೊಳಿಸಲು ಸಿದ್ದನಾಗುತ್ತಾನೆ. ಶವವನ್ನು ತೊಳೆಯಲು ಗುಂಡಿಯನ್ನು ತೆಗೆಯಲಾಗುತ್ತದೆ. ಆ ಗುಂಡಿ ಮೇಲೆ ಹಲಗೆಯನ್ನು ಹಾಸಿ ಅದರ ಸುತ್ತ ಬಟ್ಟೆಯನ್ನು ಕಟ್ಟಲಾಗುತ್ತದೆ. ಇದಕ್ಕೆ ‘ಲಹಾದ್’(ಮೃತದೇಹ ತೊಳೆಯಲು ನಿರ್ಮಿಸುವ ಗುಂಡಿ ಮತ್ತು ಸ್ಥಳ) ಎಂದು ಕರೆಯಲಾಗುತ್ತದೆ. ಮೃತದೇಹವನ್ನು ಮುಲ್ಲಾ ‘ಲಹಾದ್’ ಮೇಲೆ ಮಲಗಿಸಿ ಮೃತಪಟ್ಟವರ ತಂದೆ ಅಥವಾ ಹಿರಿಯ ಮಗನಿಂದ ಕಲ್ಮಾವನ್ನು ಹೇಳಿಸುತ್ತ ಸ್ನಾನ ಮಾಡಿಸುತ್ತಾನೆ. ಮೃತ ಪಟ್ಟವರು ಹೆಣ್ಣಾಗಿದ್ದಾಗ ಮೃತರ ತಾಯಿ ಅಥವಾ ಹಿರಿಯ ಮಗಳಿಂದ ಸ್ತ್ರೀಯರ ಮುಂದಾಳತ್ವದಲ್ಲಿ ಕಾರ್ಯ ಮಾಡಲಾಗುತ್ತದೆ. ಲಹಾದ್ ಸುತ್ತ ಅಡ್ಡವಾಗಿ ಬಟ್ಟೆ ಹಿಡಿದಿರುತ್ತಾರೆ. ಸ್ನಾನ ಮಾಡಿಸಿದ ಮೇಲೆ ಶವನ್ನು ಜನಾಝದಲ್ಲಿಟ್ಟು ದೇಹಕ್ಕೆ ‘ಕಫನ್’ ಸುತ್ತಲಾಗುತ್ತದೆ. ‘ಕಫನ್’ ಎಂದರೆ ಮೃತ ದೇಹಕ್ಕೆ ಸುತ್ತುವ ಬಿಳಿ ಬಟ್ಟೆ ಎಂದರ್ಥ. ಕಫನ್ ಗಂಡಿಗೆ ಹನ್ನೆರೆಡು ಗಜ, ಹೆಣ್ಣಿಗೆ ಹದಿನಾರು ಗಜ ಬಳಸುತ್ತಾರೆ. ಕಫನ್‍ನ್ನು ಶವದ ಸೊಂಟದಿಂದ ಕಾಲಿನವರೆಗೂ ಪುನಃ ಸೊಂಟದಿಂದ ತಲೆಯವರೆಗೂ ಕಟ್ಟಿ ಕುತ್ತಿಗೆಯಿಂದ ಎದೆಯ ಸುತ್ತ, ತಲೆಯ ಸುತ್ತ ಕಫನ್‍ನ್ನು ಸುತ್ತಿ ಕಾಲಿನ ಹತ್ತಿರ ಜುಟ್ಟಿನ ಆಕಾರದಲ್ಲಿ ಕಟ್ಟಲಾಗುತ್ತದೆ. ನಂತರ ಸುಗಂಧ ದ್ರವ್ಯಾದಿಗಳನ್ನು ಲೇಪಿಸಿ, ಕಣ್ಣಿಗೆ ಸುರ್ಮಾ ಹಚ್ಚಿ ಬಂದವರಿಗೆ ಅಂತಿಮ ದರ್ಶನ ಮಾಡಲು ಮುಖದ ಕಡೆ ಹಾಗೆ ಬಿಡುತ್ತಾರೆ. ಎಲ್ಲರೂ ನೋಡಿದ ಮೇಲೆ ಮೃತದೇಹದ ಮುಖವನ್ನು ಮುಚ್ಚಿ ತಲೆಗೆ ಕಟ್ಟಿ ಜನಾಝವನ್ನು ಮುಚ್ಚುವ ಹೂವಿನ ಹೊದಿಕೆಯಿಂದ ಸಿಂಗರಿಸಿದ್ದ ಜನಾಝದ ಮುಚ್ಚಳವನ್ನು ಮುಚ್ಚುತ್ತಾರೆ. ನಂತರ ಜನಾಝದಲ್ಲಿಟ್ಟ ಮಯ್ಯಾತ್‍ನ್ನು ಮೃತಪಟ್ಟವರ ಗಂಡ ಅಥವಾ ಗಂಡು ಮಕ್ಕಳು, ಅಣ್ಣತಮ್ಮಂದಿರು ಅಲ್ಹಾನನ್ನು ಸ್ಮರಿಸುತ್ತ ಮೊದಲು ಮೈಯತ್ತನ್ನು ಎತ್ತುತ್ತಾರೆ. ನಂತರ ಎಲ್ಲರೂ ಅಲ್ಹಾನ್ನು ಸ್ಮರಿಸುತ್ತಾ ಒಬ್ಬೊಬ್ಬರಾಗಿ ಹೆಗಲು ಕೊಡುತ್ತಾ ಈದ್ಗಾ ಮೈದಾನಕ್ಕೆ ಮೈಯತ್ತನ್ನು ಕೊಂಡೊಯ್ಯುತ್ತಾರೆ. ಈ ರೀತಿ ಹೆಗಲು ಕೊಡುವುದು ಇಸ್ಲಾಂನಲ್ಲಿ ಪವಿತ್ರವಾದ ಕೆಲಸ ಎಂಬ ನಂಬಿಕೆ ಇದೆ. ಅದು ಪಿಂಜಾರ ಸಮುದಾಯದಲ್ಲಿಯು ಚಾಲ್ತಿಯಲ್ಲಿದೆ. ಮಹಿಳೆಯರು ಈದ್ಗಾ ಮೈದಾನಕ್ಕೆ ಹೋಗುವುದಿಲ್ಲ. ಆದ್ದರಿಂದ ಮನೆಯ ಮುಂದೆ ಮೃತ ದೇಹವನ್ನು ತೊಳೆಯಲು ನಿರ್ಮಿಸಿದ್ದ, ‘ಲಹಾದ್’ ಗುಂಡಿಯಲ್ಲಿ ಹೆಂಗಸರು ಮಣ್ಣನ್ನು ಹಾಕುತ್ತಾರೆ. ಮೃತದೇಹವನ್ನು ಈದ್ಗಾ ಮೈದಾನದಲ್ಲಿ ದಫನ್ ಮಾಡಲು ‘ಮನೆ’(ಕುಣಿ ಅಥವಾ ಗುಂಡಿ) ಮಾಡಲಾಗಿರುತ್ತದೆ. ಮೃತದೇಹವನ್ನು ಮನೆಯೊಳಗಿಡುವ ಮುಂಚೆ ಮೃತದೇಹದ ಮುಖವನ್ನು ಇನ್ನೊಮ್ಮೆ ಎಲ್ಲಾರಿಗೂ ತೋರಿಸಲಾಗುತ್ತದೆ. ಮುಲ್ಲಾ ಮೃತ ದೇಹವನ್ನು ಮನೆಯೊಳಗೆ ಇಟ್ಟು ದೇಹವನ್ನು ಕಾಬ ದಿಕ್ಕಿಗೆ ಮುಖಮಾಡುತ್ತಾನೆ. ನಂತರ ದಫನ್ ಮಾಡಲು ಅಲ್ಲಾನನ್ನು ಸ್ಮರಿಸುತ್ತ ಸ್ವಲ್ಪ ಸ್ವಲ್ಪ ಮಣ್ಣುನ್ನು ಅಲ್ಲಿ ನೆರೆದಿದ್ದವರು ಮುಲ್ಲಾನಿಗೆ ಕೊಡುತ್ತಾರೆ. ಆತ ಸುರಕ್ಷಿತವಾಗಿ ಧಪನ್ ಮಾಡುತ್ತಾನೆ. ಧಪನ್ ಮುಗಿದ ನಂತರ ಸಮಾಧಿ ಮೇಲೆ ಜನಾಝದ ಮೇಲಿನ ಹೂವನ್ನು ಹೊದಿಸುತ್ತಾರೆ. ಶವಸಂಸ್ಕಾರ ಮುಗಿದ ಮೇಲೆ ಈದ್ಗಾ ಮೈದಾನದಲ್ಲಿಯೆ ಎಲ್ಲರೂ ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಬ ದಿಕ್ಕಿಗೆ ನಿಂತು ನಮಾಜ್ ಮಾಡಿ ಹೊರಡುತ್ತಾರೆ.

ಧಪನ್ ಮಾಡಿದ ಮೇಲೆ ಮಾಡುವಂತಹ ಶಾಸ್ತ್ರಗಳು

 (ಜೀಯಾರತ್, ನೌರೋಜ್ ಪಾತೇಹ, ಚಹೇಲಂ, ಬರ್ಸಿ)

ಶವಸಂಸ್ಕಾರದ ಮೂರು ದಿನಗಳ ನಂತರ ‘ಜೀಯಾರತ್’ ಎಂಬ ತಿಥಿಕರ್ಮವನ್ನು ಮಾಡುತ್ತಾರೆ. ಪಿಂಜಾರರು ಇದನ್ನು ‘ಮೂರುದಿವಸ’ ಎಂದು ಕರೆಯುತ್ತಾರೆ. ಇದು ಹಿಂದೂ ಧರ್ಮದಲ್ಲಿ ಮಾಡುವ ಮೂರು ದಿನದ ಕಾರ್ಯವನ್ನು ಹೋಲುತ್ತದೆ. ಮೂರನೇ ದಿನದ ಬೆಳಗ್ಗೆ ಚೀಲಗಟ್ಟಲೇ ಮಂಡಕ್ಕಿ, ಕಡೆ,್ಲ ಬೆಲ್ಲ, ಕೊಬ್ಬರಿ ಚೂರು, ಉತ್ತತ್ತಿ, ಪೆಪ್ಪರ್‍ಮೆಂಟು ಹಾಗೂ ವಿವಿಧ ಫಲಗಳನ್ನು ಕತ್ತರಿಸಿ ಎಲ್ಲವನ್ನು ಬೆರೆಸಿ ಮುಲ್ಲಾನಿಂದ ಫಾತೇ ಮಾಡಿಸುತ್ತಾರೆ. ಇದನ್ನು ‘ಮೇವ’ ಎಂದು ಸಹ ಕರೆಯುತ್ತಾರೆ. ಹೀಗೆ ಬೆರೆಸಿದ ಮೇವವನ್ನು ಇಟ್ಟುಕೊಳ್ಳಬಾರದೆಂಬ ನಂಬಿಕೆಯಿದÉ. ಆದ್ದರಿಂದ ಎಲ್ಲರಿಗೂ ಹಂಚಿ ಖಾಲಿ ಮಾಡಲಾಗುತ್ತದೆ. ಗಂಡಸರೆಲ್ಲರು ಫಾತೇ ಮಾಡಿದ್ದ ಹೂವು, ಗಂಧವನ್ನು ಸಮಾಧಿ ಸ್ಥಳಕ್ಕೆ ಬೆಳಗ್ಗೆ ಹೋಗಿ ಸಮಾಧಿ ಮೇಲಿಟ್ಟು ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾರೆ. ಈ ಕಾರ್ಯ ಮುಗಿದ ಮೇಲೆ 9ನೇ ದಿನದಲ್ಲಿ ‘ನೌರೋಜ್‍ಕೆ ಫಾತೇಹಾ’ ಕಾರ್ಯ ಮಾಡಲಾಗುತ್ತದೆ. ಪಿಂಜಾರರು ಇದನ್ನು ‘ಒಂಭತ್ತನೆ ದಿನದ್ದು ದಿವಸ’ ಎಂದು ಕರೆಯುತ್ತಾರೆ. ಈ ದಿನ ಎಂತಹ ಬಡವನಾಗಿದ್ದರು ಸಹ ಕುರಿ ಕೊಯ್ದು ಅಡುಗೆ ಮಾಡಿಸಿ ಎಲ್ಲ ಸಂಬಂಧಿಕರನ್ನು ದಾವತ್ತಿಗೆ ಕರೆಯಲೇ ಬೇಕು. ಅಡುಗೆಯನ್ನು ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಮುಲ್ಲಾನಿಂದ ಫಾತೇ ಮಾಡಿಸುತ್ತಾರೆ. ಬಂಧುಗಳನ್ನು ದಾವತ್ತಿಗೆ ಕರೆಯಲಾಗುತ್ತದೆ. ಬಂದಂತಹ ಬಂಧುಗಳು ಅತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ‘ಲೋಬಾನ’ ಹಾಕುತ್ತಾರೆ. ಎಲ್ಲರೂ ಕುರಿ ಮಾಂಸದ ಊಟ ಮಾಡುತ್ತಾರೆ. ಮರು ದಿನ ಬೆಳಗ್ಗೆ ವ್ಯಕ್ತಿಯ ಕುಟುಂಬದವರು ಮೃತ ವ್ಯಕ್ತಿಯ ಸಮಾಧಿ ಬಳಿ ಹೋಗಿ ಪ್ರಾರ್ಥಿಸಿ ಗಂಧ, ಪುಷ್ಪ ಸಮರ್ಪಿಸಿ ಬರುತ್ತಾರೆ.

ಚಾಹೇಲಂ

‘ಚಾಹೇಲಂ’ ಆಚರಣೆಯನ್ನು ವ್ಯಕ್ತಿ ಮರಣ ಹೊಂದಿ ನಲವತ್ತು ದಿನಗಳಾದ ಮೇಲೆ ಮಾಡುತ್ತಾರೆ. ಇದನ್ನು ಪಿಂಜಾರ ಸಮುದಾಯದವರು ‘ನಲವತ್ತನೇ ದಿನದ ದಿವಸ’ ಎಂದು ಕರೆಯುತ್ತಾರೆ. ಈ ದಿನ ಕುರಿಯ ಮಾಂಸದ ಅಡುಗೆ ಮಾಡಿಸಲಾಗುತ್ತದೆ. ಬಡವನಾಗಿದ್ದರೂ ಸಹ ಕುರಿ ಕೊಯ್ದು ಆಚರಣೆಯನ್ನು ಮಾಡಲೇಬೇಕು. ಈ ದಿನ ಸತ್ತ ವ್ಯಕ್ತಿಯನ್ನು ಮಲಗಿಸಿದ್ದ ಸ್ಥಳದಲ್ಲಿ ಅಥವಾ ಜೀವ ಹೋದ ಸ್ಥಳದಲ್ಲಿ ಮಾಡಿರುವ ಅಡುಗೆಯನ್ನು ದೊಡ್ಡದಾದ ಹರಿವಾಣದಲ್ಲಿ ಮಾಂಸದ ತುಂಡುಗಳು ಮೇಲಿರುವಂತೆ ತೆಗೆದಿಡುತ್ತಾರೆ. ಸತ್ತ ವ್ಯಕ್ತಿ ಬಳಸುತ್ತಿದ್ದ ವಿವಿಧ ಆಹಾರ ಪಾನೀಯಗಳನ್ನು ಹಾಗೂ ‘ಊದ್‍ದಾನಿ’ಯಲ್ಲಿ ಕೆಂಡವನ್ನು ತೆಗೆದಿಡಲಾಗುತ್ತದೆ. ಮುಲ್ಲಾನಿಂದ ಫಾತೇ ಮಾಡಿಸಿ ನಂತರ ಉದ್‍ದಾನಿಯಲ್ಲಿ ತೆಗೆದ ಕೆಂಡಕ್ಕೆ ಲೋಬಾನ್ ಹಾಕುತ್ತಾರೆ. ಲೋಬನ್ ಹಾಕಿದ ಮೇಲೆ ಊಟ ಮಾಡಲಾಗುತ್ತದೆ. ಒಂದು ಮನೆಯಿಂದ ವಿವಾಹವಾಗಿ ಹೋದ ಹೆಣ್ಣು ಮಕ್ಕಳ ಅಪ್ಪ, ಅಮ್ಮ ಅಥವಾ ಗಂಡ ಯಾರೇ ಮೃತಪಟ್ಟರು ತವರು ಮನೆಯವರು ಇವರಿಗೆ ಹೊಸ ಬಟ್ಟೆ ತರಬೇಕು. ಅದೇ ರೀತಿ ಇತರೆ ಸಂಬಂಧಿಕರು ಕೂಡ ತರುವ ಸಂಪ್ರದಾಯವಿದೆ. ಹಾಗೆ ಗಂಡಸರಿಗೂ ಸಹ ಅವರ ಅಪ್ಪ, ಅಮ್ಮ ಅಥವಾ ಹೆಂಡತಿ ಮೃತ ಪಟ್ಟಾಗ ಅವನ ಸೋದರಿಯರು ಹಾಗೂ ಸಂಬಂಧಿಗಳು ತರುವ ಸಂಪ್ರದಾಯವಿದೆ. ಚಾಹೇಲಂ ಮುಗಿದ ಮರುದಿನ ಬೆಳಗ್ಗೆ ಗಂಡಸರು ಸಮಾಧಿ ಬಳಿ ಹೋಗಿ ಗಂಧ, ಪುಷ್ಪಗಳನ್ನು ಸಮರ್ಪಿಸಿ ಆತ್ಮಕ್ಕೆ ಸ್ವರ್ಗಪ್ರಾಪ್ತಿಯಾಗಲೆಂದು ಅಲ್ಹಾನಲ್ಲಿ ಪ್ರಾರ್ಥಿಸಿ ಬರುತ್ತಾರೆ. ಚಾಹೇಲಂ ಅಥವಾ ನಲವತ್ತನೇ ದಿನದ ದಿವಸ ಮುಗಿದ ಮೇಲೆ ‘ಒಂದು ವರ್ಷದ ದಿವಸ’ವನ್ನು ಪಿಂಜಾರ ಸಮುದಾಯದಲ್ಲಿ ಮಾಡಲಾಗುತ್ತದೆ. ಇದಕ್ಕೆ ‘ಬರ್ಸಿ’ ಎಂದು ಕರೆಯಲಾಗುತ್ತದೆ.

ಹೀಗೆ ಇಸ್ಲಾಂ ಸಮುದಾಯಗಳಲ್ಲಿ ಒಂದಾದ ಪಿಂಜಾರ ಸಮುದಾಯವು ಮಾಡುವ ಕೆಲವೊಂದು ಆಚರಣೆಗಳು ಇಸ್ಲಾಂ ಧರ್ಮಕ್ಕೆ ಹೋಲುವಂತೆಯೂ, ಇನ್ನೂ ಕೆಲವೊಂದು ಕಡೆ ಸ್ಥಳೀಯ ಧರ್ಮದ ಆಚರಣೆಗಳನ್ನು ಹೊಲುವಂತೆಯೂ ಕಾಣುತ್ತವೆ. ಈ ಸಮುದಾಯ ಅಷ್ಟೇಯಲ್ಲದೆ ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳು ಒಂದಿಲ್ಲೊಂದು ರೀತಿಯಲ್ಲಿ ತನ್ನ ಧರ್ಮಕ್ಕೆ ಒಳಪಟ್ಟವರ ಮೇಲೆ ತನ್ನ ನಿಯಂತ್ರವನ್ನು ಸಾಧಿಸಿ, ಅವರ ಮೇಲೆ ಅನೇಕ ಆಚರಣೆಗಳ ಸವಾರಿ ಮಾಡುತ್ತಿರುತ್ತವೆ. ಅದು ಜೀವನ ಆರಂಭ ಪೂರ್ವದಿಂದ ಇಡಿದು ಜೀವನ ಅಂತ್ಯೋತ್ತರದವರೆಗೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಪೂರಕವಾಗಿ ಪಿಂಜಾರ ಸಮುದಾಯ ಆಚರಣೆಗಳನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

ಪರಾಮರ್ಶನ ಗ್ರಂಥಗಳು :

  1. ಡಾ. ಬಿ.ಸಿ. ದಾದಾಪೀರ್, 2011, ಪಿಂಜಾರರ ಸಂಸ್ಕøತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು 560002.
  2. ಡಾ. ಷಹಸೀನಾಬೇಗಂ, 2000, ಕರ್ನಾಟಕ ಮುಸ್ಲಿಂ ಜಾನಪದ, ಕನ್ನಡ ಪುಸ್ತಕ ಪ್ರಾಧಿಕಾರ,   ಬೆಂಗಳೂರು-560018.

ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮಾಹಿತಿ, ಸಲಹೆ, ಸಹಕಾರ ನೀಡಿದವರು

  1. ದಿಲ್ ಷಾದ್ ಬೇಗಂ, ಹಿರೇಕಬ್ಬಿಗೆರೆ(ಗ್ರಾ), ಚಿತ್ರದುರ್ಗ & ಜಿಲ್ಲೆ.
  2. ಬಾಬುಸಾಬ್, ಹಿರೇಕಬ್ಬಿಗೆರೆ(ಗ್ರಾ), ಚಿತ್ರದುರ್ಗ ತಾ & ಜಿಲ್ಲೆ.
  3. ಹೊನ್ನೂರ್ ಸಾಬ್, ಆಡವಿ ಗೊಲ್ಲರಹಳ್ಳಿ(ಗ್ರಾ),  ಚಿತ್ರದುರ್ಗ ತಾ & ಜಿಲ್ಲೆ.
  4. ಹುಸೇನ್ ಸಾಬ್, ಮಳಲಕೆರೆ(ಗ್ರಾ), ದಾವಣಗೆರೆ ತಾ & ಜಿಲ್ಲೆ.
  5. ಚಾಂದ್ ಪೀರ್, ಮಳಲಕೆರೆ(ಗ್ರಾ), ದಾವಣಗೆರೆ ತಾ & ಜಿಲ್ಲೆ.
  6. ಅಂಜುಮ್ ಸಿ., ಮಳಲಕೆರೆ(ಗ್ರಾ), ದಾವಣಗೆರೆ ತಾ & ಜಿಲ್ಲೆ.
  7. ಪರ್ವಿನ್, ಯಳನಾಡು(ಗ್ರಾ), ಹಿರಿಯೂರು ತಾ. ಚಿತ್ರದುರ್ಗ ಜಿಲ್ಲೆ.
  8. ಜಮೀಲಮ್ಮ, ಆಡವಿ ಗೊಲ್ಲರಹಳ್ಳಿ(ಗ್ರಾ), ಚಿತ್ರದುರ್ಗ ತಾ & ಜಿಲ್ಲೆ.
  9. ಗೌಸ್ ಪೀರ್, ಹಿರೇಕಬ್ಬಿಗೆರೆ(ಗ್ರಾ), ಚಿತ್ರದುರ್ಗ ತಾ & ಜಿಲ್ಲೆ.
  10. ರೇಷ್ಮಾ, ಹಿರಿಯೂರು, ಚಿತ್ರದುರ್ಗ ತಾ & ಜಿಲ್ಲೆ.
  11. ನಬೀಸಾಬ್ ಟಿ., ಆಡವಿ ಗೊಲ್ಲರಹಳ್ಳಿ(ಗ್ರಾ), ಚಿತ್ರದುರ್ಗ ತಾ & ಜಿಲ್ಲೆ.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal