Tumbe Group of International Journals

Full Text


ತಿರುಕ ಅವರ ಧರ್ಮ ಕುರಿತ ಲೋಕದೃಷ್ಟಿಯ ನೆಲೆ

ಎನ್. ಮಮತ

ಕನ್ನಡ ಉಪನ್ಯಾಸಕರು

ಬಾಪೂಜಿ ಪದವಿ ಪೂರ್ವ ಕಾಲೇಜು

ಭರಮಸಾಗರ, ಚಿತ್ರದುರ್ಗ ತಾಲ್ಲೂಕು

ಮೊ: 9483320070        Email: tnghhalli@gmail.com

ಪ್ರಸ್ತಾವನೆ

    ಧರ್ಮ ಮತ್ತು ಆಧ್ಯಾತ್ಮದ ವಿಚಾರಗಳು ಸಾತ್ವಿಕವಾಗಿ ಮತ್ತು ತಾತ್ವಿಕವಾಗಿ ಇದ್ದಾಗ ಜನರ ಬದುಕು ಹಸನಾಗುತ್ತದೆ ನಿಜ.  ಹಾಗೆಯೇ ಕೆಲವು ಸಮಾಜ ಘಾತುಕ ಶಕ್ತಿಗಳು ಇಂತಹ ವಿಚಾರಗಳನ್ನೇ ಬಳಸಿಕೊಂಡು ಇಲ್ಲಸಲ್ಲದ್ದನ್ನು ಹೇಳಿ ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅವರಿಗೇ ಅರಿವಿಲ್ಲದಂತೆ ನೀಡುತ್ತಿದ್ದಾರೆ.  ಆ ಮೂಲಕ ಸಮಾಜದ ಸ್ವಾಸ್ಥ್ಯವೂ ಕೆಡುತ್ತದೆ. ಜೊತೆಗೆ ಮೇಲ್ನೋಟಕ್ಕೆ ಕಾಣದಂತೆ ರಾಷ್ಟ್ರೀಯ ನಷ್ಟವೂ ಆಗುವುದರಲ್ಲಿ ಎರಡು ಮಾತಿಲ್ಲ.  ಮುಗ್ಧ ಜನರು ಮೂಢನಂಬಿಕೆ, ಕುರುಡು ಆಚರಣೆಗೆ ಒಳಗಾಗಿ ಶೋಷಣೆಗೀಡಾಗುತ್ತಿದ್ದಾರೆ.  ಇಂತಹ ಸಾಮಾನ್ಯ ಜನರು ಮೊದಲು ಜಾಗೃತರಾಗಬೇಕು, ಸರಿ ತಪ್ಪುಗಳ ವಿಶ್ಲೇಷಣೆ ಮಾಡಬೇಕು.  ಆನಂತರ ಆಚರಣೆಗೆ ತರಬಹುದಾದ ವಿಚಾರಗಳನ್ನು ಮಾತ್ರ ಜಾರಿಗೆ ತರುವ ಮೂಲಕ ಅರ್ಥಪೂರ್ಣ ಬದುಕನ್ನು ರೂಢಿಸಿಕೊಳ್ಳಬೇಕು.  ಪ್ರಜ್ಞಾವಂತ ಜನರು ಉಳಿದವರಿಗೆ ಅರಿವು ಮೂಡಿಸುವ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕು.  ಇದು ಒಂದು ರಾಷ್ಟ್ರದ ಸಂಪತ್ತನ್ನೂ, ಉತ್ಪಾದನೆಯನ್ನೂ ಹೆಚ್ಚಿಸುವ ವಿಚಾರಕ್ಕಿಂತಲೂ ಹೆಚ್ಚಿನದೆಂದು ಹೇಳಬಹುದು.  ವೈಚಾರಿಕತೆಯಿಲ್ಲದ ದೇಶ ಎಷ್ಟೇ ಸಂಪದ್ಭರಿತವಾಗಿದ್ದರೂ ಕೂಡ ಬಡ ದೇಶವಾಗಿಯೇ ಇರುತ್ತದೆ, ಎಂಬ ಲೋಕದೃಷ್ಟಿಯ ಹಿನ್ನೆಲೆಯಲ್ಲಿ ತಿರುಕ ಅವರ ವಿಚಾರಗಳನ್ನು ವಿಶ್ಲೇಷಣೆ ಮಾಡಲಾಗಿದೆ.

            ತಿರುಕ ಅವರು ದೇಶಾದ್ಯಂತ ಸಂಚಾರ ಮಾಡಿ ಯೋಗ ಗುರುಗಳ ಹತ್ತಿರ ಯೋಗ, ವ್ಯಾಯಾಮಗಳನ್ನು ನಿಷ್ಟೆಯಿಂದ ಅಭ್ಯಾಸ ಮಾಡಿದರು.  ಆಯುರ್ವೇದ ಪಂಡಿತರ ಹತ್ತಿರ ಭಾರತದ ಅತ್ಯಮೂಲ್ಯ ಪದ್ಧತಿಯಾದ ಆಯುರ್ವೇದ ಪದ್ಧತಿಯನ್ನು ಸಂಪೂರ್ಣ ಅರಿತು ಜನರ ಸೇವೆ ಮಾಡುತ್ತಿದ್ದರು.  ಸಮಾಜದ ಉದ್ಧಾರವಾಗಬೇಕಾದರೆ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯಗಳೆರಡೂ ಮುಖ್ಯ ಎಂಬುದನ್ನು ಮನಗಂಡು ಯೋಗ, ವ್ಯಾಯಾಮ, ಆಯುರ್ವೇದಗಳನ್ನು ದೈಹಿಕ ಸ್ವಾಸ್ಥ್ಯಕ್ಕೆ ಬಳಕೆ ಮಾಡಿಕೊಂಡ ಬಗ್ಗೆ ಈಗಾಗಲೇ ತಿಳಿಯಲಾಗಿದೆ.  ಹಾಗೆಯೇ ಮಾನಸಿಕ ಆರೋಗ್ಯಕ್ಕೆ ಯೋಗದ ಜೊತೆಗೆ ಧ್ಯಾನವೂ ಮುಖ್ಯ.  ಜೊತೆಗೆ ಧಾರ್ಮಿಕ ಜ್ಞಾನ, ಆಧ್ಯಾತ್ಮದ ಮಾರ್ಗವೂ ಮುಖ್ಯ ಎಂಬುದನ್ನು ಅರಿತು, ತಾವೂ ಕೂಡ ಸಾತ್ವಿಕ ಬದುಕನ್ನು ಬದುಕಿದವರು.  ತನಗೆ ತಿಳಿದ ಧಾರ್ಮಿಕ ವಿಚಾರಗಳನ್ನು ಸಾಮಾನ್ಯರು ತಿಳಿಯಲಿ, ಅವರ ಬದುಕೂ ಹಸನಾಗಲಿ, ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಲಿ ಎಂದು ಬಯಸಿದರು.  ಆ ನಿಟ್ಟಿನಲ್ಲಿಯೇ ಸಾಹಿತ್ಯ ರಚನೆ ಮಾಡಿದ್ದು ಮತ್ತು ಉತ್ತಮ ಪರಿಣಾಮ ಕಂಡದ್ದು.  ಈ ಹಿನ್ನೆಲೆಯಲ್ಲಿ ತಿರುಕ ಅವರ ಬದುಕನ್ನು ಧರ್ಮ ಮತ್ತು ಆಧ್ಯಾತ್ಮದ ವಿಚಾರಗಳು ಎಷ್ಟರ ಮಟ್ಟಿಗೆ ಆವರಿಸಿದ್ದವು ಅವರ ನಿಲುವೇನು ಎಂಬುದು ಚಿಂತನೆಗೆ ಒಳಪಡಿಸುವಂತಿವೆ.

 

            ಮೊದಲಿಗೆ ಧರ್ಮ ಮತ್ತು ಆಧ್ಯಾತ್ಮದ ಅರ್ಥವನ್ನು ಈ ರೀತಿಯಲ್ಲಿ ಗ್ರಹಿಸಬಹುದಾಗಿದೆ. “ಧರ್ಮ” ಎಂದರೆ ಧಾರಣ ಮಾಡು, ನಿಯಮ, ನ್ಯಾಯ, ಕರ್ತವ್ಯ, ಪವಿತ್ರಕಾರ್ಯ, ವರ್ತನೆ, ನಡವಳಿಕೆ, ನೀತಿ, ಸದ್ಗುಣ, ಪುಣ್ಯ, ಭಿಕ್ಷೆ, ಅಹಿಂಸೆ, ಯಜ್ಞ, ಸ್ವಭಾವ, ಯಮ, ಶಿವ, ಅರಸ, ದೊರೆ, ಉತ್ಪಾತ, ಚಾಪ; ಬಿಲ್ಲು, ವಿಷ; ಗರಳ, ನಾಲ್ಕು ಪುರುಷಾರ್ಥಗಳಲ್ಲಿ ಒಂದು (ಸಂಕ್ಷಿಪ್ತ ಕನ್ನಡ ನಿಘಂಟು-ಕನ್ನಡ ಸಾಹಿತ್ಯ ಪರಿಷತ್ತು, 1975, ಪುಟ 455) ಎಂಬ ವಿಸ್ತಾರವಾದ ಅರ್ಥವಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರು 1994 ರಲ್ಲಿ ಪ್ರಕಟಿಸಿದ ಕನ್ನಡ ರತ್ನಕೋಶದಲ್ಲಿ ಹೀಗಿದೆ. ಧರ್ಮ (ನಾ) ಧಾರಣ ಮಾಡಿದುದು, ನ್ಯಾಯ, ಕರ್ತವ್ಯ, ಪುಣ್ಯ, ಭಿಕ್ಷೆ, ಸ್ವಭಾವ, ಯಮ, ನಾಲ್ಕು ಪುರುಷಾರ್ಥಗಳಲ್ಲಿ ಒಂದು ಬಿಟ್ಟಿ, ಪುಕ್ಕಟ್ಟೆ, ಎಂಬಂಥ ಅರ್ಥಗಳನ್ನು ಕೊಡಲಾಗಿದೆ.  ಇಷ್ಟೆಲ್ಲ ವಿಶಿಷ್ಟ ಅರ್ಥಗಳ ಜೊತೆಗೆ ಬಳಕೆಯಾಗುತ್ತಿರುವ ಧರ್ಮವನ್ನು ಪಾಲಿಸಿಕೊಂಡು ಬದುಕುವವನೇ ಧಾರ್ಮಿಕ ಎನಿಸಿಕೊಳ್ಳುತ್ತಾನೆ. ‘ಆಧ್ಯಾತ್ಮಿಕ’   ಇದು ನಾಮಪದವಾಗಿದ್ದು ತಾಪತ್ರಯಗಳಲ್ಲಿ ಒಂದು ಎಂಬ ಅರ್ಥ ಕೊಡುತ್ತದೆ.  ಗುಣವಾಚಕವಾಗಿ-ಆತ್ಮವಸ್ತುವಿಗೆ ಸಂಬಂಧಿಸಿದ ತತ್ವಶಾಸ್ತ್ರಕ್ಕೆ ಅನ್ವಯಿಸುವ (ಅದೇ ಪುಟ-80) ಎಂಬರ್ಥ ಕೊಡುತ್ತದೆ.

            ಈ ಪದಗಳು ಹುಟ್ಟಿಕೊಂಡಾಗಿನಿಂದ ಇಂದಿನವರೆಗೂ ಹೆಚ್ಚು ವಿಶ್ಲೇಷಣೆಗೆ ಒಳಪಟ್ಟಂತಹ ಪದಗಳಾಗಿವೆ.  ಕೆಲವರು ಇರುವ ಅರ್ಥಗಳಿಗೆ ಅನುಗುಣವಾಗಿ ನಡೆದುಕೊಂಡರೆ ಇನ್ನೂ ಕೆಲವರು ತಮ್ಮದೇ ಆದ ವಿಶಿಷ್ಟ ರೀತಿಯ ಅರ್ಥಗಳನ್ನು ಅನ್ವಯಿಸಿಕೊಂಡು ಆಚರಣೆಗೆ ತಂದು ಧರ್ಮ ಮತ್ತು ಆಧ್ಯಾತ್ಮಿಕ ಪದಗಳ ಅರ್ಥ ವೈಶಾಲ್ಯತೆಯನ್ನು ಹೆಚ್ಚಿಸಿದ್ದಾರೆ.  ಅಂತಹ ವಿಶಿಷ್ಟರ ಸಾಲಿಗೆ ನಿಲ್ಲಬಲ್ಲಂತಹವರು ತಿರುಕ ಅವರು.  ಎಲ್ಲರಿಗೂ ಒಳಿತನ್ನು ಮಾಡುವುದೇ ಧರ್ಮ, ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವೂ ಆದಾಗ ಧರ್ಮ ಸಾರ್ಥಕತೆ ಪಡೆಯುತ್ತದೆ ಎಂದು ನಂಬಿದ್ದರು.  ಹಾಗೆಯೇ ಜನಸಾಮಾನ್ಯನ ಬದುಕು ಹಸನಾಗಲು ಬೇಕಾದ ಒಳಿತನ್ನು ಕಂಡುಕೊಂಡವರು ಅದಕ್ಕಾಗಿ ಸುಮ್ಮನೆ ಕುಳಿತು ಜಪತಪಗಳನ್ನು ಮಾಡುತ್ತಾ ಬಂದವರಿಂದ ಕಾಣಿಕೆ ಪಡೆದು, ಆಶೀರ್ವದಿಸಿ ಕಳಿಸಿದ ‘ಧಾರ್ಮಿಕ’ ಎನಿಸದೆ ಸದಾ ಕಾಲ ಚಟುವಟಿಕೆಯಿಂದ ದುಡಿದು ಇತರರ ಕಷ್ಟಗಳನ್ನು ನಿವಾರಿಸುವ ‘ಧಾರ್ಮಿಕ’ ಎನಿಸಿಕೊಂಡವರು.  ಈ ಹಿನ್ನೆಲೆಯಲ್ಲಿ ಅನಾಥ ಮಕ್ಕಳಿಗೆ ಆಶ್ರಯ ಒದಗಿಸಿ ಅವರ ಶಿಕ್ಷಣಕ್ಕೆ ಮಾರ್ಗ ತೋರಿಸಿದವರು.  ರೋಗಿಗಳ ಸೇವೆಗೆ ಬೇಕಾದ, ಔಷದೋಪಚಾರದ ವ್ಯವಸ್ಥೆಗೆ ತಾನೇ ನಿಂತು, ಗಿಡ ಮೂಲಿಕೆಗಳನ್ನು ಹುಡುಕಿ ತಂದು, ಅರೆದು, ಹಚ್ಚಿ ಆರೈಕೆ ಮಾಡುವುದರ ಮೂಲಕ ನಿಜವಾದ ಧರ್ಮವನ್ನಾಚರಿಸಿದರು.  ಯಾವುದೇ ಡಂಬಾಚಾರಕ್ಕೆ ಒಳಗಾಗದೆ ತಾನೇ ಸರಳ ಜೀವಿಯಾಗಿ ಬದುಕುತ್ತಾ, ಸೋತೆನೆನ್ನದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ತಂದ ಹಣದಿಂದ ಬಡವರ ಬದುಕಲ್ಲಿ ಬೆಳಕಾದವರು.

            ತಪ್ಪುಗಳನೆಸಗುವುದು ಮಾನವನ ಸಹಜ ಗುಣ

            ತಪ್ಪು ತಿದ್ದೀ ಬಾಳ ಹಸನಾಗಿ ಮಾಡುವುದು ದೈವತ್ವದಾ ನೆಲೆಯು;

            ತಪ್ಪಿನೊಳು ತಪ್ಪೆಸಗಿ ಮತ್ತೆ ಹೋರಾಡುವುದು

            ಅಸುರೀ ಗುಣವೆಂಬ ಪರಮೇಶದಾಸ. (ಅಂತರ್ವಾಣಿ, ವಚನ ಸಾಹಿತ್ಯ,1962 ಪುಟ-31)

ಬಡತನದ ಬದುಕು ನಮ್ಮ ಹಣೆಬರಹ ಎಂದು ಕೈಕಟ್ಟಿ ಕುಳಿತವರಿಗೆ ಮತ್ತು ಬಡವರನ್ನು ರಾಕ್ಷಸರಂತೆ ದುಡಿಸಿಕೊಳ್ಳುವ ಉಳ್ಳವರಿಗೂ ಈ ರೀತಿ ತಿಳಿಹೇಳಿದ್ದಾರೆ.  ಆ ಮೂಲಕ ಸಮಾನತೆಯ ಕನಸು ಕಂಡವರು.  ಇವೆಲ್ಲವೂ ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೋಕದೃಷ್ಟಿಯ ನೆಲೆಯಲ್ಲಿ ಚಿಂತಿಸಿದುದರ ಫಲಶೃತಿಯಾಗಿದೆ.  ಈ ನಿಟ್ಟಿನಲ್ಲಿ ಅವರ ಚಿಂತನೆಗಳನ್ನು, ಆಚಾರ ವಿಚಾರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಧಾರ್ಮಿಕ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಸಾಮಾನ್ಯ ಜನರ ಶೋಷಣೆ ಮಾಡುತ್ತಿದ್ದ ಕಾಲವೊಂದಿತ್ತು.  ಆದರೆ ಈಗ ಹೈಟೆಕ್ ಯುಗದಲ್ಲಿ ಹೈಟೆಕ್ ಜನಗಳನ್ನೂ ಸಹ ಬಹಳ ನಯವಾಗಿ ಶೋಷಣೆ ಮಾಡುವ ಲಾಂಛನಧಾರಿಗಳು ಹೆಚ್ಚಾಗುತ್ತಿದ್ದಾರೆ. ಹಣ ದೋಚುವುದಿರಲಿ, ಮಾನ ಪ್ರಾಣವನ್ನೂ ದೋಚುತ್ತಿದ್ದಾರೆ.  ರಾತ್ರೋರಾತ್ರಿ ಹುಟ್ಟಿಕೊಂಡ ಇಂತಹ ಮನ ಬೋಳಾಗದ, ಮಂಡೆ ಬೋಳುಮಾಡಿಕೊಂಡ ಒಂದು ವರ್ಗವೇ ಇದೆ.  ನಮ್ಮ ದೇಶದ ಜನರ ಧಾರ್ಮಿಕ ಆಧ್ಯಾತ್ಮಿಕ ಭಾವನೆಗಳ ಜೊತೆಗೆ ಚೆಲ್ಲಾಟವಾಡುವುದರ ಜೊತೆಗೆ ಹೊರ ದೇಶಗಳಿಂದಲೂ ಹಣ ತರಿಸಿಕೊಂಡು ಭಾರತದ ಉದ್ಧಾರ ಮಾಡುವ ಫೋಸು ಕೊಡುತ್ತಿದ್ದಾರೆ.  ಇಂತವರನ್ನು ನೋಡುತ್ತಿದ್ದರೆ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸು ಮಾಡಲು, ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲು ಜೀವನವನ್ನೇ ತ್ಯಾಗ ಮಾಡಿದ ತಿರುಕ ಅವರ ಲೋಕದೃಷ್ಟಿ ಸ್ಮರಣೀಯವೂ, ಅನುಕರಣೀಯವೂ ಆಗಿದೆ.  ತನ್ನೊಬ್ಬನ ಆತ್ಮೋದ್ಧಾರ ಬಹಳ ಸುಲಭ ಎನಿಸುತ್ತದೆ.  ‘ಊರ ದನ ಕಾಯ್ದು ಸೈ ಎನಿಸಿಕೊಳ್ಳಲು ಸಾಧ್ಯವಿಲ್ಲ’ದ ಈ ಹೊತ್ತಿನಲ್ಲಿ ಒಂದು ಆದರ್ಶ ಗ್ರಾಮದ ಸಾಕಾರ ಸರಳ ಸಾಧ್ಯವಾದುದೇನೂ ಅಲ್ಲ.  ಅಸಾಧ್ಯವೆಂದು ಕುಳಿತರೆ ತಟ್ಟೆಯೊಳಗಿನ ಊಟವೂ ಬಾಯಿಗೆ ಬಂದು ಬೀಳಲಾರದು.  ಪ್ರಯತ್ನ ಪಡದೆ ಫಲ ದೊರೆಯದೆಂಬಂತೆ ಕಾರ್ಯಕ್ಷೇತ್ರಕ್ಕಿಳಿದಾಗ ಎಂತಹ ಅಸಾಧ್ಯವೂ ಕೂಡ ಸಾಧ್ಯವಾಗುತ್ತದೆ.  ಅದರಲ್ಲೂ ನಿಸ್ವಾರ್ಥ, ನಿಷ್ಟೆಯುಳ್ಳ ಪ್ರಯತ್ನವಿದ್ದಾಗ ಅಸಾಧ್ಯವೆಂಬ ಮಾತೇ ಬರುವುದಿಲ್ಲ.  ಅದಕ್ಕಾಗಿ ಅಚಲವಾದ ಲೋಕದೃಷ್ಟಿಯೂ ಬೇಕಾಗುತ್ತದೆ.  ಆಗ ಮಾತ್ರ ಲೋಕೋದ್ಧಾರ ಸಾಧ್ಯವಾಗುತ್ತದೆ. ತಿರುಕ ಅವರ ಇಂತಹ ಸಾಧ್ಯತೆಗಳನ್ನು ಕುರಿತು ಚರ್ಚಿಸಲಾಗಿದೆ. ಲೌಕಿಕ ಮತ್ತು ಆಧ್ಯಾತ್ಮಕ ಚಿಂತನೆಗಳೇ ದಿಕ್ಕು ತಪ್ಪಿ ಸಾಗುತ್ತಿರುವ ಈ ಹೊತ್ತಿನಲ್ಲಿ ಆದರ್ಶವಾಗಿ ನಿಲ್ಲಬಲ್ಲ ತಿರುಕ ಅವರ ನಡೆನುಡಿಗಳೊಂದಾದ ಚಿಂತನೆ ಅನುಕರಣೀಯವಾಗಿದೆ.

            ತೀರದಾ ದಾರಿಯಿದು ಎನಿತು ದೂರಯ್ಯ

            ಸೇರುವುದು ನಾನೆಂದೊ ಊರ ಪೇಳಯ್ಯ

            ಕರಚರಣ ಸೋತಿಹುದು ದಾರಿ ನಡೆ ನಡೆದು

            ತ್ರಾಣ ಒಂದಿಷ್ಟಲ್ಲ ಬವಳಿ ಬರುತಿಹುದು

            ಅರಿಯದಾ ಬಟ್ಟೆಯಲಿ ದಿಕ್ಕುಗಾಣದೆ ಬಳಲಿ

            ಕೊರಗಿ ಚೀರಾಡುತಿಹೆ ಒಮ್ಮೆ ಬಾರಯ್ಯ

            ಊರುಗೋಲಾಗಿ ನೀ ಮುಂದೆ ನಡೆಸಯ್ಯ

            ಪರಮೇಶ ದಾಸನಾ ಪಯಣ ಮುಗಿಸಯ್ಯ (ಅಂತರ್ವಾಣಿ, ವಚನ ಸಾಹಿತ್ಯ 1962, ಪುಟ-30)

            ಆತ್ಮ ನಿವೇದನೆಯ ಜೊತೆಗೆ ನಂಬಿರುವ ಗುರಿಯನ್ನು ತಲುಪುವ ಹಂಬಲ ತಿರುಕ ಅವರದು.  ಈ ಹಂಬಲ ಈಡೇರಲು ಮೊದಲು ಜನರ ಪರಿವರ್ತನೆ ಆಗಬೇಕು.  ಅದಕ್ಕಾಗಿ ನಿಧಾನವಾಗಿ ವೈಚಾರಿಕ ಚಿಂತನೆಯ ಅರಿವು ಮೂಡಿಸಬೇಕಾಗುತ್ತದೆ.  ಶುದ್ಧ ವೈಚಾರಿಕ ಬದುಕು ಈ ಸಮಾಜದಲ್ಲಿ ಮರೀಚಿಕೆಯೇ ನಿಜ.  ಆದರೆ ಧಾರ್ಮಿಕ ಆಚರಣೆಗಳು ಹಿತ-ಮಿತವಾಗಿ ಸರಳವಾಗಿ ಇರಬೇಕು.  ವಚನಕಾರರು, ಕೀರ್ತನಕಾರರು ತಿಳಿಸಿಕೊಟ್ಟಿರುವ ರೀತಿಯನ್ನು ಅರಿತು ನಡೆಯುವ ಅವಶ್ಯಕತೆ ಇದೆ.  ಸಾತ್ವಿಕ ಚಿಂತನೆ ಮನುಷ್ಯನನ್ನು ಸಮ್ಯಜ್ಞಾನಿಯ ನೆಲೆಯಲ್ಲಿ ಕೊಂಡೊಯ್ಯುತ್ತದೆ.  ಈ ನೆಲೆಯನ್ನು

ತಲುಪದಿದ್ದರೂ ಉತ್ತಮ ಜ್ಞಾನಿಯಂತೂ ಖಂಡಿತ ಆಗುತ್ತಾನೆ.  ಏಕೆಂದರೆ ಅರಿವು-ಆಚರಣೆಗಳು ನಡೆ ನುಡಿಯ ಪಕ್ವತೆಯನ್ನು ನಿರ್ಧರಿಸುತ್ತವೆ.  ‘ನಡೆಯೊಂದು ಬಗೆ ನುಡಿಯೊಂದು ಬಗೆ’ ಆದಾಗ ನಮ್ಮ ಅಪೂರ್ಣತೆಯನ್ನು ತಿಳಿಸುತ್ತದೆ.  ಹೀಗಾಗದಿರಲು ವಚನಕಾರರು ನಡೆಸಿದಂತಹ ಅನುಸಂಧಾನದ ಚಿಂತನೆಯ ಅವಶ್ಯಕತೆ ಇದೆ.  ಈ ನೆಲೆಯಲ್ಲಿ ನಡೆದವರು, ನುಡಿದವರು ತಿರುಕ ಅವರು.  ಧರ್ಮ ಆಧ್ಯಾತ್ಮದ ವಿಚಾರಗಳು ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವನ್ನು ಮಾಡಬೇಕೆಂದವರು.  ಆ ಮೂಲಕ “ಸರ್ವ ಜನಾಂಗದ ಶಾಂತಿಯ ತೋಟ”ದ ಕನಸು ಕಂಡವರು. ಪ್ರಾಯೋಗಿಕವಾಗಿ ಮಾಡಿ ತೋರಿಸಿದವರು ಕೂಡ.  ಇಂತಹ ಅವರ ನಿಲುವುಗಳನ್ನು ಈ ಪ್ರಗತಿ ವರದಿಯಲ್ಲಿ ಚರ್ಚಿಸಲಾಗಿದೆ. “ವ್ಯಕ್ತಿ ಸಾಂಘಿಕ ಪ್ರಯತ್ನಗಳಲ್ಲಿ ತೊಡಗಿದಾಗ ರೂಪಿಸುವ ಯೋಜನೆಗಳು, ಹಾಕಿಕೊಂಡ ಕಾರ್ಯಕ್ರಮಗಳು, ನಿರ್ವಹಿಸುವ ಕರ್ತವ್ಯಗಳು ಸಮಾಜದ ಮತ್ತು ಸಕಲ ಜೀವಿಗಳ ಗರಿಷ್ಠ ಹಿತಸಾಧನೆಗೆ ಪೂರಕವಾಗುವಂತೆ ಇರಬೇಕು”.  (ಬಸವ ಪಥ ಮಾಸಿಕ ಪತ್ರಿಕೆ, ಜುಲೈ 2016, ಪುಟ 42, 432 ನೇಯ ಸಂಚಿಕೆ)  ಈ ಮಾತು 12ನೇ ಶತಮಾನದ ಶರಣರ ಚಳುವಳಿಯನ್ನು ಕುರಿತು ಹೇಳಿರುವುದಾದರೂ ತಿರುಕ ಅವರ ಲೋಕದೃಷ್ಟಿಯೂ ಇದೇ ಆಗಿತ್ತು.                  

ಪರಾಮರ್ಶನ ಗ್ರಂಥಗಳು

  1. ದಿವ್ಯ ಜೀವನ-ಮೂಲ ಅರವಿಂದರು ಅನುವಾದ:ಊ.ಕಾ.ಸುಬ್ಬರಾಯಾಚಾರ್ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-1987
  2. ನಾನಾರು? -ಶ್ರೀ ಸಿದ್ದೇಶ್ವರ ಸ್ವಾಮಿಗಳು -ಚಿಲಕವಾಡಿ, 1998
  3. ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ-ಸಂಪಾದಕರು. ಜಿ.ಎಸ್.ಶಿವರುದ್ರಪ್ಪ-ಬೆಂಗಳೂರು ವಿಶ್ವವಿದ್ಯಾನಿಲಯ, 1977
  4. ಜೋಳಿಗೆಯಲ್ಲೊಂದು ಅಗಳು, 2008 - ಕೃಷ್ಣ ರಾಯಚೂರು
  5. ಒಂದು ಬುಡಕಟ್ಟಿನ ಲೋಕದೃಷ್ಟಿ – 2011- ಹಿ.ಚಿ ಬೋರಲಿಂಗಯ್ಯ
  6. 3..ತ.ಸು.ಶಾಮರಾಯ, ಕನ್ನಡ ಸಾಹಿತ್ಯ ಚರಿತ್ರೆ, 1981, ತುಳುವಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಮೈಸೂರು.
  7. ನಡೆದಾಡೋ ಕಾಮನ ಬಿಲ್ಲೆ,- 2017 -ಡಾ.ಜಿ.ಎಂ.ಮಂಜುನಾಥ
  8. ಡೊಂಕು ಬಾಲದ ನಾಯಕರು – 2008- ಡಾ.ಎಲ್.ಬಸವರಾಜು
  9. ಅಳಿದುಳಿದವರು-2011- ಬೋಲ ಚಿತ್ತರಂಜನದಾಸ್ ಶೆಟ್ಟಿ
  10. ಡಾ.ವ್ಹಿ.ಜಿ. ಪೂಜಾರ, ವಚನಗಳಲ್ಲಿ ಲೋಕವಿಡಂಬನೆ  2011
  11. ಕನ್ನಡ ನಿಗಂಟು, ಕನ್ನಡ ಸಾಹಿತ್ಯ ಪರಿಷತ್ತು 1993


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal