Tumbe Group of International Journals

Full Text


ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಗಳಲ್ಲಿಪ್ರೇಮ

ಕರಿಬಸಣ್ಣ.ಟಿ.

(KARIBASANNA.T.)

ಸರ್ಕಾರಿ ಪ್ರಥಮ ದರ್ಜೆ ಕಾಲೇಜು,

ತುಮಕೂರು-572102. INDIA

       ಪ್ರಸ್ತಾವನೆ

   ಕನ್ನಡ ಸಾಹಿತ್ಯವನ್ನು ಗಮನಿಸಿದಾಗ ಪ್ರೇಮ ಎಂದರೆ ಕೆ.ಎಸ್.ನ. ಹಾಗೂ ಕೆ.ಎಸ್.ನ ಎಂದರೆ ಅವರ ಪ್ರೇಮ ಕವಿತೆಗಳು, ಎಂಬ ಮಾತು ಚಾಲ್ತಿಯಲ್ಲಿದೆ. ಪ್ರೇಮ ಕವಿ ಎಂದೇ ಖ್ಯಾತರಾಗಿರುವ ಇವರು ತಮ್ಮ ಹೆಸರಾಂತ ‘ಮೈಸೂರು ಮಲ್ಲಿಗೆ’ ಎಂಬ ಕವನ ಸಂಕಲನದೊಂದಿಗೆ ಪ್ರೇಮವೆಂಬ ಮಲ್ಲಿಗೆಯ ಪರಿಮಳವನ್ನು ಪಸರಿಸಿದ ಧೀಮಂತ ಕವಿ ಎಂದರೆ ಅತಿಶಯೋಕ್ತಿಯಲ್ಲ.

         ನವೋದಯ ಕಾವ್ಯದ ಉತ್ತುಂಗ ಶಿಖರಗಳಲ್ಲಿ ನಮ್ಮ ನಲ್ಮೆಯ ಕವಿ ಕೆ.ಎಸ್.ನ. ಅವರ ಕಾವ್ಯ ಎಂದೆಂದೂ ಮಿನುಗುವ ಧವಳ ಶಿಖರವೇ ಆಗಿದೆ ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ನವೋದಯ ಹಾಗು ನವ್ಯ ಎರಡೂ ಪಂಥಗಳಲ್ಲಿಯೂ ತಮ್ಮ ಸ್ವಂತಿಕೆಗಳನ್ನು ಉಳಿಸಿಕೊಳ್ಳುವುದರೊಂದಿಗೆ ಅವರು ಪ್ರೇಮಗೀತೆಗಳ ಇತಿಹಾಸದಲ್ಲಿ ವಿಶಿಷ್ಟವಾದ ಒಂದು ಸ್ಥಾನ ಹೊಂದಿದ್ದು, ಪ್ರೇಮದ ತೋಟದಲ್ಲಿ ಕೃಷಿ ಮಾಡುವುದರೊಂದಿಗೆ ಮಲ್ಲಿಗೆ ಇರುವಂತಿಗೆಗಳನ್ನು ಅರಳಿಸುವುದರೊಂದಿಗೆ, ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು.

         ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಾಗ ನವೋದಯ ಕಾಲದಲ್ಲಿ ಪಾಶ್ಚಾತ್ಯ ಶಿಕ್ಷಣ ಮತ್ತು ಸಾಹಿತ್ಯದಿಂದ ಪ್ರಭಾವಿತವಾದ ಸಾಹಿತ್ಯ ಸೃಷ್ಟಿಯ ಗುಂಪುಗಳು ಅಂದಿನ ಆಶೋತ್ತರಗಳಿಗೆ ಸಂಬಂಧಿಸಿದಂತೆ ಕಾವ್ಯದ ವಸ್ತುಗಳನ್ನು ರೂಡಿಸಿಕೊಂಡರು. ಈ ಹಿನ್ನೆಲೆಯಲ್ಲಿ ಈ ಪ್ರೇಮ ಮತ್ತು ಪ್ರೀತಿ ವಿಚಾರಗಳು ಸಹ ಸೇರಿವೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಕುವೆಂಪು ಬೇಂದ್ರೆ ಮುಂತಾದವರು ಕವಿತೆಗಳನ್ನು ರಚಿಸಿದರೂ ಅದು ಉನ್ನತ ಅಂದರೆ ಯಥೇಚ್ಚವಾಗಿ ಒಡಮೂಡಿದ್ದು ಕೆ.ಎಸ್.ನ ಅವರ ಕವಿತೆಗಳಲ್ಲಿ ಕಾಣಬಹುದಾದ್ದರಿಂದಲೇ ಅವರನ್ನು ಈ ಯುಗದ ‘ಪ್ರೇಮಕವಿ’ ಎಂದು ಕರೆಯಲಾಗಿದೆ.

         ಬಾಳನ್ನು ಒಡೆಯದಂತೆ ಕಾಪಾಡಿ, ಪರಸ್ಪರ ಹೃದಯಗಳನ್ನು ಒಂದುಗೂಡಿಸಿ ಬದುಕಿನಲ್ಲಿ ಉತ್ಸಾಹÀವನ್ನು  ಲವಲವಿಕೆಯನ್ನು ಹುಟ್ಟಿಸಿ,  ಜೀವನವನ್ನಾಳುವ ದಿವ್ಯಶಕ್ತಿಯೇ ಪ್ರೇಮ. ಇದರ ಆಳ- ಅಗಲಗಳನ್ನು ಅಳೆಯುವ ಕಾರ್ಯ ಇನ್ನು ಮುಗಿದಿಲ್ಲ. ಅದು ಮುಗಿಯುವುದೂ ಇಲ್ಲ ಅದರ ಜೀವ ಶಕ್ತಿಯಿಂದಲೇ ಸೃಷ್ಟಿ ತನ್ನ ಹೊಸತನವನ್ನು ಮೆರೆಯುತ್ತಾ ಬಂದಿದೆ. ಬದುಕು ಸಹ್ಯವೆನಿಸಿದೆ. ಇದಕ್ಕೆ ಜಿ.ಎಸ್. ಶಿವರುದ್ರಪ್ಪನವರು ‘ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ?’ ಎಂದು ಹೇಳಿರುವುದು. ಹೀಗೆ ಪ್ರೇಮ ಎಂಬುವುದು ಸಕಲ ಜೀವಿಗಳಿಗೂ ಅವಶ್ಯಕವಾಗಿರುವುದರಿಂದಲೇ ಅದರ ಮಹತ್ವ ಮತ್ತು ಕೆ.ಎಸ್.ನ ಕಂಡಂತಹ ದಾಂಪತ್ಯದ ನವಿರಾದ ಪ್ರೇಮವನ್ನು ಪ್ರಸ್ತುತ ಲೇಖನದಲ್ಲಿ ತಿಳಿಯಬಹುದಾಗಿದೆ.

       ಕೆ.ಎಸ್.ನ. ರವರಿಗೆ ಕನ್ನಡ ನಾಡಿನಲ್ಲಿ ತುಂಬ ಪ್ರಖ್ಯಾತಿಯನ್ನು ತಂದು ಕೊಟ್ಟ ‘ಮೈಸೂರು ಮಲ್ಲಿಗೆ’ ಕವನ ಸಂಕಲನವು ಪ್ರೇಮ ಎಂಬ ಪದಕ್ಕೆ ಹೊಸ ಭಾಷ್ಯವನ್ನು ಬರೆದಂತೆ ಅದರಲ್ಲಿಯ ಕವನಗಳು ಒಡಮೂಡಿರುವುದು ಕಂಡು ಬರುತ್ತದೆ. ಎಳೆಯ ವಯಸ್ಸಿನಲ್ಲೇ ಕೆ.ಎಸ್.ನ. ಸ್ಕಾಟ್‍ಲ್ಯಾಂಡ್‍ನ ‘ಬನ್ರ್ಸ್’ ಕವಿಯನ್ನು ಓದಿಕೊಂಡಿದ್ದು ಕನ್ನಡಕ್ಕೆ ಒಳಿತೇ ಆಗಿದೆ. ಈ ಮೂಲಕ ಅವರು ಹದಿಹರೆಯದಲ್ಲಿದ್ದ ನಮ್ಮ ‘ಒಲವಿನ ಕವಿ’ಗೆ ಕಾವ್ಯದ ಮಾದರಿಯನ್ನು ಆಂತರ್ಯದಲ್ಲಿ ತೋರಿದವನು, ಅಂದರೆ ಈ ಬನ್ರ್ಸ್ ಕವಿ ಜನಮನದಲ್ಲಿ ಹೇಗೆ ಬೇರೂರಿದ್ದನೋ ನಮ್ಮ ಕೆ.ಎಸ್.ನ. ಕೂಡ ಹಾಗೆಯೇ. ಆದ್ದರಿಂದಲೇ ಜನಪದ ಗೀತೆಗಳಂತೆ ಅತ್ಯಂತ ಜನಪ್ರಿಯವಾದವು ನರಸಿಂಹಸ್ವಾಮಿಯರ ಒಲವಿನ ಕವಿತೆಗಳು.

         ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆ ಕನ್ನಡನಾಡಿನ ಕೊಟ್ಯಾನುಕೋಟಿ ಜನರಿಗೆ ಇಷ್ಟವಾದ ಕವನ ಸಂಕಲನ. ಅದಕ್ಕೆ ಕಾರಣ ಅವರ ಕೌಟುಂಬಿಕ ಕಕ್ಷೆ. ಗಂಡ-ಹೆಂಡತಿ ಮತ್ತು ಪ್ರೀತಿ ಹಾಗೂ ಈ ಒಲವಿನ ಜಗತ್ತು! ಈ ಕೃತಿಯಲ್ಲಿ ಬರುವ ನಮ್ಮ ಕಾವ್ಯನಾಯಕ ನಿಜಕ್ಕೂ ವಿದ್ಯಾವಂತ. ಕೆಲಸದಲ್ಲಿರುವಾತ. ಭಾರತೀಯ ಪುರಾತನ ಪರಂಪರೆಯನ್ನು ಧಿಕ್ಕರಿಸದೇ ಅನುಸರಿಸಿಕೊಂಡು ಬಂದ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಹೆಣ್ಣೇ ಇಲ್ಲಿನ ಕಾವ್ಯನಾಯಕಿ. ಇವರಿಬ್ಬರ ನಡುವೆ ನಿರಂತರವಾಗಿ ಹರಿಯುತ್ತಿರುವುದು ಒಲವಿನ ನದಿ. ಗಂಡು-ಹೆಣ್ಣಿನ ನಡುವೆ ನಡೆಯುವ ಅನುದಿನದ ಅನುಕ್ಷಣದ ಜೀವಂತ ಸಂವಾದಗಳನ್ನೇ ಈ ಕವಿ ತನ್ನ ಕಾವ್ಯ ಕೃಷಿಗೆ ಕವಿತೆಯೆಂಬ ರಸಮಯ ಗದ್ದೆಗೆ ಶ್ರದ್ಧೆಯೆಂಬ ಪ್ರೀತಿಯ ಜಲವನ್ನು ಹಾಯಿಸಿಕೊಂಡು ದಾಂಪತ್ಯ ಸುಖದ ಅಮೃತಫಲ ಪಡೆದ ರೀತಿಯಲ್ಲಿದೆ ಕವಿಯ ಕಾವ್ಯ ಬದುಕು. ಅಲ್ಲಿ ಹೊಂದಿಕೆಯೇ ಬಂಗಾರ, ಸರಸ ಸಲ್ಲಾಪವೇ ಶೃಂಗಾರ! ಈ ಹಿನ್ನೆಲೆಯಲ್ಲಿ ಡಾ.ಎಚ್.ಎಸ್ ವೆಂಕಟೇಶಮೂರ್ತಿ ‘ಕೆ.ಎಸ್.ನ.’ ಅವರ ಪ್ರೇಮಕವಿತೆಗಳು ಹಸಿರು ಬೆರೆಸಿ ಕಟ್ಟಿದ ಚೆಲುವಾದ ಮಲ್ಲಿಗೆ ದಂಡೆಗಳು ಎಂದಿದ್ದಾರೆ.

         ಕೆ.ಎಸ್.ನ ಅವರ ಶೈಲಿಯನ್ನು ಸುಂದರ ಮಲ್ಲಿಗೆಯ ಶೈಲಿ ಎಂದೇ ಕರೆಯಬಹುದು. ಅವರ ಉಪಮೆಗಳು ಸುಂದರ ಸ್ವಪ್ನಲೋಕವನ್ನು ಸೃಷ್ಠಿಸುವಂತಹವು. ತಮ್ಮ ‘ಗೃಹಲಕ್ಷ್ಮಿ’ಯನ್ನು ವರ್ಣಿಸುವಾಗ ಬಳಸುವ ಮಾತುಗಳನ್ನು ನೋಡಿದರೆ

          ನನ್ನವಳು ನನ್ನೆದೆಯ ಹೊನ್ನಾಡನಾಳುವವಳು

          ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ

          ಹೊಳೆಯ ಸುಳಿಗÀಳಿಗಿಂತ ಅವಳ ಕಣ್ಣಿನ ಚೆಲುವು

          ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಗಳನ್ನು

          ಬೆನ್ನ ಮೇಲೆ ಹರಡಿದರೆ.....

          ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ

          ಇಳಿದಂತೆ ಇರುಳ ಮಾಲೆ.’

         ಅಂದರೆ ಈ ಲೋಕದ ಪ್ರೇಮ ಜೀವನಕ್ಕೆ ಗಂಧರ್ವಲೋಕದ ಸಂಪತ್ತನ್ನು sಬಳಸಿಕೊಳ್ಳುವ ಬಯಕೆ ಅವರದು. ಹಾಗೆಯೆ ಬಳಸಿಕೊಂಡ ತೃಪ್ತಿಯೂ ಅವರ ಕವಿತೆಗಳಲ್ಲಿ ಕಂಡುಬರುತ್ತದೆ. ಮಾರ್ದವವಾದ ಶೈಲಿಯಲ್ಲಿ ಮೋಹಕವಾದ ಮಾದಕತೆಯನ್ನು ಸೃಷ್ಠಿಸುವ ಇವರ ಶೈಲಿಗೆ ಎಷ್ಟೊಂದು ನಿದರ್ಶಗಳನ್ನಾದರೂ ಕೊಡಬಹುದು. ಉದಾಹರಣೆಗೆ ಅವರೆ ‘ಗೆ’ ಕವನದ ಈ ಪಂಕ್ತಿಗಳನ್ನು ನೋಡಬಹುದು.

          ‘ಸಾರಹನ ಹೃದಯದಲಿ ರತ್ನ ಪರ್ವತಮಾಲೆ

             ಮಿಂಚಿನಲಿ ಮೀವುದಂತೆ.

          ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ

            ಸಾಗುವುದು ಕನಸಿನಂತೆ’

           ತಾವು ಕೈಹಿಡಿದ ಸತಿ ತಂದೆಗೆ ಒಬ್ಬಳೇ ಮಗಳು. ಹಾಗೆಂದು ಹಗಲೆಲ್ಲ ಅವರು ಕೊರಗಬೇಕೆ? ಕವಿ ಹೇಳುತ್ತಾರೆ ತಮ್ಮ ‘ಒಬ್ಬಳೇ ಮಗಳು!’ ಕವನದಲ್ಲಿ ಒಬ್ಬಳೇ ಮಡದಿಯೆನೆಗೆ ಕವನದುದ್ದಕ್ಕೂ ಆ ಒಬ್ಬಳೇ ಮಗಳ-ತಮ್ಮ ಒಬ್ಬಳೇ ಮಡದಿಯ ಶೀಲವನ್ನು,ಗುಣವನ್ನು ಮನಮುಟ್ಟುವಂತೆ ನಿರೂಪಿಸುತ್ತಾ ಈ ಮುಂದಿನ ಕೆಲವು ಮಾತುಗಳಲ್ಲಿ ಅವಳ ಇಡೀ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ.

            ಒಬ್ಬರೆದುರಿಗೆ ನಿಂತು ತಲೆಯೆತ್ತಿ ನೋಡುವಳೇ,

               ನುಡಿಯುವಳೆ ನಿಮ್ಮ ಮಗಳು!

            ‘ಹಬ್ಬದಲ್ಲಿ ತೌರೂರ ಕನಸಾಯಿತೆ’ನ್ನುವಳೆ!

               ಮುಚ್ಚು ಮೊಗ್ಗವಳ ಮನಸು,

           ಸತಿ ತವರಿಗೆ ಹೋದಾಗ ತರುಣ ಪತಿಯ ಮನಸ್ಸು ಮನೆಯಂತೆಯೇ ‘ಬಿಕೋ’ ಎನ್ನುವುದು ಸಹಜತಾನೆ? ಈ ಶೂನ್ಯತೆಯನ್ನು ಒಮ್ಮೊಮ್ಮೆ ಬಾಹ್ಯ ಪ್ರಸಂಗಗಳು ಮೂದಲಿಸುವುದುಂಟು. ಈ ಸಂದರ್ಭದಲ್ಲಿ ‘ಹೂವು ಬೇಕೆ’ ಎಂದು ಹೂವಿನವಳು ನಸುನಗುತ್ತಾ ಮುಂಬಾಗಿಲಿಗೆ ಬಂದು ಕೇಳಿದಾಗ ವಿರಹಿಯಾದ ಪತಿಯ ಮನದಲ್ಲಾಗುವ ತಲ್ಲಣಗಳನ್ನು ‘ಹೂವಾಡಗಿತ್ತಿ’ ಕವನದಲ್ಲಿ ಕಾಣಬಹುದಾಗಿದೆ. ಅದರ ಸಾಲುಗಳು ಹೀಗಿವೆ.

           ‘ಹೂವೆಲ್ಲಾ ನೋಡಿದುವು ಹಂಬಲಿನ ಕಣ್ತೆರೆದು

             ಮನದೊಳಗೆ ಕೂಡಿಹುದು ಬೇವು ಬೆಲ್ಲ, 

            ಮೂಲೆಯಲಿ ನಾನೊಂದು ಹೂವಾಗಿ ನೋಡಿದೆನು 

              ಮನೆಯೊಳಗೆ ಹೂ ಮುಡಿಯುವ ಮಡದಿಯಿಲ್ಲ!.’

          ಹೀಗೆ ಅವರು ಗಂಡ ಮತ್ತು ಹೆಂಡತಿಯರು ಅಗಲಿದಾಗ ಆಗುವ ವ್ಯಥೆ ನೋವುಗಳನ್ನು ತಮ್ಮ ಕವನಗಳಲ್ಲಿ ಬಹಳ ನವಿರಾದ ಜಾನಪದೀಯ ಸೊಗಡಿನ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತಾರೆ.

         ಮುಂದುವರಿದಂತೆ ಕವಿ ಗಂಡನಿಂದ ಹೆಂಡತಿ ತವರಿಗೆ ಹೋದ ಸಂದರ್ಭದಲ್ಲಿ ಆಕೆಯ ಮನೆಯಿಂದ ಒಂದು ನುಡಿಯನ್ನ ತಂದು ತುಂಬ ಸುಸಂಸ್ಕøತನಾದ ಬಳೆಗಾರನೊಬ್ಬನ ಪಾತ್ರವನ್ನು ‘ಬಳೆಗಾರನ ಹಾಡು’ ಕವಿತೆಯಲ್ಲಿ ಕಾಣಬಹುದು. ಅಂದರೆ ಅವರ ಪ್ರಕಾರ ಬೇಂದ್ರೆಯವರು ‘ಯಕ್ಷ-ಯಕ್ಷಿಗೆ’ ಸಂದೇಶವನ್ನು ನೀಡಲು ಮೇಘವನ್ನು ಬಳಸಿಕೊಂಡಂತೆ ಪ್ರಸ್ತುತ ಕವನದಲ್ಲಿ ಕೆ.ಎಸ್.ನ ತನ್ನ ಪತ್ನಿಯ ಸಂದೇಶವನ್ನು ತಿಳಿದುಕೊಳ್ಳಲು ಬಳೆಗಾರನನ್ನು ಬಳಸಿಕೊಂಡಿದ್ದಾರೆ. ಅಂದರೆ ಕೆಲವೇ ಮಾತುಗಳಲ್ಲಿ ಅಪಾರವಾದ ಅರ್ಥವನ್ನು ಅಡಕ ಮಾಡುವ ಕವಿಯ ಶಕ್ತಿಗೆ ಈ ಕವನ ಅತ್ಯುತ್ತಮ ನಿದರ್ಶನವಾಗಿದೆ.ಅದರ ಸಾಲುಗಳು ಮುಂದಿನಂತಿವೆ.

             ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು

                ಒಳಗೆ ಬರಲಪ್ಪಣೆಯೆ ದೊರೆಯೆ?

             ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು

               ಬಳೆಯ ತೊಡಿಸುವುದಿಲ್ಲ ನಿಮಗೆ.

          ಇಲ್ಲಿ ಕೆ.ಎಸ್.ನ.ರವರು ಬಳೆಗಾರ ಬಂದವನು ನೇರವಾಗಿ ಮನೆಯನ್ನು ಪ್ರವೇಶಿಸುವುದಿಲ್ಲ. ಒಳಕ್ಕೆ ಅಪ್ಪಣೆಯೇ-ಎಂದು ಕೇಳಿದ. ಅವನಲ್ಲಿ ಹಾಸ್ಯವುಂಟು. ‘ಬಳೆಯ ತೊಡಿಸುವುದಿಲ್ಲ ನಿಮಗೆ’ ಹಾಗೆಯೇ ಆ ತಾಯಿ ಸುಖವಾಗಿದ್ದಾರೆ ಎನ್ನುವುದನ್ನು ಅವರ ಬಗೆಗೆ ತವಕದಿಂದಿರುವ ಕವಿ ಪತಿಗೆ ಒಂದೇ ಮಾತಿನಲ್ಲಿ ನಿವೇದಿಸುತ್ತಾನೆ. ಅಂದರೆ ‘ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ ತೌರಿನಲಿ ತಾಯಿ ನಗುತಿಹರು’ ಹಾಗೆಯೇ ಮತ್ತೊಂದು ಮಾತಿನಲ್ಲಿ ಆಕೆಯ ಸ್ಥಿತಿಯನ್ನು ತಿಳಿಸುತ್ತಾನೆ,-ಅಮ್ಮನಿಗೆ ಬಳೆಯ ತೊಡಿಸಿದರು. ಎಂದು ಹೇಳುತ್ತಾ ಕೊನೆಯ ಪಂಕ್ತಿಯಲಿ ‘ಕಣ್ಣ ತುಂಬ ನೋಡಿದೆ’ ಎನ್ನುತ್ತಾನೆ. ಆಕೆಯನ್ನು ನೋಡಲು ಹೋಗಿಲ್ಲ ಕವಿ. ಮೃದುವಾದ ಮಾತಿನಲ್ಲಿ ಅವನ ತಪ್ಪನ್ನು ಆತ ತೋರಿಸಿಕೊಡು ತ್ತಾನೆ.  ಕೈಮುಗಿದು ಬೇಡುತ್ತಾನೆ ‘ಅಮ್ಮನಿಗೆ ನಿಮ್ಮದೇ ಕನಸು’ ಎನ್ನುತ್ತಾನೆ.

ಮದುವೆಯಾಗಿ ಮನೆಗೆ ಬಂದ ಹೆಣ್ಣಿನ ಮೂರು ದಿನದ ಮನಸ್ಥಿತಿಯನ್ನು ಕೆ.ಎಸ್.ನ. ತಮ್ಮ ‘ಮನೆಗೆ ಬಂದ ಹೆಣ್ಣು’ ಕವನದಲ್ಲಿ ಅಪೂರ್ವ ರೀತಿಯಲ್ಲಿ ಚಿತ್ರಿಸಿದ್ದಾರೆ.

              ‘ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ,

                  ಚಿಂತೆ ಬಿಡಿ ಹೂವ ಮುಡಿದಂತೆ

              ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ,

                  ಜೀವದಲಿ ಜಾತ್ರೆ ಮುಗಿದಂತೆ’

         ಹನ್ನೆರಡು ಪಂಕ್ತಿಗಳಲ್ಲಿರುವ ಈ ಕವಿತೆಯಲ್ಲಿ ಕವಿ ಹೊಸದಾಗಿ ಮದುವೆಯಾಗಿ ಅಪರಿಚಿತ ಸ್ಥಳಕ್ಕೆ ಬಂದ ಹೆಣ್ಣು ಮೊದಲ ದಿನ ಮೌನವಾಗಿದ್ದಾಳೆ. ಅಳು ಅವಳ ತುಟಿಯ ತುದಿಗೆ ಬಂದು ನಿಂತಿದೆ. ಹತ್ತು ದಿಕ್ಕಿಗೆ ಕಣ್ಣು ಹರಿಯುತ್ತಿದೆ. ಏಕಾಂತದಿಂದ ಬೇಸರವನ್ನು ಅನುಭವಿಸುತ್ತಾ ಜಾತ್ರೆ ಮುಗಿದ ಬಳಿಕ ಇರುವ ಸ್ಥಿತಿಯಂತೆ ಇದ್ದಾಳೆ.

        ಎರಡನೇ ದಿನ ಮನೆ ತನ್ನದೇ ಎಂಬ ಅರಿವು ಬಂದು ಧೈರ್ಯ ಬಂದಿದೆ. ಅದನ್ನು ತನ್ನದಾಗಿಸಿಕೊಳ್ಳಲು ಸಾಹಸ ನಡೆಯುತ್ತಿದೆ. ಸ್ವಲ್ಪವೇ ಸ್ವಲ್ಪ ನಗೆ ಮುಖಕ್ಕೆ ಮರಳಿದೆ. ಆಕೆಯ ಮಾತು ಮೆಲ್ಲಗೆ ನೀರೊಳಗಿನ ವೀಣೆಯಂತೆ ಕೇಳಿಯೂ ಕೇಳಿಸದಂತೆ! ಚಲಿಸಿಯೂ ಚಲಿಸದಂತೆ ಇರುವ ನಡೆ!

       ಮೂರನೆಯ ದಿನ ಸಂಜೆಯ ಹೂವಿಗೂ ಚೈತನ್ಯ ನೀಡುವಂತೆ ಆ ಮನೆಗೆ ಅವಳಿಂದಲೇ ಚೈತನ್ಯ ಎನ್ನುವಂತೆ ಇದ್ದಾಳೆ. ಎಂದು ಹೊಸದಾಗಿ ಮದುವೆಯಾಗಿ ಬಂದ ಹೆಣ್ಣಿನ ಮನಸ್ಥಿತಿಯನ್ನು ತಿಳಿಸಿದ್ದಾರೆ.

       ಮುಂದೆ ಕವಿ ಮದುವೆಯಾಗಿ ಇನ್ನೂ ತಿಂಗಳು ಸಹ ಆಗದೇ ಇರುವ ದಂಪತಿಗಳ ಪ್ರೇಮದ ಬಗ್ಗೆ ’ಬಾರೆ ನನ್ನ ಶಾರದೆ’ ಪದ್ಯದಲ್ಲಿ ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ! ನಾನು ಕೂಗಿದಾಗಲೆಲ್ಲಾ ಬರುವಳೆನ್ನ ಶಾರದೆ! ಹಿಂದೆ ಮುಂದೆ ನೋಡದೆ, ಎದುರು ಮಾತನಾಡದೆ’ ಎಂದು ಹೇಳುವುದರೊಂದಿಗೆ ಪತಿ ಪತ್ನಿಯರ ಅನ್ಯೋನ್ಯ ಸಂಬಂಧಕ್ಕೆ ಪ್ರೇಮವೇ ಕಾರಣ ಎಂದಿದ್ದಾರೆ.

       ಮುಂದುವರೆದು ಕವಿ ಮದುವೆಯಾದ ನಂತರ ಅಳಿಯ ಅಂದರೆ ಪತಿ ತನ್ನ ಹೆಂಡತಿಯನ್ನು ನೋಡಲು ಮಾವನ ಮನೆಗೆ ಬಂದಾಗ ಆತನಿಗೆ ನೀಡುವ ಉಪಚಾರ ಹಾಗೂ ತನ್ನ ಪತ್ನಿಯನ್ನು ಕಾಣದೆ ಇದ್ದಾಗ ಆಗುವ ಮನದ ತಳಮಳಗಳನ್ನು ‘ರಾಯರು ಬಂದರು ಮಾವನ ಮನೆಗೆ’ ಕವಿತೆಯಲ್ಲಿ ಕಾಣಬಹುದು.                                   .         

        ಪ್ರಸ್ತುತ ಕವಿತೆಯಲ್ಲಿ ಬರುವ ಹಸಿದ ಅಳಿಯನಿಗೆ ಅಕ್ಕರೆಯ ಊಟ-ಉಪಚಾರ ವಿಶೇಷವಾಗಿ ಅಳಿಯ ಎಂಬ ಕಾರಣsಕ್ಕಾಗಿ ಬೆಳ್ಳಿಯ ಬಟ್ಟಲಲ್ಲಿ ಕೊಡುವ ‘ಗಸೆಗಸೆ ಪಾಯಸ’- ಇವೆಲ್ಲವೂ ಪ್ರೀತಿಯ ಆವರಣ ಸೃಷ್ಠಿಸುವುದನ್ನು ಕಾಣಬಹುದು. ಎಲೆ ಅಡಿಕೆ ಹಾಲು ಕೊಡುವ ಸಂದರ್ಭದಲ್ಲಿಯಾದರೂ ಪದುಮಳು ಬರುತ್ತಾಳೆಂದೂ ಕಾಯುತ್ತಿರಲು ಅವಳ ಬದಲು ನಾದಿನಿ ಬರುವುದು. ಇವೆಲ್ಲ ಅವನ ತನ್ನ ಹೆಂಡತಿಯನ್ನು ನೋಡುವ ಹಂಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾದಿನಿಗೆ ಭಾವನ ಬಗ್ಗೆ ಒಳಗೊಳಗೆ ನಗು. ರಾಯರಿಗೆ ಅರ್ಥವಾಗುತ್ತದೆ. ಪದುಮಳು ಒಳಗಿಲ್ಲ. ಬಳೆಗಳ ದನಿಯೂ ಇಲ್ಲ! ಪದ್ಯದ ಕೊನೆಯಲ್ಲಿ ಬಹಳ ಮಹತ್ವದ ಮಾತುಗಳಿವೆ. ಇಡೀ ಆ ಸನ್ನಿವೇಶಕ್ಕೆ ಅವಳು ಕಿರೀಟ ಪ್ರಾಯವಾಗಿದ್ದಾಳೆ. ಅಲ್ಲಿಯವರೆಗೆ ‘ಪದುಮಳು ಬರಲಿಲ್ಲ ಎಂಬ ಕಾರಣಕ್ಕಾಗಿ ರಾಯರ ಮನಸ್ಸಿನಲ್ಲಾದ ಎಲ್ಲ ತಳಮಳಕ್ಕೂ ಒಂದು ಕೊನೆ ಎಂದರೆ ಅದು ‘ಪದುಮಳು ಬಂದಳು..... ಹೂವನ್ನು ಮುಡಿಯುತ ರಾಯರ ಕೋಣೆಯಲಿ’ ಎಂಬ ಸಾಲಿನಲ್ಲಿದೆ. ಅಂದರೆ ಇಲ್ಲಿ ಬರುವ ‘ಪದುಮಳ’ ಚಿತ್ರದಲ್ಲಿ ಕವಿಯ ರಸಿಕತೆಯ ಚಿತ್ರಣವಿದೆ. ಹೀಗಾಗಿ ಅವರ ಕೌಟುಂಬಿಕ ಸನ್ನಿವೇಶದ ಒಂದು ಸಾಮಾನ್ಯ ಘಟನೆಯೂ ಸಹ ಕೆ.ಎಸ್.ನ. ಅವರ ಕಾವ್ಯದಲ್ಲಿ ಅಸಾಮಾನ್ಯ ಎನ್ನಿಸುವ ರೀತಿಯಲ್ಲಿ ಚಿತ್ರತವಾಗುವುದರಲ್ಲಿ ಕವಿ ಕೌಶ¯ವೇ ಎದ್ದು ಕಾಣುತ್ತದೆ. ಆದ್ದರಿಂದಲೇ ‘ಕೀರ್ತಿನಾಥ ಕುರ್ತುಕೋಟಿ’ ಯವರು ಕೆ.ಎಸ್.ನ. ಕುರಿತು ಜೀವನದ ಬಗ್ಗೆ ರುಚಿಯನ್ನು ಹುಟ್ಟಿಸುವ ಮತ್ತು ನಮ್ಮ ಇಡೀ ಸಂವೇದನೆಗಳನ್ನು ಹದಗೊಳಿಸುವ ಬಹಳ ದೊಡ್ಡ ಕರ್ತವ್ಯವನ್ನು ನೆರವೇರಿಸಿ ಕೆ.ಎಸ್ ನ. ಕಾವ್ಯ ಕೃತಾರ್ಥವಾಗಿದೆ ಎಂದಿದ್ದಾರೆ.

          ಇಷ್ಟೇ ಅಲ್ಲದೇ ಅವರು ಬರೆದ ಇನ್ನಿತರ ಪ್ರೇಮ ಕವಿತೆಗಳೆಂದರೆ, ‘ಪ್ರೇಮಾಗಮನ’ ‘ಕೆರೆಯ ದಾರಿಯಲಿ’ ಪ್ರೇಮದ ಗುಲಾಬಿ’ ‘ಮದುವಣಗಿತ್ತಿಯ ಮನಸ್ಸು’ ‘ಪಶ್ಚಾತ್ತಾಪ’ ‘ವಿರಹಿಣಿ’ ಮುಂತಾದ ಕವಿತೆಗಳು ಇಲ್ಲಿಯೂ ಸಹ ಪ್ರೇಮದ ಬಗೆಗಿನ ಹಂಬಲ ಯಥೇಚ್ಛವಾಗಿರುವುದನ್ನ ಕಾಣಬಹುದು.

         ಇವುಗಳಲ್ಲದೇ ಅವರ ವಾತ್ಸಲ್ಯ ಗೀತೆಗಳೂ ಸಹ ಪ್ರೇಮವನ್ನು ಹೊರತಾಗಿಲ್ಲ ಅಂದರೆ ‘ತುಂಗಭದ್ರೆ ಹೊಳೆಯಲ್ಲ ವರುಷದ ಮಗಳು’ ಹಾಗೂ ‘ಆನಂದ’ ಮುಂತಾದ ಕವನಗಳಲ್ಲಿ ತಂದೆ –ತಾಯಿ ಮತ್ತು ಮಕ್ಕಳ ಪ್ರೀತಿ ಅದಮ್ಯವಾಗಿದೆ.

         ಕೆ.ಎಸ್.ನ. ಅವರ ನವ್ಯ ಕವಿತೆಗಳಾದ ‘ಗಡಿಯಾರದಂಗಡಿಯ ಮುಂದೆ’ ಮತ್ತು ‘ರೈಲ್ವೆ ನಿಲ್ದಾಣದಲ್ಲಿಯ ಕವಿತೆಗಳು’ ತಾಯಿ-ಮಗಳ ಅಪೂರ್ವ ಮತ್ತು ಪ್ರೇಮಗಾಥೆಯನ್ನ ಹೇಳುತ್ತದೆ.

         ಹೀಗೆ ಕೆ.ಎಸ್.ನ. ರವರು ಹೆಣ್ಣಿನ ನಿಕಟವಾದ ಪರಿಚಯ ಅವಳ ಹೂ-ಮನಸ್ಸಿನ ಹೊಂಗನಸುಗಳ ಚಿತ್ರಣ. ಸಂಸಾರದ ಮಧುರ ನಿಮಿಷಗಳ ಕಲಾತ್ಮಕ ಅಭಿವ್ಯಕ್ತಿ, ಉಪಮೆಗಳ ನೂತನತೆ ಶೈಲಿಯ ಮಾಧುರ್ಯತೆ ಇವುಗಳೊಂದಿಗೆ ಅವರು ಪ್ರಸ್ತುತವಾಗಿಯೂ ಕನ್ನಡ ನಾಡಿನ ಜನತೆಯಲ್ಲಿ ‘ಮಲ್ಲಿಗೆಯ ಕವಿ’ ಎಂದೇ ಪ್ರಖ್ಯಾತರಾಗುವುದರೊಂದಿಗೆ ಅವರು ಪ್ರೀತಿಯ ಬಗೆಗೆ ನೀಡಿರುವ ಸಂದೇಶಗಳು ದಾಂಪತ್ಯ ಜೀವನಕ್ಕೆ ಬರೆದ ಹೊಸ ವ್ಯಾಖ್ಯಾನಗಳಂತೆ ಕಂಡುಬರುತ್ತದೆ.

ಆಕರ ಗ್ರಂಥಗಳು.

  1. ಮೈಸೂರು ಮಲ್ಲಿಗೆ ಕವನ ಸಂಕಲನ-ಕೆ.ಎಸ್.ನರಸಿಂಹಸ್ವಾಮಿ. 1940
  2. ಶಿಲಾಲತೆ.ಕೆ.ಎಸ್.ನರಸಿಂಹಸ್ವಾಮಿ.1958.
  3. ತೆರೆದಬಾಗಿಲು. ಕೆ.ಎಸ್.ನರಸಿಂಹಸ್ವಾಮಿ.1979.
  4. ವಿಮರ್ಶೆಯ ಮಾರ್ಗ
  5. ಕನ್ನಡ ನವೋದಯ ಕಾವ್ಯ- ಡಾ.ದೊಡ್ಡರಂಗೇಗೌಡ.ಸುಮುಖ ಪ್ರಕಾಶನ.ಬೆಂಗಳೂರು.2004.
  6. ಕನ್ನಡದಲ್ಲಿ ಭಾವಗೀತೆ- ಫ್ರಭುಶಂಕರ. ಡಿ,ವಿ.ಕೆ. ಮೂರ್ತಿ::ಪ್ರಕಾಶಕರು::ಮೈಸೂರು.2000
  7. ಆದುನಿಕ ಕನ್ನಡ ಕವಿಗಳ ಕಾವ್ಯ ಜಿಜ್ಞಾಸೆಗಳು ಒಂದು ಅಧ್ಯಯನ- ಡಾ. ಶಾಂತಲಕ್ಷ್ಮಿ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಳೂರು.2008.   


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal