Tumbe Group of International Journals

Full Text


ನಿಟ್ಟೂರು ಹೋಬಳಿ ಪರಿಸರದ ಸ್ಮಾರಕ ಶಿಲ್ಪಗಳು

ಶ್ರೀನಿವಾಸ .ಜಿ.

ಸಂಶೋಧನಾ ವಿದ್ಯಾರ್ಥಿ

ಪ್ರಾಚೀನ ಇತಿಹಾಸ & ಪುರಾತತ್ವ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ.

e-mail: sreenivasa2283@gmail.com

Mob: 9986765239.

ಪೀಠಿಕೆ           

ಯಾವುದೇ ಒಂದು ಪ್ರದೇಶದ ಸಾಂಸ್ಕøತಿಕ ಇತಿಹಾಸ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಸ್ಮಾರಕ ಶಿಲ್ಪಗಳು ಪ್ರಮುಖ ಸಾಧನಗಳಾಗಿವೆ.  ನಮ್ಮ ಹಿರಿಯರ ಜೀವನ ಶೈಲಿಗೆ ಸಾಕ್ಷಿಯಾಗಿ ಹಳ್ಳಿಹಳ್ಳಿಗಳಲ್ಲಿ ಸ್ಮಾರಕ ಶಿಲ್ಪಗಳು ಕಂಡುಬರುತ್ತವೆ. “ಒಂದು ನಾಡು ಎಂದರೆ ಕೇವಲ ಅಲ್ಲಿ ಆಳ್ವಿಕೆ ಮಾಡಿದ ರಾಜರಲ್ಲ. ಆ ನಾಡನ್ನಾಳಿದ ರಾಜಸಮೂಹ ಅಲ್ಲಿ ಬದುಕಿದ ಜನರ ಒಂದು” ಗಣನೀಯ ಭಾಗವಾಗಿತ್ತು.  ಒಂದು ದೇಶದ ನಿಜವಾದ ಇತಿಹಾಸವೆಂದರೆ ಅಲ್ಲಿ ಬದುಕಿದ ಜನತೆಯ ಇತಿಹಾಸ”(1)

            ಗತಿಸಿ ಹೋದ ಮಾನವನನ್ನು ಸಮಾಧಿ ಮಾಡಿದ ನಿರ್ಧಿಷ್ಠ ಸ್ಥಳದ ಗುರುತಿಗಾಗಿಯೋ.  ಮಡಿದವನ ಸ್ಮರಣೆ ಬರುವಂತೆಯೋ, ಕೆಲವಾರು ಸಂಕೇತಗಳನ್ನೋ, ಗುರುತುಗಳನ್ನೋ ಒಂದು ನಿಗಧಿಯಾದ ಸ್ಥಳದಲ್ಲಿ ಅಥವಾ ಸಮಾಧಿ ಮಾಡಿದ ಸ್ಥಳದಲ್ಲಿ ನೆಡುತ್ತಿದ್ದರು.  ಇವು ಸಾಮಾನ್ಯವಾಗಿ ಆಯಾ ದೇಶಗಳಲ್ಲಿನ ಧರ್ಮ, ನಂಬಿಕೆ, ಸಾಮಾಜಿಕ ಪ್ರತಿಷ್ಠಗಳನ್ನನುಸರಿಸಿಯೋ ಬಿಳೆದಿದೆ.(2)  ಶಿಲ್ಪಕ್ಕೂ ಮತ್ತು ಸ್ಮಾರಕ ಶಿಲ್ಪಕ್ಕೂ ಹಲವಾರು ಹೋಲಿಕೆ ಮತ್ತು ವ್ಯತ್ಯಾಸಗಳಿವೆ.  ಎರಡು ಪ್ರಕಾರಗಳಿಗೂ ಶಿಲೆಯೇ ಮಾಧ್ಯಮವಾಗಿ ಬಳಕೆಗೊಂಡಿದೆ.  ಶಿಲ್ಪ ತಯಾರಿಕೆಯಲ್ಲಿ ಲೋಹದ ಬಳಕೆಯಿದ್ದರೂ, ಸ್ಮಾರಕ ಶಿಲ್ಪದಲ್ಲಿ ಲೋಹದ ಬಳಕೆಯಿಲ್ಲ. ಮಾಧ್ಯಮವೂ ಒಂದೇ ಆಗಿದ್ದರೂ ಶಿಲ್ಪ ಮತ್ತು ಸ್ಮಾರಕ ಶಿಲ್ಪಗಳನ್ನು ನಿರ್ಮಿಸುವ ತಂತ್ರಗಳು ಬೇರೆ ಬೇರೆಯಾಗಿರುತ್ತದೆ.  ಶಿಲ್ಪವನ್ನು ನಾಲ್ಕು ಕಡೆ ಕೆತ್ತಬೇಕು, ಆದರೆ ಸ್ಮಾರಕ ಶಿಲ್ಪವನ್ನು ದೃಶ್ಯದ ಮುಂಭಾಗ ಕಾಣುವಂತೆ ಮಾತ್ರ ಕೆತ್ತಲಾಗಿರುತ್ತದೆ.  ಅಂದರೆ ಎದುರು ನಿಂತು ನೋಡಿದಾಗ ಕಾಣುವಂತೆ ನಿರ್ಮಿಸಲಾಗಿರುತ್ತದೆ.  ಸ್ಮಾರಕ ಶಿಲ್ಪದಲ್ಲಿ ಒಂದು ಘಟನೆಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳನ್ನು ಶಿಲ್ಪಿಯು ನಿರೂಪಿಸಲು ಪ್ರಯತ್ನಿಸಿರುವುದು ಕಂಡುಬರುತ್ತದೆ.  ಸ್ಮಾರಕ ಶಿಲ್ಪದಲ್ಲಿ ಒಂದೇ ಸಮಯದಲ್ಲಿ ಹಲವು ಘಟನೆಗಳನ್ನು ಚಿತ್ರಿಸಲಾಗಿರುತ್ತದೆ.  ವೀರಗಲ್ಲು ಮತ್ತು ಮಹಾಸತಿಕಲ್ಲಿನ ಶಿಲ್ಪಗಳಲ್ಲಿ ಪ್ರಧಾನವಾಗಿ ಗುರುತಿಸಲಾಗುತ್ತದೆ.

            ಸಾಮಾನ್ಯವಾಗಿ ಸ್ಮಾರಕ ಶಿಲ್ಪಗಳು ಜನರ ಬದುಕಿನೊಂದಿಗೆ ಉಳಿದುಕೊಂಡಿರುತ್ತವೆ.  ಆದರೆ ಜನಾಂಗದಿಂದ ಜನಾಂಗವನ್ನು ನೋಡುವ ಪರಿಯೇ ಬೇರೆಯಾಗಿರುತ್ತದೆ.  ಇಂತಹ ಸ್ಮಾರಕ ಶಿಲ್ಪಗಳನ್ನು ರಸ್ತೆಯ ಬದಿಯಲ್ಲಿ, ಮರಗಳ ಕೆಳಗೆ, ಕೆರೆಯ ಏರಿಯ ಭಾಗದಲ್ಲಿ ಎಲ್ಲೆಂದರಲ್ಲಿ ಕಾಣಿಸಿಗುತ್ತವೆ.  ಕೆಲವು ಕಡೆ ಭಕ್ತಿಯಿಂದ ಪೂಜೆಗೆ ಒಳಪಟ್ಟಿರುವ ಸ್ಮಾರಕ ಶಿಲ್ಪಗಳನ್ನು ಕಾಣಬಹುದು.  ಸ್ಮಾರಕಶಿಲ್ಪಗಳು ಯಾವುದಾದರೂ ಘಟನೆಯ ವಿವರ ಜನರ ರೀತಿ ನೀತಿಗಳನ್ನು ತಿಳಿಸಿಕೊಡುತ್ತದೆ.  ಈ ಕಾರಣದಿಂದ ಹಲವಾರು ಜಾನಪದೀಯ ನಂಬಿಕೆಗಳು ಆಚರಣೆಗಳು ಸಂಕೇತಗಳ ಮೂಲಕ ಸ್ಮಾರಕ ಶಿಲ್ಪಗಳಲ್ಲಿ ಸ್ಥಾನ ಪಡೆಯತೊಡಗಿತು.  ಮಹಾಸತಿ ಶಿಲ್ಪಗಳಲ್ಲಿ ಸತಿಯು ತನ್ನ ಕೈಯನ್ನು ಮೇಲೆತ್ತಿ ಹರಸುತ್ತಿರುವುದು.  ನಿಷಿಧಿ ಕಲ್ಲುಗಳಲ್ಲಿ ಸಾಧಕರು ಪುಸ್ತಕದ ಮುಂದೆ ಕುಳಿತಿರುವುದು.  ಸೂರ್ಯ, ಚಂದ್ರ, ಆಕಳು, ಕರು ಸಂಕೇತಗಳು ಕಂಡುಬರುತ್ತವೆ.  ಈ ಸಂಕೇತಗಳಿಗೆ ವಿಸ್ತಾರವಾದ ಅರ್ಥವಿರುತ್ತದೆ.  ಇಂತಹ ಸ್ಮಾರಕ ಶಿಲ್ಪಗಳಲ್ಲಿ ಸಾಮಾಜಿಕ ಕಳಕಳಿಯೇ ಮುಖ್ಯವಾಗಿ ಕಂಡುಬರುತ್ತದೆ.  ಉನ್ನತ ಮೌಲ್ಯಗಳು, ನಂಬಿಕೆಗಳು, ಆಚರಣೆಗಳು ಮುಂದಿನ ತಲೆಮಾರಿನವರಿಗೆ ಮಾದರಿಯಾಗಲಿ ಎಂಬ ಅಂಶ ಅಡಕವಾಗಿರುತ್ತದೆ.  ಹೀಗೆ ಸ್ಮಾರಕ ಶಿಲ್ಪಗಳಿಗೆ ನಿಯಂತ್ರಣವಿಲ್ಲದೆ ಒಂದೊಂದು ಸ್ಮಾರಕ ಶಿಲ್ಪವೂ ವೈಶಿಷ್ಟ್ಯತೆ, ಸ್ವಂತಿಕೆಯಿಂದ ಕೂಡಿವೆ.

            ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವ ಸ್ಮಾರಕ ಶಿಲೆಗಳನ್ನು ಗುರುತಿಸುವುದು ಅದರಲ್ಲಿರುವ ಚಿತ್ರಗಳಿಂದಲೇ ಹೊರತು ಅದರಲ್ಲಿನ ಬರಹದಿಂದಲ್ಲ ಬರಹವಿರುವ ಸ್ಮಾರಕ ಶಿಲೆಗಳನ್ನು ವೀರಗಲ್ಲು, ಮಾಸ್ತಿಕಲ್ಲು ಎಂದು ಕರೆಯದೆ, ಲಿಪಿಕಲ್ಲು ಎಂದೇ ಗುರುತಿಸುತ್ತಾರೆ.  ಇದರಿಂದ ಶಿಲ್ಪಿಗಳು ಬರಹದ ಜೊತೆಯಲ್ಲಿ ಶಿಲ್ಪಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದರೆಂಬುದನ್ನು ತಿಳಿಯಬಹುದು. ಅಕ್ಷರ ಗೊತ್ತಿಲ್ಲದವರೂ ಕೂಡ ಶಿಲ್ಪವನ್ನು           ನೋಡಿ ತ್ಯಾಗ-ಬಲಿದಾನವನ್ನು ಮಾಡಿದವರ ಉದಾತ್ತ ಮನಸ್ಸು ಅರ್ಥಮಾಡಿಕೊಳ್ಳಲಿ, ಅದರಲ್ಲಿ ವ್ಯಕ್ತವಾದ ಮೌಲ್ಯವನ್ನು ತಿಳಿಯಲಿ ಎಂಬ ಉದ್ದೇಶದಿಂದ ಸ್ಮಾರಕ ಶಿಲ್ಪಕ್ಕೆ ಆಧ್ಯತೆ ನೀಡಿದರು.

            ವೀರಗಲ್ಲು, ಮಾಸ್ತಿಕಲ್ಲು ಮತ್ತು ನಿಷಿಧಿಕಲ್ಲು ಮುಂತಾದವು ಮರಣ ಶಿಲ್ಪಗಳು, ಜೈನರ ಸಮಾಧಿ ಮರಣ, ಮೃತ ಪತಿಯೊಡನೆ ಸಹಗಮನ, ಯುದ್ಧದಲ್ಲಿ ವೀರಮರಣ ಇಂತಹ ಸಂದರ್ಭಗಳಲ್ಲಿ ನಿರ್ಮಿಸುತ್ತಿದ್ದ ಸ್ಮಾರಕ ಶಿಲ್ಪಗಳು, ಸ್ಮಾರಕಗಳು ಕೇವಲ ಶಿಲ್ಪ ಇಲ್ಲವೆ.  ಕೇವಲ ಶಾಸನವಾಗಿರಬಹುದಾದರೂ ಓದು-ಬರಹ ತಿಳಿದವರು, ತಿಳಿಯದವರಿಗೂ ವೇದ್ಯವಾಗಲೆಂದು ಕೆಲವು ಸಲ ಎಲ್ಲರನ್ನೂ ಒಳಗೊಂಡಿರುವುದು.(3)

“ಎಲ್ಲೆಲ್ಲೂ ಚೆಲುವಿಹುದು, ಬಲ್ಲವನ ಗೋಚರಕೆ” ಎಂಬ ಕವಿನುಡಿಯಂತೆ ಪ್ರತಿಯೊಂದರಲ್ಲೂ ಸೌಂದರ್ಯವನ್ನು ಕಾಣುವ ಹಂಬಲ ಮಾನವನದು.  ಹಾಗಾಗಿ ಉಬ್ಬು ಕೆತ್ತನೆಗಳ ಕಲಾಕೃತಿಗಳು ಸೌಂದರ್ಯ ಪ್ರಿಯವಾಗಿವೆ.(4)  ರಾಜಕೀಯ ವಿಚಾರಧಾರೆಗಳ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದಂತಹ ವಿದ್ವಾಂಸರು ಶಾಸನ ಪಾಠಕ್ಕೆ ಆದ್ಯತೆ ನೀಡಿ ಶಾಸನದಲ್ಲಿನ ಶಿಲ್ಪಗಳು, ಶಾಸನರಹಿತ ಶಿಲ್ಪಗಳನ್ನು ಕಡೆಗಣಿಸಿರುವುದು ಕಂಡುಬರುತ್ತದೆ.  ಇದರಿಂದ ಶಾಸನ ಪ್ರಕಾರದಲ್ಲಿ ಅಧಿಕವಾಗಿರುವಂತಹ ಸ್ಮಾರಕ ಶಿಲ್ಪಗಳಿಗಂತೂ ಅನ್ಯಾಯವಾಗಿರುವುದು ಕಟುಸತ್ಯ.  ಈ ಅಂಶವನ್ನು ಮನಗಂಡು ನಿಟ್ಟೂರು ಹೋಬಳಿ ಪರಿಸರದಲ್ಲಿ ಕಂಡುಬರುವ ಸ್ಮಾರಕಶಿಲ್ಪಗಳನ್ನು ಈ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಸ್ಥಳ ಪರಿಚಯ:

            ಕರ್ನಾಟಕದಲ್ಲಿ ಕಲ್ಪತರು ನಾಡು, ತುಂಬೆಯ ಊರು ಎಂದೆಲ್ಲಾ ಪ್ರಸಿದ್ಧಿ ಪಡೆದಿರುವ ತುಮಕೂರು ಜಿಲ್ಲೆ ಒಳಗೊಂಡಿರುವ ಹತ್ತು ತಾಲ್ಲೂಕುಗಳಲ್ಲಿ ಗುಬ್ಬಿಯೂ ಒಂದಾಗಿದೆ.  ಗುಬ್ಬಿ ಒಳಗೊಂಡಿರುವ ಆರು ಹೋಬಳಿಗಳಲ್ಲಿ ನಿಟ್ಟೂರು ಹೋಬಳಿ ಕೇಂದ್ರವಾಗಿದ್ದು, ಸಂಸ್ಕøತಿಯ ದೃಷ್ಟಿಕೋನದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡಿದೆ.  ತಾಲ್ಲೂಕು ಕೇಂದ್ರವಾದ ಗುಬ್ಬಿಯಿಂದ ಪಶ್ಚಿಮಕ್ಕೆ 9 ಕಿ.ಮೀ. ದೂರದಲ್ಲಿದೆ. 

            ನಿಟ್ಟೂರು ಎಂಬ ಪದವು ನಿಟ್ಟು+ಊರು ಎಂಬ ಎರಡು ಪದಗಳು ಸೇರಿ ನಿಟ್ಟೂರು ಆಗಿದೆ.  ನಿಟ್ಟು ಎಂದರೆ ದಿಕ್ಕು, ಅಡಕಿಲು, ಗುರಿ, ಕಟ್ಟಳೆ, ನಿರ್ಬಂಧ, ಚೀಲಗಳನ್ನು ಒಂದರ ಮೇಲೆ ಒಂದನ್ನು ಸೇರಿಸಿ ಇಟ್ಟಿರುವುದು.  ಎಂದರ್ಥ.  ಊರು ಎಂದರೆ ನೆಲೆಸು, ನೆಲೆಯಾಗಿ ನಿಲ್ಲು, ಭದ್ರವಾಗಿ ನಿಲ್ಲಿಸು, ನೆಡು, ಹಳ್ಳಿ ಎಂಬರ್ಥ ಕೊಡುತ್ತದೆ.  ನಿಟ್ಟೂರು ಸಮೀಪದಲ್ಲಿರುವ ಪ್ರಸಿದ್ಧ ಕಲ್ಲೇಶ್ವರ ದೇವಾಲಯದ ಕ್ರಿ.ಶ.1226ರ ಶಿಲಾಶಾಸನದಲ್ಲಿ ನಿಟ್ಟೂರನ್ನು “ತೆಂಕಣಯ್ಯಾವಳೆ” ಎನಿಸಿದ ಮಹಾಪಟ್ಟಣವಾಗಿತ್ತು ಎಂದು ಉಲ್ಲೇಖಿಸಿದೆ.(5)  ಇದು ಪ್ರಾಚೀನ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು.  ಇಲ್ಲಿನ ವ್ಯಾಪಾರ, ವಹಿವಾಟು ಭಾರತದ ಉದ್ದಗಲಕ್ಕೂ ಹರಡಿತ್ತು.  ಇಂತಹ ಕೇಂದ್ರದಲ್ಲಿ ದವಸ-ಧಾನ್ಯಗಳನ್ನು ಕೊಂಡು ಚೀಲಗಳಲ್ಲಿ ತುಂಬಿ ಒಂದರ ಮೇಲೆ ಒಂದನ್ನು ಪೇರಿಸುತ್ತಿದ್ದರಿಂದ ನಿಟ್ಟು ಎಂದು ಆ ಪ್ರದೇಶದಲ್ಲಿ ಜನರು ನೆಲೆಸಿರುವುದರಿಂದ ನಿಟ್ಟೂರು ಎಂದು ಕರೆಯಲಾಗಿದೆ.  ಈ ಪ್ರದೇಶದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಗಂಗ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ, ರಾಜಮನೆತನಗಳ ಮತ್ತು ಪಾಳೇಯಗಾರರ ಆಳ್ವಿಕೆಗೆ ನಿಟ್ಟೂರು ಒಳಪಟ್ಟಿತ್ತು.  ವಿವಿಧ ಕಾಲಘಟ್ಟದ ಸ್ಮಾರಕ ಶಿಲ್ಪಗಳು ನಿಟ್ಟೂರು ಪರಿಸರದಲ್ಲಿ ಕಂಡುಬಂದಿವೆ.  ಈ ಲೇಖನದಲ್ಲಿ ಅಂತಹ ಸ್ಮಾರಕ ಶಿಲ್ಪಗಳನ್ನು ಪ್ರಮುಖವಾಗಿ ಇಟ್ಟುಕೊಳ್ಳಲಾಗಿದೆ.

ಸ್ಮಾರಕ ಶಿಲ್ಪಗಳು:

            ಭಾರತೀಯರ ಜೀವನದ ಪರಮಗುರಿ ಸದ್ಗತಿ ಸಂಪಾದನೆ, ಮೌಲ್ಯಾನುಸಂಧಾನ, ಆತ್ಮಾನುಸಂಧಾನ, ಆದರ್ಶಾನುಸಂಧಾನಗಳನ್ನು ಸದ್ಗತಿಗೆ ಸಾಧನಗಳನ್ನಾಗಿ ಪರಿಭಾವಿಸಿಕೊಂಡವರು ಧರ್ಮಮಾರ್ಗಗಳಲ್ಲಿ ನಡೆವ ಧರ್ಮವೀರನಿಗೆ ಸಾಧ್ಯವಾಗುವ ಮೋಕ್ಷಸಾಧನೆ, ಧಾರ್ಮಿಕ ಬಲಿದಾನ, ಲೌಕಿಕ ಬಲಿದಾನ ಮಾರ್ಗಗಳಿಂದಲೂ ಸಾಧ್ಯವೆಂಬ ಅಭಿಪ್ರಾಯ ಬೆಳೆದು ಕೊನೆಗೆ ಯುದ್ಧದಲ್ಲಿ ಮಡಿದ ವೀರನಿಗೂ ಸಾಧ್ಯವೆಂಬ ಪರಂಪರೆ ಬೆಳೆಯಿತು.  ಗ್ರಾಮರಕ್ಷಣೆ, ಗೋರಕ್ಷಣೆ ಮತ್ತು ಸ್ತ್ರೀರಕ್ಷಣೆಯ ಅವಶ್ಯಕತೆ ಅಧಿಕವಾದಂತೆ ಯುದ್ಧ ವೀರನಿಗೂ ಸಮಾನ ಸ್ಥಾನ ಲಭಿಸಿತು.  ಹೋರಾಟದಲ್ಲಿ ಮಡಿದ ವೀರನಿಗೆ ಅವರ ಸ್ಮರಣಾರ್ಥವಾಗಿ ನಿಲ್ಲಿಸುವ ಸ್ಮಾರಕಗಳೇ ವೀರಗಲ್ಲುಗಳು.  ಕೆಲವು ವೀರಗಲ್ಲುಗಳಲ್ಲಿ ಬರವಣಿಗೆಯಿದ್ದರೆ, ಕೆಲವು ವೀರಗಲ್ಲುಗಳಲ್ಲಿ ಬರವಣಿಗೆ ರಹಿತವಾಗಿದ ಉಬ್ಬು ಶಿಲ್ಪಗಳಿರುತ್ತವೆ.  ಗಂಡ/ವೀರ ಸತ್ತ ನಂತರ ಸಹಗಮನ ಆಚರಿಸುವ ಸಂಗತಿ ಸೂಚಿಸಲು ಮಹಾಸತಿ ಕಲ್ಲನ್ನು ಹಾಕಿಸಿದ್ದಾರೆ.  ಮಾನವ ತನ್ನ ಜೀವಿತ ಕಾಲಾವಧಿಯಲ್ಲಿ ಸಲ್ಲೇಖನ ವ್ರತದಿಂದ ಮರಣ ಹೊಂದಿದ ನೆನಪಿಗಾಗಿ ನಿಷಿಧಿ ಕಲ್ಲುಗಳು ಕಂಡುಬರುತ್ತವೆ.

ಕನ್ನಡ ಜನ ಮೊದಲಿನಿಂದಲೂ ಶೂರರಾಗಿದ್ದರೆಂಬುದಕ್ಕೆ ನಾಡಿನ ಇತಿಹಾಸವೇ ಸ್ಪಷ್ಪ ನಿದರ್ಶನವಾಗಿದೆ.  ರಾಜರುಗಳ ಸಾಧನೆಗೆ ಜನತೆ ಬೆಂಬಲವಾಗಿ ನಿಲ್ಲುತ್ತಿದ್ದರು.  ಊರಿನ ಒಡೆಯರು, ಊರುಗಾವುಂಡರು, ನಾಯಕರು ಸಾಮಾನ್ಯವಾಗಿ ಜನರ ಪರಾಕ್ರಮಕ್ಕೆ ಗಮನ ನೀಡಿ ಸ್ಮಾರಕಗಳನ್ನು ನಿಲ್ಲಿಸಲಾಗಿದೆ.  ನಿಸ್ವಾರ್ಥ ಸಾಧನೆಯ ಪರಾಕ್ರಮಕ್ಕೆ ಕೊಟ್ಟ ಪುರಸ್ಕಾರವನ್ನು ಇದು ತೋರಿಸುತ್ತದೆ. 

ಹೆಸರಳ್ಳಿಯಲ್ಲಿನ ಸ್ಮಾರಕಶಿಲ್ಪಗಳು:

            ನಿಟ್ಟೂರು ಸಮೀಪದ ಹೆಸರಹಳ್ಳಿಯಲ್ಲಿ ಒಂದು ವೀರಗಲ್ಲಿದೆ.  ಈ ವೀರಗಲ್ಲು ಊರಿನ ಮುಂಭಾಗದಲ್ಲಿರುವ ಕಟ್ಟೆಯ ಒಳಗೆ ಬಿದ್ದಿತ್ತು ಇತ್ತೀಚೆಗೆ ಗ್ರಾಮಸ್ಥರು ಕಟ್ಟೆಯ ದಡದಲ್ಲಿ ಸಿಮೆಂಟ್ ಕಟ್ಟೆಯನ್ನು ಕಟ್ಟಿ ಆ ವೀರಗಲ್ಲನ್ನು ಸಂರಕ್ಷಿಸಿದ್ದಾರೆ.  ಈ ವೀರಗಲ್ಲು ಸುಮಾರು 03 ಅಡಿ ಉದ್ದವಾಗಿದ್ದು, 1  1/2 ಅಡಿಯಷ್ಟು ಅಗಲವಾಗಿದೆ   1/2 ಅಡಿಯಷ್ಟು ದಪ್ಪವಾಗಿದೆ.  ಇದರಲ್ಲಿ ಎರಡು ಅಡಿಯಷ್ಟು ಎತ್ತರದ ವೀರನ ಶಿಲ್ಪವಿದೆ.  ವೀರನು ತನ್ನ ಎಡಗಾಲನ್ನು ಮುಂದೆ ಇಟ್ಟು ಬಲಗಾಲನ್ನು ಹಿಂದಕ್ಕೆ ಇಟ್ಟು ಎಡಗೈಯಲ್ಲಿ ಬಿಲ್ಲನ್ನು ಹಿಡಿದು, ಬಲಗೈಯಲ್ಲಿ ಬಾಣವನ್ನು ಹಿಡಿದು ಬಿಲ್ಲಿನ ಮೂಲಕ ಬಾಣವನ್ನು ಎಳೆದು ಬಿಡುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.  ವೀರನು ತನ್ನ ಬೆನ್ನಿನ ಹಿಂಬದಿಯಲ್ಲಿ ಬಾಣಗಳನ್ನು ಇಟ್ಟುಕೊಂಡಿದ್ದಾನೆ.  ಮತ್ತು ಸೊಂಟದಲ್ಲಿ ಚಿಕ್ಕದಾದ ಕತ್ತಿಯನ್ನು ಇಟ್ಟುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.  ಈ ಸ್ಮಾರಕವನ್ನು ನಿರ್ಮಿಸಲು ಕಣಶಿಲೆಯನ್ನು ಬಳಸಲಾಗಿದೆ.  ಶಿಲಾ ಮಾಧ್ಯಮದ ಆಧಾರದಿಂದ ಈ ಸ್ಮಾರಕ 15-16ನೇ ಶತಮಾನದ್ದೆಂದು ತಿಳಿಯುತ್ತದೆ.  ಈ ಸ್ಮಾರಕ ಶಿಲ್ಪದ ವಿಶೇಷವೇನೆಂದರೆ, ಕಲ್ಲನ್ನು ಒಳಮುಖವಾಗಿ ಕೊರೆದು ಅದರ ಒಳಭಾಗದಲ್ಲಿ ವೀರನ ಉಬ್ಬುಶಿಲ್ಪ ಕೆತ್ತಲಾಗಿದೆ.  ಸಾಮಾನ್ಯವಾಗಿ ವೀರಗಲ್ಲುಗಳಲ್ಲಿ ಸೂರ್ಯ-ಚಂದ್ರರ ಸಂಕೇತವಿದ್ದರೆ ಈ ಸ್ಮಾರಕದಲ್ಲಿ ಚಂದ್ರನ ಸಂಕೇತ ಮಾತ್ರ ಗೋಚರಿಸುತ್ತದೆ.  ಈ ವೀರಗಲ್ಲು ಪೂಜೆಗೆ ಒಳಪಟ್ಟಿದೆ.

 

ಇದೇ ಗ್ರಾಮದಲ್ಲಿನ ಅರಳೀಮರದ ಕೆಳಗೆ ಒಂದು ಮಹಾಸತಿ ಸ್ಮಾರಕ ಶಿಲ್ಪವಿದೆ.  ಇಲ್ಲಿರುವ ಮಾಸ್ತಿಶಿಲ್ಪ ಗಮನಾರ್ಹವಾಗಿದೆ.  ಮಧ್ಯದಲ್ಲಿ ವೀರನಿದ್ದು ಆತನ ಎಡ ಮತ್ತು ಬಲಬದಿಯಲ್ಲಿ ಆತನ ಇಬ್ಬರು ಸತಿಯರು ನಿಂತಿದ್ದಾರೆ.  ಈ ಶಿಲ್ಪ ಭೂಮಿಯಲ್ಲಿ ಹೂತು ಹೋಗಿರುವುದರಿಂದ ದೇಹದ ಅರ್ಧಭಾಗ ಮಾತ್ರ ಗೋಚರಿಸುತ್ತದೆ.  ಮಧ್ಯದಲ್ಲಿರುವ ವೀರ ತನ್ನ ಬಲಗೈಯನ್ನು ಇಳಿ ಬಿಟ್ಟಿರುವಂತೆ ಮತ್ತು ತನ್ನ ಎಡಗೈಯನ್ನು ಸೊಂಟದ ಮೇಲೆ  ಇಟ್ಟಿದ್ದಾನೆ.  ಈತನ ತಲೆಯ ಕೂದಲು ಉದ್ದವಾಗಿದ್ದು, ಜಡೆಯ ರೂಪದಲ್ಲಿ ಚಿತ್ರಿಸಲಾಗಿದೆ.  ಈತನ ಕೊರಳಲ್ಲಿ ಕಂಠೀಹಾರ ಮತ್ತು ಕೈಯಲ್ಲಿ ಕಡಗಗಳು ಮತ್ತು ಭುಜಬಂಧಗಳಿವೆ.  ಎರಡೂ ಬದಿಯಲ್ಲಿರುವ ಸತಿಯರ ವೇಷಭೂಷಣಗಳು ಒಂದೇ ರೀತಿಯಿದೆ.  ಕೊರಳಹಾರ, ಕೈಕಡಗ, ಭುಜಬಂಧದ ತೊಡುಗೆಗಳಿವೆ.  ಇದು ಸತಿ ಕಲ್ಲಾದರೂ ವೀರನನ್ನೂ ಸಮಾನಾಂತರವಾಗಿ ಚಿತ್ರಿಸಲಾಗಿದೆ.  ಇಬ್ಬರೂ ಸತಿಯರು ತಮ್ಮ ಕೈಗಳನ್ನು ಮೇಲೆತ್ತಿ ಎಡಕೈಗಳಲ್ಲಿ ದರ್ಪಣವನ್ನು ಬಲಗೈಯಲ್ಲಿ ನಿಂಬೆ ಹಣ್ಣನ್ನು ಹಿಡಿದಿದ್ದಾರೆ.  ಇವರ ಮೇಲ್ಭಾಗದಲ್ಲಿ ಶಿವಲಿಂಗು ಮತ್ತು ಅಲಂಕೃತವಾದ ನಂದಿಯನ್ನು ಕೆತ್ತಲಾಗಿದೆ.  ಈ ಮಾಸ್ತಿಸ್ಮಾರಕಕ್ಕೆ ಗುಡಿ ನಿರ್ಮಿಸಲಾಗಿತ್ತು.  ಅದು ಪಾಳು ಬಿದ್ದಿದ್ದರಿಂದ ಹೆಸರಹಳ್ಳಿ, ನಿಟ್ಟೂರು, ಕಾಗ್ಗೆರೆ ಜನರು, ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ದೇವಾಲಯ ನಿರ್ಮಿಸಿ, ಹಬ್ಬ ಹರಿದಿನಗಳಲ್ಲಿ ಪೂಜಿಸುತ್ತಿದ್ದಾರೆ.

ಪುರದ ಸ್ಮಾರಕ ಶಿಲ್ಪಗಳು

ಶಿರಾ-ಮೈಸೂರು ರಸ್ತೆಯಲ್ಲಿ ನಿಟ್ಟೂರಿನಿಂದ 01 ಕಿ.ಮೀ. ದೂರದಲ್ಲಿರುವ ಪುರ ಗ್ರಾಮದಲ್ಲಿ ಮಹಾಸತಿಕಲ್ಲು ಮತ್ತು ವೀರಗಲ್ಲುಗಳು ಕಂಡುಬಂದಿವೆ.  ಐತಿಹಾಸಿಕ ಪ್ರಸಿದ್ಧ ಹೊಯ್ಸಳರ ಕಾಲದ ಕಲ್ಲೇಶ್ವರ ಸ್ಮಾಮಿ ದೇವಾಲಯದ ಪ್ರಕಾರದ ಒಳಭಾಗದಲ್ಲಿ ಕಂಡುಬರುತ್ತವೆ.  ಪ್ರಾಕಾರದ ಒಳಗೆ ಪಾಳು ಬಿದ್ದಿರುವ ಉಣ್ಣೆ ಬಸವಣ್ಣ ಗುಡಿಯ ಬಳಿ ಒಂದು ಮಾಸ್ತಿಗಲ್ಲಿದೆ.  ಇದು ಎರಡು ಹಂತಗಳನ್ನು ಒಳಗೊಂಡಿದ್ದು, ಮೊದಲ ಹಂತದ ಮಧ್ಯದಲ್ಲಿ ಶಿವಲಿಂಗುವಿದ್ದು, ಅದರ ಬಲಭಾಗದ ಜಲ ಹರಿಗೆ ಅಭಿಮುಖವಾಗಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.  ಮತ್ತೊಂದು ಬದಿಯಲ್ಲಿ ಸತಿ ಶಿವನದರ್ಶನ ಪಡೆದು ಕುಳಿತಿರುವಂತೆ ಚಿತ್ರಿಸಲಾಗಿದೆ.

            ಅದರ ಕೆಳಗಿನ ಭಾಗದ ಮಧ್ಯದಲ್ಲಿ ಗೋಪುರವುಳ್ಳ ಪಲ್ಲಕ್ಕಿಯಲ್ಲಿ ವೀರ ಕುಳಿತಿದ್ದು ಪಲ್ಲಕ್ಕಿಯ ಎಡಭಾಗದಲ್ಲಿ ಒಬ್ಬ ಸತಿ(ಮಹಿಳೆ)ಯಿದ್ದು ಕಿವಿಗೆ ಅಗಲವಾದ ಓಲೆ ಧರಿಸಿದ್ದಾಳೆ.  ಬಲಭಾಗದ ಕೈ ನಾಶವಾಗಿದೆ.  ಎಡಗೈ ಮೇಲಕ್ಕೆ ಎತ್ತಿ ಹರಸುತ್ತಿರುವಂತೆ ಕೆತ್ತಲಾಗಿದೆ.  ಬಲಭಾಗದಲ್ಲಿ ಮತ್ತೊಬ್ಬ ಸತಿಯಿದ್ದು, ತನ್ನ ಎರಡು ಕೈಗಳನ್ನು ಮೇಲೆತ್ತಿದ್ದು, ಬಲಗೈಯಲ್ಲಿ ನಿಂಬೆ ಹಣ್ಣನ್ನು ಹಿಡಿದಿದ್ದರೆ, ಎಡಗೈಯಲ್ಲಿ ದರ್ಪಣವನ್ನು ಹಿಡಿದಿದ್ದಾಳೆ.  ಈ ಸ್ಮಾರಕ ಕಲ್ಲಿನ ಮೇಲ್ತುದಿಯಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ.

            ಇದೇ ದೇವಾಲಯದ ಬಳಿ ಬಲಭಾಗದಲ್ಲಿ ನೆಲಮಾಳಿಗೆಯ ಒಳಗೆ ಒಂದು ದೊಡ್ಡದಾದ ಮತ್ತು ಚಿಕ್ಕದಾದ ಮೂರು ಹಂತದ ವೀರಗಲ್ಲುಗಳಿವೆ.  ದೊಡ್ಡ ವೀರಗಲ್ಲಿನ ಕೆಳಭಾಗದ ಮೊದಲ ಹಂತದಲ್ಲಿ ವೀರರು ಹೋರಾಡುತ್ತಿರುವಂತೆ ಅದರ ಮೇಲ್ಭಾಗದಲ್ಲಿ ಕುಳಿತ ಭಂಗಿಯಲ್ಲಿರುವ ಸತಿಯರ ಶಿಲ್ಪಗಳಿವೆ.  ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.  ಅದರ ಮೇಲ್ಭಾಗ ಮತ್ತು ಪಕ್ಕದಲ್ಲಿರುವ ಮತ್ತೊಂದು ವೀರಗಲ್ಲಿನ ಶಿಲ್ಪಾಕೃತಿಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ತ್ಯಾಗಟೂರು ಸ್ಮಾರಕ ಶಿಲ್ಪಗಳು:

ನಿಟ್ಟೂರು ಹೋಬಳಿಯಲ್ಲಿ ಕಂಡು ಬರುವ ತ್ಯಾಗಟೂರಿನಲ್ಲಿ ಒಂದು ಮಹಾಸತಿ ಸ್ಮಾರಕವಿದೆ.  ತ್ಯಾಗಟೂರಿನ ಊರ ಹೊರಭಾಗದಲ್ಲಿನ ಕೆರೆಯ ಹಿಂಬದಿಯಲ್ಲಿ ಮಹಾಸತಿ ಮಂಟಪವಿದ್ದು, ಅದರಲ್ಲಿ ಹೊಯ್ಸಳರ ಕಾಲದ ಮೃದುವಾದ ಕಪ್ಪು ಶಿಲೆ ಬಳಸಿ ನಿರ್ಮಿಸಿರುವ ಮಹಾಸತಿ ಮತ್ತು ಪುರುಷನ ಶಿಲ್ಪಗಳಿವೆ.  ಇದರಲ್ಲಿ ಪುರುಷನಿಗೆ ಸರಿಸಮಾನವಾಗಿಯೇ ಮಹಾಸತಿಯನ್ನು ಪ್ರತ್ಯೇಕವಾಗಿ ಚಿತ್ರಿಸಲಾಗಿದೆ.  ಸತಿ ಮತ್ತು ಪತಿ ಇಬ್ಬರೂ ಕೈಮುಗಿದು ಪದ್ಮಾಸನದಲ್ಲಿ ಕುಳಿತಿದ್ದಾರೆ.  ಕೆಳಭಾಗ ಮುಚ್ಚಿ ಹೋಗಿದೆ.  ಸತಿಯು ತನ್ನ ಕೂದಲನ್ನು ದುಂಡಾಕಾರವಾಗಿ ಕಟ್ಟಿ ಅಲಂಕರಿಸಿಕೊಳ್ಳಲಾಗಿದೆ.  ಕಿವಿಗಳಿಗೆ ಸುಂದರವಾದ ಅಗಲವುಳ್ಳ ಕಿವಿಯೋಲೆ, ಕೊರಳ ಸರಗಳು, ಪದಕ, ಕೈ ಬಳೆಗಳು ಭುಜ ಪಟ್ಟಿಗಳಂತಹ ಆಭರಣಗಳು ವೈಶಿಷ್ಟ್ಯವಾಗಿದ್ದು ಸಣ್ಣದಾದ ನಡು, ಉನ್ನತವಾದ ಕುಚಗಳಿಂದ ಕೂಡಿರುವಂತೆ ಚಿತ್ರಿಸಲಾಗಿದೆ.  ಸತಿಯ ಪಕ್ಕದಲ್ಲೇ ಪದ್ಮಾಸನದಲ್ಲಿ ಪತಿಯನ್ನು ಚಿತ್ರಿಸಲಾಗಿದೆ.  ಸತಿ ಮತ್ತು ಪತಿಯ ಮಧ್ಯೆ ಒಂದು ಉದ್ದವಾದ ಪಟ್ಟಿಕೆಯಿದ್ದು ಅದರ ಮೇಲ್ತುದಿಯಲ್ಲಿ ನಂದಿ ಶಿಲ್ಪವಿದೆ.  ಹಿಂದಿನ ಶಿಲಾ ಪ್ರಭಾವಳಿಯನ್ನು ಕಮಲದ ಪುಷ್ಪ ಹೂಬಳ್ಳಿಗಳಿಂದ ಅಲಂಕರಿಸಲಾಗಿದೆ.  ಇಂದಿಗೂ ಸ್ಥಳೀಯರು ತಿಮ್ಮವ್ವ, ತಿಮ್ಮಪ್ಪ ಎಂದು ಹಬ್ಬ ಹರಿದಿನ ಶುಭಕಾರ್ಯಗಳಲ್ಲಿ ಪೂಜಿಸುತ್ತಾ ಬಂದಿದ್ದಾರೆ.

            ಇದೇ ಗ್ರಾಮದ ಊರ ಒಳಭಾಗದಲ್ಲಿ ಜೈನ ಸ್ಮಾರಕ ಶಿಲ್ಪವಿದೆ.  ಜಿನಮೂರ್ತಿ ಒಂದು ಕಾಲನ್ನು ಮಡಚಿ, ಮತ್ತೊಂದು ಕಾಲಿನ ಮೇಲೆ ಹಾಕಿ ಒಂದು ಅಂಗೈ ಮೇಲೆ ಮತ್ತೊಂದು ಅಂಗೈ ಇಟ್ಟಿಕೊಂಡು ಮೈಸೆಟೆದು ಪದ್ಮಾಸನದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ.  ಅದರ ಮೇಲೆ ಮುಕ್ಕೋಡೆಯಿದೆ.  ಜಿನಶಿಲ್ಪವುಳ್ಳ ಕಂಬದಲ್ಲಿ ಶಾಸನವಿದೆ.  ಸುಮಾರು ಮೂರು ಅಡಿ ಎತ್ತರವಾಗಿದೆ.

            ತ್ಯಾಗಟೂರು ಕೆರೆಯ ಮುಂಭಾಗದ ಅರ್ಕೇಶ್ವರ ದೇವಾಲಯದ ಬಳಿ ಇರುವ ಅರಳೀಮರದ ಬುಡದಲ್ಲಿ ಹಸಿರು ಮಿಶ್ರಿತ ಬಳಪದ ಕಲ್ಲಿನಲ್ಲಿ ನಿರ್ಮಿಸಿರುವ ಹೊಯ್ಸಳರ ಕಾಲದ ಮೂರು ಹಂತದ ಒಂದು ವೀರಗಲ್ಲಿದೆ.  ಸುಮಾರು 4 ಅಡಿ ಎತ್ತರವಾಗಿದ್ದು, 02 ಅಡಿ ಅಗಲವಾಗಿದೆ.  ಕೆಳಭಾಗದ ಮೊದಲ ಹಂತದಲ್ಲಿ ವೀರ ಬಲಗೈಯಲ್ಲಿ ಕತ್ತಿ ಎಡಗೈಯಲ್ಲಿ ಗುರಾಣಿಯನ್ನು ಹಿಡಿದಿದ್ದು ಕಟಿವಸ್ತ್ರ ಧರಿಸಿ, ಕೊರಳಹಾರ ದಪ್ಪದಾದ ಕರ್ಣಕುಂಡಲಗಳಿವೆ.  ಅವನ ಮುಂಭಾಗದಲ್ಲಿ ಚಿಕ್ಕದಾದ ಒಂದು ಶಿಲ್ಪವಿದ್ದು, ಛತ್ರಿಯನ್ನು ಹಿಡಿದು ನಿಂತಿದ್ದಾನೆ.  ಅದರ ಮೇಲಿನ ಎರಡನೇ ಹಂತದಲ್ಲಿ ವೀರನು ಧ್ಯಾನಾಸಕ್ತನಾಗಿ ಕುಳಿತಿದ್ದು ಇವನ ಬದಿಯಲ್ಲಿ ಸತಿಯು ನಿಂತಿದ್ದಾಳೆ.  ಇವರ ಎಡ ಮತ್ತು ಬಲಭಾಗದಲ್ಲಿ ಚಾಮರ ಧಾರಿಣಿಯರನ್ನು ಚಿತಿಸಲಾಗಿದೆ.  ಮೇಲ್ಭಾಗದ ಮೊದಲನೇ ಹಂತದಲ್ಲಿ ಶಿವಲಿಂಗು ಮತ್ತು ನಂದಿಯಿದೆ.  ಎಡಕೈಯಲ್ಲಿ ಕಮಂಡಲವನ್ನು ಹಿಡಿದಿರುವ ಋಷಿಮುನಿ ಪೂಜೆಯಲ್ಲಿ ನಿರತನಾಗಿದ್ದು, ಆತನ ಹಿಂಬದಿಯಲ್ಲಿ ಸೇವಕನು ಕಂಡು ಬರುತ್ತಾನೆ.  ಇದನ್ನು ಗಮನಿಸಿದಾಗ ಸ್ವರ್ಗದಲ್ಲಿ ಶಿವನ ಆಶೀರ್ವಾದ ಪಡೆಯುತ್ತಿರುವಂತೆ ತಿಳಿಯುತ್ತದೆ.  ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ಚಿತ್ರಿಸಿದ್ದಾರೆ. 

ಗೇರಹಳ್ಳಿ ಸ್ಮಾರಕ ಶಿಲ್ಪ:

ಗೇರಹಳ್ಳಿ ಗ್ರಾಮವು ನಿಟ್ಟೂರು ಹೋಬಳಿಯಲ್ಲಿ ಕಂಡುಬರುತ್ತದೆ.  ಈ ಗ್ರಾಮದ ಊರ ಮುಂದಿನ ಅರಳೀಮರದ ಕೆಳಭಾಗದಲ್ಲಿ ಕಣಶಿಲೆಯಲ್ಲಿ ನಿರ್ಮಿಸಿರುವ ಒಂದು ವೀರಗಲ್ಲಿದೆ.  ಇದನ್ನು ಗಮನಿಸಿದಾಗ ನಿಂತಿರುವ ಭಂಗಿ ಕೆಲವು ಅಲಂಕಾರಿಕ ಅಂಶಗಳು ಹನುಮಂತ(ಆಂಜನೇಯ)ನ ಲಕ್ಷಣಗಳಿಗೆ ಹೋಲಿಕೆಯಾದರೂ, ಇದು ಒಂದು ವೀರಗಲ್ಲಾಗಿದೆ.  ವೀರ ತನ್ನ ಬಲಗೈಯನ್ನು ಮೇಲೆತ್ತಿ ಕತ್ತಿಯನ್ನು ಹಿಡಿದಿದ್ದಾನೆ.  ಕತ್ತಿಯ ಹಿಡಿಕೆಯ ಕೆಳಭಾಗದಲ್ಲಿ ಪುಷ್ಪಗುಚ್ಛಗಳಿವೆ.  ವೀರ ತನ್ನ ಎಡಗಾಲನ್ನು ಮುಂದಿಟ್ಟು ಬಲಗಾಲನ್ನು ಹಿಂದಿಟ್ಟು ಮುಮ್ಮುಖವಾಗಿ ನಿಂತಿದ್ದಾನೆ.  ಎಡಗೈ ತನ್ನ ಸೊಂಟದ ಬಳಿ ಹಾದುಹೋಗಿರುವ ಹೂಬಳ್ಳಿಯ ರೀತಿಯ ಅಲಂಕಾರಕವನ್ನು ಹಿಡಿದಿದ್ದಾನೆ.  ತನ್ನ ಕೈ-ಕಾಲುಗಳಲ್ಲಿ ಕಡಗ, ಭುಜಬಂಧ ಕೊರಳಿನಲ್ಲಿ ಕಂಠೀಹಾರಗಳು, ಕಟಿವಸ್ತ್ರವನ್ನು ಧರಿಸಿದ್ದ ಕಟಿವಸ್ತ್ರದ ಮಧ್ಯದಲ್ಲಿ ಹೂಗುಚ್ಛದಂತೆ ಇಳಿಬಿಡಲಾಗಿದೆ.  ಜಡೆ ಹೆಣೆದಿರುವ ತಲೆಕೂದಲು ಉದ್ದವಾಗಿ ಇಳಿಬಿಟ್ಟಿದೆ.  ವೀರನ ಬಲಭಾಗದಲ್ಲಿ ಸತಿಯ ಶಿಲ್ಪವಿದ್ದು, ತನ್ನ ಎರಡು ಕೈಗಳನ್ನು ಮೇಲೆತ್ತಿರುವಂತೆ ಚಿತ್ರಿಸಲಾಗಿದೆ.  ಬಲಗೈ ಮೇಲೆತ್ತಿ ಹರಸುತ್ತಿರುವಂತಿದ್ದರೆ, ಎಡಗೈಯಲ್ಲಿ ದರ್ಪಣ ಹಿಡಿದಿದ್ದಾಳೆ.  ಅಲಂಕಾರಿಕ ಉಡುಗೆ ತೊಟ್ಟಿದ್ದಾಳೆ.  ಕಲ್ಲಿನ ತುದಿಯ ಎಡ-ಬಲಭಾಗದಲ್ಲಿ ಸೂರ್ಯ-ಚಂದ್ರರ ಕೆತ್ತನೆಗಳಿವೆ.

ಸಾಗಸಂದ್ರದ ಸ್ಮಾರಕಶಿಲ್ಪ:

            ನಿಟ್ಟೂರು ಹೋಬಳಿಯಲ್ಲಿ ಕಂಡುಬರುವ ಸಾಗಸಂದ್ರ ಊರ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ಎತ್ತರವಾದ ವೇದಿಕೆಯ ಮೇಲೆ ಮೂರು ಹಂತದ ಒಂದು ವೀರಗಲ್ಲಿದೆ.  ಇದು ಸುಮಾರು 04 ಅಡಿ ಎತ್ತರವಾಗಿದ್ದು 02 ಅಡಿ ಅಗಲವಾಗಿದೆ.  ಇದರ ಶಿಲಾ ಶಿಲ್ಪಭಾಗ ಸಿಡಿದಿರುವುದರಿಂದ ಅಲ್ಪ ಮಟ್ಟಿಗೆ ಗುರುತಿಸಬಹುದು.  ಇದನ್ನು ಗಮನಿಸಿದಾಗ ತುರುಗೋಳ ವೀರಗಲ್ಲಿನ ಲಕ್ಷಣಗಳನ್ನು ಹೊಂದಿರುವಂತೆ ಕಂಡುಬರುತ್ತದೆ.  ಈ ಸ್ಮಾರಕವನ್ನು ಹಸಿರು ಮಿಶ್ರಿತ ಬೂದು ಬಣ್ಣದ ಬಳಪದ ಕಲ್ಲನ್ನು ಬಳಸಿ ನಿರ್ಮಿಸಿರುವುದರಿಂದ ಹೊಯ್ಸಳರ ಕಾಲಘಟ್ಟದೆಂದು ತಿಳಿಯುತ್ತದೆ.  ಮೂರು ಹಂತಗಳುಳ್ಳ ಈ ಸ್ಮಾರಕದ ಕೊನೆಯ ಕೆಳಭಾಗದ ಹಂತದಲ್ಲಿ ವೀರ ತುರುಗಳ ರಕ್ಷಣೆಗಾಗಿ ಶತ್ರುಗಳ ಜೊತೆ ಹೋರಾಟ ಮಾಡುತ್ತಿರುವುದು ಅಲ್ಪಮಟ್ಟಿಗೆ ಗೋಚರಿಸುತ್ತದೆ.  ಅದರ ಮೇಲ್ಭಾಗದ ಎರಡನೇ ಹಂತದಲ್ಲಿ ಪಲ್ಲಕ್ಕಿ ಮೇಲೆ ವೀರನನ್ನು ಕೂರಿಸಿಕೊಂಡು ಸಖಿಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.  ಅದರ ಮೇಲ್ಭಾಗದ ಮೊದಲ ಹಂತದಲ್ಲಿ ಸ್ವರ್ಗದಲ್ಲಿ ವೀರ ಶಿವನ ದರ್ಶನ ಪಡೆದಿರುವಂತೆ ಶಿವಲಿಂಗು ಮತ್ತು ನಂದಿಯ ಶಿಲ್ಪಗಳಿವೆ.  ಅದರ ಮೇಲೆ ಸೂರ್ಯ-ಚಂದ್ರರ ಕೆತ್ತನೆಯಿದೆ.  ತುರುಗೋಳ್ ಕದನದಲ್ಲಿ ವೀರ ಮರಣ ಹೊಂದಿದ ನೆನಪಿಗಾಗಿ ಈ ಸ್ಮಾರಕ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.  ಈ ಶಾಸನದಲ್ಲಿ ಎರಡು ಅಡ್ಡಪಟ್ಟಿಕೆಗಳಿದ್ದು ಅದರಲ್ಲಿ ಗೀರಿನ ಗುರುತುಗಳಿವೆ.  ಇದನ್ನು ಗಮನಿಸಿದರೆ ಲಿಪಿಯಾಗಿರುವುದೆಂದು ಕಂಡು ಬಂದರೂ ಸ್ಪಷ್ಟವಾಗಿಲ್ಲ ಇದನ್ನು ಸ್ಥಳೀಯರು ಲಿಪಿಕಲ್ಲು ಎಂದೇ ಕರೆಯುತ್ತಾರೆ.

ಮೂಗನಾಯಕನ ಕೋಟೆ ಗ್ರಾಮದ ಸ್ಮಾರಕಶಿಲ್ಪಗಳು

            ಮೂಗನಾಯಕನ ಕೋಟೆ ಗ್ರಾಮದ ಊರಿನ ಮಧ್ಯಭಾಗದಲ್ಲಿ ಒಂದು ಮಹಾಸತಿ ಮಂಟಪವಿದೆ.  ಮಂಟಪದ ಒಳಭಾಗದಲ್ಲಿ ಸುಮಾರು ಎರಡು ಅಡಿ ಎತ್ತರವಿರುವ ಮಹಾಸತಿಯ ಶಿಲ್ಪವಿದೆ.  ಇದು ನಗ್ನ ರೀತಿಯ ಪೂರ್ಣ ಸತಿಯ ಶಿಲ್ಪವಾಗಿದೆ.  ಸತಿಯ ಶಿಲ್ಪ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ.  ಇದು ಇಕ್ಕೈ ಮಾಸ್ತಿಗಲ್ಲಾಗಿದ್ದು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಅರಸುತ್ತಿರುವ ಭಂಗಿಯಲ್ಲಿದೆ.  ಈ ಮಾಸ್ತಿ ಶಿಲ್ಪದ ಕುತ್ತಿಗೆ ಮತ್ತು ಸೊಂಟದ ಎಡಬಲಭಾಗದಲ್ಲಿ ವೃತ್ತಾಕಾರದ ರಂಧ್ರಗಳಿವೆ.  ಈ ರಂಧ್ರಗಳನ್ನು ನಿರ್ಮಿಸಿರುವ ಉದ್ದೇಶ ತಿಳಿದುಬಂದಿಲ್ಲ.  ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಸೀರೆ, ಇನ್ನಿತರ ಬಟ್ಟೆಯನ್ನು ತೊಡಿಸಲು ಮತ್ತು ಹೂವನ್ನು ಹಾಕಲು ಸುಲಭವಾಗಲಿ ಎಂದು ಈ ರೀತಿ ರಂಧ್ರ ಮಾಡಿರಬಹುದು ಎಂದು ಊಹಿಸಬಹುದಾಗಿದೆ.  ಸ್ಮಾರಕ ಕಲ್ಲಿನ ಎಡ-ಬಲಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ.  ಈ ಶಿಲ್ಪ ಕೆತ್ತನೆಗೆ ಕಣಶಿಲೆ ಬಳಸಲಾಗಿದ್ದು ವಿಜಯನಗರೋತ್ತರ ಕಾಲಘಟ್ಟದ್ದಾಗಿದೆ.

            ಇದೇ ಗ್ರಾಮದ ಗುಡ್ಡದ ಮೇಲಿನ ರಂಗನಾಥ ಸ್ವಾಮಿ ದೇವಾಲಯದ ಬಳಿ ಒಂದು ಮಹಾಸತಿ ಸ್ಮಾರಕ ಮತ್ತು ಒಂದು ವೀರಗಲ್ಲಿದೆ.  ಎರಡೂ ಅಕ್ಕ-ಪಕ್ಕ ಇದ್ದರೂ ಬೇರೆ ಬೇರೆ ಶಿಲೆಯಲ್ಲಿ ಕೆತ್ತಲಾಗಿದೆ.  ವೀರಗಲ್ಲು ಮತ್ತು ಮಹಾಸತಿಕಲ್ಲು ಈ ಎರಡನ್ನೂ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.  ಇದರಲ್ಲಿರುವ ಮಹಾಸತಿಕಲ್ಲು ಸುಮಾರು 1  1/2 ಅಡಿ ಎತ್ತರವಿದ್ದು ಸ್ವಲ್ಪಭಾಗ ಭೂಮಿಯಲ್ಲಿ ಹೂತು ಹೋಗಿದೆ.  ಇದರಲ್ಲಿ ಆತ್ಮ ಬಲಿಯಾದ ಮಹಾಸತಿಯ ಶಿಲ್ಪವಿದ್ದು ಸತಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ಥಾನಿಕ ಭಂಗಿಯಲ್ಲಿ ನಿಂತಿದ್ದಾಳೆ. ಈಕೆಯ ಕೂದಲಿನ ಜಡೆಯ ತುಂಬಾ ಉದ್ದವಾಗಿದ್ದು ಅದನ್ನು ಇಳಿಬಿಡಲಾಗಿದೆ.

            ಮಹಾಸತಿ ಸ್ಮಾರಕದ ಪಕ್ಕದಲ್ಲೇ ಸುಮಾರು 1  3/4 ಅಡಿ ಎತ್ತರವುಳ್ಳ ವೀರಗಲ್ಲಿದೆ.  ವೀರ ತನ್ನ ಮೇಲೆತ್ತಿರುವ ಬಲಗೈಯಲ್ಲಿ ಚಿಕ್ಕದಾದ _ಉದ್ದವಾಗಿಲ್ಲದ ಬಾಯಿ ಅಗಲವಾಗಿರುವ ಕತ್ತಿ ಹಿಡಿದಿದ್ದಾನೆ.  ಈತನ ತುರುಬನ್ನು ದುಂಡಾಕಾರವಾಗಿ ಕಟ್ಟಲಾಗಿದೆ.  ಕೊರಳಲ್ಲಿ ಪದಕವುಳ್ಳ ಕಂಠೀಹಾರ, ಭುಜಬಂಧ, ಕಡಗವನ್ನು ಧರಿಸಿದ್ದಾನೆ.  ಕೆಳಭಾಗ ಭೂಮಿಯಲ್ಲಿ ಹೂತು ಹೋಗಿದೆ.  ಈ ಎರಡೂ ಸ್ಮಾರಕಗಳ ರಚನೆಗೆ ಕಣಶಿಲೆ ಬಳಸಲಾಗಿದ್ದು, ವಿಜಯನಗರೋತ್ತರ ಕಾಲಘಟ್ಟದ್ದಾಗಿದೆ.

ಉದ್ದೇಹೊಸಕೆರೆ ಸ್ಮಾರಕಶಿಲ್ಪ:

            ನಿಟ್ಟೂರು ಹೋಬಳಿಯಲ್ಲಿ ಕಂಡು ಬರುವ ಉದ್ದೇಹೊಸಕೆರೆ ಗ್ರಾಮದ ಕೆರೆಯ ಏರಿಯ ಆರಂಭದ ತುದಿಯ ಬಳಿ ಕೆರೆಯಲ್ಲಿ ಒಂದು ಎರಡು ಹಂತದ ವೀರಗಲ್ಲಿದೆ.  ಇದು ಸುಮಾರು 03 ಅಡಿ ಎತ್ತರವಾಗಿದ್ದು ಕಣಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ.  ಸ್ಮಾರಕದಲ್ಲಿ ಕೆಳಗಿನ ಹಂತದಲ್ಲಿ ಇಬ್ಬರು ವೀರರು ಹೋರಾಡುತ್ತಿರುವಂತೆ ಚಿತ್ರಿಸಲಾಗಿದೆ.  ಒಬ್ಬ ವೀರ ಎಡಗಾಲನ್ನು ಮುಂದೆ ಇಟ್ಟು, ಬಲಗಾಲನ್ನು ಹಿಂದಕ್ಕಿಟ್ಟು ಮತ್ತೊಬ್ಬ ವೀರ ಅಭಿಮುಖವಾಗಿ ಬಲಗಾಲು ಮುಂದೆ ಇಟ್ಟು ಎಡಗಾಲು ಹಿಂದಕ್ಕಿಟ್ಟು ಮೊಣಕಾಲಿನ ಭಾಗದಲ್ಲಿ ಕಾಲನ್ನು ಮಡಚಿ ಹೋರಾಡುತ್ತಿರುವಂತೆ ಚಿತ್ರಿಸಲಾಗಿದೆ.  ವೀರರು ತುರುಬನ್ನು ದುಂಡಾಗಿ ಕಟ್ಟಿದ್ದಾರೆ.  ಇದರ ಮೇಲಿನ ಹಂತದಲ್ಲಿ ವೀರ ಮಧ್ಯದಲ್ಲಿ ಕುಳಿತಿದ್ದು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದಾರೆ.  ಈ ಸ್ಮಾರಕ ಶಿಲ್ಪವನ್ನು ಗಮನಿಸಿದಾಗ ಇದು ಅಪೂರ್ಣ ಶಿಲ್ಪದಂತೆ ಕಂಡು ಬರುತ್ತಿದೆ.  ಮೇಲ್ಭಾಗದಲ್ಲಿ ಇನ್ನೊಂದು ಹಂತವಿರಬೇಕು, ಅದು ಮುರಿದು ಬಿದ್ದು ಎಲ್ಲೋ ಮತ್ತೊಂದು ಕಡೆ ಸೇರಿರುವಂತೆ ಗೋಚರಿಸುತ್ತದೆ.  ಇದನ್ನು ಇತ್ತೀಚೆಗೆ ಅಲ್ಲಿಯೇ ಸಂರಕ್ಷಿಸಲಾಗಿದೆ. 

ನಿಟ್ಟೂರಿನ ಜೈನ ಸ್ಮಾರಕಶಿಲ್ಪಗಳು:

            ನಿಟ್ಟೂರಿನ ಶಾಂತಿನಾಥ ಜಿನಾಲಯದ ಹೊರಗೋಡೆಗೆ ಹೊಂದಿಕೊಂಡಂತೆ ಮೂರು ಜೈನ ಸ್ಮಾರಕಶಿಲ್ಪಗಳಿವೆ.  ಈ ಮೂರು ಸ್ಮಾರಕಗಳು ಶಿಲ್ಪವುಳ್ಳ, ಬರವಣಿಗೆಯುಳ್ಳ ನಿಷಿಧಿ ಸ್ಮಾರಕಗಳಾಗಿವೆ.  ಒಂದು ನಿಷಿಧಿಯಲ್ಲಿ ಒಂದು ಜಿನಶಿಲ್ಪವಿದ್ದು, ಅದರ ಕೆಳಭಾಗದ ಪೀಠವನ್ನು ಸೂಕ್ಷ್ಮ ಕೆತ್ತನೆಗಳಿಂದ ಅಲಂಕರಿಸಲಾಗಿದೆ.  ಇದರಲ್ಲಿರುವ ಶಿಲ್ಪ ಒಂದು ಕಾಲಮೇಲೆ ಮತ್ತೊಂದು ಕಾಲನ್ನಿಟ್ಟುಕೊಂಡು ಅದರ ಮೇಲೆ ಒಂದು ಅಂಗೈಮೇಲೆ ಮತ್ತೊಂದು ಅಂಗೈ ಇಟ್ಟುಕೊಂಡು ಮೈಸೆಟೆದು ಪದ್ಮಾಸನ ಭಂಗಿಯಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ.  ಇದು ಮಾಳವ್ವೆ ತನ್ನ ಜಿನಭಕ್ತಿಯಿಂದ ಪಡೆದ ಭಾಮಿಸೆಟ್ಟಿಯ ಮಗಳಿಗೆ ಭೂಚವ್ವೆಯ ನಿಷಿಧಿಯಾಗಿರುವುದು.(6)

ಮತ್ತೊಂದು ನಿಷಿಧಿ ಸ್ಮಾರಕದಲ್ಲಿ ಇಬ್ಬರು ಮಹಿಳೆಯರು ಸಲ್ಲೇಖನ ವ್ರತ ಕೈಗೊಂಡು ಮರಣ ಹೊಂದಿರುವ ಶಿಲ್ಪಗಳಿವೆ.  ಕೈಬಳೆ, ಭುಜಬಂಧ, ಕೊರಳಿನಲ್ಲಿ ಅಲಂಕೃತ ಹಾರಗಳು ಅಗಲವಾದ ಕರ್ಣಕುಂಡಲಗಳಿಂದ ಅಲಂಕೃತಗೊಂಡಿದ್ದಾರೆ.  ಎರಡು ಶಿಲ್ಪಗಳು ಮೈಸೆಟೆದು ಪದ್ಮಾಸನದಲ್ಲಿ ಆಸೀನವಾಗಿರುವಂತೆ ಚಿತ್ರಿಸಲಾಗಿದೆ.  ಆ ಶಿಲ್ಪಗಳ ಹಿಂಬದಿಯಲ್ಲಿ ಸ್ಥಾನಿಕ ಭಂಗಿಯಲ್ಲಿರುವ ಜಿನಮೂರ್ತಿ ಮತ್ತು ಎಡಬಲ ಯಕ್ಷಿಯರ ಶಿಲ್ಪಗಳಿವೆ.  ಮಾಳವ್ವೆ ಮತ್ತು ಸೊಸೆ ಚೌಡಿಯಕ್ಕರ ನಿಷಿಧಿಯಾಗಿದೆ.(7)  ಅದೇ ಸ್ಥಳದಲ್ಲಿರುವ ಮತ್ತೊಂದು ನಿಷಿಧಿಯಲ್ಲಿ ಒಂದು ಶಿಲ್ಪ ದೊಡ್ಡದಾಗಿದ್ದು, ಪದ್ಮಾಸನ ಭಂಗಿಯಲ್ಲಿ ಮೈಸೆಟೆದು ಕುಳಿತಿದ್ದರೆ ಅವನ ತೊಡೆಯ ಮೇಲೆ ಮೈಸೆಟೆದು ಪದ್ಮಾಸನ ಭಂಗಿಯಲ್ಲಿ ಮತ್ತೊಂದು ಶಿಲ್ಪವಿದೆ.  ಇದು ಮಲ್ಲಿಸೆಟ್ಟಿ ಮತ್ತು ಆತನ ಮಗ ಮಾಳಯ್ಯನ ನಿಷಿಧಿಯಾಗಿದೆ.(8)

            ಸ್ಮಾರಕಶಿಲ್ಪಗಳು ನಮ್ಮ ಪ್ರಾಚೀನ ಪಾರಂಪರಿಕ ಸಂಸ್ಕøತಿಯ ಮುಖ್ಯವಾದ ಭಾಗವಾಗಿವೆ.  ನಮ್ಮ ಸಂಸ್ಕøತಿಯ ವೀರಜೀವನ, ಶ್ರದ್ಧೆ, ಪಾತಿವ್ರತ್ಯಗಳ ಮತ್ತು ಪಾವಿತ್ರ್ಯತೆಯ ಕುರುಹುಗಳಾಗಿವೆ.  ಪ್ರಸ್ತುತವಾಗಿ ಗ್ರಾಮೀಣ ಮಟ್ಟದಲ್ಲಿ ಜನರ ಅಜ್ಞಾನದಿಂದಾಗಿ ನಶಿಸಿಹೋಗುತ್ತಿವೆ.  ಇಂತಹ ಸ್ಮಾರಕ ಶಿಲ್ಪಗಳನ್ನು ಸಂರಕ್ಷಿಸಿದರೆ ನಾವು ನಮ್ಮ ಸಂಸ್ಕøತಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಟ್ಟ ಬಹುದೊಡ್ಡ ಕೊಡುಗೆಯಾಗುತ್ತದೆ.

 

ಅಡಿಟಿಪ್ಪಣಿಗಳು:

  1. ಪರಮಶಿವಮೂರ್ತಿ ಡಿ.ವಿ. ಕನ್ನಡ ಶಾಸನ ಶಿಲ್ಪ ಪು.ಸಂ.01.
  2. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು ಪು.ಸಂ.13.
  3. ಕನ್ನಡ ವಿಷಯ ವಿಶ್ವಕೋಶ ಇತಿಹಾಸ ಮತ್ತು ಪುರಾತತ್ವ ಪು.ಸಂ.815.
  4. ಪರಮಶಿವಮೂರ್ತಿ. ಡಿ.ವಿ. ಪೂವೋಕ್ತ ಪು.ಸಂ.24.
  5. ಎಪಿಗ್ರಾಫಿಯಾ ಕರ್ನಾಟಕ ಸಂಪುಟ 12, ಗುಬ್ಬಿ11.
  6. ಅದೇ ಗುಬ್ಬಿ 06
  7. ಅದೇ ಗುಬ್ಬಿ 05
  8. ಅದೇ ಗುಬ್ಬಿ 07

ಆಧಾರ ಗ್ರಂಥಗಳು:

  1. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ 1999.
  2. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು 2004,
  3. ಕನ್ನಡ ವಿಷಯ ವಿಶ್ವಕೋಶ, ಇತಿಹಾಸ ಮತ್ತು ಪುರಾತತ್ವ.  ಮೈಸೂರು ವಿಶ್ವವಿದ್ಯಾಲಯ, ಮೈಸೂರು 2005.
  4. ಎಪಿಗ್ರಾಫಿಯಾ ಕರ್ನಾಟಕ ಸಂಪುಟ 12 (ಹಳೆಯದು), ಮೈಸೂರು ಸರ್ಕಾರ, ಬೆಂಗಳೂರು 1903.
  5. ಚಿದಾನಂದ ಮೂರ್ತಿ ಎಂ. “ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ” ಸಪ್ನಬುಕ್ ಹೌಸ್, ಬೆಂಗಳೂರು 1966.
  6. ಲಕ್ಷ್ಮಣ್ ತೆಲಗಾವಿ (ಸಂ) ಹರತಿಸಿರಿ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ 1987.
  7. ಇತಿಹಾಸ ದರ್ಶನ ಸಂಪುಟಗಳು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು.
  8. ಶ್ರೀನಿವಾಸ ಎ.ಜಿ. ನಿಟ್ಟೂರು ಹೋಬಳಿ: ಸಾಂಸ್ಕøತಿಕ ಅಧ್ಯಯನ (ಅಪ್ರಕಟಿತ ಎಂ.ಫಿಲ್, ಸಂಶೋಧನಾ ಪ್ರಬಂಧ) ಕನ್ನಡ ವಿಶ್ವವಿದ್ಯಾಲಯ, ಹಂಪಿ 2011.
  9. ಭಟ್‍ಸೂರಿ ಕೆ.ಜಿ. (ಸಂ) ಕರ್ನಾಟಕ ಶಾಸನ ಸಂಶೋಧನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.ಕ್ಷೇತ್ರಕಾರ್ಯ


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal