Tumbe Group of International Journals

Full Text


ಕನ್ನಡ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ

ಸೈಯದ್ ಬಿ.

ಪಿಎಚ್.ಡಿ ಸಂಶೋಧಕರು

ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276

ಮೊ : 9880051998, e-mail : syducta@gmail.com

 

ಪ್ರಸ್ತಾವನೆ

ಕನ್ನಡ ಸಾಹಿತ್ಯದ ದೀರ್ಘವಾದ ಇತಿಹಾಸದಲ್ಲಿ ಸ್ತ್ರೀಪರ ಅಲೋಚನೆ, ಕಾಳಜಿ, ಧ್ವನಿ ಹಾಗೂ ರಚನೆ ಕಾಣುವುದು ವಿರಳ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಶೈಕ್ಷಣಿಕ ಸ್ಥಾನಮಾನ ಸಿಗದ ಕಾರಣ ಪ್ರಾಚೀನ ಕನ್ನಡ ಸಾಹಿತ್ಯವೆಲ್ಲವನ್ನು ಶೋಧಿಸಿದರೂ, ಸ್ತ್ರೀಬರಹಗಾರ್ತಿಯರು ಬೆರಳಣಿಕೆ ಪ್ರಮಾಣದಲ್ಲಿ ಮಾತ್ರ ಸಿಗುತ್ತ್ತಾರೆ. ಇದಕ್ಕೆ ಶೈಕ್ಷಣಿಕ ವ್ಯವಸ್ಥೆ ಕಾರಣವಾದಂತೆ ಆಗಿನ ಸಾಂಸ್ಕೃತಿಕ ವ್ಯವಸ್ಥೆ ಕೂಡ ಕಾರಣವಾಗಿದೆ. ಕನ್ನಡ ಸಾಹಿತ್ಯದಲ್ಲಿ ಪಂಪನಿಂದಲೂ ಸ್ತ್ರೀಪರ ಧ್ವನಿ, ಸಂವೇದನೆಯನ್ನು ಗುರುತಿಸಬಹುದು. ಆದರೆ ಸ್ತ್ರೀಪರ ಗಟ್ಟಿ ಧ್ವನಿ ಮೊದಲು ಎತ್ತಿದವರು ವಚನಕಾರರೆಂದರೆ ತಪ್ಪಾಗಲಾರದು. ಇವರು ಲಿಂಗತಾರತಮ್ಯತೆಯನ್ನು ವಿರೋಧಿಸಿ ಸರ್ವರಿಗೂ ಸಮಾನ ಸ್ಥಾನಮಾನ ನೀಡಿದರು. ಇದರಿಂದಾಗಿ ಸ್ತ್ರೀಯರು ಸಾಹಿತ್ಯ ಲೋಕವನ್ನು ಪ್ರವೇಶಿಸಲು ಸಾಧ್ಯವಾಯಿತು. ಅಕ್ಕಮಹಾದೇವಿ ಅಂತಹ ವಚನಕಾರ್ತಿಯರು ಸ್ತ್ರೀಯರ ಮೇಲಿನ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ವಚನಗಳ ಮೂಲಕ ವಿರೋಧಿಸಿ ಸ್ತ್ರೀ ಸಂವೇದನೆಗೆ ಧ್ವನಿಯಾದರು.

ಪ್ರಾಚೀನ ಸಾಹಿತ್ಯದ ಹೆಚ್ಚು ಕವಿಗಳು ರಾಜಶ್ರಯವನ್ನು ಅವಲಂಬಿಸಿದ ಕಾರಣ ಪುರುಷ ಕೇಂದ್ರಿತ ಸಾಹಿತ್ಯಕ್ಕೆ ಹೆಚ್ಚಿನ ಅದ್ಯತೆ ದೊರೆಯಿತು. ಆದರೆ ಸ್ತ್ರೀಯರಿಗೆ ಇಂತಹ ರಾಜಾಶ್ರಯದ ಆದ್ಯತೆ ಲಭಿಸಲಿಲ್ಲ. ಆದ್ದರಿಂದ ಸ್ತ್ರೀಯರ ಬರಹಗಳು ವಿರಳವಾಗಿವೆ. ಆದರೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಬೀರಿದ ಸಾಮಾಜಿಕ ಸುಧಾರಣೆ ಚಳುವಳಿ, ಪಾಶ್ಚಾತ್ಯ ಚಿಂತನೆ ಹಾಗೂ ಆಧುನಿಕ ಶಿಕ್ಷಣದ ಪ್ರಭಾವವು ಸ್ತ್ರೀಯರನ್ನು ಸಮಾನ ದೃಷ್ಟಿಯಲ್ಲಿ ನೋಡುವಂತೆ ಮಾಡಿತು. ಸ್ತ್ರೀಯರ ಮೇಲೆ ಸಾವಿರಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಹಾಗೂ ಇತರೆ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಶೋಷಣೆಗಳ ವಿರುದ್ದ ಅರಿವು ಮೂಡಿಸುವಂತ ಮನೋಧರ್ಮ ಸೃಷ್ಟಿಯಾಯಿತು. ಆಧುನಿಕ ಸಾಹಿತ್ಯದ ಪಂಥಗಳಾದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯದ ಕಾವ್ಯ, ಕಥೆ, ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ ಒತ್ತನ್ನು ನೀಡಲಾಗಿದೆ. ಆಧುನಿಕ ಶಿಕ್ಷಣದಿಂದ ಸ್ತ್ರೀ ಬರಹಗಾರ್ತಿಯರೇ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ್ದರಿಂದ ಅವಳ ಮೇಲಿನ ಸಾಂಸ್ಕೃತಿಕ ನಿರ್ಬಂಧಗಳ ಗೊಡೆಗಳನ್ನು ಮುರಿಯುವ, ಮೀರುವ ಪ್ರಯತ್ನಗಳಾದವು. ಅಲ್ಲದೇ ಸ್ತ್ರೀಯರ ಮಾನಸಿಕ ತೊಳಲಾಟ, ನೋವು, ಹತಾಶೆ, ಆಸೆ, ಆಕಾಂಕ್ಷೆಗಳ ಕುರಿತ ಬರಹಗಳು ಹೆಚ್ಚಾದವು. ಕನ್ನಡ ಸಾಹಿತ್ಯದ ಮೊದಲ ‘ಸಾಮಾಜಿಕ ಕಾದಂಬರಿ’ಯಾದ ‘ಇಂದಿರಾಬಾಯಿ’ಯಿಂದ ಸ್ತ್ರೀ ಸಂವೇದನೆ ಆರಂಭವಾಗಿ ‘ಮಾಡಿದ್ದುಣ್ಣೋ ಮಹಾರಾಯ’, ‘ಅಪಸ್ವರ’, ‘ಅಪಜಯ’, ‘ಫಣಿಯಮ್ಮ’, ‘ಮುಕ್ತಿ’, ‘ಅಕ್ಕ’, ‘ಕುಸುಮಬಾಲೆ’ ಅಂತಹ ಅನೇಕ ಸ್ತ್ರೀ ಸಂವೇದನ ಕೃತಿಗಳು ರಚನೆಯಾದವು. ಇಂದು ಸ್ತ್ರೀ ಸಂವೇದನೆಯನ್ನು ಕುರಿತ ಬರಹ ಹೇರಳವಾಗಿದೆ.

ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರಗಳ ಮೂಲಕ ಸ್ತ್ರೀಸಂವೇದನೆ ಹಿಡಿದಿಟ್ಟವರು ವೆಂಕಟಚಾರ್ಯ ಮತ್ತು ಗಳಗನಾಥರೆಂದರೆ ತಪ್ಪಾಗಲಾರದು. ವೆಂಕಟಾಚಾರ್ಯರು ಬಂಗಾಳಿಯಿಂದ ಬಂಕಿಮಚಂದ್ರರ ಕೃತಿಗಳ ಆಧಾರದಲ್ಲಿ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದರು. ಇವರ ಕಾದಂಬರಿಗಳಲ್ಲಿ ವಿಧವಾ ಸಮಸ್ಯೆ, ಸ್ತ್ರೀಯರ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಸಮಸ್ಯೆಯಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆಯಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ 1899ರಲ್ಲಿ ಪ್ರಕಟವಾದ ಗುಲವಾಡಿ ಅವರ ‘ಇಂದಿರಾಬಾಯಿ’ ಕಾದಂಬರಿ ಸ್ತ್ರೀ ಸಂವೇದನೆಯ ದೃಷ್ಟಿಯಿಂದ ಮಹತ್ವವಾದದ್ದು. ಇದು ಕನ್ನಡದ ಮೊದಲನೆಯ ಸ್ವತಂತ್ರ ಸಾಮಾಜಿಕ ಕಾದಂಬರಿ. ಮೊದಲ ಕಾದಂಬರಿಯಲ್ಲಿಯೇ ವಿಧವ ಸಮಸ್ಯೆಯನ್ನಿಟ್ಟುಕೊಂಡು ರಚನೆಸಿದ್ದು ವಿಶೇಷ. ವಿಧವೆ ಹೆಣ್ಣಾದ ‘ಇಂದಿರೆ’ಯು ಸಮಾಜದಲ್ಲಿ ಎದುರಿಸುವ ದೈಹಿಕ, ಮಾನಸಿಕ ಸಂಘರ್ಷಗಳ ಸಂವೇದನೆಗಳೆ ಕಾದಂಬರಿಯ ವಸ್ತು. “ಕಾದಂಬರಿಯಲ್ಲಿ ಭೀಮರಾಯ-ಅಂಬಾಬಾಯಿ ಸಮಾಜದ ಭ್ರಷ್ಟತೆಯ ಕೇಂದ್ರವಾಗಿದ್ದಾರೆ. ಈ ಕೇಂದ್ರದ ಸುತ್ತ ಹಲವಾರು ಮೋಸ, ಅತ್ಯಾಚಾರಗಳ ಪ್ರತಿನಿಧಿಗಳು ತಿರುಗುತ್ತಾರೆ. ಸಂತಮಂಡಳಿಯ ನೀತಿಯ ಸೋಗು, ಮಠಗಳಿಂದ ನಡೆಯುವ ಶೋಷಣೆ, ಅನ್ಯಾಯ, ವೈದ್ಯ-ಜ್ಯೋತಿಷಿಗಳಿಂದ ನಡೆಯುವ ಮೋಸ, ಸಮಾಜದಲ್ಲಿ ರೂಢಿಗೊಂಡ ವಿಷಪ್ರಾಶನದಂಥ ವಾಮಾಚಾರಗಳು- ಇಂಥ ಭ್ರಷ್ಟ ಆಚರಣೆಗಳಿಗೆ ಕಾದಂಬರಿ ಭೂತಗನ್ನಡಿ ಹಿಡಿಯುತ್ತದೆ”(ಜಿ.ಎಸ್.ಆಮೂರ, ಕನ್ನಡ ಕಥನ ಸಾಹಿತ್ಯ : ಕಾದಂಬರಿ,ಪು.ಸಂ.29) ಇಂತಹ ವ್ಯವಸ್ಥೆಯಲ್ಲಿ ಬೆಂದ ಇಂದಿರೆ ಸಮಾಜದಲ್ಲಿ ಅನೇಕರಿಂದ ದಬ್ಬಾಳಿಕೆ, ಶೋಷಣೆಗಳಿಗೆ ಒಳಗಾಗುತ್ತ ಹೋಗುತ್ತಾಳೆ. ಜನರನ್ನು ಧರ್ಮದ ಸೋಗಿನಲ್ಲಿ ದಿಕ್ಕು ತಪ್ಪಿಸುತ್ತಿದ್ದ ಸಂತ ಮಂಡಳಿಯ ಅಧ್ಯಕ್ಷ ಒಂದು ರಾತ್ರಿ ಇಂದಿರೆಯ ಕೋಣೆಗೆ ನುಗ್ಗಿ ಅವಳ ಮೇಲೆ ಅತ್ಯಾಚಾರಕ್ಕೆ ಮುಂದಾಗುತ್ತಾನೆ. ಅವನಿಂದ ಪಾರಾಗಿ ಅಮೃತರಾಯನ ಆಶ್ರಯ ಪಡೆಯುತ್ತಾಳೆ. ಈತನ ಆಶ್ರಯದಲ್ಲಿ ಅವಳ ವಿದ್ಯಾಭ್ಯಾಸ ಆರಂಭವಾಗಿ ಭಾಸ್ಕರನೆಂಬ ವ್ಯಕ್ತಿಯೊಡನೆ ಪ್ರೀತಿಯಾಗುತ್ತದೆ. ಇವರಿಬ್ಬರ ಪ್ರೀತಿಗೆ ಪ್ರೋತ್ಸಾಹವಾಗಿ ಅಮೃತಭಾಯಿ ಮತ್ತು ಜಲಜಾಕ್ಷಿ ನಿಲ್ಲುತ್ತಾರೆ. ಇವರಿಬ್ಬರ ಪ್ರೋತ್ಸಾಹದಲ್ಲಿ ಅವರಿಬ್ಬರು ವಿವಾಹವಾಗುತ್ತಾರೆ. ಗುಲವಾಡಿ ಅವರ ಸ್ತ್ರೀ ಸಂವೇದನೆಯ ದೃಷ್ಟಿಕೋನ ಕ್ರಾಂತಿ ಮೂಡಿಸಬೇಕೆನ್ನುವುದಲ್ಲ. ಆ ಕಾಲಘಟ್ಟದಲ್ಲಿ ಸ್ತ್ರೀಯರು ಎದುರಿಸುತ್ತಿದ್ದ ಸಾಮಾಜಿಕ ತಳಮಳ, ಕುರುಡು ಸಂಪ್ರದಾಯದಿಂದ ಉಂಟಾದ ದಾಳಿ ಮುಂತಾದವುಗಳ ವಿರುದ್ಧದ ಟೀಕೆ ಮಾಡುವುದು, ಅರಿವನ್ನು ಮೂಡಿಸುವುದಾಗಿದೆ. ಇದಕ್ಕೆ ಸಾಕ್ಷಿಯಾಗಿ ಇಂದಿರಾಬಾಯಿ ಕಾದಂಬರಿ ನಿಲ್ಲುತ್ತದೆ. ಉತ್ತರ ಕರ್ನಾಟಕದ ಕೆರೂರು ವಾಸುದೇವಚಾರ್ಯರು 1908ರಲ್ಲಿ ರಚಿಸಿದ ‘ಇಂದಿರೆ’ ಎಂಬ ಕಾದಂಬರಿ ಸ್ತ್ರೀ ಸಂವೇದನೆ ದೃಷ್ಟಿಯಿಂದ ಮುಖ್ಯವಾಗುತ್ತದೆ. ಇದು ರಚನೆಯಾದ ಕಾಲಘಟ್ಟದಲ್ಲಿನ ಸಮಕಾಲೀನ ಸಮಸ್ಯೆಗಳಾಗಿದ್ದ ವಿಧವಾವಿವಾಹ, ಸ್ತ್ರೀ ಶಿಕ್ಷಣ ಮತ್ತು ಸ್ತ್ರೀ ಸ್ವಾತಂತ್ರ್ಯದಂತಹ ವಿಚಾರಗಳನ್ನು ಇಟ್ಟುಕೊಂಡಿದೆ. ಇಲ್ಲಿ ಇಂದಿರೆಯನ್ನು ಆದರ್ಶ ಮಹಿಳೆಯಾಗಿ ಚಿತ್ರಿಸಿ ಸ್ತ್ರೀ ಶಿಕ್ಷಣದ ಮಹತ್ವವನ್ನು ತಿಳಿಸುವ ಮೂಲಕ ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಪ್ರಯತ್ನ ನೆಡೆದಿದೆ.

‘ಇಂದಿರಾಬಾಯಿ’ ಕಾದಂಬರಿ ನಂತರ ಸಾಹಿತ್ಯ ದೃಷ್ಟಿಯಿಂದ ಕಾದಂಬರಿ ಎಂದು ಕರೆಯಬಹುದಾದ ಮೊಟ್ಟಮೊದಲ ಕೃತಿ ‘ಮಾಡಿದ್ದುಣ್ಣೋ ಮಹಾರಾಯ’. ಇದು ಕನ್ನಡದ ಶ್ರೇಷ್ಟ ಕಾದಂಬರಿಗಳ ಸಾಲಿನಲ್ಲಿ ಒಂದಾಗಿದೆ. ಪಾಶ್ಚಾತ್ಯ ಸಾಹಿತ್ಯ, ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೇ ದೇಸಿ ಸಂಸ್ಕೃತಿ ಮತ್ತು ಸ್ಥಳೀಯ ಘಟನೆಗಳನ್ನು ಆಧರಿಸಿ ರಚನೆಯಾಗಿರುವ ಕಾದಂಬರಿ ವಾಸ್ತವತೆಗೆ ಹತ್ತಿರವಾಗುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಘಟ್ಟದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿಕೊಂಡು ಸೀತಮ್ಮ ಎಂಬ ಹೆಣ್ಣಿನ ನೋವಿನ ಕಥೆಯನ್ನು ಕಾದಂಬರಿ ಕೇಂದ್ರೀಕರಿಸಿಕೊಂಡಿದೆ. ಪಾತಿವ್ರತ್ಯ ಧರ್ಮದ ಮೂರ್ತಿಯಾಗಿ ‘ಸೀತಮ್ಮ’ ಕಾಣಿಸಿದರೆ. ಫಟಿಂಗನಾಗಿ ‘ಅಪ್ಪಾಜಿ’ ಕಾಣಿಸಿಕೊಂಡಿದ್ದಾನೆ. ಈ ಎರಡು ಪಾತ್ರಗಳಂತೆ ಮುಖ್ಯ ಪಾತ್ರಗಳಾಗಿ ‘ಸದಾಶಿವ ದೀಕ್ಷಿತ’ ಮತ್ತು ಅವನ ಮೂರ್ಖ ಹೆಂಡತಿಯಾದ ‘ತಿಮ್ಮಮ್ಮ’ನ ಪಾತ್ರಗಳಿವೆ. ಕಾದಂಬರಿಯಲ್ಲಿ ಸೀತಮ್ಮನ ಹಿರಿಮೆ ಬೆಳಗುತ್ತದೆ. ಮೌಢ್ಯಕ್ಕೆ ಸಾಕ್ಷಿಯಾಗಿ ಮಾಟ-ಮಂತ್ರಗಳ ಪ್ರವೇಶವಿದೆ. ಸೀತಮ್ಮ ಅನಾರೋಗ್ಯದಲ್ಲಿದ್ದಾಗ ಅವಳು ಸತ್ತಳೆಂದು ಬಗೆದು ಅಂತ್ಯಸಂಸ್ಕಾರ ಮಾಡಿ ಬರುತ್ತಾರೆ. ಚಿತೆ ಪೂರ್ಣವಾಗಿ ಹೊತ್ತಿಕೊಂಡಿರುವುದಿಲ್ಲ ಆಗ ಒಬ್ಬ ಮಂತ್ರವಾದಿ ಆಕೆಯನ್ನು ಬದುಕಿಸುತ್ತಾನೆ. ನೀತಿ ಬೋಧನೆಯ ಉದ್ದೇಶವನ್ನು ಹೊಂದಿರುವ ಕಾದಂಬರಿ ಅಂದಿನ ಕಾಲಘಟ್ಟದ ಸಾಮಾಜಿಕ, ಧಾರ್ಮಿಕ, ರಾಜಕೀಯ ವ್ಯವಸ್ಥೆಗಳಿಂದ ಉಂಟಾದ ಘಟನೆಗಳಿಗೆ ಸಾಕ್ಷಿಯಾಗಿದೆ. ಇಂತಹ ಘಟನೆಗಳಲ್ಲಿ ಸಿಲುಕಿದ ಸೀತಮ್ಮನಂತಹ ಹೆಣ್ಣು ಅನುಭವಿಸುವ ಶೋಷಣೆ, ಯಾತನೆ ಹಾಗೂ ನೋವುಗಳು ಸ್ತ್ರೀ ಸಂವೇದನೆಗೆ ಸಾಕ್ಷಿಯಾಗಿವೆ.

ಶಿವರಾಮ ಕಾರಂತರರು ತಮ್ಮ ಕಾದಂಬರಿಗಳಲ್ಲಿ ಸ್ತ್ರೀಲೋಕವನ್ನೇ ಸೃಷ್ಟಿಸಿದ್ದಾರೆ. ಅವರ ಅನೇಕ ಕಾದಂಬರಿಗಳ ಕೇಂದ್ರಪಾತ್ರ ಸ್ತ್ರೀ ಆಗಿದ್ದಾಳೆ. ಇವರ ‘ಮರಳಿಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳು ಇವರ ಸ್ತ್ರೀ ಲೋಕದ ಸೃಷ್ಟಿಗೆ ನಿದರ್ಶನ. ಇಲ್ಲಿನ ಸ್ತ್ರೀಯರು ಪ್ರತಿನಿತ್ಯ ಜೀವನದೊಂದಿಗೆ ಹೋರಾಟ ಮಾಡುತ್ತಲೇ ಸಾಗುತ್ತಾರೆ. ಒಂದೊಂದು ಸ್ತ್ರೀಪಾತ್ರಗಳಿಗೂ ಒಂದೊಂದು ಕಥೆಯಿದೆ. ಮೂರು ತಲೆಮಾರಿನ ವಸ್ತುಗಳನ್ನು ಒಳಗೊಂಡಿರುವ ಕಾದಂಬರಿ ಒಂದೊಂದು ತಲೆಮಾರಿನ ಸ್ತ್ರೀಯರಲ್ಲಿನ ಬದಲಾದ ಕಾಲದ ತಲ್ಲಣಗಳಿಂದ ಉಂಟಾದ ಸಂವೇದನೆಗಳನ್ನು ಕಟ್ಟಿಕೊಡುತ್ತದೆ. ಪುರುಷ ಪ್ರಧಾನತೆ ಹೆಣ್ಣನ್ನು ನೋಡುವ ದೃಷ್ಟಿಕೋನಕ್ಕೆ ಕೈಗನ್ನಡಿಯಾಗಿ ಕಾದಂಬರಿ ನಿಲ್ಲುತ್ತದೆ. ಮೊದಲ ತಲೆಮಾರಿನಲ್ಲಿ ಬರುವ ರಾಮೈತಾಳರ ತಂಗಿ ‘ಸರಸೋತಿ’(ಸರಸ್ವತಿ) ಚಿಕ್ಕಂದಿನಲ್ಲೇ ಗಂಡನನ್ನು ಕಳೆದುಕೊಂಡು ನಿರ್ಗತಿಕಳಾಗಿ ಅಣ್ಣನ ಮನೆ ಸೇರಿದ್ದಾಳೆ. ಗಂಡನನ್ನು ಕಳೆದುಕೊಂಡಿದ್ದ ಇವಳಿಗೆ ಪುನಃ ಮರುವಿವಾಹ ಮಾಡಬೇಕೆನ್ನುವ ಪ್ರಶ್ನೆ ಕಾದಂಬರಿಯಲ್ಲಿ ಯಾರ ಬಾಯಲ್ಲೂ ಬರುವುದಿಲ್ಲ್ಲ. ಜೊತೆಗೆ ಅವಳಲ್ಲಿಯೂ ಕೂಡ ಅಂತಹ ಆಸೆಗಳು ಮೂಡುವುದಿಲ್ಲ. ಇದಕ್ಕೆ ಸಂಪ್ರದಾಯದಿಂದ ಸೃಷ್ಟಿಯಾಗಿದ್ದ ಸಂಕೋಲೆಗಳ ಕಟ್ಟುಪಾಡು, ನಿರ್ಬಂಧಗಳ ಸೇತುವೆಗಳೇ ನೇರ ಕಾರಣವೆಂದು ಅಭಿಪ್ರಾಯಿಸಬಹುದು. ಇಲ್ಲಿನ ಸ್ತ್ರೀಯರದ್ದು ಬಂಧನದ, ಭಯದ ನಿರ್ಬಂಧಗಳ ಸರಪಳಿಯ ಬದುಕು. ರಾಮೈತಾಳ ಮೊದಲ ಹೆಂಡತಿ ‘ಪಾರೋತಿ’ಯನ್ನು(ಪಾರ್ವತಿ) ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದ್ದಾನೆ. ಅವನು ಹೇಳಿದ, ತೆಗೆದುಕೊಂಡ ನಿರ್ಧಾರಗಳೇ ಅಂತಿಮ. ಅವುಗಳಿಗೆ ತಲೆ ಹಾಕುವುದಷ್ಟೆ ಇವಳ ಕರ್ತವ್ಯ. ಪಾರ್ವತಿಯ ಜೀವನದ ಪ್ರತಿ ನಿಮಿಷದ ಒಡವೆಗಳೆಂದರೆ ಆ ಅಳುವೆ, ಆನಂದ, ಆ ಮರಳಿನ ದಂಡೆಗಳಾಗಿವೆ. ಇವುಗಳನ್ನು ಬಿಟ್ಟರೆ ಬೇರೆ ಅವಳಿಗೆ ಇವುಗಳನ್ನು ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಗಂಡ ಅನಿಸಿಕೊಂಡವ ಒಂದು ದಿನಕ್ಕೂ ಪ್ರೀತಿಯಿಂದ ಮಾತನಾಡಲಿಲ್ಲ. ಅವಳ ಇಷ್ಟಕಷ್ಟಗಳನ್ನು ಕೇಳಲಿಲ್ಲ. ಆತನಿಗೆ ಅವನದೇ ಪ್ರಪಂಚವಾಗಿದೆ. ಇಂತಹ ಪರಿಸ್ಥಿತಿಯಲ್ಲಿರುವ ಪಾರ್ವತಿ ಮಾನಸಿಕವಾಗಿ ಅನುಭವಿಸುವ ಯಾತನೆಗಳು ಭೀಕರವೇ ಸರಿ.

ಪಾರ್ವತಿಗೆ ಮಕ್ಕಳಾಗಿಲ್ಲ ಎಂಬ ಕಾರಣದಿಂದ ರಾಮೈತಾಳ ‘ಸತ್ಯಭಾಮೆ’ಯನ್ನು ವಿವಾಹವಾಗುತ್ತಾನೆ. ಇನ್ನೊಂದು ವಿವಾಹವಾಗುವ ನಿರ್ಧಾರದ ಬಗ್ಗೆ ತನ್ನ ಹೆಂಡತಿ ಅಥವಾ ತಂಗಿ ಸರಸೋತಿ ಹತ್ತಿರ ಒಮ್ಮೆಯೂ ಚರ್ಚಿಸುವುದಿಲ್ಲ. ಮದುವೆ ನಿಗಧಿಯಾದ ನಂತರ ಅವರಿಬ್ಬರಿಗೆ ತಿಳಿಸುತ್ತಾನೆ. ಅವನ ದೃಷ್ಟಿಯಲ್ಲಿ ಹೆಣ್ಣಾದವಳು ತನ್ನ ನಿರ್ಧಾರಗಳಿಗೆ ತಲೆ ಹಾಕಬೇಕು ಎಂಬುದಷ್ಟೆ ಆಗಿದೆ. ಅವನ ಹೆಂಡತಿಯ ಅಭಿಪ್ರಾಯವಾಗಲಿ, ಅವನ ತಂಗಿಯ ಅಭಿಪ್ರಾಯವಾಗಲಿ ಆತನಿಗೆ ಮುಖ್ಯವಲ್ಲ.

ಮಕ್ಕಳಾಗದೇ ಕೊರಗುವ ಪಾರ್ವತಿ ಸತ್ಯಭಾಮೆಗೆ ಮಗುವಾದಾಗ ತುಂಬಾ ಖುಷಿ ಪಡುತ್ತಾಳೆ. ಅವಳಲ್ಲಿ ಎಲ್ಲಿಯೂ ಅಸೂಯೆ ಎಂಬ ಪ್ರಶ್ನೆಯೇ ಬರುವುದಿಲ್ಲ. ಲಚ್ಚ ತನ್ನ ಮಗ ಎಂದುಕೊಂಡು ಅವನನ್ನು ಪೆÇೀಷಿಸುತ್ತಾಳೆ. ಸತ್ಯಭಾಮೆ ಕೆಲವೊಮ್ಮೆ ಮಗುವನ್ನು ಅವಳ ಕೈಗೆ ಕೊಡದೆ ಕಿತ್ತುಕೊಳ್ಳುವಾಗ ಮನಸ್ಸಿನಲ್ಲಿಯೇ ನೋವನ್ನು ಅನುಭವಿಸುತ್ತಾಳೆ. ಒಂದು ದಿನ ಕೂಡ ಸಂಸಾರದ ಸುಖವನ್ನು ಕಾಣದೇ ಗಂಡನನ್ನು ಕಳೆದುಕೊಂಡಿದ್ದ ರಾಮೈತಾಳರ ತಂಗಿ ಸರೋಸತಿ ‘ಲಚ್ಚ’ನಲ್ಲಿಯೇ ತನ್ನ ಮಗನನ್ನು ಕಾಣುತ್ತಾಳೆ. ಮೊದಲ ತಲೆಮಾರಿನ ಸ್ತ್ರೀಪಾತ್ರಗಳೆಲ್ಲವೂ ತನ್ನ ಸುತ್ತಲಿನ ಪ್ರಕೃತಿಯೊಂದಿಗೆ ದಿನನಿತ್ಯ ಬಡಿದಾಡುವುದರ ಜೊತೆಗೆ ಪುರುಷ ಪ್ರಧಾನ ವ್ಯವಸ್ಥೆಯಿಂದ ಆವರಿಸಿಕೊಂಡು ದಮನಕ್ಕೆ ಒಳಗಾಗಿವೆ. ಮನೆಯಲ್ಲಿ ಗಂಡಸಿನ ನಿರ್ಧಾರವೇ ಅಂತಿಮ ಎಂಬ ವಾತಾವರಣದಲ್ಲಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಕೂಡ ಆ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ತಮ್ಮ ಬಯಕೆ, ಆಸೆ, ಆಕಾಂಕ್ಷೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದಾರೆ. ತಾವು ಜೀವಿಸುತ್ತಿದ್ದ ಊರುಗಳನ್ನು ಬಿಟ್ಟು ಬೇರೆ ಪ್ರಪಂಚವನ್ನು ಕಾಣದ ಮುಗ್ಧರಿದ್ದಾರೆ. ಪುರುಷ ಪ್ರಧಾನತೆಯನ್ನು ಪ್ರಶ್ನಿಸುವ, ವಿರೋಧಿಸುವ ಧೈರ್ಯ ಅವರಲ್ಲಿಲ್ಲ. ಅವರೆಲ್ಲ ಪುರುಷ ಪ್ರಧಾನತೆಯ ನೆರಳಿನಲ್ಲಿಯೇ ಜೀವನ ಸಾಧ್ಯವೆಂದುಕೊಂಡು ಬದುಕುವವರು. ಇವರ ಸಂವೇದನೆಗಳೆಲ್ಲವು ಮಾನಸಿಕ ಸಂಘರ್ಷಗಳೆ ಆಗಿವೆ. ಪುರುಷ ಪ್ರಧಾನತೆ ಮತ್ತು ಸಂಪ್ರದಾಯವನ್ನು ಮೀರುವ, ವಿರೋಧಿಸುವ ಧೈರ್ಯ ಇವರಲ್ಲಿಲ್ಲ. ಅವುಗಳಿಂದ ಹೊರ ಬಂದು ಬದುಕು ಕಟ್ಟಿಕೊಳ್ಳುವುದು ಇವರಿಂದ ಸಾಧ್ಯವಿಲ್ಲ. ಇಲ್ಲಿನ ಸ್ತ್ರೀಯರೆಲ್ಲರೂ ಪುರುಷ ಪ್ರಧಾನತೆ ಮತ್ತು ಸಂಪ್ರದಾಯ ವ್ಯವಸ್ಥೆಯನ್ನು ಒಪ್ಪಿಕೊಂಡು ಅದರಲ್ಲಿಯೇ ಜೀವನ ಮಾಡುವವರು.

ಆದರೆ ಎರಡನೇ ತಲೆಮಾರಿನ ಸ್ತ್ರೀಯರ ಜೀವನ ಭಿನ್ನವಾದದ್ದು. ಇಲ್ಲಿನ ಸ್ತ್ರೀ ಸಂವೇದನೆಯ ಕೇಂದ್ರಬಿಂದು ನಾಗವೇಣಿ. ಈ ತಲೆಮಾರಿನಲ್ಲಿ ಲಚ್ಚ ಮತ್ತು ನಾಗವೇಣಿ ಪ್ರಮುಖ ಪಾತ್ರಗಳು. ಲಚ್ಚನಿಗೆ ಶ್ರೀಮಂತ ಕುಟುಂಬದ ನಾಗವೇಣಿಯನ್ನು ಕೊಟ್ಟು  ಮದುವೆ ಮಾಡಲಾಗುತ್ತದೆ. ಲಚ್ಚ ಅನೇಕ ಚಟಗಳನ್ನು ಕಲಿತು ಅನೇಕ ರೋಗಗಳಿಗೆ ತುತ್ತಾಗುತ್ತಾನೆ.  ಅವನ ರೋಗಗಳೆಲ್ಲವೂ ನಾಗವೇಣಿಗೆ ತಗುಲಿ  ಗರ್ಭಪಾತವಾಗುತ್ತದೆ. ನಾಗವೇಣಿ ಲಚ್ಚನಿಂದ ತುಂಬ ನೋವು, ಹಿಂಸೆಗಳನ್ನು ಅನುಭವಿಸಬೇಕಾಗುತ್ತದೆ. ಲಚ್ಚನನ್ನು ಕುರಿತು "ನನ್ನ ಬಾಳ್ವೆ ಕೆಡಿಸಲು ಬಂದ ಪ್ರಾಣಿ" ಎಂದು ಬಗೆದು ಸ್ವತಂತ್ರ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುv-Á್ತಳೆ. ಮೊದಲ ತಲೆಮಾರಿನ ಸ್ತ್ರೀಪಾತ್ರಗಳಾದ ಸರಸ್ವತಿ, ಪಾರ್ವತಿ ಹಾಗೂ ಸತ್ಯಭಾಮೆಯರು ಅನಕ್ಷರಸ್ಥರು, ಆಧುನಿಕ ಪ್ರಜ್ಞೆಯಿಂದ ದೂರ ಉಳಿದವರು, ಸ್ವಾವಲಂಬನೆಯ ಬದುಕನ್ನು ಮಾಡಲು ಧೈರ್ಯ ಮಾಡದವರು. ಆದರೆ ಎರಡನೇ ತಲೆಮಾರಿನ ನಾಗವೇಣಿ ಅಕ್ಷರ ಜ್ಞಾನ, ಆಧುನಿಕ ಪ್ರಜ್ಞೆಯನ್ನು ಅರಿತವಳು. ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳುವ ಧೈರ್ಯ ಮಾಡಿದವಳು. ಲಚ್ಚ ಆಧುನಿಕತೆ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದ. ಇವನ ವಿಫಲತೆಯ ಪರಿಣಾಮ ನಾಗವೇಣಿಯ ಮೇಲೆ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ. ಲಂಪಟನಾದ, ಸ್ವ ಹಿತಾಸÀಕ್ತಿಯನ್ನು ಬಯಸುವ ಲಚ್ಚ ನಾಗವೇಣಿಯನ್ನು ಮರುಳು ಮಾಡಿ ಅವಳ ಆಸ್ತಿಯೆಲ್ಲವನ್ನು ತನ್ನ ಹೆಸರಿಗೆ ಬರೆಸಿಕೊಂಡು ವಂಚಿಸುತ್ತಾನೆ. ವಂಚನೆಗೆ ಒಳಗಾದ ನಾಗವೇಣಿ ಬೀದಿಗೆ ಬರಬೇಕಾಗುತ್ತದೆ. ತನ್ನ ಹೊಲವನ್ನೇ ತಾನು ಗೇಣಿ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತನ್ನ ಮಗನನ್ನು ಕಟ್ಟಿಕೊಂಡು ಜೀವನ ಸಾಗಿಸುವುದು ಅವಳಿಗೆ ಸವಾಲಾಗಿತ್ತು. ಮಾನಸಿಕವಾಗಿ ಕುಗ್ಗುವುದರ ಜೊತೆಗೆ ಹೊಟ್ಟೆಗೆ ಊಟವಿಲ್ಲದೇ ದೈಹಿಕವಾಗಿ ಸೊರಗಿ ಅರ್ಧಮರ್ದ ಎಲುಬಾಗಿ ಬದಲಾಗಿದ್ದಳು. ತನ್ನ ಮಗನಿಗೆ ಒಂದು ಹೊತ್ತಿನ ಊಟ ಜೊಡಿಸುವುದು ಕಷ್ಟವಾಗಿತ್ತು. ಇಂತಹ ಕಷ್ಟದಲ್ಲಿ ಅವಳು ತನ್ನ ಗಂಡನ ಬರುವಿಕೆಯ ನಿರೀಕ್ಷೆಯಾಗಲಿ, ಇನ್ನೊಬ್ಬರ ಸಹಾಯದ ನಿರೀಕ್ಷೆಯಾಗಲಿ ಇಟ್ಟುಕೊಳ್ಳಲಿಲ್ಲ. ಅವಳು ಸ್ವಾವಲಂಬಿಯಾದ ಬದುಕನ್ನು ಮಾಡುತ್ತಾಳೆ. ಶ್ರೀಮಂತ ಕುಟುಂಬದಲ್ಲಿ ಕಷ್ಟಗಳನ್ನೇ ಕಾಣದಿದ್ದ ನಾಗವೇಣಿ ತನ್ನ ಗಂಡನಿಂದ ಮೋಸಕ್ಕೆ ಒಳಗಾಗಿ ಕಷ್ಟಗಳ ಕೂಪಗಳನ್ನೇ ಎದುರಿಸುತ್ತಾಳೆ. ತಂದೆಯ ಆಶ್ರಯದಲ್ಲಿ ಕೆಲವು ವರ್ಷ ಆಶ್ರಯ ಪಡೆದು ಸಂಗೀತ ಅಭ್ಯಾಸದ ಜೊತೆಗೆ ಸಾಹಿತ್ಯವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾಳೆ. ಅವಳು ತನ್ನ ಸಿಟ್ಟು ಸೇಡವುಗಳನ್ನೆಲ್ಲ ಪದೇ ಪದೇ ತಂತಿವಾದ್ಯದ ಕೀಲಿ ಕಮಾನುಗಳ ಮೇಲೆ ತೀರಿಸಿಕೊಳ್ಳುತ್ತಾಳೆ. ಹೀಗೆ ಮಾಡುವಲ್ಲಿ ಅವಳ ಅಸಹಾಯಕವಾದ ಆಕ್ರೋಶ ಪ್ರತಿಭಟನೆಯಿದೆ. ತನ್ನ ತಂದೆಯ ಮರಣದ ನಂತರ ನಾಗವೇಣಿ ಮಗನೊಂದಿಗೆ ಮರಳಿ ಗಂಡನ ಊರಿಗೆ ಬಂದು ನೆಲೆಸುತ್ತಾಳೆ. ಅವಳು ಮೊದಲಿಗಿಂತಲೂ ಈಗ ಮಾನಸಿಕವಾಗಿ ಪ್ರಬಲವಾಗಿ ಬದಲಾಗಿದ್ದಾಳೆ. ಅವಳ ಪ್ರಪಂಚದಲ್ಲಿ ರಾಮ ಬಿಟ್ಟಾರೆ ಯಾರು ಉಳಿದಿಲ್ಲ. ಕಾಲ ಕಳೆದಂತೆ ರಾಮ ದೊಡ್ಡವನಾಗಿ ಶಿಕ್ಷಣ ಪಡೆದು ವಿದ್ಯಾವಂತನಾಗಿ ಸಮಾಜವನ್ನು ಕಟ್ಟುವ ಅದರ್ಶ ವ್ಯಕ್ತಿಯಾಗುತ್ತಾನೆ. ಇವನು ಅದರ್ಶ ವ್ಯಕ್ತಿಯಾಗಿ ನಿರ್ಮಾಣವಾಗುವಲ್ಲಿ ನಾಗವೇಣಿಯ ಬದುಕಿನ ಅನೇಕ ಸವಾಲುಗಳು ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಕಾದಂಬರಿಯ ತುಂಬೆಲ್ಲ ಸರಸ್ಪತಿ, ಪಾರೋತಿ, ಸತ್ಯಭಾಮೆ ಹಾಗೂ ನಾಗವೇಣಿ ಅಂತಹ ಸ್ತ್ರೀ ಪಾತ್ರಗಳು ತಮ್ಮ ಬದುಕಿನ ಉದ್ದಕ್ಕೂ ಕಷ್ಟ, ನೋವು, ಹತಾಶೆಗಳಿಂದ ಜರ್ಜರಗೊಳ್ಳುತ್ತವೆ. ಅಲ್ಲದೇ ಈ ಸ್ತ್ರೀ ಪಾತ್ರಗಳ ಮಧ್ಯೆ ಇರುವ ಹೊಂದಾಣಿಕೆಯ ಮನಸ್ಥಿತಿ. ತಮ್ಮ ಅನಿಸಿಕೆ, ನೋವುಗಳನ್ನು ಹಂಚಿಕೊಳ್ಳುವ ಮನಸ್ಥಿತಿ ಸ್ತ್ರೀಯರ ಮಧ್ಯೆ ಇರಬೇಕಾದ ಭಾವನಾತ್ಮಕ ಸಂಬಂಧಗಳ ಬೆಸುಗೆಗೆ ಸಾಕ್ಷಿಯಾಗುತ್ತವೆ. ನಾಗವೇಣಿ ಉಳಿದ ಸ್ತ್ರೀಯರಿಗಿಂತ ಭಿನ್ನವಾದ ಬದುಕನ್ನು ಕಾದಂಬರಿಯಲ್ಲಿ ಸಾಗಿಸುತ್ತಾಳೆ. ಇವಳು ಬದುಕನ್ನು ಸವಾಲಾಗಿ ಸ್ವೀಕರಿಸಿ ಜೀವನವನ್ನು ಯಶಸ್ವಿಯಾಗಿ ಕಟ್ಟಿಕೊಳ್ಳುತ್ತಾಳೆ. ಹೀಗೆ ಕಾದಂಬರಿ ಮೂರು ತಲೆಮಾರುಗಳ ಸಂವೇದನೆಯನ್ನು ಒಳಗೊಂಡು ಸ್ತ್ರೀಸಂವೇದನೆಯ ದೃಷ್ಟಿಯಲ್ಲಿ ಮಹತ್ವವಾಗುತ್ತದೆ.

ನಂಜನಗೂಡು ತಿರುಮಲಾಂಬ ಅವರ ‘ನಭಾ’ ಕಾದಂಬರಿಯ ವಸ್ತು ವಿಧವಾ ಹೆಣ್ಣಿನ ಸಂಕಟ ಮತ್ತು ಅವಳ ಜೀವನವನ್ನು ಕುರಿತದ್ದಾಗಿದೆ. ನಭ ಎಂಬ ವಿಧವೆ ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಸಿಲುಕಿ ಅನುಭವಿಸುವ ಶೋಷಣೆಗಳನ್ನು ಕಾದಂಬರಿ ತೆರೆದಿಡುತ್ತದೆ. ಸ್ತ್ರೀಯರ ಮೇಲೆ ನಡೆಯುವ ಶೋಷಣೆಗಳೆಲ್ಲವೂ ಪುರುಷ ಪ್ರಧಾನ ವ್ಯವಸ್ಥೆಯಿಂದಷ್ಟೆ ನಡೆಯುವುದಿಲ್ಲ. ಅದರಲ್ಲಿ ಸ್ತ್ರೀ ಕೂಡ ಪಾಲುದಾರಳು ಎಂಬುದು ‘ಶರಾವತಿಬಾಯಿ’ಯ ಮೂಲಕ ತಿಳಿಯುತ್ತದೆ. ನಭಾ ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು, ಮದುವೆಯಾಗಿ ಸಂಸಾರ ಮಾಡುವ ಮುಂಚೆಯೇ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನನ್ನು ಕಳೆದುಕೊಂಡಿದ್ದಾಳೆ. ಆಳಿಯ ಸಾವಿನ ನೋವಿನಲ್ಲೇ ಅನಾರೋಗ್ಯದಿಂದ ನರಳುತ್ತಿರುವ ತನ್ನ ಸಹ ತಾಯಿಯನ್ನು ಸಹ ಕಳೆದುಕೊಳ್ಳುತ್ತಾಳೆ. ಹೀಗೆ ಒಬ್ಬೊಬ್ಬರನ್ನೇ ಕಳೆದುಕೊಂಡು ವಿಧವೆ ಆಗುವುದರ ಜೊತೆಗೆ ಅನಾಥೆಯಾಗುತ್ತಾಳೆ. ಇವಳ ಚಿಕ್ಕಪ್ಪ ಶಂಕರನಾಥ ಮತ್ತು ಆತನ ಹೆಂಡತಿ ಶರಾವತಿಬಾಯಿ ಅವಳ ತಾಯಿಯ ಕಾರ್ಯ ಮಾಡಲು ಆಸ್ತಿ ಎಲ್ಲವನ್ನು ಬರೆಸಿಕೊಂಡು ಅವಳನ್ನು ನಿರ್ಗತಿಕಳನ್ನಾಗಿ ಮಾಡುತ್ತಾರೆ. ಮನೆಯಲ್ಲಿ ನಡೆಯುವ ಎಲ್ಲ ಕೆಟ್ಟ ಘಟನೆಗಳಿಗೆ ಹೆಣ್ಣೆ ಕಾರಣ ಎಂದು ಅವಳಿಗೆ ಕಟ್ಟುವ ವಾಡಿಕೆ ನಮ್ಮ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಭಾಳ ತಾಯಿ ಸತ್ತಾಗ ಶರಾವತಿ ಬಾಯಿ “ನೀನು ಹುಟ್ಟಿದಂದಿದಲೂ ನಮ್ಮ ವಂಶಕ್ಕೆ ಕಷ್ಟಗಳೇ ಬರುತ್ತಿವೆ” ಎಂದು ಹೇಳಿ ಎಲ್ಲದಕ್ಕೂ ನಭಾನೇ ಕಾರಣವೆಂದು ನೋಯಿಸುತ್ತಾಳೆ. ಸ್ವತಃ ಹೆಣ್ಣಾಗಿದ್ದು ಕೂಡ ಹೆಣ್ಣನ್ನು ಅರ್ಥ ಮಾಡಿಕೊಳ್ಳದ ಶರಾವತಿ ಅಂತಹ ಸ್ತ್ರೀಯರು ನಮ್ಮ ಸಮಾಜದಲ್ಲಿದ್ದಾರೆ. ಇಂತಹ ಹೆಣ್ಣಿನ ಮಧ್ಯೆ ನಭಾ ಅಂತಹ ಶೋಷಿತ ಹೆಣ್ಣು ಮಗಳಿಗೆ ನ್ಯಾಯ ಸಿಗುವುದು ಕನಸಿನ ಮಾತು ಆಗುತ್ತದೆ. ವಿಧವೆ ಅದವಳನ್ನು ವಿರೂಪಗೊಳಿಸುವ ವಾಡಿಕೆಗೆ ಸಾಕ್ಷಿಯಾಗಿ ಶರಾವತಿಬಾಯಿಯ ದೃಷ್ಟಿ ನಭಾಳ ಕೂದಲಿನ ಮೇಲೆ ಹೋಗುತ್ತದೆ. ಗಂಡನನ್ನು ಕಳೆದುಕೊಂಡವಳಿಗೆ “ಹಾಳು ಮೈಲಿಗೆ ಕೂದಲು” ಏಕೆ ಅದನ್ನು ತೆಗಿಸಬೇಕೆಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾಳೆ. ಇದರಿಂದ ನಭಾ ತನ್ನ ಕೂದಲನ್ನು ಸ್ವತಃ ತಾನೇ ಬಿಗಿಯಾಗಿ ಕಟ್ಟಿಕೊಂಡು ಹಾಳು ಮಾಡಿಕೊಳ್ಳುತ್ತಾಳೆ. ಮೈಲಿಗೆಯು ತಲೆಯ ಕೂದಲಲ್ಲಿ ಇಲ್ಲ. ಅದಿರುವುದು ಮನಸ್ಸಿನಲ್ಲಿ ಎಂದು ಸಂಪ್ರದಾಯವನ್ನು ಪ್ರತಿಭಟಿಸುತ್ತಾಳೆ. ಆದರೆ ಅವಳ ಅಸಹಾಯಕ ಪರಿಸ್ಥಿತಿ ಅವಳ ಪ್ರತಿಭಟನೆಯನ್ನು ಹತ್ತಿಕ್ಕುತ್ತದೆ.

ನಿರ್ಭಾಗ್ಯಳಾದ ನಭಾಗೆ ಸಹನ ಸೌಜನ್ಯತೆಗಳು ಹೆಚ್ಚಿದಂತೆಲ್ಲ ಶರಾವತಿಗೆ ಕ್ರೋಧ-ಮಾತ್ಸರ್ಯಗಳೂ ಹೆಚ್ಚಾಗುತ್ತವೆ. ನಭೆಯು ತನ್ನ ಚಿಕ್ಕಮ್ಮಳ ಕಾಟವನ್ನು ಚಿತ್ತಸ್ಥೈರ್ಯದಿಂದ ಸೈರಿಸುತ್ತಿದ್ದಳು. ಪ್ರತಿನಿತ್ಯ ಅನುಭವಿಸುತ್ತಿದ್ದ ಹಿಂಸೆಗಳಿಂದ ನಭಾ ಅನಾರೋಗ್ಯಕ್ಕೆ ತುತ್ತ್ತಾದಾಗ ಶರಾವತಿಬಾಯಿ ಸರಿಯಾಗಿ ಊಟ ಕೊಡದೆ “ರಂಡೆ ಸಾಯುವುದರಲ್ಲಿ ನ್ಯಾಯವೇನು? ಅನ್ಯಾಯವೇನು? ಸತ್ತರೆ, ಲೋಕವೇ ಮುಳುಗಿ ಹೋಗುವುದೋ?” ಎಂದು ಚಿಕಿತ್ಸೆ ಕೊಡಿಸಲು ಮುಂದಾದ ಗಂಡನಿಗೆ ತಡೆಯುತ್ತಾಳೆ. ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣನ್ನು ನೋಡುವ ಈ ದೃಷ್ಟಿಕೋನ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿರುವ ‘ಹೆಣ್ಣಿಗೆ ಹೆಣ್ಣೆ ಶತ್ರು’ ಎಂಬ ಮಾತನ್ನು ವಾಸ್ತವ ಸತ್ಯವಾಗಿಸಿ ಬಿಡುತ್ತದೆ. ವಿಧವೆಯಾದ ಮಾತ್ರಕ್ಕೆ ಅವಳ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಇಂತಹ ಪ್ರಯತ್ನಗಳು ಹೆಣ್ಣಿನ ಅಸ್ಥಿತ್ವದ ಪ್ರಮುಖ ಪ್ರಶ್ನೆಯಾಗುತ್ತದೆ. ಕಾದಂಬರಿಯಲ್ಲಿ ನಭಾಳ ಅಸ್ಥಿತ್ವದ ಪರ ಅವಳ ಚಿಕ್ಕಪ್ಪ ತಹಸಿಲ್ದಾರ್ ಚಿದಾನಂದ ನಿಲ್ಲುತ್ತಾನೆ. ಇವನು ನಭಾ ಜ್ವರದಿಂದ ಬಳಲುವಾಗ ನೋಡಲು ಬಂದಾಗ ಅವಳ ಪರಿಸ್ಥಿತಿಯನ್ನು ಕಂಡು ಮರುಗುತ್ತಾನೆ. ಸಿಟ್ಟಿನಿಂದ ಶಂಕರನಾಥ ಮತ್ತು ಶರಾವತಿಗೆ “ಹೆಣ್ಣು ಮಕ್ಕಳೇನು ಬೀದಿಯಲ್ಲಿ ಬಿದ್ದಿರುವರೆ? ಗಂಡ ಸತ್ತ ಮಾತ್ರಕ್ಕೆ ಅವರೇನು ಮನುಷ್ಯ ಜಾತಿ ಬಿಟ್ಟಂತೆಯೇ? ಅಂತವರಲ್ಲಿರುವ ಸದ್ಗುಣಗಳು ಹೋಗುವುದೇ? ಅವರಲ್ಲಿ ಜೀವಾತ್ಮನಾದರೂ ಇಲ್ಲವೆ? ಅವರ ವಿಷಯದಲ್ಲಿ ಇಷ್ಟು ಬೇಸರವು ಸರಿಯಲ್ಲ.” ಎಂದು ಬಯ್ದು ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳನ್ನು ಪ್ರೀತಿಯಿಂದ ಅವನ ಹೆಂಡತಿ ರಮಾಮಣಿ ಮತ್ತು ಮಕ್ಕಳು ಕಾಣುತ್ತಾರೆ. ಅವಳಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಧೈರ್ಯವಾಗಿ ಬದುಕನ್ನು ಕಟ್ಟಿಕೊಳ್ಳಲು ನೇರವಾಗುತ್ತಾನೆ. ಆದರೆ ಗಂಡನನ್ನು ಕಳೆದುಕೊಂಡ ನಭಾಳನ್ನು ಬಯಸುವ ರಾಜಶೇಖರನಿಂದ ನಭಾ ಬೇಸತ್ತು ಪತ್ರ ಬರೆದಿಟ್ಟು ಊರು ಬಿಟ್ಟು ಹೋಗುತ್ತಾಳೆ. ಇವಳ ಹೋಗುವಿಕೆಯಲ್ಲಿ ತನ್ನ ಗಂಡನ ಮೇಲೆ ಇಟ್ಟಿದ್ದ ಪ್ರೀತಿ ಎಷ್ಟು ಕಾರಣವೋ ಅಷ್ಟೇ ರಾಜಶೇಖರನ ನೀಡುತ್ತಿದ್ದ ಕಿರುಕುಳ ಕೂಡ. ಕೊನೆಗೂ ಪುರುಷ ವ್ಯವಸ್ಥೆ ಅವಳನ್ನು ಸ್ವತಂತ್ರವಾಗಿ ಬದುಕಲು ಬಿಡುವುದಿಲ್ಲ. ಸಮಾಜದಲ್ಲಿ ಹೆಣ್ಣನ್ನು ರಾಜಶೇಖರನಂತಹ ಗಂಡಸರು ಅಷ್ಟೇ ಶೋಷಣೆ ಮಾಡುವುದಿಲ್ಲ. ಹೆಣ್ಣೆ, ಹೆಣ್ಣನ್ನು ಶೋಷಿಸುವ ವ್ಯವಸ್ಥೆಗೆ ಕೂಡ ಇದೆ. ಇದಕ್ಕೆ ಸಾಕ್ಷಿಯಾಗಿ ಶರಾವತಿಯ ಕಾಣುತ್ತಾಳೆ. ಸಮಾಜದಲ್ಲಿ ಎಲ್ಲ ಪುರುಷರ ಹೆಣ್ಣಿನ ಮೇಲೆ ದಬ್ಬಾಳಿಕೆ, ಶೋಷಣೆ ಮಾಡುವುದಿಲ್ಲ ಎಂಬುದಕ್ಕೆ ಚಿದಾನಂದ ಸಾಕ್ಷಿಯಾಗುತ್ತಾನೆ. ನಭಾ ತನ್ನ ತಂದೆ, ತಾಯಿ ಹಾಗೂ ಗಂಡನನ್ನು ಕಳೆದುಕೊಂಡು ಅನಾಥೆಯಾಗಿ, ನಿರ್ಗತಿಕಳಾಗಿ ತನ್ನ ಮೇಲೆ ನಡೆಯುವ ಶೋಷಣೆಯನ್ನು ಪ್ರತಿಭಟಿಸಲು ಪ್ರಯತ್ನಿಸುತ್ತಾಳೆ. ಆದರೆ ಅವಳ ಪ್ರತಿಭಟನೆಯ ಧ್ವನಿಯನ್ನು ಶರಾವತಿ ಅಡಗಿಸುತ್ತಾಳೆ. ನಭಾ, ಶರಾವತಿ ಪಾತ್ರಗಳಾಗಿರಬಹುದು ಆದರೆ ವಾಸ್ತವದ ಬದುಕಿನಲ್ಲಿ ಇಂತಹ ಅನೇಕ ಶರಾವತಿಯರು ನಭಾ ಅಂತಹ ಅನೇಕ ಹೆಣ್ಣು ಮಕ್ಕಳ ಮೇಲೆ ಶೋಷಣೆ ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಕಾಣುತ್ತೇವೆ. ಅನಾಥೆ, ನಿರ್ಗತಿಕ, ವಿಧವೆಯಾದ ಹೆಣ್ಣು ಮಕ್ಕಳು ಸಮಾಜದಲ್ಲಿ ಎದುರಿಸುವ ಸವಾಲು, ಸಮಸ್ಯೆಗಳು. ಅನುಭವಿಸುವ ಶೋಷಣೆ, ದಬ್ಬಾಳಿಕೆಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಕಾದಂಬರಿ ಸ್ತ್ರೀ ಸಂವೇದನೆಯ ಅನೇಕ ಆಯಾಮಗಳನ್ನು, ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಉಪಸಂಹಾರ

ಈ ಲೇಖನದಲ್ಲಿ ಆಯ್ದ ಕಾದಂಬರಿಗಳನ್ನು ಕೇಂದ್ರಿಕರಿಸಿಕೊಂಡು ಸ್ತ್ರೀಯರು ಸಮಾಜದಲ್ಲಿ ಎದುರಿಸಿರುವ, ಎದುರಿಸುತ್ತಿರುವ ಅನೇಕ ಸಾಂಸ್ಕೃತಿಕ ಸವಾಲುಗಳನ್ನು ಚರ್ಚೆಗೆ ಒಳಪಡಿಸಲಾಗಿದೆ. ಇಂತಹ ಸವಾಲುಗಳಿಂದ ಸ್ತ್ರೀ ಎದುರಿಸುವ ಶೋಷಣೆ, ದೌರ್ಜನ್ಯಗಳನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ಮ ಮಾಡಲಾಗಿದೆ. ಆದರೆ ಕನ್ನಡ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ಒಟ್ಟು ಸ್ತ್ರೀಸಂವೇದನೆಯನ್ನು ಈ ಆಯ್ದ ಕಾದಂಬರಿಗಳಿಂದ ನೋಡಲು ಸಾಧ್ಯವಿಲ್ಲ. ಆದರೆ ‘ಇಂದಿರಾಬಾಯಿ’, ‘ಮಾಡಿದ್ದುಣ್ಣೋ ಮಹಾರಾಯ’, ‘ಮರಳಿಮಣ್ಣಿಗೆ’ ಹಾಗೂ ‘ನಭಾ’ ಅಂತಹ ಕಾದಂಬರಿಗಳಲ್ಲಿ ವ್ಯಕ್ತವಾಗಿರುವ ಸ್ತ್ರೀ ಬದುಕಿನ ತಲ್ಲಣಗಳು ಸ್ತ್ರೀ ಪ್ರಪಂಚವನ್ನೇ ಕಟ್ಟಿಕೊಡುತ್ತವೆ. ಆದ್ದರಿಂದ ಇಂತಹ ಕಾದಂಬರಿಗಳನ್ನು ಆಯ್ಕೆ ಮಾಡಿಕೊಂಡು ಸ್ತ್ರೀಯರ ಸಾಂಸ್ಕೃತಿಕ ಬದುಕನ್ನು ನೋಡುವ ಪ್ರಯತ್ನ ಮಾಡಲಾಗಿದೆ. ಅಲ್ಲದೇ ಅವಳು ಸಾಮಾಜಿಕ, ಕೌಟುಂಬಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ ಅನುಭವಿಸಿದ ಸಂಘರ್ಷಗಳನ್ನು ಸಂವೇದನೆಯ ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗಿದೆ.

ಪರಾಮರ್ಶನ ಗ್ರಂಥಗಳು

  1. ಆಮೂರ ಜಿ.ಎಸ್., ಕನ್ನಡ ಕಥನ ಸಾಹಿತ್ಯ : ಕಾದಂಬರಿ, 2013, ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-560 009.
  2. ಶೇಷಗಿರಿ ರಾವ್ ಎಲ್.ಎಸ್. ಹೊಸಗನ್ನಡ ಸಾಹಿತ್ಯ ಚರಿತ್ರೆ, 2018, ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-560 009.
  3. ಶಿವರಾಮ ಕಾರಂತ, ಮರಳಿ ಮಣ್ಣಿಗೆ, ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-560 009.
  4. ನಂಜನಗೂಡು ತಿರುಮಲಾಂಬ, ನಭಾ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal