Tumbe Group of International Journals

Full Text


.ರಾ.ಸು. ಅವರ ಸಾಮಾಜಿಕ ಕಾದಂಬರಿಗಳು

ಡಾಪ್ರೇಮಪಲ್ಲವಿ ಸಿ.ಬಿ.,

ಕನ್ನಡ ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ.

ಮೊ:9448815777,

email: palvisahithya14@gmail.com

ಸಾರಲೇಖ:

ಕಾದಂಬರಿ ಸಾಹಿತ್ಯದ ಪ್ರಕಾರಗಳಲ್ಲಿ ಜನಪ್ರಿಯ ಮಾಧ್ಯಮವಾಗಿದೆ. ಜೀವನದ ಬಹು ಮುಖ್ಯ ಸಮಸ್ಯೆ-ಸಂಕೀರ್ಣತೆಗಳನ್ನು ಬರಹದ ಎಲ್ಲಾ ಪ್ರಕಾರಗಳಿಗಿಂತ ಕಾದಂಬರಿ ಹೆಚ್ಚು ಶಕ್ತವಾಗಿ ಚಿತ್ರಿಸಬಲ್ಲದು. ಸುತ್ತಮುತ್ತಲಿನ ವಾಸ್ತವ ಜಗತ್ತನ್ನು ಕಂಡಂತೆ ಕಾಣಿಸಬೇಕೆಂಬ ಹಂಬಲ ಇದರದು. ಆರ್ನಾಡ್ ಹೇಳುವಂತೆ  An interpretation of life ಜೀವನದ ವಾಸ್ತವಿಕ ಪರಿಸರದಲ್ಲಿ ನಿಂತು ಯಥಾರ್ಥತೆಯನ್ನು ತೋರುವ ಪ್ರಕಾರ. ಜೇಮ್ಸನ್ ಕಾದಂಬರಿಯನ್ನು `ಪ್ರಕಾರಗಳ ಚರಮಸೀಮೆ` ಎಂದಿದ್ದಾನೆ. ರಷ್ಯಾ, ಅಮೇರಿಕಾ, ಇಂಗ್ಲೇಂಡ್, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಈ ಪ್ರಕಾರ ಅದ್ಭುತವಾಗಿ ಬಳಕೆಯಾಗಿದ್ದು, ಟಾಲ್‍ಸ್ಟಾಯ್ ನ  War and peace, ವಿಲಿಯಂ ನ  The sound and the fury, ಜೇಮ್ಸ್ ಜಾಯ್ಸ್ ನ  The ulysis, ಕಾಮೂ ನ plague - ಮೊದಲಾದ ಕೃತಿಗಳವರೆಗೂ ತನ್ನ ಪ್ರಯೋಗಶೀಲತೆಯನ್ನು ರೂಢಿಸಿಕೊಂಡಿದೆ.

ಕಾದಂಬರಿ ನಮಗೆ ಬಂದದ್ದು ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದಲಾದರೂ ಕನ್ನಡಕ್ಕೆ ಅದು ಪ್ರವೇಶಿದ್ದು ಮುಖ್ಯವಾಗಿ ಬಂಗಾಳಿ ಮತ್ತು ಮರಾಠಿಗಳ ಮೂಲಕ. ಇವು ಅನುವಾದಿತ ಇಲ್ಲವೇ ಐತಿಹಾಸಿಕ ಕೃತಿಗಳು. ಇದರ ಜೊತೆಗೆ ಸಾಮಾಜಿಕ ವಸ್ತುಗಳನ್ನು ಆರಿಸಿಕೊಂಡು ಕಾದಂಬರಿಗಳನ್ನು ಬರೆಯುವ ಪ್ರಯತ್ನ ನಡೆಯದೇ ಇರಲಿಲ್ಲ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಕನ್ನಡದಲ್ಲಿ ಕಾದಂಬರಿ ಬೇರೂರಿತು.

1875 ರಿಂದ 1930 ರವರೆಗಿನ ಕಾಲವನ್ನು ಕನ್ನಡ ಕಾದಂಬರಿಯ ಉದಯದ ಕಾಲ ಎನ್ನಬಹುದು. ಈ ಕಾಲದ ಲೇಖರೆಲ್ಲ ತಮ್ಮ ಸಂಸ್ಕøತಿಯಲ್ಲಿ ಆಳವಾಗಿ ಬೇರುಬಿಟ್ಟವರಾಗಿದ್ದ ಸನಾತನ ಧರ್ಮದ ಮೌಲ್ಯಗಳನ್ನು ನಂಬಿದವರಾಗಿದ್ದರು. ಈ ಹಿನ್ನಲೆಯಲ್ಲಿಯೇ ಗಳಗನಾಥರು, ಬಿ.ವೆಂಕಟಾಚಾರ್ಯರ ಕಾದಂಬರಿಗಳನ್ನು ನೋಡಬಹುದು.

ಭಾರತೀಯ ಕಾದಂಬರಿಯ ಇತಿಹಾಸದಲ್ಲಿ ಎರಡು ಪ್ರವೃತ್ತಿಯುಳ್ಳ ಕಾದಂಬರಿಗಳವೆ. ಒಂದು ವಾಸ್ತವವಾದ ಕಾದಂಬರಿಗಳು, ಎರಡನೆಯದು ರಮ್ಯವಾದ ಕಾದಂಬರಿಗಳು. ವಾಸ್ತವಾದಿ ಕಾದಂಬರಿಗಳಲ್ಲಿ ಇರುವುದನ್ನಷ್ಟೇ ಬರೆದರೆ ರಮ್ಯವಾದದ ಕಾದಂಬರಿಗಳಲ್ಲಿ ಕಲ್ಪನೆ, ರಮ್ಯತೆಯ ಮಿಶ್ರಣ. ಆರಂಭದ ಕಾದಂಬರಿಗಳಲ್ಲಿ ವಾಸ್ತವತೆಗಿಂತ ರಮ್ಯತೆಗೆ ಹೆಚ್ಚು ಪ್ರಾಶಸ್ತ್ಯ. ಹಾಗೆಂದು ವಾಸ್ತವತೆಯೇ ಇಲ್ಲ ಎಂದು ಹೇಳಲು ಆಗುವುದಿಲ್ಲ. 

ಕನ್ನಡದಲ್ಲಿ ಗುಲ್ವಾಡಿ ವೆಂಕಟರಾಯ ಇಂದಿರಾಬಾಯಿ ಯಿಂದ ಆರಂಭವಾದ ಕಾದಂಬರಿಯ ಪಯಣ ತನ್ನದೇ ಆದ ಅಸ್ತಿತ್ವದೊಂದಿಗೆ ಇಂದಿಗೂ ಮುಂದುವರೆಯುತ್ತಲೇ ಇದೆ. ಇದಕ್ಕೂ ಮುಂಚೆ ಅಂದರೆ 1899 ರಲ್ಲಿಯೇ ಗುಲ್ವಾಡಿ ಅಣ್ಣಾರಾಯರು ಸಾಮಾಜಿಕ ಕಾದಂಬರಿಯನ್ನು ಬರೆದಿದ್ದರು. ಆದರೆ ಆಗ ಸಾಮಾಜಿಕ ಕಾದಂಬರಿ ಜನರ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಯೂರಲಿಲ್ಲ. ಐತಿಹಾಸಿಕ ಕಾದಂಬರಿಗಳೇ ಜನರ ಮೆಚ್ಚುಗೆ ಗಳಿಸಿದ್ದವು. ಆದರೂ ಸಾಮಾಜಿಕ ಕಾದಂಬರಿಗಳನ್ನು ಬರೆಯುವ ಪ್ರಯತ್ನಗಳು ನಡೆದವು. ಎಂ.ಎಸ್.ಪುಟ್ಟಣ್ಣ ನವರ `ಮಾಡಿದ್ದುಣ್ಣೋ ವiಹಾರಾಯ`, ಕೆರೂರು ವಾಸುದೇವಾಚಾರ್ಯರ `ಇಂದಿರೆ` ಮುಂತಾದವನ್ನು ನೆನೆಯಬಹುದು.

1875 ರಿಂದ 1920 ರ ಕಾಲ ನವೋದಯ ಪೂರ್ವದ್ದಾದರೆ, 1920 ರಿಂದ 1945 ರವರೆಗೆ ನವೋದಯದ್ದು. ಇಂಗ್ಲೆಂಡಿನ ರೊಮ್ಯಾಂಟಿಸಂ ನ ಪ್ರೇರಣೆಯಿಂದ ಜನ್ಮ ತಳೆದ ನವೋದಯ ಕನ್ನಡ ಸಾಹಿತ್ಯದಲ್ಲಿ ಬೆಳ್ಳಿಯ ಕಾಲಘಟ್ಟ ಎನ್ನಬಹುದು. ಸಾಹಿತ್ಯದ ಎಲ್ಲಾ ಪ್ರಕಾರಗಳು ವಿಜೃಂಭಿಸಿದವು. ಅದರಲ್ಲೂ ಸಾಮಾಜಿಕ ಕಾದಂಬರಿಗಳ ಸಂಖ್ಯೆಯೇ ಹೆಚ್ಚಾಗಿದ್ದು ಈ ಅವಧಿಗೆ ಸಾಮಾಜಿಕ ಕಾದಂರಿಯೇ ಪಟ್ಟದ ರಾಣಿಯಾಯಿತು. ಕಾದಂಬರಿ ಪ್ರಕಾರ ಉನ್ನತ ಮಟ್ಟಕ್ಕೆ ಏರಿದ ಕಾಲಘಟ್ಟವಿದು.

            1945 ರ ಹೊತ್ತಿಗೆ ಹೊಸದೊಂದು ಗಾಳಿ ಬೀಸಲಾರಂಭಿಸಿತು. ಪರಂಪರಾನುಗತವಾಗಿ ಮೌಢ್ಯವನ್ನು ರೂಢಿಸಿಕೊಂಡು ಬಂದಿದ್ದ ಸಾಹಿತ್ಯವನ್ನು ಖಂಡಿಸುತ್ತಾ ಮಯಕೋವಸ್ಕಿ, ಗಾರ್ಕಿ, ವಾಲ್ಟೇರ್, ಎಮಿಲಿ ಜೋಲಾ, ಇಬ್ಸನ್, ಷಾ ಮುಂತಾದ ಪಾಶ್ಚಾತ್ಯ ಸಾಹಿತಿಗಳ ಪ್ರಭಾವದಿಂದ ಬಂದ ಪ್ರಗತಿಶೀಲರು ತಮ್ಮ ಅಭಿವ್ಯಕ್ತಿಗೆ ಆಯ್ದುಕೊಂಡದ್ದು ಕಾದಂಬರಿ ಮತ್ತು ಸಣ್ಣಕಥೆ ಪ್ರಕಾರವನ್ನು. `ರಾಜಸೇವಾಸಕ್ರ, ರಾಜಸೇವಾಪ್ರಸಕ್ತರ ಜರತಾರಿ ರುಮಾಲಿನವರ ಸಾಹಿತ್ಯ ಸಾಕು` ಎಂಬುದು ಪ್ರಗತಿಶೀಲರ ಕೂಗಾಗಿತ್ತು. ಅ.ನ.ಕೃಷ್ಣರಾಯರಿಂದ ಆರಂಭವಾದ ಈ ಪಂಥಕ್ಕೆ ಸಾಥ್ ನೀಡಿದವರು ತ.ರಾಸು., ನಿರಂಜನ, ಬಸವರಾಜ ಕಟ್ಟಿಮನಿ, ಕುಮಾರ ವೆಂಕಣ್ಣ, ಅರ್ಚಕ ವೆಂಕಟೇಶ್, ಎಸ್.ಅನಂತನಾರಾಯಣ ಮುಂತಾದವರನ್ನು ಇಲ್ಲಿ ನೆನೆಯಬಹುದು. ಪ್ರಸ್ತುತ ಲೇಖನದಲ್ಲಿ ತ.ರಾ.ಸು ಅವರ ಸಾಮಾಜಿಕ ಕಾದಂಬರಿಗಳ ಸಮಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ.

ಅಧ್ಯಯನದ ಉದ್ದೇಶ ಮತ್ತು ವೈಧಾನಿಕತೆ

ತ.ರಾ.ಸು ಅವರ ಸಾಮಾಜಿಕ ಕಾದಂಬರಿಗಳನ್ನು ಇಡಿಯಾಗಿ ಅಧ್ಯಯನ ಮಾಡುವುದು ಮತ್ತು ಅವುಗಳಲ್ಲಿ ವಿಶಿಷ್ಟ ಹಾಗೂ ಸೂಕ್ಷ್ಮ ವಿಚಾರಗಳನ್ನು ತಿಳಿಯುವುದು. ಆ ಮೂಲಕ ತ.ರಾ.ಸು ಅವರ ವ್ಯಕ್ತಿತ್ವ ಅಥವಾ ಒಬ್ಬ ಕಾದಂಬರಿಕಾರನಿಗಿದ್ದ ಸಾಮಾಜಿಕ ಒತ್ತಡಗಳೆಂತಹವು. ಅವನು ನೋಡಿದ ಕೇಳಿದ ಅನುಭವಿಸಿದ ವಿಚಾರಗಳೇ ಕಾದಂಬರಿ ರೂಪ ತಾಳುತ್ತವೆಯಾ? ಆತನ ಗುಣ ವ್ಯಕ್ತಿತ್ವಗಳು ಕಾದಂಬರಿಯ ಪಾತ್ರಗಳಲ್ಲಿ ಸೃಷ್ಟಿಗೊಂಡಿರುತ್ತವೆಯಾ? ಹೀಗೆ ನಾನಾ ಅನುಮಾನ ಮತ್ತು ಕುತೂಹಲಗಳಿಂದ ತ.ರಾ.ಸು ಅವರ ಸಾಮಾಜಿಕ ಕಾದಂಬರಿಗಳನ್ನು ಅಧ್ಯಯನ ಮಾಡಿದ್ದೇನೆ. ತ.ರಾ.ಸು ಕಾದಂಬರಿಗಳನ್ನು ಓದುವ ಮತ್ತು ಅವರ ಕಾದಂಬರಿಗಳ ಬಗೆಗೆ ಬಂದಿರುವ ವಿಮರ್ಶೆಗಳನ್ನು ಅಭ್ಯಸಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದು, ತದನಂತರದಲ್ಲಿ ನನ್ನದೇ ಅಭಿಪ್ರಾಯದ ಹಿನ್ನಲೆಯಲ್ಲಿ ಕೆಲ ವಿಚಾರಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.

ಪರಿಚಯ

ಪ್ರಗತಿಶೀಲ ಸಾಹಿತ್ಯ ಪಂಥದಲ್ಲಿ ಅ.ನ.ಕೃ. ನಂತರದ ಸ್ಥಾನವೇ ತ.ರಾ.ಸು. ಅವರದು. `ಸಾಹಿತ್ಯ ವಾಸ್ತವಿಕತೆಗೆ ಮುಸುಕನ್ನು ಹಾಕಬಾರದು ಸಾಮಾಜಿಕ ಕ್ರಾಂತಿಯ ವಜ್ರಾಯುಧವಾಗಬೇಕು` ಎಂದು ಕರೆಕೊಟ್ಟ ಅ.ನ.ಕೃ. ಅವರ ಪಡಿನೆಳಲಾಗಿ ಬಂದವರು ತಳುಕಿನ ರಾಮಸ್ವಾಮಯ್ಯ ಸುಬ್ಬರಾಯರು. ಇವರು ಕನ್ನಡ ಸಾಹಿತ್ಯದ ಸೀಮಾಪುರುಷರಾದ ಟಿ.ಎಸ್.ವೆಂಕಣ್ಣಯ್ಯನವರ ತಮ್ಮನ ಮಗ. ಕನ್ನಡ ಸಾಹಿತ್ಯ ಚರಿತ್ರೆ ಬರೆದ ತ.ಸು.ಶಾಮರಾಯರ ಅಣ್ಣನ ಮಗ. ಎಳೆತನದಲ್ಲಿಯೇ ಪಾಳೆಗಾರರ ಕತೆ ಕೇಳಿ ಹರಟುತ್ತಿದ್ದ ತ.ರಾ.ಸು ಅವರ ಮಾತನ್ನು ಕೃತಿಗಿಳಿಸಿ, ಅನಿಸಿಕೆಯನ್ನು ಅಕ್ಷರದಲ್ಲಿ ಮೂಡಿಸಿ ತಿದ್ದಿ ತೀಡಿ ಸಾಹಿತ್ಯದ ದಾರಿ ತೋರಿದ ಶ್ರೇಯಸ್ಸು ಟಿ.ಎಸ್.ವೆಂಕಣ್ಣಯ್ಯರಿಗೆ ಸಲ್ಲುತ್ತದೆ.

ಚಿತ್ರದುರ್ಗದ ಚಾರಿತ್ರಿಕ ವ್ಯಕ್ತಿಗಳ ಸುತ್ತ ಮನಸ್ಸು ಲೀನವಾಗಿ ವಿಶಿಷ್ಟವಾದೊಂದು ರೂಪಕೊಡುವಲ್ಲಿ ಸಿದ್ಧವಾಗುತ್ತಿರುವಾಗಲೇ ಟಿ.ಎಸ್.ವೆಂಕಣ್ಣಯ್ಯನವರು ಗಲಾಟೆ ಮಾಡಿ ಏನಾದರೂ ಬರೆಯಲು ಹೇಳಿದಾಗ `ಮಾಧೂ ಚೆಂಡು` ಎನ್ನುವ ಕತೆಯನ್ನು ಬಾಲಿಶವಾಗಿ ಬರೆದ ಮೊದಲ ಅನುಭವ. ಅದಕ್ಕೆ ಹತ್ತು ರೂಪಾಯಿಯ ಗೌರವಧನ ದೊರೆತಾಗ ಹಿಗ್ಗಿ, ಅಷ್ಟೂ ಹಣಕ್ಕೂ ಪುಸ್ತಕ ಕೊಂಡರಂತೆ. ಅಷ್ಟು ಓದುವ ಹುಚ್ಚು ತ.ರಾ.ಸು ಅವರಿಗೆ. ಅದು ಎಷ್ಟಿತ್ತೆಂದರೆ ಗ್ರಂಥಾಲಯದ ಎಲ್ಲಾ ಕಾದಂಬರಿಗಳನ್ನು ಓದಿ ಮುಗಿಸಿ ಬೇರೆ ಪುಸ್ತಕವನ್ನು ಕೊಳ್ಳಲೆಂದು ತಂದೆಯ ಜೇಬಿನಿಂದ ದುಡ್ಡು ಕದ್ದದ್ದು ಉಂಟು ಎಂಬ ಪ್ರಸಂಗವನ್ನು ಇಲ್ಲಿ ನೆನೆಯಬಹುದು.

ಸಾಮಾಜಿಕ ಕಾದಂಬರಿಗಳು

ತ.ರಾ.ಸು ಅವರ ಸಾಹಿತ್ಯದ ನೆಯ್ಗೆ ಬಹು ದೊಡ್ಡದು. ಅದರಲ್ಲಿ ನಾನು ಸಾಮಾಜಿಕ ಕಾದಂಬರಿಗಳು ಮತ್ತು ಅವುಗಳ ವಿಶಿಷ್ಟತೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತೇನೆ. ತ.ರಾಸು. ಅವರ ಒಟ್ಟು ರಚನೆಯಲ್ಲಿ ಸುಮಾರು 51 ಸಾಮಾಜಿಕ ಕಾದಂಬರಿಗಳನ್ನು ಕಾಣಬಹುದು. ಮನೆಗೆ ಬಂದ ಮಹಾಲಕ್ಷ್ಮಿ, ಜೀತದ ಜೀವ, ಮುಂಜಾವಿನ ಮುಂಜಾವು, ಪುರುಷಾವತಾರ, ರಕ್ತತರ್ಪಣ, ಬಿಡುಗಡೆಯ ಬೇಡಿ, ಮಸಣದ ಹೂವು, ಸಾಕುಮಗಳು, ನಾಗರಹಾವು, ಚಂದವಳ್ಳಿಯ ತೋಟ, ಹಾವು ಹಿಡಿದವರು, ಮಾರ್ಗದರ್ಶಿ, ಬೇಳಕಿನ ಬೀದಿ, ಗಾಳಿಮಾತು, ಬಂಗಾರಿ, ಆಕಸ್ಮಿಕ, ಪಂಜರದ ಪಕ್ಷಿ----- ಹೀಗೆ ಕಾದಂರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ತ.ರಾಸು. ಅವರ ಪಾಲಿಗೆ ಕಾದಂಬರಿ ಸಮಾಜಕ್ಕೆ ಹಿಡಿಯುವ ರನ್ನಗನ್ನಡಿ ಮಾತ್ರ ಆಗಲಿಲ್ಲ. ಸಮಾಜದ ಅಂತರಂಗದ ಮತ್ತು ಮಾನವಜೀವನದ ಒಳತೋಟಿಯನ್ನು ಅವರು ಕಂಡರು ಮತ್ತು ಚಿತ್ರಿಸಿದರು. ಸಮಕಾಲೀನ ಸಮಾಜದ ವಿವಿಧ ಮುಖಗಳನ್ನು ಅನಾವರಣ ಮಾಡಿದ್ದಲ್ಲದೇ ಪುರಾಣ ಇತಿಹಾಸದ ಆಳಕ್ಕೂ ಇಳಿದು ಶ್ರದ್ಧೆಯಿಂದ ಅಭ್ಯಸಿಸಿ ಅವುಗಳನ್ನು ಸಹ ತಮ್ಮ ಲೇಖನಿಯಿಂದ ಪುನರ್‍ಸೃಷ್ಟಿಸಿದರು. ಪ್ರಯೋಗಪ್ರಿಯತೆ ಅವರ ರಕ್ತಗುಣ. ಓದುಗರನ್ನು ಉಸಿರುಗಟ್ಟಿಸುವ ತೆರದಿ ಹೇಳುವ ಕಲೆ. ಧಾರುಣತೆಯ ನಿರೂಪಣೆ, ಸನ್ನಿವೇಶಗಳನ್ನು ಸೋಜ್ವಲವಾಗಿ ಕಣ್ಣಿಗೆ ಕಟ್ಟವಂತೆ ವರ್ಣಿಸಬಲ್ಲ ವರ್ಣಿಕ. ಅಂತೆಯೇ ಪ್ರಶಾಂತರಂಗವನ್ನು ಪ್ರವೇಶಿಸಿ ಅಲ್ಲಿನ ಸೂಕ್ಷ್ಮತಮ ಸಂವೇದನೆಗಳನ್ನು ಅರಿತು ಅರಗಿಸಿಕೊಂಡು ಅವುಗಳನ್ನು ಮರಳಿ ವಿವರವಾಗಿ ಚಿತ್ರಿಸಬಲ್ಲ ಅಭಿವ್ಯಕ್ತಿ ಕೌಶಲಿಗ. ಹರಿತವಾದ ಮೊನೆಯಂತ ಸಂಭಾಷಣೆ, ಸಹಜ ಸಜೀವ ಪರಿಸರ ಸೃಷ್ಟಿ, ಸದೃಢ ಪಾತ್ರ ಕಲ್ಪನೆ, ಅಭ್ಯಾಸಪೂರ್ಣವಾದ  ವೈಚಾರಿಕತೆ - ಇವು ತ,ರಾ.ಸು ಅವರೊಳಗಿದ್ದ ವಿಶಿಷ್ಟ ಗುಣಗಳು. ಈಯೆಲ್ಲ ವ್ಯಕ್ತಿತ್ವ ಅವರ ಸಾಮಾಜಿಕ ಕಾದಂಬರಿಗಳಲ್ಲಿಯೂ ಇಣುಕಿದೆ.

`ಮನೆಗೆ ಬಂದ ಮಹಾಲಕ್ಷ್ಮಿ` ಅವರ ಮೊಟ್ಟ ಮೊದಲ ಕಾದಂಬರಿ. ಇಡೀ ಕುಟುಂಬವೊಂದರ ಚಿತ್ರಣ. ರಕ್ತತರ್ಪಣ ಎರಡನೇ ಕಾದಂಬರಿ. ಸ್ವಾತಂತ್ರ ಹೋರಾಟಗಾರನೊಬ್ಬನ ಹಾಗೂ ಒಂದು ಗ್ರಾಮದ ವಾಸ್ತವ ಚಿತ್ರಣ ಇಲ್ಲಿದೆ. ಸ್ವತಃ ಸ್ವಾತಂತ್ರಹೋರಾಟಗಾರರಾದ ತ.ರಾ.ಸು. ರವರು ಈ ಪಾತ್ರವನ್ನು ಸೊಗಸಾಗಿ ಯಶಸ್ವಿಯಾಗಿ ಚಿತ್ರಿಸಿದ್ದಾರೆ. `ಪುರುಷಾವತಾರ`ದಲ್ಲಿ ಬಿಕ್ಷುಕನ ಪರಿಸ್ಥತಿ. ಸಮಾಜ ಅವರ ಬಗ್ಗೆ ಅನುಕಂಪವನ್ನು ತೋರಿಸದೆ ಅವರನ್ನು ದೂರಮಾಡಿ ಹೊಟ್ಟೆಗಿಲ್ಲದೆ ಎಂಜಲು ಎಲೆಯನ್ನು ಸೋಸುತ್ತಿದ್ದರೂ ಅವರನ್ನೇ ಹೀಗಳೆಯಲು ಇಚ್ಛಿಸುವ ಈ ಜನರು ಪ್ರಾಣಿದಯಾ ಸಂಘಗಳನ್ನು ಸ್ಥಾಪಿಸಿ ಪ್ರಾಣಿಗಳ ಬಗ್ಗೆ ಕಠೋರ ವರ್ತನೆಯನ್ನು ತಡೆಯಲು ಶಾಸನಗಳನ್ನು ನಿರ್ಮಾಣ ಮಾಡಿ ನಾವು ಧನ್ಯರೆಂದು ಫೋಸು ಕೊಡುವ ಈ ಜನ ಮಾನವರ ಬಗ್ಗೆಯೇ ಎಂಥಹ ಪಾಶವೀ ತಾತ್ಸಾರದ ಧೋರಣೆಯನ್ನು ತಳೆದಿದ್ದಾರೆ ಎಂಬುದರ ಸಜೀವ ದೃಷ್ಟಾಂತದೊಂದಿಗೆ ಖಂಡಿಸಿದ್ದಾರೆ.

ಹೆಣ್ಣಿನ ಸ್ವಾತಂತ್ರ ಬಯಕೆಯನ್ನು ಸೂಕ್ಷ್ಮವಾಗಿ ವಿಶ್ಲೇಸುವ `ಬಿಡುಗಡೆಯ ಬೇಡಿ` ಮತ್ತು `ಮಸಣದ ಹೂವು`. ವೇಶ್ಯಾ ಸಮಸ್ಯೆಯ ಬಹುಮುಖತೆಯನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ತಮ್ಮ ಗುರು ಅ.ನ.ಕೃ. ಹತ್ತು ಕಾದಂಬರಿಗಳಲ್ಲಿ ಹೇಳಿದ್ದನ್ನು ತ.ರಾ.ಸು. ಒಂದು ಕೃತಿಯಲ್ಲಿ ಹೇಳುವ ಮೂಲಕ ಗುರುವನ್ನೇ ಮೀರಿಸಿದ ಶಿಷ್ಯರ ಸಾಲಿಗೆ ಸೇರುತ್ತಾರೆ. ಮಸಣದ ಹೂವು ಕಾದಂಬರಿಯ ಬಗೆಗೆ ಕುರ್ತುಕೋಟಿಯವರು ಹೀಗೆನ್ನುತ್ತಾರೆ `ಹೆಣ್ಣು ಜೀವನದ ಬೇಟೆ ಅನೇಕ ಕ್ಷೇತ್ರಗಳಲ್ಲಿ ನಡೆದದ್ದನ್ನು ತ.ರಾ.ಸು ಅ.ನ.ಕೃ ಗಿಂತ ಹೆಚ್ಚು ದಾರುಣವಾಗಿ ನಿರೂಪಿಸಿದ್ದಾರೆ. ಆದರೆ ಈ ಗುಣ ತ.ರಾ.ಸು ಅವರಲ್ಲಿ ಅನಾವಶ್ಯಕವಾದ ಹಿಂಸೆಯನ್ನು ಪರಿಣಮಿಸುತ್ತದೆ. ತ.ರಾ.ಸು ಕಾದಂಬರಿಗಳನ್ನು ರೊಚ್ಚಿನಿಂದ ಕಂಡಿದ್ದರ ಪರಿಣಾಮವಿದು`(ಯುಗಧರ್ಮ ಮತ್ತು ಸಾಹಿತ್ಯ ದರ್ಶನ, ಪು-198) ಎನ್ನುವ ಅವರ ಮಾತು ಒಪ್ಪುವಂತದ್ದು.

ನಾಗರೀಕ ಸಮಾಜದಲ್ಲಿ ಭದ್ರವಾಗಿ ಬೇರೂರುತ್ತಿರುವ ಅತಿ ಸಂತಾನ ಸಮಸ್ಯೆ. ಪ್ರೇಮದ ಫಲವಾಗಿ ಮಕ್ಕಳನ್ನು ಪಡೆಯದೆಯೇ ಲೈಂಗಿಕ ಭೋಗತೃಷೆಯನ್ನು ತಣಿಸಿಕೊಳ್ಳಲು ಆಧುನಿಕ ಮನೋವೃತ್ತಿಯ ಮನಸ್ಸುಗಳನ್ನು ಸಮರ್ಥವಾಗಿ ಕಲಾತ್ಮಕವಾಗಿ ಚಿತ್ರಿಸಿದ ಕಾದಂಬರಿ `ಬೇಡದಮಗು`. `ಕಾರ್ಕೋಟಕ` ನಮ್ಮ ಇಂದಿನ ಸಮಾಜದ ರಾಜಕೀಯರಂಗದಲ್ಲಿ ತುಂಬಿರುವ ಪರಪೀಡಕ ಸ್ವಾರ್ಥಿ ಪುಡಾರಿಗಳ ಕಾರ್ಯರಂಗದ ವಿಷವರ್ತುಲವನ್ನು ಪರಿಚಯಿಸುವ ಶಕ್ತ ಕೃತಿ. ನೆಮ್ಮದಿಯ ನೆಲೆಯಾಗಿ, ಭಕ್ತಿಗೌರವಗಳ ಬೀಡಾಗಿ, ಅತಿಥಿಗಳ ಆಶ್ರಯವಾಗಿದ್ದ ಕುಟುಂಬವೊಂದು ಸ್ವಾರ್ಥಿಗಳೂ, ಕಿಡಿಗೇಡಿಗಳೂ ಆದ ಅನ್ಯರ ಪ್ರವೇಶದಿಂದ ಅಂತಃಕಲಹದ ಅಗ್ನಿಕುಂಡವಾಗಿ ದಹಿಸಿಹೋದ ಕರುಳು ಹಿಂಡುವ ಪರಮ ದಾರುಣ ಕಾದಂಬರಿ `ಚಂದವಳ್ಳಿಯ ತೋಟ.`

ದೈವನಿಷ್ಠೆ, ವ್ಯಕ್ತಿನಿಷ್ಠೆ, ಸಮಾಜನಿಷ್ಠೆ, - ಈ ಮೂರು ಮುಖಗಳನ್ನು ಪ್ರತಿನಿಧಿಸುವ ಕಾದಂಬರಿಗಳು `ಮೊದಲನೋಟ`, `ಗೃಹಪ್ರವೇಶ`, ಮತ್ತು `ರಾಜೇಶ್ವರಿ`. ವೈದ್ಯಕೀಯ ಜೀವನದ ಚೌಕಟ್ಟಿನಲ್ಲಿ ಪ್ರೇಮ-ಕಾಮ, ಸೇವೆ-ಸ್ವಾರ್ಥ, ರಾಜಕೀಯಗಳ ಸಂಘರ್ಷಣೆಯನ್ನು ಕುರಿತ ಕಾದಂಬರಿಗಳು `ಕೇದಿಗೆವನ` ಮತ್ತು `ಕಣ್ಣು ತೆರೆಯಿತು`. ಧವರ್i ನಮಗೆ ಆಪದ್ಧರ್ಮವಾಗಿ ಸ್ವಾರ್ಥಸಾಧನವಾಗಿದ್ದು ಅದರ ಪರಿಣಾಮ ಹೇಗೆ ಮನುಷ್ಯನನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ಕುರಿತ ಕೃತಿ `ಮರಳುಸೇತುವೆ`. ಮಧ್ಯಮವರ್ಗದ ಸಮಾಜದ ಹೆಣ್ಣೊಬ್ಬಳ ಸುಪ್ತ ಆಸೆ ಅಭೀಷ್ಟಗಳ ಸುತ್ತ ಹೆಣೆಯಲಾದ ಪರಿಣಾಮಕಾರಿ ಕೃತಿ `ಪಂಜರದ ಪಕ್ಷಿ`. ಮೆಚ್ಚಿ ಬಂದ ಹೆಣ್ಣು ಮನೆಗೆ ಮಹಾಲಕ್ಷ್ಮಿಯಾಗುವ ಬದಲು ಮಹಾಮಾರಿಯಾಗಿ ಕುಟುಂಬದ ವಿನಾಶಕ್ಕೆ ಕಾರಣವಾದ ದುರಂತ ಸಾಂಸರಿಕ ಕಾದಂಬರಿ `ಶುಕ್ರುವಾರದಲಕ್ಷ್ಮಿ`. ಸಹಜವಾಗಿಯೇ ಬಡತನದ ರಾಕ್ಷಸ ದವಡೆಗೆ ಸಿಕ್ಕಿ ಜೀವನವಿಡೀ ದುಃಖ ಸಂಕಷ್ಟಗಳ ಕೆಂಡದುಂಡೆಗಳನ್ನು ನುಂಗಿದ ಪ್ರಾರ್ಥಮಿಕ ಶಾಲಾ ಉಪಧ್ಯಾಯನೊಬ್ಬನ ಕುಟುಂಬದ ಹೃದಯವಿದ್ರಾಹಕವಾದ ಚಿತ್ರಣ `ಬೆಂಕಿಯ ಬಲೆ`. ಎರಡು ಹೆಣ್ಣು ಒಂದು ಗಂಡು ಮತ್ತು ಸರ್ಪಮತ್ಸರ ಮತ್ತು ಭಾವೋತ್ಕಟತೆಯಿಂದ ರೋಚಕ ಶೈಲಿಯಿಂದ ರಮ್ಯವಾದ ಕಾದಂಬರಿ ನಾಗರಹಾವು. ರುಣಸಂಬಂಧ, ಸಾಮಾಜಿಕ ನೀತಿ, ವ್ಯವಹಾರದ ದುಷ್ಟತನ, ಸಹಾನುಭೂತಿಯ ನಿರ್ವಾಜ್ಯತೆ ಇವುಗಳಿಗೆ ಮನುಷ್ಯ ಜೀವನದ ರಕ್ತ ಸಂಬಂಧವನ್ನು ಯೋಜಿಸಿ ಅವುಗಳ ಸಂಕೀರ್ಣತೆಯನ್ನು ತೋರಿಸುವ ಅರ್ಥಮೂರ್ಣ ಕಾದಂಬರಿ `ಚಂದನದಗೊಂಬೆ`.

ಹೀಗೆ ಜೀವನದ ನಾನಾ ಮಜುಲಗಳನ್ನು ಅವರ ಕಾದಂಬರಿಗಳ ಓದು ನೀಡುತ್ತದೆ. ಸಮಾಜದ ಮೇಲೆ ಮನುಷ್ಯರ ಮೇಲೆ ತಮಗಿದ್ದ ಅಭಿಪ್ರಾಯ, ಸಿಟ್ಟು, ರೊಚ್ಚು, ಆಕ್ರೋಶ ಎಲ್ಲವನ್ನೂ ತಮ್ಮ ಬರವಣಿಗೆಯ ಮೂಲಕ ಹೊರಹಾಕಿದ್ದಾರೆ. ಅವರಿಗೆ ರೊಚ್ಚು ಹೇಗಿತ್ತೆಂದರೆ `ಪ್ರೀತಿ ಕರುಣೆಗಳನ್ನು ದಟ್ಟದರಿದ್ರರಿಗೆ ನೀಡಬೇಕೆಂಬ ಅರಿವು ಸಮಾಜಕ್ಕಿಲ್ಲ, ಸಮಾಜದ ಗಣ್ಯರಿಗೂ ಇಲ್ಲ, ಮನುಷ್ಯರಾಗಿ ಹುಟ್ಟಿ ಪಶುವಿನಂತೆ ಬಾಳುವ, ಯಾರಿಗೂ ಬೇಡವಾದ ಈ ಬೇವರ್ಸಿ ಜನರ ಉದ್ಧಾರ ಸಾಧ್ಯವಿಲ್ಲವೇ? ಅವರೂ ನಮ್ಮಂತೆ ಬಾಳಬೇಕೆಂಬ ಕರ್ತವ್ಯ ಬುದ್ಧಿ ನಮ್ಮಲ್ಲಿ ಎಷ್ಟು ಜನರಿಗಿದೆ? ಇದ್ದ ಬುದ್ಧಿಯನ್ನು ಉಪಯೋಗಿಸುವವರು ಎಷ್ಡು ಮಂದಿ? ಎಂದು ಅವರು ವ್ಯವಸ್ಥೆಯ ಬಗೆಗಿದ್ದ ಬೇಜಾರನ್ನು ಹೇಳಿಕೊಂಡಿರುವ ಮಾತುಗಳಿವು.

ತ.ರಾ.ಸು. ಅವರ ಸಾಮಾಜಿಕ ಕಾದಂಬರಿಗಳಲ್ಲಿನ ಕೆಲವು ಅಂಶಗಳನ್ನು ಗುರುತಿಸುವುದಾದರೆ,

ಸಾಮಾಜಿಕ ಸಂಘರ್ಷ:   

ದೀನ ದಲಿತರ ಸೇವೆಗಾಗಿ, ಏಳ್ಗೆಗಾಗಿ ತಮ್ಮ ಲೇಖನಿಯನ್ನು ಸವೆಸಿದ ತ.ರಾ.ಸು. ಗೋಮುಖ ವ್ಯಘ್ರಗಳಿಗೆ ಸಿಂಹಸ್ವಪ್ನವಾಗಿದ್ದರು. ನವಸಮಾಜದ ನಿರ್ಮಾಣಕ್ಕೆ ಅವಶ್ಯಕವಾದ ಅಂಶಗಳನ್ನು ತಮ್ಮ ಕಾದಂಬರಿಗಳ ಮೂಲಕ ಬಿತ್ತರಿಸುತ್ತಾ ಹೋದರು. ಪುರುಷಾವತಾರದ ನಾಯಕ ಕಣ್ಣ. ನಾಯಿಗಿಂತ ಕಡೆಯವನಾದ ಮಾನವನ ಜ್ವಲಂತ ಸಮಸ್ಯೆಯ ಚಿತ್ರಣ ಕೊಟ್ಟು, ಕಣ್ಣಿದ್ದು ಕುರುಡನಂತೆ ನಟಿಸಿ ನಮ್ಮೆಲ್ಲರ ಕಣ್ಣು ತೆರೆಸುತ್ತಾನೆ. ಹಣ್ಣಿನಂಗಡಿ ಬಳಿ ನಡೆದ ಘಟನೆಯಿಂದ ಆಕ್ರೋಶಗೊಂಡ ಕಣ್ಣ `ಇವರೆಲ್ಲರ ಮನೆಗೂ ಬೆಂಕಿ ಹಚ್ಚಿ, ಮೈರಕ್ತ ಹೊರಬರುವಂತೆ ಸಾಯಬಡಿದು, ಕರುಳ ಬಗೆದು ಕುತ್ತಿಗೆಗೆ ಮಾಲೆ ಹಾಕಿಕೊಳ್ಳುತ್ತೇನೆ` ಎನ್ನುತ್ತದೆ ಅವನ ಉನ್ಮಕ್ತ ಮನಸ್ಸು. ಇವರಿಗೆ ಪ್ರೀತಿ. ಕರುಣೆ, ಸತ್ಯ ಬೇಕಿಲ್ಲ. ಬೇಕಿರುವುದುಯ ನಮ್ಮ ರಕ್ತ. ಆ ರಕ್ತವನ್ನೇ ಇವರಿಗೆ ಕುಡುಸುತ್ತೇನೆ ಎನ್ನುವ ವ್ಯವಸ್ಥೆಯ ಬಗೆಗಿನ ಅವನ ಆಕ್ರೋಶ ಕಾದಂಬರಿಕಾರರದು.

ಪಾರಿಜಾತದ ಸದಾಶಿವನದು `ಗಂಡಿಂಗೆ ಹೆಣ್ಣಾಗಿ ಕಾಡಿತ್ತು ಮಾಯೆ` ಎಂಬ ಸ್ಥಿತಿ. ಆದರ್ಶ ಮತ್ತು ಪ್ರೇಮದ ಬಗೆಗೆ ಆತನಿಗಾದ ಘೋರ ನಿರಾಶೆಯಿಂದ ಸ್ತ್ರೀಯರನ್ನು ದ್ವೇಷಿಸುತ್ತಾನೆ. ಹೆಣ್ಣು-ಗಂಡಿನ ಭಾವತುಡಿತಗಳ ಸಂಘರ್ಷ. ಹೆಣ್ಣಿನ ಹಲವು ಬಯಕೆ ತುಮುಲಗಳ ರಾಶಿ ಬಿಡುಗಡೆಯ ಬೇಡಿಯಲ್ಲಿನ ಪ್ರಭಾ. `ಹೆಣ್ಣು ಹೂಗಳಿಗೆಲ್ಲಾ ಗಂಡಿನ ಅಗ್ನಿಕುಂಡವೇ ಸಮಾಧಿ` ಎಂಬ ಬಾಳಸತ್ಯದಲ್ಲಿ ಸಾಮಾಜಿಕ ಪರಿಸರದಲ್ಲಿ ಗಂಡು ಹೆಣ್ಣಿನ ಸ್ಥಿತಿಯ ಅರ್ಥವಂತಿಕೆ ಅಡಗಿದೆ. ಇಲ್ಲಿ ಹೆಣ್ಣಿನ ಮನಸ್ಸಿನ ಸಹಸ್ರ ಮುಖಗಳ ಪರಿಚಯ ಮಾಡಿಕೊಡುತ್ತಾರೆ. ಪರಿಸ್ಥಿತಿಯ ಕೈಗೊಂಬೆಯಾದ `ಬಂಗಾರಿ` ಒಳಿತು ಕೆಡುಕುಗಳ ಸಮ್ಮೇಳನ.

ಹೀಗೆ ಸಂಘರ್ಷ ಮನಸ್ಸು-ಮನೆ-ಸಮಾಜ ಈ ಮೂರರ ನಡುವಿನದ್ದು. ಸಮಾಜ ಜೀವನದಲ್ಲಿ ಒಳಿತು-ಕೆಡುಕುಗಳ ಸಂಘರ್ಷ ಸಾಮಾನ್ಯ. ಆ ಸಂಘರ್ಷಕ್ಕೆ ಕೊನೆಯೇ ಇಲ್ಲ. ಕೊನೆಯಾದರೆ ಈ ಜೀವನದಲ್ಲಿ ಸ್ವಾರಸ್ಯವೂ ಇರುವುದಿಲ್ಲ. ಇಂತಹ ಅನೇಕ ಸಂಘರ್ಷಗಳ ಸಮಾಜದ ಸಮಕಾಲೀನ ಸಜೀವ ಚಿತ್ರಣವನ್ನು ತ.ರಾ.ಸು ತಮ್ಮ ಸಾಮಾಜಿಕ ಕಾದಂಬರಿಗಳಲ್ಲಿ ನೀಡುತ್ತಾ ಹೋಗಿದ್ದಾರೆ. ಅದೇ ಅವರ ವ್ವವಸಾಯ ಧರ್ಮ.

ಸಾಮಾಜಿಕ ಪ್ರಜ್ಞೆ:

ತ.ರಾ.ಸು ಚಿತ್ರಿಸಿದ ಪಾತ್ರಗಳು ಬದುಕಿನ ಭಿನ್ನ ಮುಖಗಳನ್ನು ಪ್ರತಿನಿಧಿಸುತ್ತವೆ. ಅವರಿಗೆ ಕೆಲವು ಪಾತ್ರಗಳ ಬಗೆಗೆ ಸಹಾನುಭೂತಿಯಿದೆ. ಹಾಗೆಯೇ ಕೆಲವು ಪಾತ್ರಗಳ ಬಗೆಗೆ ರೊಚ್ಚಿದೆ. ಸಮಾಜದ ಕೆಲವು ನೀತಿ-ನಡುವಳಿಕೆಗಳ ಬಗೆಗೆ ಕೆಂಡ ಕಾರುತ್ತಾರೆ. ಕೆಲವು ಕಡೆ ಅವರು ನಾಸ್ತಿಕರಂತೆ ಕಾಣಿಸಿಕೊಂಡರೂ ಧರ್ಮ ರಾಜಕೀಯದ ಹೆಸರಿನಲ್ಲಿ ನಡೆಯುವ ಬೂಟಾಟಿಕೆಗಳನ್ನು ಸಹಿಸುವುದಿಲ್ಲ. ದೇವರು ಧರ್ಮದ ಬಗೆಗೆ ಗೌರವವಿದೆ. ಅದನ್ನೇ ಬಾಹ್ಯಾಡಂಬರದ ವಸ್ತುವನ್ನಾಗಿ ಬಳಸಿಕೊಂಡಾಗ ಸಿಡಿದೇಳುತ್ತಾರೆ. ಸಮಾಜದ ಅನೇಕ ದೋಷಗಳನ್ನು ಎತ್ತಿ ಪರಿಶೀಲಿಸಿ ಕೂಲಂಕುಶವಾಗಿ ಬಿಚ್ಚಿಡುವ ಕೆಲಸವನ್ನು ತಮ್ಮ ಕಾದಂಬರಿಗಳ ಮೂಲಕ ಮಾಡುತ್ತಾರೆ. ಕಳ್ಳಸಾಗಣೆ, ಕಪ್ಪುಹಣದ ಕುರಿತು ಖಾರವಾಗಿಯೇ ಬರೆಯುತ್ತಾರೆ.

ಪರಿಮಳದ ಉರುಳುವಿನಲ್ಲಿ ಮಾನಸಿಕ ರೋಗಿಯಾದ ಲಕ್ಷ್ಮಿಯನ್ನು ರಾಜಣ್ಣ ಗುಣಪಡಿಸಿ ಹಲವರ ಕುಹಕಕ್ಕೆ ಇಡಾಗುತ್ತಾನೆ. ಇಂತಹ ಬಗೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕೆಂಬುದು ಲೇಖಕರ ಒಲವು. ಜೀತದ ಜೀವದಲ್ಲಿ ವೀರಭದ್ರಯ್ಯ ತನ್ನ ಹೆಂಡತಿಗೆ ಮಾಡಿದ ದ್ರೊಹ ಸರಿಯೇ? ಧರ್ಮದ ಹೆಸರಿನಲ್ಲಿ ನಡೆಯುವ ಅವ್ಯಾವಹಾರಗಳನ್ನು ಬಿಚ್ಚಿಡುತ್ತಾ ಓದುಗರನ್ನು ವಾಸ್ತವತೆಯ ಕಡೆಗೆಳೆಯುತ್ತಾರೆ.

ಹೀಗೆ ಸಮಾಜದ ವಿವಿಧ ಸಮಸ್ಯೆಗಳನ್ನು ಗ್ರಹಿಸಿ ಅವುಗಳ ಪ್ರತಿಬಿಂಬವನ್ನು ತಮ್ಮ ಕಾದಂಬರಿಗಳಲ್ಲಿ ವಾಸ್ತವಕ್ಕಿಳಿಸಿ ತನ್ನಲ್ಲಿರುವ ಸಾಮಾಜಿಕ ಪ್ರಜ್ಞೆಯನ್ನು ಓದುಗರಿಗೂ ವಿಸ್ತರಿಸಿ ತಿಳಿಹೇಳುವ ತ.ರಾ.ಸು ಅವರ ಪ್ರತಿಭೆ ಮೆಚ್ಚುವಂತದ್ದು.

ಸಾಮಾಜಿಕ ವಿಡಂಬನೆ:

ನಮಗೆ ಇಷ್ಟವಾಗದ ವಿಚಾರದ ಬಗೆಗೆ ತಿರಸ್ಕಾರದ ವ್ಯಂಗ್ಯೋಕ್ತಿಯೇ ವಿಡಂಬನೆ. ತನ್ನ ಸುತ್ತ-ಮುತ್ತಲಿನ ವಿಚಾರಗಳ ಬಗೆಗೆ ಲೇಖಕರಿಗಿರುವ ತಿರಸ್ಕಾರವೇ ವಿಡಂಬನೆಯಾಗಿ ಕಾದಂಬರಿಯ ಪಾತ್ರಗಳ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಪಂಜರದ ಪಕ್ಷಿಯ ಕೋಮಲ ಳ ಮಾತಿನಲ್ಲಿ ಪುರುಷ ಪ್ರಧಾನ ಸಮಾಜದ ಸಂಪ್ರದಾಯಗಳ ಬಗ್ಗೆ ವ್ಯಂಗ್ಯವಾಡಿಸುತ್ತಾ ಸ್ತ್ರೀಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಮೂಲಕ ಅವಳು ಗಂಡಿನ ದಾಸ್ಯಳಲ್ಲ ಎನ್ನುವ ವಿಡಂಬನಾತ್ಮಕ ಸಂದೆಶವನ್ನಿತ್ತಿದ್ದಾರೆ. ಕಾರ್ಕೋಟಕದಲ್ಲಿ ಆಧುನಿಕ ಸ್ತ್ರೀಯರ ಬಗೆಗೆ ವಿಡಂಬನೆಯ ನೋಟವಿದೆ. ಅವಳು(ಲೊಕಮ್ಮ)ಸಿಂಗರಿಸಿಕೊಳ್ಳಲು ತೆಗೆದುಕೊಳ್ಳುವ ದೀರ್ಘಕಾಲದ ಕ್ರಿಯೆ ಇಂದಿನ ಆಧುನಿಕ ಸ್ತ್ರೀ ಸಮಾಜದ ಮುಖಕ್ಕೆ ಹಿಡಿದ ಕನ್ನಡಿ. ಮಾರ್ಗದರ್ಶಿ ಯಲ್ಲಿ ಭಾರತದ ಹಳ್ಳಿಯ ರಾಜಕಾರಣ ವಿಚಾರ. ಅಲ್ಲಿ ನಡೆಯುವ ಅನ್ಯಾಯ-ಅನಾಚರಗಳ ವಿವರಣೆ. ಪ್ರಚಲಿತ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಈ ಕಾದಂಬರಿಯಲ್ಲಿ ಹಳ್ಳಯ ವಾತಾವರಣದಲ್ಲಿ ತನ್ನ ಕತ್ತಲು ತುಂಬಿದ ಭವಿಷ್ಯದ ಬಗ್ಗೆ ಮಿಡುಕುವ ಶ್ರೀಕಂಠನ ಚಿತ್ರಣ ಮತ್ತು ಆತ ಹೇಳುವ ಮಾತುಗಳು ಸಮಸ್ತ ನಿರುದ್ಯೋಗಿ ಯುವಕರ ಮುಖವಾಣಿಯಂತಿದೆ. ಹುಲಿಗೊಂದಿ ಎಂಬ ಹಳ್ಳಿ ಅಲ್ಲಿಯೂ ರಾಮಣ್ಣನಂತಹ ಪೋಲಿಗಳಿಗೆ ಕಡಿಮೆಯೇನಿಲ್ಲ. ಅಂದರೆ ಹಳ್ಳಿಗಳಲ್ಲಿಯೂ ದ್ವೇಷ, ಅಸೂಯೆ, ಸ್ವಾರ್ಥ, ಹೊಟ್ಟೆಕಿಚ್ಚು ಇರುತ್ತದೆ ಎಂಬುದರ ಇಂದಿನ ಹಳ್ಳಿಗಳ ಜೀವಂತ ವಿಡಂಬನೆ.

ಹೀಗೆ ಸಮಾಜದ ಅನೇಕ ಸಮಸ್ಯೆಗಳ ವಿಚಾರಗಳ ಬಗೆಗೆ ತನಗಿರುವ ಆಕ್ರೋಶವನ್ನು ಲೇಖಕರು ಈ ಪರಿಯಲ್ಲಿ ತೋರಿಸಿಕೊಂಡಿದ್ದಾರೆ ಎನ್ನಬಹುದು. ಬರೀ ವಿಡಂಬನೆಯನ್ನಷ್ಟೇ ಹೇಳದೆ ಪರಿಹಾರ, ಸಮಾಜ ಬದಲಾವಣೆಯ ಮಾರ್ಗಗಳನ್ನು ಅವರ ಕಾದಂಬರಿಯ ಮೂಲಕ ಚಿತ್ರಿಸುತ್ತಾ ಹೋಗುವ ಅವರ ಜಾಣ್ಮೆ ಓದುಗರಿಗೆ ಇಷ್ಟವಾಗದೇ ಇರಲಾರದು.

ಸ್ತ್ರೀ ಪಾತ್ರಗಳು:

ಇವರ ಕಾದಂಬರಿಗಳ ಸ್ತ್ರೀಯರ ಗುಣವೆಂತದೆಂದರೆ `ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದೂನಿಚ` ಎನ್ನುವಂತದ್ದು. ಒಂದೇ ತೆರನ ಸ್ತ್ರೀ ಚಿತ್ರಣ ಅವರ ಜಾಯಯಮಾನದ್ದಲ್ಲ. ಭಿನ್ನ ಮನಸ್ಥಿತಿಯ ಸ್ತ್ರೀಯರು ಅವರ ಕಾದಂಬರಿಗಳಲ್ಲಿ ಬಂದು ಹೋಗಿದ್ದಾರೆ. ನಾಗರಹಾವಿನ ಅಲುಮೇಲು ಬೆಣ್ಣೆಯಾದರೆ, ಮಾರ್ಗರೇಟ್ ಬೆಂಕಿ. ಸಮಾಜ ಹೆಣ್ಣನ್ನು ಸಮಸ್ಯೆ ಎಂದೇ ಭಾವಿಸುತ್ತದೆ. ಅವಳು ಅತೀ ವಿನಯವಂತಾಳಗಹೊರಟರೆ ಅವಳ ಗುಣವನ್ನು ದುರುಪಯೋಗಪಡಿಸಿಕೊಳ್ಳುತ್ತದೆ. ತುಳಿಯುತ್ತದೆ. ಅದೇ ಕಠಿಣವಾಗಿದ್ದರೆ ಮೊಂಡಿ, ಹಠಮಾರಿ ಎಂಬ ಹಣೆಪಟ್ಟಿ. ಒಟ್ಟಲ್ಲಿ ಅವಳ ಬಾಳೇ ದುರಂತ ಎಂಬುದರ ಚಿತ್ರವೇ ಈ ಕಾದಂಬರಿ.

ಚಂದವಳ್ಳಿತೋಟದ ಶಿವನಂಜೇಗೌಡರ ಹೆಂಡತಿ ಪುಟ್ಟತಾಯಮ್ಮ ಸೊಸೆ ಚಿನ್ನವ್ವ, ಶಾನುಭೋಗರ ಹೆಂಡತಿ ಪಾರೋತಮ್ಮ ಇವರು ಹಳ್ಳಿಯ ಬದುಕಿನ ನಿಷ್ಕಟ ಮನೋಭಾವವನ್ನು ಸಾರುವ ಹೆಣ್ಣುಗಳು. ಜೊತೆಗೆ ಜಲಜಾಕ್ಷಮ್ಮ, ಲಕ್ಷ್ಮಿಯಂತವರಿಂದ ಅವಿಭಕ್ತ ಕುಟುಂಬ ಛಿದ್ರವಾಗುವ ಪಾತ್ರಗಳೂ ಮಿಶ್ರಣಗೊಂಡಿವೆ. ಇದು ಹಳ್ಳಿ ಹೆಣ್ಣು ಮಕ್ಕಳದಾದರೆ, ನಗರದ ಹೆಣ್ಣುಮಕ್ಕಳ ಕಾವಿನ ಬದುಕಿನ ತೀವ್ರತೆಯ ಚಿತ್ರಣ ಬಿಡುಗಡೆಯ ಬೇಡಿ. ಸ್ತ್ರೀಸ್ವಾತಂತ್ರದ ಸಮಸ್ಯೆ ಈ ಕಾದಂಬರಿಯ ಜೀವ. ವೈಶ್ಯೆಯ ಮನಸ್ಸಿನ ತಳಮಳಗಳ ಹೂರಣ ಮಸಣದ ಹೂವು. ಹೀಗೆ ಹೆಣ್ಣಿನ ವಿವಿಧ ಮನೋಭಾವಗಳ ವ್ಯಕ್ತಿತ್ವಗಳ ಚಿತ್ರಣವನ್ನು ಕಾಣಬಹುದೇ ವಿನಾಃ ಎಲ್ಲೂ ಸ್ತ್ರೀ ಚೌಕಟ್ಟನ್ನು ಮೀರುವ ಆ ತುದಿಗೆ ಬಂದಿದ್ದರೂ ಅದರಾಚೆ ಬರಲು ತೋರುವ ತಳಮಳದ ಮನಸ್ಸುಗಳು. ಒಟ್ಟಲ್ಲಿ ಎಲ್ಲಾ ತೆರನಾದ ಸ್ತ್ರೀಪಾತ್ರಗಳನ್ನೈ ತ.ರಾ.ಸು ಪರಿಚಯಿಸಿದ್ದಾರೆ ಎಂದರೆ ತಪ್ಪಾಗಲಾರದು. 

ವಿಶಿಷ್ಟ ಭಾಷಾಶೈಲಿ:

ತ.ರಾ.ಸು. ತುಂಬಾ ಓದುಗರಿಗೆ ಇಷ್ಟವಾಗುವುದೇ ಇಲ್ಲಿ. ಭಾಷೆ ಮತ್ತು ಶೈಲಿಯಲ್ಲಿ ತನ್ನ ತನವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಲೇಖಕರಲ್ಲಿ ತ.ರಾ.ಸು. ಕೂಡ ಒಬ್ಬರು. ಅವರ ಭಾಷಾ ಮೋಡಿ ಎಂಥವರನ್ನು ಚಿಕಿತಗೊಳಿಸುವಂಥದ್ದು. ಕಣ್ಣಿಗೆ ಕಟ್ಟುವಂತಹ ಚಿತ್ರವನ್ನೀವ ಭಾಷೆ, ಹೃದ್ಯಮಯವಾದ ನಿರೂಪಣಾ ಶೈಲಿ. ಪ್ರೇಕ್ಷಕರನ್ನು ಎತ್ತವೂ ಹೋಗದಂತೆ ಕಟ್ಟಿ ಕೂರಿಸುವ ತನ್ಮಯಗೊಳಿಸುವ ಭಾಷಾಚಾಕಚಕ್ಯತೆ. ಅವರ ಬರಹಕ್ಕೆ ಸಕ್ಕರೆ ಅಂಟಿದಂತೆ ಅಂಟುವ ಭಾವುಕತೆ. ನಿರರ್ಗಳವಾದ ರಸವತ್ತಾದ ಶೈಲಿ. ಅತಿಶಯೋಕ್ತಿಯ ಆವೇಶಕ್ಕೂ ಬಗ್ಗದ ತ.ರಾ.ಸು. ಯಾವುದೇ ಪಾತ್ರವನ್ನಾದರೂ ಸಲೀಸಾಗಿ ಸಂಪೂರ್ಣವಾಗಿ ಅರ್ಥಮಾಡಿಸಬಲ್ಲ ಮೋಡಿಗಾರ. ತ.ರಾ.ಸು ತಮ್ಮ ಕಾದಂಬರಿಯಲ್ಲಿ ಸೃಷ್ಟಿಮಾಡಿರುವ ಭಾಷಾ ತರುಣಿ ಮನಮೋಹಕವಾಗಿ ಬೆಳೆದಿದ್ದಾಳೆ. ತನ್ನ ಹಾವ-ಭಾವ ವಿಲಾಸಗಳಿಂದ ಶೋಭಿಸಿ ಬೆಡಗುವೆಡೆದ ನೋಟಗಳಿಂದ ಆಕರ್ಷಿಸುತ್ತಿದ್ದಾಳೆ. ಇದಕ್ಕೆ ಅವರ ಭಾಷೆಯಲ್ಲಿ ಹೆಜ್ಜೆ ಹೆಜ್ಜೆಗೂ ಮಿನುಗುತಾರೆಯಂತೆ ಕಂಗೊಳಿಸುವ ವೈಚಿತ್ರ್ಯಪೂರ್ಣವಾದ ಸರಸೋಕ್ತಿಗಳೇ ಸಾಕ್ಷಿ. ಪಾತ್ರಗಳಿಗೊಪ್ಪುವ ಭಾವಲಹರಿ. ಅದಕ್ಕೊಪ್ಪುವ ಶೈಲಿ. ಶೈಲಿಗೆ ತಕ್ಕುದಾದ ಪದ ಪ್ರಯೋಗ. ಉಚಿತ ಸಂಸ್ಕøತ ಪದಗಳ ಕೋಯುವಿಕೆ. ಆ ಶಬ್ದಗಳಿಗೆ ಅನುಗುಣವಾದ ಭಾವ ಗಂಭೀರತೆ. ಅವರ ಕಾದಂಬರಿಯ ಭಾಷೆ ಉಪಮೆ-ರೂಪಕಗಳಿಂದ, ನಾಣ್ಣ್ನುಡಿಗಳಿಂದ ಮೆರಗು ಪಡೆದು ಕಾವ್ಯಮಯವಾಗಿದೆ. ವಿಶಷ್ಟ ಉಕ್ತಿವೈಚಿತ್ರ್ಯಗಳನ್ನು ಬಳಸಿದ ವಿಶೇಷ ಭಾಷಾಶೈಲಿ ತ.ರಾ.ಸು ಅವರಿಗೆ ಒಲಿದು ಬಂದಿತ್ತು. ಅದು ಅವರ ಭಾವಕ್ಕೆ, ಕಲ್ಪಕತೆಗೆ ಮೂರ್ತರೂಪ ಕೊಡುವಲ್ಲಿ ಯಶಸ್ವಿಯಾಯಿತು.

ಉಪಸಂಹಾರ

ಕಾದಂಬರಿ ಕುಲತಿಲಕ, ಪ್ರತಿಭಾಸಂಪನ್ನ, ಭಾವಜೀವ, ಸ್ನೇಹಜೀವಿ, ಸಹೃದಯಿಯಾದ ತ.ರಾ.ಸು ಕೇವಲ ವ್ಯಕ್ತಿಯಲ್ಲ; ಅದ್ಭುತ ಶಕ್ತಿ. ಪಾತ್ರಗಳಿಗೆ ಪ್ರಾಣ ತುಂಬಿ ಸೃಷ್ಟಿಸಬಲ್ಲ ಸಾಹಿತ್ಯ ಬ್ರಹ್ಮ. ಕನ್ನಡ ಸಾಹಿತ್ಯ ಚರಿತ್ರೆಯ ಕಾದಂಬರಿ ಸಂದರ್ಭದಲ್ಲಿ ಒಬ್ಬ ಗಂಭೀರ ಸಾಹಿತ್ಯ ಚಿಂತಕರಾಗಿ ಸಾಹಿತ್ಯಾಭಿರುಚಿ ನಿರ್ಮಾಣಕ್ಕಾಗಿ ತಿವ್ರವಾಗಿ ದುಡಿದ ಧೀಮಂತ ಕಾದಂಬರಿಕಾರರಲ್ಲಿ ತ.ರಾ.ಸು ಕೂಡ ಒಬ್ಬರು ಇವರ ಅನೇಕ ಸಾಮಾಜಿಕ ಕಾದಂಬರಿಗಳು ಸಿನಿಮಾ ರೂಪ ತಾಳಿ ಜನಪ್ರಿಯಗೊಂಡಿವೆ.

ಪರಾಮರ್ಶನಾ ಗ್ರಂಥಗಳು

  1. ನಾಯಕ ಜಿ.ಎಚ್.,(ಸಂ) ಶತಮಾನದ ಕನ್ನಡ ಸಾಹಿತ್ಯ;ಕಾದಂಬರಿ;2000.
  2. ನಾಗರಾಜ ಡಿ.ಆರ್.; ಕನ್ನಡ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ- ಸಂ:ವಿವೇಕ ರೈ. ಬಿ.ಎ.; ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು;1987.
  3. ಮಹಾದೇವ ಕಣವಿ; ಕನ್ನಡ ಪ್ರಾತಿನಿಧಿಕ ಪ್ರಾದೆಶಿಕ ಕಾದಂಬರಿಗಳು: 1994.
  4. ಕೃಷ್ನಮೂರ್ತಿ ಎಂ.ಜಿ.; ಆಧುನಿಕ ಭಾರತೀಯ ಸಾಹಿತ್ಯ: 1970.
  5. ಅಮೂರ ಜಿ.ಎಸ್.; ಕನ್ನಡ ಕಥನ ಸಾಹಿತ್ಯ:ಕಾದಂಬರಿ; 1994.
  6. ಅಮೂg ಜಿ.ಎಸ್.; ಕಾದಂಬರಿ ಸ್ವರೂಪ:ಹೊಸ ಚಿಂತನೆ; 1999.
  7. ಕುರ್ತುಕೋಟಿ ಕೀರ್ತಿನಾಥ; ವಿಮರ್ಶೆಯ ವಿನಯ ಕಾದಂಬರಿ,1982.
  8. ವಿವೇಕ್ ರೈ. ಬಿ.ಎ.(ಸಂ); ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು;1987.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal