Tumbe Group of International Journals

Full Text


ಸಂಪ್ರದಾಯಗಳ ವರ್ಗೀಕರಣ

ಪ್ರೊ. ಸೋಮಣ್ಣ ಹೊಂಗಳ್ಳಿ,

ಕನ್ನಡ ಪ್ರಾಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ, ಕೊಣಾಜೆ, 574 199

shongalli@gmail.com  9886165134

ಪೀಠಿಕೆ:          

ಪ್ರಪಂಚದ ಎಲ್ಲ ದೇಶ ಜನಾಂಗಗಳಲ್ಲಿನಂತೆ ಕರ್ನಾಟಕದಲ್ಲೂ ಅನೇಕ ಜನಪದ ಸಂಪ್ರದಾಯಗಳು ಆಚರಣೆಯಲ್ಲಿ ಉಳಿದುಕೊಂಡು ಬಂದಿದೆ. ಆದರೆ ಅವುಗಳು ಇಂದಿಗೂ ಪ್ರಾರಂಭದ ರೀತಿನೀತಿಗಳನ್ನೇ ಅನುಸರಿಸಿಕೊಂಡು ಬರುತ್ತಿವೆ ಎಂದು ಹೇಳಲಾಗುವುದಿಲ್ಲ. ಸಂಪ್ರದಾಯಗಳ ಅನುಷ್ಠಾನದ ಹಿಂದೆ ಇರುವ ಒಂದು ರೀತಿಯ ಭಯ ಭೀತಿ ಕ್ರಮೇಣ ಕಳಚಿಕೊಂಡು ಇಡೀ ಸಂಪ್ರದಾಯವೇ ವಿನೋದದ ಪರಿವೇಷ ತೊಡುತ್ತದೆ. ಹಾಗೆಯೇ ಅದರ ನಂಬಿಕೆಗಳಲ್ಲಿ ಉಂಟಾಗುವ ಮೌಲ್ಯಗಳ ಸಡಿಲಿಕೆ ಕೂಡ ಗಮನಾರ್ಹವಾದುದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಜನಪದ ಸಂಪ್ರದಾಯಗಳ ಮಹತ್ವವನ್ನು ಅರಿಯುವ ಮತ್ತು ವ್ಯಾಖ್ಯಾನಿಸುವ ಪ್ರಯತ್ನ ಮಾಡಬಹುದಾಗಿದೆ.

ಜಾನಪದದ ಎಲ್ಲ ಪ್ರಕಾರಗಳು ಕೂಡ ಸಂಸ್ಕೃತಿಯ ಪ್ರತೀಕಗಳೇ ಆಗಿವೆ ಎನ್ನಬಹುದು. ಸಂಸ್ಕೃತಿಯು ಒಳಗೊಳ್ಳುವ ಹಲವು ಅಂಶಗಳಲ್ಲಿ ಸಂಪ್ರದಾಯವೂ ಒಂದು. ತೈಲರ್ ಹೇಳುವಂತೆ `ಸಮಾಜದ ಸದಸ್ಯನಾಗಿ ಮಾನವನು ಕಲಿತುಕೊಂಡ ಜ್ಞಾನ, ನಂಬಿಕೆ, ಕಲೆ, ನೀತಿ, ನಿಯಮ, ಸಂಪ್ರದಾಯ ಮತ್ತು ಇನ್ನೂ ಯಾವುದೇ ಇತರ ಸಾಮಥ್ರ್ಯಗಳ ಒಟ್ಟು ಮೊತ್ತವೇ ಸಂಸ್ಕೃತಿ’. ಆದುದರಿಂದ ಒಂದು ಸಮೂಹದ ಜನತೆಯ ಜಾನಪದವನ್ನು ಅಭ್ಯಾಸ ಮಾಡುವಾಗ ಈ ಜನರ ಸಂಪ್ರದಾಯಗಳನ್ನು ಅಧ್ಯಯನ ಮಾಡುವುದು ಅರ್ಥಪೂರ್ಣವೆನಿಸುತ್ತದೆ. ಈ ಹಿನ್ನೆಲೆಯಿಂದ ವಿವೇಚಿಸಿದಾಗ ಸಂಪ್ರದಾಯಗಳು ಸಂಸ್ಕೃತಿಯ ಭಾಗವಾಗಿಯೇ ಮುಂದುವರೆಯುತ್ತವೆ.

            ಸಂಪ್ರದಾಯಗಳು ಸಮಷ್ಟಿಗೆ ಸಂಬಂಧಿಸಿದ್ದು, ಇವು ವೈಯುಕ್ತಿಕವಾದವಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿಕೊಳ್ಳಲಾಗಿದೆ. ಇವುಗಳು ಪರಂಪರಾಗತವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದ ಸಂಗತಿಗಳಾಗಿವೆ. ಇವಕ್ಕೆ ಒಂದು ನಮೂನೆ ಇದ್ದು ಧಾರ್ಮಿಕ ಪರಿವೇಷವನ್ನು ಪಡೆದುಕೊಂಡಿವೆ.

            ಜಾನಪದವು ಹಾಡು, ಕಥೆ, ಪುರಾಣ, ಒಗಟು, ಗಾದೆ, ನಂಬಿಕೆ, ಸಂಪ್ರದಾಯ, ಅಡುಗೆ, ವೈದ್ಯ, ನೃತ್ಯ, ಆಟ, ಮುಂತಾದ ಹಲವು ವಿಷಯಗಳನ್ನು ಒಳಗೊಂಡಿರುವುದು ಸರಿಯಷ್ಟೆ. ಇದರಿಂದಾಗಿ ಪ್ರತಿಯೊಂದು ವಿಷಯವನ್ನು ಕುರಿತು ಕ್ರಮಬದ್ಧವಾಗಿ ಅಭ್ಯಾಸ ಮಾಡುವುದಕ್ಕೆ ಒಂದು ವ್ಯವಸ್ಥಿತವಾದ ವರ್ಗೀಕರಣ ಅವಶ್ಯಕವಾಗಿದೆ. ಜಾನಪದದ ಶಾಸ್ತ್ರೀಯ ಅಧ್ಯಯನ ಬೆಳೆಯುತ್ತಾ ಹೋದಂತೆಲ್ಲ ವರ್ಗೀಕರಣದಲ್ಲಿಯೂ ಹೊಸಹೊಸ ಮಾರ್ಪಾಡುಗಳಾಗುತ್ತಾ ಬಂದಿವೆ. ಸಂಪ್ರದಾಯಗಳ ವರ್ಗೀಕರಣ ಕೂಡ ಅದಕ್ಕೆ ಹೊರತಾಗಿಲ್ಲ.

            ಇಂದಿನ ದಿನಗಳಲ್ಲಿ ಜಾನಪದ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಬಹುಸಂಕೀರ್ಣವಾಗಿರುವ ವಿಷಯಗಳು ಒಂದರೊಳಗೊಂದು ಸೇರಿಕೊಂಡು ಬೇರ್ಪಡಿಸಲಾಗದ ರೀತಿಯಲ್ಲಿ ಇಲ್ಲಿ ಹೆಣೆದುಕೊಂಡಿದೆ. ಇವುಗಳನ್ನು ಕುರಿತು ವ್ಯವಸ್ಥಿತವಾದ ಅಧ್ಯಯನಕ್ಕೆ ಒಂದು ಸರಿಯಾದ ವರ್ಗೀಕರಣ ಅಗತ್ಯವಾಗಿ ಬೇಕಾಗಿದೆ. ಜಾನಪದ ಅಧ್ಯಯನದ ಪ್ರಾರಂಭದ ದಿನಗಳಿಂದಲೂ ಈ ಸಂಬಂಧವಾಗಿ ದೇಶೀಯ ಮತ್ತು ವಿದೇಶೀಯ ವಿಸ್ವಾಂಸರು ಬಂದು ಭದ್ರವಾದ ಬುನಾದಿಯನ್ನು ಹಾಕಲು ನಿರಂತರವಾಗಿ ಶ್ರಮಿಸಿರುವರು. ಪ್ರಸ್ತುತ `ಸಂಪ್ರದಾಯ ಮತ್ತು ಹಬ್ಬ’ ಎಂಬ ಶೀರ್ಷಿಕೆಯಲ್ಲಿ ಆರ್.ಎಸ್.ಬಾನ್ಸ್500 ಎಂದು ಗುರುತಿಸಿ ವರ್ಗೀಕರಿಸಿದ್ದಾರೆ. (ಮೇರಿಯಾಲೀಚ್; SDFML:Vol.2:P.1143).

F ಸಂಪ್ರದಾಯ, ಹಬ್ಬ

F500                ಸಂಪ್ರದಾಯ

F530                ದೈನಂದಿನ ಜೀವನ

F532                ಮನೆ

F533                ನೆಂಟರಿಷ್ಟರ ಜೊತೆಗಿನ ಸಂಬಂಧ ಅತಿಥಿ ಗೌರವ, ಆತಿಥ್ಯ, ಸಾಮಾಜಿಕ ಅಂತಸ್ತು & ಮಟ್ಟ.

F534                ಕೆಲಸ, ವಾಣಿಜ್ಯ ವ್ಯಾಪಾರ

F536                ಮನೋರಂಜನೆ, ಆಟ, ಕ್ರೀಡಾ ವಿಹಾರ

F537                ಶಾಲೆ

F538                ಕ್ರೈಸ್ತರ ದೇವಾಲಯ

F539                ಸಾಮಾನ್ಯ ಕಾನೂನು,ಕಟ್ಟಳೆ

F540                ಜೀವನ ಚಕ್ರದ ನಿರ್ಣಾಯಕ ಘಟ್ಟಗಳು

F542                ಹುಟ್ಟು

F543                ಜ್ಞಾನ, ಸ್ನಾನ, ಸಂಸ್ಕಾರ, ನಾಮಕರಣದ ವಿಧಿ

F544                ಮೈನೆರೆಯುವುದು

F545                ಮದುವೆ

F546                ಸಾವು

F549                ಯುದ್ಧ

F570                ಸಂಖ್ಯೆಗಳ ಅಳತೆ

F572                ಎಣಿಕೆಯಲ್ಲಿ ಸಂಖ್ಯಾವ್ಯವಸ್ಥೆ, ಲೆಕ್ಕಾಚಾರ ವ್ಯವಸ್ಥೆ

F574          ಕಾಲಮಾನ

                        ಖಗೋಳಶಾಸ್ತ್ರಾನುಸಾರವಾಗಿ ಸಮಯಮಾಪನ ಅಥವಾ ಅಧಿಪತ್ಯ ನಡೆಸುವ ಗ್ರಹಗಳಿಂದ,ನಕ್ಷತ್ರಗಳಿಂದ ಸಮಯಮಾಪನ, ಐತಿಹಾಸಿಕ ಘಟನೆಯಿಂದ ಹಬ್ಬ

ಅಥವಾ ದೈನಂದಿನ ಚಟುವಟಿಕೆಯಿಂದ ಸಮಯ ಮಾಪನ.      

F574.2             ವರ್ಷ

F574.3             ಕಾಲ

F574.32                       ಚಳಿಗಾಲ

.33                   ವಸಂತಕಾಲ

.34                   ಬೇಸಿಗೆಕಾಲ

.35                   ಶರತ್ ಕಾಲ

.4                     ತಿಂಗಳು, ಮಾಸ,

.5                     ವಾರ, ದಿನ, ಘಂಟೆ

.6                     ಆಳುವವನು ಅಥವಾ ಚಾರಿತ್ರಿಕ ವ್ಯವಸ್ಥೆ

.7                     ಹಬ್ಬ

.8                     ದೈನಂದಿನ ಚಟುವಟಿಕೆ

F574.82           ಕೆಲಸ ಮಾಡುವುದು

F574.84           ಉಣ್ಣುವುದು

F574.86           ನಿದ್ದೆ ಮಾಡುವುದು

F575    ಸ್ಥಳ, ಅಂತರ, ಎತ್ತರ, ಆಳಗಳ ಅಳತೆ.

F577    ಪ್ರಮಾಣದ ಅಥವಾ ಭಾರದ ಅಳತೆ

F577.2             ಘನ

F577.4             ದ್ರವ

F578    ಗುಣದ ಅಳತೆ

F578.2             ವಿನಿಮಯ ಮಾದ್ಯಮ

F578.4             ಹಣಕಾಸು ವ್ಯವಸ್ಥೆ

F600    ಹಬ್ಬ

ಸಂಪ್ರದಾಯಗಳ ಮತ್ತು ಇತರ ಜಾನಪದ ವಿವರಗಳ ಒಂದು ಸಂಕೀರ್ಣ ಘಟಕ. ಒಂದು ವಿಶೇಷ ಸಂದರ್ಭವನ್ನು ಆಚರಿಸುವಂತದ್ದು. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ, ಜನರಿಗೆ  ಆಸಕ್ತಿ ಇರುವಂಥ ಆಚರಣೆ.

F620

ಹಬ್ಬದ ಮಾದರಿಯ ಮೂಲ ಘಟಕಗಳು. ಧಾರ್ಮಿಕ ಅಥವಾ ಇತರ ಆಚರಣೆಗಳು, ಪಥ ಸಂಚಲನ, ಅಗ್ನಿ ಕಾರ್ಯಗಳು, ವಿಶೇಷವಾದ ವೇಷಭೂಷಣಗಳು ನಿಷೇಧಗಳು.

                        F640                ನಿರ್ದಿಷ್ಟ ದಿನಗಳು

                        F642                ಸಂಕ್ರಮಣ ಕಾಲ

                        F643                ಹಗಲು ಮತ್ತು ರಾತ್ರಿಗಳು ಸಮವಾಗಿರುವ ಕಾಲ

                        F644                ಸಂಕ್ರಮಣ ಕಾಲ

                        F647                ಹುಟ್ಟುಹಬ್ಬ, ವಾರ್ಷಿಕೋತ್ಸವ

                        F660                ನಿಯತವಲ್ಲದ ದಿನಾಂಕಗಳು

                        F662                ಚಳಿಗಾಲ

                        F663                ವಸಂತ, ಸಸಿ ನೆಡುವುದು

                        F664                ಬೇಸಿಗೆ

                        F665                ಶರತ್ ಕಾಲ

                        F667                ಖಾಸಗಿ

                        F668                ಜಾತ್ರೆ, ಸಂತೆ

                        F682                ಸ್ಥಾಪನಾ ವಿಧಿ

                        F684                ವಿಶೇಷ ಸಂದರ್ಭಗಳಿಗೋಸ್ಕರ ಬಲಿಕೊಡುವ ವಿಧಿ

                        F686                ಪ್ರವೇಶ ವಿಧಿ.

ಈ ರೀತಿಯಾಗಿ ಆರ್.ಎಸ್.ಬಾಗ್ಸ್ ಅವರು ತುಂಬ ವಿಸ್ತೃತವಾದ ವರ್ಗೀಕರಣವನ್ನು ಕೊಟ್ಟಿದ್ದಾರೆ. ಈ ವರ್ಗೀಕರಣದಲ್ಲಿ ಕೆಲವು ವಿಷಯಗಳು ಪಶ್ಚಿಮ ದೇಶಗಳಿಗೆ ಮಾತ್ರ ಸೀಮಿತವಾಗಿವೆ. ಆದರೂ ಈ ವಿಭಜನ ಕ್ರಮ ನಮ್ಮ ನಾಡಿನ ಸಂಪ್ರದಾಯಾಚರಣೆಗಳ ಅಧ್ಯಯನಕ್ಕೆ ಸಹಕಾರಿಯಾಗಿದೆ.

            ಬಾಗ್ಸ್ ಅವರೇ ಅಲ್ಲದೆ ಇನ್ನು ಕೆಲವು ವಿದ್ವಾಂಸರ ವರ್ಗೀಕರಣ ಕ್ರಮಗಳು ಗಮನಾರ್ಹವಾಗಿವೆ: ಫ್ರಾನ್ಸಿಸ್ ಲೀ ಅಟ್ಲಿ ಅವರು ತಮ್ಮ ವರ್ಗೀಕರಣದಲ್ಲಿ ನಂಬಿಕೆ ಮತ್ತು ಸಂಪ್ರದಾಯಗಳಿಗೂ ಸ್ಥಾನವನ್ನು ಕಲ್ಪಿಸಿದ್ದಾರೆ (ನಾಯಕ, ಹಾ.ಮಾ: 54,ವಿ.ಕೋ. ಸಂ.8). ಆದರೆ ಇದರಲ್ಲಿ ವಿವರವಾದ ವರ್ಗೀಕರಣವಿರುವುದಿಲ್ಲ.

            ಅಲನ್‍ಡಂಡಸ್ ಅವರು ವರ್ಗೀಕರಣವನ್ನು ಮಾಡದೆ ಜಾನಪದಕ್ಕೆ ಸೇರುವ ವಿಷಯಗಳ ಪಟ್ಟಿಯನ್ನಷ್ಟೇ ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸಂಪ್ರದಾಯಗಳಿಗೆ ಎರಡನೇ ಸ್ಥಾನವಿದೆ. ವ್ಯವಸ್ಥಿತವೂ, ಕ್ರಮಬದ್ಧವೂ ಆದ ವರ್ಗೀಕರಣವನ್ನು ಅಲೆಕ್ಸಾಂಡರ್ ಎಚ್. ಕ್ರಾಪೆಯವರು ನೀಡಿದ್ದಾರೆ. ಸಂಪ್ರದಾಯಗಳಿಗೆ ಆರನೇ ಸ್ಥಾನ ದೊರಕಿದೆ. ಸಂಪ್ರದಾಯಗಳನ್ನು ಅವರು ಮೂರು ಭಾಗಗಳಲ್ಲಿ ವರ್ಗೀಕರಿಸಿದ್ದಾರೆ.

  1. ವರ್ಷದ ನಿರ್ದಿಷ್ಟ ದಿನ ಮತ್ತು ಕಾಲಕ್ಕೆ ಸಂಬಂಧಿಸಿದವು.
  2. ಹುಟ್ಟು, ವಿವಾಹ ಹಾಗೂ ಮರಣಗಳ ವಿರೋಧ ಮತ್ತು ಪ್ರತಿರೋಧಾರ್ಥ ಜೀವನ ವೃತ್ತಕ್ಕೆ ಸಂಬಂಧಿಸಿದವು.
  3. ಬೇಡದ್ದು ಮತ್ತು ದೂರವಿಡುವಿಕೆಗೆ ಸಂಬಂಧಿಸಿದವು,

    ರ್ಯಾಡ್‍ಕ್ಲಿಫ್ ಬ್ರೌನ್ ಅವರು ಸಂಪ್ರದಾಯವನ್ನು ಮೂರು ಬಗೆಗಳಾಗಿ ವಿಭಜಿಸುತ್ತಾರೆ:

  1. ನೈತಿಕ ಸಂಪ್ರದಾಯಗಳು(ಒoಡಿಚಿಟ ಅusಣom) ಸರಿತಪ್ಪುಗಳ ಆಧಾರದ ಮೇಲೆ ವ್ಯಕ್ತಿಗಳ ನಡುವಣ ಸಂಬಂಧವನ್ನು ನಿರ್ಣಯಿಸುವುದು.
  2. ಪಾರಿಭಾಷಿಕ ಸಂಪ್ರದಾಯಗಳು. ಆಹಾರಾರ್ಜನೆಯೇ ಮೊದಲಾದ ಜೀವನೋಪಯೋಗಿ ಕ್ರಿಯೆಗಳಲ್ಲಿ ಬಳಸುವ ಸಾಧನ ವಿಧಾನಗಳು(ಖಿeಛಿhಟಿiಛಿಚಿಟ).
  3. ಶಾಸ್ತ್ರೋಕ್ತ ಸಂಪ್ರದಾಯ(ಅeಡಿemoಟಿiಛಿಚಿಟ) ಸತ್ತವರ ಸಂಬಂಧಿಗಳು ಅನುಸರಿಸುವ ವಿಧಿಗಳು. ಈ ವಿಭಜನೆಯಲ್ಲಿ ಮಾನವನ ಸಮಸ್ತ ವಿಷಯಗಳೂ ಸಮಗ್ರ ರೂಪದಲ್ಲಿ ಅಲವಟ್ಟಿಲ್ಲವಾದ್ದರಿಂದ ವಿಂಗಡಣೆ ಅಸಮರ್ಪಕವೆನಿಸಿದೆ(ಉದ್ದೃತ: ಅಂಬಳಿಕೆ ಹಿರಿಯಣ್ಣ: 1978:4).

ಕನ್ನಡದಲ್ಲಿ ಸಂಪ್ರದಾಯಗಳ ಬಗೆಗೆ ನಡೆದಿರುವ ಅಧ್ಯಯನಗಳು:

ಸಂಪ್ರದಾಯಗಳನ್ನು ಕುರಿತು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕೆಲಸ ನಡೆದಿದೆ. 1924ರಷ್ಟು ಹಿಂದೆಯೇ ಕೊಡಗಿನ ನಡಕೇರಿಯಂಡ ಚಿಣ್ಣಪ್ಪ ಅವರ `ಪಟ್ಟೋಲೆ ಪಳಮೆ’ ಕೃತಿಯು ಕೊಡವರ ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲುತ್ತದೆ. 1933ರಲ್ಲಿ ಪ್ರಕಟಗೊಂಡ ಅರ್ಚಕ ಬಿ.ರಂಗಸ್ವಾಮಿ ಅವರ `ಹುಟ್ಟಿದ ಹಳ್ಳಿ ಹಳ್ಳಿಯ ಹಾಡು’ ಕೃತಿಯು ಕೆ.ಆರ್.ಪೇಟೆ ತಾಲ್ಲೋಕಿನ ಬಂಡಿಹೊಳೆ ಗ್ರಾಮದ ಸಂಸ್ಕೃತಿ ಅಧ್ಯಯನವಾಗಿದೆ.

ಬಿ.ಎಸ್. ಗದ್ದಗೀಮಠ(1995) ಅವರು ತಮ್ಮ ಪಿ.ಎಚ್.ಡಿ. ಮಹಾಪ್ರಬಂಧ `ಕನ್ನಡ ಜಾನಪದ ಗೀತೆಗಳು’ ಗ್ರಂಥದಲ್ಲಿ ಅದೇ ಮೊದಲ ಬಾರಿಗೆ ಹಲವು ಬಗೆಯ ಸಂಪ್ರದಾಯಗಳನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಜೊತೆಗೆ ಸುಗ್ಗಿಯ ಹಾಡುಗಳು, ಮಕ್ಕಳ ಹಾಡುಗಳ ಅಧ್ಯಯನವನ್ನೂ ವ್ಯಾಪಕವಾಗಿ ನಡೆಸಿದ್ದಾರೆ. ಹಳ್ಳಿಯ ಹಬ್ಬಗಳ ಅಧ್ಯಯನವನ್ನು ನಡೆಸಿ ಅವುಗಳ ಸ್ವಾರಸ್ಯ ಹಾಗೂ ಸಂಪ್ರದಾಯಗಳ ಪರಿಚಯವನ್ನು ಕೂಡ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ `ಜನತಾ ಗೀತೆಗಳು’, `ನಾಲ್ಕು ನಾಡಪದಗಳು’, `ಕಂಬಿಯ ಪದಗಳು’, `ಲೋಕ ಗೀತೆಗಳು’, ಮುಂತಾದ ಕೃತಿಗಳನ್ನು ಹೊರತಂದು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯಗಳನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

ಕನ್ನಡ ಜಾನಪದದ ಹಲವು ಮುಖಗಳನ್ನು ಕುರಿತು ಬರೆದಿರುವ ದೇಜಗೌ ಅವರು ತಮ್ಮ `ಜಾನಪದ ಅಧ್ಯಯನ’(1976) ಕೃತಿಯಲ್ಲಿ ಸಂಪ್ರದಾಯ ಮತ್ತು ಹಬ್ಬಗಳನ್ನು ಕುರಿತು ಗಂಭೀರ ಅಧ್ಯಯನ ಮಾಡಿದ್ದಾರೆ. ಜೀ.ಶಂ.ಪರಮಶಿವಯ್ಯ ಅವರ `ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು’(1979) ನೇರವಾಗಿ ಸಂಪ್ರದಾಯಗಳ ಅಧ್ಯಯನವಲ್ಲವಾದರೂ ಒಂದು ಮಹತ್ವದ ಗ್ರಂಥವಾಗಿದೆ. ಇದು ದಕ್ಷಿಣ ಕರ್ನಾಟಕದ ಕಾವ್ಯ ಸಂಪ್ರದಾಯಗಳನ್ನು ಕುರಿತ ಸಮಗ್ರ ಅಧ್ಯಯನವಾಗಿದೆ. `ಜಾನಪದ ಸಾಹಿತ್ಯ ಸಮೀಕ್ಷೆ’ ಎಂಬ ಅವರ ಇನ್ನೊಂದು ಕೃತಿಯಲ್ಲಿ ದೀವಳಿಗೆ, ಯುಗಾದಿ, ಮದುವೆ, ಕರಪಾಲ, ಕಂಸಾಳೆ ಮೊದಲಾದ ಸಂಪ್ರದಾಯಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ಅಂಬಳಿಕೆ ಹಿರಿಯಣ್ಣ ಅವರು ಸಂಪ್ರದಾಯಗಳನ್ನು ಕುರಿತು ಬರೆದಿರುವ ಕೃತಿಗಳಲ್ಲಿ `ಮಲೆನಾಡ ಜನಪದ ಸಂಪ್ರದಾಯಗಳು’(1978) ಗಮನಾರ್ಹವಾದ ಒಂದು ಕೃತಿ. ಇದು ನಾಮಧಾರಿ ಒಕ್ಕಲಿಗರ ಸಂಪ್ರದಾಯಗಳನ್ನು ಕುರಿತ ಸಮಗ್ರ ಅಧ್ಯಯನವಾಗಿದೆ. ಇವರು ತಮ್ಮ `ಮಲೆನಾಡು ಒಕ್ಕಲಿಗರು ಮತ್ತು ಅವರ ಜಾನಪದ’(1982) ಎಂಬ ಪಿ.ಎಚ್.ಡಿ. ಮಹಾಪ್ರಬಂಧದಲ್ಲಿ ಮಲೆನಾಡಿನ ಸಂಸ್ಕೃತಿಯ ಸಮಗ್ರ ಅಧ್ಯಯನ ನಡೆಸಿದ್ದಾರೆ.

ಸತ್ಯನಾರಾಯಣ, ಹೊ.ಮ. ಅವರು ಈಡಿಗ ಜನಪದ ಸಂಪ್ರದಾಯಗಳು ಸಾಂಸ್ಕೃತಿಕ ಅಧ್ಯಯನಗಳು ಕೃತಿಯಲ್ಲಿ(1979) ಈಡಿಗ ಜನಸಮುದಾಯದ ಸಂಪ್ರದಾಯಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ. ತ.ಚಿ. ಚಲುವೇಗೌಡ ಅವರ `ಕೆಲವು ಜನಪದ ಸಂಪ್ರದಾಯಗಳು’(1978) ಕೃತಿಯಲ್ಲಿ ಬಯಲುನಾಡಿನ ಜನಪದ ಸಂಪ್ರದಾಯಗಳನ್ನು ಪರಿಚಯ ಮಾಡಿಕೊಡಲಾಗಿದೆ.

ಬಿ.ಎಸ್. ಸರೋಜ ಅವರ ದಕ್ಷಿಣ ಕರ್ನಾಟಕದ ಜನಪದ ಸಂಪ್ರದಾಯದ ಹಾಡುಗಳು ಎಂಬ ಪ್ರಬಂಧದಲ್ಲಿ(1) ಸಾಮಾಜಿಕ ಸಂದರ್ಭದ ಹಾಡುಗಳು (2) ವ್ರತಗಳು ಮತ್ತು ಹಬ್ಬಗಳ ಹಾಡುಗಳು(3) ಧಾರ್ಮಿಕ ಕಾವ್ಯಗಳನ್ನು ಕುರಿತ ಹಾಡುಗಳು – ಈ ರೀತಿಯಾಗಿ ಮೂರು ಭಾಗವಾಗಿ ವರ್ಗೀಕರಿಸಿಕೊಂಡು ವಿವರವಾಗಿ ಅಧ್ಯಯನ ನಡೆಸಲಾಗಿದೆ.

ತೀ.ನಂ. ಶಂಕರನಾರಾಯಣ ಅವರ `ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’(1982) ಎಂಬ ಪಿ.ಎಚ್.ಡಿ. ಮಹಾಪ್ರಬಂಧವು ಕಾಡುಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳನ್ನು ಕುರಿತು ಅಧ್ಯಯನ ನಡೆಸಿದ ಮಹತ್ವದ ಸಂಶೋಧನಾ ಕೃತಿಯಾಗಿದೆ. ಮಲೆನಾಡಿನ `ಅಂಟಿಕೆ ಪಂಟಿಕೆ’ ಸಂಪ್ರದಾಯವನ್ನು ಕುರಿತು ಕೆ.ವಿ.ಸುಬ್ಬಣ್ಣ `ಅವರು ನೀಡಿದ ದೀಪ’ ಎಂಬ ಕೃತಿಯನ್ನು ಶ್ರೀಕಂಠ ಕೂಡಿಗೆ ಅವರು `ಅಂಟಿಕೆ ಪಂಟಿಕೆ ಪದಗಳು’ ಕೃತಿಯನ್ನು ಹೊರತಂದಿದ್ದಾರೆ.

ಮತಿಘಟ್ಟದ ಸೋದರರು `ನಾಡಪದಗಳು’ ಸಂಕಲನದಲ್ಲಿ ಮದುವೆ, ಬಸವನಪೂಜೆ, ತಿಂಗಳುಮಾವನ ಪೂಜೆ ಮುಂತಾದ ಸಂಪ್ರದಾಯಗಳನ್ನು ವರ್ಣನಾತ್ಮಕ ಅಧ್ಯಯನಕ್ಕೆ ಗುರಿಪಡಿಸಿದ್ದಾರೆ. ಹಂ.ಪ. ನಾಗರಾಜಯ್ಯ ಅವರ `ಕರ್ನಾಟಕದ ಜಾತ್ರೆಗಳು’(1984) ಮತ್ತು `ಆಕಾಶ ಜಾನಪದ’(1985) ಕೃತಿಗಳು ಜನಪದ ಸಂಪ್ರದಾಯಗಳ ಅಧ್ಯಯನಕ್ಕೆ ವಿಶಿಷ್ಟ ಕೊಡುಗೆಗಳಾಗಿವೆ. ಹಬ್ಬ ಜಾತ್ರೆಗಳು ಮತ್ತು ಸಂಪ್ರದಾಯಗಳ ಅಧ್ಯಯನಕ್ಕೆ ಉಪಯುಕ್ತ ಸಾಮಗ್ರಿಯನ್ನು ಒದಗಿಸುತ್ತವೆ.

ಬಿ.ಎ.ವಿವೇಕ ರೈ ಅವರು ತುಳುನಾಡಿನ `ಪಾಡ್ದನ'ಗಳನ್ನು ಕುರಿತು ಅಧ್ಯಯನ ಮಾಡಿದ್ದಾರೆ. ತುಳುನಾಡಿನ ಸಂದರ್ಭದಲ್ಲಿ ಮಾತ್ರವಲ್ಲದೆ ಕನ್ನಡ ಜಾನಪದದ ಸಂದರ್ಭದಲ್ಲಿಯೂ ರೈ ಅವರ `ತುಳು ಜನಪದ ಸಾಯಿತ್ಯ’ ಎಂಬ ಪಿ.ಎಚ್.ಡಿ. ಮಹಾಪ್ರಬಂಧಕ್ಕೆ ಮಹತ್ವದ ಸ್ಥಾನವಿದೆ. ಅರವಿಂದ ಮಾಲಗತ್ತಿ ಅವರ `ಆಟಿಕಳೆಂಜ’, `ಅಣೀ ಪೀಣೀ’, ಸಂಪ್ರದಾಯ ಹಾಗೂ `ಜಾನಪದ ವ್ಯಾಸಂಗ’ ಕೃತಿಗಳು ಕೂಡ ಸಂಪ್ರದಾಯಗಳ ಅಧ್ಯಯನದ ದೃಷ್ಟಿಯಿಂದ ಮಹತ್ವದಾಗಿವೆ. ಚೆನ್ನಣ್ಣ ವಾಲೀಕಾರರ `ಒಂದು ಗ್ರಾಮದ ಜಾನಪದೀಯ ಅಧ್ಯಯನ’ ಮತ್ತು `ಗುಲಬರ್ಗಾ ಜಿಲ್ಲೆಯ ಗೊಂದಲಿಗರು’ ಗಮನಾರ್ಹವಾದ ಕೃತಿಗಳು.

ಗೊ.ರೂ.ಚನ್ನಬಸಪ್ಪ ಅವರ `ಗ್ರಾಮಜ್ಯೋತಿ’ ಎಮ್.ಎಸ್.ಲಠ್ಠೆ ಅವರ `ಜಾನಪದ ಸಂಪದ’, ಎ.ವಿ.ನಾವಡ(ಅನು) ಅವರ ‘ತುಳುವದರ್ಶನ’, ಜನಪದ ಸಂಪ್ರದಾಯಗಳ ಅಧ್ಯಯನಕ್ಕೆ ಪೂರಕ ಸಾಮಾಗ್ರಿಯನ್ನು ದೊರಕಿಸಿ ಕೊಡುವುದಲ್ಲದೆ ಈ ಬಗೆಯ ಅಧ್ಯಯನ ಯಾವ ನೆಲೆಯಲ್ಲಿ ನಡೆಯಬೇಕೆಂಬುದನ್ನು ಸೂಚಿಸುತ್ತವೆ.

ಸಂಪ್ರದಾಯಗಳನ್ನೇ ವಿಷಯವಾಗಿಸಿಕೊಂಡು ಪಿ.ಎಚ್.ಡಿಗಾಗಿ ನಡೆಸಿದ ಸಂಶೋಧನೆಗಳೂ ಪ್ರಕೃತ ಅಧ್ಯಯನಕ್ಕೆ ಸಹಕಾರಿಯಾಗಿವೆ. ಕಾಳೇಗೌಡ ನಾಗವಾರರ `ಕಾಡುಗೊಲ್ಲರ ಹಟ್ಟಿ ಒಂದು ಅಧ್ಯಯನ’, ಸಿದ್ಧಲಿಂಗಯ್ಯನವರ `ಗ್ರಾಮದೇವತೆಗಳು’, ಪಿ.ಕೆ.ಖಂಡೋಬ ಅವರ `ಕರ್ನಾಟಕ ಲಂಬಾಣಿಯರು: ಒಂದು ಸಾಂಸ್ಕೃತಿಕ ಅಧ್ಯಯನ’, ಕೆ. ಚಿನ್ನಪ್ಪಗೌಡರ `ಭೂತಾರಾಧನೆ: ಜನಪದೀಯ ಅಧ್ಯಯನ’, ನಿಂಗಣ್ಣ ಸಣ್ಣಕ್ಕಿ ಅವರ `ಗೊಂದಲಿಗರು: ಒಂದು ಅಧ್ಯಯನ’, ಡಿ.ಆರ್. ಪಾಂಡುರಂಗ ಅವರ `ಬೈರರು: ಒಂದು ಅಧ್ಯಯನ’, ಜಮೀರುಲ್ಲಾ ಷರೀಫ್ ಅವರ `ಗೋಡರು: ಒಂದು ಅಧ್ಯಯನ’, ಪುರುಷೋತ್ತಮ ಬಿಳಿಮಲೆ ಅವರ `ಸುಳ್ಯ ಪರಿಸರದ ಗೌಡ ಜನಾಂಗ- ಒಂದು ಸಾಂಸ್ಕೃತಿಕ ಅಧ್ಯಯನ’, ಟಿ. ಗೋವಿಂದರಾಜು ಅವರ ‘ಚೆನ್ನಾದೇವಿ ಅಗ್ರಹಾರ ಒಂದು ಜಾನಪದೀಯ ಅಧ್ಯಯನ’, ಚಂದ್ರು ಕಾಳೇನಹಳ್ಳಿ ಅವರ `ಸೋಲಿಗರು: ಒಂದು ಅಧ್ಯಯನ’, ಶ್ರೀಮತಿ ಯಶೋಧರಾ ಶಾಸ್ತ್ರಿ ಅವರ `ಗುಲ್ಬರ್ಗಾ ಜಿಲ್ಲೆಯ ಸಂಪ್ರದಾಯದ ಹಾಡುಗಳು’, ಮೇರಿ ಫಾತಿಮ ಅವರ `ಮೈಸೂರು ಜಿಲ್ಲೆಯ ಕ್ರೈಸ್ತರು ಮತ್ತು ಜನಪದ ಸಂಪ್ರದಾಯಗಳು’ ಮುಂತಾದ ಸಂಶೋಧನಾತ್ಮಕ ಅಧ್ಯಯನಗಳು ಸಂಪ್ರದಾಯವನ್ನು ಕುರಿತಂತೆ ನಡೆಸುವ ಅಧ್ಯಯನಗಳಿಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿವೆ.

ಈ ಅಧ್ಯಯನಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡಮಿಯು 1993-94ರಲ್ಲಿ ಹೊರತಂದ ಉಪಸಂಸ್ಕೃತಿ ಅಧ್ಯಯನಗಳು ಕರ್ನಾಟಕ ಜನಪದ ಸಂಪ್ರದಾಯಗಳ ಬಗೆಗೆ ವಿಪುಲ ಮಾಹಿತಿಯನ್ನು ಒದಗಿಸುತ್ತವೆ. ಈಎಲ್ಲ ಸಾಮಾಗ್ರಿಗಳ ಹಿನ್ನೆಲೆಯಲ್ಲಿ ಪ್ರಕೃತ `ಕೊಂತಿಪೂಜೆ’ ಆಚರಣೆಯ ಸಮಗ್ರವಾದ ಅಧ್ಯಯನ ನಡೆಸಲು ಪ್ರಯತ್ನ ಮಾಡಿದ್ದೇನೆ.

ಪಾರಮರ್ಶನ ಗ್ರಂಥಗಳು

  1. ಅರ್ಚಕ ರಂಗಸ್ವಾಮಿ : ಹುಟ್ಟಿದ ಹಳ್ಳಿ : ಕನ್ನಡ ಅಧ್ಯಯನ ಸಂಸ್ಥೆ,  ಮೈಸೂರು : ವಿ ವಿ 1971
  2. ಅರವಿಂದ ಮಾಲಗತ್ತಿ : ಜಾನಪದ ವ್ಯಾಸಂಗ : ಶೈಲ ಪ್ರಕಾಶನ : ಮುದ್ದೇಬಿಹಾಳ್ : 1985
  3. ಗದ್ದಗೀಮಠ ಬಿ.ಎಸ್. : ಕನ್ನಡ ಜಾನಪದ ಗೀತೆಗಳು : ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ : 1963
  4. ತಪಸ್ವಿ ಕುಮಾರ್ ನಂ. ನಮ್ಮ ಜನಪದ ನಂಬಿಕೆಗಳು : ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು : 1973
  5. ದೇ.ಜ.ಗೌ : ಜಾನಪದ ಅಧ್ಯಯನ : ಡಿ.ವಿ.ಕೆ ಮೂರ್ತಿ : ಮೈಸೂರು  1991
  6. ದೇ.ಜ.ಗೌ : ಜಾನಪದ ವಾಹಿನಿ : ಡಿ.ವಿ.ಕೆ. ಮೂರ್ತಿ : ಮೈಸೂರು 1984
  7. ನಾಯಕ ಹಾ.ಮಾ. ಜಾನಪದ ಸ್ವರೂಪ : ತ.ವೆಂ.ಸ್ಮಾರಕ ಗ್ರಂಥಮಾಲೆ : ಮೈಸೂರು : 1984
  8. ಜೀ.ಶಂ. ಪರಮಶಿವಯ್ಯ : ಜನಪದ ಸಾಹಹಿತ್ಯ ಸಮೀಕ್ಷೆ : ಮೈಸೂರು 1967
  9. ಜೀ.ಶಂ. ಪರಮಶಿವಯ್ಯ : ಜಾನಪದ : ಚೇತನ ಬುಕ್ ಹೌಸ್ : ಮೈಸೂರು : 1989
  10. ಜೀ.ಶಂ. ಪರಮಶಿವಯ್ಯ : ಜಾನಪದ : ಖಂಡ ಕಾವ್ಯಗಳು : ಸಾಹಿತ್ಯ ಸದನ ಮೈಸೂರು : 1979
  11. ಜೀ.ಶಂ. ಪರಮಶಿವಯ್ಯ :  ದಕ್ಷಿಣ ಕರ್ನಾಟಕದ ಜಾನಪದ ಕಾವ್ಯ ಪ್ರಕಾರಗಳು : ಪ್ರಸಾರಾಂಗ : ಮೈಸೂರು ವಿ.ವಿ 1979
  12. ಜೀ.ಶಂ. ಪರಮಶಿವಯ್ಯ :  ಜಾನಪದ ಸಮಾವೇಶ: ಕನ್ನಡ ಅಧ್ಯಯನ ಸಂಸ್ಥೆ : ಮೈಸೂರು ವಿ.ವಿ. 1967
  13. ಹಿರಿಯಣ್ಣ ಅಂಬಳಿಕೆ : ಮಲೆನಾಡು ಜನಪದ ಸಂಪ್ರದಾಯಗಳು : ಪುಸ್ತಕ ಚಿಲುಮೆ : 1982
  14. ಹಿರಿಯಣ್ಣ ಅಂಬಳಿಕೆ : ಜಾನಪದ ಕೆಲವು ವಿಚಾರಗಳು : ಪ್ರಜ್ವಲ ಪ್ರಕಾಶನ : 1984
  15. ಹಿರಿಯಣ್ಣ ಅಂಬಳಿಕೆ : ಜಾನಪದ ಕೆಲವು ಅಧ್ಯಯನಗಳು : ಪ್ರಜ್ವಲ ಪ್ರಕಾಶನ : 1983
  16. ಹಿರಿಯಣ್ಣ ಅಂಬಳಿಕೆ : ಜಾನಪದ ಪರಿಶೋಧನೆ : ಪ್ರಜ್ವಲ ಪ್ರಕಾಶನ : 1985
  17. ಹಿರಿಯಣ್ಣ ಅಂಬಳಿಕೆ : ಸೈದ್ಧಾಂತಿಕ ಜಾನಪದ : ಪ್ರಜ್ವಲ ಪ್ರಕಾಶನ : 1993
  18. ಹಿರಿಯಣ್ಣ ಅಂಬಳಿಕೆ : ಜಾನಪದ ವಿವೇಚನ : ಪ್ರಜ್ವಲ ಪ್ರಕಾಶನ : 1994


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal