Tumbe Group of International Journals

Full Text


ದಂಗೆ ವಿವಿಧ ಆಯಾಮಗಳು.

ಲಕ್ಷ್ಮೀಕಾಂತ.

ಪಿಎಚ್.ಡಿ., ಸಂಶೋಧನಾ ವಿದ್ಯಾರ್ಥಿ,

ಜಾನಪದ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276.

ಮೊ.ಸಂ- 9900389923. Email : llakshmikantha960@gmail.com

ಪ್ರಸ್ತಾವನೆ.

ಡಾ.ಗೀತಾ ನಾಗಭೂಷಣ ಅವರ ‘ದಂಗೆ’ ಕಾದಂಬರಿಯು ‘ದುರುಗಿ’ ಎಂಬ ದಲಿತ ಹೆಣ್ಣು ಮಗಳೊಬ್ಬಳ ಸುತ್ತಲು ಹೆಣೆದ ಕಥಾವಸ್ತುವನ್ನು ಒಳಗೊಂಡಿದೆ. ಹುಟ್ಟು ತಬ್ಬಲಿಯಾದರೂ ಯಾರೊಬ್ಬರ ಸಹಾಯದ ಹಂಗಿಲ್ಲದೆ ಜೀವನದುದ್ದಕ್ಕೂ ತನ್ನ ಬದುಕನ್ನು ಕಟ್ಟಿಕೊಳ್ಳಲು ದುರುಗಿ ನಡೆಸುವ ಹೋರಾಟಗಳು, ಅಸಹಾಯಕತೆಗಳು, ಸಂಕಟಗಳು, ಎದುರಿಸುವ ಸಂದಿಗ್ಧ ಪರಿಸ್ಥಿತಿಗಳು ಕಾದಂಬರಿಯಲ್ಲಿ ಅನಾವರಣಗೊಂಡಿವೆ. ತಾನು ಪ್ರೀತಿಸಿದವನನ್ನು ಹಾಗೂ ತನ್ನನ್ನು ಪ್ರೀತಿಸಿದವನನ್ನು ಇಬ್ಬರನ್ನೂ ವಿರೋಧಿಸುವ ಮೂಲಕ ‘ದಂಗೆ’ ಏಳುವ ದುರುಗಿಯ ಮನಸ್ಥಿತಿ ಆಸ್ಫೋಟನಾಕಾರಿಯಾದುದು. ಗತದಿಂದ ವಾಸ್ತವದ ಬದುಕಿಗೆ ಬಂದು ನಿಲ್ಲುವ ‘Flash Back’ ತಂತ್ರಗಾರಿಕೆಯ ನಿರೂಪಣೆಯನ್ನು ಒಳಗೊಂಡಿರುವ ಕಾದಂಬರಿ ದುರುಗಿಯ ದಂಗೆಯ ಕಾರಣಗಳನ್ನು ಕೊನೆಯವರೆಗೂ ಕಾಪಿಟ್ಟುಕೊಂಡಿರುವುದು ವಿಶೇಷ. ಕಾದಂಬರಿಯು ದುರುಗವ್ವನ ವಾಸ್ತವ ಬದುಕಿನ ಪರಿಚಯದೊಂದಿಗೆ ಪ್ರಾರಂಭವಾಗಿ ನಂತರ ಅವಳ ಬಾಲ್ಯ, ಯೌವ್ವನ, ಬಡತನ, ದುಡಿಮೆಯ ಬದುಕುಗಳತ್ತ ಸಾಗುತ್ತ ಮುಂದುವರೆದು ತನ್ನ ಮಗಳಾದ ಸಾತಿಯ ಭವಿಷ್ಯದ ಬದುಕಿಗೆ ಬಂದು ನಿಲ್ಲುತ್ತದೆ.

‘ದಂಗೆ’ ಕಾದಂಬರಿಯು ‘ದುರುಗಿ’ಯಂಥಹ ಹೆಣ್ಣೊಬ್ಬಳ ಪ್ರತಿಭಟನೆಯಾಗಿರದೆ, ಅವಳಂತೆಯೇ ಮೇಲ್ವರ್ಗದÀ ಶೋಷಣೆಗೆ ಬಲಿಯಾದ ಅಸಂಖ್ಯಾತ ಹೆಣ್ಣುಗಳ ನೋವಿನ ಕಥನವಾಗಿದೆ. ತನ್ನ ಕರುಳ ಕುಡಿಯನ್ನು ಉಳಿಸಿಕೊಳ್ಳುವ ಏಕೈಕ ಕಾರಣ ಹೊತ್ತ ದುರುಗಿಯ ಕಾರ್ಯಸಾಧನೆಗೆ ಅವಳ ಇಡೀ ಸಮುದಾಯ ನೀಡುವ ನೈತಿಕ ಬೆಂಬಲ ಕಾದಂಬರಿಗೆ ಹೊಸ ತಿರುವನ್ನು ನೀಡಿದೆ. ಉಸಿರುಗಟ್ಟಿದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ತಳಸಮುದಾಯಗಳಿಗೆ ದುರುಗಿಯ ಮಗಳಾದ ‘ಸಾತು’ವಿನ ಮದುವೆ ಅಲ್ಲಿಯವರೆಗೂ ಅದುಮಿಟ್ಟುಕೊಂಡಿದ್ದ ತಮ್ಮೆಲ್ಲ ಪ್ರತಿಭಟನೆ, ಸಿಟ್ಟು, ರೋಷಗಳ ಹೊರಹಾಕುವಿಕೆಗೆ ಇಂಬು ನೀಡುತ್ತದೆ. ಈ ಬಲದ ಕಾರಣವಾಗಿಯೇ ಕಾಮ್ಯಾ, ಬೆಟ್ಟಪ್ಪ ಮೊದಲಾದ ದುರುಗಿಯ ಸಮುದಾಯದವರು ಕುಕ್ಕಣ್ಣಿ ಗೋಯಿಂದಪ್ಪನ ವಿರುದ್ಧವಾಗಿ ದುರುಗಿಯ ಬೆನ್ನಿಗೆ ನಿಲ್ಲುವ ಸಂಗತಿಗಳು ಕಂಡುಬರುತ್ತವೆ. ಅಲ್ಲಿಯವರೆಗೂ ಮೌನವಾಗಿದ್ದ ಈ ಸಮುದಾಯಗಳಿಗೆ ಸಾತು ದನಿ ನೀಡುವುದು ಗಮನಾರ್ಹವಾದ ಸಂಗತಿಯಾಗಿದೆ. ಅಲ್ಲದೆ ದುರುಗಿಯ ಮನದ ತಳಮಳ, ಸಂಕಟಗಳ ಮನಸ್ಥಿತಿಯನ್ನು ಹಿಡಿದಿಡುವಲ್ಲಿ ಕಾದಂಬರಿಕಾರರು ಯಶಸ್ವಿಯಾಗಿದ್ದಾರೆ.

ಕಾದಂಬರಿಯಲ್ಲಿ ದಂಗೆ ಏಳುವವರು ಯಾರು? ದುರುಗಿಯೋ? ಲಕ್ಕವ್ವನೋ ಎಂಬ ವಿಚಾರಗಳಂತೆಯೇ, ದುರುಗಿ ಯಾರ ವಿರುದ್ಧ ದಂಗೆ ಏಳುವಳು ಎಂಬುದನ್ನು ಬಿಟ್ಟುಕೊಡದೆ ಆ ಸಂಗತಿಯನ್ನು ಗೌಪ್ಯವಾಗಿಟ್ಟುಕೊಂಡಿದೆ. ಇದು ಕಾದಂಬರಿಯ ಓದುವಿಕೆಗೆ ಹೊಸತನ ನೀಡಿರುವುದಲ್ಲದೆ, ಪ್ರತಿ ಪುಟದ ಓದಿನ ಸಮಯದಲ್ಲಿಯೂ ಸಹ ದುರುಗಿ ಯಾರ ವಿರುದ್ಧ ದಂಗೆ ಏಳುತ್ತಾಳೆ ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಹೋಗಿದೆ. ಈ ರೀತಿಯ ಪ್ರಶ್ನೆಗಳು ಕಾದಂಬರಿಯಲ್ಲಿ ಹಲವಾರಿವೆ. ದುರುಗವ್ವ ತನ್ನನ್ನು ಅತ್ಯಾಚಾರ ಮಾಡಿದ ಭಾವನ ವಿರುದ್ಧ ದಂಗೆ ಎದ್ದಳೆ? ಅಥವಾ ತನ್ನನ್ನು ಮದುವೆಯಾಗಿ ಸರಿಯಾಗಿ ನೋಡಿಕೊಳ್ಳದೆ ಬೇಜವಾಬ್ದಾರಿ ಬದುಕನ್ನು ಸಾಗಿಸಿದ ತನ್ನ ಗಂಡ ಮಾಳಪ್ಪನ ವಿರುದ್ಧ ದಂಗೆ ಎದ್ದಳೆ? ಬಡತನದ ವಿರುದ್ಧ, ತನ್ನ ಅಸಹಾಯಕತೆಯ ವಿರುದ್ಧ ದಂಗೆ ಎದ್ದಳೆ? ಬನದಲ್ಲಿ ಈಳಿಗೇರ ನಾಗಯ್ಯನಿಂದ ತೆಂಬಿಗೆಯಲ್ಲಿ ಸೇಂದಿ ತುಂಬಿಸಿಕೊಂಡು ಬರುವಾಗ ಕುದುರೆ ಏರಿ ಬಂದ ಬಿಳಿಯುಡುಗೆಯ, ಮೂವತ್ತು ದಾಟಿದ, ಚೂಪು ಮೀಸೆಯ ಸವಾರನ ವಿರುದ್ಧವೇ? ಅಥವಾ ಆತ ಬಿತ್ತಿದ ಕನಸುಗಳ ವಿರುದ್ಧವೇ? ನಿರ್ಲಜ್ಜ ಅಕ್ಕ ಭಾವನ ವಿರುದ್ಧವೇ? ಅಥವಾ ನಿಷ್ಕರುಣೀ ಸಮಾಜದ ವಿರುದ್ಧವೇ? ತನ್ನನ್ನೂ ಮಗಳನ್ನೂ ಬಿಟ್ಟು ಗಾಂಜಾ ಸೇದುತ್ತ ಸನ್ಯಾಸಿಗಳೊಡನೆ ಹೋದ ಗಂಡನ ವಿರುದ್ಧವೇ? ಗಂಡ ಬಿಟ್ಟವಳು ಎಂದು ಕಾಮವನ್ನು ನೆತ್ತಿಗೇರಿಸಿಕೊಂಡು ತೊಂದರೆ ಕೊಡುತ್ತಿದ್ದ ಹಳ್ಳಿಯ ಸೊಕ್ಕಿನ ಗಂಡುಗಳ ವಿರುದ್ಧವೇ? ಅಥವಾ ಒಂಟಿ ಹೆಣ್ಣು ಎಂದು ಅವಳನ್ನು ತಮ್ಮ ವಶ ಮಾಡಿಕೊಳ್ಳಲೇಬೇಕೆಂದು ಪೈಪೋಟಿಗೆ ಬಿದ್ದ ಕಾಮ ತುಂಬಿದ ಊರಗೋಡ, ಕುಕ್ಕಣ್ಣಿ, ಕುಂಟ ದತ್ತಪ್ಪನ ವಿರುದ್ಧವೇ? ಯಾರ ಜೋಡಿಯರೆ ‘ಉಡಕಿ ಮಾಡ್ಕೋ’ ಅಂತ ಸಲಹೆ ನೀಡುವ ಗಂಗವ್ವಾಯಿಯ ವಿರುದ್ಧವೇ? ಪೋಲಿಸ್ ಪಾಟೀಲ, ಗೋಡಾ, ಕುಕ್ಕಣ್ಣಿ, ಸಾವ್ಕಾರ ಮೊದಲಾದ ಸಮಯ ಸಾಧಕರು, ನಿಷ್ಕರುಣಿಗಳು ಇರುವಂತೆಯೇ ದ್ಯಾವಪ್ಪನಂತಹ ಹಲಕಟ್‍ಗಿರಿ ಗಂಡಸರೂ, ಕಾಶೆವ್ವನಂತಹ ಅಸಹಾಯಕ ಹೆಣ್ಣುಗಳೂ ಸಹ ದುರುಗಿ ಬದುಕುವ ಸಮಾಜದಲ್ಲಿ ವಾಸಿಸುತ್ತಿದ್ದರು. ಇಂತಹವರ ವಿರುದ್ಧ ದಂಗೆ ಎದ್ದಳೆ? ಕುಕ್ಕಣ್ಣಿ ಗೋಯಿಂದಪ್ಪನನ್ನು ಸೇರಿಕೋ ಎಂದು ದುರುಗಿಯ ಮನಸ್ಸನ್ನು ತಿರುಗಿಸಲು ಬಂದ ಕುಂಟಲುತನದ ಮುದುಕಿ ಗುರವ್ವನ ವಿರುದ್ಧವೇ? ಅಥವಾ ನೋಡಿದವರ ಮನವನ್ನು ಸೆಳೆದು ತನಗೆ ದುಶ್‍ಮನ್ ಆದ ತನ್ನ ಚೆಲುವಿಕೆ, ಮೈಯಾಗಿನ ಹರೆಯದ ವಿರುದ್ಧವೇ? ತನ್ನ ಮೇಲೆ ಕಣ್ಣಿಟ್ಟಿರುವ ಧೊಡಕುಂಡಿ ಈರಣ್ಣನ ವಿರುದ್ಧವೇ? ಚುಂಚೂರಿನ ಮಾಪುರೆವ್ವನ ಜಾತ್ರೆಯ ದಿನ ಕೇರಿಯವರೆಲ್ಲ ಜಾತ್ರೆಗೆ ಹೋಗಿದ್ದಾಗ ಒಂಟಿಯಾಗಿದ್ದ ದುರುಗಿಯನ್ನು ತನ್ನ ವಶ ಮಾಡಿಕೊಂಡ ಕುಕ್ಕಣ್ಣಿ ಗೋಯಿಂದಪ್ಪನ ವಿರುದ್ಧವೇ? ಅವನ ಪ್ರಣಯದ ವಿರುದ್ಧವೇ? ತನ್ನ ಮೇಲೆ ಕಾಮದ ಕತ್ತಿ ಮಸೆಯುತ್ತಿದ್ದ ಹೊಲೇರ ಶಾಣ್ಯನ ವಿರುದ್ಧವೇ? ಕುಕ್ಕಣ್ಣಿ ಗೋಯಿಂದಪ್ಪನ ಮಗ ಸೀನೂವನ್ನು ಮದುವೆಯಾಗುವೆನು ಎನ್ನುವ ತನ್ನ ಮಗಳು ಸಾತಿಯ ವಿರುದ್ಧವೇ? ತನ್ನ ಮೇಲೆ ಕಾಮದ ಕಣ್ಣಿಟ್ಟಿದ್ದ ಹಳ್ಳಿಯ ಪೋಲೀಸ್‍ಗೌಡ ಇರಪಾಗಸಿಯ ವಿರುದ್ಧವೇ? ಇಂತಹ ಅನೇಕ ಪ್ರಶ್ನೆಗಳನ್ನು ಕಾದಂಬರಿಯು ಪ್ರತಿ ಹಂತದಲ್ಲಿಯೂ ಕೇಳಿಕೊಳ್ಳುವಂತೆ ಮಾಡುತ್ತಲೇ ಸಾಗುತ್ತದೆ.

ಆದರೆ ಕಾದಂಬರಿಯ ಕೊನೆಯಲ್ಲಿ ಗುಲ್ಬರ್ಗಾದಿಂದ ಬೆಂಗಳೂರಿಗೆ ರೈಲುಗಾಡಿಯಲ್ಲಿ ದುರುಗಿ ಹಾಗೂ ಕುಕ್ಕಣ್ಣಿ ಗೋಯಿಂದಪ್ಪ ಹೊರಟಿರುವಾಗ ನಮಗೆ ದುರುಗಿ ಯಾರ ವಿರುದ್ಧ ದಂಗೆ ಏಳುವಳು ಎಂಬುದು ಸ್ಪಷ್ಟವಾಗುತ್ತದೆ. ತನ್ನ ಮಗಳ ಕನಸುಗಳನ್ನು ನಾಶಪಡಿಸಲು ಪೋಲೀಸ್‍ಗೌಡ ಇರಪಾಗಸಿಯ ಜೊತೆ ಕೈ ಜೋಡಿಸಿದ ತನ್ನ ಪ್ರಿಯಕರ ಕುಕ್ಕಣ್ಣಿ ಗೋಯಿಂದಪ್ಪನ ವಿರುದ್ಧ ದಂಗೆ ಏಳುತ್ತಾಳೆ. ಆತನ ನಂಬಿಸಿ ಕುತ್ತಿಗೆ ಕುಯ್ಯುವ ಮೇಲ್ವರ್ಗದ ಸಂಚಿನ ವಿರುದ್ಧ ದಂಗೆ ಏಳುತ್ತಾಳೆ. ತನ್ನ ಕನಸಿನ ಸಾತುವಿನ ಬದುಕನ್ನು ಕೊನೆಗೊಳಿಸಲು ಹೊರಟ ಕುಕ್ಕಣ್ಣಿಯ ವಿರುದ್ಧ ದುರುಗಿ ದಂಗೆ ಏಳುತ್ತಾಳೆ. ಓಡುತ್ತಿರುವ ರೈಲಿನಿಂದ ಗೋಯಿಂದಪ್ಪನನ್ನು ತಳ್ಳುವ ಮೂಲಕ ದುರುಗಿ ತನ್ನ ದಂಗೆಗೆ ನಿಖರವಾದ ಕಾರಣ ಹಾಗೂ ಉತ್ತರಗಳೆರಡನ್ನೂ ನೀಡುವ ಮೂಲಕ ಕಾದಂಬರಿ ಕೊನೆಗೊಳ್ಳುತ್ತದೆ.

ಈ ಅಂಶಗಳ ಜೊತೆಗೆ ಕಾದಂಬರಿ ಹಲವು ತಳವರ್ಗ ಹಾಗೂ ಮೇಲ್ವರ್ಗದ ಸಂಸಾರಗಳ ಏಳುಬೀಳಿನ ಸಂಗತಿಗಳನ್ನು ನಮಗೆ ಮನಗಾಣಿಸುತ್ತದೆ. ಜೊತೆಗೆ ಅವರ ಜೀವನ ಕ್ರಮ, ಆಸೆ, ಆಕಾಂಕ್ಷೆಗಳು, ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ರೀತಿ, ಪಡುವ ಕಷ್ಟಗಳು, ಸ್ಥಳೀಯ ಜನ ಜೀವನದ ವಿವರಗಳೆಲ್ಲವನ್ನು ತಿಳಿಸಿಕೊಡುತ್ತದೆ. “ಬಾರೋ ನನ್ ಹಾಟ್ಯಾ...” ಮೊದಲಾದ ಬಯ್ಗುಳಗಳು ಆತ್ಮೀಯತೆಯ ಪರಿಧಿಯಲ್ಲಿ ಗ್ರಾಮೀಣ ಜನ ಜೀವನದಲ್ಲಿನ ಸಂಬಂಧಗಳನ್ನು ತಿಳಿಸಿಕೊಡುತ್ತವೆ. ದುರಗಪ್ಪನ ತೋಟ, ಲಕ್ಕವ್ವನ ಗುಡಿ, ಕೆಂಚವ್ವನ ಗುಡಿ, ಕಲ್ಬುರ್ಗಿ ಸಂತೆ, ಕಲ್ಬುರ್ಗಿ ಶರಣ ಬಸಪ್ಪನ ಜಾತ್ರೆಯ ಹೂವಿನ ತೇರು, ಚೆನ್ನಮ್ಮನ ದಂಡೆ, ಪಾತರಗಿತ್ತಿಯ ಮಾಲಿನ ಅಂತಸ್ತು ಮೊದಲಾದವು ಕಾದಂಬರಿಯ ಸ್ಥಳೀಯ ಪರಿಸರವನ್ನು ಪರಿಚಯಿಸಿಕೊಡುವ ಜೊತೆಗೆಯೇ ಅಲ್ಲಿನ ಹಳ್ಳಿಗರ ಜೀವನ ಕ್ರಮದ ಮೇಲೆ ಬೆಳಕನ್ನು ಚೆಲ್ಲುತ್ತದೆ.

ನಡುವಯಸ್ಸಿನ ದುರುಗವ್ವನನ್ನು ಕುರಿತು “ಒಬ್ಬ ಮಗಳ ತಾಯಿಯಾಗಿದ್ದರೂ ದುರುಗವ್ವನದು ಬತ್ತದ ಹರೆಯ. ಮಾಸದ ಯೌವ್ವನ. ಅದರ ಜೋರು ಜಬರದಸ್ತಿಯಿಂದಲೇ, ಹುರಿ ಮೀಸೆಯ ಸರದಾರ, ಏಳುಗೇಣಿನ ಬಿಳಿ ಕುದುರೆಯ ಸವಾರ, ಹಳ್ಳಿಯ ಸಾವ್ಕಾರ ಗೋಯಿಂದಪ್ಪನನ್ನು ತನ್ನ ಹೆಬ್ಬೆರಳ ಮೇಲೆ ಕುಣಿಸುತ್ತಿದ್ದ ದುರಗವ್ವ ಹಿಂದೆ ತಳ್ಳಿ ಬಂದ ಬದುಕೇನೂ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ದಾಟಿ ಬಂದ ದಾರಿಯೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಬದುಕು ಸವೆಸಿದ ಹಳ್ಳಿಗಳೇನೂ ಇವಳನ್ನು ಗರತಿ ಗಂಗಮ್ಮನೆಂದು ಸಾಬೀತುಗೊಳಿಸಿರಲಿಲ್ಲ.” (ಪು.ಸಂ-07) ಎಂಬ ಕಾದಂಬರಿಯ ಮಾತುಗಳು ದುರುಗವ್ವನ ಗತಿಸಿದ ಬದುಕನ್ನು ಬದುಕಿನ ಹಲವು ವಿವರಗಳನ್ನು ತಿಳಿಸಿಕೊಡುತ್ತವೆ.

ಮಾಳಪ್ಪನ ಕೈಹಿಡಿದ ದುರುಗಿ ಬಂಡೆಳ್ಳಿಯಲ್ಲಿ ತನ್ನ ಹೊಸ ಬದುಕನ್ನು ಪ್ರಾರಂಭಿಸುತ್ತಾಳೆ. ಆದರೆ ಕೆಲವೇ ದಿನಗಳಲ್ಲಿ ತನ್ನ ಗಂಡನ ಸೋಮಾರಿತನಗಳು, ಬೇಜವಾಬ್ದಾರಿ ಬದುಕಿನ ರೀತಿ ನೀತಿಗಳು ಆಕೆಗೆ ಅರಿವಾಗುತ್ತವೆ. ಅಲ್ಲದೆ “ಯಾಕಂದ್ರ ಅಂವನ ಮೈಗೊಂದು ಹೆಣ್ಣು ಬೇಕಾಗಿತ್ತು. ಮಾಡ್ಕೊಂಡ ಹೆಣ್ತಿ ಅಂದ್ರ ಹಾಸಗಿಗಿ ಬಾ ಅಂತಾನ. ತಂದು ಹಾಕು ಅಂದ್ರ ಬಿಟ್ಟೋಡಿ ಹೋಗ್ತಾನ. ನೀ ಇನ್ನ ಅವನ ಆಸ್ಯಾ ಬಿಡು ಮಗಾ.. ನಿನ್ ರಟ್ಟೀನೇ ನಿನ್ ಗಂಡಂತ ತಿಳ್ಕೋ..”(ಪು.ಸಂ-09) ಎಂಬ ಗಂಗವ್ವಾಯಿಯ ಮಾತುಗಳು ಇಡೀ ಸ್ತ್ರೀ ಸಂಕುಲದ ವಾಸ್ತವ ಬದುಕನ್ನು ಅನಾವರಣಗೊಳಿಸುತ್ತವೆ. ಅಲ್ಲದೆ ಈ ಮಾತುಗಳು ಜವಾಬ್ದಾರಿಗಳಿಂದ ವಿಮುಕ್ತರಾಗಿ ಹೆಣ್ಣು, ಹೆಂಡ, ಇಸ್ಪೀಟು ಮೊದಲಾದ ಮೈಗಳ್ಳತನದ ಚೂಲುಗಳಿಗೆ ಶರಣಾಗಿರುವ ಲಜ್ಜೆಗೆಟ್ಟ ಪುರುಷ ಸಂಕುಲವನ್ನು ಪರಿಚಯಿಸುತ್ತದೆ. ಇದು ಬಹುಪಾಲು ಹಳ್ಳಿಗಾಡಿನ ಹೆಣ್ಣು ಮಕ್ಕಳ ಪರಿಸ್ಥಿತಿಯಾಗಿದೆ. ಅವರ ರಟ್ಟೆಗಳೇ ಅವಳ ಗಂಡಂದಿರಾಗಿರುವುದು ಅವರ ಬದುಕಿನ ದುರಂತವಾಗಿದೆ.

ಹಿರೇಗೌಡ ಸಿವಲಿಂಗಪ್ಪನ ಹೊಲದಲ್ಲಿ ಜೋಳದ ರಾಶಿ ಶುರುವಾಗಿದ್ದ ದಿನ ತನ್ನ ಭಾವನಾದ ಹಣಮ್ಯಾನಿಂದ (ಹಣಮಂತ) ದುರುಗಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಅವಳು ಅಷ್ಟು ದಿನ ಅಲಂಕರಿಸಿಟ್ಟುಕೊಂಡಿದ್ದ ಕನಸುಗಳ ಕನ್ನಡಿ ಒಡೆದು ಪುಡಿ ಪುಡಿಯಾಗುತ್ತದೆ. “ಅವಳ ಬದುಕಿನ ಒಂದು ಅಧ್ಯಾಯ ಹೀಗೆ ಅವಳ ಹಿಡಿತ ತಪ್ಪಿ ಅವಳ ಹಿಚ್ಛೆಗೆ ವಿರುದ್ಧವಾಗಿ ಅವಳ ಕಣ್ಣೀರಿನ ಕಲೆಯಿಂದ ಹೊಲಸಾಯಿತು. ಅವಳ ಯಾವುದೇ ತಪ್ಪಿಲ್ಲದೆಯೂ ಅವಳ ಸೆರಗು ಮಾಸಿತ್ತು” (ಪು.ಸಂ-16) ಎಂಬ ಮಾತುಗಳು ಹಣಮ್ಯಾ ಅವಳ ಬದುಕನ್ನು ನಾಶಗೊಳಿಸಿದ ಸಂಗತಿಗಳನ್ನು ಮನಮಿಡಿಯುವಂತೆ ತಿಳಿಸುತ್ತವೆ.

ಕಾದಂಬರಿಯಲ್ಲಿ ದುರುಗಿಯಂತೆಯೇ ದಂಗೆ ಏಳುವ ಮತ್ತೊಬ್ಬಳು ಹೆಣ್ಣೆಂದರೆ ಲಕ್ಕವ್ವ. ಮದುವೆಯಾಗಿ ಬಂದಾಗಿನಿಂದಲೂ ತನ್ನ ಗಂಡನಾದ ದ್ಯಾವಪ್ಪನ ಎದುರು ಒಂದು ಮಾತನ್ನು ತಿರುಗಿ ಮಾತನಾಡದ ಲಕ್ಕವ್ವ, ತನ್ನ ಸೊಸೆ ಕಾಶೆವ್ವನನ್ನು ಗಂಡನೇ ಅತ್ಯಾಚಾರ ಮಾಡಿ ಅವಳ ಸಾವಿಗೆ ಕಾರಣನಾದ ವಿಚಾರ ತಿಳಿದ ಮೇಲೆ ವ್ಯಗ್ರಳಾಗುತ್ತಾಳೆ. ವರುಷದ ಹಿಂದೆ ಸತ್ತ ಮಗನ ವಿಚಾರವನ್ನು ನೆನಪಿಸಿಕೊಳ್ಳುತ್ತ ಸೊಸೆಯ ದುರ್ಮರಣಕ್ಕೆ ಕಾರಣನಾದ ತನ್ನ ಗಂಡನ ವಿರುದ್ಧ ಸ್ಫೋಟಿಸುವ, ದಂಗೆಯೇಳುವ ಲಕ್ಕವ್ವ ಕಾದಂಬರಿಯಲ್ಲಿನ ಮತ್ತೊಂದು ದಂಗೆಯ ಆಯಾಮವನ್ನು ನಮ್ಮ ಗಮನಕ್ಕೆ ತರುತ್ತಾಳೆ. “ನನ್ನ ಮಗ ಸತ್ತನು. ನನ್ ಸೊಸಿ ಮೈಉಂಡು ಆಕಿಗಿನೂ ಕೊಲ್ಲಿ ಬಿಟ್ಟಿ. ನೀ ಮನುಶ್ಯಾ ಅಲ್ಲೋ ದ್ಯಾವ್ಯಾ... ಮನಶ್ಯಾರಿಗಿ ತಿನ್ನೋ ರಾಗಸೇಸ ಇದ್ದಿ ನೀನೂ... ನರಮನಶ್ಯಾರಿಗಿ ತಿನ್ನೋ ರಾಗಸೇಸ ಪಿಸಾಚಿ ಇದ್ದಿ ನೀನೂ... ನಿನ್ ಬಲ್ಲಿದ್ದರ ನೀ ನನಗಾ, ನನ್ನ ಮಮ್ಮಗನಿಗಿನೂ ತಿಂದು ಬಿಡ್ತೀ...ಅಂತ ಸ್ಫೋಟಿಸಿದಳೇ” (ಪು.ಸಂ-54) ಗಂಡನ ವಿರುದ್ಧ ದಂಗೆಯ ಕಹಳೆಯನ್ನು ಊದುವಳು. ತನ್ನ ಬದುಕಿನುದ್ದಕ್ಕೂ ಗಂಡನಿಗೆ ಅಂಜಿ ಅಂಜಿ ಸಂಸಾರ ಮಾಡಿದ್ದ ಲಕ್ಕವ್ವ ಈಗ ಸ್ಫೋಟಿಸತೊಡಗಿದ್ದಳು. ನೇರವಾಘಿ ತನ್ನ ಅವ್ವನನ್ನು ಕರ್ಕೊಂಡು ಕಲಬುರ್ಗಿಗೆ ಬಂದ ಲಕ್ಕವ್ವ ಸೀದಾ ಪೋಲೀಸ್ ಠಾಣೆಗೆ ಹೋಗಿ ನಡೆದ ಎಲ್ಲಾ ವಿವರಗಳನ್ನು ಪೋಲೀಸರಿಗೆ ತಿಳಿಸಿ ದ್ಯಾವ್ಯಾ, ಕುಕ್ಕಣ್ಣಿ, ಗೋಡ, ಸಾವ್ಕಾರರನ್ನು ಬಂಧಿಸುವಂತೆ ಮಾಡುವ ಲಕ್ಕವ್ವನ ಮನಸ್ಥಿತಿ ಕ್ರಾಂತಿಕಾರಕವಾದುದು.

ಲಕ್ಕವ್ವನಂತೆಯೇ ಶೋಷಣೆಗೊಳಗಾಗಿದ್ದ ದುರುಗಿಯ ಬದುಕು ಪ್ರತೀ ಕ್ಷಣಕ್ಕೂ ಸವಾಲಿನದ್ದಾಗಿತ್ತು. “ಆಯೀ... ನನ್ ಗಂಡ ದೇಶಾಂತ್ರ ಹೋಗ್ಯಾನಂಬಾದು ಊರಿಗಿ ತಿಳಿನಾಗಲಿಂದ ಯಾಕೋ ಈ ಊರಾಗಿನ ಒಂದೀಸು ಗಂಡಸರ ನಿಯತ್ತೇ ಖರಾಬ ಆಗ್ಯಾದ ನೋಡೇ... ರಾತರಿ ಕತ್ತಲ ಕಾಳಾದಾಗ ಕೇರ್ಯಾಗಿನ ಮಂದೆಲ್ಲಾ ಉಂಡು ಮನಕೊಂಡು ಸರ್ದ ನಿದ್ದಿ ಮಾಡಾ ಯಾಳೇದಾಗ ನನ್ ಗುಡುಸಲ ಮ್ಯಾಲ ಟಪ್ ಟಪ್ ಅಂತ ಕಲ್ಲ ಬೀಳ್ತಾವ. ಕದ್ದು ಮುಚ್ಚಿ ಗುಣು ಗುಣು ಅಂತ ಹಲಕಟ್ ಹಾಡಾ ಹಾಡ್ಕೋತ, ಸೀಟಿ ಹೊಡ್ಕೋತ ಗಂಡದನಿಗೋಳು ನನ್ನ ಸುತ್ತ ಸುತ್ತ ಗೊಂದಲಾ ಹಾಕ್ತಾವ. ‘ನಿನ್ ಗಂಡ ನಿನಗ ಬಿಟ್ಟು ಹ್ವಾದರೇನಾಯ್ತು. ನಾವೀದ್ದಿವಲ್ಲ ಬಾಗಲ ತೆರಿಯೇ ದುರುಗೀ...’ ಅಂತ ಮೆಲ್ಲಗೆ ಕಳ್ಳ ದನಿಲಿಂದ ಕರೀತಾವ. ನನ್ನೆದಿ ಒಡ್ದು ನೀರಾಗ್ತದ ಆಯೀ... ನೆರೆಹೊರಿ ಮಂದೀಗಿ ಎಬ್ಬಿಸಬೇಕಂದರ ಬಾಗಿಲ ತೆರ್ದು ಹೊರಗ ಬರಾ ಹಿಮ್ಮತ್ತಾಗಂಗಿಲ್ಲ ನನಗ. ಒಳಗಿಂದೇ ಒದರದರ ಇಕಿ ಅಂಜ್ಯಾಳಂತ ಆ ಬೀದಿ ಕಾಮಣ್ಣಗೋಳಿಗಿ ಅರು ಆಗ್ತದ. ಹಿಂಗೇ ಒಂದ ಘಂಟಾ ಹೊತ್ತು ಸತಾಸಿ ಸತಾಸಿ ಅವ್ರು ಹ್ವಾದ ಮ್ಯಾಲೆ ನನಗೆ ಕಣ್ಣೆವಿ ಮುಚ್ಚತಾವ...” (ಪು.ಸಂ-59) ಎಂದು ತನ್ನ ಪರಿಸ್ಥಿತಿಯನ್ನು ಗಂಗವ್ವಾಯಿಯ ಬಳಿ ಹೇಳಿಕೊಳ್ಳುವ ದುರುಗಿಯ ಅಸಹಾಯಕ ಸ್ಥಿತಿ ನಮ್ಮ ಮನವನ್ನು ಕಲಕುತ್ತದೆ. ಒಂಟಿ ಹೆಣ್ಣನ್ನು, ರಕ್ಷಣೆ ಇಲ್ಲದ ಹೆಣ್ಣನ್ನು ನಮ್ಮ ಸಮಾಜ ನೋಡುವ ದೃಷ್ಟಿಕೋನಗಳು ಇಲ್ಲಿ ಕಂಡುಬರುತ್ತವೆ. ಒಂದು ದಿನವೂ ದುರುಗಿಯ ಕಷ್ಟ ಸುಖಗಳನ್ನು ಕೇಳದ ಗಂಡನಿರುವವರೆಗೂ ಸುಮ್ಮನಿದ್ದ ನಿರ್ಲಜ್ಜ ಗಂಡು ಪ್ರಪಂಚ ಗಂಡ ದೇಶಾಂತರ ಹೋದನೆಂಬುದು ತಿಳಿದ ತಕ್ಷಣವೇ ಅವಳನ್ನು ಕಾಮದಿಂದ ಮುಕ್ಕಿ ತಿನ್ನಲು ಕಾದು ಕುಳಿತಿರುವ ಸಂಗತಿಗಳು ನಮ್ಮ ಸಮಾಜವೇ ರೂಪಿಸಿಕೊಂಡಿರುವ ತರತಮ ಭಾವಗಳನ್ನು ನಮಗೆ ತಿಳಿಸಿಕೊಡುತ್ತವೆ. ಹೆಣ್ಣು ಕೇವಲ ಭೋಗಿಸಲು, ತಮ್ಮ ಕಾಮವಾಂಚೆಗಳನ್ನು ತೀರಿಸಿಕೊಳ್ಳಲು ಇರುವವಳು ಮಾತ್ರ. ಅವಳ ಮನದ ಭಾವನೆಗಳಿಗೆ, ಆಸೆ, ಆಕಾಂಕ್ಷೆಗಳಿಗೆ ಇಲ್ಲಿ ಮನ್ನಣೆ ಇಲ್ಲ. ಎಲ್ಲವೂ ಕಿತ್ತು ತಿನ್ನುವ ನೋಟಗಳೇ. ಇಂತಹ ನೋಟಗಳನ್ನು ಎದುರಿಸಿ ದುರುಗಿಯಂತಹ ಅಸಹಾಯಕ ಹೆಣ್ಣುಗಳು ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಇಂತಹ ಸಮಯಗಳಲ್ಲೆಲ್ಲ ದುರುಗಿ ಎದುರಿಸುವ ಸಂಘರ್ಷಗಳು, ಅವಳ ಮನದ ಆಸೆಗಳ ವಿರುದ್ಧ, ಕಾಮುಕ ಸಮಾಜದ ವಿರುದ್ಧ ಎದ್ದ ದಂಗೆಗಳಾಗಿ ನಮ್ಮ ಗಮನವನ್ನು ಸೆಳೆಯುತ್ತವೆ.

ಕಾಮುಕರ ಕಿಡಿಗೇಡಿತನಗಳಿಗೆ ಹೆದರಿದ ದುರುಗವ್ವ ರಾತ್ರಿಯೇ ಆ ಹಳ್ಳಿಯನ್ನು ಬಿಟ್ಟು ‘ಕರೆಳ್ಳಿ’ಗೆ ಬರುತ್ತಾಳೆ. ದುರುಗಿಯ ಬಾಳಿನ ಮತ್ತೊಂದು ಮಜಲು ಕರೆಳ್ಳಿಯಲ್ಲಿ ಪ್ರಾರಂಭವಾಗುತ್ತದೆ. ಮೈ ಮುರಿದು ದುಡಿದು ಬದುಕುವುದನ್ನು ಕಲಿತಿದ್ದ ದುರುಗಿಗೆ ಈ ಹಳ್ಳಿಯ ಬದುಕು ಕಷ್ಟವೆನಿಸಲಿಲ್ಲ. ಬಿಗಿ ಕಚ್ಛೆಯ, ನಿರ್ಭಿಡೆಯ, ಮುಲಾಜಿಲ್ಲದ ಹೆಂಗಸಾಗಿದ್ದ ಕಾರಣ ಹಾಗೂ ಕೇರಿಯ ಹಿರಿಯ ಪಂಚರು ದುರುಗಿಗೆ ನೆಳ್ಳು ನೀಡಿ, ಆಸರೆಯಾದ ಕಾರಣ ಈ ಹಳ್ಳಿಯ ಬದುಕು ಅವಳಿಗೆ ನಿರುಮ್ಮಳವಾಯಿತು. ಹೀಗಿರುವಾಗ ಐದೊರ್ಸದ ಹಿಂದೆ ಗೊಳ್ಯಾದ ಲಕ್ಕವ್ವನ ಜಾತರ್ಯಾಗ ಭೇಟಿಯಾಗಿದ್ದ ಕುದುರೆ ಸವಾರಿಯ ವ್ಯಕ್ತಿಯಾದ ಕುಕ್ಕಣ್ಣಿ ದತ್ತಪ್ಪನ ದರ್ಶನವಾಯಿತು. ಅವನ ತ್ವಾಟಕ್ಕೆ ಕೆಲಸಕ್ಕೆ ಹೋಗಿದ್ದಾಗ ದತ್ತಪ್ಪನೇ ಈಕೆಯನ್ನು ಗುರುತು ಹಿಡಿದು ಮಾತನಾಡಿಸಿದ. ನಂತರದ ದಿನಗಳಲ್ಲಿ ಈಕೆಯ ಮೋಹ ಹೆಚ್ಚಿದ ದತ್ತಪ್ಪ ಕುಂಟಲಗಿತ್ತಿ ಮುದುಕಿ ಗುರವ್ವನಿಗೆ ದುರುಗಿಯ ಮನಸ್ಸನ್ನು ತನ್ನ ಕಡೆಗೆ ತಿರುಗಿಸುವಂತೆ ಮಾಡಬೇಕು. ಅದಕ್ಕಾಗಿ ರೇಸಿಮೆಯ ಸೆರಗಿನ ಕೇದಿಗೆಯ ಜರಿಯಂಚಿನ ಇಲಕಲ್ ಸೀರೆಯ ಆಸೆ ಒಡ್ಡಿದ್ದ. ಅದರಂತೆಯೇ ಕಾರ್ಯ ರೂಪಕ್ಕಿಳಿದ ಗುರವ್ವ ಹಲವು ಪ್ರಯತ್ನಗಳನ್ನು ಮಾಡುತ್ತಾಳೆ. ನಂತರ ಗೋಯಿಂದಪ್ಪ ಮತ್ತು ದುರುಗಿಯರ ಬದುಕು ಪ್ರಾರಂಭವಾಗುತ್ತದೆ. ಈ ರೀತಿಯ ಅವರ ಜೀವನ ಹದಿನಾಲ್ಕು ವರ್ಷಗಳವರೆಗೆ ಸಾಗುತ್ತದೆ.

ಈ ನಡುವೆ ದುರುಗವ್ವ ತನ್ನ ಮಗಳಾದ ಸಾತಿಯನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಾಳೆ. ಈ ಕ್ರಮ ಕೇರಿಯ ಹೆಂಗಸರು, ಗಂಡಸರಾದಿಯಾಗಿ ಎಲ್ಲರ ವಿರೋಧಕ್ಕೆ ಕಾರಣವಾಗುತ್ತದೆ. ಕೆಲವರು ತಮ್ಮ ಅಸಮಾಧಾನಗಳನ್ನು ನೇರವಾಗಿಯೇ ಹೊರಹಾಕಿದರೆ, ಮತ್ತೆ ಕೆಲವರು ಅದನ್ನು ತಮ್ಮ ಕೆಲಸ ಕಾರ್ಯಗಳ ಮೂಲಕ ಹೊರಹಾಕಿದರು. ಆದರೆ ದುರುಗವ್ವ ಇದ್ಯಾವುದಕ್ಕೂ ಕಿವಿ ಕೊಡದೆ ತನ್ನ ಮಗಳು ನನ್ನಂತಹ ಬದುಕನ್ನು ಸಾಗಿಸದೆ ನಾಕಕ್ಸರ ಕಲಿತು ಸುಖವಾಗಿರಲೆಂಬ ದೃಢ ನಿರ್ಧಾರವನ್ನು ಕೈಗೊಳ್ಳುತ್ತಾಳೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಶಿಕ್ಷಣಕ್ಕೆ ಒತ್ತುಕೊಟ್ಟಿರುವ ಕಾದಂಬರಿಯ ಉದ್ದೇಶ ಮೆಚ್ಚತಕ್ಕದ್ದಾಗಿದೆ. ಅಲ್ಲದೆ ತಾನೂ ಹೆಣ್ಣಾಗಿರುವ ಕಾರಣವಾಗಿ ಶಿಕ್ಷಣದ ಮಹತ್ವದ ಅರಿವಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿ ಸಾತುವಿನ ಮೂಲಕ ಹೊಸ ಸಮಾಜದ ಮುನ್ನುಡಿಗೆ ಭಾಷ್ಯ ಬರೆಯುತ್ತದೆ ಎಂದರೆ ತಪ್ಪಾಗಲಾರದು. ಈ ಶಿಕ್ಷಣದ ಅರಿವಿನ ಮೂಲಕ ತಾನು ವಾಸಿಸುತ್ತಿರುವ ಸಮಾಜದ ಆಗುಹೋಗುಗಳನ್ನು ಅರಿತುಕೊಂಡ ಸಾತು ಅದರ ವಿರುದ್ಧ ತಾನೂ ದಂಗೆಯೇಳಲು ಅಣಿಯಾಗುತ್ತಾಳೆ. ಅದರ ಫಲವಾಗಿ ಕುಕ್ಕಣ್ಣಿ ಗೋಯಿಂದಪ್ಪನ ಮಗನಾದ ಸೀನೂವಿನೊಂದಿಗೆ ಮದುವೆಯಾಗಿ ತನ್ನ ತಾಯಿಗೆ ಸಿಗದ ಸ್ಥಾನಮಾನಗಳನ್ನು ತನ್ನ ಮೂಲಕ ಪಡೆಯುವ ಪಣ ತೊಡುತ್ತಾಳೆ. ಅದರಂತೆಯೇ ಇಬ್ಬರೂ ಬೆಂಗಳೂರಿನ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗುವುದಾಗಿ ನಿರ್ಧರಿಸಿ ಪತ್ರ ಬರೆಯುತ್ತಾರೆ. ಇದನ್ನು ತಿಳಿದ ಗೋಯಿಂದಪ್ಪ ತನ್ನ ಪರಂಪರಾಗತವಾದ ಆಲೋಚನೆಗಳಿಗೆ ಕಟ್ಟುಬಿದ್ದು ಪೋಲೀಸ್ ಇರಪಾಗಸಿಯ ಜೊತೆ ಸೇರಿ ಸಾತುವನ್ನು ಕೊಲೆ ಮಾಡಿಸುವ ಸಂಚು ರೂಪಿಸುತ್ತಾನೆ. ಅದರಂತೆಯೇ ಕಲ್ಬುರ್ಗಿಯಿಂದ ಬೆಂಗಳೂರಿಗೆ ರೈಲುಗಾಡಿಯಲ್ಲಿ ಹೋಗುವಾಗ ಈ ಸಂಗತಿಗಳು ದುರುಗವ್ವನಿಗೆ ತಿಳಿಯುತ್ತವೆ. ತನ್ನ ಮಗಳ ಭವಿಷ್ಯದ ಬದುಕನ್ನು ಕಾಪಾಡಿಕೊಳ್ಳುವ ಸಲುವಾಗಿ ಕುಕ್ಕಣ್ಣಿಯನ್ನು ರೈಲಿನಿಂದ ತಳ್ಳುವ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಾಳೆ. ಆ ಮೂಲಕ ಸಾತುವಿನ ಭವಿಷ್ಯದ ದಿನಗಳ ಆಶಯದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಉಪಸಂಹಾರ.

ಹೆಣ್ಣನ್ನು ಗರತಿಯಾಗಿ, ಪತಿವ್ರತೆಯಾಗಿ, ಸೂಳೆಯಾಗಿ, ಕಾಮದ ಉತ್ಕಟತೆಯ ಬೀಜವಾಗಿ, ಶೃಂಗಾರದ ಸಿರಿದೇವತೆಯಾಗಿ ಕಾಣಲು ಬಯಸುವ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಹೆಣ್ಣಾಗಿ ಏಕೆ ನೋಡುವುದಿಲ್ಲ. ತನ್ನನ್ನು ಹೆಣ್ಣಾಗಿಯೇ ಬಾಳಲು ಬಿಡದೆ ಏಕೆ ಈ ರೀತಿಯ ಸ್ಥಿತ್ಯಂತರ, ಪಲ್ಲಟಗಳಿಗೆ ಒಳಗು ಮಾಡುತ್ತದೆ ಎಂಬಂತಹ ವಿಚಾರಗಳನ್ನು ಕುರಿತು ದುರುಗಿಯ ಮೂಲಕ ಚಿಂತಿಸುವ ಕಾದಂಬರಿಯು ದುರುಗಿಯ ದಂಗೆಗೆ ಉತ್ತರಗಳನ್ನೂ ನೀಡುತ್ತದೆ.

ಪರಾಮರ್ಶನ ಗ್ರಂಥಗಳು.

  1. ಡಾ.ಗೀತಾ ನಾಗಭೂಷಣ, ದಂಗೆ, 2010, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal