Tumbe Group of International Journals

Full Text


ತಿರುವೋಣಂ : ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆ

ಡಾ. ಸ್ವಾಮಿ . ಕೋಡಿಹಳ್ಳಿ,

ಉಪನ್ಯಾಸಕರು, ಕನ್ನಡ ವಿಭಾಗ, ಭಾಷಾ ಮತ್ತು ತೌಲನಿಕ ಅಧ್ಯಯನ ನಿಕಾಯ, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ, ತೇಜಶ್ವಿನಿ ಹಿಲ್ಸ್, ಪೆರಿಯ ಅಂಚೆ, ಕಾಸರಗೋಡು -671320 ಕೇರಳ, ಭಾರತ, 8217647108, 09845346098.  Mail ID: dr.swamy@cukerala.ac.in

ಶ್ರಿಮತಿ. ಸಾರಿಕಾ ಕುಮಾರಿ. ಎಸ್,

ದ್ವಿತಿಯ ಸೆಮಿಸ್ಟರ್ ಕನ್ನಡ ಎಂ.ಎ., ವಿದ್ಯಾರ್ಥಿನಿ, ಕನ್ನಡ ವಿಭಾಗ, ಭಾಷಾ ಮತ್ತು ತೌಲನಿಕ ಅಧ್ಯಯನ ನಿಕಾಯ, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ, ತೇಜಶ್ವಿನಿ ಹಿಲ್ಸ್, ಪೆರಿಯ ಅಂಚೆ, ಕಾಸರಗೋಡು-671320 ಕೇರಳ, ಭಾರತ, Mob:9961507976,  Mail ID  sarikamanjeeram@gmail.com

ಪೀಠಿಕೆ

ಮಲೆಯಾಳಂ ಕ್ಯಾಲೆಂಡರ್ ‘ಕೊಲ್ಲ’ದ ಮೊದಲ ಮಾಸವಾದ ಚಿಂಗಮ್ ಮಾಸದ ಹಸ್ತ (ಅತ್ತಂ) ನಕ್ಷತ್ರದಿಂದ ಓಣಂ ಆರಂಭವಾಗುತ್ತದೆ(ಆಗಸ್ಟ್/ಸೆಪ್ಟೆಂಬರ್). ಅತ್ತಂ ಪತ್ತಿನ್ ಪೊನ್ನೋಣಂ ಅಂದರೆ ಹತ್ತನೇ ದಿನದ ಶ್ರಾವಣ ನಕ್ಷತ್ರದಂದು ‘ತಿರುವೋಣಂ’. ಓಣಂ ಎನ್ನುವ ಪದವು ಸಂಸ್ಕೃತದ ‘ಶರವನ’ ಪದದಿಂದ ಬಂದಿದೆ. ಶರವನವು ಇಪ್ಪತ್ತೇಳನೇ ನಕ್ಷತ್ರ. ಓಣಂಅನ್ನು ಕೇರಳಿಗರ ಸುಗ್ಗಿಯ ಹಬ್ಬವೆಂದೂ ಕರೆಯುತ್ತಾರೆ. ಭತ್ತದ ಸುಗ್ಗಿ ಸಂಭ್ರಮ ಮತ್ತು ಮಳೆಗಾಲದ ಹೂ ಫಸಲುಗಳ ಸಂಗಮದ ಕಾಲದಲ್ಲಿ ಮಾವೆಳಿ ರಾಜ ಪಾತಾಳ ಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಗೆ ಭೂಲೋಕಕ್ಕೆ ಬರುತ್ತಾನೆ ಎನ್ನುವ ಐತಿಹ್ಯವಿದೆ.

ಓಣಂ ಪ್ರಯುಕ್ತ ಓನಕಲಿಕಾಲ್ ಆಟ ವಿಶೇಷವಾಗಿದೆ. ಇದರ ಜೊತೆಗೆ ತಳಪ್ಪಂದ್‍ಕಲಿ, ಆಮ್ಬೆಉಲ್(ಬಿಲ್ಲಿನಾಟ), ಕುಟುಕುಟು, ಕಯ್ಯಮಕಲಿ ಮತ್ತು ಅತ್ತಕಳಂ ಎನ್ನುವ ಕಾಳಗದ ಆಟಗಳು ಮುಖ್ಯವಾದವುಗಳಾಗಿವೆ. ಕೈಕೊಟ್ಟಿಕಲಿ ಮತ್ತು ತುಂಬಿತುಳ್ಳಲ್ ಎನ್ನುವ ನೃತ್ಯ ಪ್ರಕಾರಗಳು, ಜನಪದ ನೃತ್ಯ ಪ್ರಕಾರಗಳಲ್ಲಿ ಕುಮ್ಮಟ್ಟಿಕಲಿ ಮತ್ತು ಪುಲಿಕಲಿಗಳು ಇಡೀ ಉತ್ಸವದಲ್ಲಿ ಆಕರ್ಷವಾದವುಗಳಾಗಿವೆ.

ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಬಲಿಚಕ್ರವರ್ತಿಯು ಓಣಂನಲ್ಲಿ ಭೂಮಿಗೆ ಬರುತ್ತಾನೆಂದು ಹೇಳಲಾಗುತ್ತದೆ. ಇದರ ಪ್ರತೀಕವಾಗಿ ವಾಮನ ಮತ್ತು ಬಲಿಚಕ್ರವರ್ತಿ ವೇಷಧಾರಿಗಳು ಮನೆ ಮನೆಗೆ ಬಂದು “ತಿರುಮೇನಿ....” ಎಂದು ಕೂಗಿದಾಗ ಮನೆಯ ಯಜಮಾನ ಅವರಿಗೆ ಫಲಾಹಾರವನ್ನು ನೀಡುತ್ತಾರೆ. ನಂತರ ಫಲಹಾರಕ್ಕೆ ತೃಪ್ತಿಯಾಗಿ ವೇಷಧಾರಿ ‘ಮಾವೇಲಿ’ ಬಹುಮಾನವನ್ನಿತ್ತು ಹಿಂದಿರುಗುತ್ತಾನೆ. ‘ಓನತ್ತಪ್ಪನ್’ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರತಿ ಮನೆಗೆ ತೆರಳಿ ಆಶೀರ್ವಾದ ನೀಡುತ್ತಾನೆ. ಕೇರಳದ ಉತ್ತರ ಭಾಗದಲ್ಲಿ ಚಾಲ್ತಿಯಲ್ಲಿದ್ದ ಈ ಆಚರಣೆ ವಿರಳವಾಗುತ್ತಿದ್ದು, ಕೆಲವು ಹಳ್ಳಿಗಳಲ್ಲಿ ಮಾತ್ರ ಕಾಣಬಹುದಾಗಿದೆ.

“ವಾಮನ ದೇವಾಲಯದ ಮೂಲ ನೆಲೆಯನ್ನು ನಾವು ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಾಕರಾ ಪಟ್ಟಣದಲ್ಲಿ ಕಾಣಬಹುದಾಗಿದೆ. ಈ ತ್ರಿಕ್ಕಾಕರಾ ಪಟ್ಟಣವು ಎರ್ನಾಕುಲಂ-ತ್ರಿಶ್ಯೂರ್ ಹೆದ್ದಾರಿಯಲ್ಲಿದೆ. ಈ ವಾಮನ ದೇವಾಲಯವು ಅತ್ಯಂತ ಪ್ರಾಚೀನವಾಗಿದೆ. ಈ ದೇವಾಲಯದ ಬಗ್ಗೆ ತಮಿಳು ವೈಷ್ಣವ ಸಂತನಾದ ನಮ್ಮಳ್ವರ್ ಅವರು ತಮ್ಮ ರಚನೆಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ದೊರೆತಿರುವ ಶಿಲಾಶಾಸನಗಳ ಪ್ರಕಾರ ಈ ಪ್ರದೇಶವು ಮಹಾಬಲಿ ಚಕ್ರವರ್ತಿಯ ಸಾಮ್ರಾಜ್ಯವಾಗಿತ್ತೆಂದು ತಿಳಿದು ಬರುತ್ತದೆ. ಅಲ್ಲದೆ ಈ ದೇವಾಲಯವಿರುವ ಜಾಗವು ವಾಮನನು ಮಹಾಬಲಿಯನ್ನು ಪಾತಾಳಕ್ಕೆ ತಳ್ಳಿದ ಜಾಗವೆಂದೂ ಪ್ರತೀತಿಯಿದೆ.” (Read more at: https://kannada.nativeplanet. com-onam-festival/articlecontent-pf16864-000847) ಆದ್ದರಿಂದ ಕೇರಳಿಗರು ತಮ್ಮಜೀವಮಾನದ ಓಣಂ ಆಚರಣೆಯ ಸಂದರ್ಭದಲ್ಲಿ ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿನೀಡಲು ಬಯಸುತ್ತಾರೆ. ಪ್ರತಿ ವರ್ಷ ಇಲ್ಲಿ ನಡೆಯುವ ಓಣಂ ಹಬ್ಬವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜಾತಿ ಮತಗಳ ತರತಮವಿಲ್ಲದೆ ಸಾವಿರಾರು ಜನ ಇಲ್ಲಿ ಸೇರುತ್ತಾರೆ. ಈ ದೇವಾಲಯ ಕೋಮುಸೌಹಾರ್ದತೆಯ ಸಂಕೇತವಾಗಿದೆ.

ಓಣಂನ ಹತ್ತು ದಿನಗಳ ಆಚರಣೆ ಅತ್ತಂನಿಂದ ಆರಂಭವಾಗುತ್ತದೆ. ‘ಅತ್ತಂ’ನಿಂದ ಮಲೆಯಾಳಿಗಳು ಮನೆಯ ಅಂಗಳದಲ್ಲಿ ಪೂಕಳಂ ಹಾಕಲು ಆರಂಭಿಸುತ್ತಾರೆ. ‘ಚಿತ್ತಿರ’ ಓಣಂನ ಎರಡನೇ ದಿನ.  ಮನೆ ಸ್ವಚ್ಚತೆಯನ್ನು ಮಾಡಿಕೊಳ್ಳುವ ಈ ದಿನದಲ್ಲಿ ಜೊತೆಗೆ ಪೂಕಳಂನ ಎರಡನೇ ವೃತ್ತವನ್ನು ಹಾಕಲಾಗುತ್ತದೆ. ‘ಚೋದಿ’ ಓಣಂನ ಮೂರನೇ ನಕ್ಷತ್ರವಾಗಿದೆ. ಈ ದಿನವನ್ನು ‘ಓಣವಿಳಿ’ ಎಂದು ಕರೆಯುತ್ತಾರೆ. ಹಬ್ಬಕ್ಕೆ ಬೇಕಾದ ಬಟ್ಟೆ, ಆಭರಣಗಳನ್ನು ಖರೀದಿಸುವ ದಿನ. ಓಣಂ ದಿವಸ ಧರಿಸುವ ಹೊಸಬಟ್ಟೆಯನ್ನು ‘ಓಣಕೋಡಿ’ ಎಂದು ಕರೆಯುತ್ತಾರೆ.  ಪೂಕಳಂನ ಮೂರನೇ ವೃತ್ತವನ್ನು ಹಾಕಲಾಗುತ್ತದೆ. ‘ವಿಶಾಗಂ’ ಓಣಂ ಉತ್ಸವದ ಪ್ರಧಾನ ನಕ್ಷತ್ರ. ಈ ದಿನ ಓಣಂ ಸದ್ಯವನ್ನು ಆರಂಭಿಸುತ್ತಾರೆ. ‘ಅನಿಲಂ’ ಈ ನಕ್ಷತ್ರದಲ್ಲಿ ವಲಂಗಳಿ(ಬೋಟ್ ರೇಸ್) ನಡೆಸುತ್ತಾರೆ. ‘ತ್ರಿಕೇಟ’ ದಿವಸದಲ್ಲಿ ಸಂಬಂಧಿಕರಿಗೆ, ಸ್ನೇಹಿತರಿಗೆ ಹೊಸ ಉಡುಗೊರೆ ಕೊಡಲಾಗುತ್ತದೆ. ತ್ರಿಕೆಟದ ದಿನ ಪೂಕಳಂಅನ್ನು ಐದು, ಆರು ವಿವಿಧ ಬಣ್ಣದ ಹೂಗಳಿಂದ ಅಲಂಕರಿಸಲಾಗುತ್ತದೆ. ‘ಮೂಲಂ’ನಂದು ವಿವಿಧ ಸಾಂಸ್ಕೃತಿಕ ಉತ್ಸವಗಳು ನಡೆಯುತ್ತವೆ. ಪೂಕಳಂನ ನಡುವೆ ದೀಪ ಹಚ್ಚುತ್ತಾರೆ. ‘ಪೂರಾಡಂ’ ಈ ನಕ್ಷತ್ರದಲ್ಲಿ ಪೂಕಳಂನ ನಡುವೆ ಮಾವೆಲಿಯ, ವಾಮನನ ಪ್ರತಿಮೆಗಳನ್ನು ಸ್ಥಾಪಿಸುತ್ತಾರೆ. ಹೀಗೆ ಈ ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ ‘ಓಣತ್ತಪ್ಪನ್’ ಎನ್ನತ್ತಾರೆ. ತಮ್ಮ ತಮ್ಮ ಮನೆಗಳಿಗೆ ಮಹಾಬಲಿಯನ್ನು ಆಮಂತ್ರಿಸುವುದಕ್ಕಾಗಿ ಪೂಕಳಂ ನಡುವೆ ಈ ಪ್ರತಿಮೆಗಳನ್ನು ಇಡುತ್ತಾರೆ. ಈ ದಿವಸ ಪೂಕಳಂ ವೃತ್ತಾಕಾರ ದೊಡ್ಡದಾಗಿದ್ದು ಆಕರ್ಷಿತವಾಗಿರುತ್ತದೆ. ‘ಉತ್ರಾಡಂ’ ಓಣಂನ ಒಂಭತ್ತÀನೆ ದಿವಸ. ಜನ ಓಣಂ ಸದ್ಯಕ್ಕೆ ಬೇಕಾದ ಪರಿಕರಗಳನ್ನು, ಓಣಕೋಡಿ ವಸ್ತುಗಳನ್ನು ಖರೀದಿಸುವ ಅವಸರದಲ್ಲಿರುತ್ತಾರೆ. ‘ಉತ್ರಾಡ ಪಾಚಲ್’ ಎಂದು ಇದನ್ನು ಕರೆಯಲಾಗಿದೆ. ‘ತಿರುಓಣಂ’ ಓಣಂನ ಅಂತಿಮ ದಿನ. ಓಣಕೋಡಿಯನ್ನು ತೊಟ್ಟು ಜನ, ಮನೆಮುಂದೆ ಚಿತ್ತಾಕರ್ಷಕವಾದ ಪೂಕಳಂ, ವೈವಿಧ್ಯಮಯವಾದ ಓಣಂ ಸದ್ಯ, ಇವೆಲ್ಲವುಗಳಿಂದ ಸಂಭ್ರಮ ಮನೆಮಾಡಿರುತ್ತದೆ. ಹೀಗೆ ಹತ್ತು ದಿನಗಳ ಕಾಲ ವೈವಿಧ್ಯಮಯವಾಗಿ ಜನ ಓಣಂ ಆಚರಿಸುತ್ತಾರೆ.

ಹಿರಿಯರು ಕಿರಿಯರಿಗೆ ಓಣಕೈ ನೀಟ್ಟಂ ಅಂದರೆ ಹಣ ನೀಡುವುದು ಜೊತೆಗೆ ಮನೆಯ ಯಜಮಾನ ಮನೆಯವರಿಗೆಲ್ಲ ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಾರೆ. ಇವೆಲ್ಲ ಆಚರಣೆಗಳು ಸಂಬಂಧಗಳನ್ನು ಬೆಸೆಯುವುದರ ಜೊತೆಗೆ ಕುಟುಂಬದಲ್ಲಿ ಹಿರಿಯರ ಜವಾಬ್ದಾರಿ ಮತ್ತು ಅವರ ಸ್ಥಾನಮಾನಗಳನ್ನು ತಿಳಿಸುತ್ತವೆ.

ತ್ರಿಶೂರ್‍ನಲ್ಲಿ ನಡೆಯುವ ‘ಪುಲಿಕಳಿ’, ಪತ್ತನಂತಿಟ್ಟು ಜಿಲ್ಲೆಯಲ್ಲಿರುವ ಆರಾನ್‍ಮುಲ ಪ್ರದೇಶದಲ್ಲಿ ನಡೆಯುವ ಆರಂಮುಲ ಸ್ನೇಕ್ ಬೋಟ್ ರೇಸ್, ಇತ್ಯಾದಿಗಳು ನಾಡಿನ ಭಾವೈಕ್ಯತೆಯನ್ನು ತಿಳಿಸುತ್ತವೆ. ಕೇರಳ ಇತರ ರಾಜ್ಯಗಳಿಗಿಂತ ಅಧಿಕವಾಗಿ ವಿದೇಶಿ ಸಂಪರ್ಕವನ್ನು ಸಾಧಿಸಿದೆ. ವೇದ್ಯಕೀಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿರುವುದರ ಪ್ರಯುಕ್ತ ಮಲೆಯಾಳಿಗಳು ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಹೀಗಿದ್ದರೂ ಓಣಂ ಸಂದರ್ಭದಲ್ಲಿ ತಮ್ಮ ತವರಿಗೆ ಬರುವುದು ಅವರಿಗೆ ಸಂಭ್ರಮದವಿಚಾರ. ಬರಲಾಗದಿದ್ದವರು ತಾವಿರುವಲ್ಲೇ ಕೇರಳದ ನಾಡ ಹಬ್ಬದ ಮಹತ್ವವನ್ನು ತಾವಿರುವಲ್ಲೇ ಪಸರಿಸುತ್ತಿದ್ದಾರೆ.

ಆಕರಗಳು

  1. Festivals and Celebrations of India : Dr. H. M. Nagaraju, Published: Prof. Shripathi P, Director, Prasaranga, Mangalore University, Mangalgangotri – 574199.
  2. ಎಚ್ಚೆಸ್ಕೆ(ಸಂ) -ಅವಲೋಕನ, 1985, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
  3. https://kannada.nativeplanet. com-onam-festival/articlecontent-pf16864-000847


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal