Tumbe Group of International Journals

Full Text


ಆದಿವಾಸಿ ಬುಡಕಟ್ಟು ಸಮುದಾಯದ ಅಭಿವೃದ್ಧಿಯಲ್ಲಿ ಅಂಬೇಡ್ಕರ್ ಪಾತ್ರ; ಒಂದು ಚಾರಿತ್ರಿಕ ಅಧ್ಯಯನ

ಡಾ. ಸಂಜೀವಕುಮಾರ.ಮು.ಪೋತೆ.

ಅರ್ಥಶಾಸ್ತ್ರ, ಸಹಾಯಕ ಪ್ರಾಧ್ಯಾಪಕರು,

ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು,

ಚಿತ್ರದುರ್ಗ – 577 501

Email ID: sanjupotennn@gmail.com   or  sanjushridevi@gmail.com

Mobile No:      8971219106, 8971515132

ಸಾರಲೇಖ

            ಈ ಲೇಖನದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಯಲ್ಲಿ ಅಂಬೇಡ್ಕರ್‍ರವರ ಪಾತ್ರವನ್ನು ಕುರಿತು ಚಾರಿತ್ರಿಕವಾಗಿ ಅಧ್ಯಯನ ಮಾಡಲಾಗಿದೆ. ಆರ್ಯರ ಕುತಂತ್ರದಿಂದ ಕಾಡು ಪಾಲಾದ ಬುಡಕಟ್ಟು ಜನಸಮುದಾಯಗಳು, ತಮ್ಮ ಜೀವನದ ಸವಾಲುಗಳನ್ನು ಎದುರಿಸಲು ಸಮರ್ಥರಾಗಲಿಲ್ಲ. ಅವರನ್ನು ಬೌದ್ಧಿಕವಾಗಿ ಸಾಮಾಜಿಕವಾಗಿ ಹಿಂದುಳಿಯುವಂತೆ ಮಾಡಿ; ಆರ್ಥಿಕ ಹಾಗೂ ರಾಜಕೀಯ ಬದುಕನ್ನು ದುರ್ಬಲಗೊಳಿಸಿ ಕಾಡಿನಲ್ಲಿರುವಂತೆ ಮಾಡಲಾಯಿತು. ಇದಕ್ಕೆ ಮೂಲ ಕಾರಣ ಅವರು ನಾಡಿನಿಂದ ದೂರ ಉಳಿದದ್ದು, ಅರಣ್ಯ ಪ್ರದೇಶಗಳಲ್ಲಿ ತಮ್ಮದೇ ಆದ ಆಚಾರ–ವಿಚಾರ, ಸಂಪ್ರದಾಯಗಳು ರೂಢಿಸಿಕೊಂಡಿದ್ದು. ದಿನಗಳು ಕಳೆದಂತೆ ಕಾಡುಗಳು ನಾಶಹೊಂದಿದಂತೆ ನಾಡಿನೊಂದಿಗೆ ಸಂಪರ್ಕ ಆನಿವಾರ್ಯವಾಯಿತು. ಈ ಬುಡಕಟ್ಟು ಜನರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದರು. ಆದರೆ ಈ ಜನರು ಶಿಕ್ಷಣ, ಬಂಡವಾಳ, ತಂತ್ರಜ್ಞಾನ ಮುಂತಾದವುಗಳಲ್ಲಿ ಹಿಂದುಳಿದುದರು. ಇವೆಲ್ಲ ಮೇಲ್ವರ್ಗದ ಜನರ ಪಾಲಾಗಿರುವುದರಿಂದ ನಾಗರಿಕ ವಂಚಿತ ಸಮುದಾಯಗಳಾಗಿ ಜೀವನ ಸಾಗಿಸುವಂತಾಯಿತು.  ಆದರೆ ಅಂಬೇಡ್ಕರ್ ಅವರು ಇದನ್ನೆಲ್ಲಾ ಅಧ್ಯಯನ ಮಾಡಿರುವುದರಿಂದ ದೇಶದ ಮೂಲನಿವಾಸಿಗಳ ಗೋಳು ಅರಿತವರಾಗಿದವರಿಂದ ಮನುಧರ್ಮದ ವಿರುದ್ಧ ಸಂಘರ್ಷಕ್ಕೆ ಇಳಿದು; ಹೋರಾಟ ನಡೆಸಿ; ಕೊನೆಗೆ ಅವರು ಭಾರತದ ಸಂವಿಧಾನ ರಚಿಸುವುದರೊಂದಿಗೆ ಬುಡಕಟ್ಟು ಸಮುದಾಯಗಳ ಗೋಳಿಗೆ ಸ್ಪಂದಿಸಿದರು. ಬುಡಕಟ್ಟು ಸಮುದಾಯದ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿರುವುದರಿಂದ ಈ ಲೇಖನ ಮಹತ್ವ ಪಡೆದಿದೆ.

ಕೀಲಿಪದ: ಅಭಿವೃದ್ಧಿ, ಚಾರಿತ್ರಿಕ ಹಿನ್ನಲೆ, ಶಿಕ್ಷಣ,ಬುಡಕಟ್ಟು ಸಮುದಾಯ

ಪರಿಚಯ

            ಅಂಬೇಡ್ಕರ್ ರವರ ‘ಅಸ್ಪೃಶ್ಯರು ಮತ್ತು ಏಕೆ ಅವರು ಅಸ್ಪೃಶ್ಯರಾದರು?’ ಎನ್ನುವ ಗ್ರಂಥದಲ್ಲಿ ಬುಡಕಟ್ಟಿನ ಮೂಲ ಕುರಿತು ವಿವರಿಸಿದ್ದಾರೆ. ಆದಿವಾಸಿ ಬುಡಕಟ್ಟುಗಳು, ಅಲೆಮಾರಿ ಬುಡಕಟ್ಟುಗಳು ಹಾಗೂ ಅಪರಾಧಿ ಬುಡಕಟ್ಟುಗಳ ಮೂಲ ಕುರಿತು ಅವರು ಹೇಳಿದ್ದಾರೆ. ಅವರು ವಿವರಿಸಿದಂತೆ ಸಿಂಧೂ ಬಯಲಿನ ನಾಗರಿಕತೆಯನ್ನು ಕಟ್ಟಿ ಬೆಳೆಸಿದ್ದು `ನಾಗ’ ಜನಾಂಗವೆಂದು ಹೇಳಿದ್ದಾರೆ. ಆರ್ಯರು ಕರೆಯುವ ಅಸುರ, ರಾಕ್ಷಸ, ದುಷ್ಯರು, ನಿಶಾದ ಮುಂತಾದವರನ್ನು ಅಂಬೇಡ್ಕರ್ ರವರು  ನಾಗಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿ ಪ್ರಮುಖವಾದ ಅಂಶವೆಂದರೆ? ನಿಶಾದರು ಪ್ರಾಚೀನ ನಾಗ ಜನಗಳಾಗಿದ್ದು ಇವರು ಕಾಡು ಹಾಗೂ ಬೆಟ್ಟಗಳಲ್ಲಿ ವಾಸವಾಗಿದ್ದರು. ಸುಮಾರು ಕ್ರಿ.ಪೂ. 1800 ರಲ್ಲಿ ಭಾರತಕ್ಕೆ ಬಂದ ಆರ್ಯರು ಈ ದೇಶದ ಮೂಲ ನಿವಾಸಿ ಬುಡಕಟ್ಟುಗಳನ್ನು ಯುದ್ಧಗಳಲ್ಲಿ ಸೋಲಿಸಿದರು. ಆರ್ಯರು ವರ್ಸಸ್ ಬುಡಕಟ್ಟು ಜನಾಂಗಗಳ ಮಧ್ಯ ಸಂಘರ್ಷ ಉಂಟಾಯಿತು. ಇದರಲ್ಲಿ ಕೆಲವು ಬುಡಕಟ್ಟುಗಳು ಸೋಲನ್ನು ಅನುಭವಿಸಿದವು. ಆ ಜನಗಳಿಗೆ ಆರ್ಯರು ತಮ್ಮ ಸಂಸ್ಕೃತಿಯನ್ನು ಬಲವಂತವಾಗಿ ಅನುಸರಿಸಲು ಒತ್ತಾಯಿಸಿರಬಹುದು. ಇದರಿಂದ ಕೆಲ ಬುಡಕಟ್ಟು ಜನಾಂಗವು ಆರ್ಯರ ಸಂಸ್ಕೃತಿಯನ್ನು ಒಪ್ಪದೆ ಹಾಗೂ ಯುದ್ಧದ ಸೋಲನ್ನು ಸಹಿಸದೆ ಕಾಡು ಸೇರಿದರು. ಮುಂದೆ ಕಾಡೇ ಅವರ ವಾಸಸ್ಥಾನವಾಯಿತು. ತದನಂತರದಲ್ಲಿ ಅವರು ಬುಡಕಟ್ಟು ಜನರಾದರು. ಮತ್ತೆ ಕೆಲವು ಬುಡಕಟ್ಟು ಜನರು ತಮ್ಮ ಜೀವನಕ್ಕಾಗಿ ಅಲೆಮಾರಿಗಳಾದರು. ಮತ್ತೆ ಕೆಲ ಬುಡಕಟ್ಟು ಜನರು ಅಪರಾಧಿ ವೃತ್ತಿಗಳನ್ನು ತಮ್ಮ ಜೀವನಕ್ಕಾಗಿ ಮಾಡಿಕೊಂಡು ಕೆಲವು ಅಪರಾಧಿ ಬುಡಕಟ್ಟುಗಳಾದರು. ಇಲ್ಲಿ ಕಂಡು ಬರುವ ಅಂಶವೆಂದರೆ, ಆರ್ಯರ ರಾಜಕೀಯ, ಆರ್ಥಿಕ, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳ ಒತ್ತಾಯದ ಕಾರಣಗಳೇ ಅವರನ್ನು ನಿರಂತರವಾಗಿ ಬುಡಕಟ್ಟು ವಾಸಿಗಳನ್ನಾಗಿಸಿತು. 1936ರ ವಾರ್ಷಿಕ ಸಮ್ಮೇಳನಕ್ಕೆ ಅಧ್ಯಕ್ಷರ ಭಾಷಣಕ್ಕಾಗಿ ಸಿದ್ಧಪಡಿಸಿದ “ಜಾತಿ ವಿನಾಶ” ಎನ್ನುವ ಲೇಖನದಲ್ಲಿ ಹಳೆಯ ನಾಗರಿಕತೆ ಹೊಂದಿದ ಬುಡಕಟ್ಟು ಜನಾಂಗಗಳು ಶತಶತಮಾನಗಳಿಂದ ಹೇಗೆ ಉಳಿದುಕೊಂಡುಬಂದಿವೆ. ಇದಕ್ಕೆ ಕಾರಣವೇನು? ಎನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಕೆಲ ಅಧ್ಯಯನಗಳಿಂದ ಕಂಡುಬರುವ ಅಂಶವೆಂದರೆ ವರ್ಣ ವ್ಯವಸ್ಥೆಯ ಹೊರಗುಳಿದ ಆದಿವಾಸಿ ಬುಡಕಟ್ಟು ಜನಾಂಗಗಳು ಅನಾರ್ಯರಾಗಿದ್ದಾರೆ. ಹಲವಾರು ಬುಡಕಟ್ಟು ಜನಸಮುದಾಯದ ಭಾಷೆಯು ದ್ರಾವಿಡ ಕುಟುಂಬಕ್ಕೆ ಸೇರಿದ ಭಾಷೆಗಳಾಗಿವೆ. ಅಂದರೆ ನಾಗ ಜನಾಂಗ ಮತ್ತು ದ್ರಾವಿಡ ಜನಾಂಗವು ಈ ದೇಶದ ಮೂಲನಿವಾಸಿಗಳಾಗಿದ್ದಾರೆ ಎನ್ನುವುದು ಸ್ಪಷ್ಟ. ಈ ವರ್ಣ ವ್ಯವಸ್ಥೆಯಲ್ಲಿ ಹೊರಗುಳಿದ ಬುಡಕಟ್ಟು ಜನರು ಇಂದಿಗೂ ಸಹ ಅನಾಗರಿಕರಂತೆ ಜೀವಿಸುತ್ತಿರುವುದು ದುರಂತವಾಗಿದೆ.     

ಅಧ್ಯಯನದ ಉದ್ದೇಶ ಮತ್ತು ವಿಧಾನ

            ಈ ಲೇಖನದ ಪ್ರಮುಖ ಉದ್ದೇಶವೆಂದರೆ, ಹಿಂದುಳಿದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಪಡಿಸುವುದು, ಚಾರಿತ್ರಿಕ ಅಧ್ಯಯನದಿಂದ ಅವರ ಪ್ರಮುಖವಾದ ಸಮಸ್ಯೆಗಳನ್ನು ಗುರುತಿಸುವುದು, ಅವರ ಸ್ಥಾನಮಾನ ಅರಿತುಕೊಳ್ಳುವುದು ಹಾಗೂ ಸರಕಾರಕ್ಕೆ ಅವರ ಸಮಸ್ಯೆಗಳ ನಿವಾರಣೆಗೆ ಸಹಾಯಕವಾದ ಸಲಹೆಗಳನ್ನು ಸೂಚಿಸುವುದಾಗಿದೆ.

            ಈ ಲೇಖನ ಒಟ್ಟಾರೆಯಾಗಿ ದ್ವಿತೀಯ ದತ್ತಾಂಶಗಳ ಮೇಲೆ ಅವಲಂಬನೆಯಾಗಿದೆ. ಇದರಲ್ಲಿ ಅಂಬೇಡ್ಕರ್ ರವರ ಬರಹಗಳು ಮತ್ತು ಭಾಷಣಗಳನ್ನು ಬಳಸಿಕೊಳ್ಳಲಾಗಿದೆ, ಭಾರತದ ಜನಗಣತಿ, ಯೋಜನಾ ಆಯೋಗ, ಕೆಲ ಆಯ್ದ ಪುಸ್ತಕಗಳು, ಲೇಖನಗಳು, ನಿಯತಕಾಲಿಕಗಳು ಹಾಗೂ ಪ್ರಬಂಧಗಳನ್ನು ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.

ವೇದಕಾಲದಲ್ಲಿನ ಬುಡಕಟ್ಟು ಜನಾಂಗದ ಸ್ಥಿತಿ

            ನಾನು ಈಗಾಗಲೇ ವಿವರಿಸಿದಂತೆ ಆರ್ಯರು ಈ ದೇಶಕ್ಕೆ ಬರುವ ಪೂರ್ವದಲ್ಲಿ ನಾಗಜನಾಂಗವು ಸಿಂಧೂ ಬಯಲಿನಲ್ಲಿ ತಮ್ಮ ನಾಗರೀಕತೆಯನ್ನು ಕಟ್ಟಿಕೊಂಡು ಸ್ವಚ್ಛಂದವಾದ ಜೀವನ ಸಾಗುಸುತ್ತಿದ್ದರು. ಅವರಲ್ಲಿ ಸಮಾನತೆ, ಪ್ರಜಾಪ್ರಭುತ್ವ, ಮಹಿಳೆ ಮತ್ತು ಪರುಷರಿಗೆ ಸಮಾನವಾದ ಹಕ್ಕು ಹಾಗೂ ಮಾತೃಪ್ರಧಾನವಾದ ಸಮಾಜರಚನೆಯಾಗಿತ್ತು. ಪ್ರಾಚೀನ ಮಧ್ಯ ಏಷ್ಯಾದ ನಾಗರಿಕತೆಯಿಂದ ಬಂದ ಆರ್ಯರು, ಅದೇ ಆರ್ಯ ತೊಟ್ಟಿಲು; ಅಲ್ಲಿಂದ ವಲಸೆಗಾರರಾದ ಇವರು ಕ್ರಮಕ್ರಮವಾಗಿ ಬಂದು ತಮ್ಮ ನಾಗರಿಕತೆಯನ್ನು ರೂಢಿಸಲು, ನಾಗಜನಾಂಗಕ್ಕೆ ಸೇರಿದ ಬುಡಕಟ್ಟು ಜನಾಂಗದವರನ್ನು ದಾಸರು, ರಾಕ್ಷಸರು, ಅಸುರರು, ಪಿಶಾಚಿಗಳೆಂದು ಕರೆದು, ಆರ್ಯರ ವಿರುದ್ಧ ಸೋತ ಜನರನ್ನು ರಾಕ್ಷಸರು ಮತ್ತು ವಾನರರೆಂದು ವರ್ಣಿಸಿದ್ದಾರೆ. ಆರ್ಯರ ದಿಗ್ವಿಜಯಗಳನ್ನು ದೇವಾಂಶ ಸಂಭೂತರೆಂದು ಹೊಗಳಿಕೊಳ್ಳುವುದು. ಭಾರತದ ಬುಡಕಟ್ಟು ಜನರನ್ನು ಕಾಳಗದಲ್ಲಿ ಕೊಲ್ಲಲು ಯೋಗ್ಯರಾದವರೆಂದು ಹೀಯಾಳಿಸುವುದು; ಅವರನ್ನು ಕೀಳಾಗಿ ನೋಡುವುದು ಆರ್ಯರ ಪ್ರವೃತ್ತಿಯಾಗಿತ್ತು ಎನ್ನುವುದನ್ನು ಕೆ.ಎಸ್. ಭಗವಾನ್‍ರವರು ವಿವರಿಸಿದ್ದಾರೆ. ಆರ್ಯರ ವಿರುದ್ಧ ಸೋತ ದೇಶದ ಮೂಲ ನಿವಾಸಿಗಳು ಹಾಗೂ ಬುಡಕಟ್ಟುಜನಾಂಗದವರು. ಆರ್ಯರ ದಬ್ಬಾಳಿಕೆ ಹಾಗೂ ಅವರ ನಾಯಕತ್ವ ಒಪ್ಪಿಕೊಳ್ಳದೆ ತಾವು ವಾಸವಾಗಿದ್ದ ಸ್ಥಳವನ್ನು ಬಿಟ್ಟು ಕಾಡುಮೇಡುಗಳಿಗೆ ಸೇರಿಕೊಂಡು ಅವರು ಅರಣ್ಯವಾಸಿ ಬುಡಕಟ್ಟು ಜನಾಂಗದವರಾದರು. ಅವರು ತಮ್ಮ ಆಹಾರಕ್ಕಾಗಿ ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸುಗಳು ತಿನ್ನುವುದು, ಪ್ರಾಣಿ-ಪಶುಗಳನ್ನು ಬೇಟೆಯಾಡುವುದು, ಮೀನುಗಾರಿಕೆ, ಜೇನು ಉತ್ಪನ್ನ, ಅರಣ್ಯ ಉತ್ಪನ್ನಗಳನ್ನು ಸಂಗ್ರಹ ಮಾಡಿ ಅವುಗಳನ್ನು ಮಾರಾಟ ಮಾಡಿ ಅದರಿಂದ ಬದುಕನ್ನು ಮತ್ತೆ ಕಟ್ಟಿಕೊಂಡರು. ಇನ್ನು ಕೆಲವು ಬುಡಕಟ್ಟು ಜನಾಂಗಗಳು ಅಲೆಮಾರಿ ಜೀವನಗಳನ್ನು ಪ್ರಾರಂಭಿಸಿದವು.   ಕೆಲವು ಬುಡಕಟ್ಟುಗಳು ಕಾಡಿನಲ್ಲಿದ್ದು ಅಪರಾಧವೇ ತಮ್ಮ ಜೀವನಮಾಡಿಕೊಂಡು ಅಪರಾಧಿ ಬುಡಕಟ್ಟುಗಳಾದರು. ಈ ಮೇಲಿನ ಬುಡಕಟ್ಟು ಜನಾಂಗದವರು ದುಸ್ಥಿತಿಗೆ ಮೂಲಕಾರಣ ಆರ್ಯರು. ಭಾರತಕ್ಕೆ ಬಂದ ಆರ್ಯರು ಮೂಲ ನಿವಾಸಿ ಬುಡಕಟ್ಟುಗಳನ್ನು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಗಳನ್ನು ಕಿತ್ತುಕೊಂಡು ಅವರನ್ನು ಕೀಳುಮಟ್ಟದಲ್ಲಿ ಜೀವಿಸುವಂತೆ ಮಾಡಿದರು.

ಬುದ್ಧನ ಅವಧಿಯಲ್ಲಿ ಬುಡಕಟ್ಟು ಜನಾಂಗದ ಸ್ಥಿತಿ

            ಬುದ್ಧನ ಕಾಲದಲ್ಲಿ ಸಮಾಜದ ಸ್ಥಿತಿ ಹೇಗಿತ್ತು ಎನ್ನುವುದನ್ನು ಅರಿತುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ಶಾಕ್ಯರು ಎನ್ನುವ ಒಂದು ಕ್ಷತ್ರಿಯ ಬುಡಕಟ್ಟಿನಲ್ಲಿ ಬುದ್ಧನು ಹುಟ್ಟಿದನು ಎಂದು ಡಿ.ಡಿ. ಕೋಸಾಂಬಿಯವರು ಉಲ್ಲೇಖಿಸಿದ್ದಾರೆ. ಅಕಿಮಿನಿಡ್‍ನ ದೊರೆ ಮೊದಲನೇ ಡೇರಿಯಸ್ಸನು ಗೆದ್ದ ಬುಡಕಟ್ಟುಗಳಲ್ಲಿ ಶಾಕ್ಯವು ಒಂದಾಗಿತ್ತು. ಶಾಕ್ಯರಲ್ಲಿ ಯಾವುದೇ ಜಾತಿ-ಭೇದ ಕಂಡುಬರುವುದಿಲ್ಲ. ಸಮಾನತೆ ಮೂಲ ತಳಹದಿಯಾಗಿತ್ತು. ಅಲ್ಲಿ ಬ್ರಾಹ್ಮಣರು ಕಂಡುಬರುವುದಿಲ್ಲ. ವೈದಿಕ ಆಚಾರಣೆಗಳಿಗೆ ಅವಕಾಶಗಳು ಇರಲಿಲ್ಲ. ಅವರ ಮೂಲ ಕಸುಬು ಬೇಸಾಯವಾಗಿತ್ತು. ಕೆಲವು ವ್ಯಾಪಾರಿ ವಸಾಹತುಗಳನ್ನು ಹೊಂದಿದರು. ಶಾಕ್ಯರಲ್ಲಿ ತಮ್ಮ ನಾಯಕರನ್ನು ಸರದಿಯ ಮೇಲೆ ಆಯ್ಕೆ ಮಾಡುತ್ತಿದ್ದರು. ಶಾಕ್ಯರು ತಮ್ಮ ವ್ಯವಹಾರಗಳನ್ನು ತಾವೇ ನಿರ್ವಹಿಸಿಕೊಂಡು ಹೊಗುತ್ತಿದ್ದರು. ಅವರು ತುಂಬಾ ಸ್ವಾವಲಂಬಿಗಳಾಗಿದ್ದರು. ಶಾಕ್ಯಬುಡಕಟ್ಟಿನ ಅಕ್ಕಪಕ್ಕದಲ್ಲಿ ಹಲವಾರು ಬುಡಕಟ್ಟು ಇರುವುದನ್ನು ಕಾಣುಬಹುದು. ಮಲ್ಲ ಹಾಗೂ ಲಿಚ್ಛವಿ ಬುಡಕಟ್ಟುಗಳು ಸ್ವತಂತ್ರರಾಗಿದ್ದು ಬಲಿಷ್ಠರಾಗಿದ್ದರು. ಬುಡಕಟ್ಟುಗಳ ಮಧ್ಯೆ ಕಾದಾಟ ಸಾಮಾನ್ಯವಾಗಿತ್ತು. ಅಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿತ್ತು ಎಂಬುದು ತುಂಬಾ ಮುಖ್ಯ. ಶಾಕ್ಯರ ನೆರೆಯ ಕೋಲಿಯರ್ ಬುಡಕಟ್ಟಿನವರು ಬುದ್ಧನ ತತ್ವಗಳನ್ನು ತುಂಬಾ ಒಪ್ಪಿಕೊಂಡಿದ್ದರು. ಸಾಮಾನ್ಯವಾಗಿ ಕೋಲಿಯರನ್ನು ಮೂಲ ನಿವಾಸಿಗಳೆಂದು ಪರಿಗಣಿಸಲ್ಪಟ್ಟಿದ್ದರು. ಇವರನ್ನೆಲ್ಲಾ ನಾಗಜನಾಂಗವೆಂದು ಕರೆಯುತ್ತಿದ್ದರು. ರೋಹಿಣಿಯ ನದಿ ನೀರಿಗಾಗಿ ಕೋಲಿಯರ್ ಮತ್ತು ಶಾಕ್ಯರ ಎರಡು ಬುಡಕಟ್ಟು ಜನಾಂಗದ ಮಧ್ಯ ಕಾದಾಟ ಇರುವುದನ್ನು ನೋಡುತ್ತೇವೆ.

ಇಲ್ಲಿ ಹೇಳುವ ವಿಚಾರವೆಂದರೆ ಭಾರತದ ಮೂಲ ನಿವಾಸಿಗಳಾದ ಬುಡಕಟ್ಟು ಜನಾಂಗದವರಲ್ಲಿ ಸಮಾನತೆ, ಸಹೋದರೆ, ಸ್ವಾವಲಂಬನೆ ಜೀವನ, ಪ್ರಜಾಪ್ರಭುತ್ವ ಮಾದರಿಯಲ್ಲಿತ್ತು. ಅವು ಸಾಂಸ್ಕೃತಿಕ ಬುಡಕಟ್ಟು ಸಮಾಜಗಳಾಗಿದ್ದವು. ಹೀಗೆ ಬುದ್ಧನ ಸಮಕಾಲೀನತೆಯಲ್ಲಿ ವಜ್ಜಿ, ಕೋಸಲ, ಕೋಲಿಯರ್, ಶಾಕ್ಯರು, ಮಲ್ಲ, ಹೀಗೆ ಹಲವಾರು ಬುಡಕಟ್ಟುಗಳು ಇದ್ದದ್ದನ್ನು ಗುರುತಿಸಿಕೊಳ್ಳಬಹುದು. ಆದರೆ ಇವು ಎಲ್ಲಾ ಆರ್ಯ ಸಂಸ್ಕೃತಿಗಿಂತಲೂ ಭಿನ್ನವಾದವುಗಳಾಗಿದ್ದವು. ಬುದ್ಧನು ಬುಡಕಟ್ಟು ಜನಾಂಗದ ಸುಧಾರಣೆಗೆ ಶ್ರಮಿಸಿದನು. ಅಪರಾಧಿ ಬುಡಕಟ್ಟಿಗೆ ಸೇರಿದ ಅಂಗುಲಿಮಾಲನೆಂಬ ದರೋಡೆಕೋರನ ಮನಸ್ಸು ಬದಲಾಯಿಸಿ ನಾಗರೀಕ ಜೀವನ ನಡೆಸುವಂತೆ ಪ್ರೋತ್ಸಾಹಿಸುತ್ತಾನೆ. ಅದೇ ರಾಜಗೃಹದ ದಕ್ಷಿಣದ ಪರ್ವತ ಪ್ರದೇಶದಲ್ಲಿನ 500ಕ್ಕೂ ಹೆಚ್ಚಿನ ದರೋಡೆಕೋರರ ಮನಸ್ಸನ್ನು ಬದಲಾಯಿಸುತ್ತಾನೆ. ಬುದ್ಧನು ತನ್ನ ಸುತ್ತಮುತ್ತಲಿನಲ್ಲಿ ಜೀವಿಸುತ್ತಿದ್ದ ಸುಮಾರು 122 ಬುಡಕಟ್ಟು ಜನರ ಮನಸ್ಸನ್ನು ಬದಲಾಯಿಸಿ ನಾಗರಿಕ ಜೀವನಕ್ಕೆ ಒಗ್ಗಿಕೊಳ್ಳುವಂತೆ ಮಾಡುತ್ತಾನೆ.

            ಆರ್ಯರ ದಬ್ಬಾಳಿಕೆ ದೇಶದ ಇತಿಹಾಸದಲ್ಲಿ ಹೆಚ್ಚಾಯಿತು. ನಂತರದಲ್ಲಿ ಬುದ್ಧನ ಚಳವಳಿ ಬೇಸತ್ತ ಜನರನ್ನು, ಸಾಂಸ್ಕೃತಿಕ ಶೋಷಣೆಗಳಿಗೆ ಒಳಗಾದ ಜನರಲ್ಲಿ ಒಂದು ಮಂದಹಾಸ ಮೂಡಿಸುವಂತೆ ಮಾಡಿತು. ಬುದ್ಧನು ಆರ್ಯ ಧಾರ್ಮಿಕ ದಾಳಿಯನ್ನು ತಡೆದು ಅಲ್ಲಿನ ಬುಡಕಟ್ಟು ಜನರು ನಾಗರಿಕ ಜೀವನವನ್ನು ಸಾಗಿಸುವಂತೆ ಮಾಡುತ್ತಾನೆ.

            ಬುದ್ಧ ಚಳುವಳಿಯ ನಂತರದಲ್ಲಿ ಸಾಮಾಜಿಕವಾಗಿ ಹಲವಾರು ಬದಲಾವಣೆಗಳಾಗುತ್ತವೆ. ಅವುಗಳಲ್ಲಿ ಮುಖ್ಯವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸುಧಾರಣೆಯನ್ನು ಕಾಣಬಹುದು. ಅಲ್ಲದೆ, ಅಲ್ಲಿ ಹಲವಾರು ನಾಗ ಜನಾಂಗದ ಬುಡಕಟ್ಟುಗಳು ರಾಜ್ಯವನ್ನು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತವೆ. ಆದರೆ ಅದು ಬಹುಕಾಲ ಉಳಿಯದೆ ಕ್ರಿ.ಪೂ. 185 ರಲ್ಲಿ ಪುಷ್ಯಮಿತ್ರ ಸುಂಗರ ಪ್ರತಿ ಕ್ರಾಂತಿಯ ಕಾರಣದಿಂದಾಗಿ ಮೂಲ ಆದಿವಾಸಿಗಳು ತಮ್ಮ ಅಧಿಕಾರವನ್ನು ಕಳೆದುಕೊಂಡು ಅವರ ಜೀವನ ಅವನತಿ ಕಡೆಸಾಗುತ್ತದೆ.

ಮನು ಅವಧಿಯಲ್ಲಿ ಬುಡಕಟ್ಟು ಜನಾಂಗ ಸ್ಥಿತಿ

            ಭಾರತದಲ್ಲಿ ಮನುಧರ್ಮಶಾಸ್ತ್ರ ಜಾರಿಯಾದ ತರುವಾಯ ಬುಡಕಟ್ಟು ಜನಾಂಗದವರು ಆರ್ಯರ ದಬ್ಬಾಳಿಕೆಗೆ ತುತ್ತಾದರೂ ಬುದ್ಧನ ಕಾಲದಲ್ಲಿ ಪಡೆದುಕೊಂಡಿದ್ದ ಸ್ಥಾನ–ಮಾನ ಕಳೆದುಕೊಂಡರು. ಕಾರಣ ಆರ್ಯರು ಜಾರಿಗೆ ತಂದಿದ್ದ ಮೂಲ ಧರ್ಮ ಹಾಗೂ ಸಂಸ್ಕೃತಿಯಾದ ಚಾರ್ತುವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಯನ್ನು ಒಪ್ಪದೆ ಬ್ರಾಹ್ಮಣರ ಶ್ರೇಷ್ಠತೆ ಒಪ್ಪದೆ ಹಾಗೂ ಗುಲಾಮಗಿರಿಯನ್ನು ಒಪ್ಪದೆ ಹಲವಾರು ಬುಡಕಟ್ಟು ಜನಾಂಗದವರು ಕಾಡು, ಗುಡ್ಡಗಾಡು ಪ್ರದೇಶಗಳಿಗೆ ಪಲಾಯನಗೈದರು. ಆದ್ದರಿಂದ ಬುಡಕಟ್ಟು ಜನಾಂಗವು ನಾಗರಿಕ ಜೀವನದಿಂದ ದೂರವಾಯಿತು. ಅಂಬೇಡ್ಕರರು ಮನು ಧರ್ಮ ಅಸ್ಪೃಶ್ಯರ ಹಾಗೂ ಬುಡಕಟ್ಟು ಜನಾಂಗದವರ ಬದುಕು ನಾಶ ಮಾಡಿದೆ ಎನ್ನುವುದಕ್ಕೆ ಮನುಸ್ಮೃತಿಯ ಕೆಲ ಶ್ಲೋಕಗಳ ಮೂಲಕ ವಿಶ್ಲೇಷಿಸಿದ್ದಾರೆ.

            ಮನುಸ್ಮೃತಿ ಅಧ್ಯಾಯ- 1:31 “ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನನ್ನೂ, ಭುಜದಿಂದ ಕ್ಷತ್ರಿಯನನ್ನು, ತೊಡೆಯಿಂದ ವೈಶ್ಯನನ್ನು ಹಾಗೂ ಪಾದದಿಂದ ಶೂದ್ರರನ್ನು ಸೃಷ್ಟಿಸಿದ್ದಾನೆ”.

            ಯಾವ ರಾಷ್ಟ್ರವು ಶೂದ್ರರಿಂದಲೇ ಕೂಡಿರುತ್ತದೆಯೋ, ಬ್ರಾಹ್ಮಣನ ರಹಿತವಾಗಿರುತ್ತದೆಯೋ, ಆ ರಾಜ್ಯವು ದುರ್ಭಿಕ್ಷೆ – ರೋಗಗಳಿಂದ ಬೇಗನೆ ನಾಶವಾಗುತ್ತದೆ (ಅಧ್ಯಾಯ – 8:22)

            ಬ್ರಾಹ್ಮಣರು ಮಾತ್ರ ವೇದಗಳನ್ನು ಕಲಿಸಬೇಕು, ಇದು ಶಾಸ್ತ್ರ ನಿರ್ಣಯವಾಗಿದೆ (ಅಧ್ಯಾಯ– 10:01)

            ಕ್ಷತ್ರಿಯ ಹಾಗೂ ಶೂದ್ರ ಶರೀರದ ಗುಣಧರ್ಮಗಳನ್ನು ಪಡೆದಿರುವವನಿಗೆ “ಉಗ್ರ” ಎನ್ನುತ್ತಾರೆ. (ಅಧ್ಯಾಯ: 10:09)

            ಕೊಳಕು ಜನರು ಊರ ಹೊರಗೆ ವಾಸಿಸಬೇಕು. ಅವರು ಒಳ್ಳೆಯ ಪಾತ್ರೆಗಳಲ್ಲಿ ಅಡಿಗೆ ಮಾಡಬಾರದು, ಉಣ್ಣಬಾರದು, ನಾಯಿ-ಕತ್ತೆಗಳನ್ನು ಸಾಕಬೇಕು ಹಾಗೂ ಊಟವನ್ನು ಒಡಕುಪಾತ್ರೆಯಲ್ಲಿ ಬಡಿಸಬೇಕು, ಗ್ರಾಮ ಮತ್ತು ನಗರಗಳಲ್ಲಿ ಇವರು ರಾತ್ರಿ ಸಂಚರಿಸಬಾರದು (ಅಧ್ಯಾಯ: 10:31 ಹಾಗೂ ಅಧ್ಯಾಯ: 54).

            ಈ ಮೇಲಿನ ಶ್ಲೋಕಗಳಿಂದ ಕಂಡುಬರುವ ಅಂಶವೆಂದರೆ ಬ್ರಾಹ್ಮಣನು ಶ್ರೇಷ್ಠವಾದ ಜನ್ಮಪಡೆದಿದ್ದಾನೆ. ಈ ಜಗತ್ತಿಗೆ ಅವನೇ ಒಡೆಯನು, ನೀವು ಎಲ್ಲಾರು ಅವನ ಸೇವಕರು ಮಾತ್ರ. ನೀವು ಶಿಕ್ಷಣವನ್ನು ಪಡೆಯಬಾರದು ಹಾಗೂ ಕಲಿಸಲು ಬಾರದು. ಕಾರಣ ನೀವು ಕೆಳವರ್ಣದವರು. ನೀವು ಊರ ಹೊರಗೆ ಮಾತ್ರ ಜೀವನ ಸಾಗಿಸಬೇಕೆಂದು ಕಟ್ಟುನಿಟ್ಟಾಗಿ ಮನುಧರ್ಮಶಾಸ್ತ್ರ ಜಾರಿಯಾಗಿರುವ ಕಾರಣದಿಂದಾಗಿ ಇದನ್ನು ಒಪ್ಪದ ಜನರು ಕಾಡಿನತ್ತ ಪಲಾಯನಗೈದರು ಮುಂದೆ ಅವರೇ ಮತ್ತೆ ಬುಡಕಟ್ಟು ಜನಾಂಗದವರಾದರು. ಮನುಧರ್ಮದ ದಬ್ಬಾಳಿಕೆ ಎಂದರೇ? ಬುಡಕಟ್ಟು ಜನಾಂಗ ಕಷ್ಟದ ಹಾಗೂ ಹೀನಾಯದ ಜೀವನ ಕಳೆಯುವುದೇ ಆಗಿದೆ.  

            ಅವರು ತಮ್ಮ ಆಹಾರಕ್ಕಾಗಿ ಗೆಡ್ಡೆ ಗೆಣಸುಗಳನ್ನು ತಿನ್ನುವುದು, ಬೇಟೆಯಾಡುವುದು, ಪಶುಸಂಗೋಪನೆ, ಮೀನುಗಾರಿಕೆ, ಜೇನು ಸಂಗ್ರಹ, ಅರಣ್ಯ ಉತ್ಪನ್ನಗಳ ಮಾರಾಟದ ಮೂಲಕ ಬದುಕುವ ವೃತ್ತಿಯನ್ನು ಕೈಗೊಳ್ಳುತ್ತಾರೆ. ಕೆಲ ಬುಡಕಟ್ಟು ಜನಾಂಗ ಅಲೆಮಾರಿ ಜೀವನವನ್ನು ಆರಂಭಿಸಿ ತಮ್ಮ ಬದುಕಿಗಾಗಿ ಬಿಲ್ಲುವಿದ್ಯೆ, ನೃತ್ಯ, ಊರು ಕೇರಿಗಳಲ್ಲಿ ಮನರಂಜನೆ, ಹಾಡುಗಾರಿಕೆ, ದೊಂಬರಾಟಗಳ ಪ್ರದರ್ಶನ, ಪ್ರಾಣಿಗಳನ್ನು ಪಳಗಿಸಿ ಪ್ರದರ್ಶನ ನೀಡುವುದು, ಮೋಡಿ ಪ್ರದರ್ಶನ ಇತ್ಯಾದಿ ಮನರಂಜನೆ ನೀಡುವುದೇ ವೃತ್ತಿಮಾಡಿಕೊಂಡರು. ದೇವರ–ದೇವತೆಗಳ ಹೆಸರಿನಲ್ಲಿ ಭಿಕ್ಷೆ ಎತ್ತುವುದು, ಭವಿಷ್ಯ ಹೇಳುವುದು. ಸಾಂಪ್ರದಾಯಕ ಔಷಧ ತಯಾರಿಸಿ ನೀಡುವುದು ಹೀಗೆ ಮುಂತಾದ ವೃತ್ತಿಯಲ್ಲಿ ತೊಡಗಿಸಿಕೊಂಡರು. ಇನ್ನು ಕೆಲವು ಬುಡಕಟ್ಟುಗಳು ತಮ್ಮ ಜೀವನಕ್ಕಾಗಿ ಕಳ್ಳತನ, ದರೋಡೆ, ಲೂಟಿ, ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. 1835ರಲ್ಲಿ ಬ್ರಿಟಿಷರ ಸರಕಾರವು ಕೆಲ ಬುಡಕಟ್ಟು ಸಮುದಾಯಗಳನ್ನು ಅಪರಾಧಿ ಬುಡಕಟ್ಟುಗಳೆಂದು ಘೋಷಿಸಿ, ಕಾಡು ಅಪರಾಧಿ, ಸಮುದಾಯಗಳನ್ನು (ದರೋಡೆ, ಕಳ್ಳ, ಲೂಟಿ) ಸಮುದಾಯದ ಪಿಂಡಾರಿಗಳನ್ನು ಹಾಗೂ ಸಮುದ್ರದ ಲೂಟಿಕೋರರಾದ ಥಗ್ಸ್‍ಗಳನ್ನು ನಿಯಂತ್ರಿಸಲು ಮುಂದಾಗಿ 382 ಹಾಗೂ 986 ಧಗ್ಸ್‍ಗಳನ್ನು ನೇಣುಗಂಭ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಂಚಿತವಾದ ಬುಡಕಟ್ಟು ಜನಾಂಗ

            1871 ರಲ್ಲಿ ಬ್ರಿಟಿಷ್ ಸರಕಾರವು ಹಲವು ಬುಡಕಟ್ಟಿನ ಜನ ಸಮುದಾಯಗಳನ್ನು “ಅಪರಾಧಿ ಬುಡಕಟ್ಟುಗಳೆಂದು” ಕರೆದರು. ಕಾರಣ ಇವರ ಜೀವನೋಪಾಯದ ವೃತ್ತಿ ಅಪರಾಧವಾಗಿರುವುದರಿಂದ. ಈ ಕಾಯಿದೆಯನ್ನು ಪುನಃ 1911 ಹಾಗೂ 1924 ರಲ್ಲಿ ಈ ಶಿರೋನಾಮವನ್ನು ರದ್ದುಪಡಿಸಲಾಯಿತು. 1949 ರಲ್ಲಿ ಭಾರತ ಸರ್ಕಾರದಲ್ಲಿ “ನೇಮಕವಾದ ಅಪರಾಧಿ ಬುಡಕಟ್ಟು ಕಾಯಿದೆ ವಿಚಾರಣೆ ಸಮಿತಿ” ಶಿಫಾರಸ್ಸಿನ ಅನ್ವಯ 1952ರಲ್ಲಿ ಅಪ್ರಕಟಿತ ಬುಡಕಟ್ಟುಗಳೆಂದು ಕರೆದರೂ ಆ ಸಮಯದಲ್ಲಿ ಭಾರತದಲ್ಲಿ 198 ಅಪ್ರಕಟಿತ ಬುಡಕಟ್ಟುಗಳು ಇದ್ದವು (ಡಾ.ವಿ.ಷಣ್ಮುಗಂ)

            ಈ ದೇಶದ ಮೂಲನಿವಾಸಿಗಳಾದ ಕೆಲ ಅಲೆಮಾರಿ ಬುಡಕಟ್ಟುಗಳು ಹಾಗೂ ಅಪ್ರಕಟಿತ ಬುಡಕಟ್ಟು ಜನಸಮುದಾಯಗಳು ಸಂವಿಧಾನದ ಸಂಪೂರ್ಣವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು 1935ರ ಕಾಯ್ದೆಯಡಿ 1936ರ ಆದೇಶದಂತೆ ಎರಡು ಸಮುದಾಯಗಳು ಘೋಷಣೆಯಾದವು. ಆದರೆ ಬುಡಕಟ್ಟು ಜನಾಂಗದ ದುರಂತವೆಂದರೆ, ಈ ಎರಡು ಪಟ್ಟಿಯಲ್ಲಿ ಸೇರ್ಪಡೆಯಾಗಲಿಲ್ಲ. ಅಂದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದಿಂದ ಹೊರಗುಳಿದರು. ಇದಕ್ಕೆ   ಕಾರಣವನ್ನು ನೋಡುವುದಾದರೆ 1931ರ ಜನಗಣತಿಯ ಆಯುಕ್ತರಾದ ಜೆ.ಹೆಚ್.ಹೂಟನ್‍ರವರಿಂದ ಬುಡಕಟ್ಟು ಜನಾಂಗದವರು ಭಾರತದಲ್ಲಿ ಕಷ್ಟದ ದಿನಗಳು ಕಳೆಯುವಂತೆಯಾಯಿತು. ಹೂಟನ್‍ರವರು ಕೆಲ ತಾಂತ್ರಿಕ ಕಾರಣಗಳಿಂದಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪಟ್ಟಿಯಿಂದ ಬುಡಕಟ್ಟು ಜನರನ್ನು ಕೈಬಿಟ್ಟಿದ್ದಾರೆ. ಈ ಜನಗಣತಿಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯನ್ನು ಗುರುತಿಸಲು 9 ಮಾನದಂಡಗಳು ಬಳಸಲಾಗಿತ್ತು. ಈ ಮಾನದಂಡಗಳ ಅಡಿಯಲ್ಲಿ ಇವರು ಅರ್ಹರಾಗಿಲಿಲ್ಲ ಹಾಗೂ ಪರಿಶಿಷ್ಟ ಪಂಗಡಗಳ ಮಾನದಂಡವಾದ ಸಾಂಸ್ಕೃತಿಕ ಮತ್ತು ಭೌಗೋಳಿಕ ಪ್ರತ್ಯೇಕತೆ, ಇದರ ಅಡಿಯಲ್ಲಿ ಪ್ರಾಚೀನ ಹಾಗೂ ಗುಡ್ಡ–ಗಾಡುಗಳಲ್ಲಿ ಇದ್ದ ಜನರು ಪರಿಶಿಷ್ಟ ಪಂಗಡವೆಂದು ಪಟ್ಟಿಯಲ್ಲಿ ಸೇರ್ಪಡೆಗೊಂಡರು. ಆದರೆ ಬಡತನದ ಜೀವನ ಅನುಭೋಗಿಸಿದ ಅಪ್ರಕಟಿತ ಬುಡಕಟ್ಟು ಜನಾಂಗದವರು ಈ ಎರಡು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿಲ್ಲ. ಕಾರಣವೆನೆಂದರೆ, ಧರ್ಮದ ಕಾಲಂ ನಲ್ಲಿ ಬುಡಕಟ್ಟು ಧರ್ಮವೆಂದು ಬರೆಯುವ ಬದಲು ಹಿಂದೂಗಳೆಂದು ನಮೂದಿಸಿದ್ದರಿಂದ 1931ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಂದ ದೂರಾದರು. ಹೀಗಾಗಿ ಕೆಲಬುಡಕಟ್ಟು ಜನಾಂಗ ಹಿಂದೂ ಧರ್ಮದ ಜಾತಿಯೂ ಅಲ್ಲದೆ; ಬುಡಕಟ್ಟುಗಳ ಧರ್ಮವೂ ಅಲ್ಲದೆ; ಈ ಎರಡು ಮಿಶ್ರಣಗಳ ಸಂಸ್ಕೃತಿಯ ಅಳವಡಿಕೆಯಿಂದ ಇವರನ್ನು ಹೂಟಿನ್ ಅವರು ಎರಡು ಪಟ್ಟಿಯಿಂದ ದೂರಿಟ್ಟರು. ಆದ್ದರಿಂದ ಇಂದಿಗೂ ಅವರು ಕಡುಬಡವರಾಗಿಯೇ ಜೀವನ ಸಾಗಿಸುವಂತಾಯಿತು. 1965 ನೇಮಕಗೊಂಡ ಲೋಕುರ್ ಸಮಿತಿಯು ಸಹ 1931 ರ ಜನಗಣತಿಯ ಮಾನದಂಡಗಳ ಅಳವಡಿಕೆಯಿಂದ ಇಂದಿಗೂ ಅವರು ಪರಿಶಿಷ್ಟ ಪಂಗಡಕ್ಕೆ ನೀಡಿದ ಸವಲತ್ತು ಪಡೆದುಕೊಳ್ಳುವುದಕ್ಕೆ ವಂಚಿತ ಬುಡಕಟ್ಟು ಸಮುದಾಯವಾಗಿದೆ.

ಆದಿವಾಸಿ ಬುಡಕಟ್ಟುಗಳ ಸೌಲಭ್ಯಕ್ಕಾಗಿ ಅಂಬೇಡ್ಕರ್ ರವರ ಹೋರಾಟ

            ಅಂಬೇಡ್ಕರ್‍ರವರು, ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನರ ಪರವಾಗಿ ಹಾಗೂ ಅವರ ಸ್ಥಾನಮಾನಕ್ಕಾಗಿ ಹಲವಾರು ಹೋರಾಟಗಳನ್ನು ರೂಪಿಸಿದ್ದರು. ಈ ಮೇಲಿನ ಜನಸಮುದಾಯಕ್ಕೆ ಅಧಿಕಾರ, ಹಕ್ಕು ಕೊಡಿಸುವುದೇ ಅಂಬೇಡ್ಕರವರ ಪರಮಗುರಿಯಾಗಿತ್ತು. ಬುಡಕಟ್ಟು ಜನಾಂಕ್ಕಾಗಿ ಮಾಡಿದ ಹೋರಾಟದ ಕೆಲ ಅಂಶಗಳನಿಟ್ಟುಕೊಂಡು ವಿಶ್ಲೇಷಣೆ ಮಾಡಲು ಪ್ರಯತ್ನಿಸಲಾಗಿದೆ.

1)         5-11-1928ರಲ್ಲಿ ಬಾಂಬೆ ಪ್ರಾಂತೀಯ ಸರ್ಕಾರವು ಸ್ಟಾರ್ಟೆ ಮುಂದಾಳತ್ವದಲ್ಲಿ ಸಮಿತಿಯನ್ನು ರಚಿಸಿತು. ಕಾರಣ, ಶೋಷಿತ ಹಾಗೂ ಆದಿವಾಸಿ ಬುಡಕಟ್ಟು ಸಮುದಾಯವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ, ಅವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಅವರ ಅಭಿವೃದ್ಧಿಗೆ ಕೆಲ ಶಿಫಾರಸ್ಸು ಮಾಡಬೇಕಿತ್ತು. ಆದ್ದರಿಂದ ಈ ಸಮಿತಿಯಲ್ಲಿ ಸೋಲಂಕಿ ಹಾಗೂ ಅಂಬೇಡ್ಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಿದರು. ಇವರು ಬಾಂಬೆ ಪ್ರಾಂತೀಯದಲ್ಲಿ ಬರುವ ಹಲವಾರು ಸ್ಥಳಗಳಿಗೆ ಭೇಟಿ ನೀಡಿ, ಸಮಸ್ಯೆಗಳ ಅಧ್ಯಯನ ಮಾಡಿ ಮಾರ್ಚ್ 1930ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯ ರಚನೆಯಲ್ಲಿ ಅಂಬೇಡ್ಕರ್‍ರವರು ಪ್ರಮುಖ ಪಾತ್ರವಹಿಸಿದ್ದರು. ಆದಿವಾಸಿ ಬುಡಕಟ್ಟು ಮಕ್ಕಳಿಗೆ ಸಾರ್ವಜನಿಕ ಶಾಲೆ, ಹಾಸ್ಟೆಲ್‍ಗಳು ತೆರೆಯುವುದು, ಶಿಷ್ಯವೇತನ ನೀಡುವುದು, ಕೈಗಾರಿಕಾ ತರಬೇತಿ ನೀಡಲು ವರದಿಯಲ್ಲಿ ಶಿಫಾರಸ್ಸಿನ ಪ್ರಮುಖ ಅಂಶಗಳಾಗಿದ್ದವು. ಗ್ರಾಮೀಣ ಸಹಕಾರ ಸಂಘಗಳಲ್ಲಿ ಪ್ರಾತಿನಿದ್ಯ ನೀಡುವುದು, ಪೋಲೀಸ್, ಸೈನ್ಯದ ಸೇವೆಯನ್ನು ನೇಮಕ ಮಾಡಿಕೊಳ್ಳಬೇಕು, ಜನರಿಗೆ ವಸತಿ ಸೌಲಭ್ಯ, ಬೀಳುಬಿದ್ದ ಸರ್ಕಾರದ ಭೂಮಿ ಬುಡಕಟ್ಟುಗಳಿಗೆ ಹಂಚಿಕೆ ಮಾಡುವುದು, ಶಿಫಾರಸ್ಸಿನ ನಮೂದಿಸಲಾಗಿತ್ತು. ಈ ವರದಿಯಿಂದ ಬಾಂಬೆ ಸರ್ಕಾರವು ಹಿಂದುಳಿದ ವರ್ಗಗಳ ಇಲಾಖೆಯನ್ನು ಸ್ಥಾಪಿಸಿತು.

2)         23-10-1928ರಲ್ಲಿ ಸೈಮನ್ ಆಯೋಗದ ಮುಂದೆ ಸಾಕ್ಷ್ಯಗಳನ್ನು ಸಲ್ಲಿಸುತ್ತಾ, ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳ  ಜನಸಮುದಾಯಕ್ಕೆ ಪುರುಷ ಹಾಗೂ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯನ್ನು ಸಲ್ಲಿಸುತ್ತಾರೆ. ತದನಂತರ ಬ್ರಿಟಿಷ್ ಸರ್ಕಾರ ದುಂಡುಮೇಜಿನ ಸಮ್ಮೇಳನಕ್ಕೆ ಆಹ್ವಾನ ನೀಡುತ್ತದೆ.

3)         14-10-1931ರಲ್ಲಿ ಎರಡನೇಯ ದುಂಡು ಮೇಜಿನಲ್ಲಿ ಪ್ರತಿ ವ್ಯಕ್ತಿ ಹಾಗೂ ಸಮುದಾಯಕ್ಕೆ ನಾಗರಿಕ ಜೀವನ ಅವಶ್ಯಕವಾಗಿದೆ. ಅರಣ್ಯವಾಸಿ ಬುಡಕಟ್ಟು ಜನಾಂಗವೂ ಸಹ ನಾಗರಿಕ ಜೀವನಕ್ಕೆ ಒಳಪಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂದು ಹೇಳುತ್ತಾರೆ.

4)         16-10-1933 ರಂದು ಸಂವಿಧಾನದ ಸುಧಾರಣ ಜಂಟಿ ಸಮಿತಿಯಲ್ಲಿ ಭಾರತದ ಸಂವಿಧಾನದಲ್ಲಿ ಬುಡಕಟ್ಟು ಜನರಿಗೆ ಹಕ್ಕುಗಳು ಹಾಗೂ ರಕ್ಷಣೆಯನ್ನು ನೀಡಬೇಕು ಮತ್ತು ಅವರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸುತ್ತಾರೆ. ಅಪರಾಧಿ ಬುಡಕಟ್ಟುಗಳಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂದು ಸೂಚಿಸುತ್ತಾರೆ.

5)         1935ರ ಭಾರತ ಸರ್ಕಾರದ ಕಾಯ್ದೆ ಅಡಿಯಲ್ಲಿ ಬುಡಕಟ್ಟುಗಳಿಗೆ ಬೇಕಾದ ಮತದಾನದ ಹಕ್ಕು, ಶಿಕ್ಷಣ, ಉದ್ಯೋಗ ಮೀಸಲಾತಿ, ರಾಜಕೀಯ ಮೀಸಲಾತಿ ದೊರಕುವಂತೆ ಮಾಡುತ್ತಾರೆ. ಅದರೊಂದಿಗೆ ಪ್ರತ್ಯೇಕಗೊಂಡ ಪ್ರದೇಶಗಳ ಅಭಿವೃದ್ಧಿಗೆ ಸೌಲಭ್ಯಗಳು ಲಭಿಸಿವಂತೆ ನೋಡಿಕೊಳ್ಳುತ್ತಾರೆ. ಅಂಬೇಡ್ಕರವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನದಲ್ಲಿ ಬುಡಕಟ್ಟು ಜನಾಂಗಕ್ಕೆ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಹಿತ ಕಾಪಾಡುವುದಕ್ಕೆ ಸಫಲರಾಗುತ್ತಾರೆ.

ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳ ಸ್ಥಾನ

            ಮನು ಸಂವಿಧಾನವು ಬುಡಕಟ್ಟುಗಳಿಗೆ ಅತಿ ಕ್ರೂರವಾದ ಕಾನೂನಗಳನ್ನು ರೂಪಿಸಿ ಅತ್ಯಂತ ಕೆಳಮಟ್ಟದ ಜೀವನ ಸಾಗಿಸುವಂತೆ ಮಾಡಿತು. ಮನು ಮತ್ತು ಮನುವಾದಿಗಳು ಬುಡಕಟ್ಟು ಜನರ ಆಸ್ತಿ, ಸಂಪತ್ತು, ಧಾರ್ಮಿಕ, ರಾಜಕೀಯ ಹಕ್ಕುಗಳನ್ನು ಕಿತ್ತುಕೊಂಡಿದ್ದರು. ಆದರೆ ಭಾರತ ದೇಶದ ಸಂವಿಧಾನದಲ್ಲಿ ಅಂಬೇಡ್ಕರವರು ಬುಡಕಟ್ಟು ಸಮುದಾಯದ ಜನರಿಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಹಕ್ಕುಗಳು ಲಭಿಸುವಂತೆ ರಚಿಸಿದ್ದಾರೆ.

            1950 ಜನವರಿ 26 ರಂದು ಜಾರಿಯಾದ ಸಂವಿಧಾನವು ಸಮಾಜದ ಎಲ್ಲಾ ಸಮುದಾಯಗಳಿಗೆ ಸಿಗಬೇಕಾಗಿದ್ದ ಹಾಗೂ ನಾಗರಿಕ ಜೀವನಕ್ಕೆ ಬೇಕಾದ ಎಲ್ಲಾ ಹಕ್ಕು ಹಾಗೂ ಪ್ರಗತಿ ಹೊಂದುವುದಕ್ಕೆ ಅವಶ್ಯಕವಾದ ಕಾನೂನಗಳನ್ನು ರೂಪಿಸಿದರು.

            ಶತಶತಮಾನಗಳಿಂದ ಶೋಷಣೆ ಅನುಭವಿಸುತ್ತಿದ್ದ ಹಾಗೂ ಅಸ್ಪೃಶ್ಯತೆ ಎನ್ನುವ ಕ್ರೂರವಾದ ವ್ಯವಸ್ಥೆಗೆ ಬಲಿಯಾಗಿದ್ದ; ಮೇಲ್ವರ್ಗದ ಮನೆಗಳಲ್ಲಿ ದುಡಿಯುತ್ತ ಅವರ ಸೇವೆಯೇ ಪರಮ ಧರ್ಮ ಎಂದು ತಿಳಿದುಕೊಂಡಿದ್ದ, ಅಪಮಾನ, ಹಾಗೂ ಕಡುಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ದೇಶದ ಮೂಲ ನಿವಾಸಿಗಳಾದ ಪರಿಶಿಷ್ಟ ಪಂಗಡಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಲು ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್‍ರವರು ಪರಿಹಾರಗಳನ್ನು ಕಲ್ಪಿಸಿದರು. 

            ಭಾರತದ ಎಲ್ಲಾ ಪ್ರಜೆಗಳಿಗೂ ಅನ್ವಯವಾಗುವಂತೆ, ಅನುಚ್ಛೇದ 12 ರಿಂದ 32ರವರೆಗೆ ಸಮಾನತೆ, ಸ್ವಾತಂತ್ರ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಾಗೂ ಕೆಲ ಸಂವಿಧಾನಾತ್ಮಕ ಪರಿಹಾರೋಪಯಗಳ ಹಕ್ಕನ್ನು ಸಂವಿಧಾನ ನೀಡಿತು. ಅನುಚ್ಛೇದ 36 ರಿಂದ 51ರವರೆಗೆ ರಾಜ್ಯನೀತಿಯ ನಿರ್ದೇಶಕ ತತ್ವಗಳನ್ನು ನೀಡಿತು.

            ವಿಧಿ-14- ಕಾನೂನಿನ ಮುಂದೆ ಸಮಾನತೆ.

            ವಿಧಿ-17 – ಅಸ್ಪೃಶ್ಯತೆ ನಿಷೇಧಿಸಲಾಗಿದೆ.

            ವಿಧಿ-16(4) ಅಡಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಶೇ. 7.5 ಮೀಸಲಾತಿ ಹಾಗೂ ಶಿಕ್ಷಣವನ್ನು ಪಡೆಯಲು ಶೈಕ್ಷಣಿಕ ಸಂಸ್ಥೆಯಲ್ಲಿ ಮೀಸಲಾತಿ ನೀಡಿದೆ.

            ವಿಧಿ-46- ಈ ವರ್ಗಗಳು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಲು ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬೇಕು.

            ಈ ಮೇಲಿನ ವಿಧಿಯ ನಿರ್ದೇಶನ ಮೇರೆಗೆ ಈ ವರ್ಗಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಬೇಕು. ಅದರ ಮುಖಾಂತರ ವಿವಿಧ ಕಾರ್ಯಕ್ರಮಗಳ ಹಾಗೂ ಅಭಿವೃದ್ದಿಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸೂಚಿಸಿದೆ.

            ವಿಧಿ – 244- ಅಡಿಯಲ್ಲಿ ಅನುಸೂಚಿತ ಪ್ರದೇಶಗಳ ಹಾಗೂ ಬುಡಕಟ್ಟು ಪ್ರದೇಶಗಳು ಸ್ವಯಂ ಆಡಳಿತವನ್ನು ಸಾಪಿಸಬಹುದಾಗಿದೆ.

            ವಿಧಿ-275- ಕೇಂದ್ರ ಸರ್ಕಾರವು ಸಂಸತ್ತಿನ ಕಾನೂನಿನ ಮೂಲಕ ಯಾವುದೆ ರಾಜ್ಯದ ಅನುಸೂಚಿತ ಬುಟಕಟ್ಟುಗಳ ಕಲ್ಯಾಣಕ್ಕಾಗಿ ಭಾರತದ ಸಂಚಿತ ನಿಧಿಯಿಂದ ಹಣವನ್ನು ಬಿಡುಗಡೆಗೊಳಿಸಬಹುದು., 

            ವಿಧಿ-330-ಲೋಕಸಭಾ ಸ್ಥಾನಗಳಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲು

            ವಿಧಿ – 332 – ರಾಜ್ಯಗಳ ವಿಧಾನಸಭಾ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಸಂಖ್ಯೆಗೆ ಅನುಗುಣವಾಗಿ ಸ್ಥಾನಗಳು ಮೀಸಲು

            ವಿಧಿ -338 - ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಹಿತರಕ್ಷಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ರಾಷ್ಟ್ರೀಯ ಮಟ್ಟದ ಆಯೋಗವನ್ನು ರಚಿಸಬೇಕು.

            ಹಿಂದುಳಿದ ಬುಡಕಟ್ಟುಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಭಾರತದ ಸಂವಿಧಾನ ಈ ಮೇಲಿನ ವಿಧಿಗಳ ಪ್ರಕಾರ ಸವಲತ್ತುಗಳನ್ನು ನೀಡಿದೆ. ಈ ಸಂವಿಧಾನದಿಂದಾಗಿ ಪರಿಶಿಷ್ಟ ಪಂಗಡದವರು, ಅಭಿವೃದ್ಧಿ ಸಾಧಿಸುತ್ತಿದ್ದಾರೆ ಎನ್ನುವುದನ್ನು ಈ ಕೆಳಗಿನ ಅಂಕಿ - ಸಂಖ್ಯೆಗಳೊಂದಿಗೆ ತಿಳಿದುಕೊಳ್ಳಬಹುದಾಗಿದೆ.

ಇತರೆ ಕೆಲ ಅಂಶಗಳನ್ನು ಕುರಿತು ಚರ್ಚೆ

            ಭಾರತದಲ್ಲಿ ಇಂದು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಪಾಲು 2011 ರಂತೆ ಶೇ.8.60 ಆಗಿದೆ. ಮನುಧರ್ಮವು ಬುಡಕಟ್ಟು ಜನಾಂಗದವರನ್ನು ಶಿಕ್ಷಣದಿಂದ ದೂರವಿಟ್ಟಿತ್ತು. ಆದರೆ ಸಂವಿಧಾನ ಅದನ್ನು ಕಲ್ಪಿಸಿಕೊಟ್ಟಿತ್ತು. ಆದ್ದರಿಂದ ಪರಿಶಿಷ್ಟ ಪಂಗಡ 2001ರಲ್ಲಿ ಸಾಕ್ಷರತೆ 47.10 ಶೇ ಇದ್ದು 2011ರ ವೇಳೆ 58.96ಕ್ಕೆ ಹೆಚ್ಚಿದೆ. ಆದರೆ ಒಟ್ಟು ಶಿಕ್ಷಣದ ಜೊತೆಗೆ ಹೋಲಿಕೆ ಮಾಡಿದಾಗ, 2001ರಲ್ಲಿ ಒಟ್ಟು 64.84 ಶೇ ಇದ್ದಿದ್ದು 2011 ರ ವೇಳೆ 72.99ಕ್ಕೆ ಹೆಚ್ಚಿದೆ. ಪರಿಶಿಷ್ಟ ಪಂಗಡದ ಸಾಕ್ಷರತೆಯ ಪ್ರಮಾಣ ಕಡಿಮೆ ಇರುವುದು ಕಂಡು ಬರುತ್ತದೆ. ಪರಿಶಿಷ್ಟ ಪಂಗಡದ ಬಡತನ ಪ್ರಮಾಣ ನೋಡುವುದಾದರೆ 2011-12ರಂತೆ ಗ್ರಾಮೀಣ, 45.30 ಶೇ, ನಗರ 24.10 ಶೇ ಇದ್ದು ಒಟ್ಟು ಬಡತನದ ಪ್ರಮಾಣ ಕೇವಲ 25.70 ಶೇ ಗ್ರಾಮೀಣ ಪ್ರದೇಶವಾದರೆ ನಗರ ಕೇವಲ 13.70 ಶೇ. ವಾಗಿದೆ ಅಂದರೆ ಪರಿಶಿಷ್ಟ ಪಂಗಡಗಳ ಬಡತನ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತದೆ.

ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಮಹಾರಾಷ್ಟ್ರದ ವಿರುದ್ಧ ಕೈಲಾಸ್‍ರವರ ಅರ್ಜಿ ಸಂಖ್ಯೆ: 10375/2010, ಇದರ ಮೇಲಿನ ತೀರ್ಪು ಈ ರೀತಿಯಾಗಿದೆ. ಭಾರತದ ಆದಿವಾಸಿಗಳನ್ನು ಬುಡಕಟ್ಟು ಜನರಿಗಾದ ಅನ್ಯಾಯ ಹಾಗೂ ಅವರನ್ನು ರಾಕ್ಷಸರು, ಅಸುರರು ಹಾಗೂ ಬೇರೆ ಬೇರೆ ಹೆಸರಿನಿಂದ ನಿಂದಿಸಿದ್ದು ದೇಶದ ಇತಿಹಾಸದಲ್ಲಿ ನಾಚಿಕೆಯ ಅಧ್ಯಯನವಾಗಿದೆ ಎಂದು ಬೈದಿದೆ. ಆದಿವಾಸಿ ಬುಡಕಟ್ಟು ಜನರನ್ನು ಅವನತಿಗೊಳಿಸಿ ಅವಮಾನ ಮಾಡಿದ್ದಾರೆ. ಅವರು ಹಲವಾರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಹಾಗೂ ಅವರ ಭೂಮಿಗಳನ್ನು ಕಿತ್ತುಕೊಂಡು ದೇಶಾಂತರ ಕಾಡುಗಳಲ್ಲಿ ಜೀವಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಬಡತನ, ಅಪೌಷ್ಠಿಕತೆ, ಶಿಕ್ಷಣ ಹಾಗೂ ಹಲವಾರು ರೋಗಗಳಿಂದ ಬಳಲುವಂತಾಗಿದ್ದಾರೆ.  ಇಂದು ಅವರ ಬೆಟ್ಟಗುಡ್ಡಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಮಹಾಭಾರತದಲ್ಲಿ ಚಿತ್ರಿತವಾಗಿರುವ ಏಕಲವ್ಯನು ಕೆಳಜಾತಿ ಸೇರಿರುವುದರಿಂದ ವಿದ್ಯೆಯನ್ನೇ ಹೇಳಿಕೊಡದ ದ್ರೋಣ ಗುರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯುತ್ತಾರೆ. ಇಂದು ದ್ರೋಣಾಚಾರ್ಯನ ಹೆಸರಿನಲ್ಲಿ ಕ್ರೀಡಾ ತರಬೇತಿದಾರರಿಗೆ ನೀಡುವ ಒಂದು ಅತ್ಯುತ್ತಮವಾದ ಪ್ರಶಸ್ತಿಯಾಗಿದೆ. ಇದು ಯೋಗ್ಯವಲ್ಲದ ಪ್ರಶಸ್ತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮಾಡಿದ ಅವಮಾನವಾಗಿದೆ ಎಂದು ಕೋರ್ಟ್ ಟೀಕಿಸಿದೆ.

ಸಮಾರೋಪ ಮತ್ತು ಸಲಹೆಗಳು 

            ಈ ಮೇಲಿನ ವಿಶ್ಲೇಷಣೆಯಿಂದ ಹೊರಬರುವ ಅಂಶವೆಂದರೆ, ಬುಡಕಟ್ಟು ಸಮುದಾಯಗಳು ಕಾಡು–ಮೇಡುಗಳಲ್ಲಿ ವಾಸಿಸುವುದಕ್ಕೆ; ಬಡತನದಿಂದ ಬಳಲುವುದಕ್ಕೆ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಗೆ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಹಿನರಾಗಿವುದಕ್ಕೆ ವೈದಿಕ ಮನು ಹಾಗೂ ಆರ್ಯರೆ ಮೂಲಕಾರಣರಾಗಿದ್ದಾರೆ. ಬುಡಕಟ್ಟು ಸಮುದಾಯಗಳ ಪ್ರತಿಹಕ್ಕುಗಳನ್ನು ಕಿತ್ತುಕೊಂಡು ಅವರು ಮೂಢನಂಬಿಕೆಗಳಲ್ಲಿ ಜೀವಿಸುವಂತೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಅಂಬೇಡ್ಕರವರು ಅವರ ಪರವಾಗಿ ಹೋರಾಡದಿದ್ದರೆ ಹಾಗೂ ಸಂವಿಧಾನ ರಚನೆ ಮಾಡದಿದ್ದರೆ ಬುಡಕಟ್ಟು ಸಮುದಾಯದ ಅಭಿವೃದ್ಧಿ ಊಹಿಸಲು ಸಾಧ್ಯವಿಲ್ಲ. ಅವರ ಅಭಿವೃದ್ಧಿಯಲ್ಲಿ ಅಂಬೇಡ್ಕರ್‍ರವರು ಪ್ರಮುಖ ಪಾತ್ರವಹಿಸಿದ್ದಾರೆ. ಬುಡಕಟ್ಟು ಸಮುದಾಯಗಳು ಕಷ್ಟಕಾರ್ಪಣ್ಯಗಳಿಂದ ಹೊರಬರಬೇಕಾದರೆ ಈ ಕೆಳಗಿನ ಸಲಹೆಗಳು ಪ್ರಮುಖವಾಗಿವೆ.

ಬುಡಕಟ್ಟು ಜನಸಮುದಾಯಗಳು ಹೆಚ್ಚು ಶಿಕ್ಷಣವನ್ನು ಪಡೆದುಕೊಳ್ಳಬೇಕು, ಹಿಂದುಳಿದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಒಂದಾಗುವುದರ ಮೂಲಕ ರಾಜಕೀಯ ಅಧಿಕಾರ ಹಿಡಿದುಕೊಳ್ಳಬೇಕು. ಹಿಂದೂ ಧರ್ಮದ ಅನಿಷ್ಟ ಹಾಗೂ ಮೂಢನಂಬಿಕೆಗಳು, ದೇವರ ಪೂಜೆ, ಇತ್ಯಾದಿಗಳನ್ನು ಕೈ ಬಿಡಬೇಕು. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಆದಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಾಧ್ಯ.  

ಆಧಾರ ಗ್ರಂಥಗಳು                

  1. ಡಾ.ಅಂಬೇಡ್ಕರ್‍ರವರ ಬರೆಹಗಳು ಮತ್ತು ಭಾಷಣಗಳು  ಸಂಪುಟ 1 ರಿಂದ 22ರವರೆಗೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು. 2015.
  2. ಶಿವರಾಂ ಎನ್.ಆರ್., “ಭಾರತದ ಸಂವಿಧಾನ”. ಜೈಭೀಮ್ ಪ್ರಕಾಶನ, ಹಾಸನ. 2012.
  3. ಸಂಜೀವಕುಮಾರ ಮು.ಪೋತೆ, “ಮೀಸಲಾತಿ ಮತ್ತು ಆರ್ಥಿಕ ಅಭಿವೃದ್ಧಿ”, ಪೃಥ್ವಿ ಪ್ರಕಾಶನ, ಮೈಸೂರು. 2018.
  4. Vijay Mankar , Dr. B.R. Ambedkar. A Chronology, Blue World Series, Nagpur. 2013. 
  5. Minifesto of Justice, Rights, Planning and Movement of the Deno Tified & Nomadic Tribes, AIMSCS – Blue World Series, Nagapur.  2013.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal