Tumbe Group of International Journals

Full Text


ಕುವೆಂಪು:ಒಂದಿಷ್ಟು ವಿಚಾರಗಳು

ಡಾ.ಪ್ರೇಮಪಲ್ಲವಿ ಸಿ.ಬಿ.,

ಕನ್ನಡ ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ.

ಮೊ:9448815777, email: palvisahithya14@gmail.com

ಸಾರಲೇಖ

ಆಧುನಿಕ ಕನ್ನಡ ಸಾಹಿತ್ಯದ ಜಾಗೃತ ಪ್ರಜ್ಞೆಯ ರೂಪಕ ಕುವೆಂಪು. ಪ್ರತಿಭೆಯಲ್ಲಿ ಸಾಹಿತ್ಯ ನಿರ್ಮಿತಿಯಲ್ಲಿ ಅವರಿಗೆ ಹೋಲಿಕೆಯೇ ಇಲ್ಲ. ಮಲೆನಾಡಿನ ಅಪ್ರತಿಷ್ಠ ಸಾಮಾಜಿಕ ನೆಲೆಯಿಂದ ಹುಟ್ಟಿಬಂದ ಆ ಮಲೆನಾಡಿನ ಪರ್ವತಾರಣ್ಯ ಚೈತನ್ಯದ ಮೊದಲ ಪ್ರತಿನಿಧಿ ಎಂಬಂತೆ ತೋರುವ ಕವಿ. ಹೊಸಗನ್ನಡ ಸಾಹಿತ್ಯದ ಹರಿಕಾರ. ಕನ್ನಡ ನವೋದಯ ಶಿಖರ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಶಬ್ದಬ್ರಹ್ಮ.

ಮಲೆನಾಡು ಮತ್ತು ಅದರೊಟ್ಟಿಗೆ ಸೃಜಿಸಿದ ಕಾವ್ಯ ಇವೆರೆಡು ಕವಿಗೆ ಅಚ್ಚು-ಮೆಚ್ಚು. `ಮಲೆನಾಡೆನಗೆ ತಾಯಿಮನೆ, ಕಾಡುದೇವರ ಬೀಡು` ನಾನು ಮಲೆನಾಡಿಗನು. ಮಲೆನಾಡಮ್ಮನ ಹೊಟ್ಟೆಯಲ್ಲಿ ಹುಟ್ಟಿ, ಮಡಿಲಲ್ಲಿ ಬೆಳೆದು, ತೊಡೆಯ ಮೇಲೆ ನಲಿದು, ಆ ತಾಯಿಯ ಮೊಲೆಯ ಹಾಲು ಕುಡಿದು ಬೆಳೆದು ಬಂದವನು ಎಂದೇಳುತ್ತಾ ತಮ್ಮನ್ನು ತಾವೇ ಕಾಡಿನ ಕವಿ ಎಂದು ಕರೆದುಕೊಳ್ಳುತ್ತಾರೆ. `ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು`(ಕೊಳಲು) ಎಂಬುದು ಅವರ ಭಿನ್ನಹ. ಅವರ ಶಿಷ್ಯರಾದ ಜಿ.ಎಸ್.ಎಸ್. ಹೇಳುವಂತೆ  `ಸಹ್ಯಾದ್ರಿಯ ಪರ್ವತಾರಣ್ಯ ಪ್ರಪಂಚವೇ ತನ್ನ ಅಭಿವ್ಯಕ್ತಿಗಾಗಿ ಕುವೆಂಪು ಅವರಂಥ ಕವಿಯನ್ನು ಸೃಷ್ಟಿಸಿತೋ ಏನೋ` ಎನ್ನುವ ಮಾತು ಕವಿಗಿರುವ ಮಲೆನಾಡಿನ ಪ್ರೀತಿ ಕಂಡಾಗ ನಿಜವೆನಿಸುತ್ತದೆ.(ಕುವೆಂಪು ಸಮಗ್ರ ಸಂಪುಟ;ಜಿ.ಎಸ್.ಎಸ್.)

ಪ್ರಕೃತಿಯಲ್ಲಿ ದೇವರನ್ನು ಕಂಡು ಆರಾಧಿಸಿದ್ದಕ್ಕೆ ಅವರಿಗೆ ಒಲಿದದ್ದು ಆ ತಾಯಿನೆಲದ ಬಗೆಗೇ ಬರೆಯುವಂತಹ ಅದ್ಭುತ ಬರವಣಿಗಾ ಶಕ್ತಿ. ಮಲೆನಾಡಿನಂತೆ ತನ್ನ ಕಾವ್ಯದೊಡತಿಯ ಬಗೆಗೆ ಕವಿಗೆ ಅದಮ್ಯ ಪ್ರೇಮ. ಕೃತಜ್ಞತಾ ಭಾವ. ಸಾಹಿತ್ಯ ಎನ್ನುವುದು ಕೇವಲ ಅಧ್ಯಯನ ವಸ್ತವಲ್ಲ. ಕಾವ್ಯ ರಚನೆಗೆ ಮನೋಲ್ಲಾಸದ ಕ್ರೀಡೆ ಮಾತ್ರವಾಗದೆ ಅವರಿಗೆ ವ್ಯಕ್ತಿತ್ವ ಪ್ರಧಾನ ಮಾಡಿದ ಪ್ರಬಲ ಶಕ್ತಿ.

ತಿರುಕನಂತೆ ತಿರುಪೆ ಬೇಡಿ

ತಿರುಗುತ್ತಿದ್ದೆನು

ಉರಿವ ಮರುಳುಕಾಡಿನಲ್ಲಿ

ಗಂಗೆ ಹುಟ್ಟಿ ಹರಿಯುವಂತೆ,

ಕಣ್ಣನಿರಿವ ಕತ್ತಲಲ್ಲಿ

ಮಿಂಚು ಮೂಡಿ ನಿಲ್ಲುವಂತೆ,

ಬಿಸಿಲಿನಿಂದ ಬೆಂದ ಎದೆಗೆ

ತಂಪುಗಾಳಿ ಬೀಸುವಂತೆ

ಬಂದೆ, ರಮಣಿಯೇ|

ನಿನ್ನ ಸಂಗದಿಂದ ತಿರುಕ

ರಾಜನಾದನು|

ತನ್ನ ಹಿರಿಮೆಗೆ ಕಾರಣ ಈ ಕಾವ್ಯ ರಮಣಿ ಎಂದೇಳುವ ಮಾತುಗಳೇ ಕವಿಯ ವಂದನಾಪೂರ್ವಕ ಮನಸ್ಸಿಗೆ ಸಾಕ್ಷಿ. ಇಂತಹ ಮೇರು ಕವಿಯನ್ನು ಓದುವುದೇ ಒಂದು ಭಾಗ್ಯ. ಆ ಓದುವಿಕೆಯಿಂದ ದೊರೆತ ಸಣ್ಣಮಟ್ಟದ ಅರಿವಿನಿಂದ ಅವರ ಬಗೆಗೆ ಒಂದಿಷ್ಟು ವಿಷಯಗಳನ್ನು ಪ್ರಸ್ತಾಪಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

ಅಧ್ಯಯನದ ಉದ್ದೇಶ ಮತ್ತು ವೈಧಾನಿಕತೆ:

ಕುವೆಂಪು ಅವರ ಸಾಹಿತ್ಯವನ್ನು ಇಡಿಯಾಗಿ ಅಧ್ಯಯನ ಮಾಡುವುದು ಮತ್ತು ಅವುಗಳಲ್ಲಿ ವಿಶಿಷ್ಟ ಹಾಗೂ ಸೂಕ್ಷ್ಮ ವಿಚಾರಗಳನ್ನು ತಿಳಿಯುವುದು. ಆದರೆ ಇಡಿಯಾಗಿ ಎಂದಾಗ ಸಂಪೂರ್ಣ ಎಂದರ್ಥವಾಗುತ್ತದೆ. ಕುವೆಂಪು ಅವರ ಸಾಹಿತ್ಯದ ಓದುವಿಕೆಯನ್ನು ಇನ್ನೂ ಉಳಿಸಿಕೊಂಡೇ ನಾ ಓದಿದ ಗ್ರಹಿಕೆಯಲ್ಲಿ ಕುವೆಂಪು ಅವರ ವ್ಯಕ್ತಿತ್ವ ಜೀವನ, ಸಾಹಿತ್ಯ ರಚಿಸುವಲ್ಲಿ ಅವರಿಗಿದ್ದ ಸಾಮಾಜಿಕ ಒತ್ತಡಗಳೆಂತಹವು. ಅವರು ನೋಡಿದ ಕೇಳಿದ ಅನುಭವಿಸಿದ ವಿಚಾರಗಳೇ ಬರಹದ ರೂಪ ತಾಳುತ್ತವೆಯಾ? ಅವರ ಗುಣ ವ್ಯಕ್ತಿತ್ವಗಳು ಅವರು ಸೃಷ್ಟಿಸಿರುವ ಪಾತ್ರಗಳಲ್ಲಿ ಇಣುಕಿವೆಯಾ? ಹೀಗೆ ನಾನಾ ಅನುಮಾನ ಮತ್ತು ಕುತೂಹಲಗಳಿಂದ ಕುವೆಂಪು ಅವರ ಬರಹವನ್ನು ಅಧ್ಯಯನ ಮಾಡಿದ್ದೇನೆ. ಅವರ ಬರಹಗಳನ್ನು ಓದುವ ಮತ್ತು ಅವರ ಸಾಹಿತ್ಯದ ಬಗೆಗೆ ಬಂದಿರುವ ವಿಮರ್ಶೆಗಳನ್ನು ಅಭ್ಯಸಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದು, ತದನಂತರದಲ್ಲಿ ನನ್ನದೇ ಅಭಿಪ್ರಾಯದ ಹಿನ್ನಲೆಯಲ್ಲಿ ಕೆಲ ವಿಚಾರಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.

ಕುವೆಂಪು ಅವರ ವ್ಯಕಿತ್ವ ಮತ್ತು ಸಾಹಿತ್ಯ ವಿಚಾರಗಳ ವಿಶ್ಲೇಷಣೆ:

ಹೋರಾಟದ ಮನೋಭಾವ:

ಕುವೆಂಪು ಕಾವ್ಯಗಳಲ್ಲಿ ಹೋರಾಟದ ಮನೋಭಾವ ಎರಡು ನೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ.

1.ರಾಷ್ಟ್ರೀಯತೆಯ ಧಾರೆ,     2.ಸಾಮಾಜಿಕ ಅಸಮಾನತೆಯ ವಿರುದ್ಧದ ಧ್ವನಿ.

1. ರಾಷ್ಟ್ರೀಯತೆಯ ಧಾರೆ: ರಾಷ್ಟ್ರೀಯತೆಯ ಪರಿಕಲ್ಪನೆಯೇ ಸಮಾಜದಲ್ಲಿ ಕೆಲವು ಆಶಯಗಳನ್ನು ರೂಪಿಸುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು. `ಅನ್ಯಶಕ್ತಿಯ ಆಕ್ರಮಣದ ವಿರುದ್ಧ ಸಮಾಜ ಒಗ್ಗೂಡಬೇಕೆಂಬ ಆದರ್ಶ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಹೋರಾಡಬೇಕೆಂಬ ನಿಲುವು`. ನವೋದಯ ಸಂದರ್ಭದ ಕವಿಗಳು ಈ ಶ್ರೇಣಿಕರಣ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸೌಮ್ಯವಾದಿಗಳಾಗಿದ್ದರು. ಏಕೆಂದರೆ ಇಂಥ ಹೋರಾಟಗಳು ನಾಡಿನ ಏಕತೆಗೆ ಭಂಗ ತರುವ ಸಾಧ್ಯತೆಯಿರುತ್ತದೆ. ಹೀಗಾಗಿಯೇ ಜಾತಿ ಪದ್ಧತಿಯ ವಿರುದ್ಧ ಆಗಿನ ಕವಿಗಳರ್ಯಾರು ಉಗ್ರಧನಿಯೆತ್ತಲಿಲ್ಲ. ಅವರೆಲ್ಲರೂ ಒಂದು ರೀತಿಯ ಉದಾರ ಮಾನವತಾವಾದದ ಪ್ರತಿಪಾದಕರಂತೆ ಅಸಮ್ಮತಿ ವ್ಯಕ್ತಪಡಿಸಿದರು. ಆದರೆ ಕುವೆಂಪು ಮಾತ್ರ ಇದಾವುದನ್ನೂ ಲೆಕ್ಕಿಸದೇ ಕಾವ್ಯದ ಮೂಲಕವೇ ಉಗ್ರ ಪ್ರತಿಭಟನೆಗೈಯುತ್ತಿದ್ದರು.

ನಡೆಮುಂದೆ ನಡೆಮುಂದೆ

ನುಗ್ಗಿ ನಡೆ ಮುಂದೆ

ಜಗ್ಗದೆಯೆ ಕುಗ್ಗದೆಯೆ

ಹಿಗ್ಗಿ ನಡೆಮುಂದೆ ಎನ್ನುತ್ತಾ ಕೊನೆಯಲ್ಲಿ

ನಾಳೆ ನಾನಳಿವೆ ನೀನಳಿವೆ

ನಮ್ಮೆಲುಬುಗಳ ಮೇಲೆ

ಮೂಡುವುದು ಮೂಡುವುದು

ನವಭಾರತದ ಲೀಲೆ (ಪಾಂಚಜನ್ಯ)

ನವಭಾರತದ ನಿರ್ಮಾಣದ ಕನಸು. ಅದಕ್ಕಾಗಿ ಯುವಕರಲ್ಲಿ ಹೊಸ ಆಲೋಚನೆಗಳನ್ನು ತುಂಬಿ ಸಿದ್ಧಗೊಳಿಸಬೇಕೆಂಬ  ತುಡಿತದ ಹೇಳಿಕೆ.

ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ಕೀಳಾಗಿ ಕಾಣುವ ಪ್ರತ್ಯೇಕತಾವಾದಿ ಮನಸ್ಥಿತಿಯೇ ಭಾರತೀಯ ಚೇತನದ ಅಧೋಗತಿಗೆ ಕಾರಣ. ಈ ಪ್ರತ್ಯೇಕತಾವಾದಿತನ ಮನುಷ್ಯನ ಸಂತಸ ಮತ್ತು ಉತ್ಸಾಹದ ಚೇತನವನ್ನೇ ಕೊಂದುಹಾಕುತ್ತದೆ. ಇದರ ವಿರುದ್ಧ ನಿರಂತರ ಹೋರಾಟ ಅಗತ್ಯ ಎಂದೇಳುತ್ತಾ,

ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ

ಬರುತಲಿದೆ ಹೊಸದೃಷ್ಠಿ ಹೊಸ ಬಯಕೆಗಳಲಿ

ಹೋಗುತಿದೆ ಹಳೆಬಾಳು, ಹೊಸಬಾಳು ಬರುತಲಿದೆ

ಬರುತಲಿದೆ ಕುದಿಗೊಂಡ ತರುಣರೆದೆಗಳಲಿ

ತರುಣರಿರ ಎದ್ದೇಳಿ! ಎಚ್ಚರಗೊಳ್ಳಿ! ಕೇಳಿ! (ತರುಣರಿರ ಎದ್ದೇಳಿ)

ಎನ್ನುವ ಕರೆಯಲ್ಲಿ ತರುಣ ಜನಾಂಗ ಜಾಗೃತಗೊಳ್ಳಬೇಕು. ಹಾಗೆ ಜಾಗೃತಗೊಳ್ಳಲು ಸಂಘಟಿತರಾಗಿ ಸೇರಿ ನಡಿಯಿರಿ. ಆಗ ನಿಮ್ಮನ್ನು ತಡೆಯುವವರಾರು ಇರುವುದಿಲ್ಲ. ಎಚ್ಚರಗೊಂಡು ಸಿದ್ಧರಾಗಿ ಎಂಬುದು ಕವಿಯ ಆಗ್ರಹ. ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟದ ಛಾಯೆ ಕುವೆಂಪು ಮಾತುಗಳಲ್ಲೂ ಕಾಣಿಸುತ್ತಿದೆ. ತರುಣರೇ ಈ ಜಗದ ಚೇತನರು ಅವರಿಂದಲೇ ಬದಲಾವಣೆ ಎನ್ನುವ ಅದಮ್ಯ ನಂಬಿಕೆ ಈ ಇಬ್ಬರು ದಿಗ್ಗಜರಿಗೆ.

ಸಾಮಾಜಿಕ ಅಸಮಾನತೆ:

ನಮ್ಮ ಪರಂಪರೆಯಲ್ಲಿ ಶತಮಾನಗಳಿಂದ ಮನುಷ್ಯನ ಸೃಜನಶೀಲತೆಯನ್ನು ಹೊಸಕಿಹಾಕಿ ಆತನ ಕಲ್ಪನಾಶಕ್ತಿಯನ್ನೇ ನಿರ್ನಾಮ ಮಾಡಿದ್ದ ಜಾತಿಪದ್ಧತಿ, ಮೌಢ್ಯ, ಕಂದಾಚಾರ ಇವುಗಳ ವಿರುದ್ಧ ಸಿಡಿದು ನಿಲ್ಲುವ ಮನೋಭಾವ ಕವಿಯದು. ಕುವೆಂಪು ಆ ಕಾಲದ ನವೋದಯ ಲೇಖಕರಿಗಿಂತ ಭಿನ್ನವಾಗಿ ವಿಶಿಷ್ಟವೆನಿಸುವುದು ಈ ನೆಲೆಯಲ್ಲಿಯೇ.

ನೂರು ದೇವರನೆಲ್ಲ ನೂಕಾಚೆ ದೂರ

ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ (ಇಂದಿನ ದೇವರು)

ದೇವರ ಕಲ್ಪನೆ ಪಡೆದುಕೊಳ್ಳುವ ರೂಪಾಂತರ ಮತ್ತು ಧಾರ್ಮಿಕ ನೆಲೆಯ ಗ್ರಹಿಕೆ ಸಾಮಾಜಿಕ ನೆಲೆಗೆ ಸ್ಥಿತ್ಯಾಂತರಗೊಂಡ ಪರಿಯಿದು.

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು

ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು

ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು

ದಾಸರನು ಪೂಜಿಸಿಯೇ ದಾಸ್ಯವಾಯ್ತು

 

ಗುಡಿಯೋಳಗೆ ಕಣ್‍ಮುಚ್ಚಿ ಬೆಚ್ಚಗಿರುವರನೆಲ್ಲ

ಭಕ್ತರಕ್ತವ ಹೀರಿ ಕೊಬ್ಬಿಹರನೆಲ್ಲ

ಗಂಟೆ ಜಾಗಟೆಗಳಿಂ ಬಡಿದು, ಕುತ್ತಿಗೆ ಹಿಡಿದು

ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು

 

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು

ಜೀವದಾತೆಯನಿಂದು ಕೂಗಬೇಕು|

ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು

ಚಳಿಯ ಮಳೆಯಲಿ ನೆನವ ತಾಯ್ಗೆ ಹಾಕು   (ಇಂದಿನ ದೇವರು)

ಇಡೀ ಕವಿತೆ ಸಂಪ್ರದಾಯ ವಿರೋಧಿ ನಿಲುವಿನಿಂದ ರೂಪುಗೊಂಡಿದೆ. ನಾವು ದೇವರೆಂದು ನಂಬಿ ಪೂಜಿಸಿಕೊಂಡು ಬಂದಿರುವ ಕ್ರಮದಿಂದ ಯಾವ ಬಗೆಯ ಪ್ರಗತಿಯೂ ಸಾಧ್ಯವಿಲ್ಲ. ದೇವರು ಒಂದು ಬಗೆಯ ವ್ಯವಸ್ಥೆಯಾಗಿ ಶೋಷಣೆಗೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಸಂಪ್ರದಾಯದ ದೇವರ ಕಲ್ಪನೆಯನ್ನು ನಿರಾಕರಿಸಿ ದೂರ ನೂಕಿ, ರಾಷ್ಟ್ರ, ದೇಶ, ನಾಡು, ನುಡಿ , ಮಾನವೀಯತೆಯನ್ನು ಆ ಸ್ಥಾನದಲ್ಲಿ ಕಾಣು ಎನ್ನುವ ಧೋರಣೆ ಕವಿಯದು.

ವೈಜ್ಞಾನಿಕ ಮನೋಭಾವ:

ಕುವೆಂಪು ವೈಜ್ಞಾನಿಕ ಮನೋಭಾವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾರೆ. ಬಡತನ, ಮೌಢ್ಯ ಪ್ರಗತಿ, ವೈಜ್ಞಾನಿಕ ಮನೋಭಾವ ಇವುಗಳು ಒಂದಕ್ಕೊಂದು ಸಂಬಂಧವುಳ್ಳಂಥವೆಂಬುದು ಕುವೆಂಪು ನಂಬಿಕೆ.

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟು ಕೀಳಬನ್ನಿ

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸೋದರರೇ, ಬೇಗ ಬನ್ನಿ

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕಹಿತಕೆ

ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜಮತಕೆ

ಓ ಬನ್ನಿ ಸೋದರರೆ ವಿಶ್ವಪಥಕೆ  (ಓ ಬನ್ನಿ ಸೋದರರೆ ಬೇಗ ಬನ್ನಿ)

ಎನ್ನುವಲ್ಲಿ ಮನುಜಮತ-ವಿಶ್ವಪಥ ಪರಿಕಲ್ಪನೆ ಕುವೆಂಪು ಪ್ರತಿಪಾಸಿದ ಬಹುಮುಖ್ಯ ತಾತ್ವಿಕ ನಿಲುವು. ಅವರ ಸಾಮಾಜಿಕ ಸಂಘರ್ಷ ಬಹುಪಾಲು ರೂಪಗೊಂಡಿರುವುದು ವರ್ಣವ್ಯವಸ್ಥೆಯ ವಿರೋಧದಲ್ಲಿ. ಮತ್ತು ಭಾರತೀಯ ಸಮಾಜದಲ್ಲಿನ ಶ್ರೇಣಿಕರಣ ವ್ಯವಸ್ಥೆಯ ವಿರುದ್ಧ.

ಕುವೆಂಪು ಅವರದು ಸಮಾಜವಾದಿ ನಿಲುವಿನ ಘೋಷಣೆ. `ಸರ್ವರಿಗೂ ಸಮಬಾಳು| ಸರ್ವರಿಗೆ ಸಮಪಾಲು` ಎಂಬ ನವಯುಗವಾಣಿಯ ಘೋಷಣೆ. ಇದು ಅವರ ನವಭಾರತದ ಹೊಸಬಾಳಿನ ಸಾರ. ಇಲ್ಲಿ ಅವರು ಸ್ಪಷ್ಟವಾಗಿ ಶೋಷಿತರ ಪರವಾಗಿ ನಿಂತು ಬದಲಾವಣೆಗೆ ಕರೆಕೊಡುತ್ತಾರೆ.

ಯುಗಯುಗದ ದಾರಿದ್ರ್ಯಭಾರದಿಂ ಬೆನ್ ಬಾಗಿ

ಗೋಳಿಡುವ ಬಡಜನರೇ, ಏಳಿರೈ ಏಳಿ!

ಶ್ರೀಮಂತರಡಿಗಳಡಿ ಹುಡಿಯಲ್ಲಿ ಹೊರಳಾಡಿ

ಕುಸಿದು ಕುಗ್ಗಿದವರೆಲ್ಲ ಸಂತಸವ ತಾಳಿ  (ಹೊಸಬಾಳಿನ ಗೀತೆ)

ಶೋಷಣೆಗೆ ಒಳಗಾಗಿರುವ ಜನರು ಜಾಗೃತರಾಗಬೇಕು. ಕ್ರಾಂತಿಕಾಳಿ ಬರುತ್ತಿದ್ದಾಳೆ. ಬದಲಾವಣೆಯ ಗಾಳಿ ಬಿಸುತ್ತಿದೆ; ಈಗ ತುಳಿತಕ್ಕೊಳಗಾದ ಜನ ಎಚ್ಚತ್ತುಕೊಂಡರೆ ಜಡಗೊಂಡ ಈ ಸಮಾಜದಲ್ಲಿ ಚಲನೆಯುಂಟಾಗುತ್ತದೆ. ಅದಕ್ಕಾಗಿ ಕವಿ ಉತ್ಸಾಹ ತುಂಬಲು ಪ್ರಯತ್ನಿಸುತ್ತಾರೆ. ಎಚ್ಚರದ ಪ್ರಜ್ಞೆಯಾಗಿ ತಿವಿಯುತ್ತಾರೆ. ಜಡಗೊಂಡ ಸಮಾಜಕ್ಕೆ ಚಲನೆಯ ಕರೆಕೊಡುವ ಇಲ್ಲಿನ ಕವಿತೆ ಸಾಮಾಜಿಕ ಸುಧಾರಕನಾಗಿ ಮತ್ತು ಸಮಾಜದ ಬದಲಾವಣೆಯ ಹರಿಕಾರನಾಗಿ ಪಾತ್ರ ವಹಿಸುತ್ತದೆ.

ಪ್ರಭುತ್ವ ಮತ್ತು ಪುರೋಹಿತಶಾಹಿ:

ಇವುಗಳೆರಡು ಕೆಳವರ್ಗದವರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಇವುಗಳನ್ನು ವಿರೋಧಿಸಿದರೆ ಮಾತ್ರ ಪ್ರಗತಿ ಸಾಧ್ಯ.ಹಾಗಾಗಿ ಕುವೆಂಪು ಯಾವಾಗಲೂ ದೊರೆ ಮತ್ತು ಪುರೋಹಿತರಿಬ್ಬರನ್ನು ಉಗ್ರವಾಗಿ ವಿರೋಧಿಸುತ್ತಾರೆ.

ದೊರೆ ಮತ್ತು ಪುರೋಹಿತ

ಕೂಡಿದಾಗ ಹುಟ್ಟಿತು ಮತ

ಮೊದಲ ಠಕ್ಕ ಮೊದಲ ಬೆಪ್ಪ

ಕೂಡಿದಾಗ ಮೂಡಿತು ಮತ

ಯಾವುದನೃತ? ಯಾವುದು ಋತ?

ಅಂತೂ ನಡೆಯಿತು ಅದ್ಭುತ   (ಮಂತ್ರಾಕ್ಷತೆ ಸಂಕಲನದಿಂದ)

ಪುರೋಹಿತಶಾಹಿ ಶಾಸ್ತ್ರಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ.

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು! (ಯಾವ ಕಾಲದ ಶಾಸ್ತ್ರ ಹೇಳಿದರೇನು)

ಧರ್ಮಶಾಸ್ತ್ರ ಮಾನವ ಬದುಕಿಗೆ ಅನಿವಾರ್ಯ ಎಂಬಂತಹ ಅಧಿಕಾರ ಪಡೆದುಕೊಂಡು ಬಿಟ್ಟಿದೆ. ಧಾರ್ಮಿಕ ಸಂಸ್ಥೆಗಳು ಧರ್ಮಶಾಸ್ತ್ರಗಳನ್ನು ನಿರಂತರವಾಗಿ ಪೋಷಿಸುತ್ತಾ ಭಕ್ತರನ್ನು ಶೋಷಿಸುತ್ತವೆ. ಈ ಅಧಿಕಾರವನ್ನು ಅಧಿಕಾರಯುತ ದನಿಯಲ್ಲಿಯೇ ಪ್ರಬಲವಾಗಿ ಪ್ರಶ್ನಿಸುತ್ತಾರೆ.

ನೀರಡಿಸಿ ಬಂದ ಸೊದರನಿಗೆ ನೀರು ಕೊಡಲು

ಮನುಧವರ್iಶಾಸ್ತ್ರವೆನಗೊರೆಯ ಬೇಕೇನು?

ನೊಂದವರ ಕಂಬನಿಯನೊರಸಿ ಸಂತೈಸುವೊಡೆ

ಶಾಸ್ತ್ರಪ್ರಮಾಣವದಕಿರಲೆ ಬೇಕೇನು?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ

ದಡದಲ್ಲಿ ಮೀಯುತ್ತ ನಿಂತಿರುವ ನಾನು

ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು

ಸುಮ್ಮನಿದ್ದರೆ ಶಾಸ್ತ್ರ ಸಮ್ಮತವದೇನು ( ಯಾವ ಕಾಲದ ಶಾಸ್ತ್ರವೇನು ಹೇಳಿದರೇನು)

ಮಾನವೀಯತೆಯ ಕತ್ತು ಹಿಸುಕುತ್ತಿರುವ ಶಾಸ್ತ್ರದ ಅಗತ್ಯವಿದೆಯೇನು? ಎಂದು ಕವಿ ಪ್ರಶ್ನಿಸುತ್ತಾರೆ.

ಇಂತಹ ಕವಿತೆಗಳ ಮೂಲಕ ಕುವೆಂಪು ಒಂದು ಸಾಮಾಜಿಕ ಎಚ್ಚರವನ್ನು ಮೂಡಿಸಲು ಪ್ರಯತ್ನಿಸುತ್ತಾರೆ. ಪ್ರತಿಭಟನೆಯ ದನಿಯಾಗಿ ಕುವೆಂಪು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಿಸ್ಸಂದೇಹವಾಗಿ ಕುವೆಂಪು ಮೊದಲ ಬಂಡಾಯ ಕವಿ ಎಂದೇಳಬಹುದು.

 

ನಾಡು-ನುಡಿಯ ಬಗೆಗಿನ ಕಾಳಜಿ:

ಕುವೆಂಪು ಅವರ ಸಾಮಾಜಿಕ ಆಸಕ್ತಿಯ ಇನ್ನೊಂದು ಮುಖವೇ ನಾಡು-ನುಡಿಯ ಬಗೆಗಿನ ಕಾಳಜಿ.

ಜನಭಾಷೆಯಲ್ಲದ ಊಳಿಗಮಾನ್ಯ ಭಾಷೆಯೊಂದು ಶಿಕ್ಷಣ ಮಾಧ್ಯಮವಾಗುವುದಾಗಲೀ, ಆಡಳಿತ ಭಾಷೆಯಾಗುವುದಾಗಲೀ ಪ್ರಗತಿವಿರೋಧಿ ಕ್ರಮ ಎಂಬುದು ಕವಿಯ ನಿಲುವು. ಇದರಿಂದ ಮತ್ತೇ ಅಧೀನ ಸಂಸ್ಕೃತಿಯ ಯಥಾಸ್ಥಿತಿಗೆ ನಮ್ಮನ್ನು ತಳ್ಳಲಾಗುತ್ತದೆ ಎಂಬ ಅರಿವಿದ್ದ ಕವಿ ಭಾಷಾವಿಚಾರದಲ್ಲಿ ಜೋರಾಗಿಯೇ ಗುಡಿಗಿದ್ದಾರೆ.

ಅವರಿಗೆ ಇಂಗ್ಲಿಷ್ ಭಾಷೆಯ ಬಗೆಗೆ ಅಪಾರ ಗೌರವಿತ್ತು. ಆ ಭಾಷೆಯ ಸಾಹಿತ್ಯ ತಂದ ತಿಳಿವಿನ ಬಗೆಗೆ ಆತ್ನೀಯ ಕೃತಜ್ಞತೆ ಇತ್ತು. ಹಾಗೆ ನೋಡಿದರೆ ಮಲೆನಾಡಿನ ಕಾಡಹಳ್ಳಿಯ ಹುಡುಗನೊಬ್ಬ ತನ್ನದಲ್ಲದ ಭಾಷೆ ಇಂಗ್ಲಿಷಿನಲ್ಲಿಯೇ ಮೊದಲು ಬರೆದದ್ದು. `ಬ್ರಿಟಿಷರು ಭಾರತಕ್ಕೆ ¨ರದಿದ್ದರೆ ನಾನು ಈಗ ಬ್ರಾಹ್ಮಣರ ಮನೆಯಲ್ಲಿ ಸೆಗಣಿ ಬಾಚುತ್ತಿದ್ದೆ` ಎಂದೇಳುವ ಮೂಲಕ ಬ್ರಿಟಿಷರ ಆಳ್ವಿಕೆ ಭಾರತೀಯ ಸಾಮಾಜಿಕ ಬದುಕಿನಲ್ಲಿ ತಂದ ಚಲನೆ ಕುವೆಂಪು ಅವರಿಗೆ ಅತ್ಯಂತ ಮಹತ್ವದೆನಿಸುತ್ತದೆ.

ಆದರೆ ಕ್ರಮೇಣ ಆ ಭಾಷೆ ಆಳುವ ವರ್ಗದ ಭಾಷೆಯಾಗಿ ಅಧೀನ ಸಂಸ್ಕೃತಿಯ ಮೇಲೆ ಅಪಾಯಕಾರಿ ಪರಿಣಾಮ ಉಂಟುಮಾಡಿದಾಗ ಗಂಭೀರವಾಗಿ ಯೋಚಿಸಿದರು. ಕೆಳವರ್ಗದವರ ಮೇಲೆ ಅಧಿಕಾರ ಸ್ಥಾಪಿಸಲು ಇರುವ ಅತ್ಯಂತ ಪ್ರಮುಖ ಸಾಧನಗಳಲ್ಲಿ ಭಾಷೆ ಒಂದು ಎಂಬುದನ್ನು ಸಂಸ್ಕೃತ ಸಂಬಂಧದಲ್ಲಿ ಶೂದ್ರವರ್ಗದಿಂದ ಬಂದ ಕುವೆಂಪು ಅನುಭವಿಸಿದ್ದರು. ಈಗ ಸಾಮ್ರಾಜ್ಯಶಾಹಿ ಭಾಷೆಯಾದ ಇಂಗ್ಲಿಷ್ ಸಮಾಜದ ಉದ್ಧಾರಕನ ವೇಷದಲ್ಲಿ ಬಂದರೂ ಮೂಲ ಉದ್ದೇಶ ಸಂಸ್ಕೃತಕ್ಕಿಂತ ಭಿನ್ನವೇನಲ್ಲ ಎಂಬ ಸತ್ಯವನ್ನು ಕುವೆಂಪು ಕಂಡುಕೊಂಡರು.

ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ

ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ

ರಾಜನುಡಿಯೆಂದೊಂದು ರಾಷ್ಟ್ರನುಡಿಯೆಂದೊಂದು

ದೇವನುಡಿಯೆಂದೊಂದು ಹತ್ತಿ ಜಗ್ಗಿ

ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ

ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ

ಕೂಗಿಕೊಳ್ಳಲು ಕೂಡ ಬಲವಿಲ್ಲ; ಮಕ್ಕಳೇ

ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ (ಸಾಯುತಿದೆ ನಿಮ್ಮ ನುಡಿ ಕನ್ನಡ ಕಂದರಿರ)

ಕುವೆಂಪು ಇಂಗ್ಲಷ್ ಶಿಕ್ಷಣ ಮಾಧ್ಯಮವಾಗಿರುವುದನ್ನು ಅತ್ಯಂತ ಪ್ರಬಲವಾಗಿ ವಿರೋಧಿಸುತ್ತಾರೆ. 1962 ರಲ್ಲಿ ಭಾರತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನಿರ್ಧರಿಸಿದಂತೆ ಇಂಗ್ಲಿಷ್‍ನ್ನು ಮೂರನೇ ತರಗತಿಯಿಂದಲೇ ಪ್ರಾರಂಭಿಸುತ್ತಾರೆ ಎಂಬ ದೇಶವಿನಾಶಕವಾದ ಅಮಂಗಳ ಸುದ್ಧಿಯನ್ನು ಕೇಳಿದ ಕವಿ,

ಪಾರುಮಾಡೆಮ್ಮನೀ ಇಂಗ್ಲೀಷಿನಿಂದ

ಪೂತನಿಯ ಅಸುವೀಂಟಿ ಕೊಂದ ಕೋವಿಂದ

ತಾಯಿ ಮೊಲೆಯಂದದಲಿ ತೋರ್ಪವಳ ಕಬ್ಬಿಣದ

ಹೇರೆದೆಯ ಕೆಚ್ಚಲನು ಬಾಯ್ಗಿಟ್ಟು, ತುಟಿಹರಿದು

ರಕ್ತ ಸೋರುವ ನಮ್ಮನೊಲಿದು ಕಾಪಾಡಯ್ಯ;

ಭಾರತೀಯ ಮಕ್ಕಳಾಯುವ ರಕ್ಷಿಸಯ್ಯಾ (ಪ್ರಾರ್ಥಿಸು ಓ ಮಕ್ಕಳಿರಾ)

ಆ ದಿನ ಕುವೆಂಪು ಕೇಳಿದ ಅಮಂಗಳ ವಾರ್ತೆಯನ್ನು ನಾವು ಇಂದಿಗೂ ಕೇಳಿ ಅನುಭವಿಸುತ್ತಿದ್ದೇವಲ್ಲಾ! ಈಗ ಎಲ್.ಕೆ.ಜಿ ಯಿಂದಾನೆ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಮಯವನ್ನಾಗಿ ಮಾಡಹೊರಟ ಈ ಸ್ಥಿತಿಯನ್ನೆನಾದರೂ ಕುವೆಂಪು ಬದುಕಿದ್ದು ನೋಡಿದ್ದರೆ ಅದೆಂಥ ಆತಂಕಕ್ಕೆ ಒಳಗಾಗುತ್ತಿದ್ದರೋ!

ಇಂಗಿಹೋಗುತಿದೆ ಇಂಗ್ಲಿಷಿನ ಮರುಭೂಮಿಯಲಿ

ನಿನ್ನ ಮಕ್ಕಳ ಶಕ್ತಿ-ಬುದ್ಧಿ-ಪ್ರತಿಭಂ;

ರಾಷ್ಟ್ರನಾಯಕ ಮನದಿ ವಿವೇಕರೂಪದಿ ಮೂಡಿ

ಓ ರಸಮಯೀ ಸರಸ್ವತಿಯೇ ಪೊರೆ ಬಾ! (ಸಾಕು ಬಲತ್ಕಾರ)

ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಹೇರುವುದರ ಬಗ್ಗೆಯೂ ಕುವೆಂಪು ಪ್ರತಿಭಟಿಸುತ್ತಾರೆ.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ

ಬಾಲಕರ ರಕ್ಷಿಸೈ ಹೇ ತ್ರಿಣೇತ್ರ|

ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರುಗಾಳ;

ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ! (ಬಲತ್ಕಾರದ ಭಾಷಾಸೂತ್ರ)

ಇವೆಲ್ಲವುಗಳಿಂದ ತಿಳಿಯುವುದು ನವಕನ್ನಡತ್ವದ ಆಚಾರ್ಯ ಪುರುಷ ಕುವೆಂಪು ಎಂದು.

ಕನ್ನಡ ಭಾಷೆಯಂತೆಯೆ ಕರ್ನಾಟಕದ ಬಗೆಗೂ ಅಪಾರ ನಿಷ್ಕಲ್ಮಶವಾದ ಅಭಿಮಾನ. ಈ ದೇಶದ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ಅದರೊಂದು ಭಾಗವಾಗಿ ಹುಟ್ಟಿಕೊಂಡದ್ದು ಕರ್ನಾಟಕ ಏಕೀಕರಣ ಕಲ್ಪನೆ. ಸ್ವಾತಂತ್ರ್ಯ ಚಳುವಳಿಯ ಮೂಲಕ ಈ ದೇಶ ಪರಕೀಯ ಪ್ರಭುತ್ವದಿಂದ ಬಿಡುಗಡೆ ಪಡೆಯುವುದು ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಮುಖ್ಯವಾಗಿತ್ತು ವಸಾಹತುಶಾಹಿ ಕಾರಣದಿಂದ ಹರಿದು ಹಂಚಿ ಹೋಗಿದ್ದ ಕರ್ನಾಟಕ ಏಕೀಕೃತ ಕರ್ನಾಟಕವಾಗುವುದು. ಇದು ರಾಜಕಿಯವಾದುದ್ದಲ್ಲ; ಸಾಂಸ್ಕೃತಿಕವಾದದ್ದು. ಕರ್ನಾಟಕ ಮಾತೆಯನ್ನು ಭಾರತ ಜನನಿಯ ತನುಜಾತೆ ಎಂದು ಪರಿಭಾವಿಸುತ್ತಾ ಆಕೆಗೆ ಕವಿ ಭರವಸೆ ನೀಡುತ್ತಾರೆ

ಬೆದರದಿರು; ಬೆದರದಿರು; ನಾನಿಹೆನು, ಓ ದೇವಿ|

ಉದಯಿಸುವನೋರ್ವ ಕವಿ ನಿನ್ನುದರ ಭೂಮಿಯಿಂದದುಭುತದಿ

ಎಂದು ಸಾಂತ್ವಾನಿಸುತ್ತಾರೆ.

ಕರ್ನಾಟಕ ಎಂಬುದೇನು

ಹೆಸರೆ ಬರಿಯ ಮಣ್ಣಿಗೆ?

ಮಂತ್ರ ಕಣಾ| ಶಕ್ತಿ ಕಣಾ|

ತಾಯಿ ಕಣಾ| ದೇವಿ ಕಣಾ|

ಬೆಂಕಿ ಕಣಾ| ಸಿಡಿಲು ಕಣಾ|

ಕಾವ ಕೊಲುವ ಒಲವ ಬಲವ

ಪಡೆದ ಚಲದ ಚಂಡಿ ಕಣಾ

ಋಷಿಯ ಕಾಣ್ಬ ಕಣ್ಣಿಗೆ! ( ಅಖಂಡ ಕರ್ನಾಟಕ)

ದೇಶಪ್ರೇಮ, ದೇಶಭಕ್ತಿಯನ್ನು ಕೆಲವರು ತಮ್ಮ ಸ್ವಾರ್ಥದ ಈಡೇರಿಕೆಗೆ ಬಳಸಿಕೊಳ್ಳುವ ಹುನ್ನಾರದಲ್ಲಿರುತ್ತಾರೆ. ಸರಕಾಗಿಸಿದ್ದಾರೆ ಭಾಷೆಯನ್ನು, ಕನ್ನಡನಾಡನ್ನು. ಅದಕ್ಕೆ ಕುವೆಂಪು ಹೇಳುವುದು,

 

ಅಖಂಡ ಕರ್ನಾಟಕ

ಅಲ್ತೋ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ

ತಮ್ಮ ಸ್ವಾರ್ಥಸಾಧನೆಗೆ ಬಳಸಿಕೊಳ್ಳುವ ಶಕ್ತಿಗಳ ಬಗೆಗೆ ಕುವೆಂಪು ಮತ್ತೆ ಮತ್ತೆ ಎಚ್ಚರಿಸುತ್ತಾ ಎಚ್ಚರದ ಪ್ರಜ್ಞೆಯಾಗಿ ತಮ್ಮ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚ್ರಿಸು

ಕಚ್ಚಾಡುವರನು ಕೂಡಿಸಿ ಒಲಿಸಿ

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;

ಒಟ್ಟಿಗೆ ಬಾಳುವ ತೆರದಲಿ ಹರಸು! (ಬಾರಿಸು ಕನ್ನಡ ಡಿಂಡಿಮ)

ಕುವೆಂಪು ಅವರ ಸಾಮಾಜಿಕ ಆಸಕ್ತಿ ಅನೇಕ ಮೂಲಗಳಿಂದ ಪ್ರೇರಣೆ ಪಡೆದು ಅನೇಕ ನೆಲೆಗಳಲ್ಲಿ ವ್ಯಕ್ತವಾಗಿದ್ದರೂ ಅದರ ಕೇಂದ್ರದಲ್ಲಿ ಕನ್ನಡ-ಕರ್ನಾಟಕ-ರೈತ. ``ಕನ್ನಡ ಅಳಿಸೆವು, ಕರ್ನಾಟಕ ಬಿಡೆವು, ಈ ಇಡೀ ಕರ್ನಾಟಕಕ್ಕೆ ರೈತನೇ ಯಜಮಾನ`` ಎನ್ನುವ ದಾಟಿ ಕುವೆಂಪು ಅವರದು.

ಕುವೆಂಪು ಅವರಿಗೆ ರೈತನೆಂದರೆ ಅಪಾರ ಅಭಿಮಾನ ಕಾಳಜಿ. ಕರ್ಮಜೀವಿಯಾದ ರೈತ ಎಂತಹ ಸನ್ನಿವೇಶದಲ್ಲೂ ತನ್ನ ಕಾಯಕ ನಿಲ್ಲಿಸುವುದಿಲ್ಲ. ಆತನದು ನಿರಂತರ ದುಡಿಮೆ. ಆತನ ಬೆವರಿನ ಫಲವೇ ರಾಜ್ಯದ ಶಕ್ತಿ. ಸಂಸ್ಕೃತಿಯ ಆಸಕ್ತಿ.

ಬಾಳಿತು ನಮ್ಮೀ ನಾಗರಿಕತೆ ಸಿರಿ

ಮಣ್ಣುಣಿ ನೇಗಿಲಿನಾಶ್ರಯದಿ;

ನೇಗಿಲ ಹಿಡಿದಾ ಕೈಯಾಧಾರದಿ

ದೊರೆಗಳು ದರ್ಪದೊಳಾಳಿದರು

ನೇಗಿಲ ಬಲದೊಳು ವೀರರು ಮೆರೆದರು

ಶಿಲ್ಪಿಗಳೆಸೆದರು ಕವಿಗಳು ಬರೆದರು

ಹಸಿವಿನ ಮುಂದೆ ಎಲ್ಲಿಯ ಶೌರ್ಯ, ಎಲ್ಲಿಯ ಸಂಸ್ಕೃತಿ, ಎಲ್ಲಿಯ ಸೃಜನಶೀಲತೆ. ಅನೇಕ ಸಂದರ್ಭಗಳಲ್ಲಿ ಮನುಷ್ಯನು ಎತ್ತರಕ್ಕೆ ಹೋಗದಂತೆ ಮಾಡುವುದೇ ಈ ಅನ್ನದ ಸಮಸ್ಯೆ. ಅದಕ್ಕಾಗಿ ಅನ್ನವನ್ನೀವ ನೇಗಿಲಯೋಗಿಯೇ ಜನರಿರುವ ಇಡೀ ವಿಶ್ವಕ್ಕೆ ಶಕ್ತಿಯನ್ನು ದೃಢತೆಯನ್ನು ತಂದುಕೊಡುವ ಅನ್ನದಾತ. ಅದಕ್ಕೆ ಆತನನ್ನು ಶ್ರೇಷ್ಟತೆಯ ತುತ್ತತುದಿಯಲ್ಲಿ ಕೂರಿಸಿ ತಲೆ ಎತ್ತಿ ನೋಡುತ್ತಾ ಆತನಿಗೊಂದು ಸಲಾಂ ಎಂದ ಕುವೆಂಪು ಅವರ ಪರಿ ಅನನ್ಯವಾದದ್ದು. ನಾವೆಲ್ಲ ತಲೆ ದೂಗಿ, ಚಪ್ಪಾಳೆ ತಟ್ಟುತ್ತಾ ಅಭಿಮಾನದಿಂದ ಮೆಚ್ಚುವಂತದ್ದು.

ಶ್ರಮಸಂಸ್ಕೃತಿಯೇ ಬದುಕಿನ ಮೂಲಧಾರ. ಅಂತಹ ಶ್ರಮ ಸಂಸ್ಕೃತಿಯ ಪ್ರತೀಕವಾದ ರೈತನನ್ನು ಕಾವ್ಯರಂಗದ ಪ್ರಧಾನಭೂಮಿಕೆಗೆ ತಂದು ಆತನಿಗೆ `ನೇಗಿಲಯೋಗಿ` ಎಂದು ಕರೆದ ಮೊಟ್ಟ ಮೊದಲಿಗರು ಕವಿಯೋಗಿ ಕುವೆಂಪು. ಹಾಗೆಯೇ ದೇಶದ ಅಸಂಖ್ಯಾತ ಜನರನ್ನು ಜನರು ಎಂದು ಸಂಭೋಧಿಸದೆ `ಶ್ರೀ ಸಾಮಾನ್ಯ` ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ. 

ಕನ್ನಡ ನವೋದಯ ಸಂದರ್ಭದಲ್ಲಿ ವಸ್ತು-ಭಾಷೆ ಎರಡರಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳಾಗಿದ್ದರೆ ಅದು ಕುವೆಂಪು ಅವರಿಂದ ಮಾತ್ರ. ಭಿನ್ನ ದಾರಿಯ ಯೋಚನಾಲಹರಿ. ಶೂದ್ರ ಸಮುದಾಯದಿಂದ ಬಂದ ಕುವೆಂಪು ಎದುರಿಸಿದ ಸವಾಲು ಉಳಿದೆಲ್ಲದವರಿಗಿಂತ ಭಿನ್ನವಾಗಿತ್ತು. ಅವರು ಗೊಬ್ಬರದ ಮೇಲೆ ಕವಿತೆ ಬರೆದಾಗ `ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ` ಎಂಬುದು ಕೇವಲ ಕಾವ್ಯವಸ್ತುವನ್ನು ಕುರಿತ ಪ್ರಶ್ನೆ ಮಾತ್ರವಲ್ಲ; ಸಂಸ್ಕೃತಿ ಸಂಬಂಧಿ ಪ್ರಶ್ನೆಯೂ ಹೌದು. ಎರಡು ಸಂಸ್ಕೃತಿಗಳ ಸಂಘರ್ಷದಲ್ಲಿ ಕುವೆಂಪು ಕೆಳ ಸಂಸ್ಕೃತಿಯ ವಕ್ತಾರರಾಗಿ ಮೇಲು ಸಂಸ್ಕೃತಿಯನ್ನು ಪ್ರಶ್ನಿಸುತ್ತಾರೆ. ಪರಂಪರೆ ರಾಮನನ್ನು ನಾಯಕನಾಗಿಸಿದರೆ ನಾನು ನನ್ನೊಲದ ಕರಿಸಿದ್ಧನನ್ನು ನಾಯಕನನ್ನಾಗಿಸುವೆ. ನಾನು ಪಂಡಿತರಿಗಾಗಿ ಬರೆಯುದಿಲ್ಲ ಜನಸಾಮಾನ್ಯರಿಗಾಗಿ ಬರೆಯುತ್ತೇನೆ ಎನ್ನುತ್ತಾರೆ. ಕುವೆಂಪು ಅವರ ಬರಹವನ್ನು ಕಂಡ ಅದೆಷ್ಟೋ ಜನ ಶೂದ್ರನೇ! ಇಂತಹ ಬರಹದ ವಕ್ತಾರ ನೆಂದು ಹುಬ್ಬೆರಿಸಿದ್ದು ಉಂಟು. ಅವರೇ ನೆನಪಿನ ದೋಣಿಯಲ್ಲಿ ಹೇಳಿಕೊಳ್ಳುವಂತೆ ``ನಾನು ಶ್ರೀ ರಾಮಾಯಣದರ್ಶನಂ ಮಹಾಕಾವ್ಯ ಮತ್ತು ಅಮಲನ ಕಥೆ ಬರೆದಾಗ (1924) ಕೆಲವು ಬ್ರಾಹ್ಮಣರು ನಾನು ಬ್ರಾಹ್ಮಣನೇ ಇರಬೇಕೆಂದು ವಾದಿಸಿದ್ದರಂತೆ. ಅವರ ಪ್ರಕಾರ ಬ್ರಾಹ್ಮಣ ಜಾತಿಯಲ್ಲಿ ಹುಟ್ಟದವನಿಗೆ ಕಾವ್ಯ ಬರೆಯುವುದು ಸಾಧ್ಯವೇ ಇಲ್ಲ. ಬ್ರಾಹ್ಮಣರ ಮುಂದೆ ತಾವು ಎಲ್ಲದರಲ್ಲಿಯೂ ಕೀಳು ಮತ್ತು ನೀಚರೆಂಬ ಭಾವನೆ ಶೂದ್ರವರ್ಗದಲ್ಲಿ ಶತಮಾನಗಳಿಂದ ಬೇರೂರಿ ಹೋಗಿತ್ತು`` (ನೆನಪಿನದೋಣಿ, ಪು:230,ಉದಯರವಿ ಪ್ರಕಾಶನ-1980)

``ನನ್ನ ಜಾತಿಯ ಕಾರಣಕ್ಕಾಗಿಯೇ ಸಾಹಿತ್ಯ ಸಂಸ್ಕೃತಿಗಳಲ್ಲಿ ಮೇಲುಗೈಯಾಗಿರುವ ಬ್ರಾಹ್ಮಣ ಪ್ರಶಂಸೆ ದೊರೆಯುವುದು ಕಷ್ಟವಾಗುತ್ತಿತ್ತು. ಆ ಕಾಲದಲ್ಲಿ ವಿದ್ಯಾಭ್ಯಾಸದ ಇಲಾಖೆಯಲ್ಲಾಗಲೀ, ವಿಶ್ವವಿದ್ಯಾಲಯಗಳಲ್ಲಾಗಲೀ ಬ್ರಾಹ್ಮಣರಲ್ಲದ ಕನ್ನಡಿಗರಿಗೆ ಸ್ಥಾನವೇ ಇರಲಿಲ್ಲ; ಕೈ ಬೆರಳೆಣಿಕೆಯ ಸ್ಥಾನಗಳಿದ್ದರೂ ಮಾನ ಪ್ರತಿಷ್ಠೆಗಳಿರುತ್ತಿರಲಿಲ್ಲ. ಬ್ರಾಹ್ಮಣರೆ ಮೌಲ್ಯ ನಿರ್ಮಾಪಕರು; ಕೃತಿಕಾರರು ಅವರೇ. ಅವರು ಮೆಚ್ಚಿದರೆ ಆಕೃತಿಗೆ ಬೆಲೆ. ಇಲ್ಲದಿದ್ದರೆ ಅದು ಕಸದ ಬುಟ್ಟಿಗೆ``(ನೆನಪಿನ ದೋಣಿ, ಪು:912, ಉದಯರವಿ ಪ್ರಕಾಶನ:1980)

ಇಂಥ ಸ್ಥಿತಿಯಲ್ಲಿ ಕುವೆಂಪು ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಅನಿವಾರ್ಯತೆ ಇತ್ತು. ಅದು ಒತ್ತಡವೂ ಹೌದು. ಚಾರಿತ್ರಿಕ ಅನಿವಾರ್ಯತೆಯೂ ಹೌದು. ಕೀಳರಿಮೆಯನ್ನು ಮೀರಿ ಆತ್ಮವಿಶ್ವಾಸ ಪಡೆದುಕೊಳ್ಳುವ ಅನಿವಾರ್ಯತೆ ಅಗತ್ಯವಾಗಿದ್ದ ಸಂದರ್ಭವದು. ಹೀಗೆ ವಸ್ತು-ರೀತಿ ಎರಡರಲ್ಲಿಯೂ ನಾನು ಪರಂಪರೆಗಿಂತ ಭಿನ್ನ ಎನ್ನುವ ಸೂಚನೆ ಅವರ ಕಾವ್ಯದಲ್ಲಿದೆ.

ಆಧುನಿಕತೆ: ಹಳ್ಳಿಯ ಸೊಗಡು ಗ್ರಾಮೀಣರ ಬದುಕನ್ನು ನಾಶಮಾಡಿರುವ ಈ ಬುಲ್ಡೋಜರ್ ಸಂಸ್ಕೃತಿಯನ್ನು ಭೋಗ ಸಂಸ್ಕೃತಿಯೆಂದು ಟೀಕಿಸುತ್ತಾ ವಿರೋಧಿಸುತ್ತಾರೆ.

ಅತಿಭೋಗವದು ರೋಗ, ಕೊಲ್ಲುವುದು ಬೇಗ

ಪುರಗಳಿಂದೈತಂದಿಹುದು ಹಳ್ಳಿಗೀಗ

ಸಾಮಾನ್ಯ ಜೀವನವು ಪರಮ ಸುಧೆಯಂತೆ

ಮಿತಿಮೀರಿದತಿಭೋಗ ಘೋರ ವಿಷವಂತೆ

ದೇಶಗಳು ಹಾಳಾದುದತಿಭೋಗದಿಂದ

ನೀತಿನಾಶವು ಕೀರ್ತಿನಾಶವದರಿಂದ

ಅನ್ಯಸಂಸ್ಕೃತಿಯ ಆಕ್ರಮಣ ನಮ್ಮ ಸಾಮಾಜಿಕ ಸಂರಚನೆಯನ್ನೇ ಬದಲಾಯಿಸುತ್ತದೆ. ಅದರೊಟ್ಟಿಗೆ ನಾಶಮಾಡುತ್ತಿದೆ. ಎನ್ನುವ ಕವಿಗಿರುವ ಬೇಜಾರು ಈ ಕವಿತೆಯಲ್ಲಿದೆ.

ಸಮಾಪನ:

ಕನ್ನಡ-ಕರ್ನಾಟಕ ಎಂದರೆ ಎಲ್ಲರೂ ಹೇಳುವ ಹೆಸರು ಕುವೆಂಪು. ಕಿರಿಯರಿಂದ ಹಿರಿಯರವರೆಗೂ ಜನಮಾನಸದಲ್ಲಿ ಮಿಂದೆದ್ದ ಕವಿ. ವಿಶ್ವವ್ಯಾಪಿತನವನ್ನು ಮೈಗೂಡಿಸಿಕೊಂಡು ಕನ್ನಡನಾಡಿನಲ್ಲಿ ಹುಟ್ಟಿದ್ದು ಕನ್ನಡಾಂಬೆಯ ಪುಣ್ಯ. ಕನ್ನಡ ಸಾಹಿತ್ಯಕ್ಕೆ ದಿಗ್ಗಜರಿಬ್ಬರು. ಪಂಪ ಮತ್ತು ಕುವೆಂಪು. ಇಬ್ಬರ ಹೆಸರು ಮತ್ತು ಬರಹ ಎರಡರಲ್ಲಿಯೂ ಕಂಪಿದೆ. ಇವರನ್ನು ಮೀರಿಸುವ ಕವಿಯ ಹುಟ್ಟು ಅನುಮಾನ. ಇಬ್ಬರು ತೆರಳುವ ಮಾರ್ಗ ಬೇರೆ ಬೇರೆ. ಆದರೆ ಸೇರುವ ಗುರಿ ಒಂದೇ `ಮಾನವ ಕುಲಂ ತಾನೊಂದೇ ವಲಂ`.

ಕುವೆಂಪು ಬರೆಯದ ಬರಹವಿಲ್ಲ. ಕಾವ್ಯ ಮಹಾಕಾವ್ಯ, ಕವಿತೆ, ಕವನ, ಕತೆ, ಕಾದಂಬರಿ, ಮಹಾಕಾವ್ಯ, ಗದ್ಯ, ವಿಮರ್ಶೆ, ನಾಟಕ, ಪ್ರಬಂಧ, ಲಲಿತ ಪ್ರಬಂಧ, ಜೀವನ ಚರಿತೆ, ಆತ್ಮಕಥನ-----ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೊನೆಗೆ ಸ್ವಪ್ರಶಂಸೆಯನ್ನು ಸ್ವಕಾವ್ಯಸಮರ್ಥನೆಯನ್ನು ಮಾಡಿಕೊಂಡಿದ್ದಾರೆ. ವಡ್ರ್ಸ್‍ವರ್ತ್, ಷೇಕ್ಸ್‍ಪಿಯರ್, ಹ್ಯೂಮರ್, ಟಾಲ್‍ಸ್ಟಾಯ್, ಪಂಜೆ, ಗಾಂಧಿ, ನೆಹರು, ಬುದ್ಧ--- ಇವರೆಲ್ಲರ ಬಗೆಗೆ ಬರೆದಂತೆ ಕುವೆಂಪು ಎನ್ನುವ ಶಿರ್ಷಿಕೆಯಡಿ ಕವನವನ್ನೂ ಬರೆದಿದ್ದಾರೆ.

ಇಷ್ಟೆಲ್ಲಾ ಪ್ರಕಾರಗಳಲ್ಲಿ ಅವರಿಗೆ ಇಷ್ಟವಾದದ್ದು ಕಾವ್ಯ. ಅವರೊಳಗಿನ ತತ್ವಜ್ಞಾನಿ, ಸಾಮಾಜಿಕ ಚಿಂತಕ, ವೇದಾಂತಿ ಇವರೆಲ್ಲರೂ ಒಟ್ಟಿಗೆ ಒಡನಾಡಿದ್ದು ಮೂಡಿದ್ದು ಕಾವ್ಯದಲ್ಲಿಯೇ.ಕಾವ್ಯವೇ ಅವರ ಸರ್ವಸ್ವ, ವ್ಯಕ್ತಿತ್ವದ ಮೂಲಧಾತು. ಅದಕ್ಕೆ ಅವರು ಕಾವ್ಯವನ್ನು ಕಾವ್ಯಕನ್ನಿಕೆ ಎಂದು ಕರೆದಿದ್ದಾರೆ.

ನೀನೇ ನನ್ನ ಬಾಳಮುಕ್ತಿ

ನೀನೇ ಎನ್ನ ಬಾಳಶಕ್ತಿ

ನೀನೇ ಸೊಗವು, ನೀನೇ ಹರುಷ

ಕಬ್ಬದಂಗನೆ

ಎನ್ನುವಲ್ಲಿ ಕಾವ್ಯ ಅವರಿಗೆ ಕಾಂತೆಯಂತೆ ಪ್ರೇಯಸಿಯೋಪಾದಿ ಅವರ ಭಾವಕೋಶಕ್ಕೆ ಇಳಿದು `ನಿನ್ನ ವದಲಿ ಪೊಗಲಾರೆ` ಎಂದು ಬಿಗಿದಪ್ಪಿದ್ದಾಳೆ. ಕುವೆಂಪು ಕಾವ್ಯ ಸೃಷ್ಟಿಸುತ್ತಾ ಹೋದಂತೆ ಕಾವ್ಯ ಕುವೆಂಪು ಅವರನ್ನು ರೂಪಿಸುತ್ತಾ ಹೋಗಿದೆ. ಒಟ್ಟಾರೆ ಕುವೆಂಪು ಅವರ ಇಡೀ ಬರಹದ ತಾತ್ವಿಕ ನಿಲುವೇನೆಂದರೆ

ಇಲ್ಲಿ ಯಾರೂ ಮುಖ್ಯರಲ್ಲ

ಯಾರೂ ಅಮುಖ್ಯರಲ್ಲ

ಯಾವುದೂ ಯಃಕಶ್ಚಿತವಲ್ಲ

ಸರ್ವಜನಾಂಗದ ಶಾಂತಿಯ ತೋಟದಲ್ಲಿ

ಸರ್ವರಿಗೂ ಸಮಪಾಲು

ಸರ್ವರಿಗೂ ಸಮಬಾಳು.

ಪರಾಮರ್ಶನಾ ಗ್ರಂಥಗಳು

  1. ಕುವೆಂಪು: ವಿಚಾರ ಕ್ರಾತಿಗೆ ಆಹ್ವಾನ: 1987.
  2. ಕುವೆಂಪು: ಸಾಹಿತ್ಯ ಪ್ರಚಾರ : 1991.
  3. ಕುವೆಂಪು: ನೆನಪಿನ ದೋಣಿಯಲ್ಲಿ: 1980
  4. ಕುವೆಂಪು: ಮಲೆನಾಡಿನ ಚಿತ್ರಗಳು: 1944.
  5. ಕುವೆಂಪು: ನಿರಂಕುಶಮತಿಗಳಾಗಿ: 1998.
  6. ಕುವೆಂಪು ಸಮಗ್ರ ಗದ್ಯ: ಕನ್ನಡ ವಿಶ್ವ ವಿದ್ಯಾಲಯ,ಹಂಪಿ: 2004.
  7. ಕುವೆಂಪು: ಕಾವ್ಯವಿಹಾರ: 1946.
  8. ಚೆನ್ನಬಸಪ್ಪ ಕೋ. : ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಸಾಮಾಜಿಕ ಪ್ರಜ್ಞೆ: 2004.
  9. ಕೃಷ್ನಮೂರ್ತಿ ಎಂ.ಜಿ.; ಆಧುನಿಕ ಭಾರತೀಯ ಸಾಹಿತ್ಯ: 1970.
  10. ಅಮೂರ ಜಿ.ಎಸ್.; ಕನ್ನಡ ಕಥನ ಸಾಹಿತ್ಯ:ಕಾದಂಬರಿ; 1994.
  11. ನಾಯಕ ಜಿ.ಎಚ್.,(ಸಂ) ಶತಮಾನದ ಕನ್ನಡ ಸಾಹಿತ್ಯ;ಕಾದಂಬರಿ;2000.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

ಸರ್ಕಾರಿ ದೇಗುಲ

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal