Tumbe Group of International Journals

Full Text


ಭಾರತೀಯ ಸಮಾಜಗಳಲ್ಲಿನ ಅಧಿಕಾರದ ಚಹರೆಗಳು

ಮಂಜುನಾಥ ಫಕೀರಪ್ಪ ಉಪ್ಪಾರ

ಸಂಶೋಧನಾ ವಿದ್ಯಾರ್ಥಿ

ಎಂ.ಎ. ಪಿಎಚ್.ಡಿ ಸಮಾಜಶಾಸ್ತ್ರ ನಾಲ್ಕನೇ ಷಣ್ಮಾಷಿಕ

ಕನ್ನಡ ವಿಶ್ವ ವಿದ್ಯಾಲಯ ಹಂಪಿ, ವಿದ್ಯಾರಣ್ಯ- 583276

ಮೊ.ನಂ : 9481652198, ಇಮೇಲ್ ಐಡಿ : manjuuppar661996@gmail.com

ಪ್ರವೇಶಿಕೆ

        ಕೇಲ ಅಧ್ಯಯನದ ಅಥವಾ ಸಂಶೋಧನೆಯ ಶಿರ್ಷೀಕೆಯು ಪ್ರಮುಖವಾಗಿ ಮೂರು ಭಾಗಗಳನ್ನು ಮತ್ತು ಅಂಶಗಳನ್ನು ಒಳಗೊಂಡಿರುತ್ತದೆ. ಶಿರ್ಷೀಕೆಯ ಮೊದಲ ಭಾಗವು ಆಕರವನ್ನು, ಎರಡನೇ ಭಾಗವು ಪರಿಕಲ್ಪನೆಯನ್ನು ಅಥವಾ ಆಶಯವನ್ನು, ಮೂರನೇ ಭಾಗವು ವಿಧಾನವನ್ನು ಒಳಗೊಂಡಿರುತ್ತದೆ ಎಂದು ನನಗೆ ಹಿರಿಯ ಸಂಶೋಧಕರು ಹೇಳಿದ್ದು ನೆನಪಿದೆ. ಪ್ರಸ್ತುತ ಲೇಖನವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಅದರಲ್ಲಿ `ಭಾರತೀಯ ಸಮಾಜಗಳು’ ಎಂಬುದು ಆಕರವಾಗಿದೆ.  ಎನಿದು `ಭಾರತೀಯ ಸಮಾಜಗಳು’ ಎಂದು ಶಿರ್ಷೀಕೆ ಮೊದಲ ಭಾಗದಲ್ಲಿ ಬಳಸಿದ್ದಾನೆ, ಎಂಬ ಜಿಜ್ಞಾಸೆ ಕೆಲವರಲ್ಲಿ ಮೂಡುವುದು ಸಹಜ. ಯಾಕೆ `ಭಾರತೀಯ ಸಮಾಜ’ ಎಂಬ ಪರಿಕಲ್ಪನೆಯನ್ನು ಬಳಸುವ ಬದಲು `ಭಾರತೀಯ ಸಮಾಜಗಳು’ ಎಂಬ ಪರಿಕಲ್ಪನೆಯನ್ನು ಬಳಸಿಕೊಂಡನೇಂದರೆ, ಭೌಗೋಳಿಕವಾಗಿ ಭಾರತವು 32,87,263 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ ದೇಶವಾಗಿದೆ ಆದರೆ ಭಾರತವು ಅನೇಕ ಸಮಾಜಗಳನ್ನು ಹೊಂದಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಹಾಗಾಗಿ ವಿಭಿನ್ನ ಸಮಾಜಗಳಲ್ಲಿ ಕಂಡುಬರುವ `ಅಧಿಕಾರ’ವನ್ನು ಅದರ ಚಹರೆಗಳನ್ನು ತಳಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ. ನೇರವಾಗಿ ಅಧಿಕಾರದ ಚಹರೆಗಳನ್ನು ವಿವರಿಸುವ ಮುನ್ನ `ಅಧಿಕಾರ’ ಎಂದರೇನು? ಎಂಬ ಪ್ರಶ್ನೆಗೆ ಉತ್ತರಿಸಿ ಮುನ್ನಡೆಯುವುದು ಸೂಕ್ತ.

       ದೈಹಿಕವಾಗಿ ಹಾಗೂ ಮಾನಸಿಕವಾಗಿ ದುರ್ಬಲರಿರುವವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಅವರ ಮೇಲೆ ಮಾಡುವ ದಬ್ಬಾಳಿಕೆಯನ್ನು ಹಾಗೂ ವರ್ತನೆಗಳನ್ನು `ಅಧಿಕಾರ’ ಎಂದೆನ್ನಬಹುದು. ಸಂಕ್ಷಿಪ್ತವಾಗಿ ಅಶಕ್ತರ ಮೇಲೆ ಶಕ್ತರು ತೋರ್ಪಡಿಸುವ ಅಧಿಪತ್ಯ ಅಥವಾ ಪ್ರಾಬಲ್ಯವನ್ನು ಅಧಿಕಾರ ಎನ್ನುವರು. ಇದನ್ನು ಆಂಗ್ಲ ಭಾμÉಯಲ್ಲಿ ಪವರ್ [ಠಿoತಿeಡಿ] ಎಂದು ಕರೆಯಬಹುದು. ಕೆಲವೊಮ್ಮೆ ಅಶಕ್ತರು ಶಕ್ತರ ಸ್ಥಾನವನ್ನು ಅಲಂಕರಿಸಿ ತಮ್ಮಂತಿದ್ದ ಅಶಕ್ತರ ಮೇಲೆ ಅಧಿಕಾರವನ್ನು ಚಲಾಯಿಸುವರು.    “ಫುಕೊರವರು ಅಧಿಕಾರ ಎನ್ನುವ ‘ವಸ್ತು’ ಇರುವದಿಲ್ಲ, ಬದಲಾಗಿ ಬೇರೆಯ ವ್ಯಕ್ತಿಯ ಮೇಲೆ ಅಧಿಕಾರ ಚಲಾಯಿಸಿದಾಗ ಮಾತ್ರ ಅಸ್ತಿತ್ವಕ್ಕೆ ಬರುತ್ತದೆ ಎನ್ನುತ್ತಾರೆ” [1]. ಅಧಿಕಾರದ ಸಂಬಂಧಗಳು ಒಂದು ವಿಧವಾದ ಕ್ರಿಯೆಯಾಗಿದ್ದು ಅದು ನೇರವಾಗಿ ಅಥವಾ ಪರೋಕ್ಷವಾಗಿ ಇನ್ನೊಬ್ಬರ ಮೇಲೆ ತೀರಿಸಿಕೊಳ್ಳುವುದು.  ಒಂದು ಅಧಿಕಾರದ ಸಂಬಂಧ ಇಬ್ಬರು ವಿರೋಧಿಗಳ ನಡುವಿನ ಹೋರಾಟದಂತೆ. ಈ ಸಂಬಂಧದಲ್ಲಿ ಯಾವುದೇ ಸಂದರ್ಭದಲ್ಲಾದರೂ ಅಧಿಕಾರದ ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತರಬಹುದಾಗಿದೆ. ಅಧಿಕಾರ ಕ್ರೂರತನ ಅಲ್ಲ, ಆದರೂ ಅಧಿಕಾರ ಕ್ರಿಯಾಶೀಲವಾಗಲು ಕ್ರೂರತನವನ್ನು ಬಳಸಬಹುದು. ಹಾಗಾಗಿ ಅಧಿಕಾರವೆನ್ನುವುದು ಅಧಿಕಾರವನ್ನು ಅಧಿಕಾರದಲ್ಲಿರುವವರು ಹೊಂದುವ ಆಸ್ತಿ ಎಂದು ಹೇಳಿದರೆ ತಪ್ಪಾಗಲಾರದು.

     ಮಾಕ್ರ್ಸ್‍ವಾದಿಗಳು ಅಧಿಕಾರವನ್ನು ಒಂದು ವಿಧವಾದ `ದಬ್ಬಾಳಿಕೆ’ ಎನ್ನುತ್ತಾರೆ. ಯೂರೋಪಿನ ಇತಿಹಾಸದಲ್ಲಿ ಅಧಿಕಾರವನ್ನು ಹಲವಾರು ಹಂತಗಳಲ್ಲಿ ಚಲಾಯಿಸಿದರೆ, ಭಾರತೀಯ ಸಮಾಜದಲ್ಲಿ ಹಲವಾರು ವಿಧಗಳಲ್ಲಿ ಅಧಿಕಾರವನ್ನು ಚಲಾಯಿಸಲಾಗಿದೆ. ಯೂರೋಪಿನ ಸಮಾಜದಲ್ಲಿ ಸಾರ್ವಭೌಮ ಅಧಿಕಾರ ಮತ್ತು ಪ್ರಜಾಪ್ರಭುತ್ವ ಅಧಿಕಾರ ಎಂಬ ಹಂತಗಳಲ್ಲಿ ಅಧಿಕಾರವು ಮಾರ್ಪಾಟಾಯಿತು. ಸಾರ್ವಭೌಮ ಅಧಿಕಾರದಲ್ಲಿ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಕೊಲ್ಲಿಸಿ ಶಿಕ್ಷಿಸಲಾಗುತ್ತಿತ್ತು. ಆದರೆ ಪ್ರಜಾಪ್ರಭುತ್ವದಲ್ಲಿ ಅಧಿಕಾರವು ಬೇರೆ ರೀತಿಯಲ್ಲೆ ಮುಂದುವರೆಯಿತು.

ಭಾರತೀಯ ಸಮಾಜಗಳಲ್ಲಿನ ಅಧಿಕಾರದ ವಿಧಗಳು

      1] ತಮ್ಮ ದೈಹಿಕ ಶಕ್ತಿಯ ಅಥವಾ ಬಲಪ್ರಯೋಗದ ಮೂಲಕ ತನ್ನ ಅಧಿಕಾರವನ್ನು ನಡೆಸುವುದು ಅಧಿಕಾರದ ಮೊದಲನೆಯ ವಿಧ. ದೈಹಿಕವಾಗಿ ಯಾರು ಪ್ರಬಲರಾಗಿರುವರೋ ಅವರು ತಮ್ಮ ಬೇಕು ಬೇಡಗಳನ್ನು ಈಡೇರಿಸಿಕೊಳ್ಳಲು ಹಾಗೂ ತಮ್ಮ ಇಚ್ಛೆಯಂತೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನಿರ್ಮಿಸಿಕೊಳ್ಳಲು  ಅವರ ನಿಯಂತ್ರಣದಲ್ಲಿರುವ ಅಶಕ್ತರ ಮೇಲೆ ನಡೆಸುವ ಅಧಿಕಾರವಾಗಿದೆ. ಉದಾಹರಣೆಗೆ: ಪ್ರಸ್ತುತ ಭಾರತೀಯ ಸಮಾಜದಲ್ಲಿ ಶೇಕಡಾ 79.5ರಷ್ಟು ಮಹಿಳೆಯರು ತಮ್ಮ ಗಂಡಂದಿರಿಂದಲೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಸರಿಸುಮಾರು 100ಕ್ಕೆ 79ರಷ್ಟು ಸದೃಢ ಭಂಡ ಗಂಡುಗಳು ತಮ್ಮ ಚಪಲಗಳನ್ನು ತೀರಿಸಿಕೊಳ್ಳಲು ತಮ್ಮ ಹೆಂಡತಿಯರ ಮೇಲೆ ಸ್ವಾರ್ಥದ ದರ್ಪವನ್ನು ತೋರಿಸಿ ತಮಗಿರುವ ಅಧಿಕಾರವನ್ನು ಪ್ರದರ್ಶಿಸುವರು. ಇನ್ನೂ ಭಾರತೀಯ ಸಮಾಜದಲ್ಲಿ,  ಭಾರತೀಯ ಸಮಾಜದ ಮುಖ್ಯ ಮೂರು ಆಧಾರ ಸ್ತಂಭಗಳಲ್ಲಿ ಒಂದಾದ ಅವಿಭಕ್ತ ಕುಟುಂಬದಲ್ಲಿಯೂ ಕೂಡಾ ಇದೆ ತೆರನಾದ ಅಧಿಕಾರವನ್ನು ಕಾಣಬಹುದಾಗಿದೆ. ಅವಿಭಕ್ತ ಕುಟುಂಬದಲ್ಲಿನ ಯಜಮಾನನನ್ನು “ಕರ್ತಾ”[2] ಎಂದು ಸಂಭೋದಿಸುವುದುಂಟು.  ಈ ‘ಕರ್ತಾ’ ಎನ್ನುವ ವ್ಯಕ್ತಿಯು ಇಡೀ ಆ ಕುಟುಂಬದ ಸದಸ್ಯರ ಮೇಲೆ ತನ್ನ  ಅಧಿಕಾರವನ್ನು ನಡೆಸುತ್ತಿರುತ್ತಾನೆ. `ಕರ್ತಾ’ ಎನ್ನುವವನನ್ನು `ನಿರಂಕುಶ ಫ್ರಭು’ ಎಂದು ಸರ್ ಹೆನ್ರಿಮೇನ್ ಕರೆದಿದ್ದಾರೆ[3]. ಅವನ ನಿರ್ಣಯವೇ ಅಂತಿಮ. ಆತ ಹೇಳಿದ ಹಾಗೆಯೇ ಕುಟುಂಬದ ಸದಸ್ಯರೆಲ್ಲರೂ ವರ್ತಿಸಬೇಕು. ಒಂದು ವೇಳೆ ಏನಾದರೂ ಆತನ ವಿರುದ್ಧ ಎದ್ದು ನಿಂತರೆ ಅಥವಾ ಆತನ ಅಧಿಕಾರವನ್ನು ಪ್ರಶ್ನಿಸಿದರೆ, ಪ್ರಶ್ನಿಸಿದವರು ಯಾರೇ ಆಗಲಿ ಅವರನ್ನು ಶಿಕ್ಷಿಸುವ ಅಥವಾ ಮನೆಯಿಂದ ಹೊರಹಾಕುವ ಸಂಗತಿಗಳು ನಡೆಯುತ್ತವೆ.

2] ನಗ-ನಾಣ್ಯ, ಕನಕ, ಆಸ್ತಿ-ಪಾಸ್ತಿಗಳ ಮೂಲಕ ನಡೆಸುವ ಅಧಿಕಾರ ಅಥವಾ ಅಧಿಕಾರವನ್ನು ಪಡೆದುಕೊಳ್ಳುವುದು, ಅಧಿಕಾರದ ಇನ್ನೊಂದು ವಿಧ. ಈ ತೆರನಾದ ಅಧಿಕಾರವನ್ನು ಪಡೆಯುವರು ತನ್ನ ಸುತ್ತಮುತ್ತಲಿನ  ತನ್ನ ವ್ಯಾಪ್ತಿಯಲ್ಲಿ ಬರುವ ಅಶಕ್ತರ ಮೇಲೆ ತಮ್ಮ ಅಧಿಕಾರವನ್ನು ಸೂಕ್ಷ್ಮವಾಗಿ ಅವರ ಅರಿವಿಗೆ ಬಾರದಂತೆ ನಡೆಸುತ್ತಾರೆ. ಉದಾಹರಣೆಗಾಗಿ: ಪ್ರಸ್ತುತ ಭಾರತೀಯ ಸಮಾಜದಲ್ಲಿರುವ  ಮಾರುಕಟ್ಟೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವವರು ಕೊಳ್ಳುವವರು ಮತ್ತು ಮಾರುವವರು. ಇವರನ್ನು  ಅರ್ಥಶಾಸ್ತ್ರದ ಭಾμÉಯಲ್ಲಿ `ಬೇಡಿಕೆದಾರರು’ ಮತ್ತು `ಪೂರೈಕೆದಾರರು’ ಎಂದು ಹೇಳಬಹುದು. ಮಾರುಕಟ್ಟೆಯಲ್ಲಿ ರೈತರು ತಾವು ಕಷ್ಟಪಟ್ಟು ಶ್ರಮವಹಿಸಿ ದುಡಿದ ಸರಕುಗಳನ್ನು ಸರ್ಕಾರಿ ಎ.ಪಿ.ಎಂ.ಸಿಗಳಂತೆ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ಪ್ರಮಾಣದಲ್ಲಿರುವ ಖಾಸಗಿ ಎ.ಪಿ.ಎಂ.ಸಿಗಳಿಗೆ ತಂದು ಹಾಕುತ್ತಾರೆ. ಅಲ್ಲಿ ಒಂದು ರೀತಿಯಾದ ಚಮತ್ಕಾರ ಎನ್ನುವಂತೆ ಕೆಲವು ಸಂಗತಿಗಳು ಸೃಷ್ಟಿಯಾಗುತ್ತವೆ.

      ಆ ಸಂಗತಿಯಾವುದೆಂದರೆ, ಆ ಸರಕುಗಳನ್ನು ಮಾರಾಟ ಮಾಡಲು ಒಬ್ಬ ವ್ಯಕ್ತಿ `ಸವಾಲು’ ಎಂಬ ತಂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದುಕೊಳ್ಳುತ್ತಾನೆ. ಆ ಸರಕಿಗೆ ಸವಾಲು ಪ್ರಕ್ರಿಯೆಯಲ್ಲಿ ಕಡಿಮೆ ಹಣ ಬರಬಹುದು ಅಥವಾ ಹೆಚ್ಚು ಹಣವೂ ಬರಬಹುದು. ಆದರೆ ಆ ಸರಕಿನ ಬೆಲೆಯನ್ನು ನಿರ್ಧಾರ ಮಾಡುವುದು ಸರಕು ಬೆಳೆದ ರೈತರಲ್ಲ, ಬದಲಾಗಿ ಅಲ್ಲಿರುವ ಮಧ್ಯವರ್ತಿಯೇ ಆಗಿರುತ್ತಾನೆ. ಆ ಪ್ರಕ್ರಿಯೆಯಲ್ಲಿ ಸರಕು ಮಾರಾಟ ಮಾಡಿದ ರೈತರು ಮತ್ತು ಸವಾಲಿನಲ್ಲಿ ಸರಕನ್ನು ತೆಗೆದುಕೊಂಡವರು ಇಬ್ಬರೂ ಆ ಮಧ್ಯವರ್ತಿಗೆ ಶೇಕಡಾ 10% ರಷ್ಟು ಹಣವನ್ನು ನೀಡಬೇಕು. ಏಕೆಂದರೆ ಸರಕನ್ನು ತೆಗೆದುಕೊಂಡವರು ತಕ್ಷಣವೇ ಹಣವನ್ನು ಕೊಡುವುದಿಲ್ಲ. ಅವರ ಪರವಾಗಿ ಆ ಮಧ್ಯವರ್ತಿಯೇ ಹಣವನ್ನು ನೀಡುತ್ತಾನೆ. ಈ ರೀತಿಯಾಗಿ ಹಣವನ್ನು ನೀಡುವುದರ ಮೂಲಕ ಸರಕುಗಳ ಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಅವರಿಬ್ಬರಿಂದಲೂ ಕಸಿದುಕೊಳ್ಳುತ್ತಾನೆ. ಅನೇಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯವೇನೆಂದರೆ ಸರಕುಗಳ ಬೆಲೆ ಕೊಳ್ಳುವವರು ಮತ್ತು ಮಾರುವವರ ನಡುವೆ ನಿರ್ಧಾರವಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಕೊಳ್ಳುವವರು ಮತ್ತು ಮಾರುವವರಿಗಿಂತ ಮಧ್ಯವರ್ತಿಯೇ ಬೆಲೆಯನ್ನು ನಿರ್ಧರಿಸುತ್ತಾನೆ.

     ಇದಕ್ಕೆ ಇನ್ನೊಂದು ಉದಾಹರಣೆ ಕೊಡುವುದಾದರೆ ಭಾರತೀಯ ಸಮಾಜದ `ಗ್ರಾಮೀಣ ಋಣಭಾರತ್ವ ವ್ಯವಸ್ಥೆ’.  ಈ ವ್ಯವಸ್ಥೆಯಲ್ಲಿ ರೈತನು ತಾನು ಬೆಳೆಯನ್ನು ಬೆಳೆಯಲು ಭೂಮಿಯನ್ನು ಉತ್ತಿ-ಬಿತ್ತಲು ಬೀಜ, ಗೊಬ್ಬರ ಮುಂತಾದ ಕಾರ್ಯಚಟುವಟಿಕೆಗಳನ್ನು ಮಾಡಲು ಹಣದ ಅವಶ್ಯಕತೆ ಇರುತ್ತದೆ. ಈ ಅವಶ್ಯಕತೆಯನ್ನು ಈಡೇರಿಸಿಕೊಳ್ಳಲು ಅವನು ಸಾಲ ಕೇಳಲು ಸರ್ಕಾರದ ಕಾಯ್ದೆ-ಕಾನೂನುಗಳನ್ನು ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಬ್ಯಾಂಕುಗಳಿಗೆ ಹೋದರೆ, ಬ್ಯಾಂಕಿನ ಶಿಸ್ತುಬದ್ಧ ನೌಕರದಾರರು, ಅವನಿಗೆ ಹಲವಾರು ದಾಖಲೆಗಳನ್ನು ತರಲು ಸೂಚಿಸುತ್ತಾರೆ. ಮೊದಲೇ ಅಕ್ಷರ ಜ್ಞಾನವಿಲ್ಲದ ಹಾಗೂ ಒಂದು ತೆರನಾದ ವಿಶಿಷ್ಟ ಜ್ಞಾನವನ್ನು ಹೊಂದಿರುವ ರೈತನು ಆ ದಾಖಲೆಗಳನ್ನು ತಂದುಕೊಟ್ಟು ಬ್ಯಾಂಕಿನವರು ಅವುಗಳನ್ನು ಪರಿಶೀಲಿಸಿ ಹಣ ಕೊಡುವ ವೇಳೆಗೆ ಸಮಯ ಸಂದರ್ಭಕ್ಕೆ ಮಾಡಬೇಕಾಗಿರುವ ಬಿತ್ತನೆಯ ಮತ್ತು ಇತ್ಯಾದಿ ಕೃಷಿ ಚಟುವಟಿಕೆಗಳು ಮುಗಿದೇ ಹೋಗಿರುತ್ತವೆ. ಹಾಗಾಗಿ ರೈತರು ಇದನ್ನೆಲ್ಲಾ ತಲೆ ಕೆಡಿಸಿಕೊಳ್ಳದೆ ತಮ್ಮ ಊರುಗಳಲ್ಲೇ ಇರುವ ಲೇವಾದೇವಿಗಾರರ ಹತ್ತಿರ ಯಾವುದೇ ಪತ್ರ ವ್ಯವಹಾರಗಳಿಲ್ಲದೆ ಸುಲಭವಾಗಿ ಹಣವನ್ನು ಪಡೆಯುವತ್ತ ಮುನ್ನಡೆಯುತ್ತಾರೆ. ಹೀಗೆ ರೈತ ತನ್ನ ಅವಶ್ಯಕತೆಗಾಗಿ ಹಣವನ್ನು ಅವರಿಂದ ಪಡೆಯುತ್ತಾನೆ.  ಹಣವನ್ನು ಪಡೆಯುವುದಕ್ಕಿಂತ ಮುಂಚೆಯೇ ಅವರಿಬ್ಬರ ನಡುವೆ ಒಂದು ಒಪ್ಪಂದ ಏರ್ಪಟ್ಟಿರುತ್ತದೆ. ಆ ಹಣವನ್ನು ಪಡೆದ ರೈತನು ತಾನು ಶ್ರಮವಹಿಸಿ ಭೂಮಿತಾಯಿಯೊಂದಿಗೆ ಸಂಘರ್ಷ ಮಾಡಿ ಚೆನ್ನಾಗಿ ಬೆಳೆಯನ್ನು ಬೆಳೆಯುತ್ತಾನೆ. ಆ ಬೆಳೆಯನ್ನು ಮತ್ತೆ ಲೇವಾದೇವಿಗಾರನ ಬಳಿಗೆ ಹೋಗಿ ತನ್ನೆಲ್ಲಾ ಉತ್ಪಾದನೆಯನ್ನು ಸುರಿಯುತ್ತಾನೆ. ಆಗ  ಉತ್ಪಾದನೆಗೆ ಬೆಲೆಯನ್ನಾಗಲಿ ಅಥವಾ ಅದರ ತೂಕದ ಪ್ರಮಾಣವನ್ನಾಗಲಿ ರೈತನು ಗಮನಿಸುವ ಹಾಗಿಲ್ಲ. ಲೇವಾದೇವಿಗಾರನು ಹೇಳಿದ ದರ ಮತ್ತು ಬಳಸಿದ ಮಾಪನವೇ ಅಂತಿಮ. ಈ ಎರಡು ಸಂಗತಿಗಳನ್ನು ಕುರಿತು ರೈತ ಚಕಾರವನ್ನು ಎತ್ತುವಂತಿಲ್ಲ. ಏಕೆಂದರೆ ರೈತನು ಮೊದಲೇ ತಾನು ಅವನ ಒಪ್ಪಂದಕ್ಕೆ ಬದ್ಧನಾಗಿ ಹಣವನ್ನು ಪಡೆದು ತನ್ನ ಅಧಿಕಾರವನ್ನು ಕಳೆದುಕೊಂಡಿರುತ್ತಾನೆ. ಹೀಗೆ ಹಣವು ಹೇಗೆ ಅಶಕ್ತರ ಮೇಲೆ ಶಕ್ತರು ಅಧಿಕಾರವನ್ನು ಸ್ಥಾಪಿಸಲು ಸಹಾಯಕಾರಿಯಾಗಿದೆ ಎಂಬುದನ್ನು ಮನಗಾಣಬಹುದು.

3] ರೂಢಿ ಸಂಪ್ರದಾಯಗಳ ಮೂಲಕ ಅಥವಾ ಸಂಸ್ಕೃತಿಯ ಮೂಲಕ ಅಧಿಕಾರವನ್ನು ನಡೆಸುವುದೇ ಅಧಿಕಾರದ ಮತ್ತೊಂದು ವಿಧವಾಗಿದೆ. ಈ ಅಧಿಕಾರದ ವಿಧದಲ್ಲಿ ಅಧಿಕಾರವನ್ನು ನಡೆಸುವವರು ನೇರವಾಗಿ ಮುನ್ನೆಲೆಗೆ ಬರದೇ ಕೆಲವು ಷಡ್ಯಂತರಗಳ ಮೂಲಕ ತಮ್ಮ ಸ್ವ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಾರೆ. ಉದಾಹರಣೆಗೆ : ಕರ್ನಾಟಕದ ಬುಡಕಟ್ಟುಗಳಲ್ಲಿ ಒಂದಾದ ಕಾಡುಗೊಲ್ಲ ಸಮುದಾಯದಲ್ಲಿ ಒಂದು ವಿಧವಾದ ಸಂಪ್ರದಾಯವಿದೆ. ಅದು ಏನೆಂದರೆ, ಆ ಸಮುದಾಯದಲ್ಲಿ ಮದುವೆಯಾದ ಮೇಲೆ ವಿವಾಹಿತ ಸ್ತ್ರೀಯರು ರವಿಕೆ [ಕುಬುಸ]ಯನ್ನು ಧರಿಸುವುದಿಲ್ಲ. ಏಕೆಂದರೆ ತಮ್ಮ ನಿಜವಾದ ಅಲೌಕಿಕ ಗಂಡನಾದ ಕೃಷ್ಣ, ತಮ್ಮನ್ನು ಗೋಪಿಕಾ ಸ್ತ್ರೀಯರೆಂದು ಭಾವಿಸಿ ತಮ್ಮ ರವಿಕೆ ತೊಡುವುದಿಲ್ಲವೆಂದು ಹೇಳುತ್ತಾರೆ. ಈಗಲು ಕೂಡ ಕೆಲವರು ಈ ಸಂಪ್ರದಾಯವನ್ನು ಆಚರಿಸುತ್ತಿರುವುದನ್ನು ಗಮನಿಸಬಹುದು. ಆದರೆ ಕೆಲವು ಸಂಪ್ರದಾಯವಾದಿಗಳು ಇಲ್ಲಿ ಕೃಷ್ಣನ ಕಥೆಯನ್ನು ಅನಾವಶ್ಯಕವಾಗಿ ತಂದು ತಳಕುಹಾಕಿದ್ದು ಯಾರ ಕಣ್ಣಿಗೂ ಗೋಚರವಾಗದೇ ಹೋಗಿದೆ. ಈ ಸಂಪ್ರದಾಯವನ್ನು ಆ ಸಮುದಾಯದ ಯಾವುದೇ ಒಬ್ಬ ಹೆಣ್ಣಾಗಲಿ ಅಥವಾ ಗಂಡಾಗಲಿ  ಪ್ರಶ್ನಿಸಿದರೆ ಅವಳಿಗೆ ಅಥವಾ ಅವನಿಗೆ ಶಿಕ್ಷಿಸುವ, ನಿರ್ಬಂಧ ಹೇರುವ ಗಟ್ಟಿಯಾದ ಅಂಧ ಸಂಸ್ಕೃತಿಯು ಅವರಲ್ಲಿತ್ತು. ಆ ಸಮುದಾಯದ ಮಹಿಳೆಗೆ  ರವಿಕೆ ತೊಡುವ ಅಧಿಕಾರ ಅವಳಿಗಿಲ್ಲ ಬದಲಾಗಿ ಸಂಪ್ರದಾಯಕ್ಕಿದೆ. ಆ ರೀತಿ ತನ್ನ ಅಧಿಕಾರವನ್ನು ಪ್ರಶ್ನಿಸಬಾರದು ಎಂದು ಕಟ್ಟಾ ಸಂಪ್ರದಾಯವಾದಿಗಳು ಅನೇಕ ರೀತಿಯ ದೇವರ ಹೆಸರಿನಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಿ ತನ್ನ ಅಧಿಕಾರದ ಬಗ್ಗೆ ತಾನು ಪ್ರಶ್ನೆ ಮಾಡಬಾರದ ಹಾಗೆ ವಾತಾವರಣವನ್ನು ನಿರ್ಮಿಸಿಬಿಟ್ಟಿದ್ದಾರೆ.

      ಅದೇ ರೀತಿ  ನನ್ನ ಗಮನಕ್ಕೆ ಬಂದ ಪ್ರಕಾರ  ಉಪ್ಪಾರ ಸಮುದಾಯದಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ ಆ ಸಮುದಾಯದಲ್ಲಿ ಮದುವೆ ಮಾಡುವಾಗ ಕೆಲವರು ‘ಎತ್ತಿಕೊಡುವ’ ಸಂಪ್ರದಾಯವನ್ನು ಅನುಸರಿಸುತ್ತಾರೆ. ಅಂದರೆ ಆ ಸಂಪ್ರದಾಯದ ಬಹುಮುಖ್ಯ ಕರಾರು ಏನೆಂದರೆ ಆ ಮದುವೆ ನಡೆಯುವಾಗ ಹೆಣ್ಣಿನ ಮನೆಯವರು ಯಾವುದೇ ರೀತಿಯ ಶಾಸ್ತ್ರ, ಆಚರಣೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹೆಣ್ಣಿನ ಮನೆಯವರು ಮದುಮಗಳನ್ನು ಮಾಡುವ ಶಾಸ್ತ್ರವನ್ನು ಮಾಡಿ ಗಂಡಿನ ಮನೆಯವರಿಗೆ ಕೊಟ್ಟುಬಿಡುವುದು ಅμÉ್ಟೀ. ಇದು ಒಂದು ಕರಾರು ಆದರೆ, ಮತ್ತೊಂದು ಕರಾರು ಎಂದರೆ ಹಾಗೇ ಮಾಡಿದ  ಮಹಿಳೆಯು ಮುಂದಿನ ದಿನಮಾನಗಳಲ್ಲಿ ತನ್ನ ಅಣ್ಣ-ತಮ್ಮಂದಿರ ಮದುವೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಒಂದು ವೇಳೆ ಪಾಲ್ಗೊಂಡರೂ, ಅವಳು ಯಾವುದೇ ರೀತಿಯ ಶಾಸ್ತ್ರ, ಆಚರಣೆಗಳನ್ನು ಮಾಡುವಂತಿಲ್ಲ. ಇಲ್ಲಿ ಮೊದಲ ಕರಾರಿನ ಪ್ರಕಾರ ಮದುಮಗಳ ಮನೆಯವರು ತಮ್ಮ ಅಧಿಕಾರವನ್ನು ಕಳೆದುಕೊಂಡಂತಾಯಿತು. ಇನ್ನೂ ಎರಡನೇ ಕರಾರಿನ ಪ್ರಕಾರ ಮದುವೆಯಾದ ಆ ಮಹಿಳೆ ತನ್ನ ಅಧಿಕಾರವನ್ನು ಕಳೆದುಕೊಂಡಂತಾಯಿತು. ಅಂದರೆ  ‘ಎತ್ತಿಕೊಡುವ’ ಸಂಪ್ರದಾಯವು ಅವರ ಅಧಿಕಾರವನ್ನು ಮೊಟಕುಗೊಳಿಸಿತು. ಹೀಗೆ ಮಾಡುವುದು ತಪ್ಪೆಂದು ಹೇಳಿದರೆ ಒಮ್ಮೊಮ್ಮೆ ಮದುವೆಗಳು ಮುರಿದು ಬೀಳುವ ಸಂಭವವು ಹೆಚ್ಚಾಗಿರುವುದರಿಂದ  ತಮ್ಮ ಅಧಿಕಾರವನ್ನು ಬದಿಗೊತ್ತಿ ಮದುವೆ ಮಾಡುವ ಸಂದರ್ಭಗಳು ನಮ್ಮ ಕಣ್ಣಮುಂದೆಯೇ ನಡೆದಿವೆ.

4] ಕೇವಲ ದೈಹಿಕ ಶಕ್ತಿಯ ಮೂಲಕ ಇಲ್ಲವೇ ಹಣದ ಮೂಲಕ ಅಧಿಕಾರ ನಡೆಸುವುದಕ್ಕಿಂತ ಭಿನ್ನವಾದ ಇನ್ನೊಂದು ಅಧಿಕಾರದ ವಿಧ ಇದೆ. ಅದು ಭಾμÉಯ ಮೂಲಕ ಸ್ಥಾಪಿಸುವ ಅಧಿಕಾರವಾಗಿದೆ. ಮೊದಲನೆಯದಾಗಿ ಪ್ರಾಚೀನ ಕಾಲದಿಂದ 12ನೇ ಶತಮಾನದವರೆಗೆ ಸಂಸ್ಕೃತ ಭಾಷೆಯು ಕನ್ನಡದ ಮೇಲೆ ದಬ್ಬಾಳಿಕೆಯನ್ನು ನಡೆಸಿತು. ಅಂದರೆ ಸಂಸ್ಕೃತವು ದೇವಭಾಷೆ ಅಥವಾ ಅಧ್ಯಾತ್ಮಿಕ ಭಾಷೆಯಾಗಿ ಅನೇಕ ಜ್ಞಾನಗಳನ್ನು ಕಟ್ಟಿಕೊಡುವ ಪವಿತ್ರ ಗ್ರಂಥಗಳನ್ನು ರಚಿಸಿಡುವ ಒಂದು ಪವಿತ್ರ ಭಾಷೆಯಾಯಿತು. ತದನಂತರದಲ್ಲಿ ರಾಜಪ್ರಭುತ್ವದ ಭಾಷೆಯಾಗಿಯೂ ಸಂಸ್ಕೃತ ಭಾಷೆಯು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಇದು ರಾಜರುಗಳ ಆಶ್ರಯವನ್ನು ಅವಲಂಬಿಸಿ ಜನರಿಗೆ ತಮ್ಮ ಮೂಲ ಭಾಷೆಯನ್ನು ಮರೆತು ತನ್ನತ್ತ ಸೆಳೆಯುವ ಹುನ್ನಾರು ನಡೆಸಿತು. ಅದಕ್ಕಾಗಿಯೇ ಸಾಹಿತ್ಯ ಆರಂಭಿಕ ಘಟ್ಟದಲ್ಲಿ ಅನೇಕ ವಿದ್ವಾಂಸರು ತಮ್ಮ ವಿಚಾರಗಳನ್ನು ಸಂಸ್ಕೃತದಲ್ಲಿಯೇ ವ್ಯಕ್ತಪಡಿಸುವುದರೊಂದಿಗೆ ಗ್ರಂಥಗಳನ್ನು ಕೂಡಾ ರಚಿಸಿದರು. ನಂತರದಲ್ಲಿ ಸಂಸ್ಕೃತ ಭಾಷೆಯು ಮೊದಲು ಗ್ರಾಮಗಳಿಗೆ ಇದ್ದ ಹೆಸರುಗಳನ್ನು ಬದಲಿಸುವತ್ತ ಮುನ್ನಡೆದು ತನ್ನ ಕಾರ್ಯವನ್ನು ಯಶಸ್ವಿಗೊಳಿಸಿತು. ಗ್ರಾಮಗಳ ಮೂಲ ಹೆಸರುಗಳು ತಮ್ಮ ಚರಿತ್ರೆಯನ್ನು ತಿಳಿಸುವಂತಹವುಗಳಾಗಿದ್ದರೂ ಈ ರೀತಿಯಾಗಿ ಸಂಸ್ಕೃತ ಭಾಷೆಯು ಆ ಚರಿತ್ರೆಯನ್ನು ಹೊಸ ಹೊಸ ಹೆಸರುಗಳನ್ನು ನಾಮಕರಣಗೊಳಿಸುವುದರ ಮೂಲಕ ನಾಶಪಡಿಸಲಾಯಿತು. ನಂತರದಲ್ಲಿ ಸಂಸ್ಕೃತವು ವ್ಯಕ್ತಿಗಳ ಹೆಸರುಗಳನ್ನು ಬದಲಿಸುವಲ್ಲಿ ದಾಪುಗಾಲಿಸಿತು. ಅಂದರೆ ಮೊದಲು ಇದ್ದ ಹೆಸರುಗಳು ಅವರ ಗುಣ ವಿಶೇಷತೆಗಳನ್ನು ಸೂಚಿಸುವಂತಹವುಗಳಾಗಿದ್ದವು. ಉದಾಹರಣೆಗೆ ಕರಿ ಬಣ್ಣ ಹೊಂದಿರುವ ವ್ಯಕ್ತಿಯನ್ನು ಕರಿಯಪ್ಪ ಎಂದು ನಾಮಕರಣ ಮಾಡುವ ನೈತಿಕತೆ ಇತ್ತು. ಗುಣವಿಶೇಷತೆಗಳ ಮೂಲಕವೇ ನೋಡುವ ಮನಸ್ಥಿತಿ ಸ್ಥಳೀಯ ಭಾಷೆಯಲ್ಲಿರುವುದರಿಂದ ಇದನ್ನು ಕಳಚಿ ಹಾಕಲು ಸಂಸ್ಕೃತವು ರಾಮ, ಕೃಷ್ಣ, ವೇದಪ್ರಿಯಾ ಮುಂತಾದ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಎಲ್ಲಾ ಜ್ಞಾನವು ಸಂಸ್ಕೃತ ಭಾಷೆಯಲ್ಲಿ ಸಿಗುವುದರಿಂದ, `ದ್ವಿಜ’ರ [ಎರಡು ಬಾರಿ ಜನಿಸಿದವರು] ಭಾಯಾಗಿ ಮತ್ತು ಸಂಸ್ಕೃತವು ಎಲ್ಲಾ ರಾಜಪ್ರಭುತ್ವದಲ್ಲಿ ಇರುವುದರಿಂದ ಸಂವಹನಕ್ಕೆ ಅನುಕೂಲಕರವಾಗಿರುವುದರಿಂದ ಸಂಸ್ಕೃತವು ಅತ್ಯುನ್ನತ ಮಟ್ಟವನ್ನು ತಲುಪಿ ಸ್ಥಳೀಯ ಭಾಷೆಗಳ ಮೇಲೆ ತನ್ನ ಅಧಿಕಾರವನ್ನು ಸ್ಥಾಪನೆ ಮಾಡಿತು.

     11 ಮತ್ತು 12ನೇ ಶತಮಾನದಲ್ಲಿ ವಚನ ಚಳುವಳಿಯ ಪರಿಣಾಮವಾಗಿ ಸಂಸ್ಕೃತ ಭಾಷೆಯ ಹಿರಿಮೆಯ ಅಧಿಕಾರ ಸ್ವಲ್ಪ ಮಟ್ಟಿಗೆ ಕೆಳಸ್ಥರಕ್ಕೆ ಬಂದು ನಿಂತಿತು. ಇದಾದ ನಂತರ ಮತ್ತೆ 13ನೇ ಶತಮಾನದಿಂದ 17ನೇ ಶತಮಾನದವರೆಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳು ತಮ್ಮ ಪ್ರಭಾವವನ್ನು ಬೀರಿದವು. ಆದರೆ ಇವುಗಳು ಸಂಸ್ಕೃತ ಭಾಷೆ ಬೀರಿದಷ್ಟು ಪ್ರಭಾವ ಬೀರಲಿಲ್ಲ. ಈ ಎರಡು ಭಾಷೆಗಳು ಕೇವಲ ಆಡಳಿತಾತ್ಮಕವಾಗಿ ಮಾತ್ರ ತಮ್ಮ ಅಧಿಕಾರವನ್ನು ಚಲಾಯಿಸಿದವು. ಭಾರತಕ್ಕೆ ಯುರೋಪಿಯನ್ನರ ಆಗಮನದ ನಂತರ ಈ ಭಾಷೆಗಳು ಕೂಡಾ ಸ್ಥಳೀಯ ಭಾಷೆಗಳಿಂದ ತಕ್ಕಮಟ್ಟಿಗೆ ದೂರ ಸರಿದವು.

      ಮತ್ತೆ 18ನೇ ಶತಮಾನದಿಂದ ಇತ್ತೀಚಿನ ದಿನಮಾನದವರೆಗೆ ಇಂಗ್ಲಿಷ್ ಭಾಷೆಯು ಸ್ಥಳೀಯ ಭಾಷೆಗಳ ಮೇಲೆ ತಮ್ಮ ಪ್ರಭಾವವನ್ನು ಬೀರಿತು. ಇಂಗ್ಲಿಷ್ ಭಾಷೆಯು ‘ಸಮಾನತೆ’, ‘ಸಾರ್ವತ್ರಿಕ ಶಿಕ್ಷಣದ’ ಹೆಸರಿನಲ್ಲಿ ಹೊಸ ಮುಖವಾಡವನ್ನು ಹಾಕಿಕೊಂಡು ತನ್ನ ಅಧಿಕಾರವನ್ನು ನಿಧಾನವಾಗಿ ಚಲಾಯಿಸಲು ಪ್ರಾರಂಭಿಸಿತು. ಮುಂದೆ ಈ ಭಾಷೆ ಆಡಳಿತದ ಭಾಷೆಯಾಗಿ ಹಾಗೂ ಹಲವಾರು ಜ್ಞಾನಶಿಸ್ತುಗಳ ಭಾಷೆಯಾಗಿ ಹೊರಹೊಮ್ಮಿತು. ಪ್ರಸ್ತುತ ದಿನಮಾನಗಳಲ್ಲಿ ಉದ್ಯೋಗದ ಭಾಷೆ, ಅನ್ನದ ಹಾಗೂ ಪ್ರತಿಷ್ಠೆಯ ಭಾಷೆಯಾಗಿ ತೋರ್ಪಡುತ್ತಿದೆ. ಆಂಗ್ಲ ಭಾಷೆಯೊಂದಿಗೆ ಹಿಂದಿ ಭಾಷೆಯು ಸಹ ತನ್ನ ಅಧಿಕಾರವನ್ನು ಪಡೆದುಕೊಳ್ಳಬೇಕು, ಸ್ಥಳೀಯ ಭಾಷೆಗಳ ಮೇಲೆ ತನ್ನ ಪ್ರಭಾವವನ್ನು ಬೀರಬೇಕೆನ್ನುವ ಹಂಬಲದಿಂದ ತುದಿಗಾಲಲ್ಲಿ ನಿಂತಿದೆ. ಅದಕ್ಕೆ ಪೂರಕವಾಗಿ ಅನೇಕ ಹುನ್ನಾರಗಳನ್ನು ಸಹ ಹೂಡುತ್ತಿದೆ. ಮುಂದೊಂದು ದಿನ ಹಿಂದಿ ಭಾಷೆಯು ತನ್ನ ಅಧಿಕಾರವನ್ನು ನಡೆಸುತ್ತದೆ. ಹೀಗೆ ಸ್ಥಳೀಯ ಭಾಷೆಗಳು ಒಂದಾದ ನಂತರ ಒಂದರಂತೆ, ಅನ್ಯ ಭಾಷೆಗಳ ಹಿಡಿತಕ್ಕೆ ಸಿಕ್ಕಿ ತಮ್ಮತನವನ್ನು ಕಳೆದುಕೊಂಡು ಅವನತಿ ಹೊಂದುವ ಹಂತದಲ್ಲಿವೆ. ಸ್ಥಳೀಯ ಭಾಷೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ಆಯಾ ಭಾಷಿಕ ವಿದ್ವಾಂಸರು ಮತ್ತು ಸಾಮಾನ್ಯ ಜನರಿಗೆ ಎದುರಾಗಿರುವ ಬಹುದೊಡ್ಡ  ಸವಾಲಾಗಿದೆ.

5] ಸಂಘ -ಸಂಸ್ಥೆಗಳ ಮೂಲಕ  ನಡೆಸುವ  ಅಧಿಕಾರವು, ಅಧಿಕಾರದ ಮತ್ತೊಂದು ವಿಧವಾಗಿದೆ. ಕೆಲವರು ಅಶಕ್ತರ ಮೇಲೆ ನೇರವಾಗಿ ತಮ್ಮ ಅಧಿಕಾರವನ್ನು ಸಾಧಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಹಾಗೆ ಮಾಡಲು ಇನ್ನೂ ಕೆಲವರು  ಅಡ್ಡ ಗೋಡೆಗಳಾಗಿ ನಿಲ್ಲುತ್ತಾರೆ. ಆವಾಗ ಅಧಿಕಾರವನ್ನು ಪಡೆಯಬೇಕಾದವರು ಹೇಗಾದರೂ ಮಾಡಿ ಅಧಿಕಾರವನ್ನು ಪಡೆಯಲೇಬೇಕೆಂದು  ಸಂಚು ಮಾಡಿ ಸಂಘ-ಸಂಸ್ಥೆಗಳ ಮೂಲಕ ಅಧಿಕಾರ ಚುಕ್ಕಾಣಿಯನ್ನು ಹಿಡಿಯುವರು. ಉದಾಹರಣೆಗೆ : ಪೌರಾತ್ಯ ಸಮಾಜಗಳ ಮೇಲೆ ಪಾಶ್ಚಿಮಾತ್ಯ ಸಮಾಜಗಳು ತಮ್ಮ ಅಧಿಕಾರದ ಸ್ಥಾಪನೆಗಾಗಿ ಮತ್ತು ಪೌರಾತ್ಯ ಸಮಾಜಗಳ ಮೇಲೆ ತಮ್ಮ ಪ್ರಭಾವವನ್ನು ಬೀರುವುದಕ್ಕಾಗಿ ಡಬ್ಲೂ.ಟಿ.ಓ , ಯುನಿಸೆಫ್, ಐ.ಎಮ್.ಎಫ್ , ಡಬ್ಲೂ.ಎಚ್.ಓ ಮುಂತಾದ ವಿಭಿನ್ನ ನಾಟಕ ರಂಗಗಳನ್ನು ನಿರ್ಮಿಸಿ ಪೌರಾತ್ಯ ಸಮಾಜಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಇವುಗಳಲ್ಲಿ ಡಬ್ಲೂ.ಟಿ.ಓ [ವಿಶ್ವ ವ್ಯಾಪಾರ ಸಂಘಟನೆ]ಯು ಹೇಳುತ್ತದೆ, ಒಪ್ಪಂದಕ್ಕೆ ಸಹಿಹಾಕಿರುವ ಎಲ್ಲಾ ದೇಶಗಳು ತಮ್ಮ ದೇಶದಲ್ಲಿ ಸಬ್ಸಿಡಿಗಳನ್ನು ಕೊಡುವುದನ್ನು  ನಿಲ್ಲಿಸಬೇಕೆಂದು ಹೇಳುತ್ತದೆ. ಇವುಗಳ ಹಠಮಾರಿ ಧೋರಣೆ, ಕಪಿಮುಷ್ಟಿ ಹಾಗೂ  ವಿಶ್ವ ವ್ಯಾಪಾರಿ ಸಂಘಟನೆ ಮೂಲಕ ಎಲ್ಲಾ ರಾಷ್ಟ್ರಗಳ ವಹಿವಾಟನ್ನು ತಮ್ಮ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವ ಮೂಲಕ ತಮಗೆ ಮಾತ್ರ ಲಾಭವಾಗುವಂತೆ  ನೋಡಿಕೊಳ್ಳುವ ಹುನ್ನಾರು ಸ್ಪಷ್ಟವಾಗಿ ಗೋಚರವಾಗುತ್ತದೆ. ಭಾರತ ದೇಶವು ತನ್ನ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳ ಅಭಿವೃದ್ದಿ ಸಾಧಿಸಬೇಕಾದರೆ  ಸಬ್ಸಿಡಿಗಳನ್ನು  ಕೊಡಲೇಬೇಕಾಗುತ್ತದೆ. ಭಾರತವು ಈ ಸ್ವಾತಂತ್ರವನ್ನು ಕಳೆದುಕೊಂಡಿದೆ. ಯಾಕೆಂದರೆ ಭಾರತವು ಡಬ್ಲೂ.ಟಿ.ಓ [ವಿಶ್ವ ವ್ಯಾಪಾರ ಸಂಘಟನೆ]ಯ  ಒಪ್ಪಂದಕ್ಕೆ ಸಹಿ ಹಾಕಿ, ಸ್ವತಂತ್ರವಾಗಿ ಸಬ್ಸಿಡಿಯನ್ನು ಕೊಡುವ ತನ್ನ  ಅಧಿಕಾರವನ್ನು ಕಳೆದುಕೊಳ್ಳವುÀದರ ಜೊತೆಗೆ ಅವರ ಅಧಿಕಾರವನ್ನು ಪ್ರಶ್ನಿಸುವ ಅಧಿಕಾರವನ್ನೂ ಕೂಡಾ ಕಳೆದುಕೊಂಡಿದೆ.

    ಹಾಗೆಯೇ ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ ಪ್ರಸ್ತುತ ಭಾರತೀಯ ಸಮಾಜದಲ್ಲಿ ತನ್ನ ಬಲವಾದ ತೋಳುಗಳನ್ನು ಚಾಚಿನಿಂತಿರುವ ಎಮ್.ಎನ್.ಸಿ  [ಬಹುರಾಷ್ಟ್ರೀಯ ಕಂಪನಿ]ಗಳು. ಇವುಗಳು ಯಾವುದೇ ಒಂದು ಉತ್ಪನ್ನವನ್ನು ರಾಶಿ ರಾಶಿ ತಂದು ಹಾಕುವುದು. ವಿಸ್ತಾರವಾದ μÉೂೀರೂಂಗಳನ್ನು ಒಳಗೊಂಡ ಬೃಹತ್ ಕಟ್ಟಡ ವ್ಯವಸ್ಥೆ ಮಾಡುವುದು. ವಸ್ತುಗಳನ್ನು ಕೊಳ್ಳಲು ಹಾತೊರೆಯುವಂತೆ ಮಾಡುವ ಪ್ರದರ್ಶನ, ತಮ್ಮಲ್ಲಿ ಅತ್ಯುತ್ತಮ ಸರಕು ಲಭಿಸುತ್ತದೆ ಎಂದು ಬಿಂಬಿಸುವುದು. ಸಾಧ್ಯವಾದಾಗ ಬೆಲೆ ಕಡಿಮೆ ನಿಗದಿ ಮಾಡಿ, ರಿಯಾಯ್ತಿ ಕೊಟ್ಟು ಅದನ್ನು ಪ್ರದರ್ಶಿಸುವುದು. ಆಗಿಂದಾಗ್ಗೆ ಕೆಲವೊಂದು ಸರಕನ್ನು ಬಹಳ ಇಳಿಸಿದ ದರಗಳಲ್ಲಿ ‘ಸೇಲ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುವುದು ಎಂ.ಎನ್.ಸಿ ಶೈಲಿಯ ಮಳಿಗೆಗಳ ವೈಶಿಷ್ಟ್ಯ. ಈ ತೆರನಾದ ಮಾಯಾ ನರ್ತನಕ್ಕೆ  ಮೋಡಿಗೊಂಡ ಜನರು, ಭಾರತೀಯ ಸಮಾಜದಲ್ಲಿಯೇ  ಸೃಷ್ಟಿಗೊಳ್ಳುತ್ತಿರುವ ಗುಡಿಕೈಗಾರಿಕೆಗಳ ವಸ್ತುಗಳನ್ನು ಮೂಸಿಯೂ ಕೂಡಾ ನೋಡಲಿಲ್ಲ. ಈ ರೀತಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಗುಡಿ ಕೈಗಾರಿಕೆಗಳ ಅಧಿಕಾರವನ್ನೇ ಕಸಿದುಕೊಂಡವು. ಗುಡಿಕೈಗಾರಿಕೆಗಳು ತಮ್ಮ ಅಧಿಕಾರವನ್ನು ಪ್ರಶ್ನೆ ಮಾಡದ ಹಾಗೆ ಹಾಗೂ ಭಾರತದಲ್ಲಿನ ಸರ್ಕಾರಗಳು ಇವರ ಅಧಿಕಾರ ಬಗ್ಗೆ ತಾವು ಪ್ರಶ್ನೆ ಮಾಡದ ಹಾಗೇ ತಮ್ಮ ಬಾಯಿಗೆ ತಾವೇ ಬೀಗ ಹಾಕಿಕೊಂಡು ಕುಳಿತಿವೆ.

6] ಕಾನೂನುಗಳ ಮೂಲಕ ಅಧಿಕಾರವನ್ನು ಪಡೆಯುವ ಅಥವಾ ಅಧಿಕಾರವನ್ನು ನಡೆಸುವುದು ಅಧಿಕಾರದ ಇನ್ನೊಂದು ವಿಧವಾಗಿದೆ. ಸ್ವತಂತ್ರ ನಂತರದ ದಿನಮಾನಗಳಲ್ಲಿ ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಬೃಹತ್ ಯೋಜನೆಗಳನ್ನು ರೂಪಿಸಲಾಯಿತು. ಇದರ ಪರಿಣಾಮವಾಗಿ ದೊಡ್ಡ ದೊಡ್ಡ ಆಣೆಕಟ್ಟುಗಳು, ಗಣಿಗಾರಿಕೆ, ಉದ್ಯಮ ಮತ್ತು ರಸ್ತೆಗಳು ನಿರ್ಮಾಣವಾದವು. ಈ ಕಾರ್ಯಕ್ರಮಗಳ ಜಾರಿಯಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಅತೀ ಹೆಚ್ಚು ಎನ್ನಿಸುವಷ್ಟು ಅರಣ್ಯ ನಾಶಕ್ಕೆ ಕಾರಣವಾಯಿತು. ಇದೇ ಸಂದರ್ಭದಲ್ಲಿ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಕುರಿತಾದ ಕಾನೂನುಗಳು ಜಾರಿಗೆ ಬಂದವು. ಇವುಗಳಲ್ಲಿ ಕರ್ನಾಟಕ ಅರಣ್ಯ ನೀತಿ-1963, ಕರ್ನಾಟಕ ಅರಣ್ಯ ನಿಯಮ-1969 ಮತ್ತು ಅರಣ್ಯ ಸಂರಕ್ಷಣಾ ನೀತಿ-1980. ಈ ಕಾನೂನುಗಳನ್ನು ಜಾರಿಗೊಳಿಸಿರುವುದರಿಂದ ಜನರು ಜೀವನೋಪಾಯಕ್ಕಾಗಿ ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿರುವ ಆದಿವಾಸಿ ಸಮುದಾಯದ ಜನರ ಜೀವನ ತೊಂದರೆಗೊಳಗಾಯಿತು. ಉದಾಹರಣೆಗೆ: ಕುದುರೆಮುಖ, ಚಾರ್ಮಾಡಿ ಮತ್ತು ಆಗುಂಬೆಯ ಗೌಡ್ಲು ಮತ್ತು ಮಲೆಕುಡಿಯರು, ಕೊಡಗಿನ ಕುಡಿಯರು ಮತ್ತು ಹೆರವರು, ಉತ್ತರ ಕನ್ನಡದ ಕುಣಿಬಿಯರು, ಗೌಳಿಗರು, ಸಿದ್ಧಿಯರು, ಹೆಗ್ಗಡದೇವನ ಕೋಟೆ, ಕಬಿನಿ ಹಾಗೂ ನಾಗರಹೊಳೆಯ ಜೇನು ಕುರುಬರು, ಕಾಡುಕುರುಬರು, ಶರಾವತಿ ಜಲಾನಯನ ಪ್ರದೇಶದ ಹಸಲರು ಮತ್ತು ಕುಣಿಬಿಯರು ಮುಂತಾದ ಆದಿವಾಸಿಗಳು, ಸರಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಬಲಾಢ್ಯರ ತೋಟಗಳ ವಿಸ್ತರಣೆಯ ಕಾಲ್ತುಳಿತಕ್ಕೆ ಸಿಕ್ಕಿ ಪರಿತಪಿಸುತ್ತಿವೆ. ಇಂತಹ ಅಭಿವೃದ್ಧಿ ಯೋಜನೆಗಳಿಂದ ಆ ಆದಿವಾಸಿ ಸಮುದಾಯದ ಜನರು ತಲಾತಲಾಂತರದಿಂದ ಬಂದ ಕಾಡಿನ ಮೇಲಿನ ಅಧಿಕಾರವನ್ನೇ ಕಳೆದುಕೊಂಡು ಸೂರಿಲ್ಲದವರಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಮಾರಿಗಳಂತೆ ಅಲೆಯುತ್ತಿದ್ದಾರೆ. ಅವರ ಈ ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಮಾಡುವವರು ಯಾರು? ಅವರ ಪರವಾಗಿ ಧ್ವನಿ ಎತ್ತುವವರು ತೀರಾ ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಆದಿವಾಸಿಗಳ ಪಾಡು ಚಿಂತಾಜನಕವಾಗಿದೆ.

7] ಭಾಯ ಮೂಲಕ ಹಾಗೂ ಕಾನೂನುಗಳ ಮೂಲಕ ಅಧಿಕಾರವನ್ನು ನಡೆಸುವುದಲ್ಲದೇ ಇನ್ನೊಂದು ವಿಧದ ಮೂಲಕವೂ ಅಧಿಕಾರವನ್ನು ನಡೆಸಬಹುದು. ಅದುವೇ ‘ವ್ಯವಸ್ಥೆಗಳ’ ಮೂಲಕ ಅಧಿಕಾರವನ್ನು  ನಡೆಸುವ ವಿಧ. ಭಾರತೀಯ ಸಮಾಜದಲ್ಲಿನ ವ್ಯವಸ್ಥೆಗಳು ಸಹ ಅಧಿಕಾರವನ್ನು ನಡೆಸಿವೆ. ಉದಾಹರಣೆಗೆ: ಪ್ರಾಚೀನ ಭಾರತೀಯ ಸಮಾಜದಲ್ಲಿ ಬರುವ ‘ವರ್ಣವ್ಯವಸ್ಥೆ’ ಇದರಲ್ಲಿ

     “ಬ್ರಾಹ್ಮಣೋಸ್ಯ ಮುಖ ಮಾಸಿತಃ ಬಾಹೊ ರಾಜನ್ಯ ಕೃತಃ

     “ಉರೂತದಸ್ಯ ಯದೈಶ್ಯಃ ಪದ್ದ್ಯಾಗಂ ಶೂದ್ರ ಅಜಾಯತಃ”[4]

ಈ ಶ್ಲೋಕದ ಅರ್ಥವೇನೆಂದರೆ ಪುರುಷ ಅಥವಾ ಬ್ರಹ್ಮನ ದೇಹದ ವಿವಿಧ ಅಂಗಗಳಿಂದ ನಾಲ್ಕು ವರ್ಣಗಳು ಹುಟ್ಟಿಕೊಂಡವೆಂದು ಪುರುಷ ಸೂಕ್ತದಲ್ಲಿ ತಿಳಿಸಲಾಗಿದೆ. ಬ್ರಾಹ್ಮಣರು ಪುರುಷನ/ಬ್ರಹ್ಮನ ಮುಖದಿಂದ ಅಥವಾ ತಲೆಯಿಂದ, ಕ್ಷತ್ರಿಯರು ಪುರುಷನ/ಬ್ರಹ್ಮನ ತೋಳುಗಳಿಂದ, ವೈಶ್ಯರು ಪುರುಷನ/ಬ್ರಹ್ಮನ ಉದರ ಅಥವಾ ತೊಡೆಯಿಂದ ಮತ್ತು ಶೂದ್ರರು ಅವನ ಪಾದಗಳಿಂದ ಉಗಮಗೊಂಡವರೆಂದು ಅಭಿಪ್ರಾಯಪಡಲಾಗಿದೆ. ಈ ವರ್ಗೀಕರಣವನ್ನಾಧರಿಸಿ ಒಂದೊಂದು ವರ್ಣಕ್ಕೂ ಒಂದೊಂದು ಕಾರ್ಯಚಟುವಟಿಕೆಗಳನ್ನು ನೀಡಲಾಗಿದೆ. ಅವುಗಳು ಈ ಕೆಳಗಿನಂತಿವೆ

      ಬ್ರಾಹ್ಮಣರಿಗೆ: ಕಲಿಸುವುದು, ಕಲಿಯುವುದು, ಹೋಮಹವನ ಮಾಡುವುದು.

      ಕ್ಷತ್ರಿಯರಿಗೆ: ರಾಜ್ಯವನ್ನು ಆಳುವುದು, ಪ್ರಜೆಗಳ ರಕ್ಷಣೆ, ದಾನ ನೀಡುವುದು.

     ವೈಶ್ಯರಿಗೆ: ವ್ಯಾಪಾರ, ಕೃಷಿ, ಪಶುರಕ್ಷಣೆ.

     ಶೂದ್ರರಿಗೆ: ಉಳಿದ ವರ್ಣಗಳ ಸೇವೆಗಳನ್ನು ಮಾಡುವುದು.[5]

ಈ ತೆರನಾದ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿರುವರು. ಆದರೆ ಈ ವರ್ಣ ವ್ಯವಸ್ಥೆಯು ಕೇವಲ ಪುರುಷರಿಗೆ ಮಾತ್ರ ಸಂಬಂಧಿಸಿವೆ.  ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದ ಹೆಣ್ಣುಮಗಳಿಗೆ ಕಲಿಸುವ, ಕಲಿಯುವ, ಹೋಮಹವನ ಮಾಡುವ ಅಧಿಕಾರ ಇಲ್ಲ. ಅದರಂತೆಯೇ ಕ್ಷತ್ರಿಯ ವರ್ಣದಲ್ಲಿ ಹುಟ್ಟಿದ ಹೆಣ್ಣುಮಗಳಿಗೆ  ರಾಜ್ಯವನ್ನು ಆಳುವ, ಪ್ರಜೆಗಳನ್ನು ರಕ್ಷಣೆ ಮಾಡುವ, ಸ್ವತಂತ್ರವಾಗಿ ದಾನ ನೀಡುವ ಅಧಿಕಾರವಿಲ್ಲ. ವೈಶ್ಯ ವರ್ಣದಲ್ಲಿ ಜನಿಸಿದ ಹೆಣ್ಣುಮಗಳಿಗೆ ವ್ಯಾಪಾರ ಮಾಡುವ, ಪಶುಗಳನ್ನು ರಕ್ಷಿಸುವ, ಭೂಮಿಯಲ್ಲಿ ದುಡಿದರೂ ಭೂಮಿಯ ಒಡತಿಯಾಗುವ ಅಧಿಕಾರವಿಲ್ಲ. ಹೀಗಿರುವಾಗ ಅವಳಿಗೆ ವರ್ಣ ವ್ಯವಸ್ಥೆಯು ಅನ್ವಯಿಸುವುದೇ ಇಲ್ಲ.

       ಇನ್ನೊಂದು ಉದಾಹರಣೆ ನೋಡುವುದಾದರೆ ಇದಕ್ಕೆ ಸರಿಯಾಗಿ ಹೊಂದುವುದು `ವರ್ಗ ವ್ಯವಸ್ಥೆ’.  ವರ್ಗವ್ಯವಸ್ಥೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ಎನ್ನುವ ಒಂದು ವರ್ಗವು ಕಾರ್ಮಿಕರಿಗೆ  ಕಡಿಮೆ ಕೂಲಿ ಕೊಟ್ಟು ಹೆಚ್ಚು ಕೆಲಸ ಮಾಡಿಸಿಕೊಂಡು ಅಧಿಕ ಆದಾಯವನ್ನು ಪಡೆಯುತ್ತಾರೆ. ಇದನ್ನು ಕಾರ್ಲ್‍ಮಾಕ್ರ್ಸ್‍ರವರು  1848ರಲ್ಲಿ ರಚಿಸಿದ `ಮ್ಯಾನಿಫೆಸ್ಟೊ ಆಫ್ ದಿ ಕಮ್ಯೂನಿಸ್ಟ್ ಪಾರ್ಟಿ’ [mಚಿಟಿiಜಿesಣe oಜಿ ಣhe ಛಿommuಟಿisಣ ಠಿಚಿಡಿಣಥಿ] ಎಂಬ ಗ್ರಂಥದಲ್ಲಿ `ಮಿಗುತಾದ ಮೌಲ್ಯ’ ಅಥವಾ `ಹೆಚ್ಚುವರಿ ಮೌಲ್ಯ’ [suಡಿಠಿಟus vಚಿಟue] ಎಂದು ಕರೆದಿದ್ದಾರೆ. ಉದಾಹರಣೆಗೆ: ಕಾರ್ಮಿಕನೊಬ್ಬ ತನಗೆ ದೊರಕುವ ಕೂಲಿಗೆ ತಕ್ಕಂತೆ 5 ಘಂಟೆಗಳು ದುಡಿಯುವ ಬದಲಿಗೆ 10 ಘಂಟೆಗಳ ಕಾಲ ದುಡಿಯುತ್ತಾನೆ. ಅಂದರೆ ಅರ್ಧ ಸಮಯ ಕೂಲಿಗಾಗಿ ದುಡಿದರೆ ಇನ್ನರ್ಧ ಸಮಯವನ್ನು ತನ್ನ ಯಜಮಾನನಿಗಾಗಿ ದುಡಿಯುತ್ತಾನೆ. ಹೀಗೆ ತನ್ನ ಯಜಮಾನನಿಗಾಗಿ ದುಡಿದ ಆ ಅರ್ಧ ಸಮಯ ಹಾಗೂ ಶ್ರಮದಿಂದ  ಉತ್ಪತ್ತಿಯಾಗುವ ಮೌಲ್ಯವನ್ನೇ ಕಾರ್ಲ್‍ಮಾಕ್ರ್ಸ್ ರವರು ‘ಮಿಗುತಾದ ಮೌಲ್ಯ’ ಎಂದು ಕರೆಯುತ್ತಾರೆ. ಇಂತಹ ಹೆಚ್ಚುವರಿ ಮೌಲ್ಯ ಹೆಚ್ಚುತ್ತಿದಂತೆ ಬಂಡವಾಳಶಾಹಿಗಳು ವಸ್ತುಗಳ ಬೆಲೆಯನ್ನು ಸಹ ಹೆಚ್ಚು ಮಾಡುತ್ತಾರೆ. ಇದರಿಂದಾಗಿ ಶ್ರಮಿಕರ ಮೇಲೆ ಇನ್ನಷ್ಟು ಶೋಷಣೆಯಾಗುತ್ತದೆ. ಅಂದರೆ ಕಡಿಮೆ ಸಂಬಳ ಪಡೆಯುವ ಕಾರ್ಮಿಕರು ತಾವೇ ಉತ್ಪಾದಿಸಿದ ಅಗತ್ಯ ವಸ್ತುಗಳನ್ನು ತಾನೇ ಅನುಭೋಗಿಸುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಬಂಡವಾಳಶಾಹಿಗಳು ಈ ರೀತಿಯಲ್ಲಿ ಶ್ರಮಿಕರು ಅನುಭೋಗಿಸುವ ಅಧಿಕಾರವನ್ನು ಕಸಿದುಕೊಂಡು ತಮ್ಮ ಅಧಿಕಾರದ ಝೆಂಡಾ ಹಾರಿಸುತ್ತಾರೆ.

8] ಕೆಲವೊಂದು ವಸ್ತುಗಳು ಕೂಡಾ ಅಶಕ್ತರ ಮೇಲೆ  ಅಧಿಕಾರವನ್ನು ನಡೆಸುತ್ತವೆ. ಆ ವಸ್ತುಗಳು ಯಾವ ರೀತಿಯಲ್ಲಿ ತಮ್ಮ ಅಧಿಕಾರವನ್ನು ನಡೆಸುತ್ತವೆ ಎಂದು ತಿಳಿಯುವದು ಕಷ್ಟಸಾಧ್ಯ. ಇಂತಹ ಅಧಿಕಾರವನ್ನು ಉದಾಹರಣೆಯ ಮೂಲಕ ನೋಡುವುದಾದರೆ ಕರ್ನಾಟಕ ಆದಿವಾಸಿ ಸಮುದಾಯವಾದ ಕಾಡುಗೊಲ್ಲರ ಸಮುದಾಯದ ಜನರು ಮದುವೆಯ ಮುಂಚೆ ಕನ್ಯೆಯನ್ನು ನೋಡಲು ಹೋಗುವಾಗ ಒಂದೆರಡು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ.

       ಅವುಗಳೆಂದರೆ; ಮೊದಲನೆಯದಾಗಿ ಇವರು ಕನ್ಯೆಯನ್ನು ನೊಡಲು ಹೆಣ್ಣಿನ ಮನೆಗೆ ಐದು ಜನ ಗಂಡಸರು ಒಬ್ಬಳು ಮುತ್ತೈದೆ ಬರುತ್ತಾರೆ. ಈಕೆ ಬಿಳಿ ಸೀರೆಯನ್ನು ಉಟ್ಟು  ಬಿಳಿ ಪಂಚೆಯಿಂದ ಕಟ್ಟಿದ ಒಂದು ಬಿಂದಿಗೆಯನ್ನು ಹೊತ್ತು ತರುತ್ತಾಳೆ. ಇದರಲ್ಲಿ ಬಾಳೆಹಣ್ಣು, ಅಕ್ಕಿ, ವಿಳ್ಯದೆಲೆ, ಅಡಿಕೆಗಳನ್ನು ತುಂಬಿರುತ್ತಾರೆ. ಹೀಗೆ ಹೊರಡುವ ಮುನ್ನ ಅವರು ತಮ್ಮ ಮನೆಯನ್ನು ಸಾರಿಸಿ ಅದರ ಮುಂದೆ ಒಂದು ಸಗಣೆಯ ಉಂಡೆಯನ್ನು, ಮಾಡಿ ಅದಕ್ಕೆ ಹೂಗಳನ್ನು ಸಿಕ್ಕಿಸಿ ಅದರ ಮೇಲೆ ಹಣತೆ ಇಟ್ಟು ಅದಕ್ಕೆ ಒಂದು ಊದುಬತ್ತಿ ಹಚ್ಚಿ ತೆಂಗಿನಕಾಯಿ ಹೊಡೆದು  ಪೂಜೆ ಮಾಡಿ ಹಣತೆಯ ಮೇಲೆ ಒಂದು ಗೂಡೆಯನ್ನು ಬೋರಲು ಹಾಕುತ್ತಾರೆ. ಹೀಗೆ ಮಾಡಿ ಶಕುನ ನೋಡಿ ಅಮೃತ ಗಳಿಗೆಯಲ್ಲಿ ಮನೆ ಬಿಟ್ಟು ಬರುತ್ತಾರೆ. ಇವರು ಹೆಣ್ಣುಗೊತ್ತು ಮಾಡಿ ಹಿಂದಿರುಗಿ ಮನೆಗೆ ಬರುವವರೆಗೂ ದೀಪ ಆರದಂತೆ ಉರಿಯಬೇಕು ಎಂಬ ನಂಬಿಕೆಯಿದೆ. ಹಾಗೆಯೇ ಅದೇ ರೀತಿ ಗಂಡಿನ ಮನೆಯವರು ಹೆಣ್ಣು ನೋಡುವುದಕ್ಕೆ ಬರುತ್ತಾರೆಂದು ತಿಳಿದ ಹೆಣ್ಣಿನ ಮನೆಯವರು ತಮ್ಮ ಮನೆಯಲ್ಲಿ ಹಣತೆ ದೀಪ ಹಚ್ಚಿಸಿಟ್ಟಿರುತ್ತಾರೆ. ಗಂಡಿನವರು ಬಂದ ಕೂಡಲೇ ಈ ದೀಪವನ್ನು ನೋಡಬೇಕು. ಅದು ಉರಿಯುತ್ತಿದ್ದರೆ ಮಾತ್ರ ಕನ್ಯೆಯನ್ನು ನೋಡುವರು. ಗಂಡಿನವರು ಕನ್ಯೆಶಾಸ್ತ್ರ ಮುಗಿಸಿಕೊಂಡು ತಮ್ಮ ಮನೆಗೆ ಹೋಗುತ್ತಾರೆ. ಅಲ್ಲಿಯವರೆಗೂ ತಮ್ಮ ಮನೆಯಲ್ಲಿ ಹಚ್ಚಿಟ್ಟ ದೀಪವು ಹಾರದೇ ಬೆಳಗುತ್ತಿದ್ದರೆ, ಆ ಕನ್ಯೆಯನ್ನು ಮದುವೆಯಾಗಲು ಇಚ್ಚಿಸುವರು. ಒಂದು ವೇಳೆ ಆ ದೀಪ ನಂದಿ ಹೋಗಿದ್ದರೆ, ಅದು ಅಪಶಕುನ ಎಂದು ಆ ಕನ್ಯೆಯನ್ನು ಮದುವೆಯಾಗಲು ಮುಂದೆ ಬರುವುದಿಲ್ಲ. ಅಂತೆಯೇ ಹೆಣ್ಣಿನ ಮನೆಯವರು ಸಹ ತಮ್ಮ ಮನೆಯ ದೀಪವನ್ನು ಹಾರದಂತೆ ರಾತ್ರಿಯಿಡಿ ನೋಡಿಕೊಳ್ಳಬೇಕು. ಒಂದು ವೇಳೆ ಆ ದೀಪವು ನಂದಿ ಹೋದರೆ ಅವರು `ವರನು’ ಚೆನ್ನಾಗಿಲ್ಲ ಅವನಿಗೆ ನಮ್ಮ ಕನ್ಯೆಯನ್ನು ಕೊಡಬಾರದು ಎಂದು ತಿರ್ಮಾನ ತೆಗೆದುಕೊಳ್ಳುವರು.

      ಇನ್ನೂ ಎರಡನೆಯದಾಗಿ ಇವರು ತಮ್ಮ ಮನೆಗೆ ಹೆಣ್ಣನ್ನು ತಂದುಕೊಳ್ಳಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲು ಮತ್ತೊಂದು ಪ್ರಯೋಗವನ್ನು ಮಾಡುವರು. ಅದೇನೆಂದರೆ ಸಾಮಾನ್ಯವಾಗಿ ಕಾಡುಗೊಲ್ಲರು ಕನ್ಯೆಯನ್ನು ನೋಡುವ ಶಾಸ್ತ್ರವನ್ನು ಸಂಜೆಯ ವೇಳೆಯಲ್ಲಿ ಮಾಡುವರು. ಆಗ ಗಂಡಿನ ಮನೆಯವರು ಮನೆಯಿಂದ  ಹೊರಡುವಾಗ ಒಂದು ಉಗುಣೆ ಬಳ್ಳಿಯನ್ನು ತಂದು ಆ ಬಳ್ಳಿಯ ತುದಿಗೆ ಅರಿಸಿಣ ಹಚ್ಚಿದ ಒಂದು ಅಂಗುದಾರವನ್ನು ಕಟ್ಟುತ್ತಾರೆ. ಬೆಳಗಾಗಿ ನೋಡಿದಾಗ ಆ ದಾರ ಕಟ್ಟಿದ ಜಾಗದಿಂದ ಉಗುಣೆ ಬಳ್ಳಿ ಸ್ವಲ್ಪವಾದರೂ ಮುಂದೆ ಬೆಳೆದಿದ್ದರೆ ಹೆಣ್ಣನ್ನು ತಂದುಕೊಳ್ಳಬೇಕೆಂದು, ಬೆಳೆಯದಿದ್ದರೆ ಬೇಡವೆನ್ನುವ ನಂಬಿಕೆ ಇವರಲ್ಲಿದೆ. ಈ ಎರಡು ಸಂಗತಿಗಳು ಅಥವಾ ವಸ್ತುಗಳು ಆ ಸಮುದಾಯದ ಕನ್ಯೆ ಮತ್ತು ವರನು ಮದುವೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಅಧಿಕಾರವನ್ನು ಪಡೆದುಕೊಂಡಿವೆ. ಅಂದರೆ ತಮ್ಮ ಜೀವನದ ಸಂಗಾತಿ ಯಾರಾಗಬೇಕು, ಯಾರು ಬೇಡ ಎಂದು ನಿರ್ಧರಿಸುವ ಅಧಿಕಾರ ವರನಿಗೂ ಇಲ್ಲ ಹಾಗೆಯೇ ಕನ್ಯೆಗೂ ಇಲ್ಲ. ಆ ಅಧಿಕಾರವನ್ನು ದೀಪ ಮತ್ತು ಉಗುಣೆ ಬಳ್ಳಿ ಪಡೆದುಕೊಂಡಿವೆ.

ಸಮಾರೋಪ

           ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ತಿಳಿದುಬರುವುದೇನೆಂದರೆ ಅಧಿಕಾರ ಎನ್ನುವಂತಹದ್ದು ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ಕೈಚಳಕಗಳ (ಪ್ರಕಾರಗಳ) ಮೂಲಕ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಪ್ರಬಲವಾಗಿ ಬೆಳೆದುನಿಂತಿರುವುದರ ಜೊತೆಗೆ ಅದು ಜಗತ್ತಿನಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ಈಗಾಗಲೇ ತಿಳಿದಿರುವಂತೆ ಅಧಿಕಾರವು ಬೇರೆ ಬೇರೆ ಅಸ್ತ್ರಗಳನ್ನು ಬಳಸಿಕೊಂಡು ಮುಗ್ಧ ಮನಸ್ಸುಗಳ, ಅಮಾಯಕ ಜೀವಿಗಳ, ಅಂಚಿನಲ್ಲಿರುವ ವರ್ಗಗಳ [ಮಹಿಳೆಯರು, ಅಸ್ಪೃಶ್ಯರು, ಆದಿವಾಸಿಗಳು, ಕಾರ್ಮಿಕರು, ರೈತರು, ಇತ್ಯಾದಿ]. ಜನರ  ಮೇಲೆ ತನ್ನ ಕೈಯಲ್ಲಿ ಲಗಾಮು ಹಿಡಿದು,  ಚಾಟಿ ಬೀಸಿ ಸವಾರಿ ನಡೆಸುತ್ತಿದೆ.  ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಅಧಿಕಾರ ಇಲ್ಲದ ಮನಸ್ಸುಗಳು ಅಧಿಕಾರವನ್ನು ಪಡೆಯಲೇಬೇಕೆಂದು ಪಣತೊಟ್ಟು ಅನ್ಯ ಮಾರ್ಗಗಳ ಬೆನ್ನತ್ತಿ ಅಪಚಾರ ಎಸಗಲು ತಯಾರಿ ನಡೆಸುತ್ತಿವೆ. ಹೀಗಿರುವಾಗ ನಾವುಗಳು ಅಂಬೇಡ್ಕರ್‍ರವರ ಹಾಗೂ ಸಂವಿಧಾನದ ಆಶಯಗಳಾದ ಹಾಗೂ ಗಟ್ಟಿ ನಿಲುವುಗಳಾದ `ಸ್ವಾತಂತ್ರ್ಯ, ಸಮಾನತೆ, ವಿಶ್ವಭ್ರಾತೃತ್ವ,’ ಮತ್ತು ಮಹಾತ್ಮ ಗಾಂಧೀಜಿಯವರ `ಭವ್ಯ ಭಾರತ’ [ರಾಮರಾಜ್ಯ]ದ ಕನಸು, ಹಾಗೂ ಬುದ್ಧ, ಬಸವರ `ಸಮಾನತೆ’ಯ ಆದರ್ಶ ತತ್ವಗಳು ಮುಂತಾದ ಮೌಲ್ಯಗಳನ್ನು ಪ್ರಸ್ತುತ ಭಾರತೀಯ ಸಮಾಜದಲ್ಲಿ ಕಾಣುವುದು ಹೇಗೆ? ಅಧಿಕಾರವು ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಹೇಳಲಾಗಿರುವಂತೆ “ಭಾರತದ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ; ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡುತ್ತೇವೆ”[6]. ಎಂಬ ಮಾತು ಸುಳ್ಳಾಗಿಸುತ್ತಿದೆ. ಭಾರತೀಯ ಸಮಾಜವನ್ನು ಈ ತೆರನಾದ ಅಧಿಕಾರದ ಕಪಿಮುಷ್ಟಿಯಿಂದ ಬಿಡಿಸುವುದು ಕಷ್ಟಸಾಧ್ಯ. ಆದರೂ ಅದರ ಹಿಡಿತದಿಂದ ತಪ್ಪಿಸಿಕೊಳ್ಳಲು ಕೆಲವು ದಾರ್ಶನಿಕರ, ಸಿದ್ಧಾಂತಿಗಳ ತತ್ವಗಳನ್ನು ಅನುಸರಿಸುವುದು ಉತ್ತಮ.

ಅಡಿ ಟಿಪ್ಪಣೆಗಳು

  1. ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ, ಪುಟ ಸಂಖ್ಯೆ-02
  2. ಸಮಾಜಶಾಸ್ತ್ರ, ಪುಟ ಸಂಖ್ಯೆ-98
  3. ಸಮಾಜಶಾಸ್ತ್ರ, ಪುಟ ಸಂಖ್ಯೆ-98
  4. ಭಾರತೀಯ ಸಮಾಜದ ಸಮಾಜಶಾಸ್ತ್ರ, ಪುಟ ಸಂಖ್ಯೆ-35
  5. ಭಾರತೀಯ ಸಾಮಾಜಿಕ ಸಂಸ್ಥೆಗಳು, ಪುಟ ಸಂಖ್ಯೆ-70
  6. ಸಂವಿಧಾನ ಓದು, ಪುಟ ಸಂಖ್ಯೆ-41

ಪರಾಮರ್ಶನ ಗ್ರಂಥಗಳು

  1. ಕೇಶವನ್ ಪ್ರಸಾದ್, ಗಂಗಾಧರ ದೈವಜ್ಞ[ಸಂ], `ಬುಡಕಟ್ಟು ಅಧ್ಯಯನ ಸಂಪುಟ-5  ಸಂಚಿಕೆ-2’,                                  ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, 2008.
  2. ಚಂದ್ರ ಪೂಜಾರಿ.ಎಂ, ಚಂದ್ರಶೇಕರ್.ಟಿ.ಆರ್, ಶ್ರೀಧರ್.ಎಸ್.ವಿ[ಸಂ], `ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ. ಪರಿಭಾಷಾ ಕೋಶ’, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಬೆಂಗಳೂರು, 2015.                        
  3. ಚಂದ್ರಶೇಖರ್ ದಾಮ್ಲೆ [ಸಂ], `ಸಮಾಜಶಾಸ್ತ್ರ’, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, 2006.                               
  4. ಗುರುಲಿಂಗಯ್ಯ. ಎಂ, ನಾಗಪ್ಪ. ವಿ [ಸಂ],`ಕಾಡುಗೊಲ್ಲ’, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, 2008.
  5. ಗಂಗಾಧರಯ್ಯ. ಪಿ ಎಂ, `ಕಾಡುಗೊಲ್ಲ’, ತುಮಕೂರು ವಿಶ್ವವಿದ್ಯಾಲಯ, 2011.
  6. ಜೋಶಿ. ಸಿ. ಎಂ, `ಸಮಾಜಶಾಸ್ತ್ರ ಪಾಶ್ಚಾತ್ಯ ಸಾಮಾಜಿಕ ಚಿಂತನೆಯ ಅಧ್ಯಯನ’, ಮನೋಹರ ಪ್ರಕಾಶನ             ಗುಳೇದಗುಡ್ಡ,2012.
  7. ನಂಜಮ್ಮಣ್ಣಿ. ಎಂ, `ಭಾರತೀಯ ಸಾಮಾಜಿಕ ಸಂಸ್ಥೆಗಳು’, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು     ವಿಶ್ವವಿದ್ಯಾನಿಲಯ ಮೈಸೂರು, 2003.
  8. ನಾಗಮೋಹನ ದಾಸ್.ಎಚ್.ಎನ್, `ಸಂವಿಧಾನ ಓದು’, ಕ್ರಿಯಾ ಪ್ರಕಾಶನ ಬೆಂಗಳೂರು, 2018.
  9. ನಾಗರಾಜ. ಪಿ, `ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರು: ಒಂದು ಸಾಂಸ್ಕೃತಿಕ ಅಧ್ಯಯನ’, ಮಧು ಪಬ್ಲಿಕೇಷನ್ .   .    ರಾಮನಗರ, 2012.
  10. ಶಂಕರ್ ರಾವ್. ಚ. ನ, `ಭಾರತೀಯ ಸಮಾಜದ ಸಮಾಜಶಾಸ್ತ್ರ’, ಜೈ ಭಾರತ್ ಪ್ರಕಾಶನ ಮಂಗಳೂರು, 2011- 12 .   2013-14.
  11. ಶೈಲೇಶ ಚಂದ್ರ, `ಅರ್ಥನೋಟ’, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, 2005.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal