Tumbe Group of International Journals

Full Text


ಗ್ರಾಮಗಳ ಅಭಿವೃದ್ಧಿಯಲ್ಲಿ ಜೀವರಕ್ಷಕ ಕೆರೆಗಳ ಪಾತ್ರ : ಒಂದು ಅಧ್ಯಯನ

ಅನಿತ  ಟಿ

ಸಂಶೋಧನಾ ವಿದ್ಯಾರ್ಥಿ

ಇತಿಹಾಸ  ವಿಭಾಗ

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು -56

ನಾಗರತ್ನಮ್ಮ ಎಸ್

ಮಾರ್ಗದರ್ಶಕರು

ಇತಿಹಾಸ ವಿಭಾಗ

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು -56

ಪ್ರಸ್ತಾವನೆ

ಕೆರೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿ ಕಂಡು ಬಂದಿದ್ದು, ಗ್ರಾಮೀಣ ಪ್ರದೇಶಗಳ ಜನರ ಜೀವನಾಡಿಯಾಗಿರುವುದು ಸತ್ಯದ ಸಂಗತಿಯಾಗಿ ಪವಿತ್ರ ಜಲ ಎನಿಸಿ ವ್ಯವಸಾಯ ಹಾಗೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಇಂದಿಗೂ ಕಾಣಬಹುದು. “ಜೀವ ಜಲ ಬತ್ತದಿರಲಿ, ಕೆರೆಗಳ ವೈಭವ ಮರುಕಳಿಸಲಿ”.. ಎಂಬ ಆಶಯದೊಂದಿಗೆ ಕೆರೆಗಳ ಅಭಿವೃದ್ದಿಗೆ ಕೈ ಜೋಡಿಸೋಣ ಇಲ್ಲವೆ, ವಿನಾಶದ ಕರೆಗೆ ಸಿದ್ಧರಾಗೋಣ ಎಂಬ ಎಚ್ಚರಿಕೆಯ ಕಾಲ ಗಣನೆಯನ್ನು ಎದುರು ನೋಡುತ್ತಾ ಕೆರೆಗಳ ನೈಜ ಚಿತ್ರಣವನ್ನು ಮೆಲುಕು ಹಾಕಲು ಹಾಗೂ ಒಂದು ಕ್ಷಣ ಕೆರೆಗಳ ಬಗೆಗೆ ನಮ್ಮ ಋಣಾತ್ಮಕ ಯೋಚನಾ ಲಹರಿಯನ್ನು ಬದಲಾಯಿಸಲು ಸಾಧ್ಯವೇ? ಎಂದು ಕೇಳುವುದರೊಂದಿಗೆ ಕೆರೆಗಳ ಸ್ಥಿತಿಯನ್ನು ವಿವರಿಸುವಂತಹ ಒಂದು ಸಣ್ಣ ಪ್ರಯತ್ನ ಇದಾಗಿದೆ.

ಕೀಲಿಪದ: ಕೆರೆಗಳು, ಜೀವನಾಡಿ, ಜೀವ ಜಲ, ಗ್ರಾಮಗಳ ಅಭಿವೃದ್ಧಿ, ಜೀವರಕ್ಷಕ

ಪೀಠಿಕೆ

        ಕೆರೆಗಳು ನಮ್ಮ ದೈನಂದಿನ ಜೀವ ರಕ್ಷಕ ವಸ್ತುವಾಗಿದೆ. ಜೀವ ಸಂಕುಲದ ಸೃಷ್ಠಿ ಭೂಮಿಯ ಮೇಲೆ ಆದಾಗಿನಿಂದಲೂ ಸಹ ಜೀವ ಜಲ ಸೃಷ್ಠಿಯಾಗಿರಲೇಬೇಕು. ಮಾನವ ಆಹಾರವಿಲ್ಲದೆ ಜೀವಿಸಬಲ್ಲ ಆದರೆ ಜೀವಜಲವಿಲ್ಲದೆ ಬದುಕಲಾರ ಅಂತಹ ಜೀವರಕ್ಷಕ “ಜಲ” ಅಂದು ಪವಿತ್ರ ಸ್ಥಾನವನ್ನು ಪಡೆದಿತ್ತು ಆದರೆ ಇಂದು ನೆಲೆ ನಿಲ್ಲಲು ಪರದಾಡುವಂತಾಗಿದೆ ಅಂದರೆ ಜಲ ಸಂಗ್ರಹವಾದ ಕೆರೆಗಳ ಕಣ್ಮರೆಯ ರೋಚಕತೆ ನಮ್ಮೆದುರಿಗಿರುವುದೇ ಸಾಕ್ಷಿ.   ಗ್ರಾಮೀಣ ಮತ್ತು ನಗರ ಪ್ರದೇಶ ಎನ್ನದೆ ಎಲ್ಲೆಡೆ ತನ್ನ ಸ್ಥಾನವನ್ನು ನಿರೂಪಿಸಿರುವ ನೀರಿಗೆ ಪ್ರಸ್ತುತದಲ್ಲಿ ಹಾಹಾಕಾರ ಎದುರಾಗುತ್ತಿದೆ.ನಮ್ಮ ಹಿರಿಯರು “ಜೀವಜಲ” ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸುತ್ತಿದ್ದರು.ಅಲ್ಲದೆ ಯಾವುದೇ ದುರುದ್ದೇಶವಿಲ್ಲದೆ ಪ್ರತಿ ಹಳ್ಳಿಗಳಲ್ಲೂ ಕೆರೆಗಳ ನಿರ್ಮಾಣದ ಹೊಣೆಯನ್ನು ಹೊರುತ್ತಿದ್ದರು ಇದಕ್ಕೆ ಶ್ರೀಸಾಮಾನ್ಯರಿಂದ ಹಿಡಿದು ರಾಜ ಮಹಾರಾಜರುಗಳ ಬೆಂಬಲವೂ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿತ್ತು. ಜನ ಜಾನುವಾರುಗಳ ಕುಡಿಯುವ ನೀರಿಗಾಗಿಯೇ ಕಾಡುಗಳಲ್ಲಿ ಹಾಗೂ ದಿನ ಬಳಕೆಗಾಗಿ ಅಲ್ಲಲ್ಲಿ ಕೆರೆ, ಕಟ್ಟೆ ಹಾಗೂ ಕುಂಟೆಗಳು ನಿರ್ಮಾಣವಾಗಿದ್ದನ್ನು ಉದಾಹರಿಸಬಹುದು. ಈ ಕೆರೆಗಳ ನಿರ್ಮಾಣ ಅಂದು ಪವಿತ್ರ ಕಾರ್ಯವಾಗಿದ್ದು, ಪುಣ್ಯ ಪ್ರಾಪ್ತಿಗಾಗಿ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಜನಸಾಮಾನ್ಯರು ಸಹ ಮುಂದೆ ಬರುತ್ತಿದ್ದರು. ಅಲ್ಲದೆ ವೇಶ್ಯಯರು ಸಹ ಬೃಹತ್ ಕೆರೆಗಳನ್ನು ಕಟ್ಟಿಸಿದ ನಿದರ್ಶನಗಳೂ ಇಂದು ಜೀವಂತವಾಗಿರುವುದನ್ನು ಕಾಣಬಹುದು. ಅಲ್ಲದೆ ಸಂಗ್ರಹಿಸಲಾದ ನೀರನ್ನು ಯಾವುದೇ ಘರ್ಷಣೆಗೆ ಎಡೆಗೊಡದಂತೆ ಅವರವರ ಭೂಮಿಗೆ ಹರಿಸಿಕೊಳ್ಳುವ ಬಗ್ಗೆ ನಿಗಾ ವಹಿಸಲು ಹಳ್ಳಿಗಳಲ್ಲಿ ‘ನೀರುಗಂಟಿ’ಗಳನ್ನು ನೇಮಿಸಲಾಗುತ್ತಿತ್ತು. ಇದರಿಂದಾಗಿ ನೀರು ನಿರ್ವಹಣೆಯ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯದೇ ಜೀವ ಸುಗಮವಾಗಿ ಸಾಗಲು ಅನುಕೂಲವಾಗುತ್ತಿತ್ತು.

          ಆದರೆ, ಕಾಲ ಆಧುನಿಕವಾದಂತೆಲ್ಲಾ ಸಣ್ಣ, ಮಧ್ಯಮ ಹಾಗೂ ಬೃಹತ್ ನೀರಾವರಿ ಯೋಜನೆಗಳು ಪ್ರಾರಂಭವಾದಂತೆಲ್ಲ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಕೆರೆಗಳು ನಿರ್ಲಕ್ಷ್ಯಕ್ಕೆ ಒಳಗಾದವು. ಕೆಲವು ಕೆರೆಗಳು ಒಣಗಿ ಹೋದರೆ ಮತ್ತೆ ಕೆಲವು ಕೆರೆಗಳು ಹೇಳ ಹೆಸರಿಲ್ಲದಂತೆ ಮುಚ್ಚಿ ಹೋದವು. ನಗರ ಭಾಗಗಳಲ್ಲಂತೂ ಕೆರೆಗಳನ್ನು ಒಣಗಿಸಿ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಇದ್ದಂತಹ ಕೆರೆಗಳು ಇಂದು ಎಣಿಕೆಗೆ ಸಿಗುವಂತಾಗಿರುವುದು ದುಃಖದ ಸಂಗತಿ. ಇದು ರೈತರ ಬದುಕಿನಲ್ಲಿ ಅಭದ್ರ ಸ್ಥಿತಿಯನ್ನು ಉಂಟುಮಾಡಿದೆ. ಇತ್ತಿಚ್ಚಿನ ದಿನಗಳಲ್ಲಿ ಹಳೆಯ ಕೆರೆಗಳನ್ನು ಜೀರ್ಣೋದ್ಧಾರ ಮಾಡುವ ಹಾಗೂ ಅವುಗಳ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರನ್ನು ಉಪಯೋಗಿಸುವ ನಿಟ್ಟಿನಲ್ಲಿ ಸರ್ಕಾರ ಮನಸ್ಸು ಮಾಡಿದೆ. ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಉಳಿಸಿ-ಬೆಳೆಸಿಕೊಂಡು ಬಂದಂತಹ ಅನೇಕ ಕೆರೆಗಳ ಅಭಿವೃದ್ಧಿ ಕಾರ್ಯದತ್ತ ಗಮನ ಹರಿಸುವುದು ವರ್ತಮಾನದ ಒಂದು ಅನಿವಾರ್ಯತೆಯೂ ಆಗಿದೆ.

       ಕೆರೆಗಳ ಸ್ಥಾನ ಅಂದು :-

                   ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಗಾರಮಂ

                   ಮಾಡಿಸಜ್ಜೆರೆಯೊಳ್ಳಿಲ್ಕಿದನಾತರಂ ಬಿಡಿಸು ಮಿತ್ರಗ್ರ್ಗಿಂಬುಕೆಯ ನಂಬಿ

                  ದಗ್ರ್ಗೆರೆವೆಟ್ಟಾಗಿರು ಶಿಷ್ಟರಂ ಪೊರೆಯೆನ್ನುತ್ತಿಂತೆಲ್ಲವಂ ಪಿಂದೆತಾ

                  ಯೆರೆದಳ್ಪಾಲೆರೆಂದು ತೊಟ್ಟು ಕಿವಿಯೋಳ್ ಲಕ್ಷ್ಮೀಧರಾಮಾತ್ಯನಾ  ||

           ಈ ಗೀತೆಯನ್ನು ತಾಯಿ ತನ್ನ ಮಗುವಿಗೆ ಹಾಲುಣಿಸುವಾಗ ಆ ಮಗುವಿನ ಕಿವಿಯಲ್ಲಿ ಹಾಡುತ್ತಿದ್ದ ಈ ಸಾಲುಗಳು ಅಂದಿನ ಕೆರೆಯ ನಿರ್ಮಾಣದ ಮಹತ್ವವನ್ನು ತಿಳಿಸುತ್ತದೆ. ಕೆರೆಯ ನಿರ್ಮಾಣ ಎಂಬುದು ಕೇವಲ ಒಬ್ಬ ವ್ಯೆಕ್ತಿಯ ವೈಯುಕ್ತಿಕ ವಿಚಾರವಾಗಿರದೇ, ಇಡೀ ಒಂದು ಸಮುದಾಯದ ಏಳಿಗೆಯನ್ನು ಹಾಗೂ ಜನರ ಜೀವನೋಪಾಯವನ್ನು ಸುಧಾರಿಸಿ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗಿದ್ದವು. ಕೆರೆಗಳ ನಿರ್ಮಾಣದಿಂದಾಗಿ ವಾತಾವರಣವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದಲ್ಲದೆ ಸುತ್ತಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಿದ್ದವು. ಕೆರೆ ಕಟ್ಟೆಗಳ ನಿರ್ಮಾಣದಿಂದ ವ್ಯವಸಾಯ, ಮಾನವನ ದಿನನಿತ್ಯದ ಬಳಕೆ, ಪ್ರಾಣಿ-ಪಕ್ಷಿಗಳ ಹಾಗೂ ಜಲಚರಗಳಿಗೆ ಆಶ್ರಯ ತಾಣವಾಗಿದ್ದವು. ಅದೆಷ್ಟೋ ಪ್ರಾಣಿ-ಪಕ್ಷಿಗಳ ಸಂತಾನೋತ್ಪತ್ತಿಗೆ ಕೆರೆಗಳೆ ಆಧಾರವಾಗಿತ್ತೆಂದು ಹೇಳಿದರೆ ತಪ್ಪಾಗಲಾರದು. ಅಲ್ಲದೆ ಮೀನುಗಾರಿಕೆಯನ್ನು ಒಳಗೊಂಡಂತೆ ಕೃಷಿ ಚಟುವಟಿಕೆಗಳು ವರ್ಷ ಪೂರ್ತಿ ನಿರಂತರವಾಗಿ ನಡೆಯುವಂತೆ ನಮ್ಮ ಹಿರಿಯರು ಮುಂದಾಲೋಚನೆಯಿಂದ ನೀರನ್ನು ಬಳಸಿಕೊಳ್ಳುತ್ತಿದ್ದರು. ಜೀವ ರಕ್ಷಕ ಕೆರೆಗಳು ಜನರ ಧಾರ್ಮಿಕ ಮತ್ತು ಸಾಮಾಜಿಕ ಕೇಂದ್ರಗಳಾಗಿಯೂ ಮುಂದುವರೆದಿರುವುದನ್ನು ಕಾಣಬಹುದು. ಅಂದು ಕೆರೆಗಳನ್ನು ನಿರ್ಮಿಸುವುದು ಧಾರ್ಮಿಕ ಕಾರ್ಯವೆಂದು ಭಾವಿಸಿ, ದೇವಾಲಯಗಳ ನಿರ್ಮಾಣಕ್ಕೆ ನೀಡುವ ಪ್ರಾಶಸ್ತ್ಯವನ್ನೆ ಕೆರೆಗಳ ನಿರ್ಮಾಣಕ್ಕೂ ನೀಡುತ್ತಿದ್ದರು. ಇದು ಅವರಲ್ಲಿ ಇಹ ಮತ್ತು ಪರ ಲೋಕದ ಪಾಪ ಮತ್ತು ಪುಣ್ಯದ ಕಲ್ಪನೆಯ ಹಿನ್ನಲೆಯಲ್ಲಿನ ನಂಬಿಕೆಯಾಗಿತ್ತು.

           ಆ ಧಾರ್ಮಿಕ ಭಾವನೆಗಳಿಂದಾಗಿ ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ವ್ಯೆವಸ್ಥೆಯಲ್ಲಿ ಮಹತ್ತರವಾದ ಬೆಳವಣಿಗೆ ಆಗಿರುವುದನ್ನು ಕಾಣಬಹುದು. ಕೆರೆಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳ ನಿರ್ವಹಣೆಯ ಜವಾಬ್ಧಾರಿಯನ್ನು ಸಹ ಅಷ್ಟೇ ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದರು. ಹಾಗಾಗಿ ಕೆರೆಗಳ ನಿರ್ಮಾಣದ ಕಾರ್ಯದಲ್ಲಿ ರಾಜರುಗಳು, ಸಾಮಂತರು, ವರ್ತಕರು, ಮೇಲ್ವರ್ಗದವರು, ಆರ್ಥಿಕ ಸ್ಥಿತಿವಂತರು ಹಾಗೂ ವೇಶ್ಯೆಯರೂ ಸಹ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದರು. ಮೌರ್ಯರ ಕಾಲದಿಂದ ಕೆರೆಗಳ ಬಗೆಗೆ ಮಾಹಿತಿಯನ್ನು ನೋಡಲು ಶಾಸನಗಳು ಉಪಯುಕ್ತವಾದ ದಾಖಲೆಗಳನ್ನು ಒದಗಿಸುತ್ತವೆ. ಮೌರ್ಯರ ಕಾಲಕ್ಕೆ ಸಂಬಂಧಿಸಿದಂತೆ “ಸೌರಾಷ್ಟ್ರದ ಜುನಾಗಡದ ಸುದರ್ಶನ ಕೆರೆ” ಯನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ, ‘ವಿಜ್ಞಾನೇಶ್ವರನ ಮಿತಾಕ್ಷರ’ದಲ್ಲಿ ಕೆರೆಗಳು ಗ್ರಾಮೀಣ ಜೀವನದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಚಟುವಟಿಕೆಗಳ ಬದುಕಿನ ಸಂಕೇತ ಎಂಬುದಾಗಿದೆ. 12 ನೇ ಶತಮಾನದ ಶರಣರ ಚಳುವಳಿಯ ಸಂದರ್ಭದಲ್ಲಿ ರಚನೆಯಾದ ವಚನಗಳಲ್ಲಿ ಕೆರೆ, ಕಟ್ಟೆ, ಸರೋವರ, ತಟಾಕಗಳನ್ನು ನಿರ್ಮಿಸಿದ ಮಾಹಿತಿ ಇದೆ. ಮುಖ್ಯವಾಗಿ ಕೆರೆಗಳ ನಿರ್ಮಾಣದ ತಾಂತ್ರಿಕತೆಗೆ ನೀಡಿರುವಂತಹ ಪ್ರಮುಖ್ಯತೆಯನ್ನು ಇಲ್ಲಿ ಕಾಣಬಹುದು.

               “ಕೆರೆಯೊಡೆದ ಬಳಿಕ ತೂಬು ಬಲ್ಲದೆ

                ಕೆರೆಯನುಂಡು ತೊರೆಯ ಹೊಗಳುವುದೆ”

-           ಅಲ್ಲಮ 

ಎಂಬಂತಹ ಸಾಲುಗಳು ಕೆರೆಗಳ ನಿರ್ಮಾಣದ ತಾಂತ್ರಿಕತೆಗೆ ಸಾಕ್ಷಿಯಾಗುವಂತಿವೆ. ಅಲ್ಲದೆ ಶರಣರ ನಂತರದಲ್ಲಿ ದಾಸರು ಕೂಡ ತಮ್ಮ ಕೀರ್ತನೆಗಳಲ್ಲಿ ಕೆರೆಯನ್ನು ಉಲ್ಲೇಖಿಸಿರುವುದಕ್ಕೆ ಪುರಂದರದಾಸರ” ಕೆರೆಯ ನೀರನು ಕೆರೆಗೆ ಚೆಲ್ಲಿ” ಎಂಬ ಸಾಲುಗಳು ಪುಷ್ಠಿ ನೀಡುತ್ತವೆ. ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲು ಕೆರೆ, ಕಲ್ಯಾಣಿಗಳನ್ನು ನಿರ್ಮಿಸಿರುವುದರ ಬಗೆಗೆ ಶಾಸನಗಳಲ್ಲಿ ಉಲ್ಲೇಖಗಳಿವೆ. ಇದನ್ನು ಗಮನಿಸಿದಾಗ ನಮ್ಮ ಹಿರಿಯರು ಕೆರೆಗಳಿಗೆ ದೈವತ್ವದ ಸ್ವರೂಪ ನೀಡಿ ಜಲದೇವತೆಯೆಂದು ಆರಾಧಿಸುತ್ತಿದ್ದ ಪರಿಪಾಠ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ನಂಬಿಕೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಕೆರೆಯಲ್ಲಿ ಪಂಚಕನ್ಯೆಯರು, ಅಪ್ಸರೆಯರು, ದೇವಗನ್ಯೆಯರು ಹಾಗೂ ಆದಿಶಕ್ತಿ ದೇವಾನುದೇವತೆಗಳು ವಾಸಿಸುತ್ತಾರೆ ಆದುದ್ದರಿಂದ ಕೆರೆಗಳು ಪವಿತ್ರವಾದ ದೇವರ ಸ್ವರೂಪ ಎಂದು ಭಾವಿಸಿ ಅನೇಕ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದುದನ್ನು ಗಮನಿಸಿದಾಗ ಕೆರೆಗಳ ಮೌಲ್ಯವನ್ನು ತಿಳಿಯಬಹುದು. ಹಾಗಾಗಿ ಕೆರೆಗಳ ನಿರ್ಮಾಣದಲ್ಲಿ ಶ್ರದ್ಧೆ ಭಕ್ತಿಯಿಂದ ಇರುತ್ತಿದ್ದರು ಇದಕ್ಕೆ ಸಾಕ್ಷಿಯಾಗಿ ಈಗಲೂ ಸಹ ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ಗಂಗಮ್ಮನ ಪೂಜೆ ಮಾಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ಹಿಂದೆ ಕೆರೆಯ ನಿರ್ಮಾಣದ ಸಂದರ್ಭದಲ್ಲಿ ಕೆರೆಯಲ್ಲಿ ನೀರು ಬಾರದಿದ್ದರೆ ಹೊತ್ತಿಗೆ ತೆಗೆಸಿ ಶಾಸ್ತ್ರ ಕೇಳಿ ತುಂಬಿದ ಗರ್ಭಿಣಿಯನ್ನು ಕೆರೆಗೆ ಹಾರವಾಗಿ ನೀಡುತ್ತಿದ್ದ ಪದ್ಧತಿ ಕೆರೆಯ ಸ್ಥಾನವನ್ನು ತಿಳಿಸುತ್ತದೆ. ಇಂದಿಗೂ ಸಹ ಜನಪದ ಹಿನ್ನಲೆಯಲ್ಲಿ ಅನೇಕ ಕೆರೆಗಳಿಗೆ ಬಲಿಯಾಗಿರುವ ವಿಚಾರಗಳನ್ನು ತಿಳಿದಾಗ ಕೆರೆಗಳ ಮಹತ್ವ ಅರಿವಾಗುತ್ತದೆ. ಕೆರೆಗಳ ನಿರ್ಮಾಣದಲ್ಲಿ ನಮ್ಮ ಪೂರ್ವಿಕರು ಅಳವಡಿಸಿಕೊಂಡಿರುವ ವಿಧಾನಗಳನ್ನು ಗಮನಿಸಿದಾಗ ಬೆರಗಾಗುತ್ತೇವೆ ಆದರೆ ಈ ಕೆರೆಗಳ ನಿರ್ಮಾಣದ ತಾಂತ್ರಿಕತೆಯನ್ನು ಕುರಿತಂತೆ ಯಾವುದೇ ಶಾಸನಗಳಲ್ಲಿ ನಿಖರವಾದ ಮಾಹಿತಿ ದೊರಕುವುದಿಲ್ಲ, ಆದರೆ ಅಲ್ಪ ಸ್ವಲ್ಪ ಈ ವಿಷಯವಾಗಿ ನಮಗೆ ಮಾಹಿತಿ ನೀಡುವುದೆಂದರೆ ಅದು “ಪೌರಮಾಮಿಲ ಶಾಸನ” ದಿಂದ ಮಾತ್ರ ಈ ಶಾಸನ ಇರುವುದು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಒಡವೇಲು ತಾಲ್ಲೂಕಿನಲ್ಲಿ. ಅಲ್ಲಿನ ಕೆರೆಯ ಹೆಸರು ಅನಂತರಾಜ ಸಾಗರ ಇದನ್ನು ಕಟ್ಟಿದ್ದು 14 ನೇ ಶತಮಾನದಲ್ಲಿ ಆಳಿದ ವಿಜಯನಗರ ಅರಸರ ಕಾಲದಲ್ಲಿ ಎಂಬುದಾಗಿ ತಿಳಿದುಬರುತ್ತದೆ.

         ಜನಪದ ಕಾವ್ಯಗಳಲ್ಲಿನ ಕೆರೆಗೆ ಹಾರವಾಗಿರುವುದನ್ನು ಗಮನಿಸಿದಾಗ ಕೆರೆಗೆ ನೀಡಿದ್ದ ಮಹತ್ವವನ್ನು ತಿಳಿಯಬಹುದು ಲೋಕ ಕಲ್ಯಾಣಕ್ಕಾಗಿ ಹೆಣ್ಣು ತಾನು ಎಂತಹ ತ್ಯಾಗಕ್ಕಾದರೂ ಸಿದ್ಧಳಾಗಿರುವುದನ್ನು ಗಮನಿಸಿದಾಗ ಕೆರೆಗಳು ಕೇವಲ ಮನುಷ್ಯನಿಗೆ ಮಾತ್ರವಲ್ಲದೆ ಸಕಲ ಜೀವ ರಾಶಿಗಳಿಗೆ ಜೀವ ರಕ್ಷಕವಾಗಿದ್ದು, ಕೆರೆಗಳಿಗೆ ಧಾರ್ಮಿಕತೆಯ ದೈವಿಕ ಭಾವನೆಯಿಂದ ಪೂಜಿಸುತ್ತಿದ್ದುದ್ದನ್ನು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಕಾಣತ್ತೇವೆ. ಅನೇಕ ಕೆರೆಗಳು ಪ್ರಸ್ತುತದಲ್ಲಿ ಕಣ್ಮರೆಯಾಗಿರಬಹುದು ಆದರೆ ಕೆರೆಗೆ ನಿರ್ಮಿಸಿದ ತೂಬುಗಳು ಮಾತ್ರ ಹಾಗೆಯೇ ಉಳಿದು ಬಂದಿರುವುದನ್ನು ನೋಡಿದಾಗ ತೂಬುಗಳನ್ನು ಭಕ್ತಿ ಭಾವದಿಂದ ನೋಡುತ್ತಿದ್ದುದ್ದು ಗೋಚರಿಸುತ್ತದೆ ಅಷ್ಟೇ ಅಲ್ಲದೆ ಈ ತೂಬುಗಳಿಂದಲೇ ಕೆರೆಗಳ ಅಸ್ತಿತ್ವ ಮತ್ತು ಕಾಲವನ್ನು ಗುರುತಿಸಲು ಸಾಧ್ಯವಾಗುತ್ತದೆ.

  • ಕೆರೆಗಳ ಪುನರುದ್ಧಾರ ಮಾಡುವಲ್ಲಿ ಇತ್ತಿಚ್ಚಿನ ದಶಕಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಕೆರೆಗಳ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸರ್ಕಾರವು ಸಹ ಕೆರೆಗಳ ಉಳಿವಿಗಾಗಿ ಜನರ ಬೆಂಬಲವನ್ನು ಪಡೆಯುತ್ತಿರುವುದು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳ ಜೀರ್ಣೋದ್ಧಾರಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಕೆಲಸ ದೊರಕುವಂತೆ ಮಾಡಿರುವುದು ಸಂತಸವಾಗಿದೆ.
  • ಶ್ರೀ ಕುಮಾರ್ ಬಂಗಾರಪ್ಪನವರು ಸಣ್ಣ ನೀರಾವರಿ ಸಚಿವರಾಗಿದ್ದಾಗ ರಾಜ್ಯದಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವುದರ ಜೊತೆಗೆ, ವಿಶ್ವ ಬ್ಯಾಂಕ್ ನೆರವನ್ನು ಪಡೆದು ಗ್ರಾಮ ಪಂಚಾಯಿತಿಗಳನ್ನು ಈ ಕೆಲಸದಲ್ಲಿ ತೊಡಗಿಸಬೇಕೆಂದು ಹಾಗೂ ಆ ಕೆರೆಗೆ ಸಂಬಂಧಪಟ್ಟ ಎಲ್ಲಾ ಜವಾಬ್ಧಾರಿಯನ್ನು ಸಂಸ್ಥೆಗಳಿಗೆ ವಹಿಸಬೇಕು ಎಂಬುದನ್ನು ತಿಳಿಸಿ, ನಗರ ಪ್ರದೇಶಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಕೆರೆಗಳ ಪಾತ್ರ ಎಷ್ಟು ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರು.
  • 2001 ರಲ್ಲಿ ಶ್ರೀ ಎ.ಎನ್ ಯಲ್ಲಪ್ಪ ರೆಡ್ಡಿ ಸಮಿತಿಯವರು ನೀರಾವರಿ ಯೋಜನೆಗಳ ಮೂಲಕ ಕೆರೆಯ ಜಾಲದುದ್ದಕ್ಕೂ ಮರಗಳನ್ನು ಬೆಳೆಸಬೇಕೆಂದು ಸಲಹೆ ನೀಡಿದ್ದಾರೆ ಹಾಗೂ ಕೆರೆಗಳಲ್ಲಿ ತುಂಬುವ ಹೂಳನ್ನು ಆಗಿಂದಾಗ್ಗೆ ತೆಗೆಸಬೇಕು ಹೂಳು ಶೇಕರಣೆಯಾಗುವುದನ್ನು ಕಡಿಮೆಗೊಳಿಸಬೇಕೆಂದು ತಿಳಿಸಿದ್ದಾರೆ. ಇದರಿಂದ ಪ್ರಾಣಿ,ಪಕ್ಷಿಗಳ ಸಂರಕ್ಷಣೆ, ಮೀನುಗಾರಿಕೆ, ಅಂತರ್ಜಲದ ಮಟ್ಟ ಹೆಚ್ಚಾಗುವುದರ ಜೊತೆಗೆ ಹವಾಮಾನದದಲ್ಲಿ ಸಮತೋಲನ ಕಾಯ್ಧುಕೊಳ್ಳಬಹುದು ಎಂದು ವರದಿ ಮಾಡಿದ್ದಾರೆ.

ಹೀಗೆ ಕೆರೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳು ರೂಪುಗೊಂಡಿದ್ದರೂ ಪೂರ್ಣವಾಗಿ ಯಶಸ್ವಿಯಾಗದೆ ಮೂಲೆ ಗುಂಪಾಗಿವೆ. ಕಾರಣ ಯೋಜನೆಗಳು ಕೇವಲ ವರದಿಯಲ್ಲಿ ಮಾತ್ರ ಉಳಿದುಕೊಂಡಿದ್ದು, ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದು. ಜನರಲ್ಲಿ ಮುಂದಿನ ಭವಿಷ್ಯದ ಬಗೆಗೆ ಕಾಳಜಿಯಿಲ್ಲದಿರುವುದು, ಭೂಮಿಯ ಮೇಲಿನ ವ್ಯಾಮೋಹ, ದುರಾಸೆ, ಕೆರೆಗಳ ಒತ್ತುವರಿ, ಸರ್ಕಾರದ ನಿರ್ಲಕ್ಷ್ಯ, ನಗರ ಪ್ರದೇಶದಿಂದ ಘನತ್ಯಾಜ್ಯ ವಸ್ತುಗಳನ್ನು ರಾಶಿ ಹಾಕಲು ಕೆರೆಯಂಗಳವನ್ನು ಬಳಸಿಕೊಳ್ಳುತ್ತಿರುವುದು, ತ್ವರಿತಗತಿಯಲ್ಲಿ ಬೆಳೆಯುತ್ತಿರುವ ನಗರೀಕರಣ, ಅರಣ್ಯಗಳ ನಾಶದಿಂದಾಗಿ ವಾತಾವರಣದಲ್ಲಿ ಏರುಪೇರು, ಬರಗಾಲದಿಂದ ತತ್ತರಿಸಿದ ಜನ ನಗರ ಪ್ರದೇಶದ ಕಡೆ ಮುಖ ಮಾಡಿರುವುದು ಹೀಗೆ ಹಲವಾರು ಕಾರಣಗಳನ್ನು ನೀಡಬಹುದು. ಇನ್ನು ಪ್ರಸ್ತುತದಲ್ಲಿ ಕೆರೆಗಳ ಸ್ಥಿತಿಯನ್ನು ನೋಡುವುದಾದರೆ,,

ಕೆರೆಗಳ ಸ್ಥತಿ ಇಂದು ಮತ್ತು ಅವುಗಳ ಅಭಿವೃದ್ಧಿಯ ಮಾರ್ಗೋಪಾಯಗಳು:-

ಕೆರೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿ ಕಂಡು ಬಂದಿದ್ದು, ಗ್ರಾಮೀಣ ಪ್ರದೇಶಗಳ ಜನರ ಜೀವನಾಡಿಯಾಗಿರುವುದು ಸತ್ಯದ ಸಂಗತಿಯಾಗಿ ಪವಿತ್ರ ಜಲ ಎನಿಸಿ ವ್ಯವಸಾಯ ಹಾಗೂ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಇಂದಿಗೂ ಕಾಣಬಹುದು. ಇಲ್ಲಿನ ಜನರ ದುಡಿಮೆಗೆ ಕೆರೆಯು ಪೂರಕವಾದ ವಾತಾವರಣವನ್ನು ನೀಡುತ್ತಾ ಬಂದಿರುವುದರಿಂದಲೇ ನಗರ ಪ್ರದೇಶಗಳಲ್ಲಿನ ಜನರಿಗೆ ಕನಿಷ್ಟ ಮಟ್ಟದಲ್ಲಾದರೂ ಆಹಾರ ಮತ್ತು ನೀರನ್ನು ಒದಗಿಸಲು ಸಾಧ್ಯವಾಗುತ್ತದೆ. ಬರಗಾಲ ಪೀಡಿತ ಪ್ರದೇಶಗಳನ್ನು ಹೊರತು ಪಡಿಸಿದರೇ, ಮಿಕ್ಕೆಲ್ಲಾ ಪ್ರದೇಶಗಳಲ್ಲಿನ ಹವಾಮಾನಕ್ಕೇ ತಕ್ಕಂತೆ ಕೆರೆಗಳು ಬದಲಾವಣೆ ಹೊಂದುತ್ತಾ ನೀರಿನ ಸೆಲೆಯು ಇಂಗಿ ಹೋಗದಂತೆ ಗ್ರಾಮೀಣ ಪ್ರದೇಶದ ಜನರು ಕೆರೆಗಳ ರಕ್ಷಣೆ ಮಾಡುತ್ತಿರುವುದು ಮುಂದಿನ ಭವಿಷ್ಯದ ಅರಿವನ್ನು ತಿಳಿದಿರುವಂತೆ ಗೋಚರವಾಗುತ್ತದೆ. ಆದರೂ ಸಹ ಕೆರೆಗಳ ಈಗಿನ ಸ್ಥತಿಯನ್ನು ವರ್ಣಿಸಲು ಅಸಾಧ್ಯವಾಗದಂತಾಗಿದೆ.

  • ಕೆರೆಗಳು ಒತ್ತುವರಿಯ ಹೊಡೆತಕ್ಕೆ ನಲುಗಿ ಹೋಗುತ್ತಿವೆ ಹೀಗೆ ಮುಂದುವರೆದರೆ ಮುಂದೊಂದು ದಿನ ಕೆರೆಗಳನ್ನು ನೋಡಲು ಚಿತ್ರಗಳ ಮೋರೆ ಹೋಗಬೇಕಾಗುತ್ತದೆ, ಅಲ್ಲದೆ ಕುಡಿಯುವ ನೀರಿಗಾಗಿ ಈಗಾಗಲೇ ನಡೆಯುತ್ತಿರುವ ಕಾವೇರಿ, ಮಹದಾಯಿ ನೀರಿನ ಹಂಚಿಕೆಯಂತೆ ನಮ್ಮಲ್ಲೂ ಬೇರೆ ರಾಜ್ಯಗಳನ್ನೆ ಪೂರ್ಣವಾಗಿ ಅಳವಡಿಸಿಕೊಳ್ಳಬೇಕಾದ ಪರಿಸ್ಥತಿ ಎದುರಾಗುತ್ತದೆ.
  • ಪಟ್ಟಣಗಳು ಬೆಳೆಯುತ್ತಿರುವುದರಿಂದ ಅದರ ಸುತ್ತ ಮುತ್ತಲಿನ ಕೆರೆ ಪ್ರದೇಶಗಳು ಕಣ್ಮರೆಯಾಗುತ್ತಿವೆ.
  • ಕೆರೆಗಳು ನಿರ್ಜನ ಪ್ರದೇಶವಾಗಿ ರೂಪುಗೊಂಡು ಅಲ್ಲಿ ಹೊಸ ನಿವೇಶನಗಳಾಗಿ ತಲೆ ಎತ್ತುತ್ತಿವೆ.
  • ಹಿಂದೆ ಕೆರೆಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು ಆದರೆ, ಇಂದು ಆ ನಂಬಿಕೆ ಕಡಿಮೆಯಾಗಿ ಕೆರೆಗಳ ಬಗೆಗೆ ನಿರ್ಲಕ್ಷ್ಯ ಉಂಟಾಗಿದೆ.
  • ನಗರ ಪ್ರದೇಶಗಳಲ್ಲಿನ ಕೆಲವೊಂದು ಕೆರೆಗಳ ಹೆಸರು ದಾಖಲೆಗಳಲ್ಲಿ ದಾಖಲಾಗಿದ್ದರೆ, ಮತ್ತೆ ಕೆಲವು ಕೆರೆಗಳು ಉದ್ಯಾನವನಗಳಾಗಿ ಮಾರ್ಪಟ್ಟಿರುವುದನ್ನು ಕಾಣಬಹುದು. ಉದಾಹರಣೆಗೆ:- ಲಾಲ್ ಬಾಗ್ ಕೆರೆ, ಸ್ಯಾಂಕಿ ಕೆರೆ, ಹಲಸೂರು ಕೆರೆ, ಹಾಗೂ ತುಮಕೂರಿನ ಅಮಾನಿಕೆರೆ, ಮೈಸೂರಿನ ಕಾರಂಜಿಕೆರೆ ಹಾಗೂ ಕುಕ್ಕರಹಳ್ಳಿ ಕೆರೆ.
  • ಇನ್ನು ಗ್ರಾಮಾಂತರ ಪ್ರದೇಶದ ಕೆರೆಗಳ ಸ್ಥಿತಿ ಜಲಾನಯನ ಪ್ರದೇಶ ಅಥವಾ ಕೆರೆಗೆ ನೀರು ಹರಿದು ಬರುವ ಪ್ರದೇಶವನ್ನು ಸರ್ಕಾರದವರು ತಮಗೆ ಸೇರಿದ್ದು ಎನ್ನುವಂತೆ ತಪ್ಪು ಕಲ್ಪನೆಯಿಂದ ಭೂ ರಹಿತ ಬಡವರಿಗೆ ದಾನ ಮಾಡುತ್ತಿದ್ದಾರೆ ಹಾಗೂ ಹಳ್ಳಿಗಳಲ್ಲಿ ಧನಿಕರು ಈ ಜಲಾನಯನ ಪ್ರದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದರಿಂದ ಕೆರೆಗಳು ಮೂಖ ರೋಧನೆ ಅನುಭವಿಸುತ್ತಿವೆ.
  • “ಕೆರೆಗಳನ್ನು ಉಳಿಸಿದರಷ್ಟೆ ನೀರು” ಎಂಬ ವಿಷಯವನ್ನು ಮನದಟ್ಟು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಹಗಾಗಿ ಕೆರೆಗಳನ್ನು ಸರಿಯಾದ ನಿರ್ವಹಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೂ ಸಹ ಆಗಿದೆ ನೆಮ್ಮದಿಯ ಸಂಗತಿ ಎಂದರೆ ಈಗೀಗ ನೀರಿನ ಮಹತ್ವ ಅರಿತು ಇರುವ ಕೆರೆಗಳನ್ನು ಉಳಿಸಿಕೊಳ್ಳಲು ಅನೇಕ ಸಂಘ ಸಂಸ್ಥೆಗಳು ಮುಂದಾಗುತ್ತಿರುವುದು ಸಮಾಧಾನದ ಸಂಗತಿ. ಉದಾಹರಣೆಗೆ; ಧರ್ಮಸ್ಥಳದ ಸಂಸ್ಥೆ, ಯಶೋಮಾರ್ಗ ಸಂಸ್ಥೆ ಯನ್ನು ನೆನೆಯಬಹುದು.
  • ಕೆರೆಗಳು ಕಾಯಕಲ್ಪಕ್ಕಾಗಿ ಎದುರು ನೋಡುತ್ತಿದ್ದರೆ ಸರ್ಕಾರ ಡಿನೋಟಿಫೈ ಮಾಡಲು ಹೊರಟ್ಟಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿ, ಇದಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ-1964 ರ ಕಾಲಂ 68 ಕ್ಕೆ ತಿದ್ದುಪಡಿ ತರುವ ತಯಾರಿಯನ್ನು ನಡೆಸಿತ್ತು  ಇದು ಮೂರ್ಖತನದ ಪರಮಾವಧಿ ಎನಿಸಿತ್ತು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಡಿನೋಟಿಫೈ ಯನ್ನು ಕೈ ಬಿಟ್ಟಿದ್ದು ನೆಮ್ಮದಿಯ ಸಂಗತಿ.
  • ಕೃಷಿ ವಿಜ್ಞಾನಿ ಡಾ. ಟಿ.ಎಸ್ ಚನ್ನೇಶ್ ರವರು ಕೆರೆ ಕಟ್ಟೆಗಳ ಮೌಲ್ಯಗಳನ್ನು ಅರಿಯಬೇಕು ಇಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಯುದ್ಧ ನಡೆಯುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ ಅಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿ ಪ್ರಸ್ತುತ ಇ.27 ಲಕ್ಷ ಕೆರೆಗಳು ಜೀವಂತವಾಗಿದ್ದು ಇವುಗಳನ್ನು ಕಾಪಾಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದಿದ್ದಾರೆ. ಹಾಗೂ ನಮ್ಮ ರಾಜ್ಯದಲ್ಲಿ 1991 ರವರೆಗೂ ಕೆರೆಗಳ ಸ್ಥಿತಿ ಚೆನ್ನಾಗಿಯೇ ಇತ್ತು ಆದರೆ, ಕಳೆದ 20 ವರ್ಷಗಳಲ್ಲಿ ರಾಜ್ಯದಲ್ಲಿನ 10 ಸಾವಿರ ಕೆರೆಗಳು ಕಣ್ಮರೆಯಾಗಿವೆ ಎಂಬ ಆತಂಕಕಾರಿ ವಿಚಾರವನ್ನು ತಿಳಿಸಿದ್ದಾರೆ.
  • “ಭಿಕ್ಷಾಟನೆ ಮಾಡಿ ಕೆರೆಗಳ ಅಭಿವೃದ್ದಿಗೆ” ಎಂಬ ಘೋಷ ವಾಕ್ಯದೊಂದಿಗೆ ಕೊರಟಗೆರೆ ತಾಲ್ಲೂಕಿನ ಸಿದ್ಧರ ಬೆಟ್ಟ ಮಠವು ಧರ್ಮಸ್ಥಳ ಸಂಸ್ಥೆಯ ಯೋಜನೆಯ ಸಹಕಾರದೊಂದಿಗೆ ಮುಂದಾಗಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಧರ್ಮಸ್ಥಳ ಸಂಸ್ಥೆಯು “ನಮ್ಮೂರು ನಮ್ಮ ಕೆರೆ” ಎಂಬ ಯೋಜನೆಯ ಮೂಲಕ ಜಿಲ್ಲೆಯಲ್ಲಿ 94.25 ಲಕ್ಷ ವೆಚ್ಚದಲ್ಲಿ 10 ಕೆರೆಗಳನ್ನು ಅಭಿವೃದ್ಧಿ ಪಡಿಸಿದೆ.
  • ಅವನತಿಯ ಅಂಚಿನಲ್ಲಿರುವ ಕೆರೆಗಳ ಸಂರಕ್ಷಣೆ ಯಾರ ಹೊಣೆ? ಎಂಬುದು ಪರಿಸರವಾದಿಗಳ ಪ್ರಶ್ನೆಯಾಗಿದ್ದು ಇದಕ್ಕೆ ನಿಖರವಾದ ಉತ್ತರ ನಾವುಗಳೇ ಎಂಬುದಾಗಿ ಹೇಳಿದ್ದಾರೆ. ಕಾರಣ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಪರವಾನಗಿ ಪಡೆಯಲು ಕಾಯುತ್ತಿದ್ದರೆ ರೈತರು ತಮ್ಮ ಬದುಕಿನ ಅಂತ್ಯವನ್ನು ತಾವೇ ಕಂಡುಕೊಳ್ಳಬೇಕಾದ ಪರಿಸ್ಥತಿ ಈಗಾಗಲೇ ಮುಂದುವರೆದಿದ್ದು ಅದು ಇನ್ನೂ ತನ್ನ ಪ್ರಮಾಣವನ್ನು ಗರಿಷ್ಟಗೊಳಿಸಿಕೊಳ್ಳುವತ್ತಾ ಮುಖ ಮಾಡುತ್ತಾರೆ ಹಾಗಾಗಿ ಮುಂದಾದರೂ ಕೆರೆಗಳ ಸಂರಕ್ಷಣೆಯ ಹೊಣೆಯನ್ನು ನಾವುಗಳೇ ಕೈ ಜೋಡಿಸುವ ಜವಾಬ್ಧಾರಿಯನ್ನು ಹೊರಲು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.
  • ಕರ್ನಾಟಕ ಸರ್ಕಾರ ಜಲಸಂಪನ್ಮೂಲ ಇಲಾಖೆಯೊಂದಿಗೆ ಕೈ ಜೋಡಿಸಿ ಕುಡಿಯುವ ನೀರಿಗಾಗಿ ಕೆರೆ ತುಂಬುವ ಯೋಜನೆಗಳು ಎಂಬ ಕಾರ್ಯ ಕ್ರಮವನ್ನು ಜಾರಿಗೊಳಿಸಿದ್ದು 10 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲಾಗಿದೆ. ವಿಜಯಪುರ ಜಿಲ್ಲೆಯ ಮಮದಾಪುರ, ಬೇಗಂ ತಲಾಬ್, ಬೂತನಾಳ್, ಬಬಲೇಶ್ವರ, ಸಾರವಾಡ ಹಾಗೂ ತಿಡಗುಂದಿ ಹೀಗೆ 6 ಕೆರೆಗಳನ್ನು ಆಯ್ಕೆ ಮಾಡಿ ಸುಮಾರು 38.16 ಕೋಟಿ ಮೊತ್ತದ ಹಣವನ್ನು ಬಳಸಿ ಕೆರೆಗಳನ್ನು ತುಂಬಿಸಲಾಗಿದೆ ಇದು ವಿಜಯಪುರದ ಇತಿಹಾಸದಲ್ಲಿ ಸ್ವಾತಂತ್ರ್ಯ ನಂತರದಲ್ಲಿನ ಐತಿಹಾಸಿಕ ಮೈಲಿಗಲ್ಲಾಗಿದೆ.
  • ಬಳ್ಳಾರಿ ಜಿಲ್ಲೆಯ 10 ಕೆರೆಗಳನ್ನು ಆಯ್ಕೆ ಮಾಡಿ ಸುಮಾರು 115 ಕೋಟಿ ರೂ. ಗಳ ಮೊತ್ತವನ್ನು ಕಾಮಗಾರಿಗಾಗಿ ಬಿಡುಗಡೆ ಮಾಡಿದೆ.
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ 18 ಕೆರೆಗಳು ಮತ್ತು ಚಿಕ್ಕೇಡಿ ತಾಲುಕಿನ 4 ಕೆರೆಗಳು ಸೇರಿದಂತೆ ಒಟ್ಟು 22 ಕೆರೆಗಳಿಗೆ ಈ ಯೋಜನೆಯಲ್ಲಿ 77 ಕೋಟಿ ರೂ ಮೋತ್ತದ ಹಣವನ್ನು ಖರ್ಚುಮಾಡಿದೆ.
  • ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 2 ಕೆರೆಗಳಿಗೆ ನೀರು ತುಂಬಿಸುವ ಮತ್ತು ಸರಗೂರು ಗ್ರಾಮದ ಬಳಿಯ ಕಾವೇರಿ ನದಿಯಿಂದ ನೀರನ್ನಯ ಎತ್ತಿ ಗುಂಡಾಲ್ ಜಲಾಶಯದ ಬಾಧಿತ  ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆಗೆ 129 ಕೋಟಿ ರೂಗಳನ್ನು ವಿನಿಯೋಗಿಸಿದೆ.
  • ಹೀಗೆ ಮೈಸೂರು, ಮಂಡ್ಯ, ಕೊಡಗು, ತುಮಕೂರು, ಕಲ್ಬುರ್ಗಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಸಾವಿರ ಕೋಟಿ ಮೊತ್ತದ ಹಣವನ್ನು ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಕಿಕೊಂಡಿರುವುದು ಸ್ವಾಗತಾರ್ಹವಾಗಿದ್ದು ಕೆರೆಗಳಿಗೆ ಮರು ಜೀವ ಬಂದಂತಾಗಿದೆ.
  • ಅಂದು ಕಟ್ಟಿದ ಕೆರೆಗೆ ನೀರು ಬರಲೆಂದು ಜೀವಂತ ಹೆಣ್ಣನ್ನು ಬಲಿ ನೀಡುತ್ತಿದ್ದರು ಆದರೆ ಇಂದು ಕೆರೆಗಳ ಜೀವವನ್ನೇ ತೆಗೆಯುತ್ತಿದ್ದಾರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ “ಕುರಿ ಮರಿ ಕೆರೆ ಕಟ್ಟಿದ” ಕೆರೆಯಜ್ಜನ ಮಾನವೀಯ ಪಾಠ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರು ಕೆರೆ ಕಟ್ಟುವ ಕಾಯಕವನ್ನು ರೂಢಿಸಿಕೊಂಡು ಸುಮಾರು 7 ಕೆರೆಗಳನ್ನು ಕಾಡಿನ ಜೀವಿಗಳಿಗಾಗಿ, ಸಾಕುಪ್ರಾಣಿಗಳಿಗಾಗಿ ಕಟ್ಟಿರುವ ಸಂಗತಿ ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದೆ ಕಾರಣ, ಕೇವಲ ಸ್ವಾರ್ಥ ಸಾಧನೆಗಾಗಿ ಬದುಕುತ್ತಿರುವ ಇಂದಿನ ಕಾಲದಲ್ಲಿ ಕಾಮೇಗೌಡರು ನಿಸ್ವಾರ್ಥ ಸೇವೆಯಿಂದ ಕೆರೆ ಕಟ್ಟುವ ಕಾಯ ಕಲ್ಪವನ್ನು ಮುಂದುವರೆಸಿರುವುದು ಅಲ್ಲದೆ ಜನರ ಬೆಂಬಲ ದೊರೆತರೆ ಕೆರೆಗಳ ಸಂಖ್ಯೆಯನ್ನು 10 ಕ್ಕೆ ಏರಿಸುವ ಗುರಿಯನ್ನು ಹೊಂದಿರುವುದು. ಇದರಂತೆ ಮತ್ತೊಂದು ನಿದರ್ಶನವೆಂದರೆ ಕಲ್ಭುರ್ಗಿಯ ಚಂದಮ್ಮ ಎಂಬಾಕೆಯೂ ಸಹ ಊರಿನವರ ಬೆಂಬಲ ಪಡೆದು ಕಲ್ಭುರ್ಗಿಯ ಕೆರೆಗೆ ಮರು ಜೀವ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಉಪಸಂಹಾರ

              ಒಟ್ಟಾರೆ ಹೇಳುವುದಾದರೆ ಕೆರೆಗಳ ಉಳಿವು ನಮ್ಮೆಲ್ಲರ ಹೊಣೆಯಾಗಿದ್ದು ಮುಂದಿನ ಭವಿಷ್ಯದ ಚಿಂತನೆ ಮಾಡುತ್ತಾ ಕೆರೆಗಳ ಕಾಯ ಕಲ್ಪದಲ್ಲಿ ಎಲ್ಲರೂ ಭಾಗಿಯಾಗುವಂತೆ ಮಾಡಿ ಕೆರೆಗಳ ಅಭಿವೃದ್ದಿಗಾಗಿ ಶ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಹಲವಾರು ಕೆರೆಗಳಿಂದಾಗಿ ಇದುವರೆವಿಗೂ ಜನ-ಜಾನುವಾರುಗಳು, ಪಶು-ಪಕ್ಷಿಗಳು, ಜಲಚರಗಳಿಗೆ ಆಸರೆಯಾಗಿದ್ದ, ಮುಂದೆಯೂ ಕ್ರಿಯಾಶೀಲವಾಗಿರಬಲ್ಲ ಕೆರೆಗಳ ಬಗೆಗೆ ಗೌರವ ಭಾವನೆ ಹೊಂದಿ, ಜನರಿಗೆ ಕೆಲಸ ಕೊಟ್ಟು ಜೊತೆಗೆ ಆಧುನಿಕ ಯಂತ್ರೋಪಕರಣಗಳಿಂದ ಕೆರೆಗಳ ಹೂಳು ತೆಗಿಸಿ ಕೆರೆಗಳ ಸಹಜ ಸೌಂದರ್ಯವನ್ನು ಮರುಕಳಿಸುವಂತೆ ಮಾಡಬೇಕಾಗಿದೆ. ಹಾಗೂ ಕೆರೆಗಳನ್ನು ಕಣ್ಮರೆಯಾಗಿಸುವುದರಿಂದ ಉಂಟಾಗಬಹುದಾದ ಬರಗಾಲ, ಜಲಕ್ಷಾಮ, ಹವಾಮಾನ ವೈಪರಿತ್ಯ, ಶಾಶ್ವತ ಬೆಳೆಗಳ ನಾಶ, ಅಂತರ್ಜಲದ ಬಗ್ಗೆ ಯೋಚಿಸಬೇಕಾಗುತ್ತದೆ. ನಮ್ಮ ನಾಡಿನ ಸಂಸ್ಕøತಿ ಹಾಗೂ ಪರಂಪರೆಯ ಧ್ಯೋತಕವಾಗಿ ನಮ್ಮ ಹಿರಿಯರು ನಿರ್ಮಿಸಿದ ಕೆರೆಗಳ ಮೇಲೆ ಯಾವುದೇ ಸರ್ಕಾರದ ಕೆಟ್ಟ ದೃಷ್ಟಿ ಬೀಳದೆ ಕೆರೆಗಳನ್ನು ಸದಾ ಕಾಲ ಸಂರಕ್ಷಿಸಲು ಪಣ ತೊಡಬೇಕಾದುದು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ. ಜೀವ ಜಲವಾಗಿದ್ದ ಕೆರೆಗಳು ಅಳಿವಿನ ಅಂಚಿನಲ್ಲಿರುವುದನ್ನು ಗಮನಿಸಿ ಅವುಗಳನ್ನು ಸಂರಕ್ಷಿಸಲು ಮುಂದಾಗದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಕೆರೆಗಳನ್ನು ಚಿತ್ರಪಟಗಳಲ್ಲಿ ತೋರಿಸುವಂತಹ ಕಾಲ ಬರಬಹುದು ಅದು ವಾಸ್ತವವಾಗುವುದು ಬೇಡ ಎಂದು ಹೇಳುತ್ತಾ... “ಜೀವ ಜಲ ಬತ್ತದಿರಲಿ, ಕೆರೆಗಳ ವೈಭವ ಮರುಕಳಿಸಲಿ”.. ಎಂಬ ಆಶಯದೊಂದಿಗೆ ಕೆರೆಗಳ ಅಭಿವೃದ್ದಿಗೆ ಕೈ ಜೋಡಿಸೋಣ ಇಲ್ಲವೆ, ವಿನಾಶದ ಕರೆಗೆ ಸಿದ್ಧರಾಗೋಣ ಎಂಬ ಎಚ್ಚರಿಕೆಯ ಕಾಲ ಗಣನೆಯನ್ನು ಎದುರು ನೋಡುತ್ತಾ ಕೆರೆಗಳ ನೈಜ ಚಿತ್ರಣವನ್ನು ಮೆಲುಕು ಹಾಕಲು ಹಾಗೂ ಒಂದು ಕ್ಷಣ ಕೆರೆಗಳ ಬಗೆಗೆ ನಮ್ಮ ಋಣಾತ್ಮಕ ಯೋಚನಾ ಲಹರಿಯನ್ನು ಬದಲಾಯಿಸಲು ಸಾಧ್ಯವೇ? ಎಂದು ಕೇಳುವುದರೊಂದಿಗೆ ಕೆರೆಗಳ ಸ್ಥಿತಿಯನ್ನು ವಿವರಿಸುವಂತಹ ಒಂದು ಸಣ್ಣ ಪ್ರಯತ್ನ ಇದಾಗಿದೆ.

ಆಧಾರ ಗ್ರಂಥಗಳು

  1. ಕೆ.ವಿ.ಪುಟ್ಟಪ್ಪ - ನೀರಾವರಿ
  2. ಕೆ.ವೈ. ನಾರಾಯಣಸ್ವಾಮಿ - ನೀರದೀವಿಗೆ
  3. ಸಿ.ಎಸ್. ವಾಸುದೇವನ್ - ಹಂಪಿ ಪರಿಸರದ ಕೆರೆಗಳು
  4. ಜೀ.ಶಂ.ಪರಮಶಿವಯ್ಯ - ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು
  5. ನೀಲತ್ತಳ್ಳಿ ಕಸ್ತೂರಿ - ಕರ್ನಾಟಕದಲ್ಲಿ ಕೆರೆ ನೀರಾವರಿ
  6. ರಾಜಾರಾಮ ಹೆಗಡೆ - ಕೆರೆ ನೀರಾವರಿ ನಿರ್ವಹಣೆ ಚಾರಿತ್ರಿಕ ಅಧ್ಯಯನ
  7. ಅನಂತರಾಮು ಟಿ. ಆರ್ – ಕೆರೆಗಳು ಬತ್ತಿದಾಗ ಜಲ ಸಮಸ್ಯೆ
  8. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವರದಿಗಳು.
  9. ದಿನಪತ್ರಿಕೆಗಳು :- ಕನ್ನಡ ಪ್ರಭ, ಪ್ರಜಾವಾಣಿ, ವಿಜಯವಾಣಿ, ಪ್ರಜಾ ಪ್ರಗತಿ.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal