ಮೈಸೂರು ಸಂಸ್ಥಾನದಲ್ಲಿ ಸಹಕಾರಿ ಸಂಘಸಂಸ್ಥೆಗಳ ಅಸ್ಥಿತ್ವ, ಒಂದು ಐತಿಹಾಸಿಕ ವಿಶ್ಲೇಷಣೆ
ಮಲ್ಲೇಶಪ್ಪ ಟಿ ಎಸ್
ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು-572102
malleshappats1969@gmail.com
ಪ್ರಸ್ತಾವನೆ
ಸಹಕಾರಿ ಸಂಘಸಂಸ್ಥೆಗಳ ಅಧ್ಯಯನ ಹೆಚ್ಚು ಪ್ರಸ್ತುತತೆ ಪಡೆದಿದೆ. ಸಹಕಾರ ಸಂಘಗಳು ಮನುಜ ಕುಲದ ಬೆಳವಣಿಗೆಯ ಮುನ್ನೋಟವಾಗಿದೆ. ಇವುಗಳು ಆಯಾ ಸಮಾಜ, ಸಮುದಾಯರವರ, ಶ್ರೇಯೋಭಿವೃದ್ಧಿಗಾಗಿ ಅಸ್ಮಿತೆ ಪಡೆದಿವೆ. ಮೈಸೂರು ಸಂಸ್ಥಾನದಲ್ಲಿ 1905 ಜೂನ್ 5 ರಂದು ಜಾರಿಗೆ ತಂದ ಮೈಸೂರು ಕೋ-ಆಪರೇಟಿವ್ ಸೊಸೈಟೀಸ್ ರೇಗ್ಯುಲೇಷನ್ III ಕಾಯಿದೆ ಪ್ರಕಾರ ಸಾವಿರಾರು ಸಂಘ ಸಂಸ್ಥೆಗಳು ಸರ್ಕಾರ ನಿಯಮದ ಆಧಾರದ ಮೇಲೆ ನೊಂದಣಿ ಮಾಡಿಕೊಳ್ಳುವ ಅನುಶಾಸನ ಬದ್ದವಾಗಿ ಆಯಾ ಸಮಾಜದ ಏಳಿಗೆಗೋಸ್ಕರ ಕಾರ್ಯೋನ್ಮುಖವಾಗಿವೆ. ಕರ್ನಾಟಕದ ಗದಗಿನ ಕಣಗಿನ ಕಾಳ ಗ್ರಾಮದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಮುಖಂಡತ್ವದಲ್ಲಿ ಪ್ರಥಮ ಸಹಕಾರ ಸಂಘವನ್ನು ಪ್ರಾರಂಭಿಸಿದರು.
ಸಹಕಾರ ಸಂಘ ಸಂಸ್ಥೆಗಳು ಮೈಸೂರು ಸಂಸ್ಥಾನದಲ್ಲಿ ಜಾತಿ ಸಮುದಾಯದ ಏಳಿಗೆ ಹಾಗೂ ಏಕಮುಖ ಉದ್ದೇಶಗಳನ್ನು ಹೊಂದಿದ್ದ ಪ್ರಜಾಸಮು ಒಂದೆ ವೇದಿಕೆಯಲ್ಲಿ ಸಂಘಟಿತರಾದರು. ಅನುಶಾಸನ ಬದ್ದವಾಗಿ ಆಡಳಿತ ಮಂಡಲಿ ರಚಿಸಿಕೊಂಡು ಸೇವಾ ಕಾರ್ಯಗಳನ್ನು ಪ್ರಾರಂಬಿಸಿದರು. ಪ್ರತಿಯೊಂದು ಸಂಘಗಳು ಪರಸ್ಪರ ಸಹಕಾರದಿಂದ ನಿಧಿಯನ್ನ ಉಳ್ಳವರಿಂದ ಕ್ರೂಢೀಕರಿಸಿ ಇಲ್ಲದವರ ಪ್ರಗತಿಗಾಗಿ ವಿನಿಯೋಗಿಸುವ ಸದುದ್ದೇಶದಿಂದ ಕಾರ್ಯಯೋಜನೆ ರೂಢಿಸಿಕೊಂಡರು 1905 ರಿಂದ 1947 ರ ಅವಧಿಯಲ್ಲಿ ಅಸ್ಥಿತ್ವಕ್ಕೆ ಬಂದ ಸಹಕಾರಿ ಸಂಘಗಳು ತಮ್ಮದೆ ಧ್ಯೇಯೋದ್ಧೇಶಗಳನ್ನು ಹೊಂದಿ ಅವುಗಳ ಸಾಧನೆಗಾಗಿ ಮುನ್ನಡೆಯುತ್ತಿವೆ.
ಕೀ ವರ್ಡ್: ಮೈಸೂರು ಸಂಸ್ಥಾನ, ಸಹಕಾರಿ ಸಂಘ, ಪ್ರಜಾಸಮು, ಮೈಸೂರು ಸಂಸ್ಥಾನ
ಪಿಠೀಕೆ
ಸಂಘ ಸಂಸ್ಥೆಗಳ ಅಧ್ಯಯನವು ವೈವಿದ್ಯಮಯ ದೃಷ್ಟಿಕೋನಗಳಿಂದ ಕೂಡಿವೆ. ಸಹಕಾರವು ಮನುಜಕುಲದ ಅವಿಭಾಜ್ಯ ಅಂಗ ಸಂಘಸಂಸ್ಥೆಗಳ ಅಸ್ಥಿತ್ವವು ತಮ್ಮದೆ ಧ್ಯೇಯೋದ್ದೇಶಗಳನ್ನು ಹೊಂದಿರುತ್ತವೆ. ಮಾನವ ನಾಗರೀಕತೆಯತ್ತ ವಾಲಿದಾಗ ಪುಟ್ಟ-ಸಂಘಟನೆಯಿಂದ ಜಾಗತಿಕ ಹಂತದವರೆವಿಗೂ ಪ್ರಭಾವಬೀರುವ ಸಂಘಗಳು ಉದಯವಾದವು. ಪ್ರತಿ ಸಂಘಗಳ ಪದಾಧಿಕಾರಿಗಳು ಸದಸ್ಯರು, ವೈಯ್ಯಕ್ತಿಕ ಇಲ್ಲವೆ ತಮ್ಮ ಸಮುದಾಯದವರ ಶ್ರೇಯೋಭಿವೃದ್ದಿ, ರಕ್ಷಣೆ, ರಾಜಕೀಯ, ಆರ್ಥಿಕ, ಧಾರ್ಮಿಕ ಹಿತಾಸಕ್ತಿಯ ಹಿನ್ನಲೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿರುತ್ತಾರೆ.
ಸಹಕಾರ ಚಳುವಳಿ 1844 ಅಕ್ಟೋಬರ್ 24 ರಂದು ಇಂಗ್ಲೇಡಿನ ರಾಬರ್ಟ್‍ಬವನ್ ಎಂಬ ಕಾರ್ಮಿಕ ಮತ್ತು ಗಿರಣಿ ಮಾಲೀನ ಮುಂದಾಳತ್ವದಲ್ಲಿ ರಾಕ್‍ಡೆಲ್ ನಗರದ 28 ನೇಕಾರ ವೃತ್ತಿ ಬಾಂಧವರಿಂದ ಪ್ರಾರಂಭವಾಗಿ 1849 ರಲ್ಲಿ ಜರ್ಮನಿಯ ಫ್ರೆಡರಿಕ್ ವಿಲಿಯಂ ರೆಡಿಸನ್‍ರಿಂದ ವೈಜ್ಞಾನಿಕ ರೂಪಾಂತರ ಹೊಂದಿ. ವಿಶ್ವದ 150 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿತು.
ಭಾರತ ಸರ್ಕಾರವು ಇಂಗ್ಲೇಡಿನ English Friendly Societies Act Of 1793 Industrial and Provident Societies Act 1893 ಮತ್ತು 1908 ರಲ್ಲಿ ಸರ್ ಎಡ್ವರ್ಡ್ ನಿಕೋಲ್‍ಸನ್ ಅಯೋಗದ ವರದಿಯಂತೆ ಭಾರತದ ಗವರ್ನರ್ ಜನರಲ್ ಲಾರ್ಡ್‍ಖರ್ಜನ್‍ರವರು Co-operative Societies Act - X ಜಾರಿಮಾಡುವ ಮೂಲಕ 1904 ಮಾರ್ಚ್ 25 ರಂದು ಜಾರಿಗೆ ಬಂದಿತು. ಸಂಘ ಸಂಸ್ಥೆಗಳು ಬಡ ರೈತರು, ಕುಶಲಕರ್ಮಿಗಳು ಶೋಷಿತ ಸಮಾಜದ ಸ್ಥಿತಿಗತಿಗಳನ್ನು ಸುಧಾರಿಸಲು ಆಯಾ ವಲಯದ ಮುಖಂಡರುಗಳು ಸಂಘಟಿತ ಪ್ರಯತ್ನಕ್ಕೆ ಮುಂದಾದರು. ಉಳ್ಳವರು ಇಲ್ಲದವರ ಪರವಾಗಿ ಒಟ್ಟುಗೂಡಿ ಸಹಕಾರಿ ಸಂಘ ಸ್ಥಾಪಿಸಿಕೊಳ್ಳುವ ಇಚ್ಛಾಸಕ್ತಿಯು ನಾಗರೀಕರ ಮೂಲಭೂತ ಹಕ್ಕು ಎಂದು ಪರಿಗಣಿಸಲ್ಪಟ್ಟಿದೆ.
ಕರ್ನಾಟಕದ ಗದಗಿನ ಕಣಗಿನ ಹಾಳ ಗ್ರಾಮದ 13 ಸದಸ್ಯರು ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಮುಖಂಡತ್ವದಲ್ಲಿ 1905 ಮೇ 8 ರಂದು ಪ್ರಾರಂಭಿಸಿ ಜಾತ್ಯಾತೀಯ ಸಂಘದಲ್ಲಿ ಸದಸ್ಯತ್ವ ಪಡೆದರು. ಧಾರವಾಡದ ಜಿಲ್ಲಾ ಕಲೆಕ್ಟರ್ ಆರ್.ಜೆ.ಮೆಕಾನಿಯೆಲ್ ರವರು ಭಾರತದ ಪ್ರಥಮ ಸಹಕಾರ ಸಂಘ ಎಂದು ನೊಂದಾಯಿಸಿದರು.
ಮೈಸೂರು ಸಂಸ್ಥಾನದಲ್ಲಿ ದಿವಾನ್.ಪಿ.ಎನ್.ಕೃಷ್ಣಮೂರ್ತಿರವರು Myssore Co-operative Societies regulation III (Act) ಕಾಯ್ದಿದೆಯನ್ನು 1905 ರ ಜೂನ್ 5 ರಂದು ಜಾರಿಗೆ ತರುವ ಮೂಲಕ ಹೊಸ ಯುಗಕ್ಕೆ ಚಾಲನೆ ನೀಡಿದರು. ದಿನಾಂಕ 18-12-1905 ರಂದು ಬಾಸೆಲ್ ಮಿಷನರಿಯರೆವರೆಂಡ್ ಫಾದರ್ ರಿವಿಂಗ್‍ಟನ್‍ರು ನೇಕಾರರ ಅನುಕೂಲಕ್ಕಾಗಿ Urban Credit Co-op, Society ಸ್ಥಾಪಿಸಿ ನೊಂದಣಿ ಮಾಡಿಸಿದರು. ಇಂದು ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆ ಪ್ರವಹಿಸದ ಗ್ರಾಮವೇ ಇಲ್ಲವೆಂದು ಹೇಳಬಹುದು. ರಾಜ್ಯದಲ್ಲಿ 30 ಬಗ್ಗೆಯ ಸಂಘಗಳಿವೆ. ಸಮಾಜಪರ ಸಂಘಗಳು ಹಲವಾರು ಭಾರತೀಯ ಸಮಾಜದಲ್ಲಿನ ಮೌಡ್ಯ-ಕಂದಾಚಾರಗಳು ತಳ ಸಮುದಾಯದವರನ್ನು ಗುಲಾಮರನ್ನಾಗಿ ಶೋಷಣೆಗೆ ಗುರಿಮಾಡಿದ ದಿನಗಳನ್ನು ಮರೆಯುವಂತಿಲ್ಲ. ಮೇಲ್ವವರ್ಗದವರ ಶೋಷಣೆಯಿಂದ ವಿಮುಕ್ತರಾಗಲು ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಂಘಿಕ ಹೋರಾಟ ಅನಿವಾರ್ಯವಾಯಿತು. ಜಾತಿ ಸಂಘಟನೆಗಳು ತಮ್ಮ ಜನಾಂಗದ ಸರ್ವತೋಮುಖ ಅಭಿವೃದ್ದಿಗಾಗಿ ಶೊಷಣೆ ಮಾಡುತ್ತಿರುವ ವರ್ಗಗಳ ವಿರುದ್ದ ಹೋರಾಡಿ ಸರಕಾರದಲ್ಲಿ ಒತ್ತಡ-ಮಾಡಿದವು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನಗಳನ್ನು ನ್ಯಾಯಬದ್ದ ಸೌಲಭ್ಯಗಳನ್ನು ಪಡೆಯಲು ಶಕ್ತಿ ತುಂಬುವಂತ ಸಂಘಟನೆಗಳು ಹಲವು ದೃಷ್ಠಿಕೋನಗಳನ್ನ ಹೊಂದಿ-ಅಸ್ಥಿತ್ವಕ್ಕೆ ಬಂದಿವೆ ಸಂಘಗಳು ನಿರ್ದಿಷ್ಠ ಜಾತಿ, ಜನಾಂಗ, ಸಮಾಜ, ನಾಡು, ನುಡಿ, ರಾಷ್ಟ್ರದ ಹಿತಕ್ಕಾಗಿ ನಿಸ್ವಾರ್ಥ ಸೇವಾ ಮನಸ್ಥಿತಿಯನ್ನ ಹೊಂದಿರುವ ಮತ್ತು ಅನುಶಾಸನ ಬದ್ದರಾಗಿ ಒಗ್ಗೂಡಿಸಲ್ಪಟ್ಟ ಸಮಾನ ಮನಸ್ಕರ ಗುಂಪುಗಳ ಬೆಳವಣಿಗೆ ಬಂದವು ಮೈಸೂರು ಸಂಸ್ಥಾನದಲ್ಲಿ ಪ್ರತಿ ಜಾತಿ, ವರ್ಗಗಳಲ್ಲಿನ ಒಳಪಂಗಡಗಳು ಹಲವಾರಿದ್ದರೂ, ಯಾವುದೆ ವೈವಾಹಿಕ ವಿಧಿ ವಿಧಾನಗಳಲ್ಲಿ ವಿನಿಮಯ ಏರ್ಪಾಡುಗಳಿಲ್ಲ ತಮ್ಮಲ್ಲಿ ರೂಡಿಸಿಕೊಂಡಿರುವ ಸಣ್ಣ-ಪುಟ್ಟ ಅಂತರಗಳನ್ನ ಬದಿಗಿಟ್ಟು ಸಂಘಟಿತರಾಗಿ ಚಳುವಳಿಗೆ ದುಮುಕಿದರು. 1
ಮೈಸೂರು ಸಂಸ್ಥಾನದಲ್ಲಿ 1904 ರ ಸಹಕಾರಿ ಸಂಘಗಳ ನೊಂದಣಿ ನಿಯಮದ ಪ್ರಕಾರ ದಾಖಲಾತಿ ಮಾಡಿಕೊಂಡ ಸಂಘಗಳು ಹ¯ವಾರು. ಸಹಕಾರಿ ಸಂಘ ಸಂಸ್ಥೆಗಳ ಬೆಳವಣಿಗೆಯನ್ನ ಮೈಸೂರು ಸಂಸ್ಥಾನದಲ್ಲಿ 1905 ರಿಂದ 1947 ರವರೆಗೆ ವನ್ನು ಕೆಳಗಿನ ತಖ್ತೆಃಯಿಂದ ಕಂಡು ಕೊಳ್ಳಬಹುದು. 2
ವರ್ಷ |
ಕೃಷಿ ಸಹಕಾರಿ ಸಂಘಗಳ |
ಕೃಷಿಯೇತರ ಸಹಕಾರಿ ಸಂಘಗಳು |
ದಲಿತ ಹಿಂದುಳಿದ ಸಂಘಗಳು |
ಭೂ ಸ್ವಾದಿನ ಸ. ಸಂಘ |
ವೈವಿದ್ಯ ಉದ್ದೇಶಿತ ಸಂಘ |
ರೈತರ ಸಂಘ |
1905 |
05 |
01 |
01 |
- |
- |
- |
1910 |
51 |
109 |
03 |
- |
- |
- |
1915 |
488 |
260 |
05 |
- |
- |
- |
1920 |
1272 |
656 |
18 |
- |
- |
- |
1925 |
1388 |
653 |
189 |
07 |
- |
12 (1926) |
1930 |
1490 |
829 |
265 |
12 |
- |
12 |
1935 |
1455 |
886 |
227 |
19 |
- |
12 |
1940 |
1430 |
852 |
159 |
37 |
- |
12 |
1945 |
1694 |
1092 |
148 |
75 |
- |
12 |
1947 |
1767 |
1166 |
149 |
79 |
82 (1948) |
12 |
1947-48 ಅವದಿಯಲ್ಲಿ ಒಟ್ಟು 3255 ಸಹಕಾರಿ ಸಂಘ ಸಂಸ್ಥೆಗಳು ತಮ್ಮದೆ ಧ್ಯೇಯೋದ್ದೇಶಗಳನ್ನ ಹೊಂದಿದಂತೆ ಮೈಸೂರು ಸರ್ಕಾರದ ಸಹಕಾರಿ ಇಲಾಖೆಯಲ್ಲಿ ನೊಂದಣಿಯಾಗಿವೆ.3 ಮೇಲೆ ಸೂಚಿತ ಸಹಕಾರಿ ಸಂಘಗಳಲ್ಲಿ 149 ಸಂಘಗಳು ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಕ್ಕೆ ಸೇರಿದ ಸಂಘಗಳಾಗಿವೆ. 4200 ಸದಸ್ಯರು ಸಂಘದ ಸದಸ್ಯತ್ವ ಪಡೆದು ಸಂಘದ ಬೆಳವಣಿಗೆ ಮತ್ತು ಸಮುದಾಯವಾದ ಚಟುವಟಿಕೆಗಳಲ್ಲಿ ಪಾಲ್ಗೋಂಡಿರುತ್ತಾರೆ. ಒಟ್ಟು ಬಂಡವಾಳ 89.37300 ರೂಗಳನ್ನು 1904 ರಲ್ಲಿ ಹೊಂದಿದ್ದು 12,34800 ಹಣವನ್ನ ಭದ್ರತಾ ಹಣವಾಗಿ ಸರ್ಕಾರದಲ್ಲಿ ಜಮಾ ಮಾಡಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋಚರಿಸುವ ಮೈಲಿಗಲ್ಲುಗಳು ಪ್ರಯಾಣಿಕರಿಗೆ ಮಾರ್ಗಸೂಚಿಯಾಗಿರುವಂತೆ ಸಹಕಾರಿ ವಲಯದ ಕಾರ್ಯಕರ್ತರಿಗೆ ಹಿಂದಿನ ತಲೆಮಾರಿನ ನಾಯಕರುಗಳು ನಡೆದು ಬಂದ ದಾರಿ ತಮ್ಮ ಆದರ್ಶ ಜೀವನ ಅವರು ಬಳಸಿದ ಸಂಸ್ಥೆಗಳನ್ನು ಸಂರಕ್ಷಿಸಿ ಪ್ರಗತಿಯ ಪಥದಲ್ಲಿ ಬೆಳೆಸುವ ಜಾವಾಬ್ದಾರಿ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.
3.2. ಜಾತಿ ಸಂಘಗಳ ಉದಯಕ್ಕೆ ಪ್ರೇರಕಾಂಶಗಳು
ಜಾತಿ ಸಂಘಟನೆಗಳ ಹೆಜ್ಜೆಗುರುತು ಇಂದಿನದಲ್ಲ ಧರ್ಮ, ದೇವರು, ಜಾತಿಯ ಹೆಸರಿನಲ್ಲಿ ಶೋಷಿಸುವ ವ್ಯವಸ್ಥೆಯ ವಿರುದ್ದ ಸಂಘಟಿತವಾಗಿ ನಡೆಸಿದ ಹೋರಾಟವು ಕಿ.ಪೂ 6 ನೇ ಶತಮಾನದಲ್ಲಿ ಮಹಾವೀರ ಗೌತಮ ಬುದ್ದರಿಂದ (ಜರುಗಿತ್ತು) ನಡೆದಿತ್ತು ವರ್ಣಾಶ್ರಮ ವ್ಯವಸ್ಥೆಯಲ್ಲಿನ ಶೋಷಿತ ಸಮಾಜವನ್ನ ತಿಳಿಗೊಳಿಸಲು ಕ್ರಿ.ಶ 7 ನೇ ಶತಮಾನದಲ್ಲಿ 63 ಶಿವ ಭಕ್ತರೆನಿಸಿದ್ದ ನಯನಾರುಗಳು, ಆಳ್ವಾರರು ಮತ್ತು ಶಂಕರಾಚಾರ್ಯರು ಜಾತ್ಯಾತೀತ ನೆಲೆಯಲ್ಲಿ ಮಾರ್ಗ ಸೂಚಕರಾದರು.
12 ನೇ ಶತಮಾನದ 770 ಶರಣರು ಬಸವೇಶ್ವರರ ಘನ ನೇತೃತ್ವದಲ್ಲಿ ಕ್ರಾಂತಿಕಾರಿ ಹೋರಾಟವನ್ನ ಪ್ರಾರಂಬಿಸಿದರು. ಜಾತಿ ಪದ್ಧತಿ, ಆರ್ಥಿಕ ಅಸಮಾನತೆ, ಧಾರ್ಮಿಕ ಶ್ರೇಷ್ಠರೆಂದು ದಬ್ಬಾಳಿಕೆ ನಡೆಸುತ್ತಿದ್ದ ಪುರೋಹಿತ ಶಾಹಿಗಳ ವಿರುದ್ದ ಬ್ರಾಹ್ಮಣೇತರರು ಸಂಘಟಿತರಾದರು. ಮೇಲು-ಕೀಳು ಎಂಬ ಕರಿದಕ ಮುಚ್ಚಿದರು.4 ಶರಣರು ತಮ್ಮ ಅನುಭವಗಳನ್ನ ಹಂಚಿಕೊಳ್ಳಲು ಬೇದವೆಣಿಸದೆ ಜಾತ್ಯಾತೀತವಾಗಿ ಸ್ತ್ರೀ-ಪುರುಷರಿಗೂ ಮುಕ್ತ ಅವಕಾಶ ಮಾಡಿಕೊಟ್ಟರು. ಕೆಳ ಸಮುದಾಯದ ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಮೇಧಾರ ಕೇತಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಸಮಗಾರ ಹರಳಯ್ಯರು ಪಾಲ್ಗೊಂಡು ಗೌರವಾನ್ವಿತ ಸಮಾಜಕ್ಕೆ ಸರಿಸಮಾನವಾದ ಗೌರವಕ್ಕೆ ಪಾತ್ರರಾದರು. ಪರಂಪರೆಯಿಂದ ಯಾವೂಂದು ಸ್ವಾತಂತ್ರ್ಯವಿಲ್ಲದೆ ಅಂತರದಲ್ಲಿದ್ದ ಸ್ತ್ರೀಯರಿಗೆ ಮುಕ್ತ ಅವಕಾಶ ಲಭ್ಯವಾಯಿತು. ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸಂಕವ್ವ, ಕಾಳವ್ವ, ಗೊಗ್ಗವ್ವ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ, ಕೊಟ್ಟಣದ ಸೊಮವ್ವ, ಸೇರಿದಂತೆ 37 ಶರಣೆಯರು ಮುಕ್ತ ಸ್ವಾತಂತ್ರ್ಯ ಪಡೆದವರಾಗಿ ಸ್ತ್ರೀಯರ ಹಕ್ಕು ಬಾದ್ಯತೆ ಜಾತಿ ಪದ್ಧತಿ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಅಸಮಾನತೆ ವಿರೋದಿಸಿ ಚಳುವಳಿಯಲ್ಲಿ ಪಾಲ್ಗೊಂಡರು.5 12 ನೇ ಶತಮಾನದ ಕ್ರಾಂತಿಯಿಂದ ಸ್ತ್ರೀಯರು ಕೇಂದ್ರ ಸಂಸ್ಥಾನಗಳಲ್ಲಿ ಅವಕಾಶ ಪಡೆದುಕೊಂಡರು. ಅಂತರ್ ಜಾತಿ ವಿವಾಹ ಮೂಲಕ ಸಮಾನತೆ ಸಾರಿದರು, ಕೆಳ ವರ್ಗದ ಸಂಭೋಳಿ ಮನೆಯಲ್ಲಿ ಬಸವೇಶ್ವರರು ಸಹ ಭೋಜನ ಮಾಡುವ ಮೂಲಕ ಮಾನವೀಯತೆ ಮರೆದರು.6
ಚನ್ನಯ್ಯ ಮನೆಯ ದಾಸನ ಮಗ ಕಕ್ಕಯ್ಯ ಮನೆಯ ಸಾಸಿಯವ್ವನ ಮಗಳು ಇವರಿಬ್ಬರು ಹೊಲದಲು ಬೆರಣಿ ಹೋಗಿ ಸಂಗವ ಮಾಡಿದರಿ. ಇವರಿಬ್ಬರಿಗೆ ಹುಟ್ಟಿದ ಮಗನಾನು ಕೂಡಲ ಸಂಗಮದೇವರ ಸಾಕ್ಷಿಯಾಗಿ (ವಚನ -346) ವಚನ ಮೂಲಕ ಜಾತಿಯ ಮೂಲ ವ್ಯವಸ್ಥೆಯನ್ನ ವಿರೋದಿಸಿ ಮನುಕುಲದಲ್ಲಿ ಹೊಸ ಮನ್ವಂತರ ಸೃಷಿಮಾಡಿದರು. 12 ನೇ ಶತಮಾನದ ಕ್ರಾಂತಿಕಾರಿ ನಡೆಯುವ ಮೈಸೂರು ಸಂಸ್ಥಾನದ ಪ್ರಜಾ ವರ್ಗದವರಲ್ಲಿ ಜಾಗೃತಿ ಮೂಡಿಸಿತು. ಮೇಲ್ವರ್ಗದವರ ವಿರುದ್ದ ಹೋರಾಡುವ ಸ್ಪೂರ್ತಿ ನೀಡಿತು. ಹಿಂದುಳಿದ ವರ್ಗಗಳ ನಾಯಕರು ಸಾಂಘಿಕ ಪ್ರಯತ್ನ ನಡೆಸುವತ್ತ ಚಿಂತಿಸಿದರು.
ಪಾಶ್ಚಿಮಾತ್ಯ ಕ್ರೈಸ್ತಮಿಷನರಿಗಳು ಪಾಶ್ಚಿಮಾತ್ಯ ಮಾದರಿ ಶಿಕ್ಷಣ ಸಂಶೋಧನೆ ಪ್ರಾರಂಬಿಸಿದರು. ಫರ್ಡಿನಾಂಡ್ ಕಿಟಲ್, ಬಿ.ಎಲ್ ರಯಸ್ ಮಾರ್ಕ್‍ವಿಲ್ಸ್‍ರವರು ವೈಚಾರಿಕ ಪ್ರಜ್ಞೆಗೆ ನಾಂದಿಹಾಕಿದರು. ಬ್ರಾಹ್ಮಣೇತರರು ಬ್ರಿಟೀಷರ ಶಿಕ್ಷಣ ನೀತಿಯಿಂದ ಮೂಕರಾಗಿರುವವರು ಮಾತನಾಡಿದರು, ಬರಹ ಗೊತ್ತಿಲ್ಲದವರು ಬರವಣಿಗೆ ಕಲಿತರು ಅನಕ್ಷರಸ್ತರು ಅಕ್ಷರಸ್ಥರಾದರು.7
ಸಾಮಾಜಿಕ ಸುಧಾರಣ ಆಂದೋಲನಗಳಿಂದ ಜಾಗೃತರಾದರು. ಭಾರತದ ಪುನರಜ್ಜೀವನ ಚಳುವಳಿಯ ನಾಯಕರು ಸ್ಥಾಪಿಸಿದ ಸಂಘ-ಸಮಾಜಗಳಿಂದ ಮತ್ತು ಸಮಾಜ ಸುಧಾರಣೆಗಾಗಿ ನಡೆಸಿದ ಕಾರ್ಯ ಚಟುವಟಿಕೆಗಳಿಂದಾಗಿ ಪ್ರಜ್ಞಾವಂತರಾದರು, ಪತ್ರಿಕೆಗಳಲ್ಲಿ ಪಾನ ವಿರೋದ, ಸತಿ ಸಹಗಮನ ನಿಷೇದ ವಿಧವ ವಿವಾಹ ಪ್ರೋತ್ಸಾಹ, ಮೌಡ್ಯಕಂದಾಚರಗಳ ಖಂಡನೆ ಪಾಶ್ಚಿಮಾತ್ಯ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹಗಳಿಂದ ದೇಶ ವ್ಯಾಪ್ತಿ ಪ್ರಭಾವ ಬೀರಿತು. ಮೈಸೂರು ಸಂಸ್ಥಾನದ ವಿಚಾರವಂತರು ತಮ್ಮನ್ನ ಶೋಷಿಸುತ್ತಿದ್ದ ಅಲ್ಪಸಂಖ್ಯಾತರ ವಿರುದ್ದ ಸಂಘಟಿತರಾಗಿ ಹೋರಾಡವತ್ತ ಮಹತ್ವದ ಹೆಜ್ಜೆ ಇಟ್ಟರು.
ಬ್ರಿಟಿಷರು ಜಾರಿಗೆ ತಂದ ಕಾನೂನು ಸಂಹಿತೆಗಳಾದ (1909 ದೇವದಾಸಿ ನಿಷೇದ, 1910 ಬಸವಿ ನಿಷೇದ, ಗೆಜ್ಜೆ ಪೂಜೆ ನಿಷೇದ, 1936 ವೇಶ್ಯಾ ವೃತ್ತಿ ನಿಷೇದ ಸಮಾನತೆ ಪ್ರತಿಪಾದಿಸುವ ನೀತಿ ತತ್ವಗಳು ಶಿಶು ಕಲ್ಯಾಣ ಕಾಯಿದೆಗಳು, ಹಿಂದುಳಿದ ವರ್ಗದವರ ಸಂರಕ್ಷಣ ನೀತಿ ಸಂಹಿತೆಗಳಿಂದ ಪ್ರಭಾವಿತ ಸಮೂದಯದವರು ಶೋಷಣೆ ಮಾಡುವ ಮೇಲ್ರ್ವಗದವರ ವಿರುದ್ದ ಸಂಘಟಿತರಾಗಿ ಚಳುವಳಿ ನಡೆಸುವ ಆನೆಯಷ್ಟು ಬಲ ಪ್ರಾಪ್ತಿಯಾಯಿತು.
ಭಾರತದಲ್ಲಿನ ಸಂಸ್ಥಾನಗಳ ರಾಜರು- ದಿವಾನರು ಅಧಿಕಾರಿಗಳು ಅರಮನೆ ಸಿಬ್ಬಂದಿ ವರ್ಗದವರು ತಮ್ಮ ಅಧಿಕಾರ ಸ್ಥಾನಮಾನ ಭದ್ರಪಡಿಸಿಕೊಳ್ಳಲು ಬಹುಸಂಖ್ಯಾತರಾದ ಹಿಂದುಳಿದ ವರ್ಗದ ಪ್ರಜೆಗಳ ಹಿತಕಾಪಾಡಲು ಮುಂದೆ ಬಂದರು. ಅಧಿಕಾರ ರೂಡರ ಪ್ರೋತ್ಸಾಹದಿಂದ ಬ್ರಾಹ್ಮಣೇತರರು ಸಂಘಗಳನ್ನ ಸ್ಥಾಪಸಿ ಕೊಂಡ ಸಮುದಾಯದವರ ಸಂಕಷ್ಟಗಳನ್ನು ಪರಿಹರಿಸಲು ನಿಶ್ಚಿಯಿಸಿದರು.
ಮೈಸೂರು ಸಂಸ್ಥಾನದ ಜನರಿಗಿಂತ ಮಹಾರಾಷ್ಟ್ರದಲ್ಲಿ ಜ್ಯೋತಿ ಭಾ ಫುಲೆ 1873 ರಲ್ಲಿ ಸತ್ಯಶೋಧಕ ಸಮಾಜ ಸಾಹ ಮಹಾರಾಜರ ಬೆಂಬಲ ನೀಡಿ ಸ್ಥಾಪಿಸಿದರು. ಸಾವಿತ್ರಿ ಭಾಯಿ ಪುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣದ ಪ್ರಸ್ತುತತೆ ಪ್ರತಿಪಾದಿಸಿ ಶಾಲೆ ತೆರೆದರು. ಬಿಹಾರ್‍ನಲ್ಲಿ –ಯಾದವ್, ತಮಿಳುನಾಡಿನಲ್ಲಿ -ಪೆರಿಯಾರ್ ಪ್ರಾರಂಬಿಸಿದ ಆತ್ಮಗೌರವ ಚಳುವಳಿ 1890- ಆದಿ ದ್ರಾವಿಡ ಮಹಾಜನ ಸಂಘ, 1892 ರ ದ್ರಾವಿಡ ಕಜಗಂ ಪಕ್ಷ, ಜಾನ್ ರತ್ನಿನ್, 1907- ಸಾದುಜನ ಪರಿಪಾಲನಾ ಸಂಘ ಸ್ಥಾಪಿಸಿದರು. -ಸಾಧಂತ ಸ್ವಾಮಿಗಳಿಂದ ಪ್ರಭಾವಿತರಾದರು. ಕೇರಲದ ನಾರಾಯಣ ಗುರು ಪ್ರಾರಂಬಿಸಿದ ದೇವಸ್ಥಾನ ಪ್ರವೇಶ ಚಳುವಳಿ. 1905 ರಲ್ಲಿ ಮೈಸೂರಿನ ಜನತೆ ಸಾದುಜನ ಪರಿಪಾಲನ ಯಾಗಂನ-ಅಯ್ಯನ್‍ಕಾಳಿರವರು ಅಸ್ಪಷ್ಯತೆ ನಿವಾರಣೆಗಾಗಿ ನಾಯ್ಯರ್, ಬನಿಯಾಗಳು ಬ್ರಾಹ್ಮಣರ ವಿರುದ್ದ ನಡೆಸಿದ ಹೋರಾಟಗಳಿಂದ ಸ್ಪೂರ್ತಿ ಪಡೆದು ಮೈಸೂರಿನವರು ಹೋರಾಟಕ್ಕಳಿದರು. ಆಂದ್ರ ಪ್ರದೇಶದಲ್ಲಿ ಮಹಾಸಂಘವು ಬ್ರಾಹ್ಮಣರ ವಿರುದ್ದ ಹೊರಾಟದತ್ತ ಮುನ್ನಡೆಯಿತು.8
ರಾಜರಾಂ ಮೋಹನರಾಯ್ ಸರ್ ಸೈಯ್ಯದ್ ಅಹಮ್ಮದ್ ಖಾನ್, ಗೋಖಲೆ ರವರ ಸರ್ವಟ್ಸ್ ಆಫ್ ಇಂಡಿಯಾ ಸಂಸ್ಥಾನದ ನೆರೆಹೊರೆಯ ರಾಜರು ಸುಧಾರಕರು ನಡೆಸಿದ ಚಳುವಳಿ ಮತ್ತು ಬೆಂಬಲಗಳಿಂದಾಗಿ ಮೈಸೂರು ಸಂಸ್ಥಾನದ ಹಿಂದುಳಿದ ವರ್ಗಗಳು ಸ್ಪೂರ್ತಿ ಪಡೆದು ಮೈಸೂರು ಭಾಗದಲ್ಲಿ ಚಳುವಳಿಯಲ್ಲಿ ಪಾಲ್ಗೋಂಡರು.9
1890 ರಲ್ಲಿ ಸ್ವಾಮಿ ವಿವೇಕಾನಂದರ್ ಮೈಸೂರಿಗೆ ಬೇಟಿ ನೀಡಿ ಮೈಸೂರಿನ ಮಹಾರಾಜ- ಚಾಮರಾಜ ಒಡೆಯರಿಗೆ ತಿಳಿಸುತ್ತಾ ಹಸಿದ ಹೊಟ್ಟೆಗೆ ಅನ್ನ ಕೊಡಲಾರದ, ವಿಧವೆಯರ ಕಣ್ಣೀರನ್ನು ಒರೆಸಲಾಗದ ಧರ್ಮದ ಆಚರನೆಗಳಲ್ಲಾಗಲಿ, ದೇವರುಗಳಲ್ಲಾಗಲಿ ನನಗೆ ನಂಬಿಕೆ ಇಲ್ಲ, ಎಂದರು ಹಿಂದುಳಿದ ವರ್ಗದವರ ಪರ ಶ್ರಮಿಸುವಂತ ರಾಜರಿಗೆ ನೀಡಿದ ಸಲಹೆಗಳಿಂದಾಗಿ ಬ್ರಾಹ್ಮಣೇತರರು ಪ್ರಜ್ಞಾವಂತರಾಗಿ ಸಾಂಘಿಕ ಹೋರಾಟಕ್ಕೆ ಪ್ರೇರಕವಾಯಿತು. (ಚಿನ್ನಸ್ವಾಮಿ ಸೋಸಲೆ 7)
ಮದ್ರಾಸಿನ ಜಸ್ಟೀಸ್ ಪಾರ್ಟಿ, ಬ್ರಾಹ್ಮಣ ಶಾಹಿತ್ವದ ಊಳಿಗಮಾನ್ಯ ವ್ಯವಸ್ಥೆಯು, ಇಂದಿನ ಹಿಂದುಳಿದ ವರ್ಗಗಳ ಸಂಕಷ್ಟಕ್ಕೆ ಕಾರಣ ಕರ್ತರಾದವರ ವಿರುದ್ದ ಸಂಘಟಿತರಾಗಿ ಅವರುಗಳಿಂದ ಬಂದಮುಕ್ತರಾಗಲು ಚಿಂತಿಸಿದರು.10
ಮೈಸೂರು ಸಂಸ್ಥಾನದ ದಿವಾನರಾದ ಸಿ.ರಂಗಾಚಾರ್ಲುರವರು ಕೇಂದ್ರದಲ್ಲಿದ್ದಂತ ಸಾಮಾಜಿಕ ಸುಧಾರಣ ಶಾಸನಗಳನ್ನ ಜಾರಿಗೆ ತಂದರು. 1881 ರಲ್ಲಿ ಪ್ರಜಾ ಪ್ರತಿನಿಧಿ ಸಭೆ ಸ್ಥಾಪಿಸಿ ಜಾತ್ಯಾತೀತವಾಗಿ ಜಮಿನ್ದಾರರು, ವ್ಯಾಪಾರಸ್ಥರು, ತೋಚಿಗರಿಗೆ ಅವಕಾಶ ಕಲ್ಪಿಸಿದ್ದರಿಂದ ಸರಕಾರದ ಶಾಸನ ಸಭೆಗಳಲ್ಲಿ ಬಾಲ್ಯ ವಿವಾಹ ಆಚರಣೆ ವಿರುದ್ಧ, ಹೆಣ್ಣು ಶಿಶು ಹತ್ಯೆ, ಸ್ತ್ರೀಯರ ಶೋಷಣೆ ವಿರುದ್ದವಾದ ಮಂಡಿಸಿ ಸರಕಾರದ ಗಮನ ಸೆಳೆದರು. ಪರಿಣಾಮವಾಗಿ 1896 ರಲ್ಲಿ ಕಾಯ್ದೆ ಜಾರಿಗೆ ಬಂದಿತು. ಪ್ರಜಾ ಪ್ರತಿನಿಧಿ ಸಭೆಯಲ್ಲಿ ಸ್ಥಾನ ಪಡೆದ ಬ್ರಾಹ್ಮಣೇತರರು ತಮ್ಮ ಸಮುದಾಯದವರ ಸ್ಥಿತಿಗತಿಯನ್ನ ಸಭೆಯಲ್ಲಿ ಮಂಡಿಸಿ ಸೌಲಭ್ಯಗಳನ್ನ ಪಡೆಯಲು ನಿರ್ದಿಷ್ಠ ಸಂಘ ಅಥವಾ ವೇದಿಕೆ ಕಟ್ಟಿಕೊಳ್ಳಲು ನಡೆಸಿದ ಪ್ರಯತ್ನಗಳು ಜಾತಿ ಸಂಘಗಳು ಸ್ಥಾಪನೆಗೆ ಕಾರಣವಾಯಿತು.
1881-1918 ರವರೆಗಿನ ಮೈಸೂರು – ಮದ್ರಾಸ್ ಬ್ರಾಹ್ಮಣರ ನಡುವಿನ ಪೈಪೋಟಿ ಹಿಂದುಳಿದ ವರ್ಗದರ ಸಾಂಘಿಕ ಹೋರಾಟಕ್ಕೆ ಸ್ಪೂರ್ತಿಯಾಯಿತು. ಹಿಂದುಳಿದ ವರ್ಗದವರ ಅರಿವಿಗೆ ಭಾರದಂತೆ ಜಾಗೃತಿಗೊಳಿಸಿತು. ಮೈಸೂರು ಸಂಸ್ಥಾನದ ಉನ್ನತ ದಿವಾನ್ ಹುದ್ದೆಯಿಂದ ಪ್ರೌಡಶಾಲಾ ಹುದ್ದೆಯವೆರೆಗೆ ಮದ್ರಾಸಿ ಬ್ರಾಹ್ಮಣರು ಪಾಶ್ಚಿಮಾತ್ಯ ತತ್ವಗಳಿಗೆ ಮೊದಲು ಪ್ರಭಾವಿತರಾಗಿದ್ದರು. ಸಂಖ್ಯೆಯಲ್ಲಿ ಕಡಿಮೆ ಇದ್ದರು ಹೆಚ್ಚಿನ ಅಧಿಕಾರ ಸ್ಥಾನಮಾನ ಹೊಂದಿದ್ದರು ಬೌದ್ಧಿಕ ಉತ್ಪಾಧನಾಂಗಗಳನ್ನು ನಿಯಂತ್ರಿಸುತ್ತಿದ್ದರು. ಮದ್ರಾಸಿನ ಅಯ್ಯಾರ್ ಆಂದ್ರದ ಸ್ಮಾರ್ಥರು ಸ್ಥಳೀಯ ಬ್ರಾಹ್ಮಣರಿಗಿಂತ ಪಾಶ್ಚಿಮಾತ್ಯ ಆಂಗ್ಲ ಶಿಕ್ಷಣ ಕಲಿತು ಮದ್ರಾಸಿ ಪ್ರೆಸಿಡೆನ್ಸಿಯಲ್ಲಿ ಗೌರ್ನರ್‍ಗಳಾಗಿ ಸರಕಾರದ ವಿವಧ ಆಡಳಿತ ವಲಯಗಳಲ್ಲಿ ಸೇವೆ ಸಲ್ಲಿಸಿ ಬ್ರಿಟೀಷರಿಗೆ (ಕಂಪನಿಗೆ) ಹೆಚ್ಚಿನ ಆದಾಯ ತಂದುಕೊಡುವ ವರ್ಗವಾಗಿದ್ದರಿಂದ ಬ್ರಿಟೀಷರು ಮದ್ರಾಸಿ ಬ್ರಾಹ್ಮಣರನ್ನ ದಿವಾನರನ್ನಾಗಿ ನೇಮಿಸಿದರು.11 ಮೈಸೂರು ಸಂಸ್ಥಾನದ ಬ್ರಾಹ್ಮಣರು ನಂತರದ ದಿನಗಳಲ್ಲಿ ಪಾಶ್ಚಿಮಾತ್ಯ ಆಂಗ್ಲ ಭಾಷಾ ಶಿಕ್ಷಣ ಕಲಿತರು. ಮೈಸೂರು ಸಂಸ್ಥಾನದ ಬ್ರಾಹ್ಮಣರು ಎಂಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ವಿವರವನ್ನು ಕೆಳಕಂಡ ಕೋಷ್ಠಕದಲ್ಲಿ ಕಂಡುಕೊಳ್ಳಬಹುದು.12
ಸಂಸ್ಥಾನಗಳು |
1892 |
1894 |
1897 |
1901 |
1906 |
1907 |
1908 |
1909 |
ಮೈಸೂರು |
0 |
2 |
30 |
31 |
11 |
5 |
10 |
10 |
ಮದ್ರಾಸ್ |
25 |
17 |
8 |
9 |
12 |
6 |
15 |
4 |
ಅಲಹಾಬಾದ್ |
1 |
1 |
0 |
0 |
0 |
0 |
0 |
0 |
ಬಾಂಬೆ |
1 |
0 |
1 |
0 |
1 |
0 |
0 |
0 |
ನಾಗಪುರ |
0 |
1 |
0 |
0 |
0 |
0 |
0 |
0 |
ಬನಾರಸ್ |
0 |
2 |
0 |
0 |
0 |
0 |
0 |
0 |
ಹೈದ್ರಾಬದ್ |
0 |
0 |
1 |
0 |
0 |
0 |
0 |
0 |
ತಿರುವನಂತಪುರ |
0 |
0 |
1 |
0 |
0 |
0 |
0 |
0 |
ಕೊಡಗು |
0 |
0 |
0 |
1 |
0 |
0 |
0 |
0 |
ಪೂನ |
0 |
0 |
0 |
1 |
0 |
0 |
0 |
0 |
ಮೈಸೂರು ನಾಗರಿಕಾ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮದ್ರಾಸ್ ಬ್ರಾಹ್ಮಣರಂತೆ ಪ್ರಜ್ಞಾಸಂತರಾಗಿ ಅರ್ಹತೆ ಪಡೆದ ಮೈಸೂರು ಬ್ರಾಹ್ಮಣರು ಹೆಚ್ಚಿನ ಸೇವಾ ಅವಕಾಶಗಳಗಾಗಿ ವೆಂಕಟ ಕೃಷ್ಣಯ್ಯನವರ ಮುಖಂಡತ್ವದಲ್ಲಿ ಶೇಷಾದ್ರಿ ಐಯ್ಯಾರ್ ವಿರುದ್ದ ಮೈಸೂರು-ಮೈಸೂರಿನವರಿಗಾಗಿ ಎಂಬ ಘೋಷಣೆಯೊಂದಿಗೆ ಹೋರಾಟಕ್ಕಿಳಿದರು.13 ಮದ್ರಾಸಿ ಬ್ರಾಹ್ಮಣರು ಮೈಸೂರು ಭಾರತೀಯರಿಗಾಗಿ ಎಂದು ಪ್ರತಿ ದಾಳಿ ಆರಂಬಿಸಿದರು. ಮೈಸೂರಿನ ದಿವಾನರಾಗಿ ಅಧಿಕಾರಕ್ಕೆ ಬಂದರು. ಬ್ರಾಹ್ಮಣ ಉಪ-ಪಂಗಡಗಳ ವಿವಾದ ಸಂಸ್ಥಾನದಾದ್ಯಂತ ಹಿಂದುಳಿದವರ ಜಾಗೃತಿಗೆ ನಾಂದಿಹಾಡಿತು.
ಮೈಸೂರು ಬ್ರಾಹ್ಮಣರ ಪರ ಹಿಂದುಳಿದ ವರ್ಗದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಾಹ್ಮಣೇತರ ಸಮುದಾಯದ ಪ್ರಜ್ಞಾವಂತರು ಮೈಸೂರು ಬ್ರಾಹ್ಮಣರ ಮಾದರಿಯಲ್ಲಿಯೇ ಹೋರಾಟ ಮಾಡಿ ಹೆಚ್ಚಿನ ಸ್ಥಾನಮಾನಗಳನ್ನು ಪಡೆಯಲು ಸಾಂಘಿಕ ಪ್ರಯತ್ನದತ್ತ ಮುನ್ನೆಡೆದರು. ಬ್ರಾಹ್ಮಣೇತರ ವರ್ಗಗಳಲ್ಲಿ ಮೂಡಿದ ಜಾಗೃತಿಯು ಜಾತಿ ಸಂಘಗಳ ಸ್ಥಾಪನೆಗೆ ಕಾರಣವಾಯಿತು.14
15 ನೇ ಶತಮಾನದಿಂದ ಮೈಸೂರು ಸಂಸ್ಥಾನದಲ್ಲಿ ಜಾತಿಯಾಧಾರಿತ ಸಂಘಟನೆಗಳ ಉಗಮ ಮೂರು ತಲೆಮಾರಿನ ಹಿನ್ನಲೆಯಿತ್ತು. ಬೆಳವಣಿಗೆ ಹೊಂದುತ್ತಾ 1870-1900 ರ ಅವಧಿಯಲ್ಲಾದ ವಿದ್ಯಮಾನಗಳಿಂದ ಬ್ರಾಹ್ಮಣೇತರರಲ್ಲಿ ಮಾಧ್ಯಮ ಮತ್ತು ಮೇಲಿನ ಗುಂಪುಗಳು ಜಾಗೃತರಾಗಿ ಸಂಘಟಿತ ಪ್ರಯತ್ನ ನಡೆಸಿದವು. ಬ್ರಿಟೀಷರ್ ಆಡಳಿತಾವದಿಯಲ್ಲಿ ಜಾತಿಯ ಸಾಂಪ್ರದಾಯಿಕ ಆಚರಣೆಯಲ್ಲಿ ಸುಧಾರನೆಯಾಗ ತೊಡಗಿದರೂ ಅವರ ಸಂಕುಚಿತ ಶಕ್ತಿ ಹೆಚ್ಚ ತೊಡಗಿತು. ಒಂದು ಕಡೆ ಹಿಂದಿನ ಕಟ್ಟು ಪಾಡುಗಳು ಮತ್ತು ನಿರ್ಬಂಧಗಳು ಶಿಥಿಲವಾಗುತ್ತಿದ್ದರೆ ಮತ್ತೊಂದು ಕಡೆ ಜಾತೀಯತೆಯ ಭಾವನೆ ನಿಷ್ಠೆ, ಜಾತಿಯ ಏಕತೆ, ಜಾತಿ ಪ್ರೇಮ, ಜಾತಿ ಜನಾಂಗದ ಬಗ್ಗೆ ಭಕ್ತಿ ಅಭಿಮಾನ ಪ್ರಬಲವಾಗ ತೊಡಗಿದವು. ಈ ಪ್ರಯತ್ನಗಳು ಜಾತಿ ಸಂಘಟನೆಗಳ ಉದಯಕ್ಕೆ ನಾಂದಿಯಾಯಿತು.15
ಈ ಮೇಲೀನ ಸೂಚಿತ ಪ್ರೇರಕಾಂಶಗಳಿಂದ ಪ್ರಜ್ಞಾವಂತರಾದ ಹಿಂದುಳಿದ ವರ್ಗಗಳ ನಾಯಕರುಗಳು ಸಾಂಘಿಕ ಹೋರಾಟಕ್ಕಾಗಿ ನಿದಿಷ್ಠ ವೇದಿಕೆ ಸಿದ್ದಪಡಿಸಿಕೊಂಡರು. ಮೈಸೂರು ಸಂಸ್ಥಾನ ಜಾರಿಗೆ ತಂದ ಸಹಕಾರಿ ಸಂಘದ ನೊಂದಣಿ ನಿಯಮ 1904 ರ 3 ನೇ ರೆಗ್ಯುಲೇಷನ್ ಪ್ರಕಾರ ಸಂಘಗಳನ್ನ ಸ್ಥಾಪಿಸಿ ಸಹಕಾರಿ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡರು.16
3.3ಪ್ರಮುಖ ಜಾತಿ ಸಂಘಗಳು:-
ವೀರಶೈವ ಮಹಾಸಭಾ – 1904
ವೀರಶೈವ ಮತ ಸಂವರ್ದಿನಿ- ಸಭಾ- 1904- ಮುಡುಕು ತರಾರೆ
ಮೈಸೂರು ಲಿಂಗಾಯತ ವಿದ್ಯಾನಿಧಿ ಸಂಘ-1905
ಒಕ್ಕಲಿಗರ ಸಂಘ-1906
ಆದಿ ದ್ರಾವಿಡ ಅಭಿನವ ಸಂಘ-1906
ಬಂಟರ ಸಂಘ-1908
ಸೆಂಟ್ರಲ್ ಮಹಮ್ಮದನ್ ಅಸೋಸಿಯೇಷನ್ – 1909
ಮೋಗವೀರ ಸಂಘ-1910
ಹಿಂದೂ ದಲಿತ ಮಿಷನ್-1913
ಆರ್ಯ ವೈಶ್ಯ ಮಹಾಸಭಾ- 1915
ರೆಡ್ಡಿ ಶಿಕ್ಷಣ, ಸಾಮಾಜಿಕ ಒಕ್ಕೂಟ ಮತ್ತು ರೆಡ್ಡಿ ಜನ ಸಂಘ – 1916
ಆದಿ ಜಾಂಬವ ಸಂಘ – 1920
ಬಲಿಜ ಸಂಘ – 1920
ಅಂಜುಮಾನ್ ಇಸ್ಲಾಮಿಕ್ ಸಂಘ – 1922
ಕುರುಬರ ಸಂಘ – 1923
ದೇವಾಂಗ ಸಂಘ – 1924
ತಿಗಳರ ಸಂಘ – 1924
ಮರಾಠ ಮಂಡಲ ಸಂಘ – 1924
ಮೈಸೂರು ಸಂಸ್ಥಾನದ ಕ್ರೈಡ ಸಮಘ – 1924
ಬೆಸ್ತರ ಸಂಘ – 1926
ಕಣಿಯರ ಸಂಘ – 1926
ಗಾಣಿಗರ ಸಂಘ – 1926
ಮೈಸೂರು ಸೀಮೆಯ ಲಂಬಾಣಿಗರ ಸಂಘ – 1927
ಜ್ಯೋತಿ ನಗರ ವೈಶ್ಯ ಮಹಾಜನ ಸಂಘ – 1927
ಈಡಿಗರ ಸಂಘ – 1927
ಜೈನರ ಸಂಘ – 1927
ದೀನ ಸೇವಾ ಸಂಘ – 1930
ಕುಂಬಾರ ಸಂಘ – 1931
ಕುಂಚಟಿಗರ ಸಂಘ – 1928
ದೊಂಬರ ಸಂಘ
ಸಾದು ಸಮಾಜ ಸಂಘ
ಬೌದ್ದ ಧರ್ಮ ಸಂಘ
ವಹ್ನಿ ಕುಲ ಕ್ಷತ್ರಿಯರ ಸಂಘ
ಯಾದವರ ಸಂಘ
ಕುರುಹಿನ ಶೆಟ್ಟಿ ಸಂಘ
ಆದಿ ಜಾಂಬವ ಸಂಘ ಮುಂತಾದವು
1925 ರ ವೇಳೆಗೆ 18 ಜಾತಿ ಸಂಘಟನೆಗಳು ಸರಕಾರದಿಂ ಸೋಸೈಟಿ ನೊಂದಾಣಿ ಕಾಯಿದೆ ಪ್ರಕಾರ ನೊಂದಣಿ ಮಾಡಿಕೊಂಡಿದ್ದವು. ಲೀಲಾ ದಸ್ಕಿನ್ 1947 ರ ಅವಧಿಗೆ ಸುಮಾರು 149 ಜಾತಿ ಸಂಘಗಳು, ಸಮುದಾಯದ ಹಿನ್ನಲೆಯಲ್ಲಿ ಅಸ್ಥಿತ್ವ ಪಡೆದು ಕೊಂಡವು. ಕುಲ್ಕೆರವರ ಪ್ರಕಾರ ಆರಂಭದಲ್ಲಿ ಕೆಲವೆ ಜಾತಿ ವರ್ಗಗಳು ಪ್ರತ್ಯೇಕವಾಗಿ ಸಮಾಜ ರಚನೆಯ ಮೇಲಂತಸ್ಥಿನಲ್ಲಿದ್ದ ಗುಂಪುಗಳು ಮಾತ್ರ ಪ್ರಭಾವಿತವಾಗಿದ್ದವು. 1900 ನಂತರದಲ್ಲಿ ಹಿಂದುಳಿದ ಸಂಘಗಳು ಕ್ರಮಬದ್ದವಾಗಿ ಕಾನೂನಿನ ಚೌಕಟ್ಟಿನಡಿ ಸಂಘಟನಾತ್ಮಕ ಹೋರಾಟವನ್ನಾರಂಬಿಸಿದರು.17
ಈ ಮೇಲೆ ಸೂಚಿತ ಸಂಘಗಳು ತಮ್ಮ ಸಮುದಾಯಗಳ ಶ್ರೇಯೋಭಿವೃದ್ದಿಗಾಗಿ ರಾಜ್ಯ ವ್ಯಾಪ್ತಿ ಸಂಘಟನಾಕಾರ್ಯವನ್ನು ಹಮ್ಮಿಕೊಂಡವು. ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ, ಶೈಕ್ಷಣಿಕ ಪ್ರಗತಿ, ಸರಕಾರದಲ್ಲಿ ಉತ್ತಮ ಸೇವಾ ಅವಕಾಶ, ಪ್ರಚಲಿತ ವಿದ್ಯ ಮಾನಗಳ ಬಗ್ಗೆ ಜಾಗೃತಿ, ಬ್ರಾಹ್ಮಣರಿಂದ ವಿಮುಕ್ತರಾಗಿಸಲು ಸಾಂಘಿಕವಾಗಿ ಚಳುವಳಿಯಲ್ಲಿ ಪಾಲ್ಗೋಂಡರು, ಸರಕಾರದ ಶಾಸನ ಸಭೆಗಳಲ್ಲಿ ಸರಕಾರಿ ನಿಗಮ, ಮಂಡಲಿ, ವಿವಾದ ಇಲಾಖೆಗಳಲ್ಲಿ ಜಾತಿವಾರು ಸೌಲಭ್ಯ ಪಡೆಯಲು ಹಾಗೂ ಶಿಕ್ಷಣದ ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಶೈಕ್ಷಣಿಕ ಅವಕಾಶಕ್ಕಾಗಿ ಸಾಂಘಿಕವಾಗಿ ಹೋರಾಟವನ್ನಾರಂಬಿಸಿದರು. 19 ನೇ ಶತಮಾನದಲ್ಲಿ ನಡೆದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ವಿದ್ಯಮಾನಗಳಿಂದ ಪ್ರಜ್ಞಾವಂತರಾದ ಹಿಂದುಳಿದ ವರ್ಗದ ಮುಖಂಡರು 1900 ನಂತರ ಸಂಘಟಿತರಾದರು. 1870 ರಿಂದ ಉದಯಿಸಿದ ಸಂಘಗಳು 1904 ನೇ ಇಸವಿಯ 3 ನೇ ನಂಬರಿನ ಮೈಸೂರು ಸಂಘಗಳ ರಿಜಿಸ್ಟ್ರೇಷನ್ ಕಾಯಿದೆ ಅನ್ವಯ ಕಾನೂನಿನ ಚೌಕಟ್ಟಿನಲ್ಲಿ ಆಯಾ ಕ್ಷೇತ್ರದ ಜಾತಿಯ ಅನಧಿಕೃತ ಸರಕಾರ ಎಂಬಂತೆ ಕಾರ್ಯ ನಿರ್ವಹಿಸಲು ಪ್ರಾರಂಬಿಸದವು. ಬಹಳಷ್ಠು ಜಾತಿ ಸಂಘಗಳು ಮತ್ತಷ್ಠು ಸಧೃಡ ಸಂಸ್ಥೆಗಳಾಗಿ ಬೆಳೆದು ಇಂದಿನ ಸಮಾಜ ಬಾಂಧವರ ಪುರೋಭಿವೃದ್ದಿಗೆ ಸಮರ್ಪಣಾ ಭಾವದಿಂದ ಸೇವೆಸಲ್ಲಿಸುತ್ತಿರುವುದು. ಶ್ಲಾಘನೀಯ ವಿಷಯವಾಗಿದೆ. ಮೈಸೂರು ಸಂಸ್ಥಾನದಲ್ಲಿ ಪ್ರಚಲಿತದಲ್ಲಿದ್ದ ಸಂಘಗಳು ಆಯಾ ಕ್ಷೇತ್ರ, ಜಾತಿ, ಸಮುದಾಯಗಳ ಪರ ಅನಧಿಕೃತ ಸರಕಾರದ ಮಾದರಿಯಲ್ಲಿ ಕಾರ್ಯೋನ್ಮುಖರಾದವು.
ಮೈಸೂರು ಲಿಂಗಾಯಿತ ವಿದ್ಯಾನಿಧ ಸಂಘ 1905:
ಈ ಸಂಘ ಸಮುದಾಯದ ಸಮಾನ ಮನಸ್ಕರ ಪ್ರಾತಿನಿಧಿಕ ಅಂಗವಾಗಿ ಅಸ್ತಿತ್ವಕ್ಕೆ ಬಂದಿದೆ. ತಮ್ಮದೇ ಗುರಿಯನ್ನೂ ಕೂಡ ಹೊಂದಿದೆ. ಇದು ಗುರುತಿಸಿಕೊಳ್ಳುವ ಪ್ರಯತ್ನವಾದರೂ ಸ್ವಾರ್ಥ ಲಾಭಕ್ಕಾಗಿ ಜನ್ಮ ತಳದಿಲ್ಲ. ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮ ಜನರ ಏಳಿಗೆಗಾಗಿ ಧನಾತ್ಮಕವಾಗಿ ಅವರ ಕೀರ್ತಿಲಾಭ, ಸಂತೋಷ, ಸದ್ಭಾಳ್ವೆ, ಸಾಂಸ್ಕøತಿಕ ಲಾಭ, ಸಮಾಜದ ಸಕ್ರಿಯ ಶಕ್ತಿಯಾಗಿ ಸಂಘ ಅಸ್ತಿತ್ವಕ್ಕೆ ಬಂದಿದೆ.
ಉತ್ತರ ಕರ್ನಾಟಕದಲ್ಲಿ ವೀರಶೈವ ವಿದ್ಯಾಭಿವೃದ್ಧಿಗಾಗಿ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿರವರು ವಿದ್ಯಾಭ್ಯಾಸದ ಮೂಲಕ ಸಮಾಜದ ಪ್ರಗತಿ ಪಥÀವನ್ನು ಗುರುತಿಸಿದರು. 1902ರಲ್ಲಿ ದಾರವಾಡದ ಲಿಂಗಾಯಿತ ವಿದ್ಯಾಭಿವೃದ್ಧಿ ಸಂಸ್ಥೆ ಅಸ್ಥಿತ್ವಕ್ಕೆ ಬಂದು ಧನ ಸಹಾಯವನ್ನು ವಿದ್ಯಾನಿಧಿಗೆ ಪೂರೈಸಿತು. ಅಖಿಲ ಭಾರತ ವೀರಶೈವ ಸಭಾ 1904ರ ಮೇ ತಿಂಗಳ 13,14,15 ರಂದು ದಾರವಾಡದಲ್ಲಿ ಸಮಾವೇಶ ನಡೆದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದೆ. 2ನೇ ವೀರಶೈವ ಸಭೆ ಶಿರಸಂಗಿ ಲಿಂಗರಾಜ ಜಯಪ್ಪ ದೇಸಾಯಿರವರ ಮಹಾದಾಸೆಯಂತೆ 1905 ಜುಲೈ 13,14,15ರಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆಯಿತು. ಅಧ್ಯಕ್ಷತೆ ವಹಿಸಿದ ಶಿರಸಂಗಿ ಲಿಂಗರಾಜು ಜಯಪ್ಪ ದೇಸಾಯಿರವರು ತಮ್ಮ ಸರ್ವಸ್ವವನ್ನು ವೀರಶೈವ ವಿದ್ಯಾಭಿವೃದ್ಧಿಗೆ ಅರ್ಪಿಸಿದರು. ಮೈಸೂರು ಸಂಸ್ಥಾನದ ರೆಸಿಡೆಂಟ್‍ರು, ದಿವಾನ್ ಬಹದ್ದೂರ್ ಪಿ.ಎನ್. ಕೃಷ್ಣಮೂರ್ತಿರವರು ಸಭೆಗೆ ಹಾಜರಾದರು. ವೀರಶೈವ ನಾಯಕರೊಡನೆ ಚರ್ಚಿಸಿದರು. ಧಾರ್ಮಿಕ, ಸಾಮಾಜಿಕ, ಆರ್ಥಿಕ, ನೈತಿಕ, ಕಲಾ ಕೌಶಲ್ಯಗಳ ಅಭಿವೃದ್ಧಗಿಳ ಬಗ್ಗೆ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ 14-07-1905ರಂದು ಬೆಂಗಳೂರಿನಲ್ಲಿ ಮೈಸೂರು ಲಿಂಗಾಯಿತ ವಿದ್ಯಾಭಿವೃದ್ಧಿ ನಿಧಿ ಸಂಘ ಎಂಬ ಹೆಸರಿನಲ್ಲಿ ಸಂಘ ಸ್ಥಾಪನೆಯಾಯಿತು. ಈ ಸಂಸ್ಥೆಯ ದ್ಯೇಯೋದ್ದೇಶಗಳು, ಗೌರವ ಪ್ರಾತಿನಿಧಿಕ ಅಂಶಗಳನ್ನು ಗಮನಿಸಿದ ಸರ್ಕಾರ 1909ರಲ್ಲಿ ಸಂಗ್ರಹಿಸಿದ ನಿಧಿಯನ್ನು ಸರ್ಕಾರಿ ಖಜಾನೆಯಲ್ಲಿ ಠೇವಣಿಯಿಡಲು ಅನುಮತಿ ನೀಡಿತು. 1909 ಜೂನ್-30ರಲ್ಲಿ ಕ್ರಮಸಂಖ್ಯೆ: 11:1909ರಲ್ಲಿ, (1904ರ 3ನೇ ರೆಗ್ಯುಲೇಷನ್ ಪ್ರಕಾರ ಮೈಸೂರು ಲಿಂಗಾಯತ ವಿದ್ಯಾನಿಧಿ ಸಂಘವೆಂದು ನೋಂದಣಿಯಾಗಿತು. 1905ರಿಂದ ಅಂಗ ರಚನೆ, ಸಂಘದ ಆಸ್ತಿ, ಆಯವ್ಯಯ ಮುಂತಾದ ಕಾರ್ಯ ಚಟುವಟಿಕೆಗಳು ಆರಂಭವಾದವು. 1912ರಲ್ಲಿ ವೀರಶೈವ ಆಶ್ರಮ ಆರಂಭವಾಯಿತು. 1916ರಲ್ಲಿ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ವೀರಶೈವರಿಗೆ ಪಾಕಶಾಲೆ ಆರಂಭಿಸಿ ಊಟೋಪಚಾರ ನೀಡಿದರು. 1917ರಲ್ಲಿ ಮುರುಘ ಮಠದ ಶ್ರೀಗಳು ಉದಾರವಾಗಿ ದಾನ ನೀಡಿದರು. 1919ರಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನೆಯು ಮುರುಘ ಶರಣರ ಅಧ್ಯಕ್ಷತೆಯಲ್ಲಿ ಶ್ರೀಮದ್ ಯುವರಾಜ ಕಂಠೀರವ ನರಸÀರಾಜ ಒಡೆಯರ್ ನೆರವೇರಿಸಿದರು. 1920ರಲ್ಲಿ ಮೈಸೂರು ಸರ್ಕಾರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ 20 ಸಾವಿರ ಧನ ಸಹಾಯ ನೀಡಿತು. 1922ರಲ್ಲಿ ಮೈಸೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಗುಂಡ್ಲುಪೇಟೆ ತಾಲ್ಲೂಕಿನ ಚನ್ನಬಸವಪ್ಪನವರು ಸಂಘಕ್ಕೆ ನೆರವಾದರು. ಸಂಸ್ಕøತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಯಿತು. ಸಿದ್ದಗಂಗೆ, ತಿಪಟೂರು, ಮೈಸೂರು, ಬೆಂಗಳೂರುಗಳಲ್ಲಿ ವೀರಶೈವ ಆಶ್ರಮ ಮತ್ತು ಸಂಸ್ಕøತ ಪಾಠಶಾಲೆ ಪ್ರಾರಂಭಿಸಲಾಯಿತು. 1925ರಲ್ಲಿ ಅನಾಥಾಶ್ರಮ ಪ್ರಾರಂಬಿಸಿದರು. ಮೈಸೂರು ಸ್ಟಾರ್ ಪತ್ರಿಕೆ ಸಂಪಾದಕ ವೈ. ವಿರುಪಾಕ್ಷಪ್ಪನವರು ಮತ್ತು ಆರ. ಕರಿಬಸಪ್ಪ ಶಾಸ್ತ್ರಿಗಳು ಲೇಖನಗಳ ಮುಖಾಂತರ ಸಮುದಾಯದವರಲ್ಲಿ ಜಾಗೃತಿ ಮೂಡಿಸಿದರು. ಸಮುದಾಯದ ವಿವಿಧ ಧಾನಿಗಳಿಂದ ಅಪಾರ ಮೊತ್ತದ ನಿಧಿ ಕಲೆ ಹಾಕಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ ವೇತನ, ಉಚಿತ ಪಠ್ಯ ಪುಸ್ತಕ, ವಿದೇಶಿ ವಿದ್ಯಾಭ್ಯಾಸಕ್ಕೆ ನೆರವು ಯೋಜನೆ ಮುಂತಾದ ಸೇವೆಗಳ ಮುಖಾಂತರ ಅಂದಿನಿಂದ ಇಂದಿನವರೆಗೂ ಕಾರ್ಯೋನ್ಮುಖವಾಗಿದೆ.
ಒಕ್ಕಲಿಗರ ಸಂಘ (1906):- ಒಕ್ಕಲಿಗರ ಮೂಲತಃ ರೈತಾಪಿ ವರ್ಗ. ಸಂಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಶೇಕಾಡ 20% ಜನರಿದ್ದರು. ಸಹಶಿಕ್ಷಣ, ರಾಜಕೀಯ ಸ್ಥಾನಮಾನ ಸೌಲಭ್ಯಗಳಿಂದ ವಂಚಿತರಾಗಿದ್ದರು. 1906ರಲ್ಲಿ ಅಲಸೂರಿನ ಮಾರಪ್ಪ ಮತ್ತು ಮುನಿಶಾಮಪ್ಪರವರು 50,000/- ರೂಗಳನ್ನು ಸಮಾಜದ ಹಿತಕ್ಕಾಗಿ ಧಾನ ಮಾಡಿ ವಿ.ವಿ. ಪುರಂನಲ್ಲಿ ಸಂಘ ಸ್ಥಾಪಿಸಿದರು. 1906 ಅಕ್ಟೋಬರ್ 7ರಂದು ಮೈಸೂರು ದಿವಾನರಾದ ವಿ.ಪಿ. ಮಾದವರಾವ್‍ರವರ ಸಂಘದ ಮೊದಲ ಸಭೆಗೆ ಆಗಮಿಸಿ ಸಂಘದ ದಾಖಲಾತಿಗೆ ಸಮ್ಮತಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಬ್ರಿಟೀಷ್ ಅಧಿಕಾರಿಗಳ ಒಪ್ಪಿಗೆ ಪಡೆದು 1904ರ 3ನೇ ರೆಗ್ಯುಲೇಶನ್ ಪ್ರಕಾರ ಒಕ್ಕಲಿಗರ ಸಂಘ ನೋಂದಣಿಯಾಯಿತು. ದಿವಾನ್ ವಿ.ಪಿ. ಮಾದವರಾವ್ ವಿ.ವಿ.ಪುರಂಲ್ಲಿ 12 ಎಕರೆ 13 ಗುಂಟೆ ಭೂಮಿಯನ್ನು ಮಂಜೂರು ಮಾಡಿದರು. ಹೀಗೆ ಅಸ್ತಿತ್ವಕ್ಕೆ ಬಂದ ಒಕ್ಕಲಿಗರ ಸಂಘ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಸೆಂಟ್ರಲ್ ಮಹಾಮಡನ್ ಅಸೋಶಿಯೇಷನ್ (1909):- ಬ್ರಾಹ್ಮಣ ಸಭಾ, ವೀರಶೈವ ಮಹಾಸಭಾ, ಒಕ್ಕಲಿಗರ ಸಂಘ ಮಾದರಿಯಲ್ಲಿಯೇ ಸೆಂಟ್ರಲ ಮಹಾಮಡನ್ ಅಸೋಶಿಯೇಷನ್ 1907ರಲ್ಲಿ ಸ್ಥಾಪನೆಯಾಯಿತು. ಮುಳಬಾಗಿಲಿನ ವರ್ತಕ ಅಬ್ಬಾಸ್‍ಖಾನ್ ಸಮುದಾಯದ ಬಲ್ಲವರಿಂದ ಧನ ಸಹಾಯ ಪಡೆದು ಬಡವರು, ನಿರ್ಗತಿಕರು, ಮೂಲಭೂತ ಸೌಕರ್ಯಗಳಿಂದ ವಂಚಿತರಾದ ತಮ್ಮ ಕೋಮಿನ ಜನರ ಶ್ರೇಯಸ್ಸನ್ನು ಬಯಸಿ ಸಾಂಘಿಕ ರಚನೆಗೆ ಪ್ರಯತ್ನಿಸಿದರು. ಬೆಂಗಳೂರಿನ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿ ಸಂಘದ ಕಛೇರಿಯನ್ನು ಆರಂಬಿಸಿದರು. ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗ ಮೀಸಲಾತಿ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮಹಿಳಾ ಶಿಕ್ಷಣ, ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ಮತ್ತು ಸರ್ಕಾರದ ಸ್ಥಾನಮಾನಗಳಿಗಾಗಿ ಹೋರಾಟ ಆರಂಭಿಸಿದರು. ಅಬ್ಬಾಸ್ ಖಾನ್, ಮೊಹಮದ್ ಖಲಾಮಿ, ಮಿರ್ಜಾ ಇಸ್ಮಾಯಿಲ್, ಹಾಗೂ ಇತರರ ಪ್ರೋತ್ಸಾಹದಿಂದ ಕೋಮಿನ ಬಡವರಿಗೆ ನೆರವು ನೀಡುವ ಸೂಕ್ತ ವೇದಿಕೆಯಾಯಿತು.
ಈ ಮೂಲಕ ಸೂಚಿಸಿರುವ ಸಂಘಗಳು ಮಾತ್ರವಲ್ಲದೆ 140 ಸಂಘಗಳು ಸಹ ತಮ್ಮ ತಮ್ಮಜಾತಿಗಳ ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸತೊಡಗಿದರು. ಅಂದರೆ ರಾಜಕೀಯ ಸ್ಥಾನಮಾನ ಅವಕಾಶ, ಸರ್ಕಾರಿ ಉದ್ಯೋಗ, ಶಿಕ್ಷಣ ಮೀಸಲಾತಿ, ಸಾಮಾಜಿಕ ನ್ಯಾಯ, ನೈತಿಕ ಉನ್ನತಿಗಾಗಿ ಸರ್ಕಾರದ ಶಾಸಕಾಂಗಗಳಲ್ಲಿ ತಮ್ಮದೇ ಬೇಡಿಕೆಗಳನ್ನು ಮುಂದಿಟ್ಟರು. ಮತ್ತು ಸಂಘಗಳನ್ನು ಕಟ್ಟಿಕೊಂಡು ತಮ್ಮ ಹಕ್ಕುಗಳಿಗಾಗಿ ಅಧಿಕಾರ ಶಾಹಿಗಳ ವಿರುದ್ಧ ಹೋರಾಟಕ್ಕಿಳಿದರು.
ಮೇಲೀನ ಸೂಚಿತ ಸಂಘಗಳು ಮಾತ್ರವಲ್ಲದೆ 265 ಕ್ಕೂ ಹೆಚ್ಚು ಜಾತಿ ಸಂಘಗಳು ತಮ್ಮ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಕಾರ್ಯತತ್ಪರವಾಗಿವೆ. ಅಂದರೆ ಸರಕಾರದ ಪ್ರಾತಿನಿದಿಕ ಸಂಸ್ಥೆಗಳಾದ ಪ್ರಜಾಪ್ರತಿನಿಧಿ ಸಭೆ-1881, ನ್ಯಾಯ ವಿಧಾಯಕ ಸಭೆ-1907, ರಾಜಕೀಯ ಹಕ್ಕು ಬಾಧ್ಯತೆಗಳಿಗಾಗಿ ಸರ್ಕಾರಿ ನಿಗಮ, ಮಂಡಲಿ, ಇತರೆ ಇಲಾಖೆಗಳಲ್ಲಿ ಜಾತಿವಾರು ಮೀಸಲಾತಿಗಾಗಿ ಸರ್ಕಾರಿ ಉದ್ಯೋಗವಕಾಶಗಳಿಗಾಗಿ; ಶೈಕ್ಷಣಿಕ ಅವಕಾಶಗಳಿಗಾಗಿ; ಸಾಮಾಜಿಕ ನ್ಯಾಯ ಮತ್ತು ಸಮಾನ ಸ್ಥಾನಮಾನಗಳಿಗಾಗಿ; ನೈತಿಕ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಸಂಘಗಳು ಅಧಿಕಾರಶಾಹಿಗಳ ವಿರುದ್ಧ ಹೋರಾಟವನ್ನು ಆರಂಭಿಸಿದವು.
ಪ್ರಜಾಪ್ರತಿನಿಧಿ ಸಭೆ-1881, ರಂಗಾಚಾರ್ಲು ರವರಿಂದ ಸ್ಥಾಪಿತವಾಯಿತು. ಈ ಸಭೆಗೆ ಜಮೀನ್ದಾರರು ಪ್ರತಿ ತಾಲ್ಲೂಕಿನಿಂದ ಇಬ್ಬರು; 4 ಮಂದಿ ಗಣ್ಯ ವರ್ತಕರು ಸೇರಿದಂತೆ 144 ಮಂದಿ ಪ್ರತಿನಿಧಿಗಳು ವಿವಿಧ ಜಾತಿ ಪಂಗಡಗಳ ನಾಯಕರು ಕಾಲದಿಂದ ಕಾಲಕ್ಕೆ ನಡೆದ ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಶಿಕ್ಷಣ, ಉದ್ಯೋಗ, ಇತರೆ ಕುಂದು-ಕೊರತೆಗಳನ್ನು ಸರ್ಕಾರದ ಅವಗಾಹನೆಗೆ ತಂದು ಸರಕಾರದಿಂದ ಅನುಕೂಲಗಳನ್ನು ಪಡೆಯುವ ಪ್ರಯತ್ನ ಮಾಡಿದರು. ಎಲ್ಲಾ ಧರ್ಮೀಯರಿಗೂ ವಿದ್ಯಾಭ್ಯಾಸಕ್ಕಾಗಿ ಮಾಸಿಕ ರೂ.30/- ವಿದ್ಯಾರ್ಥಿ ವೇತನ ನೀಡಿದರು. ಆದಿ ದ್ರಾವಿಡ ಅಭಿನವ ಸಂಘದ ಆರ್. ಗೋಪಾಲಸ್ವಾಮಿ ಅಯ್ಯರ್ ರೂ.50,000/- ಅನುದಾನಕ್ಕಾಗಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಒತ್ತಾಯಿಸಿದರು.18
ನ್ಯಾಯವಿಧಾಯ ಸಭೆಯನ್ನು ವಿ.ಪಿ. ಮಾಧವರಾವ್ ದಿವಾನರ ಆಡಳಿತಾವಧಿಯಲ್ಲಿ 1907 ವಿಧಾನ ಪರಿಷತ್ ಪ್ರಾರಂಭಿಸಲಾಯಿತು. ವಿ.ಪಿ. ಮಾಧವರಾಯರು ಬ್ರಾಹ್ಮಣೇತರ ವರ್ಗಗಳನ್ನು ನಿರ್ಲಕ್ಷಿಸಿದ್ದ ದಿವಾನ್ ಕೃಷ್ಣಮೂರ್ತಿರವರ ನೀತಿಯನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾದರು. ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳಲು ಮುಕ್ತ ಅವಕಾಶ ನೀಡಿದರು. ಪರಿಣಾಮವಾಗಿ ಜಾತಿವಾರು ನಾಯಕರುಗಳು ಸಂಘಗಳನ್ನು ಸ್ಥಾಪಿಸಿಕೊಂಡರು. 25 ಮಂದಿ ಸದಸ್ಯರನ್ನು ಹೊಂದಿತ್ತು. ಪ್ರಜ್ಞಾವಂತ ಮುಖಂಡರು ಸಾಂಘಿಕ ಪ್ರಯತ್ನದಿಂದ ಜಾತಿ ಸಂಘಟನೆಗಳ ಕಾರ್ಯಚಟುವಟಿಕೆಗಳ ಪರವಾಗಿ ವಾದ ಮಂಡಿಸಿದರು. ಉದಾಹರಣೆಗೆ ಎಂ.ಬಸವಯ್ಯ, ಹೆಚ್.ಚನ್ನಯ್ಯ, ಎಂ.ವೆಂಕಟಕೃಷ್ಣಯ್ಯ, ಡಿ.ಎಸ್.ಮಲ್ಲಪ್ಪ, ಜಿ.ಪರಮಶಿವಯ್ಯ, ಶ್ರೀನಿವಾಸರಾವ್, ಹೆಚ್.ಕೆ.ವೀರಣ್ಣಗೌಡ, ಕೆ.ಪಿ. ಪುಟ್ಟಣ್ಣಶೆಟ್ಟಿ, ಡಿ.ವೆಂಕಟರಾಮಯ್ಯ, ಬಿ.ಕೆ.ಗರುಡಾಚಾರ್, ಅಬ್ಬಾಸ್‍ಖಾನ್, ಗುಲಾಮ್ ಮಹಮ್ಮದ್ ಕಲಾಮಿ, ಟಿ.ಮರಿಯಪ್ಪ, ಕೆ.ಸಿ. ರಡ್ಡಿ ಮುಂತಾದವರು.
ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗಾವಕಾಶ ಸೇರಿದಂತೆ ಇತರೆ ಉತ್ತಮ ಸೌಲಭ್ಯಗಳಿಗಾಗಿ ಬ್ರಾಹ್ಮಣೇತರರು ಸಂಘಟಿತರಾಗಿ ಅಧಿಕಾರಶಾಹಿಗಳ ವಿರುದ್ಧ ಹೋರಾಟವನ್ನು ಆರಂಭಿಸಿದರು. ಮೇಲ್ಕಂಡ ಸಂಘಗಳಿಗೆ ರಾಜರು, ದಿವಾನರು, ಅರಮನೆಯ ಅಧಿಕಾರಿಗಳು, ಯುವ ರಾಜರು ಸೇರಿದಂತೆ ಕರುಣಾಮಯಿಗಳು ಬೆಂಬಲಿಸಿದರು.19 ಇವರುಗಳ ಬೆಂಬಲದಿಂದ ಬ್ರಾಹ್ಮಣೇತರರು ಹೆಚ್ಚಿನ ಅವಕಾಶಗಳನ್ನು ಗಿಟ್ಟಿಸಿಕೊಂಡು ಪ್ರಗತಿಪತದತ್ತ ಸಾಗಿದರು.
ಜನಸಂಖ್ಯೆ ಆಧಾರದ ಮೇಲೆ ಪ್ರಮುಖ ಜಾತಿಗಳ ಬೆಳವಣಿಗೆಯನ್ನು ಕೆಳಕಂಡ ಕೋಷ್ಠಕಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ20
ಜಾತಿ |
1881 |
1891 |
1901 |
1911 |
1921 |
1931 |
1941 |
ಶೇಕಡಾವಾರು |
ಬ್ರಾಹ್ಮಣ |
182385 |
196200 |
190108 |
195000 |
216210 |
245000 |
252001 |
3.8% |
ಲಿಂಗಾಯಿತ |
469726 |
550997 |
671266 |
730740 |
715706 |
771840 |
781641 |
12.0% |
ಒಕ್ಕಲಿಗ |
1341849 |
1285601 |
1287270 |
1331640 |
1295866 |
1312439 |
1341730 |
20.4% |
ಕುರುಬ |
34768 |
328820 |
378430 |
403540 |
400530 |
431643 |
442341 |
6.7% |
ಮುಸ್ಲಿಂ |
123362 |
144560 |
162710 |
279341 |
291787 |
35489 |
402471 |
5.9% |
ನಿಮ್ನ ವರ್ಗಗಳು |
760468 |
795990 |
879640 |
921940 |
932640 |
1002630 |
1030637 |
15.1% |
ಈ ಮೇಲ್ಕಂಡ ಪಟ್ಟಿಯಿಂದ ತಿಳಿದುಬರುವುದೇನೆಂದರೆ, ಬ್ರಾಹ್ಮಣರು 3.8% ಕಡಿಮೆ ಜನಸಂಖ್ಯೆ ಇದ್ದು, ಒಕ್ಕಲಿಗರ ಪ್ರಮಾಣ 20.4% ಹೊಂದಿದ್ದು, ಮೈಸೂರು ಸಂಸ್ಥಾನದಲ್ಲಿ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಬ್ರಾಹ್ಮಣೇತರರೇ ವಂಚಿತರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬ್ರಾಹ್ಮಣರು ಹೊಂದಿರುವ ಪ್ರಾಬಲ್ಯವನ್ನು ಮುಂದಿನ ಅಂಕಿಅಂಶಗಳಿಂದ ತಿಳಿದುಕೊಳ್ಳಬಹುದು.
ಜನಸಂಖ್ಯೆಯಲ್ಲಿ 100ಕ್ಕೆ 96.2% ಇದ್ದರೂ ಸರ್ಕಾರಿ ಸೇವೆಯಲ್ಲಿ 10% ಅವಕಾಶವಿಲ್ಲದೆ ದೌರ್ಜನ್ಯ ಇಲ್ಲವೆ ಶೋಷಣೆಗೆ ಒಳಗಾಗಿದ್ದರು. ಬ್ರಾಹ್ಮಣೇತರರು ಸರ್ಕಾರದ ಮೇಲೆ ಸಾಂಘಿಕವಾಗಿ ಹೋರಾಡಲು ಪ್ರಜಾಮಿತ್ರ ಮಂಡಳಿ ಪಕ್ಷ ಸ್ಥಾಪಿಸಿಕೊಂಡರು. ಮದ್ರಾಸ್ ಜಸ್ಟೀಸ್ ಪಾರ್ಟಿ ಮಾದರಿಯಲ್ಲಿ ರಾಜಕೀಯ ಪಕ್ಷ ಸ್ಥಾಪನೆಗೆ ರಾಜರ ಬೆಂಬಲವಿತ್ತು.21
ಪ್ರಜಾಮಿತ್ರ ಮಂಡಲಿ ಪಕ್ಷದಲ್ಲಿ ಚನ್ನಯ್ಯ.ಹೆಚ್. ಇದರ-ಅಧ್ಯಕ್ಷರು, ಎಂ.ಬಸವಯ್ಯ-ಕಾರ್ಯದರ್ಶಿ, ಅಬ್ಬಾಸ್ ಖಾನ್, ಡಿ.ಬನುಮಯ್ಯ, ಎಂ.ಸುಬ್ಬಯ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದರು. 1918 ಫೆಬ್ರವರಿ 17 ರಂದು ಚನ್ನಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯ ತೀರ್ಮಾನದಂತೆ ಎಲ್ಲರಿಗೂ ಶಿಕ್ಷಣ, ಉದ್ಯೋಗಕ್ಕಾಗಿ ಸರ್ಕಾರದ ಮುಂದೆ ಭಿನ್ನವತ್ತಳೆಯನ್ನು 1918 ಜೂನ್‍ನಲ್ಲಿ ರಾಜರಿಗೆ ಸಲ್ಲಿಸಿದರು. ಸರ್ಕಾರ ರೂ.1,00,000/- ಅನುದಾನ ನೀಡಿತು. ಶುಲ್ಕ ವಿನಾಯಿತಿ, ರಿಯಾಯಿತಿ, ವಿದ್ಯಾರ್ಥಿ ವೇತನ, ಸರ್ಕಾರಿ ಸೇವೆಯಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿತು.
ಹಿಂದುಳಿದ ವರ್ಗದ ನಾಯಕ ಮತ್ತು ಸಂಸ್ಥಾನದ ಶಿಕ್ಷಣಾಧಿಕಾರಿಯಾಗಿದ್ದ ಸಿ.ಆರ್. ರೆಡ್ಡಿರವರು ಪ್ರಸ್ತಾಪಿಸುತ್ತಾ, ಜನಸಾಮಾನ್ಯರು ಶಾಸಕಾಂಗದಲ್ಲಿ ಭಾಗವಹಿಸಬೇಕು, ಸರ್ಕಾರಿ ಸೇವೆಯಲ್ಲಿ ಪಾಲ್ಗೊಳ್ಳಬೇಕು, “ಸರ್ಕಾರಿ ಕಛೇರಿ ಒಂದು ಅತ್ಯುನ್ನತ ಲಿವರ್” ಇದ್ದಹಾಗೆ. ಆದ್ದರಿಂದ ನಾವು ಇದರಲ್ಲಿ ಪಾಲನ್ನು ಪಡೆಯಬೇಕೆಂದು (ಸಿ.ಆರ್.ರೆಡ್ಡಿ ಸಲಹೆಯಂತೆ) ತಿಳಿಸಿದರು22. ಲಿಂಗಾಯಿತ-ಎಂ.ಬಸವಯ್ಯ, ಒಕ್ಕಲಿಗ-ಹೆಚ್.ಚನ್ನಯ್ಯ, ಮುಸ್ಲಿಂ-ಅಬ್ಬಾಸ್‍ಖಾನ್ ಒಟ್ಟುಗೂಡಿ ಪ್ರಜಾಮಿತ್ರ ಮಂಡಳಿ ಮುಖಾಂತರ ಹೋರಾಟ ಆರಂಭಿಸಿದರು. 1917ನೇ ನವೆಂಬರ್‍ನಲ್ಲಿ ಪ್ರಥಮ ಹಿಂದುಳಿದ ವರ್ಗಗಳ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ಜಸ್ಟೀಸ್ ಪಾಟಿಯ ಅಣ್ಣಸ್ವಾಮಿ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು, 30 ಜಾತಿಯಿಂದ 3000 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಡಿ.ಎಸ್.ಮಲ್ಲಪ್ಪ, ಮಹಮದ್ ಇಮಾಮ್ ಸೇರಿದಂತೆ ಹಲವು ನಾಯಕರು ಗ್ರಾಮೀಣ ಹಂತದಿಂದ ಶಾಸಕಾಂಗ ಹಂತದವರೆಗೆ ಆಡಳಿತದ ಎಲ್ಲಾ ಹಂತಗಳಲ್ಲೂ ತಮ್ಮ ಪಾಲನ್ನು ಪಡೆಯಬೇಕೆಂದರು.23
ಹಿಂದುಳಿದ ವರ್ಗದವರಿಗೆ ಯಾವ ಪ್ರಾತಿನಿದ್ಯ, ಹೇಗೆ ಮತ್ತು ಯಾರಿಗೆ ಹಾಗೂ ಯಾವ ಆಧಾರದ ಮೇಲೆ ನೀಡಬೇಕೆನ್ನುವ ಬಗ್ಗೆ ಅಧ್ಯಯನ ಮಾಡಿ ವರದಿ ಪಡೆಯುವ ಸಲುವಾಗಿ ರಾಜ ನಾಲ್ವಡಿ ಕೃಷ್ಣರಾಜ ಒಡೆಯರು 1918 ಆಗಸ್ಟ್ 8 ರಂದು ಒಂದು ಸಮಿತಿ ರಚಿಸಿದರು.24 ಆದರೆ ಸರ್.ಎಂ. ವಿಶ್ವೇಶ್ವರಯ್ಯ, ದಿವಾನರು ವಿರೋಧಿಸಿದರು ಮತ್ತು ವರದಿ ಜಾರಿಯಾಗದಂತೆ ಬ್ರಾಹ್ಮಣರು ಪ್ರಜಾಪ್ರತಿನಿಧಿ ಸಭೆಯಲ್ಲಿ ವಾದ ಮಂಡಿಸಿದರು. ವಿದ್ಯಾರ್ಹತೆ, ಹುದ್ದೆಗೆ ಅಗತ್ಯ ಎಂದು ಸರ್.ಎಂ.ವಿ. ರವರು ರಾಜರಲ್ಲಿ ಮನವಿ ಮಾಡಿದರು. ಈ ವಿಷಯವಾಗಿ ರಾಜರ ನಡುವೆ ಮನಃಸ್ಥಾಪ ಉಂಟಾಗಿ ಸರ್.ಎಂ.ವಿ. ರವರು ದಿವಾನರ ಹುದ್ದೆಗೆ ರಾಜೀನಾಮೆ ನೀಡಿದರು.25
1918ರಲ್ಲಿ ಮೊದಲ ಬ್ರಾಹ್ಮಣೇತರ ದಿವಾನರಾಗಿ ಕಾಂತರಾಜ ಅರಸ್ ಅಧಿಕಾರಕ್ಕೆ ಬಂದರು. ರಾಜರು ನ್ಯಾಯಮೂತಿ ಲೆಸ್ಲೆ ಮಿಲ್ಲರ್ ಅಧ್ಯಕ್ಷತೆಯಲ್ಲಿ ವಿಚಾರಣೆಗಾಗಿ ವರದಿ ನೀಡಲು ಸಮಿತಿ ರಚಿಸಿದರು.26 1919ರಲ್ಲಿ ವರದಿ ಸಲ್ಲಿಸಿತು. ಈ ವರದಿಯ ನಂತರ ಮದ್ರಾಸ್ ಮತ್ತು ಮೈಸೂರಿನ ಬ್ರಾಹ್ಮಣರು ಒಟ್ಟುಗೂಡಿ ಪ್ರತ್ಯೇಕತಾ ಚಳುವಳಿಯನ್ನು ಕೈಬಿಟ್ಟರು.27 ಪಡೆದ ರಾಜರು ಈ ವರದಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಎಲ್ಲಾ ವರ್ಗದ ಜಾತಿ-ವರ್ಗದ ಜನರುಗಳೆಲ್ಲಾ ಹಿಂದುಳಿದವರೆಂದು ತಿಳಿಸಿತು.28 ಈ ವರ್ಗಗಳಿಗೆ ಶಿಕ್ಷಣ, ಸರ್ಕಾರಿ ಸೇವೆ, ಉದ್ಯೋಗದಲ್ಲಿ ಮೀಸಲು, ರಾಜಕೀಯ ಸ್ಥಾನಮಾನ ನೀಡಬೇಕೆಂದು ವರದಿಯಲ್ಲಿ ವ್ಯಾಖ್ಯಾನಿಸಿತ್ತು. ಕಾಂತರಾಜ ಅರಸ್ ರಾಜರ ಒಪ್ಪಿಗೆ ಮೇರೆಗೆ 1921, ಮೇ ತಿಂಗಳಿನಲ್ಲಿ ಜಾರಿ ಮಾಡಿದರು. ಕೇಂದ್ರ ನೇಮಕಾತಿ ಸಮಿತಿ ರಚಿಸಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಅವಕಾಶ ನೀಡಲು ಇಲಾಖೆಯ ಮುಖ್ಯಸ್ಥರುಗಳಿಗೆ ಆದೇಶ ನೀಡಿದರು. 1905ರ ಅವಧಿಯಲ್ಲಿ 97% ಸೇವಾ ಅವಕಾಶ ಗಿಟ್ಟಿಸಿಕೊಂಡಿದ್ದ ಬ್ರಾಹ್ಮಣರು ಹಿಂದುಳಿದ ಜಾತಿ ಸಂಘಗಳು ಅಥವಾ ಬ್ರಾಹ್ಮಣೇತರ ಸಂಘಗಳ ಕಾರ್ಯಚಟುವಟಿಕೆಗಳ ಪ್ರಭಾವದಿಂದ 1926ರ ವೇಳೆಗೆ 54%ಗೆ ಕುಂಠಿತ ಬ್ರಾಹ್ಮಣರ ಸ್ಥಾನಮಾನ ಕಡಿಮೆಯಾಯಿತು. ಅಂದರೆ ಬ್ರಾಹ್ಮಣರ ಪ್ರಾತಿನಿಧ್ಯ 13.5ರಷ್ಟು ಕಡಿಮೆಯಾಯಿತು.29 ಸರ್ಕಾರಿ ಉದ್ಯೋಗದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಸಮುದಾಯದವರು ಗಳಿಸಿಕೊಂಡ ಸ್ಥಾನಗಳ ವಿವರವನ್ನು ಕೆಳಕಂಡ ಕೋಷ್ಠಕ ಮೂಲಕ ತಿಳಿಯಬಹುದು.30
ಜಾತಿ
|
1910 |
1918 |
1936 |
1942 |
1949 |
|||||
Gazette |
Non-G |
Gazette |
Non-G |
Gazette |
Non-G |
Gazette |
Non-G |
Gazette |
Non-G |
|
ಬ್ರಾಹ್ಮಣ |
63 |
45.65 |
64.86 |
47.63 |
61.32 |
49.65 |
54.57 |
50.1 |
41.29 |
52.5 |
ಕ್ರೈಸ್ತ |
14.5 |
12.1 |
15.4 |
10.5 |
8.15 |
4.21 |
7.86 |
5.3 |
5.52 |
5.5 |
ಮುಸ್ಲಿಂ |
4.0 |
7.5 |
4.32 |
10.00 |
7.24 |
11.41 |
7.5 |
12.5 |
6.79 |
13.5 |
ಲಿಂಗಾಯಿತ |
1.5 |
4.01 |
1.89 |
5.3 |
5.0 |
8.17 |
5.78 |
8.8 |
9.65 |
12.6 |
ಒಕ್ಕಲಿಗ |
1.01 |
3.03 |
1.08 |
3.9 |
2.52 |
5.14 |
3.82 |
7.2 |
8.42 |
9.5 |
ಕುರುಬ |
0.26 |
1.01 |
0.50 |
1.08 |
1.00 |
1.34 |
1.39 |
2.01 |
2.8 |
4.5 |
ನಿಮ್ನ ವರ್ಗ |
- |
1.00 |
- |
2.00 |
0.13 |
2.58 |
0.25 |
5.1 |
0.40 |
6.00 |
ಬ್ರಾಹ್ಮಣೇತರ ವರ್ಗಗಳಲ್ಲಿ ಲಿಂಗಾಯಿತರು 1949ರಲ್ಲಿ 9.65-ಗೆಜೆಟ್, 12.6-ನಾನ್ ಗೆಜೆಟ್ ಹುದ್ದೆಗಳನ್ನು, ಒಕ್ಕಲಿಗರು 8.42-ಗೆಜೆಟ್, 9.5-ನಾನ್‍ಗೆಜೆಟ್ ಹುದ್ದೆಗಳನ್ನು ಪಡೆದರು. ಶೋಷಿತ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಹಾರಾಜರು ಶಿಫಾರಸ್ಸು ಮಾಡಿದ್ದರು. ಆದರೂ ಉದ್ದೇಶಿತ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣಗಳನ್ನು ಅವಲೋಕಿಸಿದಾಗ ಕಂಡುಬರುವುದೇನೆಂದರೆ, ದಲಿತ ವರ್ಗಗಳಲ್ಲಿನ ಅಸಂಘಟಿತ ಮೌನವೇ ಅವರ ಹೀನ ಸ್ಥಿತಿಗೆ ಕಾರಣ ಎನ್ನಬಹುದು.31
ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಿಸುವುದಾದರೆ ಪ್ರಾರಂಭದಲ್ಲಿ ಬ್ರಾಹ್ಮಣೇತರರಿಗೆ ವಿದ್ಯಾರ್ಜನೆಯ ಅವಕಾಶವಿರಲಿಲ್ಲ. ಧಾರ್ಮಿಕ ಶಿಕ್ಷಣ ರೂಢಿಯಲ್ಲಿದ್ದು, ಹಿಂದುಳಿದ ವರ್ಗದವರು ಅಧ್ಯಯನ ಮಾಡುವುದೇ ಅಪರಾಧ, ಶಾಪ ಎಂಬ ಭಾವನೆಯನ್ನು ರೂಢಿಸಿಕೊಂಡಿದ್ದರು. ಜನಸಂಖ್ಯೆಯಲ್ಲಿ 96.2% ಹೊಂದಿದ್ದರೂ ಶೈಕ್ಷಣಿಕ ಅವಕಾಶಗಳಿಲ್ಲದೆ ಸರ್ಕಾರಿ ಹುದ್ದೆ ಸಾಮಾಜಿಕ, ಆರ್ಥಿಕ ಅವಕಾಶಗಳಿಲ್ಲದೆ ಶೋಷಿತರಾಗಿದ್ದರು. ಬ್ರಿಟೀಷರು, ಕ್ರೈಸ್ತ ಮಿಷನರಿಗಳು, ಮಹಾರಾಜರು, ದಿವಾನರಾದ ಕಾಂತರಾಜ ಅರಸ್, ವಿ.ಪಿ. ಮಾದವರಾವ್, ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ರವರುಗಳ ಅನುಕಂಪದಿಂದಾಗಿ ಶೈಕ್ಷಣಿಕ ಅವಕಾಶ ಲಭ್ಯವಾಯಿತು. 1871ರಲ್ಲಿ 5-ಸರ್ಕಾರಿ ಶಾಲೆಗಳು, 20-ಮದರಸ, 2-ಹೆಣ್ಣು ಮಕ್ಕಳ ಶಾಲೆ ಮುಸಲ್ಮಾನರಿಗೆ ಪ್ರಾರಂಭಿಸಲಾಯಿತು. ಎಲ್ಲ ಜಾತಿ ಸಮುದಾಯದವರಿಗೂ ಶಿಕ್ಷಣವನ್ನು ನೀಡಲು ಸರ್ಕಾರದವರು ಅವಕಾಶ ನೀಡಿದರು.32 ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಶುಲ್ಕವಿನಾಯಿತಿ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ಸ್ಥಾಪನೆಗೆ ನೆರವು ಯೋಜನೆ ಜಾರಿಗೆ ಬಂದಿತು.33 1890ರ ವೇಳೆಗೆ ಪಂಚಮರಿಗಾಗಿ ಪ್ರತ್ಯೇಕ ಶಾಲೆ ಪ್ರಾರಂಭಿಸಿದರು. 1901ರ ವೇಳೆಗೆ 34 ಸರ್ಕಾರಿ, 31 ಅನುದಾನಿತ ಶಾಲೆಗಳನ್ನು ಪಂಚಮರ ವ್ಯಾಸಂಗಕ್ಕೆ ಪ್ರಾರಂಭಿಸಿ ಶುಲ್ಕ ವಿನಾಯಿತಿ ನೀಡಲಾಯಿತು. 1913ರ ಅವಧಿಗೆ ನಿಮ್ನ ವರ್ಗಗಳಿಗೆ ಉಚಿತವಾಗಿ ಬಟ್ಟೆ, ಪುಸ್ತಕ, ವಿದ್ಯಾರ್ಥಿ ವೇತನ, ಸ್ಲೇಟು ನೀಡಲಾಯಿತು.34 ಆರಂಭದಿಂದ ಎಸ್.ಎಸ್.ಎಲ್.ಸಿ.ವರೆಗೂ ಶಿಕ್ಷಣವನ್ನು ಉಚಿತವಾಗಿ ನೀಡಲಾಯಿತು. 1917ಕ್ಕೆ ಮೊದಲು ಸರಕಾರ ರೂ.15,000/-ಗಳ ಅನುದಾನವನ್ನು ಪಂಚಮರ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿತ್ತು. ಪ್ರಜಾಪ್ರತಿನಿದಿ ಸಭೆಯಲ್ಲಿ ಹಿಂದುಳಿದ ವರ್ಗಗಳ ನಾಯಕರು ಶುಲ್ಕ ವಿನಾಯಿತಿ, ರಿಯಾಯಿತಿಗಾಗಿ ಬೇಡಿಕೆ ಸಲ್ಲಿಸಿದರು. ಸರ್ಕಾರ 1917ರಲ್ಲಿ ರೂ.1,00,000/-ಗಳ ಅನುದಾನವನ್ನು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ತೆಗೆದಿಟ್ಟರು. ಹಿಂದುಳಿದ ವರ್ಗಗದ ನಾಯಕರುಗಳು ಸರ್ಕಾರಿ ನೌಕರಿಯಲ್ಲಿ ಅವಕಾಶಕ್ಕಾಗಿ ಶಿಕ್ಷಣದ ಮಹತ್ವವಿದ್ದು, ಶಿಕ್ಷಣ ಸೌಲಭ್ಯವನ್ನು ಪಡೆಯಲು ಬೇಡಿಕೆ ಮುಂದಿಟ್ಟರು. ಪರಿಣಾಮವಾಗಿ ಮಿಲ್ಲರ್ ಸಮಿತಿ ತನ್ನ ವರದಿಯಲ್ಲಿ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಅವಕಾಶ ನೀಡಲಾಯಿತು. ಹಿಂದುಳಿದ ವರ್ಗಗಳು ಸಂಘಟಿತರಾಗಿ ನಡೆಸಿದ ಹೋರಾಟದ ಪ್ರತಿಫಲವಾಗಿ ಉತ್ತಮ ಸ್ಥಾನಮಾನ ಪಡೆದರು.
ಉಪಸಂಹಾರ:
ಸಹಕಾರಿ ಸಂಘ ಸಂಸ್ಥೆಗಳು ಸಮಾಜದ ಬೆಳವಣಿಗೆಯಲ್ಲಿ ಮಹತ್ವ ಪೂರ್ಣ ಪಾತ್ರವಹಿಸಿವೆ. ಸಂಘಗಳು ಕಾರ್ಯೋನ್ಮುಖರಾಗದಿದ್ದಲ್ಲಿ 50 ವರ್ಷಗಳ ಹಿಂದಿನ ಜೀವನ ಸಾಗಿಸಬೇಕಿತ್ತು. ಸಹಕಾರಿ ಜಾತಿ ಸಂಘಗಳ ಬೆಳವಣಿಗೆಯಿಂದ ಶೈಕ್ಷಣಿಕ ಅವಕಾಶಗಳು ಲಭ್ಯವಾದವು. ಬಾಂಧವರು ಸಂಘಟಿತರಾಗಿ ಶಾಲಾ, ಕಾಲೇಜು, ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ ವೇತನಗಳನ್ನು ಪೂರೈಸಿ ಪ್ರಜ್ಞಾವಂತ ಸಮಾಜ ದೇಶ ಸೇವೆಗೆ ಕೊಡುಗೆಯಾಗಿ ನೀಡಿವೆ. ಸಂಘಗಳ ಮುಖಂಡರುಗಳು ತಮ್ಮ ತನು, ಮನ, ಧನವನ್ನು ಸಮರ್ಪಿಸಿದ ಫಲವಾಗಿ ಆಯಾ - ಸಮಾಜ ದುರ್ಬಲರಿಗೆ ಚೈತನ್ಯದ ದ್ಯೂತಕವಾಗಿವೆ. ಪ್ರತಿ ಸಂಘಗಳ ನಡೆಸಿದ ಚಳುವಳಿಯ ಫಲವಾಗಿ ಅಲ್ಪ ಸಂಖ್ಯಾತ ವರ್ಗಗಳ ಮಾದರಿಯಲ್ಲಿ ಶಿಕ್ಷಣ, ಉದ್ಯೋಗ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಪ್ರೌಡಿಮೆ ಸಾಧ್ಯವಾಗಿದೆ. ಯುವ ಶಕ್ತಿಯನ್ನು ಸರಿದಾರಿಯಲ್ಲಿ ಮುನ್ನಡೆಸುವ ಪ್ರಯತ್ನ ಸಹಕಾರಿ ವಲಯದಿಂದ ಸಾಧ್ಯವಾಗಿದೆ. ಸಂಘ ಸಂಸ್ಥೆಗಳ ಅನುಶಾಸನ ಬದ್ದವಾಗಿ ಸರ್ಕಾರ ದೊಳಗಿನ ಸರ್ಕಾರ ಎಂಬಂತೆ ಕಾರ್ಯನಿರ್ವಹಿಸುತ್ತಿವೆ.
ಗ್ರಂಥಾವಲೋಕನ