Tumbe Group of International Journals

Full Text


ಜನಪದ ಗೀತೆಗಳಲ್ಲಿ ದಾಂಪತ್ಯ ಚಿತ್ರಣ

ಪುರುಷೋತ್ತಮ ಎನ್.ಆರ್.

ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ, ಜಾನಪದ ಅಧ್ಯಯನ ವಿಭಾಗ,

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ 583276.

Email -purushappu@gmail.com


 

ಪ್ರಸ್ತಾವನೆ

            ಜನಪದ ಸಾಹಿತ್ಯ ಮಾನವ ಸಂಕುಲದ ಜೀವನಾನುಭವದ ಪ್ರತಿಬಿಂಬ. ಅನುಭವಜನ್ಯ ಜ್ಞಾನ ಪರಂಪರೆಯ ಶಿಕ್ಷಣ ಕಲಿತ ಗ್ರಾಮೀಣ ಜನರೇ ಇದರ ವಾರಸುದಾರರು. ಇವರು ಔಪಚಾರಿಕ ಶಿಕ್ಷಣವನ್ನು ಕಲಿತವರಲ್ಲ. ಜೀವನವೆಂಬ ಪಾಠಶಾಲೆಯ ವಿದ್ಯಾರ್ಥಿಗಳು. ದುಡಿಮೆಯೇ ಅವರ ಜೀವಾಳ. ಅದರಲ್ಲಿಯೇ ತಮ್ಮ ಜೀವನ ಸಾಕ್ಷಾತ್ಕಾರವನ್ನು ಕಾಣುವ ಇವರ ಜೀವನ ಶ್ರದ್ಧೆ, ಕರ್ತವ್ಯನಿಷ್ಠೆ ಹಾಗೂ ಕಷ್ಟ ಸಹಿಷ್ಣುತೆಯ ಗುಣಗಳು ಜನಪದ ಸಾಹಿತ್ಯದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಗ್ರಂಥಾಲಯದ ಯಾವ ಕೃತಿ ಸಮೂಹವೂ ನೀಡದ ಜ್ಞಾನಭಂಡಾರವನ್ನು ತಮ್ಮ ಅನುಭವದ ಮೂಲಕವೇ ಬಿತ್ತರಿಸುವ ಜನಪದ ಗೀತೆಗಳು ಜನಪದ ಸಾಹಿತ್ಯದ ಮೇರು ಶಿಖರಗಳಾಗಿವೆ.

            ಮಾನವೀಯ ಕಳಕಳಿಯ ಅನಂತ ಶಕ್ತಿಯನ್ನು ತುಂಬುವ ಮಾಂತ್ರಿಕ ಗುಣವನ್ನು ಒಳಗೊಂಡಿರುವ ಜನಪದ ಗೀತೆಗಳು ಸಂಬಂಧಗಳ ಮಹಾ ಪಾಠಶಾಲೆಯಾಗಿವೆ. ಜೀವನದ ನಡೆ-ನುಡಿಗಳನ್ನು, ಆಚಾರ-ವಿಚಾರಗಳನ್ನು ತಿಳಿಸಿಕೊಡುವ ಇವು ಮಾನವ ಸಂಬಂಧಗಳ ವಿಚಾರದಲ್ಲಿ ಬಹು ಎತ್ತರಕ್ಕೆ ನಿಲ್ಲುತ್ತವೆ. ತಾಯಿ, ತಂದೆ, ಅಜ್ಜ, ಅಜ್ಜಿ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಂಡತಿ, ಮಕ್ಕಳು ಮೊದಲಾದ ಮೌಲ್ಯಯುತ ಬಾಂಧವ್ಯಗಳ ಸವಿಯನ್ನು ಉಣಬಡಿಸುತ್ತವೆ. ಬಡತನದ ಬೇಗೆಯಲ್ಲಿ ಬೆಂದರೂ ಇವರ ಮೌಲ್ಯಯುತವಾದ ಸಂಬಂಧಗಳಿಗೆ ಕೊರತೆ ಇಲ್ಲ. ಈ ಹಿನ್ನೆಲೆಯಲ್ಲಿ ಜನಪದ ಗೀತೆಗಳು ಕಟ್ಟಿಕೊಡುವ ದಾಂಪತ್ಯದ ಚಿತ್ರಣ ಮೌಲ್ಯಯುತ ಹಾಗೂ ಚರ್ಚಾರ್ಹವಾದುದು.

ಕೀ ವರ್ಡ್: ಜ್ಞಾನ, ಪರಂಪರೆ, ದಾಂಪತ್ಯ, ಕಳ್ಳುಬಳ್ಳಿ, ಬಂಧುತ್ವ, ಗುಲಾಮ, ಪರಮಪದ

ಪಿಠೀಕೆ

            ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿಯರ ಸಂಬಂಧಗಳಿಗಿಂತ ಭಿನ್ನ ರೀತಿಯ ಸಂಬಂಧದ ಬೆಸುಗೆಯನ್ನು ಹೊಂದುವ ದಾಂಪತ್ಯವು ನಮ್ಮ ಸಮಾಜ ರೂಪಿಸಿಕೊಟ್ಟಿರುವ ಮೌಲ್ಯಯುತವಾದ ಪರಿಕಲ್ಪನೆಯಾಗಿದೆ. ಈ ಸಂಬಂಧಗಳಲ್ಲಿ ರಕ್ತ ಸಂಬಂಧದ ಮೂಲಕ ರೂಪಿತವಾಗುವ ಸಂಬಂಧಗಳ ಬೆಸೆಯುವಿಕೆ ಒಂದು ನೆಲೆಯದ್ದಾದರೆ, ವಿವಾಹ ಸಂಬಂಧದ ಮೂಲಕ ರೂಪಿತವಾಗುವ ಸಂಬಂಧಗಳ ಪರಿಕಲ್ಪನೆ ಮತ್ತೊಂದು ನೆಲೆಯದ್ದಾಗಿದೆ. ಈ ಸಂಬಂಧವು ಕಳ್ಳುಬಳ್ಳಿ, ಕಾಲ್ಪನಿಕ ಹಾಗೂ ಧಾರ್ಮಿಕ ಸಂಬಂಧಗಳಿಂದ ಆದ ಬಂಧುತ್ವಕ್ಕಿಂತ ಭಿನ್ನ ನೆಲೆಯ ಬಾಂಧವ್ಯದ ಬೆಸುಗೆಯನ್ನು ಹೊಂದಿದೆ.

            ಮದುವೆ ಅಥವಾ ವಿವಾಹ ಬಂಧನವೆಂಬುದು ನಮ್ಮ ಸಮಾಜವು ಮಾನ್ಯತೆ ನೀಡಿ ಒಪ್ಪಿತ ಮೌಲ್ಯಗಳ ಮುಖೇನ ರೂಪಿಸಿಕೊಂಡಿರುವ ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ. ಇದು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದ್ದು, ಎಲ್ಲಿಯೋ ಹುಟ್ಟಿ ಬೆಳೆದ ಹೆಣ್ಣು-ಗಂಡುಗಳಿಬ್ಬರು ಈ ಒಪ್ಪಿತ ಸಂಸ್ಥೆಯ ಮೂಲಕ ಒಂದಾಗಿ ಬದುಕನ್ನು ಸಾಗಿಸುವುದು ಕಂಡುಬರುತ್ತದೆ. ದಾಂಪತ್ಯ ಬಂಧನಕ್ಕೊಳಗಾದ ಹೆಣ್ಣು-ಗಂಡಿಗಳಿಬ್ಬರೂ ಹಲವು ರೀತಿಯ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನಿರ್ವಹಿಸುವ ವ್ಯಕ್ತಿಗಳೂ ಆಗುವರು. ಅತ್ತೆ, ಮಾವ, ಸೊಸೆ, ಅಳಿಯ, ಭಾವ, ಮೈದುನ, ಮಕ್ಕಳು ಮೊದಲಾದ ಸಂಬಂಧಗಳನ್ನು ತಮ್ಮ ಜವಾಬ್ದಾರಿಯುತ ತಿಳುವಳಿಕೆಯ ಮಖೇನ ಕಾಪಿಟ್ಟುಕೊಳ್ಳುವ ಮತ್ತು ಅವುಗಳನ್ನು ಉಳಿಸಿಕೊಳ್ಳುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ನಡುವೆ ಈ ಸಂಬಂಧಗಳಲ್ಲಿ ಕೀಟಲೆ, ಗೇಲಿ, ಅಣಕ, ನೋವು, ನಲಿವಿನ ಭಾವಗಳೂ ತುಂಬಿರುತ್ತವೆ.

            ಇಂತಹ ಸಂಸಾರವೆಂಬ ಒಪ್ಪಿತ ಸಂಸ್ಥೆಯನ್ನು ಬಹು ಜಾಣತನದಿಂದ ನಿಭಾಯಿಸುವ ಜವಾಬ್ದಾರಿ ಆ ಮನೆಗೆ ಸೊಸೆಯಾಗಿ ಬಂದ ಹೆಣ್ಣಿನ ಮೇಲಿರುವುದು ತಿಳಿಯುತ್ತದೆ. ಏಕೆಂದರೆ ದೂರದ ಯಾವುದೋ ಅಪರಿಚಿತ ಊರಿಗೆ ಸೊಸೆಯಾಗಿ ಬಂದ ಹೆಣ್ಣುಮಗಳು ಪ್ರಾರಂಭದ ದಿನಗಳಲ್ಲಿ ಎದುರಿಸುವ ಒಂಟಿತನ, ತನ್ನವರಿಂದ ದೂರವಾಗಿದ್ದೇನೆ ಎಂಬ ಮಾನಸಿಕ ಯಾತನೆಗಳಂತಹ ಸಂಕಟಗಳಿಂದ ಹೊರಬಂದು ಹೊಸ ಪರಿಸರದಲ್ಲಿ ಹೊಸ ಸಂಬಂಧಗಳ ಬಾಂಧವ್ಯಗಳನ್ನು ಬೆಸೆದುಕೊಳ್ಳುವುದು ಬಹು ಮುಖ್ಯವಾದ ಸಂಗತಿಯಾಗಿದೆ. ಈ ಸಮಯದಲ್ಲಿ ಸ್ವಲ್ಪ ಎಡವಿದರೂ ಇಡೀ ಸಂಸಾರವೆಂಬುದೇ ಒಡೆದು ಚೂರಾಗಿ ಕೌಟುಂಬಿಕ ಕಲಹಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ದಾಂಪತ್ಯವೆಂಬುದು ಗಂಡು-ಹೆಣ್ಣುಗಳನ್ನು ಬೆಸೆಯುವ ಮೂಲಕ ಸಾಮರಸ್ಯದ ಬದುಕನ್ನು ಸಾಗಿಸಲು ತನ್ನದೇ ಆದ ಅನುಭವದ ಬೀಗಮುದ್ರೆಯನ್ನು ನೀಡುತ್ತಿರುತ್ತದೆ.

            ಈ ದಾಂಪತ್ಯದಲ್ಲಿ ಸುಖ, ಸಂತೋಷ, ಸರಸ, ವಿರಸ, ನೋವು, ನಲಿವು, ಜಗಳ, ಆಂತರಿಕ ಕಲಹಗಳು ಇಲ್ಲದಿಲ್ಲ. ಪತಿಯೊಂದಿಗಿನ ಜಗಳಗಳು, ಅತ್ತೆ-ನಾದಿನಿಯರೊಂದಿಗಿನ ವಿರಸ, ಸವತಿ ಮಾತ್ಸರ್ಯಗಳಂತಹ ಹಲವು ಸಂಕೀರ್ಣ ಸಮಸ್ಯೆಗಳ ನಡುವೆಯೂ ತಾನು ಕಟ್ಟುಬಿದ್ದ ದಾಂಪತ್ಯ ಜೀವನವನ್ನು ಮುಂದುವರೆಸಿಕೊಂಡು ಹೋಗುವ ಗುಣ ನಮ್ಮ ಜನಪದ ಹೆಣ್ಣುಗಳಲ್ಲಿರುವುದು ಈ ನೆಲದ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿತೋರಿಸುತ್ತದೆ. ಇಂದಿನ ಆಧುನಿಕ ಬದುಕಿನ ಕ್ರಮಗಳಲ್ಲಿ ಜರುಗುತ್ತಿರುವ ಅತ್ತೆ-ಸೊಸೆಯರ ಜಗಳ, ಮೈದುನ-ನಾದಿನಿಯರ ಕಿರುಕುಳ, ಪತಿಪತ್ನಿಯರ ಜಗಳಗಳಿಂದ ಉಂಟಾದ ಕೌಟುಂಬಿಕ ಬಿಕ್ಕಟ್ಟುಗಳ ಕಾರಣವಾಗಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಂತಹ ಸಾಮಾಜಿಕ ಬಿರುಕುಗಳ ಈ ಹೊತ್ತಿನಲ್ಲಿ ಜನಪದ ಗೀತೆಗಳು ಕಟ್ಟಿಕೊಡುವ ದಾಂಪತ್ಯದ ಚಿತ್ರಣ ಬಹು ಮಾರ್ಮಿಕವಾದುದು ಹಾಗೂ ಅರ್ಥಪೂರ್ಣವಾದುದು.

            ಎಂತಹ ಸಂದರ್ಭದಲ್ಲಿಯೂ ಜನಪದ ಹೆಣ್ಣುಮಗಳು ಧೈರ್ಯಗೆಡದೆ ಎಲ್ಲವನ್ನೂ ಎದುರಿಸುವ ಸಂಗತಿಗಳನ್ನು ಕಾಣಬಹುದಾಗಿದೆ. ನೋವು, ದುಃಖ, ತೊಂದರೆಗಳೆಲ್ಲವನ್ನೂ ಇತರರಿಗೆ ತೋರಗೊಡದೆ ನಗು ಮುಖದಿಂದಲೇ ಎಲ್ಲವನ್ನೂ ಮುನ್ನಡೆಸುವ ಮನಸ್ಥಿತಿ ಆಕೆಯದ್ದಾಗಿದೆ. ತನ್ನ ತಾಯ್ತನದಿಂದ ಹಿಡಿದು ವೈಧವ್ಯದವರೆಗಿನ ಎಲ್ಲ ಕಷ್ಟ ನಷ್ಟಗಳನ್ನು ತಾನೊಬ್ಬಳೆ ಅನುಭವಿಸುವ, ಸಹಿಸಿಕೊಳ್ಳುವ ತಾಳ್ಮೆಯ ಮನಸ್ಥಿತಿಯವಳಾಗಿದ್ದಾಳೆ. ಹಾಗೆಂದು ಅವಳ ದಾಂಪತ್ಯ ಜೀವನ ಸಂಪೂರ್ಣವಾಗಿ ನೋವಿನಿಂದಲೇ ತುಂಬಿದೆಯಂದು ಅರ್ಥವಲ್ಲ. ಅದರೊಳಗೂ ನೆಮ್ಮದಿಯ ಕ್ಷಣಗಳಿವೆ. ತಾಯ್ತನದ ಸವಿಯಿದೆ. ಪತಿ-ಪತ್ನಿಯರ ಅರ್ಥಪೂರ್ಣ ಬದುಕಿನ ಅನುಭೂತಿ ಇದೆ. ಅತ್ತಿಗೆ, ನಾದಿನಿ, ಅತ್ತೆ, ಮಾವ, ಭಾವ, ಮೈದುನರೆಂಬ ಸಂಬಂಧಗಳ ಬೆಸುಗೆ ಇದೆ. ಈ ಕಾರಣವಾಗಿ ಜನಪದ ಗೀತೆಗಳಲ್ಲಿನ ದಾಂಪತ್ಯದ ಚಿತ್ರಣವು ಕಾಮನಬಿಲ್ಲಿನಂತೆ ವೈವಿಧ್ಯಮಯವಾಗಿದೆ.

            ಹೊಸದಾಗಿ ಮದುವೆಯಾಗಿ ಗಂಡನ ಮನೆ ಸೇರಿ ಗಂಡನ ನೆಚ್ಚಿನ ಮಡದಿಯಾದ ಹೆಣ್ಣು ಮಗಳ ಜೀವನ ಕ್ರಮವನ್ನು ಜನಪದರು ವರ್ಣಿಸುವ ರೀತಿಯೇ ಅದ್ಭುತವಾದುದು.

                        ಅತ್ತಿ ಮಾವರ ಪಾದ ತಾಯಿ ತಂದೆಯ ಪಾದ

                        ಮತ್ತೆ ಗಂಡನ ಶ್ರೀಪಾದ | ತೊಳೆದಾರೆ

                        ಬೆನ್ನಿಂದೆ ಐತಿ ಕೈಲಾಸ |

ಅತ್ತೆ ಮಾವರನ್ನು ತಂದೆ ತಾಯಿಯರಂತೆ ಕಾಣುವ ಇಲ್ಲಿನ ಹೆಣ್ಣಿನ ಮನಸ್ಥಿತಿ ನಿಜಕ್ಕೂ ಅನುಕರಣೀಯವಾದುದು. ಅತ್ತೆ ಮಾವಂದಿರನ್ನು ವಯಸ್ಸಾದ ಕಾಲದಲ್ಲಿ ವೃದ್ಧಾಶ್ರಮಗಳಲ್ಲಿ ಬಿಟ್ಟು ತಮ್ಮ ಜೀವನವನ್ನು ತಾವು ನೋಡಿಕೊಳ್ಳುವ ಇಂದಿ ಸೊಸೆಯಂದಿರಿಗೆ ನಮ್ಮ ಜನಪದ ಗೀತೆಗಳು ತಿಳಿಸಿಕೊಡುವ ಜೀವನ ಮೌಲ್ಯಗಳ ಪಾಠ ಅರ್ಥಪೂರ್ಣವಾದುದು. ಆದ್ದರಿಂದಲೇ ಇಲ್ಲಿನ ಹೆಣ್ಣು ಮಗಳು ಅತ್ತೆ ಮಾವಂದಿರ ಪಾದವನ್ನು, ತಾಯಿ ತಂದೆಯರ ಪಾದ ಹಾಗೂ ಗಂಡನ ಪಾದವನ್ನು ತೊಳೆದರೆ ತನ್ನ ಬೆನ್ನ ಹಿಂದೆ ಕೈಲಾಸದಂತಹ ಸುಖವಿರುವ ಸಂಗತಿಯನ್ನು ತಿಳಿಸುತ್ತಾಲೆ. ಇಲ್ಲಿನ ಅತ್ತೆ ಮಾವರ ಸೇವೆ ಎಂಬುದು ಗುಲಾಮತನದ ಅಥವಾ ಕೀಳರಿಮೆಯ ಸಂಗತಿಯಾಗಿರದೆ ಜನಪದರು ಸಂಬಂಧಗಳಿಗೆ ಕೊಟ್ಟ ಬಹುಮುಖ್ಯವಾದ ಸ್ಥಾನಮಾನಗಳ ಕಾರಣವಾಗಿ ಮುಖ್ಯವಾಗುತ್ತವೆ. ಇಂತಹ ಸೊಸೆಯನ್ನು ಕುರಿತು ಅತ್ತೆಯು

                        ಗಂಡ ಹೆಂಡಿರ ಜೋಡಿ ಮುತ್ತು ರತ್ನದ ಜೋಡಿ

                        ಕಂಡವರು ಕರುಬ್ಯಾರು ಸೊಸಿಯೆ | ಬೈಗಾಗ

                        ಮುತ್ತೀನ ದ್ರಿಷ್ಟಿ ತೆಗೆದೇನು

ಎಂಬಂತಹ ವಿಶಾಲ ಮನಸ್ಥಿತಿ ಅರ್ಥಗರ್ಭಿತವಾದುದು. ಮುತ್ತು ರತ್ನದಂತಿರುವ ಗಂಡ ಹೆಂಡತಿಯ ಜೋಡಿಯನ್ನು ಕಂಡು ನೆರೆಹೊರೆಯವರು ಹೊಟ್ಟೆಕಿಚ್ಚುಪಟ್ಟುಕೊಳ್ಳುವರು. ಏನಾದರೂ ಅನರ್ಥಗಳಾದರೆ ನಮ್ಮ ಮನಸ್ಸುಗಳು ಸಹಿಸಿಕೊಳ್ಳಲಾರವು ಎಂದು ಅವರಿಗೆ ಮುತ್ತಿನ ದೃಷ್ಟಿ ತೆಗೆದು ಅವರನ್ನು ಸುಖದಿಂದ ಇರುವಂತೆ ಹಾರೈಸುವ ಗುಣ ಅತ್ತೆ ಸೊಸೆಯರ ಬಾಂಧವ್ಯದ ಅದ್ಭುತ ಜೀವನ ಕ್ರಮಗಳನ್ನು ನಮ್ಮ ಕಣ್ಣ ಮುಂದೆ ತರುತ್ತವೆ.

                        ಅರಸ ಬರುವುದ ಕೇಳಿ ಮುಡಿದ ಹೂ ನಕ್ಕಾವ

                        ಮುಂಗೈಯ ಹಸರು ತೌರ ಬಳಿ | ಕುಣದಾವ

                        ಹೊಸ ಸೀರಿ ಮತ್ತೆ ಹಸನಾಗಿ

ತನ್ನ ಗಂಡನು ಬರುವ ಸುದ್ಧಿ ಕಿವಿಯ ಮೇಲೆ ಬಿದ್ದ ತಕ್ಷಣ ಆ ಹೆಣ್ಣಿನಲ್ಲಾಗುವ ಸಂಭ್ರಮ, ಸಡಗರದ ಸಂತೋಷಗಳು ಹೇಳತೀರವು. ಆ ವಿಷಯ ತಿಳಿದು ಆಕೆ ಮುಡಿದಿದ್ದ ಹೂಗಳು ನಗುತ್ತಿವೆ. ತೌರ ಮನೆಯವರು ತೊಡಿಸಿದ್ದ ಮುಂಗೈನ ಹಸಿರು ಬಳೆಗಳು ಕುಣಿದಾಡುತ್ತಿವೆ. ಹೊಸ ಸೀರೆಯನ್ನು ಮತ್ತೆ ಹಸನಾಗಿ ತೊಡುವ ಸಂಗತಿಗಳೆಲ್ಲವೂ ಅವರ ಸುಖಮಯ ದಾಂಪತ್ಯದ ರಸಕ್ಷಣಗಳನ್ನು ತಿಳಿಸಿಕೊಡುತ್ತವೆ.

                        ಹಾಸಿಗೆ ಹಾಸೆಂದ ಮಲ್ಲಿಗೆ ಮುಡಿಯೆಂದ |

                        ಬೇಸತ್ತರೆ ಮಡದಿ ಮಲಗೆಂದ | ನನರಾಯ |

                        ತನ ನೋಡಿ ತವರ ಮರೆಯಂದ ||

ತನ್ನ ಪತ್ನಿಯ ಆಸರಿಕೆ, ಬೇಸರಿಕೆ, ಅವಳ ಕಷ್ಟ-ಸುಖಗಳನ್ನು ವಿಚಾರಿಸಿಕೊಳ್ಳುವ ಗುಣ ಪತಿಯಲ್ಲಿದ್ದರೆ ಆಕೆಗೆ ಅದುವೇ ಸ್ವರ್ಗ. ತನ್ನ ಪತ್ನಿಯನ್ನು ಪ್ರೀತಿಯಿಂದ ಕಾಣುವ ಗಂಡ ಹಾಸಿಗೆ ಹಾಸಿ ಮಲ್ಲಿಗೆ ಮುಡಿದು ಸುಖಿಸು. ಒಂದು ವೇಳೆ ಬೇಸರವಾದರೆ ಮಲಗಿ ನಿದ್ರಿಸು. ನನ್ನನ್ನು ನೋಡುತ್ತ ನಿನ್ನ ತವರನ್ನು ಮರೆ ಎಂದು ಹೇಳುವ ಮಾತುಗಳು ಗಮನಿಸತಕ್ಕವು. ಪತಿಯಾದವ ತವರಿನಷ್ಟು ಸಂತೋಷ ನೀಡುವನೆಂದರೆ ಆ ಹೆಣ್ಣಿಗೆ ಬೇರೆ ಇನ್ನೇನು ಬೇಕು. ಆ ಹೆಣ್ಣಿನ ಜೀವನಕ್ಕೆ ಅದುವೇ ಸಂತೃಪ್ತಿಯ ಪರಮಪದವಾಗಿರುತ್ತದೆ.

                        ಮಡದೀಯ ಬಡಿದಾನ ಮನದಾಗ ಮರುಗ್ಯಾನ |

                        ಒಳಗ್ಹೋಗಿ ಸೆರಗ ಹಿಡಿಯೂತ | ಕೇಳ್ಯಾನ |

                        ನಾ ಹೆಚ್ಚೋ ನಿನ್ನ ತವರೆಚ್ಚೊ ||

ಕೋಪದಿಂದ ಮಡದಿಯನ್ನು ದಂಡಿಸಿದ ಗಂಡ ಹೆಚ್ಚು ಹೊತ್ತು ಅದೇ ಸ್ಥಿತಿಯಲ್ಲಿ ಇರಲಾರ. ತನ್ನ ತಪ್ಪಿನ ಅರಿವಾಗಿ ಮನದಲ್ಲಿ ಮರುಗಿದ್ದಾನೆ. ತಾನು ದುಡುಕಿ ಆಕೆಯ ಮೇಲೆ ಕೈ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾನೆ. ಅದಕ್ಕಾಗಿ ಒಳಗೋಗಿ ಕರುಣೆಯಿಂದ ಆಕೆಯ ಸೆರಗ ಹಿಡಿದು ನಾ ಹೆಚ್ಚೊ ನಿನಗೆ ನಿನ್ನ ತವರ್ಹೆಚ್ಚೋ ಎಂದು ಕೇಳುತ್ತ ಅವಳ ಮನವನ್ನು ಆ ದುಃಖದ ಸನ್ನಿವೇಶದಿಂದ ಹೊರತರಲು ಪ್ರಯತ್ನಿಸುತ್ತಾನೆ. ಈ ಗುಣವೇ ಜನಪದ ಗೀತೆಗಳಿಗೆ ಬಹು ಎತ್ತರದ ಸ್ಥಾನವನ್ನು ಕಲ್ಪಿಸಿದೆ. ಪರಿಸ್ಥಿತಿಗೆ ಕಟ್ಟುಬಿದ್ದು ತಪ್ಪು ಮಾಡಿದರೂ ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಳ್ಳುವ ಹಾಗೂ ವಿಷಮ ಪರಿಸ್ಥಿತಿಯನ್ನು ತಿಳಿ ಮಾಡುವ ಪ್ರಬುದ್ಧ ಮನಸ್ಥಿತಿ ಜನಪದ ಗೀತೆಗಳು ಕಟ್ಟಿಕೊಡುವ ಆದರ್ಶಯುತವಾದ ದಾಂಪತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಮುಂದುವರೆದು

                        ಗಂಡ ಹೆಂಡಿರ ಜಗಳ ಗಂಧ ತೀಡೀಧಾಂಗ |

                        ಲಿಂಗಕ ನೀರು ಎರೆಧಾಂಗ | ಹಿರಿ ಹೊಳೆಯ |

                        ಗಂಗವ್ವ ಸಾಗಿ ಹರಿಧಾಂಗ ||

ಎಂದಿದ್ದಾನೆ ಕವಿ. ಅಂದರೆ ಗಂಡ-ಹೆಂಡಿರ ನಡುವೆ ಉಂಟಾದ ವಿರಸ, ಮನಸ್ತಾಪಗಳು ಹೆಚ್ಚು ಸಮಯ ಉಳಿಯಲಾರವು. ಅವು ತಾತ್ಕಾಲಿಕವಷ್ಟೆ. ಅಲ್ಪ ಸಮಯದಲ್ಲಿಯೆ ಅವರಿಬ್ಬರು ತಮ್ಮ ಮುನಿಸು, ಸಿಟ್ಟು, ಸೆಡವುಗಳನ್ನು ಮರೆತು ಒಂದಾಗುವರು ಎನ್ನುತ್ತಾರೆ ಜನಪದರು. ಅದಕ್ಕಾಗಿಯೇ ಗಂಡ ಹೆಂಡಿರ ಜಗಳ ಎಂಬುದು ಗಂಧವನ್ನು ತೀಡಿದಂತೆ. ಲಿಂಗಕ್ಕೆ ನೀರನ್ನು ಎರೆದಂತೆ. ಹಿರಿ ಹೊಳೆಯ ಗಂಗವ್ವ ಸಾಗಿ ಹರಿದಂತೆ. ಇವೆಲ್ಲವು ಶುಭ ಸೂಚಕ ಹಾಗೂ ಒಳ್ಳೆಯ ಕಾರ್ಯಗಳು. ಹಾಗೆಯೇ ಗಂಡ ಹೆಂಡತಿ ಜಗಳವಾಡಿದರೆ ಅವರಲ್ಲಿ ದುಃಖ, ವಿರಸಕ್ಕಿಂತ ಸಂತೋಷ, ನಲಿವುಗಳು ಒಡಮೂಡುವುವು. ಸರಸಕ್ಕೆ ದಾರಿಯಾಗುವುದು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಬ್ಬರೂ ತಮ್ಮನ್ನು ತಾವು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಹಕಾರಿಯಾಗುವುದೆಂಬ ಮನಸ್ಥಿತಿ ಜನಪದರಲ್ಲಿರುವುದು ತಿಳಿಯುತ್ತದೆ.

                        ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ |

                        ಅಡಿಗೆ ಬಾಯೀಗೆ ರುಚಿಯಿಲ್ಲ | ಹಡೆದವ್ವ |

                        ಮಡದಿ ತವರೀಗೆ ಹೋಗ್ಯಾಳ ||

ಮಡದಿ ಏನಾದರೂ ತವರಿಗೆ ಹೋದರೆ ಆ ಪತಿಯ ಸ್ಥಿತಿ ಹೇಳತೀರದು. ಆತನ ಮನಸ್ಸು ಗಲಿಬಿಲಿಗೊಳ್ಳುತ್ತದೆ. ಅಡಗೀಯ ಮನೆಯಲ್ಲಿ ಮಡದಿಯ ಸುಳಿವಿಲ್ಲದಿರುವ ಕಾರಣವಾಗಿ ಮಾಡಿದ ಅಡುಗೆ ಬಾಯಿಗೆ ರುಚಿಸುತ್ತಿಲ್ಲ. ಏಕೆಂದರೆ ಹೆಂಡತಿ ತವರಿಗೆ ಹೋಗಿದ್ದಾಳೆ. ಈ ಸಂಗತಿಗಳೆಲ್ಲವು ಅವರ ದಾಂಪತ್ಯದ ಮಧುರ ಕ್ಷಣಗಳನ್ನು ತಿಳಿಸಿಕೊಡುತ್ತವೆ. ಎಷ್ಟೆ ಕಷ್ಟ, ನಷ್ಟಗಳಿದ್ದರೂ ಅವರ ಜೀವನ ಪ್ರೀತಿಯ ಮುಂದೆ ಅವುಗಳಿಗೆ ಮಹತ್ವವಿಲ್ಲ.

            ಇಂತಹ ದಾಂಪತ್ಯ ಜೀವನದಲ್ಲಿ ಏರುಪೇರುಗಳು ಸಹಜ. ಪ್ರೀತಿ, ವಿಶ್ವಾಸ, ಜಗಳ, ವಿರಸಗಳಂತೆಯೇ ಕೆಲವೊಮ್ಮೆ ಗಂಡು ತನ್ನ ನೈತಿಕ ಚೌಕಟ್ಟನ್ನು ಮೀರಿ ನಡೆಯುವುದೂ ಉಂಟು. ಅಂತಹ ಸಮಯದಲ್ಲಿ ತನ್ನ ಪತ್ನಿಯಲ್ಲದೆ, ಬೇರೊಂದು ಹೆಣ್ಣಿನ ಗೆಳೆತನವನ್ನೂ ಮಾಡುವುದುಂಟು. ಈ ಕಾರಣವಾಗಿ ಗಂಡ-ಹೆಂಡಿರ ನಡುವೆ ಜಗಳಗಳು ನಡೆದು, ಕೊನೆಗೆ ಹೆಣ್ಣೆ ತನ್ನ ಸುಖಗಳನ್ನು ತ್ಯಾಗ ಮಾಡಿ ಅದನ್ನು ಮೌನದಿಂದ ಅನುಭವಿಸುವುದೂ ಕಂಡುಬರುತ್ತದೆ.

                        ಚಿಂತಾಕ ಆಕಿಕೊಂಡು ಸಂತೆಗೋಗೋ ಜಾಣೆ

                        ಚಿಂತಿಲ್ಲವೇನೆ ಮನೆಯಾಗೆ | ನಿನಪುರುಸ

                        ಮತ್ತೊಬ್ಬ ರಾಣಿ ಕೂಡ್ಯವನೆ ||

ಯಾವ ಹೆಣ್ಣಾದರೂ ಕೂಡ ತನ್ನ ಪತಿ ಮತ್ತೊಬ್ಬಳೊಂದಿಗೆ ಸಲುಗೆ ಬೆಳೆಸಿದ್ದಾನೆ ಎಂಬ ಸಂಗತಿ ತಿಳಿದ ತಕ್ಷಣ ಮಾನಸಿಕವಾಗಿ ಗಲಿಬಿಲಿಗಳಿಗೆ ಒಳಗಾಗುವುದು ಸಹಜ. ಗಂಡನ ವರ್ತನೆಗಳಿಂದ ಅನುಮಾನಗಳು ಕಾಡಲಾರಂಭಿಸುತ್ತವೆ. ಅಲ್ಲದೆ ನೆರೆಹೊರೆಯವರು ನಿನ್ನ ಗಂಡ ಮತ್ತೊಬ್ಬಳೊಂದಿಗೆ ಕೂಡಿದ್ದಾನೆ ಎಂದಾಗ ಸಹಜವಾಗಿಯೇ ದುಃಖಕ್ಕೆ ಒಳಗಾಗುವಳು. ಮಾನಸಿಕವಾಗಿ ಕುಗ್ಗಿ ಚಿಂತಾಕ್ರಾಂತಳಾದರೂ ಅದರಿಂದ ಹೊರಬಂದು ಪ್ರೌಢ ಮನಸ್ಥಿತಿಯನ್ನು ವ್ಯಕ್ತಪಡಿಸುವುದು ಕಂಡುಬರುತ್ತದೆ. ಏಕೆಂದರೆ ಆಕೆ ಅದೇ ಚಿಂತೆಯಲ್ಲಿ ಉಳಿಯಲು ಸಾದ್ಯವಿಲ್ಲ. ಅಲ್ಲದೆ ನೆರೆ ಹೊರೆಯವರ ಚುಚ್ಚು ಮಾತುಗಳನ್ನು ಎದುರಿಸಿ ಮುನ್ನಡೆಯಬೇಕಾಗಿದೆ. ಅದಕ್ಕಾಗಿ

                        ಮತ್ತೊಬ್ಬ ರಾಣಿ ಕೂಟೆ ನಕ್ಕರೆ ನಗಲೇಳಿ

                        ಚಿಕ್ಕ ಚಿಕ್ಕ ಪ್ರಾಯದಾಗೆ | ರಾಯರ

                        ನಾನ್ಮೆಚ್ಚಿ ನನ್ನ ಮನ ಮೆಚ್ಚಿ |

ಮತ್ತೊಬ್ಬ ರಾಣಿಯ ಜೊತೆ ಸೇರಿ ನಕ್ಕರೆ ನಗಲಿ. ಆತನ ಸಂತೋಷವೇ ನನಗೆ ಮುಖ್ಯ. ಅಲ್ಲದೆ ಚಿಕ್ಕ ಪ್ರಾಯದವನಾದ ನನ್ನ ರಾಯನನ್ನು ನಾನು ಮೆಚ್ಚಿದಂತೆ ಆಕೆಯೂ ಮೆಚ್ಚಿದ್ದಾಳೆ. ಮೆಚ್ಚಿ ಇಬ್ಬರೂ ಸುಖಿಸಲಿ ಎನ್ನುವ ಮೂಲಕ ತನ್ನ ವಿಶಾಲ ಮನಸ್ಥಿತಿಯನ್ನು ಹೊರ ಹಾಕುತ್ತಾಳೆ. ತನ್ನ ಗಂಡ ಬೇರೆ ಹೆಣ್ಣಿನೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಸಿಟ್ಟು, ಕೋಪ, ಮತ್ಸರಗಳನ್ನಾಗಲಿ ತೋರಗೊಡದೆ ಅವನ ಸಂತೋಷವನ್ನು ಬಯಸುತ್ತಾಳೆ. ಆ ಮೂಲಕ ತನ್ನ ದಾಂಪತ್ಯ ಜೀವನ ಬಿರುಕು ಬಿಡದಂತೆ ನೋಡಿಕೊಳ್ಳುವ ಗುಣ ಚರ್ಚಾರ್ಹವಾದುದು. ಇಲ್ಲಿ ಮನೋ ಸಹಜವಾದ ಕೋಪಾವೇಶಗಳಿಗೆ ಒಳಗಾಗದೆ ಆಕೆ ತಾಳ್ಮೆಯಿಂದ ವರ್ತಿಸುವುದನ್ನು ಕಾಣಬಹುದು.

                        ನಾನ್ಮೆಚ್ಚಿ ನನ್ನ ಮನ ಮೆಚ್ಚಿ ಮುಡಿದೂವಾ

                        ಯಾವ ರಾಣೀನಾ ಮುಡಿಲೇಳಿ | ರಾಯರು

                        ಮತ್ತೊಬ್ಬ ರಾಣಿ ಕೂಟೆ ನಗಲೇಳಿ ||

ಗಂಡನ ಅನ್ಯ ಸಂಬಂಧವನ್ನು ಮನ್ನಿಸುವ ಗುಣ ಆಕೆಯ ತಾಳ್ಮೆಯ ಮನಸ್ಥಿತಿಯನ್ನು ತಿಳಿಸಿಕೊಡುತ್ತದೆ. ನಾನು ಮೆಚ್ಚಿದ ಹಾಗೂ ಮೆಚ್ಚಿ ಮುಡಿದುಕೊಂಡ ಹೂವನ್ನು ಮತ್ತೊಬ್ಬಳು ರಾಣಿ ಕೂಡ ಮುಡಿಯಲಿ. ರಾಯರು ಮತ್ತೊಬ್ಬ ರಾಣಿಯ ಜೊತೆ ನಗಲಿ. ಆತನ ಸುಖ, ಸಂತೋಷಗಳೇ ಮುಖ್ಯ ಎಂದು ಆತನ ತಪ್ಪುಗಳನ್ನು ಮನ್ನಿಸುವ ವಿಶಾಲ ಮನಸ್ಥಿತಿಯನ್ನು ಕಾಣಬಹುದು.

            ಜನಪದ ಹೆಣ್ಣು ಮಗಳು ತನ್ನ ಮನೆಯ ಬಡತನಕ್ಕೆ, ಕಷ್ಟಗಳಿಗೆ ಎಂದಿಗೂ ಎದೆ ಗುಂದಿದವಳಲ್ಲ. ತನ್ನ ಗಂಡ ಬಡವನಾದರೂ ಅದಕ್ಕೆ ತಲೆಕೆಡಿಸಿಕೊಂಡವಳಲ್ಲ. ಅವನೇ ಅವಳಿಗೆ ಸರ್ವಸ್ವ, ಸಂಪತ್ತು.

                        ಕೂಲಿ ಮಾಡಿದರೇನ ಕೋರಿ ಹೊತ್ತರೇನ |

                        ನಮಗ ನಮರಾಯ ಬಡವೇನ | ಬಂಗಾರ |

                        ಮಾಲು ಇದ್ದಾಂಗ ಮನಿಯಾಗ ||

ತನ್ನ ಗಂಡ ಕೂಲಿ ಮಾಡಿದರೂ, ಮತ್ತೊಬ್ಬರ ಮನೆಯ ಕೋರಿ ಹೊತ್ತರೂ ಆಕೆಗೆ ಬಾಧೆಯಿಲ್ಲ. ಏಕೆಂದರೆ ತನ್ನ ಪತಿ ಕಷ್ಟಪಟ್ಟು ದುಡಿದು ತನ್ನನ್ನು ಸಾಕುತ್ತಿದ್ದಾನೆಂಬ ಸ್ವಾಭಿಮಾನ ಆಕೆಗಿದೆ. ಆತ ಸುಳ್ಳನಲ್ಲ, ಕಳ್ಳತನದಿಂದ ತನ್ನನ್ನು ಸಾಕದೆ ಬೆವರು ಸುರಿಸಿ ಕೂಲಿ ಮಾಡಿದರೂ ಪ್ರಾಮಾಣಿಕತೆಯಿಂದ ಬದುಕುತ್ತಿರುವ ಕಾರಣವಾಗಿ ಆಕೆಗೆ ತನ್ನ ಗಂಡನ ಬಗೆಗೆ ಹೆಮ್ಮೆ ಇದೆ. ಈ ಕಾರಣವಾಗಿ ಆತ ಬಡವನಲ್ಲ. ಸದ್ಗುಣಗಳ ಗಣಿ. ಆತ ಮನೆಗೆ ಬಂಗಾರದ ಮಾಲು ಇದ್ದಂತೆ ಎಂದು ತಾನು ಸಮಾಧಾನಪಟ್ಟುಕೊಂಡು ಜೀವನ ಸಾಗಿಸುವುದು ತಿಳಿಯುತ್ತದೆ.

ಉಪಸಂಹಾರ

            ಆದರ್ಶ ದಾಂಪತ್ಯದ ಅದ್ಭುತ ರಸಕ್ಷಣಗಳು ಜನಪದ ಗೀತೆಗಳಲ್ಲಿದ್ದು, ಎಂದಿಗೂ ಅವುಗಳು ಪತಿ ಪತ್ನಿಯರನ್ನು ಬೇರೆ ಮಾಡಲು ಬಯಸುವುದಿಲ್ಲ. ಸಾಂಗಿಕ ಜೀವನದ ಮೂಲಕ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬೇಕೆಂಬುದೇ ಅವುಗಳ ಬಹುಮುಖ್ಯವಾದ ಆಶಯವಾಗಿದೆ. ಆ ಕಾರಣವಾಗಿಯೇ ಬಡತನ, ಹಸಿವು, ಸಂಕಟಗಳಿದ್ದಾಗ್ಯೂ ಕೂಡ ಸಂಬಂಧಗಳನ್ನು ವಿಘಟಿಸಿಕೊಳ್ಳಲು ಬಯಸುವುದಿಲ್ಲ. ಕಷ್ಟದಲ್ಲಿಯೇ ಸುಖ, ಶಾಂತಿ, ನೆಮ್ಮದಿಯ ಸವಿಯನ್ನು ಹುಡುಕಲು ಪ್ರೇರೇಪಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಗಳ ಬೆಸೆಯುವಿಕೆ ಹಾಗೂ ಅವುಗಳನ್ನು ಗಟ್ಟಿಗೊಳಿಸುವಿಕೆಯ ಕಾರಣವಾಗಿ ಜನಪದ ಗೀತೆಗಳು ಸದಾ ತಮ್ಮ ಪ್ರಸ್ತುತತೆಯನ್ನು ಕಾಯ್ದುಕೊಂಡಿವೆ. ವ್ಯಷ್ಟಿ ಹಿತಕ್ಕಿಂತ ಸಮಷ್ಟಿ ಹಿತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ಜನಪದ ಗೀತೆಗಳು ಆದರ್ಶ ದಾಂಪತ್ಯದ ಸುಂದರ ಚಿತ್ರಣಗಳನ್ನು ಒಡಮೂಡಿಸಿವೆ.

ಪರಾಮರ್ಶನ ಗ್ರಂಥಗಳು.

  1. ಗುರುಮೂರ್ತಿ.ಕೆ.ಜಿ, ಜಾನಪದ ರೀತಿ ನೀತಿಗಳು, 2012, ಸ್ನೇಹಾ ಪಬ್ಲಿಷಿಂಗ್ ಹೌಸ್, ನಂ.138, 7ನೇ ‘ಸಿ’ ಮುಖ್ಯರಸ್ತೆ, ಹಂಪಿ ನಗರ, ಬೆಂಗಳೂರು-560104.
  2. ಗೌರೀಶ.ಪಿ (ಸಂ), ಜಾನಪದ, 2011, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.
  3. ಪರಮಶಿವಯ್ಯ.ಜೀ.ಶಂ, ಜನಪದ ಸಾಹಿತ್ಯ ಸಮೀಕ್ಷೆ, 2015, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018.
  4. ಸಿದ್ಧರಾಮಯ್ಯ.ಎಸ್.ಜಿ, ಸಂಧ್ಯಾರೆಡ್ಡಿ.ಕೆ.ಆರ್ (ಸಂ), ಸುವರ್ಣ ಜನಪದ ಕಾವ್ಯ, 2006, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002.
  5. ಹೆಬ್ಬಾಲೆ ಕೆ.ನಾಗೇಶ್ (ಸಂ), ಜಾನಪದ ಕರ್ನಾಟಕ, ಸಂಪುಟ-5, ಸಂಚಿಕೆ-2, ಜುಲೈ-ಡಿಸೆಂಬರ್ 2006, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  6. ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು (ಸಂಗ್ರಾಹಕರು), ಗರತಿಯ ಹಾಡು, 2012, ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ-01.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal