ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮದ ಸ್ವರೂಪ
ಡಾ. ಸುನೀತ ಬಿ.ವಿ.
ಸಹಾಯಕ ಪ್ರಾಧ್ಯಾಪಕರು,
ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ
ಸಾರಲೇಖ
ಹೊನ್ನಮ್ಮ ಸ್ತ್ರೀ ಧರ್ಮ ಹಾಗೂ ದಾಂಪತ್ಯ ಧರ್ಮವನ್ನು ಹೆಣ್ಣಿನ ಜೀವನದ ಅಡಿಯಲ್ಲಿಟ್ಟು ನೋಡಿರುವುದರಿಂದ ಮುಂದೆ ಆಶ್ರಮ ಧರ್ಮವನ್ನು ಹೆಣ್ಣಿನ ಜೀವನಕ್ಕೆ ಒಪ್ಪಿಸಿಕೊಳ್ಳುತ್ತಾಳೆ. ಆದರೆ ಹೊನ್ನಮ್ಮ ದಾಂಪತ್ಯ ಜೀವನಕ್ಕೆ ಒತ್ತುಕೊಡುವುದರ ಹಿಂದೆ, ಹೆಣ್ಣಿನ ವಿವಾಹ ವೈದಿಕ ಸಂಸ್ಕೃತಿಯಲ್ಲಿ ಕಡ್ಡಾಯವಾಗಿತ್ತೆನ್ನುವ ಎಚ್ಚರಿಕೆಯಿಂದ ಕಾವ್ಯದಲ್ಲಿ ವಿವರಿಸಿದ್ದಾಳೆ. ವೈದಿಕ ಧರ್ಮವು ಕೇವಲ ಮತವಾಗದೆ, ಒಂದು ಜೀವನ ಶೈಲಿಯಾಗಿ ಸ್ವರೂಪ ಪಡೆದುಕೊಂಡು ಬಂದಿದೆ. ಹೀಗೆ ವೈದಿಕ ಸಂಸ್ಕೃತಿ ರೂಪಿಸದ ಹೆಣ್ಣಿನ ಜೀವನ ವಿಧಾನವೇ ಹೊನ್ನಮ್ಮನ ಕೃತಿಯಲ್ಲಿ ತಾತ್ವಿಕ ನೆಲೆಯಲ್ಲಿ ನಿರೂಪಿತವಾಗಿದೆ. ಹೆಣ್ಣಿನ ಸಮಾಜಿಕ ಜೀವನದಲ್ಲಿನ ಪರಂಪರಾಗತ ಮೌಲ್ಯಗಳನ್ನೊಳಗೊಂಡ ಕೃತಿಯಾಗಿ, ಹೆಣ್ಣಿನ ಜೀವನದ ರೀತಿ-ನೀತಿಗಳು, ಆಚಾರ-ವಿಚಾರಗಳು, ನಡುವಳಿಕೆ ಮುಂತಾವುಗಳನ್ನು ನೀತಿ ಮೌಲ್ಯಗಳ ವೇದಿಕೆಯಲ್ಲಿ ಹದಿಬದೆಯ ‘ಧರ್ಮ’ವನ್ನು ಹೊನ್ನಮ್ಮ ಬೋಧಿಸಿದ್ದಾಳೆ. ಇಂತಹ ವಿವರಗಳು ಹೊನ್ನಮ್ಮನ ಸ್ವವಿಚಾರಧಾರೆಯಾಗಿರದೆ ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಾಗಿರುವ ‘ಪತಿವ್ರತ ಧರ್ಮಾ’ಚರಣೆಯನ್ನು ಹೇಳಿದ್ದೇನೆಂದು ಒಪ್ಪಕೊಂಡಿದ್ದಾಳೆ.
ಪ್ರಮುಖ ಪದಗಳು: ಹದಿಬದೆಯ ಧರ್ಮದ ಸ್ವರೂಪ, ಪುರಾಣ ಕಥನ, ಪರಂಪರೆ, ಮಹಿಳೆಯ ಆಶಯಗಳು
ಪೀಠಿಕೆ
ನಮ್ಮ ಸಮಾಜವನ್ನು ಸಂಪೂರ್ಣವಾಗಿ ಆವರಿಸಿರುವುದು ಪುರಾಣ ಕಥನಗಳು, ಮಹಾಕಾವ್ಯಗಳು. ಇಂತಹ ಪರಂಪರೆಯಲ್ಲಿ ಮಹಿಳೆಯ ಆಶಯಗಳು ಪುರುಷ ಸಮಾಜದ ಭೂಮಿಕೆಯ ಮೇಲೆ ವ್ಯಕ್ತವಾಗಿವೆ. ಸಮಕಾಲೀನ ಘಟನೆಗಳನ್ನು ಆಧರಿಸಿ, ಸ್ತ್ರೀಯರಿಗೆ ಎದುರಾಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ವಸ್ತುನಿಷ್ಟವಾಗಿ ಹೇಳುವ ಕಾವ್ಯವಾಗಿ ಹದಿಬದೆಯ ಧರ್ಮ ಹೊರಟಿಲ್ಲ. ಸ್ತ್ರೀ ಬದುಕನ್ನು ಕುರಿತ ಸಂಪ್ರದಾಯಿಕ ಸಮಾಜದ ಅರಿವಿನ ಆಯಾಮದಲ್ಲಿನ ನಿಜಸ್ಥಿತಿಯನ್ನು ದಾಖಲಿಸುವ ಒಂದು ಕಾವ್ಯವಾಗಿದೆ. ಸಂಪ್ರದಾಯದ ವಸ್ತುನಿಷ್ಟ ವಿಷಯವಾಗಿ ಹೆಣ್ಣಿನ ಅಂತಃಕರಣದ ಹಾಗೂ ಸಮಾನತೆಯ ವಾದಗಳನ್ನು ಮೀರಿದ ಅದುವರೆಗಿನ ಸಮಾಜ ಒಪ್ಪಿತ ಮೌಲ್ಯಗಳನ್ನು ಒಳಗೊಂಡ ನೀತಿಕಾವ್ಯ. ನೀತಿಕಾವ್ಯಗಳಂತೆ ರಚನೆಯಲ್ಲಿ ಧರ್ಮ ಮತ್ತು ತತ್ವಗಳ ಮೂಲ ಉದ್ದೇಶವನ್ನೊಳಗೊಂಡ ಪರಂಪರೆಯ ಸಿದ್ಧ ಬಿಂಬಗಳಿವೆ. ಇವು ಸಂಪ್ರದಾಯ ವ್ಯವಸ್ಥೆಯಲ್ಲಿನ ಸಮಗ್ರ ಸಮಾಜದ ಸುಖಕ್ಕಾಗಿ ಎಂದು ರೂಪಿಸಿಟ್ಟ ಕಟ್ಟುನಿಟ್ಟಿನ ಸಿದ್ಧ ಮಾದರಿಗಳು. ಈ ಕಟ್ಟುಗಳ ಸಮೂಹಲ್ಲಿ ಹೆಣ್ಣಿನ ಬದುಕನ್ನು ನೀತಿ ವ್ಯಾಪ್ತಿಯಲ್ಲಿಟ್ಟು ನೋಡುವ ಉದ್ದೇಶ ಹೊನ್ನಮ್ಮನಿಗಿದೆ. “ಸಾಮಾನ್ಯ ಅರ್ಥದಲ್ಲಿ ನೀತಿಯ ಅರ್ಥ ಒಳ್ಳೆಯ ಬಗೆ, ಒಳ್ಳೆಯ ಆಚರಣೆ, ಒಳ್ಳೆಯ ನಡವಳಿಕೆ, ನ್ಯಾಯ, ಮಾರ್ಗದರ್ಶನ, ಜಾಣ್ಮೆ, ಒಯ್ಯುವಿಕೆ, ತತ್ತ್ವಜ್ಞಾನ, ಧರ್ಮಶಾಸ್ತ್ರ, ರಾಜಕಾರಣ, ಆಡಳಿತ ಧೋರಣೆ”.1 ಹದಿಬದೆಯ ಧರ್ಮದಲ್ಲಿ ನೀತಿ ನೆಲೆಯಲ್ಲಿ ಕರುಣೆ, ದಯೆ, ಸಹಾನುಭೂತಿ, ಸಹಿಷ್ಣುತೆ, ತ್ಯಾಗ ಮುಂತಾದ ಹೆಣ್ಣಿನ (ಸಾಧ್ವಿಯ) ಸದ್ಗುಣಗಳ ಪತಿವ್ರತಾ ಧರ್ಮದ ಮೌಲ್ಯಗಳ ಮಜಲುಗಳಲ್ಲಿ ನಿರೂಪಣೆಗೊಂಡಿದ್ದಾಳೆ. ಹೊನ್ನಮ್ಮ “ಧರ್ಮಶಾಸ್ತ್ರಪುರಾಣ-ಇತಿಹಾಸಗಳ ಮೂಲಕ ಪಿತೃಮೂಲೀಯ ತನ್ನದಲ್ಲದ ಮಾದರಿಗಳನ್ನು ತನ್ನದೆಂದು ಭಾವಿಸಿ ಅವುಗಳ ಪಾಲನೆಯಲ್ಲಿಯೇ ಸುಖವಾಗಿದ್ದೇನೆಂದು ಭ್ರಮಿಸಿದ್ದಾಳೆ. ಸಂಚಿಹೊನ್ನಮ್ಮ ಭಾರತೀಯ ಪಿತೃಮೂಲೀಯ ಕುತಂತ್ರಗಳನ್ನು ಅರಿತು-ಅರಿಯದ ಕವಿಯಿತ್ರಿ”2.
ವೈದಿಕ ಸಮಾಜದ ಸ್ವರೂಪ ತುಂಬಾ ಸಂಕೀರ್ಣವಾಗಿರುವಂತಹದ್ದು. ವೈದಿಕ ಸಮಾಜ ಜೀವನ ನಂಬಿಕೆಗಳು, ಧಾರ್ಮಿಕ ವಿಚಾರಗಳು ಹಾಗೂ ನೈತಿಕತೆ ಒಳಗೊಂಡ ವಿಭಿನ್ನ ಮೌಲ್ಯಗಳು, ಆದರ್ಶಗಳು ಆಚರಣೆಗಳಿಂದ ಬೆಳೆದುಬಂದಿವೆ. ವೈದಿಕ ಧರ್ಮವು ಕೇವಲ ಮತವಾಗದೆ, ಒಂದು ಜೀವನ ಶೈಲಿಯಾಗಿ ಸ್ವರೂಪ ಪಡೆದುಕೊಂಡು ಬಂದಿದೆ. ಹೀಗೆ ವೈದಿಕ ಸಂಸ್ಕೃತಿ ರೂಪಿಸದ ಹೆಣ್ಣಿನ ಜೀವನ ವಿಧಾನವೇ ಹೊನ್ನಮ್ಮನ ಕೃತಿಯಲ್ಲಿ ತಾತ್ವಿಕ ನೆಲೆಯಲ್ಲಿ ನಿರೂಪಿತವಾಗಿದೆ. ಹೆಣ್ಣಿನ ಸಮಾಜಿಕ ಜೀವನದಲ್ಲಿನ ಪರಂಪರಾಗತ ಮೌಲ್ಯಗಳನ್ನೊಳಗೊಂಡ ಕೃತಿಯಾಗಿ, ಹೆಣ್ಣಿನ ಜೀವನದ ರೀತಿ-ನೀತಿಗಳು, ಆಚಾರ-ವಿಚಾರಗಳು, ನಡುವಳಿಕೆ ಮುಂತಾವುಗಳನ್ನು ನೀತಿ ಮೌಲ್ಯಗಳ ವೇದಿಕೆಯಲ್ಲಿ ಹದಿಬದೆಯ ‘ಧರ್ಮ’ವನ್ನು ಹೊನ್ನಮ್ಮ ಬೋಧಿಸಿದ್ದಾಳೆ.
“ಧರ್ಮದ ತನಿಗಂಪು ತಲೆದೋರೆ ಕಾವ್ಯದ
ಪೆರ್ಚು ಬೇರ್ವರಿದು ಬಿತ್ತರಿಸೆ
ನಿರ್ಮಲ ಸತಿಯರ ಧರ್ಮವ ವೃತ್ತಿಯಾಗಿ
ನಿರ್ಮಿಸಿ ನೆಗಳಿಪನಿಂದು.”
(ಡಿ. ಚಂಪಾಬಾಯಿ(ಸಂ), ಹದಿಬದೆಯ ಧರ್ಮ, ಸಂಧಿ-1, ಪದ್ಯ-48 ಪುಟ-10)
ಇಡೀ ಕಾವ್ಯ ಮಹಿಳಾ ಸಮುದಾಯಕ್ಕೆ ಬದುಕಿನ ನೀತಿ ಮೌಲ್ಯಗಳ ಆಭಿವ್ಯಕ್ತಿಯಲ್ಲಿ ‘ಧರ್ಮದ ತನಿಗಿಂಪು’ ಆಗಿ ‘ಸತಿಯರ ಧರ್ಮವ ವೃತ್ತಿಯಾಗಿ, ನಿರ್ಮಿಸಿ’ ತನ್ನದೇ ಆದ ಜವದ್ದಾರಿ ವಹಿಸಿದ್ದಾಳೆ. ಹೊನ್ನಮ್ಮ ಹೇಳುವ ಈ ಮೌಲ್ಯಗಳು ಅತೀ ಪ್ರಾಚೀನ ಕಾಲದಿಂದ ಬೆಳೆದು ಬಂದವುಗಳಾಗಿವೆ.
“ಬಲ್ಲರಿಂದಾನು ಕೇಲಿದುದಕೆ ಪೇರ್ಚು ಕುಂ
ದಿಲ್ಲದಂತೆಚ್ಚರುಗೂಡಿ
ಎಲ್ಲರುಮರಿವಂತೆಳವಾತುಗಳಿಂದ
ಸೊಲ್ಲಿಸುವೆನು ಸೊಗಸುವೊಲು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-49, ಪುಟ-11)
ಪರಂಪರೆಯಿಂದ ಹರಿದು ಬಂದ ಮೌಲ್ಯಗಳು ಧರ್ಮದ ತಳಹದಿ ಹೊಂದವೆ. ಇಂತಹ ಪರಂಪರಾಗತ ಮೌಲ್ಯಗಳ ಕುರಿತು ಹೇಳುವಲ್ಲಿ ‘ಬಲ್ಲರಿಂದಾನು ಕೇಲಿದುದಕೆ ಪೇರ್ಚು ಕುಂದಿಲ್ಲದಂತೆ’ ವಿಶೇಷ ಎಚ್ಚಕೆವಹಿಸಿದ್ದಾಳೆ.
“ಎಂದ ನುಡಿಯ ರಾಯನುಮರಸಿತರುಮಾ
ನಂದವಡೆದು ಬಗೆಗೊಳಿಸೆ
ಸಂತ ಸತೀಧರ್ಮವನು ಸಾಹಿತ್ಯದೊ
ಳೊಂದುಗೊಳಿಸಿ ಪೇಳಿದೆನು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-50 ಪುಟ-11)
‘ಬಲ್ಲರಿಂದಾನು’, ಧರ್ಮ ಸೂಕ್ಷ್ಮವರಿತ ನಂತರವೇ ಕೃತಿ ರಚನೆಗೆ ‘ರಾಯನುಮರಸಿತರುಮಾನಂದವಡೆದು’ ಒಪ್ಪಿಗೆಯೂ ದೊರೆಯುವುದು. ಹೀಗೆ ಸನಾತನ ಧರ್ಮ ಸಂಸ್ಕೃತಿಯ ಮೌಲ್ಯಗಳನ್ನು ಅಧ್ಯಯದ ನಂತರ ಎಲ್ಲವನ್ನು ಸಂಗ್ರಹಿಸಿ ಪ್ರಸಿದ್ಧವಾದ ಹದಿಬದೆಯ ಧರ್ಮ ಕೃತಿ ಕೃತಿಯಲ್ಲಿ ಸಂಗ್ರಹಿಸಿ ಹೇಳಿದ್ದಾಳೆ.
“ಆದಿಕಾವ್ಯದೊಳೈದನೆ ವೇದದೊಳುಮ
ನ್ವಾದಿಕ ಧರ್ಮಶಾಸ್ತ್ರದೊಳು
ಭೇದಿಸಿ ಪಿರಿಯರು ಪೇಳಿದುದನೆ ಕೃತಿ
ಗೈದಾನು ಕಿವಿಗೊಳಿಸಿದೆನು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-51 ಪುಟ-11)
‘ಬಲ್ಲರಿಂದ’, ‘ಆದಿಕಾವ್ಯ’, ‘ಐದನೆ ವೇದ’, ‘ಮನ್ವಾದಿಕ ಧರ್ಮಶಾಸ್ತ್ರ’ಗಳೊಳಗೊಂಡು ‘ಪಿರಿಯರು’ ಹೇಳಿರುವ ಆಕರಗಳಲ್ಲಿ ಮಹಿಳಾ ಸಮುದಾಯಕ್ಕೆ ರೂಪಿಸಿಟ್ಟ ಜೀವನ ಮೌಲ್ಯಗಳನ್ನು ಭೇದಿಸಿ, ಎಲ್ಲರ ಒಪ್ಪಿಗೆ ಪಡೆದ ನಂತರವೇ ಹೊನ್ನಮ್ಮ ಹೆಣ್ಣಿಗಾಗಿ ತನ್ನ ಕೃತಿಯಲ್ಲಿ ನೀತಿ ನಿರೂಪಿದ್ದಾಳೆ.
ವೈದಿಕ ಸಂಸ್ಕೃತಿಯಲ್ಲಿ “ಪೌರಾಣಿಕ ನೀತಿಯು ಅತ್ಯಂತ ಕ್ರಿಯಾಶೀಲವಾದುದು. ಫಲಪ್ರದವಾದುದು. ಅದು ಇಡೀ ಸಮಾಜದ ಕ್ಷೇಮಾಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿಗೆ ಜಾತಿ ಹಾಗೂ ಸಾಂಪ್ರದಾಯಿಕ ಕರ್ತವ್ಯಗಳನ್ನು ವಹಿಸಿಕೊಡುತ್ತದೆ. ವರ್ಣಾಶ್ರಮ ಧರ್ಮದ ಯೋಜನೆಯು ಈ ಉದ್ದೇಶವನ್ನು ದೃಷ್ಠಿಯಲ್ಲಿಟ್ಟುಕೊಂಡಿದೆ. ಇದು ವೇದ, ಬ್ರಾಹ್ಮಣ ಮತ್ತು ಉಪನಿಷದ್ ಸಾಹಿತ್ಯದಲ್ಲಿ ಹೇಳಿರುವ ನೈತಿಕ ತತ್ವಗಳ ಒಂದು ಸಂಶ್ಲಿಷ್ಟ ರೂಪ. ವೇದಗಳು ಒತ್ತಿ ಹೇಳುವ ಸತ್ಯ ಕರ್ತವ್ಯ ಮತ್ತು ಹಿರಿಯರಲ್ಲಿರುವ ಪೂಜ್ಯ ಭಾವಗಳನ್ನು ಪುರಾಣಗಳೂ ಒತ್ತಿಹೇಳುತ್ತವೆ. ಬ್ರಾಹ್ಮಣ ಸಾಹಿತ್ಯದಲ್ಲಿ ಹೇಳಿರುವ ಯಾಜ್ಞಿಕ ಪದ್ಧತಿ ವರ್ಣಾಶ್ರಮ ಧರ್ಮ ಪದ್ಧತಿಯಲ್ಲಿ ಅಡಕವಾಗಿದೆ. ಸೃಷ್ಟಿಯ ಎಲ್ಲ ಮಟ್ಟದ ಜೀವಿಗಳಲ್ಲಿಯೂ ಸಮಾನಭಾವ, ದಯೆ ಮತ್ತು ಪ್ರೇಮವನ್ನು ಪ್ರಚೋದಿಸುವುದಕ್ಕಾಗಿ ಉಪನಿಷದ್ ಕಲ್ಪನಾ ಮೂಲವಾದ ಚಿರಂತನಾದ ಆತ್ಮವನ್ನೇ ಇಲ್ಲಿಯೂ ಬಳಸಿಕೊಳ್ಳಲಾಗಿದೆ. ಅಲ್ಲದೆ ಪುರಾಣಗಳು ಬ್ರಾಹ್ಮಣ ಧರ್ಮದ ಮತಾಚಾರದಿಂದ ಕೂಡಿದ ನೀತಿ ಹಾಗೂ ಬೌದ್ಧ ಜೈನಧರ್ಮಗಳ ಚಾರಿತ್ರ್ಯ ನೀತಿಗಳ ಮಧ್ಯೆ ಪುನರ್ ಮೈತ್ರಿ ಸ್ಥಾಪಿಸಲು ಪ್ರಯತ್ನಪಡುತ್ತವೆ. ಸಾರ್ವಜನಿಕರ ಸಾಮಾನ್ಯವಾದ ಒಳಿತೇ ಪರಮಾದರ್ಶ ಹಾಗೂ ನಿಯಮ. ಇದಕ್ಕನುಗುಣವಾಗಿ ಗುಣ ನಿರ್ಧಾರವಾಗುತ್ತದೆ. ಕರ್ತವ್ಯ ಮತ್ತು ಜವಾಬ್ದಾರಿಗಳಿಂದ ಕೂಡಿದ ರೂಢಿ ಜೀವನವನ್ನು ಹೇಗೆ ನಡೆಸಬೇಕು, ಹೇಗೆ ಶಾಂತ ತೃಪ್ತ ಭಾವದಿಂದಿರಬೇಕು, ಚಿತ್ತ ಶಾಂತಿಯನ್ನು ಗಳಿಸಿ ದೇವರೊಂದಿಗೆ ಒಂದಾಗಿರಬೇಕು-ಎಂಬುದನ್ನು ಪೌರಾಣಿಕ ನೀತಿ ತತ್ವ ಹೇಳುತ್ತದೆ”.3 ವೈದಿಕ ಸಮಾಜವು ತನ್ನ ಚರಿತ್ರೆಯ ಬೆಳವಣಿಗೆಯಲ್ಲಿ ನೀತಿಮೌಲ್ಯಗಳನ್ನು ಜೀವನ ಮೌಲ್ಯಗಳಾಗಿ ಪೋಷಿಸಿಕೊಂಡು ಬಂದಿರುವುದು ದಾರ್ಮಿಕ ನಂಬಿಕೆಗಳ ಹಿನ್ನೆಲೆಯಿಂದ. ಹೀಗಾಗಿ ಈ ಮೌಲ್ಯಗಳು ವೈದಿಕ ಸಾಮಾಜಿಕ-ಸಂಸ್ಕೃತಿಯ ಜೀವನದ ಮೇಲೆ ಪ್ರಬಲವಾದ ಪ್ರಭಾವ ಬೀರಿವೆ. ನೀತಿಶಾಸ್ತ್ರಗಳು ಜನಸಾಮಾನ್ಯರ ದೈನಂದಿನ ವರ್ತನೆಯನ್ನು ಬದುಕಿನುದ್ದಕ್ಕೂ ನಿರ್ದೇಶಿಸುತ್ತಾ ನೈತಿಕತೆಯ ಸ್ವರೂಪ ಪಡೆದುಕೊಂಡಿವೆ. ಈ ನೈತಿಕ ಪ್ರಜ್ಞೆಯಿಂದ ಹದಿಬದೆ ಅಥವಾ ಪಾತಿವ್ರತ್ಯ ಮೌಲ್ಯವು ಮನೋಧರ್ಮವಾಗಿ ರೂಪಗೊಂಡಿದೆ.
ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ಜೀವನ ವೇದಗಳ ಕಾಲದಿಂದಲೇ ಪ್ರಾರಂಭವಾಗುತ್ತದೆ. ವೇದಗಳಲ್ಲಿನ ನೀತಿಸಂಹಿತೆಗಳು ಇತಿಹಾಸ, ಸ್ಮೃತಿಗಳು ಹಾಗೂ ಪುರಾಣ ಕಾಲದವರೆಗೂ ಮುಂದುವರೆದುಕೊಂಡು ಬಂದಿವೆ. ಸ್ಮೃತಿಗಳು ಧರ್ಮಶಾಸ್ತ್ರಗಳಾಗಿ ನೀತಿ ಸಂಹಿತೆಗಳನ್ನು ರೂಪಿಸಿ ಭಾರತೀಯ ಸಾಮಾಜಿಕ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ. ವೇದ ಉಪನಿಷತ್ತಿನಲ್ಲಿನ ವಿಚಾರಗಳು ತತ್ವ ಹಾಗೂ ಉದೇಶಗಳ ಮೂಲಕ ಸರಳ ಪಾತ್ರಗಳಲ್ಲಿ ಹೇಳುವ ಪುರಾಣ ಕಾವ್ಯಗಳಾಗಿ ರಾಮಾಯಣ ಮಹಾಭಾರತಗಳು. ವೇದ, ಉಪನಿಷತ್ತು, ಮಹಾಕಾವ್ಯಗಳಲ್ಲಿ ಪ್ರತಿಪಾದಿತವಾಗಿರುವ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಹುಟ್ಟಿದವುಗಳು ಪುರಾಣಗಳು. ಇವುಗಳಲ್ಲಿ 18 ಪುರಾಣಗಳಿವೆ. ಹೊನ್ನಮ್ಮ ತನ್ನ ಹದಿಬದೆಯ ಧರ್ಮ ಪ್ರತಿಪಾದನೆಗಾಗಿ ಭಾಗವತ ಹಾಗೂ ವಿಷ್ಣು ಪುರಾಣಗಳನ್ನು ಸಹ ತನ್ನ ಕಾವ್ಯದಲ್ಲಿ ಆಕರಗಳಾಗಿ ಬಳಸಿಕೊಂಡಿದ್ದಾಳೆ. ‘ಪಾತಿವ್ರತ್ಯ ಧರ್ಮ’ದ ಮಹತ್ವವನ್ನು ಸಾರುವಲ್ಲಿ ಪುರಾಣ, ರಾಮಾಯಣ ಹಾಗೂ ಮಹಾಭಾರತದಲ್ಲಿ ಬರುವ ಸ್ತ್ರೀ ಪಾತ್ರಗಳಲ್ಲಿನ ಪಾತಿವ್ರತ್ಯಧರ್ಮ ಪಾಲನೆಯ ಮಹಿಮೆಯನ್ನು ಹೆಸರಿಸುತ್ತಾ ಸ್ತ್ರೀಯರ ಆದರ್ಶ ಹಾಗೂ ಮಾದರಿ ಪಾತ್ರಗಳಾಗಿ ಪ್ರಸ್ತಾಪಿಸಿಕೊಂಡಿದ್ದಾಳೆ.
“ಪತಿಯೆ ಪರಮಗುರು ಪತಿಯೇ ದೇವತೆ
ಪತಿಯೇ ಸದ್ಗತುಯೆಂದು
ಪತಿಯ ಪಾದಾಂಬುಜದೊಳು ಭಕ್ತಿಗೈವುದು
ಸತಿಯರ ಧರ್ಮದ ಸಾರ”
(ಸಂಚಿಯ ಹೊನ್ನಮ್ಮ ವಿರಚಿತ ಹದಿಬದೆಯ ಧರ್ಮ, ಸಂಧಿ-3, ಪದ್ಯ-4, ಪುಟ-29)
ಇಂತಹ ಪತಿಧರ್ಮವನ್ನು ಪಾಲಿಸುತ್ತಾ ಪತಿಯ ಸೇವೆಯಲ್ಲಿ ನಿರತರಾಗಿ ಪುರುಷಾರ್ಥವನ್ನು ಪಡೆಯಲು ಅರ್ಥ, ಕಾಮ, ಪತಿಯಲ್ಲಿಯೇ ಪರಮಾತ್ಮನನ್ನು ಕಾಣುವ ಮೂಲಕ ಮೋಕ್ಷವನ್ನು ಸಂಪಾದಿಸಿಕೊಳ್ಳುವುದು ಹೆಣ್ಣಿಗಿರುವ ಏಕೈಕ್ಯಮಾರ್ಗ. ಪುರುಷಾರ್ಥಗಳಿಗೆ ಹೊನ್ನಮ್ಮ ಕೊಡುವ ವಿವರÀವಾದ ನಿರೂಪಣೆ ನೋಡಿದರೆ ಹೆಣ್ಣಿಗೆ ಪರ್ಯಾಯ ಮಾರ್ಗಗಳೇ ಇಲ್ಲದಂತೆ ನಿರೂಪಿಸಿದ್ದಾಳೆ. ಮನೆವಾಳ್ತಿಯಾಗಿ ಗಂಡನ ಪಾದಸೇವೆಯ ಜೊತೆ ಜೀತದಾಳಾಗಿ ಅವನ ಸಂಸಾರ ನಿರ್ವಹಿಸುವುದರಿಂದ ಅದೇ ಅವಳ ಧರ್ಮವಾಗಿ, ಅವಳಿರುವ ಮನೆಯೇ ಧರ್ಮದ ನೆಲೆಯಾಗಿರುತ್ತದೆ. ಪತಿಯನ್ನು ಸದಾ ನೆನೆಯುತ್ತಿದ್ದರೆ ಅದೇ ಅವಳ ಪಾಲಿಗೆ ದೇವರಪೂಜೆಯಾಗುತ್ತದೆಂದು,
“ಹಿತವಿದು ಶಾಸ್ತ್ರವಿಹಿದು ಮನಕೆ ಸ
ಮ್ಮತಿವಿದೆಂದೆಂಬ ಮರ್ಮವನು
ಮತಿಯೊಳೆಣಿಸಿ ಮನದನ್ನನ ಸೇವೆಗು”
(ಸಂಚಿಯ ಹೊನ್ನಮ್ಮ ವಿರಚಿತ ಹದಿಬದೆಯ ಧರ್ಮ, ಸಂಧಿ-3, ಪದ್ಯ-20, ಪುಟ-33)
ಇದೇ ಹಿವಾಗಿರುವುದು, ಶಾಸ್ತ್ರಸಮ್ಮತವಾಗಿರುವ ಹಾಗೂ ಪತಿಯಾದವನ ಮನಸ್ಸಿಗೂ ಬೇಕಾಗಿರುವುದು ಎನ್ನುವ ಹೊನ್ನಮ್ಮ ಈ ಪತಿವ್ರತಾ ಧರ್ಮ ಆಚರಣೆ ಮಾಡುವ ಸತಿಗೂ ಶಾಸ್ತ್ರಗಳು ಸಮ್ಮತಿಸಿರುವ ಸ್ತ್ರೀ ಜೀವನ ರಹಸ್ಯಗಳೆಂದು ಹೇಳಿದ್ದಾಳೆ. ಇಂತಹ ವಿವರಗಳು ಹೊನ್ನಮ್ಮನ ಸ್ವವಿಚಾರಧಾರೆÉಯಾಗಿರದೆ ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖವಾಗಿರುವ ‘ಪತಿವ್ರತ ಧರ್ಮಾ’ಚರಣೆಯನ್ನು ಹೇಳಿದ್ದೇನೆಂದು ಒಪ್ಪಕೊಂಡಿದ್ದಾಳೆ. ಈ ವಿಚಾರವಾಗಿ ಮನುವಿನಲ್ಲಿ ಮತ್ತು ಮಹಾಭಾರತದಲ್ಲಿನ ನಿರೂಪಿತವಾಗಿರುವ ಪತಿಧರ್ಮದ ಆಚರಣೆಯನ್ನೇ ಹೊನ್ನಮ್ಮ ಇಲ್ಲಿ ಹೇಳಿದ್ದಾಳೆ.
“ವಿಶೀಲ ಕಾಮವೃತ್ತೋ ವಾ ಗುಣೈರ್ವಾ ಪರಿವರ್ಜಿತಃ|
ಉಪಚರ್ಯಃ ಸ್ತ್ರೀಯಾ ಸಾಧ್ಯಾ ಸತತಂ ದೇವವತ್ಪತಿಃ” ||(ಅ-5, ಶ್ಲೋ-154)
“ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನ ವ್ರತಂ ನಾಪ್ಯುಪೋಷಿತಂ|
ಪತಿಂ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹಿತೇ” || (ಅ-5, ಶ್ಲೋ-155)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಅನ್ಯಹೆಂಗಸರಲ್ಲಿ ಮನಸ್ಸಿಟ್ಟರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.
ಪತಿಯನ್ನು ಬಿಟ್ಟು ಸ್ತ್ರೀಗೆ ಇನ್ನಾವ ಬೇರೆ ಯಜ್ಞವೇ ಇಲ್ಲ. ಪತಿಸೇವೆಯನ್ನು ಬಿಟ್ಟು ಇನ್ನಾವ ವ್ರತವೂ ಇಲ್ಲ, ಉಪವಾಸವೂ ಇಲ್ಲ. ಪತಿವ್ರತಾಭಾವದಿಂದ ಪತಿಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗಲೋಕದಲ್ಲಿ ಗೌರವಪಡೆಯುತ್ತಾಳೆ” ಇದು ಮನು ನಿರೂಪಿಸುವ ಪತಿಧರ್ಮ ಆಚರಣೆಯಾದರೆ ಹೊನ್ನಮ್ಮನ ಮನುವಿನ ಅನುಕರಣೆ,
“ಪತಿಯೊಲವರಿತು, ಪತಿಯ ಸೇವೆಯೊಳಿದ್ದು
ಪತಿಯೊಳಿಗಗಳನೆಸಗಿ
ಪತಿಯಾಣತಿಯ ಬಂದಿಯೊಳಗಿರ್ಪುದು
ಸತಿಯ ಧರ್ಮದ ಸರ್ವಸ್ವ”
ವ್ರತ ಹೋಮ, ನಿಯಮ, ಉಪವಾಸ, ದಾನ ಇತ್ಯಾದಿ ಎಲ್ಲ ಧರ್ಮಗಳೂ ಪತಿ ಸೇವೆಗೆ ಸಮವಲ್ಲ:
“ವ್ರತ ಹೋಮ ನಿಯಮೋಪವಾಸ ದಾನಗಳಿಂ
ದತಿಶಯಪಡೆದ ಧರ್ಮಗಳು
ಪತಿಶುಶ್ರೂಷೆಗೆ ಪಡಿಯಲ್ಲೆಂದಿದ
ರತಿಶಯವರಿತಾಚರಿಪುದು” (ಹದಿಬದೆಯ ಧರ್ಮ, ಸಂಧಿ-3, ಪದ್ಯ-6, ಪುಟ-26.)
ಶಾಸ್ತ್ರಗಳ ಸಮ್ಮತಿಯಾದ ಈ ಸೇವೆಯ ಹೆಚ್ಚಳವನ್ನು ಅರಿತು ಆಚರಿಸಬೇಕೆಂದು ಹೊನ್ನಮ್ಮ ಹೇಳಿದ್ದಾಳೆ. ಮೇಲಿನ ಮಾತುಗಳಲ್ಲಿ ಸತೀಧರ್ಮದ ಹಿರಿಯರ ಸಮ್ಮತಿಯ ವಿಚಾರವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಳೆ.
ಹೊನ್ನಮ್ಮ ತಿಳಿದು ಹೇಳುವ ಪುರಾಣಗಳ ಸ್ತ್ರೀ ಪಾತ್ರಗಳಲ್ಲಿನ ಪತಿಧರ್ಮದ ಆಚರಣೆಯನ್ನು ನೋಡುವುದಾದರೆ, ಮಹಾಭಾರತದ ವನಪರ್ವದಲ್ಲಿಯ ದ್ರೌಪದಿ ಮತ್ತು ಸತ್ಯಭಾಮೆಯರ ಸಂಭಾಷಣೆಯ ಒಂದು ಶ್ಲೋಕ ಅದರ ವಿವರವನ್ನು ತಿಳಿದರೆ ಹೊನ್ನಮ್ಮನ ಪುರಾಣಗಳಲ್ಲಿನ ಉಲ್ಲೇಖದ ವಿವರವೂ ತಿಳಿಯುತ್ತದೆ.
“ಪತ್ಯಾಶ್ರಯೋ ಹಿ ಮೇ ಧರ್ಮೋ
ಮತಃ ಸ್ತ್ರೀಣಾಂ ಸನಾತನಃ
ಸ ದೇವಃ ಸಾ ಗತಿರ್ನಾಯಾ
ಸ್ತನ್ಯಕಾ ವಿಪ್ರಿಯಂ ಚರೇತ್”
(ವನಪರ್ವ, ಅಧ್ಯಾಯ-234, ಶ್ಲೋಕ-39)
“ಸತ್ಯಭಾಮೆ, ನಾನು ಕಾಮ ಕ್ರೋಧ ಅಹಂಕಾರಗಳನ್ನು ತ್ಯಜಿಸಿ ಸದಾ ಪತಿಸೇವೆ ಮಾಡುತ್ತೇನೆ. ನನ್ನ ಪತಿಯ ಸ್ನಾನ, ಭೋಜನ, ನಿದ್ರೆಗೆ ಮುಂಚೆ ಅವನ್ನು ಮಾಡುವುದಿಲ್ಲ; ಅವನು ತೆಗೆದುಕೊಳ್ಳದೆ ಇರುವ ಆಹಾರ ಪಾನೀಯಗಳನ್ನು ನಾನೂ ತ್ಯಜಿಸುತ್ತೇನೆ. ಯಾವಾಗಲೂ ಆತನಿಗೆ ಅನುಕೂಲಳಾಗಿರುತ್ತೇನೆ. ಮನೆಯನ್ನೂ, ಮನೆಯ ಸಮಾನುಗಳನ್ನೂ ಅಚ್ಚುಕಟ್ಟಾಗಿ ಇರಿಸುತ್ತೇನೆ. ಸಕಾಲದಲ್ಲಿ ಶುಚಿ ರುಚಿಯಾಗಿ ಅನ್ನಾಹಾರಗಳನ್ನು ಮಾಡಿ ಪತಿಗೆ ಉಣಬಡಿಸುತ್ತೇನೆ. ಅತಿಥಿ ಅಭ್ಯಾಗತರನ್ನು ಸತ್ಕರಿಸುತ್ತೇನೆ; ಗುರುಜನರನ್ನು ಮನ್ನಿಸುತ್ತೇನೆ. ಉಪದೇಶಗಳಿಗೆ ಒಳಪಟ್ಟು, ಅಲಂಕೃತಳಾಗಿ ಯಾವಾಗಲೂ ಪತಿಯ ಶ್ರೇಯಸ್ಸನ್ನೇ ಹಾರೈಸುತ್ತೇನೆ. ಸೋಮಾರಿತನವನ್ನು ತೊಲಗಿಸಿ ಯಾವಾಗಲೂ ಪತಿಗೆ ಹಿತವಾದದ್ದನ್ನೇ ಮಾಡುತ್ತೇನೆ; ವಿನೋದದಲ್ಲಲ್ಲದೆ ನಗುವುದಿಲ್ಲ, ಮನೆ ಬಾಗಿಲ ಬಳಿ ನಿಲುವುದಿಲ್ಲ; ದುಷ್ಟ ಸ್ತ್ರೀಯರನ್ನು ಅನುಸರಿಸುವುದಿಲ್ಲ. ಯಾರಾದರೂ ಆಪ್ತರಿಗೋಸ್ಕರ ಪತಿ ಬೇರೆ ಕಡೆಗೆ ಹೋದರೆ, ಹೂ, ಗಂಧ, ಪರಿಮಳಗಳ ಸೊಗಸನ್ನು ತ್ಯಜಿಸಿ ನಾನು ವ್ರತವನ್ನು ಕೈಗೊಳ್ಳುತ್ತೇನೆ. ಪತಿಯೇ ಪತ್ನಿಯ ದೇವರು; ಅವನೇ ಆಕೆಗೆ ಆಶ್ರಯ; ಆಕೆಗೆ ನಿಜವಾಗಿ ಬೇರೆ ಗತಿಯಿಲ್ಲ; ಹೀಗಿರುವಾಗ ಹೆಂಡತಿ ಹೇಗೆ ತಾನೆ ಕೆಡುಕನ್ನು ಪತಿಗೆ ಮಾಡಬಲ್ಲಳು?” (ಹದಿಬದೆಯ ಧರ್ಮ, ಪೀಠಿಕೆ, ಪುಟ-18.) ಸೇವೆಯಲ್ಲಿ ತನ್ನನ್ನು ಸಮರ್ಪಣೆ ಮಾಡಿಕೊಂಡು ಪತಿನಿಷ್ಠೆ ತೋರುವ ಮೂಲಕ ಅದರಲ್ಲಿಯೇ ತನ್ನನ್ನು ಕಾಣುವ ಅರ್ಥ ಈ ಮೇಲಿನ ಶ್ಲೋಕದಲ್ಲಿದೆÀ. ಹೊನ್ನಮ್ಮ ನಿರೂಪಿಸಿರುವ ತನ್ನ ಕೃತಿಯಲ್ಲಿನ ಪತಿಧರ್ಮದ ಮೂಲ ಮತ್ತು ಉದ್ದೇಶಗಳು ಇದರಲ್ಲಿಯೇ ಇವೆ. ಹದಿಬದೆಯ ಧರ್ಮದ ಒಟ್ಟು ಸಾರಾಂಶವೇ ಈ ಮೇಲಿನ ಶ್ಲೋಕದ ಅರ್ಥದಲ್ಲಿಯೇ ಇದೆ. ಪತಿಸೇಯಲ್ಲಿಯೇ ಸರ್ವಸ್ವವನ್ನು ಕಂಡುಕೊಂಡು ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಪತಿಯರನ್ನು ಅನುಸರಿಸಿ ಪತಿಧರ್ಮ ಪಾಲಿಸಿದ ಪುರಾಣಗಳಲ್ಲಿನ ಪತಿವ್ರತೆಯರ ಒಂದು ಪಟ್ಟಿಯನ್ನೇ ಹೊನ್ನಮ್ಮ ನೀಡಿದ್ದಾಳೆ.
ವೈದಿಕ ಸನಾತನ ಸಂಸ್ಕೃತಿಯ ಮೇಲೆ ‘ಮನುಸ್ಮೃತಿ’ ಇತರ ಸ್ಮೃತಿಗಳು ವ್ಯಾಪಕವಾದ ಪ್ರಭಾವ ಭೀರಿದೆ. ಅದಕ್ಕಾಗಿಯೆ ಸ್ಮೃತಿಗಳನ್ನು ಆಚಾರ ಸಂಹಿತೆಗಳೆಂದು ಕರೆಯುವುದು. ಇವು ವಿವಿಧ ಸಮೂಹದ ಜನರು ಹೇಗೆ ನಡೆದುಕೊಳ್ಳಬೇಕೆಂಬ ನಡತೆಯ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಧರ್ಮದ ಪ್ರಕಾರಗಳನ್ನು ಹೇಳಲಾಗಿದ್ದು, ಇದರಲ್ಲಿನ ಜೀವನ ರೀತಿಗಳು ವಿವಿಧ ವಿಧಿಗಳಿವೆ.
ವೈದಿಕಧರ್ಮದ ನೀತಿಸಂಹಿತೆಯಾಗಿ ಮನುಸ್ಮೃತಿಯ ಪಾತ್ರ ದೊಡ್ಡದು. ‘ಹದಿಬದೆಯ ಧರ್ಮ’ ಇಡೀ ಕೃತಿಯು ಹೆಚ್ಚು ಪ್ರಭಾವಿಗೊಂಡ ಆಕರವು ಇದೇ ಆಗಿದೆ. ಇಲ್ಲಿ ‘ಹದಿಬದೆ’ ಎನ್ನುವುದು ಪತಿ ಮತ್ತು ವ್ರತ ಎಂದು ಪತಿಗಾಗಿ ಮಾಡುವ ಆಚರಣೆಯಾಗಿದೆ. ‘ಧರ್ಮ’ ನೀತಿಯಾಗಿ ಜೀವನ ವಿಧಾನದಲ್ಲಿ ಆಚರಿಸಲ್ಪಡುವಂತಂಹದ್ದು. ವೈದಿಕ ಧರ್ಮದಲ್ಲಿನ ಜೀವನದ ಉದ್ದೇಶ ರೂಪಿಸಿರುವ ಪುರುಷಾರ್ಥಗಳಲ್ಲಿ ‘ಧರ್ಮ’ವು ಒಂದು. ಪಾತಿವ್ರತ್ಯ ಅಥವಾ ಪತಿವ್ರತೆ ಎನ್ನುವುದು ಹೆಣ್ಣಿನ ಜೀವನ ವಿಧಾನವಾಗಿ, ಮೌಲ್ಯವಾಗಿ ಆಚರಣೆ ಮಾಡುವುದಾಗಿದೆ. ಮನುವಿನಲ್ಲಿ ಹೆಣ್ಣಿಗೆ ಸಂಬಂಧಿಸಿ ‘ಸ್ತ್ರೀಧರ್ಮ’ ಮತ್ತು ‘ದಾಂಪತ್ಯ ಧರ್ಮ’ ಎಂದು ಎರಡು ರೀತಿಯಲ್ಲಿ ಹೇಳಲಾಗಿದೆ. ಸ್ತ್ರೀಧರ್ಮವು ಹೆಣ್ಣಾಗಿ ತಾನು ಮಾಡಬೇಕಾದ ಕರ್ತವ್ಯಗಳು, ಜವಾದ್ಧಾರಿಗಳು ಮತ್ತು ಹೆಣ್ಣಾಗಿ ನಡೆದುಕೊಳ್ಳಬೇಕಾದ ರೀತಿ-ನೀತಿಗಳನ್ನು ತಿಳಿಸುತ್ತದೆ. ‘ದಾಂಪತ್ಯ ಧರ್ಮ’ವು ಹೆಂಡತಿ ಗಂಡನೊಂದಿಗೆ, ಮಕ್ಕಳೊಂದಿಗೆ, ಕುಟುಂಬದ ಇತರ ಸದಸ್ಯರೊಂದಿಗೆ, ಸಮಾಜದೊಂದಿಗೆ ಹೇಗೆ ನಡೆದಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ತಿಳಿಸಿರುವ ರೀತಿ-ನೀತಿಗಳನ್ನು, ಆಚಾರ-ವಿಚಾರಗಳನ್ನು ಅನುಸರಿಸಿ ನಡೆದುಕೊಳ್ಳುವುದೇ ಜೀವನ ಮೌಲ್ಯವಾಗಿ ‘ಪತಿವ್ರತೆಯ ಧರ್ಮ’ವಾಗಿದೆ. ಇದೇ ಧರ್ಮ ರಹಸ್ಯವನ್ನು ಹೊನ್ನಮ್ಮ ತನ್ನ ಕಾವ್ಯದಲ್ಲಿ ವಿಸ್ತರಿಸಿಕೊಂಡಿದ್ದಾಳೆ.
“ಧರ್ಮರಹಸ್ಯವನರಿತಿರ್ಪೆನೆಂಬೊಂದು
ಪೆರ್ಮೆಯೊಳುಸುರ್ದವಳಲ್ಲ
ಧರ್ಮದ ನೆನಹು ಮರೆಯದಂತೆ ಕೃತಿಯಾಗಿ
ನಿರ್ಮಿಸಿ ನೆಲೆಗೊಳಿಸಿದನು.” (ಹದಿಬದೆಯ ಧರ್ಮ, ಸಂಧಿ-9, ಪದ್ಯ-54, ಪುಟ-104)
ಹೀಗೆ, ‘ಧರ್ಮದ ನೆನಹು ಮರೆಯದಂತೆ’ ಸ್ತ್ರೀಧರ್ಮ ಹಾಗೂ ದಾಂಪತ್ಯಧರ್ಮವನ್ನು ಒಳಗೊಂಡು ‘ಪತಿವ್ರತೆಯ ಧರ್ಮ’ ಹೊನ್ನಮ್ಮನ ಹದಿಬದೆಯ ಧರ್ಮ ಕೃತಿಯಾಗಿ ರೂಪಗೊಂಡಿದೆ. ಪುರಂದರ ದಾಸರು “ಧರ್ಮಕ್ಕೆ ಕೈ ಬಾರದೀ ಕಾಲ, ಪಾಪ ಕರ್ಮಕ್ಕೆ ಮನ ಸೋಲದೀ ಕಾಲ”4 ಧರ್ಮ ರಕ್ಷಕರಾಗಿ ತಮ್ಮ ಸಮಾಜದಲ್ಲಿ ಧರ್ಮದ ತತ್ವ ನೀತಿಯನ್ನು ಬೋಧಿಸಿದರು. ಅದರಂತೆ ಹೊನ್ನಮ್ಮನ ಕೃತಿಯು ಪರಂಪರೆಯ ಸ್ತ್ರೀ ಮೌಲ್ಯಗಳ ನೈತಿಕತೆಯನ್ನು ಬೋಧಿಸಿಕೊಂಡು ಹೋಗಿದ್ದಾಳೆ. ಪ್ರಾಚೀನ ಕನ್ನಡ ಮಹಾಕಾವ್ಯ ಹಾಗೂ ಕಾವ್ಯಗಳಲ್ಲಿ ನೀತಿ ಸಾಂದರ್ಭಿಕವಾಗಿ ಬಳಕೆಯಾಗಿದೆ. ಕೀರ್ತನೆ ಹಾಗೂ ಶತಕಗಳಲ್ಲಿ ನೀತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಆದರೆ ಹೊನ್ನಮ್ಮ ಇಡೀ ಕಾವ್ಯದಲ್ಲಿ ಸ್ತ್ರೀನೀತಿ ನಿರೂಪಣೆಯ ಜೊತೆ ಕಾವ್ಯ ಪ್ರತಿಭೆಯನ್ನು ತೋರಿಸಿದ್ದಾಳೆ. ದಾಂಪತ್ಯ ಧರ್ಮ ನಿರೂಪಿಸುವಲ್ಲಿ ಪುರುಷರಿಗೂ ಒಂದಿಷ್ಟು ನೀತಿ ಹೇಳುವುದನ್ನು ಮರೆತಿಲ್ಲ,
“ದಂಪತಿಗಳ ಪಗೆತನದಿಂದಿರ್ವರ
ಪೆಂಪಿನ ಬೇರು ಪರಿವುದು
ಸೊಂಪುಗೆಡುವುದು ಸೊಬಗು ಸಂಸಾರದ
ಜಂಪು ಸಡಲಿ ಜಾರುವುದು” (ಹದಿಬದೆಯ ಧರ್ಮ, ಸಂಧಿ-6, ಪದ್ಯ-8, ಪುಟ-59)
ಹೊನ್ನಮ್ಮ ತನ್ನ ಹದಿಬದೆಯ ಧರ್ಮದಲ್ಲಿ ನೀತಿಯನ್ನೇ ಪ್ರಧಾನ ನೆಲೆಯಲ್ಲಿ ನಿರೂಪಿಸಲು ಮೌಲ್ಯತತ್ವದ ತಳಹದಿಯಲ್ಲಿ ‘ಹಿರಿಯರು’ ತಿಳಿಸಿರುವ ತೆರದಿ,
“ಇದು ಪಾತಿವ್ರತ್ಯಧರ್ಮತತ್ವ ಸಾರ
ವಿದೆ ಸಂಜೀವನ ಮಂತ್ರ
ಇದು ಪರಮಾರ್ಥ ಹಿತೋಪದೇಶದ ತಿರು
ಳದನು ಸತಯರೋದುವುದು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-60, ಪುಟ-13)
ಇದು ಪರಮಾರ್ಥ ಹಿತೋಪದೇಶದ ಪತಿವ್ರತಾಧರ್ಮತತ್ವದ ತಿರುಳು. ಇದು ತನ್ನ ಸಮಾಜ ಒಪ್ಪಿತ ಪವಿತ್ರ ಮೌಲ್ಯವೆಂದು ಇದರಿಂದ ಸಮಸ್ತ ಸ್ತ್ರೀಕುಲದ ಏಳಿಗೆ ಸಹಾಯಕವಾಗುವುದು ಎಂಬುದು ಆಕೆಯ ಉದ್ದೇಶ, ಕೃತಿಯ ಉದ್ದೇಶವೂ ಕೂಡ. ಇದು ಆಕೆಯ ಪ್ರಕಾರ ಹೆಣ್ಣಿನ ಜೀವನದ ಸಂಜೀವಿನಿ ಮಂತ್ರ. ಇದನ್ನು ಅರಿಯದವರಿಗೆ ಆಕೆ ಈ ಮೌಲ್ಯಯುತ ಮಂತ್ರವನ್ನು ಓದಿಬೇಕಾದ ಕೇಳಬೇಕಾದ ಅರಿಯಬೇಕಾಗ ಅಗತ್ಯತೆ ಇರುವ, ಅದರಿಂದಾಗುವ ಹೆಣ್ಣಿನ ಜೀವನದಲ್ಲಿನ ಬದಲಾವಣೆಗಳನ್ನು ಪಟ್ಟಿಮಾಡಿದ್ದಾಳೆ. ಈ ಕೃತಿ ರಚನೆಯ ಹಿಂದೆ ಓದುಗಬ್ಬವೂ ಹಾಡುಗಬ್ಬವೂ ಆಗಬೇಕೆಂಬ ಬಯಕೆಯೂ ಇದೆ.
“ಸತಿಯರೀ ಕೃತಿಯನಾಲಿಸಿದೊಡಂದಂದಿಗೆ
ಪತಿಭಕ್ತಿ ಬಣ್ಣವೇರುವುದು
ಮತಿ ಮಸುಳಿಸದೆ ಮರವೆದೋರದಿಹ ಪರ
ದತಿಶಯವನುಗೂಡುವುದು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-52, ಪುಟ-11)
ಸತಿಯರು-ಈ ‘ಕೃತಿಯನಾಲಿಸಿದರೆ’ ‘ಪತಿಭಕ್ತಿ ಬಣ್ಣವೇರುವುದು’, ‘ಪರದತಿಶಯವನುಗೂಡುವುದು’.
“ಎಳವೆಣ್ಗಳೀ ತಮ್ಮಿನಿಯರ
ನೆಳಮೆಯೊಳಳವುಗೆಡಿಸದೆ
ಬಳಿಸಂದು ಬಾಳುವರತ್ತೆಮಾವಂದಿರ
ನೊಳವು ಗೈದೊಳ್ಪುವಡೆವರು.” (ಹದಿಬದೆಯ ಧರ್ಮ, ಸಂಧಿ-1, ಪದ್ಯ-52, ಪುಟ-11)
‘ಎಳವೆಣ್ಗಳು’ ‘ತಮ್ಮಿನಿಯರ’ ‘ನೆಳಮೆಯೊಳಳವುಗೆಡಿಸದೆ’ ಬಾಳುವರು.
“ಮನೆವಾಳ್ತೆಯರಿಯದ ಮರುಳುವೆಣ್ಣೀ ಕೃತಿ
ಯನೆ ಮನವೊಲಿದಿದೊಡೆ
ಜನರಿವಳನು ಪೋಲ್ವ ಜಾಣೆ ಜಗದೊಳಿ
ಲ್ಲೆನೆ ಚಾತುರ್ಯವಡೆವಳು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-54, ಪುಟ-12)
‘ಮನೆವಾಳ್ತೆ’ಯರು- ‘ಇರಿವಳನು ಪೋಲ್ವ ಜಾಣೆ ಜಗದೊಳಿಲ್ಲೆನೆ ಚಾತುರ್ಯವಡೆವಳು”.
“ಮುನಿದು ಮೂದಲಿಸಿ ಮೋಡಿಯೊಳಿದ್ದು ಮೂರ್ಖಿಪ
ಮೊನೆಗಾತಿಯಾ ಕೃತಿಗೇಳೆ
ಇನಿಯನ ಮೊಗವ ನೋಡದ ಮುನ್ನ ಮೋಹಿಸಿ
ಮನಗರಗುವಳು ಮತ್ತೇನು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-55, ಪುಟ-12)
ಮೂರ್ಖಿಯರು – ಈ ಕೃತಿ ಕೇಳಿದರೆ ‘ಇನಿಯನ ಮೊಗವ ನೋಡದ ಮುನ್ನ ಮೋಹಿಸಿ ಮನಗರಗುವಳು’. ಇಲ್ಲಿ ಇನಿಯನನ್ನು ಅರಿಯದೆ ಅವನನ್ನು ಮೂದಲಿವವಳು ಮೂರ್ಖ ಹೆಣ್ಣು.
“ಕಡುನಾಣ್ಚಿಯಂಜಿ ಕಣ್ಣುಚ್ಚಿ ಕಂಪನಗೊಂಬ
ಬಡವೆಣ್ಗಳೀ ಕೃತಿಗೇಳೆ
ಎಡಬಲದವರೇಳಿಸದಂತೆ ಮನದನ್ನ
ರೊಡನೆ ಬಾಳುವರಡಕದೊಳು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-56, ಪುಟ-12)
ನಾಚಿ ಅಂಜುವ ಹೆಣ್ಣು- ‘ಎಡಬಲದವರೇಳಿಸದಂತೆ ಮನದನ್ನರೊಡನೆ ಬಾಳುವರಡಕದೊಳು’.
“ಬಗೆಯೆ ಮೈಲಿಗೆಯೆಂಜಲೆಂಬುದನರಿಯದ
ಮುಗುದೆಯರೀ ಕೃತಿಗೇಳೆ
ನಿಗಮದೊಳೊಗೆದ ನೇಮಂಗಳ ತಿಳಿದೀ
ಜಗಕೆ ಪಾವನೆಯರೆಪರು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-57, ಪುಟ-12)
ಮುಗ್ಧೆಯರು- ಮಡಿಮೈಲಿಗೆ ತಿಳಿಯದವರು. ಅಂತಹ ಹೆಣ್ಣುಗಳು ಈ ಕೃತಿಯಲ್ಲಿನ ‘ನೇಮಂಗಳ ತಿಳಿದೀ ಜಗಕೆ ಪಾವನೆಯರೆಪರು’.
“ಅತ್ತೆನಾದಿನಿಯರೊಳಳುಕದ ಕಾದುವು
ನ್ಮತ್ತೆಯರೀ ಕೃತಿಗೇಳೆ
ಉತ್ತಮ ಗುಣಗಳಿಂದೊಳಗುಗೈದವರೊಳು
ಪತ್ತುಗೇವೆರಸಿ ಬಾಳುವರು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-58, ಪುಟ-12)
ಜಗಳ ಗಂಟಿಯರು- ಈ ಕಾವ್ಯ ಕೇಳಿದರೆ, ಉನ್ನಮತ್ತರಾಗಿ ಜಗಳವಾಡುವುದನ್ನು ನಿಲ್ಲಿಸಿ ‘ಉತ್ತಮ ಗುಣಗಳಿಂದೊಳಗುಗೈದವರೊಳು ಪತ್ತುಗೇವೆರಸಿ ಬಾಳುವರು’.
“ಒರ್ವರೊರ್ವರೊಳು ಮುಚ್ಚರಿಸುವ ಸವತಿಯ
ಎರ್ವರುಮೀ ಕೃತಿಗೇಳೆ
ಬೇರ್ವರಿದಿರ್ಪ ವೈರದ ಬೇರ ಪರಿದಿ
ಟ್ಟರ್ವರೊಂದೆನಿಸಿಯೊಪ್ಪುವರು”. (ಹದಿಬದೆಯ ಧರ್ಮ, ಸಂಧಿ-1, ಪದ್ಯ-59, ಪುಟ-13)
ಒಬ್ಬರನೊಬ್ಬರು ದ್ವೇಷಿಸುವ ಸತಿಯರು- ಈ ಕೃತಿಯನ್ನು ಕೇಳಿದರೆ, ‘ಬೇರ್ವರಿದಿರ್ಪ ವೈರದ ಬೇರ ಪರಿದಿಟ್ಟರ್ವರೊಂದೆನಿಸಿ ಒಪ್ಪುವರು’ ಹೇಳಿದ್ದಾಳೆ. ಹೆಣ್ಣನ್ನೇ ಕೇಂದ್ರವಾಗಿಸಿ ಹೊನ್ನಮ್ಮ ಹೇಳಿರುವ ಹದಿಬದೆಯ ನೀತಿತತ್ವ ಎಲ್ಲ ಕಾಲಕ್ಕೂ ವೈದಿಕ ವ್ಯವಸ್ಥೆಯಲ್ಲದೆ ಎಲ್ಲ ಮತ ವ್ಯವಸ್ಥೆಗಳಲ್ಲೂ ತನ್ನದೇ ರೂಪದಲ್ಲಿ ಕಾಯ್ದುಕೊಂಡಿರುವುದರಿಂದ ಪಾತಿವ್ರತ್ಯ ನೀತಿ, ಸಮಾಜದ ಆದರ್ಶ ಮೌಲ್ಯವೆನಿಸಿ ಶಾಶ್ವತವಾಗಿ ಉಳಿದು ಬಂದಿದೆ.
ಪತಿಯನ್ನೇ ಇಷ್ಟದೈವವನ್ನಾಸಿಕೊಂಡು ಏಕನಿಷ್ಠೆಯಲ್ಲಿ ತನ್ನ ಯೋಗದೃಷ್ಟಿಯಲ್ಲಿ ಅವನನ್ನೇ ತನ್ನ ಹೃದಯಲ್ಲಿ ಇಟ್ಟುಕೊಳ್ಳಬೇಕೆಂಬ ಪತಿನಿಷ್ಟೆಯ ರೀತಿಯನ್ನು ಹೀಗೆ ಹೇಳಿದ್ದಾಳೆ,
“ಎನ್ನಿನಿಯನ ಪಾದಸೇವೆಯಿಲ್ಲದೆ ನಾ
ನೆನ್ನೆಗಮಿಂತಿರ್ಪೆನೆಂದು
ತನ್ನೊಳು ತಾನೆ ತವಕಗೊಂಬ ಸತಿಯ ಮ
ಹೋನ್ನತಿಗಿನ್ನೆಣೆಯುಂಟೆ”. (ಹದಿಬದೆಯ ಧರ್ಮ, ಸಂಧಿ-7, ಪದ್ಯ-21, ಪುಟ-73)
‘ಕುಲ ಲಲನೆಯ ವಿರಹವೇದನೆಗೆ ಪಲಬಗೆಯುಗ್ರ ತಪಂಗಳೀಡಲ್ಲೆಂದುಲಿವುವು ಮುನ್ನಿನೋದುಗಳು’ ಪತಿವ್ರತೆಯರ ಔನ್ನತ್ಯಕ್ಕೆ ಸಮ ಯಾವುದೂ ಇಲ್ಲವೆನ್ನುತ್ತಾಳೆ ಹೊನ್ನಮ್ಮ.
ವಿರಹ ವೇದನೆಯಲ್ಲಿನ ಸತಿಯ ದೈಹಿಕ ಮಾನಸಿಕ ವರ್ತನೆಯನ್ನು ಪವಿತ್ರವಾದ ವ್ರತವೆಂದು ಹೊನ್ನಮ್ಮ ಅದರ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದಾಳೆ.
“ಒಲಿದ ನಲ್ಲನ ವಿರಹದೊಳುರಲುವ ಕುಲ
ಲಲನೆಯ ವಿರಹವೇದನೆಗೆ
ಪಲಬಗೆಯುಗ್ರ ತಪಂಗಳೀಡಲ್ಲೆಂ
ದುಲಿವುವು ಮುನ್ನಿನೋದುಗಳು” (ಹದಿಬದೆಯ ಧರ್ಮ, ಸಂಧಿ-7, ಪದ್ಯ-22, ಪುಟ-73)
ತಾನು ಒಲಿದ ನಲ್ಲನ ಅಗಲಿಕೆಯ ವಿರಹದಲ್ಲಿ ಸಂಕಟಪಡುವ ಇಂತಹ ಕುಲ ಸ್ತ್ರೀಯ ವಿರಹವೇದನೆಗೆ ಹಲವು ಬಗೆಯ ತಪಸ್ಸುಗಳು ಸರಿಸಮವಾಗಲಾರವು ಇವು ನಮ್ಮ ಹಿಂದಿನ ಶಾಸ್ತ್ರಗಳಲ್ಲಿ ಹೇಳಿರುವ ಶಾಸ್ತ್ರ ಸಮ್ಮತವಾದ ವಿಚಾರವೆಂದು ಹೊನ್ನಮ್ಮ ಮಂಡಿಸಿದ್ದಾಳೆ. ಮುಂದುವರೆದು,
“ಇರದೆಸಗುವ ದಾನ ಹೋಮ ನಿಯಮದಿಂದ
ಪರಿಹರಿಸದ ಪಾಪಗಳು
ವಿರಹದ ತನಿ ಬೆಂಕಿಯಿಂದ ಬೆಂದಳಿವುದೆಂ
ದೊರೆರೆವರಖಿಲವೇದವಿದರು”. (ಹದಿಬದೆಯ ಧರ್ಮ, ಸಂಧಿ-7, ಪದ್ಯ-23, ಪುಟ-73)
ವೇದವಿದರ ಪ್ರಕಾರ ಬಿಡದೆ ನಿಷ್ಠೆಯಿಂದ ಮಾಡುವ ದಾನ, ಹೋಮ ನಿಯಮಗಳಿಂದ ಪರಿಹಾರವಾಗ ಪಾಪಗಳು ವಿರಹದ ಬೆಂಕಿ ಎಲ್ಲಾ ಪಾಪಗಳನ್ನು ಸುಡುತ್ತದೆ. ಹಾಗೆಯೇ,
“ಈ ದೇಹದಂಡನವೈಸೆ ಪ್ರಾಯಶ್ಚಿತ್ತ
ವೇದವಿಹಿತ ಮಾರ್ಗದೊಳು
ಆ ದಾರಿಯೊಳಾಣ್ಮನಗಲೆ ಸಂಕಟಗೊಂಬ
ವೇದನೆಗೆಣೆಯಾವುದಿನ್ನ”. (ಹದಿಬದೆಯ ಧರ್ಮ, ಸಂಧಿ-7, ಪದ್ಯ-24, ಪುಟ-73)
ದೇಹ ದಂಡನೆಯೇ ಪ್ರಾಯಶ್ಚಿತ್ತ ಎನ್ನುವುದು ವೇದ ಸಮ್ಮತವಾದ ವಿಚಾರಗಳು. ಹೀಗಿರಬೇಕಾದರೆ ಗಂಡನಿಂದ ಅಗಲಿ ಸಂಕಟಪಡುವ ನೋವಿಗೆ ಇವು ಯಾವವು ಸಮನಾಗಲಾರವು ಎನ್ನುವುದು ಹೊನ್ನಮ್ಮ ವಾದದ ವಿಚಾರವಾಗಿದೆ.
ವೈದಿಕ ಜೀವನವನ್ನು ನಿಯಂತ್ರಿಸುವ ಪುರುಷಾರ್ಥಗಳಲ್ಲಿ ಮೇಲೆ ಹೇಳಲಾದ ಧರ್ಮವೂ ಒಂದು ನಂತರ ಅರ್ಥ, ಕಾಮ ಹಾಗೂ ಮೋಕ್ಷಗಳು. ಪತಿಯ ಸೇವೆಯಲ್ಲಿ ಧರ್ಮ, ಸಂಸಾರ ನಿರ್ವಹಣೆಯಲ್ಲಿ ಅರ್ಥ, ಕಾಮ, ಪತಿಯಲ್ಲಿಯೇ ಪರಮಾತ್ಮನನ್ನು ಕಾಣುವುದು ಮೋಕ್ಷ. ಪುರುಷಾರ್ಥಗಳಿಗೆ ಹೊನ್ನಮ್ಮ ವಿವರಿಸಿಕೊಟ್ಟ ಅರ್ಥವು ವೈದಿಕ ಜೀವನಾದರ್ಶದ ಅಡಿಯಲ್ಲಿ. ಪತಿವ್ರತೆಗೆ ತನ್ನ ಮನೆಯೇ ಧರ್ಮದ ಆಶ್ರಯವಾಗಿ ಸಂಸಾರ ಸಾಗಿಸಿಕೊಂಡು ಹೋಗುವುದು, ಇನಿಯನನ್ನು ನೆನೆಯುವುದು ಅವಳ ದೇವಪೂಜೆ. ಮೇಲೆ ವಿವರಿಸಲಾದ ಪುರುಷಾರ್ಧಗಳಲ್ಲಿ ಹೊನ್ನಮ್ಮ ಮನು ಸ್ಮೃತಿಯನ್ನು ಅನುಸರಿಸಿ ಸ್ತ್ರೀ ಧರ್ಮ ಹಾಗೂ ದಾಂಪತ್ಯ ಧರ್ಮದ ಜೀವನತತ್ವಗಳನ್ನು ತನ್ನ ಕಾವ್ಯದಲ್ಲಿ ನಿರೂಪಿಸಿದ್ದಾಳೆ. ಇಂತಹ ಧರ್ಮ ತತ್ವಗಳನ್ನು ಅನುಸರಿಸುವುದರಿಂದ ಆಗುವ ಬದಲಾವಣೆಗಳನ್ನು ಹೊನ್ನಮ್ಮ ಮೇಲಿನಂತೆ ವಿವರಿಸಿದ್ದಾಳೆ.
ಹೊನ್ನಮ್ಮ ಸ್ತ್ರೀ ಧರ್ಮ ಹಾಗೂ ದಾಂಪತ್ಯ ಧರ್ಮವನ್ನು ಹೆಣ್ಣಿನ ಜೀವನದ ಅಡಿಯಲ್ಲಿಟ್ಟು ನೋಡಿರುವುದರಿಂದ ಮುಂದೆ ಆಶ್ರಮ ಧರ್ಮವನ್ನು ಹೆಣ್ಣಿನ ಜೀವನಕ್ಕೆ ಒಪ್ಪಿಸಿಕೊಳ್ಳುತ್ತಾಳೆ. ಆದರೆ ಹೊನ್ನಮ್ಮ ದಾಂಪತ್ಯ ಜೀವನಕ್ಕೆ ಒತ್ತುಕೊಡುವುದರ ಹಿಂದೆ, ಹೆಣ್ಣಿನ ವಿವಾಹ ವೈದಿಕ ಸಂಸ್ಕೃತಿಯಲ್ಲಿ ಕಡ್ಡಾಯವಾಗಿತ್ತೆನ್ನುವ ಎಚ್ಚರಿಕೆಯಿಂದ ಕಾವ್ಯದಲ್ಲಿ ವಿವರಿಸಿದ್ದಾಳೆ. ಆಶ್ರಮ ಧರ್ಮದಲ್ಲಿ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸಾಶ್ರಮಗಳೆಂದು ನಾಲ್ಕು. ಗೃಹಸ್ಥ ಆಶ್ರಮಕ್ಕೆ ಅನುಗುಣವಾಗಿ ಹೇಳುವ ಹೊನ್ನಮ್ಮ ‘ಏಕಪತ್ನಿ’ ಎಂಬ ಪತಿವ್ರತೆಯ ಕಥೆ ಹೇಳಿ ಇನ್ನಿತರ ಆಶ್ರಮಗಳಿಗೆ ಗೃಹಸ್ಥ ಆಶ್ರಮವೇ ಮೂಲವೆನ್ನುವುದನ್ನು ಪರೋಕ್ಷವಾಗಿ ನಿರೂಪಿಸಿದ್ದಾಳೆ.
ಕುಟುಂಬ ಹಾಗೂ ವಿವಾಹವೆಂಬ ಸಾಮಾಜಿಕ ವ್ಯವಸ್ಥೆಗೆ ಕಾಲಾತೀತವಾಗಿ ಒತ್ತಾಸೆ ನೀಡುತ್ತಲೇ ಬಂದಿರುವುದು ಸಾಮಾಜಿಕ ಸಂಸ್ಥೆಗಳ ಸಾಮಾನ್ಯ ಸ್ವರೂಪ. ಇದು ಇಂದಿನ ಸಮಾಜದ ಸ್ವರೂಪವೂ ಕೂಡ. ವಿವಾಹ ಎನ್ನುವುದು ವೈದಿಕ ಸಂಸ್ಕೃತಿಯಲ್ಲಿ ಒಂದು ಪವಿತ್ರವಾದ ಕರ್ಮ. ಆಧುನಿಕ ಸಮಾಜದಲ್ಲಿ ವಿವಾಹವನ್ನು ಪವಿತ್ರ ನೆಲೆಯಲ್ಲಿಯೇ ಆಚರಿಸಿಕೊಂಡು ಬರಲಾಗುತ್ತಿದೆ. ವೈದಿಕ ಸಮಾಜದಲ್ಲಿ ಕುಟುಂಬ ವ್ಯವಸ್ಥೆಗೆ ಹೆಚ್ಚು ಪ್ರಾಮುಖ್ಯತೆಯಿದೆ. ವ್ಯಕ್ತಿಯ ಜೀವನ ವೈದಿಕ ಪುರುಷಾರ್ಥಗಳ ಅಡಿಯಲ್ಲಿಯೇ ಕುಟುಂಬ ವ್ಯವಸ್ಥೆ, ಪ್ರಾಚೀನ ಕಾಲದಿಂದಲೂ ತನ್ನ ಸ್ವರೂಪ ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡಿವೆ.
ವೈದಿಕ ಧರ್ಮದಲ್ಲಿ ಹಲವು ಧಾರ್ಮಿಕ ವಿಧಿಗಳಿವೆ. ಹೆಣ್ಣಿಗೆ ವಿವಾಹವೊಂದೇ ಸಂಸ್ಕಾರವಿಧಿ. ವಿವಾಹ ಸಂಸ್ಕಾರವು ದಾಂಪತ್ಯ ಬದುಕಿನಲ್ಲಿ ಹೆಣ್ಣಿಗೆ ಸ್ತ್ರೀಧರ್ಮ ಹಾಗೂ ದಾಂಪತ್ಯಧರ್ಮವನ್ನು ಕಲ್ಪಿಸಿರುವ ಆದರ್ಶಗಳಾಗಿ ಪಾಲಿಸುವುದು ಹೆಣ್ಣಿನ ಜೀವನದ ಅತ್ಯಂತ ಮಹತ್ವದ ಗುರಿ. ಶೀಲ ಸದಾಚಾರ ಪಾತಿವತ್ಯಗಳು ಅವಳ ಜೀವನದ ಆದರ್ಶಗಳು. ಹೊನ್ನಮ್ಮ ತನ್ನ ಕಾವ್ಯದಲ್ಲಿ ಹೆಣ್ಣು ಇವುಗಳನ್ನು ಸಾಧಿಸುವ ಬಗೆಯನ್ನು ಬೋಧಿಸಿದ್ದಾಳೆ. “ಮನೆಯಲ್ಲಿಯೇ ಇದ್ದು ಘನವಾಗಿರುವ ಬಾಳಿನ ಧ್ಯೇಯವನ್ನು, ಆತ್ನೋನ್ನತಿಯ ಮಾರ್ಗವನ್ನು ಸಂಸಾರದಲ್ಲಿರುವಂತ ಸತಿಯರಿಗೆ ತೋರಿಸಿ ಕೊಡುವುದು”5 ಹೊನ್ನಮ್ಮನ ಕಾವ್ಯ ರಚನೆಯ ಮುಖ್ಯ ಉದ್ದೇಶವಾಗಿದೆ.
ಭಗವದ್ಗೀತೆಯ ಪ್ರಕಾರ ಅರ್ಥೈಯಿಸುವ ‘ಯೋಗ’ ಎನ್ನುವುದು ಭಗವಂತನೊಂದಿಗೆ ಕೂಡಿಕೊಳ್ಳುವುದು. ಭಗವಂತನೊಂದಿಗೆ ಒಂದುಗೂಡುವ ಕ್ರಿಯೆ. ಮೋಕ್ಷ ಸಂಪಾನೆಯಿಂದ ಜೀವನದ ಆದರ್ಶ ಗುರಿ ತಲುಪುವ ಮಾರ್ಗಗಳು ಕರ್ಮ ಮಾರ್ಗ, ಜ್ಞಾನಯೋಗ, ಭಕ್ತಿಯೋಗ, ರಾಜಯೋಗಗಳು ನಾಲ್ಕು ರೀತಿಯಾಗಿವೆ. ಇವುಗಳಲ್ಲಿ ಸಮನ್ವಯತೆ ಸಾಧಿಸಿಕೊಳ್ಳುವ ಸಮಗ್ರ ಯೋಗತತ್ವ ಈ ಗೀತೆಯಲ್ಲಿದೆ. ‘ಕರ್ಮಯೋಗ’ವು ಫಲಾಫಲಗಳನ್ನು ದೇವರಿಗೆ ಒಪ್ಪಿಸಿಕೊಂಡು ಸಮರ್ಪಣಾ ಭಾವದಿಂದ ಮಾಡುವ ಈ ಕರ್ಮದಿಂದ ಮೋಕ್ಷ ಸಿಗುತ್ತದೆ.
“ಯೋಗದಶಾ ಪರಿಣತಿಯೊಳು ತನಗಿದಿ
ರಾಗಿ ನಿಂದಿರ್ದ ದೇವತೆಯ
ಯೋಗಿಗಳೆರ್ಧೆಗೊಳಿಪಿನಿಯನೊಳನು
ರಾಗವೆರಸಿ ನಿಟ್ಟಿಪ್ಪಳು”. (ಹದಿಬದೆಯ ಧರ್ಮ, ಸಂಧಿ-7, ಪದ್ಯ-42, ಪುಟ-55)
“ಆತ್ಮೋನ್ನತಿಗಾಗಿ ಋಷಿಗಳು ತೋರಿದ ಮಹಾ ಪ್ರಯತ್ನಗಳು ಯೋಗಗಳು. ಇವು ಮುಖ್ಯವಾಗಿದವುಗಳು. ಎಡೆಬಿಡದೆ ಇಷ್ಟದೇವತೆಯನ್ನು ಧ್ಯಾನಮಾಡುವವನು ಯೋಗದ(ಭಕ್ತಿಯ) ದಶಾ=ಅವಸ್ಥೆಯಲ್ಲಿ ಇರುತ್ತಾನೆ. ಈ ಸಾಧನೆಯ ಕಟ್ಟಕಡೆ ಸಿದ್ಧಿ ಅಥವಾ ಸಮಾಧಿ ಅಥವಾ ಪರಿಣತಿ. ಈ ಸ್ಥಿತಿಯಲ್ಲಿ ಯೋಗಿಗೆ ಎಲ್ಲೆಲ್ಲೂ ಗಾಢವಾದ ಆನಂದವೇ ಅನುಭವಕ್ಕೆ ಬರುತ್ತದೆ. ಮೆಚ್ಚಿದ ನೆಚ್ಚಿದ ದೇವತೆ, ಒಳಗೆ, ಹೊರಗೆ, ಎಲ್ಲಿ ನೋಡಿದರಲ್ಲಿ ಪ್ರಕಾಶಿಸುತ್ತದೆ”(ಹದಿಬದೆಯ ಧರ್ಮ, ಅದೇ, ಪ್ರಸ್ತಾವನೆ). ಇದು ಹೊನ್ನಮ್ಮ ಹೇಳಿದ ಪತಿಭಕ್ತಿಯ ಧಾರ್ಶನಿಕ ರೂಪ. “ಸತಿಯರ ಸದಾಚಾರ ಸೂತ್ರಗಳಲ್ಲಿ ಭೇದವಿಲ್ಲ. ಅವರ ಕುಲವೊಂದೆ ಶೀಲವೊಂದೆ. ಸತಿಯರ ಮನೋಭಾವ ವಿಕಾಸವಾಗಲು ಅವರ ಶುಚಿ ಶೀಲ ದಾರಿ ಮಾಡಿಕೊಡುತ್ತದೆ”(ಹದಿಬದೆಯ ಧರ್ಮ ಟಿಪ್ಪಣಿ, ಪುಟ-108). ಪತಿಭಕ್ತಿಯೇ ಜೀವನ ಶ್ರದ್ಧೆಯಾಗಿ ಇಲ್ಲಿ ಆಕರಪಡೆದಿದೆ.
“ಬಸಿರೊಳು ಬಂದ ಕುವರನಾದೊಡಮೇನು
ಪೊಸವರೆಯದ ಪುರುಷನನು
ಒಸೆದು ನಿಟ್ಟಿಸಿಯೊಡಲೋಜೆಯೊಳುಗಳ
ಬಣ್ಣಿಸಲಾಗದು ಭಾವೆಯರು”. (ಹದಿಬದೆಯ ಧರ್ಮ, ಸಂಧಿ-4, ಪದ್ಯ-33, ಪುಟ-42)
ತನ್ನ ಬಸಿರಿಂದ ಹುಟ್ಟಿದ ಸ್ವಂತ ಮಗನಾದರೂ ಅವನ ಮೈಕಟ್ಟನ್ನು ವರ್ಣಿಸಬಾರದು. ಹೊನ್ನಮ್ಮ ಈ ಮಾತು ಬೇಸರ ತರಿಸುತ್ತದೆ. ಒಂದು ಹೆಣ್ಣಾಗಿ ಮೊಲೆ ಉಣಿಸಿ ಪೋಷಿಸಿದ ಮಗನನ್ನು ಯಾವ ತಾಯಿಯಾದವಳು ಕೆಟ್ಟದೃಷ್ಟಿ ಬೀರುವಷ್ಟು ಬುದ್ಧಿಹೀನಳಾಗುವಳೇ? ತಾಯ್ತನದ ನೈತಿಕತೆಯನ್ನೇ ಪ್ರಶ್ನೆಮಾಡುವ ಈ ವಿಚಾರ ಹೊನ್ನಮ್ಮ ಮನುವಿನ ಹೆಣ್ಣಿನ ದೃಷ್ಟಿಕೋನಕ್ಕೆ ಸರಿದೂಗಿದ್ದಾಳೆ ಎನಿಸುತ್ತದೆ.
“ಸ್ವಭಾವ ಏಷ ನಾರೀಣಾಮಿಹ ದೂಷಣಂ|
ಅತೋSರ್ಥಾನ್ನ ಪ್ರಮಾದ್ಯಂತಿ ಪ್ರದಾಸು ವಿಷಶ್ಚಿತಃ”|| (ಅ-2, ಶ್ಲೋ-213)
“ಅವಿದ್ವಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ|
ಪ್ರ ಮಾದಾ ಹ್ಯುತೊಥಂ ನೇತು ಕಾಮಕ್ರೋದಶಾನುಗಂ”|| (ಅ-2, ಶ್ಲೋ-214)
“ಮಾತ್ರಾ ಸ್ವಸ್ರಾ ದುಹಿತ್ರಾ ವಾ ನ ವಿವಿಕ್ತಾಸನೋ ಭವತ್|
ಬಲವಾನಿಂದ್ರಿತಗ್ರಾವೋ ವಿದ್ವಂಸಮಪಿ ಕರ್ಪತಿ”|| (ಅ-2, ಶ್ಲೋ-215)
ಪುರುಷ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಚಾರದಲ್ಲಿ ಎಚ್ಚರತಪ್ಪಿ ನಡೆಯುವುದಿಲ್ಲ. ಕಾಮ-ಕ್ರೋಧಗಳಿಗೆ ವಶನಾದ ಮನುಷ್ಯನನ್ನು, ಅವನು ಪಂಡಿತನೇ ಇರಲಿ, ಪಾಮರನೇ ಇರಲಿ, ದಾರಿತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ. ತಾಯಿಯೊಡನೆ, ಸೋದರಿಯೊಡನೆ, ಮಗಳೊಡನೆ ಕೂಡ ನಿರ್ಜನ ಪ್ರದೇಶದಲ್ಲಿ ಗಂಡಸು ಒಂಟಿಯಾಗಿರಬಾರದು. ಏಕೆಂದರೆ ಬಲಿಷ್ಠವಾದ ಇಂದ್ರಿಯಗಳ ಸಮೂಹವು ಎಂತಹ ವಿದ್ವಾಂಸನನ್ನೂ ಸೆಳೆದುಕೊಳ್ಳುತ್ತದೆ.”74 ಇಲ್ಲಿ ಮನುವಿನ ಈ ಎಲ್ಲಾ ವಿಚಾರವನ್ನು ಹೊನ್ನಮ್ಮ ಒಂದೇ ಪದ್ಯದಲ್ಲಿ ಹೇಳಿದ್ದಾಳೆ.
ಮೇಲೆ ಹೆಣ್ಣಿನ ಅದರಲ್ಲೂ ತಾಯ್ತನದ ನೈತಿಕತೆಯನ್ನೇ ಅರ್ಥಮಾಡಿಕೊಳ್ಳದ ಹೊನ್ನಮ್ಮ ಇನ್ನು ಹೆಣ್ಣಿನ ಅಧೀನತೆಯನ್ನು ಕುರಿತು:
“ತಡೆಯದೆಳಮೆಯೊಳು ತಂದೆ ತಾಯಿಗಳಿಗೆ
ನಡುವರೆಯದೊಳು ನಲ್ಲನಿಗೆ
ಕಡುಮುದುಪಾದ ಕಾಲದೊಳು ತನ್ನಣುಗರಿ
ಗಡಕಮೆನಿಪುದಬಲೆಯರು”. (ಹದಿಬದೆಯ ಧರ್ಮ, ಸಂಧಿ-4, ಪದ್ಯ-47, ಪುಟ-45)
ಬಾಲ್ಯದಲ್ಲಿ ತಂದೆ-ತಾಯಿ, ಹರೆಯದಲ್ಲಿ ಪತಿ, ಮುಪ್ಪಿನಲ್ಲಿ ಮಕ್ಕಳು ರಕ್ಷಣೆಯಲ್ಲಿ ಹೆಣ್ಣು ಇರಬೇಕೆಂದು ಹೊನ್ನಮ್ಮ ಆಶಿಸುತ್ತಾಳೆ.
“ಪಿತಾ ರಕ್ಷತಿ ಕುಮಾರೇ ಭರ್ತಾ ರಕ್ಷತಿ ಯೌವನೇ|
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ”|| (ಅ-9, ಶ್ಲೋ-3)
ಬಾಲ್ಯದಲ್ಲಿ ಸ್ತ್ರೀಯನ್ನು ತಂದೆಯು ರಕ್ಷಿಸುತ್ತಾನೆ. ಯೌವನದಲ್ಲಿ ಗಂಡನು ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ. ಆದುದರಿಂದ ಸ್ತ್ರೀಯು ಸ್ವತಂತ್ರವಾಗಿರಲು ಅರ್ಹಳಲ್ಲ” ಮನುಸ್ಮೃತಿಯ ಈ ಮಾತುಗಳು ಹೊನ್ನಮ್ಮ ಅನುಸರಿಸಿದ್ದರೂ ಮನುವಿನ ‘ಸ್ತ್ರೀ ಸ್ವಾತಂತ್ರ್ಯಾರ್ಹಳಲ್ಲ’ ಎಂಬ ಮಾತು ಹೊನ್ನಮ್ಮನಿಗೆ ಸಮ್ಮತಿಯಿಲ್ಲ. ಗೃಹಣಿಯ ಕ್ರಿಯಾತ್ಮಕ ಚಟುವಟಿಕೆಗಳನ್ನು ಸ್ಥಗಿತ ನಿಲುವಿಗೆ ಒಪ್ಪಿಸಿಲ್ಲ. ಮನುವಿನಲ್ಲಿ ಹೆಣ್ಣಿಗೆ ವ್ಯಕ್ತಿ ಸ್ವಾತಂತ್ರ ಕೊಡುವುದಕ್ಕೆ ನಿಷೇಧವೇರಿದ್ದಾನೆ. ಇಲ್ಲಿ ಮನುವಿನ ಒಟ್ಟು ಅಭಿಪ್ರಾಯವನ್ನು ಒಪ್ಪಿಕೊಂಡಿದ್ದರೂ ಹೊನ್ನಮ್ಮ ಹೆಣ್ಣನ್ನು ಅಧೀನಕ್ಕೆ ಒಳಪಡಿಸಿಲ್ಲ.
ಉಪಸಂಹಾರ
ಹೊನ್ನಮ್ಮ ಸಂಸಾರದ ಒಟ್ಟು ಜವಾಬ್ದಾರಿಯನ್ನು ವಹಿಸಿಕೊಂಡ ನಿಸ್ವಾರ್ಥ ಹಾಗೂ ಆದರ್ಶ ವ್ಯಕ್ತಿಯಾಗಿ ಹೆಣ್ಣನ್ನು ಚಿತ್ರಿಸಿದ್ದಾಳೆ. ಹೊನ್ನಮ್ಮ ಮನುವಿನ ಈ ಅಭಿಪಾಯವನ್ನು ತಾಯಿಗೆ ಸ್ಥಾನ ನೀಡಿವ ಮೂಲಕ, ‘ಎಳಮೆಯೊಳು ತಂದೆ ತಾಯಿಗಳಿಗೆ ಅಡಕಮೆಪುದು’ ಎಂದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೂ ಹೆಣ್ಣಿನ ಸ್ಥಾನವನ್ನು ಗುರ್ತಿಸಿ ಹೇಳುವಲ್ಲಿ ಸ್ತ್ರೀಪರ ನಿಲುವು ತಳೆದಿದ್ದಾಳೆ. ಸನಾತನ ವಿಚಾರಗಳನ್ನು ನೈತಿಕತೆಯ ಒಪ್ಪಿಗೆಯಲ್ಲಿ ಹೆಣ್ಣಿನ ಜೀವನ ಕಂಡುಕೊಳ್ಳುವಲ್ಲಿ ಹೊನ್ನಮ್ಮನ ಧೊರಣೆ ಎದ್ದು ಕಾಣುತ್ತದೆ. ಈ ನಿಲುವಿಗೆ ಬಂದ ಹೊನ್ನಮ್ಮ ಹೆಣ್ಣಿನ ಬದುಕನ್ನು, ಸನಾತನ ನೀತಿಯ ಚೌಕಟ್ಟಿನಲ್ಲಿ ಅಲ್ಲಿನ ನಿರೂಪಿತ ಉದ್ದೇಶಗಳನ್ನೇ ಒಟ್ಟು ಕಾವ್ಯದಲ್ಲಿ ವಿಸ್ತರಿಸಿದ್ದಾಳೆ.
ಪರಾಮರ್ಶನ ಗ್ರಂಥಗಳು