Tumbe Group of International Journals

Full Text


ಕಾರ್ತಿಕ ಋಷಿಯ ಕಥೆ : ಅಧಿಕಾರದ ನಿರ್ವಚನ

ಸೈಯದ್ ಬಿ.

ಪಿಎಚ್.ಡಿ ಸಂಶೋಧಕರು

ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ – ೫೮೬೨೭೬

ಮೊ : ೯೮೮೦೦೫೧೯೯೮, Gmail : syducta@gmail.com


 

ಪ್ರಸ್ತಾವನೆ.

ಅಧಿಕಾರವೆಂದರೆ ಯಾವುದಾದರೊಂದು ಕಾರ್ಯವನ್ನು ನಡೆಸುವ, ವಿಧಿಸುವ ಅಥವಾ ನಿರ್ಣಯಿಸುವ ಶಕ್ತಿ. ಇದು ‘ಆಳ್ವಿಕೆ’ ಮತ್ತು ‘ಒಡೆತನ’ವನ್ನು ಪ್ರತಿನಿಧಿಸುವ, ಸಮರ್ಥಿಸುವ ಅರ್ಥವನ್ನು ಸೂಚಿಸುತ್ತದೆ. ಅದು ಕೇವಲ ರಾಜಕೀಯ ಕ್ಷೇತ್ರ ಮಾತ್ರ ಪ್ರತಿನಿಧಿಸದೇ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಕೌಟುಂಬಿಕ ಮುಂತಾದ ಸಾಂಸ್ಕೃತಿಕ ಕ್ಷೇತ್ರವನ್ನು ಸಹ ಒಳಗೊಂಡಿದೆ. ಮನುಷ್ಯ ನಾಗರೀಕರಣಗೊಳ್ಳುವ ಪ್ರಕ್ರಿಯೆಯಲ್ಲಿ ಸಮಾಜವನ್ನು ಸಂಘಜೀವಿಯಾಗಿ ಕಟ್ಟಿಕೊಂಡ. ಹೀಗೆ ಕಟ್ಟಿಕೊಳ್ಳುವಾಗ ಆತ ‘ಅಧಿಕಾರ’ದ ನೆಲೆಯಲ್ಲಿಯೇ ತನ್ನ ಸಮಾಜವನ್ನು ನಿರ್ಮಿಸಿದ್ದಾನೆ. “ಅದರಲ್ಲಿ ಗಂಡು-ಹೆಣ್ಣು; ತಂದೆ-ತಾಯಿ; ಅಣ್ಣ-ತಂಗಿ, ಅಕ್ಕ-ತಮ್ಮ, ಅತ್ತೆ-ಮಾವ, ಹೀಗೆ ಬೇರೆ ಬೇರೆ ಸಾಮಾಜಿಕ ಸಂಬಂಧಗಳ ಬಲೆಯಿದೆ. ಮತ್ತು ಈ ಸಾಮಾಜಿಕ ಸಂಬಂಧಗಳು ಒಂದೊರಡನೊಂದು ಬೇರೆ ಬೇರೆ ಸಂಬಂಧಗಳ ವ್ಯಾಖ್ಯೆಯನ್ನು ಮಂಡಿಸುತ್ತವೆ. ಸಂಬಂಧಗಳ ರೂಪ ಆಧರಿಸಿಕೊಂಡು ಅಧಿಕಾರ ಭಾವನಾತ್ಮಕತೆಯ ನಿರ್ಧಾರವಾಗುತ್ತದೆ ಮತ್ತು ಸಂಬಂಧಗಳಲ್ಲಿ ಶ್ರೇಣಿಕರಣವು ನಿರ್ಧಾರವಾಗುತ್ತದೆ” (ಕೇಶವಶರ್ಮ ಕೆ. ಸ್ತ್ರೀವಾದಿ ಪರಿಕಲ್ಪನೆಗಳು, ಪು.ಸಂ.೦೬). ಹೀಗೆ ಭಾವನಾತ್ಮಕತೆ, ಶ್ರೇಣಿಕರಣದ ಮೇಲೆ ನಿರ್ಮಾಣವಾದ ಸಂಬಂಧಗಳಲ್ಲಿ ಪ್ರಬಲ ಸಾಧಿಸುವ ಶಕ್ತಿಗಳು, ಸಶಕ್ತ ಸಂಬಂಧಗಳ ಮೇಲೆ ಅಧಿಕಾರ ಸಾಧಿಸುತ್ತವೆ. ಈ ಸಾಧಿಸುವಿಕೆ ಪ್ರಯೋಗವಾಗುವಾಗ ಪ್ರಬಲರು, ದುರ್ಬಲರ ಮೇಲೆ ಸಂಪೂರ್ಣ ಅಧಿಕಾರವನ್ನು ಸಾಧಿಸಿದ್ದಾರೆ. ಹೇಗೆಂದರೆ ಗಂಡ ಹೆಂಡತಿಯ ಮೇಲೆ, ಅಪ್ಪ ಮಕ್ಕಳ ಮೇಲೆ, ಅಣ್ಣ ತಂಗಿಯ ಮೇಲೆ, ಅಕ್ಕ ತಂಗಿಯ ಮೇಲೆ ಸಂಪೂರ್ಣ ಅಧಿಕಾರ ಹೊಂದಿರುವಂತೆ. ಇಲ್ಲಿ ಭಾವನಾತ್ಮಕತೆ, ಶ್ರೇಣಿಕರಣ ಅಷ್ಟೆಯಲ್ಲದೇ ಸಮಾಜದ ನಿರ್ಮಾಣ ಹಂತದಲ್ಲಿ ಕಟ್ಟಿಕೊಂಡ ಧರ್ಮ, ಸಂಸ್ಕೃತಿ, ರೂಢಿ ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ನಿರ್ಬಂಧ, ಒತ್ತಡಗಳು ಕೂಡ ಕೆಲಸ ಮಾಡುತ್ತವೆ. ಇವು ಪ್ರತಿ ಒಂದು ಸಂಬಂಧಗಳಿಗೂ ತನ್ನದೆಯಾದ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನೀಡಿವೆ. ಇವೆಲ್ಲವೂ ಅಧಿಕಾರ ಚಲಾವಣೆಯ ಸ್ವರೂಪವಾಗಿವೆಯಷ್ಟೆ.

ಕೀ ವರ್ಡ್: ಕಾರ್ತಿಕ ಋಷಿಯ ಕಥೆ,ಸೈಯದ್ ಬಿ. ಕಬ್ಬಿಗೆರೆ,ಸೈಯದ್ ಬಿ,ಅಧಿಕಾರ,ವಡ್ಡಾರಾಧನೆ,ಅಧಿಕಾರದ ನಿರ್ವಚನ

ಪಿಠೀಕೆ

ಸಮಾಜದಲ್ಲಿ ಪುರುಷ ಅಧಿಕಾರದ ಸ್ಥಾನದಲ್ಲಿದ್ದು ‘ಒಡೆಯ’ನಾಗಿದ್ದಾನೆ. ಆದರೆ ಹೆಣ್ಣು ಪುರುಷನಿಗೆ ದಾಸಿಯಾಗಿ, ವಿನಯವಂತಳಾಗಿ, ಸೇವಕಿಯಾಗಿ ಆಧೀನ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾಳೆ. ಆದ್ದರಿಂದ ಸಮಾಜದಲ್ಲಿ ಅಧಿಕಾರವೆಂಬುದು ಪುರುಷ ಕೇಂದ್ರಿತ ನೆಲೆಯಲ್ಲಿ ಸೃಷ್ಟಿಯಾಗಿರುವುದು ಸ್ಪಷ್ಟ. ಪುರುಷ ತನ್ನ ಅಧಿಕಾರವನ್ನು ಮಹಿಳೆ ಮೇಲೆ ಹೇಗೆ ಬೇಕಾದರೂ ಚಲಾವಣೆ ಮಾಡುವ ಅಧಿಕಾರ ಹೊಂದಿದ್ದಾನೆ. ಅವನ ಅಧಿಕಾರ ಚಲಾವಣೆಯ ನೆಲೆಗಳು ಒಂದೊಂದು ಕಾಲಘಟ್ಟದಲ್ಲೂ ಭಿನ್ನವಾಗಿ ಕಂಡು ಬಂದರು ಅವುಗಳ ಎಲ್ಲ ಉದ್ದೇಶಗಳು ಮಾತ್ರ ಅಧಿಕಾರವನ್ನು ಸಾಧಿಸುವುದೇ ಆಗಿದೆ. ಹಿಂದೆ ಹೇಳಿದಂತೆ ಈ ವ್ಯವಸ್ಥೆಗಳೆಲ್ಲವೂ ಮಾನವ ನಿರ್ಮಿತ ಸಮಾಜದಲ್ಲಿನ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಇತರೆ ಸಾಂಸ್ಕೃತಿಕ ವಲಯಗಳಿಂದ ನಿರ್ಮಾಣಗೊಂಡಿದೆ. ಇಂತಹ ವಲಯಗಳಿಂದ ಉಂಟಾಗಿರುವ ಅಧಿಕಾರದ ಪರಿಣಾಮಕ್ಕೆ ಎಲ್ಲಾ ಕಾಲಘಟ್ಟದಲ್ಲೂ ಮೊದಲು ಹೆಣ್ಣು ಬಲಿಪಶುವಾಗಿರುವುದು ದುರಂತವೇ ಸರಿ.

ಪ್ರಾಚೀನ ಕಾಲಘಟ್ಟದಿಂದ ಸಮಕಾಲೀನ ಸಂದರ್ಭದವರೆಗೂ ಪುರುಷ ಪ್ರಧಾನ ಸಂಸ್ಕೃತಿಯು ‘ಅಧಿಕಾರಕೇಂದ್ರಿತ ಸಂಬಂಧಗಳನ್ನು ಇಲ್ಲಿವರೆಗೂ ಉಳಿಸಿಕೊಂಡು ಬಂದಿರುವುದು ದುರದೃಷ್ಟವೇ ಸರಿ. ಇಂದಿನ ಜಾಗತೀಕರಣ, ಅಧುನಿಕರಣ ಸಂದರ್ಭದಲ್ಲೂ ಮಹಿಳೆಗೆ ಸಂಪೂರ್ಣ ಅಧಿಕಾರ ಇಲ್ಲದಿರುವುದು, ಅಧಿಕಾರವೆಂಬುದು ಇನ್ನೂ ಪುರುಷನ ವಶದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಅಧಿಕಾರದ ಶಕ್ತಿ ಚಲಾವಣೆಯಾಗುವಾಗ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಇತರೆ ಸಾಂಸ್ಕೃತಿಕ ನೆಲೆಗಳನ್ನು ವ್ಯಾಪಿಸಿಕೊಂಡಿದೆಂದು ಈ ಹಿಂದೆಯೇ ಹೇಳಿದ್ದೇನೆ. ಇಂತಹ ಅಧಿಕಾರದ ನೆಲೆಗಳನ್ನು ಸಾಹಿತ್ಯ ಅನೇಕ ಮಗ್ಗುಲುಗಳಲ್ಲಿ ಗ್ರಹಿಸಿಕೊಳ್ಳುತ್ತ, ಈ ಗ್ರಹಿಕೆಯ ವಸ್ತುಗಳನ್ನು ತನ್ನ ಕೃತಿಗಳ ವಸ್ತುವಾಗಿ ಸ್ವೀಕರಿಸಿಕೊಳ್ಳುತ್ತ ಬಂದಿದೆ. ಹೀಗೆ ಸ್ವೀಕರಿಸುವಾಗ ಅಧಿಕಾರದ ವಿರುದ್ಧ ನೇರವಾಗಿಯೂ, ಕೆಲವೊಮ್ಮೆ ಪರೋಕ್ಷವಾಗಿ ಪ್ರತಿಭಟಿಸುವ ಕೆಲಸ ಮಾಡಿದೆ. ಸಾಹಿತ್ಯ ತನ್ನ ಸುತ್ತಲಿನ ವಾಸ್ತವ ಪ್ರಪಂಚದ ಅನಾವರಣ ಮಾಡುವ ಉದ್ದೇಶ ಹೊಂದಿರುವುದರಿಂದ ವಾಸ್ತವ ಸತ್ಯವನ್ನು ಶೋಧಿಸುವ ಕೆಲಸವನ್ನು ಮಾಡಿದೆ. ಇಂತಹ ವಾಸ್ತವ ಸತ್ಯ ಶೋಧನೆಗಾಗಿ ವಡ್ಡಾರಾಧನೆಯ ‘ಕಾರ್ತಿಕ ಋಷಿಯ ಕಥೆ’ಯನ್ನು ಉದಾಹರಿಸಬಹುದು.

‘ವಡ್ಡಾರಾಧನೆ’ಕನ್ನಡ ಸಾಹಿತ್ಯದಲ್ಲಿ ಹತ್ತೊಂಬತ್ತು ಕಥೆಗಳನ್ನು ಒಳಗೊಂಡ ಒಂದು ಅಪೂರ್ವವಾದ ಗದ್ಯ ಕೃತಿ.  ಇದು ಜೈನ ಧರ್ಮದ ತತ್ವವನ್ನು ಮತ್ತು ಮಹತ್ವವನ್ನು ಸಾರುವ ದೃಷ್ಟಿಯಿಂದ ರಚನೆಯಾಗಿದೆ. ವಡ್ಡಾರಾಧನೆ ಕೃತಿ ಸಾಹಿತ್ಯ ದೃಷ್ಟಿಯಿಂದ ಮಾತ್ರ ಮುಖ್ಯವಲ್ಲ. ಅದು ಸಮಾಜದಲ್ಲಿನ ಮನುಷ್ಯ ಸಂಬಂಧಗಳ ದೃಷಿಯಿಂದಲೂ ಮಹತ್ವ ಪಡೆದಿದೆ. ವಡ್ಡಾರಾಧನೆಯಲ್ಲಿನ ಕಥೆಗಳೆಲ್ಲವೂ ಮನುಷ್ಯ ನಿರ್ಮಿತ ಸಮಾಜದಲ್ಲಿ ‘ಅಧಿಕಾರ’ಶಕ್ತಿಯ ಗುಂಪುಗಳಿಂದ ಉಂಟಾಗುವ ಅನೇಕ ಸಾಂಸ್ಕೃತಿಕ ಸಂಘರ್ಷಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ. ‘ಅಧಿಕಾರ’ಎಂಬುದಿಲ್ಲಿ ಸಹಜತೆ, ಸರಳತೆಯ ಶೈಲಿಯಿಂದ ನೀತಿ-ತತ್ವ-ತಪಸ್ಸಾಧನೆ-ಸಮ್ಯಕ್ತ್ವಗಳನ್ನು ಪ್ರತಿಪಾದಿಸುವ ದೃಷ್ಟಿಯಲ್ಲಿ ಬಳಕೆಯಾಗಿದೆ. ಇಲ್ಲಿನ ಕಥೆಗಳಲ್ಲಿ ಬಳಕೆಯಾಗಿರುವ ಅಧಿಕಾರ ಮನುಷ್ಯನ ಭಾವನಾತ್ಮಕ ಸಂಬಂಧಗಳ ಮೇಲೆ ಅನೇಕ ಪರಿಣಾಮವನ್ನು ಉಂಟುಮಾಡಿರುವುದನ್ನು ಗುರುತಿಸಬಹುದು. ಆದ್ದರಿಂದ ವಡ್ಡಾರಾಧನೆಯ ಹತ್ತೊಂಬತ್ತು ಕಥೆಗಳಲ್ಲಿ ‘ಕಾರ್ತಿಕ ಋಷಿಯ ಕಥೆ’ಯನ್ನು ‘ಅಧಿಕಾರದ ನಿರ್ವಚನ’ ದೃಷ್ಟಿಯಲ್ಲಿ ಚರ್ಚೆಗೆ ಒಳಪಡಿಸುವ ಪ್ರಯತ್ನ ಲೇಖನದಲ್ಲಿ ಮಾಡಲಾಗಿದೆ.

ಕಾರ್ತಿಕ ಋಷಿಯ ಕಥೆಯಲ್ಲಿ ಅಧಿಕಾರಶಾಹಿ ವ್ಯವಸ್ಥೆಯಿಂದ ಉಂಟಾಗುವ ಸಾಂಸ್ಕೃತಿಕ ಪಲ್ಲಟ ಹಾಗೂ ಸಂಘರ್ಷಗಳಿಗೆ ನೇರವಾಗಿ ‘ಅಗ್ನಿರಾಜ’ನ ಮಗ ‘ಕಾರ್ತಿಕ ಋಷಿ’ಬಲಿಯಾಗಿದ್ದಾನೆ. ಈತನ ಬದುಕಿನ ಅನೇಕ ಘಟನೆಗಳಿಗೆ, ಭಾವನಾತ್ಮಕ ಸಂಬಂಧಗಳ ವಿಘಟನೆ, ಮಾನಸಿಕ ಸಂಘರ್ಷಗಳಿಗೆ ‘ಅಗ್ನಿರಾಜ’ನ ಅಧಿಕಾರದ ದುರುಪಯೋಗ ಮತ್ತು ಯಡವಟ್ಟಿನ ನಿರ್ಧಾರಗಳು ಕಾರಣವಾಗಿವೆ. ವಿಶೇಷವಾಗಿ ಜೈನಸಾಹಿತ್ಯ ಪರಂಪರೆಯಲ್ಲಿ ಜೈನಪುರಾಣಗಳಲ್ಲಿ ಬರುವ ಎಲ್ಲ ಪಾತ್ರಗಳಿಗೂ ವೈರಾಗ್ಯ ಸಾಧನೆಗೆ ಒಂದು ಕಾರಣ ಅಥವಾ ಘಟನೆಯನ್ನು ಜೈನ ಕವಿಗಳು ಸೃಷ್ಟಿಸಿರುವುದು ಜೈನಸಾಹಿತ್ಯದ ಲಕ್ಷಣಗಳಲ್ಲೊಂದು. ಉದಾಹರಣೆಗೆ ವಡ್ಡಾರಾಧನೆಯ ಕಥೆಗಳು, ಆದಿಪುರಾಣ, ಅನಂತನಾಥ ಪುರಾಣ ಮುಂತಾದ ಕೃತಿಗಳಲ್ಲಿ ನೀಡಿರುವ ವೈರಾಗ್ಯದ ಕಾರಣ, ಘಟನೆಗಳನ್ನು ನೋಡಬಹುದು. ಆದರೆ ಈ ಕಾರಣ, ಘಟನೆಗಳಲ್ಲಿ ಕೆಲವೊಂದು ಘಟನೆಗಳು ಮಾನವನ ಬದುಕಿಗೆ ಅದರಲ್ಲೂ, ಆತನ ಭಾವನಾತ್ಮಕ ರಕ್ತ ಸಂಬಂಧಗಳಿಗೆ ಸಂಬಂಧಿಸಿದ್ದಾಗ ಅದರ ಪರಿಣಾಮ ವೈರಾಗ್ಯಕ್ಕಿಂತ ಭೀಕರವಾದದ್ದು. ಇಂತಹ ಭಾವನಾತ್ಮಕ ಸಂಬಂಧಗಳಿಗೆ ‘ಕಾರ್ತಿಕ ಋಷಿಯ ಕಥೆ’ಸಾಕ್ಷಿಯಾಗಿದೆ. ‘ಕಾರ್ತಿಕ ಋಷಿಯ ಕಥೆ’ ಹಿಂದೆ ಹೇಳಿದಂತೆ ಜೈನಧರ್ಮ ತತ್ವವನ್ನು ಸಾರುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟ. ಆದರೆ ಈ ಉದ್ದೇಶದಲ್ಲಿ ಅಧಿಕಾರಶಾಹಿತನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿವೆ. ಅಧಿಕಾರದಿಂದ ಉಂಟಾದ ಅನೇಕ ಪರಿಣಾಮದ ಕುರುಹುಗಳಿವೆ. ಇಲ್ಲಿ ಅಧಿಕಾರದ ಶಕ್ತಿಯು ತನ್ನ ಸಮಾಜದ ವ್ಯವಸ್ಥೆಯನ್ನು ತನಗೆ ಬೇಕಾದ ರೀತಿ ಸೃಷ್ಟಿಸಿಕೊಳ್ಳುವ, ನಡೆಸಿಕೊಳ್ಳುವ, ನಿರ್ಧರಿಸುವ, ಶಿಕ್ಷಿಸುವ, ಹತ್ತಿಕ್ಕುವ ಹಾಗೂ ವಶಪಡಿಸಿಕೊಳ್ಳಲು ಮಾಡಿದ ಅನೇಕ ಪ್ರಯತ್ನಗಳಿವೆ. ಜೊತೆಗೆ ಅವುಗಳಿಗೆ ಸೂಕ್ಷ್ಮವಾದ, ತೀಕ್ಷ್ಬವಾದ ಪ್ರತಿಭಟನೆಯೂ ಇದೆ. ಆದ್ದರಿಂದ ‘ಕಾರ್ತಿಕ ಋಷಿಯ ಕಥೆ’ಯನ್ನು ‘ಅಧಿಕಾರದ ನಿರ್ವಚನ’ ನೆಲೆಗಳನ್ನು ನೋಡುವಾಗ ಅನೇಕ ಪ್ರಶ್ನೆಗಳು ಏಳುತ್ತವೆ. ಅವುಗಳನ್ನು ಕೆಳಗಿನಂತೆ ಗುರುತಿಸಿ ಚರ್ಚಿಸಲಾಗಿದೆ.

ಅಧಿಕಾರದ ಶಕ್ತಿ ಮತ್ತು ಸರ್ವಾಧಿಕಾರ

ಕಾರ್ತಿಕ ಋಷಿಯ ಕಥೆಯ ತುಂಬ ‘ಅಧಿಕಾರ’ಎಂಬುದು ತನಗೆ ಬೇಕಾದ ರೀತಿ ಮುಕ್ತ ಅವಿರೋಧ ಆಯ್ಕೆಯನ್ನು ಸಾಧಿಸುತ್ತ ಸರ್ವಾಧಿಕಾರತನವನ್ನು ಸಾಧಿಸಿದೆ. ಇಲ್ಲಿ ಅಧಿಕಾರದ ಶಕ್ತಿಯ ಕೇಂದ್ರಬಿಂದು ‘ಅಗ್ನಿರಾಜ’. ಆತನಿಗೆ ತನ್ನ ಅಧಿಕಾರದ ಶಕ್ತಿಯಿಂದ ಮುಕ್ತವಾದ, ಅವಿರೋಧವಾದ ಆಯ್ಕೆ ಮಾಡಿಕೊಳ್ಳಬಹುದಾದ ಸ್ವತಂತ್ರವಿರುವುದು ಸ್ಪಷ್ಟ. ಎಷ್ಷು ಸ್ವತಂತ್ರವೆಂದರೆ ತನ್ನ ಮಗಳನ್ನೇ ಮೋಹಿಸುವಷ್ಟು, ಸುಖಿಸುವಷ್ಟು ಮುಂದುವರೆದು ಮದುವೆ ಆಗುವಷ್ಟು..!. ಎಂದರೆ ತಪ್ಪಾಗಲಾರದು..

ಕಥೆಯಲ್ಲಿ ‘ಅಗ್ನಿರಾಜ’ತನ್ನ ಆರು ಜನ ಹೆಣ್ಣು ಮಕ್ಕಳಲ್ಲಿ ಕಿರಿಯ ಮಗಳಾದ ‘ಕೃತಿಕೆ’ಯ ರೂಪ, ಕಾಂತಿ, ಚೆಲುವನ್ನು ಕಂಡು ಅವಳ ಮೇಲೆ ಮೋಹಿತನಾಗಿ ವಿವಾಹವಾಗಲು ನಿರ್ಧಾರಿಸುತ್ತಾನೆ. ರಾಜನಿಗೆ ತನ್ನ ನಿರ್ಧಾರ ಸಮಾಜದ ಲೋಕರೂಢಿಗೆ ವಿರುದ್ಧವಾದದ್ದು ಹಾಗೂ ತನ್ನ ಸಮಾಜದಲ್ಲಿ ನಿರ್ಮಿತವಾಗಿದ್ದ ಮಾನವೀಯ ಭಾವನಾತ್ಮಕ ಸಂಬಂಧಗಳಿಗೆ ವಿರುದ್ಧವಾದದ್ದು ಎಂಬ ಸ್ಪಷ್ಟ ಅರಿವಿದೆ. ಆದರೆ ಅವನಿಗೆ ತನ್ನ ಅಧಿಕಾರದ ಶಕ್ತಿಯಿಂದ ಎಲ್ಲವನ್ನು ಪಡೆಯಬಹುದು, ಎಲ್ಲರನ್ನು ಹತ್ತಿಕ್ಕಬಹುದೆಂಬ ಗರ್ವವಿದೆ. ಅದ್ದರಿಂದ ಆತನು ತನ್ನ ನಿರ್ಧಾರವನ್ನು ಕಾಟಾಚಾರಕ್ಕೆ ಮಾತ್ರ ಸಾಮಂತರಿಗೆ, ಮಹಾಸಾಮಂತರಿಗೆ, ಪರಿವಾರದವರಿಗೆ, ಮಂತ್ರಿ ಸಮೂಹಕ್ಕೆ, ವೀರಮತಿ ಮಹಾರಾಣಿಗೆ ಹಾಗೂ ಎಲ್ಲ ಮತ ಧರ್ಮದವರಿಗೂ ತಿಳಿಸುತ್ತಾನೆ. ಅವನ ನಿರ್ಧಾರವನ್ನು ಒಪ್ಪಿದವರನ್ನು ಗೌರವಿಸುತ್ತಾನೆ. ಅದನ್ನು ವಿರೋಧಿಸಿದವರನ್ನು ಪಟ್ಟಣದಿಂದ ಓಡಿಸುತ್ತಾನೆ. ಈ ರೀತಿ ತನ್ನ ದುಷ್ಟ ನಿರ್ಧಾರಗಳನ್ನು ಒಪ್ಪುವವರನ್ನು ಗೌರವಿಸುವ, ವಿರೋಧಿಸುವವರನ್ನು ಶಿಕ್ಷಿಸುವ ರಾಜನ ಮನಸ್ಥಿತಿ ಸರ್ವಾಧಿಕಾರಿ ಮನೋಧರ್ಮಕ್ಕೆ ಸಾಕ್ಷಿಯಾಗುತ್ತದೆ. ಹಾಗೇ ಅಧಿಕಾರವೆಂಬ ಶಕ್ತಿಯು ಸರ್ವಾಧಿಕಾರದ ಸ್ವರೂಪ ಪಡೆದಾಗ ಸಮಾಜದ ಮೇಲೆ ಬೀರುವ ಪರಿಣಾಮಕ್ಕೆ ಕಾರ್ತಿಕ ಋಷಿ ಸಾಕ್ಷಿಯಾಗುತ್ತಾನೆ. ಮುಂದುವರೆದು ‘ಅಗ್ನಿರಾಜ’ನಂತಹ ಸರ್ವಾಧಿಕಾರಿ ರಾಜನ ಮನೋಧರ್ಮ ಅಂದಿಗೂ, ಇಂದಿಗೂ ಹಾಗೂ ಮುಂದಿಗೂ ಸಮಕಾಲೀನವಾಗಿ ನಿಲ್ಲುವುದಂತು ಸ್ಪಷ್ಟ. ಇಲ್ಲಿ ಅಗ್ನಿರಾಜನದ್ದು ಕಲ್ಪಿತ-ಪಾತ್ರವಾಗಿದ್ದರು, ವಾಸ್ತವದಲ್ಲಿ ಇಂತಹ ಅನೇಕ ಜೀವಂತ ಮನಸ್ಥಿತಿಗಳ ಪ್ರತಿನಿಧಿಯಾಗಿ ನಿಂತಿದ್ದಾನೆ.

ಅಧಿಕಾರದ ಶಕ್ತಿ ಮತ್ತು ಶ್ರೇಷ್ಟತೆಯ ಪ್ರಶ್ನೆ

            ಮಾನವ ನಾಗರೀಕತೆಯ ಪ್ರಕ್ರಿಯೆಯಲ್ಲಿ ಸೃಷ್ಟಿಸಿಕೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರೇಷ್ಟತೆ, ಕನಿಷ್ಟತೆಯ ಪ್ರಶ್ನೆಗಳು ಸಮಾಜದ ಒಂದು ಕ್ಯಾನ್ಸರ್ ಆಗಿದೆ. ಇವು ಜಾತಿ, ವರ್ಣ, ಲಿಂಗ ಹಾಗೂ ಆರ್ಥಿಕತೆ ಮುಂತಾದ ಮಾನದಂಡದ ಮೇಲೆ ನಿರ್ಧಾರಿತವಾಗಿವೆ. ಅಲ್ಲದೇ ಇವೆಲ್ಲ ಅಧಿಕಾರ ಚಲಾವಣೆಯ ಮಾರ್ಗಗಳು ಕೂಡ ಹೌದು. ಕೆಳ ಜಾತಿಯವ ಕನಿಷ್ಟ, ಮೇಲು ಜಾತಿಯವ ಶ್ರೇಷ್ಟ. ಬೆಳ್ಳಗಿರುವವ ಶ್ರೇಷ್ಟ, ಕಪ್ಪಾಗಿರುವವ ಕನಿಷ್ಟ. ಹೆಣ್ಣು ಕನಿಷ್ಟ, ಗಂಡು ಶ್ರೇಷ್ಟ. ಶ್ರೀಮಂತ ಶ್ರೇಷ್ಟ, ಬಡವ ಕನಿಷ್ಟ ಹೀಗೆ ಅಧಿಕಾರದ ಹಿನ್ನೆಲೆಯಲ್ಲಿ ಶ್ರೇಷ್ಟತೆ, ಕನಿಷ್ಠತೆಯ ನಿರ್ಧಾರವನ್ನು ನೋಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇಂತಹ ವ್ಯವಸ್ಥೆಯ ಪ್ರತಿನಿಧಿಯಾಗಿ ‘ಕಾರ್ತಿಕ ಋಷಿಯ ಕಥೆ’ಯ ‘ಅಗ್ನಿರಾಜ’ನಿದ್ದಾನೆ. ಇವನಿಗೆ ಸಮಾಜದಲ್ಲಿ ಶ್ರೇಷ್ಟವೆಂಬ ಪಟ್ಟವನ್ನು ಅವನಿಗಿರುವ ರಾಜನೆಂಬ ಅಧಿಕಾರದಿಂದ ಕೊಟ್ಟಾಗಿದೆ. ಆದ್ದರಿಂದ ಅವನು ತನ್ನ ಮಗಳನ್ನು ಮದುವೆಯಾಗುವುದರ ಬಗ್ಗೆ ಎಲ್ಲರ ಮುಂದೆ ಹೇಳುವಾಗ ಅಧಿಕಾರದ ಶ್ರೇಷ್ಟತೆಯನಿಟ್ಟುಕೊಂಡು “ನಾನು ರಾಜ್ಯಭಾರ ಮಾಡತಕ್ಕ ಪ್ರದೇಶಗಳಲ್ಲಿ ಹುಟ್ಟಿ ಬಂದ ಶ್ರೇಷ್ಟವಾದ ವಸ್ತು ಯಾರಿಗೆ ಸೇರಬೇಕಾದುದು?”(ವಡ್ಡಾರಾಧನೆ, ಟಿ.ಕೇಶವ ಭಟ್ಟ, ಪು.ಸಂ.೨೦೦) ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಅದಕ್ಕೆ ಅಲ್ಲಿ ನೆರೆದಿದ್ದವರೆಲ್ಲ ರಾಜನಿಗೆ “ಒಳ್ಳೆಯದಾದ ಆನೆಯೂ ಕುದುರೆಯೂ ಮುತ್ತೂ ಮಾಣಿಕ್ಯವೂ ಸ್ತ್ರೀರತ್ನ ಮುಂತಾದ ಒಳ್ಳೆಯದಾದ ಶ್ರೇಷ್ಠವಾದ ವಸ್ತುಗಳೆಲ್ಲವೂ ಭೂಮಿಯ ಆಳತಕ್ಕವನಿಗೆ ಸೇರಬೇಕಾದವು?”(ವಡ್ಡಾರಾಧನೆ, ಟಿ.ಕೇಶವ ಭಟ್ಟ, ಪು.ಸಂ.೨೦೦) ಎಂದು ಹೇಳಿ ರಾಜನ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತಾರೆ. ಇಲ್ಲಿ ಮುಖ್ಯವಾಗಿ ರಾಜನೆಂಬ ಶ್ರೇಷ್ಟತೆಯ ಕಾರಣವಾಗಿಯೇ ರಾಜನ ತೀರ್ಮಾನಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ ಅಧಿಕಾರ ನೆಲೆಯಲ್ಲಿ ನೋಡಿದಾಗ ರಾಜ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರೇಷ್ಟ ಸ್ಥಾನದಲ್ಲಿದ್ದಾನೆ. ಅವನು ಹೇಳಿದಂತೆ ಕೇಳುವುದು ಮಾತ್ರ ಸರ್ವರ ಕರ್ತವ್ಯ, ವಿರೋಧಿಸುವುದಲ್ಲ. ಅದನ್ನು ವಿರೋಧಿಸಿದ್ದರ ಪರಿಣಾಮವನ್ನು ಸಹ ಕಥೆಯಲ್ಲಿ ಕಾಣಲು ಸಾಧ್ಯವಿದೆ. ಆದ್ದರಿಂದ ಅಧಿಕಾರಕ್ಕೆ ವಿರುದ್ಧವಾಗಿ ಮಾತನಾಡಲು ಸಾಧ್ಯವಿಲ್ಲದೇ ರಾಜನ ಮಾತಿಗೆ ಮನ್ನಣೆ ನೀಡಬೇಕಾದ ಅನಿವಾರ್ಯತೆ ಅವರಲ್ಲಿದೆಂದರೆ ತಪ್ಪಾಗಲಾರದು.

ಅಧಿಕಾರದ ಶಕ್ತಿ ಮತ್ತು ಪ್ರತಿರೋಧವನ್ನು ಹತ್ತಿಕ್ಕುವಿಕೆ

ಸಾಮಾಜಿಕ ವ್ಯವಸ್ಥೆಯಲ್ಲಿ ‘ದುರ್ಬಲ ಮತ್ತು ಪ್ರಬಲ’, ‘ಒಳಿತು ಮತ್ತು ಕೆಡಕು’, ‘ಸತ್ಯ ಮತ್ತು ಸುಳ್ಳು’ ಇವುಗಳಲ್ಲಿ ಒಂದು ಗುಂಪು ಅಧಿಕಾರವನ್ನು ವಿರೋಧಿಸುವ, ಪ್ರತಿಭಟಿಸುವ ನೆಲೆಯಲ್ಲಿ ನಿಂತರೆ. ಇನ್ನೊಂದು ಗುಂಪು ಅಧಿಕಾರವನ್ನು ಪ್ರತಿಪಾದಿಸುವ, ಸಮರ್ಥಿಸುವ, ಪರವಹಿಸುವ ಮೂಲಕ ಒಂದಕ್ಕೊಂದು ಸಂಬಂಧ ಹೊಂದಿವೆ. ಇವುಗಳಲ್ಲಿ ವಾಸ್ತವತೆ ಕಡೆಗೆ ನಿಂತು, ಅಧಿಕಾರ ವರ್ಗದ ದೌರ್ಬಲ್ಯ, ದೌರ್ಜನ್ಯ ಹಾಗೂ ದುರಾಡಳಿತ ಮುಂತಾದವುಗಳನ್ನು ವಿರೋಧಿಸಲು, ಪ್ರತಿಭಟಿಸಲು ಮುಂದಾದಾಗ ಈ ಎರಡು ಗುಂಪುಗಳ ಮಧ್ಯೆ ಸಂಘರ್ಷ ಏರ್ಪಡುತ್ತದೆ. ಇಂತಹ ಸಂಘರ್ಷದಲ್ಲಿ ಅಧಿಕಾರದ ವರ್ಗ ತನ್ನ ವಿರೋಧಿಸುವ, ಪ್ರಶ್ನಿಸುವ ಗುಂಪನ್ನು, ವ್ಯಕ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತದೆ. ಇದೇ ರೀತಿ ಹತ್ತಿಕ್ಕುವ ಕೆಲಸವನ್ನು ‘ಕಾರ್ತಿಕ ಋಷಿಯ ಕಥೆ’ಯಲ್ಲಿ ಅಗ್ನಿರಾಜ ಮಾಡುತ್ತಾನೆ. ಆತ ತನ್ನ ಮಗಳನ್ನು ವಿವಾಹವಾಗುವ ವಿಚಾರವನ್ನು ಎಲ್ಲರಿಗೂ ಕೇಳಿದಾಗ ಎಲ್ಲರೂ ರಾಜನ ವಿಚಾರವನ್ನು ಸಮ್ಮತಿಸುತ್ತಾರೆ. ಈ ಸಮ್ಮತಿಯಲ್ಲಿ ಅಧಿಕಾರದ ವಿರುದ್ದ ಪ್ರತಿಭಟಿಸಲಾಗದ ಭಯ ಅವರಲ್ಲಿದೆಂಬುದು ಗಮನಿಸಬೇಕಾದ ಸೂಕ್ಷ್ಮ ವಿಚಾರ. ಆದರೆ ರಾಜನ ನಿರ್ಧಾರವನ್ನು ಋಷಿಮುನಿಗಳು ಮಾತ್ರ ಸಮ್ಮತಿಸದೆ “ಯಾವ ವಸ್ತುವೆಂಬುದನ್ನು ಹೇಳಿದರೆ ಯೋಗ್ಯವಾದದು ಯಾವುದು, ಯೋಗ್ಯವಲ್ಲದುದು ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು” ಎಂಬ ಪ್ರಶ್ನೆಯನ್ನು ಕೇಳುವಲ್ಲಿ ಅವರ ಸಾಮಾಜಿಕ ಜವಾಬ್ದಾರಿಯಿದೆ. ಆದರೆ ಅದನ್ನು ಅಧಿಕಾರದ ಪ್ರತಿನಿಧಿಯಾದ ರಾಜ ಸಹಿಸದೆ “ಈ ಋಷಿಗಳು ಇವರೆಲ್ಲ ಹೇಳುವಂತೆ ಹೇಳುವವರಲ್ಲ, ಒಪ್ಪಿದವವರೂ ಅಲ್ಲ. ಬಹಳ ಮಾತಾಡುವವರು ! ಇವರನ್ನು ಪಟ್ಟಣದಿಂದ ಓಡಿಸಿ ಬಿಡಿ” ಎಂಬ ಆಜ್ಞೆಯನ್ನು ನೀಡುವುದು ತನ್ನ ವಿರೋಧಿಸಿದವರನ್ನು ಹತ್ತಿಕ್ಕುವ ಪ್ರಕ್ರಿಯೆಯಾಗಿದೆ. ಇಲ್ಲಿ ಋಷಿಗಳು ರಾಜ ಮಾಡುತ್ತಿರುವ ಕಾರ್ಯದ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದಾರೆ. ಅಲ್ಲದೇ ಅವನ ದುಡುಕಿನ ನಿರ್ಧಾರದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅದರೆ ಆ ಅಧಿಕಾರಶಾಹಿಗೆ ಇವರ ಪ್ರಶ್ನಿಸುವುದನ್ನು ಸಹಿಸಲಾಗುತ್ತಿಲ್ಲ. ಅವರ ತಿಳುವಳಿಕೆಯ ಮಾತು ಅಗತ್ಯವಿಲ್ಲ. ಅದ್ದರಿಂದ ಪ್ರಶ್ನಿಸಿದ ಋಷಿಮುನಿಗಳನ್ನು ಶಿಕ್ಷಿಸಲು ಆಜ್ಞೆ ಮಾಡುತ್ತಾನೆ. ಇಂತಹ ಹತ್ತಿಕ್ಕುವಿಕೆ ಎಂಬುದು ಅಧಿಕಾರಶಾಹಿ ಗುಂಪುಗಳಿಂದ ಅಂದಿಗೂ, ಇಂದಿಗೂ ನಡೆಯುತ್ತಲೇ ಇದೆ. ಸಮಕಾಲೀನ ಸಂದರ್ಭದಲ್ಲಿ ಪ್ರಭುತ್ವವನ್ನು ಪ್ರಶ್ನಿಸುವುದೇ ದೇಶ ದ್ರೋಹವಾಗಿದೆ. ಅಂದು ‘ಅಗ್ನಿರಾಜ’ ಮಾಡಿದಂತೆ ಇಂದಿನ ಅಧಿಕಾರಶಾಹಿ ವ್ಯವಸ್ಥೆ ತನ್ನನ್ನು ಪ್ರಶ್ನಿಸುವವರನ್ನು ಹತ್ತಿಕ್ಕುತ್ತಿರುವ ಪ್ರವೃತ್ತಿಯನ್ನು ನಮ್ಮ ಕಣ್ಣ ಮುಂದೆಯೇ ನೋಡುತ್ತಿದ್ದೇವೆ. ಇಂತಹ ಸಮಕಾಲೀನ ಸಮಸ್ಯೆಗೂ ಹತ್ತಿರವಾಗುವ ವಿಚಾರವನ್ನು ಒಳಗೊಂಡಿರುವ ಕಥೆ ಸಮಕಾಲೀನ ಓದಿಗೆ, ಚರ್ಚೆಗೆ ಅಗತ್ಯವಾಗುತ್ತದೆ.

ಅಧಿಕಾರದ ಶಕ್ತಿ ಮತ್ತು ಮಹಿಳೆ

ಮಹಿಳೆಯನ್ನು ಅಧೀನ ನೆಲೆಯಲ್ಲಿಟ್ಟು ನೋಡುವ ಅಧಿಕಾರಶಾಹಿ ವ್ಯವಸ್ಥೆಯು ಪುರುಷ ಪ್ರಧಾನತೆಯನ್ನು ಪ್ರತಿನಿಧಿಸುತ್ತದೆ. ಈ ಪುರುಷ ಪ್ರಧಾನತೆಯು ಲಿಂಗ ಆಧಾರದ ಮೇಲೆ ಮಹಿಳೆಯನ್ನು ಕನಿಷ್ಟ ನೆಲೆಗೆ ತಳ್ಳಿ ಅವಳ ಎಲ್ಲ ಆಯ್ಕೆ, ಹಕ್ಕುಗಳನ್ನು ಕಿತ್ತುಕೊಂಡಿದೆ. ಅವಳು ಬಾಲ್ಯದಿಂದ ಹಿಡಿದು ಮರಣದವರೆಗೂ ಪುರುಷನ ಅಧಿಕಾರದ ಅಧೀನತೆಗೆ ಒಂದಲ್ಲ ಒಂದು ರೀತಿ ಒಳಪಡುತ್ತ ಹೋಗುತ್ತಾಳೆ. ಬಾಲ್ಯದಲ್ಲಿ ತಂದೆ, ವಯಸ್ಸಿನಲ್ಲಿ ಗಂಡ, ವೃದ್ದಾಪ್ಯದಲ್ಲಿ ಮಕ್ಕಳು. ಹೀಗೆ ಹೆಣ್ಣು ಸಾಯುವರೆಗೂ ಅಧಿಕಾರದ ಅಧೀನದ ಸರಪಳಿಯಲ್ಲೆ ಜೀವಿಸುತ್ತಾಳೆ. ಪುರುಷ ಪ್ರಧಾನ ಅಧಿಕಾರದ ಶಕ್ತಿ ಅವಳಿಗೆ ಯಾವುದೇ ಹಕ್ಕು, ಸ್ವತಂತ್ರ ನಿರ್ಧಾರ, ಸ್ವತಂತ್ರ ಜೀವನ ಹಾಗೂ ಸ್ವತಂತ್ರ ಆಯ್ಕೆಗಳನ್ನು ನೀಡದೆ ವಂಚಿಸುತ್ತಿದೆ. ‘ಕಾರ್ತಿಕ ಋಷಿಯ ಕಥೆ’ಯಲ್ಲಿ ‘ಅಗ್ನಿರಾಜ’ನ ಕಿರಿಯ ಮಗಳಾದ ‘ಕೃತಿಕೆ’ ರಾಜವಂಶದಲ್ಲಿ ಹುಟ್ಟಿದ್ದರು ಕೂಡ ಅವಳಿಗೆ ಯಾವುದೇ ಆಯ್ಕೆ ಸ್ವತಂತ್ರ, ಸ್ವ-ನಿರ್ಧಾರ ಹಾಗೂ ಸ್ವ-ಹಕ್ಕುಗಳನ್ನು ಹೊಂದಲು ಯಾವ ಅವಕಾಶವನ್ನು ಕೊಡಲಾಗಿಲ್ಲ. ರಾಜವಂಶದ ಸ್ತ್ರೀಯರದ್ದೇ ಈ ಪರಿಸ್ಥಿತಿ ಆಗಿರುವಾಗ ಇನ್ನೂ ಸಾಮಾನ್ಯ ಸ್ತ್ರೀಯರ ಪರಿಸ್ಥಿತಿ ಶೋಚನೀಯವೇ ಸರಿ. ಹೇಳಬಹುದು. ‘ಕೃತಿಕೆ’ಯನ್ನು ಅವಳ ತಂದೆಯೇ ಅವಳನ್ನು ಮೋಹಿಸಿ ವಿವಾಹವಾಗಲೂ ಮುಂದಾದಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ಸ್ವತಂತ್ರ ಕೂಡ ಅವಳಿಗಿಲ್ಲ. ಕಾರಣ ಅಧಿಕಾರ ಅವಳ ಎಲ್ಲಾ  ಹಕ್ಕುಗಳನ್ನು ಕಿತ್ತುಕೊಂಡಿದೆ. ಅವಳನ್ನು ವಿವಾಹವಾದ ಅವಳ ಅಪ್ಪನಿಗೆ ತನ್ನ ಮಗಳೆಂಬ ಅಧಿಕಾರದವಿದೆ. ಹಾಗೇ ಅವನ ಪ್ರಭುತ್ವದ ಅಧಿಕಾರದ ಶಕ್ತಿ ಅವನು ಬಯಸಿದೆಲ್ಲವನ್ನು ಪಡೆಯಲು ಅಸ್ತ್ರವಾಗಿದೆ. ಇಂತಹ ಅಧಿಕಾರದ ಅಸ್ತ್ರಗಳಿಂದ ಅವಳನ್ನು ಹತ್ತಿಕ್ಕಿ ವಿವಾಹವಾಗುತ್ತಾನೆ. ಕಥೆಯಲ್ಲಿ ಯಾವ ಮಹಿಳಾ ಪಾತ್ರಗಳು ರಾಜನನ್ನು ಅಥವಾ ಅಧಿಕಾರಶಾಹಿ ವ್ಯವಸ್ಥೆಯನ್ನು ವಿರೋಧಿಸಲು ಮುಂದಾಗದೆ ಮೌನಕ್ಕೆ ಶರಣಾಗಿವೆ. ‘ಕೃತಿಕೆ’ಯ ತಾಯಿ ‘ವೀರಮತಿ’ ತನ್ನ ಗಂಡನಾದ ‘ಅಗ್ನಿರಾಜ’ನ ನಿರ್ಧಾರ ತಿಳಿದು ಪ್ರತಿಭಟಿಸುವ, ಪ್ರಶ್ನಿಸುವ ಧೈರ್ಯವಿಲ್ಲದೆ ಆ ದಿನವೇ ಬ್ರಹ್ಮಚಾರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಹಾಗೆ ಮನಸ್ಸಿನಲ್ಲಿ ಇಷ್ಟವಿಲ್ಲದಿದ್ದರೂ, ತಂದೆಯನ್ನೆ ವಿವಾಹವಾಗಿ ಪ್ರತಿ ಕ್ಷಣವೂ ಮಾನಸಿಕ ಸಂಘರ್ಷಕ್ಕೆ ಈಡಾಗಿರುವ ‘ಕೃತಿಕೆ’. ತಂದೆಯೂ ಆದ, ಗಂಡನೂ ಆದ ‘ಅಗ್ನಿರಾಜ’ನೊಂದಿಗೆ ಜೀವನ ನಡೆಸುತ್ತಾಳೆ. ಹೀಗೆ ಜೀವನ ನಡೆಸಲೇ ಬೇಕಾದ ಅನಿವಾರ್ಯತೆಯನ್ನು ಅಗ್ನಿರಾಜದ ಅಧಿಕಾರದ ಶಕ್ತಿ ಸೃಷ್ಟಿಸಿದೆಂದರೆ ತಪ್ಪಾಗಲಾರದು. ಇಂತಹ ಜೀವನ ನಡೆಸುವ ಸಂದರ್ಭದಲ್ಲಿ ಅವಳ ಮನಸ್ಸಿನಲ್ಲಿ ಉಂಟಾಗುವ ಮಾನಸಿಕ ತೊಳಲಾಟ, ಸಂಘರ್ಷಗಳ ಭೀಕರತೆಗಳನ್ನು ಊಹಿಸಲು ಅಸಾಧ್ಯ.

 ‘ಕೃತಿಕೆ’ಯ ಮಗಳಾದ ‘ವೀರಶ್ರೀ’ ಕೂಡ ಕಥೆಯಲ್ಲಿ ಅಧಿಕಾರದ(ಗಂಡನ) ಅನುಮಾನಕ್ಕೆ ಗುರಿಯಾಗಿದ್ದಾಳೆ. ಕಥೆಯಲ್ಲಿ ‘ವೀರಶ್ರೀ’ ಗಂಡನೊಂದಿಗೆ ಆರಮನೆಯಲ್ಲಿರುವಾಗ ಅವಳ ಅಣ್ಣ ಕಾರ್ತಿಕ ಋಷಿ ಭಿಕ್ಷೆಗೆ ಬರುತ್ತಾನೆ. ಈ ವಿಚಾರ ತಿಳಿದ ವೀರಶ್ರೀ ತನ್ನ ಅಣ್ಣನಾದ ಕಾರ್ತಿಕ ಋಷಿಗೆ ಭಿಕ್ಷೆ ನೀಡಲು, ತೊಡೆಯ ಮೇಲೆ ಮಲಗಿದ್ದ ಗಂಡನನ್ನು ಬಿಟ್ಟು ಹೊರಬರುತ್ತಾಳೆ. ಆದರೆ ‘ವೀರಶ್ರೀ’ಯ ಗಂಡ ನನ್ನ ಹೆಂಡತಿ ಪರಪುರಷನೊಂದಿಗೆ ದಿನನಿತ್ಯ ಹೋಗುತ್ತಾಳೆಂಬ ಭ್ರಮೆಯಲ್ಲಿ ಹೊರಬಂದು ಈಟಿಯಿಂದ ಕಾರ್ತಿಕ ಋಷಿಯನ್ನು ತಿವಿದು ಕೊಲ್ಲುತ್ತಾನೆ. ತನ್ನ ಅಣ್ಣನ ಸಾವಿನೊಂದಿಗೆ ಅವಳ ನಗು ಕೂಡ ಸತ್ತು ಹೋಗುತ್ತದೆ. ವೀರಶ್ರೀಯ ಗಂಡ ಕಾರ್ತಿಕನ ಸಾಯಿಸುವುದರ ಜೊತೆಗೆ ವೀರಶ್ರೀಯ ನಗುವನ್ನು ಕೂಡ ಸಾಯಿಸುತ್ತಾನೆ. ಇಲ್ಲಿ ‘ವೀರಶ್ರೀ’ ಸ್ಥಾನದಲ್ಲಿ ರಾಜನಿದ್ದು, ಆತ ತನ್ನ ಹೆಂಡತಿಯ ಸ್ಥಾನದಲ್ಲಿದ್ದು, ಅವಳನ್ನು ಬಿಟ್ಟು ಹೊರಬಂದು ಪರಸ್ತ್ರೀಯೊಂದಿಗೆ ಹೋಗಿದ್ದರು ಕೂಡ ಆತನ ಮೇಲೆ ಅನುಮಾನದ ಪ್ರಶ್ನೆಗಳು ಏಳುತ್ತಿರಲಿಲ್ಲ. ಹೆಣ್ಣಾದ ಕಾರಣ ಅವಳ ಚಾರಿತ್ರ್ಯದ ಮೇಲೆಯೇ ನೇರವಾಗಿ ಪ್ರಶ್ನೆ ಮಾಡಲಾಗಿದೆ. ಒಟ್ಟಿನಲ್ಲಿ ಕಾರ್ತಿಕ ಋಷಿಯ ಕಥೆಯಲ್ಲಿ ಬರುವ ಸ್ತ್ರೀ ಪಾತ್ರಗಳೆಲ್ಲವು ಪುರುಷ ಪ್ರಧಾನ ಅಧಿಕಾರದ ಶಕ್ತಿಯಿಂದ ನರಳಿವೆ. ಪುರುಷ ತನ್ನ ಅಧಿಕಾರದಿಂದ ಹೆಣ್ಣಿನ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ಅವಳನ್ನು ಪ್ರಾಣಿಯಂತೆ ನಡೆಸಿಕೊಳ್ಳುವ ಮೂಲಕ ತನ್ನ ಮೃಗಿಯ ಮನಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.

ಅಧಿಕಾರದ ಶಕ್ತಿ ಮತ್ತು ಮಾನಸಿಕ ಸಂಘರ್ಷ

ಪ್ರಾಣಿ ಜಗತ್ತಿನಲ್ಲಿ ಅತಿಹೆಚ್ಚು ಮಾನಸಿಕ ಸಂಘರ್ಷಕ್ಕೆ ಈಡಾಗುವ ಪ್ರಾಣಿ ಎಂದರೆ ಅದು ಮನುಷ್ಯ. ಏಕೆಂದರೆ ಮನುಷ್ಯ ತನ್ನ ಬದುಕಿನ ವ್ಯವಸ್ಥೆಯಲ್ಲಿ ಸಮಾಜವನ್ನು ಭಾವನಾತ್ಮಕ ರಕ್ತಸಂಬಂಧ ಎಂಬ ಪರಿಕಲ್ಪನೆಯಲ್ಲಿ ನಿರ್ಮಾಣ ಮಾಡಿಕೊಂಡಿದ್ದಾನೆ. ಹೀಗೆ ನಿರ್ಮಿಸಿಕೊಂಡಿರುವ ಭಾವನಾತ್ಮಕ ಸಂಬಂಧಗಳಿಂದ ಅವನು ದೈಹಿಕ ಸಂಘರ್ಷಕ್ಕಿಂತ, ಮಾನಸಿಕ ಸಂಘರ್ಷಕ್ಕೆ ಹೆಚ್ಚು ಒಳಗಾಗಿದ್ದಾನೆ. ಇದಕ್ಕೆ ಕಾರಣ ಅವನು ನಿರ್ಮಿಸಿಕೊಂಡಿರುವ ಸಂಬಂಧಗಳಲ್ಲಿ ಉಂಟಾದ ಪಲ್ಲಟಗಳು. ‘ಕಾರ್ತಿಕ ಋಷಿಯ ಕಥೆ’ಯನ್ನು ಮಾನಸಿಕ ಸಂಘರ್ಷದ ನೆಲೆಯಲ್ಲಿ ನೋಡಿದಾಗ ಮಾನಸಿಕ ಸಂಘರ್ಷಕ್ಕೆ ಅಧಿಕಾರದ ಶಕ್ತಿ ನೇರ ಕಾರಣವಾಗಿದೆ. ಸಮಾಜದಲ್ಲಿ ನಿರ್ಮಿತವಾದ ಭಾವನಾತ್ಮಕ ಸಂಬಂಧಗಳ ಪಲ್ಲಟದಿಂದ ಇಲ್ಲಿನ ಅನೇಕ ಪಾತ್ರಗಳು ಮಾನಸಿಕ ಸಂಘರ್ಷವನ್ನು ಅನುಭವಿಸುತ್ತವೆ. ಮೊದಲು ಸಂಘರ್ಷಕ್ಕೆ ಒಳಗಾಗುವುದು ‘ವೀರಮತಿ’ ಹಾಗೂ ‘ಕೃತಿಕೆ’ಎಂಬ ಸ್ತ್ರೀಪಾತ್ರಗಳು. ಇಲ್ಲಿ ‘ವೀರಮತಿ’ಯ ಗಂಡ ‘ಅಗ್ನಿರಾಜ’ತನ್ನ ಕಿರಿಯ ಮಗಳಾದ ‘ಕೃತಿಕೆ’ಯನ್ನು ವಿವಾಹವಾಗುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಸ್ವತಃ ತಮ್ಮಿಬ್ಬರಿಗೆ ಹುಟ್ಟಿರುವ ಮಗಳನ್ನೆ ಬಯಸಿರುವ ರಾಜನ ನಿರ್ಧಾರವನ್ನು ಕಂಡು ‘ವೀರಮತಿ’ಮಾನಸಿಕ ಸಂಘರ್ಷಕ್ಕೆ ಈಡಾಗಿ ಸನ್ಯಾಸತ್ವವನ್ನು ಸ್ವೀಕರಿಸುತ್ತಾಳೆ. ಹೆಣ್ಣು ತನ್ನ ಗಂಡ ಇನ್ನೊಂದು ಹೆಣ್ಣಿನ ಮೇಲೆ ಮೋಹಿತನಾಗಿರುವ ವಿಚಾರವನ್ನು ಕೇಳಿಯೆ ಮಾನಸಿಕ ನೋವಿಗೆ, ಖಿನ್ನತೆಗೆ ಒಳಗಾಗುವ, ಒಳಗಾಗಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಅಂತಹದರಲ್ಲಿ ತನ್ನ ಗರ್ಭದಲ್ಲಿಯೇ ಜನಿಸಿದ ಹೆಣ್ಣು ಮಗುವಿನ ಮೇಲೆ, ಆ ಜನನಕ್ಕೆ ಕಾರಣನಾದ ತನ್ನ ಗಂಡನೇ ಕಾಮಿಸಿದ್ದಾನೆ. ಆ ಹೆಣ್ಣು ಮಗಳನ್ನೆ ಹೆಂಡತಿಯಾಗಿ ಪಡೆಯುವ ಇಂಗಿತವನ್ನು ಸಹ ವ್ಯಕ್ತಪಡಿಸಿ ಕೊನೆಗೆ ಅವಳ ಮುಂದೆಯೇ ವಿವಾಹವಾಗುತ್ತಾನೆ. ಈ ಎಲ್ಲ ಘಟನೆಗಳು ‘ವೀರಮತಿ’ಯ ಕಣ್ಣೆದುರಿಗೆ ನಡೆದಿರುವಾಗ ಅವಳು ಅನುಭವಿಸುವ ಮಾನಸಿಕ ಸಂಘರ್ಷ ಸನ್ಯಾಸತ್ವ ಸ್ವೀಕರಿಸುವಷ್ಟು ಭೀಕರವಾದ್ದಾಗಿದೆ. ‘ವೀರಮತಿ’ಯಂತೆಯೇ ಮಾನಸಿಕ ಸಂಘರ್ಷಕ್ಕೆ ಒಳಪಡುವವಳು ‘ಕೃತಿಕೆ’. ಇವಳು ತನ್ನ ಹುಟ್ಟಿಗೆ ಕಾರಣವಾದ ತನ್ನ ತಂದೆಯನ್ನೆ ವಿವಾಹವಾಗಬೇಕಾಗುತ್ತದೆ. ಅಧಿಕಾರದ ದರ್ಪದಿಂದ ತನ್ನ ಮಗಳನ್ನೆ ಹೆಂಡತಿಯಾಗಿ ಪಡೆಯುವ ‘ಅಗ್ನಿರಾಜ’ ತನ್ನ ಮಗಳೊಂದಿಗೆ ಸಂಸಾರ ನಡೆಸಿ ಸಂತಾನವನ್ನು ಸಹ ಪಡೆಯುತ್ತಾನೆ. ಇಲ್ಲಿ ರಾಜ ಎಲ್ಲೂ ಮಾನಸಿಕ ಸಂಘರ್ಷಕ್ಕೆ, ವೇದನೆಗೆ ಒಳಗಾಗುವುದಿಲ್ಲ. ಆತನಿಗೆ ತನ್ನ ನಿರ್ಧಾರಗಳ ಪರಿಣಾಮದ ಅರಿವಿಲ್ಲ. ಆದರೆ ಇಲ್ಲಿ ತನ್ನ ತಂದೆಯನ್ನೆ ಗಂಡನಾಗಿ ಸ್ವಿಕರಿಸಿ ಸಂಸಾರ ನಡೆಸುತ್ತಿರುವ ‘ಕೃತಿಕೆ’ಯ ಮಾನಸಿಕ ಸಂಘರ್ಷವು ಭೀಕರವಾದದ್ದು. ತಂದೆಯೊಂದಿಗೆ ದೈಹಿಕ, ಮಾನಸಿಕ ಸಂಬಂಧವನ್ನು ಹೊಂದುವಾಗ ಅವಳು ಅನುಭವಿಸಿರುವ ಸಂಘರ್ಷ ಹೇಳಲು ಅಸಾಧ್ಯವಾದದ್ದು. ಅವಳ ಇಡೀ ಬದುಕಿನಲ್ಲಿ ಕೃತಕತೆ ಛಾಯೆ, ವೇದನೆ, ಸಂಘರ್ಷವಿದೆ. ಆದರೆ ಅದನ್ನು ಹೊರಹಾಕುವ, ಪ್ರತಿಭಟಿಸುವ ಶಕ್ತಿ ಅವಳಲ್ಲಿ ಉಳಿದಿಲ್ಲ. ಅವಳ ಮಗ ‘ಕಾರ್ತಿಕ’ವನಕೇಳಿಯನ್ನು ಆಡುವುದಕ್ಕಾಗಿ ವನಕ್ಕೆ ಹೋದಾಗ ಅಲ್ಲಿ ಕಾರ್ತಿಕನಂತೆ ಬಂದಿರುವ ಎಲ್ಲಾ ಕುಮಾರರಿಗೂ ಅವರ ಅಜ್ಜಂದಿರ ಮನೆಯಿಂದ ಮೈಗೆ ಹಚ್ಚಲು, ಉಡಲು, ತೊಡಲು ಪುಷ್ಪ, ತಾಂಬೂಲ ಖಾದ್ಯವಸ್ತುಗಳು ಬರುತ್ತವೆ. ಆದರೆ ಕಾರ್ತಿಕನಿಗೆ ಬರುವುದಿಲ್ಲ ಹಾಗಾಗಿ ಅವನು ಮನಸ್ಸಿನಲ್ಲಿಯೇ ದುಖಿಃತನಾಗಿ ತನ್ನ ತಾಯಿ ಬಳಿ “ಅಮ್ಮಾ ನಿಮ್ಮ ತಂದೆಯಾಗಿರುವ ನನ್ನ ಅಜ್ಜನು ಇರುವನೋ? ಇಲ್ಲವೋ?”(ವಡ್ಡಾರಾಧನೆ, ಟಿ.ಕೇಶವ ಭಟ್ಟ, ಪು.ಸಂ.೨೦೧) ಎಂದು ಕೇಳಿದಾಗ ಕೃತಿಕೆ ಮನಸ್ಸಿನಲ್ಲಿಯೇ ಸತ್ತವಳಾಂತೆ ದುಃಖಿತಳಾಗುತ್ತಾಳೆ. “ಮಗನೇ, ಏನು ಹೇಳಲಿ! ನಿನಗೆ ತಂದೆಯಾಗಿರುವವನು ನನಗೂ ತಂದೆಯಾಗಬೇಕು”(ವಡ್ಡಾರಾಧನೆ, ಟಿ.ಕೇಶವ ಭಟ್ಟ, ಪು.ಸಂ.೨೦೧) ಎಂದು ಉತ್ತರಿಸುವಾಗ ಅವಳು ಅನುಭವಿಸುವ ಮಾನಸಿಕ ಯಾತನೆ, ಸಂಘರ್ಷಗಳು ಅಗ್ನಿರಾಜನಂತಹ ಅಧಿಕಾರಶಾಹಿ ವ್ಯವಸ್ಥೆ, ಪುರುಷ ಪ್ರಧಾನತೆಯೂ ಭಾವನಾತ್ಮಕ ಸಂಬಂಧಗಳಲ್ಲಿ ಉಂಟು ಮಾಡಿದ ಪರಿಣಾಮವನ್ನು ಸ್ಪಷ್ಟವಾಗಿ ಪ್ರತಿನಿಧಿಸುತ್ತದೆ. ವೀರಮತಿ, ಕೃತಿಕೆಯಂತೆ ಮಾನಸಿಕ ಸಂಘರ್ಷಕ್ಕೆ ಈಡಾಗುವ ಪಾತ್ರ’ಕಾರ್ತಿಕ’ನದ್ದು. ತನ್ನ ತಾಯಿಯಿಂದ ಉತ್ತರದ ನಿರೀಕ್ಷೆಯಲ್ಲಿದ್ದಾಗ “ಮಗನೇ, ಏನು ಹೇಳಲಿ! ನಿನಗೆ ತಂದೆಯಾಗಿರುವವನು ನನಗೂ ತಂದೆಯಾಗಬೇಕು”(ವಡ್ಡಾರಾಧನೆ, ಟಿ.ಕೇಶವ ಭಟ್ಟ, ಪು.ಸಂ.೨೦೧) ಎಂದಾಗ ಆತನ ಹುಟ್ಟಿಗೆ ಕಾರಣ ಆದವನೇ, ತನ್ನ ತಾಯಿಯ ಹುಟ್ಟಿಗೂ ಕಾರಣವೆಂಬ ಸತ್ಯದ ಅರಿವು ಅವನ ಮನಸ್ಸಿನಲ್ಲಿ ವೈರಾಗ್ಯ ತಾಳುವಷ್ಟರ ಮಟ್ಟಿಗೆ ಸಂಘರ್ಷ ಸೃಷ್ಟಿಸುತ್ತದೆ. ಇದಕ್ಕೆಲ್ಲ ಕಾರಣ ಅಧಿಕಾರಶಾಹಿ ವ್ಯವಸ್ಥೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದ್ದರಿಂದ ಕಥೆಯಲ್ಲಿನ ಪಾತ್ರಗಳೆಲ್ಲ ಅಧಿಕಾರದ ಪರಿಣಾಮದಿಂದ ಒಂದಿಲ್ಲೊಂದು ರೀತಿ ಮಾನಸಿಕ ಸಂಘರ್ಷಕ್ಕೆ ಒಳಪಡುತ್ತಲೇ ಸಾಗುತ್ತವೆ. ಹಾಗಾಗಿ ಕಥೆಯನ್ನು ಮಾನಸಿಕ ಸಂಘರ್ಷದ ನೆಲೆಯಲ್ಲಿ ನೋಡುವುದು ಕೂಡ ಮುಖ್ಯವಾಗಿದೆ.

ಅಧಿಕಾರದ ಶಕ್ತಿ ಮತ್ತು ಭಾವನಾತ್ಮಕ ಸಂಬಂಧಗಳ ವಿಘಟನೆ

            ಭಾವನಾತ್ಮಕ ಸಂಬಂಧ ಎಂಬುದನ್ನು ಮನುಷ್ಯ ತನ್ನ ಸಮಾಜ ನಿರ್ಮಾಣದ ಹಂತದಲ್ಲಿ ಕಟ್ಟಿಕೊಂಡಿರುವ ಪ್ರಮುಖ ವ್ಯವಸ್ಥೆಗಳಲ್ಲಿ ಒಂದು. ಇದಕ್ಕೆ ‘ರಕ್ತ ಸಂಬಂಧ’ದ ಸರಪಳಿಯಿದೆ. ಪ್ರತಿ ಒಂದು ಸಂಬಂಧಗಳಿಗೂ ಹಿಂದೆ ಹೇಳಿದಂತೆ ಭಾವನಾತ್ಮಕವಾದ ನಂಟಿದೆ. ‘ಗಂಡ-ಹೆಂಡತಿ’, ‘ತಂದೆ-ತಾಯಿ’, ‘ತಂದೆ-ಮಕ್ಕಳು’, ‘ಅಕ್ಕ-ತಮ್ಮ’ ಹಾಗೂ ‘ಅಣ್ಣ-ತಂಗಿ’ ಹೇಗೆ ಅನೇಕ ಭಾವನಾತ್ಮಕ ಸಂಬಂಧಗಳ ಸರಪಳಿಯನ್ನು ಮನುಷ್ಯ ನಿರ್ಮಾಣ ಮಾಡಿಕೊಂಡಿದ್ದಾನೆ. ಇಂತಹ ಸರಪಳಿಯಲ್ಲಿ ಪ್ರತಿ ಒಂದು ಸಂಬಂಧಗಳು ತನ್ನದೇ ಆದ ಕರ್ತವ್ಯ ಮತ್ತು ನಿರ್ಬಂಧಗಳ ಗೊಡೆಗಳನ್ನು ಹೊಂದಿವೆ. ಇಲ್ಲಿನ ಕರ್ತವ್ಯ ಮತ್ತು ನಿರ್ಬಂಧಗಳಲ್ಲಿ  ಉಂಟಾಗುವ ಪಲ್ಲಟಗಳಿಂದ ಭಾವನಾತ್ಮಕ ಸಂಬಂಧಗಳ ವಿಘಟನೆ ಆಗುತ್ತದೆ. ಇಂತಹ ವಿಘಟನೆಗಳಿಗೆ ನಮ್ಮ ಸಮಾಜದಲ್ಲಿ ಅನೇಕ ನಿದರ್ಶನಗಳಿವೆ. ಉದಾಹರಣೆಗೆ ‘ಕಾರ್ತಿಕ  ಋಷಿಯ ಕಥೆ’ ಸಾಕ್ಷಿ ಎನ್ನಬಹುದು. ಕಥೆಯಲ್ಲಿ ಉಂಟಾಗುವ ಸಂಬಂಧಗಳಲ್ಲಿನ ನಿರ್ಬಂಧಗಳ ಮೀರುವಿಕೆ ಇದಕ್ಕೆ ಸಾಕ್ಷಿಯಾಗುತ್ತದೆ. ಇಲ್ಲಿ ‘ತಂದೆ ಆದವನು ಗಂಡನಾಗಿ’, ‘ಮಗಳಾದವಳು ಹೆಂಡತಿಯಾಗಿ’, ‘ಮಗ ಆಗುವವನು ಮೊಮ್ಮಗನಾಗಿ’, ‘ಅಜ್ಜಿ ಆಗುವವಳು ದೊಡ್ಡಮ್ಮನಾಗಿಯು’ ಹಾಗೂ ‘ತಾಯಿ ಆಗುವವಳು ಅಕ್ಕನಾಗಿಯು’ ಹೀಗೆ ಗುರುತಿಸಿ ಕೊಂಡು ಹೋಗುವಾಗ ಅನೇಕ ನಿರ್ಬಂಧಗಳನ್ನು ಮೀರಿದ ಸಂಬಂಧಗಳನ್ನು ಕಾಣಬಹುದು. ಈ ಮೀರುವಿಕೆಗೆ ನೇರ ಹೊಣೆ ‘ಅಧಿಕಾರಶಾಹಿ ವ್ಯವಸ್ಥೆ’ ಎಂಬುದು ಕಥೆಯಲ್ಲಿ ಸ್ಪಷ್ಪವಾಗಿದೆ. ಇಲ್ಲಿ ‘ಅಗ್ನಿರಾಜ’ ತನ್ನ ಅಧಿಕಾರದ ಶಕ್ತಿಯಿಂದ ಕೈಗೊಳ್ಳುವ ಅನೇಕ ನಿರ್ಧಾರಗಳು ಇಂತಹ ಮೀರುವಿಕೆಗೆ ಕಾರಣ. ಹೀಗೆ ಮೀರುವಿಕೆ ಅಂದಿನಿಂದ, ಇಂದಿನವರೆಗೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧಗಳಲ್ಲಿ ನಡೆಯುತ್ತಲೆ ಬಂದಿದೆ. ಆದರೆ ಇದು ಕೇವಲ ಪ್ರಕೃತಿ ಸಹಜವಾದ ವರ್ತನೆ ಅಥವಾ ಮೀರುವಿಕೆ ಎಂದು ಪರಿಗಣಿಸಬಹುದು. ಆದರೆ ಇದೇ ಪೂರ್ಣ ಪ್ರಮಾಣದ ಕಾರಣ ಎಂದು ಒಪ್ಪಿಕೊಳ್ಳುವುದು ತಪ್ಪಾಗುತ್ತದೆ. ಪ್ರಕೃತಿ ಸಹಜವಾದ ವರ್ತನೆ ಎಷ್ಟು ಕಾರಣವೋ, ಅಷ್ಟೆ ಮಾನವನ ಕಾಮಂಧತೆ, ಅಧಿಕಾರಶಾಹಿತನದ ದುರಾಸೆಗಳು ಕೂಡ ಪ್ರಮುಖ ಕಾರಣವಾಗಿವೆ. 

ಅಧಿಕಾರದ ಶಕ್ತಿ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲಿನ ಪರಿಣಾಮ

            ನಮ್ಮ ಸಾಂಸ್ಕೃತಿಕ ಪರಿಸರದಲ್ಲಿ ‘ಏತ ರಾಜ ತಥಾ ಪ್ರಜಾ’ಎಂಬ ಮಾತು ಪ್ರಚಲಿತವಿದೆ. ರಾಜನು ಹೇಗೋ ಪ್ರಜೆಗಳು ಹಾಗೇ ಎಂಬ ಅರ್ಥವನ್ನು ನೀಡುವ ಈ ಮಾತು ವಾಸ್ತವ ಪ್ರಪಂಚಕ್ಕೆ ಹತ್ತಿರವಾದದ್ದಾಗಿದೆ. ಭಾರತದಲ್ಲಿನ ಪ್ರಸ್ತುತ ರಾಜಕೀಯ(ಅಧಿಕಾರ) ಪರಿಸ್ಥಿತಿಯು ಇಂತಹ ಪರಿಣಾಮದ ಹಾದಿಯನ್ನು ತೋರಿಸುತ್ತಿದೆ. ‘ಕಾರ್ತಿಕ ಋಷಿಯ ಕಥೆ’ಯಲ್ಲಿ ‘ಅಗ್ನಿರಾಜ’ನು ತನ್ನ ಅಧಿಕಾರದ ಮೋಹದಲ್ಲಿ ರಾಜ್ಯದ ಶ್ರೇಷ್ಟವಾದದ್ದು ಎಲ್ಲವೂ ನನಗೆ ಸೇರಬೇಕೆಂಬ ದರ್ಪದಿಂದ ತನ್ನ ಮಗಳನ್ನೆ ವಿವಾಹ ಆಗುತ್ತಾನೆ. ಇದರಿಂದ ಮನುಷ್ಯ ನಿರ್ಮಿತವಾದ ಭಾವನಾತ್ಮಕ ರಕ್ತಸಂಬಂಧ, ನಂಟತನ, ಬಾಂಧವ್ಯಗಳು ಹಾಳಾಗುತ್ತವೆ. ಇದರ ಪರಿಣಾಮ ನೇರವಾಗಿ ಸಮಾಜದ ಮೇಲೆ ಬೀಳುತ್ತದೆ. ‘ಅಗ್ನಿರಾಜ’ನ ಪಟ್ಟಣದ ಜನತೆ ‘ರಾಜನು ಹೇಗೋ ಪ್ರಜೆಗಳು ಹಾಗೆಯೇ’ ಎನ್ನುವಂತೆ ರಾಜ ಕೆಡಿಸಿದ ರೀತಿ ಸಂಬಂಧ, ನಂಟತನ, ಬಾಂಧವ್ಯಗಳನ್ನು ಹಾಳು ಮಾಡಲು ಆರಂಭಿಸುತ್ತಾರೆ. ಇದರ ಪರಿಣಾಮದಿಂದ ಆ ಊರಿಗೆ ‘ಭೋಗಪಟ್ಟಣ’ಎಂಬ ಹೆಸರು ಕೂಡ ಬರುತ್ತದೆ. ಹೀಗೆ ಅಧಿಕಾರದ ವರ್ಗ ಮಾಡುವ ಎಡವಟ್ಟು, ತಪ್ಪು ನಿರ್ಧಾರಗಳಿಂದ ಸಮಾಜದಲ್ಲಿ ಉಂಟಾಗುವ ಪರಿಣಾಮವನ್ನು ಸಾಂಕೇತಿಕವಾಗಿ ಕಥೆಯಲ್ಲಿ ಕಟ್ಟಿಕೊಡಲಾಗಿದೆ. ಎಲ್ಲಾ ಕಾಲಕ್ಕೂ ಸಮಕಾಲೀನವಾಗುವ ‘ಅಧಿಕಾರ’ದ ಪರಿಣಾಮವು ‘ಕಾರ್ತಿಕ ಋಷಿಯ ಕಥೆಯಲ್ಲಿ ನೋಡಬಹುದು.

ಅಧಿಕಾರದ ಶಕ್ತಿ ಮತ್ತು ಸಾಂಸ್ಕೃತಿಕ ಜಗತ್ತು

            ಸಾಹಿತ್ಯ ಯಾವಾಗಲೂ ತನ್ನ ಸುತ್ತಲಿನ ಸಾಂಸ್ಕೃತಿಕ ಜಗತ್ತಿನಲ್ಲಿ ನಡೆದ ಘಟನೆಗಳನ್ನು ವಸ್ತುವಾಗಿ ಸ್ವೀಕರಿಸುತ್ತದೆ. ಆದ್ದರಿಂದ ಸಾಂಸ್ಕೃತಿಕ ಜಗತ್ತಿಗೂ ಸಾಹಿತ್ಯಕ್ಕೂ ನೇರ ಸಂಬಂಧವಿದೆ. ಹಾಗೇ ಸಾಂಸ್ಕೃತಿಕ ಜಗತ್ತಿಗೂ ಮತ್ತು ಅಧಿಕಾರಕ್ಕೂ ನೇರ ಸಂಬಂಧವಿದೆ. ಸಾಂಸ್ಕೃತಿಕ ಜಗತ್ತನ್ನು ನಿರ್ಮಿಸಿಕೊಂಡ ಮನುಷ್ಯ ಅದನ್ನು ಅಧಿಕಾರ ಕೇಂದ್ರದಲ್ಲಿ ನಿರ್ಮಾಣ ಮಾಡಿಕೊಂಡಿದ್ದನೆಂದು ಹಿಂದೆಯೇ ಹೇಳಲಾಗಿದೆ. ಅದೇ ರೀತಿ ‘ಕಾರ್ತಿಕ ಋಷಿಯ ಕಥೆ’ಯಲ್ಲಿ ಸಾಂಸ್ಕೃತಿಕ ಜಗತ್ತಿಗೂ, ಅಧಿಕಾರದ ಶಕ್ತಿಗೂ ಇರುವ ನೇರ ಸಂಬಂಧವನ್ನು ಕಟ್ಟಿಕೊಡಲಾಗಿದೆ. ಕಥೆಯಲ್ಲಿ ಅಧಿಕಾರದ ಶಕ್ತಿಯ ಕೇಂದ್ರವಾಗಿ ಅಗ್ನಿರಾಜನಿದ್ದಾನೆ. ಈತ ತನ್ನ ಕಾಮಂಧತೆ, ದುರಾಸೆಗಳಿಂದ ಮಾಡಿದ ವರ್ತನೆಗಳು ರಾಜಕೀಯ, ಸಾಮಾಜಿಕ ಇತರೆ ಸಾಂಸ್ಕೃತಿಕ ವ್ಯವಸ್ಥೆಗಳಲ್ಲಿ ಸೃಷ್ಟಿಸಿದ ಪರಿಣಾಮ ಭೀಕರವಾದದ್ದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಇವನ ನಿರ್ಧಾರದಿಂದ ಇಡೀ ರಾಜಕೀಯ ಕ್ಷೇತ್ರವೇ ತಲೆ ತಗ್ಗಿಸುವಂತಾಗಿದೆ. ಸಾಮಾಜಿಕ ಕ್ಷೇತ್ರದಲ್ಲಂತೂ ಭಾವನಾತ್ಮಕ ಸಂಬಂಧಗಳ ವಿಘಟನೆಗಳು ಅದರ ಭೀಕರತೆಗೆ ಸಾಕ್ಷಿಯಾಗುತ್ತದೆ. ಒಟ್ಟಿನಲ್ಲಿ ಅಧಿಕಾರದ ಶಕ್ತಿ ಕಥೆಯ ತುಂಬೆಲ್ಲಾ ಒಂದಿಲ್ಲೊಂದು ರೀತಿ ಇಡೀ ಸಾಂಸ್ಕೃತಿಕ ಜಗತ್ತನ್ನು ಅಲ್ಲೊಲ ಕಲ್ಲೋಲ ಮಾಡಿದ್ದಂತು ವಾಸ್ತವ ಸತ್ಯವಾಗಿದೆ. ಈ ಕಾರಣದಿಂದಾಗಿ ‘ಕಾರ್ತಿಕ ಋಷಿಯ ಕಥೆ’ಯನ್ನು ಸಾಂಸ್ಕೃತಿಕ ದೃಷ್ಟಿಕೋನದ ಮೂಲಕ ಅಧಿಕಾರವನ್ನು ಕೇಂದ್ರವಾಗಿಟ್ಟುಕೊಂಡು ನೋಡುವುದು ಮುಖ್ಯವಾಗುತ್ತದೆ. ಅದರ ಸಣ್ಣ ಪ್ರಯತ್ನ ಲೇಖನದಲ್ಲಿ ಮಾಡಲಾಗಿದೆ.

ಉಪಸಂಹಾರ

ಸಾಹಿತ್ಯ ಲೋಕದಲ್ಲಿ ‘ಕಾರ್ತಿಕ ಋಷಿಯ ಕಥೆ’ಯ ರೀತಿ ವಾಸ್ತವ ಲೋಕದ ಘಟನೆಗಳನ್ನಿಟ್ಟುಕೊಂಡು ರಚನೆಯಾದ ಕೃತಿಗಳ ಸಂಖ್ಯೆ ವಿರಳ. ಇಂತಹ ವಿರಳವಾದ ಕೃತಿಗಳು ತನ್ನ ವಸ್ತುವಿನಿಂದ ಎಲ್ಲ ಕಾಲಘಟ್ಟದಲ್ಲೂ ಸಮಕಾಲೀನವಾಗುತ್ತವೆ. ಪ್ರಸ್ತುತ ಸಂದರ್ಭದಲ್ಲಿ ಅನೇಕ ಲೈಂಗಿಕ ಕಿರುಕುಳ, ಅತ್ಯಾಚಾರಗಳಂತಹ ಘಟನೆಗಳನ್ನು ನೋಡುತ್ತಿರುತ್ತೇವೆ. ಇಂತಹ ಕೆಲವು ಘಟನೆಗಳಿಗೆ ಹೆಣ್ಣಿನ ಹತ್ತಿರದ ರಕ್ತಸಂಬಂಧಿಗಳೆ(ಭಾವನಾತ್ಮಕ) ಕಾರಣವಾದಾಗ ಅಗ್ನಿರಾಜನಂತಹ ಮನಸ್ಥಿತಿಗಳು ಇಂದಿಗೂ ಇವೆ ಎಂಬುದನ್ನು ಸಾಭಿತಾಗುತ್ತದೆ. ಆದರೆ ಆಧುನಿಕ ಸಂದರ್ಭದಲ್ಲಿ ದಿನನಿತ್ಯ ಮಾನವ ಸಂಬಂಧಗಳಲ್ಲಿ ಆಗುತ್ತಿರುವ ವಿಘಟನೆಗಳು ನಮಗೆ ಹೊಸ ರೀತಿಯದ್ದೆಂದು ಭಾಸವಾಗುತ್ತದೆ. ಮುಂದುವರೆದು ಇದೆಲ್ಲವೂ ಆಧುನಿಕ ಜಗತ್ತಿನ ವೇಗದ ಪರಿಣಾಮ ಎಂದೆಲ್ಲ ಕರೆದುಕೊಳ್ಳುತ್ತೇವೆ. ಆದರೆ ಇಂತಹ ಘಟನೆಗಳು ಮನುಷ್ಯನ ಜನನ ಕಾಲಘಟ್ಟದಿಂದಲೂ ನಡೆದುಕೊಂಡು ಬಂದಿರುವುದು ಪ್ರಕೃತಿ ಸಹಜವಾದ ವರ್ತನೆಯ ಒಂದು ಭಾಗವಾಗಿದೆ. ಮನುಷ್ಯನು ‘ಒಂದು ಪ್ರಾಣಿ’ ಎಂದು ಪ್ರಕೃತಿ ನೆಲೆಯಲ್ಲಿ ಮತ್ತು ಪ್ರಾಣಿ ಸಹಜ ನೆಲೆಯಲ್ಲಿ ನಿಂತು ನೋಡಿದಾಗ ‘ಕಾರ್ತಿಕ ಋಷಿಯ ಕಥೆ’ಯಲ್ಲಿ ನಡೆದ ಭಾವನಾತ್ಮಕ ಸಂಬಂಧಗಳ ವಿಘಟನೆ ಎಂಬುದು ಸಹಜವಾದ ಪಕೃತಿಯ ಪ್ರಕ್ರಿಯೆ ಎಂದೆನಿಸುತ್ತದೆ. ಆದರೆ ಮಾನವ ನಿರ್ಮಿಸಿಕೊಂಡಿರುವ ರಕ್ತ ಸಂಬಂಧವೆಂಬ ಭಾವನಾತ್ಮಕ ಸಂಬಂಧಗಳ ನೆಲೆಯಲ್ಲಿ ನೋಡುವಾಗ ಗೊಂದಲ ಸೃಷ್ಟಿಯಾಗುವುದು ಸಹಜ. ಆದರೆ ಮನುಷ್ಯ ಪ್ರಾಣಿ ತನ್ನ ನಾಗರೀಕರಣ ಜೀವನದಲ್ಲಿ ಪ್ರಕೃತಿಯಲ್ಲಿನ ಇತರೆ ಪ್ರಾಣಿಗಳಲ್ಲಿ ಕಾಣದ ಭಿನ್ನವಾದ ಸಾಂಸ್ಕೃತಿಕ ಜಗತ್ತನ್ನು ನಿರ್ಮಾಣ ಮಾಡಿಕೊಂಡಿರುವುದು ಈ ಗೊಂದಲಕ್ಕೆ ಕಾರಣ. ಆ ಜಗತ್ತಿನಲ್ಲಿ ಭಾವನಾತ್ಮಕ ಸಂಬಂಧಗಳ ಸರಪಳಿಗೆ ವಿಶೇಷವಾದ ಸ್ಥಾನವನ್ನು ನೀಡಿದ್ದಾನೆ. ಇಂತಹ ಸಂಬಂಧಗಳಲ್ಲಿ ಕೆಲವೊಮ್ಮೆ ಅಧಿಕಾರದ ಶಕ್ತಿಗಳಿಂದ ಉಂಟಾಗುವ ತಲ್ಲಣಗಳು ಇಡೀ ಮನುಷ್ಯ ಸಂಕುಲದಲ್ಲಿ ಬಿರುಗಾಳಿಯನ್ನೆ ಸೃಷ್ಟಿಸಿ ಬಿಡುತ್ತದೆ. ಹೀಗೆ ಉಂಟಾಗುವ ಬಿರುಗಾಳಿ, ತಲ್ಲಣಗಳು ಮನುಷ್ಯನನ್ನು ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಿಕ್ಕಟ್ಟುಗಳನ್ನು ಹೆದುರಿಸುವಂತೆ ಮಾಡುತ್ತದೆ. ಇಂತಹ ಬಿಕ್ಕಟ್ಟುಗಳ ತೀವ್ರತೆ, ಪರಿಣಾಮಗಳನ್ನು ‘ಕಾರ್ತಿಕ ಋಷಿಯ ಕಥೆ’ಯಲ್ಲಿ ಕಟ್ಟಿಕೊಡಲಾಗಿದೆ. ಆದ್ದರಿಂದ ಈ ಕಥೆಯನ್ನು ‘ಅಧಿಕಾರದ ನಿರ್ವಚನ’ ನೆಲೆಯಲ್ಲಿ ಚರ್ಚೆಗೆ ಒಳಪಡಿಸಿ ಇಂತಹ ಬಿಕ್ಕಟ್ಟಿನ ಪರಿಣಾಮಗಳನ್ನು ಗುರುತಿಸಲಾಗಿದೆ.

ಪರಾಮರ್ಶನ ಗ್ರಂಥಗಳು

  1. ಕೇಶವ ಭಟ್ಟ ಕೆ., ಶಿವಕೋಟ್ಯಾಚಾರ್ಯರ ವಡ್ಡಾರಾಧನೆ, ೨೦೧೭, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು-೫೬೦೦೧೮.
  2. ಕೇಶವ ಶರ್ಮ ಕೆ., ಸ್ತ್ರೀವಾದಿ ಪರಿಕಲ್ಪನೆಗಳು, ೨೦೧೩, ದೇಸಿ ಪುಸ್ತಕ, ವಿಜಯ ನಗರ, ಬೆಂಗಳೂರು-೫೬೦೦೪೦.
  3. ಸಂಕ್ಷಿಪ್ತ ಕನ್ನಡ ನಿಘಂಟು. ೨೦೧೬, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ, ಬೆಂಗಳೂರು-೫೬೦೦೧೮.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal