Tumbe Group of International Journals

Full Text


ಬೇಂದ್ರೆ ಕಾವ್ಯದ ದೇಸಿಯ ಬೇರುಗಳು

ಶಭಾನ

ಪಿಎಚ್.ಡಿ ಸಂಶೋಧಕಿ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು – ೫೭೦೦೦೬

ದೂರವಾಣಿ ಸಂಖ್ಯೆ _ ೯೯೮೬೨೪೪೫೮೨

ಇ-ಮೇಲ್ ವಿಳಾಸ : shabhanamys@gmail.com


ಪ್ರಸ್ತಾವನೆ.

ಎಲ್ಲವೂ ಜಾಗತೀಕರಣಗೊಂಡಿರುವ ಈ ಹೊತ್ತಿನಲ್ಲಿ ಸ್ವಂತಿಕೆಯ ನೆಲೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ. ಸಾಹಿತ್ಯ ಅಂತಹ ಬದಲಾವಣೆಯಿಂದೇನು ದೂರ ಉಳಿದಿಲ್ಲ. ಸಾಹಿತ್ಯ ಎಲ್ಲಾ ರೂಪದಲ್ಲೂ ಜಂಗಮಶೀಲ. ಒಂದೆಡೆ ವಸಹತೀಕರಣದ ಪ್ರಭಾವದಿಂದ ನಮ್ಮಲ್ಲಿ ಹೊಸಗನ್ನಡದ ಉದಯವಾದರೆ, ಆ ಹೊಸತನಕ್ಕೊಂದು ಹೊಸತನ ನೀಡಿ, ನೆಲಮೂಲ ಪ್ರಜ್ಞೆಗೆ ಧಕ್ಕೆಬಾರದ ಹಾಗೆ ಅದನ್ನು ಜತನದಿಂದ ಕಾಯ್ದುಕೊಳ್ಳುವುದು ಅಷ್ಟೇ ಅನಿವಾರ್ಯವಾಗಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಂತಹ ಕಾಯ್ದುಕೊಳ್ಳುವ ಕಾರ್ಯವನ್ನು  ಬೇಂದ್ರೆಯಾದಿಯಾಗಿ ಜಿ.ಪಿ.ರಾಜರತ್ನಂ, ಕೆ.ಎಸ್.ನರಸಿಂಹಸ್ವಾಮಿ,  ಕಂಬಾರರು ಇನ್ನು ಮುಂತಾದ ಹಿರಿ ಮನಸ್ಸುಗಳು ಮಾಡಿರುವುದನ್ನು ಕಾಣಬಹುದು. ಅದರಲ್ಲೂ ತಮ್ಮ ತವರೂರು ಧಾರವಾಡದ ಭಾಷೆ, ಭಾವ, ಸಂಸ್ಕೃತಿಯ ದೇಸಿ ಸೊಗಡನ್ನು ಪ್ರಧಾನವಾಗಿಸಿ ಅದಕ್ಕೊಂದು ನೂತನ ಹುಟ್ಟನ್ನು ನೀಡಿದವರು ವರಕವಿ, ವಿಶ್ವಕವಿ, ಯುಗಕವಿ ದ.ರಾ.ಬೇಂದ್ರೆಯವರು. ಸ್ವತಃ ವೈದಿಕ ಮನೆತನದ ಮೂಲದವರಾದರೂ ಆ ಚೌಕಟ್ಟನ್ನು ದಾಟಿ ಒಬ್ಬ ಸಾಮನ್ಯನಂತೆ ದೇಸಿ ಪದ, ದೇಸಿ ಮಟ್ಟು, ದೇಸಿ ಆಲೋಚನೆಗಳು, ದೇಸಿ ರಾಗ ತಾನಗಳ ವಿನ್ಯಾಸ ಹಾಗೂ ದೇಸಿ ಶೈಲಿಯನ್ನು ಪ್ರಕೃತಿ ಸಹಜ ಕ್ರಿಯೆಯಂತೆ ಲೀಲಾಜಾಲವಾಗಿ ಅಭಿವ್ಯಕ್ತಿಸಿದ್ದಾರೆ. ಅಂತಹ ದೇಸೀಯತೆಯನ್ನು ಬೇಂದ್ರೆಯವರ ಕಾವ್ಯದಲ್ಲಿ ಗುರುತಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ.

ಕೀವರ್ಡ್ಸ್ : ಬೇಂದ್ರೆ ಕಾವ್ಯದ ದೇಸಿಯ ಬೇರುಗಳು, ಬೇಂದ್ರೆ ಕಾವ್ಯದಲ್ಲಿ ದೇಸಿಯತೆ, ದೇಸಿ, ಬೇಂದ್ರೆ ಕಾವ್ಯ, ಶಭಾನ.

ಬೇಂದ್ರೆಯವರ ಬಹುತೇಕ ಕವಿತೆಗಳಲ್ಲಿ ದೇಸಿಯತೆ, ಜಾನಪದದ ಸೊಗಡು ಸ್ಥಾನ ಪಡೆಯಲು ಕಾರಣವೇನೆಂದರೆ ಅವರು ಹುಟ್ಟಿ ಬೆಳೆದ ವಾತಾವರಣ. ಅಂದಿನ ಧಾರವಾಡದ ಜಾನಪದೀಯ ವಾತಾವರಣ ಬೇಂದ್ರೆಯವರಲ್ಲಿ ಅಂಬಿಕಾತನಯದತ್ತ ಎಂಬ ಕವಿ ಹುಟ್ಟಲು ಕಾರಣವಾಗಿ ಇಂದಿಗೂ ಮುಂದಿಗೂ ಬೆರಗುಗೊಳಿಸುವ ಸಾಹಿತ್ಯ ಸೊಗಡು ನಮ್ಮ ಮುಂದಿದೆ. ಅದು ಕೇವಲ ಒಂದೇ ವಸ್ತುವಿಗೆ ಮೀಸಲಿರದೆ ಭುವಿಯನ್ನಾವರಿಸಿ ಆಗಸದವರೆಗಿನ ವಿಸ್ತಾರತೆಯಿಂದ ಕೂಡಿದ್ದಾಗಿದೆ ಎಂದರೂ ಅತಿಶಯೋಕ್ತಿಯಾಗಲಾರದು.

ಬೇಂದ್ರೆಯವರು ಆಯ್ದುಕೊಂಡ ಛಂದಸ್ಸು ದ್ರಾವಿಡ ಛಂದಸ್ಸಿನ ಪುನರವತರಣವೇ ಆಗಿತ್ತು. ಏಳೆಯಿಂದ ಹಿಡಿದು ರಗಳೆ, ಸಾಂಗತ್ಯ ಪದ್ಯಗಳನ್ನು ಅವರು ಹಲವು ಮಾರ್ಪಾಡುಗಳೊಂದಿಗೆ ಬಳಸಿಕೊಂಡರು. ಅಂದರೆ ಹಳಗನ್ನಡ-ಹೊಸಗನ್ನಡದ ಮಿಲನ, ನೂತನ ಸಾಹಿತ್ಯ ಪ್ರಕಾರದ ಹುಟ್ಟಿನಿಂದ ಹೊಸಮಾರ್ಗ ಆ ನಡುವೆ ದೇಸಿಯತೆಯ ಅನನ್ಯತೆಯನ್ನು ಸಾಧಿಸಿದರು. ಅಂದರೆ ಬೇಂದ್ರೆ ಕಾವ್ಯ ಕೇವಲ ಜಾನಪದ ಶೈಲಿಯಿಂದಲೋ ಅಥವಾ ಶಿಷ್ಟಸಾಹಿತ್ಯದ ರೂಪದಿಂದಲೋ ಹಿರಿಮೆಯ ಸ್ಥಾನ ಪಡೆಯದೆ ಇವೆರೆಡರ ಮಿಲನದ ಮೂಲಕ ತಮ್ಮದೇಯಾದ ವೈಶಿಷ್ಟ್ಯತೆಯನ್ನು ಬಿಂಬಿಸಿದ ಅಪರೂಪದ ಕವಿಯಾದರು ಬೇಂದ್ರೆ.

ಡಾ.ಜಿ.ಕೃಷ್ಣಪ್ಪ ಅವರು ಹೇಳುವಂತೆ “ಜಾನಪದರ ಗ್ರಾಮೀಣತೆ, ಸರಳತೆ, ನಾದ, ಲಯದ ಕುಣಿತ ಆನಂದದ ಭಾಗವಾದ ಬೇಂದ್ರೆಯವರು ಜಾನಪದ ಭಾಷೆಯನ್ನು ಶಿಷ್ಟಕಾವ್ಯವನ್ನು ಕಸಿಗೊಳಿಸಲು ಬಳಸಿದ್ದಾರೆ. ಅವರ ಕಾವ್ಯದಲ್ಲಿ ಜಾನಪದ ಭಾಷೆ, ಶಿಷ್ಟದ ನಿಯೋಗಕ್ಕೆ ಒಳಗಾಗಿದೆ೧” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಇವರೇ ಉಲ್ಲೇಖಿಸಿರುವಂತೆ ‘ಕನ್ನಡ ಜನಪದ ಪರಂಪರೆಯ ಮಾತೃಶಕ್ತಿಯ ಮೂಲವನ್ನು ಸ್ಪರ್ಶಿಸಿದ ಬೇಂದ್ರೆಯವರು ಪರಂಪರೆಯನ್ನು ಶಿಥಿಲಗೊಳಿಸುತ್ತ, ಸತ್ಯಶೋಧಕವಾದ ವೈಜ್ಞಾನಿಕವಾದ ಜೀವಜಗತ್ತಿಗೆ ಮೂಲವಾದ ಈ ಮಿಥ್ಗಳ ಗೂಡವನ್ನು ತಿಳಿಯಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಅಲ್ಲಿಯ ವಿಶ್ವಾಸ, ಭಕ್ತಿ, ಶ್ರದ್ಧೆ, ಧಾರ್ಮಿಕ ಆಚರಣೆ ಮನುಷ್ಯನ ಬದುಕಿಗೆ ಅವನ ಉಳಿವಿಗೆ ಎಷ್ಟು ಅವಶ್ಯಕ ಎಂಬುದನ್ನು ಚಿಕಿತ್ಸಕ ದೃಷ್ಠಿಯಿಂದ ಕಂಡಿದ್ದಾರೆ’ ಎಂದಿದ್ದಾರೆ. ಅಂದರೆ ಬೇಂದ್ರೆಯವರ ಚಿಂತನೆ ವೈಜ್ಞಾನಿಕ ದೃಷ್ಟಿಕೋನದ ವ್ಯಾಪ್ತಿಯನ್ನು ಆವರಿಸಿತ್ತು ಎಂಬುದನ್ನು ಗಮನಾರ್ಹ.

ಬೇಂದ್ರೆ ಕವಿಯ ದೇಸಿಯತೆಯೆಂದರೆ ನೆಲಮುಲ ಪ್ರಜ್ಞೆ, ಅರ್ಥಾತ್ ತಮ್ಮ ನೆಲದ ಬದುಕನ್ನು ಆರ್ಜಿಸಿಕೊಂಡು ಅದರಿಂದ ಹೊಮ್ಮಿದ ಪ್ರಜ್ಞೆಗೂ ದೇಸೀ ರೂಪ ನೀಡುವುದು, ಅದೇ  ದೇಸಿಯ ಬೇರು. ಅಂತಹ ಕಾವ್ಯ ಬೇರು ಬಹುತೇಕ ಕವಿತೆಗಳಲ್ಲಿ ಅಪಾರ ಗತ್ತಿನಿಂದ ನುಸುಳಿ ವಿಜೃಂಭಿಸುತ್ತಿವೆ.

ಬೇಂದ್ರೆಯವರು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ನೆಪದಲ್ಲಿ ತಮ್ಮ ಅಭಿವ್ಯಕ್ತಿಯ ರೂಪಕ್ಕೆ ದೇಸಿಯತೆಯ ಲೇಪನವನ್ನು ತೀಡಿ ಪದಗಳು ಸಂಭ್ರಮಿಸುವಂತೆ ಮಾಡಿದ್ದಾರೆ. ತಮ್ಮ ತವರೂರು ಧಾರವಾಡದ ಆಚಾರ - ವಿಚಾರ, ನಡೆನುಡಿ, ಜನರ ನಂಬಿಕೆಯ ದೇವತಾರಾಧನೆ ಅದರೊಟ್ಟಿಗೆ ಕನ್ನಡ ತಾಯಿಗೆ ದೇಸಿ ಶೈಲಿಯ ಕಾವ್ಯನಮನವನ್ನು ಹೊಸ ಭಾಷೆ, ಶೈಲಿಯ ಹೊನಲನ್ನು ಪ್ರಾಕೃತಿಕ ಸಹಜವೆಂಬಂತೆ ಮನಸ್ಸಿಗೆ ನಾಟುವಂತೆ ಅಭಿವ್ಯಕ್ತಿಸಿದ್ದಾರೆ. ಗಾದೆ, ಒಗಟು, ನುಡಿಗಟ್ಟುಗಳನ್ನು ಕಾವ್ಯಸುಧೆಯೊಂದಿಗೆ ಬೆರೆಸಿದ್ದಾರೆ. ಅಷ್ಟೇಯಲ್ಲ ವಿರಹ ವೇದನೆಯ, ಒಲವಿನ ಕೋರಿಕೆಯಂತಹ ಪ್ರೇಮಗೀತೆಗಳಲ್ಲಿ ದೇಸಿಯತೆಯ ಹೊನಲನ್ನು ಹರಿಸಿದ್ದಾರೆ.

ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತ ಒಳಗ

ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು

ಬಗ್ಗದ ಎದೆಯ ಬಾಗಿಸಿತು ||

ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ

ಹುಲುಜೀವ ಕಾದು ಕಮರೀತು ಒಳುಜೀವ

ಒಲುಮೆಗೆ ಹ್ಯಾಂಗೊ ಬಾಳೀತು ||೨

ಒಲುಮೆಯ ಭಾವ ಲಹರಿಯು ತ್ರಿಪದಿ ಪ್ರಕಾರದಲ್ಲಿ ಎಷ್ಟು ಅಂದವಾಗಿ ಮೂಡಿಬಂದಿದೆ. ಬಗ್ಗದ, ಜಗ್ಗದ ಹೃದಯವನ್ನೂ ಒಲುಮೆಯ ಸಿರಿಯು ಬಾಗಿಸಿದೆ, ಅದೇ ಒಲವಿಗಾಗಿ ಬದುಕಿದೆ. ಪದ ಪದದಲ್ಲೂ ದೇಸಿಯ ಮೆರಗನ್ನು ಸೂಸುವ ಬೇಂದ್ರೆ ಕವಿತೆಯ ವೈಶಿಷ್ಟ್ಯವೆಂದರೆ ಅಕ್ಷರಗಳ ಜೋಡನೆ, ಪದ ಲಾಲಿತ್ಯ. ಇವು ಸಹೃದಯನ ಮನಸ್ಸನ್ನು ಒಮ್ಮೆಗೆ ಸೂರೆಮಾಡುವ ಶಕ್ತಿಯೊಂದಿಗೆ ಆತನ ಮನ ತಣಿದಷ್ಟು ಮತ್ತೆ ಮತ್ತೆ ಹೊಸ ಅರ್ಥದ ಹುಟ್ಟಿಗೆ ಎಡೆ ಮಾಡಿಕೊಡುತ್ತವೆ. ಇಂತಹದೇ ಪದಗಳ ಮೋಡಿಯು ನಮ್ಮ ಜನಪದರಲ್ಲೂ ವಿಫುಲವಾಗಿ ಗೋಚರಿಸುತ್ತದೆ. ಈ ಬಗೆಯ ದೇಸಿ ಸೊಗಡು ಕಾಮಕಸ್ತೂರಿ ಕವನ ಸಂಕಲನದುದ್ದಕ್ಕೂ ಕಾಣಬಹುದು. ಈ ಸಂಕಲನವನ್ನು ಕುರಿತು ಬೇಂದ್ರೆಯವರ ಮಗನಾದ ವಾಮನ ಬೇಂದ್ರೆಯವರು ಹೀಗೆ ಹೇಳುತ್ತಾರೆ “ಬೇಂದ್ರೆಯವರು ಕಾಮವನ್ನು ದೇಸಿ ನೆಲೆಯಲ್ಲಿ ಹಳ್ಳಿಗಳ ಮುಗ್ಧ, ಶುದ್ಧ ನಡತೆಯ ವೈವಿದ್ಯದಲ್ಲಿ ಕಾಣುತ್ತಾರೆ. ಕಾಮವನ್ನು ಕಸ್ತೂರಿಯಾಗಿ ಪರಿವರ್ತನೆ ಮಾಡಿಕೊಳ್ಳುವುದೇ ನಿಜವಾದ ಮಾನವನ ವಿಕಾಸ. ಕಾಮದೇವ ದೇವಕಾಮನಾಗಬೇಕು ಎಂದು ಸಂದೇಶವನ್ನು ಅಂಬಿಕಾತನಯದತ್ತರ ಕಾವ್ಯ ಸಾರುತ್ತದೆ”೩ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಬಡವರ ಮಗಳಾಗಿ ನೀನು

ಸಡಗರ ನಿನಗೆಷ್ಟ

ಬಡಿವಾರ ನಿನಗ್ಯಾಕ|೪

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ

ಪಾತ್ರ ಕುಣಿಸ್ಯಾನ ಒಲುಮೀಗೆ ದಿನದಿನ

ಜಾತ್ರಿಯೆನಿಸಿತ್ತ ಜನುಮವು||೫

ತ್ರಿಪದಿಯಲ್ಲಿ ಕಟ್ಟಿರುವ ಕಾಮಕಸ್ತೂರಿ ಕವನ ಸಂಕಲದ ಈ ಪದ್ಯಗಳನ್ನು ಬೇಂದ್ರೆ ಹೊಸಗನ್ನಡದ ಸಂದರ್ಭದಲ್ಲಿ ರಚಿಸಿರುವರೆಂದು ಕೊಂಚವೂ ಅನಿಸುವುದಿಲ್ಲ. ಅಷ್ಟರ ಮಟ್ಟಿಗೆ ದೇಸಿಯತೆ ಆವರಿಸಿಕೊಂಡಿದೆ. ಮೊದಲನೆಯ ಬಡವರ ಮಗಳು ಪದ್ಯದಲ್ಲಿ ಬಡವರ ಮಗಳು ನೀ ಎಂದು ಹಾಡಿ, ಚೇಡಿಸುತ್ತ, ವಿಡಂಬಿಸುತ್ತಾ ಅಂತ್ಯದಲ್ಲಿ ಹ್ಯಾಂಗಾರ ಕಣ್ಣನೆತ್ತಿ ಒಮ್ಮೆ ನೋಡ ಒಮ್ಮೆ ನೋಡ! ಎಂದು ಬೇಡಿಕೊಳ್ಳುವ ನೆಲೆಯನ್ನು ತಲುಪುವಲ್ಲಿನ ಪ್ರಣಯದ ಸಂಕೀರ್ಣತೆ ಹಾಗೂ ಕಾವ್ಯದಲ್ಲಿ ಸೃಷ್ಟಿಯಾಗುವ ಒಂದು ಬಗೆಯ ತಂತ್ರಗಾರಿಕೆಯ ಪವಾಡ ಕ್ರಿಯೆಯಲ್ಲಿ, ಪ್ರಾಪಂಚಿಕ ಬಡತನ ವಿಶೇಷಗೊಂಡು ನಂತರ ಓದುಗನ ಅರಿವಿಗೆ ಬರುವ ಮೊದಲೇ ಆತ್ಮಸಂಗಾತದ ಮತ್ತು ದಿವ್ಯ ಸ್ನೇಹದ ಅನಂತತೆಯನ್ನು ನೆಲೆಗೊಳಿಸುವ ಮೂಲಕ ಲೋಕ ಸ್ವೀಕೃತ ಸತ್ಯದ ಸಾಕ್ಷಾತ್ಕಾರದ ಪರಿಣಾಮವನ್ನು ಬೇಂದ್ರೆಯವರ ಪ್ರಣಯ ಗೀತೆಗಳು ಸೂಚಿಸುತ್ತವೆ. ಇವರ ಪ್ರಣಯ ಪ್ರಧಾನವಾದ ಭಾವಗೀತೆಯಲ್ಲಿ ಬಡತನ ಸಿರಿತನವನ್ನು ಮೆಟ್ಟಿ ಅಲೌಕಿಕದೆಡೆಗೆ ಸಾಗುವ ಪರಿಕಲ್ಪನೆ ಅನನ್ಯವಾದುದು. ಅಂದರೆ ಅಂಬಿಕಾತನಯದತ್ತರ ಜೀವದ ನಾದ ನಾದಲೀಲೆಯಾಗಿ ಹೊಮ್ಮಿದೆ.

ಕಾವ್ಯದ ಮೂಲ ಬೇರನ್ನೇ ದೇಸಿ ಶೈಲಿಯನ್ನಾಗಿಸಿಕೊಂಡಿರುವ ಬೇಂದ್ರೆ ದೇಶ ಹಾಗೂ ಅನ್ಯದೇಶಗಳ ಸಾಕಷ್ಟು ಹಿರಿಯ ಕವಿಗಳ ಪ್ರಭಾವಕ್ಕೆ ಒಳಗಾಗಿದ್ದರೂ ತನ್ನ ನೆಲೆಮೂಲದ ಹಿರಿಮೆಯನ್ನು ಅದರಲ್ಲಿನ ಸುಗಂಧವನ್ನೂ ತಮ್ಮ ಬರಹದುದ್ದಕ್ಕೂ ಪಸರಿಸಿದ್ದಾರೆ. ಇದನ್ನು ಗಮನಿಸಿರುವ ಡಾ.ಎಂ.ಅಕಬರ ಅಲಿ ಅವರು “ಆಧುನಿಕ ಕಾಲದ ಕನ್ನಡ ದೇಸಿಯನ್ನು, ಧಾರವಾಡ ಸೀಮೆಯ ಜಾನಪದ ಸೊಗಡನ್ನು ಬೇಂದ್ರೆಯವರು ಮೈಗೂಡಿಸಿಕೊಂಡ ಬಗೆ ಅಸಾಧಾರಣವಾಗಿದೆ”೫ ಎಂದು ಶ್ಲಾಘಿಸಿದ್ದಾರೆ. ಹಾಗೆ ನೋಡಿದ್ದಲ್ಲಿ ಅವರ ಬೆಳದಿಂಗಳ ಕುರಿತ ಒಂದು ಭಾವಗೀತೆ ಗಮನಾರ್ಹವೆನಿಸುತ್ತದೆ.

ಮದುಮಗಳ ಕಣ್ಣಿನ ಬಗೀ

ಚಂದಿರನ ನಗೀ

ಸುತ್ತ ಹರಿದsದ|

ಸುತ್ತ ಹರಿದsದ||

ಕಂಡವರ ಬಾಳು ಮರಿಸsದ||

ಜನಪದರ ಬಾಯಲ್ಲೂ ಹೆಣ್ಣನ್ನು ಕುರಿತು ಈ ಬಗೆಯ ವರ್ಣನೆಗಳು ಅವ್ಯಾಹತವಾಗಿ ಹರಿದಿದೆ. ಹಾಗೆಯೇ ಇಲ್ಲಿರುವ ಜಾನಪದ ಮೋಡಿಗೆ, ಸೊಬಗಿಗೆ, ಲಾವಣಿಯ ಲಯಕ್ಕೆ ಮರುಳಾಗದವರುಂಟೆ?. ಸ್ವತಃ ಇಂಗ್ಲಿಷ್ ಹಾಗೂ ಸಂಸ್ಕೃತವನ್ನು ಅಧ್ಯಯನ ಮಾಡಿ, ತಮ್ಮ ಪ್ರಾದೇಶಿಕ ನೆಲದಿಂದ ದೂರ ಉಳಿದು ವಿದ್ಯಾಪರಿಣಿತರಾದ ಬೇಂದ್ರೆಯವರು ಬರಹಕ್ಕಿಳಿದಾಗ ಹಾಡಿ ಹೊಗಳಿದ್ದು ತನ್ನೂರನ್ನು, ತನ್ನೂರಿನ ದೇಸಿ ಸೊಗಡನ್ನು, ಅಲ್ಲಿನ ಹಿರಿಮೆ ಗರಿಮೆಯನ್ನು. ಅಷ್ಟೇಯಲ್ಲಾ ಸಹೃದಯರಿಗೂ ತನ್ನೂರ ನೋಡಲು ಪ್ರೀತಿಯ ಆಮಂತ್ರಣವನ್ನೂ ನೀಡುವರು..

ಬಾರೊ ಸಾಧನ ಕೇರಿಗೆ

ಮರಳಿ ನಿನ್ನೀ ಊರಿಗೆ||೬

ಎನ್ನುತ್ತಾ ನೆಲಕ್ಕೆ ಹರಯ ಮೂಡಿದ ಬಗೆ, ಅಲ್ಲಿನ ಮೋಡ, ಅಡವಿಗಳ ಸೌಂದರ್ಯವನ್ನು ಮನತುಂಬ ಹಾಡಿ ಹೊಗಳುವುದರ ಮೂಲಕ ನೆಲ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. ಬಾಯ್ದೆರೆದರೆ ಧಾರವಾಡದ ಉಲಿಯನ್ನೇ ಉಲಿಯುವ ಬೇಂದ್ರೆಯವರು ಕವಿತೆಯುದ್ದಕ್ಕೂ ವಿಫುಲವಾಗಿ ಪ್ರಯೋಗಿಸಿದ್ದು ತನ್ನ ನೆಲದ ಬಾಷೆಯನ್ನೇ. ಪ್ರಾಯಃ ಈ ಪ್ರಮಾಣದ ಭಾಷಾ ಸ್ವಂತಿಕೆ ಮತ್ತೋರ್ವ ಕವಿಯಲ್ಲಿ ಕಾಣಲು ಸಾಧ್ಯವಿಲ್ಲ. ಅಂಬಿಕಾತನಯದತ್ತರಿಗೆ ಕನ್ನಡ ಭಾಷೆ ಎಂದರೆ ರೋಮಾಂಚನದ ಸೆಲೆ. ಹಾಗಾಗಿಯೇ ಕರ್ನಾಟಕ, ಕನ್ನಡ ಅದರಲ್ಲೂ ಧಾರವಾಡ ಭಾಷೆಯಲ್ಲಿ ಮಿಂದು ಧನ್ಯರಾಗಿದ್ದಾರೆ ಜೊತೆಗೆ ನಮಗೂ ಅದರ ಭಾಗ್ಯವನ್ನುಣಿಸಿದ್ದಾರೆ.

“ಏಳೂ ಕನ್ನಡದ ಕಂದಾ, ನೀನಾಡಿದ್ದೇ ಚೆಂದ,

ಮಾಡಿದ್ದೆಲ್ಲಾ ಮಾಟಾ, ಇನ್ನೇನು?

ಕಟ್ಟಿದ್ದೆಲ್ಲಾ ಕವನಾ ಇನ್ನೇನು?

 

ಬಯಲೆಲ್ಲಾ ಬಾಯಾಗಿ ತಾಯ್ನುಡೀ ನುಡಿದಾಗ

ರಸಬಾಳಿ ರಸಗಬ್ಬು ತೆಂಗೇನು?

ಸಾವಿರದ ಹೂರಸ ಸವಿಜೇನು.”೭

ಎಂದು ಸಾವಿರದ ಹೂರಸದ ಸವಿಜೇನನ್ನು ಉಂಡ ಬೇಂದ್ರೆ ಪಾವನರಾಗಿ, ಕನ್ನಡದ ಪಾವನ ಪರಂಪರೆಯಲ್ಲಿ ನಾಡು-ನುಡಿಯನ್ನು ಶ್ಲಾಘಿಸಿರುವ ಪರಿ ಇದು. “ಬೇಂದ್ರೆ ಧಾರವಾಡ ಜಾನಪದ ಪರಿಸರದಲ್ಲಿ ಹುಟ್ಟಿ ಬೆಳೆದು ಅದರ ದನಿಗೆ ಮೈಮನ ಕೊಟ್ಟು, ಅದರ ಸಹಜ ನಾದದಲ್ಲಿ ಉಲ್ಲಾಸಗೊಂಡು, ಅದರ ಸೊಗಡನ್ನು ಶಿಷ್ಟಕಾವ್ಯದಲ್ಲಿ ತಂದ ಕಾವ್ಯ ಗಾರುಡಿಗರು” ಎಂದು ಬೇಂದ್ರೆ ಸಾಹಿತ್ಯ ಕುರಿತು ಸೂಕ್ಷ್ಮಧ್ಯಯನ ಮಾಡಿರುವ ಡಾ.ಜಿ.ಕೃಷ್ಣಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಜಾನಪದ ಸತ್ವವನ್ನು ಸಮರ್ಥವಾಗಿ ಬಳಸಿಕೊಂಡಿರುವ ಬೇಂದ್ರೆಯವರ ಗರಿ ಕವನ ಸಂಕಲನದ ‘ಚೆಲುವ’ ಕವಿತೆಯಲ್ಲೂ ಭಾವ, ಭಾಷೆಗಳ ಸಮ್ಮಿಲನದ ದೃಷ್ಟಿಯಿಂದ ಅಭಿವ್ಯಕ್ತಗೊಂಡಿರುವ ಗ್ರಾಮ್ಯ ಸೊಬಗು ಅನನ್ಯವಾದುದಾಗಿದೆ.

ಯಾರವ್ವಾ ಇವ ಚೆಲುವಾ

ತನ್ನಷ್ಟಕ್ಕ

ತಾನ ನೋಡಿ ನಲಿವಾ!೮

ಅದೇ ಬಗೆಯಲ್ಲಿ ಸಚ್ಚಿದಾನಂದ, ಕುಣಿಯೋಣು ಬಾರ, ನಾದಲೀಲೆಯಂತಹ ಕವಿತೆಗಳಲ್ಲಿ ಪರಂಪರೆಯಿಂದ ದತ್ತವಾದ ಜಾನಪದೀಯತೆ, ತಾತ್ವಿಕತೆ ಹಾಗೂ ಗೇಯತೆಗಳನ್ನು ಒಂದು ಕಡೆ ಸೇರಿಸಿದರೆ, ‘ಮಾಯಾಕಿನ್ನರಿ’, ‘ಸಂಜೀಯ ಜಾವಣೆ’, ‘ಜೋಗಿ’ಯಂತಹ ಕವಿತೆಗಳಲ್ಲಿ ಕಥನಾತ್ಮಕತೆ ಹಾಗೂ ಭಾವ ನಿರ್ಭರತೆಗಳು ಜಾನಪದ ಲಯಗಳು ಜೋಡಿಯಾಗಿ ಬರುತ್ತದೆ. ಕೀರ್ತನಾಥ ಕೋಟಿಯವರೂ ಗ್ರಹಿಸಿರುವ ಅಂಶ ಇದೇ ಬಗೆಯದು “ಬೇಂದ್ರೆಯವರದು ಮೂಲತಃ ಜಾನಪದ ಪ್ರತಿಭೆ ; ಅವರ ಕಾವ್ಯದಲ್ಲಿ ಗೇಯತೆಯ ಗುಣ ಪ್ರಮುಖವಾದದ್ದು” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲಾವಣಿಯ ಲಯವನ್ನು ಧರಿಸಿರುವ ಸಚ್ಚಿದಾನಂದ ಕವಿತೆ..

ಬಾ, ಹಾಕು ರಿಂಗಣಾ ಗಗನದಂಗಣsದಾsಗ|

ನನ್ನ ಕಾಲಾಗ||

ಒಳಗೊಳಗ ಕುದಿವ ಭೂಕಂಪ,

ಹೊರಗ ಹಸಿತಂಪ

ಮೇಲೆ ನರುಗಂಪೋ| ಮೇಲೆ ನರುಗಂಪು

ಬಂತೆಲ್ಲ ನೆಲದ ಬಸಿರಿನಿಂದ | ಮನೆಯು ನೆಲದಿಂದ | ಅನ್ನ ಮಣ್ಣಿಂದ |

ಮೈಯು -

ಅದರಿಂದೋಂ _ ಸಚ್ಚಿದಾನಂದ |೯

ನಾದಲೀಲೆ ಕವಿತೆಯ ಲಯದೆಡೆಗೆ ನೋಡಬೀರಿದ್ದಲ್ಲಿ ಅದರಲ್ಲಿನ ಸೌಮ್ಯತೆ, ಜಾನಪದ ಲಯ, ಸೊಗಸುಗಾರಿಕೆ, ಅವರ್ಣನೀಯ ಪ್ರಾಕೃತಿಕ ವೈಭೋಗ, ಒಲವಿನ ಲಹರಿ ಎಲ್ಲವೂ ಸಹಜತೆಯಲ್ಲಿ ಸಹಜವೆಂಬತೆ ಕಂಡುಬರುತ್ತದೆ.

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||

ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ

ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.

ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ

ಕೋಲು ಸಖೀ....೧೦

ಆಧ್ಯಾತ್ಮಿಕ ಪರಿಕಲ್ಪನೆಯುಳ್ಳ ಪ್ರಸ್ತುತ ಕವಿತೆಯು ಅಷ್ಟೇ ಲಯಬದ್ಧದಿಂದ ಕೂಡಿದೆ. ಬೇಂದ್ರೆಯವರ ಈ ದೇಸಿ ಲಹರಿಯನ್ನು ಗ್ರಹಿಸಿರುವ ಅವರ ಪುತ್ರ ಡಾ.ವಾಮನ ಬೇಂದ್ರೆಯವರು “ ಬೇಂದ್ರೆ ಕಾವ್ಯದ ಅಗಾಧ ಶಕ್ತಿ ಇದು, ಇದರ ಮೂಲಕ ಬೇಂದ್ರೆ ಸಂಸ್ಕೃತ ಭೂಯಿಷ್ಟ ಮಾರ್ಗ ಕಾವ್ಯದಿಂದ ಭಿನ್ನವಾಗಿ ಧಾರವಾಡದ ಆಡುಭಾಷೆಯ ‘ದೇಸೀ’ ಹಾಡುಗಬ್ಬದ ಕವಿಗಳಾದದ್ದು. ಅವರಿಗೆ ಅವರ ಹಾಡುಗಳು ‘ಜಾನಪದ’ ಗತ್ತಿನಿಂದ ಪ್ರಾರಂಭವಾಗಿ ಸಾಮಗಾನದ ಛಂದದವರೆಗೆ ಕೇಳಿಸುತ್ತಿದ್ದವು. ಶ್ರವಣ ಶಕ್ತಿಯಿಂದ ಬೇಂದ್ರೆ ಶ್ರಾವಣದ ಕವಿಯಾಗಿ ಮನ್ನಣೆ ಪಡೆದರು ಇದು ಹಳೆಯ ಋಷಿಕವಿ ಅನುಭವಿಸಿದ ಸ್ಥಿತಿ” ಎಂದು ಬೇಂದ್ರೆಯವರ ದೇಸಿಯತೆಯ ಮೆರಗನ್ನು ಗುರುತಿಸಿದ್ದಾರೆ. ಪ್ರಾದೇಶಿಕ ಶ್ರೇಷ್ಠತೆಯನ್ನು ಕೊಂಚವೂ ಸಡಿಲಗೊಳಿಸದ ಬೇಂದ್ರೆಯದು ದೇಸಿ ಹಾವಭಾವ. ಇವರು ಭಾವಕವಿಯಾದ್ದರಿಂದಲೇ ಈ ಬಗೆಯ ದೇಸಿ ಭಾವದ ಹೊನಲು ಹೊಮ್ಮಲು ಸಾಧ್ಯವಾಗಿರುವುದು. ಸದಾ ಚೈತನ್ಯ ಸ್ವರೂಪಿ ದೇಸಿಯತೆಗೆ ಅಥವಾ ಜಾನಪದಕ್ಕೆ ಸಾವಿಲ್ಲ, ಬದಲಿಗೆ ಬೇಂದ್ರೆಯಂತಹ ಕವಿಗಳು ಅದಕ್ಕೊಂದು ನೂತನ ರೂಪ ನೀಡಿ ಅದರ ಸೊಬಗನ್ನು ದುಪ್ಪಟ್ಟುಗೊಳಿಸುತ್ತಾರೆ.

ಮೊದಲೇ ಉಲ್ಲೇಖಿಸಿರುವಂತೆ ಬೇಂದ್ರೆಯವರು ಜಾನಪದ ಅಲಂಕಾರ, ಛಂದಸ್ಸನ್ನು ಒಂದಕ್ಕೊಂದು ಹೆಣೆದು ಕಟ್ಟಿ ಸಹೃದಯರಿಗೆ ಧಾರೆಯೆರೆಯುವುದರೊಂದಿಗೆ, ಆ ನೂತನ ಕಟ್ಟುವಿಕೆಯ ರೂಪವನ್ನು ಕಂಡು ಸ್ವತಃ ಬೆರಗಾಗಿದ್ದಾರೆ. ‘ಮುಂಜಾವಿನ ಕಂಜ ಬೆಳಕಿಗೆ’ ಎಂಬ ಕವಿತೆ ಹಾಗೂ ‘ತುಂ ತುಂ ತುಂ ತುಂ ತುಂಬಿ ಬಂದಿತ್ತು ತಂಗಿ..’ ಎಂಬ ಕವಿತೆ ಅಂತಹ ಜಾನಪದ ಶೈಲಿಯ ಸೊಗಡಿಗೆ ಉತ್ತಮ ನಿದರ್ಶನ.

ಜಾನಪದರು ತಮ್ಮ ಬದುಕಿನ ಲಾಲಿತ್ಯವನ್ನೂ ಅದರೊಟ್ಟಿಗೆ ಬದುಕಿನ ಬವಣೆಯನ್ನೂ ಏಕತಾನದಲ್ಲಿ ಹೆಣೆದಿದ್ದಾರೆ, ಅವರಿಗೆ ಬದುಕು ಸಾಗಿಸಲು ಭಾರವೇನು ಆಗಲಿಲ್ಲ, ಅಂತೆಯೇ ಬೇಂದ್ರೆಯವರೂ ಕೂಡ ತಮ್ಮ ಪಾಡನ್ನೆಲ್ಲಾ ಹಾಡಾಗಿ ಪರಿವರ್ತಿಸಿದವರು. ಬದುಕಿನಲ್ಲಿ ಅಂತಹ ಬೇಸರವೇನಾದರು ಕವಿಗೆ ಕಾಡಿದ್ದಲ್ಲಿ ಅದನ್ನು ಕಳೆಯಲು ಒಂದು ಹುಣಸೇ ಮರವಿದ್ದರೆ ಸಾಕು ಎನ್ನುತ್ತಾರೆ..

ಹೂತದ ಹುಣಸಿಯಾ ಚಿಗುರು

ಮದರಂಗಿ ಬಣ್ಣದುಗುರು

ರುಚಿಗೆ ಹುಳಿಯೊಗರು

ನೋಡ್ಯೆ ಜೀವಕ್ಕನಿಸಿತs ಹಗರು || ಹೂತsದ

ಕವಿ ಜೀವದ ಬ್ಯಾಸರ ಹರಿಸಾಕ

ಹಾಡ ನುಡಿಸಾಕ

ಹೆಚ್ಚಿಗೇನು ಬೇಕ?

ಒಂದು ಹೂತ ಹುಣಿಸಿಮರ ಸಾಕ || ಹೂತsದ೧೧ 

ಸಾಮಾನ್ಯವಾಗಿ ಬೇಂದ್ರೆಯವರಲ್ಲಿ ಅಡಗಿರುವ ಸುಪ್ತಚೇತನ, ಆಂತರ್ಯದ ಕಣ್ಣು ಎಲ್ಲರಲ್ಲೂ ಇರಲು ಸಾಧ್ಯವಿಲ್ಲ, ಒಂದು ವೇಳೆ ಆ ನೋಟ ಕಂಡರೂ ಬೇಂದ್ರೆಯವರಂತೆ ಅದಕ್ಕೆ ಸತ್ವಶಾಲಿ ಅಕ್ಕರಗಳ ರೂಪ ನೀಡಲು ಸಾಧ್ಯವಿದೆಯೇ? ಆ ಕಾಣುವಿಕೆಗೆ ಸಾರ್ಥಕತೆ ಧಕ್ಕುವುದು ಇಂತಹ ದೇಸಿ ಕವಿಗಳಿಂದಲೆ. ಬೇಂದ್ರೆ ತಮ್ಮ ಅನುಭವಾಭಿವ್ಯಕ್ತಿಯ ವೇಳೆ ಶಾಹಿ ಹಿಡಿದಾಗ ಅವರಿ ತ್ರಾಸವೇನೂ ಆಗಲಿಲ್ಲ, ನಿರುಮ್ಮಳ ಚಿತ್ತರಾಗಿ ನಿರರ್ಗಳವಾಗಿ, ಧ್ಯಾನಮಗ್ನರಾಗಿ ಸಾಹಿತ್ಯ ಕೃಷಿಗೆ ತೊಡಗುತ್ತಾರೆ. ಕಡೆಯದಾಗಿ ತಮ್ಮಿಂದಲೇ ಸೃಷ್ಟಿಯಾದ ಆ ರೂಪಕ್ಕೆ ಬೆರಗಾಗಿ ನಿಲ್ಲುತ್ತಾರೆ.

ಅರೆ ಮರವು ಮಾಡುವೀ ಬಂಧ

ಯಾವುದೀ ಛಂಧ

ಯಾವುದೀ ಧಾಟಿ

ಯಾವುದೀ ಧಾಟಿ? ||

ಸವಿರಾಗ ಬೆರಸಿದ ಉಸಿರು.

ಇದಕ ಯಾ ಹೆಸರು

ಇದಕ ಯಾ ಹೆಸsರs?

ಅಂಬಿಕಾತನಯನ ಹಾsಡs

ಬೆಳುದಿಂಗಳ ನೋಡs ||೧೨ 

ಇದು ಕವಿಯನ್ನೇ ಬೆರಗುಗೊಳಿಸುವ ಸೃಜನಶೀಲತೆ. ತನ್ಮಯತೆಯ ಪ್ರತಿರೂಪದ ಕುರುಹು. “ಹೇಗೆ ನಾಟ್ಯದಲ್ಲಿ ಕೈ ಮೈಗಳ ವಿನ್ಯಾಸಕ್ಕೆ, ತಾಳಕ್ಕೆ ತಾಳ ಕೂಡಿದರೆ ಸರಿಯಾದ ನರ್ತನವಾಗುವುದೋ ಹಾಗೆ, ಕಾವ್ಯದಲ್ಲೂ ಪ್ರಾಸಕ್ಕೆ ಪ್ರಾಸ ಹೊಂದಿದರೆ ಕಾವ್ಯವಿಲಾಸ ಒಂದು ಗೊತ್ತನ್ನು ಪಡೆಯುತ್ತದೆ. ಕೃತಿ ಸುಂದರವಾಗಿ ಕೂಹುವಡೆದು ನಿಂತಾಗ ಅದು ಕವಿಗೇ ಒಂದು ಪವಾಡದಂತೆ ತೋರುತ್ತದೆ! ತನ್ನ ಕಾವ್ಯಕ್ಕೆ ತಾನೇ ಬೆರಗಾಗುತ್ತಾನೆ ಕವಿ” ಎಂದು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಬೇಂದ್ರೆ ಸೃಷ್ಟಿಯ ಕುರಿತ ಬೆರಗಾಗುವಿಕೆಯನ್ನು ಗುರುತಿಸಿದ್ದಾರೆ.

ಒಟ್ಟಾರೆ ಶಬ್ದಗಾರೂಡಿಗರಾದ ಬೇಂದ್ರೆಯವರು ತಮ್ಮ ಬದುಕಿನಲ್ಲಿ ಪಟ್ಟ ಬವಣೆಗಳಿಂದ ಬೆಂದು ಮಾಗಿದ್ದಾರೆ ಹಾಗೂ ಅಷ್ಟೇ ಮಾಗಿದ ಸತ್ವಯುತ ಬರಹವನ್ನೇ ನಮಗುಣಿಸಿದ್ದಾರೆ. ಹಡ್ಸನ್ ಹೇಳುವಂತೆ ‘ಸಾಹಿತ್ಯ ಜೀವನದ ವ್ಯಾಖ್ಯಾನ’ ಅಂತಹ ಜೀವನದ ವ್ಯಾಖ್ಯಾನಕ್ಕೆ ಸಾರ್ಥಕತೆ ಬೇಂದ್ರೆಯವರ ಅಭಿವ್ಯಕ್ತಿಯಿಂದ ದೊರಕಿದೆ. ಸಾಹಿತ್ಯದ ಹೊಸ ತಿರುವಿನಲ್ಲಿ ಪಂಪ ಹೇಗೆ ನೂತನ ಹಾದಿಗೆ ಚಾಲನೆ ನೀಡಿ ಲೌಕಿಕ ಅಲೌಕಿಕ ಕಾವ್ಯಗಳ ಮೂಲಕ ನಾಯಕನನ್ನು ಪ್ರಧಾನವಾಗಿಸಿಕೊಂಡು ಮುಂದಿನ ಕವಿಗಳಿಗೆ ದಾರಿಯಾದನೋ, ಹೇಗೆ ಹನ್ನೆರಡನೆಯ ಶತಮಾನದ ವಚನಕಾರರು ಆಡುನುಡಿಯಲ್ಲಿ ತಮ್ಮ ಆಂತರ್ಯದ ತೊಳಲಾಟಗಳಿಗೆ ರೂಪ ನೀಡಲು ಮುಂದಾಗಿ ಜನಸ್ನೇಹಿ ಸಾಹಿತ್ಯ ರಚನೆ ಮಾಡಿದರೋ, ಹೇಗೆ ಹರಿಹರ ರಗಳೆಗಳ ಮೂಲಕ ಆ ಸಂದರ್ಭದಲ್ಲಿ ಹೇಳಬೇಕಾದದ್ದನ್ನು ಸಮರ್ಥವಾಗಿ ತಲುಪಿಸಿದನೋ, ಹದಿನೈದು ಹದಿನಾರನೆಯ ಶತಮಾನದಲ್ಲಿ ದಾಸವರೇಣ್ಯರು ಕೀರ್ತನಾ ರೂಪದ ಹೊಸ ಪ್ರಯೋಗ ಮಾಡಿದರೋ ಹಾಗೆಯೇ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬೇಂದ್ರೆ ತಮ್ಮ ಭಾಷೆ, ಛಂದಸ್ಸು, ವಸ್ತು-ವಿಚಾರ, ನಿರೂಪಣಾ ಶೈಲಿ ಮುಂತಾದ ಹೊಸ ಪ್ರಯೋಗಗಳ ಮೂಲಕ ಆ ಸಂದರ್ಭದಲ್ಲಿ ಒಂದು ಹೊಸ ಹುಟ್ಟಿಗೆ ಕಾರಣರಾಗಿದ್ದಾರೆ. ಮರಾಠಿ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಸಿಸಿದ್ದ ಬೇಂದ್ರೆ ತಮ್ಮ ಬರಹದ ಹುಟ್ಟಿಗೆ ದೇಸೀಯ ಹೊಳಪು ನೀಡಿ, ತಿಕ್ಕಿ, ತೀಡಿ ನವ ಚೈತನ್ಯದ ಮೆರಗು ನೀಡಿದ್ದಾರೆ.  ತನ್ನೂರು, ತನ್ನ ತಾಯಿ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಜನಪದರ ಪ್ರಬಲ ಶಕ್ತಿಯಾದ ದೇವಿ ದೇವತೆಯರ ಸ್ಮರಣೆಯನ್ನೊಳಗೊಂಡಂತೆ ನೆಲಮೂಲ ಪ್ರಜ್ಞೆಯ ಹೊನಲನ್ನು, ಅಲ್ಲಿನ ಅನನ್ಯತೆಯನ್ನು, ನಾಡು, ನುಡಿ, ನಡೆಯ ಶ್ರೇಷ್ಠತೆಯನ್ನು, ಪ್ರಾಕೃತಿಕ ವೈಭೋಗವನ್ನು, ಒಲವಿನ ದಾಂಪತ್ಯದ ಸೌಂದರ್ಯವನ್ನೂ, ಇನ್ನು ಬೇಕಷ್ಟು ವಿಷಯಗಳಿಗೆ ದೇಸಿ ಸೊಗಡಿನ ಗಂಧವನ್ನು ತೀಡಿದ್ದಾರೆ. ಆ ದೇಸೀ ಬೀಜಗಳ ಬಿತ್ತನೆಯಿಂದ ಸತ್ವಯುತ ಬೇರುಗಳು ಸುತ್ತಲೂ ಗಟ್ಟಿಯಾಗಿ ಹಬ್ಬಿವೆ, ಬಿತ್ತಿದ ಬೀಜ ಹೆಮ್ಮರವಾಗಿ ಬೆಳೆದು ಸಾಕಷ್ಟು ಕವಿಗಳಿಗೆ ಆಶ್ರಯ ತಾಣವಾಗಿದೆ, ಆ ಬೀಜಗಳ ಸತ್ವ ಅವರಿಗೂ ತಲುಪುವಂತಾಗಿದೆ ಹಾಗೂ ಸಹೃದಯರ ಮನವ ತಣಿಸುವ ಅಮೃತವಾಣಿಯೂ ಆಗಿದೆ.

ಅಡಿ ಟಿಪ್ಪಣೆಗಳು

  1. ಬೇಂದ್ರೆಯವರ ಸಾಹಿತ್ಯದಲ್ಲಿ ಸ್ತ್ರೀ –ಒಂದು ಅಧ್ಯಯನ : ಡಾ.ಜಿ.ಕೃಷ್ಣಪ್ಪ - ಪುಟ ೨೦೧೮
  2. ಕಾಮಕಸ್ತೂರಿ : “ಒಲುಮೆಯ ಕಿಚ್ಚು”, ಪುಟ-೪೬
  3. ಸಂವಾದಕಂಡ “ಅಂದತ್ತ” ಭಾಗ-೧ - ಡಾ. ವಾಮನ ಬೇಂದ್ರೆ - ಮುನ್ನುಡಿ
  4. ಕಾಮಕಸ್ತೂರಿ : “ಬಡವರ ಮಗಳು”, ಪುಟ ೩೭
  5. ಕಾಮಕಸ್ತೂರಿ : “ಜನುಮದಜಾತ್ರಿ”, ಪುಟ ೪೫
  6. ಬಾ ಹತ್ತರ : “ಬಾರೊ ಸಾಧನಕೇರಿಗೆ”, ಪುಟ ೧೩
  7. ಗರಿ : “ಚೆಲುವ”, ಪುಟ ೮೮-೮೬
  8. ನಾದಲೀಲೆ : “ಸಚ್ಚಿದಾನಂದ” ಪುಟ ೪೬
  9. ನಾದಲೀಲೆ :“ನಾದಲೀಲೆ”ಪುಟ ೧
  10. ಸಖೀಗೀತ : “ಹೂತsದ ಹುಣಸಿ” ಪುಟ ೩೬
  11. ನಾದಲೀಲೆ : “ಬೆಳುದಿಂಗಳ ನೋಡ”,ಪುಟ೭೬

ಲೇಖನದ ಆಕರ ಸೂಚಿ

  1. ಸಖೀಗೀತ : ಅಂಬಿಕಾತನಯದತ್ತ ಮನೋಹರ ಗ್ರಂಥ ಪ್ರಕಾಶನ – ೧೯೪೦
  2. ಕೃಷ್ಣಕುಮಾರಿ ಮತ್ತು ಹಾಡು-ಪಾಡು : ಅಂಬಿಕಾತನಯದತ್ತ ಸಮಾಜ ಪುಸ್ತಕಾಲಯ, ಧಾರವಾಡ – ೧೯೪೬
  3. ಮೂರ್ತಿ ಮತ್ತು ಕಾಮಕಸ್ತೂರಿ : ಅಂಬಿಕಾತನಯದತ್ತ ಪ್ರತಿಭಾ ಮುದ್ರಣ, ಧಾರವಾಡ – ೧೯೫೫
  4. ಜೀವಲಹರಿ : ಅಂಬಿಕಾತನಯದತ್ತ ಸಮಾಜ ಪುಸ್ತಕಾಲಯ, ಧಾರವಾಡ – ೧೯೫೭
  5. ನಾದಲೀಲೆ : ಅಂಬಿಕಾತನಯದತ್ತ ಪ್ರತಿಭಾ ಮುದ್ರಣ , ಧಾರವಾಡ – ೧೯೫೮
  6. ಹೃದಯ ಸಮುದ್ರ : ಅಂಬಿಕಾತನಯದತ್ತ ಸಮಾಜ ಪುಸ್ತಕಾಲಯ, ಧಾರವಾಡ – ೧೯೫೮
  7. ಬಾ ಹತ್ತರ : ದ.ರಾ. ಬೇಂದ್ರೆ ಗೀತಾ ಬುಕ್ ಹೌಸ್ – ೧೯೬೯      
  8. ಬೇಂದ್ರೆ ಸಮಗ್ರ ಕಾವ್ಯ ದರ್ಶನ : (ಸಂ) ಡಾ.ವಾಮನ ಬೇಂದ್ರೆ. ಪುರೋಗಾಮಿ ಸಾಹಿತ್ಯ ಪ್ರಕಾಶನ – ೨೦೧೦

ಪರಾಮರ್ಶನ ಗ್ರಂಥಗಳು

  1. ಡಾ.ಬುದ್ದಣ್ಣ ಹಿಂಗೆಮಿರೆ (ಸಂ), ಇಳಿದು ಬಾ ತಾಯಿ, ಸಾಮಾಜ ಪುಸ್ತಕಾಲಯ, ಧಾರವಾಡ – ೧೯೭೭.
  2. ಕೀರ್ತಿನಾಥ ಕುರ್ತಕೋಟಿ,  ನೂರು ಮರ ನೂರು ಸ್ವರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ – ೧೯೯೮.
  3. ಡಾ.ಜಿ.ಕೃಷ್ಣಪ್ಪ, ಹೂತsದ ಹುಣಸಿ, ಶ್ರೀರಂಗ ಪ್ರಕಾಶನ, ಮೈಸುರು – ೨೦೦೦.
  4. ಡಾ.ರಾಗೌ (ಸಂ), ಬೇಂದ್ರೆ ಸಾಹಿತ್ಯ ಸಮಾಲೋಚನೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸುರು- ೧೯೯೬.
  5. ಡಾ.ಜಿ.ಕೃಷ್ಣಪ್ಪ, ಬೇಂದ್ರೆ ಕಾವ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು – ೨೦೧೮.
  6. ಡಾ.ವಾಮನ ಬೇಂದ್ರೆ, ಸಂವಾದ ಕಂಡ “ಅಂದತ್ತ” ಭಾಗ-೧ ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ – ೨೦೧೦.
  7. ಬಿ.ಎಸ್. ನಾಗರತ್ನಕುಮಾರಿ(ಸಂ) -    ಸಾಹಿತ್ಯ ವಿಮರ್ಶೆ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು- ೨೦೦೮.


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal