Tumbe Group of International Journals

Full Text


ಬಂಡಾಯ ಸಾಹಿತ್ಯದ ಅರ್ಥ, ಸ್ವರೂಪ, ಪ್ರೇರಣೆ, ಧೋರಣೆಗಳು

ಪ್ರೊ. ಸೋಮಣ್ಣ ಹೊಂಗಳ್ಳಿ,

ಕನ್ನಡ ಪ್ರಾಧ್ಯಾಪಕರು,

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,

ಮಂಗಳೂರು ವಿಶ್ವವಿದ್ಯಾನಿಲಯ,

ಮಂಗಳಗಂಗೋತ್ರಿ, ಕೊಣಾಜೆ, 574 199

Gmail : krssomanna@gmail.com

Ph : 9886165134


ಪ್ರಸ್ತಾವನೆ.

            ಕನ್ನಡ ಸಾಹಿತ್ಯದ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಇಪ್ಪತ್ತನೇ ಶತಮಾನ ಸಾಹಿತ್ಯದ ಬೆಳವಣಿಗೆ ದೃಷ್ಟಿಯಿಂದ ವಿಶಿಷ್ಟವು ಅನನ್ಯವು ಆಗಿರುವಂತಹದ್ದು. ಸುಮಾರು ನೂರ ಇಪ್ಪತ್ತು ವರ್ಷಗಳಲ್ಲಿ ಹೊಸಗನ್ನಡ ಸಾಹಿತ್ಯವು ವಸ್ತು ಮತ್ತು ಅಭಿವ್ಯಕ್ತಿ ವಿಧಾನದ ದೃಷ್ಟಿಯಲ್ಲಿ ಹೊಸ ಹೊಸ ಆಯಾಮಗಳನ್ನು ಪಡೆದು ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ, ಮಹಿಳೆ, ಮುಸ್ಲಿಂ (ನವ್ಯೋತ್ತರ) ಮೊದಲಾದ ಉಪನಾಮಗಳಲ್ಲಿ ಕವಲೊಡೆದಿರುವುದನ್ನು ಕಾಣಬಹುದಾಗಿದೆ. ನವೋದಯ ಮತ್ತು ನವ್ಯದ ತರುವಾಯ ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸತೊಂದು ಗಾಳಿ ಬೀಸಿತು. ಅದುವೆ ದಲಿತ ಬಂಡಾಯ. ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಮತ್ತು ಕಥೆಯಲ್ಲಿ ‘ದ್ಯಾವನೂರು’ ಸಂಕಲನಗಳು ಹೊರಬಂದವು. ಶತಶತಮಾನಗಳಿಂದ ಮೂಕರಾಗಿದ್ದ ಜನ ಮಾತನಾಡತೊಡಗಿದರು. ಬರಿಮಾತಷ್ಟೇ ಅಲ್ಲ ಬೆಂಕಿಯ ಜ್ವಾಲೆಗಳನ್ನೇ ಉಗುಳತೊಡಗಿದರು ಎಂದರೂ ತಪ್ಪಾಗಲಾರದು. ಅದುವರೆವಿಗೂ ಹೃದಯದಲ್ಲಿ ಅದುಮಿಟ್ಟುಕೊಂಡಿದ್ದ ತಮ್ಮ ನೋವು, ಅಸಹನೆ, ರೋಷ, ಕಿಚ್ಚು, ಆವೇಶಗಳನ್ನೆಲ್ಲ ಒಟ್ಟಿಗೆ ತಮ್ಮ ಕಾವ್ಯದ ಭಾಷೆಯಲ್ಲಿ ಅಭಿವ್ಯಕ್ತಗೊಳಿಸಿದರು. ಅವೆಲ್ಲವು ಪ್ರತಿಭಟನೆಯ ಸ್ವರೂಪದ ಧೋರಣೆಯನ್ನು ಕಾವ್ಯಾತ್ಮಕವಾಗಿ ಹೊರ ಹಾಕಿದರು. ಕ್ರಮೇಣ ಅದುವೇ ‘ದಲಿತ ಬಂಡಾಯ’ಎನ್ನುವ ತೊರೆಯಾಗಿ ಹರಿಯತೊಡಗಿತು. ಇದು ಹೊಸಗನ್ನಡ ಸಾಹಿತ್ಯದ ನಾಲ್ಕನೇ ಘಟಕವಾಗಿ ಮೈ ಪಡೆಯಿತು. ಇದು 1970 ರಿಂದ ಈಚೆಗೆ ಅದು ಬೆಳೆದು ಹೆಮ್ಮರವಾಗಿದೆ ಎಂದರೆ ತಪ್ಪಾಗಲಾರದು. ಬಂಡಾಯ ಸಾಹಿತ್ಯ ಸಂಘಟನೆಯು ಹೊರ ತಂದ ಪ್ರಣಾಳಿಕೆಯಲ್ಲಿ ಬರಗೂರು ರಾಮಚಂದ್ರಪ್ಪನವರ ಮಾತುಗಳು ಬಂಡಾಯದ ಧೋರಣೆಯನ್ನು ತಿಳಿಸುತ್ತವೆ.

ಕೀ ವರ್ಡ್ಸ್ : ಬಂಡಾಯ ಸಾಹಿತ್ಯ,  ದಲಿತ ಬಂಡಾಯ, ಸೋಮಣ್ಣ ಹೊಂಗಳ್ಳಿ

            “ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಂಡುಬರುತ್ತಿರುವ ಪ್ರಗತಿಪರ ಧೋರಣೆಗಳು ತೆಗೆದುಕೊಂಡ ತಿರುವುಗಳು ಎದುರಿಸಿದ ಸಮಸ್ಯೆಗಳು ಮತ್ತು ತಲುಪಿದ ಕ್ಷೀಣ ನೆಲೆಗಳನ್ನು ಗಮನಿಸಿದಾಗ, ಅವುಗಳಿಂದ ಪಾಠ ಕಲಿತ ವ್ಯಾಪಕ ಸ್ವರೂಪದ ಸಂಘಟನೆಯ ಅಗತ್ಯ ಗೊತ್ತಾಗುತ್ತದೆ. ಒಕ್ಕೂಟ ಪ್ರಗತಿ ಪಂಥಗಳ ಸಾಪಲ್ಯ-ವೈಫಲ್ಯಗಳ ದಾಖಲೆ ನಮಗೊಂದು ಎಚ್ಚರದ ಸಂಗತಿಯೂ ಆಗಿದೆ. ನಮ್ಮ ದೇಶದ ಚಾರಿತ್ರಿಕ, ರಾಜಕೀಯ ಬೆಳವಣಿಗೆಗಳ ಸ್ವರೂಪದಿಂದಾಗಿ ಉದ್ಭವಿಸಿದ ಇಂದಿನ ವಿಶಿಷ್ಟ ಸಂದರ್ಭದ ಹಿನ್ನೆಲೆಯಲ್ಲಿ ನಮ್ಮ ಹೋರಾಟದ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ. ಜನವಿರೋಧಿ ನಿಲುವುಗಳ ವಿವಿಧ ಮುಖವಾಡಗಳ ಮರೆಯಲ್ಲಿ ಒಂದಾಗಿ ವಿಜೃಂಭಿಸುತ್ತಿರುವ ಈ ಸಂದರ್ಭ, ಪ್ರಗತಿಪರ ಧೋರಣೆಯು ಎಲ್ಲರಿಗೂ ಒಂದು ಸವಾಲು - ನಮ್ಮ ಹೋರಾಟ ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು ದೇಶದ ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳು ಪರಸ್ಪರ ಸಂಬಂಧ ಉಳ್ಳವು ಎಂಬ ನಿಲುವಿನಿಂದ ಹೊರಟಿದ್ದು. ಸಾಹಿತಿಗೆ ಸಾಮಾಜಿಕ, ರಾಜಕೀಯ ಪ್ರಜ್ಞೆ ಇರಬೇಕೆಂಬ ಆಶಯ ಇಲ್ಲಿ ಮುಖ್ಯವಾದುದ್ದು. ಅಸ್ಪೃಶ್ಯತೆ, ಜಾತಿಪದ್ಧತಿ, ಲಿಂಗಭೇದ ಮತ್ತು ವರ್ಗಭೇದ ನೀತಿಯ ವಿರುದ್ಧ ಹೋರಾಟವನ್ನು ಕಟ್ಟುವುದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು. ಎಲ್ಲಾ ಜನಪರ ನಿಲುವುಗಳಿಗೆ ನಮ್ಮ ಬೆಂಬಲ, ಜನಪರವಾದ ಸಾಂಸ್ಕೃತಿಕ ಹೋರಾಟ ನಮ್ಮ ಮುಖ್ಯ ನೆಲೆ. ಇಂಥ ಒಲವಿನ ಸಾಹಿತ್ಯ ಸೃಷ್ಟಿ ನಮ್ಮ ಹೋರಾಟದ ಮುಖ್ಯ ದಾಖಲೆ”.

            ಸಾಹಿತ್ಯ ಮತ್ತು ಸಮಾಜ ಪರಸ್ಪರ ಅನ್ಯೋನ್ಯ ಸಂಬಂಧ ಹೊಂದಿದೆ. ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ. ಸಮಾಜದಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳು ಸಾಹಿತ್ಯದ ಸ್ವರೂಪ ಮತ್ತು ಲಕ್ಷಣವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಬರಹಗಾರ ಕೂಡ ಸಮಾಜದ ನಡುವೆ ಬದುಕುವ ಸಮಾಜಜೀವಿ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ 1970ರ ದಶಕ ವಿಶೇಷ ಮಾನ್ಯತೆ ಪಡೆದಿದೆ. ಈ ದಶಕದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳಲ್ಲಿ ಹಲವು ಕ್ರಾಂತಿಕಾರಕವಾದ ಬದಲಾವಣೆಗಳಾದವು. ಸಾಹಿತ್ಯದಲ್ಲಿ ತಂತ್ರ, ಶೈಲಿ, ಅತಿಯಾದ ಭಾಷಾ ಬಳಕೆ, ಪ್ರತಿಮೆ, ಅನಾಥ ಪ್ರಜ್ಞೆ, ಒಂಟಿತನದ ಪ್ರಜ್ಞೆಯಿಂದಾಗಿ ‘ನವ್ಯ’ವು ಅವಸಾನವನ್ನು ಹೊಂದಿತು. ಎಪ್ಪತ್ತರ ದಶಕದ ಆರಂಭದ ದಿನಗಳಲ್ಲಿ ಅನೇಕ ಬರಹಗಾರರು ಅಕ್ಷರಲೋಕವನ್ನು ಪ್ರವೇಶಿಸಿದರು. ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದ ಅನಿವಾರ್ಯತೆಯಿಂದ ಸಂಭವಿಸಿದ ಚಾರಿತ್ರಿಕ ಸಂಘಟನೆಯೇ ದಲಿತ ಬಂಡಾಯ ಸಾಹಿತ್ಯ. ಹೀಗೆ ಸಮಾಜ ಪರಿವರ್ತನೆಯ ಆಶಯವನ್ನು ಪ್ರಕಟಿಸುವ ಸಾಹಿತ್ಯಕ ಚಳುವಳಿಯಾಗಿ ಬೆಳೆಯಿತು. ಸಾಹಿತ್ಯ ಪರಿಕಲ್ಪನೆಗಳ ಮನೋಧರ್ಮವು ವಸ್ತು, ಅನುಭವ, ಸಂವೇದನೆ, ಅಭಿವ್ಯಕ್ತಿ ಕ್ರಮ ಮತ್ತು ಮೌಲ್ಯಗಳು ಎಂಬಿತ್ಯಾದಿಯ ದೃಷ್ಟಿಯಿಂದ ಭಿನ್ನವಾಗಿದ್ದರೂ ಆಶಯ ಮತ್ತು ಚಾರಿತ್ರಿಕ ದೃಷ್ಟಿಯಿಂದ ಅವುಗಳು ಒಂದಕ್ಕೊಂದು ಪೂರಕ ಸಂಬಂಧವನ್ನು ಸ್ಥಾಪಿಸಿಕೊಂಡಿರುವ ಒಂದು ನಾಣ್ಯದ ಎರಡು ಮುಖಗಳಾಗಿವೆ.

ಅರ್ಥ ವ್ಯಾಪ್ತಿ:

            ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ (ಚಂಪೂ), ವಚನ, ರಗಳೆ, ಷಟ್ಪದಿ, ತ್ರಿಪದಿ, ಸಾಂಗತ್ಯ ಇತ್ಯಾದಿ ಆಧುನಿಕ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ, ಮಹಿಳೆ, ಮುಸ್ಲಿಂ ಎಂಬ ಪದ ವಿಚಾರಗಳ ಕುರಿತು ಚರ್ಚೆ ನಡೆದಿರುವುದನ್ನು ಕಾಣಬಹುದು. ‘ದಲಿತ’ ಮತ್ತು ‘ಬಂಡಾಯ’ ಎಂಬ ಎರಡು ಪದಗಳ ಕುರಿತು ನಡೆದ ಚರ್ಚೆಯನ್ನು ಗಮನಿಸಬಹುದು. ‘ದಲಿತ’ ಪದವನ್ನು ಮಾಲಗತ್ತಿ ಅವರು ‘ದಲಿತ’ ಎಂದರೆ ‘ದಮನಕ್ಕೆ ಒಳಗಾದವರು’ ಎಂದರ್ಥ. ‘ದಲಿತ’ ಎಂದರೆ ಶತಮಾನಗಳಿಂದ ತುಳಿತಕ್ಕೆ ಒಳಗಾದವರು ಅಸ್ಪೃಶ್ಯರೇ ಆಗಿದ್ದಾರೆ. ಹೀಗಾಗಿ ಅವರು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಶಕ್ತಿಗಳ ಜೊತೆಗೆ ಅಸ್ಪೃಶ್ಯತೆಯ ಸೂಕ್ಷ್ಮ ಸಂಬಂಧಗಳ ಎಳೆ ಇರುವುದರಿಂದ ‘ದಲಿತ’ ಎಂದರೆ ಕೇವಲ ಅಸ್ಪೃಶ್ಯನಲ್ಲ ಎನ್ನುವುದನ್ನು ಈ ಪದ ವಿವರಿಸುತ್ತದೆ. (ಅರವಿಂದ ಮಾಲಗತ್ತಿ: 1997: ಪುಟ 5-6)

            ಬಂಡಾಯ ಸಾಹಿತ್ಯದ ಸಾಮಾಜಿಕ ನೆಲೆಗಳು ವರ್ಗ ಸಂದರ್ಭವಾಗಿ ಇಂಡಿಯಾದ ಆಚೆಗೂ ಚಾಚಿಕೊಳ್ಳುತ್ತದೆ. ಹೀಗೆ ಸಮಸ್ಯೆಗಳನ್ನು ಸಾಧಾರಣೀಕರಿಸಲು ಚಾಚಿಕೊಳ್ಳುವುದರಿಂದ ಜಾತಿ ವಿನ್ಯಾಸದ ಮೇಲೆ ಯಾವ ರೂಪ ಪಡೆಯುವ ಸಾಂಸ್ಕೃತಿಕ ಸಂದರ್ಭಗಳು ವರ್ಗಸೌಂದರ್ಯದ ಜೊತೆ ಸಮೀಕರಿಸಿಕೊಳ್ಳಲಾಗದೆ ಸಾಹಿತ್ಯದ ಧೋರಣೆ ಗೊಂದಲದಲ್ಲೇ ಪರ್ಯಾವಸಾನವಾಗುತ್ತದೆ. (ನೋ.ಸಂ.ತಿಮ್ಮೆಗೌಡ: ದಲಿತ ಬಂಡಾಯ ಸಾಹಿತ್ಯ ಮತ್ತು ಸಾಮಾಜಿಕ ನೆಲೆ, 169, ರುಜುವಾತು, ಅಕ್ಟೋಬರ್-ಡಿಸೆಂಬರ್ 1985) ಎನ್ನುವ ಮಾತುಗಳು ಅರ್ಥಪೂರ್ಣವಾಗಿವೆ.

            ಬಂಡಾಯ ಎನ್ನುವುದೊಂದು ಮನೋಧರ್ಮ, ಈ ಮನೋಧರ್ಮದ ಮುಖ್ಯ ಲಕ್ಷಣ ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು ಒಟ್ಟಾರೆಯಾಗಿ ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ಧೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ (ಡಾ.ಜಿ.ಎಸ್. ಶಿವರುದ್ರಪ್ಪ: ಬಂಡಾಯ ಸಾಹಿತ್ಯ ಕುರಿತು: 13, 1982 ಸಾಹಿತ್ಯ ವಿಮರ್ಶೆ) ಈ ಪ್ರವೃತ್ತಿಯು ಸಮಕಾಲೀನ ವಾಸ್ತವ ಪ್ರಜ್ಞೆಯುಳ್ಳ ವ್ಯಕ್ತಿಯಲ್ಲಿ ಕಂಡುಬರುತ್ತದೆ. ಬಂಡಾಯದಲ್ಲಿ ಎಡಪಂಥೀಯ ಸಂಘಟನೆಗಳಾದ, ದಲಿತ ಸಂಘರ್ಷ ಸಮಿತಿ, ಸಮುದಾಯ, ಸಿಪಿಪಿ, ಸಿಪಿಎಂ ಮುಂತಾದವು ಸೇರಿ ವೇದಿಕೆಯನ್ನು ರಚಿಸಿಕೊಂಡಿರುವುದು ತಿಳಿದುಬರುವ ವಿಷಯ. ರಾಜಕೀಯ ವಿಚಾರಗಳನ್ನೇ ‘ಬಂಡಾಯ’ ಮೂಲತತ್ವವನ್ನಾಗಿಸಿಕೊಂಡಿದೆ. ಅಲ್ಲದೇ ತೀವ್ರತರವಾದ ಅಭಿವ್ಯಕ್ತಿಯ ಸಾಧ್ಯತೆ ವಿಷಯ ವಸ್ತು ಪ್ರತಿಪಾದನೆಯ ಮತ್ತು ಮಾಧ್ಯಮಗಳ ಹಿನ್ನಲೆಯಲ್ಲಿಯೇ ವಿನಹ ಅದರೊಟ್ಟಿಗೆ ಬರುವ ‘ಸಿಟ್ಟು’ ಎಂದಷ್ಟೇ ಗ್ರಹಿಸುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಇನ್ನು ಕೆಲವರು ಬಂಡಾಯದವರಿಗಿಂತ ‘ದಲಿತರಿಗೆ ಇನ್ನು ತೀಕ್ಷಣವಾಗಿ ಅಭಿವ್ಯಕ್ತಿ ಸಾಧ್ಯವೆಂದೂ ಅದು ದಲಿತರಿಗೆ ‘ಹಕ್ಕು’ ಎಂದು ವಾದಿಸುವವರೂ ಇದ್ದಾರೆ. (ಪೋಲಂಕಿ ರಾಮಮೂರ್ತಿ: ದಲಿತ ಸಾಹಿತ್ಯ ಸಿಟ್ಟಿಗೆ ಹಕ್ಕಿದೆ – 38 ಸಂಕ್ರಮಣ - ಫೆಬ್ರವರಿ-1988)

            70ರ ದಶಕದಲ್ಲಿ ಬೆಳಕಿಗೆ ಬಂದ ‘ಬಂಡಾಯ ಸಾಹಿತ್ಯ’ ‘ದಲಿತ’ ಎಂಬ ಪದಕ್ಕೆ ಸಂಬಂಧಿಸಿದ ಚರ್ಚೆ ಎಷ್ಟು ನಡೆಯಿತೋ ಅಷ್ಟೆ. ‘ಬಂಡಾಯ’ ಎನ್ನುವ ಪದದ ವಿಚಾರ ಹಾಗೂ ಅರ್ಥ ಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬಂಡಾಯ ‘ಬಂಡು’ ಪದದಿಂದ ಬಂದಿದೆ. ‘ಬಂಡು’ ಎಂದರೆ ‘ಹೀನ’ ‘ಅಶ್ಲೀಲ’ ‘ನಾಚಿಕೆಯಿಲ್ಲದ್ದು’ ಎಂದರ್ಥ. ಆದ್ದರಿಂದಲೇ ಬಂಡ, ಬಂಡತನ, ಬಂಡು ಬೀಳು, ಬಂಡ ಹಾಡು ಇತ್ಯಾದಿ ಪದಗಳು ಬಳಕೆಗೆ ಬಂದಿವೆ. ಇನ್ನು ‘ಬಂಡಾಯ’ ಎನ್ನುವ ಪದವು ‘ಜಗಳ  ‘ಕಾಳಗ’ ‘ದಂಗೆ’ ಎನ್ನುವ ಅರ್ಥದಲ್ಲಿ ಉಪಯೋಗಕ್ಕೆ ಬಂದಿದೆ. ಈಗ ನಾವು ಬಂಡಾಯ ಎನ್ನುವ ಪದವನ್ನು ವ್ಯವಸ್ಥೆಯ ವಿರುದ್ಧ ಸಿಟ್ಟಿಗೆದ್ದು ಸಿಡಿದು ನಿಂತ ಪ್ರತಿಭಟನೆ, ಹೋರಾಟ, ಕ್ರಾಂತಿ ಎನ್ನುವ ಅರ್ಥದಲ್ಲಿ ಉಪಯೋಗಿಸುತ್ತಿದ್ದೇವೆ. ಆದ್ದರಿಂದ ಬಂಡಾಯ ನಮಗೆ ಹೊಸ ಪದ, ಹೊಸ ಅರ್ಥವನ್ನು ನಾವು ಈಗೀಗ ಕಲ್ಪಿಸಿಕೊಂಡ ಹೊಸ ನಾಣ್ಯ (ಪೋಲಂಕಿ ರಾಮಮೂರ್ತಿ: ಬಂಡಾಯ ಕಾವ್ಯ: 1985, ಪುಟ 72) ಹೀಗೆ ದಲಿತ ಬಂಡಾಯ ಸಾಹಿತ್ಯ ಪರಸ್ಪರ ವಿಭಿನ್ನ ಪೂರಕವಾಗಿದೆ.

            ಸಮಾಜದಲ್ಲಿ ತಮ್ಮ ಮೇಲೆ ನಡೆಯುವ ದಬ್ಬಾಳಿಕೆ, ಹಲ್ಲೆ, ಕ್ರೌರ್ಯವನ್ನು ಪ್ರತಿಭಟಿಸುವ ಸಲುವಾಗಿ ಎರಡೂ ಸಮಾನ ವೇದಿಕೆಯಿಂದ ಬೆಳಕಿಗೆ ಬಂದ ಪ್ರಮುಖ ಮನೋಧರ್ಮವಾಗಿದೆ. (ಸಿ. ಮಹೇಂದ್ರ: ದಲಿತ ಬಂಡಾಯ ಕಥೆಗಳು: ಪ್ರಾದೇಶಿಕತೆ: 2016: ಅಪ್ರಕಟಿತ ಪಿಹೆಚ್.ಡಿ. ಮಹಾಪ್ರಬಂಧ) ಹೊಸಗನ್ನಡ ಸಾಹಿತ್ಯದ ಈ ನಾಲ್ಕನೆಯ ಆಯಾಮವನ್ನೇ ಇವತ್ತು ಬಂಡಾಯ ಸಾಹಿತ್ಯ ಸಂದರ್ಭವೆಂದು ಗುರುತಿಸಲಾಗುತ್ತದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಬಂಡಾಯ ಅನ್ನುವುದೊಂದು ಮನೋಧರ್ಮ. ಈ ಮನೋಧರ್ಮದ ಮುಖ್ಯ ಲಕ್ಷಣ, ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು ಒಟ್ಟಾರೆಯಾಗಿ ವಸ್ತು ಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ಧೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ. ಮೇಲಿನ ಎಲ್ಲ ವರ್ಗದವರುಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜದ ಕೆಳಗಿನ ಸ್ತರವೊಂದು ಮಾತನಾಡಲು ಕಲಿತು ತನ್ನ ಪ್ರತಿಭಟನೆಯನ್ನು ಅಭಿವ್ಯಕ್ತಪಡಿಸತೊಡಗಿದಾಗ ಮೂಡಿಬಂದಿತು ಬಂಡಾಯ ಸಾಹಿತ್ಯ (ಜಿ.ಎಸ್.ಶಿವರುದ್ರಪ್ಪ ಸಮಗ್ರ ಗದ್ಯ, ಸಂ.2, 2007, ಪು.130) ಎನ್ನುವ ಜಿ.ಎಸ್.ಶಿವರುದ್ರಪ್ಪ ಅವರ ಅಭಿಪ್ರಾಯವು ಬಂಡಾಯ ಸಾಹಿತ್ಯ ಸಂಘಟನೆಯ ಗೊತ್ತು ಗುರಿ, ಧೋರಣೆಯನ್ನು ತಿಳಿಸುತ್ತದೆ.

            ಬಂಡಾಯ ಸಾಹಿತ್ಯ ಸಂಘಟನೆಯ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯ ಹೀಗಿದೆ. “ಮನುಷ್ಯ ಮನುಷ್ಯರ ನಡುವೆ ಕಲ್ಲಿನ ಕೋಟೆ ಕಟ್ಟುವ, ಅಮಾನವೀಯ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆ ಬಂಡಾಯ ಸಾಹಿತ್ಯದ ಬೆನ್ನೆಲುಬು. ಈ ಆಕಾಂಕ್ಷೆ ಹೊತ್ತ ವ್ಯವಸ್ಥೆ ವಿರೋಧಿ ಆಶಯಗಳ ಅಭಿವ್ಯಕ್ತಿಯೇ ನಮ್ಮ ಸೃಜನಶೀಲತೆಯ ಮುಖ್ಯ ಕಾಳಜಿ. ದಲಿತರು ಮತ್ತು ದಲಿತೇತರರು ಹೊಸ ಸಂಸ್ಕೃತಿಯ ಹೋರಾಟಕ್ಕಾಗಿ ಒಗ್ಗೂಡಿದ ವೇದಿಕೆ” (ಬರಗೂರು ರಾಮಚಂದ್ರಪ್ಪ: ಶ್ರಮ ಮತ್ತು ಸೃಜನಶೀಲತೆ; 2001, ಪುಟ 122) ಈ ಮೇಲಿನ ಮಾತುಗಳಿಂದ ವೇದ್ಯವಾಗುವ ಅಂಶವೆಂದರೆ ಬಂಡಾಯವೆನ್ನುವುದು ಮೂಲತಃ ಒಂದು ಮನೋಧರ್ಮವಾಗಿದ್ದು, ಸಾಮಾಜಿಕ, ಆರ್ಥಿಕ ಅಸಮಾನತೆಯ ವಿರುದ್ಧ ನಡೆದ ಹೋರಾಟವಾಗಿದೆ. ದೀನ ದಲಿತರು – ದುರ್ಬಲರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ದನಿಗೂಡಿಸಿದ ಜನಪರ ಕಾಳಜಿಯ ಸಂಘಟನೆಯಾಗಿರುವುದು ತಿಳಿದುಬರುತ್ತದೆ. ಈ ಮೇಲಿನ ಹೇಳಿಕೆಗಳಿಗೆ ಪೂರಕವಾಗಿ ವಿಮರ್ಶಕರಾದ ರಹಮತ್ ತರೀಕೆರೆಯವರು ‘ದಲಿತರ ಬಗೆಗೆ ಇತರರು ಬರೆದದು ಅಥವಾ ದಲಿತರೇ ಸಾರ್ವಜನಿಕ ವಿಷಯಗಳ ಬಗ್ಗೆ ಬರೆದದ್ದು ದಲಿತ ಸಾಹಿತ್ಯ ಅಲ್ಲ ದಲಿತರಾದವರು ತಮ್ಮ ರಕ್ತ ಮಾಂಸಗಳ ಜೀವಂತ ಅನುಭವ ಅನಿಸಿಕೆಗಳನ್ನು ಹಿಡಿಸಿಟ್ಟಿರುವುದು ಮಾತ್ರ ದಲಿತ ಸಾಹಿತ್ಯ. ಸಮಾಜದ ಎಲ್ಲಾ ವರ್ಗದ ಜನರು ತಾವು ಅನುಭವಿಸುತ್ತಿರುವ ನೋವು, ಅಪಮಾನ, ಅನ್ಯಾಯಗಳ ವಿರುದ್ಧ ಬಂಡೆದ್ದದ್ದು ಬಂಡಾಯ ಸಾಹಿತ್ಯ’ (ರಹಮತ್ ತರೀಕೆರೆ, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು ಪ್ರತಿ ಸಂಸ್ಕೃತಿ; 2009, ಪು. 153) ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ.

            ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಪ್ರಬಲವಾಗಿ ಕಾಣಿಸಿಕೊಂಡಿದ್ದು 70ರ ದಶಕದ ಕೊನೆಯ ಭಾಗದಲ್ಲಿ ಈ ಸಂದರ್ಭದಲ್ಲಿ ನಡೆದ ಹಲವು ಘಟನೆಗಳು ಈ ಸಾಹಿತ್ಯ ಸಂಘಟನೆಗೆ ಪ್ರೇರಣೆ ನೀಡಿದವು. ಈ ಭಾಗದಲ್ಲಿ ಅಧ್ಯಯನದ ಸೌಕರ್ಯಕ್ಕಾಗಿ ಈ ಪ್ರೇರಣೆಗಳನ್ನು ಸಾಹಿತ್ಯೇತರ ಪ್ರೇರಣೆ, ಪ್ರಭಾವಗಳು ಮತ್ತು ಸಾಹಿತ್ಯಕ ಪ್ರೇರಣೆಗಳು ಎಂಬುದಾಗಿ ವಿಭಾಗಿಸಿಕೊಳ್ಳಲಾಗಿದೆ.

            ಶೋಷಿತ ಸಮುದಾಯಗಳಿಗೆ ಸಾಹಿತ್ಯೇತರ ಪ್ರೇರಣೆಯಾಗಿ ಅಂಬೇಡ್ಕರ್ ಸಿದ್ಧಾಂತ, ಮಾರ್ಕ್ಸ್ವಾದ, ಲೋಹಿಯಾವಾದ, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ, ದಲಿತ ಪ್ಯಾಂಥರ್ ಮೊದಲಾದ ಎಡಪಂಥೀಯ ಸಿದ್ಧಾಂತಗಳೆಲ್ಲ ಈ ಸಾಹಿತ್ಯ ಸಂಘಟನೆಯನ್ನು ಪ್ರಭಾವಿಸಲಾಗಿದೆ. ಜೊತೆಗೆ ಚಳುವಳಿಗಳು, ಪತ್ರಿಕೆಗಳು ಕೂಡ ದಲಿತ ಬಂಡಾಯ ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿವೆ.

ಅಂಬೇಡ್ಕರ್ ವಾದ/ಸಿದ್ಧಾಂತ:

            ಒಂದು ಸಾಮಾನ್ಯ ಅಂಶವೆಂದರೆ ದಲಿತ ಬರಹಗಾರರೆಲ್ಲರೂ ಅಂಬೇಡ್ಕರ್ ಚಿಂತನೆಯಿಂದ ಪ್ರಭಾವಿತರಾದವರೆ ಆಗಿದ್ದಾರೆ. ಅಂಬೇಡ್ಕರ್ ದಲಿತರ ಸ್ವಾಭಿಮಾನದ ಸಂಕೇತ. ನಮ್ಮ ರಾಷ್ಟ್ರದ ಪ್ರಮುಖ ನಾಯಕರಾಗಿರುವ ಅಂಬೇಡ್ಕರ್ ದೇಶಕ್ಕೆ ಆತ್ಮದಂತಿರುವ ಸಂವಿಧಾನವನ್ನು ರೂಪಿಸಿದಂತವರು. ದೀನ ದಲಿತರ ಪರವಾಗಿ ಹೋರಾಟವನ್ನು ಮೊಳಗಿಸಿದ ಮಾನವೀಯ ಮೂರ್ತಿಯಾಗಿದ್ದಾರೆ. ವೈಯಕ್ತಿಕ ದುಃಖದಿಂದ ಅನುಭವಿಸಿ, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹೋರಾಟವನ್ನು ಹುಟ್ಟು ಹಾಕಿದರು. ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳನ್ನು ತಮ್ಮ ಅಧ್ಯಯನದ ಮೂಲಕ ನೀಡಿದ್ದಾರೆ. ಇವುಗಳ ಪ್ರಭಾವ ಈ ಸಂಘಟನೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿಸಿದೆ. 

ಮಾರ್ಕ್ಸ್ ವಾದ:

            ಸಹಜವಾಗಿಯೇ ಪ್ರಗತಿಶೀಲ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಮಾರ್ಕ್ಸ್ವಾದವು ಬಂಡಾಯ-ದಲಿತ ಸಾಹಿತ್ಯಕ್ಕೂ ಪ್ರೇರಣೆ ನೀಡಿರುವುದರನ್ನು ಗುರುತಿಸಬಹುದು. ಮುಖ್ಯವಾಗಿ ದಲಿತೇತರ ಬಂಡಾಯದ ಬರಹಗಾರರಲ್ಲಿ ಹೆಚ್ಚಿನ ಲೇಖಕರು ಮಾರ್ಕ್ಸ್ವಾದಿಗಳೇ ಆಗಿದ್ದಾರೆ. ಎಲ್ಲಾ ಜಾತಿಯಲ್ಲಿಯು ಇರುವ ಬಡವರನ್ನು ಸಮಾನರೆಂದು ಗುರುತಿಸಿ ವರ್ಗ ಸಂಘರ್ಷಕ್ಕೆ ಪ್ರೇರಣೆ, ಪ್ರಚೋದನೆಯನ್ನು ನೀಡುತ್ತಾರೆ. ಇಲ್ಲಿ ಜಾತಿ ಅಷ್ಟು ಮುಖ್ಯವಾಗುವುದಿಲ್ಲ. ಮುಖ್ಯವಾಗಿ ಆರ್ಥಿಕತೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಮನುಷ್ಯನ ಮೂಲಭೂತ ಸಮಸ್ಯೆಗಳು ಹಾಗೂ ಕನಿಷ್ಟತಮ ಅಗತ್ಯಗಳಿಗೆ ನಿಜವಾದ ಪರಿಹಾರ ಕಮ್ಯೂನಿಸಂ ಎಂದು ನಂಬಿದವರು ಕಾರ್ಲ್ಮಾರ್ಕ್ಸ್ “ಎಲ್ಲಾ ಜಾತಿಯ ಬಡವರನ್ನು ಎಲ್ಲಾ ಜಾತಿಯ ಶೋಷಿತರನ್ನು ಸಮಾನರೆಂದು ಗುರುತಿಸಿ ವರ್ಗ ಹೋರಾಟಕ್ಕೆ ಪ್ರಚೋದನೆ ನೀಡುತ್ತಾರೆ. ಲಿಂಗಾಧಾರಿತ ಅಸಮಾನತೆಯನ್ನು ವಿರೋಧಿಸುವುದು, ಆರ್ಥಿಕತೆಗೆ ಮಹತ್ವ ನೀಡಿ, ಅದರ ಸಮಾನ ವಿನಿಯೋಗಕ್ಕೆ ಮಹತ್ವ ನೀಡುವುದು ಮಾರ್ಕ್ಸ್ವಾದಿ ಚಿಂತನೆಯಲ್ಲಿ ಕಂಡುಬರುವ ಮುಖ್ಯ ಅಂಶಗಳಾಗಿವೆ” (ಭೂಮಿಗೌಡ; ಕನ್ನಡ ಕಾದಂಬರಿಗಳಲ್ಲಿ ದಲಿತ ಜಗತ್ತು, 2004, ಪು. 27). ಈ ರೀತಿಯಲ್ಲಿ ಮಾರ್ಕ್ಸ್ವಾದಿ ಚಿಂತನೆ ಸಹ ಇಪ್ಪತ್ತನೇ ಶತಮಾನದ ಕೊನೆಯ ದಶಕಗಳಲ್ಲಿ ಬರೆಯುತ್ತಿದ್ದ ಬರಹಗಾರರ ಮೇಲೆ ಪ್ರಭಾವ ಬೀರಿದೆ.

ಲೋಹಿಯಾ ಸಿದ್ಧಾಂತ:

            ರಾಮ ಮನೋಹರ ಲೋಹಿಯಾ ಭಾರತದ ಸಾಮಾಜಿಕ ಚಿಂತಕದಲ್ಲಿ ಒಬ್ಬರು. ಆಧುನಿಕ ಭಾರತದ ನಿರ್ಮಾಣದಲ್ಲಿ ದುಡಿದ ಮಹನೀಯರೆ ಲೋಹಿಯಾ. ಇವರು ಗಾಂಧೀಜಿಯವರ ಆರಾಧಕರು ಹೌದು. ಗಾಂಧೀಜಿಯವರನ್ನು ತಾತ್ತಿ್ವಕವಾಗಿ ಪ್ರಶ್ನಿಸಿದವರೂ ಲೋಹಿಯಾ. ಜಾತಿಪದ್ಧತಿಯ ಬಗ್ಗೆ ಅಂತರಾಷ್ಟ್ರೀಯ ಕಪು್ಪ ಬಿಳುಪುಗಳ ಬಗ್ಗೆ, ಭಾರತೀಯ ಭಾಷೆಗಳ ಬಗ್ಗೆ ಅವರು ಮಂಡಿಸಿದ ವಿಚಾರಧಾರೆಗಳಿಂದ ಕನ್ನಡದ ಬರಹಗಾರರು ಸಾಕಷ್ಟು ಪ್ರಭಾವಿತರಾಗಿದ್ದಾರೆ. ಬ್ರಾಹ್ಮಣೇತರ ಬರಹಗಾರರಿಗೆ ಪ್ರಮುಖ ಪ್ರೇರಣೆಯಾಗಿದ್ದಾರೆ. ಮಾರ್ಕ್ಸ್ವಾದ ಮತ್ತು ನೆಹರೂವಾದಗಳಿಗೆ ಪರ್ಯಾಯವಾದ ಸಿದ್ಧಾಂತ ಇದೆಂದು ಅನೇಕರು ನಂಬಿದ್ದಾರೆ. ಭಾರತದ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ನೆಲೆ ಕಂಡಿರುವುದು ಹಳ್ಳಿಗಾಡಿನಿಂದ, ಬಡರೈತ, ಭೂರಹಿತರಪರ, ಕೃಷಿಕಾರ್ಮಿಕರ ಪರ ಒತ್ತಾಸೆಯಾಗಿ ಲೋಹಿಯಾ ಅವರು ಹೋರಾಟ ಮಾಡಿದ್ದು ದಲಿತ-ಬಂಡಾಯ ಬರಹಗಾರರಿಗೆ ಸ್ಫೂರ್ತಿ ನೀಡಿತು ಎಂಬುದನ್ನು ದೇವನೂರು ಮಹಾದೇವ, ಬಿ. ಕೃಷ್ಣಪ್ಪ, ಸಿದ್ಧಲಿಂಗಯ್ಯ ಅವರು ಕೆಲವು ಸಂದರ್ಭದಲ್ಲಿ ವಿವರಿಸಿದ್ದಾರೆ.

ವಚನ ಚಳುವಳಿ:

ಬಂಡಾಯ ಬರಹಗಾರರಿಗೆ ವಚನ ಚಳುವಳಿ, ವಚನ ಸಾಹಿತ್ಯ ಕೂಡ ಪ್ರಭಾವ ಬೀರಿರುವುದನ್ನು ಗುರುತಿಸಬಹುದು. ಸಮಾಜದ ವಿವಿಧ ಸಮುದಾಯಗಳಿಂದ ಬಂದಂತಹ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ, ಹರಳಯ್ಯ, ಮಾದಾರ ಚೆನ್ನಯ್ಯ, ಮಧುವರಸ, ಆಯ್ದಕ್ಕಿ ಲಕ್ಕಮ್ಮ ಮೊದಲಾದ ವಚನಕಾರರು ಸಾಮಾಜಿಕ ಸಮಾನತೆಗಾಗಿ ಒಟ್ಟಾಗಿ ನಡೆಸಿದ ಸಾಮಾಜಿಕ ಕ್ರಾಂತಿ, ಬಂಡಾಯ-ದಲಿತ ಸಾಹಿತಿಗಳಿಗೆ ಸ್ಫೂರ್ತಿಯನ್ನು ನೀಡಿದೆ. “ವಚನ ಚಳುವಳಿ ಮತ್ತು ಸಾಹಿತ್ಯ ಸ್ಥಾವರ ವಿರೋಧಿಯಾಗಿ, ಜಂಗಮ ಪರಿಕಲ್ಪನೆಯ ಪರವಾಗಿ ಹೊಸಶಕ್ತಿ ಸಂಚಯಿಸಿಕೊಳ್ಳುತ್ತಾ ಜಾತಿ, ಮತ ಮೀರಿದ ಧಾರ್ಮಿಕ ವಿನ್ಯಾಸವನ್ನು ಪಡೆದದ್ದು ವೈದಿಕ ಧರ್ಮದ ಜಡತೆಗೊಡ್ಡಿದ ಒಂದು ಪುನರ್ ಮೌಲ್ಯೀಕರಣವೇ ಆಗಿದೆ” (ಬರಗೂರು ರಾಮಚಂದ್ರಪ್ಪ, ಪುನರ್ ಮೌಲೀಕರಣ ಮಾಲಿಕೆ, ಪ್ರಸ್ತಾವನೆ, 1993, 19) ಎನ್ನುವ ಅಭಿಪ್ರಾಯ ಸಮಂಜಸವೇ ಆಗಿದೆ.

            ಸಮಾಜದ ಎಲ್ಲ ವರ್ಗದ ಜನರು ತಾವು ಅನುಭವಿಸುತ್ತಿರುವ ನೋವು, ಅಪಮಾನ, ಅನ್ಯಾಯಗಳ ವಿರುದ್ಧ ಬಂಡೆದ್ದು ಬರೆದದ್ದು ‘ಬಂಡಾಯ ಸಾಹಿತ್ಯ’. ದಲಿತ ಸಾಹಿತ್ಯಕ್ಕಿಂತ ಇದರ ವ್ಯಾಪ್ತಿ ಹಿರಿದು. ಜಡಗಟ್ಟಿ ಹೋಗಿರುವ ಎಲ್ಲ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವ್ಯವಸ್ಥೆಗಳ ವಿರುದ್ಧದ ಪ್ರತಿರೋಧವನ್ನು ಇದು ಒಳಗೊಳ್ಳುತ್ತದೆ. ಬದುಕಿನ ಪ್ರೇಮ, ಅದಮ್ಯವಾದ ಸಾಮಾಜಿಕ ಕಳಕಳಿ, ಗಾಢವಾದ ರಾಜಕೀಯ ಪ್ರಜ್ಞೆ ಇವು ಬಂಡಾಯ ಸಾಹಿತ್ಯದ ಪ್ರಮುಖ ಹಿನ್ನಲೆಗಳು. ‘ಯುದ್ಧ ಎಂಬರ್ಥದ ‘ಭಣ್ಣು’ ಎಂಬ ಸಂಸ್ಕೃತ ಮೂಲದಿಂದ ‘ಬಂಡಾಯ’ ಪದ ಬಂದಿರುವುದಾದರೂ ಕನ್ನಡ ಸಂದರ್ಭದಲ್ಲಿ ಪ್ರತಿಭಟನೆ ‘ಹೋರಾಟ’ ದ ಎಂಬರ್ಥಗಳಲ್ಲಿ ಬಳಸಿಕೊಳ್ಳಲಾಗಿದೆ. ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟವೇ ಬಂಡಾಯ’ (ರಹಮತ್ ತರೀಕೆರೆ, ಕನ್ನಡ ಕಾವ್ಯ ಮತ್ತು ಪ್ರತಿಭಟನೆ; ಪುಟ 02) ಎಂದಿದ್ದಾರೆ.

            ಅದೇ ರೀತಿಯಲ್ಲಿ “ಅಸ್ಪೃಶ್ಯ ಜನಾಂಗದಲ್ಲಿ ಹುಟ್ಟಿರದಿದ್ದರೂ, ಬಡವರ-ದಲಿತರ ಶತಮಾನಗಳ ಶೋಷಣೆಯನ್ನು ಕಂಡು ಬಂಡೆದ್ದು, ತುಳಿತಕ್ಕೊಳಗಾದರೊಂದಿಗೆ ಸಂಘಟಿತನಾಗಿ, ತಾನು ಬೆಳೆದು ಬಂದ ಸಮಾಜ-ಸಂಸ್ಕೃತಿಗಳ ಮಿತಿಗಳನ್ನು ಗುರುತಿಸುತ್ತಾ; ತನ್ನ ಸುತ್ತಲಿರುವ ಸಾಂಪ್ರದಾಯಿಕ ಗೆರೆಗಳನ್ನು ದಾಟುತ್ತಾ ಬದುಕು ಬರಹಗಳಲ್ಲಿ ಬಂಡೇಳುವ ಪ್ರವೃತ್ತಿಯುಳ್ಳ ಸಾಹಿತಿ ಬಂಡಾಯ ಸಾಹಿತಿಯೆನಿಸುತ್ತಾನೆ. ಆದ್ದರಿಂದ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ, ಎರಡು ವಿಭಿನ್ನ ಸಂಸ್ಕೃತಿಗಳಿಂದ ಬಂದ ಸಾಹಿತಿಗಳ ಏಕಮುಖ ಹೋರಾಟ ಒಂದೇ ಕಾಲಕ್ಕೆ ನಡೆದಿರುತ್ತದೆ. ಇದು ಬಂಡಾಯ ಸಾಹಿತ್ಯ ಸಂಘಟನೆಯ ವೈಶಿಷ್ಟ್ಯತೆಯು ಕೂಡ ಆಗಿದೆ. ಬಂಡಾಯ ಸಂಘಟನೆಯಲ್ಲಿ ದಲಿತ ಸಾಹಿತಿಗಳ ಹೋರಾಟ ಮತ್ತು ದಲಿತೇತರ ಸಾಹಿತಿಗಳ ಹೋರಾಟ ಒಂದೇ ಉದ್ಧೇಶದತ್ತ ನಡೆದಿರುತ್ತದೆ. ಹೀಗಾಗಿ ‘ದಲಿತ’ ಪದದಿಂದ ‘ಬಂಡಾಯ’ ಪದವನ್ನಾಗಲಿ, ‘ಬಂಡಾಯ’ ಪದದಿಂದ ‘ದಲಿತ’ ಪದವನ್ನಾಗಲಿ ಬೇರ್ಪಡಿಸಲಿಕ್ಕಾಗುವುದಿಲ್ಲ. ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತಿವೆ. ‘ಬಂಡಾಯ’ ಪದದಲ್ಲಿಯೇ ಎರಡು ಸೇರಿರುವುದು ನಿಜವಾದರೂ, ಸ್ಪಷ್ಟತೆಗಾಗಿ ದಲಿತ ಬಂಡಾಯ ಎಂದು ಕರೆಯುವುದು ಹೆಚ್ಚು ಸೂಕ್ತವೆನಿಸುತ್ತದೆ” (ಬಸವರಾಜ ಸಬರದ, ದಲಿತ ಬಂಡಾಯ ಕಾವ್ಯದಲ್ಲಿ ಜನಪರ ನಿಲುವುಗಳು, 1984, ಪುಟ 34) ಎನ್ನುವ ಮಾತುಗಳು ಸಕಾರಣವಾಗಿರುವಂತೆ ತೋರುತ್ತದೆ. ಕ್ರೂರ ವ್ಯವಸ್ಥೆಯ ವಿರುದ್ಧ, ಯಜಮಾನ ಸಂಸ್ಕೃತಿಯ ಎಲ್ಲಾ ಸಂಚುಗಳ ವಿರುದ್ಧ ಬಂಡೆದ್ದ ಪ್ರಗತಿಪರ ಮನೋಧರ್ಮವೇ ಬಂಡಾಯ ಸಾಹಿತ್ಯ ಚಳುವಳಿಯ ಮೂಲ ಸತ್ವವಾಯಿತು (ಕನ್ನಡದಲ್ಲಿ ಬಂಡಾಯ ಸಾಹಿತ್ಯ: ಅನ್ವೇಷಣೆ 1984:13) ಎನ್ನುವ ಅಂಶವು ಗಮನಾರ್ಹ ಮತ್ತು ಬಂಡಾಯ ಸಾಹಿತ್ಯದ ವ್ಯಾಪಕವಾದ ಅರ್ಥದಲ್ಲಿ ನೊಂದವರ ಧ್ವನಿಯಾಗಿದೆ. “ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ” ಎಂಬ ಧ್ಯೇಯ ವಾಕ್ಯದ ಅರ್ಥವೂ ಅದೇ ಆಗಿದೆ. ಹೀಗೆ ಬಂಡಾಯದ ಬಹುತೇಕ ಬರಹಗಾರರು ಹೀಗೆ ಬಂಡಾಯದ ಹಲವು ಬಗೆಯ ಅರ್ಥಗಳನ್ನು ವಿವರಿಸಿದ್ದಾರೆ.

            “ಬಂಡಾಯ ಎಂಬ ಪದ ಸಾಮೂಹಿಕ ಆಶಯವನ್ನು ಕುರಿತದ್ದೇ ಹೊರತು ವ್ಯಕ್ತಿಯ ಹುಟ್ಟನ್ನಲ್ಲ. ಈ ಕಾರಣದಿಂದಲೇ ಹುಟ್ಟಿನಿಂದ ದಲಿತನಾಗಿದ್ದು, ಪ್ರತಿಗಾಮಿ ಆಶಯಗಳನ್ನು ಅಭಿವ್ಯಕ್ತಿಸಿದ ಸಾಹಿತಿ ಬಂಡಾಯ ಸಾಹಿತ್ಯದ ಪಟ್ಟಿಗೆ ಸೇರುವುದಿಲ್ಲ ಮತ್ತೊಮ್ಮೆ ಸ್ಪಷ್ಟಪಡಿಸಬೇಕೆಂದರೆ ಪ್ರಗತಿಗಾಮಿ ದಲಿತ ಸಾಹಿತಿಗಳೆಲ್ಲ ಬಂಡಾಯ ಸಾಹಿತಿಗಳು, ಬಂಡಾಯ ಸಾಹಿತಿಗಳೆಲ್ಲರೂ ದಲಿತ ಸಾಹಿತಿಗಳಲ್ಲ” (ಬರಗೂರು ರಾಮಚಂದ್ರಪ್ಪ, ಸಾಹಿತ್ಯ ಮತ್ತು ರಾಜಕಾರಣ, 1981: 21-22) ಎಂದಿದ್ದಾರೆ. 

ಬೂಸಾ ಪ್ರಕರಣ:

            ಕರ್ನಾಟಕದಲ್ಲಿ ಚಳುವಳಿಗಳನ್ನು ಹುಟ್ಟು ಹಾಕಿದ ಎಪ್ಪತ್ತರ ದಶಕವು ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಮುಖವಾದುದು 1973 ರಲ್ಲಿ ನಡೆದ ಈ ಪ್ರಕರಣ ಚಾರಿತ್ರಿಕ ದಾಖಲೆ. ಬೂಸಾ ಪ್ರಕರಣ ವಿವಾದ ಸಾಹಿತ್ಯಕ ಭಿನ್ನಮತದಂತೆ ರಾಜಕೀಯ ಮತ್ತು ಶೈಕ್ಷಣಿಕ ಭಿನ್ನಮತವಾಗಿ ತೀವ್ರ ಸ್ವರೂಪ ಪಡೆದುಕೊಂಡಿತು. ಬಿ. ಬಸವಲಿಂಗಪ್ಪನವರು ‘ಬೂಸಾ ಸಾಹಿತ್ಯ’ ವೆಂಬ ಘೋಷಣೆ ನೀಡುವ ಮೂಲಕ ಪ್ರಗತಿಪರ ಚಿಂತಕರೆಲ್ಲರು ಒಂದುಗೂಡುವಂತಾಯಿತು. ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಜಾತಿ ವಿನಾಶ ಸಮ್ಮೇಳನ, ದಲಿತ ಸಂಘರ್ಷ ಸಮಿತಿ, ದಲಿತ ಸಾಹಿತ್ಯ ಹಾಗೂ ದಲಿತ ಬಂಡಾಯ ಚಿಂತನೆಗಳಿಗೆ ಸಾಕ್ಷಿಯಾದವು.

ಸಾಹಿತ್ಯಕ ಪ್ರೇರಣೆ ಪ್ರಭಾವಗಳು:

            ಯಾವುದೇ ಸಾಹಿತ್ಯ ಸಂದರ್ಭದಲ್ಲಿಯು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಾಮಾನ್ಯವಾಗಿ ಯಾವುದೇ ಸಾಹಿತ್ಯವು ದಿಢೀರನೆ ಉಂಟಾಗುವುದಿಲ್ಲ. ಬದಲಾಗಿ ಅಂದಿನ ಕಾಲದ ತುರ್ತಿಗನುಗುಣವಾಗಿ ಸಾಮಾಜಿಕ ಪರಿಸ್ಥಿತಿ, ಹೊಸ ಆಲೋಚನಾ ಕ್ರಮ, ಸಾಹಿತ್ಯಕ ಚಳುವಳಿಗೆ ಪ್ರೇರಣೆ ನೀಡುತ್ತª ಎನ್ನುವುದು.  

ನವ್ಯ ಸಾಹಿತ್ಯದ ಮಿತಿಗಳು:

            ಯಾವುದೇ ಸಾಹಿತ್ಯ ಸಂಪ್ರದಾಯವಾದರೂ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ನಂತರ ಜಡತ್ವದ ಸ್ಥಿತಿಗೆ ಕಾರಣವಾಗುತ್ತದೆ. ಇಂತಹ ದೌರ್ಬಲ್ಯಗಳ ವಿರುದ್ಧ ಅಸಮಾಧಾನ, ಪ್ರತಿಭಟನೆ ಆರಂಭವಾಗಿ ಇನ್ನೊಂದು ಹೊಸ ಮಾರ್ಗದ ಅನ್ವೇಷಣೆಗೆ ಎಡೆ ಮಾಡಿಕೊಡುತ್ತವೆ. ಕನ್ನಡ ನವ್ಯ ಸಾಹಿತ್ಯದ ನಂತರ ಕ್ರಿಯಾಶೀಲವಾಯಿತು ದಲಿತ ಬಂಡಾಯ ಚಳುವಳಿ.

            ಮರಾಠಿ ಸಾಹಿತ್ಯ ಮತ್ತು ತೆಲುಗಿನ ದಿಗಂಬರ ಕಾವ್ಯದ ಪ್ರೇರಣೆ ದಲಿತ ಬಂಡಾಯದ ಮೇಲೆ ಆಗಿರುವುದನ್ನು ಕಾಣಬಹುದಾಗಿದೆ. 1960ರ ದಶಕದಿಂದ ಈಚೆಗೆ ಆಂಧ್ರಪ್ರದೇಶದಲ್ಲಿ ಬಹು ವ್ಯಾಪಕವಾಗಿ ಚರ್ಚಿತವಾಗಿರುವ ‘ದಿಗಂಬರ ಕಾವ್ಯ’ವು ಕನ್ನಡ ದಲಿತ ಬಂಡಾಯ ಸಾಹಿತ್ಯಕ್ಕೆ ಪ್ರೇರಣೆಯನ್ನು ಒದಗಿಸಿದೆ.

            ಕನ್ನಡದ ಬರಹಗಾರರು ಚೆರಬಂಡರಾಜು, ನಗ್ನಮುನಿ, ಬೈರವಯ್ಯ, ನಿಖಿಲೇಶ್ವರ್, ಮಹಾಸ್ವಪ್ನ ಮತ್ತು ಜ್ವಾಲಾಮುಖಿ ಮುಂತಾದವರ ಬರಹವನ್ನು ಗ್ರಹಿಸಿದ್ದಾರೆ. ಮರಾಠಿ ಸಾಹಿತಿಗಳಾದ ಬಾಬುರಾವ್ ಬಾಗುಲ್, ಮನೋಹರ ವಾಂಖೇಡೆ, ದಯಾಪವಾರ್, ನಾಮದೇವ ಡÀಸಾಳ, ಲತೀಫಾ, ವಾಮನ್ ನಿಂಬಾಳ್ಕರ್, ಅರುಣ್ ಕಾಂಬ್ಳೆ ಮೊದಲಾದ ಬರಹಗಾರರ ಬರಹಗಳಿಂದಾಗಿ ಕರ್ನಾಟಕದ ಜನಪರ ಚಳುವಳಿ ಹೆಚ್ಚು ಪ್ರೇರಣೆಗೆ ಒಳಗಾಗಿರುವುದು ತಿಳಿದುಬರುತ್ತದೆ.

ಪರಾಮರ್ಶನ ಗ್ರಂಥಗಳು:

  1. ಸಾಹಿತ್ಯ ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ – ಡಾ.ಅ.ಮಾಲಗತ್ತಿ, ಸಾಹಿತ್ಯ ಪರಿಷತ್ತು, ಬೆಂಗಳೂರು, 2003.
  2. ಬಂಡಾಯ ದಲಿತ ಸಾಹಿತ್ಯ – ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1990.
  3. ಸಂಕ್ರಮಣ ಸಾಹಿತ್ಯ - ಸಂ. ಚಂದ್ರಶೇಖರ ಪಾಟಿಲ, ಸಂಕ್ರಮಣ ಪ್ರಕಾಶನ, ಧಾರವಾಡ, 1993.
  4. ರಹಮತ್ ತರೀಕೆರೆ, ಕನ್ನಡ ಕಾವ್ಯ ಮತ್ತು ಪ್ರತಿಭಟನೆ, ಸಂಕ್ರಮಣ ಪ್ರಕಾಶನ.
  5. ರಮಜಾನ್ ದರ್ಗಾ - ಬಂಡಾಯ ಸಾಹಿತಿ, ಬಂಡಾಯ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, 1980.
  6. ಪೋಲಂಕಿ ರಾಮಮೂರ್ತಿ - ಸಂಸ್ಕೃತಿ ಮತ್ತು ರಾಜಕಾರಣ, ಸಂಕ್ರಮಣ ಪ್ರಕಾಶನ, 1984.
  7. ಪುರುಷೋತ್ತಮ ಬಿಳಿಮಲೆ – ದಲಿತ ಜಗತ್ತು, ಹೊಸ ದಿಕ್ಕು ಪ್ರಕಾಶನ, 1988.
  8. ಬಂಡಾಯ – ದಲಿತ ಸಾಹಿತ್ಯ, ಸಾಹಿತ್ಯ ಅಕಾಡೆಮಿ, ಬೆಂಗಳೂರು, 1990.
  9. ಬಸವರಾಜ ಸಬರದ – ದಲಿತ ಬಂಡಾಯ ಕಾವ್ಯದಲ್ಲಿ ಜನಪರ ನಿಲುವುಗಳು, ಸಂಕ್ರಮಣ ಪ್ರಕಾಶನ, 1989.
  10. ಬಸವರಾಜ ಸಬರದ – ಕನ್ನಡದಲ್ಲಿ ಬಂಡಾಯ ಸಾಹಿತ್ಯ ಅನ್ವೇಷಣೆ, 1984.
  11. ಸಂಕ್ರಮಣ ಸಾಹಿತ್ಯ, ಸಂ. ಚಂದ್ರಶೇಖರ ಪಾಟೀಲ, ಸಂಕ್ರಮಣ ಪ್ರಕಾಶನ, ಧಾರವಾಡ, 1993.
  12. ಡಾ.ಎಲ್.ಎನ್.ಶೇಷಗಿರಿ ರಾವ್ - ಹೊಸಗನ್ನಡ ಸಾಹಿತ್ಯ ಚರಿತ್ರೆ, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು, 2010.
  13. ಸಿ.ಮಹೇಂದ್ರ, ದಲಿತ ಬಂಡಾಯ ಕಥೆಗಳು: ಪ್ರಾದೇಶಿಕತೆ, ಅಪ್ರಕಟಿತ ಪಿಹೆಚ್.ಡಿ. ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, 2016.


Sign In  /  Register

Most Downloaded Articles

Acquire employability in Indian Sinario

The Pink Sonnet

ಸರ್ಕಾರಿ ದೇಗುಲ

Department of Mathematics @ GFGC Tumkur

Knowledge and Education- At Conjecture




© 2018. Tumbe International Journals . All Rights Reserved. Website Designed by ubiJournal