ಅಮೃತಮಹಲ್ ಕಾವಲು ಚಾರಿತ್ರಿಕ ಹಿನ್ನಲೆ
ಮಂಜುನಾಥ
ಎಂ.ಎ., ಪಿಹೆಚ್.ಡಿ, ಸಮಾಜಶಾಸ್ತ್ರ
(ಸಂಯೋಜಿತ ಪದವಿ) ನಾಲ್ಕನೇ ಸೆಮಿಸ್ಟರ್.
ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276.
kannadamanju1996@gmail.com
manjuuppar661996@gmail.com
Phone no: 9481652198
ಪ್ರವೇಶಿಕೆ
ಭಾರತ ದೇಶವು ಪಾರಂಪರಿಕವಾಗಿ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ದೇಶವಾಗಿದೆ. ಭಾರತದಲ್ಲಿ ಸಮುದಾಯಗಳು ನಡೆದು ಬಂದ ಹಾದಿಯನ್ನು ಗಮನಿಸಿದಾಗ ಆದಿಮಾನವರು ಮೊದಲ ಹಂತದಲ್ಲಿ ಬೇಟೆ ಮತ್ತು ಆಹಾರ ಸಂಗ್ರಹಣೆ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡು ನಂತರದಲ್ಲಿ ಎರಡನೆಯ ಹಂತದಲ್ಲಿ ಪಶುಪಾಲನೆಯನ್ನು ಅವಲಂಬಿಸಿ ತಮ್ಮ ಜೀವನವನ್ನು ಸಾಗಿಸುತ್ತಾ ಬಂದರು. ನಂತರದಲ್ಲಿ ಕೃಷಿ, ಕೈಗಾರಿಕೆ ಮುಂತಾದ ಚಟುವಟಿಕೆಯ ಹಂತಗಳನ್ನು ನಾವು ಗಮನಿಸಬಹುದು. ಆದರೆ ಕೆಲವು ಬುಡಕಟ್ಟು ಸಮುದಾಯಗಳು ಪಶುಪಾಲನೆ- ಕುರಿ ಸಾಕಾಣಿಕೆಯನ್ನು ಸಂಪೂರ್ಣವಾಗಿ ಅವಲಂಬಿಸಿ ತಮ್ಮ ಬದುಕನ್ನು ನಡೆಸುವ ಪರಿಪಾಠವನ್ನು ಬೆಳೆಸಿಕೊಂಡು ಮುಂದುವರೆದಿವೆ. ಹೀಗೆ ಕುರಿ ಸಾಕಾಣಿಕೆ ಮತ್ತು ಪಶುಸಂಗೋಪನೆಯು ಚಿತ್ರದುರ್ಗ ಜಿಲ್ಲೆಯಲ್ಲಿ ಅತಿಯಾಗಿ ಅವಲಂಬಿಸಿರುವ ಸಮುದಾಯಗಳು ಹೇರಳವಾಗಿವೆ. ಮೊದಮೊದಲು ಆ ಸಮುದಾಯಗಳು ಅಲ್ಲಿನ ಹುಲ್ಲುಗಾವಲುಗಳಲ್ಲಿ ತಮ್ಮ ಬದುಕುಗಳನ್ನು ಮೇಯಿಸುತ್ತಾ ತಮ್ಮ ಉದರ ಪೋಷಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವರ ಜೀವನದ ಮೇಲೆ ಅನೇಕ ಅಭಿವೃದ್ಧಿಯ ಹೆಸರಿನಲ್ಲಿ ಬರುವ ಯೋಜನೆಗಳು, ಕಾರ್ಯಕ್ರಮಗಳು ಅವರ ಹೊಟ್ಟೆಯ ಮೇಲೆ ಬಂಡೆಗಲ್ಲನ್ನು ಎಳೆಯುತ್ತಿವೆ.
ದೇಶದಾದ್ಯಂತ ಬಹಳ ದೊಡ್ಡ ಪ್ರಮಾಣದ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ ಮತ್ತು ಎಸ್.ಇ.ಜಡ್ ಸ್ಥಾಪನೆಗೆ ಸ್ವಾಧೀನ ಮಾಡುವ ಮೂಲಕ, ಗ್ರಾಮೀಣ ಪ್ರದೇಶದ ಬಹುಜನರ ಬದುಕಿಗೆ ಸಂಪನ್ಮೂಲವಾದ ಭೂಮಿಯನ್ನು ಹಾಗೂ ಸಹಜ ಸ್ವಾಭಾವಿಕ ಸಂಪನ್ಮೂಲಗಳನ್ನು ಹೆಚ್ಚು ಲಾಭದ ನೆಲೆಯಲ್ಲಿ ಯೋಚಿಸುತ್ತಿರುವ ಅಂತರರಾಷ್ಟ್ರೀಯ ಬಂಡವಾಳಶಾಹಿ ವರ್ಗಕ್ಕೆ ಅದರಲ್ಲಿಯೂ ಕಾಪೆರ್Çರೇಟರ್ ಹೌಸ್‍ಗಳಿಗೆ ವರ್ಗಾಯಿಸುವುದು `ಸಮಕಾಲೀನ ಅಭಿವೃದಿ’್ಧಯ ಅಜೆಂಡವಾಗಿದೆ. ಈ ರೀತಿಯ ಬೆಳವಣಿಗೆ ಆಧಾರಿತ ಅಭಿವೃದ್ಧಿಯ ಪ್ರಕ್ರಿಯೆಗಳು ಕೇವಲ ಭೂಮಿಯ ಬೆಲೆಯನ್ನು ಮಾತ್ರ ಹೆಚ್ಚುತ್ತದೆ. ಪಟ್ಟಣ ಕೇಂದ್ರಿತವಾಗದೆ, ಒಂದು ಪುಟ್ಟ ಬುಡಕಟ್ಟು ಅಡಿಯಿಂದ ಮೆಟ್ರೋಪಾಲಿಟನ್ ನಗರಗಳವರೆಗೆ ಹಲವು ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ಡೇವಿಡ್ ರಾರ್ವೆ ಅವರು ಬಳಸಿರುವ `ಅಕ್ಯುಮುಲೇಷನ್ ಬೈ ಡಿಸ್ಪೋಜೆಷನ್’(Accumulation by dispossession) ಅಭಿವೃದ್ಧಿ ಪರಿಕಲ್ಪನೆಯು `ನವ-ಉದಾರವಾದಿ ಬಂಡವಾಳಶಾಹಿ ರಾಜಕಾರಣವು 1970ರಿಂದ ಇಂದಿನವರೆಗೆ, ಸಾರ್ವಜನಿಕರನ್ನು ಅವರ ಸಂಪತ್ತು ಮತ್ತು ಭೂಮಿಯನ್ನು ಕಿತ್ತುಕೊಂಡು ಸಾರ್ವಜನಿಕ ಸಂಪತ್ತು ಮತ್ತು ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತಿದೆ’ ಎನ್ನುವುದನ್ನು ಸಾಬೀತು ಮಾಡಿದೆ.1
ಜಾಗತೀಕರಣ ಮತ್ತು ಜಾಗತೀಕರಣದ ಸಂದರ್ಭದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕದÀಂಬ ಬಾಹುಗಳಿಂದ ಸ್ಥಳೀಯರ ಜೀವನವನ್ನು ಹಿಡಿದಿಟ್ಟುಕೊಳ್ಳುವುದರೊಂದಿಗೆ, ಬಹುರಾಜ್ಯಿಯ ಕಂಪನಿಗಳು ಸಹ ತನ್ನದೇ ಆದ ಮಾರ್ಗದಲ್ಲಿ ಅಭಿವೃದ್ಧಿಯ ಮುಖವಾಡವನ್ನು ಧರಿಸಿ ಜನರ ಬದುಕಿನ ದೈನಂದಿನ ಚಟುವಟಿಕೆಗಳಿಗೆ ಅಡಚಣೆ ಉಂಟುಮಾಡಿವೆ ಮತ್ತು ಮಾಡುತ್ತಲಿವೆ. ಜನರು ಮತ್ತು ಭೂಮಿಯ ನಡುವಿನ ಅವಿನಾಭಾವ ಸಂಬಂಧಕ್ಕೆ ಬಿರುಕು ಉಂಟುಮಾಡುವ ಹುನ್ನಾರುಗಳನ್ನು ಅಭಿವೃದ್ಧಿಯ ಪ್ರಕ್ರಿಯೆಗಳು ನಿರ್ಮಾಣ ಮಾಡುತ್ತಿವೆ ಮತ್ತು ಮಾಡಿವೆ. ಆ ಭೂಮಿಯ ಮೇಲೆ ಜನರಿಗೆ ಇದ್ದ ಸಂಬಂಧ ಮತ್ತು ಆ ಸಂಬಂಧ ಕೊಂಡಿ ಕಳಚಿದ ಅಭಿವೃದ್ಧಿಯ ಪ್ರಕ್ರಿಯೆಯ ಕುರಿತು ಕುದಾಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಜನರ ಅಳಲನ್ನು ಹಾಗೂ ಆ ಪ್ರದೇಶದ ಭೂಮಿಯು ಹೇಗೆ ಕಾಲಾಂತರದಲ್ಲಿ ಹಂತಹಂತವಾಗಿ ಪರಿವರ್ತನೆಯ ಗಾಳಿಗೆ ಸಿಕ್ಕಿ ಹೇಗೆ ಸ್ಥಿತ್ಯಂತರವಾಯಿತು. ಆ ಭೂಮಿಯನ್ನು ತಮಗೆ ಬೇಕಾದ ರೀತಿಯಲ್ಲಿ ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ದುರಾಲೋಚನೆಗೆ ಯಾವ ಯಾವ ಕ್ರಮಗಳನ್ನು ಅಧಿಕಾರವುಳ್ಳವರು ಬಳಸಿದರು ಎಂಬುದನ್ನು ಹಾಗೆಯೇ ಅ ಭೂಮಿಯ ಪೂರ್ವ ಇತಿಹಾಸವನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಸುಮಾರು 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಾಗೂ ಕರ್ನಾಟಕದ ಹೆಮ್ಮೆಯ ಆಸ್ತಿಗಳಲ್ಲಿ ಬಂದಾದ `ಅಮೃತಮಹಲ್’ ಎತ್ತು ಮತ್ತು ಹೋರಿಗಳು ವಿಜಯನಗರದ ಕಾಲದಿಂದಲೂ ತಮ್ಮ ಪರಾಕ್ರಮಕ್ಕೆ ಹೆಸರಾಗಿದ್ದವು. ಎತ್ತರದ ನಿಲುವು, ಸುಂದರ ಕೋಡುಗಳು, ಮಿರುಗುವ ನೀಳ ಗಂಗೆದೊಗಲು ಪೊಗದಸ್ತಾದ ಡುಬ್ಬ, ಕಬ್ಬಿಣದಷ್ಟು ಗಟ್ಟಿಯಾದ ಗೊರಸು, ಅತಿವೇಗದ ನಡೆ, ಭಾರ ಎಳೆಯುವÀ ಶಕ್ತಿ, ರೋಗನಿರೋಧಕ ಶಕ್ತಿ, ಬಿಸಿಲು-ಮಳೆಗೆ ಜಗ್ಗದ, ಮದ್ದುಗುಂಡುಗಳ ಸಪ್ಪಳಕ್ಕೂ ಅಂಜದ ಈ ಎಲ್ಲಾ ಗುಣಗಳಿಗೆ ಕಳಶವಿಟ್ಟಂತೆ ಅತ್ಯದ್ಭುತ ಸ್ಮರಣಶಕ್ತಿಯನ್ನು ಹೊಂದಿರುವ ಈ ತಳಿಯ ಎತ್ತು ಮತ್ತು ಹೋರಿಗಳು ಯುದ್ಧರಂಗಕ್ಕೆ ಹೇಳಿ ಮಾಡಿಸಿದಂತಿರುವುದರಿಂದ ಕ್ರಿ.ಶ 1512ರ ವೇಳೆಗೆ ಇವುಗಳ ಖ್ಯಾತಿ ರಾಜರಲ್ಲಿ ಹಾಗೂ ಜನಮನದಲ್ಲಿ ಬಿಂಬಿತವಾಗಿತ್ತು. ಹೀಗೆ ಈ ತಳಿಯ ರಕ್ಷಣೆ, ಸುಧಾರಣೆ ವಿಜಯನಗರ ಕಾಲದಿಂದಲೇ ಆರಂಭವಾಗುತ್ತದೆ.
ಕಾಡು ಪ್ರಾಣಿಗಳಂತೆ ಇದ್ದ ಇವುಗಳನ್ನು ಕ್ರಿ.ಶ 1617 ರಲ್ಲಿ ಪಟ್ಟಕ್ಕೆ ಬಂದ ಚಾಮರಾಜ ಒಡೆಯರು ನಂತರ ಕಂಠೀರವ ನರಸರಾಜ ಒಡೆಯರು ಹಾಗೂ ದೊಡ್ಡ ದೇವರಾಜ ಒಡೆಯರು ಅಭಿವೃದ್ಧಿಪಡಿಸಲು ಆಸಕ್ತಿ ತೋರಿದರು. ಚಿಕ್ಕದೇವರಾಜ ಒಡೆಯರು (1672-1708) ಮೊಗಲರ ರಾಜ್ಯ ಪದ್ಧತಿಯ ಮಾದರಿಯಂತೆ 18 ಶಾಖೆಗಳನ್ನು ಒಳಗೊಂಡ ‘ಅಠಾರ ಕಛೇರಿ’ ಎಂಬ ಕೇಂದ್ರಾಡಳಿತ ಕಛೇರಿಯನ್ನು ಸ್ಥಾಪಿಸಿದಾಗ ಅರಮನೆಯ ಜಾನುವಾರುಗಳ ಉಸ್ತುವಾರಿಗಾಗಿ `ಬೆಣ್ಣೆ ಚಾವಡಿ’ ಎಂಬ ಆಡಳಿತ ವಿಭಾಗವನ್ನು ತೆರೆದರು. ಈ ಆಡಳಿತ ವಿಭಾಗದ ಅಡಿಯಲ್ಲಿ ವ್ಯವಸ್ಥಿತವಾಗಿ ಗೋಮಾಳಗಳನ್ನು ಕಾದಿರಿಸಿದ್ದ ಬಗ್ಗೆ ದಾಖಲೆಯಿದ್ದು, ಇಂತಹ ವಿಶೇಷ ಗೋಮಾಳಗಳನ್ನು `ಕಾವಲು’ಗಳೆಂದು ಕರೆಯಲಾಗುತ್ತಿತ್ತು. ಒಟ್ಟು 240 ಪ್ರತ್ಯೇಕ ಕಾವಲುಗಳಿದ್ದು ಇವುಗಳ ವಿಸ್ತೀರ್ಣ 4,13,529 ಎಕರೆ.2
ಮೈಸೂರನ್ನು ಹೈದರಾಲಿ ವಶಪಡಿಸಿಕೊಂಡ ನಂತರ ಈ ರಾಸುಗಳನ್ನು ಬಳಸಿಕೊಂಡಿದ್ದμÉ್ಟೀ ಅಲ್ಲದೆ ಈ ತಳಿ ಅಭಿವೃದ್ಧಿಗೂ ವಿಶೇಷ ಕಾಳಜಿ ವಹಿಸಿದನು. ಟಿಪ್ಪು ಸುಲ್ತಾನನಿಗೆ ಈ ತಳಿಯ ಬಗ್ಗೆ ವಿಶೇಷ ಕಾಳಜಿ ಮತ್ತು ಹೆಮ್ಮೆ ಇದ್ದುದರಿಂದ ಈತ `ಬೆಣ್ಣೆ ಚಾವಡಿ’ ಎಂಬ ಹೆಸರನ್ನು ಬದಲಿಸಿ `ಅಮೃತಮಹಲ್’ (ಹಾಲಿನ ಇಲಾಖೆ) ಇಲಾಖೆ ಎಂದು ನಾಮಕರಣ ಮಾಡಿದ. ಕಾವಲುಗಳಲ್ಲಿ ಚಿಗುರು ಕಾವಲು, ಕಡ್ಡಿ ಕಾವಲು, ಜೂಲಿ ಕಾವಲು ಎಂಬೆಲ್ಲಾ ವಿಭಾಗಗಳಿದ್ದವು. ಚಿಗುರು ಕಾವಲಿನಲ್ಲಿ ಬೆಳೆಯುವ ಚಿಗುರು ಹುಲ್ಲುಗಳನ್ನು ಗ್ರಾಮದ ಜನರು ಬಳಸಲು ಅವಕಾಶ ಕಲ್ಪಿಸಿದ್ದ. ಆದ್ದರಿಂದ ಕೆಲವು ಬುಡಕಟ್ಟು ಸಮುದಾಯಗಳು ಈ ಕಾವಲುಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಬಿಡಾರಗಳನ್ನು ಹೂಡಿಕೊಂಡಿದ್ದವು.
ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ನಂತರ 1799ರಲ್ಲಿ ಟಿಪ್ಪುವಿನ ಮರಣದ ನಂತರ ಬ್ರಿಟಿಷರು ತಮಗೆ ವರ್ಷದಲ್ಲಿ ಇಂತಿಷ್ಟು ದನಗಳನ್ನು ನೀಡಬೇಕೆನ್ನುವ ಕರಾರಿನ ಮೇರೆಗೆ ಈ ಇಲಾಖೆಯನ್ನು ಮೈಸೂರು ಆಡಳಿತಕ್ಕೆ ವಹಿಸಿದರು. ಆದರೆ ಕ್ರಿ.ಶ 1813ರಲ್ಲಿ ಬ್ರಿಟಿಷರು ಈ ಇಲಾಖೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮದ್ರಾಸಿನ ಕಮಿಷನರ್ `ಕ್ಯಾಪ್ಟನ್ ಹಾರ್ವೆ’ಗೆ ವಹಿಸಿಕೊಟ್ಟರು. ಆದರೆ ಕ್ರಿ.ಶ 1860ರಲ್ಲಿ ಮದ್ರಾಸಿನ ಕಮಿಷನರ್ ಆದ `ಸರ್ ಖೌಲ್ಸ್ ಟ್ರಿವಲಿಯನ್’ನ ತಪ್ಪು ಆರ್ಥಿಕ ಲೆಕ್ಕಾಚಾರದಿಂದ ಈ ಹಿಂಡನ್ನು ಈಜಿಪ್ಟಿನ ಷಾಷಾನಿಗೆ ಮಾರಿದನು.3
ಕ್ರಿ.ಶ 1865 ರಲ್ಲಿ ಮದ್ರಾಸ್ ಸರಕಾರವು ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅಮೃತ್‍ಮಹಲ್ ಹಿಂಡನ್ನು ಪುನರ್ ಸ್ಥಾಪಿಸಲು ನಿರ್ಧರಿಸಿತು. ಅದರಂತೆ ಬ್ರಿಟಿμï ಸರ್ಕಾರದಿಂದ ಕ್ರಿ.ಶ 1866ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದಲ್ಲಿ ಉತ್ತಮ ದನಗಳನ್ನು ಹಾರಿಸಿ ಪುನ: ಹಿಂಡನ್ನು ಸ್ಥಾಪಿಸಿ ಮಾರಾಟ ಮಾಡದೆ ಉಳಿದ ಅಮೃತಮಹಲ್ ಕಾವಲುಗಳನ್ನು ಸಹ ಈ ಹಿಂಡಿನ ದನಗಳು ಮೇಯುವುದರ ಸಲುವಾಗಿ ಕಾಯ್ದಿಟ್ಟರು. ಮತ್ತೆ ಕ್ರಿ.ಶÀ 1870ರಲ್ಲಿ ಮದ್ರಾಸ್ ಸರ್ಕಾರದವರು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪುನ: ಕ್ರಿ.ಶ 1883ರಲ್ಲಿ ಮೈಸೂರು ಮಹಾರಾಜರಿಗೆ 2,25,000 ರೂಪಾಯಿಗಳಿಗೆ ಮಾರಿದರು. ಈ ಇಲಾಖೆಯು 1896-97 ರವರೆಗೆ ಸರಕಾರದ ಸೈನ್ಯದ ಸಹಾಯಕನ ಅಧೀನದಲ್ಲಿತ್ತು. ಕ್ರಿ.ಶÀ 1915-15 ರಲ್ಲಿ ಈ ಇಲಾಖೆಯ ಮೇಲ್ವಿಚಾರಣೆಯನ್ನು ಸೈನ್ಯದ ಕಾರ್ಯದರ್ಶಿಯಿಂದ ಮುಖ್ಯ ಸೇನಾಧಿಕಾರಿಗೆ ವಹಿಸಲಾಯಿತು.4
ಕ್ರಿ.ಶ 1923ರ ವೇಳೆಗೆ ಅಮೃತ್‍ಮಹಲ್ ಇಲಾಖೆಯನ್ನು ವ್ಯವಸಾಯ ಇಲಾಖೆಯಲ್ಲಿ ಸೇರಿಸಲಾಯಿತು. ನಂತರದಲ್ಲಿ ಅಮೃತಮಹಲ್ ತಳಿ ಸಂರಕ್ಷಣೆಗೆ ಒತ್ತು ಕೊಟ್ಟು 1929ರ ವೇಳೆಗೆ ತರೀಕೆರೆ ತಾಲೂಕಿನ `ಅಜ್ಜಂಪುರ’ದಲ್ಲಿ `ಪಶುಪಾಲನಾ ಕ್ಷೇತ್ರ’ವನ್ನು ಸ್ಥಾಪಿಸಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಈ ತಳಿಯ ಸಂವರ್ಧನಾ ಕಾರ್ಯದ ಮೇಲ್ವಿಚಾರಣೆಗಾಗಿ ಒಬ್ಬ ಅಧೀಕ್ಷಕರನ್ನು ನೇಮಿಸಿತು. ನಂತರದÀ ದಿನಗಳಲ್ಲಿ ಕೃಷಿ ಇಲಾಖೆಯಿಂದ ಅಮೃತಮಹಲ್ ಇಲಾಖೆಯನ್ನು ಪಶುಪಾಲನಾ ಇಲಾಖೆಯ ಭಾಗವಾಗಿ 1945ರಲ್ಲಿ ಸೇರಿಸಲಾಯಿತು.
ಕ್ರಿ.ಶ 1970ರಲ್ಲಿ 4ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಜ್ಯ ಸರ್ಕಾರವು ಶೇ 75% ಭಾಗ ಸಹಾಯಧನ ಮತ್ತು ಶೇ 25% ಭಾಗ ಸಾಲದ ರೂಪದಲ್ಲಿ ಹಣ ನೀಡಿ ಚಳ್ಳಕೆರೆಯಲ್ಲಿ ರಾಜ್ಯದಲ್ಲಿಯೇ ಹಿರಿಯದಾದ ಕುರಿತಳಿ ಕ್ಷೇತ್ರವನ್ನು ಸ್ಥಾಪಿಸಿತು. 4ನೇ ಪಂಚವಾರ್ಷಿಕ ಯೋಜನೆಯ ಅಂತ್ಯದವರೆಗೆ ಇದಕ್ಕೆ 37.80 ಲಕ್ಷ ರೂ ಗಳನ್ನು ಮೀಸಲಿರಿಸಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಅಮೃತಮಹಲ್ ಕಾವಲಿನಲ್ಲಿ 9,760 ಎಕರೆ ಪ್ರದೇಶಗಳಲ್ಲಿ ಇದು ಸ್ಥಾಪನೆಯಾಯಿತು. ಇದು ದಿನಾಂಕ 15-02-2020 ರಿಂದ ಕಾರ್ಯಾರಂಭಗೊಂಡಿತು. ಶುದ್ಧ ಹಾಗೂ ಮಿಶ್ರ ತಳಿಗಳ ವೀರ್ಯವತ್ತಾದ ಟಗರುಗಳನ್ನು ರಾಜ್ಯದ ಬೇಡಿಕೆಗನುಗುಣವಾಗಿ ಪೂರೈಸಿ ಉಳಿದದ್ದನ್ನು ದೇಶದ ಇತರ ಭಾಗಗಳಲ್ಲಿ ರವಾನಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು.
5000 ಸ್ಥಳೀಯ ಶ್ವೇತ ದಖನಿ ಹೆಣ್ಣು ಕುರಿಗಳನ್ನು ಆಸ್ಟ್ರೇಲಿಯಾದ ಕೋರಿಡೇಲ್ ಟಗರಿನೊಂದಿಗೆ ಸಂಕರಗೊಳಿಸಿ ಶೇ 50% ರಷ್ಟು ಎಂದರೇ ಸುಮಾರು 1500 ರಿಂದ 2000 ದಷ್ಟು ಮಿಶ್ರತಳಿಗಳನ್ನು ಪಡೆಯುವ ಕಾರ್ಯಾಚರಣೆಯನ್ನು ರೂಪಿಸಲಾಯಿತು. 1972 ರಿಂದ ಬುನಾದಿ ತಳಿಯನ್ನು ಕ್ರಮೇಣ ಹೆಚ್ಚಿಸುವ ಕೆಲಸ ಪ್ರಾರಂಭವಾಯಿತು. 1975 ರ ಜನವರಿಯಲ್ಲಿ ಹಿಸ್ಸಾರಿನ ಇಂಡೋ-ಆಸ್ಟ್ರೇಲಿಯಾ ಕುರಿ ಕ್ಷೇತ್ರದಿಂದ 15 ಕೋರಿಡೇಲ್ ಟಗರುಗಳನ್ನು ಕೊಂಡು ಮಿಶ್ರ ತಳಿಗಳನ್ನು ಪಡೆಯುವ ಕಾರ್ಯ ಪ್ರಾರಂಭವಾಯಿತು. ಈ ಕೇಂದ್ರದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕುರಿಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಯಿತು. ಕ್ರಿ.ಶÀ 1972 ರಿಂದ ಮಿಶ್ರತಳಿ ಪಡೆಯುವ ಈ ಯೋಜನೆಯು ಆಸ್ಟ್ರೇಲಿಯಾದ ಸಹಯೋಗದಲ್ಲಿದ್ದು, ಆಸ್ಟ್ರೇಲಿಯಾದ ಮುಖ್ಯ ಸಲಹೆಗಾರರು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು ಹಣಕಾಸು ಹಾಗೂ ತಾಂತ್ರಿಕ ನೆರವು ನೀಡುತ್ತಿದ್ದರು. 1973 ರಿಂದ ಮಿಶ್ರ ತಳಿ ಟಗರುಗಳನ್ನು ರಾಜ್ಯದ ವಿವಿಧ ಭಾಗಗಳಿಗೆ, ನೀರಿನ ಯೋಜನೆಗಳಿಗೆ ಅನುಸಾರವಾಗಿ ಸ್ಥಳೀಯ ಕುರಿಗಳ ಉಣ್ಣೆ ಮಾಂಸಗಳ ಗುಣಮಟ್ಟ ಮತ್ತು ಪ್ರಮಾಣಗಳನ್ನು ಹೆಚ್ಚಿಸಲು ಒದಗಿಸಲಾಗಿತ್ತು. ಶೇಕಡ 50% ರಷ್ಟು ಮಿಶ್ರತಳಿ ಟಗರುಗಳು ರೈತರ ಬಳಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ಥಳೀಯ ಹವಾಗುಣಕ್ಕೆ ಹೊಂದಿಕೊಂಡಿದ್ದವು. ಮೇ 1978 ರಿಂದ ಈ ಯೋಜನೆಯು ಆಸ್ಟ್ರೇಲಿಯಾದ ವಿಕ್ಟೋರಿಯಾ ವ್ಯವಸಾಯ ಇಲಾಖೆಯ ಆಶ್ರಯಕ್ಕೆ ಬಂದಿದ್ದ ಸಹೋದ್ಯಮದ ಪ್ರಗತಿಗೆ ಸಹಾಯಕರಾಗಿ ಇಬ್ಬರು ಸಲಹೆಗಾರರು ನೇಮಕವಾಗಿದ್ದು ಅವರಲ್ಲಿ ಒಬ್ಬರು ಮೇವಿನ ಉತ್ಪಾದನೆಗೂ ಹಾಗೂ ಇನ್ನೊಬ್ಬರು ಕುರಿ ಸಂಗೋಪನೆಗೂ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆಸ್ಟ್ರೇಲಿಯಾ ಸರ್ಕಾರದ ಆರ್ಥಿಕ ಸಹಾಯದ ಅಡಿಯಲ್ಲಿ ಈ ಕ್ಷೇತ್ರವು 1971-72 ರಿಂದ 1980-81 ರವರೆಗೆ ಮುಂದುವರೆದು ನಂತರ 1981-82 ರಿಂದ ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲ್ಪಟ್ಟಿತು. 1984-85 ರವರೆಗೆ ಯೋಜನೆ ಸ್ಕೀಂ ಅಡಿಯಲ್ಲಿ ಹಾಗೂ 1985- 86 ರಿಂದ ಯೋಜನೇತರ ಸ್ಕೀಂನಲ್ಲಿ ಈ ಕ್ಷೇತ್ರವು ಮುಂದುವರೆದಿದೆ.
ಈ ಕ್ಷೇತ್ರವು ದಿನಾಂಕ: 03.08.1996 ರಿಂದ `ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು’ ಇವರಿಂದ `ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನ ಅಭಿವೃದ್ಧಿ ಮಂಡಳಿ ಹೆಬ್ಬಾಳ್’, ಬೆಂಗಳೂರಿಗೆ ವರ್ಗಾವಣೆಯಾಗುತ್ತದೆ. ನಂತರ ಈ ಕ್ಷೇತ್ರವು `ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಹೆಬ್ಬಾಳ್’ ಬೆಂಗಳೂರು ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕ್ಷೇತ್ರವು ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 51.64 ಸೆಂಟಿ ಮೀಟರ್ ಇರುತ್ತದೆ. ಆದರೆ ಕ್ಷೇತ್ರದ ಭೂಮಿಯು ಕಲ್ಲಿನಿಂದ ಕೂಡಿದ್ದು ಫಲವತ್ತಾಗಿರುವುದಿಲ್ಲ. ಅಲ್ಲಿರುವ ಕೆಂಪು ಮಿಶ್ರಿತ ಫಲವತ್ತಾದ ಭೂಮಿಯಲ್ಲಿ ಮೇವು ಬೆಳೆಯಲು ಉಪಯೋಗಿಸಲಾಗುತ್ತದೆ.5
2008-2010ರಲ್ಲಿ ಆಗಿನ ಚಿತ್ರದುರ್ಗ ಜಿಲ್ಲೆಯ ಕಮಿಷನರ್‍ರವರು ಬರೆದಿರುವ ಕಾನೂನು ಹಾಗೂ ಅಭಿವೃದ್ಧಿಯ ವ್ಯಾಖ್ಯಾನಗಳಿಂದ ರಾಜ್ಯದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಬರುವ ಬಯಲುಸೀಮೆ ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿನ ಅಪರೂಪದ ಅಮೃತಮಹಲ್ ಹುಲ್ಲುಗಾವಲುಗಳಲ್ಲಿನ ಜೈವಿಕ ಪರಿಸರದ ಆದಿವಾಸಿಗಳಾಗಿರುವ ಹಾಗೂ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಶೆಡ್ಯೂಲ್ 1, ಸೆಕ್ಷನ್ 2ರಲ್ಲಿನ ಕೃಷ್ಣಮೃಗ, ತೋಳ, ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಟ್ ಮತ್ತು ಲೇಸ್ಯರ್ ಪ್ಲೋರಿಕಾನ್‍ನಂತಹ ಪಕ್ಷ್ಷಿ ಸಂಕುಲಗಳು ಹಾಗೂ ಜನಸಮುದಾಯಗಳ ಬದುಕು ಅವರ ದೇಸಿ ಜ್ಞಾನ ಸಂಪತ್ತುಗಳ ವಿನಾಶಕ್ಕೆ ಮುನ್ನುಡಿ ಬರೆದಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಗಳು ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿಗಳಿಗೆ ತಮ್ಮ ಪತ್ರದಲ್ಲಿ ಸರಕಾರಿ ಸುತ್ತೋಲೆ ಆರ್.ಡಿ/02/ಎ.ಜಿ.ಪಿ/95 ದಿನಾಂಕ: 28.03.1995ರಲ್ಲಿ ಅಮೃತಮಹಲ್ ಕಾವಲು ಜಮೀನುಗಳ ಅನಧಿಕೃತ ಅಧಿಭೋಗದಾರಿಕೆಯನ್ನು ಕರ್ನಾಟಕ `ಭೂ ಕಂದಾಯ ಕಾಯ್ದೆ’ 1964ರ ಕಲಂ 94ರ ಎ ಮತ್ತು `ಕರ್ನಾಟಕ ಭೂಕಂದಾಯ ನಿಯಮಗಳ 1966 ನಿಯಮ 104 ಐ’ ಇದರಡಿ ಸಕ್ರಮಗೊಳಿಸುವುದಕ್ಕೆ ಅವಕಾಶ ನೀಡಬಾರದೆಂದು ತಿಳಿಸಲಾಗಿದೆಯೆಂದÀು, ಆದಾಗ್ಯೂ ಕಾವಲು ಜಮೀನುಗಳ ಅನಧಿಕೃತ ಸಾಗುವಳಿ ಅವ್ಯಾಹತವಾಗಿ ಮುಂದುವರಿದ ಕಾರಣ ಘನ ಉಚ್ಚನ್ಯಾಯಾಲಯ ಲೇಖನ ಮನವಿ 17958 ಆಫ್ 1997(ಕೆ.ಎಲï.ಆರ್.ಪಿ.ಐ.ಎಲ್) ದಿನಾಂಕ : 20.03.2001ರ ಆದೇಶದಲ್ಲಿ ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ.
``Even assuming that any extent of land in this survey number is to de-reserved urder the act and the rules and granted in favour of any other persons for cuitivation.Etc. It can be done only in consonant with the requirement of rule 97 of the ruies an
ಎಂದು ಉಪದೇಶಿಸಿ ತಿಳಿಸುತ್ತಾ ಕಾವಲಿನ ಕುರಿ ಸಂವರ್ಧನಾ ಕ್ಷೇತ್ರ ಕೇಂದ್ರವು ಈ ಹಿಂದಿನ ಮುಖ್ಯಕಾರ್ಯದರ್ಶಿಗಳು 1979ರಲ್ಲಿ ಆಶ್ವಾಸನೆ ನೀಡಿದಂತೆ ಉತ್ಪಾದನಾ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಕಾರ್ಯರೂಪಕ್ಕೆ ತರಲು ಪಶುಪಾಲನೆ ಇಲಾಖೆಯು ವಿಫಲವಾಗಿದೆ. ಕುರಿ ಸಂವರ್ಧನಾ ಕೇಂದ್ರದಲ್ಲಿ ಪ್ರಸ್ತುತ 22 ದನ ಮತ್ತು 250 ಕುರಿಗಳು ಮಾತ್ರ ಇರುತ್ತದೆ ಎಂದು ದಾಖಲೆ ತೋರಿಸಿ, ಈ ಭೂಮಿಯನ್ನು ಪಡೆಯಲು ತಮ್ಮ ಸಹಮತ ಬೇಕೆಂದು ಕೋರಿ ಪಡೆದಿರುತ್ತಾರೆ. ಹಾಗೆ, ಕುದಾಪುರ ವರವು ಮತ್ತು ಉಳ್ಳಾರ್ತಿ ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಕೇವಲ 3987 ಹಾಗೂ 8034 ಕ್ರಮದಲ್ಲಿ ಮಾತ್ರವಿರುವುದರಿಂದ ಅವುಗಳಿಗೆ ಈ ಕಾವಲುಗಳ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಡಳಿತವು ದಾಖಲೆಯನ್ನು ತೋರಿಸಿದೆ.6
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಘೋಷಿತ ಅರಣ್ಯದ ಹೊರತು ಬೇರೆ ಅರಣ್ಯಗಳನ್ನು ಗುರುತಿಸಲು ನೇಮಿಸಿದ ತಜ್ಞರ ಸಮಿತಿಯು ಕರ್ನಾಟಕ ಅಮೃತಮಹಲ್ ಕಾವಲುಗಳನ್ನು ಅರಣ್ಯ ಭೂಮಿಯೆಂದೇ ಪರಿಗಣಿಸುತ್ತದೆ. `ಕರ್ನಾಟಕ ಅರಣ್ಯ ಕಾಯ್ದೆ’ 1963, ಸೆಕ್ಷನ್ 33, ಈ ಅಮೃತಮಹಲ್ ಕಾವಲುಗಳು `ಕರ್ನಾಟಕ ಅರಣ್ಯ ನಿಯಮ’ 1963 ರೂಲ್, ನಿಯಮ 33 ರಂತೆ ರಾಜ್ಯದ ಎಲ್ಲಾ ಅಮೃತಮಹಲ್ ಕಾವಲುಗಳನ್ನು ಅವಶ್ಯ ಬದಲಾವಣೆಯೊಂದಿಗೆ ಮತ್ತು ಜಿಲ್ಲಾ ಅರಣ್ಯಗಳ ನಿರ್ವಹಣೆಯಂತೆ ಅಮೃತಮಹಲ್ ಕಾವಲುಗಳೂ ಸಹ ಒಳಪಡಲೇಬೇಕು ಎಂದು ಹೇಳುತ್ತದೆ.
ಇಷ್ಟೆಲ್ಲದರ ಮೇಲೆ ಜಿಲ್ಲಾಡಳಿತವು ಈ ಅಮೃತಮಹಲ್ ಹುಲ್ಲುಗಾವಲಿನ ಕಾವಲುಗಳನ್ನು ಕರ್ನಾಟಕ ಅರಣ್ಯ ನಿಯಮ 33, 1969ರ `ಜಿಲ್ಲಾ ಅರಣ್ಯ ಕಾಯ್ದೆ’ಗೆ ಒಳಪಟ್ಟಿರುವುದರ ಬಗ್ಗೆ ಅಂಧಕಾರ ಧೋರಣೆಯನ್ನು ತೋರಿಸುವುದು ಮತ್ತು `ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ’ 1980, 2 ರಂತೆ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯ ಶಿಫಾರಸ್ಸು ಇಲ್ಲದೆ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಿರುವುದು ಮತ್ತೊಂದು ಕಾನೂನು ಉಲ್ಲಂಘನೆಯಾಗಿದೆ, ಕಾರಣ ಅಮೃತಮಹಲ್ ಭೂಮಿಯನ್ನು ಪರಭಾರೆ ಮಾಡುವಾಗ ಜಿಲ್ಲಾ (ಕಂದಾಯ ಆಡಳಿತಕ್ಕೆ) ಈ ಪ್ರದೇಶಗಳಲ್ಲಿ ಯಾವುದೇ ಮರ-ಮಕ್ಕಿಗಳು ಇರುವುದಿಲ್ಲ ಎಂದು ದಾಖಲಿಸುತ್ತದೆ.7
`ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕುದಾಪುರ’, ಚಳ್ಳಕೆರೆ ತಾಲ್ಲೂಕು ಕೇಂದ್ರವು 02 ಕಾವಲುಗಳಿಂದ ಕೂಡಿದ್ದು ಒಟ್ಟು 9790 ಎಕರೆಗಳಲ್ಲಿ ಆವರಿಸಲ್ಪಟ್ಟಿದೆ. ಅವುಗಳು,
1) ವರವು ಕಾವಲು ಸರ್ವೆ ನಂಬರ್ 343 ರಲ್ಲಿ 6893.13 ಎಕರೆ.
2) ಕುದಾಪುರ ಕಾವಲು ಸರ್ವೆ ನಂಬರ್ 42 ರಲ್ಲಿ2819.23 ಎಕರೆ ಪ್ರದೇಶವಿದೆ.
ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಕುದಾಪುರ ಕಾವಲಿನ ಸರ್ವೆ ನಂಬರ್ 46 ರಲ್ಲಿ ಹಂಚಿಕೆಯಾದ ಪ್ರದೇಶ ಈ ಕೆಳಕಂಡಂತೆ ಇರುತ್ತದೆ,
ಸಂಸ್ಥೆಯ ಹೆಸರು |
ಸರ್ವೇ ನಂಬರ್ |
ಹಂಚಿಕೆಯಾಗಿರುವ ಪ್ರದೇಶ (ಎಕರೆಗಳಲ್ಲಿ) |
ಡಿ.ಆರ್.ಡಿ.ಓ |
47 |
290.00 |
ಭಾರತೀಯ ವಿಜ್ಞಾನ ಸಂಸ್ಥೆ |
47 |
1500.00 |
ಬಾಬಾ ಅಣು ಸಂಶೋಧನಾ ಕೇಂದ್ರದ ಸ್ಪೆಷಲ್ ಮೆಟಿರಿಯಲ್ ಎನರಿಚ್‍ಮೆಂಟ್ ಫೆಸಿಲಿಟಿ |
47 |
400.00 |
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ |
47 |
100.00 |
ಕೆ.ಎ.ಎಸ್.ಐ.ಡಿ.ಸಿ |
47 |
50.00 |
ಕೆ.ಹೆಚ್.ಬಿ |
47 |
50.00 |
ಜಿಲ್ಲಾಧಿಕಾರಿಗಳು ಚಿತ್ರದುರ್ಗ |
47 |
409.00 |
|
ಒಟ್ಟು |
2799.00 |
ಒಟ್ಟು ವಿಸ್ತೀರ್ಣ: 2819.23 ಎಕರೆ.
ಪರಭಾರೆಯಾಗಿರುವ ಒಟ್ಟು ವಿಸ್ತೀರ್ಣ: 2799,00 ಎಕರೆ.
ಉಳಿಕೆ: 20.23 ಎಕರೆ.
(06.01.2020ರ ಕುದಾಪುರ ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಮಾಹಿತಿ ವರದಿ).
ಕೊನೆಯ ಮಾತು
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಗ್ರಾಮೀಣ ಪ್ರದೇಶದ ಜನರ ಅನೇಕ ಸಂಕಟಗಳಿಗೆ ಕಾರಣವೆಂದರೆ ಆಳುವ ಮತ್ತು ಸೌಲಭ್ಯವುಳ್ಳವರ ಚಟುವಟಿಕೆಗಳೇ ಆಗಿವೆ. ಈ ಸಮಸ್ಯೆಗೆ ಪ್ರಮುಖವಾಗಿ ಪ್ರಭುತ್ವದ ನೀತಿಗಳು ಸಹ ಕಾರಣವಾಗಿದೆ ಜನರಿಂದ ಓಟುಗಳನ್ನು ಪಡೆದು ಆರಿಸಿ ಬಂದ ಪ್ರಭುತ್ವದ ನಾಯಕರನ್ನು ಹಾಗೂ ಪ್ರಭುತ್ವವನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆಯ ಶಕ್ತಿಗಳು ಅಂದರೆ ಉದ್ಯಮಪತಿಗಳು. ಏನೆಲ್ಲಾ ಒಳಸಂಚುಗಳನ್ನು ಮಾಡಿ ಆ ಕಾವಲುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಂಗತಿಗಳು ಇನ್ನೂ ನಡೆಯುತ್ತಲೇ ಇವೆ. ಇಷ್ಟೆಲ್ಲಾ ದಾಖಲೆಗಳನ್ನು ತೋರಿಸಿದ್ದಾರೆ. ಆದರೆ ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರಶಾಸ್ತ್ರ ವಿಭಾಗದ ತಜ್ಞರು ಮತ್ತು ವಿದ್ಯಾರ್ಥಿಗಳು ನಡೆಸಿದ `ರ್ಯಾಪಿಡ್ ಬಯೋಡೈವರ್ಸಿಟಿ ಸರ್ವೆ’ಯಲ್ಲಿ `ವನ್ಯಜೀವಿ (ಸಂರಕ್ಷಣಾ) ಕಾಯ್ದೆ1972ರ ಶೆಡ್ಯೂಲ್ 1, ಸೆಕ್ಷನ್ 2ರಲ್ಲಿನ ಕೃಷಮೃಗಗಳು, ತೋಳ, ನರಿ ಮತ್ತು ಹುಲ್ಲುಗಾವಲುಗಳನ್ನೇ ಅವಲಂಬಿಸಿರುವ ಅಪರೂಪವಾದ ನೂರಾರು ಪಕ್ಷಿ, ಚಿಟ್ಟೆ, ಕೀಟ, ಸರಿಸೃಪ ಸಂಕುಲಗಳು, ಹಲವು ಪ್ರಭೇದಗಳ ಹುಲ್ಲು, ಬಳ್ಳಿ, ಗಿಡ-ಮರಗಳನ್ನು ಗುರುತಿಸುವುದು ಹಲವು ಪತ್ರಿಕೆಗಳಲ್ಲಿ ವರದಿಯಾಗುತ್ತದೆ.
ಸೆಕ್ಷನ್ 33 [III.ಅ] ಕಾಯ್ದೆಯು ಯಾವುದೇ ರೀತಿಯ ಒತ್ತುವರಿಯನ್ನು ಅವಶ್ಯಕವಾಗಿ ನಿಬರ್ಂಧಿಸುತ್ತದೆ.
ಸಬ್ ಸೆಕ್ಷನ್[III] ಈ ಅರಣ್ಯ/ಹುಲ್ಲುಗಾವಲುಗಳನ್ನು ಮಂಜೂರು ಮಾಡಲು ಮತ್ತು ವಿಭಜಿಸಲು ಮತ್ತು ತೆರವುಗೊಳಿಸುವುದು ಮತ್ತು ಕೃಷಿಗೆ ಒಳಪಡಿಸುವುದು ಮತ್ತು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ನಿಬರ್ಂಧಿಸುತ್ತದೆ. ನ್ಯಾಷನಲ್ ಫಾರೆಸ್ಟರಿ ಕಮೀಷನ್‍ನ ಶಿಫಾರಸ್ಸು ಸಂಖ್ಯೆ 172, `ಪ್ರಾಜೆಕ್ಟ್ ಬಸ್ಟಡ್’ ಅನ್ನು ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಫ್ಲಾರಿಕಾನ್ ಹಾಗೂ ಇತರೆ ಹುಲ್ಲುಗಾವಲುಗಳ ಜೀವವೈವಿಧ್ಯತೆಯನ್ನು ರಕ್ಷಿಸುವ ಸಲುವಾಗಿ ಗುರುತಿಸಿದ ಪ್ರದೇಶಗಳಲ್ಲಿ ಚಿತ್ರದುರ್ಗದ ಹುಲ್ಲುಗಾವಲುಗಳು ಇವೆ ಎಂಬುದನ್ನು ಈ ಸಂದರ್ಭದಲ್ಲಿ ಮರೆಯಬಾರದು.8
ಈ ಎಲ್ಲ ಸಂಗತಿಗಳಿಗೆ ಅನ್ವಯವಾಗುವಂತೆ `ನನ್ನ ಹಕ್ಕು’ ಎಂಬ ಕಾವ್ಯದಲ್ಲಿ ಬಿ.ಟಿ ಲಲಿತಾನಾಯಕ ರವರ ಚಿಂತನೆಯ ಸಾಲುಗಳು ಈ ಕೆಳಗಿನಂತಿವೆ.
`ನನ್ನ ರಾಸು ಮೇಯುವ ಗೋಮಾಳದೊಳಗೆ
ಮೇಲು ಮಹಡಿಯ ಮಹಲು ತಲೆ ಎತ್ತಿ
ಬೀಗುತಿದೆ ಗರ್ವದ ನಗೆಯ ಬೀರಿ
ನನ್ನ ಭಾಗ್ಯದ ಸಗಣಿ-ತಿಪ್ಪೆಯ ಗುಂಡಿ
ಹಂಚಿಹೋದವೋ ಪಾಪಿ ಪರದೇಶಿಗಳ ಹೊಟ್ಟೆಯಲ್ಲಿ’||9
ಹೀಗೆ ಅಧಿಕಾರದ ಚುಕ್ಕಾಣಿ ಹಿಡಿದು ನಮ್ಮನ್ನು ಆಳುತ್ತಿರುವ ಆಡಳಿತ ವರ್ಗಗಳು ಸ್ಥಳೀಯರ ಸಂಕಟಗಳಿಗೆ ಧ್ವನಿಕೊಡದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಯ್ದೆ ಕಾನೂನುಗಳನ್ನು ಬದಲಿಸಿಕೊಳ್ಳುತ್ತಾ ಮೂಕ ಪ್ರಾಣಿಗಳ ಬಾಯಿಗೆ ಕಬ್ಬಿಣದ ಬೀಗ ಜಡಿಯುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ, ಸಮಾನತೆ, ಭ್ರಾತೃತ್ವದಂತಹ ಆದರ್ಶ ತತ್ವಗಳನ್ನು ನೆಲಸಮಗೊಳಿಸಿ, ಅಧಿಕಾರ, ಲಾಭ ಎಂಬ ಭೂತಗಳ ಬೆನ್ನತ್ತಿ ಜನಸಾಮಾನ್ಯರನ್ನು ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಹೇಗೆ ಫುಟ್ಬಾಲ್ ಆಟಗಾರರನ್ನು ಚೆಂಡನ್ನು ಒಬ್ಬರ ಕಾಲಿನಿಂದ ಇನ್ನೊಬ್ಬರ ಕಾಲಿಗೆ ಹೋಗುವಂತೆ ಒದೆಯುತ್ತಾರೊ ಹಾಗೇ ಅಮೃತ ಹುಲ್ಲುಗಾವಲಿನ ಕಾವಲುಗಳು ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಹಸ್ತಾಂತರವಾಯಿತು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ.
ಕೊನೆಟಿಪ್ಪಣಿಗಳು
ಪರಾಮರ್ಶನ ಗ್ರಂಥಗಳು