Tumbe Group of International Journals

Full Text


ಒಂದು ದೇಶ, ಒಂದು ಚುನಾವಣೆ: ಸಾಧಕ ಭಾಧಕಗಳ ನೋಟ.

ಧರಣೇಶ ಎಸ್ ಟಿ

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾವಿ

ತುಮಕೂರು – ತಾಲ್ಲೂಕು ಮತ್ತು ಜಿಲ್ಲೆ. 572107

ದೂ 9980010005, e-Mail: dharaneshast@gmail.com


ಪ್ರಸ್ತಾವನೆ

ಭಾರತವು ಹಲವು ವೈವಿಧ್ಯತೆಗಳಲ್ಲಿ ಏಕತೆಯನ್ನು ಸಾಧಿಸಿರುವ ಒಂದು ಅಪರೂಪದ ದೇಶ. ಭಾರತವೇಕೆ ಅಪರೂಪ ಎಂದರೆ, ಕೇವಲ ಎರಡು ವಿಭಿನ್ನ ಸಂಸೃತಿ, ಭಾಷೆ, ಧರ್ಮ ಮತ್ತು ಪಂಗಡಗಳೊಂದಿಗೆ ರಾಷ್ಟ್ರವನ್ನು ಮುನ್ನಡೆಸಲು ಅಸಾಧ್ಯವಾದ ಸಂಕೀರ್ಣ ಸ್ಥಿತಿಯಲ್ಲಿ ಪರಿಪಾಟಲು ಪಡುತ್ತಿರುವ ದೇಶಗಳನಡುವೆ, ನನ್ನ ಭಾರತ, ತನ್ನ ನೆಲದಲ್ಲಿ ಜನ್ಮತಳೆದ, ವಲಸೆ ಬಂದ ಹಲವು ಧರ್ಮಗಳೊಂದಿಗೆ, ವಿಭಿನ್ನ ಜನಾಂಗ, ಸಾವಿರಾರು ಜಾತಿ, ಉಪಜಾತಿ, ಪ್ರತಿ 10 ಕಿ.ಮೀ. ಗೆ ಬದಲಾಗುವ ಸಂಪ್ರದಾಯ, ಜೀವನ ಪದ್ದತಿ, ಬಟ್ಟೆಯನ್ನೇ ಧರಿಸದ ಆದಿವಾಸಿ ಪಂಗಡದವರಿಂದ, ಆಧುನಿಕ ಪಾಶ್ಚಾತ್ಯ ಜೀವನ ಶೈಲಿಯಲ್ಲಿ ಬದುಕುತ್ತಿರುವ ಭಾರತೀಯರ ಸಂಸ್ಕೃತಿಕ ವೈವಿದ್ಯತೆಯಲ್ಲಿ “ಭಾರತೀಯತೆ” ಎನ್ನುವ ಬಾಂಧವ್ಯದ ಬಂಧನದಲ್ಲಿ ಬಂಧಿಯಾಗಿ ‘ಭಾರತೀಯರಾದ ನಾವೆಲ್ಲಾ ಒಂದು’ ಎನ್ನುವ ಐಕ್ಯತೆಯು ನಿಜಕ್ಕೂ ಅಮೋಘವೆನ್ನಬಹುದು.

ಕೀ ವರ್ಡ್: ಸಂಸೃತಿ, ಭಾಷೆ, ಧರ್ಮ, ಭಾರತೀಯತೆ, ಒಂದು ದೇಶ, ಒಂದು ಚುನಾವಣೆ

ಪಿಠೀಕೆ

ಭಾರತ ವೆಂದರೆ :      ಭಾರತವು ಹಲವು ವೈವಿಧ್ಯತೆಗಳಲ್ಲಿ ಏಕತೆಯನ್ನು ಸಾಧಿಸಿರುವ ಒಂದು ಅಪರೂಪದ ದೇಶ. ಭಾರತವೇಕೆ ಅಪರೂಪ ಎಂದರೆ, ಕೇವಲ ಎರಡು ವಿಭಿನ್ನ ಸಂಸೃತಿ, ಭಾಷೆ, ಧರ್ಮ ಮತ್ತು ಪಂಗಡಗಳೊಂದಿಗೆ ರಾಷ್ಟ್ರವನ್ನು ಮುನ್ನಡೆಸಲು ಅಸಾಧ್ಯವಾದ ಸಂಕೀರ್ಣ ಸ್ಥಿತಿಯಲ್ಲಿ ಪರಿಪಾಟಲು ಪಡುತ್ತಿರುವ ದೇಶಗಳನಡುವೆ, ನನ್ನ ಭಾರತ, ತನ್ನ ನೆಲದಲ್ಲಿ ಜನ್ಮತಳೆದ, ವಲಸೆ ಬಂದ ಹಲವು ಧರ್ಮಗಳೊಂದಿಗೆ, ವಿಭಿನ್ನ ಜನಾಂಗ, ಸಾವಿರಾರು ಜಾತಿ, ಉಪಜಾತಿ, ಪ್ರತಿ 10 ಕಿ.ಮೀ. ಗೆ ಬದಲಾಗುವ ಸಂಪ್ರದಾಯ, ಜೀವನ ಪದ್ದತಿ, ಬಟ್ಟೆಯನ್ನೇ ಧರಿಸದ ಆದಿವಾಸಿ ಪಂಗಡದವರಿಂದ, ಆಧುನಿಕ ಪಾಶ್ಚಾತ್ಯ ಜೀವನ ಶೈಲಿಯಲ್ಲಿ ಬದುಕುತ್ತಿರುವ ಭಾರತೀಯರ ಸಂಸ್ಕೃತಿಕ ವೈವಿದ್ಯತೆಯಲ್ಲಿ “ಭಾರತೀಯತೆ” ಎನ್ನುವ ಬಾಂಧವ್ಯದ ಬಂಧನದಲ್ಲಿ ಬಂಧಿಯಾಗಿ ‘ಭಾರತೀಯರಾದ ನಾವೆಲ್ಲಾ ಒಂದು’ ಎನ್ನುವ ಐಕ್ಯತೆಯು ನಿಜಕ್ಕೂ ಅಮೋಘವೆನ್ನಬಹುದು. ಅಂದರೆ ಭಾರತವೆನ್ನುವುದು ಕೇವಲ ಒಂದು ಭೌಗೋಳಿಕ ಭೂ-ಭಾಗದಲ್ಲಿನ ಜನಗಳ ಮೇಲಿನ ಸರ್ಕಾರದ ಪರಮಾಧಿಕಾರದ ನಿಯಂತ್ರಣ ಮಾತ್ರವಲ್ಲ, ದೇಶ, ಭಾಷೆ, ಜನಪದ, ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡ  ಸಂಸ್ಕೃತಿಯ  ಹದವಾದ ಮಿಳಿತವೇ “ಭಾರತ” ಎನ್ನಬಹುದು.

ಪ್ರಜಾಪ್ರಭುತ್ವ ಮಾದರಿಯ ಸರ್ಕಾರ

            ಭಾರತ ತನ್ನ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳನ್ನೆ ಪರಮಾಧಿಕಾರದ ಕೇಂದ್ರವನ್ನಾಗಿಸಿಕೊಂಡ ಪ್ರಜಾಪ್ರಭುತ್ವ ಮಾದರಿಯ ಸರ್ಕಾರದಲ್ಲಿ ರಾಜಕೀಯ ಪಕ್ಷಗಳು, ಜನಾಭಿಪ್ರಾಯವನ್ನು ಚುನಾವಣೆಯ ಮೂಲಕ ಗಳಿಸಿ, ಸರ್ಕಾರವನ್ನು ರಚಿಸಿ, ತನ್ನ ಪಕ್ಷದ ಧ್ಯೇಯ ಧೋರಣೆಗಳನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿರುತ್ತದೆ. ಆದುದರಿಂದ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಮತ್ತು ಚುನಾವಣೆಗಳನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಆದುದರಿಂದ ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬವೆಂತಲೂ, ಪ್ರಜಾಪ್ರಭುತ್ವವನ್ನು ಆಧುನಿಕ ರಾಜ್ಯ ರಾಷ್ಟ್ರಗಳ ಭೂಲೋಕದ ಸ್ವರ್ಗವೆನ್ನಬಹುದು.

ಭಾರತದಲ್ಲಿ ಪ್ರಜಾಪ್ರಭುತ್ವ

            ಭಾರತದ ಪ್ರಜಾಪ್ರಭುತ್ವದ ಪರಿಕಲ್ಪನೆ, ರಾಜಕೀಯ ಮತ್ತು ಆಡಳಿತ ಪದ್ದತಿಗೆ ಮಾತ್ರ ಸೀಮಿತವಾಗಿರದೆ, ಜನ ಜೀವನದ ಪದ್ಧತಿಯಾಗಿ, ಸಾಮಾಜಿಕ ಸ್ಥಿತಿಯಾಗಿ ಪ್ರಚಲಿತವಾಗಿದೆ. ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ದೇಶದ ಜನಗಳ ರಾಜಕೀಯ ಪ್ರೀತಿಯನ್ನು ಮೀರಿಸಿ, ರಾಜಕೀಯವನ್ನೆ ನಾಡಿಮಿಡಿತವನ್ನಾಗಿಸಿಕೊಂಡಿದೆ.  ಆ ಮೂಲಕ ಭಾರತದ ಚುನಾವಣಾ ರಾಜಕಾರಣವನ್ನು ಯಶಸ್ವಿಗೊಳಿಸಿಕೊಂಡಿರುವುದು, ಭಾರತದ ನಾಗರೀಕರ ರಾಜಕೀಯದ ಸಂಸ್ಕೃತಿಯ ಪ್ರತೀತಿ.

            ಭಾರತದ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ. ಗಣತಂತ್ರದ ಭಾಗವಾಗಿರುವ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಂಸತ್ತಿನ ಎರಡೂ ಸದನಗಳ 781 ಸದಸ್ಯರು, ಎಲ್ಲಾ 28 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳ  ರಾಜ್ಯ ವಿಧಾನ ಸಭೆಯ 4120 ಸದಸ್ಯರು ಮತ್ತು ಏಳು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರುಗಳನ್ನು ಚುನಾಯಿಸುವುದರೊಂದಿಗೆ, ಭಾರತದ ಪ್ರಜಾಫ್ರಭುತ್ವದ ಅಂತಸತ್ವದ ಬೇರು ಎಂದೇ ಭಾವಿಸಬಹುದಾದ  ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಯನ್ನು ಒಳಗೊಂಡಂತೆ 4657 ನಗರ ಸ್ಥಳೀಯ ಸರ್ಕಾರಗಳು ಮತ್ತು ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಗಳನ್ನು ಒಳಗೊಂಡಂತೆ 262771 ಗ್ರಾಮೀಣ ಸ್ಥಳೀಯ ಸರ್ಕಾರಗಳ ಸುಮಾರು 32 ಲಕ್ಷಕ್ಕೂ ಮೀರಿದ, ಸ್ಥಳೀಯ ಜನಪ್ರತಿನಿಧಿಗಳನ್ನು ನಿಗಧಿತ ಅವಧಿಗೆ, ನಿಯತಕಾಲಿಕ ಚುನಾವಣೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿವೆ. ಬಹುಶಃ ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಷ್ಟು ಸಂಖ್ಯೆಯ ಪ್ರತಿನಿಧಿಗಳನ್ನು ಹೊಂದಿರುವ ದೇಶ ಇರಲಾರದು.

            ಭಾರತದ ರಾಜ್ಯಾಂಗ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಯಾದ ರಾಷ್ಟ್ರಪತಿಯನ್ನು ಒಳಗೊಂಡಂತೆ, ತಳಹಂತದ ಪ್ರತಿನಿಧಿಕ ಸಂಸ್ಥೆಯಾದ ಗ್ರಾಮ ಪಂಚಾಯ್ತಿಯ ಸಾಮಾನ್ಯ ಅಧಿಕಾರದ ಅವಧಿ 5 ವರ್ಷಗಳು ಮಾತ್ರ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಮತ್ತು ರಾಜ್ಯಸಭೆ, ವಿಧಾನ ಪರಿಷತ್ತುಗಳ ಸದಸ್ಯರು ತನ್ನದೇ ಆದ ಚುನಾಯಿತಗಣದಿಂದ ಪರೋಕ್ಷ ವಿಧಾನದ ಮೂಲಕ ಆಯ್ಕೆಯಾಗುತ್ತಿದ್ದಾರೆ. ಇವುಗಳಿಗೆ ಪ್ರಜೆಗಳು ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಉಳಿದ, ಲೋಕಸಭೆ, ರಾಜ್ಯ ವಿಧಾನ ಸಭೆ, ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸರ್ಕಾರಗಳನ್ನು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದುದರಿಂದ, ಸಾಮಾನ್ಯವಾಗಿ ಪ್ರತಿ ವರ್ಷಕ್ಕೆ ಒಂದರಂತೆ ಯಾವುದಾದರೊಂದು ಚುನಾವಣೆಗಳು ನಡೆಯುತ್ತಿರುವುದನ್ನು ಕಾಣಬಹುದು. ಇತ್ತೀಚಿನ ಕರ್ನಾಟಕದ ಚುನಾವಣೆಯನ್ನು 2010 ರಿಂದ ಗಮನಿಸುವುದಾದರೆ, 2010 ರಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗಳು, 2011 ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು, 2012 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, 2013 ರಲ್ಲಿ ರಾಜ್ಯ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ, 2014 ರಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ, ನಂತರದಲ್ಲಿ ಯಥಾಪ್ರಕಾರ 2015 ರಿಂದ 2019 ರ ಇತ್ತೀಚಿನ ಲೋಕಸಭಾ ಚುನಾವಣೆಯವರೆಗೆ ಪ್ರತಿ ವರ್ಷವೂ ಚುನಾವಣೆಗಳನ್ನು ಕಾಣಬಹುದು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ಭಾರತದ ಎಲ್ಲಾ ರಾಜ್ಯಗಳ ಸಾಮಾನ್ಯವಾಗಿರುವ ಚುನಾಚಣಾ ಪ್ರಕ್ರಿಯೆ.

            ಇನ್ನುಳಿದಂತೆ ಲೋಕಸಭೆ ಚುನಾವಣೆಯ ನಡುವಣ ಐದು ವರ್ಷಗಳ ಅಂತರದಲ್ಲಿ 28 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಒಂದು ಕ್ಯಾಲೆಂಡರ್ ವರ್ಷದಲ್ಲಿ ಎರಡೆರಡು ಬಾರಿ ನೋಡಬಹುದಾಗಿದೆ. ಉದಾಹರಣೆಗೆ, 2019 ರ ಏಪ್ರಿಲ್ ನಿಂದ ಮೇ ವರೆಗೆ ಲೋಕಸಭೆಗೆ ನಡೆದ 17 ನೇ ಸಾರ್ವತ್ರಿಕ ಚುನಾವಣೆಯೊಂದಿಗೆ, ಅರುಣಾಚಲ ಪ್ರದೇಶ, ಆಂದ್ರಪ್ರದೇಶ, ಓಡಿಶಾ, ಸಿಕ್ಕಿಂ ವಿಧಾನ ಸಭೆಗಳಿಗೆ ಚುನಾವಣೆ ನಡೆದಿದ್ದರೆ ಅದರ ಆರು ತಿಂಗಳ ಪೂರ್ವದಲ್ಲಿ ಅಂದರೆ 2018 ರ ನವೆಂಬರ್ ನಲ್ಲಿ ತೆಲಂಗಾಣ, ಛತ್ತೀಸ್ ಘಡ, ಮಧ್ಯಪ್ರದೇಶ, ರಾಜಸ್ಥಾನ, ಮಿಝೋರಾಂ ವಿಧಾನ ಸಭೆಗಳಿಗೆ ಚುನಾವಣೆಗಳು ಜರುಗಿರುತ್ತವೆ. ಅಲ್ಲದೆ 2018 ರ ಜನವರಿ-ಪೆಬ್ರವರಿಯಲ್ಲಿ ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ಗಳಿಗೆ ಚುನಾವಣೆಗಳು ನಡೆಯಲ್ಪಟ್ಟಿದ್ದವು. ನವೆಂಬರ್ 2019 ರಲ್ಲಿ ಹರಿಯಾಣ, ಮಹಾರಾಷ್ಟ್ರ, 2020 ರಲ್ಲಿ ಜಾರ್ಖಂಡ್ ಮತ್ತು ಬಿಹಾರದಲ್ಲಿ ಚುನಾವಣೆಗಳು ನಡೆಯಲಿವೆ. ಇನ್ನುಳಿದ ಮುಂಬರುವ ರಾಜ್ಯ ವಿಧಾನ ಸಭೆಗಳ ಚುನಾವಣೆಗಳನ್ನು ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯನ್ವಯ ಗಮನಿಸುವುದಾದರೆ

ಕ್ರ.ಸಂ

ಮುಂಬರುವ ಚುನಾವಣೆ ವರ್ಷ

ರಾಜ್ಯಗಳು

1

2021 ರ ಮಾರ್ಚಿ

ಜಮ್ಮು ಕಾಶ್ಮೀರ

2021 ರ ಮೇ-ಜೂನ್

ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪಾಂಡಿಚೇರಿ

2

2022 ರ ಮಾರ್ಚಿ

ಗೋವಾ, ಮಣಿಪುರ, ಪಂಜಾಬ್, ಉತ್ತರಖಂಡ

2022 ರ ಮೇ-ಜೂನ್

ಉತ್ತರ ಪ್ರದೇಶ

3

2023 ರ ಜನವರಿ-ಪೆಬ್ರವರಿ

ಗುಜರಾತ್, ಹಿಮಾಚಲಪ್ರದೇಶ

2023 ರ ಮಾರ್ಚಿ-ಏಪ್ರಿಲ್

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ

ಮೇಲ್ಕಂಡಂತೆ ಚುನಾವಣೆಗಳು ನಡೆಯಲಿವೆ, ಇನ್ನುಳಿದಂತೆ ಪ್ರಕಟಿಸದಿದ್ದರೂ 2018 ರ ಮೇ ನಲ್ಲಿ ಚುನಾವಣೆಗಳು ನಡೆದಿದ್ದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಗಳು 2023 ರಲ್ಲೇ ನಡೆಯಲಿವೆ. ಇನ್ನುಳಿದಂತೆ ವಿವಿಧ ಕಾರಣಗಳಿಗೆ ರಾಜ್ಯ ಸರ್ಕಾರಗಳು ಅಸ್ತಿರವಾಗುವುದರಿಂದ ನಡೆಯುವ ಮಧ್ಯಂತರ ಚುನಾವಣೆಗಳು, ವಿವಿಧ ಕಾರಣಗಳಿಗಾಗಿ ನಡೆಯುವ ಸಾಲು ಸಾಲು ಉಪ ಚುನಾವಣೆಗಳು, ಪ್ರತಿ ವರ್ಷ ಜನರನ್ನು ಚುನಾವಣೆಯತ್ತ ನಿರೀಕ್ಷಿಸುವಂತೆ ಮಾಡಿವೆ.

ನಿರಂತರ ಚುನಾವಣೆಗಳ ಪರಿಣಾಮಗಳು

            ಮೇಲಿನ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಯ ಪಕ್ಷನೋಟದಿಂದ ಪ್ರತಿ ವರ್ಷ ಎರಡು ಚುನಾವಣಾ ವೇಳಾಪಟ್ಟಿಗಳನ್ನು ಕಾಣಬಹುದು. ಸ್ಥಳೀಯ ಸರ್ಕಾರಗಳ ವೇಳಾಪಟ್ಟಿಯನ್ನು ಸರಾಸರಿಯಾಗಿ ಪರಿಗಣಿಸುವುದಾದರೆ ಪ್ರತಿ ತಿಂಗಳೂ ಚುನಾವಣೆಗಳು ನಡೆಯುತ್ತಿರುತ್ತವೆ. ಪ್ರತಿ ರಾಜ್ಯವೂ ಲೋಕಸಭೆ, ರಾಜ್ಯ ವಿಧಾನ ಸಭೆ, ನಾಲ್ಕು ಸ್ತರದ ನಗರ ಸ್ಥಳೀಯ ಸರ್ಕಾರ ಮತ್ತು ಮೂರು ಸ್ತರದ ಗ್ರಾಮೀಣ ಸ್ಥಳೀಯ ಸರ್ಕಾರಗಳನ್ನು ಸರಾಸರಿಯಾಗಿ ಪರಿಗಣಿಸಿದರೆ, ಪ್ರತಿ ವರ್ಷಕ್ಕೆ ಒಂದು ಚುನಾವಣಾ ವೇಳಾಪಟ್ಟಿ ಜಾರಿಯಲ್ಲಿರುವುದರಿಂದ, ಚುನಾವಣಾ ಘೋಷಣೆಯಿಂದ ಫಲಿತಾಂಶದವರೆಗೆ ಕನಿಷ್ಠ 45 ದಿನಗಳ ಕಾಲ ಚುನಾವಣಾ ನೀತಿಸಂಹಿತೆಯ ಹೆಸರಿನಲ್ಲಿ ಸರ್ಕಾರಿ ಯಂತ್ರವೇ ಚುನಾವಣೆಯಲ್ಲಿ ನಿರತವಾಗಿ, ಸಾರ್ವಜನಿಕ ಆಡಳಿತಯಂತ್ರ ಸ್ಥಬ್ದವಾಗಿರುತ್ತದೆ, ಸರ್ಕಾರವೂ ನೀತಿ ಸಂಹಿತೆಯ ಹೆಸರಿನಲ್ಲಿ ಅಗತ್ಯ ನಿರ್ಧಾರ, ಘೋಷಣೆಗಳನ್ನು ಮಾಡದೆ ಅಭಿವೃಧ್ಧಿ ಕಾರ್ಯಕ್ರಮಗಳು ಕುಂಠಿತವಾಗುತ್ತಿರುವುದನ್ನು ಕಾಣಬಹುದು. ಚುನಾವಣಾ ವೆಚ್ಚವೂ ಅಧಿಕವಾಗುತ್ತಾ ಸಾಗುತ್ತಿರುವುದರಿಂದ ಪ್ರತಿ ರಾಜ್ಯದಲ್ಲಿಯೂ ಸಾವಿರಾರು ಕೋಟಿಗಳಷ್ಟು ಹಣವನ್ನು ಪ್ರತಿ ವರ್ಷ ವ್ಯಯಮಾಡುತ್ತಿರುವುದನ್ನು ಕಾಣಬಹುದಾಗಿದೆ. ಚುನಾವಣೆಗಳು ಸಂವಿಧಾನಾತ್ಮಕ ಚೌಕಟ್ಟಿನಲ್ಲಿ, ನಿಯತಕಾಲಿಕವಾಗಿ ನಡೆಯಲೇಬೇಕಿರುವುದರಿಂದ, ಇಂತಹ ಅನಿವಾರ್ಯತೆಯಲ್ಲಿ ವೆಚ್ಚ ಸಾಮಾನ್ಯವಾಗಿರುತ್ತೆ. ಪ್ರತಿ ವರ್ಷದ ಚುನಾವಣೆಗಳು ಜನಜೀವನವನ್ನು ರಾಜಕೀಯ ಪಕ್ಷಗಳ ಪೈಪೋಟಿ, ದ್ವೇಷದ ರಾಡಿಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಹಾಗೂ ಜನ ಜೀವನ ಪದ್ದತಿಯನ್ನು ಪ್ರಕ್ಷುಬ್ಧಗೊಳಿಸಿರುವುದು ಸುಳ್ಳಲ್ಲ.

ಚುನಾವಣಾ ಪದ್ಧತಿಗೆ ಅಗತ್ಯವಿರುವ ಸುಧಾರಣೆಗಳು.

            ನಿರಂತರ ಚುನಾವಣೆಗಳ ಕಾರಣದಿಂದ ಒಮ್ಮೆಲೆ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳ ಚುನಾವಣೆಗಳು ನಡೆದರೆ, ಮುಂದಿನ 5 ವರ್ಷಗಳು ಚುನಾವಣೆಯ ಚಿಂತೆಯಿಲ್ಲದೆ ಸರ್ಕಾರಗಳು ನಿರಾತಂಕವಾಗಿ ಕಾರ್ಯನಿರ್ವಹಿಸಲು, ಬೃಹತ್ ಪ್ರಮಾಣದ ಚುನಾವಣಾ ವೆಚ್ಚವನ್ನು ನಿಯಂತ್ರಿಸಲು, ಸಹಕಾರಿಯಾಗುತ್ತದೆ ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ. ಅದಕ್ಕೆ ಪೂರಕವಾಗಿ ಎನ್.ಡಿ.ಎ ಭಾಗ 1 ರಲ್ಲಿ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು, ಒಮ್ಮೆಲೆ ಎಲ್ಲಾ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ದವಿದೆ ಎನ್ನುವ ಘೋಷಣೆಯೊಂದಿಗೆ, ಕಾನೂನು ಇಲಾಖೆ, ಕಾನೂನು ಆಯೋಗಕ್ಕೆ ಈ ಸಂಬಂಧ ಕಾನೂನುಗಳಿಗೆ ಅಗತ್ಯ ನಿಯಮಾವಳಿಗಳನ್ನು ಮತ್ತು ಕರಡನ್ನು ಸಿದ್ದಪಡಿಸಲು ಸೂಚಿಸಿರುತ್ತಾರೆ, ಮುಂದುವರೆದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಭೆಯನ್ನು ಕರೆದು ಒಂದೆರಡು ಸುತ್ತಿನ ಚರ್ಚೆಮಾಡಿರುವುದನ್ನು ಕಾಣಬಹುದು. ಬಹುತೇಕ ರಾಜಕೀಯ ಪಕ್ಷಗಳು ಒಮ್ಮೆಲೇ ಎಲ್ಲಾ ಚುನಾವಣೆಗಳನ್ನು ಅಂದರೆ “ಒಂದು ದೇಶ, ಒಂದು ಚುನಾವಣೆ” ನಡೆಸುವ ಸಂಬಂಧದ ಪ್ರಸ್ತಾವನೆಯನ್ನು ಕೆಲವು ರಾಜಕೀಯ ಪಕ್ಷಗಳು ಭಾರತದ ಸಂಯುಕ್ತತೆಗೆ ಧಕ್ಕೆತರುತ್ತದೆ, ವೈವಿಧ್ಯತೆಗೆ ಭಂಗವನ್ನುಂಟುಮಾಡುತ್ತದೆ ಎಂದು ತಿರಸ್ಕರಿಸಿರುತ್ತವೆ. ಮುಂದುವರೆದು ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಯು ತನ್ನ ಚುನಾವಣಾ ವಿಷಯನ್ನಾಗಿ ಪ್ರಕಟಿಸದೆ, ಅದಕ್ಕೆ ಬೆಂಬಲ ನೀಡುತ್ತಾ, “ಒಂದು ದೇಶ, ಒಂದು ಚುನಾವಣೆ” ಯನ್ನು ಮುನ್ನಲೆಗೆ ತಂದಿದ್ದಲ್ಲದೆ 2019 ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ವಿಜಯದ ನಂತರ “ಒಂದು ದೇಶ, ಒಂದು ಚುನಾವಣೆ” ಯ ಪರಿಕಲ್ಪನೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿರುವುದಲ್ಲದೆ, ಖುದ್ದು ಪ್ರಧಾನಿಯವರು ಸ್ವತಂತ್ರೋತ್ಸವದ ಭಾಷಣದಲ್ಲಿ “ಒಂದು ದೇಶ, ಒಂದು ಚುನಾವಣೆ” ಯ ಪರ ಮಾತನಾಡಿರುವುದರಿಂದ ಇದೊಂದು ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಇದಕ್ಕೆ ದ್ವನಿಗೂಡಿಸಿರುವ ಚುನಾವಣಾ ಆಯೋಗವು “ಒಂದು ದೇಶ, ಒಂದು ಚುನಾವಣೆ” ಗೆ ಪೂರಕವಾಗಿ ಒಮ್ಮೆಲೆ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಚುನಾವಣೆ ನಡೆಸಲು ಸಿದ್ದವಿರುವುದಾಗಿ, ಸ್ವಲ್ಪ ಮಟ್ಟಿಗೆ ಹೆಚ್ಚುವರಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಖರೀದಿಸಿದರೆ ಒಮ್ಮೆಲೇ ಚುನಾವಣೆ ನಡೆಸಲು ಆಯೋಗ ಸಶಕ್ತವಾಗಿರುವುದಾಗಿ ಹೇಳಿರುವುದರಿಂದ, ಇನ್ನು ಆಗಬೇಕಿರುವುದು ಈ ಸಂಬಂಧ ಕಾನೂನುಗಳಿಗೆ ಮತ್ತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿಗಳು, ಹೊಂದಾಣಿಕೆ ಮತ್ತು ಸಿದ್ದತೆಗಳಾಗಬೇಕಿರುತ್ತದೆ. ಇಂತಹ ಬದಲಾವಣೆಯಿಂದ, ನಿಗಧಿತ ಅಧಿಕಾರಾವಧಿಗೆ ಸುಭದ್ರ ಸರ್ಕಾರ ಪ್ರಾಪ್ತಿಯಾಗುತ್ತದೆ, ಆದುದರಿಂದ ಆಡಳಿತದಲ್ಲಿ ದಕ್ಷತೆ, ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು ಹಾಗೂ ಚುನಾವಣಾ ವೆಚ್ಚವೂ ದೊಡ್ಡ ಪ್ರಮಾಣದಲ್ಲಿ ತಗ್ಗುತ್ತದೆ.

            ಈ “ಒಂದು ದೇಶ, ಒಂದು ಚುನಾವಣೆ” ಪದ್ದತಿಯನ್ನು ಕೇಂದ್ರ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿನ ಕೇಂದ್ರ ರಾಜ್ಯ ಶಾಸನಸಭೆಗಳಿಗೆ ಮಾತ್ರ ಪರಿಗಣಿಸುವುದಲ್ಲದೆ, ರಾಜ್ಯ ಚುನಾವಣಾ ಆಯೋಗದ ಮೂಲಕ ನಡೆಯುವ ಸ್ಥಳೀಯ ಗ್ರಾಮೀಣ ಮತ್ತು ನಗರ ಸರ್ಕಾರಗಳಿಗೂ ಅನ್ವಯಿಸುವುದು ಸೂಕ್ತ ಎನಿಸುತ್ತದೆ. ಆದರೆ ಒಂದೇ ದಿನ, ಒಂದೇ ಮತಗಟ್ಟೆಯಲ್ಲಿ ಮತಕ್ಕೆ ಹೋಗುವುದರ ಬದಲು ಒಂದೇ ವೇಳಾಪಟ್ಟಿಯಲ್ಲಿ ಬೇರೆ ಬೇರೆ ದಿನದಂದು ಅಥವಾ ರಾಜ್ಯ ಮಟ್ಟದಲ್ಲಿ ಪ್ರತ್ಯೇಕವಾಗಿ ಚುನಾವಣೆಗಳನ್ನು ನಡೆಸಬಹುದು.

            “ಒಂದು ದೇಶ, ಒಂದು ಚುನಾವಣೆ” ತತ್ವದಡಿ ಏಕ ಕಾಲಕ್ಕೆ ಚುನಾವಣೆಗಳನ್ನು ನಡೆಸಲು ಹಲವು ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಬಿಕ್ಕಟ್ಟುಗಳು ಎದುರಾಗಲಿವೆ. ಅವುಗಳೆಂದರೆ, ಮೇಲೆ ವಿವರಿಸಿರುವಂತೆ ಎಲ್ಲಾ ರಾಜ್ಯಗಳ ವಿಧಾನ ಸಭೆಗಳ ಅವಧಿಯು ಬೇರೆ ಬೇರೆ ಸಮಯದಲ್ಲಿ ಅಂತ್ಯವಾಗುವುದರಿಂದ ಒಂದೇ ವೇಳಾಪಟ್ಟಿಯನ್ನು ನಿಗಧಿಪಡಿಸುವಾಗ ಕೆಲವು ರಾಜ್ಯಗಳ ಅವಧಿಯನ್ನು ಕಡಿತಗೊಳಿಸಬೇಕಾಗುತ್ತದೆ ಮತ್ತು ಕೆಲವು ರಾಜ್ಯಗಳ ವಿಧಾನ ಸಭೆಗಳ ಅವಧಿಯನ್ನು ಹೆಚ್ಚಿಸಲೂ ಬೇಕಾಗುತ್ತದೆ. ಇದು ಅಸಾಧ್ಯವಾದದ್ದೇನಲ್ಲ, ಒಂದು ಬಾರಿಗೆ ಸಂವಿಧಾನಾತ್ಮಕ ತಿದ್ದುಪಡಿಯನ್ವಯ ವಿಧಾನ ಸಭೆಗಳ ಅವಧಿಯನ್ನು ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಸಂಘಟಿಸಬಹುದು.

            ಆದರೆ ಒಮ್ಮೆ ಚುನಾವಣೆಗಳು ನಡೆದ ನಂತರ ಯಾವುದಾದರೊಂದು ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದೆ, ಸರ್ಕಾರ ರಚಿಸಲು ಯಾವುದೇ ಪಕ್ಷ ಮುಂದೆಬಾರದೆ ಉಂಟಾದ ಸಂವಿಧಾನಾತ್ಮಕ ಬಿಕ್ಕಟ್ಟಿಗೆ, ಮಧ್ಯಂತರ ಚುನಾವಣೆಗಳು ನಡೆಯುವುದು ಅನಿವಾರ್ಯ. ಆದರೆ ಚುನಾವಣೆ ಇಲ್ಲದ ಸಂದರ್ಭದಲ್ಲಿ  ಕೇಂದ್ರವೇ ರಾಜ್ಯಪಾಲರ ಆಳ್ವಿಕೆಯನ್ನು ಹೇರಬಹುದಾದರೂ, ಚುನಾವಣೆಯ ನಂತರದ ಅಲ್ಪಾವಧಿಯಲ್ಲೇ ರಾಜ್ಯಪಾಲರ ಆಡಳಿತ ಹೇರಿಕೆಯಾದರೆ ದೀರ್ಘಕಾಲದವರೆಗೆ ರಾಜ್ಯಪಾಲರ ಆಡಳಿತ ರಾಜ್ಯದ ಹಿತ ಮತ್ತು ಕಲ್ಯಾಣದ ದೃಷ್ಟಿಯಿಂದ ಒಳಿತಲ್ಲ. ಆದರೆ ನಿಗದಿತ ಅವಧಿಗೆ ಮುಖ್ಯಮಂತ್ರಿ ಅಥವಾ ಕಾರ್ಯಾಂಗದ ಅಧಿಕಾರಾವಧಿಯನ್ನು ನಿಗದಿಗೊಳಿಸುವ ಮೂಲಕ, ಅವರ ಅಧಿಕಾರವನ್ನು ಮೊಟಕುಗೊಳಿಸುವ ಅವಿಶ್ವಾಸ ನಿಯಮಾವಳಿಯನ್ನು ರದ್ದುಗೊಳಿಸಬೇಕಾಗುತ್ತದೆ. ಒಮ್ಮೆ ಮುಖ್ಯಮಂತ್ರಿಯು ಭ್ರಷ್ಟಾಚಾರ, ಅಪರಾಧ ಇತ್ಯಾದಿಗಳ ಕಾರಣದಿಂದ ಹುದ್ದೆ ಕಳೆದುಕೊಂಡರೆ, ಒಮ್ಮೆಲೇ ಉಪ ಮುಖ್ಯಮಂತ್ರಿಯ ಹುದ್ದೆಯನ್ನು ಸ್ವಯಂ ಚಾಲಿತವಾಗಿ ಮುಖ್ಯಮಂತ್ರಿಯಾಗಿ ಕಾರ್ಯರೂಪಕ್ಕೆ ಬರುವಂತಾಗಬೇಕಾಗುತ್ತದೆ. ಇದು ಮೇಲ್ನೋಟಕ್ಕೆ ಸಂಯುಕ್ತತೆಯ ಸ್ವರೂಪವನ್ನು ಹೋಲುತ್ತದೆಯಾದರೂ, ಚುನಾವಣೆಗೆ ಹೋಗುವುದನ್ನು ತಪ್ಪಿಸಲು ಇದರ ಹೊರತಾಗಿ ಬೇರೊಂದು ಮಾರ್ಗ ಇರುವುದಿಲ್ಲ. ಆಗ ಕಾರ್ಯಾಂಗದ ಮೇಲೆ ಶಾಸಕಾಂಗದ ನಿಯಂತ್ರಣ ತಪ್ಪುವ ಸಂದರ್ಭವಿದ್ದು, ಕಾರ್ಯಾಂಗವನ್ನು ಹತೋಟಿಯಲ್ಲಿಡುವುದಕ್ಕಾಗಿ, ಹಣಕಾಸು, ಶಾಸನೀಯ ಮಸೂದೆಗಳು ಮತ್ತು ಕಾರ್ಯಾಂಗೀಯ ಆದೇಶಗಳನ್ನು ನಿಯಂತ್ರಿಸುವ ನಿಯಂತ್ರಣಾಧಿಕಾರಗಳನ್ನು ಶಾಸಕಾಂಗಕ್ಕೆ ನೀಡಬಹುದಾಗಿದೆ.

            ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಇದ್ದ ಸಂಧರ್ಭದಲ್ಲಿ, ರಾಜಕೀಯ ಪಕ್ಷಗಳ ಒಕ್ಕೂಟವನ್ನು ರಚಿಸಿಕೊಳ್ಳಲು, ಅದರ ನಾಯಕ ಮತ್ತು ಉಪನಾಯಕನಿಗೆ  ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗುವ ಅವಕಾಶ ನೀಡುವುದು ಹಾಗೂ ಅಂತಹ ಒಕ್ಕೂಟ ಮುಂದುವರೆಯದೇ ಇದ್ದ ಸಂದರ್ಭದಲ್ಲಿ ರಾಜ್ಯಪಾಲರೇ  ನೇರವಾಗಿ ಉಳಿದ ಅವಧಿಗೆ ಆಡಳಿತ ನಡೆಸುವ ಅವಕಾಶಗಳು ಬರಬೇಕಾಗುತ್ತದೆ. ರಾಜ್ಯಪಾಲರ ಆಡಳಿತದಲ್ಲಿ ಜನಪ್ರತಿನಿಧಿಗಳ ಶಾಸಕಾಂಗದ ಸದಸ್ಯತ್ವವನ್ನು ಉಳಿಸುವ ಮೂಲಕ, ಪ್ರಜೆಗಳ ಬೇಕು ಬೇಡಗಳಿಗೆ ದ್ವನಿಯಾಗಿರಲು ಅವಕಾಶವನ್ನು ಇಡುವುದರ ಮೂಲಕ, ಶಾಸಕರ ಅಧಿಕಾರಾವಧಿಯನ್ನು ನಿಶ್ಚಿತಗೊಳಿಸಿದಂತಾಗುತ್ತದೆ. ರಾಜ್ಯಪಾಲರ ಆಡಳಿತ ಇದ್ದ ಸಂದರ್ಭದಲ್ಲಿ, ರಾಜ್ಯಪಾಲರು ಅಧಿಕಾರಿಗಳು, ತಜ್ಞ ಗಣ್ಯರು, ಅಥವಾ ಶಾಸಕರನ್ನು ಸರ್ಕಾರದ ಮೇಲುಸ್ತುವಾರಿ ನಾಯಕ/ಪ್ರತಿನಿಧಿ/ತಾತ್ಕಾಲಿಕ ಮಂತ್ರಿಯನ್ನಾಗಿ ನೇಮಿಸಿಕೊಂಡು ಆಡಳಿತ ನಡೆಸಲು ಅವಕಾಶ ಮಾಡಿಕೊಡಲು ಕಾನೂನು ಮತ್ತು ಸಂವಿಧಾನಕ್ಕೆ ತಿದ್ದುಪಡಿಗಳಾಗಬೇಕಾಗುತ್ತದೆ. ರಾಜ್ಯಪಾಲರ ಆಡಳಿತದ ಅವಧಿಯಲ್ಲಿ ರಾಜ್ಯಪಾಲರು ನಿರ್ವಹಿಸಿದ ಎಲ್ಲಾ ಅಧಿಕಾರ ಮತ್ತು ಕಾರ್ಯಗಳಿಗೆ ಜವಾಬ್ಧಾರಿ, ಹೊಣೆಗಾರಿಗೆ ಹಾಗೂ ಕಾನೂನಿನ ಬಾಧ್ಯತೆಯ ವ್ಯಾಪ್ತಿಗೆ ಒಳಪಡಿಸಬೇಕಾಗುತ್ತದೆ.

            ಉಪ ಚುನಾವಣೆಗಳ ಮೂಲಕ ಶಾಸಕಾಂಗದ ಸಂಖ್ಯಾಬಲ ವ್ಯತ್ಯಾಸವಾದಲ್ಲಿ ಸರ್ಕಾರವು ಬದಲಾಗಲು ಅಥವಾ ಮುಖ್ಯಮಂತ್ರಿಯ ನಾಯಕತ್ವದ ಬದಲಾವಣೆಗೆ ಅವಕಾಶ ನೀಡಿದರೆ, ನಿಗದಿತ ಅಧಿಕಾರಾವಧಿಯ ಉದ್ದೇಶವು ಸಾಫಲ್ಯವಾಗುವುದಿಲ್ಲ. ಅಂತಹ ಸಂಧರ್ಭದಲ್ಲಿ ಅಕಾಲಿಕ ಮರಣ ಅಥವಾ ಅಪರಾಧ ಪ್ರಕರಣಗಳ ಹೊರತಾಗಿ ಉಳಿದ ಸಂದರ್ಭದಲ್ಲಿ, ತೆರವಾಗುವ ಸ್ಥಾನಕ್ಕೆ ಉಪಚುನಾವಣೆಯಲ್ಲಿ ರಾಜೀನಾಮೆ ಸಲ್ಲಿಸಿದ ಸದಸ್ಯ ಅಥವಾ ಕುಟುಂಬದ ಸದಸ್ಯರು ಚುನಾವಣೆಗೆ ಸ್ಪರ್ಧಿಸದಂತೆ ನಿಯಂತ್ರಣ ಅಗತ್ಯವಾಗುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಉಪ ಚುನಾವಣೆ ನಡೆದು ಆಡಳಿತ ಮತ್ತು ವಿರೋಧ ಪಕ್ಷಗಳ ಬಲಾಬಲ ಬದಲಾದರೆ, ವಿರೋಧ ಪಕ್ಷದ ನಾಯಕನು ಉಳಿದ ಅವಧಿಗೆ ಅಧಿಕಾರ ಹಿಡಿಯಲು, ಒಂದು ಬಾರಿಗೆ ಮಾತ್ರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬಹುದಾಗಿರುತ್ತದೆ.

 

ಕೇಂದ್ರ ಶಾಸಕಾಂಗದ ಬಿಕ್ಕಟ್ಟು.

            ರಾಜ್ಯ ಶಾಸಕಾಂಗದ ಪರಿಸ್ಥಿತಿಗೆ ಭಿನ್ನವಾದ ಸಂದರ್ಭದಲ್ಲಿ, ಲೋಕಸಭೆಯಲ್ಲಿ ಯಾವ ಪಕ್ಷಕ್ಕೂ ಅಗತ್ಯ ಬಹುಮತ ಲಭ್ಯವಾಗದೆ, ಅತಂತ್ರ ಸಂಸತ್ತು ರಚನೆಯಾದರೆ, ಎರಡು ಅಥವಾ ಹೆಚ್ಚು ರಾಜಕೀಯ ಪಕ್ಷಗಳು ಪರಸ್ಪರ ಒಪ್ಪಿಗೆಯನ್ವಯ, ವಿಘಟನೆಗೆ ಸಾಧ್ಯವಿಲ್ಲದ ಒಕ್ಕೂಟಗಳನ್ನು ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ರಚಿಸಿಕೊಳ್ಳಲು ಅವಕಾಶವಿರತಕ್ಕದ್ದು. ಅಂತಹ ದೊಡ್ಡ ಒಕ್ಕೂಟದ ನಾಯಕನನ್ನು ಪ್ರಧಾನಿಯನ್ನಾಗಿಸಿ, ಅವನ ಅಧಿಕಾರವನ್ನು ಯಾವುದೇ ಸಂದರ್ಭದಲ್ಲಿ ಮೊಟಕುಗೊಳಿಸದಂತಹ ಅವಕಾಶವನ್ನು ಕಲ್ಪಿಸಬೇಕು.  ಯಾವ ಪಕ್ಷವೂ ಸರ್ಕಾರ ರಚಿಸಲು ಮುಂದಾಗದಿದ್ದರೆ, ಮಧ್ಯಂತರ ಚುನಾವಣೆಗೆ ಹೋಗುವುದಾದರೆ, ಎಲ್ಲಾ ರಾಜ್ಯವಿಧಾನಸಭೆಗಳಿಗೂ ಚುನಾವಣೆನಡೆಸಲು ಸಾಧ್ಯವಾಗದು. ಆದುದರಿಂದ ಸಂಸತ್ತಿನ ಅಧಿಕಾರಾವಧಿಯನ್ನು ನಿಗಧಿತ ಅವಧಿಗೆ ನಿಗಧಿಗೊಳಿಸಬೇಕಾದದ್ದು ಅನಿವಾರ್ಯ. ಲೋಕಸಭೆಯ ವಿಸರ್ಜನೆಯನ್ನು ನಿಷೇಧಿಸಿ, ಬಹುದೊಡ್ಡ ಶಾಸಕಾಂಗ ಪಕ್ಷನ ನಾಯಕನನ್ನು ಉಳಿದ ಅವಧಿಗೆ ಪ್ರಧಾನಿಯನ್ನಾಗಿಸಬೇಕು. ಆತನ ಆಡಳಿತದ ತೀರ್ಮಾನಗಳನ್ನು ಬೆಂಬಲಿಸಲು, ಸದನದ ಒಟ್ಟು ಸಂಖ್ಯೆಯನ್ನು ಒಟ್ಟಾಗಿ ಬಹುಮತವಾಗಿ ಪರಿಗಣಿಸದೆ, ಪ್ರತಿಯೊಂದು ಪಕ್ಷಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ, ದೊಡ್ಡ ಶಾಸಕಾಂಗ ಪಕ್ಷವಾಗಿರುವ, ರಾಜಕೀಯ ಪಕ್ಷದ ಬಹುಮತವನ್ನೇ ಆಡಳಿತಕ್ಕೆ ಬಹುಮತವನ್ನಾಗಿ ಪರಿಗಣಿಸಿದರೆ ಆಡಳಿತದ ಅಭದ್ರತೆಯನ್ನು, ಮಧ್ಯಂತರ ಚುನಾವಣೆಗಳನ್ನು ನಿಯಂತ್ರಿಸಿ ಸುಭದ್ರ ಆಡಳಿತವನ್ನು ನಿರೀಕ್ಷಿಸಬಹುದು.

            ಲೋಕಸಭೆಯ ಸ್ಥಾನಗಳಿಗೆ ಉಪ ಚುನಾವಣೆಗಳ ಮೂಲಕ ಶಾಸಕಾಂಗದ ಸಂಖ್ಯಾಬಲ ವ್ಯತ್ಯಾಸವಾದಲ್ಲಿ ಸರ್ಕಾರವು ಬದಲಾಗಲು ಅಥವಾ ಪ್ರಧಾನಮಂತ್ರಿಯ ನಾಯಕತ್ವದ ಬದಲಾವಣೆಗೆ ಅವಕಾಶ ನೀಡಿದರೆ, ನಿಗದಿತ ಅಧಿಕಾರಾವಧಿಯ ಉದ್ದೇಶವು ಸಾಫಲ್ಯವಾಗುವುದಿಲ್ಲ. ಅಂತಹ ಸಂಧರ್ಭದಲ್ಲಿ ಅಕಾಲಿಕ ಮರಣ ಅಥವಾ ಅಪರಾಧ ಪ್ರಕರಣಗಳ ಹೊರತಾಗಿ ಉಳಿದ ಸಂದರ್ಭದಲ್ಲಿ, ತೆರವಾಗುವ ಸ್ಥಾನಕ್ಕೆ ಉಪಚುನಾವಣೆಯಲ್ಲಿ ರಾಜೀನಾಮೆ ಸಲ್ಲಿಸಿದ ಸದಸ್ಯ ಅಥವಾ ಕುಟುಂಬದ ಸದಸ್ಯರು ಚುನಾವಣೆಗೆ ಸ್ಪರ್ಧಿಸದಂತೆ ನಿಯಂತ್ರಣ ಅಗತ್ಯವಾಗುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಉಪ ಚುನಾವಣೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಬಲಾಬಲ ಬದಲಾದರೆ, ವಿರೋಧ ಪಕ್ಷದ ನಾಯಕನು ಉಳಿದ ಅವಧಿಗೆ ಅಧಿಕಾರ ಹಿಡಿಯಲು, ಒಂದು ಬಾರಿಗೆ ಮಾತ್ರ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕಾಗುತ್ತದೆ.

ಕೊನೆಯ ಮಾತು.

            “ಒಂದು ದೇಶ, ಒಂದು ಚುನಾವಣೆ”ಯು ಭಾರತವನ್ನು, ಸಂವಿಧಾನದ ಮೂಲ ವ್ಯವಸ್ಥೆಯಲ್ಲಿ ಒಂದಾದ ‘ಸಂಸದೀಯ ವ್ಯವಸ್ಥೆಯನ್ನು’ ಭಂಗಗೊಳಿಸುತ್ತದೆ ಹಾಗೂ ಅಧ್ಯಕ್ಷೀಯ ಸ್ವರೂಪಕ್ಕೆ ಆಡಳಿತವನ್ನು ಪರಿವರ್ತಿಸುವುದರಲ್ಲಿ ಸಂಶಯವಿಲ್ಲ. ಭಾರತಕ್ಕೆ ಸಂಸದೀಯ ಪದ್ದತಿಗಿಂತ ಅಧ್ಯಕ್ಷೀಯ ಮಾದರಿ ಉತ್ತಮವೆನ್ನುವ ವಾದ ಭಾಗಶಃ ಪೂರ್ಣಗೊಂಡಂತೆ ಆಗುವುದಲ್ಲದೆ, ವಿಶಿಷ್ಟ ಮಾದರಿಯ ಅಥವಾ “ಭಾರತೀಯ ಮಾದರಿಯ ಸಂಯುಕ್ತ ಪದ್ದತಿ” ಹಾಗೂ “ಭಾರತೀಯ ಮಾದರಿಯ ಸಂಸದೀಯ ಪದ್ದತಿಯನ್ನು” ಪ್ರಾರಂಭಿಸಲಾಗುತ್ತದೆ. ರಾಜ್ಯಾಡಳಿತ ಪದ್ದತಿಯಲ್ಲಿ ಯಾವುದೂ ಸತ್ಯವೂ ಅಲ್ಲ, ಯಾವುದೂ ಪರಿಪೂರ್ಣವೂ ಅಲ್ಲ, ಭಾರತದ “ಒಂದು ದೇಶ, ಒಂದು ಚುನಾವಣೆ” ಮೂಲಕ ಹೊಸ ರಾಜಕೀಯ ವ್ಯವಸ್ಥೆಯು ಪ್ರಾರಂಭವಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಬೇರೆ ಬೇರೆ ದೇಶಗಳಿಗೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.

ಆಕರ ಗ್ರಂಥಗಳು:

  1. The Hindu 19th jun 2019
  2. www.indiatoday.in 22nd jun 19
  3. www.insightsonindia.com 17th jun 2019
  4. www.thenewsminute.com 20th jun 2019


Sign In  /  Register

Most Downloaded Articles

Acquire employability in Indian Sinario

The Pink Sonnet

Department of Mathematics @ GFGC Tumkur

Knowledge and Education- At Conjecture

ಗ್ರಾಮೀಣ ಪ್ರದೇಶದಲ್ಲಿ ಆಯಗಾರಿಕೆ ಸಂಸ್ಕೃತಿ




© 2018. Tumbe International Journals . All Rights Reserved. Website Designed by ubiJournal