Tumbe Group of International Journals

Full Text


ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ

ಡಾ. ಕೃಷ್ಣ ಮೂರ್ತಿ .ಎನ್ .ಪಿ

ಕನ್ನಡ ಸಹಾಯಕ ಪ್ರಾಧ್ಯಾಪಕರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೇವನಹಳ್ಳಿ.

ಬೆಂಗಳೂರು ಗ್ರಾಮಂತರ ಜಿಲ್ಲೆ


ಪ್ರಸ್ತಾವನೆ.

         ಕನ್ನಡ ಸಾಹಿತ್ಯದ ಸುದೀರ್ಘ ಪರಂಪರೆಯಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ರಾಷ್ಟ್ರೀಯತೆಯ ನೆಲೆಗಳು ರೂಪುಗೊಂಡಿವೆ. ಆದರೆ  ರಾಷ್ಟ್ರೀಯತೆಯ ಪರಿಕಲ್ಪನೆಯನ್ನು  ಪಶ್ಚಿಮ ಜಗತ್ತು ಹಠ ಹಿಡಿದು ರೂಪಿಸಿಕೊಂಡ  ಪರಿಕಲ್ಪನೆಯಾಗಿದೆ. ಕಳೆದ ಎರಡು ಮೂರು ಶತಮಾನಗಳಲ್ಲಿ ರೂಪಿತಗೊಂಡ ಈ  ಪರಿಕಲ್ಪನೆಯು ತ್ಯಾಗ, ಬಲಿದಾನ, ವಿಷಾದ, ವೀರಾವೇಶ, ಅತಿ ಉಗ್ರವಾದ ಮೌಲ್ಯಗಳಲ್ಲಿ ರೂಪುಗೊಂಡಿದೆ. ರಾಷ್ಟ್ರೀಯತೆ ಎಂಬುದೇ  ಸಾಹಿತ್ಯೇತರ ವಾದ ಪರಿಕಲ್ಪನೆ. ಏಕೆಂದರೆ ಇದು ವಾಸ್ತವವಾಗಿ ಆಯಾ  ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಜೀವನವನ್ನು ಗ್ರಹಿಸುವ ಶಕ್ತಿಯಾಗಿದೆ ಮತ್ತು ರೂಪಿಸುತ್ತದೆ. ಪಶ್ಚಿಮ ಜಗತ್ತಿನಲ್ಲಿ ನಡೆದ ಹತ್ಯಾಕಾಂಡ, ನರಮೇಧ, ರಕ್ತಪಾತ ಗಳಿಗೆ  ಕಾರಣವಾಗಿರುವುದು  ರಾಷ್ಟ್ರೀಯತೆಯ ಪರಿಕಲ್ಪನೆ.

ಕೀ ವರ್ಡ್: ಕನ್ನಡ ಸಾಹಿತ್ಯ, ರಾಷ್ಟ್ರೀಯತೆ, ತ್ಯಾಗ, ಬಲಿದಾನ, ವಿಷಾದ, ವೀರಾವೇಶ.

ಪಿಠೀಕೆ

ರಾಜಕೀಯ ಪರಿಕಲ್ಪನೆಯಾದ ರಾಷ್ಟ್ರೀಯತೆಯು ಕಾಲಕ್ರಮೇಣ ಸಾಹಿತ್ಯದ ಪ್ರಕಾರಗಳಲ್ಲಿ ರೂಪುಗೊಂಡಿರುವುದು ಕಾಣಬಹುದು. ಪ್ರಸ್ತುತ ಈ ಲೇಖನದಲ್ಲಿ  ಕನ್ನಡ ಸಾಹಿತ್ಯದಲ್ಲಿ ರೂಪಿತವಾದ ರಾಷ್ಟ್ರೀಯತೆಯ ಮುಖ್ಯ ಮಾದರಿಯ  ನೆಲೆಗಳನ್ನು ವಿವರಿಸುವುದು ಆಗಿದೆ. ಕನ್ನಡದ ಪ್ರಮುಖ ಕೃತಿಗಳು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೇಗೆ ನೋಡಿದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಈ ಲೇಖನದ್ದು. ಆಧುನಿಕ ಪರಿಕಲ್ಪನೆಯ ಕೂಸಾದ ಬಂಡವಾಳಶಾಹಿತನ  ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಒಳಗೊಂಡಿದೆ. ಬಂಡವಾಳಶಾಹಿಯ ಶಕ್ತಿಯು ರಾಷ್ಟ್ರೀಯತೆಯನ್ನು ಅಥವಾ ದೇಶವನ್ನು ಮಾರುಕಟ್ಟೆ ಗಳನ್ನಾಗಿ ಪರಿವರ್ತಿಸುವ ಶಕ್ತಿಯುಳ್ಳದ್ದು. ರಾಷ್ಟ್ರೀಯತೆಯ ಬಗ್ಗೆ   ಬೆನೆಡಿಕ್ಟ್ ಅಂಡರ್ಸನ್  ಹೇಳುವ ಮಾತಿದು ‘ ಅದೊಂದು ಕಲ್ಪಿತ ರಾಜಕೀಯ ಸಮುದಾಯ.ಅದು ತನ್ನನ್ನು ಸ್ವಯಂ ಸಾರ್ವಭೌಮ ಎಂತಲೂ , ಪರಿಮಿತ  ಎಂತಲೂ ಕಲ್ಪಿಸಿ ಕೊಂಡಿರುತ್ತದೆ” ಎಂಬ ಮಾತಿನಲ್ಲಿ ರಾಷ್ಟ್ರೀಯತೆ ಎಂಬುದು ಇಲ್ಲದಿರುವುದನ್ನು ಕಲ್ಪಿಸಿಕೊಳ್ಳುವ, ಭಾವನಾತ್ಮಕವಾಗಿ  ನಡೆಯುವಂಥದ್ದು, ಇದೆ   ರಾಷ್ಟ್ರೀಯತೆಯನ್ನು   ಹುಟ್ಟುಹಾಕುತ್ತದೆ. ಪಶ್ಚಿಮ ಜಗತ್ತಿನಲ್ಲಿ ರಾಷ್ಟ್ರೀಯತೆಯು ಮನುಷ್ಯಕುಲದ ವಿನಾಶದ ಮಾದರಿಯಾಗಿದೆ .ಭಾರತದಂತ ವಸಾಹತುಶಾಹಿ ರಾಷ್ಟ್ರಗಳಲ್ಲಿ ರಾಷ್ಟ್ರೀಯತೆಯ ಎಂಬುದೇ ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕದಿಂದ ರೂಪುಗೊಂಡಿದೆ .ಲೆನಿನ್ ಹೇಳುವಹಾಗೆ “ ರಾಷ್ಟ್ರೀಯತೆ ಹುಟ್ಟಿದ್ದೆ ಮಾರುಕಟ್ಟೆಯಲ್ಲಿ” ಎಂಬ ಮಾತಿನ ಹಿನ್ನೆಲೆಯಲ್ಲಿ, ಬ್ರಿಟಿಷರು  ಹೇಗೆ ಇಡೀ ಭಾರತ ದೇಶವನ್ನು  ಮಾರುಕಟ್ಟೆಯನ್ನಾಗಿ ಸೃಷ್ಟಿಸಿಕೊಂಡರು, ಇದರ ಜೊತೆಗೆ ಉಗ್ರ ಹಿಂದುತ್ವದ ನೆಲೆಯೂ ಕೂಡ ಭಾರತೀಯ ರಾಷ್ಟ್ರೀಯತೆಯನ್ನು ರೂಪಿಸಿಕೊಂಡಿತು . ಬ್ರಿಟಿಷರು ರೂಪಿಸಿದ  ಮಾರುಕಟ್ಟೆಯ ವ್ಯವಸ್ಥೆಯು ತದನಂತರದಲ್ಲಿ ಉಗ್ರ ಹಿಂದುತ್ವದ ನೆಲೆಯಾಗಿ ರಾಷ್ಟ್ರೀಯತೆಯ ಪರಿಕಲ್ಪನೆಯೇ ಎಂಬಂತೆ ರೂಪಗೊಂಡಿತು. ಈ ಹಿನ್ನೆಲೆಯಲ್ಲಿ ಗಾಂಧೀಜಿ  ರೂಪಿಸಿದ ರಾಷ್ಟ್ರೀಯತೆಯ ಪರಿಕಲ್ಪನೆಯು, ಬಾಲಗಂಗಾಧರ ತಿಲಕರು ರೂಪಿಸಿದ ಪರಿಕಲ್ಪನೆ ಗಿಂತ ಭಿನ್ನವಾಗಿದೆ.  ರಾಷ್ಟ್ರೀಯತೆಯ ಪರಿಕಲ್ಪನೆ ಎಲ್ಲರನ್ನೂ ಒಳಗೊಳ್ಳುವ  ಪರಿಕಲ್ಪನೆಯಾಗಿ  ಆಗಿದ್ದು,  ಬ್ರಿಟಿಷರು ಆಗಿರಬಹುದು ಅಥವಾ ಬೇರೆ ಯಾವುದೇ ದೇಶದ ನಾಗರೀಕರನ್ನು ತನ್ನವರು ಎಂದು ಭಾವಿಸುವ ಪರಿಕಲ್ಪನೆ. ಆದರೆ  ತಿಲಕರು ರೂಪಿಸಿದ ರಾಷ್ಟ್ರೀಯತೆಯ ಪರಿಕಲ್ಪನೆ  ಬ್ರಿಟಿಷರ ಎದುರಿನಲ್ಲಿ ಹಿಂದುಗಳನ್ನು ಒಂದುಗೂಡಿಸುವ ಉಗ್ರ ರಾಷ್ಟ್ರೀಯತೆಯ ಸ್ವರೂಪದ್ದು. ಕನ್ನಡ ಸಾಹಿತ್ಯದ  ಮೇಲೆ ಗಾಂಧಿ ಮತ್ತು ತಿಲಕರ ಎರಡು ರಾಷ್ಟ್ರೀಯತೆಯ ಮಾದರಿಗಳು ಪ್ರಭಾವ ಬೀರಿರುವುದನ್ನು ಕಾಣಬಹುದು. ರಾಷ್ಟ್ರೀಯತೆಯ ಮಾದರಿಗಳು ಸಾಹಿತ್ಯದೊಳಗೆ ಹೇಗೆ ರೂಪಿತವಾಗಿದೆ ಎಂಬುದನ್ನು ಮುಂದಿನ ಭಾಗದಲ್ಲಿ ಚರ್ಚಿಸಬಹುದು.

      ಕನ್ನಡ  ಸಾಹಿತ್ಯದ ಶಾಸ್ತ್ರೀಯ ಮತ್ತು ಮೇರು ಕೃತಿಯಾದ ಕವಿರಾಜಮಾರ್ಗದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯು ,ಭೌಗೋಳಿಕ ವ್ಯಾಪ್ತಿ ಮತ್ತು ಅಲ್ಲಿ ವಾಸಮಾಡುವ ಕನ್ನಡಿಗರ ಗುಣಸ್ವಭಾವಗಳನ್ನು, ಅವರ ಆದರ್ಶ ಮೌಲ್ಯಗಳನ್ನು, ಅವರ ಬದುಕಿನ ಕ್ರಮವನ್ನು ,ರಾಷ್ಟ್ರೀಯತೆಯನ್ನು ಪರಿಭಾವಿಸಿ, ಕವಿರಾಜಮಾರ್ಗದಲ್ಲಿ ಉಲ್ಲೇಖವಾಗಿರುವ  ಕೆಳಗಿನ ಪದ್ಯವು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು,  ವಿಶ್ವಾತ್ಮಕ ನೆಲೆಯಲ್ಲಿ ವಿವರಿಸುವಂಥ ದ್ದಾಗಿದೆ

ಕಾವೇರಿಯಿಂದಮಾ ಗೋ

ದಾವರಿ ವರಮಿರ್ಪ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸು

ಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

 ಕವಿರಾಜಮಾರ್ಗದ ಈ ಪದ್ಯವು ಆಧುನಿಕ ಸಂದರ್ಭದಲ್ಲಿ ಪ್ರತಿಪಾದಿಸುವ ಭೌಗೋಳಿಕ ವ್ಯಾಪ್ತಿಯ  ರಾಷ್ಟ್ರೀಯತೆಯ ಪರಿಕಲ್ಪನೆ ವಿವರಿಸುವಂಥ ದ್ದಾಗಿದೆ . ಅವತ್ತಿನ ಕಾಲದ ಕನ್ನಡ ರಾಷ್ಟ್ರೀಯತೆಯನ್ನು, ಕನ್ನಡ ಜನಸಮುದಾಯವನ್ನು, ರೂಪಿಸಿಕೊಳ್ಳುವ ಪ್ರಯತ್ನ ಅಷ್ಟೇ ಅಲ್ಲ. ಅದೊಂದು ರೂಪಗೊಂಡ ವ್ಯವಸ್ಥೆ ಎಂಬುದನ್ನು ಈ ಪದ್ಯ ಹೇಳುತ್ತಿದೆ. ರಾಜತ್ವ ಅಥವಾ ಪ್ರಭುತ್ವ ಒಳಗೊಂಡ ಪರಿಕಲ್ಪನೆಯಾಗಿದೆ. ರಾಷ್ಟ್ರೀಯತೆ ಎಂಬುದು ಅಲ್ಲಿನ ಜನ ಸಮುದಾಯಗಳ  ಬದುಕಿನ ಕ್ರಮ,   ಮೌಲ್ಯಗಳು,  ಜೀವನ ಇವುಗಳನ್ನು ಕನ್ನಡ ರಾಷ್ಟ್ರೀಯತೆಯನ್ನು ಕವಿರಾಜಮಾರ್ಗ ಭಾವಿಸಿದೆ. ಕೇವಲ ಪ್ರಭುತ್ವದ ನೆಲೆಯ ರಾಷ್ಟ್ರೀಯತೆಯ ಪರಿಕಲ್ಪನೆ ಯಲ್ಲದೆ ಜನಮಾನಸಗಳಲ್ಲಿ ಒಳಗೊಂಡ ಪರಿಕಲ್ಪನೆಯಾಗಿದೆ.

ಆಧುನಿಕ ಕಾಲಘಟ್ಟದ ನವೋದಯ ಸಾಹಿತ್ಯದಲ್ಲಿ ರಾಷ್ಟ್ರೀಯತೆಯ ಉಗಮಕ್ಕೆ ಮುಖ್ಯಕಾರಣವೆಂದರೆ  ಬ್ರಿಟಿಷರ ಆಗಮನ,  ಆಧುನಿಕ ಶಿಕ್ಷಣ ಪದ್ಧತಿ.  ಭಾರತವನ್ನು  ವಸಾಹತುಶಾಹಿ ದೇಶವನ್ನಾಗಿ ಮಾಡಿಕೊಂಡ ಬ್ರಿಟಿಷರು ಅನೇಕ ಸಂಸ್ಥಾನಗಳಾಗಿ ಹಂಚಿಹೋಗಿದ್ದ ಭಾರತವೆಂಬ ದೇಶವನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡಿದರು. ರಾಜಕೀಯ ಆಳ್ವಿಕೆಯ  ಕಾರಣಕ್ಕೋಸ್ಕರ  ದೇಶವೆಂಬ ಪರಿಕಲ್ಪನೆಯನ್ನು  ರೂಪಿಸಿದರು. ಆದರೆ ಬ್ರಿಟಿಷರ ರಾಜಕೀಯ ಆಡಳಿತವನ್ನು ವಿರೋಧಿಸುವ ಕಾರಣದಿಂದಲೇ ಸ್ವಾತಂತ್ರ್ಯ ಚಳುವಳಿ ರೂಪುಗೊಂಡಿತು.    ನವೋದಯ ಕಾಲ ಘಟ್ಟದ  ಕನ್ನಡ ಸಾಹಿತ್ಯ ರಚನೆಗೆ ಬಹುಮುಖ್ಯ ಪ್ರೇರಕ ಗಳಲ್ಲಿ ಪಾಶ್ಚಾತ್ಯ ಪ್ರಭಾವ, ಆಧುನಿಕ ಶಿಕ್ಷಣ ಪದ್ಧತಿ, ಸ್ವಾತಂತ್ರ  ಚಳುವಳಿ,  ಇಂಗ್ಲಿಷ್ ಸಾಹಿತ್ಯ ಪ್ರಭಾವ, ಮತ್ತು ಗಾಂಧೀಜಿಯ ಹೋರಾಟ.  ಇದರ ಜೊತೆಗೆ  ಪರಂಪರೆಯ ಪಳೆಯುಳಿಕೆಗಳನ್ನು ಉಳಿಸಿಕೊಳ್ಳುವುದರ ಕಡೆಗೆ ಕನ್ನಡ ನವೋದಯ  ಸಾಹಿತ್ಯದ ಆಸಕ್ತಿ ಇರುವುದನ್ನ ಕಾಣುತ್ತೇವೆ.  ಕುತೂಹಲವೆಂದರೆ ನವೋದಯ ಸಾಹಿತ್ಯ ಸಂದರ್ಭದಲ್ಲಿ ಬಹುತೇಕ ಸಾಹಿತ್ಯವನ್ನು ರಚನೆ ಮಾಡಿದವರು ಆಧುನಿಕ ಇಂಗ್ಲಿಷ್ ಶಿಕ್ಷಣವನ್ನು ಪಡೆದ ಮೇಲ್ವರ್ಗದ ಜನವರ್ಗವೇ ತಮಗೆ ಬೇಕಾದ ರಾಷ್ಟ್ರೀಯತೆಯ ಮಾದರಿಯನ್ನು, ಬ್ರಿಟಿಷ್ ಪ್ರಭುತ್ವದ ಎದುರಿಗೆ ರೂಪಿಸಿಕೊಳ್ಳಲು  ಪ್ರಯತ್ನಿಸಿದರು. ತಮ್ಮ ಪರಂಪರೆಗಳನ್ನು ಆದರ್ಶೀಕರಣ ಗೊಳಿಸುವ,  ಉದಾತ್ತ ಮೌಲ್ಯಗಳನ್ನು, ಪಾತ್ರಗಳನ್ನು  ತಮ್ಮ ಸಾಹಿತ್ಯದಲ್ಲಿ ಸೃಷ್ಟಿಸುವತ್ತ ಗಮನಹರಿಸಿದರು. ಇದನ್ನು ಎಂಎಸ್ ಪುಟ್ಟಣ್ಣನವರ ʼ ಮಾಡಿದ್ದುಣ್ಣೋ ಮಾರಾಯ,ʼ ಮತ್ತು ಗಳಗನಾಥರ ಕಾದಂಬರಿಗಳಲ್ಲಿ ಕಾಣಬಹುದು. ಇತಂಹ ಮಾದರಿಯ ಸಾಹಿತ್ಯದಲ್ಲಿ ಹೇಳಹೊರಟಿರುವುದು   ಹಿಂದು ರಾಷ್ಟ್ರೀಯತೆಯನ್ನು . ಇದಕ್ಕೆ ಅಪವಾದ ಸಾಹಿತ್ಯ ರಚನೆಯನ್ನು ಇದೇ ಕಾಲಘಟ್ಟದಲ್ಲಿ ಕುವೆಂಪು ,ಮಾಸ್ತಿ, ಕಾರಂತರ ಕೃತಿಗಳನ್ನು ಕಾಣಬಹುದು. ಕನ್ನಡದ ಮುಖ್ಯ ಸಂಸ್ಕೃತಿ ಚಿಂತಕರಾದ ಡಿ. ಆರ್. ನಾಗರಾಜ್ ರವರು  ಹೇಳುವಂತೆ ‘ ಭಾರತದಲ್ಲಿ ರಾಷ್ಟ್ರೀಯತೆ ಎಂದರೇನು ಹಿಂದೂ ರಾಷ್ಟ್ರೀಯತೆ ಎಂಬ ನಂಬಿಕೆ’.  ನವೋದಯ   ಕಾಲಘಟ್ಟದ  ಆಲೂರು ವೆಂಕಟರಾಯರ  ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು. ಬ್ರಿಟಿಷರ ಎದುರಿಗೆ ಹಿಂದುತ್ವದ ಪ್ರತಿಪಾದನೆಯನ್ನು ಕನ್ನಡ ರಾಷ್ಟ್ರೀಯತೆ ಎಂದು ಬಿಂಬಿಸುವ ಕೆಲಸ ಪ್ರಾರಂಭದ ದಿನಗಳಲ್ಲಿ ನಡೆಯಿತು. ಪ್ರೊ.  ರಾಜೇಂದ್ರ ಚೆನ್ನಿ ಹೇಳುವಂತೆ ‘  ಸ್ವಾತಂತ್ರ್ಯಪೂರ್ವ ಆಧುನಿಕ ಕನ್ನಡ ಸಾಹಿತ್ಯ ಕೃತಿಗಳಲ್ಲಿ ನೇರವಾಗಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ವಸ್ತುವನ್ನಾಗಿಸಿಕೊಂಡ ಗಟ್ಟಿಯಾದ ಸಾಹಿತ್ಯಕೃತಿಗಳು ಇಲ್ಲ’. ಎಂಬ ಮಾತಿನಲ್ಲಿ ಸತ್ಯವಿದೆ .ಕನ್ನಡದ ಬಹುಮುಖ್ಯ  ಲೇಖಕರಿಗೆ ಅಖಂಡತೆಯನ್ನು ಪ್ರತಿಪಾದಿಸುವ ಉಗ್ರ ರಾಷ್ಟ್ರೀಯತೆಯನ್ನು , ರೂಪಿಸುವ ಬಗೆಗೆ  ಆಸಕ್ತಿ ಇಲ್ಲ, ಬದಲಿಗೆ ಪ್ರಾದೇಶಿಕವಾಗಿ  ತಾವು  ವಾಸ ಮಾಡುವ ಪರಿಸರವನ್ನು ರಾಷ್ಟ್ರೀಯತೆ ಎಂದು ಭಾವಿಸುವ ಪರಿಕಲ್ಪನೆಗಳನ್ನು ರೂಪಿಸಿರುವುದನ್ನು ಕಾಣಬಹುದು. ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳಲ್ಲಿ ದಟ್ಟವಾದ ಪ್ರಾದೇಶಿಕ  ವಸ್ತು ವಿವರಗಳು ,ಆ ಪ್ರದೇಶದ  ವೈಶಿಷ್ಟ್ಯ ಪಾತ್ರಗಳು,   ಮತ್ತು  ಪ್ರಾದೇಶಿಕತೆಯನ್ನು ಉಸಿರಾಡುವ ಕಥೆಗಳು ಇರುವುದನ್ನು ಕಾಣಬಹುದು .ಇದರ ಜೊತೆಗೆ ಗಾಂಧಿವಾದದ ತತ್ವಗಳನ್ನು ಮನುಷ್ಯನ ನೈತಿಕ ನೆಲೆಗಟ್ಟಿನಲ್ಲಿ ರೂಪಿಸಿರುವುದು ಕಾರಂತರ ವೈಶಿಷ್ಟ್ಯವಾಗಿದೆ. ಇದಕ್ಕೆ ಪರ್ಯಾಯವಾಗಿ ಆಲೂರು ವೆಂಕಟರಾಯರು ‘ ಕರ್ನಾಟಕ  ಗತವೈಭವ’  ಮತ್ತು   ’    ಕರ್ನಾಟಕ ವಿಕಾಸ ‘  ಕರ್ನಾಟಕ ವಿಕಾಸ ಕೃತಿಯು ಉದಾರವಾದಿ ನಿಲುವಿನ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮುಂದಿಡುತ್ತಿದೆ. ಭಾಷಿಕರಿಂದ ಎದುರಾಗಬಹುದಾದ ಆತಂಕಗಳಿಗೆ ಸಹನೆಯಿಂದಲೇ ಎದುರಿಸಿ ನಿಲ್ಲುವ ರಾಷ್ಟ್ರೀಯತೆ ಎಂದರೇ ‘  ಸಾತ್ವಿಕ  ಅಹಂಕಾರದ’   ಒಂದು ರೂಪ ಎನ್ನುತ್ತಾರೆ.  ಈ ಸಾತ್ವಿಕ      ನಿಲುವಿನಲ್ಲ            ಎಲ್ಲವನ್ನೂ    ಒಳಗೊಳ್ಳುವ  ಗುಣವಿದೆ. . ರಾಷ್ಟ್ರೀಯತೆಯ ಉಗಮವೇ     ಬಹು   ಸಂಸ್ಕೃತಿಗಳಲ್ಲಿ,ಬಹು ಭಾಷೆಗಳಲ್ಲಿ     ಯಾವುದೋ  ಒಂದನ್ನು ಮುಖ್ಯ ಎಂದು ಕಟ್ಟುವುದರಲ್ಲಿ ಆದರೆ ಇಂತಹ ಆಲೋಚನಾ ಕ್ರಮಕ್ಕಿಂತ    ಭಿನ್ನವಾದ  ಆಯಾಮವನ್ನುಆಲೂರು ವೆಂಕಟರಾಯರು ಪ್ರತಿಪಾದಿಸುತ್ತಿದ್ದಾರೆ.

ನವೋದಯ ಕಾಲಘಟ್ಟದಲ್ಲಿ  ಡಿ.,ವಿ.ಜಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ಮುಂತಾದ ಲೇಖಕರಲ್ಲಿ ರಾಷ್ಟ್ರೀಯ ಆಂದೋಲನದ ಪ್ರಭಾವಗಳನ್ನು ಕಾಣಬಹುದು. ಈ ಕಾರಣದಿಂದಲೇ ರಾಷ್ಟ್ರೀಯ ಆದರ್ಶವನ್ನು, ಮೌಲ್ಯವನ್ನು, ಪ್ರತಿಪಾದಿಸುವ ಸಾಹಿತ್ಯ ಕೃತಿಗಳು ರಚನೆಗೊಂಡವು. ಆದರೆ ಇದಕ್ಕಿಂತ ಭಿನ್ನವಾದ ಮಾದರಿಯನ್ನು ರೂಪಿಸಿದ್ದು ಕುವೆಂಪು ಮತ್ತು ಶಿವರಾಮ ಕಾರಂತರು. ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯಲ್ಲಿ ಮಲೆನಾಡಿನಲ್ಲಿ ನಡೆಯುವ ಕಥೆಯಾದರೂ ರಾಷ್ಟ್ರದಲ್ಲಿನ ರಾಜಕೀಯ ,ಸಾಮಾಜಿಕ ಆಗುಹೋಗುಗಳನ್ನು, ಪಲ್ಲಟಗಳನ್ನು  ದಾಖಲಿಸುತ್ತದೆ. ಹೂವಯ್ಯನ ಆದರ್ಶ ಮತ್ತು ಧ್ಯೇಯಗಳು ಮಲೆನಾಡಿನ ಸಮಾಜಕ್ಕೆ ವಿರುದ್ಧವಾಗಿದ್ದರು ಆ ಕಾಲಘಟ್ಟದಲ್ಲಿ ಜಾತಿ ಅಸಮಾನತೆ ಮೂಢನಂಬಿಕೆಗಳ  , ಬಗ್ಗೆ ಆಕ್ರೋಶ ವಿರುವುದನ್ನು ಕಾಣುತ್ತೇವೆ ಇದಲ್ಲದೆ  ಗಾಂಧಿ ಮತ್ತು ವಿವೇಕಾನಂದರ ಪ್ರಭಾವ ಮಲೆನಾಡಿನ ಪ್ರವೇಶಿಸಿದ ವಿವರಗಳು ಸಿಗುತ್ತದೆ. ಕುವೆಂಪುರವರು  ರಾಷ್ಟ್ರೀಯತೆಯ ಬಗ್ಗೆ ಇದ್ದ ನಿರಾಸಕ್ತಿ ಮಾದರಿ ಎನ್ನಬಹುದಾದರೆ ,ಮತ್ತೊಂದು ಮಾದರಿಯೂ ಇದೆ. ಅಖಂಡ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚನೆ ಮಾಡಿದ “ಜಯ ಭಾರತ ಜನನಿಯ ತನುಜಾತೆ “ ಪದ್ಯ ಏಕಕಾಲಕ್ಕೆ ರಾಷ್ಟ್ರೀಯತೆಯನ್ನು, ಹೇಳುವುದರ ಜೊತೆಗೆ ಕನ್ನಡದ ರಾಷ್ಟ್ರೀಯತೆಯನ್ನು ಪ್ರತಿಪಾದನೆ    ಮಾಡುತ್ತಿದೆ.ಅಖಿಲ    ಭಾರತ ಮಟ್ಟದ  ರಾಷ್ಟ್ರೀಯತೆಯನ್ನುಹೇಳುತ್ತಲೇ , ಆ ರಾಷ್ಟ್ರೀಯತೆಯ  ಕ್ರೌರ್ಯವನ್ನು ,ಹಿಂಸೆಯನ್ನು  , ನಿರಾಕರಣೆ ಮಾಡುವ  ಪ್ರಜ್ಞೆಯನ್ನು ಒಳಗೊಂಡಿದೆ. ಕುವೆಂಪುರವರು ರೂಪಿಸಿದ ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಯು  ವಿಶ್ವಾತ್ಮಕ ಮೌಲ್ಯವನ್ನು, ಅನಿಕೇತನ ಪ್ರಜ್ಞೆಯನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ಎಲ್ಲ ಬಗೆಯ ಗಡಿಗಳ ಮಿತಿಯನ್ನು ಮೀರಿ ಬೆಳೆಯಬೇಕಾದ ವಿಶ್ವಮಾನವ ಪರಿಕಲ್ಪನೆಯನ್ನು ಕುವೆಂಪು ಪ್ರತಿಪಾದಿಸುತ್ತಾರೆ. ಇದು ಆ  ಕಾಲದಲ್ಲಿ ಪ್ರತಿಪಾದನೆಯಾಗಿದ್ದ  ಉಗ್ರ  ರಾಷ್ಟ್ರೀಯತೆಯನ್ನು ವಿರೋಧಿಸುವ  ನೆಲೆಯು ಹೌದು .ಬ್ರಿಟಿಷ್ ರಾಷ್ಟ್ರೀಯ ಪ್ರಭುತ್ವದ ದಮನಕಾರಿ ನಿಲುವನ್ನು ವಿರೋಧಿಸಿದ ದ.ರಾ ಬೇಂದ್ರೆಯವರ ʼನರಬಲಿʼ ಮತ್ತು ʼಮಕ್ಕಳಿವರೇನಮ್ಮʼ ಪದ್ಯಗಳು  ರಾಷ್ಟ್ರೀಯತೆಯನ್ನು ನಿರಾಕರಣೆ  ಮಾಡಿರುವುದನ್ನು ಕಾಣುತ್ತೇವೆ.

 ಕನ್ನಡ ರಾಷ್ಟ್ರೀಯತೆಯ ಮಾದರಿಗಳಲ್ಲಿ ಮುಖ್ಯವಾಗಿ  ಮಾದರಿಗಳನ್ನು ಡಿ ಆರ್ ನಾಗರಾಜ್ ರವರು ಗುರುತಿಸುತ್ತಾರೆ. ಒಂದು ಕರ್ನಾಟಕವನ್ನೇ  ಆಯುಧವಾಗಿ ಟ್ಟುಕೊಂಡು  ಅದೇ ಏಕಮಾತ್ರ ವಾಸ್ತವ ಎಂದು ನೋಡುವ ಆತಂಕ ಕೇಂದ್ರಿತ ರಾಷ್ಟ್ರೀಯತೆ.  ಎರಡನೆಯದು  ಸಾಂಸ್ಕೃತಿಕ ವಾಸ್ತವವನ್ನು ನಿರಾಕರಿಸುವ ಆಡಳಿತಾತ್ಮಕ ಅನುಕೂಲಕರವಾದ ಘಟಕ.  ಮೂರನೆಯದು ಕರ್ನಾಟಕ ಬಹುಮುಖಿ ವಾಸ್ತವವೆಂಬ ನಿಲುವು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೂರನೆಯ ಮಾದರಿಯ ನಿಲುವಿನಲ್ಲಿ ಶ್ರೇಷ್ಠವಾದ ಸಾಹಿತ್ಯ ರಚನೆಗೊಂಡಿದೆ. ಬಹುಮುಖಿಯಾದ ಜೀವನಕ್ರಮಗಳನ್ನು ,ಜೀವನದರ್ಶನಗಳನ್ನು, ಭಾಷಾ ವೈವಿಧ್ಯತೆಯನ್ನು ,ಭೌಗೋಳಿಕತೆಯನ್ನು ಒಳಗೊಂಡಿರುವ ಭಾರತದ ರಾಷ್ಟ್ರೀಯತೆಯ ಅಡಿಯಲ್ಲಿ ಕರ್ನಾಟಕವೆಂಬ ರಾಷ್ಟ್ರೀಯತೆಯು ರೂಪುಗೊಂಡಿದೆ .ಈ ಹಿನ್ನೆಲೆಯಲ್ಲಿ ಕನ್ನಡ   ಪ್ರಾದೇಶಿಕತೆಯ ಕೂಡ  ಉಪರಾಷ್ಟ್ರೀಯತೆ .ಡಾ. ಜಿ ಎಸ್ ಶಿವರುದ್ರಪ್ಪಅಭಿಪ್ರಾಯಪಡುತ್ತಾರೆ. ಕನ್ನಡದ ಉಪ ರಾಷ್ಟ್ರೀಯತೆಯ ಪ್ರಜ್ಞೆ ವಿಶಿಷ್ಟ ವಾಗುವುದರ ಮೂಲಕವೇ ಅನಿಕೇತನ ಪ್ರಜ್ಞೆಯನ್ನು ತಲುಪಲು ಸಾಧ್ಯ .ಆದರೆ ವರ್ತಮಾನದಲ್ಲಿ ರಾಷ್ಟ್ರೀಯತೆ ಎಂಬುದು ಹಿಂದುತ್ವ ಗಿರುವುದೇ ದೊಡ್ಡ ದುರಂತ.. ಇದರಿಂದ ಹೊರಬರುವ ಸಾಧ್ಯತೆಗಳನ್ನು ಮಾದರಿಗಳನ್ನು ಕನ್ನಡ ಸಾಹಿತ್ಯವು ಕೊಟ್ಟಿದೆ .  ಅಂತಹ ಮಾದರಿಯಲ್ಲೇ ಸಾಗಬೇಕಾದ  ರೂಪಿಸಿಕೊಳ್ಳಬೇಕಾದ ರಾಷ್ಟ್ರೀಯತೆಯ ಪರಿಕಲ್ಪನೆಯಿದೆ.

ಪರಾಮರ್ಶನ ಗಂಥಗಳು

  1. ಡಾ. ಬಂಜಗೆರೆ ಜಯಪ್ರಕಾಶ್-ಕನ್ನಡ ರಾಷ್ಟ್ರೀಯತೆ -2000-ಕ್ರಾಂತಿ ಸಿರಿ ಪ್ರಕಾಶನ ಬೆಂಗಳೂರು
  2. ಡಾ. ಎಸ್.  ಚಂದ್ರಶೇಖರ್ -ವಸಾಹತುಕಾಲೀನ  ಕರ್ನಾಟಕ-2006- ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  3. ಡಾ.  ಡಿ. ಆರ್.   ನಾಗರಾಜ್.-ಸಾಹಿತ್ಯ ಕಥನ-2006-ಅಕ್ಷರ ಪ್ರಕಾಶನ ,ಹೆಗ್ಗೋಡು, ಸಾಗರ
  4. ಪ್ರೊ.  ರಾಜೇಂದ್ರ ಚೆನ್ನಿ-ಅಮೂರ್ತತೆ ಮತ್ತು ಪರಿಸರ – 2003- ಅಭಿನವ ಪ್ರಕಾಶನ ಬೆಂಗಳೂರು
  5. ಡಾ. ರಹಮತ್  ತರೀಕೆರೆ ( ಸಂ)- ಕವಿರಾಜಮಾರ್ಗ; ಸಾಂಸ್ಕೃತಿಕ   ಮುಖಾಮುಖಿ -2008- ಕನ್ನಡ ವಿಶ್ವವಿದ್ಯಾಲಯ.  ಹಂಪಿ.


Sign In  /  Register

Most Downloaded Articles

Acquire employability in Indian Sinario

Department of Mathematics @ GFGC Tumkur

The Pink Sonnet

ಸುಕೌಶಳ ಸ್ವಾಮಿಯ ಕಥೆ : ಸ್ತ್ರೀಪಾತ್ರ ಚಿತ್ರಣ

ಕವನಗಳು : ನಿಸರ್ಗವೇ ಸ್ವರ್ಗ -  ಹೂಮನದ ಕೋಪ




© 2018. Tumbe International Journals . All Rights Reserved. Website Designed by ubiJournal