ಪರಿವರ್ತನೆಯ ಹಾದಿಯಲ್ಲಿ ಭೋವಿ ಸಮುದಾಯ ಎದುರಿಸುತ್ತಿರುವ ಸವಾಲುಗಳು
ವೆಂಕಟೇಶ ಬಿ.
ಪಿಹೆಚ್‍ಡಿ ಸಂಶೋಧನಾ ವಿದ್ಯಾರ್ಥಿ,
ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ ಜ್ಞಾನಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ.
Email :venkatesh.dsoc@gmail.com
ಡಾ ಪೂರ್ವಾಚಾರ್ ಎಂ.
ಸಹ ಪ್ರಾಧ್ಯಾಪಕರು,
ಸಮಾಜಶಾಸ್ತ್ರ ಅಧ್ಯಯನ ವಿಭಾಗ,
ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ.
ಪ್ರಸ್ತಾವನೆ
ಭಾರತದಲ್ಲಿ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿರುವ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಒಂದಾದ ಭೋವಿ ಸಮುದಾಯವು ಪ್ರಗತಿಯ ಹಾದಿಯಲ್ಲಿ ಅನೇಕ ರೀತಿಯ ಅಡ್ಡಿ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತುತ ಅಧ್ಯಯನದಲ್ಲಿ ಸಮುದಾಯದ ಭಾಷೆ, ಆಚರಣೆ, ಸಂಪ್ರದಾಯಗಳು, ವೃತ್ತಿಗಳು, ಉಡುಗೆ ತೊಡುಗೆ, ಸಂಸ್ಕೃತಿಯಲ್ಲಿನ ಪರಿವರ್ತನೆಗಳು ಹಾಗೂ ಸವಾಲುಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಈ ಸಮುದಾಯದಲ್ಲಿ ಕಲ್ಲೊಡ್ಡರು (ಕಲ್ಲು ಕುಟಿಗ) ಮಣ್ಣೋಡ್ಡರು, ಗಿರಣಿವಡ್ಡರು, ಬಂಡೆವಡ್ಡರು ಇತರೆ ಪಂಗಡಗಳು ಕಂಡುಬರುತ್ತವೆ.
ಕೀಲಿ ಪದಗಳು: ಸಂಪ್ರದಾಯ, ಪರಿಶಿಷ್ಟ ಜಾತಿ, ಭೋವಿ ಸಮುದಾಯ, ಕಲ್ಲೊಡ್ಡರು, ಮಣ್ಣೋಡ್ಡರು, ಗಿರಣಿವಡ್ಡರು, ಬಂಡೆವಡ್ಡರು
ಪಿಠೀಕೆ
ಭೋವಿ ಸಮುದಾಯದ ಜನರು ಅತಿ ಹೆಚ್ಚಾಗಿ ಕಂಡು ಬರುವುದು ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಹಾಗಾಗಿ ಈ ಸಮುದಾಯವರು ವಲಸೆಧಾರಿತ ಕಾರ್ಮಿಕರು ಮತ್ತು ಅಲೆಮಾರಿ ಬುಡಕಟ್ಟು ಎಂದು ಗುರಿತಿಸಲ್ಪಡುತ್ತವೆ. ಮಹಾರಾಷ್ಟದಲ್ಲಿ ಡಿಪ್ರೆಸ್ಡ್ ಕ್ಲಾಸಸ್, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 1976 ರ ಷೆಡ್ಯೂಲ್ಡ್ ಕಾಸ್ಟ್ ಮತ್ತು ಷೆಡ್ಯೂಲ್ಡ್ ಟ್ರೈಬ್ ಮೋಡಿಫಿಕೇಷನ್ ಆರ್ಡರ್‍ನಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೆರ್ಪಡೆ ಮಾಡಲಾಯಿತು. ಕರ್ನಾಟಕದ ಬೆಳಗಾವಿ, ಬಿಜಾಪುರ, ಧಾರವಾಡ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಗುಲ್ಬರ್ಗಾ, ರಾಯಚೂರು, ಮತ್ತು ಬಿದರ್ ಜಿಲ್ಲೆ ಮತ್ತು ಕೊಳ್ಳೆಗಾಲ ತಾಲ್ಲೂಕ್, ಮೈಸೂರು ಜಿಲ್ಲೆಯಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಭೋವಿ ಸಮುದಾಯದ ಜನ ಸಂಖ್ಯೆ 4,58.560 ಇದೆ. (Rao M.S.A(2004) “ Social Movements in India” Manohar publishers. New Deli. P-172) ಇದೆ.
ಅಧ್ಯಯನ ವಿಷಯದ ಪರಿಕಲ್ಪನೆ
ಪ್ರಸ್ತುತ ಅಧ್ಯಯನವು “ಪರಿವರ್ತನೆಯ ಹಾದಿಯಲ್ಲಿ ಭೋವಿ ಸಮುದಾಯ ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಕುರಿತಾಗಿದ್ದು, ಭಾಷೆ, ಆಹಾರ ಪದ್ಧತಿ, ಉಡುಗೆ ತೊಡಿಗೆ, ಕುಲ ಕಸುಬು, ಆಚಾರ, ವಿಚಾರ, ರೂಢಿ ಸಂಪ್ರದಾಯಗಳಲ್ಲಿನ ಪರಿವರ್ತನೆಗಳ ಜೊತೆಗೆ ಈ ಸಮುದಾಯದ ಸವಾಲುಗಳಾದ ಅಲೆಮಾರಿ ಜೀವನ, ವಲಸೆ, ಕುಲಕಸುಬುಗಳಾದ ಕಲ್ಲು ಮಣ್ಣಿನ ಕೆಲಸಗಳಾದ ಒಳಕಲ್ಲು, ಬೀಸು ಕಲ್ಲು, ಜಡಪದ ಕಲ್ಲು, ಗಂಧ ತೇಯುವ ಕಲ್ಲಿನ ತಯಾರಿಕೆ ಹಾಗೂ ಮಾರಾಟ ಮತ್ತು ಒಡ್ಡುಗಳು, ಕೆರೆ, ಬಾವಿಗಳ ನಿರ್ಮಾಣದಂತಹ ಕೆಲಸಗಳ ಮೇಲೆ ಅಧುನಿಕರಣ ಪ್ರಭಾವದಿಂದಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ.
ಸಾಮಾಜಿಕ ಪರಿವರ್ತನೆಯ ಅರ್ಥ: ಸಾಮಾನ್ಯವಾಗಿ ಸಾಮಾಜಿಕ ಅಂಶಗಳಲ್ಲಿ ಆಗುವ ಪರಿವರ್ತನೆಗೆ ಸಾಮಾಜಿಕ ಪರಿವರ್ತನೆ ಎನ್ನುತ್ತೇವೆ.
ವ್ಯಾಖ್ಯೆಗಳು:
ಕಿಂಗ್ಸ್ ಲೆ ಡೇವಿಸ್ :
ರವರ ಪ್ರಕಾರ “ಸಾಮಾಜಿಕ ಪರಿವರ್ತನೆ ಎಂದರೆ ಸಾಮಾಜಿಕ ರಚನೆ ಮತ್ತು ಕಾರ್ಯಗಳಲ್ಲಿ ಆದ ಬದಲಾವಣೆಯನ್ನು ಸಾಮಾಜಿಕ ಪರಿವರ್ತನೆ ಎನ್ನುತ್ತಾರೆ.
ಸ್ಯಾಮುಯಲ್ ಕೊಯನಿಗ್:
ರವರ ಪ್ರಕಾರ “ಜನರ ಜೀವನದ ನಮೂನೆಗಳಲ್ಲಿ ಸಂಭವಿಸುವ ಮಾರ್ಪಡುಗಳನ್ನು ಸಾಮಾಜಿಕ ಪರಿವರ್ತನೆ ಎನ್ನುತ್ತಾರೆ.
ಅಧುನಿಕತೆಯ ಸ್ಪರ್ಶತೆಯಿಂದ ಉಂಟಾದ ಪರಿವರ್ತನೆಗಳು
ಕುಲ ವೃತ್ತಿಗಳಲ್ಲಿ ಪರಿವರ್ತನೆ: ನಿರಂತರ ಅಲೆಮಾರಿಗಳಾಗಿದ್ದ ಭೋವಿ ಸಮುದಾಯದ ಜನರು ಪ್ರಸ್ತುತ ದಿನಗಳಲ್ಲಿ ಒಂದೆಡೆ ನೆಲೆನಿಲ್ಲುವಂತಾಗಿದೆ. ಈ ಸಮುದಾಯದ ಕುಲ ಕಸುಬುಗಳಾದ ಕಲ್ಲು ಮಣ್ಣಿನ ಕೆಲಸ, ಕೆರೆ, ಬಾವಿ, ಒಡ್ಡುಗಳು, ಹಾಗೂ ಧಾನ್ಯಗಳ ಸಂಗ್ರಹಣೆಯ ನೆಲ ಸುರಂಗಗಳು ನಿರ್ಮಾಣ, ಜೊತೆಗೆ ಮೇನೆ ಹೊರುವ ಪದ್ಧತಿ, ವಿಶಿಷ್ಠವಾದ ಅರಗು (ಅಂಟು) ಅರಗು ತಯಾರಿಸುವ ವೃತ್ತಿಯು ಕೈಗಾರಿಕರಣ, ಜಾಗತಿಕರಣದ ಪ್ರಭಾವದಿಂದಾಗಿ ಪರಿವರ್ತನೆಯಾಗಿದೆ. ಶಿಕ್ಷರಾಗಿ, ಪೋಲಿಸ್ ಆಧಿಕಾರಿಗಳಾಗಿ, ಕಾಂಟ್ರಕ್ಟರ್‍ಗಳಾಗಿ ಮೇಸ್ತ್ರಿಗಳಾಗಿ ಇತರೆ ಬ್ಯಾಂಕ್ ಹುದ್ದೆಗಳ ಜೊತೆಗೆ ವ್ಯಾಪಾರ ಉದ್ಧಿಮೆಗಳನ್ನು ನಡೆಸುತ್ತಿದ್ದಾರೆ.
ವೇಷಭೂಷಣದಲ್ಲಿ ಪರಿವರ್ತನೆ: ಪ್ರತಿಯೊಂದು ಸಮುದಾಯದ ಜನರಿಗೂ ಅವರದೇ ಅದ ಸಂಸ್ಕೃತಿಯನ್ನು ಬಿಂಬಿಸುವಂತಹ ವೇಷಭೂಷಣವಿರುತ್ತದೆ. ಸಮುದಾಯವು ವಾಸಮಾಡುವ ಹವಮಾನಕ್ಕೆ ಹಾಗೂ ಆರ್ಥಿಕ ಸ್ಥಿತಿಗೆ ತಕ್ಕಂತೆ, ವೇಷಭೂಷಣಗಳು ಇರುತ್ತವೆ. ಮಹಿಳೆಯರು ರವಿಕೆಯನ್ನು ತೊಡುತ್ತಿರಲಿಲ್ಲ, (ಅರ್ಜುನ ಯ. ಗೊಳಸಂಗಿ,(2000) “ದಲಿತರ ಬದುಕು ಮತ್ತು ಸಂಸ್ಕೃತಿ” ವಿಮೋಚನಾ ಪ್ರಕಾಶನ, ಬೆಳಗಾವಿ,ಪುಟ ಸಂಖ್ಯೆ 256) ಸೀರೆಯನ್ನು ಕಚ್ಚೆಯಾಗಿ ಉಡುತ್ತಿದ್ದರು, ಇತ್ತಿಚ್ಛಿಗೆ ಅಧುನಿಕರಣದಿಂದಾಗಿ ಪರಿವರ್ತನೆಯಾಗಿದೆ. ಮಹಿಳೆಯರ ಆಭರಣಗಳಾದ ಮೂಗುತಿ, ಓಲೆ, ಬುಗುಡಿ, ಕಿವಿ ಸರ, ಕಾಲ್ಮುರಿ, ಸಂಪ್ರದಾಯಿಕ ಬಳೆಗಳ ಬಳಕೆಯಲ್ಲಿ ಪರಿವರ್ತನೆಯಾಗಿದೆ. ಹಾಗೆ ಪುರುಷರು ಹೆಗಲ ಮೇಲೆ ರುಮಾಲು, ಕಚ್ಛೆ ಪಂಚೆ ಹಾಗೂ ಅರೆಬೆತ್ತಲೆ ಬಟ್ಟೆಯಲ್ಲಿ ಕೆಲಸದಲ್ಲಿ ತೊಡಗುತ್ತಿದ್ದರು. ಅದರೆ ಅಧನಿಕರಣದ ಸನ್ನಿವೇಶದಲ್ಲಿ ಪ್ಯಾಷನ್ ಬಟ್ಟೆಗಳಾದ ಟಿಶರ್ಟ್, ಪ್ಯಾಂಟ್, ಚೂಡಿದಾರ್, ಸೌಂಧರ್ಯ ವರ್ಧಕಗಳು, ಇತರೆವುಗಳನ್ನು ಬಳಕೆ ಮಾಡುತ್ತಿದ್ದಾರೆ.
ಶಿಕ್ಷಣದಲ್ಲಿ ಪರಿವರ್ತನೆ: ಭೋವಿ ಸಮುದಾಯದ ಜನರು ತಲೆಮಾರುಗಳ ಕಾಲದಿಂದ ಕುಲ ಕಸುಬುಗಳನ್ನು ಅನುಸರಿಸುತ್ತ ಬಂದಿದ್ದರು. ಇಚ್ಚೆಗೆ ಅಳಿವಿನಂಚಿನ ಕುಲ ವೃತ್ತಿಗಳಿಂದಾಗಿ ಈ ಸಮುದಾಯದ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ, ಕಾರಣ ಸರ್ಕಾರದ ಶೈಕ್ಷಣಿಕ ಯೋಜನೆಗಳಾದ ಪರಿಶಿಷ್ಠ ಜಾತಿಯ ಮೀಸಲಾತಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಿಸಿಯೂಟ ಕಾರ್ಯಕ್ರಮಗಳು, ವಿದ್ಯಾರ್ಥಿ ಯೋಜನೆ ಮತ್ತು ಉಚಿತ ವಿದ್ಯಾರ್ಥಿ ನಿಲಯಗಳ ಪ್ರವೇಶ ಇನ್ನಿತರ ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಂಡು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪರಿವರ್ತನೆಯಾಗುತ್ತಿರುವುದನ್ನು ನೋಡಬಹುದು.
ಆಹಾರ ಪದ್ಧತಿಯಲ್ಲಿ ಪರಿವರ್ತನೆ: ಭೋವಿ ಸಮುದಾಯದವರು ಹೆಚ್ಚು ಶ್ರಮದಾಯಕ ಕೆಲಸಗಳಲ್ಲಿ ತೊಡಗುವುದರಿಂದ ಗಟ್ಟಿಮುಟ್ಟಿನ ಶರೀರವನ್ನು ಹೊಂದಲು ತಮಗೆ ಹೊಂದಿಕೆಯಾಗುವಂತಹ ಮಾಂಸಹಾರ ಮತ್ತು ಸಸ್ಯಹಾರವನ್ನು ಸೇವಿಸುತ್ತಾರೆ. ಗೆಡ್ಡೆ, ಗೆಣಸು, ಸೊಪ್ಪು, ಸಿರಿಧಾನ್ಯಗಳಾದ ಸಜ್ಜೆ, ಕೊರ್ಲೆ, ಊದಲು, ನವಣೆ, ಸಮೆಯನ್ನು ಸೇವಿಸುತ್ತಿದ್ದರು. ರಾಗಿ, ಜೋಳ, ಗೋಳಿ ಪಲ್ಯ, ತೊಂಡಿಕಾಯಿ ಪಲ್ಯ, ತೊಟ್ಟಿಕಾಯಿ, ಕರಚಿಕಾಯಿ ಪಲ್ಯ, ಅರಿವೆಸೊಪ್ಪು, ಗೋಣಿಸೊಪ್ಪು, ನುಗ್ಗೆಸೊಪ್ಪು, ಕೋಳಿಕತ್ತಿನ ಸೊಪ್ಪು, ಸೀಗೆಸೊಪ್ಪು ಆಹಾರವಾಗಿ ಬಳಕೆಮಾಡುತ್ತಾರೆ. ಸರಳ ಆಹಾರವಾದ ರಾಗಿ ಮುದ್ದೆ, ರೊಟ್ಟಿ, ತಿಳಿ ಸಾರು, ಮೆಣಸಿನಕಾಯಿ ಗೊಜ್ಜು, ಕಾಳುಗಳನ್ನು ಮತ್ತು ಹಬ್ಬ-ಹರಿದಿನದಂದು ಸಿಹಿ ತಿನಿಸುಗಳಾದ ಹೋಳಿಗೆ, ಹುಗ್ಗಿ, ಮಾಲ್ದಿ, ತೋಗೆ ಎಂಬ ಸಿಹಿ ತಿಂಡಿಗಳನ್ನು ಕೂಡ ತಯಾರಿಸುತ್ತಾರೆ. ಇನ್ನು ಮಾಂಸಹಾರಕ್ಕೆ ಬಂದರೆ ಕಾಡುಕೋಳಿ, ತತ್ತಿ (ಮೊಟ್ಟೆ), ಬುರ್ಲಿ, ಬಳುವ, ಉಡಾ, ಕುರಿ, ಮೇಕೆ, ಕೌಜುಗ, ಅಡವಿ ಇಲಿ, ಮೊಲ, ಏಡಿ, ಪಾರಿವಾಳವನ್ನು ಸೇವನೆ ಮಾಡುತ್ತಾರೆ. ಮಾಂಸಹಾರವನ್ನು ಎರಡು-ಮೂರು ದಿನಗಳವರೆಗೆ ಮುರಗಿ ಇಡುವ ಪದ್ಧತಿಯು ಕೂಡ ಈ ಸಮುದಾಯದಲ್ಲಿದೆ. ಇತ್ತಿಚ್ಚೀನ ದಿನಗಳಲ್ಲಿ ಇವರ ಆಹಾರ ಪದ್ಧತಿಯಲ್ಲಿ ಪರಿವರ್ತನೆಯಾಗಿದೆ. ಸಿದ್ದಪಡಿಸಿದ ಆಹಾರಗಳು ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಸಿಗುವಂತಹ ಆಹಾರ ಪದ್ಧತಿಯ ಕಡೆ ಮೋರೆ ಹೋಗುತ್ತಿದ್ದಾರೆ.
ವಿವಾಹ ಪದ್ಧತಿಯಲ್ಲಿ ಪರಿವರ್ತನೆ: ಸಾಮಾಜಿಕ ಸ್ತರ ವ್ಯವಸ್ಥೆಯನ್ನು ನೋಡಿದಾಗ ಅನೇಕ ರೀತಿಯ ಪರಿವರ್ತನೆಗಳನ್ನು ನಾವು ಜಾತಿ, ಧರ್ಮ, ಭಾಷೆ, ರಾಜಕೀಯ, ಶೈಕ್ಷಣಿಕ ಹಾಗೆಯೇ ವಿವಾಹ ಪದ್ಧತಿಯಲ್ಲಿಯೂ ನೋಡುತ್ತೇವೆ. ಆಧುನೀಕರಣ, ಕೈಗಾರಿಕೀಕರಣ, ನಗರೀಕರಣದ ಪ್ರಭಾವದಿಂದಾಗಿ ಭೋವಿ ಸಮುದಾಯದ ವಿವಾಹ ಪದ್ಧತಿಯಲ್ಲಿ ಬದಲಾವಣೆಗಳಾಗಿವೆ. ಈ ಸಮುದಾಯದ ವಿವಾಹದ ಶಾಸ್ತ್ರಗಳಲ್ಲಿ ಅಲ್ಪಮಟ್ಟಿನ ಬದಲಾವಣೆ ಕಂಡುಬಂದರೂ ಕೂಡ ಹೊರ ಬಾಂಧವ್ಯ ವಿವಾಹ ಪದ್ಧತಿಗಳಾದ ಅಂತರ್ ಜಾತಿ ವಿವಾಹ, ಪ್ರೇಮ ವಿವಾಹ ಹಾಗೂ ವಧು-ವರರ ಆಯ್ಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್‍ನೆಟ್ ಭವಿಷ್ಯ, ಫೇಸ್‍ಬುಕ್, ವ್ಯಾಟ್ಸ್‍ಅಫ್, ಶಾದಿ ಡಾಟ್ ಕಾಂ, ಮ್ಯಾಟ್ರಿಮೋನಿ ಹಾಗೂ ಭೋವಿ ವಧು-ವರರ ಅನ್ವೇಷಣಾ ಕೇಂದ್ರಗಳು, ಭೋವಿ ವಿವಾಹ ವೇದಿಕೆ, ವಡ್ಡರ ವಿವಾಹ ವೇದಿಕೆಗಳು, ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಮೂಲಕ ವಿವಾಹಗಳು ನೆರವೇರುತ್ತಿವೆ. ಹಾಗಾಗಿ ಈ ಸಮುದಾಯದಲ್ಲಿ ವಿವಾಹಗಳು ಶಾಸ್ತ್ರೋಕ್ತವಾಗಿ ವಧುವಿನ ಅಥವಾ ವರನ ಮನೆಯ ಮುಂದೆ ನಡೆಯುತ್ತಿತ್ತು.
ಇತ್ತೀಚ್ಛಿಗೆ ಕಲ್ಯಾಣ ಮಂಟಪ, ಜಾತಿ, ಧರ್ಮಾಧಾರಿತ ಸಮುದಾಯಭವನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ದೇವಸ್ಥಾನದ ಸಭಾ ಭವನ, ಚರ್ಚುಗಳು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ನಡೆಯುತ್ತಿವೆ. ಮತ್ತು ವಿವಾಹದ ಸಾಂಪ್ರದಾಯಿಕ ಹಾಡುಗಾರಿಕೆ ಕಣ್ಮರೆಯಾಗಿ ಆಧುನಿಕ ತಂತ್ರಜ್ಞಾನದ ಸ್ಪರ್ಶತೆಯನ್ನು ಪಡೆದುಕೊಂಡಿದೆ ಮತ್ತು ವಧು-ವರರ ಉಡುಗೆ-ತೊಡುಗೆ, ವಿವಾಹದ ಊಟೋಪಚಾರಗಳಲ್ಲಿ ಬದಲಾವಣೆಯಾಗುತ್ತಿದೆ. ಈ ಸಮುದಾಯದಲ್ಲಿ ಇಂದು ವಧು-ವರರ ಒಪ್ಪಿಗೆಯು ಗಂಡು ಮತ್ತು ಹೆಣ್ಣಿನ ಕಡೆಯವರಿಂದಲೂ ಬರಬಹುದು. ಹಾಗಾಗಿ ಇಂದಿನ ವಿವಾಹ ವ್ಯವಸ್ಥೆಯು ಸರ್ಕಾರಿ ಉದ್ಯೋಗ, ವ್ಯವಹಾರ, ಆಸ್ತಿ-ಪಾಸ್ತಿ, ಸಾಮಾಜಿಕ ಸ್ಥಾನಮಾನ, ಮನೆತನದ ಗೌರವ, ಉತ್ತಮವಾದ ಆರೋಗ್ಯ ಹಾಗೂ ಸೌಂದರ್ಯತೆಯನ್ನು ನೋಡಿ ವಿವಾಹದ ಪ್ರಸ್ತಾಪಗಳಾಗುತ್ತಿರುವುದು ಕಂಡುಬರುತ್ತಿದೆ.
ಭೋವಿ ಸಮುದಾಯದ ಪರಿಕಲ್ಪನೆ ಅರ್ಥ ಮತ್ತು ಪದನಿಷ್ಪತ್ತಿ
ಭೋವಿ ಎಂಬ ಪದವು ಈ ಸಮುದಾಯದ ಜನರು ಬಾವಿಗಳ ನಿರ್ಮಾಣ ಮಾಡುವುದರಿಂದ ಭೋವಿ ಎಂದು ಸಮುದಾಯವನ್ನು ಗುರಿತಿಸಲಾಗುತ್ತದೆ. ಹಾಗೂ ಕೆರೆಗೆ ಒಡ್ಡುಗಳ ನಿರ್ಮಾಣ ಮಾಡುವುದರಿಂದ ಒಡ್ಡರು ಎಂದು ಕರೆಯುತ್ತರೆ. ವಡ್ಡರು ಎಂದರೆ ಒಡ್ಡುಗಳ ನಿರ್ಮಾಣ ಹಾಗೂ ಮೇಸ್ತ್ರಿಗಳು ಎಂಬ ಅರ್ಥಕೊಡುತ್ತದೆ. ಓಡಿಸ್ಸಾದಲ್ಲಿ ಓದ್ರಾ/ಓಡಿಸ್ಸಾ ಮೂಲದಿಂದ ಬಂದವರು ಎಂದು ಗುರಿತಿಸಲಾಗುತ್ತದೆ. ಕಿಟಲ್ ಶಬ್ಧ ಕೋಶದ ಪ್ರಕಾರ ‘ಒಡ್ಡೆವಾಣು’ ಎಂಬ ಅರ್ಥ ದೊರಕುತ್ತದೆ. ಇದರ ಅರ್ಥ ಕೆರೆಕೊರೆಯುವ ಆಳುಗಳೆಂದು ಅರ್ಥಕೊಡುತ್ತದೆ. ವೃತ್ತಿಯಾಧಾರಿತವಾಗಿಯು ಗುರಿತಿಸುತ್ತಾರೆ. ಬಂಡಿಗಳಲ್ಲಿ ಕಲ್ಲು ಮಣ್ಣು ಸಾಗಿಸುವ ಕೆಲಸಗಳನ್ನು ಮಾಡುವುದರಿಂದ ಬಂಡಿ ವಡ್ಡರು, ಹಾಗು ಕಲ್ಲಿನ ಕೆಲಸಗಳನ್ನು ಮಾಡುವುದರಿಂದ ಕಲ್ಲುವಡ್ಡರು, ಮಣ್ಣಿನ ಕೆಲಸಗಳನ್ನು ಮಾಡುವುದರಿಂದ ಮಣ್ಣು ವಡ್ಡರು, ಇಗೆ ವೃತ್ತಿಯಾಧಾರಿತವಾಗಿ ಭೋವಿ ಸಮುದಾಯದಲ್ಲಿನ ವಿಭಿನ್ನ ಪಂಗಡಗಳನ್ನು ನೋಡಬಹುದು. ಓಡಿಸ್ಸಾದಲ್ಲಿ ಇವರಿಗೆ ಒಡ್ಡ ಅಥವಾ ಒಡ್ಡಿ ಎಂದು ಕರೆದರೆ, ತಮಿಳುನಾಡಿನಲ್ಲಿ ಬೋಯಿಗಳೆಂದು ಗುರುತಿಸುತ್ತಾರೆ. ಆಂಧ್ರ ಪ್ರದೇಶದಲ್ಲಿ ಒಡ್ಡಲು ಅಥವಾ ಒಡಿಯರಾಜು ಎಂದು ಕರೆಯುತ್ತಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಮಸ್ತರಿ (ಮಾಸ್ತರಿ) ಎಂತಲೂ ಕರ್ನಾಟಕದಲ್ಲಿ ಭೋವಿ ಎಂದೂ ಕರೆಯುತ್ತಾರೆ.
ಭೋವಿ ಸಮುದಾಯ: ಭೋವಿ ಸಮುದಾಯವನ್ನು ವಡ್ಡ, ತುಡುಗವಡ್ಡರ್, ವೂಡ್ಡರ್, ಗಿರಣಿವಡ್ಡ, ಒಡ್ಡ, ಹಾಗೂ ಒಡ್ಡೆ ಇತರೆ ಹೆಸರಿನಿಂದಲೂ ಕರೆಯುತ್ತಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಸಮುದಾಯವನ್ನು ಭೋವಿ ಎನ್ನುವ ಪದ ‘ಬಾವಿ’ ಎನ್ನುವ ಪದದ ಅರ್ಥವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ಜನ ಸಮುದಾಯ ಸಂಪುಟ,ಕರ್ನಾಟಕ ರಾಜ್ಯ ಕೋಶ-4. ಕನ್ನಡ ವಿಶ್ವವಿದ್ಯಾನಿಲಯ.ಹಂಪಿ. ಪುಟ ಸಂಖ್ಯೆ 86-87) **(1944 ರಲ್ಲಿ ಭೋವಿ ಸಮುದಾಯದ ಬೃಹತ್ ಸಮಾವೇಶ ದಾವಣಗೆರೆಯಲ್ಲಿ ನಡೆಯಿತು ಇದರ ಉದ್ದೇಶ ಜಾತಿಯ ಹೆಸರನ್ನು ಬದಲಾವಣೆ ಮಾಡುವುದಾಗಿತ್ತು. ಅನೇಕ ಚರ್ಚೆಗಳು ಮುಖಂಡರುಗಳ ನೆತೃತ್ವದಲ್ಲಿ ನಡೆದವು. ಒಡೆಯರಾಜು, ರಾಜು, ಇನ್ನೀತರ ಹೆಸರುಗಳಿಂದ ಈ ಸಮುದಾಯವನ್ನು ಗುರಿತಿಸಬೇಕು ಎಂದು ವಾದ ವಿವಾದಗಳು ನಡೆದವು ನಂತರ ಸಭೆಯಲ್ಲಿ ಸೇರಿದ್ಧ ಬಹು ಸಂಖ್ಯಾಂತರು ಭೋವಿ ಸಮುದಾಯದ ಹೆಸರೆ ಸೂಕ್ತ ಎಂಬುವುದನ್ನು ಸೂಚಿಸಿದರು ಕಾರಣ ಮಹಾ ಭಾರತದಲ್ಲಿ ಬೋಯಸ್ ಮತ್ತು ಭೋವಿಸ್ ಪದಗಳು ರಾಜ ಮತ್ತು ರಾಣಿಯರು ಎಂಬ ಅರ್ಥವನ್ನು ಕೊಡುತ್ತಿದ್ದು, ಹಾಗೂ ಈ ಸಮುದಾಯದವರು ಬಾವಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರಿಂದ ಭೋವಿ ಎಂಬ ಪದದ ಬಳಕೆ ಸೂಕ್ತವಾಗಿದೆ ಎಂದು ತಿರ್ಮಾನಿಸಲಾಯಿತು.(Rao M.S.A(2004) “ Social Movements in India” Manohar publishers. New Delhi. P- 179) ಭೋವಿ ಜನಾಂಗವನ್ನು ಮೊದಲು ವಡ್ಡ ಅಥವಾ ವಡ್ಡರು ಎಂದೂ ಕರೆಯುತ್ತಿದ್ದರು. ಮೈಸೂರು ರಾಜ್ಯದ ಭೋವಿ ಜನಾಂಗದ ಪ್ರಥಮ ಪರಿಷತ್ತು 17ನೇಯ ಜುಲ್ಯೆ, 1944 ಸಭೆ ನಡೆಸಿತು. ಈ ಸಭೆಯಲ್ಲಿ ವಡ್ಡರನ್ನು ಭೋವಿಗಳೆಂದು ಕರೆಯಲ್ಪಡಬೇಕು ಎಂಬ ಠರಾವನ್ನು ಪಾಸುಮಾಡಲಾಯಿತು, 1946 ರಲ್ಲಿ ಮ್ಯೆಸೂರು ಸರಕಾರವು ತನ್ನ ಎಲ್ಲ ಪ್ರಕಟಣೆಗಳಲ್ಲಿ ವಡ್ಡರ ಶಬ್ಧದ ಬದಲಾಗಿ ಭೋವಿ ಎಂದು ಕರೆಯಲ್ಪಡತೊಡಗಿತು. ಹಾಗೆಯೇ ಇನ್ನೋಂದು ಸುಪ್ರಿಂಕೊರ್ಟಿನ ಪ್ರಕಾರ ಶ್ರೀ ಬಿ. ಬಸವಣಪ್ಪನವರ ಚುನವಣಾ ನ್ಯಾಯದಲ್ಲಿ ವಡ್ಡರು ಹಾಗೂ ಭೋವಿ ಈ ಎರಡೂ ಶಬ್ಧಗಳು ಒಂದೇ ಜನಾಂಗದವು ಹಾಗೂ ಸಮಾನ ಪದಗಳು ಎಂದೂ ಹೆಳಲಾಗಿದೆ. (ಡಾ.ವೈ,ವೈ ಬೆಟಗೇರಿ(1999) “ವಡ್ಡರ ಪರಂಪರೆ”(ಭೋವಿಗಳು ಎಂದರೆ ಯಾರು) ಪುಟ ಸಂಖ್ಯೆ- 239)
ಅಧ್ಯಯನದ ಉದ್ದೇಶಗಳು
ಅಧ್ಯಯನದ ಮಹತ್ವ
ಅಧ್ಯಯನ ವಿಷಯವಾದ “ಪರಿವರ್ತನೆಯ ಹಾದಿಯಲ್ಲಿ ಭೋವಿ ಸಮುದಾಯ ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭೋವಿ ಸಮುದಾಯವು ಹಿಂದೂ ಸಾಮಾಜಿಕ ದೃಷ್ಟಿಕೋನದಲ್ಲಿ ತನ್ನದೆ ಸಾಮಾಜಿಕ ಮೌಲ್ಯಗಳು ಮತ್ತು ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಪ್ರಮುಖವಾಗಿ ಈ ಸಮುದಾಯವು ಸಾಮಾಜಿಕವಾಗಿ ಪರಿವರ್ತನೆಯಾಗುತ್ತಿದೆ. ಜನರ ಭಾಷೆ, ವೇಷಭೂಷಣ, ಆಹಾರ ಪದ್ಧತಿ, ವಿವಾಹದಲ್ಲಿ ಪರಿವರ್ತನೆಗಳ ಬಗ್ಗೆ ತಿಳಿಯಲು ಅವಶ್ಯಕವಾಗಿದೆ. ಅಷ್ಟೆ ಅಲ್ಲದೆ ಈ ಸಮುದಾಯದ ಹೆಚ್ಚು ಜನರ ತಮ್ಮ ಕುಲ ಕಸುಬುಗಳು ಅಳಿವಿನಂಚಿಗೆ ತಳ್ಳಲುಪ್ಟಟ್ಟು ಜನರು ಅತಿ ಹೆಚ್ಚಾಗಿ ಕೃಷಿ ಕಾರ್ಮಿಕರಾಗಿ, ಕಟ್ಟಡ ಕಾರ್ಮಿಕರಾಗಿ ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಉದಾ: ಕಡಿಮೆ ವೇತನ, ಹೆಚ್ಚು ಸಮಯ ದುಡಿಮೆ. ಮಾಲಿಕರ ದಬ್ಬಾಳಿಕೆ ಇತ್ಯಾದಿ ಸವಾಲುಗಳ ಜೊತೆಗೆ ಜಾತಿ ಮತ್ತು ರಾಜಕೀಯ ಸಂಘಟನೆಯ ಕೊರತೆಯ ಬಗ್ಗೆ ತಿಳಿಯಲು ಈ ಅಧ್ಯಯನವು ಸಹಾಯಕವಾಗಿದೆ.
ಅಧ್ಯಯನ ಕ್ಷೇತ್ರದ ವ್ಯಾಪ್ತಿ
ಪ್ರಸ್ತುತ ಅಧ್ಯಯನವು “ಪರಿವರ್ತನೆಯ ಹಾದಿಯಲ್ಲಿ ಭೋವಿ ಸಮುದಾಯ ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯವನ್ನು ಕುರಿತಾಗಿದ್ದು. ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲ್ಲೂಕಿನ 2 ಗ್ರಾಮಗಳಾದ ಸೀತಾರಾಮಪುರ (ಭೋವಿ ಕಾಲೋನಿ) ಮತ್ತು ನಾಗತಿ ಬೆಳಗಲು ಗ್ರಾಮಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಸೀತಾರಾಮಪುರದ ಭೋವಿ ಕಾಲೋನಿಯಲ್ಲಿ ಭೋವಿ ಸಮುದಾಯದ 58 ಮನೆಗಳಿವೆ. ಹಾಗೂ 250 ಕ್ಕಿಂತಲೂ ಹೆಚ್ಚು ಭೋವಿ ಸಮುದಾಯದ ಜನ ಸಂಖ್ಯೆ ಇದೆ. ನಾಗತಿ ಬೆಳಗಲು ಚನ್ನಗಿರಿಗೆ ಹೋಗುವ ಮಾರ್ಗದಲ್ಲಿದೆ. ಈ ಗ್ರಾಮಕ್ಕೆ ನೂರು ವರ್ಷಗಳ ಇತಿಹಾಸವಿದೆ. ಭೋವಿ ಸಮುದಾಯದ 50 ಕ್ಕಿಂತಲೂ ಹೆಚ್ಚಿನ ಮನೆಗಳಿವೆ. ನಂಜುಂಡೇಶ್ವರ ಮತ್ತು ಸೇವಾಲಾಲ್ ದೇವಸ್ಥಾನ, ಮಾರಿಯಮ್ಮ ದೇವಾಲಯ ಹಾಗೂ ಚೌಡೇಶ್ವರಿ ದೇವಾಸ್ಥಾನಗಳಿವೆ. (ಕ್ಷೇತ್ರಾಧ್ಯಯನದಿಂದ ಮಾಹಿತಿ) ಈ ಗ್ರಾಮಗಳಲ್ಲಿ ಪರಿಶಿಷ್ಠಜಾತಿಯವರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಲ್ಲಿನ ಜನರು ಆಹಾರದ ಬೆಳೆಗಳಾಗಿ ರಾಗಿ, ಭತ್ತ, ಹತ್ತಿ, ಮೆಣಸು, ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಈ ಎರಡು ಗ್ರಾಮಗಳು ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಹೋಗುವ ಮಾರ್ಗದಲ್ಲಿ ಬರುತ್ತವೆ.
ಅಧ್ಯಯನದ ಮಾದರಿ
ನಾಗತಿಬೆಳಗಲು ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ 2011 ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1655 ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ ಪುರುಷರು 463 ಹಾಗೂ ಮಹಿಳೆಯರು 444 ರಷ್ಟಿದ್ದು, ಪರಿಶಿಷ್ಠಜಾತಿಯವರ ಜನಸಂಖ್ಯೆ 719, ಪರಿಶಿಷ್ಠ ಪಂಗಡದವರ ಜನಸಂಖ್ಯೆ 30 ಮತ್ತು ಭೋವಿ ಸಮುದಾಯದ 53 ಕುಟುಂಬಗಳು ವಾಸವಾಗಿದ್ದು 11 ಜನಪ್ರತಿನಿಧಿಗಳನ್ನು ಈ ಗ್ರಾಮ ಪಂಚಾಯಿತಿ ಒಳಗೊಂಡಿದೆ. ಪ್ರಸ್ತುತ ನನ್ನ ಸಂಶೋಧನೆಗೆ ನಾಗತಿಬೆಳಗಲು ಗ್ರಾಮದಿಂದ 30 ಸೀತಾರಾಮಪುರ ಗ್ರಾಮದಿಂದ 20 ಮಾಹಿತಿದಾರರನ್ನು ಸರಳ ಯಾದೃಚ್ಛಿಕ ಮಾದರಿ ವಿಧಾನವನ್ನು ಬಳಸಿಕೊಳ್ಳುವುದರ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಸಂಶೋಧನಾ ತಂತ್ರಗಳು
ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂದರ್ಶನ ಮತ್ತು ಸಂದರ್ಶನ ಅನುಸೂಚಿಯ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅವಲೋಕನ ವಿಧಾನದಲ್ಲಿ ಸಹಭಾಗಿ ಅವಲೋಕನ ವಿಧಾನವನ್ನು ಬಳಕೆಮಾಡಿಕೊಳ್ಳುವುದರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಶೋಧನಾ ಆಕರಗಳಾದ ಸಂಶೋಧನಾ ಲೇಖಗಳು, ಪತ್ರಿಕೆಗಳು, ಕನ್ನಡ ವಿಶ್ವಕೋಶ, ಕರ್ನಾಟಕ ರಾಜ್ಯಸರ್ಕಾರದ ಗೆಜಿಟಿಯರ್, ಅಂತರ್ಜಾಲ, ಸಂಶೋಧನಾ ಗ್ರಂಥಗಳು ಮತ್ತು ಸಂಶೋಧನಾ ಕ್ಷೇತ್ರದ ಪ್ರತಿವರ್ತಿಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಸಂಶೋಧನಾ ತಂತ್ರಗಳ ಮೂಲಕ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಾಹಿತಿಯನ್ನು ಸಮಾಜಶಾಸ್ತ್ರಿಯ ಚೌಕಟ್ಟಿನಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಅಧ್ಯಯನದಿಂದ ವ್ಯಕ್ತವಾದ ಅಂಶಗಳು
• ಭೋವಿ ಸಮುದಾಯದಲ್ಲಿ ಶೇಕಡ 68ರಷ್ಟು ವಿವಾಹದ ಆಚರಣೆಗಳು ಹಾಗೂ ಶೇಕಡ 78 ರಷ್ಟು ವೇಷಭೂಷಣದಲ್ಲಿ ಪರಿವರ್ತನೆಯಾಗಿದೆ. ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ. ಕಾರಣ ಕ್ಯೆಗಾರಿಕರಣ ಮತ್ತು ನಗರಿಕರಣದ ಪ್ರಭಾವ.
• ಈ ಸಮುದಾಯದಲ್ಲಿ ಶೇಕಡ 66ರಷ್ಟು ಶಿಕ್ಷಣವನ್ನು ಪಡೆದು ಕೊಂಡಿದ್ದಾರೆ. ಕಾರಣ ಶೈಕ್ಷಣಿಕ ಯೋಜನೆಗಳಾದ ಬಿಸಿಯೂಟ ಯೋಜನೆ, ವಸತಿ ಯೋಜನೆ, ವಿದ್ಯಾರ್ಥಿ ಯೋಜನೆ ಇತರೆ ಯೋಜನೆಗಳ ಪ್ರಭಾವದಿಂದಾಗಿ ಶಿಕ್ಷಣವು ಸುಧಾರಿಸುತ್ತಿದೆ.
• ಅಧ್ಯಯನಕ್ಕೆ ಒಳಪಡಿಸಿದವರಲ್ಲಿ ಶೇಕಡ 55ರಷ್ಟು ವೃತ್ತಿಯಿಂದ ಆರೋಗ್ಯದ ಸಮಸ್ಯೆಗಳು ಸವಾಲುಗಳಾಗಿ ಹಾಗೂ ಮಳೆಯಿಂದ ರಕ್ಷಣೆ, ಕಲ್ಲು ಮತ್ತು ಮಣ್ಣಿನ ಕೆಲಸದ ಸಂದರ್ಭದಲ್ಲಿ ಧೂಳು ಶ್ವಾಸಕೋಶಗಳನ್ನು ಸೇರುತ್ತಿದೆ ಎಂಬುವುದು ಅಧ್ಯಯನದಿಂದ ವ್ಯಕ್ತವಾಗಿದೆ. ಹಾಗಾಗಿ ಈ ಸಮುದಾಯಕ್ಕೆ ವೃತ್ತಿಯಲ್ಲಿ ಉತ್ತಮ ಅರೋಗ್ಯವು ಸವಾಲಾಗಿದೆ.
• ಅಧ್ಯಯನಕ್ಕೆ ಒಳಪಡಿಸಿದ ಭೋವಿ ಸಮುದಾಯದ ಜನರಲ್ಲಿ ಶೇಕಡ 48ರಷ್ಟು ಈ ಸಮುದಾಯದ ಕುಲ ಕಸುಬುಗಳನ್ನು ಮಾಡಲು ಯಾವುದೇ ರೀತಿಯ ಸರ್ಕಾರದಿಂದ ತರಭೇತಿಯ ಸೌಲಭ್ಯವಿಲ್ಲದಿರುವುದು ಹಾಗೂ ಕೆರೆ, ಒಡ್ಡುಗಳು, ಬಾವಿ, ಕಲ್ಲು ಗಣಿಗಾರಿಕೆಯಾಂತಹ ಸ್ಥಳಗಳಲ್ಲಿ ಸರಿಯಾದ ತರಭೇತಿಯಿಲ್ಲದಿರುವುದು ಒಂದು ಸವಾಲಾಗಿದೆ.
• ಭೋವಿ ಸಮುದಾಯದವರ ಶೇಕಡ 45ರಷ್ಟು ಮನೆಯಲ್ಲಿ ಬಳಸುವ ಭಾಷೆಯಿಂದಾಗಿ ಮಕ್ಕಳು ಶಾಲಾ ಹಂತದಲ್ಲಿ ಕಲಿಯುವಿಕೆಯಲ್ಲಿ ಎಡರು ತೊಡರುಗಳು ಉಂಟಾಗಿ ಹಿಂಜರಿಕೆಯ ಮನೋಭಾವನೆಯನ್ನು ಹೊಂದಿದ್ದಾರೆ ಎಂಬ ಸವಾಲುಗಳು ಕೂಡ ಅಧ್ಯಯನದಿಂದ ವ್ಯಕ್ತವಾಗಿದೆ.
• ಅಧ್ಯಯನಕ್ಕೆ ಒಳಪಡಿಸಿದ ಮಾಹಿತಿದಾರಲ್ಲಿ ಶೇಕಡ 77ರಷ್ಟು ಕರ್ನಾಟಕ ಹಾಗೂ ಇತರೆ ಭಾರತದ ಇತರೆ ರಾಜ್ಯಗಳಲ್ಲಿ ಪ್ರಬಲ ಜಾತಿಗಳ ಸಂಖ್ಯಾಬಲದಿಂದಾಗಿ ಈ ಸಮುದಾಯವು ರಾಜಕೀಯವಾಗಿ ಸಂಘಟನೆಯಾಗದಿರುವುದು ವಿಪರ್ಯಾಸವಾಗಿದೆ.
• ಭೋವಿ ಸಮುದಾಯದಲ್ಲಿ ಶೇಕಡ 80ರಷ್ಟು ಕುಲ ವೃತ್ತಿಗಳು ಅಧುನಿಕರಣ ಪ್ರಭಾವದಿಂದಾಗಿ ಅಳಿವಿನಂಚಿನಲ್ಲಿದ್ದು, ಈ ಸಮುದಾಯದ ಜನರು ವೃತ್ತಿ ಆರಿಸಿ ಕಾಫಿ ತೋಟಗಳಿಗೆ, ಇಟ್ಟಿಗೆ ತಯಾರಿಕಾ ಭಟ್ಟಿಗಳಿಗೆ, ಕಟ್ಟಡ ಕಾರ್ಮಿಕರಾಗಿ ಹಾಗೂ ಇನ್ನಿತರ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು ವಲಸೆ ಹೋಗುವುದರಿಂದ ಅಲ್ಲಿ ಮಾಲಿಕರ ದಬ್ಬಾಳಿಕೆ, ಹೆಚ್ಚು ಸಮಯ ಶ್ರಮ, ಕಡಿಮೆ ಕೂಲಿವೇತನ, ಸಾಮಾಜಿಕ ಭದ್ರತಾ ಸಮಸ್ಯೆ, ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತತೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ.
• ಭೋವಿ ಸಮುದಾಯದ ಶೇಕಡ 55ರಷ್ಟು ಈ ಸಮುದಾಯದಲ್ಲಿ ಅತಿ ಹೆಚ್ಚಾಗಿ ಕಟ್ಟಡ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಕಾರಣ ಕುಲ ವೃತ್ತಿಗಳಾದ ಒಳಕಲ್ಲು, ರುಬ್ಬುವ ಕಲ್ಲುಗಳು, ಕಲ್ಲಿನ ಕೆತ್ತನೆ ಹಾಗೂ ಕೆರೆ, ಒಡ್ಡುಗಳ ನಿರ್ಮಾಣ ಅಧುನಿಕ ಯಂತ್ರಗಳಾದ ಹಿಟಾಚಿ, ಅರ್ಥ್ ಮೂವರ್ಸ್, ಇನ್ನಿತರ ಯಂತ್ರಗಳ ಮೂಲಕ ಕಾಮಗಾರಿಗಳು ನಡೆಯುತ್ತಿವೆ.
ಸಲಹೆಗಳು
• ಈ ಸಮುದಾಯಕ್ಕೆ ಸಾಮಾಜಿಕ ಭದ್ರತೆಯನ್ನು ರೂಪಿಸುವಂತಹ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ಹಾಗೂ ವಲಸೆ ಹೊಗುವ ಪ್ರವೃತ್ತಿಯನ್ನು ತಡೆದು ಅಂತರಿಕವಾಗಿ ಸ್ವಾಲಂಬನೆ ಹೊಂದುವ ಕೌಶಲ್ಯಧಾರಿತ ತರಭೇತಿ ಕಾರ್ಯಕ್ರಮಗಳ ಅಗತ್ಯವಿದೆ.
• ಈ ಸಮುದಾಯದ ಕುಲಕಸುಬುಗಳನ್ನು ಆಯ್ಕೆ ಮಾಡಿಕೊಂಡು ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ಇವರು ನೆಲೆಯೂರುವ ಪ್ರದೇಶಗಳಿಗೆ ಸಂಚಾರಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ಅವಶ್ಯಕತೆಯಿದೆ,
• ಈ ಸಮುದಾಯದ ಕುಲಕಸುಬುಗಳು ಹೆಚ್ಚಾಗಿ ಅರಣ್ಯ ವ್ಯಾಪ್ತಿಯ ಮೂಲಗಳಾದ ಕಲ್ಲು ಮತ್ತು ಮಣ್ಣಿನ ವೃತ್ತಿಗಳನ್ನು ಮಾಡಲು ಕಾನೂನು ರೀತಿಯಲ್ಲಿ ಅವಕಾಶ ಮಾಡುವ ಅಗತ್ಯವಿದೆ.
• ಈ ಸಮುದಾಯದಲ್ಲಿನ ಜನರ ಮತ್ತು ಮಕ್ಕಳಿಗೆ ಶೈಕ್ಷಣಿಕವಾಗಿ ಪಾಲುಗೊಳ್ಳುವಂತೆ ಉತ್ತೇಜನವನ್ನು ನೀಡುವ ಅಗತ್ಯತೆ ಇದೆ.
ಒಟ್ಟಾರೆಯಾಗಿ ಪರಿವರ್ತನೆಯ ಹಾದಿಯಲ್ಲಿ ಭೋವಿ ಸಮುದಾಯದ ಸವಾಲುಗಳು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಈ ಸಮುದಾಯವು ಮಂದಗತಿಯಲ್ಲಿ ಪರಿವರ್ತನೆ ಹೊಂದುತ್ತಿದೆ. ಹಾಗಾಗಿ ಈ ಸಮುದಾಯದ ಭಾಷೆ, ಸಂಸ್ಕೃತಿ, ಆಚಾರ ವಿಚಾರ ಹಾಗು ಸಂಪ್ರದಾಯಗಳು ಉಡುಗೆ ತೊಡುಗೆ ಹಾಗೂ ಆಹಾರ ಪದ್ಧತಿ, ಸಾಂಪ್ರಾದಾಯಿಕ ಕುಲ ಕಸುಬುಗಳು ಅಧುನಿಕತೆಗೆ ಸಿಲುಕಿ ಪರಿವರ್ತನೆಯಾಗುತ್ತಿವೆ.
ಗ್ರಂಥಋಣ