ಕನ್ನಡ ಪದರಚನೆ ಒಳನೋಟಗಳು
ಡಾ. ನಾಗವರ್ಮ. ಜಿ. ಎಚ್
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-577501
varmaturuvanuru@gmail.com
+91 9449614968
ಪ್ರಸ್ತಾವನೆ:
ಭಾಷೆಯೆಂಬುದು ವಿಶಿಷ್ಟ ರಾಚನಿಕ ವಿನ್ಯಾಸಗಳ ಸಂರಚನೆಗಳ ರಚನೆ ಹಾಗಾಗಿ ಇದು ಸಂಕೀರ್ಣತೆಯಿಂದ ಕೂಡಿದೆ.
ಭಾಷೆಯಲ್ಲಿನ ರಚನಾತ್ಮಕ ವ್ಯವಸ್ಥೆಯನ್ನು ಗ್ರಹಿಸುವಲ್ಲಿ ಸಮುಚ್ಚಯಗಳಿಂದಾಗುವ ವರ್ಣ/ಪದಗಳ ಸರಣಿ ತಿಳಿಯುವುದು ಅವಶ್ಯಕ.
ಪದ ಎಂದರೇನು?
ವ್ಯಾಕರಣದ ಪರಿಭಾಷೆಯಲ್ಲಿ ಪದ ಎಂದರೆ ‘ಪ್ರಕೃತಿ ಮತ್ತು ಪ್ರತ್ಯಯಯಗಳಿಂದ ಸಂಯಕ್ತವಾಗಿರುವಂತಹದು’ ಎಂದರ್ಥ. ಇಲ್ಲಿ ಪ್ರಕೃತಿ ಎಂದರೆ ಪದದ ಮೂಲ ರೂಪ. ಪ್ರತ್ಯಯಗಳೆಂದರೆ ಯಾವುದೇ ಸ್ವತಂತ್ರ ಅರ್ಥವಿಲ್ಲದಂತಹವು. ಪ್ರಕೃತಿಗೆ ಹತ್ತಿ ಅದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವಂತಹವು. ಪ್ರಕೃತಿ+ಪ್ರತ್ಯಯ=ಪದ, ಈ ವಿಷಯ ಕುರಿತ ವ್ಯಾಕರಣಕಾರರ ಅಭಿಪ್ರಾಯಗಳನ್ನು ಗಮನಿಸೋಣ.
ವಿಭಕ್ತ್ವಂತಂ ಪದ
ಭಾಷಾಭೂಷಣ
ನಿರತಂ ಪ್ರಕೃತಿ ಪ್ರತ್ಯಯ:
ಮೆರಡು ಮೊಡಂಬೊಟ್ಟು ತೋ ಪದಮನೆ ಪಡೆಗುಂ-- ಶಬ್ದಸ್ಮøತಿ
ಪದದರ್ಥಂ ವಿಭಾಗಿಸು
ವುದಂದೆ ವಿಭಕ್ತಿಯಂತದಂ ಪ್ರತ್ಯಯಮೆಂ
ಬುದು ತತ್ಪ್ರತ್ಯಯದಿಂ ಪೂ
ರ್ವದೊಳಿರ್ಕುಂ ಪ್ರಕೃತಿಯೆರಡು ಮಮರ್ದೊದುವೆ ಪದಂ- ಕೇಶಿರಾಜ
ಪ್ರಕೃತಿಯೊಂದಿಗೆ ಪ್ರತ್ಯಯಗಳು ಸೇರುವುದು ಸಾಮಾನ್ಯ ನಿಯಮ.
ಉದಾ:- ಪ್ರಕೃತಿ+ಪ್ರತ್ಯಯ = ಪದ
ದೇವರ+ಉ=ದೇವರು
ಧನ+ಅನ್ನು=ಧನವನ್ನು
ಅಧಿಕಾರಿ+ಇಂದ=ಅಧಿಕಾರಿಯಿಂದ..... ಇತ್ಯಾದಿ
ಆದರೆ ನಾಮ ಪದಗಳೊಂದಿಗೆ ಸೇರುವ ಪ್ರತ್ಯಯಗಳು, ಕ್ರಿಯಾಪದಗಳೊಂದಿಗೆ ಸೇರುವ ಪ್ರತ್ಯಯಗಳಲ್ಲಿ ವ್ಯತ್ಯಾಸಗಳಿವೆ.
ಭಾಷಾ ವಿಜ್ಞಾನಿಗಳು ಪದವನ್ನು ‘ಆಕೃತಿಮಾ’ ಎಂದು ಗುರುತಿಸುತ್ತಾರೆ. ಇದಕ್ಕೆ ಭಾಷೆಯ ಅರ್ಥ ಸಹಿತ ಚಿಕ್ಕ ಘಟಕ ಎಂದ ಅರ್ಥೈಸಲಾಗಿದೆ. ಆಧುನಿಕರು ಪದ ಮತ್ತು ಪ್ರತ್ಯಯಗಳೆರಡೂ ಆಕೃತಿಗಳೆರಡೂ ಆಕೃತಿಗಳಾಗಿರುತ್ತವೆ ಎಂದಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಅವಿಭಾಜ್ಯವಾದ ಹಾಗೂ ಅರ್ಥಗಳನ್ನು ಒಳಗೊಂಡ ಧ್ವನಿ ಸಮುದಾಯವನ್ನು ಆಕೃತಿಮಾ ಎನ್ನಲಾಗಿದೆ.
ಪದಗಳಲ್ಲಿನ ಪ್ರಕಾರಗಳು:
ಸಂಘ ಜೀವಿಗಳಾದ ನಾವು ನಮ್ಮ ದಿನನಿತ್ಯದ ಮಾತಿನ ವ್ಯವಹಾರದಲ್ಲಿ ಅನೇಕ ಬಗೆಯ ಪದಗಳನ್ನು, ಅನೇಕ ಹೆಸರುಗಳನ್ನು (ನಾಮಗಳನ್ನು) ಸೂಚಿಸುವಂತಹುಗಳನ್ನು ಬಳಸುವುದು ಸರ್ವೇಸಾಮಾನ್ಯವಾದ ರೂಢಿಯಾಗಿದೆ.
ಈ ನಾನಾ ರೀತಿಯ ಪದಗಳ ಒಂದೊಂದು ಗುಂಪಿಗೆ ವ್ಯಾಕರಣದಲ್ಲಿ ಒಂದೊಂದು ಹೆಸರಿನಿಂದ ಕರೆಯುವರು. ಅದು ಕ್ರಮವಾಗಿ ಕರ್ತೃಪದ, ನಾಮಪದ, ಕರ್ಮಪದ, ಕ್ರಿಯಾಪದ ಎಂದು ಹೆಸರಿಸಲಾಗಿದೆ.
ಉದಾ: ಸೋಮಶೇಖರ, ವಿಶಾಲಾಕ್ಷಿ, ಲಲಿತಾ, ಚಂದ್ರು, ಬೆಂಗಳೂರು, ಗುಡ್ಡ, ಗಂಗಾ ಇವು ನಾಮಪದಗಳು.
ಓಡು, ಆಡು, ಕೂಡು, ಹೇಳು, ತಿನ್ನು- ಕ್ರಿಯಾಪದಗಳು
ಹಣ್ಣನ್ನು, ಪಾಠವನ್ನು, ಚಿತ್ರವನ್ನು, ಹಣವನ್ನು-ಕರ್ಮಪದಗಳು,
ಹಾಯಾಗಿ, ಚೆನ್ನಾಗಿ, ಸೊಗಸಾಗಿ-ಅವ್ಯಯಗಳು ಇವು ಕ್ರಮವಾಗಿ ಹೆಸರುಗಳನ್ನು, ಕ್ರಿಯೆಯನ್ನು, ಕ್ರಿಯಾ ವಿಶೇಷಗಳನ್ನು ಸೂಚಿಸುತ್ತವೆ.
ನಾಮಪದಗಳು: ನಾಮ ಎಂದರೆ ಹೆಸರು, ಹೆಸರುಗಳನ್ನು ಸೂಚಿಸುವ ಪದಗಳಿಗೆ ನಾಮಪದಗಳು ಎನ್ನುವರು.
ಪದದ ಮೂಲ ರೂಪಕ್ಕೆ ಪ್ರಕೃತಿ ಎನ್ನುವರು. ನಾಮಪದದ ಮೂಲರೂಪಕ್ಕೆ ನಾಮ ಪ್ರಕೃತಿ ಅಥವಾ ಪ್ರಾತಿಪದಿಕಗಳು ಎನ್ನುವರು.
ಇವುಗಳಿಗೆ ಪ್ರತ್ಯಯ ಸೇರಿ ನಾಮಪದ ಎನಿಸುತ್ತದೆ.
ಉದಾ: ನಾಮ ಪ್ರಕೃತಿ-(ಪ್ರಾತಿಪದಿಕಗಳು) +ಪ್ರತ್ಯಯ=ನಾಮಪದ
ಗುಡಿ+ಅನ್ನು=ಗುಡಿಯನ್ನು
ನದಿ+ಇಗೆ=ನದಿಗೆ
ಗುರುಗಳ+ಅಲ್ಲಿ=ಗುರುಗಳಲ್ಲಿ
ಹೊಲ+ಕ್ಕೆ= ಹೊಲಕ್ಕೆ......... ಇತ್ಯಾದಿ.
ಈ ನಾಮಪದದಲ್ಲಿ ಸಹಜ ನಾಮಪದಗಳು, ಸಾಧಿತ ನಾಮಪದಗಳು ಎಂಬ ಎರಡು ವಿಧಗಳಿವೆ.
ಸಹಜ ನಾಮಪದಗಳು: ಸಹಜ ನಾಮಪದಗಳನ್ನು ಅವುಗಳ ಅರ್ಥಕ್ಕೆ ಅನುಸಾರವಾಗಿ ವಿಂಗಡಿಸುವರು.
ಉದಾ: ಶೀಲ, ರೂಪ, ಬಳೆ, ಬುದ್ಧಿ............. ಇತ್ಯಾದಿ.
ಸಾಧಿತ ನಾಮಪದಗಳು: ಸಾಧಿತ ನಾಮಪದಗಳನ್ನು ಆ ಪದಗಳಿಗೆ ಹತ್ತಿದ ಬೇರೆ ಬೇರೆ ತದ್ಧಿತ ಪ್ರತ್ಯಯಗಳನ್ನು ಆಧರಿಸಿ ವಿಂಗಡಿಸುವರು. ಇವುಗಳಿಗೆ ಸಾಧಿತ ಅಥವಾ ವ್ಯುತ್ಪನ್ನ ನಾಮಗಳೆಂದು ಕರೆಯುವರು.
ಉದಾ; ರೂಪ+ವಂತ=ರೂಪವಂತ, ಶೀಲ+ವಂತೆ=ಶೀಲವಂತೆ
ಬುದ್ಧಿ+ವಂತಿಕೆ=ಬುದ್ಧಿವಂತಿಕೆ, ಬಳೆ+ಕಾರ್ತಿ=ಬಳೆಗಾರ್ತಿ...... ಇತ್ಯಾದಿ.
ನಾಮವಾಚಕಗಳು: ಜೀವ ಮತ್ತು ನಿರ್ಜೀವ ವಸ್ತುಗಳನ್ನು ಸೂಚಿಸುವ ಹೆಸರುಗಳು, ಇವುಗಳನ್ನು ಸಹಜ ನಾಮಗಳೆಂದು ಕರೆಯುವರು.
ಉದಾ: ದೇಶ, ಪಂಡಿತ, ಕುರ್ಚಿ, ಲೇಖನಿ, ಗಾಯತ್ರಿ, ಭೀಮ, ಹರಿದ್ವಾರ ಗೋಕರ್ಣ……ಇತ್ಯಾದಿ.
ಇವುಗಳಲ್ಲಿ ಮೂರು ಪ್ರಕಾರಗಳಿವೆ
ರೂಢನಾಮ: ಸಾಮಾನ್ಯವಾಗಿ ರೂಢಿಯಿಂದ ಬಂದ ಹೆಸರುಗಳು
ಉದಾ: ನದಿ, ಗಿಡ, ಹಳ್ಳಿ, ಬೆಟ್ಟ, ಹಸು, ಕರು, ಬೆಕ್ಕು, ನಾಯಿ ಮನುಷ್ಯ, ನೀರು, ಗಾಳಿ...... ಇತ್ಯಾದಿ
ಅಂಕಿತನಾಮ: ಅಂಕಿತ ಎಂದರೆ ಇಟ್ಟುಕೊಂಡ, ಇಡುವ ಹೆಸರುಗಳು, ನಮ್ಮ ನಿಮ್ಮೆಲ್ಲರ ಹೆಸರುಗಳು. ನಾವು ಗುರುತಿಗಾಗಿ ಕರೆಯಲ್ಪಡುವ ಹೆಸರುಗಳು.
ಉದಾ: ಪಂಪ, ರನ್ನ, ಪೊನ್ನ, ವಿಜಯನಗರ ಮೈಸೂರು…. ಇತ್ಯಾದಿ..
ಕೂಡಲ ಸಮಗಮದೇವ ಎಂಬುದು ಬಸವಣ್ಣನವರ ವಚನದ ಅಂಕಿತನಾಮ
ಅನ್ವರ್ಥನಾಮ: ಅರ್ಥಕ್ಕೆ ಅನುಸಾರವಾಗಿ ವ್ಯಕ್ತಿ, ವಸ್ತು, ಸ್ಥಳದ ಸ್ಥಿತಿಗನುಗುಣವಾಗಿ ಕರೆಯುವ ಅಥವಾ ಅದನ್ನು ಸೂಚಿಸುವ ಪದಗಳು,
ಉದಾ: ಅವನು ಬಡವ, ಇವನು ಕುಂಟ, ಈ ವಿದ್ಯಾರ್ಥಿ ವಿಚಿತ್ರ ಕಳ್ಳ, ಶ್ರೇಷ್ಠ ಕ್ರೀಡಾಪಟು ಇತ್ಯಾದಿ…
ಗುಣವಾಚಕಗಳು: ವಸ್ತು, ವ್ಯಕ್ತಿಗಳ ಗುಣ, ರೀತಿ, ಸ್ವಭಾವಗಳನ್ನು ಸೂಚಿಸುವ ಪದಗಳು.
ಉದಾ: ಸುಗುಣ, ದುರ್ಗಣ, ದೊಡ್ಡದು, ಚಿಕ್ಕದು, ವಕ್ರ, ಕರಿಯ, ಬಿಳಿಯ ಉತ್ತಮ, ಮಧ್ಯಮ, ಅಧಮ..... ಇತ್ಯಾದಿ.
ಸಂಖ್ಯಾವಾಚಕಗಳು: ಸಂಖ್ಯೆಯನ್ನು ಸೂಚಿಸುವ ಪದಗಳು.
ಉದಾ: ಪಂಚಾಮೃತ, ತ್ರಿಮೂರ್ತಿಗಳೂ, ಚತುಷ್ಕೋನ, ಸಪ್ತರ್ಷಿಮಂಡಲ, ನವರಾತ್ರಿ, ದಶಾನನ, ದಶಾವತಾರ, ಷಟ್ಪದಿ, ಐನೂರು, ಸಹಸ್ರಾರು..... ಇತ್ಯಾದಿ
ಪರಿಮಾಣ(ಪ್ರಮಾಣ) ವಾಚಕಗಳು: ವ್ಯಕ್ತಿ, ವಸ್ತುವಿನ, ಅಥವಾ ಸ್ಥಳದ ಅಳತೆ ಗಾತ್ರಗಳನ್ನು ಸೂಚಿಸುವ ಪದಗಳು.
ಉದಾ: ಗಿಡ್ಡ, ಉದ್ದ, ಅಷ್ಟು, ಇಷ್ಟು, ಹಲವು, ಕೆಲವು.....ಇತ್ಯಾದಿ.
ದಿಗ್ವಾಚಕಗಳು: ದಿಕ್ಕುಗಳನ್ನು ಸೂಚಿಸುವ ಪದಗಳು.
ಉದಾ: ಮೂಡಣ(ಪೂರ್ವ), ಪಡುವಣ(ಪಶ್ಚಿಮ), ಬಡಗಣ(ಉತ್ತರ), ತೆಂಕಣ(ದಕ್ಷಿಣ) ಮೇಲೆ-ಕೆಳಗೆ, ಹಿಂದೆ-ಮುಂದೆ, ಆಚೆ-ಈಚೆ, ಅಕ್ಕ-ಪಕ್ಕ... ಇತ್ಯಾದಿ…
ಪ್ರಕಾರವಾಚಕಗಳು: ವ್ಯಕ್ತಿ, ವಸ್ತು, ಸ್ಥಳದ ಸ್ವರೂಪಗಳನ್ನು ತಿಳಿಸುವ ಪದಗಳು,
ಉದಾ: ಅಂತಹ, ಇಂತಹ, ಒಳ್ಳೆಯ, ನುಣುಪಾದ, ಒರಟಾದ, ಇಕ್ಕಟ್ಟಾದ....ಇತ್ಯಾದಿ.
ಸರ್ವನಾಮ: ನಾಮಪದಗಳ ಬದಲಾಗಿ ಅವುಗಳ ಸ್ಥಾನದಲ್ಲಿ ನಾಮಪದಗಳಂತೆಯೇ ಉಪಯೋಗಿಸುವ ಪದಗಳು. ವಾಕ್ಯಗಳಲ್ಲಿನ ನಾಮಪದಗಳನ್ನು ಪದೇ ಪದೇ ಪುನರಾವರ್ತನೆ ಮಾಡಿ ಉಚ್ಚರಿಸಿದಾಗ ಆ ವಾಕ್ಯ ಕೇಳಲು ಕಿರಿಕಿರಿ ಎನಿಸುತ್ತದೆ. ಅದೇ ಸ್ಥಳದಲ್ಲಿ ಬಳಸುವ ಇತರ ಪದಗಳಿಗೆ ಸರ್ವನಾಮಗಳು ಎನ್ನುವರು. ಸರ್ವ ಎಂದರೆ ಎಲ್ಲಾ ಕಡೆಗಳಲ್ಲಿ ಬಳಸುವ ನಾಮಪದಗಳು ಎಂದರ್ಥ.
ಉದಾ:- ಕರ್ಣಾರ್ಜುನರು ಸಹೋದರರಾಗಿದ್ದರೂ, ಅವರು ರಣರಂಗದಲ್ಲಿ ಯುದ್ಧ ಮಾಡಿದರು.
ಭಾರಿ ಮಳೆ ಬಿತ್ತು, ಅಲ್ಲಿ ಮನೆಗಳು ಬಿದ್ದವು. ಸೀತೆಯು ರಾಮನಂತಹ ವೀರ ಪುರುಷನನ್ನು ಕೈಹಿಡಿದಿದ್ದರೂ ಅವಳು ಅಪಹರಣಕ್ಕೀಡಾದಳು.
ಸರ್ವನಾಮಗಳು
ಪುರುಷಾರ್ಥಕ ಸರ್ವನಾಮಗಳು: ಪುರುಷವಾಚಕ ನಾಮಗಳಿಗೆ ಪುರುಷಾರ್ಥಕ ಸರ್ವನಾಮಗಳು ಎನ್ನುವರು.
ಉದಾ: ನೀನೂ ಅವನೂ ಕೂಡಿ ಪೇಟೆಗೆ ಹೋಗಿಬನ್ನಿರಿ.
ನಾವೂ ಅವರು ದೇವಸ್ಥಾನದಲ್ಲಿ ಭೇಟಿಯಾಗಿದ್ದೆವು.
ಅವಳು ನನ್ನ ಸೋದರತ್ತೆಯ ಮಗಳು
ಇವುಗಳಲ್ಲಿ ಉತ್ತಮ, ಮಧ್ಯಮ, ಪ್ರಥಮ ಪುರುಷ ಎಂದು ಗುರುತಿಸಲಾಗುವುದು
1. ಉತ್ತಮ ಪುರುಷ ಸರ್ವನಾಮಗಳು: ನಾನು, ನಾವು
ಉದಾ: ನಾನು ಓದುತ್ತಿದ್ದೇನೆ, ನಾವು ಕಲಿಯುತ್ತಿದ್ದೇವೆ.
2. ಮಧ್ಯಮ ಪುರುಷಾರ್ಥಕ ಸರ್ವನಾಮ: ನೀನು, ನೀವು
ಉದಾ: ನೀನು ಓದುತ್ತಿಯ, ನೀವು ಕಲಿಯತ್ತೀರಾ
3. ಪ್ರಥಮ ಪುರುಷಾರ್ಥಕ: ಅವನು, ಅವರು
ಉದಾ: ಅವಳು, ಅವರು, ಅದು, ಅವು
ಇವುಗಳನ್ನು ಲಿಂಗ, ವಚನ, ಕಾಲಗಳಿಗನುಗುಣವಾಗಿ ಸೂಚಿಸಲಾಗುವುದು.
ಪ್ರಶ್ನಾರ್ಥಕ ಸರ್ವನಾಮಗಳು: ಪ್ರಶ್ನಿಸಲು ಮತ್ತು ಸಂಬಂಧವನ್ನು ಸೂಚಿಸಲು ಬಳಸುವ ಸರ್ವನಾಮಗಳು
ಉದಾ: ಅವಳ ಹೆಸರೇನು?
ಕುವೆಂಪು ಹುಟ್ಟೂರು ಯಾವುದು?
ಆತ್ಮಾರ್ಥಕ ಸರ್ವನಾಮಗಳು: ವಸ್ತು ಸ್ಥಿತಿಯನ್ನು ತಿಳಿಸುವ ಸರ್ವನಾಮ ಪದಗಳು ತಾವು, ತಾನು ಎಂಬ ರೂಪಗಳು.
ಉದಾ: ಕುದುರೆ ತನ್ನ ದಾರಿ ತಾನು ಹಿಡಿಯಿತು.
ಹುಡುಗರು ತಮ್ಮ ಪಾಡಿಗೆ ತಾವು ಹಾಡತೊಡಗಿದರು.
ನಿರ್ದೇಶಾತ್ಮಕ ಸರ್ವನಾಮಗಳು: ನಾಮಪದಗಳಿಗೆ ವಿಶೇಷವಾಗಿ ನಿಲ್ಲುವ ಸರ್ವನಾಮ ಪದಗಳು.
ಉದಾ: ಕುವೆಂಪು ಅವರ ಮನೆಯ ಹೆಸರು ಕವಿಶೈಲ.
ಆ ಮನೆ ಮೈಸೂರಿನಲ್ಲಿದೆ.
ಡಾ.ಅಂಬೇಡ್ಕರ್ ಅವರ ಹುಟ್ಟೂರು ಅಂಬಾವಾಡಿ. ಆ ಊರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿದೆ.
ತದ್ದಿತ: ತದ್ಧಿತ ಎಂದರೆ ತತ್+ಹಿತ್, ಅಂದರೆ ಹಿತವಾಗಿ ಸೇರುವುದು ನಾಮ ಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳನ್ನು ಸೇರಿಸಿ ತದ್ಧಿತಾಂತಗಳೆಂಬ ನಾಮಪದಗಳನ್ನು ಮಾಡಬಹುದು. ತದ್ಧಿತ ಪ್ರತ್ಯಯವನ್ನು ಅಂತ್ಯದಲ್ಲಿ ಹೊಂದಿರುವ ಪದವೇ ತದ್ಧಿತಾಂತ.
ಉದಾ: ಗಂಧ+ಇಗ=ಗಂಧಿಗ
ಹಡಪ+ಇಗ=ಹಡಪಿಗ
ಇಲ್ಲಿ ಗಂಧ, ಹಡಪ ಇವು ನಾಮ ಪ್ರಕೃತಿಗಳು, ಈ ಪದಗಳಿಗೆ ಇಗ ಎಂಬ ಪ್ರತ್ಯಯ ಸೇರಿ ತದ್ಧಿತಾಂತಗಳಾಗುತ್ತವೆ. ಇವುಗಳ ಮೇಲೆ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ತದ್ಧಿತ ಪದಗಳನ್ನು ಪಡೆಯಬಹುದು. ಇದು ಪದಸಂಪತ್ತನ್ನು ಹೆಚ್ಚಿಸಿಕೊಳ್ಳುವ ಒಂದು ವಿಧಾನ.
ಉದಾ: ತೋಟ+ಇಗ-ತೋಟಿಗ
ತೋಟಿಗನು, ತೋಟಿಗನನ್ನು, ತೋಟಿಗನಿಂದ, ತೋಟಿಗನಿಗೆ ಹೀಗೆ ಎಲ್ಲಾ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಬಹುದು.
ವಿಭಕ್ತಿ
ನಾಮವಾಚಕಗಳಿಗೆ ಲಿಂಗ ಮತ್ತು ವಚನಗಳ ಪ್ರತ್ಯಯಗಳ ಮೇಲೆ ವಿಭಕ್ತಿ ಪ್ರತ್ಯಯಗಳು ಹತ್ತಿ ನಾಮ ಪದಗಳಾಗುತ್ತವೆ. ನಾಮ ವಾಚಕಗಳ ವಾಕ್ಯ ಸಂಬಂಧದ ಅರ್ಥವಿಶೇಷಗಳನ್ನು ವಿಭಾಗಿಸಿಕೊಡುವುದರಿಂದಾಗಿ ಇವು ವಿಭಕ್ತಿ ಪ್ರತ್ಯಯಗಳು.
ವಿಭಕ್ತಿ ಪ್ರತ್ಯಯಗಳು ಏಕವಚನದಲ್ಲಿ ಪ್ರಕೃತಿಯ ಮುಂದೆಯೂ ಬಹುವಚನದಲ್ಲಿ ಬಹು ವಚನ ಪ್ರತ್ಯಯದ ಮುಂದೆಯೂ ಸೇರುತ್ತವೆ.
ನಾಮ ಪ್ರಕೃತಿಯನ್ನು ವಾಕ್ಯದಲ್ಲಿ ಬಳಸುವಾಗ ಅದಕ್ಕೂ ವಾಕ್ಯದ ಉಳಿದ ಪದಗಳಿಗೂ ಇರುವ ಸಂಬಂಧವನ್ನು ತಿಳಿಸುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು. ವಿಭಕ್ತಿಗಳು ಏಳು, ಸಂಬೋಧನಾ ವಿಭಕ್ತಿಯೂ ಸೇರಿದರೆ ಎಂಟು ವಿಭಕ್ತಿಗಳಾಗುತ್ತವೆ.
ವಿಭಕ್ತಿಯಾದರೆ ವಿಭಾಗಿಸು ಅಥವಾ ಒಡೆ ಎಂದರ್ಥ. ಅಂದರೆ ಪದವನ್ನು ಅರ್ಥವತ್ತಾಗಿ ವಿಭಜಿಸುವುದು ವಿಭಕ್ತಿ. ಪ್ರಥಮಾ ವಿಭಕ್ತಿಯಿಂದ ಸಪ್ತಮೀ ವಿಭಕ್ತಿಯವರೆಗಿನ ಏಳು ವಿಭಕ್ತಿಗಳಿಗೂ ಏಳು ಪ್ರತ್ಯಯಗಳಿವೆ. ಕಾರಕಗಳೂ ಇವೆ.
ವಿಭಕ್ತಿ ಹೆಸರು |
ಕಾರಕಾರ್ಥ |
ಹೊಸಗನ್ನಡ ಪ್ರತ್ಯಯ |
ಹಳಗನ್ನಡ ಪ್ರತ್ಯಯ |
ಹೊಸಗನ್ನಡ ನಾಮಪದ |
ಹಳಗನ್ನಡ ನಾಮಪದ |
ಪ್ರಥಮಾ |
ಕರ್ತೃಕಾರಕ |
ಉ |
ಮ್ |
ರಾಮನು |
ರಾಮಂ |
ದ್ವಿತೀಯಾ |
ಕರ್ಮಕಾರಕ |
ಅನ್ನು |
ಅಮ್ |
ರಾಮನನ್ನು |
ರಾಮನಂ |
ತೃತೀಯಾ |
ಕರಣಕಾರಕ |
ಇಂದ |
ಇಂ, ಇಂದ |
ರಾಮನಿಂದ |
ರಾಮನಿಂ |
ಚತುರ್ಥಿ |
ಸಂಪ್ರದಾನಕಾರಕ |
ಗೆ, ಕ್ಕೆ, ಅಕ್ಕೆ |
ಗೆ, ಕೆ, ಕ್ಕೆ |
ರಾಮನಿಗೆ |
ರಾಮಂಗೆ |
ಪಂಚಮಿ |
ಆಪಾದನ ಕಾರಕ |
ದೆಸೆಯಿಂದ |
ಅತ್ತಣಿಂದ |
ರಾಮನ ದೆಸೆಯಿಂದ |
ರಾಮನತ್ತ |
ಷಷ್ಠೀ |
ಸಂಬಂದಾರ್ಥ |
ಅ |
ಅ |
ರಾಮನ |
ರಾಮನ |
ಸಪ್ತಮೀ |
ಅಧಿಕರಣಕಾರಕ |
ಅಲ್ಲಿ |
ಒಳ್ |
ರಾಮನಲ್ಲಿ |
ರಾಮನೊಳ್ |
ವಾಕ್ಯ ರಚನಾ ಸಂದರ್ಭದಲ್ಲಿ ವಿಭಕ್ತಿ ಪ್ರತ್ಯಯಗಳದು ಮಹತ್ವದ ಪಾತ್ರ. ಆದರೆ ಮೇಲೆ ಕಾಣಿಸಿದ ಸಪ್ತ ವಿಭಕ್ತಿ ಪ್ರತ್ಯಯಗಳು ಕನ್ನಡದಲ್ಲಿವೆಯೆ ಎಂಬ ಬಗ್ಗೆ ಆಧುನಿಕ ಭಾಷಾ ವಿಜ್ಞಾನಿಗಳು ಮತ್ತು ಪ್ರಾಚೀನ ವ್ಯಾಕರಣಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ.
1.ಪ್ರಥಮಾ ವಿಭಕ್ತಿ: ಪ್ರಥಮಾ ವಿಭಕ್ತಿ ಕರ್ತೃಕಾರಕವನ್ನು ಹೇಳುತ್ತದೆ. ಕರ್ತೃಕಾರಕ ಎಂದರೆ ಕೆಲಸ ಮಾಡುವ ವ್ಯಕ್ತಿ, ಪ್ರಾಣಿ, ವಸ್ತು ಎಂದರ್ಥ. ಕನ್ನಡದಲ್ಲಿ ಪ್ರಥಮಾ ವಿಭಕ್ತಿಗೆ ಪ್ರತ್ಯೇಕವಾದ ಪ್ರತ್ಯಯವಿಲ್ಲ. ನಾಮ ಪ್ರಕೃತಿಯೇ ಪ್ರಥಮಾ ವಿಭಕ್ತಿಯ ಅರ್ಥದಲ್ಲಿದೆ. ರಾಮಾಂ ಎಂಬಲ್ಲಿ ರಾಮ+ಮ್ ಎಂಬ ವಿಭಜನೆ ಸರಿಯಲ್ಲ. ರಾಮಂ ಎಂಬುದೇ ಶುದ್ಧ ಶಬ್ದರೂಪ. ಆ ರೂಪವೇ ನಾಮ ಪ್ರಕೃತಿ. ಮ್ ಎಂಬುದು ಲಿಂಗ ಸೂಚಕ ಪ್ರತ್ಯಯ. ಎರಡನೆಯದಾಗಿ ಹೊಸಗನ್ನಡದಲ್ಲಿ ಉ ಎಂಬ ಕೃತಕ ಪ್ರತ್ಯಯವನ್ನು ವೈಯಾಕರಣರು ಸೃಷ್ಟಿಸಿದ್ದಾರೆ. ಇದು ಬರಹದಲ್ಲಿದೆಯೇ ವಿನಃ ಆಡು ಮಾತಿನಲ್ಲಿಲ್ಲ. ಆದ್ದರಿಂದ ಹಳಗನ್ನಡದ ಮ್ ಆಗಲಿ ಹೊಸಗನ್ನಡದ ಉ ಆಗಲಿ ಪ್ರಥಮಾ ವಿಭ್ತಕಿ ಪ್ರತ್ಯಯಗಳಲ್ಲ. ಆದ್ದರಿಂದ ಪ್ರಥಮಾ ವಿಭಕ್ತಿ ಪ್ರತ್ಯಯ ಇಲ್ಲ. ಪ್ರಕೃತಿಯೇ ಪ್ರಥಮಾ ವಿಭಕ್ತಿಯ ಕಾರ್ಯವನ್ನು ಮಾಡುತ್ತದೆ.
ಉದಾ: ಕವಿತ ಬೆಂಗಳೂರಿಗೆ ಹೋಗುತ್ತಾಳೆ.
ರಾಜ ಪುಸ್ತಕವನ್ನು ಓದುತ್ತಿದ್ದಾನೆ.
ಇಲ್ಲಿ ಕವಿತ, ರಾಜ ಇವು ಪ್ರಥಮಾ ವಿಭಕ್ತಿಯಲ್ಲಿ ಪ್ರಕೃತಿ ರೂಪದಲ್ಲಿ ಪ್ರಯೋಗವಾಗಿವೆ. ಅರ್ಥಗ್ರಹಣಕ್ಕೆ ಯಾವುದೆ ತೊಡಕು ಇಲ್ಲ.
2.ದ್ವಿತೀಯಾ ವಿಭಕ್ತಿ: ದ್ವಿತೀಯಾ ವಿಭಕ್ತಿ ಕರ್ಮಕಾರಕ, ಎಂದರೆ, ಕ್ರಿಯೆಗೆ ವಿಷಯವಾದ ವ್ಯಕ್ತಿ, ಪ್ರಾಣಿ, ವಸ್ತು ಎಂದರ್ಥ. ಪೂರ್ವದ ಹಳಗನ್ನಡದಲ್ಲಿ ಆನ್ ಎಂದೂ ಹಳಗÀನ್ನಡದಲ್ಲಿ ಅನ್ ಎಂದೂ, ಹೊಸಗನ್ನಡದಲ್ಲಿ ಅನ್ನು ಎಂದೂ ದ್ವಿತೀಯ ವಿಭಕ್ತಿ ಪ್ರತ್ಯ ಪ್ರಯೋಗವಾಗಿದೆ.
ಉದಾ: ಕುರಿಯನ್ನು ಕಾಯಿ, ಕುರಿಕಾಯಿ
ಪುಸ್ತಕವನ್ನು ತೆಗೆದುಕೊಂಡು ಬಾ- ಪುಸ್ತಕ ತೆಗೆದುಕೊಂಡು ಬಾ
ಇಲ್ಲಿ ಕುರಿಯನ್ನು, ಪುಸ್ತಕವನ್ನು ಎಂಬುದರ ಬದಲು ಕುರಿ, ಪುಸ್ತಕ ಎಂದು ಬಳಸಿದರೂ ಅರ್ಥವ್ಯತ್ಯಾಸವಾಗುವುದಿಲ್ಲ.
ಉದಾ: ಶಿಕ್ಷಕರು ಪಾಠವನ್ನು ಬೋಧಿಸುತ್ತಿದ್ದಾರೆ.
ರಾಮನು ರಾವಣನನ್ನು ಕೊಂದನು.
3.ತೃತೀಯಾ ವಿಭಕ್ತಿ: ತೃತೀಯಾ ವಿಭಕ್ತಿ ಕರಣಕಾರಕ. ಕರಣ ಎಂದರೆ ಕ್ರಿಯೆ ಸಾಧ್ಯವಾಗಲು ಉಪಕರಣವಾಗಿ ಬಳಸುವ ವ್ಯಕ್ತಿ, ಪ್ರಾಣಿ, ವಸ್ತು ಎಂದರ್ಥ. ವಿಭಕ್ತಿಗಳಲ್ಲಿ ಪ್ರಥಮಾ, ದ್ವಿತೀಯಾ ಇವುಗಳಿಲ್ಲದೆ ಪ್ರಯೋಗ ಮಾಡಬಹುದು. ಆದರೆ ತೃತೀಯೆಯನ್ನು ಬಿಟ್ಟು. ಪ್ರಯೋಗ ಮಾಡುವುದು ಸಾಧ್ಯವಿಲ್ಲವೆನಿಸುತ್ತದೆ.
ಇಮ್, ಇದಂ ಇಂದೆ, ಎಂದು ತೃತೀಯಾ ವಿಭಕ್ತಿ ಮೂರು ರೂಪದಲ್ಲಿದೆ ಎಂದು ಕೇಶಿರಾಜನು ಹೇಳಿದ್ದಾನೆ. ಜೊತೆಗೆ ಎ ಎನ್ನುವುದು ಈ ಮೂರು ಪ್ರತ್ಯಯಗಳಿಗೆ ಆದೇಶವಾಗಿ ಬರುತ್ತದೆ ಎನ್ನುತ್ತಾನೆ.
ಹೊಸಗನ್ನಡದಲ್ಲಿ ಇಂದ ಎಂದಾಗಿದೆ.
ಉದಾ: ದುಡಿಮೆಯಿಂದ ಹಣವನ್ನು ಸಂಪಾದಿಸಬಹುದು.
ತರಕಾರಿಗಳನ್ನು ಚಾಕುವಿನಿಂದ ಕತ್ತರಿಸುತ್ತಿದ್ದಾರೆ.
4.ಚತುರ್ಥಿ ವಿಭಕ್ತಿ: ಇದು ಸಂಪ್ರದಾನ ಕಾರಕ, ಎಂದರೆ ಕೊಡುವುದು ಎಂದರ್ಥ. ದ್ರಾವಿಡ ಭಾಷೆಗಳ ನಡುವೆ ಸಂಬಂಧವನ್ನು ಬೆಸೆದಿರುವ ವಿಶಿಷ್ಟವಾದ ವಿಭಕ್ತಿಯೇ ಚತುರ್ಥಿ ಇತರೆ ವಿಭಕ್ತಿಗಳಿಗೂ ಚತುರ್ಥಿ ವಿಭಕ್ತಿಗೂ ಇರುವ ಮುಖ್ಯವಾದ ವ್ಯತ್ಯಾಸವೆಂದರೆ, ಉಳಿದುವೆಲ್ಲವೂ ಸ್ವರದಿಂದ ಕೂಡಿವೆ. ಇದು ಮಾತ್ರ ವ್ಯಂಜನದಿಂದ ಕೂಡಿದೆ. ಕೆ ಅಥವಾ ಗೆ ಹೊಸಗನ್ನಡ ಪ್ರತ್ಯಯ.
ಉದಾ: ಮಕ್ಕಳಿಗೆ ಸಿಹಿಯನ್ನು ಕೊಟ್ಟರು.
ಬಸ್ಸು ಹಳ್ಳಕ್ಕೆ ಬಿತ್ತು...... ಇತ್ಯಾದಿ.
5.ಪಂಚಮಿ ವಿಭಕ್ತಿ: ಇದು ಆಪಾದನಕಾರಕ, ಎಂದರೆ ತನ್ನ ನೆಲೆಯಿಂದ ಅಗಲುವುದು, ಬೇರ್ಪಡುವುದು, ದೂರವಾಗುವುದು ಎಂದರ್ಥ. ಪಂಚಮೀ ವಿಭಕ್ತಿಪ್ರತ್ಯಯವು ಕನ್ನಡದಲ್ಲಿಲ್ಲ. ಅದರ ಕಾರ್ಯವನ್ನು ತೃತೀಯ ವಿಭಕ್ತಿಯೇ ಮಾಡುತ್ತದೆ. ಹಳಗನ್ನಡದಲ್ಲಿ ಅತ್ತಣಿಂ ಹೊಸಗನ್ನಡದಲ್ಲಿ ದೆಸೆಯಿಂದ ಎಂಬ ಪ್ರತ್ಯಯ ಪಂಚಮಿಗೆ ಇದೆ ಎನ್ನುತ್ತಾರೆ. ಆದರೆ ಅದೊಂದು ದಿಕ್ಕನ್ನು ಸೂಚಿಸುವ ಪದ ಅದರ ಅಗತ್ಯ ಇಲ್ಲ. ಆಡು ಭಾಷೆಯಲ್ಲಿ ಅದರ ಬಳಕೆಯೇ ಇಲ್ಲ. ಎಲ್ಲೆಡೆ ತೃತಿಯಾ ವಿಭಕ್ತಿಯೇ ಪ್ರಯೋಗಗೊಳ್ಳುತ್ತದೆ.
ಉದಾ: ಮರದಿಂದ ಹಣ್ಣು ಬಿದ್ದಿತು.
ಆಕಾಶದಿಂದ ನಕ್ಷತ್ರ ಉದುರಿತು.
ಕಾರಕವನ್ನು ಗಮನಿಸಿ ತೃತೀಯ ಪಂಚಮಿಗಳನ್ನು ಗುರುತಿಸಬೇಕಾಗುತ್ತದೆ.
ಉದಾ: ತೃತೀಯಗೆ-ಕೊಡಲಿಯಿಂದ ಮರವನ್ನು ಕಡಿದರು.
ಪಂಚಮಿಗೆ-ಹಣ್ಣುಗಳು ಮರದಿಂದ ಉದುರಿದವು.
ಇಲ್ಲಿ ಕೊಡಲಿಯಿಂದ ಎನ್ನವುದು ಕರಣಕಾರಕವಾಗಿದೆ. ಆದ್ದರಿಂದ ಅದು ತೃತೀಯೆ, ಮರದಿಂದ ಎಂಬಲ್ಲಿ ಆಪಾದನ ಕಾರಕವಾಗಿರುವುದರಿಂದ ಅದು ಪಂಚಮೀ ವಿಭಕ್ತಿ.
6.ಷಷ್ಠೀ ವಿಭಕ್ತಿ: ಇದಕ್ಕೆ ಕಾರಕವಿಲ್ಲ. ಈ ವಿಭಕ್ತಿಗೆ ಸಂಬಂಧಾನ್ವಯ ಇದೆಯೇ ಹೊರತು ಕಾರಕಾನ್ವಯ ಇಲ್ಲ. ಅ ಇದರ ಪ್ರತ್ಯಯ. ಇದಕ್ಕೆ ಕಾರಕ ಸಂಬಂಧವಿಲ್ಲದಿರುವುದರಿಂದ ಕ್ರಿಯಾಪದಕ್ಕು ನಾಮಪದಕ್ಕು ನೇರ ಸಂಬಂಧ ಇಲ್ಲಿರುವುದಿಲ್ಲ.
ಉದಾ: ಚಿನ್ನದ ಓಲೆಯನ್ನು ತಂದರು.
ಮರದ ಕುರ್ಚಿಯನ್ನು ಮಾಡಿಸಿದರು.
ಚಿನ್ನದ ಓಲೆಯನ್ನು ತಂದರು ಎಂಬಲ್ಲಿ ಚಿನ್ನದ ಓಲೆ ಷಷ್ಠೀ ವಿಭಕ್ತಿಯಿಂದ ಕೂಡಿದೆ. ಇಲ್ಲಿ ಚಿನ್ನದ ಮತ್ತು ತಂದರು ಎಂಬುದರ ನಡುವೆ ಸಂಬಂಧವಿಲ್ಲ.
7.ಸಪ್ತಮೀ ವಿಭಕ್ತಿ: ಸಪ್ತಮೀ ವಿಭಕ್ತಿ ಅಧಿಕರಣಕಾರಕ. ಅಧಿಕರಣ ಎಂದರೆ ಕ್ರಿಯೆಗೆ ವಿಷಯವಾದುದರ ಆಧಾರ ಅಥವಾ ಸ್ಥಾನ ಎಂದರ್ಥ. ಅಲ್ಲಿ ಒಳ್, ಇವು ಸಪ್ತಮೀ ವಿಭಕ್ತಿ ಪ್ರತ್ಯಯಗಳು.
ಉದಾ: ಬೀದಿಯಲ್ಲಿ ಜನಗಳು ಓಡುತ್ತಿದ್ದಾರೆ.
ಮೆನೆಯೊಳಗೆ ಬಾ........ ಇತ್ಯಾದಿ.
8.ಸಂಬೋಧನಾ ವಿಭಕ್ತಿ: ಎ, ಏ ಎಂಬ ಪ್ರತ್ಯಯಗಳು ಸೇರುತ್ತವೆ. ಸಂಸ್ಕøತದ ಪ್ರಭಾವದಿಂದ ಕನ್ನಡದಲ್ಲಿ ಬಳಕೆಯಾಗುತ್ತಿದೆ ಅಷ್ಟೆ.
ಉದಾ: ಚಂದ್ರನೆ ಬಂದನು
ದೇವರೇ ನಮ್ಮ ಮೊರೆ ಕೇಳುವುದಿಲ್ಲವೇ?....... ಇತ್ಯಾದಿ.
ಉಪಸಂಹಾರ:
ಕನ್ನಡ ಭಾಷೆಯ ರಚನೆಯಲ್ಲಿ ಇವುಗಳ ಪಾತ್ರ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಇವೆಲ್ಲವೂ ಸೇರಿ ಪದರಚನೆಯಾಗಲು ಸಹಕರಿಸುತ್ತವೆ. ವಾಕ್ಯ ರಚನೆಯಾಗಲು ಪದ, ಇದರ ಪ್ರಕಾರಗಳು ನಾಮಪದಗಳು, ಸರ್ವನಾಮಗಳು ಹಾಗೂ ವಿಭಕ್ತಿಪ್ರತ್ಯಯಗಳು ಸೇರಿಕೊಳ್ಳುತ್ತವೆ.
ಪರಾಮರ್ಶನ ಗ್ರಂಥಗಳು: